ಶುಕ್ರವಾರ, ಜನವರಿ 29, 2016

ಗುಂಡು ಮತ್ತು ಪಾರ್ಟಿ

ಪಾರ್ಟಿಗಳು ಚೆನ್ನ!

ಒಂದು ಹತ್ತಾರೂ ಸಮಾನ ಮನಸ್ಕ್ ಮಂದಿಗಳು ಇಳಿ ಸಂಜೆ ಯಾವುದಾದರೂಂದು ಬಾರ್ , ಪಬ್ ಅಥವಾ ರೆಸ್ಟೊರೆಂಟಲ್ಲಿ ಸೇರಿಕೊಳ್ಳುವುದು.

ಪಾರ್ಟಿಗಳು ಏರ್ಪಾಡು ಆಗುವುದು, ಪುನಃ ಸುತ್ತಲಿನ ಗೆಳೆಯರ ಒತ್ತಾಯದ ಮೆರೆಗೆ. ಪಾರ್ಟಿ ಮಾಡಲು ಒಂದು ಕಾರಣ ಬೇಕು. ಆ ಕಾರಣಗಳಿಗೆ ಹತ್ತಾರು ಮಂದಿ ಗೆಳೆಯರ ಸರ್ಕಲ್ ನಲ್ಲಿ ಕೊರತೆಯೇನೂ ಇಲ್ಲ.

ವಾರಕ್ಕೊಂದು ಸಕಾರಣ ಸಿಗುವುದು. ವಾರಕ್ಕೆ ಸಿಗದಿದ್ದರೇ ಕಡೆ ಪಕ್ಷ ತಿಂಗಳಿಗೊಂದು ಕಾರಣ ಸಿಕ್ಕೇ ಸಿಗುತ್ತದೆ.

ಯಾವುದಾದರೂ ಸರಿ, ಹುಟ್ಟಿದ ಹಬ್ಬ, ಹೊಸ ಕಾರು, ಹೊಸ ಮೋಟರ್ ಬೈಕ್, ಹೊಸ ಮನೆ, ಹೊಸ ಹುಡುಗಿ ಸಿಕ್ಕಿದ್ದಕ್ಕೆ, ಹೊಸ ಮದುವೆ, ಹೊಸ ಮುಂಜಿ, ಹೊಸ ಕೆಲಸ, ಹೊಸ ಊರು ಉಫ್ ಹೀಗೆ ನೂರಾರು ಹೊಸ ಹಳೆ ಕಾರಣಗಳು ಮತ್ತು ಸಂದರ್ಭಗಳು ಗೆಳೆಯರ ಗುಂಪಿನ ಮಧ್ಯೆ ಸಿಕ್ಕೆ ಸಿಗುತ್ತದೆ.

ವಿಕೇಂಡ್ ಪ್ರಾರಂಭದ ಶುಕ್ರವಾರದ ಇಳಿ ಸಂಜೆ ಗೆಳೆಯರ ಗುಂಪಲ್ಲಿ ರಂಗೇರುತ್ತದೆ.

ಆ ದಿನಕ್ಕಾಗಿ ತರಾವೇರಿ ಸಿದ್ಧತೆ ನಡೆದಿರುತ್ತದೆ. ವಾರಕ್ಕೆ ಮೊದಲೇ ಎಲ್ಲರಿಗೂ ಪತ್ರವೇ ಇಲ್ಲದ ಆಹ್ವಾನ ಪತ್ರಿಕೆ ರವಾನೆಯಾಗಿರುತ್ತದೆ. ಪಾರ್ಟಿ ಕೊಡಿಸುವ ಪಾರ್ಟಿಗಳದೇ ಜವಬ್ದಾರಿ. ಎಲ್ಲಿ ಬೇಕು ಎಂಬುದನ್ನು ಗುಂಪು ನಿರ್ಧರಿಸುತ್ತದೆ. ಯಾರ್ಯಾರನ್ನು ಕರೆಯಬೇಕು ಎಂಬುದನ್ನು ಹೊಸ್ಟ್ ನಿರ್ಧರಿಸಬೇಕು. ಪಾರ್ಟಿಗೆ ಬರುವುದು ಗುಂಪಿಗೆ ಬಿಟ್ಟ ವಿಷಯ!

ಪಾರ್ಟಿ ಅಂದರೇ ಅದರ ಗಮ್ಮತ್ತೇ ಬೇರೆ. ಜೊತೆಗಾರರೆಲ್ಲ ವಾರದ, ತಿಂಗಳ ಜಂಜಾಟವನ್ನು ಒಂದು ಮೂರು ಗಂಟೆ ಮರೆತು ಕೇವಲ ಮಜಾ ಮಾಡಿ ಬರುವುದು ಮಾತ್ರ !

ಯೋಚನೆಗೆ, ಸುಸ್ತಿಗೆ ಗೋಲಿ ಮಾರ್! ಹೌದು ಈ ರೀತಿಯ ಸ್ಪೀರಿಟ್ ಕೊಡುವ ಪಾರ್ಟಿಗಳು ಯುವಕ ಯುವತಿಯರಿಗೆ ಒಯಸಿಸ್ ಇದ್ದಂತೆ. ಬಾಳಿನ ಅದೇ ಜೀವನ ಚಕ್ರಕ್ಕೆ ತೈಲ ಬಿಟ್ಟಂತೆ. ಪುನಃ ಮುಂದಿನ ಎಂದೋ ಬರುವ ಪಾರ್ಟಿಯ ದಿನಗಳವರೆಗೂ ಜೀವ ಕೊಡುವ ಜಲವಿದ್ದಂತೆ.

ಇಂಥ ಪಾರ್ಟಿಗಳು ನಗರದ ಮಂದಿಯ ಮನ ಗೆದ್ದ ಸಡಗರದ ಕ್ಷಣಗಳು. ಎಂದು ಮರೆಯಲಾರದ ಕಾಪಿಟ್ಟ ಸಮಯ ಎಂದರೇ ತಪ್ಪಲ್ಲಾ!

ಒಮ್ಮೊಮ್ಮೆ ಒಂದೇ ಪಾರ್ಟಿಯನ್ನು ಒಬ್ಬರಿಗಿಂತ ಇಬ್ಬರೂ ಹೊಸ್ಟ ಮಾಡುವ ಸಂದರ್ಭವು ಉಂಟು. ಏನೂ ಮಾಡಲು ಸಾಧ್ಯವಿಲ್ಲ. ಒಟ್ಟಿಗೆ ಶೇರ್ ಮಾಡಿ ಪಾರ್ಟಿ ಕೊಟ್ಟರೆ ಆಯ್ತು ಅಷ್ಟೇ.

