ಶನಿವಾರ, ಡಿಸೆಂಬರ್ 10, 2016

ಪ್ರಬುದ್ಧ ನ್ಯೂಸ್ ಪತ್ರಿಕೆಗೆ ಒಂದು ವರುಷ ತುಂಬುತ್ತಿದೆ....

ಪತ್ರಿಕೆಯ ಬಳಗಕ್ಕೆ ಹೊಸ ವರುಷದ ಮತ್ತು ಪತ್ರಿಕೆಯ ಹುಟ್ಟುಹಬ್ಬದ ಶುಭಾಶಯಗಳು!

ಪ್ರಬುದ್ಧ ನ್ಯೂಸ್ ಮಾಸ ಪತ್ರಿಕೆಗೆ ಇಂದಿಗೆ ಒಂದು ವರುಷ ತುಂಬುತ್ತಿದೆ.

ಚಿತ್ರದುರ್ಗದಿಂದ ಪ್ರತಿ ತಿಂಗಳು ಐದನೇ ತಾರೀಕು ವೈವಿಧ್ಯಮಯವಾದ ವಸ್ತು ವಿಷಯ ಬರಹಗಳೊಂದಿಗೆ ಓದುಗರ ಕೈಗೆ ಸಿಗುತ್ತಾ.. ಒಂದೇ ಗುಕ್ಕಿಗೆ ಎಲ್ಲಾ ಲೇಖನಗಳನ್ನು ಓದಿಸುವಂತೆ ಮಾಡುತ್ತದೆ.

ಹೊಸ ಪತ್ರಿಕೆಗಳನ್ನು ಶುರು ಮಾಡುವುದು ಮತ್ತು ಅದನ್ನು ಉತ್ತಮವಾಗಿ ಸತತವಾಗಿ ನಡೆಸಿಕೊಂಡು ಹೋಗುವುದು ಅಷ್ಟು ಸುಲಭವಲ್ಲ!

ಇಂದು ಎಲ್ಲಾದರಲ್ಲೂ ಸ್ಪರ್ಧೆ. ಸ್ಪರ್ಧೆಯಲ್ಲಿ ನಿರಂತರವಾಗಿ ಹೆಚ್ಚು ಶಕ್ತವಾಗಿ ಓಡಬೇಕು. ಇಲ್ಲವೆಂದರೇ ತನ್ನಷ್ಟಕ್ಕೆ ತಾನೇ ಸೋಲನ್ನು ಒಪ್ಪಿಕೊಂಡಂತೆ.

ಯಾವುದೇ ರಂಗದಲ್ಲೂ  ನಾವು ಜಯ ಶಾಲಿಯಾಗಬೇಕೆಂದರೇ, ತಾನು ಸ್ವಲ್ಪ ವಿಭಿನ್ನವಾಗಿರಬೇಕು. ಬೇರೆಯವರಿಗಿಂತ ಮುಂದಿದ್ದರೇ ಮಾತ್ರ ಗೆಲವು.  ಈ ರೀತಿಯ ಹೊಸ ಚಿಂತನೆಯೊಂದಿಗೆ ಸಮಾನ ಮನಸ್ಕ ಗೆಳೆಯರೊಂದಿಗೆ  ಜನವರಿ ೨೦೧೬ ರಿಂದ ಪ್ರಾರಂಭವಾದ ಪ್ರಬುದ್ಧ ನ್ಯೂಸ್ ಪತ್ರಿಕೆಯಿದು.

ಪ್ರಬುದ್ಧ ನ್ಯೂಸ್ ಈಗ ಮನೆ ಮಾತಾಗಿದೆ ಎಂದರೇ ಪತ್ರಿಕೆಯನ್ನು ನಡೆಸುತ್ತಿರುವವರ ಮನಸ್ಸು ನಿತ್ಯ ಹೊಚ್ಚ ಹೊಸತನದಿಂದ ಕೊಡಿದೆ ಎಂದರ್ಥ!

ಮೊದಲ ಸಂಚಿಕೆಯಿಂದ ಈ ವರುಷದ ಕೊನೆಯ ಸಂಚಿಕೆಯವರೆಗೂ ಸುದ್ಧಿ, ಲೇಖನಗಳು, ಅಂಕಣಗಳು, ಪತ್ರಿಕೆಯ ಕ್ವಾಲಿಟಿ, ಮುಖಪುಟ ವಿನ್ಯಾಸ ಹೀಗೆ ಪ್ರತಿಯೊಂದರಲ್ಲೂ ಪ್ರಬುದ್ಧತೆಯನ್ನು ಮೆರೆದಿದೆ.  ಹೆಸರಿಗೆ ತಕ್ಕಂತೆ ಪತ್ರಿಕೆ ಯಾವಾಗಲೂ ತನ್ನ ಪ್ರಬುದ್ಧಮಾನತೆಯನ್ನು ಪಸರಿಸಿದೆ.

