ಬುಧವಾರ, ಏಪ್ರಿಲ್ 27, 2016

ಹೆಚ್ ೪

ದೂರದ ಬೆಟ್ಟ ನುಣ್ಣಗೆ ಎಂಬುದು ಇಲ್ಲಿಗೆ ಬಂದ ಮೇಲೆ ಗೊತ್ತಾಗಿದ್ದು.

ಅದು ಯಾಕೆ ನಮ್ಮ ಜನ ದೂರದ  ಅಮೇರಿಕಾ ಅಥವಾ ಇತರೆ ದೇಶಗಳ ಬಗ್ಗೆ ಹುಬ್ಬೇರಿಸುವಂತ ಭಾವನೆಗಳನ್ನು ಇಟ್ಟುಕೊಂಡಿದ್ದಾರೋ? ದೇವರಿಗೆ ಗೊತ್ತು.

ಇರುವುದನ್ನೆಲ್ಲ ಬಿಟ್ಟು ಇರದಿರದ ಕಡೆಗೆ ಮನಸ್ಸು ಹರಿಯಬಿಡುವುದೇ ಜೀವನವಾ?

ಡಿಪೆಂಡೆಂಟ್ ವೀಸಾದಲ್ಲಿ ಪ್ರವಾಸ ಮಾಡುವುದು ಒಂದು ರೀತಿಯಲ್ಲಿ ಖುಷಿ ಕೊಡುವ ವಿಷಯವೇ..? ಅದು ಭಾರತದಲ್ಲಿದ್ದುಕೊಂಡು  ವಿದೇಶಕ್ಕೆ ಹಾರುವ ಭಾವನೆಯ ಖುಷಿ ಇಲ್ಲಿಗೆ ಬಂದ ಮೇಲೆ ಖಂಡಿತ ಇರಲಾರದೆಂದು ಅನಿಸುತ್ತದೆ.

ಇದು ನಿಜವಾಗಿಯೂ ಒಂಟಿ ಬಾಳ ನೌಕೆಯೇ ಸರಿ. ಗಂಡ ಎಂಬ ಪ್ರಾಣಿ ಕೆಲಸ ಕೆಲಸ ಎಂದು ಬರಾ ಬರೀ ೧೮ ಕ್ಕೊ ಹೆಚ್ಚು ಗಂಟೆಗಳು ಕೆಲಸದಲ್ಲಿ ಮುಳುಗೇಳುವಂತಹ ಪ್ರಾಜೆಕ್ಟ್ ಸಿಕ್ಕಿದರೇ.. ಹೆಂಡತಿ ನೀ ನನಗೆ ಬೆಂಡು ಎತ್ತುತೀ ..ಎಂದೇ ಹೇಳುತ್ತಾರೆ ಇಲ್ಲಿಯ ಗಂಡುಗಳು.

ಸತ್ಯವಾಗಿ ಮನಸ್ಸುಗಳು ಪರಸ್ಪರ ಪ್ರೀತಿಯಿಂದ ಆರಾಮಾಗಿ ಮಾತನಾಡುವ ಅವಕಾಶವೇ ಇಲ್ಲಿ ಇಲ್ಲವೆಂದು ಅನಿಸುತ್ತದೆ. ಇಲ್ಲಿ ಎಲ್ಲಾ ಇದೆ. ಕಾರು ಇದೆ. ದೊಡ್ಡ ಮನೆಯಿದೆ. ಬಹು ಬೇಗ ಆಪೀಸ್ ಗೆ ಹೋಗುತ್ತಾರೆ. ಸಂಜೆಯ ಟ್ರಾಪಿಕ್ ಜಂಜಾಟವಿಲ್ಲದೇ ಬೇಗ ಮನಗೆ ಬರುತ್ತಾರೆ. ಎಂದು ಖುಷಿಪಡುವ ಪಾಡು ನಮಗಿಲ್ಲ.

ಪುನಃ ಸರಿ ರಾತ್ರಿಯವರೆಗೂ ಆಪಶೂರ್ ಮೀಟಿಂಗ್. ಅದು ಇದು ಎಂದು ಲ್ಯಾಪ್ ಟಾಪ್ ನಲ್ಲಿ ತಲ್ಲಿನ ಮೂರ್ತಿಗಳಾಗುತ್ತಾರೆ ನಮ್ಮವರು.

ಕೆಲಸದಲ್ಲಿ ತೋರುವ ಪ್ರೀತಿಯನ್ನು ಮನೆಯಲ್ಲಿರುವ ನೆಚ್ಚಿನ ಜೀವಂತ ಜೀವಗಳಿಗೆ ವಿಕ್ ಡೇಸ್ ಗಳಲ್ಲಿ ಎಂದಿಗೂ ಪ್ರೀತಿ/ಸಮಯ ತೋರಲಾರರು.