ಪ್ರೈಡೇ ಅಂದರೇ ಕೇಳುವುದೇ ಬೇಡ ಪ್ರಸಿದ್ಧವಾದ ಎಲ್ಲಾ ರೆಸ್ಟೊರೆಂಟ್ ಗಳು ಸಂಜೆಯಿಂದಲೇ ತುಂಬಿ ತುಳುಕುತ್ತಿರುತ್ತವೆ. ಒಬ್ಬೊಬ್ಬರಾಗಿ ಪಾರ್ಟಿಗೆ ಬರಲಾರಂಬಿಸುತ್ತಾರೆ. ಹೊಸ್ಟ್ ಗಳು ಮುಂಚೆ ಹೋಗಿ ಟೇಬಲ್ ಬುಕ್ ಮಾಡಬೇಕು. ಪ್ರತಿಯೊಬ್ಬರಿಗೂ ಪುನಃ ಕಾಲ್ , ಮೇಸೆಜ್ ಮಾಡಿ ಕನಪರ್ಮ್ ಮಾಡಿಕೊಳ್ಳಬೇಕು.

ಏ ಸ್ಟಾರ್ಟ್ ಮಾಡಿದ್ದೀಯಾ ಎನ್ನಬೇಕು. ಬರುವವರು ಕಾಲ್ ಮಾಡಿ ಮಿನಿಟ್ ಮಿನಿಟ್ ಅಪ್ ಡೇಟ್ ಕೊಡುತ್ತಾರೆ. ಆನ್ ದಿ ವೇ ಅನ್ನುತ್ತಾರೆ. ಬರಲಾರದವರೂ ಏನಾದರೂ ಕುಂಟು ನೆಪ ಹೇಳಿ ಕೈ ಕೊಡುತ್ತಾರೆ. ಕೊಟ್ಟ ಉತ್ತರಗಳನ್ನು ಪಾರ್ಟಿ ಮುಗಿಯುವರೆಗೂ ಮುಗಿದ ಮೇಲು ಮೆಲಕು ಹಾಕಿ ಕಾಲು ಗೆಳೆಯನ ಎಳೆಯುತ್ತಾರೆ. ಯಾಕಾದರೂ ಪಾರ್ಟಿ ತಪ್ಪಿಸಿಕೊಂಡೇ ಎಂದು ಬರಲಾರದವನೂ ಪರಿತಪಿಸುವಂತಾಗುತ್ತದೆ.

ಪಾರ್ಟಿ ಟೆಬಲ್ ಗೆ ಬಂದಾಗ ಅಲ್ಲಿ ಬೇದ ಭಾವ ಏನೂ ಇಲ್ಲ. ಮೇನು ಬಂದಂತೆ ಒಬ್ಬೊಬ್ಬರೆ ಬರಲಾರಂಬಿಸಿ ಪೂರಾ ಟೇಬಲ್ ತುಂಬಿಸುತ್ತಾರೆ. ವೇಯಟರ್ ಲೋಟ ತುಂಬಿಸುತ್ತಾನೆ. ಅವರ ಅವರಲ್ಲಿಯೇ ಉಭಯ ಕುಶುಲೊಪರಿಯಾಗುತ್ತದೆ. ಏನೇನೂ ಆರ್ಡರ್ ಮಾಡಬೇಕು ಎಂದು ಒಬ್ಬೊಬ್ಬರಿಂದ ಪ್ರಾರಂಭವಾಗುತ್ತದೆ.

ಸೋ ಪಾರ್ಟಿಯ ಪ್ರಥಮ ಘಟ್ಟಕ್ಕೆ ಬಂದು ನಿಂತಿರುತ್ತಾರೆ. ಗೆಳೆಯರ ಬಂಧ ಆ ರೀತಿ. ಪ್ರತಿಯೊಬ್ಬರಿಗೂ ಎಲ್ಲಾ ಸರ್ವ್ ಆಗುವವರೆಗೂ ಎಲ್ಲಾರೂ ಕಾಯುತ್ತಾರೆ. ಪ್ರತಿಯೊಬ್ಬರೂ ಮತ್ತೊಬ್ಬರನ್ನು ತುಂಬ ಕೇರ್ ಮಾಡುವ ಜಾಗ ಅಂದರೇ ಇಂಥ ಪಾರ್ಟಿಗಳು. ಪ್ರತಿಯೊಬ್ಬರೂ ತುಂಬ ದಾರಾಳ ಮನೋಭಾವ ಪ್ರದರ್ಶಿಸುವುದು ಇಲ್ಲಿಯೇ!

ನೋಡಿ ಹಾಗೆಯೇ ಕಣ್ಣು ಮನ ತುಂಬಿಬಿಡುತ್ತದೆ.

ಇದು ಪಕ್ಕ ಐ ಟೆಕ್ ಪಾರ್ಟಿ ಎಂದು ಮಾತ್ರ ಭಾವಿಸಬೇಡಿ! ಅವರವರ ಸ್ಥಿತಿಗೆ ಅನುಗುಣವಾಗಿ ಇದೆ ರೀತಿಯ ಸಾಮಾನ್ಯ ಅಸಮಾನ್ಯ ಪಾರ್ಟಿಗಳು ಏರ್ಪಾಡು ಆಗುತ್ತವೆ.

ಗಂಡು ಹೆಣ್ಣು ಸೋಷಿಯಲ್ ಆಗಿ ಬಾಗವಯಿಸುವ ಔತಣಕೊಟಗಳುಂಟು, ಕೇವಲ ಗಂಡು ಸ್ನೇಹಿತರ ಮಾತ್ರ ಗುಂಪಾಗಿ ಏರ್ಪಡಿಸುವ ಪಾರ್ಟಿಗಳುಂಟು. ಅದು ಅವರ ಪ್ರೇಂಡ್ಸ್ ಸರ್ಕಲ್ ಮೇಲೆ ನಿರ್ಧರಿಸುತ್ತದೆ.

ಹಾಗೆಯೇ ಚಿಯರ್ಸ್ ಮೊಲಕ ಪ್ರಾರಂಭವಾಗುವ ಕುಡಿತ, ಮಾತು -ಕತೆ, ಸ್ವಲ್ಪ ಖಾರ, ಸ್ವಲ್ಪ ಸಿಹಿಯಾಗಿ ಹಿರುತ್ತಾ ಹಿರುತ್ತಾ ತರಾವೇರಿ ವಿಷಯಗಳನ್ನು ಎಕ್ಸ್ ಚೆಂಜ ಮಾಡಿಕೊಳ್ಳುತ್ತಾ ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಾರೆ. ಇಲ್ಲಿ ಯಾವುದೇ ವಿಷಯಗಳಿಗೆ ಗಡಿ ಇಲ್ಲ. ಕಷ್ಟ ಸುಖ ಪ್ರತಿಯೊಂದನ್ನು ಪ್ರತಿಯೊಬ್ಬರೊಂದಿಗೆ ಹಂಚಿಕೊಳ್ಳುತ್ತಾರೆ.

ಒಂದು ರೌಂಡ್ ಸ್ಟಾಟ್ರಸ್ ಗಳೊಂದಿಗೆ ಮುಗಿದು, ಮತ್ತೊಂದು ರೌಂಡ್ ಇನ್ನೊಂದು ಸ್ಟಾಟ್ರ್ ಸ್ ಗಳೊಂದಿಗೆ ಅಣಿಯಾಗುತ್ತದೆ.

