ಶುಕ್ರವಾರ, ಫೆಬ್ರವರಿ 20, 2015

ಬೆಂಗಳೂರು ಬಾಡಿಗೆ ಮನೆ ಮನ

ಬೆಂಗಳೂರಿನಲ್ಲಿ ಜೀವಿಸುವ ಪ್ರತಿಯೊಬ್ಬರ ಒಂದೇ ಒಂದು ಕನಸು ಅಂದರೇ.. ಏನಾದರೂ ಸರಿ ಒಂದು ಮನೆಯನ್ನು ಇಲ್ಲಿಯೇ ಕಟ್ಟಬೇಕು. ಇದೇ ಅವರ ಜೀವಿತಾದ ಮಹಾದಾಸೆ.

ತಮ್ಮ ಹೆತ್ತ ಊರನ್ನು ಬಿಟ್ಟು ಹೊಟ್ಟೆ ಹೊರೆಯುವುದಕ್ಕೆಂದು ಮಹಾನಗರಕ್ಕೆ ಬಂದ ದಿನದಿಂದ ಬಾಡಿಗೆ ಮನೆಯನ್ನು ಹಿಡಿದು ತಮ್ಮ ಬದುಕನ್ನು ಒಂದೊಂದೇ ಹೆಜ್ಜೆ ಇಡುತ್ತಾ ಕಟ್ಟಿಕೊಳ್ಳುವ ಜಾಣ್ಮೆಯನ್ನು ಬೆಂಗಳೂರಿನಲ್ಲಿ ಜೀವಿಸುವ ಪ್ರತಿಯೊಬ್ಬರಲ್ಲೂ ಕಾಣಬಹುದು. ಅದು ಒಂದು ನ್ಯಾಚರಲ್ ಪೇನಮಿನ ಎಂಬಂತೆ ಯಾರು ಗಮನಿಸುವುದಿಲ್ಲ.

ಬೆಂಗಳೂರು ಎಲ್ಲದನ್ನೂ ಕಲಿಸುತ್ತದಂತೆ. ಏನೂ ಗೊತ್ತಿಲ್ಲದವನಿಗೂ ಎಲ್ಲಾ ಗೊತ್ತೂ ಮಾಡುತ್ತದಂತೆ

ನಾವುಗಳು ಮೊದ ಮೊದಲು ನಮ್ಮ ಇಂಜಿನಿಯರಿಂಗ್ ಮುಗಿಸಿ ಕೆಲಸ ಹುಡುಕಲು ಬಂದ ಹೊಸತದರಲ್ಲಿ. ನಾವುಗಳು ಕೆಲಸ ಹುಡುಕಿ ಹುಡುಕಿ ಶನಿವಾರ,ಬಾನುವಾರ ದಿನಗಳಂದೂ ಯಾವುದಾದರೂ ಒಬ್ಬರ ಮನೆಯಲ್ಲಿ ಮೀಟಿಂಗ್ ಸೇರುತ್ತಿದ್ದೇವು.

ಮನೆ ಅಂದರೇ ರೂಂ. ಬ್ಯಾಚಲರ್ಸ್ ರೂಂ. ಒಂದು ಬೆಡ್ ರೂಂ, ಒಂದು ಹಾಲು ಮತ್ತು ಒಂದು ಕಿಚನ್. ಈ ರೀತಿಯ ಮನೆಯಲ್ಲಿ ಆ ಮನೆಯ ಓನರನ ತಕರಾರು ಏನೂ ಇಲ್ಲದಿದ್ದರೇ ಎಷ್ಟು ಜನ ಇರುವುದಕ್ಕೆ ಸಾಕಾಗುತ್ತಿತ್ತೋ ಅಷ್ಟು ಜನವು ಇರುತ್ತಿದ್ದೇವು. ಅದು ಪುನಃ ನಮ್ಮ ಕಾಲೇಜು ದಿನಗಳನ್ನು ನೆನಪಿಸು ಮಟ್ಟಿಗೆ ನಮ್ಮ ನಮ್ಮ ಗೆಳೆಯರೇ ಇರುತ್ತಿದ್ದೇವು. ಈ ರೀತಿ ಬೇರೆ ಬೇರೆ ಮನೆಯಲ್ಲಿ ಇರುವವರೆಲ್ಲಾ ರಜಾ ದಿನಗಳಲ್ಲಿ ಒಬ್ಬರ ಮನೆಯಲ್ಲಿ ಬೇಟಿಯಾಗುತ್ತಿದ್ದೇವು. ಮುಂಜಾನೆಯಿಂದ ಸಂಜೆಯವರೆಗೂ ಅಲ್ಲಿಯೇ ತಿಂಡಿ, ಊಟ, ನಿದ್ದೆ, ಮಾತುಕತೆಯನ್ನಾಡಿ ಸಂಜೆ ನಮ್ಮ ನಮ್ಮ ಬಾಡಿಗೆ ಮನೆಗೆ ಸೇರಿಕೊಳ್ಳುತ್ತಿದ್ದೇವು.