ನಮ್ಮ ಊರಲ್ಲಾದರೋ ಗೆಳೆತಿಯರು, ಅಕ್ಕ ಪಕ್ಕದವರು ಮಾತನಾಡಲು, ನೋಡಲು ಸಿಗುತ್ತಾರೆ.

ಇಲ್ಲಿಯೋ ಮನೆಯಲ್ಲಿರುವ ಎರಡು ಜೀವಗಳೇ ಪರಸ್ಪರ ಆಸರೆ.

ಬಾಯಿ ತುಂಬ ಎರಡು ಮಾತನಾಡಲು ಸಾಧ್ಯವಾಗದ ಬ್ಯುಸಿ ಲೈಫ್ ಇದು.

ಹೊರಗಡೆ ಹೋದರೋ ನಮ್ಮ ನಗರದಲ್ಲಿ ಬಂದ್ ಅಥವಾ ಕರ್ಪ್ಯೂ ಸಮಯದಲ್ಲಿ ಕಾಣುವಂತ ಬೀಕೋ ಎನ್ನುವ ವಾತವರಣ. ಜನಗಳನ್ನು ನೋಡಬೇಕು ಎಂದರೇ ಪುನಃ ಶಾಪಿಂಗ್ ಮಾಲ್ ಗಳು ಇರುವ ಏರಿಯಾಕ್ಕೇ  ಹೋಗಬೇಕು. ಕಾಲು ನಡಿಗೆಯಲ್ಲಿ ಹೋಗಲಾರದಷ್ಟು ದೂರ ಈ ಜಾಗಗಳು.

ಇಲ್ಲಿ ಜನಗಳಿಲ್ಲ, ಜಾಗ್ ಮಾತ್ರ ಜಾಸ್ತಿ ಇದೆ. ಅದೇ ನಮ್ಮೊರಲ್ಲಿ ಹೆಜ್ಜೆ ಹೆಜ್ಜೆಗೂ ಪರಿಚಿತ ಮುಖಗಳ ದರ್ಶನ. ಆ ಸುಖ ಇಲ್ಲಿ ಇಲ್ಲ ಬಿಡಿ!

ಹೆಂಡತಿಯರಾಗಿ ಬಂದಿರುವ ನಮ್ಮಂತವರ ಮನಸ್ಸಿನ ತಳಮಳ ಕೇಳುವ ಮನಸ್ಸುಗಳು ಇಲ್ಲ!

ಇಲ್ಲಿ ಎಲ್ಲಾ ಇದೆ. ವಾಟ್ಸ್ ಪ್, ಪೇಸ್ ಬುಕ್ ಇತ್ಯಾದಿಗಳೇ ನಿತ್ಯ ನಿರಂತರ ಸಂಗಾತಿಗಳು. ಇಲ್ಲಿ ನೇಟ್ ಯಾವಾಗಲು ಇರುತ್ತದೆ. ನಮ್ಮೊರಲ್ಲಿ ಇವುಗಳ ಬಳಕೆಯನ್ನು ಮಾಡುವುದೇ ಖುಷಿಯಾಗುತ್ತಿರುತ್ತಿತ್ತು. ಆದರೇ ಇಲ್ಲಿ ಇದು ಸಹ ಮಹಾ ಬೋರು.

ಒಂದೇ ಒಂದು ಖುಷಿಯ ವಿಚಾರ ಎಂದರೇ ಇಲ್ಲಿಗೆ ಬರುವುದಕ್ಕೂ ಮೊದಲು ಅಡಿಗೆ ಮನೆಯ ದಿಕ್ಕು ಕಾಣದ ನನ್ನ ಕೈಗಳು ಈಗ ಎಲ್ಲದರಲ್ಲೂ ನಿಪುಣತೆಯನ್ನು ಕಂಡಿವೆ. ಇದರಲ್ಲಾದರೂ ಅಟ್ ಲಿಸ್ಟ್ ಸ್ವಲ್ಪ ನನ್ನನ್ನು ನಾನು ಮರೆತು ತರಾವೇರಿ ಖಾಧ್ಯಗಳನ್ನು ತಯಾರು ಮಾಡುವುದನ್ನು ಕಲಿಯಲು ಅನುಕೂಲವಾಗಿದೆ. ಇದಕ್ಕೆ ನಾನು ಮತ್ತೇ ಇಂಟರ್ ನೇಟ್ ಗೆ ಥ್ಯಾಂಕ್ಸ್ ಹೇಳಬೇಕು.