ಕುಡಿಯದೇ ಇರುವವರನ್ನು ಸ್ವಲ್ಪ  ಟೀಜ್ ಮಾಡುತ್ತಾರೆ. ನೀನು ಬದುಕಿರುವುದೇ ವೇಸ್ಟ್ ಅನ್ನುವ ಮಟ್ಟಿಗೆ ಟಂಪ್ಟ್ ಮಾಡುತ್ತಾರೆ. ಕುಡಿ ಮಗಾ ಜಸ್ಟ್ ಟೇಸ್ಟ್ ಮಾಡು ಅನ್ನುತ್ತಾರೆ.

ಲಾಸ್ಟ್ ಟೈಮ್ ಆ ಡ್ರಿಂಕ್ಸ್ ರೀತಿ ಇದು ಇಲ್ಲಾ. ಈ ರೀತಿಯ ಡ್ರಿಂಕ್ಸ್ ಹೀಗೆ ಹೀಗೆಲ್ಲಾ ಮಾಡುತ್ತಾರೆ. ಇದು ಮಸ್ತ್. ಜೀವನದಲ್ಲಿ ಒಮ್ಮೆ ಕುಡಿಯಬೇಕು. ಇಲ್ಲಾ ನನಗೆ ಅದೆಲ್ಲಾ ಹಿಡಿಸುವುದಿಲ್ಲ. ಈ ಡ್ರಿಂಕ್ಸ್ ಈ ರೀತಿಯೇ ಕುಡಿಯಬೇಕು. ಇದು ಅಪರೂಪ. ಇದು ಇವತ್ತು ಸಿಕ್ತು,... ಎಂದು ತಾವು ಕುಡಿಯುತಿರುವ ಅಮೃತದ ಬಗ್ಗೆ ಬಂಗಾರದಂತ ಮಾತುಗಳನ್ನು ಆಡುತ್ತಾರೆ.

ಆ ಬ್ರಹ್ಮನೇ ಇವರ ಮಾತುಗಳನ್ನು ಕೇಳಿ ತಲೆದೂಗಬೇಕು.

ಏನೂ ಮಾಡುವ ಆಗಿಲ್ಲ! ಈ ಮಾತುಗಳೆಲ್ಲಾ ತುಂಬ ತೂಕದ ಮಾತುಗಳು.

ಹೀಗೆಯೇ ಕೊಂಚ ಪಾರ್ಟಿ ಟೈಟ್ ಆಗುತ್ತದೆ. ಕೆಲವರು ಕೊಂಚ ಹೀಗೆ ಜಾಗ ಸಡಿಲ ಮಾಡಿಕೊಂಡು ಹಾಗೆಯೇ ಸುತ್ತಾ ಒಂದು ನೋಟ ಬೀರಿ ಟ್ಯಾಂಕ್ ಖಾಲಿ ಮಾಡಿಕೊಂಡು ಬರುತ್ತಾರೆ.

ಮೈನ್ ಕೋರ್ಸ್ ಗೆ ಅರ್ಡರ್ ಹೋಗುತ್ತದೆ. ಜೋತೆಯಲ್ಲಿಯೇ ಹೊಸ ರೀತಿಯ ಡ್ರಿಂಕ್ಸ್ ನ್ನು ತರಿಸಲು ಸಿದ್ಧರಾಗುತ್ತರೆ.

ಕ್ಯಾಪಸಿಟಿ ಇರುವವರು ಆಯ್ತು ಅನ್ನುತ್ತಾರೆ. ಇಲ್ಲದವರು ನಾನು ಏನಾದರೂ ತಿಂದರೇ ಮುಗಿಯಿತು ನನ್ನ ಕೋಟಾ ಅನ್ನುತ್ತಾರೆ. ಹಾಗೆ ಅಂದವನ ಜನ್ಮ ಜಾಲಾಡುವ ಮಾತುಗಳು ಶುರು ಗೆಳೆಯರ ಬಳಗದಲ್ಲಿ. ಏನೋ ಇದು ಎರಡೇ ರೌಂಡ್ ಗೆ ಔಟ್! ಇಷ್ಟೇ ನಿನ್ನ ಪವರ್ ಅನ್ನುತ್ತಾರೆ. ಇವನಿಗೂ ಏನೂ ಹೇಳಲಾರದ ತಳ ಮಳ! ನೀನು ಏನೂ ನಿನ್ನ ಮನೆಯವರಿಗೆ ಹೆದರಬೇಡ ಗೊತ್ತಾಗದ ರೀತಿಯಲ್ಲಿ ನಿನ್ನ ಮನೆಗೆ ತಲುಪಿಸುತ್ತಿವೆ, ಹೇಗೂ ನಾಳೆ ನಾಡಿದ್ದು ರಜೆ.. ಇತ್ಯಾದಿ ಇತ್ಯಾದಿ ಮೋಟಿವೇಟೆಡ್ ಮಾತುಗಳಿಂದ ಇನ್ಸ್ ಪೈರ್ ಮಾಡುತ್ತಾರ. ಕೊನೆಗೆ ಆಯ್ತು ಅನ್ನುತ್ತಾನೆ ಸುಸ್ತಾದ ಈ ಗೆಳೆಯ.

ಹೀಗೆ ಮಾತು ಮಾತು ನಡೆಯುತ್ತಾ ಮೂರನೆ ರೌಂಡ್ ಮತ್ತು ಮೈನ್ ಕೋರ್ಸ್ ಮುಗಿಯುವ ಹೊತ್ತಿಗೆ ಎಲ್ಲಾರ ಕಣ್ಣು ಎಣ್ಣೆ ಹೊಡೆದವರಂತಾಗಿರುತ್ತದೆ. ಕುಡಿಯದೇ ಇರುವ ಒಂದೇರಡು ಮಿತ್ರರು ಇವರ ಮುಖಗಳನ್ನು ನೋಡಿ ಒಳ ಒಳಗೆ ನಗಲಾರಂಬಿಸುತ್ತಾರೆ.

ಕುಡಿದ ಮಿತ್ರರೂ ನನ್ನ ಪಾಲಿಗೆ ದೇವರ ಸಮಾನ! ಯಾಕೆಂದರೇ ಅವರು ಪರಸ್ಪರ ಒಬ್ಬೊಬ್ಬರ ಬಗ್ಗೆ ಎಷ್ಟೊಂದು ಕಾಳಜಿ ವಯಿಸುತ್ತಾರೆ ಎಂದರೇ ಅವರ ಹೃದಯವೇ ಬಾಯಲ್ಲಿ ಇರುತ್ತದೆ ಅನಿಸುತ್ತದೆ. ಕುಡಿ ಮಗಾ, ನೀನು ಏನು ತಿನ್ನಲೇ ಇಲ್ಲ. ಏಯ್ ಇವನು ಯಾಕೊ ಏನು ಮಾತಡ್ತಿಲ್ಲಾ! ಏಯ್ ಇವನು ಪಾಪ ಇದನ್ನು ಟೆಸ್ಟ್ ಮಾಡಲಿಲ್ಲ. ಇನ್ನು ಸ್ವಲ್ಪ ತಿನ್ನು.. ಇತ್ಯಾದಿ ಇತ್ಯಾದಿ ಮನ ತಟ್ಟುವಂತೆ ಮಾತಾಡುತ್ತಾರೆ.

