ಸೋಮವಾರ, ಫೆಬ್ರವರಿ 17, 2025

ಡೇಟನ್ ವಿಮಾನ ಜನಕರ ಜನ್ಮ ಭೂಮಿ

ಡೇಟನ್ ಓಹಿಯೋ ರಾಜ್ಯದ ಒಂದು ಪುಟ್ಟ ನಗರ. ಜೆಮ್ ಸಿಟಿಯೆಂದೆ ಪ್ರಸಿದ್ಧವಾದ ಪಟ್ಟಣ.




ವೈಮಾನಿಕ ಜಗತ್ತಿನ ಜನಕರಾದ ರೈಟ್ ಸಹೋದರರ ತವರು ನೆಲ. ವಿಮಾನ ಹಾರಟದ ಪ್ರಯೋಗ  ಭೂಮಿಯೆಂದೇ ಇಡೀ ಜಗತ್ತಿಗೆ ತನ್ನ ಹಿರಿಮೆಯನ್ನು ಪಸರಿಸಿದ ನಗರ. ಈ ನಗರದಲ್ಲಿ ಎಲ್ಲಾ ವರ್ಗದ ಜನ ಸಾಮಾನ್ಯರು ವಾಸ ಮಾಡುತ್ತಿದ್ದಾರೆ. 


ನಾನು ಇಲ್ಲಿಗೆ ವಾಸ ಮಾಡುವ ಸಲುವಾಗಿ ಬರುವ ವೇಳೆಯಲ್ಲಿ ಇಷ್ಟೊಂದು ವಿಷಯ ವಿಶೇಷಗಳನ್ನು ಹೊಂದಿರುವ ನಗರವೆಂದು ತಿಳಿದು ವಿಸ್ಮಿತನಾಗಿದ್ದುಂಟು. ಹಾಗೆಯೇ ಈ ನಗರದಲ್ಲಿಯೇ ನನ್ನ ಕಂಪನಿ ಕೆಲಸವನ್ನು ಮಾಡಲು ಅವಕಾಶಯೋ ಸಿಕ್ಕಿದ್ದಕ್ಕೆ ನನ್ನ ಖುಷಿಯು ದುಪ್ಪಟ್ಟಾಗಿತ್ತು. 

ಹಾಗೆಯೇ ಅಮೇರಿಕಾ ಅಂದರೇ ನ್ಯೂಯಾರ್ಕ್, ಚಿಕಾಗೋ, ಸ್ಯಾನ್ ಪ್ರಾನ್ಸಿಸ್ಕೋ ಎಂದು ಮಾತನಾಡುವವರ ಮುಂದೇ ಡೇಟನ್ ಗೆ ಹೋಗುತ್ತಿದ್ದೇನೆ ಅಂದರೇ ಪುನಃ ಅಮೇರಿಕಾ ತಾನೇ ಎಂದು ಪ್ರತಿ ಪ್ರಶ್ನೆ ಮಾಡಿದ್ದವರ ಕಂಡು ಕನಿಕರವೂ ಬಂದಿತ್ತು.



ಅಮೇರಿಕವೆಂದರೇ ವಿಶಾಲವಾದ ಭೂ ಪ್ರದೇಶವನ್ನು ಹೊಂದಿರುವ ದೇಶ. ಹಾಗೆಯೇ ಅಲ್ಲಿರುವ ಒಟ್ಟು ರಾಜ್ಯಗಳ ಸಂಖ್ಯೆಯೇ ಐವತ್ತು. ಪ್ರತಿ ರಾಜ್ಯಗಳ ಗಡಿಗಳನ್ನು ಅವುಗಳಲ್ಲಿ ಹರಿಯುವ ನದಿಗಳ ಮೊಲಕ ಗಡಿಯನ್ನು ಹಾಕಿಕೊಂಡು ಬೇರೆ ಬೇರೆ ಮಾಡಿದ್ದಾರೆ. ನಾವು ಯಾವುದಾದರೂ ಒಂದು ಸಿಟಿಯಿಂದ ಇನ್ನೊಂದು ರಾಜ್ಯದ ಸಿಟಿಗೆ ಹೋಗುವಾಗ ಒಂದು ನದಿಯನ್ನು ದಾಟಿದೇವು ಅಂದರೆ ಮುಂದೆಯೇ ಹೊಸ ರಾಜ್ಯದ ಸ್ವಾಗತ ಬೋರ್ಡ್ ಗಳು ಕಾಣುವುದು ಸಾಮಾನ್ಯ.


