ಭಾನುವಾರ, ಆಗಸ್ಟ್ 5, 2012

ಸ್ನೇಹ ಸಂಬಂಧ!


ಸ್ನೇಹಿತರ ದಿನ. ಹತ್ತು ಹಲವಾರು ರೀತಿಯಲ್ಲಿ ತಮಗೆ ಪ್ರೀತಿ ಪಾತ್ರರಾದ ಸ್ನೇಹಿತರೊಡಗೂಡಿ ಸಂಭ್ರಮಿಸುತ್ತಾರೆ.

ಈ ಮೇಲ್, ಫೇಸ್ ಬುಕ್ ನಲ್ಲಿ ಹತ್ತು ಹಲವಾರು ಸುಂದರ ಚಿತ್ರಗಳಿರುವ ಶುಭಾಶಯ ಪತ್ರಗಳ ವಿನಿಮಯ. ಮೊಬೈಲ್ ಗಳಲ್ಲಿ ಮುಂಜಾನೆಯಿಂದಲೇ ಅವೇ ಪಾರ್ ವರ್ಡ್ ಆದ ಸ್ನೇಹಕ್ಕೆ ಸಂಬಂಧಿಸಿದ ಸುಂದರ ನುಡಿಮುತ್ತುಗಳ ಓಡಾಟ.

ಇದು ನಮ್ಮ ಪ್ರೇಂಡ್ಸ್ ಡೇ ಆಚರಣೆಯ ನೋಟ.

ಹೊರದೇಶದ ಜನಗಳು ಪ್ರತಿಯೊಂದಕ್ಕೂ ಒಂದು ದಿನವನ್ನು ಗುರುತು ಮಾಡಿ ಇಟ್ಟು ಬಿಟ್ಟಿದ್ದಾರೆ. ಯಾಕೆಂದರೇ ವರುಷದ ಬ್ಯುಸಿ ದಿನಗಳಲ್ಲಿ ಎಲ್ಲದನ್ನೂ, ಎಲ್ಲರನ್ನೂ ಸಾವಾಕಾಶವಾಗಿ ಕಾಣುವುದಕ್ಕೆ ಆಗುವುದಿಲ್ಲ ಎಂಬ ಭಯವಿರಬೇಕು.(?)

ಆದರೇ ಸಂಬಂಧಗಳಿಗೂ ಒಂದೊಂದು ದಿನವನ್ನು ಗುರುತಿಸಿರುವುದು ತುಂಬ ವಿಪರ್ಯಾಸ!(?) ಹಾಗೆಯೇ ಇಂದು ಅದು ನಮಗೆ ಬೇಕೇನೋ ಅನಿಸುತ್ತದೆ. ಆಟ್ ಲಿಸ್ಟ್ ಆ ದಿನಗಳಂದಾದರೂ ನಮ್ಮ ನಮ್ಮ ಪ್ರೀತಿಯ ಸಂಬಂಧಗಳನ್ನು ನವೀಕರಿಸಿಕೊಂಡಂತಾಗುತ್ತದೆ!

ನಮ್ಮ ಈ ದೇಶದ ಮಣ್ಣಿನಲ್ಲಿ ಈ ರೀತಿಯಲ್ಲಿ ಸಂಬಂಧಗಳಿಗಾಗಿ ಹಬ್ಬಗಳು ಹಿಂದಿನಿಂದ ಎಂದೂ ರೂಡಿಯಲ್ಲಿ ಬಂದಿಲ್ಲಾ ಅನಿಸುತ್ತದೆ. ಯಾಕೆಂದರೇ ನಮ್ಮಗಳಿಗೆ ನಿತ್ಯ ನಮ್ಮ ನಮ್ಮ ಸಂಬಂಧಗಳ ಹಬ್ಬದಲ್ಲಿಯೇ ಮುಳುಗಿರುತ್ತೆವೆ. ಎಲ್ಲರೂ ನಮ್ಮ ಸುತ್ತಲಲ್ಲೇ, ಎಲ್ಲರನ್ನೂ ಗಂಟು ಹಾಕಿಕೊಂಡು ತುಂಬ ಒಡನಾಡಿಯಾಗಿ ಒಬ್ಬರನ್ನೊಬ್ಬರೂ ಬಿಟ್ಟು ಇರದಾರದಂತಹ ನಾವೆಲ್ಲಾ ಒಂದೇ ಎಂಬ ಸುಂದರ ಭಾವನೆಯ ನಿತ್ಯ ಮೆರವಣಿಗೆಯಾಗಿರುತ್ತಿತ್ತು. ಇದಕ್ಕೆ ಉದಾಹರಣೆಯೆಂದರೇ ನಮ್ಮ ಹಳ್ಳಿಗಳಲ್ಲಿ ಇರುತ್ತಿದ್ದ ಭವ್ಯವಾದ ದೊಡ್ಡ ದೊಡ್ಡ ಅವಿಭಕ್ತ ಕುಟುಂಬಗಳು.