ಗಂಟೆ ಎಂಬುದು ಯಾರನ್ನೂ ಕಾಯುವುದಿಲ್ಲ. ಗಡಿಯಾರದ ಮುಳ್ಳು ಅದರ ಪಾಡಿಗೆ ಅದು ಓಡುತ್ತಿರುತ್ತದೆ. ಸೋ ಇವರಿಗೆ ಅದು ಮನೆ, ಮನೆಯಲ್ಲಿ ತಮಗಾಗಿ ಕಾಯುತ್ತಿರುವವರನ್ನು ನೆನಪಿಸಿಕೊಡುವುದರಿಂದ ಕಷ್ಟಪಟ್ಟು ಮನೆಯ ಕಡೆ ತೆರಳಬೇಕಾಗಿ ತಮ್ಮ ಪಾರ್ಟಿಗೆ ದಿ ಎಂಡ್ ಕೊಡಲು ಶುರು ಮಾಡುತ್ತಾರೆ...

ಈ ರೀತಿಯ ಜಗವನ್ನೇ ಮರೆತು ತಮ್ಮ ಮನದ ಎಲ್ಲಾ ನೋವು ನಲಿವುಗಳನ್ನು ಜಯಿಸಿ. ಆ ಜಾಗದಲ್ಲಿ ಇರುವಷ್ಟು ಕ್ಷಣಗಳನ್ನು ಸ್ವರ್ಗದಲ್ಲಿ ಇರುವಂತೆ ಬಾವಿಸಿ. ಒಂದೊಂದು ಹನಿಯನ್ನು ಸೆವಿಸಿದಾಗ ಅಮೃತವನ್ನೇ ಕುಡಿದಷ್ಟು ಖುಷಿಪಟ್ಟು. ಮಮ್ಮಲು ಮರುಗುತ್ತಾ. ಏನೋ ಕನಸು ಕಾಣುತ್ತಾ ಹೇಗೋ ಮನಗೆ ತಲುಪಿ. ಮಾರನೆಯ ಮದ್ಯಾನದವರೆಗೂ ಹಾಸಿಗೆಯಲ್ಲಿಯೇ ಸುಖಪಡುವ ಮಂದಿಗಳು ನಾವು, ಸಾಮಾನ್ಯ ಜನಗಳು ಎಂದು ಆನಂದಪಡುತ್ತಾರೆ.

ಮತ್ತೇ ಸೋಮವಾರ ಮುಂದಿನ ಪಾರ್ಟಿ ಬಗ್ಗೆ ಪ್ಲ್ಯಾನ್ ಮಾಡಬೇಕು ಗುರೂ..ಬರ್ಲಾ?

ಭಾನುವಾರ, ಜನವರಿ 17, 2016

ಮಗುವೇ ಅಬ್ಬಾ ಸಾಕು

ಮಗು ತನ್ನ ಪ್ರಾಮುಖ್ಯತೆಯನ್ನು ಮನೆಯಲ್ಲಿ ತನ್ನಷ್ಟಕ್ಕೆ ತಾನೆ ಪ್ರತಿಷ್ಠಾಪಿಸಿಕೊಂಡಿರುತ್ತದೆ. ಅದು ಏನೇ ಮಾಡಿದರೂ ಸುತ್ತಲು ಇರುವವರು ಅದನ್ನು ಗಮನಿಸಿ ಒಂದು ಚೂರು ಪ್ರಕ್ರಿಯಿಸಲಿ ಎಂದು ಬಯಸುತ್ತದೆ. ಅದು ತನ್ನ ಐಡಂಟಿಟೆಯನ್ನು ಪ್ರತಿ ನಡೆಯಲ್ಲೂ ಮನನ ಮಾಡಿಕೊಳ್ಳುತ್ತದೆ

ಯಾರಾದರೂ ಅದರ ಕಡೆ ಗಮನ ಕೊಡಲಿಲ್ಲ ಎಂದರೇ ಅದೇ ರೂಯ್ ಅಳು ಶುರು ಮಾಡಿಕೊಳ್ಳುತ್ತದೆ. ಅತ್ತರೆ ತಾನೆ ಹಾಲು ಕುಡಿಸುವುದು! ಈ ಒಂದು ಜಾಣ್ಮೆಯನ್ನು ಮಗು ತಾನು ಹುಟ್ಟಿದ ದಿನದಿಂದ ಗೊತ್ತು ಮಾಡಿಕೊಂಡಿರುತ್ತದೆ.

ಅಳುವುದರ ಮೊಲಕ ಏನೇನೂ ಬೇಕೋ ಎಲ್ಲಾ ತನ್ನದಾಗಿಸಿಕೊಳ್ಳುತ್ತದೆ. ಅಳುವುದೇ ಅದರ ಮೊದಲ ಭಾಷೆ. ಮಗುವಿನ ಅಳುವಿಗೆ ಹೆದರದೇ ಇರುವುವರು ಯಾರು ಇಲ್ಲಾ!

ಅದು ಯಾವಾಗಲೂ ನಗು ನಗುತ್ತಾ ತನ್ನ ಪಾಡಿಗೆ ತಾನು ಆಡಿಕೊಂಡಿದ್ದರೇ ಸಾಕು ಎನ್ನುವುದೇ ಎಲ್ಲಾ ಹೆತ್ತವರ ಆಸೆ ಪಾಸೆ!

ಅದು ಪ್ರತಿಯೊಂದನ್ನು ತನ್ನ ಸುತ್ತಲಿನವರನ್ನು ನೋಡಿ ಕಲಿಯುತ್ತದೆ. ಪ್ರತಿ ನೋಟವೂ ಹೊಸದು ಮತ್ತು ಸವಾಲಿನದ್ದೂ. ಅದು ಪ್ರತಿಯೊಂದನ್ನೂ ತಾನು ಮಾಡಬೇಕು. ಮಾಡಿದ ಅನಂತರ ಅದು ಸರಿ ಇದೇಯೋ ಇಲ್ಲವೋ ಎಂಬುದನ್ನು ಮನೆಯಲ್ಲಿರುವವರ ಪ್ರತಿಕ್ರಿಯೆಯ ಮೊಲಕ ಪಕ್ಕ ಮಾಡಿಕೊಳ್ಳಬೇಕು.

ತನ್ನವರು ಮೆಚ್ಚಿದರೇ ಓ ಸರಿಯಾಗಿ ಮಾಡಿದೆ ಎಂದುಕೊಳ್ಳುತ್ತದೆ. ಅದು ತಾನು ಮಾಡಿದ್ದನ್ನೇ ಪುನಃ ಪುನಃ ಮಾಡುತ್ತದೆ ಮತ್ತು ತನ್ನ ನೋಡುಗಗರ ಮುಖದ ಮೇಲಿನ ಗೆರೆಯಲ್ಲಿಯೇ ಪಕ್ಕಾ ಮಾಡಿಕೊಳ್ಳುತ್ತದೆ.

