ಸೋಮವಾರ, ನವೆಂಬರ್ 18, 2013

ಬೆಳೆದಂತೆ..ಬುದ್ದಿವಂತರಾದಂತೆ

ಚಿಕ್ಕ ಮನಸ್ಸಿಗೆ ಚಿಕ್ಕ ಚಿಕ್ಕ ವಿಷಯಗಳನ್ನು ಜೀರ್ಣಿಸಿಕೊಳ್ಳಲು ಸಹ ಕಷ್ಟ ಅನಿಸುತ್ತಿತ್ತು. ಚಿಕ್ಕ ಚಿಕ್ಕ ಕಸಿವಿಸಿ ಸಂದರ್ಭಗಳೇ ತಲೆ ಬಿಸಿ ಮಾಡಿಸಿಬಿಡುತ್ತಿದ್ದವು. ಚಿಕ್ಕ ಚಿಕ್ಕ ತೊಂದರೆಗಳೆ ನನ್ನ ಮನವನ್ನು ನಿತ್ಯ ಕೊರೆಯುತ್ತಿತ್ತು. ಅದನ್ನೇ ದೊಡ್ಡದಾಗಿ ಮಾಡಿಕೊಂಡು ಮನೆಮಂದಿಯನ್ನೆಲ್ಲಾ ಯೋಚನೆಯ ಕಡಲಲ್ಲಿ ಮುಳುಗೇಳಿಸುತ್ತಿದ್ದೆ. ಅಪ್ಪನೋ ನನ್ನ ಒಂದೊಂದುಯೋಚನೆಯ ಗೆರೆಗೂ ಎಷ್ಟೊಂದೂ ಕೊರಗುತ್ತಿದ್ದರು ಅಂದರೇ ಅದೇ ಅವರು ನನ್ನ ಮೇಲೆ ಇಟ್ಟುಕೊಂಡಿದ್ದ ಅಗಾಧ ಪ್ರೀತಿಯ ಧ್ಯೋತಕ ಎಂಬುದನ್ನು ಇಂದು ಇಲ್ಲಿ ಕುಳಿತು ಗಟ್ಟಿ ಮಾಡಿಕೊಳ್ಳುತ್ತಿದ್ದೇನೆ. ಅಮ್ಮನೋ ಯಾವಾಗಲೂ ನನ್ನ ಮೇಲೇ ಚೂರು ಜಾಸ್ತಿ ಪ್ರೀತಿಯ ನಿರ್ಲಕ್ಷ್ಯದ ನೋಟವಿಟ್ಟಿದ್ದಳೇನೋ. ಅದರೇ ಅಪ್ಪ ಅಂದ್ರೇ ನನಗೆ ಅಪ್ಪನೇ ನನ್ನ ಎಲ್ಲಾ ಚಿಕ್ಕ ವಯಸ್ಸಿನ ನನ್ನ ಪ್ರತಿಯೊಂದು ಏಳುಬೀಳಿನ ವಾರಸುದಾರ ಅನಿಸುತ್ತದೆ.