ಆ ಕುಟುಂಬವೋ ಇಡೀ ಊರನ್ನೇ ತನ್ನವರನ್ನಾಗಿ ಮಾಡಿಕೊಂಡಿರುತ್ತಿತ್ತು. ಊರಲ್ಲಿ ಇರುವವರೆಲ್ಲರೂ ಪರಿಚಿತರೇ ಮತ್ತು ಸ್ನೇಹಿತರೇ. ಇದು ಸಾಲದು ಎಂಬಂತೆ ಅಕ್ಕ ಪಕ್ಕದ ಊರಿನ ಮುಖ್ಯ ಮುಖ್ಯ ಜನಗಳು ಇಡೀ ಊರಿಗೆ ಅವರಿವರಿಗೆಲ್ಲಾ ಪರಿಚಿತರಾಗಿ ಅವರೆಲ್ಲಾ ನಮ್ಮವರೇ ಎಂಬಂತೆ ಆಧರಿಸುತ್ತಿದ್ದರು.

ಸಂಬಂಧಗಳ ಸರಪಣಿ ಆ ರೀತಿಯಲ್ಲಿ ಜೋಡಣೆಯಾಗಿರುತ್ತಿತ್ತು.

ಇದನ್ನೂ ಬೇರೊಂದು ರೀತಿಯಲ್ಲಿ ನೋಡುವ, ನಿರೀಕ್ಷಿಸುವ, ಅಳೆಯುವ ಸಮಯವೇ ಇರುತ್ತಿರಲ್ಲಿಲ್ಲ. ಹಾಗೆಯೇ ಆ ರೀತಿಯ ಋಣಾತ್ಮಕವಾದ ಮನಸ್ಸೆ ಬರುತ್ತಿರಲಿಲ್ಲ.

ಅಲ್ಲಿ ಇದ್ದಿದ್ದು ಒಬ್ಬರನ್ನೊಬ್ಬರೂ ಕಾಳಜಿಯಿಂದ ಕಾಣುವ ನಿಷ್ಕಲ್ಮಶವಾದ ಹೃದಯ ಮಾತ್ರ.

ಇದು ಇಂದು ಎಲ್ಲಿ ಕಾಣಬೇಕು ಗುರೂ ಅನ್ನುತ್ತೀರಾ!

ನಾವು ಬದುಕುತ್ತಿರುವ ಕಾಲವೇ, ಜನವೇ ನಮ್ಮನ್ನು ದಿಕ್ಕು ತಪ್ಪಿಸಿದೀಯಾ ಎನ್ನುವಂತಾಗಿದೆ. ಯಾವುದಕ್ಕೂ ಸಮಯವಿಲ್ಲ. ಪ್ರತಿಯೊಂದು ಸಮಯ ವ್ಯರ್ಥ ಅನಿಸುತ್ತಿದೆ. ಒಂದು ಕ್ಷಣದ ನಗುವನ್ನು ಪರಿಚತರಿಗೆ/ಅಪರಿಚಿತರಿಗೆ ನೀಡುವುದಕ್ಕೂ ಕಂಜೂಸ್ ಮಾಡುತ್ತಿದ್ದೇವೆ.

ಈ ರೀತಿಯಲ್ಲಿ ಇರಬೇಕಾದರೇ ಮನುಷ್ಯ ಮನುಷ್ಯನ ನಡುವೆ ಇರಬೇಕಾದಂತಹ ಸಹಜವಾದ ಸರಳ ಆ ಒಂದು ಹೊಂದಾಣಿಕೆಯ ಸ್ನೇಹ ಸೆಲೆ ಎಲ್ಲಿಯೋ ಬತ್ತಿ ಹೋಗಿಬಿಟ್ಟಿದೆ ಅನಿಸುತ್ತದೆ.

ಪ್ರತಿಯೊಂದನ್ನೂ ಪ್ರಶ್ನಿಸಿ, ಎರಡು ಮೂರು ಬಾರಿ ಪರೀಕ್ಷಿಸಿ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ನಾವುಗಳು ಇಂದು ಇದ್ದೇವೆ.

ಯಾರನ್ನೂ, ಯಾವುದನ್ನೂ ಥಟ್ ಅಂದುಕೊಂಡು ಸಹಜವಾದ ಬಂಧನವನ್ನು, ಭಾವನೆಗಳನ್ನು ವ್ಯಕ್ತಪಡಿಸಲಾರದಷ್ಟು ಕಠಿಣ ಮನಸ್ಥಿತಿಯವರಾಗಿದ್ದೇವೆ.

ಅಲ್ಲವಾ?

