ಬುಧವಾರ, ಏಪ್ರಿಲ್ 29, 2020

ಮುದ್ದು ಮುದ್ದು ಮನಸ್ಸು

ಮಕ್ಕಳ ಮನಸ್ಸು ಮುದ್ದು ಮುದ್ದು ಮೃದು. ಅವುಗಳ ಕುತೂಹಲವನ್ನು ಯಾರು ವಯಸ್ಸಾದರೂ ಇಟ್ಟುಕೊಂಡಿರುತ್ತಾರೊ ಅವರುಗಳೆ ಪ್ರತಿ ಕ್ಷಣವನ್ನು ಸುಖವಾಗಿ ಕಳೆಯಬಲ್ಲವರಾಗಿರುತ್ತಾರೆ.

ಗಮನಿಸಿ ಮಕ್ಕಳಿಗಿರುವ ಈ ಗುಣ ಎಂಥವರನ್ನು ಅಚ್ಚರಿಯನ್ನುಂಟು ಮಾಡುತ್ತಾದೆ.

ಇಷ್ಟೊಂದು ಪರೀಕ್ಷಿಸುವ ಪರಿಯನ್ನು ಗಮನಿಸಿದರೇ ಇವನು ನಿಜವಾಗಿಯು ಮುಂದೆ ದೊಡ್ಡ ವಿದ್ವಾಂಸನಾಗುತ್ತಾನೆ ಎಂದು ಹೆತ್ತವರು ಮನಸ್ಸಿನಲ್ಲಿಯೇ ಗುಣಕಾರವನ್ನು ಮಾಡಿಕೊಂಡಿರುತ್ತಾರೆ.

ಹೌದು ಎಲ್ಲಾ ಮಕ್ಕಳು ಚಿಕ್ಕವರಾಗಿರುವಾಗ ತುಂಬ ಚುರುಕೇ. ಆ ಚುರುಕು ಪ್ರಕೃತಿದತ್ತವಾಗಿಯೇ ಅವರಿಗೆ ಬಂದಿರುತ್ತದೆ. ಅದನ್ನು ಅವರುಗಳು ಅವರಲ್ಲಿ ಕಾಪಾಡಿಕೊಂಡು ಹೆಚ್ಚು ಹೆಚ್ಚು ಬೆಳೆಯುವಂತೆ ಹೆತ್ತವರು ಮತ್ತು ಸುತ್ತಲಿನ ಪರಿಸರ ಪೋಷಿಸಬೇಕು.

ನೋಡಿ ನೀವು ಏನಾದರೂ ವಸ್ತುವನ್ನು ಕೈಯಲ್ಲಿ ಇಟ್ಟುಕೊಂಡಿದ್ದರೆ, ತಕ್ಷಣ ನಿಮ್ಮ ಚಿಕ್ಕ ಮಗ ಅಥವಾ ಮಗಳು ಬಂದು ತನ್ನ ಕೈಗೆ ತಗೆದುಕೊಳ್ಳುತ್ತದೆ. ನೀವುಗಳು ಏನಾದರೂ ಪುಸ್ತಕನ್ನು ತೆಗೆದು ಓದಲು ಶುರು ಮಾಡಿದರೇ ಅದೇ ಮಗು ತಕ್ಷಣ ಬಂದು ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ತನ್ನ ಕೈಗೆ ತೆಗೆದುಕೊಳ್ಳಲು ಶುರು ಮಾಡುತ್ತದೆ.

ನೀವು ಏನಾದರೂ ಮಾಡಿ ಚಿಕ್ಕ ಮಕ್ಕಳಿಗೆ ತಾನು ಅದನ್ನೇ ಮಾಡಬೇಕು ಎಂಬ ಕುತೂಹಲ. ಅದೇ ಮಕ್ಕಳು  ತಾವುಗಳು ಏನೂ ಅನ್ನುವುದನ್ನು ನಾವು ತಿಳಿಯುವಂತೆ ಮಾಡುತ್ತವೆ.

ಚಿನ್ನಾರಿಗಳಿಗೆ ದಣಿವೇ ಇಲ್ಲದ ಹೊಸತನವನ್ನು ಕಾಣುವ, ತಾವುಗಳು ಏನಾದರೂ ಹೊಸತನದ ಆಟ ಪಾಠವನ್ನು ಕಾಣುವ ಕನಸು.


ಅದೇ ಮಕ್ಕಳ ಬದುಕು. ನಿತ್ಯ ಏನಾದರೊಂದನ್ನು ಕಲಿಯುವುದೇ ಆಗಿರುತ್ತದೆ. ಹಾಗೆಯೇ ಪ್ರತಿ ಮಗುವು ಎಲ್ಲಾವನ್ನು ಕಲಿತು ತಾನೇ ಕಲಿಯಾಗುವುದು.


ನಾವುಗಳು   ಏನನ್ನು ಹೇಳಿ ಕೊಡುವ ಅಗತ್ಯವಿಲ್ಲ! ಮಕ್ಕಳೇ ನಮಗೆ ಜೀವನದಲ್ಲಿ ಹೇಗೆಲ್ಲಾ ನಿತ್ಯ ನಿರಂತರ ಕಲಿಯಬೇಕು ಎಂಬುದನ್ನು  ತಮ್ಮ ಮೊಲಕ ಹೇಳಿ ಕೊಡುತ್ತಾರೆ.

ನೋಡಿ ಮಕ್ಕಳು ತಮ್ಮ ಒಂದನೇಯ ವಯಸ್ಸಿನಿಂದ ಹೇಗೆಲ್ಲಾ ಕಲಿಯುತ್ತಾ ಕಲಿಸುತ್ತಾ ಹೆತ್ತವರನ್ನು ಸಂತೋಷದಲ್ಲಿ ಮುಳುಗೇಳಿಸಿರುತ್ತಾರೆ.

ಹೊಸ ಹೊಸ ಆಟಿಕೆಗಳನ್ನು ಆರಿಸುವುದು, ಅದರ ಜೊತೆಯಲ್ಲಿ ಆಟವಾಡುವುದು. ಇನ್ನೊಂದು ದಿನ ಏನಾದರೂ ಹೊಸ ಗೊಂಬೆಯನ್ನು ತಂದರೇ ಹಳೆಯದನ್ನು ಆ ಸಮಯಕ್ಕೆ ಒಗೆದು ಹೊಸದರ ಜೊತೆಯಲ್ಲಿಯೇ ಹಗಲು ರಾತ್ರಿ ಕಳೆಯುವುದು.

ಇದು ವಯಸ್ಸು ಬೇಳೆದಂತೆ ಕುತೂಹಲದ ಮನಸ್ಸನ್ನು ಹೆಚ್ಚು ಮಾಡಿಕೊಂಡು ವೇಗವಾಗಿಯೇ ಮಾತು, ಓದುವುದು ಹೀಗೆ ಪ್ರತಿಯೊಂದನ್ನು ಕಲಿಯುತ್ತಾರೆ.

ಮಾತು ಕಲಿಯುವುದೇ ಒಂದು ವಿಸ್ಮಯ!  ದಾ, ಡಾ ಎಂದು ಒಂದಕ್ಷರ ಮಾತನಾಡುವ  ಮಗ /ಮಗಳು ಇವನೇ/ಳೇ ಎನಿಸುತ್ತದೆ. ಚಿಕ್ಕ ಚಿಕ್ಕ ಕಥೆ ಪುಸ್ತಕವನ್ನು ಓದುವುದನ್ನು ನೊಡಿದಾಗ ನಿಜವಾಗಿಯೂ ಅಚ್ಚರಿಯಾಗುತ್ತದೆ.

ಓದುವುದನ್ನು ನೋಡುವುದೇ ಇನ್ನೊಂದು ಸುಂದರ ಸುಖ.

ಒಂದು ಸಾಲು ಓದುವುದು ಅದಕ್ಕೆ ಹೊಂದುವ, ಗೊತ್ತಿರುವ, ನೆನಪಿರುವ  ವಿಷಯ ಹೇಳುವುದು ಅಥವಾ ಪ್ರಶ್ನೇ ಮಾಡುವುದು.

ಒಮ್ಮೊಮ್ಮೆ ಹೆತ್ತವರಿಗೆ ಸಾಕು ಸಾಕಾಗುತ್ತದೆ. ಎಷ್ಟು ಅಂಥಾ ಹೇಳಿದ್ದೇ ಹೇಳಿದ ಉತ್ತರಗಳನ್ನು ಕೊನೆಯಿರದ ಪ್ರಶ್ನೆಗಳಿಗೆ ಉತ್ತರಿಸುವುದು.  ಅವುಗಳೋ ಪುನಃ ಪುನಃ ಅದೇ ಪ್ರಶ್ನೆಗಳನ್ನು ಕೇಳುವುದು.

ಮಕ್ಕಳಿಗೆ ಎಲ್ಲಾ ಸಂಗತಿಗಳು ಸಂತೋಷದ ಆಟ.

ಅದಕ್ಕೆ ಇರಬೇಕು ಪ್ರತಿ ಮಗುವು ಎಂದಿಗೂ ದಣಿವಾಗಿದೆ ಎಂದು ಬಾಯಿ ಮಾತಿಗೂ ಹೇಳುವುದಿಲ್ಲ.

ಆ ಕ್ಷಣದಲ್ಲಿ ಬದುಕುವ ಜೀವಿ ಎಂದರೇ ಮಗು. ಇರುವ ಕ್ಷಣವನ್ನು ಸುಂದರವಾಗಿ ಪರಿಪೂರ್ಣವಾಗಿ ಅನುಭವಿಸುತ್ತದೆ.

ಪ್ರತಿಯೊಂದನ್ನು ಮನನ ಮಾಡಿಕೊಂಡು ಅರ್ಥೈಸಿಕೊಂಡು ಮನದಲ್ಲಿಯೇ ಇಟ್ಟುಕೊಳ್ಳುತ್ತದೆ.

ಏನಂದರೂ ಏನನ್ನೂ ಮರೆಯುವುದಿಲ್ಲ.

ಅದಕ್ಕೇ ಇರಬೇಕು ಒಂದೊಂದು ಮಕ್ಕಳು ಮನೆಯ ಮಾತು, ಹೊರ ಪ್ರಪಂಚದ ಭಾಷೆ, ಶಾಲಾ ಭಾಷೆ ಹೀಗೆ ಎರಡು ಮೂರು ಭಾಷೆಗಳನ್ನು ಸುಲಭವಾಗಿ ಕಲಿಯುತ್ತವೆ.

ಮಕ್ಕಳ ಆಟ ಪಾಠ ರಾತ್ರಿಯಾದರೂ, ಮಲಗಿದರೂ ಮುಗಿಯುವುದಿಲ್ಲ.

ಕನಸಿನಲ್ಲೂ ಆಗಾಗ್ಗೆ ನಗುವುದು, ಅಳುವುದು, ಮುನಿಸುವುದು ಜಾರಿಯಲ್ಲಿರುತ್ತದೆ.


ಇದನ್ನು ಗಮನಿಸಿದರೇ ನಿತ್ಯ ೨೪ ಗಂಟೆ ದಣಿವಿರದ ತಣಿವ ಗುಣವೇ ಅವುಗಳ ಮುಗ್ಧ ಕಣ್ಣುಗಳ ಹೊಳಪಿನ ಸುಂದರ ಮುಖವೇ ಪ್ರಪುಲ ಸೂರ್ಯನ ಬೆಳಕು ಪ್ರತಿಯೊಂದೂ ಮನೆ ಮನಕ್ಕೂ.

ಹಾಗೆಯೇ ಅವುಗಳ ಕಲಿಯುವ ಕಲಿತು ಮರೆಯುವ ಗುಣವನ್ನು ಪ್ರತಿಯೊಬ್ಬರೂ ಎಷ್ಟೇ ದೊಡ್ಡವರಾದರೂ ಮರೆಯಬಾರದು.

ಅದೇ ಅಲ್ಲವಾ ಜೀವನ.

ಪ್ರತಿ ಕ್ಷಣದಲ್ಲೂ ಏನಾದರೂ ಕಂಡುಕೊಂಡು ಸಂತೋಷಿಸುವುದೇ ಜೀವನ.

ಅದೇ ಮಕ್ಕಳು ನಮಗೆ ಯಾವಾಗಲೂ ಹೇಳಿಕೊಡುವ ಜೀವನ ಪಾಠ.

ಸೋಮವಾರ, ಜೂನ್ 10, 2019

ಬರೀ ಆಟ ಮತ್ತು ಆಟ. ಸುಸ್ತಾಗಲ್ಲ!

ಓಹ್! ಸಂಜೆ ಕುಮಾನ್ ಮುಗಿಸಿದ ಮೇಲೆ ಆಟ ಆಡಲು ಹೋಗಬಹುದು.

ಜನನಿ, ಸಂಪ್ರೀತ್ ಮತ್ತು ಬೇರೆ ಗೆಳೆಯರ ಜೊತೆಯಲ್ಲಿ ಸೈಕಲ್ ರೇಸ್ ಮಾಡಬಹುದು. ಯಲ್ಲೊ ಪಾರ್ಕ್ ನಲ್ಲಿ ಮಸ್ತಿ ಮಾಡಬಹುದು.. ಹೀಗೆ ಕುಮಾನ್ ಕ್ಲಾಸ್ ನಲ್ಲಿ ಕುಳಿತಿದ್ದಾಗಲೂ ಯೋಚನೆ ಮಾಡುತ್ತಿದ್ದೆ.

ಇಲ್ಲಿಯೋ ಮುಂಜಾನೆಯಿಂದ ಸಂಜೆಯವರೆಗೂ ಅದೇ ನಾಲ್ಕು ಗೋಡೆಗಳ ಮದ್ಯದಲ್ಲಿ ಕುಳಿತ ಈ ಪುಟ್ಟ ಮನಸ್ಸಿಗೆ ಆಗುವ ತ್ರಾಣವನ್ನು ನನ್ನ ಮಮ್ಮಿ ಡ್ಯಾಡಿ ಗಮನಿಸಿಯೇ ಇಲ್ಲ ಅನಿಸುತ್ತದೆ.

ಅವರುಗಳು ಸಹ ಏನು ಮಾಡುತ್ತಾರೆ? ಇಲ್ಲಿಯ ಬದುಕೇ ಹೀಗೆ ಎನ್ನುವುದು ನನಗೆ ಹೇಗೆ ತಿಳಿಯುವುದು?

ನನಗೆ ಗೊತ್ತಿರುವುದು ಒಂದೇ - ಬೆಳೆಗ್ಗೆಯಿಂದ ಸಂಜೆಯವರಿಗೂ ಮನೆಯಲ್ಲಿರುವ ವಿಧವಿಧವಾದ ಆಟದ ಸಾಮನುಗಳ ಜೊತೆಯಲ್ಲಿ ಸಮಯ ಕಳೆಯುವುದು.

ಅವರುಗಳೇ ನನ್ನ ಚಿಕ್ಕ ಗೆಳೆಯರು.