ಆಗ ನಾವುಗಳು ನಮ್ಮ ಗೆಳೆಯರಲ್ಲಿ ಏನಾದರೂ ಕೊಂಚ ಬದಲಾವಣೆ ಕಂಡರು.. ನೋಡು ಬೆಂಗಳೂರು ಹೇಗೆ ಬದಲಾಯಿಸಿತು ಇವನನ್ನು ಎಂದು ಹಾಡಿಕೊಳ್ಳುತ್ತಿದ್ದೇವು.

ಹೌದು! ನಿಜವಾಗಿಯೂ ಈ ಊರಿಗೆ ಏನೋ ಒಂದು ಶಕ್ತಿಯಿದೆ. ಎಂಥವರನ್ನು ಬೆಂಗಳೂರಿಗರನ್ನಾಗಿ ಮಾಡಿಕೊಳ್ಳುತ್ತದೆ.

ಬೆಂಗಳೂರಿಗರು ಅಂದರೇ ಬುದ್ಧಿವಂತರು ಎಂಬಂತೆ ಸ್ವಲ್ಪ ಬುದ್ಧಿಯನ್ನು ಕಲಿಸುತ್ತದೆ. ಹೇಗೆ ಚೆನ್ನಾಗಿ ಬದುಕಬೇಕು. ಹೇಗೆ ದುಡಿಮೆಯನ್ನು ಮಾಡಬೇಕು, ಎನ್ನುವುದನ್ನು ಯಾವುದೇ ಬೇಡಿಕೆಯಿಲ್ಲದೇ ಎಲ್ಲಾರಿಗೂ ಸಮನಾಗಿ ತಾನೇ ದಯಪಾಲಿಸುತ್ತದೆ.

ಇದಕ್ಕೆಲ್ಲಾ ಪ್ರತಿಯೊಬ್ಬ ಬೆಂಗಳೂರಿಗನು ಬೆಂಗಳೂರಿಗೆ ಕೃತಘ್ನನಾಗಿರಬೇಕು.

ಅಂದಿನಿಂದ ಹುಟ್ಟುವ ಕನಸೇ ಬೇಗ ದುಡ್ಡು ಸಂಪಾಧಿಸಬೇಕು ಮತ್ತು ಸ್ವಂತ ಮನೆಯನ್ನು ಮಾಡಿಕೊಳ್ಳಬೇಕು. ಸ್ವಂತ ಮನೆಗೆ ಬುನಾದಿಯಾಗುವುದು ಇಲ್ಲಿಂದಲೇ.

ಇಲ್ಲಿಯ ಬಾಡಿಗೆ ಮನೆಯ ಒನರ್ ಗಳ ಒರತಾ. ಅವರ ಡಿಮ್ಯಾಂಡ್. ಅವರ ಕಂಡಿಷನ್ ಗಳು. ಅವರ ತರಾವೇರಿ ಬಾಡಿಗೆ ದರಗಳು. ಏನ್ ಒಂದು ಮನೆಯಿದ್ದರೇ ಮುಗಿತು ನೋಡು, ಹೇಗೆಲ್ಲಾ ಈಜೀಯಾಗಿ ದುಡ್ಡು ಮಾಡುತ್ತಾರೆ. ನಮಗೆ ಒಂದು ಮನೆ ಇದ್ದರೇ ಸಾಕು ಕಣೋ ಬೆಂಗಳೂರಲ್ಲಿ ಹೇಗೋ ಜೀವನ ಸಾಗುತ್ತದೆ. ಎಂದು ನಮ್ಮ ನಮ್ಮಲ್ಲಿಯೇ ನಾವುಗಳು ಕನಸನ್ನು ಕಾಣಲು ಶುರು ಮಾಡುತ್ತಾರೆ.