ಹಾಗೆಯೇ ಓಹಿಯೋ ನದಿಯಿಂದ ಓಹಿಯೋ ರಾಜ್ಯದ ಹೆಸರು ಬಂದಿರುವುದಾದರೂ. ಈ ಓಹಿಯೋ ರಾಜ್ಯದಲ್ಲಿ ಅತಿ ದೊಡ್ಡ ನಗರಗಳೆಂದರೇ ರಾಜ್ಯದ ರಾಜದಾನಿಯಾದ ಕೊಲಂಬಸ್ ಮತ್ತು ಸಿನ್ಸಾನಾಟಿ. ಡೇಟನ್ ಕೊಲಂಬಸ್ ನಿಂದ ೭೦ ಮೈಲಿ ಮತ್ತು ಸಿನ್ಸನಾಟಿಯಿಂದ ೫೫ ಮೈಲಿ ದೂರದಲ್ಲಿದೆ. 


ಹಾಗೆಯೇ ವಿಶ್ವ ವೈಮಾನಿಕ ಜಗತ್ತಿಗೆ ಈ ನಗರ ಒಂದು ಐತಿಹಾಸಿಕ ಸ್ಥಳವಾಗಿದೆ. ನಮಗೆಲ್ಲಾ ಗೊತ್ತು ಇಡೀ ಜಗತ್ತನ್ನೆ ಚಿಕ್ಕದು ಮಾಡಿದ್ದು ವಿಮಾನಯಾನ. ಹಕ್ಕಿಯ ರೀತಿಯಾಗಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹಾರಿಕೊಂಡು ಹೋಗಬಹುದು ಎಂಬ ಕಲ್ಪನೆಯನ್ನು ನಿಜ ಮಾಡಿದ ರೈಟ್ ಸಹೋದರರನ್ನು ಈ ಜಗತ್ತು ಎಂದಿಗೂ ಮರೆಯಲು ಸಾಧ್ಯವಿಲ್ಲ. 



ಇಲ್ಲಿರುವ ನ್ಯಾಷನಲ್ ಮ್ಯೂಸಿಯಮ್ ಅಪ್ ಏರ್ ಪೊರ್ಸ್ ನಲ್ಲಿರುವ ಅವರ ಮೊದಲ ವಿಮಾನ ರಚನೆಯನ್ನು ಕಂಡು ಅಚ್ಚರಿಯು ಆಯಿತು.  ಮನುಷ್ಯನಿಗೂ ರೆಕ್ಕೆಗಳನ್ನು ಕಟ್ಟಿ ಹಾರಬೇಕು ಎಂಬ ಕನಸನ್ನು ನನಸು ಮಾಡಿ ಇಡೀ ಜಗತ್ತನ್ನು ಒಂದು ಹಳ್ಳಿಯಾಗಿ ಮಾಡಿದ ಸಹೋದರರ ಸಂಶೋಧನೆಗೆ ಒಂದು ಸಲಾಮ್ ಹೇಳಲೇಬೇಕು ಅನಿಸುತ್ತದೆ. ಅವರನ್ನು ನಿತ್ಯ ನೆನಪು  ಮಾಡಿಕೊಳ್ಳೊಣವೆಂದುಕೊಂಡು ಬರುವ ಮ್ಯೊಸಿಯಂ ವೀಕ್ಷಕರ ಸಂಖ್ಯೆಯೇ ಹೇಳುತ್ತದೆ  ರೈಟ್ ಸಹೋದರರ ಬಗ್ಗೆ ನಮ್ಮೆಲ್ಲಾರ ಹೆಮ್ಮೆ ಎಷ್ಟರ ಮಟ್ಟಿಗೆ ಇದೆಯೆಂದು. 



