ಶನಿವಾರ, ಮಾರ್ಚ್ 21, 2015

ಚಿನ್ನಾ ಎಂದು ವಾಟ್ಸಪ್ ನಲ್ಲಿ

ಇಂದು ಯುಗಾದಿ ನಮ್ಮ ನಾಡಿಗೆ ಹೊಸ ವರುಷದ ಪ್ರಾರಂಭದ ದಿನ. ಮನ್ಮಥ ನಾಮ ಸಂವತ್ಸರ ಶುರುವಾಗುವ ದಿನ. ಅದು ಎಷ್ಟೊಂದು ಸಂಭ್ರಮ ಎಲ್ಲೆಲ್ಲೂ. ಪ್ರತಿಯೊಬ್ಬರೂ ಹೊಸ ಹೊಸ ಬಟ್ಟೆಯನ್ನು ತೊಟ್ಟುಕೊಂಡು ಅದು ಹೇಗೆ ಖುಷಿಪಡುತ್ತಿದ್ದಾರೆ. ಒಳಗೆಲ್ಲೋ ಅಮ್ಮ ನಮಗಾಗಿ ಹೊಸ ಸಿಹಿ ಅಡುಗೆಯನ್ನು ಮಾಡುತ್ತಿದ್ದಾಳೆ.

ಇದೆ ದಿನ ಅನಿಸುತ್ತದೆ. ನಾನು ಅವನನ್ನು ನೋಡಿದ್ದು. ಇದೆ ಒಂದು ವರುಷದ ಹಿಂದೆ ನಾನು ಅವನು ಮೂರು ಹೆಜ್ಜೆ ಹಾಕಿ ನಮ್ಮ ನಮ್ಮ ಮನಸ್ಸಿನಲ್ಲಿ ನಾವಿಬ್ಬರೂ ಸಂಗಾತಿಗಳು ಎಂದುಕೊಂಡಿದ್ದು. ನನಗೆ ಮೊದಲಿನಿಂದಲೂ ಹೀಗೆ. ಇಷ್ಟಪಟ್ಟವರನ್ನು ಪಟ್ ಅಂಥ ಒಪ್ಪಿಕೊಂಡುಬಿಡಬೇಕು.ಇಷ್ಟಪಟ್ಟಿದ್ದನ್ನು ಏನೆಂದರೂ ಬಿಡಬಾರದು ಎಂಬುದು ನನ್ನ ಮನದಾಳದ ನಂಬಿಕೆ.

ಅದು ಹೇಗೆ ಇವನು ನನಗೆ ಇಷ್ಟವಾದನೋ ಗೊತ್ತಿಲ್ಲ. ಅವನಿಲ್ಲದ ಈ ವರುಷದ ಯುಗಾದಿ ಖಾಲಿ ಖಾಲಿ ಅನಿಸುತ್ತಿದೆ.

ನಾನು ಎಷ್ಟು ಕೇಳಿಕೊಂಡೇ.. ಬೇಡ ಕಣೋ ಹೋಗಬೇಡ ನನ್ನ ಬಿಟ್ಟು.. ನನಗೆ ನೀ ಇಲ್ಲದ ಒಂದು ಕ್ಷಣವನ್ನು ಯುಗವಾಗಿ ಕಳೆಯಬೇಕು.. ನಾನು ಟ್ರೈ ಮಾಡುತ್ತಿನಿ. ಮುಂದಿನ ವರುಷ ನಿಜವಾಗಿಯೋ ಕಷ್ಟಪಟ್ಟು ಓದಿ ಜಿ.ಆರ್.ಈ ಯನ್ನು ಕ್ಲೀಯರ್ ಮಾಡುತ್ತಿನಿ ಎಂದು ಪರಿಪರಿಯಾಗಿ ಕೇಳಿಕೊಂಡರೂ ಕಿವಿಯ ಮೇಲೆ ಹಾಕಿಕೊಳ್ಳದೇ ಮೂರು ತಿಂಗಳ ಹಿಂದೆ ಹಾರಿಬಿಟ್ಟ.

ಈ ಹುಡುಗರೇ ಇಷ್ಟು ಪ್ರೀತಿ ಮಾಡುತ್ತಿರುವಾಗ ಇಲ್ಲದ ಜವಾಬ್ದಾರಿ ಹುಡುಗಿ ಸಿಕ್ಕಿದ ಮೇಲೆ ನೆನಪಾಗುತ್ತದೆ.

ಹುಡುಗಿ ನನ್ನವಳೆ ಬಿಡು ಎಂಬ ಕೊಬ್ಬು ಅನಿಸುತ್ತದೆ.

ನಾವುಗಳು ಒಮ್ಮೆ ಕೊಟ್ಟ ಒಬ್ಬರಿಗೆ ಕೊಟ್ಟದ್ದನ್ನು ಜೀವ ಇರುವವರೆಗೂ ಕಾಪಾಡಿಕೊಳ್ಳುತ್ತೇವೆ ಎಂಬ ನಂಬಿಕೆ ಈ ತರಲೆ ಹುಡುಗು ಬುದ್ಧಿಗಳಿಗೆ ಅದು ಹೇಗೋ ಗೊತ್ತಾಗಿಬಿಟ್ಟಿರುತ್ತದೆ ಅನಿಸುತ್ತದೆ.

ಹುಡುಗಿ ಸಿಗುವವರೆಗೂ ನಮ್ಮ ಹಿಂದೆ ಮುಂದೆ ಸುತ್ತಾಡುತ್ತವೆ. ನಾವು ನಿನ್ನವಳೆ ಎಂದು ಅಂದಕ್ಷಣಕ್ಕೆ, ಅದು ಎಲ್ಲಿಯ ವೈರಗ್ಯಾ ವಕ್ಕರಿಸುತ್ತೋ.. ನಮ್ಮನ್ನೂ ಕೊಂಚ ಕೊಂಚ ಅವಾಯ್ಡ ಮಾಡಿಕೊಳ್ಳಲು ಪ್ರಾರಂಭಿಸುತ್ತವೆ. ಅವಾಯ್ಡ್ ಅಂಥ ಏನಿಲ್ಲಾ. ನನ್ನ ಹುಡುಗ ಹೇಳುವುದು ನಿಜವೇ. ನಿತ್ಯ ನನ್ನ ಮುಖ ಅವನು ಅವನ ಮುಖ ನಾನು ನೋಡಿಕೊಳ್ಳುತ್ತಾ ಕೂತರೆ ನಾವು ಬೆಳೆಯುವುದು ಹೇಗೆ. ಕನಸಿನ ನಮ್ಮ ಸಂಸಾರ ಕಟ್ಟುವುದು ಯಾವಾಗಾ?

ಅದು ನಿಜ ಒಪ್ಪಿಕೊಂಡೇ ಗೆಳೆಯ!