ಮೊದಲ ಮಗಳಾಗಿ ನನಗೆ ಇದಕ್ಕಿಂತ ಹೆಚ್ಚು ದೊರೆಯಲಾರದು ಎಂದು ಅನಿಸುತ್ತಿದೆ. ನನ್ನ ಹಠ, ನನ್ನ ದಿಟ್ಟತನ,  ನನ್ನ ಸ್ವಭಾವದ ಅಚ್ಚು ಆ ವಯಸ್ಸಿನಲ್ಲಿ ಅಷ್ಟರ ಮಟ್ಟಿಗೆ ನನ್ನಲ್ಲಿ ನೆಲೆ ನಿಂತಿತ್ತು ಅನಿಸುತ್ತದೆ. ನನಗೆ ನನ್ನದೇಯಾದ ಎಲ್ಲಾ ಸಂತೋಷ, ಸುಖಗಳ ಪಾಲು ನನ್ನದು ಮಾತ್ರ ಆಗಿರಬೇಕು.. ನನ್ನ ದುಃಖ, ನನ್ನ ಅಳು ಮನೆಯವರಿಗೆಲ್ಲಾ ಪಸರಿಸಿ ಅವರಿಂದ ನನಗೆ ನನ್ನ ಪ್ರಸ್ತುತೆಯನ್ನು ತೋರಿಸಬೇಕೆಂಬ ಆಸೆಯಾಗಿತ್ತೇನೋ.  ಆಗ ನಾನು ನನ್ನ ಸ್ವಭಾವಕ್ಕೆ ತಕ್ಕ ಮಗಳು ಎಂಬ ಒಂದು ಸಮಧಾನವಾಗುತ್ತಿತ್ತು.

ಆ ವಯಸ್ಸು ಯಾರು ಯಾರನ್ನು ಹಿಡಿದಿರಲಾರದ ವ್ಯಕ್ತಿತ್ವದ ನಿರೂಪಣೆ ಎಂದು ಇಂದು ಇಲ್ಲಿ ನನಗೆ ಅನಿಸುತ್ತಿದೆ. ಯಾಕೆ ನಾನು ಅಷ್ಟರ ಮಟ್ಟಿಗೆ ತುಂಬ ಗಟ್ಟಿಗಿತ್ತಿ ಎಂಬ ಅಪ್ಪನ ಬೀರುದಂನ್ನು ಎಲ್ಲಾರಿಗೂ ತೋರಿಸಬೇಕು, ನಮ್ಮ ಕುಟುಂಬದ, ಸಂಬಂಧಿಗಳಲ್ಲೆಲ್ಲಾ ನಾನು ತುಂಬಾನೇ ಬೇರೆಯಾದ ಹುಡುಗಿ, ಇವಳು ಅಂದ್ರೇ ಹೀಗೆ ಎಂಬ ಮಾತಿಗೆ ಜೋತುಬಿದ್ದುಬಿಟ್ಟಿದ್ದೆ. ಜೀವನ ಅನ್ನುವುದು ಹೀಗೆ ನಿತ್ಯ ಸರಾಗವಾದ ದಾರಿಯೆಂಬ ಆಶಾಭಾವನೆ ಎಲ್ಲಿಂದ ಉದ್ಭವಿಸಿತ್ತೋ ದೇವರೆ ಬಲ್ಲ.

ಬದುಕಿನ ಪಯಾಣದ ದಿಕ್ಕನ್ನು ಯಾರು ಯಾರನ್ನು ಕೇಳಿ ಬದಲಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಹಿರಿಯರ ಮಾತನ್ನೇ ದಿಕ್ಕರಿಸಿ ನಿಂತಿದ್ದು. ನನ್ನ ದೇಹ ಬೆಳವಣಿಗೆಯ ಜೊತೆಗೆ ನನ್ನಲ್ಲಿನ ತಿಳುವಳಿಕೆಯ ಚಿಗುರು ಆದ್ಯಾವ ವೇಗದಲ್ಲಿ ಹಸಿರಾಗಿತ್ತೋ ನಾನು ನಂಬಿದ ನಾ ಕಂಡ ದಾರಿಗಳೆಲ್ಲಾ ನನ್ನವೇ ಎಂಬ ಧೈರ್ಯದ ಮನೋಭಾವ ನನ್ನನ್ನು ಬೇರೊಂದು ಸ್ಥಾನದಲ್ಲಿ ಇಟ್ಟಿರಬೇಕೆನೋ ಎಂದು ಇಂದು ಅನಿಸುತ್ತಿದೆ.