ಇದು ಹೊಸ ಪತ್ರಿಕೆಯೆಂಬುದನ್ನೇ ನಂಬಂತಾಗಿದೆ. ಇಂದು ಹಾಗೆ ಹೇಳುವ ಆಗಿಲ್ಲ! ಈಗ ಮೊದಲನೇ ವರುಷದ ಹುಟ್ಟು ಹಬ್ಬ.

ಹೌದು! ಪ್ರೀತಿಪಟ್ಟು ರೂಪಿಸಿದ ಪತ್ರಿಕೆಯಾದ್ದರಿಂದ ಓದುಗನಿಗೆ ಎಂದಿಗೂ ಇದು ಹೊಸ ಪತ್ರಿಕೆಯೆಂದು ಎನಿಸಿಲ್ಲ.

ಪತ್ರಿಕೆಯಲ್ಲಿ ಬರುತ್ತಿರುವ ಲೇಖನಗಳು, ವಿಷಯಗಳ ಆಯ್ಕೆಯಿಂದ ಓದುಗ ದೊರೆಗೆ ಓದಿನ ಮೃಷ್ಟಾನ್ನವನ್ನೆ ನೀಡಿದೆ. ವಾರ ವಾರ ಕೈಗೆ ಸಿಗುವಂತ್ತಾಗಿದ್ದರೇ ಎಷ್ಟು ಚೆನ್ನಾ ..! ಎಂಬ ಭಾವನೆಯನ್ನು ಹುಟ್ಟುಹಾಕಿದೆ.

ಪತ್ರಿಕೆಯ ಪ್ರತಿ ಬರಹಗಳಲ್ಲೂ ಪ್ರಾರಂಭದಿಂದ ಇಂದಿನವರೆಗೂ ಅದೇ ಬಿಗಿ ಹಿಡಿತವಿದೆ.

ವೈವಿಧ್ಯಮಯ ಬರಹಗಳಿಂದ ಕಾದು ಓದುವಂತೆ ಮಾಡಿರುವ ಪುಟಗಳೆಂದರೇ: ಸಂಪಾದಕೀಯ ಪುಟ, ಮುಖಪುಟ ಲೇಖನ, ವ್ಯಕ್ತಿತ್ವ ವಿಕಸನ , ಕಾಲನಿರ್ಣಯ, ಮನದಾಳದ ಮಾತು ಅಂಕಣ.. ಇತ್ಯಾದಿ.

ಸಂಪಾದಕೀಯ ಪುಟ - ಖುದ್ದು ಪ್ರಧಾನ ಸಂಪಾದಕರೇ ಬರೆಯುವ ಸಂಪಾದಕೀಯ ಪುಟ ನಿಜವಾಗಿಯೂ ಸಂಗ್ರಾಹಯೋಗ್ಯವಾದದ್ದು. ತಿಪ್ಪೇಸ್ವಾಮಿಯವರ ಭಾಷ ಪ್ರೌಡಿಮೆ ಮತ್ತು ವಿಷಯ ಸಂಗ್ರಾಹಣೆಯ ಪರಿಶ್ರಮವನ್ನು ಇದರಲ್ಲಿ ಗುರುತಿಸಬಹುದು. ದೇಶ-ರಾಜ್ಯದಲ್ಲಿ ಆ ಮಾಸದಲ್ಲಿ ಮಾಸದಂತೆ ಉಳಿದ ಸುದ್ಧಿಯ-ಘಟನೆಯ ಸುತ್ತಾ ತಮ್ಮದೇಯಾದ ಶೈಲಿಯಲ್ಲಿ ವಿಷಯ ವಿಸ್ತಾರವನ್ನು ವಿಶ್ಲೇಷಕ ಚಿಂತನೆಯಲ್ಲಿ ಚಿತ್ರಿಸುವುದು. ಘಟನೆಯ ನೈಜತೆಯನ್ನು ಮನನ ಮಾಡುತ್ತ ಆದರ ಆಗುಹೋಗುಗಳನ್ನು ಬೇರೆ ರೀತಿಯಲ್ಲಿ ಓದುಗರಿಗೆ ತಿಳಿಸುತ್ತಾರೆ. ಸಂಪಾದಕೀಯ ಪುಟ ಇಡೀ ಪತ್ರಿಕೆಗೆ ಮುಕುಟಪ್ರಾಯವಾದದ್ದು ಎಂದರೇ ತಪ್ಪಲ್ಲ!