ಸಂಜೆಯ ಗೋದೂಳಿಯ ಸಮಯದಲ್ಲಿ ಆಪೀಸ್ ನಿಂದ ಬರುವ ಡ್ಯಾಡಿಗಾಗಿ ಕಾಯುವುದು. ಯಾಕೆಂದರೇ ಅವರ ಬಳಿಯಿರುವ mobile ನಲ್ಲಿರುವ ಯೂಟ್ಯೂಬ್ ಕಾರ್ಟೊನ್ ಗಳನ್ನು ನೋಡುವುದೇ ನನಗೆ ಬ್ರೇಕ್!

ಟಿ.ವಿಯಲ್ಲಿ ಬರುವ ಮಕ್ಕಳ ಕಿರು ಚಿತ್ರಗಳನ್ನು ನೋಡಬೇಕು ಎಂದು ಅಮ್ಮ ಅಪ್ಪನಿಗೆ ಯಾವಾಗಲೂ ದಂಬಾಲು ಬೀಳುವುದು.  ಅವರುಗಳೋ ಅವರು T.V ನೋಡಲು ನಾನು ಬಿಡುವುದಿಲ್ಲವೆಂದು, ಬೈದುಕೊಂಡು ಮೊಬೈಲ್ ಕೊಟ್ಟೆ ಕೊಡುತ್ತಾರೆ.

ಅದೇ ನನಗೆ ಸಿಕ್ರೇಟ್ ಖುಷಿ ವಿಷಯ.

ಹೆತ್ತವರು ಅವರ ಅವರ ಜಗತ್ತಿನಲ್ಲಿಯೇ ಲೀನವಾಗಿರುತ್ತರೆ.

ಡ್ಯಾಡಿ ಸಮಯ ಸಿಕ್ಕಾಗಲೆಲ್ಲಾ ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಪ್ರೀ ಇದ್ದಾಗ ಟಿ.ವಿ, ಪುಸ್ತಕ. ಸಿಟ್ಟಾದಾಗಲೆಲ್ಲಾ ನನ್ನ ತರಲೆಗಳಿಗೆ ಬೈಯುತ್ತಾರೆ. ನಾನು ಅವರ ಮಾತುಗಳನ್ನು ಕೇಳುವುದಿಲ್ಲ.  ನಾನು ಬಾಯ್ ಮಾಡುತ್ತಿನಿ, ಕೊಗಾಡುತ್ತಿನಿ.  ನನ್ನ ಪುಟ್ಟ ಪುಟ್ಟ ದೊಡ್ಡ ಮಾತುಗಳಿಗೆ ಬಾಯಿ ತುಂಬ ನಗುತ್ತಾರೆ.

ಆದರೆ ನನಗೆ ಅವರ ಜೊತೆಯಲ್ಲಿ ಯಾವಾಗಲೂ ಆಟ ಆಡಬೇಕು. ನನ್ನ ಮಾತನ್ನಾ ಅವರುಗಳು ಕೇಳಬೇಕು. ನಾನು ಆಟ ಆಡುವುದನ್ನಾ ಅವರುಗಳು ಗಮನಿಸಬೇಕು. ನನ್ನ ಹತ್ತಿರವೇ ಅವರುಗಳು ಯಾವಾಗಲೂ ಇರಬೇಕು ಎಂಬುದು ಪೂರ್ಣ ಆಸೆ.

ಆದರೇ ಅವರ ವ್ಯವಹಾರ ನನಗೆ ಅರ್ಥವಾಗುವುದಿಲ್ಲ!


ಅಮ್ಮನೋ ಕಿಚನ್ ನಲ್ಲಿ ಅಡುಗೆ ಮಾಡುವುದು, ಕುಕ್ಕರ್ ಕೂಗಿಸುವುದು, ತೊಳೆಯುವುದು ಬಳಿಯುವುದರಲ್ಲಿಯೇ ಧ್ಯಾನಸ್ಥ! ನನಗೆ ಊಟ ಪಾಠ ಮಾಡಿಸುವುದರಲ್ಲಿಯೇ ಕಾಯಕ ಕೈಲಾಸವನ್ನುಕಾಣುವುದನ್ನು ಕಾಣುತ್ತೀನಿ.

ಅಮ್ಮ ಅಂದರೇ ಯಾರಿಗೇ ಇಷ್ಟವಿರುವುದಿಲ್ಲ? ನನ್ನ ಮುದ್ದಿನ ಪುಟಾಣಿ ಅಮ್ಮ! ಮುದ್ದಿನ ಹೀರೋ! ನನ್ನ ಅಮ್ಮ ಅಮ್ಮನೇ ಎಲ್ಲಾ! ಆದರೂ ಅವಳೇ ಹೆಚ್ಚು ಸಮಯ ನನ್ನ ಜೊತೆಯಲ್ಲಿ ಕಳೆಯುವುದು. ರಜಾದ ಮಜಾದಲ್ಲಿ ಪೂರ್ಣ ಪಾಲ್ಗೊಳ್ಳೂವಳು. 

ಅಮ್ಮನೂ ಒಮ್ಮೊಮ್ಮೆ ನನ್ನ ಮೇಲೆ ರೇಗುವಳು. ನನ್ನ ತುಂಟಾ ತರಲೆಗಳಿಗೆ ಸಿಟ್ಟಾಗುವಳು. ಆದರೇ ಅದು ಕೇವಲ ಕೆಲವೇ ಕ್ಷಣಗಳು ಮಾತ್ರ.


ಹ್ಯಾಂಗ್ರೀ .!

ಪೈವ್ ಮೀನಿಟ್ ಮಮ್ಮಿ!

ನನ್ನ ಮುನಿಸು, ಅಳು ಸಹ ಕೆಲವೇ ಕ್ಷಣಗಳು ಮಾತ್ರ. ನಾನು ಅತ್ತರೂ, ಕರೆದರೂ, ಅವರು ಸಿಟ್ಟಾದರೂ ಅದನ್ನೇಲ್ಲಾ ಮರೆತು ನನ್ನ ಮುದ್ದಿನ ಅಪ್ಪ ಅಮ್ಮರ ಬಳಿಗೆ ಓಡುವೆ.

ಯಾಕೆಂದರೇ ಅವರೇ ನನ್ನ ಎರಡು ಕಣ್ಣುಗಳು.

ಗೆಳೆಯರೆಂದರೇ ಗೆಳೆಯರೇ. ನನಗೆ ಜನನಿ ಇಷ್ಟ.

ಆದರೆ ಅವರೆಲ್ಲಾ ಅವರ ಮನೆಯಲ್ಲಿಯೇ ಆಟ ಆಡುತ್ತಿರುತ್ತಾರೆ. ಅವರೆಲ್ಲಾ ಸಿಗುವುದು  ಪಾರ್ಕನಲ್ಲಿ ಮಾತ್ರ. ನೋಡಲು ಮಾತನಾಡಲು, ಬೇರೆ ಮುಖ, ಬೇರೆ ಹುಡುಗರು ಸಿಗುವುದು ಹೊರಗಿನ ಹತ್ತಿರದ ಪಾರ್ಕನಲ್ಲಿ.

ಅದಕ್ಕೆ ನಾನು ತುಂಬ ಖುಷಿಯಿಂದ ಪಾರ್ಕಗೇ ಹೋಗಲು ಯೋಜನೆಯನ್ನು ರೂಪಿಸುತ್ತಿರುತ್ತೇನೆ.

ಯಾಕೆಂದರೇ ಇಲ್ಲಿಯ ವೇದರ್ ಹುಚ್ಚಾಟ ನನಗೆ ಅಲ್ಲಾ ಯಾರಿಗೂ ತಿಳಿಯದು. ಯಾವಾಗಲೂ ಸಂಜೇ ಮಳೆಗಾಳಿ ಬಂದು ಅಮೊಲ್ಯವಾದ ನನ್ನ ಆಟದ ಸಮಯಗಳನ್ನು ಹಾಳು ಮಾಡಿದೆ.


ರೈನ್ ರೈನ್ ಗೋ ಆವೇ..

ಜಿಜ್ಜಿಯಲ್ಲಿ ಕೇಳುವ ಒಂದೇ ಕೋರಿಕೆಯೆಂದರೇ.. ಇವತ್ತು ಹವಮಾನ ತುಂಬ ಚೆನ್ನಾಗಿರಲಿ. ಸಮ್ಮರ್ ಆಲಿಡೇ ಸಮೃದ್ಧವಾಗಿರಲಿ.

ಆದರೇ ಆ ಜಿಜ್ಜೀಯು ನನ್ನ ಮಾತನ್ನಾ ಕೇಳುವುದಿಲ್ಲ ಅನಿಸುತ್ತೇ. ಒಮ್ಮೊಮ್ಮೆ  ಕಾರ್ಮೊಡ ಕವಿದು ಮಳೆ ಬಂದರೆ, ನಾನು ನನ್ನ ಹ್ಯಾಪು ಮೊರೆ ಮಾಡಿಕೊಂಡು ಮನೆಯಲ್ಲಿಯೇ ಆಟವಾಡುತ್ತಿರುತ್ತೇನೆ.

ಯಾಕೆಂದರೇ ಮಳೆ ಗಾಳಿಯ ರಂಪಾಟದ ನೇಚರ್ ಮುಂದೆ ನನ್ನ ಆರ್ಭಟ ಕಮ್ಮಿಯೇ!

ಮಕ್ಕಳಿಗೆ ಇನ್ನು ಏನೂ ಬೇಕು? ಬರೀ ಆಟ ಮತ್ತು ಆಟ. ಸುಸ್ತಾಗಲ್ಲ! ಆಟವಾಡಲು ಗೆಳೆಯರು. ಆಟವಾಡಲು ಗೊಂಬೆಗಳು.

ಅವುಗಳೇ ನಮಗೆ ಸಾಮ್ರಾಜ್ಯ.

ಅವುಗಳೇ ನಮಗೆ ಬಂಗಾರ!

ಅಪ್ಪ ಅಮ್ಮಂದಿರಿಗೆ ಮಕ್ಕಳು ತಮ್ಮ ಕಣ್ಣ ಮುಂದೆಯೇ ಇದ್ದರೇ ಸಾಕು. ಅವರಿಗೂ ಏನೋ ಏನೋ ಭಯ ಅನಿಸುತ್ತದೆ. ಎಲ್ಲಿ ಬೀಳುತ್ತಾರೋ, ಎಲ್ಲಿ ಏಳುತ್ತಾರೋ, ಎಲ್ಲಿ ಏನ್ ಗಾಯಗಳನ್ನು ಮಾಡಿಕೊಂಡುಬಿಡುತ್ತಾರೋ ಎಂಬ ಚಿಂತೆ.

ಇದು ಯಾವುದು ಬೇಡವೆಂದು ಎಲ್ಲಿಗಾದರೂ ಕರೆದುಕೊಂಡು ಹೋಗಬೇಕೆಂದರೇ ಹಿಂದೆ ಮುಂದೆ ನೋಡುತ್ತಾರೆ. 

ಆದರೇ ನಮಗೆ ನಮ್ಮ ಗಲಾಟೆ, ಆಟ, ಓಟ, ಪಾಠಗಳೇ ಇಷ್ಟ.

ಯಾಕೆಂದರೇ ನಾವುಗಳು ಬಾಲ್ಯದ ಕಲಿಗಳು, ನಾವುಗಳು ನಾನು ಬೆಳೆಯುತ್ತಿದ್ದೆನೆ. ನನ್ನ ಆಕಾಂಕ್ಷೆಯೇ ನಮ್ಮ ಬೆಳವಣಿಗೆ ಅಲ್ಲವಾ ಮಮ್ಮಿ- ಡ್ಯಾಡಿ?

ಬರಲಾ ಬಾಯ್ ಬಾಯ್ ಪಾರ್ಕಗೆ ಆಟ ಆಡಕ್ಕೆ ಹೋಗಲು ಲೇಟ್ ಆಯ್ತು..


ಸಿ .. ಯು ಲೇಟರ್ ಇನ್ ನೈಟ್!

ಬುಧವಾರ, ಸೆಪ್ಟೆಂಬರ್ 12, 2018

ಹಬ್ಬದ ಶುಭಾಶಯಗಳು

ಹಬ್ಬವೆಂದರೇ ನಮ್ಮ ಜಂಜಾಟದ ಬದುಕಿಗೆ ಒಂದು ಸಣ್ಣ ಬ್ರೇಕ್ ಕೊಟ್ಟು ಮನೆ ಮಂದಿಯೊಂದಿಗೆ ಸಂತೋಷದಿಂದ ಕೂಡಿ ಕಳೆಯುವ ಒಂದು ದಿನ. 

ನಮ್ಮ ದೇಶದ ಸಂಸ್ಕೃತಿ ಹಿರಿಮೆಯೆಂದರೇ ಪ್ರತಿ ಮಾಸದಲ್ಲೂ ಒಂದಲ್ಲ ಒಂದು ಹಬ್ಬವಿರುತ್ತದೆ. ಹಬ್ಬವೆಂದರೇ ಕೇಳಬೇಕೆ.. ? ಸಿಹಿ ತಿಂಡಿ, ಹೊಸ ಬಟ್ಟೆ, ಹೊಸ ಸಂತೋಷ ಮತ್ತು ಹೊಸ ಭರವಸೆಯ ನೋಟ.

ಮನಸ್ಸಿಗೆ ಖುಷಿಯನ್ನು ಕೊಡುವ ಹಬ್ಬಗಳ ಆಚರಣೆಯೇ ಚೆಂದ.  ಒಂದೊಂದು ಹಬ್ಬಕ್ಕೂ ಒಂದೊಂದು ಪುರಾಣ ಕಥೆ ಕಾರಣಗಳುಂಟು.

ನಾನಾ ಬಗೆಯ ಹಬ್ಬಗಳನ್ನು ಆಚರಿಸಲು ಮನೆಮಂದಿಯೆಲ್ಲಾ ಕಾತುರತೆಯಿಂದ ಕಾಯುತ್ತಿರುತ್ತಾರೆ. ಆ ಕೆಲಸ ಈ ಕೆಲಸಗಳೆಂದು ಮನೆಯವರೆಲ್ಲಾ ಎಲ್ಲೇಲ್ಲೊ ಹೋಗಿದ್ದರೇ ಮನೆಯಲ್ಲಿರುವ ಹೆತ್ತವರು ತನ್ನ ಮಗ ಮಗಳು ನಾಳೆಯ ಹಬ್ಬಕ್ಕೆ ಬರುತ್ತಾರೆ, ಬರುವರು ಎಂದು ಕಾಯುತ್ತಾರೆ.

ಅವರಿಗೆ ಅದರಲ್ಲಿಯೇ ಸಂತೋಷ.

ದೂರದ ಜೀವಗಳಿಗೆ ಹಬ್ಬಕ್ಕಾಗಿ ಊರಿಗೆ ಹೋಗುವ ತವಕ . ಒಂದು ರಜೆಯ ಜೊತೆಗೆ ಇನ್ನೊಂದೆರಡು ದಿನಗಳ ರಜೆಯನ್ನು ಗುಜರಾಯಿಸಿ ಹೋದರಾಯ್ತು ಎನ್ನುವ ಸಂಭ್ರಮ.

ಯಾರಿಗೆ ರಜಾ ದಿನಗಳು ಬೇಡಾ ಹೇಳಿ?