ಆದರೇ ನನಗಂತೂ ಒಂದು ಮನಸ್ಸಿಲ್ಲಾ. ಪ್ರಪಂಚದಲ್ಲಿ ಪ್ರತಿಯೂಬ್ಬರೂ ಏನಾದರೂ ಸಾಧಿಸಬೇಕು ಎಂಬ ಮನಸ್ಸಿನ ದುಡಿತವಿರುವಂತೆ ನನ್ನ ಈ ಹೃದಯವಂತನಿಗೆ ಸ್ವಲ್ಪ ಜಾಸ್ತಿಯೇ ಇದೆ. ಅದಕ್ಕೆ ಎರಡು ವರುಷ ಅದು ಹೀಗೆ ಹೋಗಿ ಹಾಗೆ ಬರುತ್ತದೆ ಚಿನ್ನಾ ಎಂದು ವಾಟ್ಸಪ್ ನಲ್ಲಿ ನಿತ್ಯ ಹೇಳುತ್ತಾನೆ.

ಅದು ಹೇಗೆ ಹುಡುಗರಿಗೆ ಹುಡುಗಿಯರ ನಿತ್ಯ ಕಾಳಜಿ ಕಳವಳ ಅರ್ಥವಾಗುತ್ತದೆ? ಒಂದು ಕ್ಷಣ ಅವನ ನೆನಪು ಮಾಡಿಕೊಳ್ಳದಿದ್ದರೇ ನಾನು ನಾಗಿರುವುದಿಲ್ಲ.

ಅವನ ನೆನಪೇ ನಾನು.

ಹುಡುಗಿಯರ ಈ ಒಂದು ಪ್ರೀತಿಯ ಶಕ್ತಿಯೇ ಹುಡುಗರಿಗೆ ಸ್ವಲ್ಪ ಧಿಮಾಕು ಕೊಟ್ಟಿರುತ್ತದೆ ಅನಿಸುತ್ತದೆ.

ನಾನು ಮುಂದಿನ ವರುಷದೊಳಗೆ ಅವನನ್ನು ಸೇರಿಕೊಂಡುಬಿಟ್ಟರೆ ಚೆನ್ನಾಗಿರುತ್ತದೆ ಎಂದು ಕಷ್ಟಪಟ್ಟು ಓದಲು ಮನಸ್ಸು ಬರುತ್ತಿಲ್ಲ. ಪುಸ್ತಕ ಇಡುದುಕೊಂಡರೇ ಅವನಲ್ಲಿಗೆ ನನ್ನ ಮನ ಜಾರುತ್ತದೆ. ಓ ದೇವರೇ ಇದು ಯಾಕೆ. ಯಾಕಿಷ್ಟು ಅವನನ್ನು ನಾನು ಪ್ರೀತಿಸುತ್ತೇನೆ? ಅವನು ಸಹ ನನ್ನನ್ನು ಇಷ್ಟೇ ಪ್ರೀತಿಸುತ್ತಾನಾ?

ನಿಜವಾಗಿಯೂ ಅವನು ನನ್ನಷ್ಟು ಪ್ರೀತಿಸಲು ಸಾಧ್ಯವಿಲ್ಲ. ಅದು ಹೇಗೆ ಯು.ಎಸ್.ಎ ನಲ್ಲಿ ಓದಲು ಅವಕಾಶ ಸಿಕ್ಕಿತು ಎಂದು ಕುಣಿದಾಡಿದ.. ಆ ಕ್ಷಣ ನನ್ನನ್ನೇ ಮರೆತವನಂತೆ ಅದು ಇದು ಎಂದು ಎಷ್ಟು ಬೇಗ ಎಲ್ಲಾ ಏರ್ಪಾಡು ಮಾಡಿಕೊಂಡು ಹಾರಲು ಸಜ್ಜಾದ ನೆನಸಿಕೊಂಡರೆ ಮೈಯೆಲ್ಲಾ ಊರಿಯುತ್ತದೆ. ಇವನೇನ್ನಾ ನಾನು ಪ್ರೀತಿಸಿದ್ದು ಎಂದು ಅವಮಾನವಾಗಿದ್ದು ಅಂದು..

ಅದು ಏನೂ ಹುಡುಗರೋ ಪರದೇಶದ ವ್ಯಾಮೋವನ್ನು ಇಷ್ಟೊಂದು ಬೆಳೆಸಿಕೊಂಡುಬಿಟ್ಟಿದ್ದಾವೆ.

ನಾ ಹೇಳಿದೆ. ಯಾಕೆ ಹೋಗುವೇ ಇಲ್ಲಿಯೇ ಓದಿ ಯಾವುದಾದರೂ ಕೆಲಸ ಹಿಡಿ. ಅಷ್ಟೊತ್ತಿಗೆ ನನ್ನ ಓದು ಮುಗಿದು ನಾನು ಒಂದು ಕಾಲೇಜಿನಲ್ಲಿ ಲೇಕ್ಚರ್ ಆಗುವೆ. ಇಬ್ಬರೂ ದುಡಿದರೂ ಸಾಕು. ಯಾಗೋ ಸಂಸಾರ ಸಾಗುತ್ತದೆ. ತಲೆಹರಟೆ ನನ್ನ ಮಾತು ಏನೂ ಕೇಳಲಿಲ್ಲ..ಹೊರಟೆ ಹೋಗಿಬಿಟ್ಟ.

ಅವನು ಹೋಗುವವರೆಗೂ ಅದು ಎಷ್ಟು ಮಾತನ್ನಾಡುತ್ತಿದ್ದೇವು. ದಿನ ರಾತ್ರಿ ಎನ್ನದೇ. ಈಗ ಒಂದು ಗಂಟೆ ಮಾತನ್ನಾಡಲು ಸಾಧ್ಯವಿಲ್ಲ. ನಾನು ಮಲಗುವ ವೇಳೆಗೆ ಅವನಿಗೆ ಕಾಲೇಜಿಗೆ ಹೋಗಲು ಸಮಯವಾಗಿರುತ್ತದೆ. ನಾನು ಏದ್ದೇಳಿ ಮಾತಾನಾಡುವ ಎನ್ನುವ ವೇಳೆಗೆ ಅವನಿಗೆ ಸರಿ ರಾತ್ರಿಯಾಗಿರುತ್ತದೆ.