ಆದರೇ ಕಾಲನ ಪರಿಭ್ರಮಣೆಗೆ ಯಾರೊಬ್ಬರೂ ಜವಾಬ್ದಾರರಲ್ಲ ಎಂದು ಇಂದು ಇಲ್ಲಿ ನನಗೆ ಅನಿಸುತ್ತಿದೆ. ಬದುಕು ನಾನು ಅಂದುಕೊಂಡಂತೆಯೆ ಸಿಕ್ಕಿಬಿಟ್ಟಿದ್ದರೇ ಆ ಬದುಕಿಗೂ ಮಹತ್ವವೆಲ್ಲಿರುತ್ತಿತ್ತು? ಅಲ್ಲವಾ. ನಾವೇ ನಮ್ಮನ್ನೂ ಕಂಡುಕೊಳ್ಳಲು ತಿಣುಕುತಿರಬೇಕಾದರೇ ನಮ್ಮಿಂದ ಎಷ್ಟೋ ದೂರವಿರುವ ಭವಿಷ್ಯತ್ ನ್ನು ಅದು ಹೇಗೆ ನಾನು ಕಂಡುಕೊಳ್ಳಲಿ?

ನನ್ನ ವ್ಯಕ್ತಿತ್ವಕ್ಕೆ ಹೊಂದುವ ಧೀರಿಸು, ನನ್ನ ವ್ಯಕ್ತಿತ್ವಕ್ಕೆ ಹೊಂದುವ ಬಣ್ಣ, ನಾನು ನಡೆದಾಡುವ ದಾರಿ ನನ್ನದೇ ಆಗಿರಬೇಕು ಎಂಬ ನನ್ನದೇ ಅನಲಾಜಿಯೆಲ್ಲಾ ಎಲ್ಲಿ ಬಿಟ್ಟು ಬಿಟ್ಟೆ ಎಂಬ ಯೋಚನೆ ಇಂದು ಇಲ್ಲಿ ಕುಳಿತು ಚಿಂತಿಸುತ್ತಿದ್ದೇನೆ. ಆದರೇ ಯಾರೊಬ್ಬರೂ ನನ್ನ ಈ ಕೊರಗಿನ ಯೋಚನೆಯ ಪಾಲುದಾರಾಗುತ್ತಿಲ್ಲವಲ್ಲಾ ಯಾಕೆ?

ನಾನು ಚಿಕ್ಕವಳಲ್ಲಾ ಎಂಬ ಧ್ಯೆರ್ಯ ನಮ್ಮಪ್ಪನಿಗಿರಬಹುದಾ? ನಾನೇನು ಮಾಡಿದರು ಸರಿಯಾಗಿಯೇ ಮಾಡುವವಳು ಎಂಬ ಪ್ರೀತಿಯ ನಿರ್ಲಕ್ಷ್ಯ ನನ್ನ ಮುದ್ದು ಅಮ್ಮನಿಗಿರಬಹುದಾ? ಯಾರೊಬ್ಬರ ನೋಟ ನನ್ನನ್ನು ಇಂದು ನನ್ನ ಮೇಲೆ ಇಲ್ಲವಾ ಎಂಬ ಕೊರಗೂ ನನಗಿರುವುದಾ? ಎಂದು ನಾನು ನೂರು ಭಾರಿ ನನ್ನನ್ನೇ ಕೇಳಿಕೊಂಡರು ಉತ್ತರವಿಲ್ಲದ ಮನಸ್ಸು ಮನಸ್ಸಿಗೆ ಕಸಿವಿಸಿಯ ನೆಮ್ಮದಿಯೇ ಇಲ್ಲವಾಗಿದೆ.