ಪ್ರತಿಯೊಂದು ಹಬ್ಬಕ್ಕೂ ಒಂದೊಂದು ವಿಶಿಷ್ಟ ಪದ್ಧತಿ. ಪ್ರತಿಯೊಂದು ಹಬ್ಬವೂ ವಿಭಿನ್ನ. ಈ ಹಬ್ಬಕ್ಕೆ ಈ ಅಡುಗೆಯನ್ನೇ ಮಾಡಬೇಕು. ಒಂದೊಂದು ದೇವರಿಗೂ ಒಂದೊಂದು ಹಬ್ಬವಿದೆ ನಮ್ಮ ಊರುಗಳಲ್ಲಿ. ಒಂದೊಂದು ದೇವರಿಗೂ ಒಂದೊಂದು ಬಗೆಯ ಭಕ್ಷ್ಯ ಬೋಜನಗಳ ನೇವೈದ್ಯವಿಡಬೇಕು.

ಯಾವುದೇ ಹಬ್ಬಕ್ಕೆ ಸಿದ್ಧವಾಗುವುದನ್ನು ನಮ್ಮ ಊರುಗಳಲ್ಲಿ ನೋಡಬೇಕು. ಆ ರೀತಿಯಲ್ಲಿ ಹಬ್ಬಕ್ಕಾಗಿ ಸಜ್ಜಾಗುವ ಸಂಭ್ರಮವನ್ನು ಕಣ್ಣು ತುಂಬಿಕೊಳ್ಳಬೇಕು ಅನಿಸುತ್ತದೆ. ಇಡೀ ಊರೇ ಹೊಸತನವನ್ನೊದ್ದು ಕೂತಿರುತ್ತದೆ. ಪ್ರತಿ ಮನೆಯು ಸುಣ್ಣ ಬಣ್ಣ ಬಳಿದುಕೊಂಡು, ಹಸಿರು ತೋರಣಗಳನ್ನು ತೊಟ್ಟುಕೊಂಡು, ಮನೆಯ ಹಜಾರ ಹಸಿ ಸಗಣಿಯಿಂದ ಸಾರಿಸಿ, ರಂಗೋಲಿ ಚಿತ್ತಾರವನ್ನು ಬರೆದುಕೊಂಡು ನವ ವಧುವಿನಂತೆ ಸ್ವಾಗತಿಸುರುತ್ತಿದೆ.

ವಾವ್.. ! ನೆನಸಿಕೊಂಡರೇ ಮೈ ಜುಂ ಎನಿಸುತ್ತದೆ. ಅಯ್ಯೊ ಇಂಥಾ ಹಬ್ಬದಲ್ಲಿ ಯಾವಾಗ ಬಾಗಿಯಾಗೋಣ ಅನಿಸುತ್ತಿದೆ. 

ನಮ್ಮ ಈ ಹಬ್ಬಗಳೆಂದರೇ ಚಿಲಿಪಿಲಿ ಮಕ್ಕಳ ಹಬ್ಬವೇ ಸರಿ. ನಾನಾ ಬಗೆಯ ಹಬ್ಬಗಳಿರುವುದೇ ಮಕ್ಕಳ ಸಂತೋಷಕ್ಕಾಗಿ.  ಚಿಕ್ಕ ಚಿಕ್ಕ ಮಕ್ಕಳುಗಳು ಹಬ್ಬಗಳಿಗಾಗಿ ಕಾಯುವುದನ್ನು ಕಾಣಬಹುದು.

ಯಾವಾಗ ಈ ಹಬ್ಬ ಬರುವುದು? ಈ ಹಬ್ಬಕ್ಕೆ ನನಗೆ ಇದು ಕೊಡಿಸಬೇಕು. ಈ ಹಬ್ಬಕ್ಕೆ ನನಗೆ ಈ ಉಡುಪು ಖರೀದಿಸಬೇಕು. ಅಮ್ಮಾ ಈ ಹಬ್ಬಕ್ಕೆ ಆ ಸಿಹಿ ತಿನಿಸು ಮಾಡು.. ಹೀಗೆ ಮಕ್ಕಳುಗಳು ನಾನಾ ಬೇಡಿಕೆಗಳನ್ನು  ತನ್ನ ಹೆತ್ತವರ ಮುಂದೆ ತಿಂಗಳುಗಳು ಅಥವಾ ವಾರಗಳ ಮುಂಚೆ ಇಡುವುದನ್ನು ಕೇಳುವುದೇ ಚೆಂದ.

ಹಬ್ಬವೆಂದರೇ ಎಲ್ಲಾ ಓಕೆ! ಸಾಲಾ ಮಾಡಿಯಾದರೂ ತುಪ್ಪ ತಿನ್ನಬೇಕು ಎನ್ನುವ ರೀತಿಯಲ್ಲಿ ಮನೆಯ ಮಂದಿಯೆಲ್ಲ ಅವರವರ ಹಿತಿಮಿತಿಗೆ ಅನುಸಾರವಾಗಿ ಸಂಭ್ರಮದೊಂದಿಗೆ ತಯಾರಿಗೊಳ್ಳುತ್ತಾರೆ.

ಹಿಂದಿನ ನಮ್ಮ ಹಿರಿ ತಲೆಗಳು ದಿನಾಂಕ ತಿಂಗಳುಗಳ ಲೆಕ್ಕವನ್ನು ಮಾಡುತ್ತಿರಲಿಲ್ಲ. ಹಬ್ಬಗಳ ನ್ನೇ  ತಮ್ಮ ದಿನ ಮಾನಗಳನ್ನು ಗುರುತಿಸಲು ಬಳಸಿಕೊಳ್ಳುತ್ತಿದ್ದದು ದಿಟ. ಈ ಹಬ್ಬದ ಮುಂದೆ ತಾನೇ ನೀನು ಹುಟ್ಟಿದ್ದು. ಆ ಹಬ್ಬ ಆದ ಮೇಲೆ ತಾನೆ ನೀನಗೆ ಕೆಲಸ ಸಿಕ್ಕಿದ್ದು. ಆ ಹಬ್ಬದ ದಿನ ತಾನೇ ನಾನು ನೀನಗೆ ಸಾಲ ಕೊಟ್ಟಿದ್ದು. ಹೀಗೆ ಎಲ್ಲಾ ಹಬ್ಬದ ರೇಪರೇನ್ಸ್ ಮೇಲೆ ಗೊತ್ತು ಮಾಡಿಕ್ಕೊಳ್ಳುತ್ತಿದ್ದರು. ಇದರಿಂದ ಗೊತ್ತಾಗುತ್ತದೆ ನಮ್ಮ ಹಬ್ಬಗಳ ಮಹತ್ವ ಎಷ್ಟು ಎಂಬುದು.

ಹೀಗೆಲ್ಲಾ ತಯಾರಿಯ ಮಧ್ಯೆ  ಆಚರಿಸುತ್ತಿದ್ದ ಹಬ್ಬಗಳು ಈಗ ಅತಿ ವಿರಳ. ಇಂದು ನಗರದ ಛಾಯೆ ಹಳ್ಳಿಗಳಿಗೂ ಚಾಚಿದೇಯೇನೋ ಗೊತ್ತಿಲ್ಲ. ಈ ಹಿಂದೆ ಇದ್ದ ಸಂಭ್ರಮ ಕಡಿಮೆಯಾಗಿದ್ದರೂ ಪ್ರತಿ ಮನೆಯಲ್ಲೂ ಇನ್ನೂ ಆ ಸಂತೋಷದ ಕ್ಷಣಗಳು ಮರೆಯಾಗಿಲ್ಲ ಮತ್ತು ಅದು ಎಂದಿಗೂ ಮರೆಯಾಗುವುದಿಲ್ಲ. ಎಲ್ಲಾರೂ ಈ ವೇಗದ ಜೀವನದಲ್ಲಿ ಬದುಕುತ್ತಿದ್ದರೂ ಇರುವ ಇಂಥ ಚಿಕ್ಕ ಚಿಕ್ಕ ಸಂತೋಷದ ಕ್ಷಣಗಳು ನಮ್ಮ ಬದುಕಿಗೆ ಟಾನಿಕ್ ಇದ್ದಂತೆ.

ನಗರದ ಬದುಕು ನಮ್ಮ ನಮ್ಮ ನಲಿವಿನ ಕ್ಷಣಗಳನ್ನು ಸ್ವಲ್ಪ ಸ್ವಲ್ಪ ಕಿತ್ತುಕೊಳ್ಳುತ್ತಿದೆಯೇನೋ ಅನಿಸುತ್ತಿದೆ. ಏನೇ ಮಾಡಿದರೂ ಅದು ತನಗೆ ತನ್ನವರಿಗೆ ಮಾತ್ರ ಅನಿಸುವಂತಿದೆ. ಹಳ್ಳಿಯವರ ಬದುಕಿನ ಜೀವಂತಿಕೆಯ ಮುಂದೆ ನಮ್ಮಗಳ ದೌಲತ್ತು ಯಾವ ಉನ್ನತಿಯನ್ನು ಗಳಿಸುತ್ತಿಲ್ಲ ಅಲ್ಲವಾ?

ಹಬ್ಬಗಳನ್ನು ಸಹ ನಮ್ಮ ಬಿಡುವು ಇದ್ದಾಗ ಮಾಡಿಕೊಂಡರಾಯ್ತು ಎನ್ನುವಂತಾಗಿದೆ. ಕೆಲವೊಮ್ಮೆ ಈ ಹಬ್ಬಗಳನ್ನು ವಿಕೇಂಡ್ ಗೆ ಮುಂದೂಡಿಕೊಂಡು ನಮ್ಮ ಪ್ರೀ ಸಮಯಕ್ಕೆ ತಕ್ಕಂತೆ ಕಾದಿದ್ದುಕೊಂಡು  ಅನುಸರಿಸಿಕೊಂಡು ಸಂಭ್ರಮಿಸುವಷ್ಟರ ಮಟ್ಟಿಗೆ ಸಮಯವಿಲ್ಲವರವಾಗಿದ್ದೇವೆ.

ಸಮೊಹದ ಸಂತೋಷ ಗೌಣವಾಗುತ್ತಿದೆ. ಕೇವಲ ತಾನಾಯಿತು ತನ್ನ ಸಂಸಾರವಾಯಿತು ಅನಿಸುವ ಮಟ್ಟಿಗೆ ಸ್ವಾರ್ಥಿಗಳಾಗುತ್ತಿದ್ದೇವೆನೋ ಗೊತ್ತಿಲ್ಲ. ಯಾವುದಕ್ಕೂ ಸಮಯವಿಲ್ಲದವರಂತೆ ಎಲ್ಲಾವನ್ನು ವೇಗದ ಬದುಕಿಗೆ ಹೊಂದುವಂತೆ ಮಾರ್ಪಾಡು ಮಾಡಿಕೊಳ್ಳುತ್ತಿದ್ದೇವೆ.  ಸಂತೋಷವನ್ನು ಅಳೆದು ತೂಗಿ ಸಂಭ್ರಮಿಸುವಂತಹ ದಿನಮಾನಗಳಲ್ಲಿ ನಾವೆಲ್ಲಾ ಬದುಕುತ್ತಿರುವುದು ದಿಗ್ಬ್ರಮೆಯನ್ನುಂಟು ಮಾಡುತ್ತಿದೆ.

ಆದರೂ ಹಬ್ಬಗಳನ್ನು ನಮಗೆ ಬೇಕಾದ ಸಮಯದಲ್ಲಿ ಮಾಡಿಕೊಳ್ಳುವ ಮಟ್ಟಿಗೆ ನಾವುಗಳೆ ನಿರ್ಧರಿಸಿಕೊಳ್ಳುತ್ತಿರುವುದು ವಿಪರ್ಯಾಸ. ಇಡೀ ದೇಶವೆ ಸಂಭ್ರಮಿಸುತ್ತಿರುವಾಗ ನಾವಂದಿಷ್ಟು ಮಂದಿ ಕೆಲಸ, ಅದು ಇದು ಎಂದುಕೊಂಡು ವಿಕೇಂಡ್ ಗೆ ಮುಂದುಡಿಕೊಂಡು ದುಡಿಯುವುದು!

ಇದನ್ನು ಸ್ವಲ್ಪ ಬದಲಾಯಿಸಿಕೊಳ್ಳೊಣ. ನಮ್ಮಗಳ ಈ ಚಿಕ್ಕ ಚಿಕ್ಕ ಸಿಹಿ ಕ್ಷಣಗಳೇ ನಮ್ಮ ನಮ್ಮ ಜೀವ ಜೀವಂತಿಕೆಗೆ ಸಾಕ್ಷಿ. ಮುಂದಿನ ಪೀಳಿಗೆಗೆ ಕೇವಲ ಬದುಕು ಅಂದರೇ ದುಡಿಮೆ ಮಾತ್ರ ಎಂಬುದು ಎಂದು  ಮಾದರಿಯಾಗಬಾರದು. ದುಡಿಮೆಗೂ ಮೀರಿದ್ದು ಬೇರೆ ಇನ್ನೂ ಏನೇನೋ ಇದೆ ಅದನ್ನು ಅನುಭವಿಸಿ ಕೂಡಿ ಅನುಕ್ಷಣವೂ ಅರ್ಥಪೂರ್ಣವಾಗಿ ಪ್ರಕೃತಿಯೊಂದಿಗೆ ಸಹಜವಾಗಿ ಬದುಕುವ ಬದುಕುವಂತೆ ಪ್ರಯತ್ನಿಸೋಣವಾ..

ಹಬ್ಬದ ಶುಭಾಶಯಗಳು!!

ಶನಿವಾರ, ಜುಲೈ 7, 2018

ಕಳೆದ ದಿನ ನಿತ್ಯ ತರುಣ

ಜೀವನ ಈಗಾಗಲೇ ಅರ್ಧ ಮೈಲಿಗೆ ಹತ್ತು ವರುಷ ಮಾತ್ರ ಬಾಕಿಯಾಗಿ ನಿಂತಂತಿದೆ.  ಹುಟ್ಟಿದಂದಿನಿಂದ ಈ ವಯೋಮಾನಕ್ಕೆ ಬಂದಿರುವ ಬದುಕಿನ ಕಳೆದ ದಿನಗಳನ್ನು ನೆನಪಿಸಿಕೊಂಡರೇ ಮೈ ಜುಂ ಅನಿಸುತ್ತದೆ.

ನಮಗೆ ನಾವುಗಳು ಎಂದಿಗೂ ನಿತ್ಯ ತರುಣರೇ. ಆದರೇ ನಮಗೆ ಗೊತ್ತೆ ಆಗದ ರೀತಿಯಲ್ಲಿ ಮದ್ಯ ವಯಸ್ಕರಾಗಿದ್ದೇವೆ. ಇಂದು ಬಾಲ್ಯದ ನೆನಪೇ ಮರೆತಂತೆ ಅನಿಸುತ್ತಿದೆ. ಈಗ ನಮಗೆ ಬಾಲ್ಯವೆಂದರೇ ನಮ್ಮ ಮುಂದಿರುವ ನಮ್ಮ ಮುದ್ದು ಮಕ್ಕಳ ಆಟವಾಗಿದೆ.