ಸರಿಯಾಗಿ ಮಾತನಾಡಲು ಆಗುತ್ತಿಲ್ಲ! ಎಂದರೇ, ಇಂಡಿಯಾದಲ್ಲಿ ನೀವೆಲ್ಲಾ ಬರೀ ಮೋಬೈಲ್ ಒಂದಕ್ಕೆ ಅಂಟಿಕೊಂಡಿದ್ದೀರಾ.. ಅದೇನು ಮಾತು ಮಾತು ಬರೀ ಮಾತು! ಇಲ್ಲಿ ಬಾ ನೋಡು ಎಷ್ಟೇ ಟೆಕ್ನಾಲಜಿ ಇದ್ದರೂ ಯಾರೂ ನಮ್ಮ ಭಾರತದಂತೆ ಮೋಬೈಲ್ಗೆ  ಅಂಟಿಕೊಂಡಿಲ್ಲಾ. ಯಾವುದನ್ನು ಹೇಗೆ ಮಾಡಬೇಕು. ಎಲ್ಲಿ ಮಾಡಬೇಕು ಎಂಬುದನ್ನು ಮತ್ತು ಸಮಯದ ಮಹತ್ವವನ್ನು ಅರಿತವರು ಈ ಜನ. ಅದಕ್ಕೆ ಅದು ಹೇಗೆ ಮುಂದುವರಿದಿದ್ದಾರೆ ನೋಡು  ಎಂದು ದೊಡ್ಡ ಲೇಕ್ಚರ್ ಕೊಡುತ್ತಾನೆ.

ನನ್ನ ಪ್ರೀತಿಯ ಸ್ಟುಪಿಡ್!

ಅದು ಸರಿ ಹೀಗೆ ಭಾರತ ಬಿಟ್ಟು ಹೋಗುವ ಪ್ರತಿಯೊಬ್ಬರೂ ಭಾರತವನ್ನು ಅದು ಇಲ್ಲ, ಇದು ಸರಿಯಿಲ್ಲಾ ಎಂದು ತೆಗಳುವವರೆ ಆಗಿಬಿಡುತ್ತಾರೆ.

ನಾನು ಒಮ್ಮೊಮ್ಮೆ ಮನದಲ್ಲಿಯೇ ಅಂದುಕೊಳ್ಳುತ್ತೇನೆ. ನಮ್ಮ ಮೋದಿ ಏನಾದರೂ ಮೋಡಿ ಮಾಡಿ ಭಾರತವನ್ನು ಎಲ್ಲಾ ದೇಶಗಳಿಗಿಂತ ಮುಂದೆ ತರಬೇಕು. ಆಗ ಸರಿ ಇರುತ್ತಾದೆ ಈ ಪರದೇಶ ಡಾಲರ್ ವ್ಯಮೋಹದ ಭಾರತ ದ್ವೇಷಿಗಳಿಗೆ.

ಅದು ಅಷ್ಟು ಸುಲಭ ಅಲ್ಲ ಎಂಬುದು ಮೋದಿಗೆ ಈಗಾ ಈಗ ಅರ್ಥವಾಗಿರುವಂತಿದೆ. ಅದಕ್ಕೆ ಭಾಷಣ ಮಾಡುವುದನ್ನು ಮೋದಿ ಕೊಂಚ ತಗ್ಗಿಸಿದ್ದಾನೆ.

ಉಫ್ ಯುಗಾದಿಯ ದಿನದಂದೂ ನನ್ನ ಪ್ರೀತಿಯ ಕಥೆಯನ್ನು ಹೇಳಲು ಹೋಗಿ ನಮ್ಮ ಭಾರತದ ಅಭಿವೃದ್ಧಿ ಮೋದಿ ಎಂದು ರಾಜಕೀಯ ಪ್ರೀತಿ ಮಾಡುತ್ತಿದ್ದೇನೆ.

ಏನೂ ಮಾಡುವುದು ಅಮ್ಮ ಮಾಡಿದ ಹೋಳಿಗೆಯನ್ನು ತಿನ್ನಲು ಮನಸ್ಸು ಬರುತ್ತಿಲ್ಲ.

ಈ ನನ್ನ ಪ್ರೀತಿಯ ಕೋತಿ ದೂರದ ಅಮೇರಿkaದಲ್ಲಿ ಈಗ ಮಲಗಿದೇ ನನ್ನ ದ್ಯಾನವಿಲ್ಲದೇ...!?

ಮಂಗಳವಾರ, ಮಾರ್ಚ್ 17, 2015

ಹಣವೊಂದಿದ್ದರೇ..ಮರ್ಯಾದೆ..

ಸತ್ಯವಂತರಾಗಿ ಬದುಕುವುದೇ ಇಂದಿನ ದಿನಗಳಲ್ಲಿ ದುಬಾರಿ ಅನಿಸುತ್ತದೆ. ಉತ್ತಮರಾಗಿರುವುದೇ ಪಾಪ ಅನಿಸುತ್ತದೆ. ಶುದ್ಧ ಅಸ್ತರಾಗಿರುವುದೇ ಅಮಂಗಲ ಅನಿಸುತ್ತದೆ. ಸರಳವಾಗಿ ಬದುಕುವುದೇ ಟೀಕೆ ಮಾಡುವವರಿಗೆ ಬಾಯಿ ವಸ್ತುವಾಗುವಂತಾಗಿದೆ.

ಯಾಕೆಂದರೇ ಇದು ಕಲಿಗಾಲ.

ಕಲಿಗಾಲದಲ್ಲಿ ಎಲ್ಲಾ ತದ್ವಿರುದ್ಧವಾಗಿರಬೇಕು. ಅಂದರೇ ಯಾರು ಉತ್ತಮರಾಗಿರುವವರೋ ಅವರಿಗೆ ಉಳಿಗಾಲವಿಲ್ಲ.

ಎಷ್ಟು ದಿನ ಶುದ್ಧವಾಗಿದ್ದರೇನು ಫಲ ಅನಿಸುವಂತಾಗಿದೆ.

ನೀ ಪ್ರಾಮಾಣಿಕನಾಗಿದ್ದಷ್ಟು ನಿನಗೆ ಕಷ್ಟ ಕಣಮ್ಮಾ! ಎಂದು ಗೆಳೆಯರುಗಳು ಹೇಳುವ ಮಟ್ಟಿಗೆ ಸಮಾಜ ನಡೆದುಕೊಳ್ಳುತ್ತಿದೆ ಅನಿಸುತ್ತಿದೆ.

ಚೆನ್ನಾಗಿ ಬದುಕಬೇಕೆಂದರೇ ಹೆಚ್ಚು ಕೆಟ್ಟವನಾಗಿರಬೇಕು ಮಗು ಎಂದು ಹಿರಿಯರು ಚಿಕ್ಕ ಮಕ್ಕಳಿಗೆ ನೀತಿ ಬೋಧನೆಯನ್ನು ಮಾಡುವಂತಾಗಿದೆ.