ದೊಡ್ಡವರು ನಾವುಗಳೂ ಎಂಬ ನಿರ್ಲಕ್ಷ್ಯ ಯಾಕೆ ಕುಟುಂಬ, ಸಮಾಜ, ಗೆಳತನ ಪ್ರತಿಯೊಂದರಲ್ಲೂ ಕಾಣುತ್ತಿದೆ. ಗೆದ್ದರೇ ದೂರದಿಂದ ಏನೂ ಹೇಳಲಾರದವರು.. ಸೋತರೇ ಬಾಯಿಗೆ ಬಂದಂತೆ ನನ್ನ ವ್ಯಕ್ತಿತ್ವವನ್ನೆ ಅಣುಕಿಸುವಂತೆ ಅಲ್ಲಿ ಅಲ್ಲಿಯೇ ನಿಲ್ಲುವವರು ಯಾವ ರೀತಿಯ ಆತ್ಮೀಯರು?

ಬದುಕು ಬದುಕಲಾರದಷ್ಟು ನಿಕೃಷ್ಟವಲ್ಲ ಎಂಬುದನ್ನು ನಾನು ಅಲ್ಲಿ ಇಲ್ಲಿ ನನ್ನ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವ ಪ್ರಾರಂಭದಲ್ಲಿ ನಾನೇ ಕಂಡುಕೊಂಡ ಸತ್ಯವಾಗಿದ್ದರೂ.. ನಾನೇ ಯಾಕೇ ಪುನಃ ಇದು ಸಹಜ ಸತ್ಯವೇ ಅಲ್ಲವೇ ಎಂಬ ಗೊಂದಲದ ಗೊಡಾಗಿ ಹೀಗೆ ಕುಳಿತಿರುವೇನೂ..?

ಯಾವುದೇ ಅಳುಕಿಗೂ ನಿಲುಕದ ನಕ್ಷತ್ರವೆಂಬ ಬೀರದನ್ನು ಎಲ್ಲಿ ಬಿಟ್ಟುಬಿಟ್ಟೆ ಎಂಬ ಹಿಂದಿನ ದಿನಗಳೇ ನೆನಪಿಗೆ ಬಾರದಷ್ಟು ದೂರ ಸಾಗಿಬಿಟ್ಟಿದೆ. ಯಾವುದನ್ನು ಯಾವಾಗ ಯೋಚಿಸಿದರೂ ಅದು ನಮ್ಮಿಂದ ನಾವೇ ರಚಿಸಿಕೊಳ್ಳುವಂತೆಯಂತೂ ಇರುವುದಿಲ್ಲ. ಅದು ನಾವಂದುಕೊಂಡಂತೆ ಇದ್ದುಬಿಟ್ಟಿದ್ದರೆ ನಾವೆ ನಮ್ಮನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಿರುತ್ತಿತ್ತೆ? ಇಲ್ಲ ಎಂಬ ಉತ್ತರ ಇಂದು ಅನಿಸುತ್ತಿದೆ. ಅದೆ ಇಪ್ಪತ್ತು ವರುಷಗಳ ಹಿಂದೆ ಕೇಳಿದ್ದರೆ ಈ ಉತ್ತರಕ್ಕೆ ವಿರುದ್ಧವಾದ ಉತ್ತರ ಕೊಟ್ಟಿರುತ್ತಿದ್ದೇನೇನೋ.. ನಾನು ಅಂದರೆ ಹಾಗೆ ಎಂಬಂತೆ ನಾನಿದ್ದಿದ್ದು.. ನನಗೆ ನಾನೇ ಆಶ್ಚರ್ಯದಿಂದ ನೋಡುವಂತಾಗಿದೆ.