ಓದು ಅಭ್ಯಾಸ, ಕಾಲೇಜು, ಕೆಲಸವೆಂದುಕೊಂಡು ಬ್ಯುಸಿ ಲೈಫ್ ನಲ್ಲಿ ನಡೆದು ಬಂದ ದಾರಿಯ ಗುರುತನ್ನು ಗುರುತಿಸಲು ಸಮಯವಿಲ್ಲದಂತಾಗಿದೆ.

ಒಬ್ಬ ಮನುಷ್ಯನ ಜೀವನವೆಂದರೇನು ಎಂದರೇ ಅದು ನಮ್ಮ ಕೈಗೆ ನಿಲುಕದ ಅತ್ಯದ್ಬುತ ಸಿನಿಮಾವೇ ಸರಿ. ಸಿನಿಮಾ ಎಂದರೇ ಎರಡು ಮುಕ್ಕಾಲು ಗಂಟೆಯಲ್ಲಿ ಎಲ್ಲಾವನ್ನು ತೋರಿಸಿ ದಿ ಎಂಡ್ ಇರುತ್ತದೆ. ಅದರೇ ನಿಜ ಜೀವನಕ್ಕೆ ಹಾಗೆ ಕೊನೆಯನ್ನು  ಎಂದು ಕೊಡಲು ಸಾಧ್ಯವಾಗದು.

ನೋವು ನಲಿವು, ಸಂತೋಷ ದುಃಖ, ಸ್ನೇಹ ಸಂಬಂಧ, ಸಿರಿತನ ಬಡತನ ಇತ್ಯಾದಿಯ ಕಲಸುಮೆಲೋಗರದ ರಂಗು ರಂಗಿನ ಕೋಲಾಜ್ ಈ ಬದುಕು.

ಚಿಕ್ಕಂದಿನಿಂದಲ್ಲಿ ಅಂದುಕೊಂಡದ್ದನ್ನು ಸಾಧಿಸುವ ಉಮೇದು. ತಾರುಣ್ಯದಲ್ಲಿ ಆಕಾಶಕ್ಕೆ ಮೆಟ್ಟಿಲು ಹಾಕುವ ಉಮ್ಮಸ್ಸು.

ಬದುಕು ಬದುಕಲೇಬೇಕೆಂಬ ಪಾಠವನ್ನು ಯಾವ ಕಾಲೇಜಿನ ಬೋಧನೆಯು ತಿಳಿಸಿಕೊಟ್ಟಿರುವುದಿಲ್ಲ.

ಸಮಯ, ಅವಕಾಶ, ಸಂದರ್ಭಗಳು ನಮ್ಮನ್ನು ಆ ಹಳಿಯ ಮೇಲೆ ತಿಳಿದೋ ತಿಳಿಯದೇಯೋ ಆಯಾ ಸಮಯಕ್ಕೆ ತಕ್ಕನಾಗಿ ಅನುಸರಿಸಿಕೊಂಡು ಹೋಗುವಂತೆ ಮಾಡಿಬಿಟ್ಟಿರುತ್ತದೆ.

ಆ ಸಮಯಕ್ಕೆ ಸರಿಯಾಗಿ ನಾವು ಕಂಡ ಕನಸು, ನನಸು.. ಬಣ್ಣ ಬಣ್ಣದ ನೆನಪುಗಳು.. ವಿಧವಿಧವಾದ ನಿರ್ಧಾರಗಳು ಎಲ್ಲಾ ಗಣ್ಯ ಅನಿಸಿಬಿಟ್ಟು ಜೀವನಕ್ಕೆ ಮುಖ್ಯವಾದದ್ದನ್ನು ಆರಿಸಿಕೊಂಡು ಮುಂದುವರಿಯುತ್ತೇವೆ.

ಅದು ಯಾವುದೇ ಸರಿ. ಸಮಯಕ್ಕೆ ಸರಿಯಾಗಿ ನಾವುಗಳು ನಮ್ಮ ಬದುಕಿಗೆ ಬೇಕಾದ ಅತಿ ಅವಶ್ಯಕವೆನಿಸುವ ನಿರ್ಧಾರಗಳನ್ನು ಪ್ರತಿ ಕಾಲಘಟ್ಟದಲ್ಲು ಅನುಸರಿಸಿಕೊಂಡು ಹೋಗಿರುತ್ತೇವೆ.

ಅದೇ ಜೀವನ!

ಈ ಮದ್ಯ ವಯಸ್ಸಿನ ಈ ಸಮಯದಲ್ಲಿ ಹಿಂತಿರುಗಿ ನೋಡಿದರೇ.. ಅಭ್ಭಾ ಅನಿಸುತ್ತದೆ! ಇದು ನಾನೇನಾ ಎಂದು ಅಚ್ಚರಿಯಾಗುತ್ತದೆ. ಹಾಗೆಯೇ ತುಸು ನಗುವು ಬರುತ್ತದೆ. ಏನೇಲ್ಲಾ ಮನಸ್ಸಿನ ಕುಲುಮೆಯಲ್ಲಿ ತರಾವೇರಿ ಗೊತ್ತೂ ಗುರಿ ಮಾಡಿಕೊಂಡಿದ್ದು. ತಲೆ ತುಂಬ ನೂರು ಕನಸುಗಳ ಜಾತ್ರೆ ಮಾಡಿಕೊಂಡಿದ್ದು. ಹೃದಯದ ಗೂಡಿನಲ್ಲಿ ಹತ್ತು ಪ್ರೀತಿಯ ಕಹಾನಿಗಳನ್ನು ಕ್ರೂಡಿಕರಿಸಿಕೊಂಡಿದ್ದು.

ಅಭ್ಭಾ ಇಂದು ಎಲ್ಲಾ ಪೂರ್ತಿ ಪೂರಾ ಶಾಂತ. ವ್ಯಕ್ತಿ ಅಷ್ಟರ ಮಟ್ಟಿಗೆ ಮಾಗಿದ್ದಾನೇಯೇ?

ಜೀವನದ ಹಾದಿಯಲ್ಲಿ ಸಂಕಲನ ವ್ಯವಕಲನ ಸರಿಯಾಗಿಯೇ ನಡೆದಿರುತ್ತದೆ. ಹಾಗಂತ ಬದುಕು ಕೇವಲ ಗಣಿತವಲ್ಲ ಅಥವಾ ಜೀವನ ಲೆಕ್ಕಚಾರವಲ್ಲ! ನಮ್ಮ ನಿಲುಕಿಗೆ ನಿಲುಕಿದ ದಕ್ಕಿಸಿಕೊಂಡ ಬದುಕು ಮಾತ್ರ ನಮ್ಮದಾಗಿರುತ್ತದೆ.

ಅಷ್ಟರ ಮಟ್ಟಿಗೆ ಪ್ರತಿಯೊಬ್ಬರೂ ಹಣ್ಣಾಗಿದ್ದಾರೇ ಅನಿಸುತ್ತದೆ. ಅದು ನಮ್ಮ ನಮ್ಮಲ್ಲಿ ಇಂದು ಕಣ್ಣಿಗೆ ಗೊಚರಿಸುತ್ತಿದೆ. ಈಗ ನಾನು ನನಗೆ ಅನಿಸುವ ಮಾತೇ ಇಲ್ಲ. ಯಾಕೆಂದರೇ ನಾನು ನಾವಾಗಿದ್ದೇವೆ. ನಾನೊಬ್ಬನೇ ಅಲ್ಲ. ನಾನು ನನ್ನ ಸಂಸಾರ, ನನ್ನ ಮಗು, ನನ್ನ ಸಂಗಾತಿ ಹೀಗೆ ಬಹುತನದಲ್ಲಿ ನಮ್ಮ ಬದುಕು ಬಂದು ನಿಂತಿದೆ.

ನಾನು ಅನುಭವಿಸಿದ ಹಳೆಯ ದಿನಗಳು ನನ್ನ ಮುದ್ದಿನ ಮಗನ / ಮಗಳ ನಗುವಿನಲ್ಲಿ ಪುನಃ ಇನ್ನೊಮ್ಮೆ ಬಾಲ್ಯದ, ತಾರುಣ್ಯದ ದಿನಗಳಿಗೆ ಜಾರುವ ಮನಸ್ಸು ಮಾಡಿಕೊಂಡಿದೆ.

ನಾವು ಮಾಡಿದ ತಪ್ಪು ಒಪ್ಪುಗಳನ್ನ ನನ್ನದೇ ಕುಡಿಯು ಮಾಡುವುದನ್ನು ನೋಡುತ್ತಾ ಮನಸ್ಸು ಮುದವಾಗುತ್ತಿದೆ. ಇದೆ ಬದುಕಿನ ಜಟಕಾ ಬಂಡಿ ಅನಿಸುತ್ತದೆ. ಅದು ಎಂದೂ ಮತ್ತು ಎಲ್ಲಿಯು ನಿಲ್ಲುವುದಿಲ್ಲ.  ನಿತ್ಯ ಸಾಗುತ್ತಲೇ ಇರಬೇಕು, ಹಾಗೆಯೇ ಬದಲಾಗುತ್ತಿರಬೇಕು. ಅದೇ ಜಗದ ನಿಯಮ.

ವ್ಯಕ್ತಿ ತಾನು ಬೆಳೆಯುತ್ತಾ ತನ್ನ ಸುತ್ತಲಿನ ಸಮಾಜದಲ್ಲಿ ಪ್ರತಿಯೊಂದು ಬದುಕಿನ ಕಾಲಗಟ್ಟದಲ್ಲಿ ತನ್ನನ್ನು ಸಮಾಜದೊಂದಿಗೆ ಗುರುತಿಸಿಕೊಂಡು ಮುಂದುವರೆಯುತ್ತಿರುತ್ತಾನೆ.  ತನ್ನ ಜೀವನದ ಮೇಲೆ ಸುತ್ತಲಿನ ಸಮಾಜ, ರಾಜಕೀಯ, ಆರ್ಥಿಕ ಹೀಗೆ ಪ್ರತಿಯೊಂದು ಪ್ರಭಾವ ಬೀರುತ್ತಿರುತ್ತವೆ. ನಾನು ನಾವು ನಮಗೆ ಮಾತ್ರ ಸ್ವಂತ ಅನಿಸುವುದಿಲ್ಲ.  ನಾವು ನಮ್ಮ ಜೊತೆಯಲ್ಲಿರುವವರೊಂದಿಗೆ ಅದು ನಮಗೆ ಗೊತ್ತಿರುವವರು, ನಮ್ಮ ಸಂಬಂಧಿಕರು, ಬಂದು ಬಾಂದವರು ಹೀಗೆ ಸುತ್ತಲಿನವರೊಂದಿಗೆ ಎಷ್ಟು ಸಂತೋಷದಿಂದ ಕಳೆದಿದ್ದೇವೆ ಅನ್ನುವುದರ ಮೇಲೆ ನಮ್ಮ ಬದುಕಿನ ಆಕರ್ಷಕತೆ ನಿಂತಿದೆ.

ಬದುಕು ಎಂದು ನಿಂತ ನೀರಲ್ಲಾ! ಅದು ಸ್ವಚ್ಛಂದವಾಗಿ ಸುಲಭವಾಗಿ ಹರಿಯುವ ತೊರೆಯಾಗಿರಬೇಕು. ಹಾಗೆ ಬದುಕುವ ಅವಕಾಶ, ಆಸೆಗಳು ಪ್ರತಿಯೊಬ್ಬರಿಗೂ ಇರುತ್ತದೆ.

ಅವರವರ ಇತಿಮಿತಿಯಲ್ಲಿ ಅವರವರ ಶಕ್ತಿಯನುಸಾರ ಜೀವನದಲ್ಲಿ ಪ್ರತಿಯೊಬ್ಬರೂ ಅಂದುಕೊಂಡ ಗುರಿಗಳನ್ನು ಹಿಡೇರಿಸಿಕೊಂಡಿರುತ್ತಾರೆ.

ಬದುಕು ಎಂದು ನಿಲ್ಲದ ಕನಸಿನ ಆಗರವೇ ಸರಿ. ಎಂದು ಕನಸು ನಿಲ್ಲುವುದೋ ಅಂದೇ ಬದುಕಿಗೆ ಪುಲ್ ಸ್ಟಾಪ್! ನಾವುಗಳೆಲ್ಲಾ ಕನಸಿನ ಬೆನ್ನು ಹತ್ತಿ ಓಡುತ್ತಿರುವ ಕುದುರೆಗಳೇ ಸರಿ.

ಬದುಕಿನ ನಾನಾ ವಯಸ್ಸಿನಲ್ಲಿ ನಾನಾ ರೀತಿಯ ಗುರಿ ಸಾಧನೆಗಳು ನಮ್ಮ ಕಣ್ಣ ಮುಂದಿರುತ್ತವೆ. ಅವುಗಳನ್ನು ಹೇಗೆಲ್ಲಾ ಸಾಧಿಸಬೇಕೆಂಬುದು ನಮ್ಮ ನಮ್ಮ ಬುದ್ಧಿ ಮತ್ತು ಜಾಣ್ಮೆಗೆ ಕಾಣಿಸುತ್ತಿರುತ್ತದೆ.  ಹಾಗೆಯೇ ಅಂದುಕೊಂಡಿದ್ದನ್ನೇಲ್ಲಾ ಸಾಧಿಸುವೆವು ಕೊಡ. ಸಾಧನೆಯ ಮಾಪನ ನಮ್ಮ ನಮ್ಮಲ್ಲಿಯೇ ಇರುತ್ತದೆ. ಆದರಂತೆ ನಮ್ಮ ಖುಷಿ ಮತ್ತು ದುಃಖದ ಮರ್ಮ ನಿರ್ಧಾರವಾಗುತ್ತದೆ.  ಆದರೇ ಸಾಧಿಸಿದ ಪಲಿತಾಂಶದ ಪರಾಮರ್ಶೆಯ ಮಾಪಕ ನಾವುಗಳಾಗಿದ್ದರೇ ಮಾತ್ರ ಸಾಕು.

ನಾವು ನಮಗೆ ಮಾತ್ರ ಬದುಕಿದರೇ ಚೆಂದ! ಯಾಕೆಂದರೇ ನಮ್ಮ ಬದುಕು ನಮ್ಮ ಕೈಯಲ್ಲಿದೆ. ಯಾರು ಯಾರ ಬದುಕನ್ನು ಎಂದಿಗೂ ಕಟ್ಟಲಾರರು ಅಥವಾ ಕೆಡವಲಾರರು.

ನಮ್ಮ ಸೋಲೇ ನಮಗೆ ಪಾಠ. ಅದು ನಮ್ಮ ಗಟ್ಟಿ ಅನುಭವದ ಬುತ್ತಿಯೇ ಸರಿ. ಅದು ನಮ್ಮ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗುದರಲ್ಲಿ ಯಾವ ಸಂಶಯವಿಲ್ಲ.