ಪುರಾಣ ಪುಣ್ಯ ಕಥೆಗಳು ಪುರಾತನ ದಿನಗಳಿಗೆ ಮಾತ್ರ ಎಂಬಂತಾಗಿದೆ. ಇದು ಅದುನಿಕ ಯುಗ. ಇಲ್ಲಿ ಹಿಂದಿನ ಆ ನೀತಿ ನಿಯತ್ತುಗಳು ಯಾರಿಗೂ ಬೇಡವಾಗಿದೆ.

ಹುಟ್ಟಿದಂದಿನಿಂದ ಮಗು ನಿತ್ಯ ಬರೀ ಈ ದುರಾಡಳಿತ, ದುಷ್ಟ ಕೊಟ, ದುರ್ಜನರ ಸಂಗ ಮಾಡಿ ಜಮ್ಮಾಂತಾ ಬದುಕು. ಎಂದು ಹೇಳು ಕಲಿಯುಗದ ಗಾದೆಯಂತಾಗಿದೆ ಈ ಪ್ರಪಂಚ.

ಯಾರು ನಿನ್ನ ರಕ್ಷಿಸಲಾರರು. ಯಾಕೆಂದರೇ ನೀ ಅತಿ ಉತ್ತಮ! ಎಂದು ನಮ್ಮ ನಮ್ಮ ನೆರೆಹೊರೆಯವರೆ ಮೂಗು ಮುರಿಯುವಂತಾಗಿದೆ.

ನಾನು ಒಳ್ಳೆಯವನು ಎಂದು ಅದು ಹೇಗೆ ನೀನು ಎದೆ ಉಬ್ಬಿಸಿ ಹೇಳುತ್ತಿಯ ಬಾಯ್ ಮುಚ್ಚಿಕೋ ಎನ್ನುವಂತಾಗಿದೆ.

ಆ ನಿನ್ನ ಉಪದೇಶಗಳು ನಮಗೆ ಹೇಳಬೇಡ. ನೀ ಹೇಳುವ ಮಾತು ಇಂದು ಯಾರು ಕೇಳುತ್ತಾರೆ? ಥಿಂಕ್ ಪ್ರಾಕ್ಟೀಕಲ್ ಮ್ಯಾನ್ ಎನ್ನುತ್ತಾರೆ.

ನೀ ಇಷ್ಟು ಸಭ್ಯನಾಗಿದ್ದರೇ ನಿನ್ನ ಮೇಲೆ ಇಡೀ ಊರೇ ಸವಾರಿ ಮಾಡುತ್ತದೆ ಅಷ್ಟೇ. ನೀ ಸ್ವಲ್ಪ ರಫ್ ಅಂಡ್ ಟಫ್ ಆಗು ಮಗು. ಎಂದು ಮಗುವನ್ನು ಮಗುವಾಗಿದ್ದಾಗಲೇ  ಈ ರಫ್ ಆದ ಸಮಾಜದಲ್ಲಿ ಬೆಳೆಸಲು, ಎಷ್ಟು ಕಷ್ಟಪಡುತ್ತಿದ್ದಾರೆ ನಮ್ಮ ಜನ ಎಂದರೇ ಉಸ್ಸ್ ಅಪ್ಪಾ! ಬಹಳಷ್ಟು ಕಷ್ಟಪಡಬೇಕು.

ಹೆಚ್ಚು ಅದ್ವಾನವಾದಷ್ಟು ನಿನಗೆ ಭವಿಷ್ಯವಿದೆ! ಹೆಚ್ಚು ಹೆಚ್ಚು ಭ್ರಷ್ಟನಾದಷ್ಟು ಹೆಚ್ಚು ಸಂಭ್ರಮದಲ್ಲಿ ಬದುಕಬಹುದು. ಹೆಸರು, ಹಣ, ಅಧಿಕಾರ ಬಲ ಪ್ರತಿಯೊಂದು ನೀ ಕೇಳದಿದ್ದರು ನಿನ್ನ ಹುಡುಕಿಕೊಂಡು ಬರುತ್ತದೆ.

ಅದಕ್ಕೆ ರಾಜಕೀಯದಲ್ಲಿರುವವರ ಬಗ್ಗೆ ಮತ್ತು ಚುನಾವಣೆಯ ಸಮಯದಲ್ಲಿ ನಾವೇ ಒಂದು ಸಿದ್ಧಾಂತವನ್ನು ಹಾಕಿಕೊಂಡಿದ್ದೇವೆ. ಅತಿ ಕಡಿಮೆ ಕೆಟ್ಟವರನ್ನು ಆರಿಸಿ. ಅವರಿಗೆ ಮತ ಹಾಕಬೇಕು. ಎಂದು ರಾಜರೋಷವಾಗಿ ಹೇಳಿಕೊಳ್ಳುತ್ತೇವೆ. ಅಂದರೇ ಯೋಚಿಸಿ. ಎಲ್ಲಿಗೆ ಬಂದಿದೆ ಈ ವ್ಯವಸ್ಥೆ.

ಇವರು ಒಳ್ಳೆಯವರು. ಇವರಿಗೆ ಏನೂ ಇಲ್ಲ. ಮುಂದೆ ನಮ್ಮ ಸೇವೆಯನ್ನು ಮಾತ್ರ ಮಾಡಲು ಬಂದಿರುವ ನಮ್ಮ ಜನನಾಯಕ ಎನ್ನುವವನು. ಗೆದ್ದ ಮಾರೆಯ ದಿನವೇ ನಮ್ಮ ಉಯೇಗೂ ನಿಲುಕದ ರೀತಿಯಲ್ಲಿ ಅವನ ಸೇವೆಯನ್ನು, ಅವನ ಸಂಬಂಧಿಕರ ಸೇವೆಯನ್ನು ದೇವರ ಕಾರ್ಯವೆನ್ನುವಂತೆ ಮಾಡುತ್ತಾ ಮಾಡುತ್ತಾ ನಮ್ಮ ಕಣ್ಣುಗಳಿಗೆ ಪಳ ಪಳ ಹೊಳೆಯುತ್ತಾ.. ಇವನೇ ನಾವು ಆರಿಸಿದ ನಮ್ಮ ನೇತಾರ ಎನ್ನುವಂತೆ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡುತ್ತಾನೆ.

ಇಂದು ಮೋಸ ಮಾಡುವವನೇ ಬಲಿಷ್ಟ. ಮೊಸಕ್ಕೆ ಒಳಗಾಗುವನಿಗೆ  ಬುದ್ಧಿ ಇಲ್ಲ. ಅವನು ಪಾಪಿ! ಈ ವ್ಯವಸ್ಥೆಯಲ್ಲಿ ಬದುಕಲು ಯೋಗ್ಯತೆ ಇಲ್ಲದವನಾಗಿದ್ದಾನೆ ಎನ್ನುತ್ತೇವೆ.