ಇಂದಿನ ಮಕ್ಕಳು ತುಂಬ ಪಾಸ್ಟ. ಮನೆಯಲ್ಲಿ ಯಾರು ಏನನ್ನೂ ಮಾಡುತ್ತಾರೋ, ಯಾರು ಏನನ್ನು ನೋಡುತ್ತಾರೋ, ಯಾರು ಏನನ್ನು ಉಪಯೋಗಿಸುತ್ತಾರೋ ಅದೇ ಅದಕ್ಕೂ ಬೇಕು. ಅದು ಬಿಲ್ ಕೂಲ್ ನಾನು ಚಿಕ್ಕವನು/ಳು ಅದು ನನ್ನದಲ್ಲಾ ಎಂದು ಹಿಂಜರಿಯುವುದಿಲ್ಲ. ಅದು ತನ್ನನ್ನು ತಾನು ಎಲ್ಲಾ ತಿಳಿದಿರುವನು ಎಂದುಕೊಳ್ಳುತ್ತದೆ. ತಾನು ಯಾಕೆ ಅವರು ಮಾಡುವ ರೀತಿ ಮಾಡಬಾರದು ಎಂದುಕೊಳ್ಳುತ್ತದೆ. ತಾನು ಒಂದು ಕೈ ಯಾಕೇ ಪ್ರತ್ನಿಸಬಾರದು? ಎಂದು ಪ್ರತಿಯೊಂದನ್ನು ಅಳುವುದರ ಮೊಲಕ ಜೋರು ಮಾಡಿ ಮಾಡಿ ದಕ್ಕಿಸಿಕೊಳ್ಳುತ್ತದೆ.

ಅಮ್ಮ ಮಾಡುವ ಅಡಿಗೆಯ ಸಾಮಾನುಗಳು, ಅಪ್ಪ ಕೆಲಸ ಮಾಡುವ ಲ್ಯಾಪ್ ಟಾಪ್, ಅಣ್ಣ ಉಪಯೋಗಿಸುವ ಸೆಲ್ ಪೋನ್, ಅಜ್ಜ ಉಪಯೋಗಿಸುವ ನಸ್ಯಾ ಡಬ್ಬಿ, ಅಂಟಿ ಉಪಯೋಗಿಸುವ ಅಲಂಕಾರದ ವಸ್ತುಗಳು. ಹೀಗೆ ಕಣ್ಣಿಗೆ ಬೀಳುವ ಏನನ್ನು ನನಗೇ ಬೇಡ ಎಂದು ಯಾವೊತ್ತೂ ಹೇಳುವುದಿಲ್ಲ.

ಎಲ್ಲದ್ದೂ ಬೇಕು ಬೇಕು ಎಂಬ ದಾಹ ಮಗುವಿನದೂ.

ನಾವಾಡುವ ಪ್ರತಿಯೊಂದು ಶಬ್ಧವನ್ನು ಜಾಗರೂಕತೆಯಿಂದ ಆಲಿಸುತ್ತದೆ. ಅದನ್ನೇ ಕೆಲವೇ ಕ್ಷಣಗಳಲ್ಲಿ ಮಾತನಾಡಲು ಪ್ರಯತ್ನಿಸುತ್ತದೆ. ಅದಕ್ಕೆ ಹೇಳುವುದು ನಮ್ಮ ಮಕ್ಕಳು ಏಕ್ ದಮ್ ನಮ್ಮ ಜೇರಾಕ್ಸ್ ಗಳು. ಪ್ರತಿಯೊಂದನ್ನು ಕಾಫಿ ಮಾಡಲು ಪ್ರಯತ್ನಿಸುತ್ತವೆ.  ಅನುಕರಣೆಯಲ್ಲಿ ಮಕ್ಕಳನ್ನು ಯಾರೂ ಬೀಟ್ ಮಾಡಲು ಸಾಧ್ಯವಿಲ್ಲ!

ಮಕ್ಕಳ ಈ ಹಟ ನೋಡಿದರೇ ಹಿರಿಯರಾದ ನಮಗೆ ಒಮ್ಮೊಮ್ಮೆ ದಿಗಿಲಾಗುತ್ತದೆ. ಇನ್ನೂ ಜಾಸ್ತಿಯಾದರೇ ಸಿಟ್ಟು ಬರುತ್ತದೆ. ಅವುಗಳಿಗೆ ತಿಳುವಳಿಕೆ ಹೇಳಲು ಆಗುವುದಿಲ್ಲ. ಹೇಳಿದರೇ ಅವುಗಳು ಕೇಳುವುದಿಲ್ಲ. ಏನೂ ಮಾಡೋಣ ಎಂದು ದಿಕ್ಕೇ ತೋಚದೆ ಮನದಲ್ಲಿ ಸಿಟ್ಟು, ನಗು, ಸಂತೋಷ, ದುಃಖ ಎಲ್ಲಾ ಎಮೋಷನ್ ಗಳು ಒಟ್ಟಿಗೆ ಬಂದು ನಮ್ಮನ್ನೇ ತತ್ತರಿಸುವಂತೆ ಮಾಡುತ್ತವೆ.

ಮೂರ್ತಿ ಚಿಕ್ಕದಾದರೂ ಅವುಗಳು ಮಾಡುವ ತರಲೆಗಳು ಆ ದೇವರಿಗೆ (ನಮಗೂ) ಪ್ರೀತಿ. ಒಮ್ಮೊಮ್ಮೆ ಹೆಮ್ಮೆಯಾಗುತ್ತದೆ. ಅವುಗಳ ಮುದ್ದು ನೋಡಿ ಕಣ್ಣಾಲಿಗಳು ತುಂಬಿ ಬರುತ್ತದೆ. ಅವುಗಳ ತೂದಲು ಮಾತುಗಳನ್ನು ನೋಡಿ ಎಷ್ಟೊಂದು ಆನಂದವಾಗುತ್ತದೆ. ಒಮ್ಮೊಮ್ಮೆ ಅವುಗಳ ಅಚ್ಚ ಹಸಿರು ಕಣ್ಣಾಲಿಗಳನ್ನು ನೋಡಿ ಹಾಗೆಯೇ ಕಚ್ಚಿ ತಿನ್ನೋಣ ಅನಿಸುತ್ತದೆ.

ಅದರೂ ಅವುಗಳು ಒಮ್ಮೊಮ್ಮೆ ರಚ್ಚೆ ಹಿಡಿದಾಗ ಅಬ್ಬಾ ಅಬ್ಬಾ ಸಾಕಪ್ಪಾ ಈ ಮಕ್ಕಳ ಸಹವಾಸ ಅನಿಸುತ್ತದೆ. ಒಂದೇ ಇಷ್ಟೊಂದು ಗೋಳು ಹೋಯ್ದುಕೊಳ್ಳುತ್ತೇ. ಹಿಂದೆ ೧೦-೧೪ ಮಕ್ಕಳನ್ನು ಆ ಅಮ್ಮಂದಿರು ಅದು ಹೇಗೆ ಸಂಬಾಳಿಸಿದ್ದರಪ್ಪಾ ?

ಅವರಿಗೆ ಒಂದು ದೋಡ್ಡ ನಮಸ್ಕಾರಗಳು ಅನಿಸುತ್ತದೆ.