ಹಾಗೆಯೇ ಡೇಟನ್ ನಗರದ ಜೀವ ನಾಡಿಯಾಗಿ ಹರಿಯುತ್ತಿರುವ ಮಿಯಾಮಿ ನದಿಯು ಶುದ್ಧ ಪರಿಶುದ್ಧ ನೀರನ್ನು ಹೊಂದಿರುವುದಲ್ಲದೆ ಇಲ್ಲಿಯ ಜನರ ಕುಡಿಯುವ ನೀರನ್ನು ಈ ನದಿಯಿಂದಲೇ ಪೂರೈಸುತ್ತಿರುವುದು ಒಂದು ವಿಶೇಷ. 




ಈ ಡೇಟನ್ ನಗರಕ್ಕೆ ಸೇರಿರುವ ಸುತ್ತುಕೊಂಡಿರುವ ಪ್ರಮುಖ ಚಿಕ್ಕ ಪಟ್ಟಣಗಳೆಂದರೇ ಕೇಟರಿಂಗ್,ಮಿಯಾಮಿಸ್ಭರ್ಗ್,ಸೆಂಟ್ರಾವಿಲ್ಲಿ,ಬೆಲ್ ಬ್ರೂಕ್. ಈ ಎಲ್ಲಾ ನಗರಳು ಸೇರಿಕೊಂಡಿರುವುದರಿಂದ ಒಮ್ಮೊಮ್ಮೆ ದೊಡ್ಡ ನಗರವೆನಿಸುತ್ತದೆ. ಆದರೇ ಇಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಅಂದುಕೊಂಡ ಸಮಯದಲ್ಲಿ ಯಾವುದೇ ಅಡೆ ತಡೆಯಿಲ್ಲದೆ ಸರಾಗವಾಗಿ ತಲುಪಬಹುದಾಗಿದೆ ಅದು ಟ್ರಾಪಿಕ್ ಜಂಜಾಟವಿಲ್ಲದೆ. ಇದಂತೂ ಇಲ್ಲಿಯ ಜನರ ಸಂತೋಷಕ್ಕೆ ಒಂದು ಬಹುಮುಖ್ಯ ಕಾರಣವಾಗಿದೆ.


ಓಹಿಯೋ ರಾಜ್ಯದ ಹಿರಿಮೆಯೆಂದರೇ ಅತಿ ದಟ್ಟ ಹಸಿರು ಮರಗಳನ್ನು ಹೊಂದಿರುವುದು. ಹಾಗೆಯೇ ಇಲ್ಲಿಯು ಈ ನಗರದ ಸುತ್ತ ಮುತ್ತಿರುವ ಹಸಿರು ವನಗಳನ್ನು ಅವುಗಳು ಇರುವಂತೆ ಕಾಪಿಟ್ಟುಕೊಂಡು ಜನ ಸಾಮಾನ್ಯರಿಗೆ ಮೆಟ್ರೂ ಪಾರ್ಕಗಳೋಪಾದಿಯಲ್ಲಿ ಕೊಟ್ಟಿರುವುದು ಇಲ್ಲಿಯ ನಾಗರಿಕರು ತಮ್ಮ ಬಿಡುವಿನ ಸಮಯವನ್ನು ಈ ಪಾರ್ಕಗಳಲ್ಲಿ  ನಡೆದಾಡುತ್ತಾ, ಮಕ್ಕಳು ಆಟಗಳನ್ನಾಡುತ್ತ ತಮ್ಮ ಸಮಯವನ್ನು , ಬೇಸಗೆಯ ದಿನಗಳನ್ನು ಕಳೆಯಲು ಅತ್ಯುತ್ತಮವಾಗಿದೆ  ಅಂದರೇ ತಪ್ಪಿಲ್ಲ.