ನಾನು ಇಷ್ಟಪಟ್ಟು ಮೊದಲು ಓದುವ ಪುಟವೆಂದರೇ ಪತ್ರಿಕೆಯ ಈ ಮೊರನೇಯ ಪುಟ.  ತಿಪ್ಪೇಸ್ವಾಮಿಯವರ ಬರಹದ ದುಡಿಮೆ ಹೀಗೆ ಸಾಗಲಿ ಎನ್ನುವುದೇ ನಮ್ಮಗಳ ಆಶಯ.

ಕಾಲನಿರ್ಣಯ..? - ಜಿತೇಂದ್ರರ ರಾಜಕೀಯ ಕಾಲಂ. ಕರ್ನಾಟಕದಲ್ಲಿ ಜರುಗುವ ರಾಜಕೀಯ ಹೆಜ್ಜೆಗಳನ್ನು ತಮ್ಮದೇಯಾದ ರಾಜಕೀಯ ವಿಶ್ಲೇಷಣೆಯೊಂದಿಗೆ ಅತ್ಯಂತ ಚೂಕ್ಕವಾಗಿ ಚಿತ್ರಿಸುವ ಲೇಖನ. ಇದುವರೆಗೆ ಬಂದಿರುವ ಅವರ ಎಲ್ಲಾ ಲೇಖನಗಳು ತುಂಬ ಸೂಗಸಾಗಿವೆ. ರಾಜಕೀಯವೆಂದರೇ ಮೂಗು ಮುರಿಯುವರು ಸಹ ಕುತೂಹಲದಿಂದ ಓದುವಂತೆ ಮಾಡುತ್ತದೆ. ಯಾಕೋ ಕಳೆದ ಮೂರು ತಿಂಗಳಿಂದ ಈ ಕಾಲಂ ನಿಂತುಹೋಗಿರುವುದು ಬೇಸರದ ಸಂಗತಿ. ಈ ಕಾಲಂ ಪುನಃ  ಪ್ರಾರಂಭವಾಗಲಿ ಎಂಬುದು ಈ ಓದುಗನ ಆಸೆ.

ವ್ಯಕ್ತಿವಿಕಸನ ಕಾಲಂ 'ಸಾವಿರ ಸೋಲುಗಳನ್ನು ಮೆಟ್ಟಿ ನಿಲ್ಲು'  -ಸಿದ್ದಲಿಂಗಪ್ಪನವರ ಕಾಲಂ. ಇದು ಪ್ರತಿಯೊಬ್ಬರಿಗೂ ಮಾರ್ಗದರ್ಶಿ ಬರಹಗಳ ಗೊಂಚಲು. ಸೋತ ಮನಸ್ಸುಗಳಿಗೆ ಸಂಜೀವಿನಿ! ಚಿಕ್ಕ ಚಿಕ್ಕ ಕಥೆಗಳ ಮೊಲಕ ಜೀವನವನ್ನು ಹೇಗೆ ಎದುರಿಸಬಹುದು ಎಂಬುದನ್ನು ತಿಳಿಸುತ್ತದೆ. ಕಾದಿದ್ದು ಮುಂದಿನ ತಿಂಗಳ ಬರಹವನ್ನು ಓದುವಂತೆ ಮಾಡುತ್ತಿರುತ್ತದೆ. ಮುಂದಿನ ಕಂತಿಗಾಗಿ ಒಂದು ತಿಂಗಳವರೆಗೂ ಕಾಯಬೇಕಲ್ಲಪ್ಪಾ. ಎಂದು ಬೇಜಾರಾಗುತ್ತದೆ.

ನನ್ನನ್ನು ಹೆಚ್ಚು ಇಷ್ಟಪಟ್ಟು ಓದುವಂತೆ ಮಾಡುತ್ತಿರುವ ಪ್ರಬುದ್ಧ ನ್ಯೂಸ್ ಅಂಕಣವೆಂದರೇ ’ಮನದಾಳದ ಮಾತು’ - ಇದು ಪ್ರತಿ ತಿಂಗಳು ಒಬ್ಬೊಬ್ಬ ಓದುಗರ ಭಾವನೆಗಳ/ಘಟನೆಗಳ/ಜೀವನ ಸಂಘರ್ಷದ ಸಂಗಮ ಮಾಲೆ. ತಮ್ಮ ಜೀವನದಲ್ಲಿ ಘಟಿಸಿದ ಘಟನೆಗಳ ಮೇಲೆ ಬೆಳಕು ಚೆಲ್ಲುವ ಅಂಕಣ. ಈ ಅಂಕಣಕ್ಕೆ ಓದುಗರು ನೇರ ಭಾಗವಹಿಸಿಕೆಯನ್ನು ಪತ್ರಿಕೆ ನೀಡಿರುವುದು ಪತ್ರಿಕೆ ಓದುಗರ ಬಗ್ಗೆ ಇಟ್ಟುಕೊಂಡಿರುವ ಕಾಳಜಿಯನ್ನು ನಿರೂಪಿಸುತ್ತದೆ.