ಹೌದು, ಬಾಡಿಗೆ ಮನೆಯ ಬದಲಾವಣೆ! ಇದು ಅತ್ಯಂತ ಬೇಸರದ ಘಟನೆ. ಬೆಂಗಳೂರಿನ ಎಲ್ಲಾ ಬಾಡಿಗೆದಾರರ ತಲೆ ತಿನ್ನುವ ವಿಷಯ.

ನಮ್ಮ ಪ್ರೀತಿಯ ಗೂಡಿಗೆ ನಾವು ಸೇರಿಸುವ ನಮ್ಮದೇ ಬೆವರ ಬೆಲೆಯ ಸಾಮಾನುಗಳ ರಾಶಿ. ಕನಸು ಮನಸಲ್ಲೂ ನಿರೀಕ್ಷಿಸದಂತೆ ದೊಡ್ಡ ರಾಶಿಯಾಗಿರುತ್ತದೆ. ಇಷ್ಟೆಲ್ಲಾ ಸಾಮನುಗಳನ್ನು ನಾವು ಯಾವಾಗ ಖರೀದಿಸಿದಿವಿ ಎಂದು ತಿಳಿಯುವುದು ನಮಗೆ ಈ ಸಾಮಾನುಗಳನ್ನು ನಿನ್ನೊಂದು ಮನೆಗೆ ಸಾಗಿಸಲು ಪ್ಯಾಕ್ ಮಾಡುವಾಗ.

ಮನೆಯನ್ನು ಶಿಪ್ಟ್ ಮಾಡುವ ಕೆಲಸ ಯಾವ ದೇವರಿಗೂ ಬೇಡ ಅನಿಸುತ್ತದೆ. ಪ್ರೀತಿಯಿಂದ ಎಷ್ಟೊಂದು ಮಮತೆಯಿಂದ ಸ್ವಲ್ಪ ಕಾಸ್ಟ್ ಲಿ ವಸ್ತುಗಳನ್ನೇ ಖರೀದಿಸಿರುತ್ತೇವೆ. ಅವುಗಳ ಒಳಪು ಬಿಳುಪು ನಮಗೆ ಒಂದು ರೀತಿಯ ಹೆಮ್ಮೆಯನ್ನುಂಟು ಮಾಡಿರುತ್ತದೆ. ಯಾಕೆಂದರೇ ನಿತ್ಯ ಅವುಗಳ ಮದ್ಯದಲ್ಲಿಯೇ ಆ ಚಿಕ್ಕ ಮನೆಯಲ್ಲಿ ಅವುಗಳ ಸ್ಪರ್ಷದಲ್ಲಿ ಜೀವಿಸಿರುತ್ತೆವೆ.

ಜೀವ ಇರುವ ಮನುಷ್ಯರಿಗಿಂತ ನಮಗೆ ಅವುಗಳೇ ಮುಖ್ಯ. ಅವುಗಳಿಗೆ ಎಲ್ಲಿ ಏನಾಗುತ್ತೋ ಎಂದು ಸಾಮಾನುಗಳನ್ನು ಬೇರೆ ಮನೆಗೆ ಸಾಗಿಸುವಗ ನಮ್ಮ ಎದೆ ಡವಡವ ಎಂದು ಬಡಿದುಕೊಳ್ಳುತ್ತದೆ. ಅವುಗಳು ಏನಾದರೂ ಮುಕ್ಕಾದರೇ ದೇವರೇ? ಎಷ್ಟೊಂದು ದುಡ್ಡು ಕೊಟ್ಟು ತಂದಿರುವುದು! ಎಂದು ಮನೆಯ ಪ್ರತಿ ಸದಸ್ಯನು ಮನದಲ್ಲೆ ಹಲುಬುತ್ತಾನೆ.