ಬದುಕಿನ ಅರ್ಧ ಮೈಲು ಸಾಗಿಸಿದ ಸಂತಸ ಒಂದು ಕಡೆಯಾದರೇ.. ದಿನ ದಿನ ಮುದುಕರಾಗುತ್ತಿದ್ದೇವೆ ಎಂಬ ಭಯವು ಇರಬೇಕಾ ಎಂಬ ಪ್ರಶ್ನೇ ಮತ್ತೊಂದು ಕಡೆ. ಆದರೇ ಕಳೆದ ಜೀವನವನ್ನು ಮತ್ತೊಮ್ಮೆ ಬೇಕು ಎಂದು ಕೇಳಲಾಗುವುದಿಲ್ಲ. ಕೇಳಿದರೇ ಸಿಗಬೇಕಲ್ಲಾ? ಕಾಲದ ಚಕ್ರದಲ್ಲಿ ಹಿಮ್ಮುಕ ಚಲನೆಯಿಲ್ಲ.

ಗೊತ್ತಿಲ್ಲದ ಮುಂದಿನ ಭವಿಷ್ಯತ್ ಕಾಣುವ ನೋಟವೇ ಚೆನ್ನಾ.. ಮುಂದಿನ ದಿನಗಳ ಗುರಿಗಳು ಇದ್ದೇ ಇರುತ್ತದೆ.. ನಡೆಯುವ ಚೈತನ್ಯ ಮೈಗೂಡಿಸಿಕೊಂಡರೇ ಸಾಕಲ್ಲವಾ? ವಯಸ್ಸಿಗೆ ಗೋಲಿ ಮಾರೋ, ಬದುಕಿನ ಹರುಷಕ್ಕೆ ಜೈ ಅನ್ನೋಣವೆ?

ಶನಿವಾರ, ಮೇ 5, 2018

ಮದುವೆ Anniversary

ಇಂದು ಮದುವೆಯ ವರ್ಷಾಚರಣೆ. ಕೇಳಬೇಕೆ ಹೆತ್ತವರು, ಸ್ನೇಹಿತರು, ಬಂದುಗಳು, ಹತ್ತಿರದವರು, ದೂರದವರು ಪ್ರತಿಯೊಬ್ಬರ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ ಈ ನವ ಜೋಡಿಗೆ.

ಮದುವೆಯ ವರ್ಷಾಚರಣೆಯೆಂದರೇ ಸತಿಪತಿಗಳಾದ ಆ ದಿನದಿಂದ ಎರಡು ಜೀವಗಳು ಹೇಗೆಲ್ಲಾ ಬಾಳಿದವೆಂಬುದನ್ನು ಮೆಲುಕು ಹಾಕಿಕೊಳ್ಳುವ ದಿನವೇ ಸರಿ.

ಮದುವೆಯೆಂಬುದು ಗಂಡು ಹೆಣ್ಣು ಒಟ್ಟಿಗೆ ಸೇರಿ ಗೊತ್ತಿದ್ದು ಮಾಡುವ ತಪ್ಪು ನಿರ್ಧಾರ! ಮದುವೆಯೆಂಬ ಎಂದೂ ಮುಗಿಯದ ಜಂಜಾಟಕ್ಕೆ ಗೊತ್ತಿದ್ದೂ ಆ ಬಂಧನಕ್ಕೆ ಯಾಕೆ ಬೀಳುವಿರಾ ಗಾವಿದರಾ ಎನ್ನುವರು. ಹೀಗೆಲ್ಲಾ ಮದುವೆಯಾದವರು ಮತ್ತು  ಇನ್ನೂ ಮದುವೆಯಾಗದ ಪ್ರತಿಯೊಬ್ಬರೂ ಹೇಳುವ ನಿತ್ಯ ಮಾತಾಗಿದೆ.

ನನಗೆ ತಿಳಿದಂತೆ ಮದುವೆ ಎನ್ನುವ ಈ ಒಂದು ಸಂಬಂಧದ ಬಗ್ಗೆ ಇರುವ ಗಾದೆ, ಹಿತನುಡಿಗಳು, ಸಿನಿಮಾಗಳು, ಕತೆಗಳು, ಕವಿತೆಗಳು, ವಕ್ರತೊಂಡೋಕ್ತಿಗಳು, ಕಿಚಾಯಿಸುವ ಮಾತುಗಳು ಬೇರೆ ಯಾವ ಸಂಬಂಧದ ಬಗ್ಗೆ ಈ ಜಗತ್ತಿನಲ್ಲಿ ಇಲ್ಲವೆ ಇಲ್ಲ ಬಿಡಿ.

ಆದರೂ ಮದುವೆಯಾಗಲೇಬೇಕು. ಮದುವೆಯಾಗುವುದು ಒಂದು ಮಾಮೂಲಿ ಜೀವನದ ಘಟನೆ.

ಮದುವೆಯಾಗದೇ ದಿನ ಕಳೆದರೇ ಒಂದು ರೀತಿಯ ನೋವು. ಮದುವೆಯಾಗದವರೆಗೆ ಮದುವೆಯಾಗುವ ತವಕ. ಮದುವೆಯಾದವರ ಸಂಕಟಗಳು ಬೇರೆ. ಖುಷಿಯಾಗಿ ಜೀವನ ಮಾಡುವವರು ಸಾಕಷ್ಟು ಜನ ಇದ್ದಾರೆ. ಆದರೇ ಪುನಃ ಮದುವೆಯ ಬಗ್ಗೆ ಇದೇ ರೀತಿಯ ಕಾಲು ಎಳೆಯುವ ಮಾತೆ ಪ್ರತಿಯೊಬ್ಬರಿಗೆ ಬರುತ್ತದೆ.

ಆದರೂ ಈ ಒಂದು ಅವಿನಭಾವ ಸಂಬಂಧವನ್ನು ಈ ಜಗತ್ತಿನಲ್ಲಿರುವ ಪ್ರತಿ ಹೆಣ್ಣು ಗಂಡು ಸಹ ಅನುಭವಿಸಲೇಬೇಕು. ಸಂಸಾರ ಎಂಬ ಸಾಗರದ ಸಾರವನ್ನು ಉಣ್ಣಲೇಬೇಕು.

ಎರಡು ಜೀವಗಳು ತಮ್ಮ ಮುಂದಿನ ದಿನಗಳನ್ನು ತಾವು ಜೀವವಿಸಿರುವವರೆಗೂ ಒಟ್ಟಿಗೆ ಬಾಳುವ ಉನ್ನತ ಬಂಧವೇ ಮದುವೆ.

ಹೌದು ಇದೊಂದು ಪದಗಳಿಗೂ ಮೀರಿದ ಅನುಬಂಧ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಮತ್ತೇಲ್ಲೋ ಬೇರೊಬ್ಬನ/ಳ ಜೊತೆಯಲ್ಲಿ ತನ್ನ ಅಂತ್ಯದವರೆಗೂ ಜೀವಿಸುವುದು. ಕಲ್ಪನೆಗೂ ನಿಲುಕದ ಉನ್ನತವಾದ ರೀಲೆಶನ್.

ಪ್ರತಿ ಮನುಷ್ಯನ ಪ್ರವರ್ಧಮಾನದ ಘಟ್ಟದಲ್ಲಿ ಸಂಭವಿಸುವ ಈ ಗೃಹಸ್ಥಾಶ್ರಮ ಇಬ್ಬರೂ ವ್ಯಕ್ತಿಗಳ ಸಂಮಿಲನ, ಎರಡು ಹೃದಯಗಳ ಬೆಸೆಯುವಿಕೆ, ಎರಡು ಕುಟುಂಬಗಳ ಸಂಬಂಧವೃದ್ಧಿಯಾಗಿದೆ.

ಪ್ರೀತಿ ಪ್ರೇಮ ಅನುರಾಗವನ್ನು ನಿತ್ಯವು ಸ್ಪುರಿಸುವ ಎರಡು ಜೀವಗಳ ಬಾಳುವಿಕೆಗೆ ಜಗತ್ತು ಗೊತ್ತು ಮಾಡಿರುವ ಅತ್ಯುತ್ತಮವಾದ ಸಂಬಂಧ.

ಇಲ್ಲಿಂದ ಇಬ್ಬರ ಬದುಕು ಬದಲಾಗುವುದು. ಇಲ್ಲಿಂದ ಇಬ್ಬರನ್ನು ಸಮಾಜ ನೋಡುವ ನೋಟ ಬದಲಾಗುವುದು. ಇಲ್ಲಿಂದ ಹೆತ್ತವರು ತನ್ನ ಮಕ್ಕಳನ್ನು ಜವಬ್ಧಾರಿವಂತರಂತೆ ಮತ್ತು  ಸರಿ ಸಮಾನರಂತೆ ಗುರುತಿಸುವುದು. ಇಲ್ಲಿಂದ ಇನ್ನೊಂದು ಕುಟುಂಬ /ಸಂಸಾರ ಸೃಷ್ಟಿಯಾಗುವುದು. ಇಲ್ಲಿಂದ ಹೊಸ ಜೀವನ ಎರಡು ಜೀವಿಗಳಿಗೆ. ಇಲ್ಲಿಂದ ಮುಂದಿನ ಸಂತತಿಯ ಬೆಳವಣಿಗೆ.

ಆರೋಗ್ಯವಂತಹ ಸಮಾಜದ ಉತ್ತಮ ಸಂಬಂಧವಾದ ಮದುವೆ ಎರಡು ವಿಭಿನ್ನ ಮನೋಸ್ಥಿತಿಗಳ ಬೆಸೆಯುವಿಕೆಯ ಮೊಲಕ ಹೆತ್ತವರಿಗೆ ಸಾರ್ಥಕವೆನಿಸುವಂತೆ ಮಾಡುತ್ತದೆ.

ಶಾಶ್ವತ ಸ್ನೇಹಿತರಾಗಿ ಅನುಗಾಲವು ಕಷ್ಟ ಸುಖದ ಕ್ಷಣಗಳನ್ನು ಅನುಭವಿಸುತ್ತಾ ನಿತ್ಯವು ಸಾಮರಸ್ಯದಿಂದ ಬಾಳುವುವಂತೆ ಮಾಡುವ ಜಾದು ಈ ಮದುವೆಯಲ್ಲಿದೆ.

ಹಿರಿಯರು ಇಷ್ಟಪಟ್ಟು ಸೇರ್ಪಡಿಸಿದ ಜೋಡಿಗಳು ಪ್ರೀತಿಯ ಹೊನಲಿನಲ್ಲಿ ಅನುದಿನವು ಒಬ್ಬರನ್ನುಬ್ಬರೂ ಬಿಟ್ಟಿರದಂತೆ ಗಟ್ಟಿಯಾಗಿ ಅಂಟಿಕೊಂಡಿರುವಂತೆ ಮಾಡುವ ನಂಟನ್ನು ಮದುವೆಯೆಂಬ ವ್ಯವಸ್ಥೆ ಈ ಮನುಷ್ಯ ಜೀವಿಗೆ ಕೊಟ್ಟಿರುವ ವರವೇ ಸರಿ.

ಹುಟ್ಟಿದಾಗ ಹೆತ್ತವರು, ಬೆಳೆಯುವಾಗ ಕುಟುಂಬದವರು, ದೊಡ್ಡವರಾಗಿ ತನ್ನ ಕಾಲ ಮೇಲೆ ತಾನು ನಿಲ್ಲುವ ಸಮಯದಲ್ಲಿ ಜೀವದ ಸಂಗಾತಿ, ಪುನಃ ವಯಸ್ಸಾದ ಕಾಲಕ್ಕೆ ತನ್ನ ಮಕ್ಕಳು.

ಈ ರೀತಿಯ ಜೀವನದ ಕಾಲ ಚಕ್ರದಲ್ಲಿ ಮನುಷ್ಯ ವಿವಿಧ ರೀತಿಯ ಪಾತ್ರಾಭಿನಯಗಳನ್ನು ಬದುಕ ನಿಭಾಯಿಸಲು ಮಾಡುತಿರುತ್ತಾನೆ.

ತಾನು ಬೆಳೆಯಬೇಕು ಹಾಗೂ ತನ್ನ ಜೊತೆಯಲ್ಲಿರುವವರನ್ನು ಬೆಳೆಸುತ್ತಾ ಸಾರ್ಥಕತೆಯನ್ನು ಕಾಣುತ್ತಾನೆ.

ಪ್ರತಿಯೊಬ್ಬ ಮನುಷ್ಯ ತನ್ನ ಹೆತ್ತವರನ್ನು ಬಿಟ್ಟರೆ ಜೀವನದಲ್ಲಿ ಅತಿ ಹೆಚ್ಚು ಸಮಯ  ಕಳೆಯುವುದು ತನ್ನ ಸಂಗಾತಿಗಳ ಜೊತೆಯಲ್ಲಿ ಮಾತ್ರ.

ತನ್ನ ಮನದ ಭಾವ ಅಭಿವ್ಯಕ್ತಿಗಳಿಗೆ ಪ್ರತಿಯಾಗಿ ತನ್ನ ಜೀವದ ಗೆಳತಿ/ಗೆಳೆಯನನ್ನು ಹುಡುಕಿಕೊಳ್ಳುತ್ತಾವೆ. ತನ್ನ ಮಾತಿಗೆ ಕಿವಿಯಾಗುವ, ತನ್ನ ನೋವಿಗೆ ಸಾಂತ್ವನ ನೀಡುವ, ತನ್ನ ಗೆಲುವಿಗೆ ನಗುವಾಗುವ ಜೀವಂತ ಜೀವವನನ್ನು ಕಂಡುಕೊಳ್ಳುತ್ತಾನೆ.

ನಿಮಗೆ ಗೊತ್ತು ಮನುಷ್ಯ ಸಂಘ ಜೀವಿ. ಒಂಟಿತನಕ್ಕೆ ಬೇಕು ಒಂದು ಬ್ರೇಕ್. ಅದೇ ಹೆಣ್ಣಿಗೆ ಗಂಡು ಗಂಡಿಗೆ ಹೆಣ್ಣು ಜೋಡಿ.

ಹೊಸ ಜೀವ ಜೀವನದ ಪಾಲನ್ನು ಹೊಂದಿರುವ ಜೀವದ ಸಂಗಾತಿಯನ್ನು ಎಂದು ಮರೆಯಲಾರೆವು. ಒಂದು ಕ್ಷಣವು ಬಿಟ್ಟಿರಲಾರದಂತಹ ಬಂಧದ ಸೃಷ್ಟಿಯಾಗುವುದು ಹೇಗೆ ತಿಳಿಯದು, ಗೊತ್ತಿಲ್ಲ.

ಒಂದು ಕ್ಷಣ ಜಗಳ, ಒಂದು ಕ್ಷಣ ಮುನಿಸು, ಇನ್ನೊಂದು ಕ್ಷಣ ಪ್ರೀತಿ, ಮತ್ತೊಂದು ಕ್ಷಣ ಕಕ್ಕುಲಾತಿ. ತಮ್ಮಗಳ ಸಂತೋಷವನ್ನು ಮಕ್ಕಳ ನಗುವಿನಲ್ಲಿ ಕಾಣುವ ಅದೇಷ್ಟೋ ಗಂಡ ಹೆಂಡತಿಯರನ್ನು ನಾವು ಕಾಣಬಹುದು.

ತಮ್ಮ ಮುಂದಿನ ಪೀಳಿಗೆಯ ಏಳ್ಗೆಗಾಗಿ ತಮ್ಮ ಜೀವನವನ್ನು ಸವೆಸುವ ಅದೇಷ್ಟೋ ಅಪ್ಪ ಅಮ್ಮಂದಿರ ಕನಸನ್ನು ಯಾರು ಕಡೆಗಣಿಸಲಾರರು.