ಸಂಶೋಧನ ವಿದ್ಯಾರ್ಥಿಗಳ ಸಂಶೋಧನ ಬರಹಗಳನ್ನು ಪ್ರಕಟಿಸುತ್ತಿರುವುದು. ಪತ್ರಿಕೆ ನವ ತರುಣ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಚಿಂತನೆಗಳಿಗೆ ತಾನು ನೀಡುತ್ತಿರುವ ಪ್ರೋತ್ಸಾಹವನ್ನು ತೋರಿಸುತ್ತದೆ.

ಇದಷ್ಟೇ ಅಲ್ಲದೇ ಕಾನೂನಿಗೆ ಸಂಬಂಧಿಸಿದ ಹಲವು ಲೇಖನಗಳು ಸಾಮಾನ್ಯ ಜನರಿಗೆ ಭಾರತದಲ್ಲಿರುವ ಗೊತ್ತಿಲ್ಲದ ಕಾನೂನು ಮತ್ತು ಅದರ ಉಪಯೋಕ್ತತೆಯನ್ನು ಪಡೆಯಲು ಸಾಮಾನ್ಯ ಜನರಿಗೆ ಅನುಕೂಲವಾಗಿದೆ ಎಂದರೇ ತಪ್ಪಿಲ್ಲ.

ಮುಖಪುಟದಲ್ಲಿ ನೀಡುವ ಹೆಡ್ ಲೈನ್ಸ್ - ಹೆಚ್ಚು ಕಾಡುವಂತೆ ಮತ್ತು ಕನ್ನಡ ಪದಗಳನ್ನು ಹೀಗೂ ಉಪಯೋಗಿಸಬಹುದು ಎಂಬುದನ್ನು ಪ್ರಬುದ್ಧ ನ್ಯೂಸ್ ಪ್ರತಿ ತಿಂಗಳು ಜಗಜ್ಜಾಹೀರು ಮಾಡಿದೆ. ’ವಿಚಾರಗಳ ಮೇಲುಡಿಗೆಯೇ ಭಾಷೆ’

ಹೊಸ ಪತ್ರಿಕೆಗಳೆಂದರೇ ಪ್ರಸಿದ್ಧರಾದ ಲೇಖಕರಿಗೆ ಮಣೆ ಹಾಕುವುದು. ಈಗಾಗಲೇ ಪೇಮಸ್ಸಾದ ಲೇಖಕರಿಂದ/ಸಾಹಿತಿಗಳಿಂದ ಅಂಕಣಗಳನ್ನು ಬರೆಸಿಕೊಂಡು ತಮ್ಮ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸಿಕೊಳ್ಳಲು ತವಕಿಸುವ ಇಂಥ ಸಂದರ್ಭದಲ್ಲಿ ಕೇವಲ ಹೊಸ ಲೇಖಕರಿಂದ ಅತ್ಯುತ್ತಮವಾದ ಲೇಖನಗಳನ್ನು ಬರೆಯಿಸುತ್ತಿರುವುದು. ಹೊಸಬರಿಗೆ ಅವಕಾಶವನ್ನು ಕೊಟ್ಟು ಅವರಲ್ಲಿ ಹುದುಗಿರುವ ಹೊಸ ಚಿಂತನೆಯನ್ನು ಕನ್ನಡ ಓದುಗರಿಗೆ ಪರಿಚಯಿಸುತ್ತಿರುವುದು ಪ್ರಬುದ್ಧ ನ್ಯೂಸ್ ಪತ್ರಿಕೆಯ ಹೆಮ್ಮೆ . ಇದು ಎಲ್ಲಾ ಪತ್ರಿಕೆಗಳಿಗೂ ಮಾದರಿ.

ಪತ್ರಿಕೆ ತನ್ನ ಮೊದಲ ವರುಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಸಾಮಾನ್ಯ ಓದುಗನಾಗಿ ಈ ಪತ್ರಿಕೆ ಇನ್ನು ಹೆಚ್ಚು ಹೆಚ್ಚು ಎತ್ತರಕ್ಕೇರಲಿ!  ಹಾಗೆಯೇ ಆದಷ್ಟು ಬೇಗ ವಾರಪತ್ರಿಕೆಯಾಗಿ ಬಹುಬೇಗ ನಮ್ಮೆಲ್ಲಾರ ಕೈಸೇರಲಿ ಎಂದು ಆಶಿಸುವೆನು.