ಅಲ್ಲಿಯಾಗಿದ್ದರೆ, ಅಕ್ಕ ಪಕ್ಕದ ಅಂಟಿ, ಅಮ್ಮಂದಿರಿಂದ ಕಲಿಯಬೇಕಾಗಿತ್ತು. ಇಲ್ಲಿ ಗೊಗಲ್ , ಯು ಟ್ಯೂಬ್ ಗಳೇ ಅಕ್ಕರೆಯ ಅಮ್ಮ - ಅಂಟಿಯರು. ಇದರಲ್ಲಿಯೇ ನಮ್ಮ ಮನ ಅರಳುವ ವಿಷಯಗಳನ್ನು ಕೇಳಬೇಕು ಮತ್ತು ನೋಡಬೇಕು.

ಕಾರು ಚಲಾಯಿಸಲು ಕಲಿಯದಿದ್ದರೇ ಗಂಡನ ಪಾದವೇ ಗತಿ. ಅವರು ಪ್ರೀ ಆದ ವಿಕೇಂಡ್ ಗೆ ಕಾದಿದ್ದು. ಹತ್ತು ಬಾರಿ ಗೊಗೆರದು ಅಲ್ಲಿ ಇಲ್ಲಿಗೆ ಕರೆದುಕೊಂಡು ಹೋಗಬೇಕು. ಇಲ್ಲ ಎಂದರೇ ಆರಮಾಗಿ ಮನೆಯಲ್ಲಿಯೇ ತಿಂದುಂಡು ಸುಸ್ತಾಗಿ ಮಲಗಿಬಿಡುತ್ತಾರೆ.

ಪಾಪ!!! ಏನು ಮಾಡುವುದು ಇರೋ ೨ ದಿನವಾದರೂ ರೇಸ್ಟ್ ಬೇಡವೇ ಬ್ಯುಸಿ ಮನಸ್ಸುಗಳಿಗೆ?

ಬೇಕೆಂದಾಗ ಬ್ಯೂಟಿ ಪಾರ್ಲರ್ ಗಳಿಗೆ ಹೋಗಲು ಆಗುವುದಿಲ್ಲ. ಅದೇ ನಮ್ಮೊರಲ್ಲಿ ಈ ಗಂಡು ಜೀವಗಳಿಗೆ ಗೊತ್ತಿಲ್ಲದಂತೆ ಎಷ್ಟು ಭಾರಿ ಹೋಗುತ್ತಿದ್ದೇವೋ. ಹೀಗೆ ಆದರೇ ನಮ್ಮ ಕಾಂತಿಯುಕ್ತ ಮುಖಗಳ ಪಾಡು ದೇವರಿಗೆ ಪ್ರೀತಿ!

ನೋಡುತ್ತಿನಲ್ಲಾ.. ಇಲ್ಲಿರುವ ವಿದೇಶಿ  (ಭಾರತೀಯ) ಮಹಿಳೆಯರ ಒಂದು ಮುಖ್ಯ ಕೆಲಸ ಎಂದರೇ! ಮುದ್ದು ಮಕ್ಕಳ ಜೋಪಾನ. ಅವುಗಳ ಹಿಂದೆ ಯಾವಾಗಲೂ ಓಡುವುದು. ಯಾಕೆಂದರೇ ಇರುವವರು ನಾವಿಬ್ಬರೇ ಅಜ್ಜ , ಅಜ್ಜಿ, ಅಕ್ಕ -ಪಕ್ಕದವರು ಯಾರು ಇಲ್ಲ.

ಸೋ ಟೋಟಲಿ ಮಕ್ಕಳನ್ನು ನೋಡಿಕೊಳ್ಳುವುದರಲ್ಲಿಯೇ ನನ್ನ ಜೀವನ ಮೋಕ್ಷ ಕಾಣುವುಂತಾಗಿದೆ.

ಎಷ್ಟೇ ಓದಿದ್ದರೂ ಸೌಟು ಹಿಡಿಯುವುದು ತಪ್ಪುವುದಿಲ್ಲ ಎಂಬಂತೆ, ಯಾವುದೇ ಕೆಲಸ ಮಾಡುತ್ತಿದ್ದರೂ ಎಚ್ ೪ ಮೇಲೆ ಬಂದರೇ ಮಕ್ಕಳನ್ನು ಸಂಬಾಳಿಸುವುದು ತಪ್ಪುವುದಿಲ್ಲ! ಇವುಗಳ ಕಾರ್ಯ ಮಾಡುವುದರಲ್ಲಿಯೇ ಅರ್ಧ ಆಂಟಿಗಳಾಗಿದ್ದೇವೆ ಅನಿಸುತ್ತದೆ. ಮಕ್ಕಳಿಗಾದರೂ ಯಾರಿದ್ದಾರೇ ನಾನೇ ಅಜ್ಜಿ/ಅಮ್ಮ ಎಲ್ಲಾ.