ಇಂದಿನ ಮಕ್ಕಳೇ ಮುಂದಿನ ಜವಬ್ಧಾರಿ ಪ್ರಜೆಗಳು.

ಕುಟುಂಬದ ಗಟ್ಟಿ ವ್ಯವಸ್ಥೆಗೆ ಮದುವೆಯೊಂದು ಸಾಧನವೇ ಸರಿ. ಜೀವನವೆಂಬ ಗಾಡಿಗೆ ಗಂಡು ಹೆಣ್ಣು ಎಂಬ ಎರಡು ಚಕ್ರಗಳು. ಒಂದನ್ನೊಂದು ಎಂದು ಬಿಟ್ಟಿರಲಾರವು.

ಏನೇ ವೈಮನಸ್ಸು ಬಂದರೂ ಕ್ಷಣಾರ್ಧದಲ್ಲಿ ಪರಿಹರಿಸಿಕೊಂಡು ಪುನಃ ತನಗೆ ನೀನು, ನೀನಗೆ ನಾನು ಎಂದುಕೊಂಡು ಜೀವನ ಸಾಗಿಸುವಂತೆ ಮಾಡುವ ಮದುವೆಯ ಜಾದುವನ್ನು ಯಾರು ಗಮನಿಸದೆ ಇರಲಾರರು.

ಮುಂದಿನ ದಿನದ ಕನಸ್ಸಿಗೆ ಕನಸಾಗಿ, ಹೆಗಲಾಗಿ, ಅಸರೆಯಾಗಿ, ಧೈರ್ಯಕೊಡುವ ಗೆಳೆಯನಾಗಿ, ಯಾವಾಗಲೂ ಕಾಳಜಿ ವಯಿಸುವ ಮನೆಯ ಒಡತಿಯಾಗಿ, ಕಾಯುವ ಕಾಲವು ಜೊತೆಯಿರುವ ಸಂಗಾತಿಗೆ ನಮೋ ನಮಃ.

ವರುಷ ವರುಷವು ಉತ್ಸಾಹದ ಚಿಲುಮೆಯಾಗಿ ಪರಸ್ಪರ ಬಾಳುವಂತೆ ನಿರ್ಧಾರ ಮಾಡಿಕೊಳ್ಳುವ ದಿನವೇ ಈ ಮದುವೆಯ ದಿನ.

ಈ ದಿನ ಹೀಗೆ ಹೊಸತನದಿಂದ ಮುಂದೆಂದೂ ವರುಷ ವರುಷವೂ ಬರಿತಿರಲಿ ಈ ಜೋಡಿಗಳಿಗೆ. ನಿತ್ಯ ಯುಗಾದಿಯ ರೀತಿಯಲ್ಲಿ.

ಅನುಭವಿಸಿದ ಅನುಭವಗಳೇ ಮುಂದಿನ ದಿನಗಳಿಗೆ ಸ್ಪೂರ್ತಿ ಮತ್ತು ಮಾರ್ಗದರ್ಶಿಯಾಗಬೇಕು. 

ಈ ಜಗತ್ತು ಇರುವವರೆಗೂ ಈ ಒಂದು ಸಂಬಂಧ ಎಲ್ಲಾ ಸಂಬಂಧಗಳಿಗೆ ಮಾದರಿಯಾಗಿ ಹೊಸ ಬೆಳಕಾಗಿ ಯಾವಾಗಲೂ ಪ್ರಕಾಶಿಸುರುತ್ತದೆ. 

ಹೆಣ್ಣು ಗಂಡುಗಳಿರುವವರೆಗೂ ಉಳಿದಿರುವುದು ಮದುವೆ ಮಾತ್ರ. ಅದೇ ಎಲ್ಲಾ ಸಂಬಂಧಗಳ ಹುಟ್ಟಿಗೆ ಜೀವ.

ಬುಧವಾರ, ಮಾರ್ಚ್ 14, 2018

ನಿಮ್ಮ ಮತ ದುರ್ಗದ ಭವಿಷ್ಯ

ಮತ್ತೆ ಕರ್ನಾಟಕ ವಿಧಾನಸಭೆಗೆ ಚುನಾವಣೆ ಬರುತ್ತಿದೆ. ಐದು ವರುಷ ಅದು ಹೇಗೆ ಕಳೆದು ಹೋಯ್ತು ಅನ್ನುವಷ್ಟರಲ್ಲಿಯೇ, ಇನ್ನೊಂದು ಎಲೆಕ್ಷನ್ ಮುಂದಿದೆ.

ಪುನಃ ಎಲ್ಲಾ ರಾಜಕೀಯ ಹಳೆ ಹೊಸ ನಾಯಕರುಗಳು ತಮ್ಮ ಹಳೆ ಜುಬ್ಬಗಳನ್ನು ಕೊಡವಿ ಎದ್ದು ಕೂತಿದ್ದಾರೆ.

ಹೌದು. ಈ ಮೂರು ತಿಂಗಳು ತಮ್ಮ ಮುಖಗಳನ್ನು ಮತದಾರರನ ಮುಂದೆ ಇಟ್ಟು ಹೇಗಾದರೂ ಮಾಡಿ ಗೆದ್ದು ಬಿಟ್ಟರೆ..! ಮುಂದೆ ಮತ್ತೈದು ವರುಷ ಹೇಗೋ ಏನೋ ಖುಷಿಯಾಗಿ ಅಧಿಕಾರ ಅನುಭವಿಸಬಿಡಬಹುದು. ಎಂಬುದು ಅವರ ಯೋಜನೆ?

ಈಗಿರುವ ಸಿದ್ಧಣ್ಣ ಸರ್ಕಾರ ತಾನು ಈಗಾಗಲೇ ಗೆದ್ದು ಬಿಟ್ಟಿವಿ ಎಂಬಂತೆ ನಿತ್ಯ ಟಿ.ವಿ ಪೇಪರ್ ಗಳಲ್ಲಿ ಸದಾ ’ಸಿದ್ಧ' ಸರ್ಕಾರ ಎಂದು ಜಾಹೀರಾತುಗಳನ್ನು ನಿತ್ಯ ನೀಡುತ್ತಿದೆ.  ಪುನಃ ನಮ್ಮ ಸರ್ಕಾರವೇ ಈ ಕರ್ನಾಟಕಕ್ಕೆ ಗತಿ ಎಂಬಂತೆ ಮಾತನ್ನಾಡುತ್ತಿದ್ದಾರೆ.

ಬಿ.ಜೆ.ಪಿ ಈ ಭಾರಿ ನಾವೇ . ಮೋದಿ ಮೂರು ಸಲ ಬಂದು ಹೋಗಿದ್ದಾರೆ. ಕೇಂದ್ರದಲ್ಲಿ ನಮ್ಮ ಸರ್ಕಾರವಿದೆ. ಇಲ್ಲಿಯು ನಮ್ಮದೇ ಈ ಭಾರಿ ಎಂದು ಮೋದಿ ಹಿಂದೆ ಬಿದ್ದಿದೆ.

ಅಷ್ಟರ ಮಟ್ಟಿಗೆ ಮೋದಿ ಹೆಸರು ಇಲ್ಲಿ ಓಡುತ್ತಿದೆ ಅನ್ನಿಸುತ್ತಿದೆ!

ಜೆ.ಡಿ.ಎಸ್ ಪುನಃ ನಮ್ಮ ಕೈಗೆ ಅಧಿಕಾರ ಕೊಡಿ ನಾವೆನೆಂದು ತೋರಿಸುತ್ತಿವಿ. ಎಂದು ಹಸಿರು ಶಾಲು ಹೆಗಲು ಮೇಲೆ ಹಾಕಿಕೊತ್ತಿದ್ದಾರೆ.

ಹೀಗೆ ಈಗಾಗಲೇ ಅಧಿಕಾರದ ರುಚಿ ನೋಡಿರುವ ಪಕ್ಷಗಳು ಅಧಿಕಾರದ ಗದ್ದುಗೆ ಏರಲು ಪರಿಪಾಟು ಪಡುತ್ತಿದ್ದರೆ. ಹೊಸ ಪಕ್ಷಗಳ ಉಗಮ, ಹೊಸ ನಾಯಕರ ಮೊಳಿಕೆಗಳು ಅಲ್ಲಿ ಇಲ್ಲಿ ಕಾಣಿಸುತ್ತಿವೆ. ನೋಡಬೇಕು ಯಾರು ಏನ್ ಆಗುತ್ತಾರೆಂದು.

ಆದರೇ ಮತದಾರನ ಮರ್ಮ ಚುನಾವಣೆಯಾಗಿ ಪಲಿತಾಂಶ ಬಂದ ಅನಂತರವೇ ತಾನೇ ಗೊತ್ತಾಗುವುದು!

ಆದರೇ.. ನಮ್ಮ ಚಿತ್ರದುರ್ಗ ನಗರ ಮತ್ತು ಕ್ಷೇತ್ರ ಎಷ್ಟೇ ಚುನಾವಣೆಗಳು ಬರಲಿ ಹೋಗಲಿ ತಾನು ಮಾತ್ರ ಕ್ಷಣ ಮಾತ್ರವು ಬದಲಾಗುವುದಿಲ್ಲ ಎಂಬಂತೆ, ದುರ್ಗದ ಮೇಲಿರುವ ದೊಡ್ಡ ಕಲ್ಲಿನೋಪಾದಿಯಲ್ಲಿ ದೂಳು ಮುಚ್ಚಿಕೊಂಡು ಕೂತಿದೆ.

ನನಗೆ ಆಶ್ಚರ್ಯ ಮತ್ತು ಅಚ್ಚರಿಯೆಂದರೇ ಇಲ್ಲಿಯವರೆಗೆ ಅದು ಎಷ್ಟೋ ಎಲೆಕ್ಷನ್ ಗಳು ಮುಗಿದು ಹೋಗಿವೆ. ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್, ಜಿಲ್ಲಾ ಪಂಚಾಯಿತಿ ಇತ್ಯಾದಿ. ಆದರೂ ಸಹ ಈ ನಗರಕ್ಕೆ ಒಂದೇ ಒಂದು ಚೂರು ನವ ನವೀನತೆಯನ್ನು ಒಬ್ಬೇ ಒಬ್ಬ ನಾಯಕನಿಗೂ ಕೊಡಲು ಸಾದ್ಯವಾಗಿಲ್ಲವಲ್ಲವೆಂಬುದು...

ಹಿಂದುಳಿದ ಜಿಲ್ಲೆ ಎಂದು ಹೆಸರುವಾಸಿಯಾಗಿರುವುದೇ ಇದರ ಹಿರಿಮೆ.

ಅದೇ ಒಂದು ಮೈನ್ ರೋಡ್ ಅದಕ್ಕೆ ಟಾರ್ ಹಾಕಿ ಯಾವ ಕಾಲವಾಯಿತೋ (ಬ್ರಿಟಿಷರ) ದೇವರಿಗೆ ಗೊತ್ತು.

ಹಲವು ವರುಷಗಳ ಹಿಂದೆ ನಡೆದ ಸಾಹಿತ್ಯ ಸಮ್ಮೇಳನದ ಆಶೀರ್ವಾದದಿಂದ ರೋಡ್ ಮದ್ಯ ರಸ್ತೆ ವಿಭಾಗ ಮಾಡಿದ್ದು ಬಿಟ್ಟರೆ ಏನೆಂದರೂ ಏನೂ ಬದಲಾಗಿಲ್ಲ ಇಂದಿಗೂ.

ಅದೇ ದೂಳು ದೂಳು ಮತ್ತು ದೂಳು. ಯಾವುದೇ ಹೊಸತನದ ಶುದ್ಧ ಗಾಳಿ ಯಾವ ರೀತಿಯಲ್ಲೂ ಸುಳಿದಿಲ್ಲ. ಯಾವುದೇ ಹೊಸ ಯೋಜನೆಯ ಸುದ್ಧಿಯೇ ಇಲ್ಲ ಬಿಡಿ.

ಮೈನ್ ರೋಡ್ ಬಿಟ್ಟು ಗಲ್ಲಿ, ಬಡಾವಣೆಗಳ ಕಡೆ ಕಣ್ಣರಿಸಿದರೇ ಅಲ್ಲೂ ದೂಳ್ ದೂಳ್ ಮತ್ತು ದೂಳ್. ಆಗೋ ಹೀಗೋ ಇದ್ದ ರಸ್ತೆಗಳನ್ನು ಒಳ ಚರಂಡಿ ವ್ಯವಸ್ಥೆ ಮಾಡುತ್ತಿವೀ ಎಂದು ಚೆನ್ನಾಗಿ ಗುಂಡಿಗಳನ್ನು ಅಗಿದು ಅವನ್ನು ಮುಚ್ಚದೇ, ಆಗಲೇ ಅದ್ವಾನವಾಗಿದ್ದ ಈ ರೋಡ್ ಗಳಿಗೆ ಚಿರಾ ಮುಕ್ತಿ ದಯಾಪಾಲಿಸಿ, ದೂಳ್ ಭಾಗ್ಯ ಕೊಟ್ಟು ಕೂರಿಸಿಬಿಟ್ಟರು.

ಉರಿಯುವ ಬಿಸಿಲಲ್ಲಿ ಒಂದೇ ಒಂದು ಸುತ್ತು ನಗರ ದರ್ಶನ ಮಾಡಿದರೇ ತಲೆ ನೋವು, ಉಸಿರು ಉಬ್ಬಸ ಕಾಯಂ. ಎನ್ನುವುದು ಇಲ್ಲಿಗೆ ಬೇಟಿ ಕೊಡುವ ಅಕ್ಕಪಕ್ಕದ ಹಳ್ಳಿಗರ ಮಾತು.

ಎಲ್ಲಾರಿಗೂ ಯಾವಾಗಲೂ ಮೊಡುವ ಪ್ರಶ್ನೇ ಒಂದೇ. ಅಲ್ಲಾ ಅಕ್ಕ ಪಕ್ಕದ ಎಲ್ಲಾ ನಗರಗಳು ಅಷ್ಟು ವೇಗವಾಗಿ ಹೊಸತನವನ್ನು ಪಡೆದುಕೊಂಡಿದ್ದರೇ ಈ ನಮ್ಮ ನಗರ ಇನ್ನೂ ೧೯೭೯ ತನವನ್ನು ಅದು ಹೇಗೆ ಕಾಪಿಟ್ಟುಕೊಂಡಿದೆಯೆಂಬುದು?

ನನಗಂತೂ ಅರ್ಥವಾಗುತ್ತಿಲ್ಲ. ಇತಿಹಾಸ ಪ್ರಸಿದ್ಧ ನಗರಕ್ಕೆ ಏಕೆ ಈ ರೀತಿಯ ಶಾಪವೊ? ತಿಳಿಯದಾಗಿದೆ.