ಏನೊಂದು ಊನಾ ಬರದಂತೆ ಇನ್ನೊಂದು ಮನೆಗೆ ಶಿಪ್ಟ್ ಆದರೇ ಸಾಕಪ್ಪಾ ದೇವರೆ.. ನಿನಗೆ ಒಂದು ತೆಂಗಿನ ಕಾಯಿಯನ್ನು ಹೊಡೆಸುತ್ತೇನೆ ಎಂದು ಮನೆ ದೇವರಿಗೆ ಹರಕೆ ಹೊರುತ್ತಾನೆ.

ಹೌದು, ಇದು ತನ್ನ ಬೆವರು, ಸಮಯ ಮತ್ತು ಪರಿಶ್ರಮದಿಂದ ತಾನೇ ತನ್ನ ಕೈಯಾರ ತಂದಿರುವ ವಸ್ತುಗಳು. ಅವುಗಳ ಜವಬ್ದಾರಿ ಆ ಮನೆಯವರಿಗೆ ಸೇರಿದ್ದು. ಅದಕ್ಕೆ ಅಷ್ಟೊಂದು ಕಾಳಜಿ. ಅಷ್ಟೇ!

ಅಂದೆ ಅವನು ನಿರ್ಧರಿಸುತ್ತಾನೆ. ಮುಂದಿನ ಮನೆ ಅಂಥ ಏನಾದರೂ ಶಿಪ್ಟ ನಾನು ಮಾಡಿದರೇ.. ಅದು ನನ್ನದೇ ಸ್ವಂತ ಮನೆಗೆ ಶಿಫ್ಟ ಮಾತ್ರ. ಸಾಲ-ಸುಲ ಆದರೂ ಚಿಂತೆಯಿಲ್ಲ. ಒಂದು ಚಿಕ್ಕ ಮನೆಯನ್ನು ತೆಗೆದುಕೊಳ್ಳಬೇಕು. ಯಾಕೆಂದರೇ ಈ ಮನೆಯನ್ನು ಶಿಫ್ಟ್ ಮಾಡುವ ಜಂಜಾಡವೇ ಬೇಡ ಎಂದು. ಅಲ್ಲಿಯೇ ನಮ್ಮ ಪ್ರೀತಿಯ ವಸ್ತುಗಳಿಗೆ ಶಾಶ್ವತವಾದ ಜಾಗವನ್ನು ಕಲ್ಪಿಸಬಹುದು. ನಾವುಗಳೂ ಹೇಗಾದರೂ ಇರಬಹುದು. ಒನರ್ ಕಿರಿಕಿರಿ, ಪ್ರತಿ ವರುಷ ಬೇರೆ ಮನೆಗೆ ಹೋಗುವ ಪರಿಪರಿ ಎಲ್ಲಾದರಿಂದ ಮುಕ್ತಿ ಎಂದು ತಾನೇ ಒಂದು ಗಟ್ಟಿ ಮನಸ್ಸಿಗೆ ಬರುತ್ತಾನೆ. ಈ ಕನಸು ಹಿಡೇರಿಸಿಕೊಳ್ಳುವ ದಾರಿಗಳನ್ನು ಹುಡುಕುತ್ತಾನೆ. ಹುಡುಕುವವನಿಗೆ ನೂರಾರು ದಾರಿಗಳೂ ಎಂಬಂತೆ ಒಂದಲ್ಲಾ ಒಂದು ವೇ ಸಿಕ್ಕೇ ಸಿಗುತ್ತಾದೆ.

ಒಂದು ಎರಡು ವರುಷದಲ್ಲಿ ತನ್ನದೇ ಮನೆ, ಒಂದು ಕಾರು ಮತ್ತೊಂದು ಮನೆ. ಒಂದು ಮನೆ ನನಗೆ ಮತ್ತೊಂದು ಬಾಡಿಗೆಗೆ ಎಂದು ಎರಡು ಮನೆಯ ವಾರಸುದಾರನಾಗುತ್ತಾನೆ. ಹಳ್ಳಿಯಿಂದ ಬಂದ ಹೈದ ಬೆಂಗಳೂರು ಪೇಟೆಯಲ್ಲಿ.

