ಬುಧವಾರ, ಸೆಪ್ಟೆಂಬರ್ 14, 2016

ಕಾವೇರಿ ನೀರು ಹಸನಾಗಿ ಹರಿದು ಅಳಿಸಲಿ

ಕಳೆದ ವಾರ ಕರಾಳ ದಿನಗಳನ್ನು ಬೆಂಗಳೂರು ಮತ್ತು ಕನ್ನಡ ನಾಡು ಕಂಡಿತು. ಅಕ್ಷರಶಃ ಬೆಂಗಳೂರು ದಗದಗಿಸಿ ಬೆಂಕಿಯಲ್ಲಿ ಉರಿದು ಹೋಯಿತು.  


ಕೋರ್ಟ ಆದೇಶದಂತೆ ನೀರನ್ನು ಕಳೆದುಕೊಂಡೆವು. ಆದರ ನೋವು ಇನ್ನು ಆರುವ ಮೊದಲೇ..ಬೆಂಗಳೂರು ಶಾಂತಿಯ ಉದ್ಯಾನ ನಗರಿ ಎಂಬ ಹೆಸರು ಕಳಚಿ ಬೀಳುವಂತೆ ಶಾಂತಿಯ ಹಸಿರು ವಾತವರಣವನ್ನೇ ಹೊಗೆಯಲ್ಲಿ ತೂರಿಬಿಟ್ಟೇವು.  


ಅಮಾಯಕ ಸಾಮಾನ್ಯ ಜನಗಳಿಗೆ ಭಯವೊಂದು ಬಿಟ್ಟು ಮತ್ತೇನೂ ತೋಚದಂತಾಗಿತ್ತು.  


ಕೆಲಸವೆಂದು ಮನೆಯಿಂದ ಹೊರಗಡೆ ಹೋದವರು ಸಂಜೆ ಯಾವುದೇ ಅಪಾಯವಿಲ್ಲದೇ ವಾಪಸ್ಸು ಬರುವರೋ ಇಲ್ಲವೋ ಎಂಬಂತೆ ಮನೆಯಲ್ಲಿದ್ದವರೆಲ್ಲಾ ತಳಮಳದಲ್ಲಿ ಬೆಂದು ಹೋಗಿದ್ದೇ ಬಂತು.  


ಮನುಷ್ಯನಷ್ಟು ಕೆಟ್ಟ ಪ್ರಾಣಿ ಮತ್ತೊಬ್ಬನಿಲ್ಲ! ಮನುಷ್ಯನತ್ವ ಎಂಬುದು ಎಲ್ಲಿದೇ? ಮನುಷ್ಯನ ನಾಗರೀಕತೆ ಬೆಳೆದಂತೆ ತನ್ನ ಸೂಕ್ಷ್ಮತೆಯನ್ನು ಮರೆಯುತ್ತಾನೆಂಬುದನ್ನು ಕೆಲವೇ ಕೆಲವು ದುಷ್ಟ ಜನಗಳಿಂದ ಪುನಃ ನಿರೂಪಿಸಿದಂತಾಗಿದೆ.  


ಹಿ0ದಿನಿಂದಲೂ ಮಾನವ ಪ್ರತಿಯೊಂದನ್ನು ಹೋರಾಟದಿಂದಲೇ ಗೆದ್ದುಕೊಂಡಿದ್ದಾನೆ. ಆಗಂಥಾ ಹಿಂಸೆಯ ಮಾರ್ಗವನ್ನು ಹಿಡಿದು ನಡೆಯುವುದು ಮನುಷ್ಯ ಮಾತ್ರರು ಮೆಚ್ಚುವ ದಾರಿಯಲ್ಲ!  


ಮುಂದುವರಿದ ಟೆಕ್ನಾಲಜಿ ನಮ್ಮ ಮನೋಭಾವನೆಯನ್ನು ವಿಸ್ತಾರ ಮಾಡಬೇಕು. ಆದರೇ ಯಾಕೋ ಸಂಕೋಚತತೆಗೆ ಒಡ್ಡಿಕೊಂಡು ಹೆಚ್ಚು ಹೆಚ್ಚು ಸಂಕೀರ್ಣನಾಗುತ್ತಿದ್ದೇವೆ.  