ರಾಜಕೀಯವಾಗಿ ಅಧಿಕಾರ ಮಾತ್ರ ಪ್ರತಿ ಭಾರಿಯು ಒಬ್ಬೊಬ್ಬರ ಪಾಲಗುತ್ತಿರುತ್ತದೆ. ಆದರೇ ಅವರುಗಳು ತಮ್ಮ ಕ್ಷೇತ್ರದ ಅಭಿವೃದ್ಧಿ ಅಥವಾಉದ್ಧಾರದ ಬಗ್ಗೆ ಯಾಕೆ ಇನ್ನೂ ಯಾಕೆ ತಲೆ ಕೆಡಿಸಿಕೊಂಡಿಲ್ಲವೋ ನನಗಂತೂ ಗೊತ್ತಿಲ್ಲ.

ನಾನು ಪ್ರಸ್ತಾಪಿಸಿದ್ದು ರಸ್ತೆ ಸಮಸ್ಯೆಯನ್ನೊಂದು. ಇನ್ನೂ ನಾನ ಬಗೆಯ ವಿಷಯಗಳು, ಸಮಸ್ಯೆಗಳ ಸರಮಾಲೆ ಈ ಜಿಲ್ಲೆಯನ್ನು ಸುತ್ತಿಕೊಂಡಿದೆ ಎಂದರೇ ತಪ್ಪಿಲ್ಲ.

ಅಲ್ಲ ನಮ್ಮ ನಗರದ ಮತದಾರರಿಗೇನೂ ಯಾರಾದರೂ ಮಂತ್ರ ಗಿಂತ್ರ ಮಾಡಿಸಿದ್ದಾರೆಯೇ? ಅದು ಹೇಗೆ ಪ್ರತಿ ಭಾರಿಯು ಒಂದೇ ಒಂದು ಮಾತನ್ನಾಡದೇ ಬೇಕಾದ ಅಭ್ಯರ್ಥಿಯನ್ನು ಚುನಾಯಿಸಿ ಬೆಂಗಳೂರಿಗೂ, ದೆಹಲಿಗೂ ಪ್ರತಿ ಭಾರಿಯು ಕಳಿಸಿಕೊಡುತ್ತಾರೆ?

ಯಾಕೆ ಒಬ್ಬರೂ ಸಹ ತಮ್ಮ ಬಳಿಗೆ ಓಟು ಕೇಳಿಕೊಂಡು ಬರುವವರಿಗೆ ಯಾವೊಂದು ಬೇಡಿಕೆಗಳನ್ನು ಇಟ್ಟಿಲ್ಲ? ಯಾಕೆ ಇಂದಿಗೂ ಒಂದೇ ಒಂದು ಚುನಾವಣೆಯನ್ನು ಬೇಡ ಅಂದಿಲ್ಲ?  ಅದು ಏಕೆ ರಾಜಕೀಯ ಪುಡಾರಿಗಳ ಬಗ್ಗೆ ಒಂದಿಷ್ಟು ಸಿಟ್ಟಿಲ್ಲ?

ಇದು ನೆನ್ನೆ ಮೊನ್ನೆಯ ಕಥೆಯಲ್ಲ! ಸರಿ ಸುಮಾರು ೨-೩ ದಶಕಗಳಿಂದ ಚಿತ್ರದುರ್ಗ ದುರ್ಗ(ಮ)ವಾಗಿಯೇ ಇದೆ.

ಚಿಕ್ಕ ಮಗುವು ಸಹ ಗುರುತಿಸುತ್ತದೆ. ಬೇರೆ ಜಿಲ್ಲಾ ಕೇಂದ್ರಗಳೆಲ್ಲಾ ಆ ರೀತಿಯಲ್ಲಿ ಬೆಳೆದಿದ್ದರೆ ನಮ್ಮ ಊರು ಯಾಕೆ ಇನ್ನೂ ಹೀಗೆಯೇ ಇದೆ ಎಂದು.

ಅದು ಹೇಗೆ ಇಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಏನೂಂದು ಕೆಲಸವನ್ನು ಮಾಡದೇ ಪುನಃ ಪುನಃ ಸಲೀಸಾಗಿ ಗೆಲ್ಲುತ್ತಿದ್ದಾರೆ?

ನನಗಂತೂ ಪರಮಾಶ್ಚರ್ಯವಾಗುತ್ತದೆ. ಹಾಗೆಯೇ ದುಃಖವುವಾಗುತ್ತದೆ!

ಭದ್ರ ಮೇಲ್ದಾಂಡೆ  ಎನ್ನುವ ಮಾತನ್ನು ಇಲ್ಲಿನ ಜನ ಹಲವು ದಶಕಗಳಿಂದ ಕೇಳುತ್ತಲೇ ಕೇಳುತ್ತಲೇ  ಮುದುಕರಾದರೇನೋ.

ಅದರ ಸುದ್ಧಿ ಸುಳಿವು ಇನ್ನಾದರೂ ಇಲ್ಲ. ಅದು ಯಾವಾಗ ಆ ನೀರನ್ನು ಕುಡಿಯುವ ನೋಡುವ ಭಾಗ್ಯ ಬರುವುದೋ ನೋಡಬೇಕು.

ಮೊಲಭೂತ ಸೌಲಭ್ಯಗಳ ಕೊರತೆಯನ್ನು ಈ ಜಿಲ್ಲೆ ಮತ್ತು ನಗರ ಅನುಭವಿಸಿದಂತೆ ಬೇರೆ ಯಾವ ಕ್ಷೇತ್ರವು ಅನುಭವಿಸಿಲ್ಲ. ಇದು ಬರಸೀಮೆ ಬರಗಾಲ ನಿತ್ಯ ಕುಡಿಯುವ ನೀರಿಗೆ ಹಾಹಕಾರ. ಎಲ್ಲಾ ರಂಗಗಳಲ್ಲೂ ಏನೊಂದು ಅಭಿವೃದ್ಧಿ ಕಾಣದ ನತದೃಷ್ಟ ಜಿಲ್ಲೆ ಮತ್ತು ಜಿಲ್ಲಾ ಕೇಂದ್ರ.

ಆದರೇ ಇಲ್ಲಿ ಗೆದ್ದ ಯಾವೊಬ್ಬ ನಾಯಕನು ಅಭಿವೃದ್ಧಿಯನ್ನು ಮಾಡಲು ಸಾಸಿವೆ ಕಾಳಿನಷ್ಟು ಪ್ರಯತ್ನಪಟ್ಟಿದ್ದನ್ನು ನಾನಂತೂ ಕಂಡಿಲ್ಲ.

ಯಾವ ಅಸಂಬ್ಲಿಯಲ್ಲೂ ಎಂದೂ ನಮ್ಮ ನಗರದ ಸಮಸ್ಯೆಗಳ ಬಗ್ಗೆ , ಹೊಸ ಯೋಜನೆಗಳ ಬಗ್ಗೆ ಯಾವೊಬ್ಬ ನಾಯಕನು ಎಂದೂ  ಉಸಿರು ಬಿಟ್ಟಿರುವುದನ್ನು ನಾನಂತು ಕೇಳಿಲ್ಲ!

ತುಟಿ ಬಿಚ್ಚಿಲ್ಲ!

ನಮ್ಮ ನಗರದ ಮತದಾರರು ಹಸಿವಿನಂತವರು ಬಿಡಿ. ಇಲ್ಲಿಂದ ಆಯ್ಕೆಯಾಗಿರುವ ನಾಯಕರುಗಳು ಹಸಿವಿನ ಮನಸ್ಸಿನವರೇನಾ?

ಓ ಒನಕೆ ಒಬವ್ವ..! ಇನ್ನಾದರೂ.. ಈ ಭಾರಿಯಾದರೂ.. ಒಳ್ಳೆಯ ನಾಯಕನನ್ನು ಆರಿಸುವಂತಹ ಬುದ್ದಿಯನ್ನು ನಿನ್ನ ನಗರದ ಮತದಾರ ಪ್ರಭುವಿಗೆ ದಯವಿಟ್ಟು ದಯಪಾಲಿಸು.

ನಿನ್ನಲ್ಲಿರುವ ಒನಕೆಯ ಪಾಲಿನಷ್ಟನಾದರೂ ಕೆಚ್ಚನ್ನು/ಕಿಚ್ಚನ್ನು ನಿನ್ನೂರಿನ ನಗರದ ಮನ ಮಂದಿಗೆ ಕೊಡು.

ನಾನಂತೂ ಏನಾದರೂ ಹೊಸತನವನ್ನು ಈ ನಗರದಲ್ಲಿ ಈ ಚುನಾವಣೆಯನಂತರ ಕಾಣಲು ಬಯಸುವೆ. ಪ್ಲೀಜ್!

ಯಾವ ಪಕ್ಷದವರಾದರೂ ಪರವಾಗಿಲ್ಲ. ನಮಗೆ ಒಳ್ಳೆಯ ವ್ಯಕ್ತಿ ಬೇಕು! ಚಿತ್ರದುರ್ಗದ ಬಗ್ಗೆ ಪ್ರೀತಿಯಿರುವ ಮನಸ್ಸಿರಬೇಕು! ಏನಾದರೂ ಹೊಸ ಅನುಕೂಲವನ್ನು ಪೂರೈಸುವ ಕಾಳಜಿಯ ಮನುಷ್ಯನಾಗಿರಬೇಕು!

ಈ ಮನುಷ್ಯನ ಕಾಲದಲ್ಲಿ ಈ ಕೆಲಸವಾಯಿತು ಎಂದು ನಿನ್ನ ನಗರದ ಜನ ಮುಂದೆ ನೆನಪಿಸಿಕೊಳ್ಳುವಂತಹ ನಾಯಕ/ಜನಪ್ರತಿನಿಧಿ ನಮಗೆ ಬೇಕು.

ಬನ್ನಿ ಗೆಲ್ಲಿಸೋಣ. ಬದಲಿಸೋಣ. ಚಿತ್ರದುರ್ಗದ ನೋಟವನ್ನು.

ಮುಂದಿನ ಚುನಾವಣೆಯಲ್ಲಿ ದೂಳ್ ದೂಳ್ ಮಾಡಿ. ಕೆಲಸ ಮಾಡದೇ ಓಟು ಕೇಳುವ ಬಾಯ್ ಮಾತ್ ನಾಯಕರನ್ನು, ಗಿಲೀಟು ಕನಸ ಬಿತ್ತುವವರನ್ನಾ.

ನಿಮ್ಮ ಮತ ನಿಮ್ಮ ಕೈಯಲ್ಲಿ. ದುರ್ಗದ ಭವಿಷ್ಯ ನಿಮ್ಮಿಂದ!

ಶನಿವಾರ, ಡಿಸೆಂಬರ್ 16, 2017

ಇಷ್ಟಪಡುವುದು ನಿಮ್ಮ ಬರಹಗಳನ್ನು

ಕಳೆದ ವಾರ ಎಲ್ಲರೂ ಒಕ್ಕೂರೊಲಿನಿಂದ ಹೇಳಿದ್ದೇ ಹೇಳಿದ್ದು. ನೀ ಮೊದಲು ಟಿ.ವಿ ನೋಡು. ನಾನು ಯಾಕಾಪ್ಪಾ ಹೀಗೆ? ಇವರೆಲ್ಲಾ ಪ್ರೀತಿಯಿಂದ ಟಿ.ವಿ ನ್ಯೂಸ್ ಚಾನಲ್ ನೋಡಲು  ನನ್ನ ದಂಬಾಲು ಬಿದ್ದಿದ್ದಾರೆ? ಎಂದುಕೊಂಡು ಟಿ.ವಿ ಆನ್ ಮಾಡಿದೆ.

ಬ್ರೇಕಿಂಗ್ ನ್ಯೂಸ್ ’ಬೆಳೆಗೆರೆ ಆರೇಸ್ಟ!’.

ನಮ್ಮ ಮನೆ ಸ್ನೇಹಿತರಾದಿ ಕೇಳಿದ್ದೇ. ನೋಡಿದಿಯಾ ನೀನು ಓದುತ್ತಿದ್ದಾ ನೆಚ್ಚಿನ ಲೇಖಕನ ಅಸಲಿ ಮುಖ! ನಿನ್ನ ಲೇಖಕ ಸುಪಾರಿಯಿಂದ ಜೈಲು ಪಾಲು!

ಹೌದು. ಬೆಳೆಗೆರೆ ಬರಹಗಳನ್ನು ಪ್ರೀತಿಪಟ್ಟು ಓದುತ್ತಿದ್ದೇ. ಹಾಯ್ ಬೆಂಗಳೂರ್ ಖರೀದಿಸುತ್ತಿದ್ದುದೆ ರವಿಯ ಖಾಸ್ ಬಾತ್ , ಹಲೋ, ಬಾಟಂ ಐಟ್ಂ, ಸಾಪ್ಟ್ ಕಾರ್ನಾರ್, ಲವಲವಿಕೆ ಮತ್ತು ಧಾರಾವಾಹಿಗಳಿಗಾಗಿ.

ಪೇಪರ್ ಕೊಂಡುಕೊಂಡ ಅರ್ಧ ತಾಸಿನಲ್ಲಿ ಅವರು ಬರೆದಿರುವ ಎಲ್ಲವನ್ನು ಒಂದೇ ಗುಕ್ಕಿಗೆ ಓದಿ ಮುಗಿಸಿ ಮುಂದೇನು ಎಂದು ಮುಂದಿನ ವಾರದ ಪತ್ರಿಕೆಗೆ ಕಾಯುತ್ತಿದ್ದಂತಹ ನಿತ್ಯ ಓದುಗನಾಗಿದ್ದೆ. ಅದು ಹಳೆ ಕಾಲ ಬಿಡಿ.

ಅಷ್ಟರ ಮಟ್ಟಿಗೆ ಬೆಳೆಗೆರೆಯ ಅಕ್ಷರಗಳ ಮೋಡಿ ಇಡೀ ಕರ್ನಾಟಕದಲ್ಲಿ ಮನೆ ಮಾಡಿತ್ತು ಎಂದರೇ ಅತಿಶಯೋಕ್ತಿಯಲ್ಲ.

ಅವರೇ ಪತ್ರಿಕೆಗಳಲ್ಲಿ ಬರೆದುಕೊಳ್ಳುತ್ತಿದ್ದಂತೆ, ಕಷ್ಟಪಟ್ಟುಕೊಂಡೇ ಈ ಎತ್ತರಕ್ಕೆ ಬೆಳೆದು, ಕೋಟಿ ಕೋಟಿ ಒಡೆಯನಾಗಿರುವುದೇ ಪ್ರತಿಯೊಬ್ಬರಿಗೆ ಮಾದರಿಯಾಗಿತ್ತು. ಕಷ್ಟಪಟ್ಟು ಸಾಧಿಸಿದರೇ ಯಾವುದು ದೊಡ್ಡದಲ್ಲ! ಜೀವನದಲ್ಲಿ ಬೆಳೆಗೆರೆಯಂತೆ ಬೆಳೆಯಬೇಕು ಎಂದುಕೊಂಡ ಅದೇಷ್ಟೋ ಹದಿಹರೆಯದ ಮನಸ್ಸುಗಳಿಗೆ ಈ ಸುದ್ದಿ ಬಲೂನಿಗೆ ಸೂಜಿ ಚುಚ್ಚಿದಂತಾಗಿದೆ.