ನಾವುಗಳೇ ಒಂದು ಮಗುವಿಗೆ ಸುಸ್ತಾಗಿರುವುದು. ಇಲ್ಲಿಯ ಅಮೆರಿಕಾದಲ್ಲಿ ಅಬ್ಬಾ ಒಂದು ಮಗುವಿನ ಸಂಸಾರ ಇಲ್ಲವೇ ಇಲ್ಲಾ. ಏನಿದ್ದರೂ ಅವಳಿ ಜವಳಿ ಅಥವಾ ಮಿನಿಮಮ್ ಎರಡು ಮಕ್ಕಳಿರುತ್ತವೆ. ಆದರೂ ಅವುಗಳ ಸಂಬಾಳನೇ ಗಂಡ ಹೆಂಡತಿ ಇಬ್ಬರೆ ಈಜೀಯಾಗಿ ಮಾಡುತ್ತಾರೆ. ಶಾಪೀಂಗ್, ಆಸ್ಪತ್ರೆ ಇತ್ಯಾದಿಯನ್ನು ಹೆಂಡತಿಯೊಬ್ಬಳೆ ಆರಾಮಾಗಿ ನಿಭಾಯಿಸಿಕೊಂಡು ಹೋಗುವುದನ್ನು ಕಂಡು ನಾನಂತೂ ಪೂರ್ತಿ ಅಚ್ಚರಿಯಲ್ಲಿ ಮುಳುಗಿದ್ದೇನೆ.

ನಮ್ಮಲ್ಲಿ ಒಂದು ಚಿಕ್ಕ ಮಗುವಿದ್ದರೇ ಅದನ್ನು ಎಲ್ಲಾದರೂ ಹೊರಗೆ ಕರೆದುಕೊಂಡು ಹೋಗಬೇಕು ಎಂದರೇ ಎಷ್ಟೊಂದು ತಯಾರಿ ಮಾಡಿಕೊಂಡು ನಾನು, ನನ್ನ ಯಜಮಾನರು, ನನ್ನ ತಾಯಿ ಹೀಗೆ ಪೂರ್ತಿ ಜಾತ್ರೆಯೇ ಹೋರಡುತ್ತದೆ.

ಆದರೇ ಇಲ್ಲಿಯ ಜನ ಇಷ್ಟೊಂದು ಸಿಂಪಲ್ ಆಗಿ ಮಕ್ಕಳನ್ನು ಹ್ಯಾಂಡಲ್ ಮಾಡಲು ಅದು ಹೇಗೆ ಸಾಧ್ಯ?

ಹೀಗೆ ಹೇಳಿದ್ದಕ್ಕೆ ನಮ್ಮ ಹಳ್ಳಿಯಲ್ಲೂ ಹೀಗೆ ಮಕ್ಕಳು ಎಂದು ಯಾರು ಭಯಪಡುವುದಿಲ್ಲಮ್ಮಾ, ಸ್ವಲ್ಪ ಬಾಯಿ ಮುಚ್ಚಿಕೋ... ಎಂದು ಬೈಯ್ ಬೇಡಿ!

ನನಗೆ ಅನಿಸುವುದೇನೆಂದರೇ ವಿನಕಾರಣ ಈ ಎಲ್ಲಾ ಸಂಗತಿಗಳಿಗೆ ನಗರದ ನನ್ನಂಥ ಜನಗಳು ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತೇವೆ. ಯಾವುದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು, ನಡೆದುಕೊಳ್ಳಬೇಕು ಎಂಬುದನ್ನೇ ಮರೆತಿದ್ದೇವೆ. ಪ್ರತಿಯೊಂದನ್ನೂ ಹೆಚ್ಚು ಮುತುವರ್ಜಿಯಲ್ಲಿ ನಡೆಸಲು ಹೋಗಿ ಅದೇ ಹೆಚ್ಚು ತಲೆ ನೋವಿನ ವಿಷಯವಾಗಿರಬೇಕು.

ಮಕ್ಕಳನ್ನು ಹೇಗೆ ಕಾಪಾಡಬೇಕು. ಹೇಗೆ ಉತ್ತಮ ಪೇರೆಂಟ್ ಆಗಿರಬೇಕು. ಹೇಗೆ ಮಕ್ಕಳನ್ನು ನೋಡಿಕೊಳ್ಳಬೇಕು ಹೀಗೆ ಪ್ರತಿಯೊಂದನ್ನೂ ಓದಿ ಕಲಿತು, ತರಬೇತಿ ಪಡೆದು ನಿರ್ವಹಣೆ ಮಾಡುವ ಮಟ್ಟಿಗೆ ಓದಿದ ಮಂದಿ ಬಂದು ನಿಂತಿದ್ದೇವೆ  ಎಂದರೇ ಅತಿಶಯೋಕ್ತಿಯಲ್ಲ .


ಮುಂದೆ ಆ ಮಗುವಿಗೆ ಕಿಂಡರ್ ಗಾರ್ಡನ್ - ಕಾನ್ವೇಂಟ್, ಅವರನ್ನು ರೇಡಿ ಮಾಡಿ ಶಾಲೆಗೆ ಬಿಡುವುದು ಮತ್ತು ಕರೆದುಕೊಂಡು ಬರುವುದು. ಅವರ ಹೋಂ ವರ್ಕ್ ನಾವು ಮಾಡುವುದು, ಅವರಿಗೆ ನಾವೇ ಕಲಿಸುವುದು.

ಇನ್ನೂ ಮುಂದುವರೆಯುತ್ತಾ ಅವರನ್ನು ಉನ್ನತ ಕಾಲೇಜಿನಲ್ಲಿ ಓದಿಸುವುದು, ಉನ್ನತ ಶಿಕ್ಷಣ ಕೊಡಿಸುವುದು, ಡೋನೆಷನ್, ಪೀಜ್, ಇತ್ಯಾದಿ ಇತ್ಯಾದಿ ಕರ್ತವ್ಯಗಳನ್ನು ಹೆತ್ತವರಾಗಿ ಮಾಡಿ ಮಾಡಿ ಅವರನ್ನು ಒಂದು ಸ್ವಂತ ಕಾಲ ಮೇಲೆ ನಿಲ್ಲುವಂತೆ ಮಾಡುವಷ್ಟರಲ್ಲಿ.. ಉಫ್!

ಸ್ವಾಭಾವಿಕವಾಗಿ ಘಟಿಸುವ ಈ ಜೀವನ ಕ್ರಿಯೆಯನ್ನು, ಜೀವನ ದಾರಿಯನ್ನು ಹತ್ತು ಹಲವು ರೀತಿಯ ಜಂಜಾಟದ ಗಂಭೀರವಾದ ವಿಷಯಗಳನ್ನಾಗಿ ನಾವೇ ಮಾಡಿಕೊಂಡು, ಇದನ್ನೇ ಟೋಟಲಿ ಕಾಂಪ್ಲೀಕೇಟ್ ಆದ ಜೀವನ ಶೈಲಿಯಾಗಿ ಕಾಪಾಡಿಕೊಂಡುಬಿಟ್ಟಿದ್ದೇವೆ ಅನಿಸುತ್ತದೆ..

