ಭಾನುವಾರ, ಮೇ 17, 2015

ಜಗತ್ತಿನ ಅಣ್ಣ & ಗೊರೂರು

ಅಮೇರಿಕಾದಲ್ಲಿ ಗೊರೂರು ಪುಸ್ತಕ ಓದುವ ದಿನದಿಂದಲೂ ನಮ್ಮ ಜನಗಳಿಗೆ ಅಮೇರಿಕಾ ಎಂದರೇ ಏನೋ ಒಂದು ಆಕರ್ಷಣೆ. ಅದು ಯಾವ ಕಾರಣಕ್ಕೋ ತಿಳಿಯದಾಗಿದೆ. ಅದು ದೂರದ ದೇಶ ಎನ್ನುವುದರಿಂದಲೋ, ಅದು ಮುಂದುವರಿದ ದೇಶ ಎನ್ನುವುದರಿಂದಲೋ, ಅವರ ಡಾಲರ್ ನಮ್ಮ ರೂಪಾಯಿಗಿಂತ ದೊಡ್ಡದು ಎನ್ನುವುದರಿಂದಲೋ! ಗೊತ್ತಾಗುತ್ತಿಲ್ಲ. ಭಾರತೀಯರನ್ನೊಳಗೊಂಡಂತೆ ವಿಶ್ವದ ಎಲ್ಲಾ ಭಾಗದ ಜನಗಳನ್ನು ಒಂದು ಅಯಸ್ಕಾಂತದಂತೆ ಸೆಳೆಯುವ ಶಕ್ತಿ ಈ ದೇಶಕ್ಕೆ ಇದೆ ಎಂದರೇ ತಪ್ಪಾಗುವುದಿಲ್ಲ.

ಇದಕ್ಕೆ ನಿದರ್ಶನ ಎಂದರೇ.. ಅವರು ವರುಷಕ್ಕೆ ಒಮ್ಮೆ ಕೊಡುವ ವೀಸಾಗಳು. ಯಾವೊಂದು ದೇಶಕ್ಕೂ ಇಷ್ಟೊಂದು ಸಂಖ್ಯೆಯ ಆಪ್ಲಿಕೇಷನ್ ಗಳು ಬರುವುದಿಲ್ಲ. ಅದು ಲಾಟರಿಯ ಮೊಲಕ ಆರಿಸುವ ಮಟ್ಟಿಗೆ!!

ಜಗತ್ತಿನ ಅಣ್ಣ ಎನ್ನುವುದನ್ನು ನಾವೆಲ್ಲಾ ಮಾಧ್ಯಮಗಳಲ್ಲಿ ಓದುತ್ತಿರುತ್ತೇವೆ. ಅದು ಅತಿ ಹೆಚ್ಚು ಮುಂದುವರಿದಿರುವ ದೇಶ ಶ್ರೀಮಂತ ದೇಶ ಇತ್ಯಾದಿ ಇತ್ಯಾದಿ. ರಾಜಕೀಯ, ಟೆಕ್ನಾಲಜಿ, ಎಕನಾಮಿ ಪ್ರತಿಯೊಂದರಲ್ಲೂ ನಮ್ಮ ಯುವ ತರುಣರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಪ್ರತಿ ವಿಚಾರದಲ್ಲೂ ಪಸ್ಟ್ ಕ್ಲಾಸ್ ಅನಿಸುವಂತ ದೇಶವಾಗಿದೆ ಎಂದು ಓದಿದ್ದೇವೆ.

ಪ್ರತಿ ಭಾರತೀಯ ತರುಣ ಮನಸುಗಳ ಒಂದೇ ಒಂದು ಆಸೆ. ಅಲ್ಲಿ ಎಂ.ಎಸ್ , ಎಂ.ಬಿ.ಎ ಮಾಡಬೇಕು. ಅಲ್ಲಿ ಒಮ್ಮೆಯಾದರೂ ಕೆಲಸ ಮಾಡಬೇಕು. ಅಲ್ಲಿಯೇ ಕೆಲಸ ಮಾಡುತ್ತಾ ಮಾಡುತ್ತಾ.. ಹೇಗಾದರೂ ಗ್ರೀನ್ ಕಾರ್ಡ ಸಂಪಾಧಿಸಿ ಇಲ್ಲಿಯೇ ನೆಲಸಿಬಿಡಬೇಕು.