ಆದರೂ ಮಕ್ಕಳಿರುವುದು ೮೦% ಮನಸ್ಸಿಗೆ ಖುಷಿ ಕೊಟ್ಟಿದೆ. ಇದರ ಮೊಲಕವಾದರೂ ನಮ್ಮ ಮನಸ್ಸುಗಳು ಸ್ವಲ್ಪ ಬ್ಯುಸಿಯಾಗಿವೆ. ಇಲ್ಲದಿದ್ದರೇ ಸೋಮಾರಿಗಳಾಗಿ ರಸ್ಟ್ ದಾರಿ ಹಿಡಿಯುತ್ತಿದ್ದವು.

ನಾನೇಷ್ಟು ಖುಷಿ ಪಟ್ಟಿದ್ದೆ, ವಿದೇಶಕ್ಕೆ ಹೋಗಲು ಸಿದ್ದತೆ ಮಾಡಿಕೊಳ್ಳುವಾಗ. ಪಾಸ್ ಪೊರ್ಟ್ ಮಾಡಿಸಿವುದರಿಂದ ಹಿಡಿದು, ಏರ್ ಟಿಕೇಟ್ ಬುಕ್ ಮಾಡುವವರೆಗೂ. ನಾ ವಿದೇಶಕ್ಕೆ ಹೋಗುವೆನು ಎಂದು ತಿಳಿದು ಅಕ್ಕಪಕ್ಕದ ಮನೆಯವರು, ಬಂದು ಬಳಗದವರು ನನ್ನಡೆಗೆ ನೋಡುವ ನೋಟವೇ ಬದಲಾಗಿದ್ದು. ಅದನ್ನು ಕಂಡು ಮನದಲ್ಲಿಯೇ ನಕ್ಕಿದ್ದು. ವಿದೇಶಕ್ಕೆ ಹೋಗುತ್ತಿದ್ದೇನೆ ಎಂದು ೩ ಭಾರಿ ಸೋಟ್ ಕೇಸ್ ತುಂಬುವಷ್ಟು ಶಾಪಿಂಗ್ ಮಾಡಿದ್ದು... ನೆನಸಿಕೊಂಡರೇ ಈಗ ಅಯ್ಯೋ ಅನಿಸುತ್ತಿದೆ.

ಆ ಸಂಭ್ರಮ  ಇದ್ದಿದ್ದು ನಾಲ್ಕು ದಿನ ಮಾತ್ರ. ಆ ಒಂದು ವಾರ ನಿತ್ಯ ನೋಡುವ ಪ್ರತಿ ನೋಟವನ್ನು ಕ್ಯಾಮರದಲ್ಲಿ ಸೇರೆ ಹಿಡಿದು ಪೇಸ್ ಬುಕ್ ಗೆ ತುರಕಿ ಲೈಕ್ ಗಳಿಗೆ ಕಾಯುತ್ತಿದ್ದುದ್ದೇ ಬಂತು. ನಮ್ಮ ದೇಶದ ಮಂದಿ ಶೋಟಿಂಗ್ ಗೆ ಅದಕ್ಕಾಗಿಯೇ ವಿದೇಶದ ಜಾಗಗಳಿಗೆ ಬರುವುದು.. ಯಾವ ದಿಕ್ಕು ನೋಡಿದರೂ ಕ್ಯಾನವಾಸ್ ಮೇಲೆ ಬರೆದ ಚಿತ್ರದಂತೆ. ಈ ರೀತಿಯ ನೋಟ ನಮ್ಮ ಆ ದೂಳು ಊರಲ್ಲಿ ಎಲ್ಲಿ ಕಾಣಲಿ?  ನಾನಿರುವ ಈ ಚಿಕ್ಕ ವಿಲೇಜೇ ಇಗಿದ್ದಾರೇ.. ನ್ಯೂಯಾರ್ಕ್ ಹೇಗಿರಬಹುದು ಓ ದೇವರೇ ಎಂದು ಎರಡು ದಿನ ಕಣ್ಣು ಮುಚ್ಚಿರಲಿಲ್ಲ.

ಆದರೇ ಇದು ಎಲ್ಲಾ ಬರೀ ಒಂದು ತಿಂಗಳವರೆಗೆ ಮಾತ್ರ ತುಂಬ ಚೆನ್ನಾ ಎಂದು ಅನಿಸಿದ್ದು.

ಅದು ನಿಜ ಕಣ್ರಿ. ನಮ್ಮ ಊರು, ನಮ್ಮ ಅಮ್ಮ ಎಂದಿಗೂ ನಿತ್ಯ ಸುಂದರ. ಇಲ್ಲಿ ಯಾಕೋ ಎಲ್ಲಾ ಇದ್ದು ಏನೋ ಇಲ್ಲ ಎಂದೆನಿಸುತ್ತದೆ. ಭಾವನೆಗಳನ್ನು ಅತ್ತಿಟ್ಟುಕೊಂಡಿದ್ದೇವೆ ಅನಿಸುತ್ತದೆ. ಅದೇ ನಾಲ್ಕು ಗೋಡೆಗಳ ಮಧ್ಯೆ ನಾ ಒಂಟಿ ಬಂದಿ ಎಂದೆನಿಸುತ್ತದೆ.