ಸಾಮಾಜಿಕ ತಾಣಗಳಲ್ಲಿ ಯಾರೋ ಏನೂ ಗೊತ್ತಿಲ್ಲದವನು ಏನೋ ಪೋಸ್ಟ್ ಮಾಡಿದ ಎಂದು ಕೊಂಡು ನಮ್ಮ ನಮ್ಮ ನಡುವೆಯೇ ಕೊಚ್ಚುವ ಕೊಲ್ಲುವ ಸಂಸ್ಕೃತಿಗೆ ಇಳಿಯುತ್ತಿರುವುದು ತುಂಬ ವಿಪರ್ಯಾಸ.  


ಯಾವುದಕ್ಕೆ ಮತ್ತು ಯಾರಿಗೆ ಮಹತ್ವವನ್ನು ಕೊಡಬೇಕು ಎಂಬುದನ್ನೇ ನಾವುಗಳು ಮರೆತುಬಿಟ್ಟಿದ್ದೇವೆ. ಯಾವುದು ಮುಖ್ಯ ಯಾವುದು ಅಮುಖ್ಯ ಎಂಬ ಪರಾಂಶೆ ಮಾಡುವುದನ್ನೇ ಬಿಟ್ಟುಬಿಟ್ಟಿದ್ದೆವೆ.
 


ಹೆಚ್ಚು ಲೈಕ್ ಆಗಿದ್ದೆಲ್ಲಾ ಸತ್ಯವಾದದ್ದು. ಹೆಚ್ಚು ಹೆಚ್ಚು ಶೇರ್ ಆಗಿದ್ದೇ ನಿಜವಾದ ಘಟನೆ ಎಂದುಕೊಂಡುಬಿಟ್ಟಿದ್ದೇವೆ. ವೇಗವಾಗಿ ರೀಯಾಕ್ಟ್ ಮಾಡುತ್ತಿರುವುದೇ ನಮ್ಮ ಜೀವಂತಿಕೆಯಾಗಿದೆ. ಟೋಟಲಿ ನಮ್ಮತನವನ್ನೇ ನಾವು ಮರೆಯುತ್ತಿದ್ದೇವೆ.  


ಸರ್ಕಾರವೇ ಎಲ್ಲದಕ್ಕೂ ಹೊಣೆ. ಎಲ್ಲದಕ್ಕೂ ಸರ್ಕಾರವೇ ಕಾರಣ. ಈ ರೀತಿಯ ಚಿಂತನೆ ಮುಖ್ಯ ಮಾಡುತ್ತಿರುವುದು ಮತ್ತು ರಾಜಕೀಯವಾಗಿ ಪ್ರತಿಯೊಬ್ಬರೂ ಚಿಂತಿಸುತ್ತಿರುವುದು. ಲಾಭ ನಷ್ಟಗಳ ಮೆಲಾಟದಲ್ಲಿ ಮನುಷ್ಯತ್ವವನ್ನೇ ಗಾಳಿಗೆ ತೂರುತ್ತಿದ್ದೇವೆ.  


ಒಕ್ಕೊಟಗಳ ಭಾರತದಲ್ಲಿ ರಾಜ್ಯ ರಾಜ್ಯಗಳ ನಡುವೆ ಗಡಿಗಳನ್ನು ನಿರ್ಮಿಸಿಕೊಂಡು ವೈರತ್ವವನ್ನು ಸಾಧಿಸಲು ಹೊರಡುತ್ತಿರುವುದು ದೊಡ್ಡ ವಿಪರ್ಯಾಸ!  


ಭಾಷೆ, ಬಣ್ಣ, ರಾಜ್ಯ, ನೆಲ, ಜಲ ಈ ಎಲ್ಲಾದಕ್ಕೂ ಮಿಗಿಲಾದದ್ದು ಮನುಷ್ಯತ್ವ ಮತ್ತು ಒಳ್ಳೆತನ ಎಂಬುದನ್ನು ಮರೆತಿರುವುದು. ನಾವುಗಳು ಅರಿತವರು ಎಂದು ಹೇಳಿಕೊಳ್ಳುವುದಕ್ಕೇ ನಾಚಿಕೆಯಾಗುತ್ತದೆ.  


ಎರಡು ರಾಜ್ಯದ ನಾಯಕರುಗಳು ಕುಳಿತು ಬಗೆಹರಿಸಿಕೊಳ್ಳಬಹುದಾದಂತಹ ಸಮಸ್ಯೆಗಳನ್ನು ಎರಡು ರಾಜ್ಯದ ಜನಗಳು ಹೇಗೆ ನ್ಯಾಯ ಒದಗಿಸಬಲ್ಲರು?  