ಇದು ನಮ್ಮ ಭಾರತೀಯರ ಕನಸು.

ಅದು ಯಾಕೋ ಭಾರತದಲ್ಲಿರುವವರೆಗೂ ಈ ಒಂದು ಗುರಿಯನ್ನು ಮನಸ್ಸಿನಲ್ಲಿಯೇ ಜೊಪಾನವಾಗಿಟ್ಟುಕೊಂಡು ತಮ್ಮ ಶಿಕ್ಷಣವನ್ನು ಪೂರೈಸಿಕೊಳ್ಳುತ್ತಾರೆ.

ಇಂದು ಅಮೇರಿಕಾ ಎಂಬುದು ಪಕ್ಕದ ಊರು ಎನ್ನುವಂತಾಗಿದೆ.. ಹೀಗೆ ಮಾಡಿದ ಕೀರ್ತಿ ನಮ್ಮ ಎಂ.ಎನ್ಸಿ & ಐ.ಟಿ ಕಂಪನಿಗಳಿಗೆ ಸೇರಬೇಕು. ಇಂದು ಐ.ಟಿ ಅಂದರೇ ಅಮೇರಿಕಾ, ಇದಕ್ಕೆ ನಮ್ಮ ಭಾರತೀಯರು ಬೇಕೆಬೇಕು. ಅದಕ್ಕೆ ಅದು ಕೆಲಸದ ವೀಸಾ ಕೊಟ್ಟು , ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಯೊಬ್ಬರಿಗೂ ವಿದೇಶದಲ್ಲಿ ಕೆಲಸ ಮಾಡುವ ಕನಸನ್ನು ನನಸು ಮಾಡಿಕೊಟ್ಟಿದೆ.

ಯಾರದರೂ ಐ.ಟಿ ಗೆ ಜಾಯನ್ ಆದರೂ ಎಂದರೇ ಮುಗಿಯಿತು. ಅವನು ಪಾಸಪೋರ್ಟ್ ರೇಡಿ ಮಾಡಿಕೊಳ್ಳಬೇಕು. ಅವನಿಗೆ ಗೊತ್ತಿಲ್ಲಾ  ಕಂಪನಿಯವರು ಯಾವಾಗ ಬೇಕಾದರೂ ಆಮೇರಿಕಾಕ್ಕೆ ಕಳಿಸಬಹುದು.

ಅದು ಸರ್ವೇಸಾಮಾನ್ಯ! ಹೋಗಿಲ್ಲ ಅಂದರೇ ಅವನಲ್ಲಿಯೇ ಏನೋ ಐಬೂ ಎಂಬಂತೆ ನಮ್ಮ ದೇಶದ ಜನ ನೋಡುತ್ತಾರೆ. ಐ.ಟಿ ಯಲ್ಲಿ ಇದ್ದುಕೊಂಡು ಒಮ್ಮೆಯೂ ಅಮೇರಿಕಾಕ್ಕೆ ಹೋಗಿಲ್ಲವಾ..!

ಥತ್ತ್ ....! ಅನ್ನುತ್ತಾರೆ.

ಹೀಗೆ ಅಮೇರಿಕಾ ಪ್ರತಿಯೊಬ್ಬರ ವಿಚಾರದಲ್ಲೊ ಒಂದೊಂದು ಹೊಸ ರೀತಿಯ ಬಣ್ಣದ ಕನಸನ್ನು ಕಟ್ಟಿರುತ್ತದೆ. ಅದೇ ಅವರ ಜೀವಮಾನದ ಒಂದು ಮಹಾನ್ ಸಾಧನೆ ಎನ್ನುವಂತಾಗಿದೆ.

ಇದು ನಮ್ಮ ಅನುಭವಕ್ಕೆ ಬರುವುದು. ಅಮೇರಿಕಾ ಎಂದು ಯಾರದರೂ ಬಾಯಿ ಬಿಟ್ಟರೂ... ಎಷ್ಟು ದೊಡ್ಡ ಮರ್ಯಾದೆ ನಮ್ಮ ಊರು ಮನೆಗಳಲ್ಲಿ,  ಅದೇ ಒಂದು ಸ್ಟೇಟಸ್!