 ಇಲ್ಲಿಯ ಮೊಲತಃ ಅಮೆರಿಕಾದವರು ಸೌಮ್ಯ ಸ್ವಭಾವದವರು ಅಂದರೇ ತಪ್ಪಿಲ್ಲ. ಕಳೆದ ಹತ್ತು ವರುಷದ ನನ್ನ ವಾಸದಲ್ಲಿ ಎಲ್ಲಿಯೂ ಸಹ ಅಮೆರಿಕಾದ ಬೇರೆ ಬೇರೆ ಸ್ಥಳಗಳಿಂದ ಅಲ್ಲಿ ಇಲ್ಲಿ ಕೇಳುವ ಕೆಟ್ಟ ನಡವಳಿಕೆಗಳನ್ನಂತೂ ನಾನು ಇದುವರೆಗೂ ಕಂಡಿಲ್ಲ. ಹೆಚ್ಚಾಗಿ ನಿವೃತ್ತ ವಯೋ ವೃದ್ಧರ ಪ್ರೀಯ ಜಾಗವೆಂದರೇ ತಪ್ಪಿಲ್ಲ. ಯಾಕೆಂದರೇ ಇಲ್ಲಿಯ ವಾತವರಣ ಹಾಗೂ ಕಡಿಮೆ ದರದ ಸಿಟಿಯೆಂದೇ ಪ್ರಸಿದ್ಧವಾಗಿರುವುದಿರಂದಲೂ, ಆರಾಮಾಗಿ ಜೀವನ ನಡೆಸುವಂತಿರುವುದರಿಂದ, ಟ್ರಾಪಿಕ್ ಜಟಾಪಟಿ ಇಲ್ಲದಿರುವುದರಿಂದ ಶಾಂತತೆಗೆ ಹೆಸರಾದ ಪಟ್ಟಣವಾಗಿದೆ.


ನಮ್ಮ ಭಾರತೀಯರ ಸಂಖ್ಯೆಯು ಇತ್ತೀಚೆಗೆ ಹೆಚ್ಚುತ್ತಿರುವುದು ಕಾಣಿಸುತ್ತಿದೆ. ನಮ್ಮವರಿಂದಲೇ ಏನೋ ಅನಿಸುವಂತೆ ಹೊಸ ಹೊಸ ವಾಸ ಯೋಗ್ಯ ಬಡಾವಣೆಗಳು ರಚಿತವಾಗಿ ನಗರದ ವಿಸ್ತಾರ ಹಿಗ್ಗುತ್ತಿದೆ. ಒಮ್ಮೆ ಇಲ್ಲಿ ವಾಸಿಸಲೂ ಪ್ರಾರಂಭಿಸಿದರೇ ಬಿಟ್ಟು ಹೋಗಲು ಮನಸ್ಸು ಬರುವುದಿಲ್ಲ ಬಿಡಿ. ಅದು ಈ ನಗರವೊಂದೇ ಅಲ್ಲ ಯಾವುದೇ ನಗರವಾದರೂ ಸಹ ಮನುಷ್ಯನಿಗೆ   ಮೊದಲ ಸ್ಥಳವೇ  ಇಷ್ಟ ’ಮೊದಲ ಪ್ರೀತಿ’ ತರವಾ??


ಇಲ್ಲಿಯ ಡೇಟನ್ ಯುನಿವರ್ಸಿಟಿ ವಿಶ್ವ ಪ್ರಸಿದ್ಧವಾಗಿದೆ ಅನಿಸುತ್ತಿದೆ. ಇದಕ್ಕೆ ಉದಾಹರಣೆಯೆಂಬಂತೆ ಇತ್ತೀಚೆಗೆ ಹೆಚ್ಚು ಹೆಚ್ಚು ಭಾರತೀಯ ಯುವ ಮುಖಗಳು ಎಲ್ಲೆಲ್ಲಿಯು ಕಾಣಸಿಗುತ್ತಿರುವುದು ಸಂತೋಷದ ವಿಷಯ!