ಯಾರ ಬಳಿ ಬಿಚ್ಚು ಮನಸ್ಸಿನ ಮಾತನ್ನಾಡಲಿ? ಇದು ಎಲ್ಲಾ ಬೇಕಿತ್ತಾ ?  ಯಾವುದೋ ದೊರದ ಆಸೆಗಳಿಗಾಗಿ ನಮ್ಮ ಹೆತ್ತವರನ್ನು, ಬಂದು ಬಳಗವನ್ನು ಬಿಟ್ಟು ಇಲ್ಲಿ ಯಾಕಿದ್ದೇವೆ. ಯಾಕಿಷ್ಟು ಜನ ಇಲ್ಲಿಯ ಜಿ.ಸಿ ಗಳಿಗಾಗಿ ಬಕಾ ಪಕ್ಷಿ ಥರಾ ಕಾಯುತ್ತಿದ್ದಾರೆ, ಪ್ರಾರ್ಥಿಸುತ್ತಿದ್ದಾರೆ. ಜಿ.ಸಿ ಮುಂದೆ ನಮ್ಮ ಆಧಾರ್ ಕಾರ್ಡು ಡಲ್ಲು ಎಂದು ನಮ್ಮ ಜನಗಳಿಗೆ ಯಾಕೆ ಅನಿಸುತ್ತಿದೆ ?

ನಮ್ಮ ದೇಶದಲ್ಲಿರುವ ಅತ್ಯುತ್ತಮ ಸ್ಥಳಗಳ ಪರಿಚಯ ಮಾಡಿರದಿದ್ದರೂ ವಿದೇಶ ಸ್ಥಳಗಳನ್ನು ನೋಡಬೇಕು ತಿರುಗಾಡಬೇಕು ಎಂಬ ಥಹಾ ಥಹಾ ಎಲ್ಲಿಂದ ಬರುತ್ತದೆ?

ಏನು ಮಾಡುವುದು ಅದೇ ಒಂದು ರೀತಿಯ ಬೋರು ಮನಸ್ಸಿಗೆ ಕನಿಷ್ಟ ಬದಲಾವಣೆಯಾಗಿದೆ ಇಲ್ಲಿ!!

ಬದಲಾಗುತ್ತಿರುವುದು ನಾವುಗಳ ಅಥವಾ ನಮ್ಮ ವ್ಯವಸ್ಥೆಯಾ? ಹುಟ್ಟಿ ಬೆಳೆದು, ಓದಿದ  ದೇಶದಲ್ಲಿಯೆ ಇದ್ದು ಏನಾದರೂ ಮಾಡುವ ಬದಲು, ಇಲ್ಲಿಗೆ ಹೀಗೆ ಬಂದು ಯಾಕೆ ಹೊಸ ರೀತಿಯ ಬದುಕಿಗಾಗಿ ಕಷ್ಟಪಡುವುದು ಯಾವ ಸುಖ? ಗೊತ್ತಾಗುತ್ತಿಲ್ಲ!

ಇರುವ ಒಂದು ಎರಡು ಮಕ್ಕಳನ್ನು ಕಟ್ಟಿಕೊಂಡು ಇಬ್ಬರು ದುಡಿಯಲು ತೊಡಗಿದರೇ ಅದು ಹೇಗೆ ಸ್ವಾಸ್ಥ್ಯ ಕುಟುಂಬವೆಂದೆನಿಸುತ್ತದೆ?

ಆದರೂ ದಿನ ಕಳೆದರೇ ಎಂಥವರೂ ಎಂಥ ಸನ್ನಿವೇಶಕ್ಕಾದರೂ ಒಗ್ಗಿ ಕೊಳ್ಳುತ್ತಾರೇ ಅನ್ನುವಂತೆ ಇಲ್ಲಿರುವುದೇ ಮೇಲು ಅನಿಸುತ್ತದಲ್ಲಾ ಯಾಕೆ? ನಾವು ಹುಟ್ಟಿದ ಊರೇ ಪರಕೀಯ ಅನಿಸುತ್ತದಲ್ಲ ಯಾಕೇ?

ಇದೇ ಕಾಲ ನಿಯಮವಾ?