ಪ್ರತಿಯೊಂದು ಅಮೇರಿಕಾ ಆಗಿರಬೇಕು ಅನ್ನುವ ಅಭಿಮಾನ! ತನ್ನನ್ನು ಮಾತ್ರ ಬಿಟ್ಟು!! ಯಾಕೆಂದರೇ ನಾ ಹುಟ್ಟಿರುವುದೇ ಇಲ್ಲಿ ಅದನ್ನು ಬದಲಾಯಿಸಲೂ ಸಾಧ್ಯವಿಲ್ಲವಲ್ಲ!

ಓ ದೇವಾ?

ಹೀಗೆ ಸಾವಿರಾರು ಮೈಲಿಯ ದೂರದ ದೇಶದಲ್ಲಿ ಬದುಕು ಕಟ್ಟಿಕೊಳ್ಳುವ ತವಕ. ಎಲ್ಲರನ್ನು, ಎಲ್ಲದನ್ನೂ ಬಿಟ್ಟು ಇಲ್ಲಿಯೇ ತನ್ನ ಕೊನೆಯನ್ನು ಕಾಣುವ ತವಕ ಅತಿ ಹೆಚ್ಚು ಮಂದಿಗಳದು.

ಅಲ್ಲಿ ಏನಿದೆ? ಭಾರತ ಅದು ಬಡ ದೇಶ. ಡಾಲರ್ ಸಮಕ್ಕೆ ರೂಪಾಯಿ ಬರಲು ಶತಮಾನಗಳೇ ಬೇಕು. ಇಲ್ಲಿಯ ರೋಡ್ ರೋಡ್ ಸಮ ಅಲ್ಲಿಯ ನ್ಯಾಷನಲ್ ಹೈವೆ ಬರಲು ಯಾವ ದಿನಮಾನ ಬೇಕು ಸ್ವಾಮಿ? ಇಲ್ಲಿಯ ಕಲ್ಚರ್ ಅಲ್ಲಿ ಬರಲು ಇಡೀ ಭಾರತವೇ ಒಮ್ಮೆ ವಾಶ್ ಔಟ್ ಆಗಬೇಕು ಎನ್ನುತ್ತಾರೆ.

ಇಲ್ಲಿ ಎಲ್ಲಾ ಎಷ್ಟು ನೀಟ್! ಏನ್ ರೂಲ್! ಏನ್ ರೋಡ್! ಜನಗಳ ಪಿತಿಪಿತಿ ಇಲ್ಲಾ ಏನೂ ಇಲ್ಲಾ. ಸ್ವರ್ಗ ಎನ್ನುವುದು ಯಾವುದಾದರೂ ಇದ್ದರೇ ಅದು ಅಮೇರಿಕಾ!!?

ಇಲ್ಲಿಯ ಹಳ್ಳಿಗಳೇ ನಮ್ಮ ಬೆಂಗಳೂರಿಗಿಂತ ಮೇಲಾಗಿವೆ. ನಮ್ಮ ದೇಶದಲ್ಲಿ ಇದು ಕಾಣಲು ಸಾಧ್ಯವಿಲ್ಲ.

ಸ್ಟುಪೀಡ್ ರಾಜಕೀಯ, ಕರಪಶ್ಯನ್, ಜನ ಸಂಖ್ಯೆ,ಬಡತನ.. ಇತ್ಯಾದಿ ಒಂದಾ ಎರಡಾ ಸಮಸ್ಯೆಗಳ ಸರಮಾಲೆ ಎಂದರೇ ಅದು ಇಂಡಿಯಾ.ಅಲ್ಲಿ ಇಲ್ಲಿಯ ಕನಸು ಕಾಣಲು ಯಾವ ದಿಕ್ಕಿಗೆ ಮಲಗಬೇಕು ದೇವಾ?

ನೋಡಿ ಇಲ್ಲಿ ಇಷ್ಟು ಪ್ರೀ..! ಎಲ್ಲೇಲ್ಲೂ ಪ್ರೀ! ಎಷ್ಟು ಆರಮಾಗಿ ಜೀವನ ಸಾಗಿಸಬಹುದು!