ಕಳ್ಳರು ಸುಳ್ಳರು, ಅಸತ್ಯ ನುಡಿಯುವವರು, ಮೋಸ ಮಾಡುವವರೇ ಕಲಿಯುಗದ ಕಲಿ ಮಣಿಗಳಾಗಿದ್ದಾರೆ.

ಹೇ ನೀ ಹೇಗೆ ಎನ್ನುವುದು, ನಿನ್ನ ದುಡಿಮೆಯಲ್ಲಿದೆ. ಹೆಚ್ಚು ಹಣ ಹೊಂದಿರುವವನು ಹೆಚ್ಚು ಗೌರವವನ್ನು ಸಂಪಾಧಿಸುವವನಾಗಿದ್ದಾನೆ. ಹೆಚ್ಚು ಹೆಚ್ಚು ವ್ಯವಾಹರ ಕೌಶಲತೆಯನ್ನು ಹೊಂದಿರುವವನು ಹೆಚ್ಚು ಗಮನ ಸೇಳೆಯುವನಾಗಿದ್ದಾನೆ.

ನಾನು ಅತಿ ಒಳ್ಳೆಯವನು ಎಂದುಕೊಂಡು ಇದ್ದರೆ. ನೀನು ಅಲ್ಲಿಯೇ ಇರು ಮಗು. ಎಂದು ಅಸಡ್ಡೆಯಾಗಿ ನೋಡುವಂತಾಗಿದೆ.

ಪ್ರಾಮಾಣಿಕ ಎಂದು ಹೇಳಿದರೇ, ಜೊತೆಯಲ್ಲಿರುವವರೆ ನೋಡಿ  ನಗುವಂತಾಗಿದೆ.

ಪ್ರಾಮಾಣಿಕ ಎಂದು ಹಣೆ ಪಟ್ಟಿಗೆ ಪಕ ಪಕ ಎಂದು ಹಾಡಿಕೊಳ್ಳುತ್ತಾರೆ.

ಹೇ ಬಂದ ನೋಡು ಗಾಂಧಿ ಎಂದು ನಮಗೆ ಸ್ವಾತಂತ್ರ್ಯ ತಂದುಕೊಟ್ಟ ನಮ್ಮ ಬಾಪುವನ್ನು ಎಳೆದು ತಂದು ನಗೆಗೀಡು ಮಾಡುತ್ತೇವೆ.

ಕೆಟ್ಟವರಾಗಿದ್ದಾರೇ ಯಾರಿಗೂ ಹೆದರಬೇಕಿಲ್ಲ. ನೀ ಬಹಳ ಒಳ್ಳೆಯವನು ನೋಡು ಇನ್ನು ಮುಂದೆ ಹೇಗೆಲ್ಲಾ ಕಷ್ಟಪಡಬೇಕು ಜೀವನದಲ್ಲಿ, ಎಂದು ನಮ್ಮ ನಮ್ಮಲ್ಲಿಯೇ ಹೇಳಿಕೊಳ್ಳುತ್ತೇವೆ.

ಸತ್ಯ ಹರಿಶ್ಚಂದ್ರ ಸಾಧು, ಬದುಕು ನೋಡಿದರೇ ಕೇಳೋದು ಬೇಡ ಅನ್ನುತ್ತಾರೆ.

ಏನೇ ಮಾಡು ಚೆನ್ನಾಗಿ ಮಾಡು, ಹೆಚ್ಚು ದುಡ್ಡು ಸಂಪಾಧಿಸು ಬಿಂದಾಸಾಗಿ ಇರಬೇಕು ಎನ್ನುತ್ತಾರೆ.

ನಾವುಗಳು ಆದರ್ಶ ಎಂದು ನಮ್ಮ ಮಕ್ಕಳಿಗೆ ಯಾರನ್ನು ತೋರಿಸಿ ಹೇಳಲಾರದಾಗಿದ್ದೇವೆ. ಹೀಗೆ ಬದುಕು ಎಂದು ಹೇಳಿದರೇ ಎಲ್ಲಿ ಕಷ್ಟ ಎನ್ನುವಷ್ಟರ ಮಟ್ಟಿಗೆ ದಕ್ಷ, ಪ್ರಾಮಾಣಿಕ ಕೆಲವೇ ಕೆಲವು ಮಂದಿಗಳ ಜೀವನ ದುರಂತಮಯವಾಗುತ್ತಿರುವುದು ಭಯವನ್ನುಂಟು ಮಾಡುತ್ತಿದೆ.

ಒಳ್ಳೆಯವರಿಗೆ ಯಾರ ರಕ್ಷಣೆ ಇಲ್ಲ ಎನ್ನುವಂತಾಗಿದೆ.

ಹಣವೊಂದಿದ್ದರೇ ಇಂದು ಯಾರೇ ಬಂಧಿಸಲಿ, ಮಾರನೆಯ ದಿನ ಹೇಗಾದರೂ ಹೊರ ಬರುವನು. ಒಂದೆರಡು ದಿನ ಸಜಾ ಅಮೇಲೆ ಇದೆ ಮಜಾ ಎನ್ನುವಂತಾಗಿದೆ.

ಯಾರಿಗೂ ಸರ್ಕಾರ ಮತ್ತು ಅದರಲ್ಲಿರುವ ಕಾನೂನಿನ ಮೇಲೆಯೇ ನಂಬಿಕೆ ಹೋಗುವಂತಾಗಿದೆ. ಸತ್ಯವಾಗಿ ಕೆಲಸ ಮಾಡುವವರಿಗೂ ನಡುಕವುಂಟು ಮಾಡುವ ಘಟನೆಗಳು ನಿತ್ಯ ಜರುಗುತ್ತಿವೆ.

ಅನಾಚಾರ ಮಾಡಿರುವವನಿಗೆ ಮರ್ಯಾದೆ. ಅವನೇ ಎಲ್ಲಾ ಸಮೊಹ ಮಾಧ್ಯಮಗಳಲ್ಲಿ ಮೆರೆಯುವವನು.

ಉನ್ನತವಾಗಿ ಬದುಕುವುದೆಂದರೇ ಇದೇ ಎಂಬುಂತಾಗಿದೆ. ಉನ್ನತ ಎಂದರೇ ಯಾವುದೇ ಕೊರತೆಯಿಲ್ಲದೇ ಹೇಗಾದರೂ ಬದುಕು ಅನ್ನುವಂತಾಗಿದೆ.

ಒಳ್ಳೆಯ ಜೀವಕ್ಕೆ ಬೆಲೆಯೇ ಇಲ್ಲ ಅನ್ನುವಂತಾಗಿದೆ. ಒಳ್ಳೆಯವರಾಗಿರುವುದೇ ಅಪರಾಧ ಅನಿಸುತ್ತಿದೆ. ಲಂಚ ಕೇಳುವುದು ಮಾಮುಲು ಎನ್ನುವಂತಾಗಿದೆ.