ಒಂದು ಮಗುವೇ ಅಬ್ಬಾ ಸಾಕು ಎಂಬಂತಾಗಿದೆ ನಮ್ಮಗಳ ಪರಿಸ್ಥಿತಿ. ನಿಜವಾಗಿಯೂ ಅಷ್ಟರ ಮಟ್ಟಿಗೆ ನಮ್ಮಗಳ ಬದುಕು ಬ್ಯುಸಿಯೋ ಬ್ಯುಸಿಯಾಗಿದೆ.

ಯಾವುದಕ್ಕೂ ಸಂಯಮ, ತಾಳ್ಮೆ ಈ ಪದಗಳನ್ನು ಪುನಃ ಯಾವುದಾದರೂ ಕೋರ್ಸ್ ಮೊಲಕ ಕಲಿಯುವಂತೆ ನಮ್ಮ ಮಕ್ಕಳು ಮಾಡುತ್ತಿವೆ.

ಅದಕ್ಕೆ ಹೇಳುವುದು ಒಬ್ಬ ವ್ಯಕ್ತಿಯನ್ನು  ಸರಿಯಾದ ಹಾದಿಗೆ ತರಬೇಕು ಅಥವಾ ಜವಬ್ದಾರಿ ಬರಬೇಕು ಎಂದರೇ ಒಂದು ಮದುವೆ ಮಾಡು. ಹಾಗೆಯೇ ಅವರಿಗೆ ಒಂದು ಮಗುವಾದ ಮೇಲೆ ಒಂದು ಹದಕ್ಕೆ ಅವರೇ ಬರುತ್ತಾರೆ.

ಜೀವನ ಅಂದರೇ ಏನೂ ಅಂಥ ಈ ಬದುಕೇ ಹತ್ತು ಯುನಿವರ್ಸಿಟಿಯಲ್ಲಿ ಕಲಿಯಲಾಗದ್ದನ್ನು ಒಂದು ಮಗು ಮತ್ತು ನಮ್ಮ ಜೀವನದ ಮೊಲಕ ತಿಳಿಸಿಕೊಡುತ್ತದೆ.

ನಿಜವಾ.........?

ಭಾನುವಾರ, ಜನವರಿ 3, 2016

ಹೊಸ ವರುಷ ಮೆಲಕು

೩೬೫ ದಿನಗಳು ಕಳೆದವು ಅಂದರೇ, ಒಂದು ಸಂವತ್ಸರ ಮುಗಿದಂತೆ. ೧೨ ತಿಂಗಳು ಕಳೆದು ಪುನಃ ಹೊಸ ದಿನಗಳ ಲೆಕ್ಕ ಪ್ರಾರಂಭವಾದಂತೆ. ಹೊಸ ವರುಷ ಪುನಃ ನವೀನವಾದ ೩೬೫ ದಿನಗಳನ್ನು ನಮ್ಮ ಬದುಕಿಗೆ ಬರಲಿರುವ ದಿನಗಳಾಗಿ ಕೊಟ್ಟಿದೆ.

ಇದು ಲೆಕ್ಕದ ಮಾತು.

ಅದೇ ಹಗಲು ರಾತ್ರಿ. ಸೂರ್ಯ ಸುತ್ತುವುದು. ಕತ್ತಲಾಗುವುದು. ಈ ಬದುಕು ಏನೂ ಬದಲಾಗದು. ನಾವು ಜೀವಿಸುವ ಬದುಕು ಬದಲಾಗದು. ಅದೇ ಕೆಲಸ ಅದೇ ದುಡಿತ. ಅದೇ ಖುಷಿ ಅದೇ ದುಃಖ.

ಕ್ಯಾಲೆಂಡರ್ ಬದಲಾದಂತೆ ನಮ್ಮ ಬದುಕು ಬದಲಾಗಲಾರದು!

ದಿನಗಳನ್ನು ಯಾರ ಕೈಯಿಂದಲು ಹಿಡಿದಿಡಲು ಸಾಧ್ಯವಿಲ್ಲ! ಕಾಲನ ಚಕ್ರಕ್ಕೆ ಸಿಕ್ಕಂತೆ ಅದು ತನ್ನ ಪಾಡಿಗೆ ತಾನು ಹಳೆದಾಗುತ್ತಾ ಹಳೆದಾಗುತ್ತ ನಿತ್ಯವು ಒಂದೊಂದು ದಿನವು ಹಳೆದಾಗುತ್ತಿರುತ್ತದೆ.

ಆಗಲೇ ಹೊಸ ವರುಷದ ನಾಲ್ಕು ದಿನಗಳು ಹಳೆ ದಿನಗಳಾಗಿವೆ! ಏನೂ ಮಾಡಿದರೂ ಏನನ್ನು ಮಾಡದಿದ್ದರೂ ದಿನಗಳು ಓಡುತ್ತಲೆ ಇರುತ್ತವೆ.

ಒಂದು ವರುಷ ಎನ್ನುವುದು ಪ್ರತಿಯೊಂದು ಜೀವಿಗೂ ದೊಡ್ಡ ಮೊತ್ತದ ಮೈಲಿಗಲ್ಲೇ ಸರಿ!

ಒಂದು ವರುಷದಲ್ಲಿ ಕಂಡ ಖುಷಿ, ನೋವು, ನಲಿವು, ಸೋಲು-ಗೆಲವು, ಲಾಭ - ನಷ್ಟ ಇತ್ಯಾದಿ, ಒಂದೊಂದು ರೀತಿಯಲ್ಲಿ ಒಂದೊಂದು ಇತಿಹಾಸವನ್ನು ಪ್ರತಿಯೊಬ್ಬರಿಗೂ ಅವರವರ ಜೀವನದಲ್ಲಿ ಹೆಜ್ಜೆಯಾಗಿರುತ್ತದೆ.

೩೬೫ ದಿನಗಳ ಪ್ರತಿ ನಿಮಿಷವು ಒಂದಲ್ಲಾ ಒಂದು ರೀತಿಯಲ್ಲಿ ಬಹು ಮುಖ್ಯವಾಗಿರುತ್ತದೆ. ಎಲ್ಲಾರ ಬಾಳಲ್ಲಿ ಅದರ ಛಾಪನ್ನು ಅದು ಒತ್ತೇ ಒತ್ತಿರುತ್ತದೆ.

ಒಂದೊಂದು ಘಟನೆಗಳು ಒಂದೊಂದು ರೀತಿಯಲ್ಲಿ ಮನಸ್ಸೆಂಬ ಮೆಮೊರಿಯಲ್ಲಿ ಅಚ್ಚಾಗಿರುತ್ತದೆ.

ಕೆಲವನ್ನು ಮರೆತರೂ, ಇನ್ನೂ ಕೆಲವು ಏನಂದರೂ ಮಾಸಿರುವುದಿಲ್ಲ. ಅವುಗಳು ಕಾಡುವುವು ಬೇಡುವುವು ನಮ್ಮ ಮನಸ್ಸನ್ನು. ಒಂದಷ್ಟು ಮರೆಯೋಣ ಎಂದರೂ ಮರೆಯಲಾಗುವುದಿಲ್ಲ. ನೆನಸಿಕೊಂಡರೇ ಜೀವವೇ ಒದ್ದೆಯಾಗುತ್ತದೆ ಮತ್ತು ತುಂಬ ನೋವಾಗುತ್ತದೆ. ಒಂದಷ್ಟು ಹೇಗೆ ಮರೆತೆವು ಎಂದು ನೆನಪು ಮಾಡಿಕೊಳ್ಳಲು ಸಾಧ್ಯವಿಲ್ಲ, ಆ ರೀತಿಯಲ್ಲಿ ಪೂರ್ತಿ ಡಿಲಿಟ್ ಆಗಿರುತ್ತದೆ.