ನಮ್ಮ ಚಿಕ್ಕ ಮುದ್ದು ಮಕ್ಕಳ ಬಾಯಲ್ಲಿ ಬರುವ ಇಂಗ್ಲಿಷ್ ಆಸೆಂಟ್ ಅಷ್ಟು ಸಾಕು ಈ ಮಗುವಿನ ಭವಿಷ್ಯ ಬೊಂಬಟ್ ಆಗಲೂ.. ಎರಡನೆ ಮಗು ಇಲ್ಲಿಯೇ ಹುಟ್ಟಿದೆ...ಯು.ಎಸ್.ಎ ಸಿಟಿಜನ್ ಆರಮಾಗಿ ೧೬ ರ ನಂತರ ಸಿಕ್ಕೇ ಸಿಗುತ್ತೇ.

ಅದು ಪುನಃ ಭಾರತದ ನಕಾಶೆಯನ್ನು ನೆನಪು ಮಾಡಿಕೊಳ್ಳುವ ಜರೂರತು ಎಂದಿಗೂ ಇಲ್ಲ. ಓ ದೇವರೇ ಇಷ್ಟು ಕರುಣಿಸಿದ ನೀನೆ ಕರುಣಾಮಯಿ! ಎಂದು ಮನದಲ್ಲಿಯೇ ಡಾಲರ್ ಹುಂಡಿಯನ್ನು ತಿರುಪತಿಯ ತಿಮ್ಮಪ್ಪನಿಗೆ ಅರ್ಪಿಸಿಬಿಡುತ್ತಾರೆ.

ಅಲ್ಲಾ ಇಷ್ಟೊಂದು ಆಕರ್ಷಣೆಯ ಮೊಲ ಇರುವುದಾದರೂ ಎಲ್ಲಿ? ಯಾಕೆ ಎಲ್ಲರೂ ಭಾರತ ಎಂದರೇ ತಾತ್ಸರ ಮಾಡುವಂತೆ ಮಾಡಿರುವುದು. ಡಾಲರ್ರಾ.. ಇಲ್ಲಿಯ ಇಂಗ್ಲಿಷಾ, ಇಲ್ಲಿಯಾ ನೀಟ್ ರೂಲ್ಸಾ? ಗೊತ್ತಾಗುತ್ತಿಲ್ಲ! ಇಲ್ಲಿರುವುದು ನಮ್ಮ ದೇಶದಲ್ಲಿ ಇಲ್ಲವಲ್ಲಾ ಎಂದು ಮನದಲ್ಲಿಯೇ ಕೊರಗೂವವರು ಇದ್ದಾರೆ.

ಅಮೇರಿಕಾಕ್ಕೆ ಬರುವಂತೆ ಮಾಡಲು ಭಾರತ ಬೇಕು. ಅಮೇರಿಕಾಕ್ಕೆ ಬಂದ ಮೇಲೆ ಭಾರತ ಕೇವಲ ಪೇಸ್ ಬುಕ್, ವಾಟ್ಸಫ್ ಗಳಲ್ಲಿ ಲೈಕ್, ಕಾಮೆಂಟ್  ಮಾಡುವ ವಸ್ತುವಾಗಿಬಿಡುತ್ತದೆ.

ತಾನು ಅಮೇರಿಕಾದಲ್ಲಿ ಸುತ್ತುವ ಪ್ರತಿ ನಡೆಯು ವಜ್ರ ಬೆಲೆಯುಳ್ಳದ್ದಾಗಿರುತ್ತದೆ. ಅದು ಭಾರತದ ಯಾವೊಂದು ಹಿರಿಮೆಯ ಜಾಗಗಳಿಗೂ ಸಾಟಿಯಿಲ್ಲ ಅನಿಸುವುದು ಯಾಕೆ?