ಎಂಥವರನ್ನೂ ಅನುಮಾನದ ಮೂಲಕ ನೋಡುವ ಕಣ್ಣುಗಳನ್ನು, ಜಾಣ್ಮೆಯನ್ನು ನಾವುಗಳು ಸಂಪಾಧಿಸಿರುವುದೇ ನಮಗೆ ಹೆಮ್ಮೆಯ ವಿಷಯವಾಗಿದೆ. ಪ್ರತಿಯೊಂದು ಸಂಬಂಧವನ್ನು, ವಿಶ್ವಾಸವನ್ನು, ಲಾಭ-ನಷ್ಟಗಳ ಮೇಲೆ ನಿಲ್ಲಿಸಲು ತಯಾರಿ ನಡೆಸುತ್ತಿದ್ದೇವೆ. ಈ ಸಮಯವನ್ನು ಇದಕ್ಕಾಗಿ/ಇವ(ನಿ)ಳಿಗಾಗಿ ಇಷ್ಟು ಕೊಟ್ಟಿದ್ದೇವೆ. ಮುಂದೆ ಅದೆಷ್ಟು ಲಾಭ ಬರುತ್ತದೆ? ಎಂದು ಮುಖಾಕ್ಕೆ ಹೊಡೆದ ರೀತಿಯಲ್ಲಿ ಕೇಳುತ್ತಿದ್ದೇವೆ.

ಇಲ್ಲವೆಂದರೇ ಸ್ನೇಹದ ಬೆಲೆ ಏನು? ಎನ್ನುತ್ತಿದ್ದೇವೆ.

ನಿನ್ನ ಸ್ನೇಹಿತರು ನಿನಗೆ ಉಪಕಾರಿಯಾಗಿರಬೇಕು. ಅವರಿಂದ ನೀನಗೆ ಲಾಭವಿರಬೇಕು. ಸುಖಸುಮ್ಮನೇ ಬಾಯಿಯಲ್ಲಿ ಮಾತು ಸುರಿಸಿದರೇ ಏನೂ ಉಪಯೋಗ ಗುರೂ! ಅನ್ನುತ್ತಿದ್ದೇವೆ. ಈ ರೀತಿಯಲ್ಲಿ ಪ್ರತಿಯೂಬ್ಬರನ್ನೂ ಮೊದ ಮೊದಲೇ ಆ ರೀತಿಯ ಸಂಕಲನ, ವ್ಯವಕಲನದ ಲೆಕ್ಕಾಚಾರದಲ್ಲಿ ನಮ್ಮವರನ್ನಾಗಿಸಿಕೊಳ್ಳುತ್ತಿದ್ದರೇ.. ಯಾವ ಸಂಬಂಧಗಳಾದರೂ ಶಾಶ್ವತವಾಗಿ ಉಳಿಯಲು ಹೇಗೆ ಸಾಧ್ಯ?

ಅಲ್ಲಿ ಸುಂದರ ಮದುವೆಯ ಸಂಜೆಯ ಅರತಕ್ಷತೆ. ನಾಳೆ ಮುಂಜಾನೆ ಎರಡು ಹೊಸ ಜೋಡಿಗಳು ಸಪ್ತಪದಿ ತುಳಿಯುವವರಿದ್ದಾರೆ.

ಅರತಕ್ಷತೆಯಲ್ಲಿ ಭಾವಿ ವದುವರರಿಗೆ ಶುಭಕೋರಲು ಬಂದಂತಹ ದಂಪತಿಗಳ ಮಾತು " ನಾನು ಈ ನನ್ನ ಸ್ನೇಹಿತನಿಗೆ ಹೇಳುತ್ತಿದ್ದೇನೆ. ನಿನ್ನ ಮಗಳನ್ನು ಪೂರ್ತಿ ಓದಿಸಿ ಅವಳ ಕಾಲ ಮೇಲೆ ಅವಳನ್ನು ನಿಲ್ಲುವಂತೆ ಮೊದಲು ಮಾಡು. ಈ ಮದುವೆಯಾಗುವ ಗಂಡುಗಳು ಎಲ್ಲಿಯವರೆಗೆ ಜೊತೆಯಲ್ಲಿ ಇರುತ್ತಾರೋ ಗೊತ್ತಿಲ್ಲಾ. ಯಾವಾಗ ಬೇಕಾದರೂ ಕೈ ಬಿಡಬಹುದು."

ನನಗೆ ತುಂಬ ಆಶ್ಚರ್ಯವಾಯಿತು. ಮದುವೆಯ ಹಾಲ್ ನಲ್ಲಿ ಈ ರೀತಿಯ ಋಣಾತ್ಮಕವಾದ ಭಾವನೆಯ ಬೀಜ!