ಜನ ಬಳಸುವ ಯಾವುದೇ ಮಾಮುಲಿ ಇಲಾಖೆಗಳಲ್ಲಿ, ಅದು ಕೊಡುವುದು ಕಾಮನ್, ಅದು ಕೊಡದಿದ್ದರೇ ನೀ ಎಷ್ಟು ದಿನದವರೆಗೂ ಕಾಯಬೇಕಾಗುತ್ತದೆ ಗೊತ್ತಾ? ಎಂದು ನೆರೆಹೊರೆಯವರು ಸಲಹೆ ಕೊಡುವಂತಾಗಿದೆ.

(ದಕ್ಷ ಅಧಿಕಾರಿ D K ರವಿಯವರ ಹತ್ಯೆಯನ್ನು ಕಂಡು ಈ ಮನ ಮಿಡಿದ ಸಾಲುಗಳು)

ಶನಿವಾರ, ಮಾರ್ಚ್ 7, 2015

ಹೆಣ್ಣು - ಗಂಡು ಜೀವನ ಚಕ್ರ

ನಾವೇನು ಸಾಧಿಸಲಿಲ್ಲ.  ಎಷ್ಟೊಂದು ಓದಿದೆನು. ಹೇಗೆಲ್ಲಾ ಬದುಕಬಹುದಾಗಿತ್ತು. ನಾನು ನನ್ನ ಗಂಡನಿಗಿಂತ, ನನ್ನ ಅಣ್ಣನಿಗಿಂತ ದೊಡ್ಡ ಹುದ್ದೆಯಲ್ಲಿ, ದೊಡ್ಡ ಸ್ಥಾನದಲ್ಲಿ ಇರಬಹುದಾಗಿತ್ತು. ಆದರೂ ಎಲ್ಲಾ ತ್ಯಾಗ ಮಾಡಿದೆ. ಯಾರಿಗಾಗಿ ನಿನಗಾಗಿ ಆ ನೀನು ಅಂದರೇ ಪುನಃ ಗಂಡ, ಮಗ ಹೀಗೆ ಗಂಡಸಿಗಾಗಿ ಮಾತ್ರ.. ಇದು ಪ್ರತಿಯೊಂದು ಹೆಣ್ಣು ಜೀವದ ನೊಂದ ಮಾತುಗಳು.

ತ್ಯಾಗ ಮೂರ್ತಿ ಅಂದರೇ ಅದು ಸ್ತ್ರೀ ಜೀವವೇ ಯಾಕಾಗುತ್ತದೆ?

ಕ್ಷಮಯ ಧರಿತ್ರಿ ಎಂದು ಯಾರು ಹೆಣ್ಣನ್ನು ಕರೆದರೋ, ಹೆಣ್ಣಿಗೆ ಎಲ್ಲವನ್ನು ತನ್ನಲ್ಲಿ ಮೊಕವಾಗಿ ಹುದುಗಿಸಿಕೊಳ್ಳುವ ಆ ಭೂ ತಾಯಿಯ ಗುಣವನ್ನು ಆ ಕಾಣದ ದೇವರು ಹೆಣ್ಣು ಧರೆಗೆ ಬರುವ ಸಮಯದಲ್ಲಿ ಇಟ್ಟು ಕಳಿಸಿಬಿಡುತ್ತಾನೆ ಅನಿಸುತ್ತದೆ.

ಪ್ರತಿಯೊಂದನ್ನು ತನ್ನ ಒಡಲಲ್ಲಿಯೇ ಇಟ್ಟುಕೊಂಡು ತನ್ನ ಸುತ್ತ ಇರುವವರ ಕ್ಷೇಮ ಮತ್ತು ಅವರ ಸಂತೋಷದಲ್ಲಿಯೇ ತನ್ನ ಸಂತೋಷವನ್ನು ಕಾಣುವ ಈ ಕರುಣ ಗುಣದ ತೇವವನ್ನು ಯಾರಲ್ಲೊ ಕಾಣದಾಗಿದೆ.

ಅದಕ್ಕೆ ಹೆಣ್ಣಿನ ದ್ವನಿಯೇ ಮಧುರ. ಆ ಮಾತಿನ ಸವಿ ಕೇಳಿದರೇ ಸಾವಿರ ಜಂಜಾಟಗಳು ದೂರ. ಕೋಗಿಲೆಯ ಕಂಠ ಎಂದು ಕರೆಯುವುದು, ಗಾಯಕಿಗೆ. ದ್ವನಿಯಲ್ಲಿ ಇರುವ ಮಮತೆಯ ಪದಗಳ ಮುತ್ತು ಎಂಥವರನ್ನು ಒಂದು ಕ್ಷಣ ಮಮ್ ಮಾಡುತ್ತದೆ. ಅದಕ್ಕೆ ಕಾರಣ ಅವಳ ಪ್ರತಿ ರಕ್ತ ರಕ್ತ ಕಣದಲ್ಲಿ ಇರುವ ಪ್ರೀತಿಯ ಕರುಣಾ ರಸ.

ಮಗು ತನ್ನ ಮೊದಲ ಜೀವದ ದ್ವನಿಯನ್ನು ಕೇಳುವುದು ತಾಯಿಯದೆ! ಮೊದಲ ಪ್ರೀತಿಯ ಹಾಲನ್ನು ಕುಡಿಯುವುದು ತಾಯಿಯದೆ. ಅಂದಿನಿಂದ ಆ ಮಗುವಿಗೆ ಗೊತ್ತಾಗುತ್ತದೆ ಪೊರೆಯುವುದು ಎಂದರೇ ಸ್ರ್ತೀ.

ಅವಳಿಗೆ ಇದನ್ನು ಯಾರು ಅರಿವು ಮೊಡಿಸಿದರೋ ಗೊತ್ತಿಲ್ಲ!

ಅವಳಿದ್ದರೇ ಒಂದು ರೀತಿಯ ಬೇರೆಯ ವಾತವರಣವೇ ಏರ್ಪಡುತ್ತದೆ. ಅವಳಿದ್ದರೇ ಅಲ್ಲಿರುವ ಗಾಳಿಯು ತಂಗಾಳಿಯಾಗಿ ಸೊಂಪಾದ ಇಂಪಾದ ಗೀತೆಯನ್ನು ಪಾಡಿದಂತಿರುತ್ತದೆ.  ನಾವು ಯಾವುದೇ ಜಾಗವನ್ನು ಗಮನಿಸಿದರೂ ಆ ಮಮತ ಮಹಿಯ ಸ್ಪರ್ಷವನ್ನು ಕಾಣಬಹುದು.