ಇದು ಮನಸ್ಸಿನ ವ್ಯಕ್ತಿಗತ ಸಮಸ್ಯೆಯಾ? ಅಥವಾ ಒಟ್ಟು ವ್ಯವಸ್ಥೆಯ ಸಮಸ್ಯೆಯ..? ಇಷ್ಟೊಂದು ಇಷ್ಟಪಡುವ ಮಟ್ಟಿಗೆ ಇಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರೂ ಸಂತೋಷದಿಂದ ನಿಜವಾಗಿಯೂ ಇದ್ದಾರಾ?

ಗೊತ್ತಾಗುವುದಿಲ್ಲ. ಯಾರು ಮನ ಬಿಚ್ಚಿ ಹೇಳಲಾರರು.

ಇದೆ ಸ್ಥಿತಿ ನಮ್ಮ ದೇಶದಲ್ಲಿರುವ ಪ್ರತಿಯೊಬ್ಬ ಹಳ್ಳಿಗ ಮತ್ತು ಪಟ್ಟಣದಲ್ಲಿ ವಾಸಿಸುವವನಾಗಿದೆ ಎಂದರೇ ಅತಿಶಯೋಕ್ತಿಯಲ್ಲ. ಹಳ್ಳಿಯಿಂದ ಪಟ್ಟಣ, ನಗರಳಿಗೆ ಬಂದ ಯಾರೊಬ್ಬರೂ ಏನೇ ಅಂದರೂ ಹಳ್ಳಿಗಳಿಗೆ ಪುನಃ ಮುಖ ಮಾಡುತ್ತಿಲ್ಲ. ಕಷ್ಟವೋ ಸುಖವೋ ಇಲ್ಲಿಯೇ ಬದುಕುವೆವು ಎಂದು ನಿರ್ಧರಿಸಿರುವಂತಿದೆ. ಇದೆ ಮನೋ ಸ್ಥಿತಿಯನ್ನು ಕಣ್ಣಿಗೆ ಕಾಣದ ದೂರದ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ನಮ್ಮ ನಮ್ಮ ಗೆಳೆಯರು, ನಮ್ಮ ದೇಶ ವಾಸಿಗಳದು ಆಗಿದ್ದರೇ ಅಚ್ಚರಿಯಿಲ್ಲ ಅಲ್ಲವಾ?

ಯಾಕೆ ಅಷ್ಟೊಂದು ಹೈಪ್, ಮಹತ್ವವನ್ನು ನಮ್ಮ ಜನ ನಮ್ಮಲಿಯೇ ತಿಳಿಯದೆ ಕೊಡುತ್ತಾರೋ ದೇವರೇ ಬಲ್ಲ!

ಹಳ್ಳಿಯವನಿಗಿಂತ ಪಟ್ಟಣದಲ್ಲಿದ್ದವನನ್ನು, ಹೊರದೇಶದಲ್ಲಿ ಇದ್ದವನನ್ನು ನಮ್ಮ ಜನ ತುಂಬ ವ್ಯತ್ಯಾಸದಿಂದ ಕಾಣುತ್ತಾರೆ. ಅದು ಯಾವುದಕ್ಕೆ ಹಾಗೆ ಬೇರೆಯಾಗಿ ನೋಡುತ್ತಾರೋ ಅವರೆ ಯೋಚಿಸಬೇಕು.

ಹೊಸ ಜಾಗದಲ್ಲಿ ಹೊಸತನದಿಂದ ಹೊಸ ವಿಚಾರಗಳನ್ನು ತಿಳಿದಿರುವನು ಎಂದು ಬೆರಗಾಗಿ ಕಂಡರೇ ಅದು ಉತ್ತಮ ಲಕ್ಷಣ. ಅದು ಬಿಟ್ಟು ಬೇರೆಯಾಗಿ ಇನ್ನೂ ಏನೇ ಅದರೂ ವಿಪರ್ಯಾಸವೇ ಸರಿ!

ಇಲ್ಲಿ ಮಣ್ಣು ಹೊರಿದರೂ, ಅಲ್ಲಿ ಮಣ್ಣು ಹೊರಿದರೂ ಏನೂ ವ್ಯತ್ಯಾಸವಿಲ್ಲ. ಅಲ್ಲಿಯ ಲೈಫ್ ಸ್ಟೈಲ್ ಗೆ ತಕ್ಕನಾಗಿ ಅಲ್ಲಿ ಕೆಲಸ, ಸಂಬಳ, ವಿಚಾರ ಎಲ್ಲಾವು ಇರುತ್ತವೆ. ಅದಕ್ಕೆ ಹೆಚ್ಚು ವಿಶೇಷವನ್ನು ಕೊಡುವ ವಿಶೇಷತೆಯೆನಿಲ್ಲ.