ಇಲ್ಲಿಯ ಮೈಕ್ ಸೆಲ್ಸ್ ಅಲೊಗಡ್ಡೆ ಚಿಪ್ಸ್ (೧೯೧೦) ಪ್ರಸಿದ್ಧವಾದ ಚಿಪ್ಸ್ ಕಂಪನಿ. ಇದು ಅಮೆರಿಕಾದ್ಯಂತ ಮಾರಾಟವಾಗುತ್ತಿದ್ದ ಪ್ರಸಿದ್ಧ ಚಿಪ್ಸ್ ಆಗಿತ್ತು. ಆದರೇ ಕಾರಣಾಂತರಗಳಿಂದ ಕಳೆದ ವರುಷ ಮುಚ್ಚಲ್ಪಟ್ಟಿತು.


ಡೇಟನ್ ಅಂತರಾಷ್ಟ್ರಿಯ ವಿಮಾನ ನಿಲ್ಧಾಣದಿಂದ ಅಮೇರಿಕ ಮತ್ತು ಜಗತ್ತಿನ ವಿವಿಧ ಭಾಗಗಳಿಗೆ ಸುಲಭವಾದ ಸಂಪರ್ಕ ದಾರಿಗಳನ್ನು ಕಲ್ಪಿಸಿಕೊಟ್ಟಿದೆ. 


ಡೇಟನ್ ಹಿಂದು ದೇವಸ್ಥಾನವು ಎಲ್ಲಾ ಭಾರತೀಯರಿಗೆ ಪ್ರಿಯವಾದ ಭಕ್ತಿ ಸ್ಥಳವಾಗಿದೆ. ನಮ್ಮ ಭಾರತೀಯ ಸಂಸ್ಕೃತಿಯ ಪಾಠಗಳನ್ನು ಇಲ್ಲಿಯೆ ಹುಟ್ಟಿ ಬೆಳೆಯುತ್ತಿರುವ ಮಕ್ಕಳಿಗೆ ಭಾರತೀಯ ಹಬ್ಬ ಹರಿದಿನಗಳನ್ನು ಭಾರತದಲ್ಲಿಯೇ ಇದ್ದು ಆಚರಿಸುವ ಮಟ್ಟಿಗೆ ಆಚರಿಸುವ ಮೊಲಕ ನಮ್ಮ ಸಂಸ್ಕೃತಿಯನ್ನು ತಮ್ಮ ತಮ್ಮ ಕುಟುಂಬಗಳಲ್ಲಿ ಕಾಪಾಡಿಕೊಳ್ಳಲು ಪ್ರೇರಕವಾಗಿದೆ. 


ವಿವಿಧ ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಭಾಗವಹಿಸುವು ಭಾರತೀಯರ ಸಂಖ್ಯೆ ಮತ್ತು ಉತ್ಸಾಹವನ್ನು ನೋಡಿದರೇ ನಾವುಗಳು ಅಮೆರಿಕಾದಲ್ಲಿ ಇದ್ದೇವೋ ಅಥವಾ ಭಾರತದಲ್ಲಿದ್ದೇವು ಎಂದು ಅನುಮಾನವಂತೂ ಬರುತ್ತದೆ. 



ಹೀಗೆ ಎಲ್ಲಾ ರೀತಿಯ ಜನರನ್ನು ಹೊಂದಿರುವ ಜನ ಸ್ನೇಹಿ ನಗರ ಡೇಟನ್ ಎಂದರೇ ತಪ್ಪಿಲ್ಲ! ದೊಡ್ಡ ದೊಡ್ಡ ನಗರದ ಜಂಜಾಟದ ವೇಗವಿಲ್ಲದಿದ್ದರೂ ಶಾಂತಿಯ ಸುಭಿಕ್ಷೆಯ ಹಸಿರು ಬಿಡಾಗಿ ಪ್ರತಿಯೊಬ್ಬರನ್ನು ಆಕರ್ಷಿಸುವುದರಲ್ಲಿ ಸದಾ ಮುಂದಾಗಿ ದಾಪುಗಲು ಇಡುತ್ತಾ ವೇಗವಾಗಿ ಬೆಳೆಯುತ್ತಿರುವ ಪುಟ್ಟ ನಗರ.