ಕಟ್ಟುವುದು ಸ್ತ್ರೀಯ ಕಾಯಕ. ಹೊಸತನಕ್ಕೆ ಸ್ರ್ತೀ ದ್ಯೋತಕ.

ಇದಕ್ಕೆ ಇರಬೇಕು ನಮ್ಮ ಪ್ರತಿಯೊಬ್ಬರ ಜೀವನದ ಪ್ರತಿ ಹಂತದಲ್ಲೂ ಈ ಸ್ರ್ತೀ ತಾಯಿಯಾಗಿ, ಗೆಳತಿಯಾಗಿ, ಸಂಗಾತಿಯಾಗಿ, ಮಗಳಾಗಿ ಹಾಸು ಹೊಕ್ಕಾಗಿ ನಮ್ಮ ಬಾಳನ್ನು ಸದಾ ಕಾಲ ನಲಿವಿನಿಂದ ಇಡುವುದಕ್ಕೆ ಶ್ರಮಿಸುತ್ತಾಳೆ. ನಮ್ಮ ನಮ್ಮ ಸಂತೋಷದಲ್ಲಿಯೇ ಅವಳ ನೆಮ್ಮದಿಯನ್ನು ಕಾಣುತ್ತಾಳೆ.

ನಮ್ಮ ನಮ್ಮ ಮನದಲ್ಲಿರುವ ಆತುರತೆ, ಆಕ್ರಮಣ ಗುಣವನ್ನು ಕೊಂಚ ತಗ್ಗಿಸುವುದು ಈ ಹೆಣ್ಣಿನ ಕಣ್ಣಿನಿಂದನೇ. ಅವಳಿಗಾಗಿ ನಾವು ಏನಾದರೂ ಮಾಡಬೇಕು. ನಾನು ಹೀಗೆ ಇರಬೇಕು.. ಎಂದು ಗಂಡು ಕೊಂಚ ತನ್ನ ವ್ಯಕ್ತಿತ್ವವನ್ನು ಅಚ್ಚುಕಟ್ಟು ಮಾಡಿಕೊಳ್ಳುವುದು ಹೆಣ್ಣಿನ ಕಾರಣದಿಂದಲೇ ಎಂದು ಘಂಟಾಘೋಷವಾಗಿ ಹೇಳಬಹುದು. ಇಲ್ಲವೆಂದರೇ ಹೇಳುವವರು ಕೇಳುವವರೂ ಯಾರು ಇರುವುದಿಲ್ಲ. ಅಡ್ದಾ ದಿಡ್ಡಿಗೇ ಸಾಕ್ಷಿಯನ್ನು ಯಾರು ಕೊಡಬೇಕಿಲ್ಲ!

ಆದರೂ ನಮ್ಮ ಗಂಡು ಹೃದಯಗಳು ಈ ಎಲ್ಲಾ ಸತ್ಯಗಳನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ.ಇಂದಿಗೂ ಹೆಣ್ಣು ಎಂದರೇ ಯಾಕೋ ಒಂದು ಹೆಜ್ಜೆ ಅವರನ್ನು ಹಿಂದಿಡಬೇಕು ಎಂಬ ದೋರಣೆಯ ಭಾವನೆಗಳನ್ನು ಗೊತ್ತಿಲ್ಲದೇ ತಮ್ಮಲ್ಲಿ ಇಟ್ಟುಕೊಂಡಿದ್ದಾರೆ ಎಂದರೇ ತಪ್ಪಲ್ಲಾ.

ಹೆಣ್ಣು ಎಂದರೇ ಅಬಲೆ!

ಈ ರೀತಿಯ ಋಣಾತ್ಮಕವಾದ ಮಾತುಗಳನ್ನು ತಮ್ಮ ಮಾತು ಮತ್ತು ನಡವಳಿಕೆಯಲ್ಲಿ ತೋರಿಸುವುದು ಆಕ್ಷಮ್ಯ ಅಂದರೇ ತಪ್ಪಲ್ಲಾ.

ನಾವುಗಳು ಯಾವುದನ್ನು ನಿರೀಕ್ಷೆ ಮಾಡುವುದಕ್ಕೂ ಸಾಧ್ಯವಿಲ್ಲವೋ ಅಂತಹ ಎಲ್ಲಾ ರಂಗದಲ್ಲೂ ಪುರುಷರಿಗಿಂತ ತಾನೇನೂ ಕಡಿಮೆ ಇಲ್ಲ ಎಂಬುದನ್ನು ಸ್ರ್ತೀ ತಾನು ಮನೆಯಲ್ಲಿ ಅಡಿಗೆ, ಮಕ್ಕಳ ಆರೈಕೆ, ಹೆತ್ತವರನ್ನು ಪೊರೆಯುವುದು, ಮನೆಗೆ ಕಣ್ಣಾಗಿ, ತಾಳ್ಮೆ ಎಂದರೇ ನಾನೇ ಎಂದುಕೊಂಡೇ ಪ್ರತಿಯೊಂದನ್ನೂ ಪುರುಷರು ಮನೆಯಲ್ಲಿ ಯಾವ ಕಾರ್ಯಗಳನ್ನು ಮಾಡದೇ ಹೊರಗಡೇ ಮಾಡುವುದನ್ನೇಲ್ಲಾ ತಾನು ಮಾಡಿ ನಾನೇ ಮುಂದು ಎಂದು ತೋರಿಸಿಕೊಟ್ಟಿದ್ದಾಳೆ.

ಪುರುಷರಿಗಿಂತ ಹೆಣ್ಣು ಯಾವುದರಲ್ಲೂ ಹಿಂದಿಲ್ಲಾ ಎಂಬುದನ್ನು ಸಾಬೀತು ಮಾಡಿ ಎಷ್ಟೋ ಶತಮಾನಗಳೇ ಆಗಿವೆ. ಇಂದೊಂತೂ ಹೆಣ್ಣನ್ನು ಕೀಳಾಗಿ ಕಾಣುವ ಜಮಾನ ದೂರವಾಗಿ ಅವಳನ್ನು ಸರಿಸಮಾನಾಗಿ ಪೈಪೋಟಿಯಾಗಿ ಪರಿಗಣಿಸುವಂತಾಗಿದೆ. ಸ್ತ್ರೀಯರೇ ಆದರ್ಶವಾಗಿ ಕಾಣುವಂತಾಗಿದೆ.