ಸಂಬಂಧಗಳು ಅಷ್ಟರ ಮಟ್ಟಿಗೆ ಶೀಥಿಲವಾಗಿಬಿಟ್ಟಿದ್ದಾವೇಯೇ ಅಥವಾ ನಾವು ನಿತ್ಯ ನೋಡುವ ಈ ಸಿನಿಮಾ, ಟಿ.ವಿ ಈ ದೃಶ್ಯ ಮಾಧ್ಯಮಗಳಲ್ಲಿ ಬರುವ ಕಥೆಗಳು ನಮ್ಮ ಜನಗಳ ಮನಸ್ಸನ್ನು ಈ ರೀತಿಯಲ್ಲಿ ಯೋಚಿಸಲು ಪ್ರೇರಪಿಸುತ್ತಿದ್ದಾವೆಯೇ?

ಯಾಕೆ ಇಂದು ಮದುವೆ ಎಂಬ ಬ್ರಹ್ಮ ಮಾಡಿದ ಗಂಟು/ಬಂಧನ ಯಾವಾಗ ಬೇಕಾದರು ಹರಿದುಕೊಳ್ಳುವಂತಹದ್ದು ಎಂಬ ರೀತಿಯಲ್ಲಿ ನಮ್ಮ ಯುವಪೀಳಿಗೆಗೆ ನಾವು ತೋರಿಸಿಕೊಡುತ್ತಿದ್ದೇವೆ?

ಪುರಾಣದ ರಾಮ-ಸೀತೆ, ನಳ-ದಮಯಂತಿಯರು ಜೀವನದಲ್ಲಿ ಏನೇ ಕಷ್ಟಕೋಟಲೆಗಳು ಬಂದರು ಎಂದಿಗೂ ಒಬ್ಬರನ್ನೊಬ್ಬರೂ ಬೇರೆಯಾಗದೇ ಹೋರಾಡಿದ ಗಟ್ಟಿ ಬಂಧನದ ಸಂಬಂಧದ ಕಥೆಗಳ್ಯಾಕೆ ನಮ್ಮ ಯುವಕ ಯುವತಿಯರ ಮನಸ್ಸಿನಲ್ಲಿ ಇಂದು ನಿಂತಿಲ್ಲಾ?

ಇಂದು ತುಂಬ ಚಿಕ್ಕ ಚಿಕ್ಕ ವ್ಯತ್ಯಾಸಕ್ಕೆ ಡೈವರ್ಸ್ ಮೊರೆ ಹೋಗುತ್ತಿರುವುದು. ಇದು ಏನನ್ನು ಸೂಚಿಸುತ್ತದೆ.

ಸ್ನೇಹವೆಂದರೇ ಎಲ್ಲಾ ಸಂಬಂಧಕ್ಕೂ ಮೀಗಿಲಾಗಿದ್ದು ಎನ್ನುವುದಕ್ಕೆ ಆದರ್ಶವಾದ  ಶ್ರೀ ಕೃಷ್ಣ-ಸುಧಾಮ, ದುರ್ಯೋಧನ-ಕರ್ಣರ ಕಥೆಗಳೆಲ್ಲಾ ಇಂದು ಸುಳ್ಳು ಎನ್ನುವಷ್ಟರ ಮಟ್ಟಿಗೆ ನಮ್ಮ ನಮ್ಮ ಯುವ ಮನಸ್ಸುಗಳನ್ನು ಟ್ಯೂನ್ ಮಾಡಿಕೊಂಡಿರುವಿವೆಲ್ಲಾ ಯಾಕೆ?

ಯಾವುದೂ ಶಾಶ್ವತವಲ್ಲಾ ಎಂಬ ವ್ಯರಾಗ್ಯ ಭಾವನೆಯನ್ನು ನೈಸರ್ಗಿಕವಾಗಿರುವ ಮಾನವ ಸಂಬಂಧಗಳಿಗೆ, ಭಾವನೆಗಳಿಗೆ ತಳುಕು ಹಾಕುವ ಮನಸ್ಸನ್ನು ವೇಗದ ಯುಗದಲ್ಲಿ ನಾವು ಯಾಕೇ ಮಾಡುತ್ತಿದ್ದೇವೆ?

ಇದಕ್ಕೆಲ್ಲಾ ಉತ್ತರ ನಮ್ಮ ನಮ್ಮಲ್ಲಿಯೇ ಉಂಟು.

ಒಂದು ಸುಂದರವಾದ ಆರೋಗ್ಯಕರವಾದ ವ್ಯಕ್ತಿ ವ್ಯಕ್ತಿ ಸಮಷ್ಠಿಯ ತಂತುವಿನ ಕೊಂಡಿಗಳ ನಡುವಿನ ಬಂಧನವನ್ನು ನಿರಂತರವಾಗಿ ಹಾಗೆಯೇ ಇರುವಂತೆ ಮಾಡುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕಾಗಿರುವುದು ಅಧ್ಯ ಕರ್ತವ್ಯ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