ಶುಕ್ರವಾರ, ಏಪ್ರಿಲ್ 8, 2016

ಬೇವು ಬೆಲ್ಲದಂತೆ ಬದುಕು

ಮಣ್ಣಿನ ಗುಣ ಮರೆಯಬಾರದು. ಹೌದು ಯುಗಾದಿ ಹಬ್ಬ ನಮ್ಮ ಮಣ್ಣಿನ ಹಬ್ಬ. ವರುಷದ ಆರಂಭದ ಹಬ್ಬ. ಹಳ್ಳಿಯ ಪ್ರತಿ ಮನೆಯು ತಪ್ಪದೇ ಸಂಭ್ರಮದಿಂದ ಆಚರಿಸುವ ದೊಡ್ಡ ಹಬ್ಬ.

ಹಳ್ಳಿಯ ಹಬ್ಬದ ಆಚರಣೆಯ ಸಂಭ್ರಮ ಹಾಗೆಯೇ ಮನದಲ್ಲಿ ಕಲರ್ ಕಲರ್ ಪೊಟೋದಂತೆ ಅಚ್ಚು ಹೊತ್ತಿದೆ. ಅದು ಎಂದು ಮರೆಯಾಗದು ಅಂಥ ಹಬ್ಬದ ದಿನಗಳು ಈ ಪಳ ಪಳ ಹೊಳೆಯ ಸಿಟಿಯಲ್ಲಿ ಕನಸು ಮಾತ್ರವಾಗಿದೆ.

ಹಬ್ಬಗಳೆಂದರೇ ಸುತ್ತ ಮುತ್ತಲಿನವರೆಲ್ಲ ಸೇರಿ ಒಟ್ಟಿಗೆ ಒಂದಾಗಿ ಕಲೆತು ಸಂಭ್ರಮಿಸುವುದೆಂದರ್ಥ.

ಜಾತ್ರೆ, ಪರಿಷೇ, ಕೆಂಡಗಳೆಂದರೆ ಸುತ್ತಲಿನ ಹತ್ತು ಹಳ್ಳಿಗಳಲ್ಲಿರುವವರೆಲ್ಲ ಕಲೆತು ನಡೆಸುವ ತೇರು.  ಪ್ರತಿ ಮನೆಯವರು ತಮ್ಮ ನೆಂಟರು ಇಷ್ಟರನ್ನು ತಪ್ಪದೆ ಬನ್ನಿ ಎಂದು ಕರೆಯುವ ಜಾತ್ರೆ ಎಂದಾದರೂ ಮರೆಯುವುದುಂಟೆ?  ವರುಷಕ್ಕೆ ಒಮ್ಮೆ ನಡೆಯುವ ಈ ರೀತಿಯ ಅಪರೂಪದ ಹಬ್ಬಗಳಿಗೆ ಸೇರುವ ಜನ ಜನ ಕಂಡೆ ಮನ ತುಂಬಿಬರುವುದು. ಹಬ್ಬ ಆಚರಿಸಿದ ಸಮಧಾನ ಪ್ರತಿಯೊಬ್ಬರ ಮನದಲ್ಲಿ ನೂರುಕಾಲ ಸ್ಥಾಯಿಯಾಗಿರುವುದು.

ಈ ರೀತಿಯ ಸಂತೋಷದ ದಿನಗಳನ್ನು ಕೇವಲ ಕಥೆಗಳಂತೆ ಕೇಳುವುದು, ಸಿನಿಮಾದಂತೆ ಟಿ.ವಿ ಯಲ್ಲಿ ನೋಡುವುದೇ ಈಗಿನ ಸುಖವಾಗಿದೆ.

ಅನುಭವಿಸಲು ಸಾಧ್ಯವಿಲ್ಲ. ಇದು ಎಲ್ಲಾ ಎಲ್ಲಿಂದ ಎಲ್ಲಿಗೋ ಬಂದು ನಿಂತಂತಿದೆ.

ಇಂದು ಹಳ್ಳಿಗಳು ಸಹ ಅರ್ಧದಷ್ಟು ಬದಲಾಗಿರುವುದು ಸುಳ್ಳಲ್ಲ.

ಆದರೂ ಅದೇ ಮಣ್ಣಿನ ವಾಸನೆ ಇಂದಿಗೂ ಇದ್ದೆ ಇರುತ್ತದೆ. ವಂಸಂತದ ಚಿಗುರು ಹಳೆ ಮರದಲ್ಲಿ ಕಾಲಕ್ಕೆ ತಕ್ಕಂತೆ ಬಂದೆ ಬರುತ್ತದೆ. ಬದಲಾಗಿರುವುದು ನಮ್ಮ ಮನಸ್ಸಿನ ನೋಟ ಮಾತ್ರ ಅಂದರೇ ತಪ್ಪಲ್ಲ!