ಅದಕ್ಕೆ ಕಾರಾಣ ಅವಳ ಬೇಜಾರಿಲ್ಲದ, ತಾಳ್ಮೆಯ, ಜಾಣ್ಮೆಯ ದುಡಿಮೆ. ಅವಳು ದುಡಿಯುವುದು ತನಗೆ ಮಾತ್ರವಲ್ಲಾ ತನ್ನವರಿಗಾಗಿ, ತನ್ನ ಕುಟುಂಬಕ್ಕಾಗಿ. ಜವಬ್ದಾರಿ ಎಂದರೇ ಆ ಹುಡುಗಿದು! ನೋಡು ಆ ಹುಡುಗಿ ಬಂದ ಮೇಲೆ ಈ ಮನೆಯ ವಾತಾವರಣವೇ ಚೇಂಜ್ ಆಗಿದೆ ಎಂದು ಹುಬ್ಬೇರಿಸಿ ಮಾತಾಡುವಂತಾಗಿದೆ.

ಇದು ಹೆಣ್ಣಿನ ಯುಗ. ಹೆಣ್ಣಿಗೂ ಎಲ್ಲಾ ಸ್ಥಾನ ಸಿಗಬೇಕು ಎಂಬ ಮಾತು ಇಂದಿನದು. ಅದು ಇಂದು ಸಿಗುತ್ತಿದೆ. ಅವಳು ಶಕ್ತಿಯ ಆವತರಣಿಯಾಗಿದ್ದಾಳೆ. ಅವಳು ಮನೆಯಲ್ಲು ಸೈ! ಹೊರಗಿನ ಕೆಲಸದಲ್ಲೂ ಸೈ! ಎಂದು ಪ್ರತಿಯೊಬ್ಬರೂ ಒಪ್ಪುವಂತೆ ಸಾಧಿಸುವ ಕಡೆ ಹೆಜ್ಜೆ ಇಟ್ಟಿದ್ದಾಳೆ.

ನನಗೆ ನನ್ನ ಅಮ್ಮನೇ ಮಾದರಿ, ನನಗೆ ನನ್ನ ಹೆಂಡತಿಯೇ ಶಕ್ತಿ, ನನಗೆ ನನ್ನ ಮಗಳೇ ಸ್ಫೂರ್ತಿ ಎಂದು ಗಂಡು ಜೀವಗಳು ಹೇಳುವಂತಾಗಿದೆ.

ಮನೆಯಲ್ಲಿ ಒಂದು ಹೆಣ್ಣು ಜೀವ ಇರಬೇಕಪ್ಪಾ ಎಂದು ಪ್ರತಿಯೊಬ್ಬರೂ ಯಾವ ವಿರೋಧವಿಲ್ಲದೇ ಒಪ್ಪಿಕೊಳ್ಳುವಂತಾಗಿದೆ.

ಆದರೂ ಇಂದಿಗೂ ನಮ್ಮ ಜನ ಹೆಣ್ಣು ಎಷ್ಟೇ ಓದಿ ತಿಳಿದವಳಾಗಿದ್ದರೂ ನಿನಗೇನೂ ಗೊತ್ತು? ಎಂದು ಮೊದಲಿಸಿದಾಗ. ಆ ಹೆಣ್ಣು ಅಂದುಕೊಳ್ಳುತ್ತಾಳೇ (ಅದು ತನ್ನ ಮನದಲ್ಲಿ) ’ಗೊತ್ತೂ ನಿನಗಿಂತ ಜಾಸ್ತಿ’ ಅದರೇ ತೋರಿಸಿಕೊಳ್ಳುವುದಿಲ್ಲ ನಿನ್ನಂಗೇ!

ಹೌದು ಬದಲಾಗಬೇಕಿರುವುದು ನಾವು ಮತ್ತು ನಮ್ಮ ಸಮಾಜ. ನಾವು ನೋಡುವ ನೋಟದಲ್ಲಿ. ಅವರನ್ನು ಸಹ ಇನ್ನುಮುಂದೆ ಅಬಲೆ, ಅಸರೆಗಾಗಿ ಕಾದಿರುವವಳು, ಮತ್ತೊಬ್ಬರ ಜೊತೆ ಬೇಕೇ ಬೇಕು ಎಂಬ ಮಾತುಗಳು ಇಂದು ಎಷ್ಟೊಂದು ಅಪ್ರಸ್ತುತ ಎನ್ನುವುದು ಒಬ್ಬಂಟಿಯಾಗಿ ದೊಡ್ಡ ದೊಡ್ಡ ಕಾರ್ಯ ಸಾಧನೆಗಳನ್ನು ಮಾಡಿರುವವ ಸ್ತ್ರೀಯರನ್ನು ನೋಡಿದಾಗ ನಮಗೆಲ್ಲಾ ಗೊತ್ತಾಗುತ್ತಿದೆ.

ಹೆಣ್ಣು - ಗಂಡು ಜೀವನ ಚಕ್ರದ ಎರಡು ಗಾಲಿಗಳು ಇದರಲ್ಲಿ ಯಾವುದು ಸಹ ಮೇಲು ಕೀಳು ಎಂಬುದಿಲ್ಲ.

ಹೆಚ್ಚು ಸಹಿಷ್ಣುತೆ ಗಂಡಿಗಿಂತ ಹೆಣ್ಣಿಗೆ ಇರುವುದು. ಅವಳು ಬರಿಸುವ ನೋವುಗಳು ಯಾರೊಬ್ಬರೂ ಎಂದಿಗೂ ತಮ್ಮ ಜೀವನದಲ್ಲಿ ಬರಿಸಲು ಸಾಧ್ಯವಿಲ್ಲ. ಅವಳಿಗೆ ಆ ದೇವರೇ ಕೊಟ್ಟಿರುವ ಅಪರೂಪದ ಒಂದು ಸ್ವಭಾವ ಅಂದರೇ ಈ ಸಹಿಷ್ಣುತೆ. ಅದಕ್ಕೆ ಪ್ರತಿಯೊಬ್ಬರೂ ಹ್ಯಾಟ್ಸ್ ಪ್ ಹೇಳಲೇ ಬೇಕು. ಆಗಂತಾ ಏನೂ ಮಾಡಿದರೂ ಅವಳು ಸುಮ್ಮನಿರುವವಳು ಎಂದುಕೊಂಡರೇ ನಮ್ಮಂತ ದೊಡ್ಡ ಮೂರ್ಖರು ಮತ್ತೊಬ್ಬರಿಲ್ಲ.

ಏನೇ ಆಗಲಿ ಇಂಥ ಜೀವಗಳನ್ನು ನಮ್ಮ ನಮ್ಮ ಕುಟುಂಬದಲ್ಲಿ ಹೊಂದಿರುವ ನಾವುಗಳೇ ಧನ್ಯರು. ಅವರನ್ನು ಗೌರವಿಸೋಣ ಒಟ್ಟಿಗೆ ಸೇರಿಕೊಂಡು ಸಂತಸದಿಂದ ಬಾಳೋಣ.

ಕೂಡಿ ಬಾಳಿದರೆ ಬಾಳು ಸವಿ ಜೇನು ಅಲ್ಲವಾ?