ಇವೆಲ್ಲಾ ಕಳೆದ ವರುಷದ ಕೊಡುಗೆಗಳು ಬಿಟ್ಟು ಬಿಡದೆ ನಮ್ಮ ನಮ್ಮ ಬಾಳ ಬಳುವಳಿಗಳು.

ಸಂಬಂಧ, ನೆರೆ ಹೊರೆ, ಜೊತೆಗಾರರು ಇತ್ಯಾದಿ ಸಮಸ್ತ ಹೊಸ ಹೊಸ ಜೀವಗಳನ್ನು ನಮ್ಮೊಡನೆ ನಾವು ಗಳಿಸುತ್ತೇವೆ.

ಅದೇ ರೀತಿಯಲ್ಲಿ ಕಳೆದ ಒಂದು ವರುಷದಲ್ಲಿ ತೀರಾ ಹತ್ತಿರ ಇರುವವರನ್ನು ದೂರ ಮಾಡಿಕೊಂಡಿರುತ್ತೇವೆ. ಒಂದಷ್ಟು ಮಂದಿಯನ್ನು ಪೂರ್ತಿಯಾಗಿ ಕಳೆದು ಕೊಂಡಿದ್ದರೆ, ಇನ್ನೊಷ್ಟು ಮಂದಿಯನ್ನು ತಾತ್ಕಾಲಿಕವಾಗಿ ದೂರ ಮಾಡಿಕೊಂಡಿರುತ್ತೆವೆ.

ಅದು ಇದು ನಮ್ಮ ಕೈಯಲ್ಲಿ ಇರುವುದಿಲ್ಲ ಬಿಡಿ. ಆ ಮೇಲಿನವನು ಆಡಿಸಿದಂತೆ ನಾವುಗಳು ನಾಲ್ಕು ದಿನ ಪಾತ್ರ ಮಾತ್ರ ಮಾಡುವವರು. ಎಂದು ಕೊಂಚವೇ ಕೊಂಚ ನಮ್ಮ ನಮ್ಮ ಮನಸ್ಸಿಗೆ ನಾವೇ ಸಮಧಾನ ಮಾಡಿಕೊಳ್ಳುತ್ತೇವೆ.

ಯಾಕೆಂದರೇ ಈ ಬದುಕು ಯಾರನ್ನು ಯಾರಿಗಾಗಿಯೂ ಯಾವಾಗಲೂ ಕಾಯುವುದಿಲ್ಲ. ಅಷ್ಟೊಂದು ಕಠೋರ ಅನಿಸುತ್ತದೆ!

ಕಾಲವೇ?

ನಿತ್ಯ ನಾವುಗಳೆಲ್ಲಾ ನಮ್ಮ ನಮ್ಮ ಬದುಕಿನ ಅಂತ್ಯಕ್ಕೆ ವರುಷ ವರುಷವೂ ಹತ್ತಿರವಾಗುತ್ತಿದ್ದೇವೆ, ಎಂದು ಒಮ್ಮೊಮ್ಮೆ ಅನಿಸಿದರೂ ಅದು ಸತ್ಯವಲ್ಲಾ ಎಂಬ ರೀತಿಯಲ್ಲಿ ಸಂಭ್ರಮದ ಬದುಕನ್ನು ಕಟ್ಟಿಕೊಂಡು ಬದುಕುತ್ತೇವೆಲ್ಲಾ, ಅದೇ ನಮ್ಮನ್ನು ಇನ್ನು ಜೀವಂತವಾಗಿಟ್ಟಿರುವುದು.

ಮನುಷ್ಯನಿಗೆ ವಿವೇಕ ಬಂದಾಗಿನಿಂದ ಈ ರೀತಿಯ ತೊಯ್ದಾಟ ಮನದ ಮೊಸೆಯಲ್ಲಿ ನಡೆಯುತ್ತಲೇ ಇರುತ್ತದೆ. ಆದರೂ ಅದನ್ನು ಅರಿಯುವ ತಿಳುವಳಿಕೆ ಸೂಕ್ಷ್ಮ ಬರುವುದು ತುಂಬ ದುಬಾರಿಯೆನಿಸುತ್ತದೆ. ಇದನ್ನೇಲ್ಲಾ ಯೋಚಿಸುವಷ್ಟು ಪುರುಸತ್ತು ಯಾರೊಬ್ಬರಿಗೂ ಇರುವುದಿಲ್ಲ. ಯಾಕೆಂದರೇ ಒಂದು ವರುಷಕ್ಕೆ ಇರುವುದು ಅದೇ ೩೬೫ ದಿನಗಳೂ ಮಾತ್ರ.

ಕಾಲಾಯ ತಸ್ಮಾಯಾ: ನಮಾ:!

ಪ್ರಕೃತಿಯು ಕಾಲಕ್ಕೆ ತಕ್ಕಂತೆ ತನ್ನ ಮ್ಯಾಜಿಕ್ ತೋರಿಸುತ್ತಲೇ ಇರುತ್ತದೆ. ಬದಲಾವಣೆ ಜಗದ ನಿಯಮ ಎನ್ನುವುದನ್ನು ದಿನಂಪ್ರತಿ ನಿತ್ಯ ನೋಡುತ್ತಲೇ ಇರುತ್ತೇವೆ. ನಾವುಗಳು ನೋಡಿ ಕಲಿಯಬೇಕು. ಅದನ್ನು ಮೀರಿ ಯಾರು ಇಲ್ಲವೆನ್ನುವುದನ್ನು ಈಗಾಗಲೇ ಪ್ರತಿಯೊಬ್ಬರೂ ಅರಿತಿದ್ದಾರೆ.

ಇರುವಷ್ಟು ದಿನ ಸಂತೋಷದಿಂದ ಇರುವುದನ್ನು ಮತ್ತು ನಮ್ಮ ಜೊತೆಯಲ್ಲಿರುವರೊಡನೆ ಸಹ ಬಾಳ್ವೆಯ ಜೀವನವನ್ನು ಸಾಗಿಸುವುದು ಮಾತ್ರ ನಮ್ಮ ಮಂತ್ರವಾಗಬೇಕು. ಯಾರೊಬ್ಬರೂ ಏನನ್ನು ತಾನು ಅಳಿಯುವ ಸಮಯದಲ್ಲಿ ಹೊತ್ತು ಹೋಗಲಾರರು! ಈ ಸತ್ಯವನ್ನು ಯಾವಗಲೂ ನೆನಪಿಸಿಕೊಂಡರೇ ನಾವುಗಳೂ ಇನ್ನೂ ಉತ್ತಮವಾಗಿ ಹೇಗೆಲ್ಲಾ ಬಾಳಬಹುದು ಎಂಬುದು ಗೊತ್ತಾಗುತ್ತದೆ.