ಎಲ್ಲಾರೂ ಇದ್ದು ಯಾರು ಇಲ್ಲ ಎಂಬ ಭಾವನೆ. ಹಿಂದಿಗಿಂತ ಎಲ್ಲಾದರಲ್ಲೂ ಎಲ್ಲ ರೀತಿಯಲ್ಲಿ ಹೆಚ್ಚಾಗಿಯೇ ನನ್ನಲ್ಲಿದೆ. ಎಲ್ಲಾ ಕನಸಿನ ಮನೆಗೆ ಯಾವಾಗಲಾದರೂ ಯಾರನ್ನು ಕೇಳದೆ ಹೋಗುವಷ್ಟು ಅವಕಾಶಗಳು ನನ್ನ ಮುಂದೆ ನಿತ್ಯ ಸಿಗುತ್ತಿದೆ. ಆದರೇ ಈ ಸಮಯದಲ್ಲಿ ಇದೆಲ್ಲಾ ನಗಣ್ಯವೆನಿಸುತ್ತಿದೆ. ಅದೇ ಆ ದಿನಗಳಲ್ಲಿ ಎನೂ ಇಲ್ಲದೇ ಏನಾದರೂ ಸಾಧಿಸುವೆನೂ ಎಂಬ ಶಕ್ತಿಯ ಮೊಲ ಯಾವುದಾಗಿತ್ತು ಎಂಬಂತಾಗಿದೆ.




ಯಾಕೇ ಬದುಕು ಇಷ್ಟೊಂದು ನಿರಾಸ ಅನಿಸುತ್ತದೆ. ಸುಖವನ್ನು, ದುಃಖವನ್ನು ನನ್ನಲ್ಲಿ ನಾನೇ ಅದುಮಿಕೊಂಡು ನಾನೊಬ್ಬಳೇ ಅನುಭವಿಸಿ ನನ್ನಲ್ಲಿಯೇ ನಾನೇ ಎಲ್ಲವನ್ನೂ ಸಂಭ್ರಮಿಸಿಕೊಳ್ಳಬೇಕಾದ ಬದುಕು ಇದಾಗಿದೆ. ಯಾವುದಕ್ಕೂ ಯಾರೊಂದಿಗೆ ಮನಬಿಟ್ಟು ಯಾವ ರೀತಿಯಲ್ಲೂ ಷೇರ್ ಮಾಡಿಕೊಳ್ಳಲಾಗದ ತಳಮಳ. ಯಾರೇನೂ ಅಂದುಕೊಳ್ಳುವವರೋ ಎಂಬ ಚಿಂತೆ. ನಮ್ಮ ಬದುಕು ನಮಗೆ ಮಾತ್ರ ಮೀಸಲು ಎಂಬ ಅನುಭಾವ.

ಚಿಕ್ಕ ಚಿಕ್ಕ ವಯಸ್ಸಿನ ಆ ಸಂಭ್ರಮದ ಸೆಲೆಯೇ ಮರೆಯಾದ ಪಯಣ ಇದಾಗಿದೆ. ಬೆಳೆದಂತೆ ನಮ್ಮನ್ನು ನಾವೇ ಕಳೆದುಕೊಂಡಂತೆ. ನಮ್ಮವರೆಲ್ಲ ನಮ್ಮವರಲ್ಲ, ನಮ್ಮ ಭಾವನೆಗೆ ಬೆಳಕಲ್ಲ ಅನಿಸುವುದಕ್ಕೆ ಶುರುವಾದ ದಿನಗಳು ಯಾವಾಗ ಅನಿಸುತ್ತಿದೆ.. ಯಾಕೇ?

ನನಗೂ ಗೊತ್ತೂ ಇದು ಹುಡುಗಿಯರಿಗೆ ಮಾತ್ರ, ಹುಡುಗರಿಗೆ ಮಾತ್ರ ವಿಭಿನ್ನವಾದ ವಿಷಾದ ಛಾಯೆಯಲ್ಲ.  ಆದರೆ ಪ್ರೀತಿಯ ಕೊರತೆಯ ಈ ಜೀವನ ರಂಗದಲ್ಲಿ ಯಾವೆಲ್ಲಾ ವಿಷಯ ಯಾವ್ಯಾವಾಗ ಹೇಗೆ ಹೇಗೆ ಅನಿಸುತ್ತಿರತ್ತೋ ಯಾರಿಗೊತ್ತು ಅಲ್ಲವಾ?