ಇಂದು ಇರುವ ಮೂರು ಮಂದಿಯೇ ಮನೆಯಲ್ಲಿ ಬಾಗಿಲು ಹಾಕಿಕೊಂಡು ಎಲ್ಲಾ ಹಬ್ಬಗಳನ್ನು ಚೆನ್ನಾಗಿ ಆಚರಿಸಿಕೊಳ್ಳುವೆವು. ಮನೆಯಲ್ಲಿನ ಸಂಭ್ರಮದ ಸೆಲ್ಫಿ ಪೊಟೋಗಳನ್ನು ಎಪ್. ಬಿ ಯಲ್ಲಿ ಅಪಲೋಡ್ ಮಾಡಿ ಲೈಕ್ ಗಳಿಗಾಗಿ ಕಾಯುವವ ತವಕದ ಮನಸ್ಸುಗಳು ನಮ್ಮದಾಗಿದೆ.

ಸಂಭ್ರಮಗಳೆಲ್ಲಾ ಅನುಭವಿಸುವುದಕ್ಕಿಂತ ಸೆರೆ ಹಿಡಿದು ಕೈಯಲ್ಲಿನ ಮೊಬೈಲ್ ಗೆ ನೂಕುವುದಂತಾಗಿದೆ. ಪ್ರತಿಯೊಂದನ್ನು ಪೊಟೋ ಕ್ಕಾಗಿ ಮಾಡುವಂತಾಗಿದೆ. ಪೊಟೋ ತೆಗೆಯುವ ನಲಿವಿನಲ್ಲಿ ಮನದ ಮನಸ್ಸುಗಳ ಕಾತುರತೆಯನ್ನು ಸೊರಗಿಸುತ್ತಿದ್ದೇವೆ. ಇದೆ ನಿಜವಾದ ಹಬ್ಬವಾಗಿದೆ.

ಎಲ್ಲಿಗೂ ಹೋಗದೆ ಯಾರನ್ನು ಸಂಪರ್ಕಿಸದೆ ತಮಗೆ ತಾವೆ ನಲಿದು ದೂರದ ಪ್ರಪಂಚಕ್ಕೆ ಸಂಭ್ರಮದ ಗಳಿಗೆಗಳನ್ನು ರವಾನೆ ಮಾಡುವುದೆ ಕಾಯಕವಾಗಿದೆ.  ವಿಡಿಯೋ  ತುಣುಕು , ಪೊಟೋ ಪ್ರೇಮ್ ಬದುಕು ನಮ್ಮದು ಅಂದರೇ ತಪ್ಪಲ್ಲಾ!

ಪ್ರತಿಯೊಂದನ್ನು ಹೊರ ಪ್ರಪಂಚದ ದೃಷ್ಟಿಗಾಗಿ ನಮ್ಮ ನಮ್ಮ ಭಾವನೆಗಳನ್ನು ಹೊಂದಿಸಿಕೊಂಡು ನಲಿಯುವೆವು ಅನಿಸುತ್ತದೆ. ಕೃತಕ ಪ್ಲಾಶ್ ಗೆ ಕೊಡುವ ನಮ್ಮ ನಗುವನ್ನು ಜೀವಂತ ಮುಖಗಳ ಎದುರಿಗೆ ಕೊಡಲಾರದಷ್ಟು ಕಳೆಗಟ್ಟಿಸಿಕೊಂಡಿವೆ.

ಹಬ್ಬ ಅನ್ನುವುದಲ್ಲ, ನಮ್ಮ ಪ್ರತಿಯೊಂದು ಚಟುವಟಿಕೆಗಳನ್ನೆಲ್ಲಾ ದಾಖಲೆಗಾಗಿ ಮಾಡುವಂತಾಗಿದೆ.

ಮದುವೆ -ಮುಂಜಿ-ಹುಟ್ಟಿದ ಹಬ್ಬ ಇತ್ಯಾದಿ ಯಾವೊಂದು ಆಚರಣೆಗಳು ಕೇವಲ ಆಚರಣೆಗಳಾಗಿವೆ ಅನಿಸುತ್ತದೆ.

ಆಚರಿಸುವ ಈ ದಿನಗಳ ಮಹತ್ವ ಮರೆಯಾಗಿದೆ. ಬೆರೆತು ನಲಿಯುವ ದಿನಗಳು ಯಾರೊಬ್ಬರಿಗೂ ಸಿಗುತ್ತಿಲ್ಲ. ಅವರವರೆ ಸಂತೋಷಿಸಿ ಇದೆ ನಮ್ಮ ಮ್ಯಾಕ್ಸಿಮಮ್ ಖುಷಿಯ ಗಳಿಗೆಗಳು ಎಂದುಕೊಂಡು ಯಾವುದಾದರೂ ಸೋಷಿಯಲ್ ಸೈಟ್ ನಲ್ಲಿ ಟ್ಯಾಗ್ ಮಾಡಿಬಿಟ್ಟರೆ ಸಾಕಪ್ಪ ಅನಿಸುತ್ತಿದೆ.