ಇಂಥ ಸಮಯಗಳಲ್ಲಿ ಮೊದಲು ಜನಗಳಿಗೆ ಸರ್ಕಾರದ ನಾಯಕರುಗಳಿಂದ ಸ್ಪಷ್ಟ ಸಂದೇಶ ರವಾನೆಯಾಗಬೇಕು. ಸರ್ಕಾರವೇ ಜನರಗಿಂತ ವೇಗವಾಗಿ ರೀಯಾಕ್ಟ್ ಮಾಡಬೇಕು.  


ಕೋರ್ಟ ನ್ಯಾಯಾದೇಶ ಈ ಎಲ್ಲದಕ್ಕೂ ಮೊದಲು ಒಬ್ಬ ಉತ್ತಮ ನಾಗರಿಕನಾಗಿ ಎರಡು ರಾಜ್ಯದ ಮುಖ್ಯ ಮಂತ್ರಿಗಳು ಸಾಧಕ ಬಾಧಕಗಳನ್ನು ತೆರೆದ ಕಣ್ಣುಗಳಿಂದ ನೋಡಬೇಕು.  


ಇಲ್ಲಿರುವವರು ಜನರೇ ಅಲ್ಲಿರುವವರು ಜನರೇ. ಅವರಿಗೂ ಅನ್ಯಾಯವಾಗಬಾರದು ಇವರಿಗೂ ಅನ್ಯಾಯವಾಗಬಾರದು. ಇರುವ ಒಂದೇ ದೇಶದಲ್ಲಿ ಯಾಕೇ ಈ ಕಚ್ಚಾಟ? ಯಾಕೆ ಸಮಾನ ಸಮಾನತೆಯ ನಡಾವಳಿ ಇಲ್ಲಿ ಪ್ರದರ್ಶಿಸಬಾರದು?  


ಸುಖ ಸುಮ್ಮನೇ ರೋಚ್ಚಿಗೆದ್ದು ಬೆಂಕಿ ಹಚ್ಚಿದರೇ ಈ ಸಮಸ್ಯೆ ಎಂದು ಬಗೆಹರಿಯುವುದಿಲ್ಲ!  


ಇಲ್ಲಿ ನೊಂದು ಬೆಂದು ಹೋಗುವುವರು ಪುನಃ ಜನ ಸಾಮಾನ್ಯರೇ. ರೈತರಿಗೆ ನೀರು ಬೇಕು. ಜನಸಾಮನ್ಯರಿಗೂ ಕುಡಿಯುವ ನೀರು ಬೇಕು. ಪ್ರತಿಯೊಬ್ಬರು ಬದುಕಲೇ ಬೇಕು. ಬದುಕಬೇಕೆಂದು ಇನ್ನೊಬ್ಬರನ್ನು ತುಳಿದು ಎಂದಿಗೂ ಬದುಕಬಾರದು.  


ಒಂದೇ ಮಾತರಂ ಎಂದು ಜಪಿಸಿದ ನಾಡಲ್ಲೇ ದೊಂಬಿ ದಬ್ಬಾಳಿಕೆ? ನಮ್ಮ ನೆಲದಲ್ಲೆ ನಮ್ಮ ನಮ್ಮನ್ನು ಕಾಯಲು ಸೇನೆ, ಪೊಲೀಸ್! ನಾವುಗಳು ಆರಾಮಾಗಿ ಓಡಾಡುವ ಓಣಿಗಳಲ್ಲಿ ಗನ್, ಲಾಟಿಗಳ ಸಪ್ಪಳ!  


ನಾವೇನೂ ಯುದ್ಧ ಭೂಮಿಯಲ್ಲಿದ್ದೇವೆ?



ಕಾವೇರಿಯ ಒಟ್ಟು ಉದ್ದ ೮೦೨ ಕೀ.ಮಿ. ರಾಜ್ಯದಲ್ಲಿ ಕಾವೇರಿ ಜಲಾಯನ ಪ್ರದೇಶ ೩೪ ಸಾವಿರ ಕೀ.ಮಿ ಇದ್ದರೆ.. ತಮಿಳುನಾಡು ೪೪ ಸಾವಿರ ಕೀ.ಮಿ ಹೊಂದಿದೆ.