ಆಗೊಮ್ಮೆ ಹೀಗೊಮ್ಮೆ ಪೊನಾಯಿಸುವ ಗೆಳೆತಿಯರು, ಗೆಳೆಯರು, ಸಂಬಂಧಿಗಳು ಮಾತಿಗೆ ಎಂಬಂತೆ ಹೇಗೆದ್ದೀಯಾ? ಎಂದಾಗ ಮಾತಿಗೆ ಎಂಬಂತೆ ಚೆನ್ನಾಗಿದ್ದೇನೆ! ಎಂದು ಹೇಳುವುದು. ಮನಸ್ಸಲ್ಲಿ ಸಾವಿರ ಸಾವಿರ ಮಾತುಗಳಿದ್ದರು ಯಾಕಾದರೂ ಈ ಪೋನ್ ಕಾಲ್ ಬಂದಿತು, ಏನು ಮಾತಾಡಲಿ ಎಂಬಂತಾಗುತ್ತದೆ. ಏನು ಮಾತಾಡಿದರೇ ಏನೋ ಎಷ್ಟು ಬೇಕೊ ಅಷ್ಟನ್ನು ಮಾತ್ರ ಮಾತನ್ನಾಡುವುದು. ಏನನ್ನು ಪೊರ್ತಿಯಾಗಿ ಯಾರೊಬ್ಬರ ಜೊತೆಯಲ್ಲೂ ಹೇಳಾಲಾರದವಾಗಿಬಿಡುತ್ತಿವಲ್ಲಾ ಯಾಕೇ?

ಚಿಕ್ಕವರಾಗಿದ್ದಾಗ ಚಿಕ್ಕ ಚಿಕ್ಕ ವಿಷಯಗಳನ್ನು ಮನಸ್ಸಿನಲ್ಲಿ ಎಂದಿಗೂ ಬಚ್ಚಿಟ್ಟುಕೊಳ್ಳದೆ ಹೊರಗಡೆ ಹಾಗೆ ಹಾಗೆಯೇ ಚೆಲ್ಲಿಬಿಟ್ಟು ಎಷ್ಟೊಂದು ಹಗುರಾಗುತ್ತಿದ್ದೆ... ಆದರೇ ಈ ದೊಡ್ಡವಳು ಎಂಬುದೇ ನಮ್ಮನ್ನು ಈ ರೀತಿಯ ಗುಬ್ಬಚ್ಚಿ ಗೂಡಿಗೆ ದೂಡಿಬಿಟ್ಟಿತೆ.. ಯಾರು ಯಾರಿಗೂ ಅಲ್ಲಾ.. ನನಗೆ ನಾನೇ ಎಲ್ಲಾ ಎಂಬ ಭಾವದ ಪರಿ ಹೀಗೆ ಯಾಕೋ...

ನಾವುಗಳು ಬೆಳೆದಂತೆ ಬುದ್ಧಿವಂತರಾದಂತೆ ಅತ್ಯಂತ ಚಿಕ್ಕವರಾಗಿಬಿಟ್ಟುಬಿಡುವೆವೇನೋ.. ನಮ್ಮ ಮನಸ್ಸಿನ ಸ್ವಚ್ಛಂದತನವನ್ನೇ ಆಳು ಮಾಡಿಕೊಂಡುಬಿಡುವೆವೇನೋ.. ಕುಟುಂಬ,ಸಮಾಜ,ಜಗತ್ತು ಪ್ರತಿಯೊಂದಕ್ಕೂ ಸಂಬಂಧವಿಲ್ಲದಂತೆ ನಮ್ಮ ನಮ್ಮೊಳಗೆ ಕಳೆದುಹೋಗಿಬಿಡುವುವೆನೋ.. ಇದು ನನಗೆ ಮಾತ್ರವಾ? ನಿಮಗೂ ಹೀಗೆ ಅನಿಸಿದ್ದಿದೀಯಾ?