ಇಂದಿಗೂ ಕನ್ನಡದಲ್ಲಿ ಹೆಚ್ಚು ಪುಸ್ತಕಗಳು ಮಾರಾಟವಾಗುವುದು ಮತ್ತು ಆಲ್ ಟೈಂ ದೀ ಬೆಸ್ಟ್ ಎಂದರೇ.. ಎಸ್.ಎಲ್ ಬೈರಪ್ಪ ಮತ್ತು ಬೆಳೆಗೆರೆಯ ಪುಸ್ತಕಗಳು.

ಜನಪ್ರಿಯ ಲೇಖಕರ ಸಾಲಿನಲ್ಲಿ ಬೆಳೆಗೆರೆ ಹೆಸರು ನಿತ್ಯ ಮುಂದು.

ಅವರ ಅಕ್ಷರಗಳ ಸಾಲಿಗೆ ಕರಗಿ ನೀರಾಗದವರು ಯಾರು ಇಲ್ಲ. ಬರೆದುಕೊಂಡೇ ಈ ಮಟ್ಟಕ್ಕೆ ಬೇಳೆದಿದ್ದಾರೆ ಎಂದೇ ಸಾಮಾನ್ಯ ಓದುಗನಿಗೆ ಹೆಮ್ಮೆ.

ಪ್ರತಿ ಪುಸ್ತಕದಲ್ಲಿ ಅವರೇ ಹೇಳುತ್ತಿದ್ದರೂ. ನಾನು ೧ ರೂಪಾಯಿ ಪೆನ್ನು ಇಟ್ಟುಕೊಂಡು ಬಂದವನು. ಓದುಗರು ಕೊಟ್ಟ ಹತ್ತು ಹತ್ತು ರೂಪಾಯಿ ಪೇಪರ್ ದುಡ್ಡೇ ಇಂದು ನಾನು ಶಾಲೆ, ಟಿವಿ,ಸಿ.ಡಿ, ರೇಡಿಯೋ ಇತ್ಯಾದಿ ಎಲ್ಲಾ ಕಟ್ಟುವಂತೆ ಮಾಡಿದೆ.

ಪ್ರತಿ ರೂಪಾಯಿಗೂ ಪೈಸಾ ವಸೂಲ್ ಮಾಡುವಂತಹ ಬರಹ, ಕಾದಂಬರಿ, ಕಥೆಗಳನ್ನು ಕೊಡುತ್ತಿನಿ. ನನ್ನನ್ನು ಬರವಣಿಗೆಯಲ್ಲಿ ಯಾರು ಎಂದಿಗೂ ಮೀರಿಸಲೂ ಸಾಧವಿಲ್ಲ. ಟೈಂ ಇಟ್ಟುಕೊಂಡು ಬರೆಯುವವನು ನಾನೊಬ್ಬನೇ. ಒಂದೇ ಎರಡೇ ಅವರೇ ಅವರ ಬಗ್ಗೆ ಬರೆದು(ಕೊಚ್ಚಿ)ಕೊಳ್ಳುತ್ತಿದ್ದದ್ದು. ಅದೇ ನಮಗೆಲ್ಲಾ ಹೆಚ್ಚು ಇಷ್ಟಪಟ್ಟು ಓದುವಂತೆ ಮಾಡುತ್ತಿತ್ತು.

ಪ್ರತಿ ಓದುಗನಿಗೂ ಹೊಟ್ಟೆ ಕಿಚ್ಚಾಗುವಂತೆ ಬರೆಯುತ್ತಿದ್ದರೂ.

ಪ್ರತಿಯೊಬ್ಬರೂ ತಮ್ಮ ತಮ್ಮೊಳಗೆ ಗೊತ್ತಿಲ್ಲದೆ ಬೆಳೆಗೆರೆ ಶೈಲಿಯನ್ನು ರೂಢಿಸಿಕೊಳ್ಳುತ್ತಿದ್ದರು.

ಅಷ್ಟೊಂದು ಅಭಿಮಾನಿಗಳನ್ನು ಹೊಂದಿದ್ದರೂ ಎಂದರೇ ಅದು ಕೇವಲ ಅವರ ಅಕ್ಷರಗಳು ಮತ್ತು ಬರಹಗಳಿಂದ ಮಾತ್ರ.

ದೂರದಲ್ಲಿರುವ ಓದುಗನಿಗೆ ಬರೆಯುವ ಬರಹಗಾರ ಹತ್ತಿರವಾಗುವುದು ಅವನ ಬರಹಗಳಿಂದ ಮಾತ್ರ.

ಸಾಮಾನ್ಯ ಓದುಗ ಪ್ರೀತಿಯಿಂದ ತಾನು ಓದುವ ಪ್ರತಿ ಅಕ್ಷರದ ಮೂಲಕ ಅದನ್ನು ಬರೆದ ಕತೃವಿನ ಬಗ್ಗೆ ಬೇರೊಂದು ರೂಪವನ್ನು ತನ್ನ ಮನದಲ್ಲಿಯೇ ಕಟ್ಟಿಕೊಂಡುಬಿಡುತ್ತಾನೆ.

ಇಂದು ಅಂಥ ಎಲ್ಲಾ ಸಹಸ್ರ ಸಹೃದಯಗಳಿಗೆ ಅಘಾತವಾದ ದಿನ!

ಮೊದಲಿನಿಂದಲೂ ಸುತ್ತ-ಮುತ್ತ, ಅಲ್ಲಿ-ಇಲ್ಲಿ ಬೆಳೆಗೆರೆ ಹಾಗೆಯೇಂತೆ. ಹೀಗೆಯಂತೆ. ಎಂಬ ಗಾಳಿ ಸುದ್ಧಿಗಳು ಕಿವಿಗೆ ಬಿದ್ದರೂ. ನಾವು ಬಿಡು ಗುರು! ನದಿ ಮೊಲ ಋಷಿ ಮೊಲ ಯಾಕ್ ಬೇಕು?  ಬೆಳೆದವರನ್ನು ಕಂಡರೇ ಸಾವಿರಾ ಗಾಸಿಫ್ ಗಳ ಜಮಾನ ಇದು. ಬಿಡು ಗುರು! ಎಂದುಕೊಂಡು  ಪುನಃ ಹೆಚ್ಚು ಓದುತ್ತಿದ್ದಿವಿ.

ಆಗ ಕಡೆಗಣಿಸಿದ್ದವರಿಗೆ ಹೃದಯ ಭಾರವಾದ ಸಮಯ.

ಇದೇನಾ ನಮ್ಮ ಸೂಪರ್ ಪವರ್ ಪುಲ್ ಲೇಖಕನ ಮುಖ ಟಿ.ವಿ ಪರದೆಯ ಮೇಲೆ? ತಾನೇ ಸುಪಾರಿ ಕಿಲ್ಲಾರಗಳ ಬಗ್ಗೆ ಹೆಡ್ ಲೈನ್ ಸುದ್ಧಿ ವರದಿ ಮಾಡುತ್ತಿದ್ದವರು. ಈಗ ತಮ್ಮದೇ ಸುದ್ಧಿಯನ್ನು ತನ್ನ ಪೇಪರ್ ನಲ್ಲಿಯೇ ಕಾಣಬೇಕಾಯಿತಲ್ಲಾ!!

ಓ ಗಾಡ್!!

ಅಯ್ಯೋ ಇವರೇನಾ ನಾವು ಇಷ್ಟಪಟ್ಟು ಓದುತ್ತಿದ್ದ ಬರಹಗಾರ?  ಎಂದು ಬೇಸರವಾಯಿತು.

ಪ್ರತಿ ಬರಹಗಾರರು ಬರದಂತೆ ಬದುಕವವರು ಎಂದುಕೊಂಡಿದ್ದು ನಮ್ಮ ಮುಗ್ಧ ಮನಸ್ಸು ಎನಿಸಿತು.

ಓದುವುದು ಬೇರೆ. ಬರೆಯುವುದು ಬೇರೆ. ಬದುಕುವುದು ಬೇರೆಯೇ ಅನಿಸಿತು.

ಬರಹಗಾರ ಎಂದರೇ ಸರಸ್ವತಿಯ ಪುತ್ರನೇ ಸರಿ. ಓದುಗನು ಇಷ್ಟಪಡುವಂತಹ ಕಲ್ಪನೆಯ ಜಗತ್ತನೆ ಸೃಷ್ಟಿ ಮಾಡಿ. ಭಾವನಾ ಪ್ರಪಂಚದಲ್ಲಿ ಸಂಬಂಧಗಳನ್ನು  ಕಟ್ಟಿಕೊಟ್ಟು ನಮ್ಮನ್ನೇಲ್ಲಾ ಗೆಲ್ಲುವಂತಹ ಬರಹಗಳನ್ನು ನೀಡುವ ಅಕ್ಷರಗಳ ಮಾಂತ್ರಿಕನಿಗೆ ಮೀಗಿಲಾದವನು ಯಾರು ಇಲ್ಲ ಎಂದುಕೊಂಡವರು ನಾವು.

ಆದರೇ.....!

ನಾನಂತೂ ಇದುವರೆಗೂ ಯಾವುದೇ ಲೇಖಕರನ್ನು ಮುಖತಃ ಬೇಟಿ ಮಾಡಿಲ್ಲ. ನನಗೆ ಹಾಗೇ ಬೇಟಿ ಮಾಡಲು ಇಷ್ಟವು ಆಗುವುದಿಲ್ಲ. ಯಾಕೆಂದರೇ ಅವರನ್ನು ಅವರು ಬರೆದಿರುವ ಪುಸ್ತಕಗಳಲ್ಲಿ ಕಂಡುಕೊಳ್ಳಲು ಹೆಚ್ಚು ಇಷ್ಟಪಡುತ್ತಿನಿ.

ಹಾಗೆಯೇ ನಾವು ಓದುವ ನಮ್ಮ ನೆಚ್ಚಿನ ಬರಹಗಾರನನ್ನು ಯಾವ ಓದುಗನು ಕೇವಲವಾಗಿ ಕಾಣಲು ಎಂದಿಗೂ ಇಷ್ಟಪಡುವುದಿಲ್ಲ. ಲೇಖಕನ ಸ್ಥಾನ ಸಿಗುವುದು ಒಂದು ವರವೇ ಸರಿ. ಆ ಸ್ಥಾನಕ್ಕೆ ತಕ್ಕ ಹಾಗೆಯೇ ನಡೆದುಕೊಳ್ಳುವುದು ಅವರಿಗೂ ಕಷ್ಟವೇ ಸರಿ. ಆದರೂ ತಲೆ ತಗ್ಗಿಸುವಂತಹ ರೀತಿಯಲ್ಲಿ ಯಾವ ಲೇಖಕನು ಎಂದಿಗೂ ವರ್ತಿಸಬಾರದು.

ಬರೆದಂತೆ ಬದುಕಲು ಸಾಧ್ಯವಾಗದಿದ್ದರೂ ಪರವಾಗಿಲ್ಲ. ನಿಕೃಷ್ಠವಾದ ವ್ಯಕ್ತಿತ್ವ ಮತ್ತು ಮನೋಸ್ಥಿತಿ ಎಂದಿಗೂ ಬರಬಾರದು.

ನೀವು ಹೇಳಬಹುದು ಬರಹಗಾರನು ಮತ್ತೊಬ್ಬ ಮನುಷ್ಯ ಮಾತ್ರ. ಅವನಿಗೂ ಬೇರೆ ಮನುಷ್ಯರಿಗೆ ಇರುವ ದೌರ್ಬಲ್ಯಗಳು ಇರುವುದು ಸಹಜ ಅನ್ನಬಹುದು.

ಆದರೂ ನಾನು ಇಷ್ಟಪಟ್ಟ ಬರಹಗಾರ ಯಾವಾಗಲೂ ಟಾಪ್ ನಲ್ಲಿಯೇ ಇರಬೇಕು ಎನ್ನುವುದೇ ನನ್ನ ಮನದಾಸೆ! ಇದು ಎಲ್ಲಾ ಓದುಗರ ಒಮ್ಮತದ ಆಸೆ ಕೊಡಾ.

ಗೊತ್ತೂ. ಅವನ ಕಷ್ಟಗಳು ನಮಗೆ ಪಾಠವಾಗಬಹುದು. ಅವನ ನೋವುಗಳು ನಮಗೆ ಧಾರಿ ದೀಪವಾಗಬಹುದು. ಅವನ ಅವಮಾನಗಳು ನಮಗೆ ಗುರುವಾಗಬಹುದು. ಆದರೇ ಅವನ ತಪ್ಪುಗಳು?

ಆದರೇ ತಾನೇ ಮತ್ತೊಬ್ಬರನ್ನು ಕೊಲ್ಲುವಂತಹ ಮನಸ್ಸಿರುವವನು ಅದು ಹೇಗೆ ಲೇಖಕನಾಗುವನು ದೇವರೇ ಅನಿಸುತ್ತದೆ??

ಇವನೇನಾ ಇದುವರೆಗೂ ಅಸಂಖ್ಯಾತ ಓದುಗರಿಗೆ ತಂದೆಯಾಗಿ, ಗುರುವಾಗಿ, ಅಣ್ಣನಾಗಿ ಸಮಾಧಾನ ಹೇಳುತ್ತಿದ್ದುದು?

ಇದು ಎಲ್ಲಾ ಸುಳ್ಳೂ ಅನಿಸಿಬಿಟ್ಟ ಕ್ಷಣ ಓದುಗನ ಮನಸ್ಸನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಬಿಡಿ!

ಈ ರೀತಿಯ ಸನ್ನಿವೇಶ ಮತ್ತೇ ಮುಂದಿನ ದಿನಗಳಲ್ಲಿ ಯಾವುದೇ ಸಾಹಿತ್ಯ ಸಾಂಸ್ಕೃತಿಕ ಲೋಕದಲ್ಲೂ ಮರುಕಳಿಸಬಾರದು. ಇದೇ ನನ್ನ ಹಂಬಲ.

ಬರಹಗಾರರೆಂದರೇ ನಾವುಗಳೆಲ್ಲಾ ಕೊಟ್ಟಿರುವ ಸ್ಥಾನ ಅತಿ ಉನ್ನತವಾದದ್ದು.

ಅದಕ್ಕಾಗಿ ನಾವುಗಳು ನಿರೀಕ್ಷೆ ಮಾಡುವುದು. ಬರೆಯುತ್ತಿದ್ದೇವೆ ಎನ್ನುವ ಕಾರಣಕ್ಕಾದರೂ ಅಕ್ಷರ ಮಾಂತ್ರಿಕರು ಸಮಾಜದಲ್ಲಿ ಸಭ್ಯರಾಗಿ ಬದುಕಲು ಪ್ರಯತ್ನಿಸಿ ಎನ್ನುವುದು ನನ್ನ ಕಳಕಳಿಯ ಸಲಹೆ.

ಯಾಕೆಂದರೇ ನಾವು ಇಷ್ಟಪಡುವುದು ನಿಮ್ಮ ಬರಹಗಳನ್ನು. ನಿಮ್ಮನ್ನೂ ಸಹ ಎಂದು ಪ್ರತ್ಯೇಕವಾಗಿ ಹೇಳಲಾಗದು.!!!