ಕಾವೇರಿ ನದಿಯ ನೀರು ಹಂಚಿಕೆಯ ವಿಚಾರ ೧೮೯೨ ರಿಂದ ಶುರುವಾಗಿ ಇಂದಿನವರೆಗೂ ಸಾಗುತ್ತಲೆ ಬರುತ್ತಿದೆ. ಮಳೆಯಾಗಿ ನೀರು ತುಂಬಿ ಹರಿದರೇ ಯಾರಿಗೂ ಸಮಸ್ಯೆ ಇಲ್ಲ. ಮಳೆ ಕೈ ಕೊಟ್ಟ ಕಾಲಕ್ಕೆ ಈ ಎಲ್ಲಾ ಸಮಸ್ಯೆ.


ರಾಜರ ಕಾಲದಲ್ಲಿ ವಿಶ್ವೇಶ್ವರಯ್ಯವನವರ ಯೋಜನೆಯಂತೆ ಎರಡುವರೆ ಕೋಟಿ ರೂಪಾಯಿಯಲ್ಲಿ ಕನ್ನಂಬಾಡಿಯ ಕಟ್ಟೆಯನ್ನು ಕಟ್ಟಿದರು.

ಅಣೆಕಟ್ಟು ಕಟ್ಟಿ ಮಳೆ ಇಲ್ಲದ ಕಾಲಕ್ಕೆ ನೀರು ಇರಲಿ ಎಂದು ಇಟ್ಟುಕೊಂಡರೇ ಅದನ್ನೇ ಬಿಡಿ ಎಂದು ಪಿಳ್ಳೆ ನೆವ ತೆಗುಯುತ್ತಿದೆ ನೆರೆ ರಾಜ್ಯ.




ತಮಿಳುನಾಡಿನಲ್ಲಿ ಕಾಣುವ ರಾಜಕೀಯ ಇಚ್ಛಾ ಶಕ್ತಿ ನಮ್ಮ ರಾಜ್ಯದಲ್ಲಿರುವ ರಾಜಕೀಯ ನಾಯಕರುಗಳಿಗೆ ಬರಬೇಕು. ನಿತ್ಯ ಸಮಸ್ಯೆಯಾಗಿರುವ ಈ ವಿಷಯಕ್ಕೆ ಪೂರ್ಣ ಪ್ರಮಾಣದ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.






ಪ್ರತಿ ವರುಷ ಕೋರ್ಟ್ ಖರ್ಚಿಗೆ ೨೦ ಸಾವಿರ ಕೋಟಿಗೂ ಹೆಚ್ಚು ಹಣ ಹರಿಸಿದರೂ ನೀರಿನ ಜಗಳಕ್ಕೆ ಅಂತ್ಯ ಕಾಣಿಸಲು ಸಾಧ್ಯವಾಗಿಲ್ಲ!



ಹತ್ತು ಹಲವಾರು ವರುಷಗಳ ನೀರಿನ ಹಂಚಿಕೆಯ ಹಗ್ಗ ಜಗ್ಗಾಟವನ್ನು ನಿಲ್ಲಿಸಬಾರದೆ. ತಿಳಿದವರು ಮತ್ತು ಅಧಿಕಾರದ ಗದ್ದುಗೆಯಲ್ಲಿರುವ ಎರಡು ರಾಜ್ಯದ ಮುಖ್ಯಸ್ಥರು ಇದರ ಬಗ್ಗೆ ಶಾಂತವಾಗಿ ಯೋಚಿಸಬಾರದೆ

ರಾಜ್ಯದಲ್ಲಿರುವ ಜನತೆಗೆ ಸರ್ಕಾರದಿಂದ ಸಿಗಬೇಕಾದದ್ದು ರಕ್ಷಣೆ ಮತ್ತು ಶಾಂತಿಯ ಬಾಳ್ವೆ. ಸಾಮಾನ್ಯ ನಾಗರಿಕರ ಸಾವಲ್ಲ!





ಕಾವೇರಿ ನೀರು ಹಸನಾಗಿ ಹರಿದು ಎರಡು ರಾಜ್ಯದ ಜನಮನಗಳ ನೀರಿನ ಆಹಾಕಾರವನ್ನು ಅಳಿಸಲಿ !