ಮನುಷ್ಯ ಹೇಗೆ ಬುದ್ದಿವಂತಿಕೆಯಿಂದ ಅವನ ಒಟ್ಟಾರೆ ಜೀವನವನ್ನು ಸಂತೋಷದಿಂದ ಇಟ್ಟುಕೊಂಡಿದ್ದಾನೇ ಎಂಬುದೇ ಮುಖ್ಯ. ಅವನ ಒಟ್ಟಾರೆ ಜೀವನ ಅವನ ವೈಕ್ತಿಕ ಮತ್ತು ಅವನ ಕುಟುಂಬದ ಆರೋಗ್ಯವಂತಿಕೆಗೆ ದ್ಯೋತಕವಾಗಿರುತ್ತದೆ. ಅದು ಒಟ್ಟಾರೆಯ ವ್ಯವಸ್ಥೆಯ ಮತ್ತು ಆರೋಗ್ಯವಂತ ಸಮಾಜದ ಗುಟ್ಟಾಗಿರುತ್ತದೆ. ಅದು ಪ್ರತಿಯೊಬ್ಬರಲ್ಲೂ ಚಿಮ್ಮುವಂತಿರಬೇಕು.

ಅದು ಬಿಟ್ಟು ವ್ಯಕ್ತಿ ಮತ್ತು ಸಮಾಜದ ನಡುವೆ ಕಂದಕದಂತಿರಬಾರದು. ಎಲ್ಲಾ ಸ್ತರದ ಎಲ್ಲಾ ಜೀವನಾಡಿಗಳು ಸಮರ್ಪಕವಾಗಿ ಕಾರ್ಯ ನಡೆಸಿದರೇ ದೇಹ ಆರೋಗ್ಯವಾಗಿರುವುದು, ಹಾಗೆಯೇ ವ್ಯವಸ್ತೆಯು ಆರೋಗ್ಯವಾಗಿರುವುದು.

ಇಲ್ಲಿ ಯಾವುದು ದೊಡ್ಡದು ಚಿಕ್ಕದು ಇಲ್ಲ. ದೊಡ್ಡದಾಗಿದೆ ಎಂದರೇ ಅದಕ್ಕೆ ಹಲವು ದಿನಗಳ ದುಡಿಮೆಯೆ ಕಾರಣವಾಗಿರುತ್ತದೆ. ಅದು ಸಮಾಜ, ಜನಗಳ ಕೈಯಲ್ಲಿಯೇ ಇರುತ್ತದೆ. ನಮ್ಮ ಜನ, ನಮ್ಮ ಜಾಗ ನಾವು ಪ್ರೀತಿಸದೇ ಇನ್ನು ಯಾರು ಪ್ರೀತಿಸಬೇಕು? ನಮ್ಮಮ್ಮ ಬಡವಳು ಎಂದು ನಾವು ದೂರ ಇಡುವುವೇ?

ಅದು ಬಿಟ್ಟು ಇರುವುದ ಬಿಟ್ಟು ಇಲ್ಲದ ಕಡೆ ಚಿಂತಿಸುವಂತಾಗುತ್ತದೆ.

ಕಣ್ ಕಣ್ ಬಿಟ್ಟು ಅಮೇರಿಕಾ ಅಮೇರಿಕಾ ಎಂದು ಜಪಿಸುವುದನ್ನು ನಮ್ಮ ಬುದ್ಧಿವಂತ ಜನ ಕೈ ಬಿಡಬೇಕು. ಏನೇ ಆದರೂ ಹೆತ್ತ ಊರು ಯಾವುದೇ ಸ್ವರ್ಗಕ್ಕೊ ಎಂದು ಸಮನಾಗಲಾರದು.

ನಮ್ಮೊರೇ ನಮಗೆ ಶಾಶ್ವತ!