ಇಂಥ ಸ್ಥಿತಿಯಲ್ಲಿ ಹಳ್ಳಿಯ ಹಬ್ಬಗಳು ನಮ್ಮನ್ನು ತುಂಬ ಕಾಡುತ್ತವೆ. ಆ ದಿನಗಳು ಮತ್ತೆ ಬರಬಾರದೇ ಅನಿಸುತ್ತದೆ. ವರುಷಕ್ಕೆ ಒಮ್ಮೆ ಸಿಗುತ್ತಿದ್ದ ಹೊಸ ಬಟ್ಟೆಗಳು. ವರುಷಕ್ಕೆ ಒಮ್ಮೆ ಸಿಗುತ್ತಿದ್ದ ಬೋರಿ ಸಿಹಿ ತಿಂಡಿಗಳು, ಹಬ್ಬಕ್ಕಾಗಿಯೇ ದೂರದ ಊರಿನಿಂದ ಬರುತ್ತಿದ್ದ ಕುಟುಂಬದ ಪ್ರೀತಿ ಪಾತ್ರರರ ದರುಶನಗಳು.. ಹೀಗೆ ಸಪ್ರೈಜ್ ಎಂಬುದೇ ಕಾಣೆಯಾಗಿದೆ.

ಪ್ರತಿಯೊಂದು  ಕಾಫಿ ಮಾಡಿದ ಜೆರಾಕ್ಸ್ ನಡಾವಳಿಕೆಗಳು, ಸಂಭ್ರಮಗಳು ಅನಿಸುತ್ತದೆ.

ಯಾವುದರಲ್ಲೂ ವೈವಿಧ್ಯಮಯವಾದ ಎಂದು ಮರೆಯಲಾಗದ ಕ್ಷಣಗಳು ಎಂದು ಅನಿಸುತ್ತಿಲ್ಲ!

ರುಚಿಯಾದ ತಿನಿಸುಗಳು ಮಾಮೊಲಿ ದಿನದಲ್ಲಿ ತಿಂದ ರೀತಿಯಂತೆ ಅನಿಸುತ್ತದೆ. ಹಬ್ಬದ ರುಚಿ ಮಾಡಿದ ನಮ್ಮ ತಿಂಡಿಗಳಲ್ಲಿ ಇಲ್ಲ. ಯಾವುದಾದರೂ ಹಳ್ಳಿ ಮನೆ, ಬಾಡೋಟದ ರೆಸ್ಟೊರೆಂಟ್ ಗಳಲ್ಲಿನ ರುಚಿಯೇ ಮೆಚ್ಚು.

ಇದು ನಮ್ಮ ಮನಸ್ಸಿನ ಭಾವನೆಯೊ ಅಥವಾ ಮತ್ತ್ಯಾವುದೋ ಒಂದು ಗೊತ್ತಾಗುತ್ತಿಲ್ಲ.

ಯುಗಾದಿ! ಯುಗದ ಹಾದಿ... ಯುಗ ಯುಗಾದಿ ಕಳೆದರೂ ಮತ್ತೆ ಯುಗಾದಿ ಬರುತ್ತದೆ.. ಪ್ರತಿ ಯುಗಾದಿ ಹೊಸತನದ್ದು ಅನಿಸುತ್ತಿರುತ್ತದೆ. ಆದರೇ ಈಗಿನ ಯುಗಾದಿ ಮತ್ತೊಂದು ಹಬ್ಬ ಮಾತ್ರ ಎಂಬ ಪೀಲ್ ಎಂದೂ ಆಗಬಾರದು ಎನ್ನುವುದು ನಮ್ಮ ಆಶಯ.

ಮನುಷ್ಯನ ದುಡಿತ ಸಮಯಕ್ಕೆ ಬಿಡುವು ಕೊಟ್ಟು ತನ್ನ ಸುತ್ತಲಿನವರೊಡನೆ ಸೇರಿಕೊಂಡು ತನ್ನ ಕಷ್ಟ ಸುಖಗಳನ್ನು ಹಂಚಿಕೊಂಡು ಮನಸ್ಸು ಮನಸ್ಸು ಬೆರತು ಆಚರಿಸಿದರೆ ಜೀವನ ಯುಗಾದಿಯ ಬೇವು ಬೆಲ್ಲದಂತೆ ಬದುಕಾಗುವುದು.

ಇಂಥ ದಿನಗಳು ಪುನಃ ನಗರದ ಮಂದಿಗಳಿಗೆ ಮರಳಿ ಮರಳಿ ಬರಲಿ ಎಂದು ಆಶಿಸೋಣ!