ಇದೂ ಬೆಂಗಳೂರು. ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎನ್ನುವ ಗಾದೆಗೆ, ಬೆಂಗಳೂರಲ್ಲಿ ಮನೆ ಕಟ್ಟಿನೋಡು ಗೊತ್ತಾಗುತ್ತದೆ ಎಂದು ಹೊಸದಾಗಿ ಬೆಂಗಳೂರಿಗೆ ಬರುವ, ಬಂದಿರುವವರಿಗೆ ಚಿಕ್ಕದಾದ ಪಾಠವನ್ನು ಹೇಳುವ ಮಟ್ಟಿಗೆ ಬೆಂಗಳೂರನ್ನು ತನ್ನದಾಗಿ ಮಾಡಿಕೊಂಡಿರುತ್ತಾನೆ.

ಇದು ಬೆಂಗಳೂರು. ಬದುಕಲೇಬೇಕು. ಏನೇ ತಕರಾರು ಇದ್ದರು ಚಿಂತೆಯಿಲ್ಲ. ಎಲ್ಲದಕ್ಕೂ ಒಂದು ಉತ್ತರ ಇರುತ್ತದೆ. ಎಲ್ಲಾ ಹಳ್ಳಿಗಳು ಸೇರಿ ಬೆಂಗಳೂರು. ಎಲ್ಲಾ ಮನಸುಗಳು ಸೇರಿ ಬೆಂಗಳೂರು!


ಭಾನುವಾರ, ಫೆಬ್ರವರಿ 15, 2015

ಕನ್ನಡ ಪ್ರೀತಿ


ನಮಸ್ಕಾರಗಳು

ನಿಮ್ಮ ಈ ವಾರದ ಲೇಖನ ’ತಾಯ್ನುಡಿಯ ದಿನ ಮತ್ತು ದೇವನೂರರ ಮಾತಿನ ಸುತ್ತ’ ಹತ್ತು ಹಲವು ಭಾಷೆಯ ಬಗೆಯ ಮಜಲುಗಳನ್ನು ಪರಿಚಯಿಸಿತು. ಇದು ಕನ್ನಡ ನಾಡು ನುಡಿಯ ಉಳಿವಿನ ಬಗ್ಗೆ ಪ್ರತಿಯೊಬ್ಬರೂ ಯೋಚಿಸುವಂತೆ ಮಾಡಿದೆ.

ಭಾಷೆಯ ಮಾದ್ಯಮವನ್ನು ಒತ್ತಾಯ ಪೂರಕವಾಗಿ ಯಾರ ಮೇಲೂ ಹೇರಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಸಾವಿರಾರು ವಿವಿಧ ಭಾಷೆಗಳನ್ನು ಮಾತನಾಡುವ ಜನ ಸಮೂಹವೇ ಇದೆ. ಅದು ಅವರ ತಾಯಿ ನುಡಿ ಮತ್ತು ಮನೆಯ ಮಾತು.

ಕನ್ನಡಕ್ಕೆ ಬಂದರೇ ಕನ್ನಡದ ಉಳಿವು ಅಳಿವಿನ ಕೂಗು ಜಾಸ್ತಿ ಕೇಳಿ ಬರುವುದು ಬೆಂಗಳೂರಿನಲ್ಲಿ ಮಾತ್ರ ಅನಿಸುತ್ತದೆ. ಯಾಕೆಂದರೇ ಬೆಂಗಳೂರು ಅದು ಯಾವಗಲೋ ಕಂಗ್ಲೀಷ್ ಮಯವಾಗಿದೆ. ದುರ್ಬಿನ್ ಹಾಕಿಕೊಂಡು ಹುಡುಕಿದರೂ ಪೂರ್ಣ ಕನ್ನಡ ಮಾತನಾಡುವ ಜನಗಳು ಸಿಗುವುದು ದುರ್ಲಬ ಅನಿಸುವಂತಾಗಿದೆ.

ಇದಕ್ಕೆ ಉದಾಹರಣೆ ಎನ್ನುವಂತೆ ಬೆಂಗಳೂರಿನಿಂದ ಹೊರಡುವ ಪತ್ರಿಕೆಗಳು, ಟಿ.ವಿ, ರೇಡಿಯೋ ಕಾರ್ಯಕ್ರಮಗಳಲ್ಲಿ ಬಳಸುವ ಯಾವುದೇ ವಿಷಯಗಳು ಪೂರ್ಣ ಅಥವಾ ಇಂಗ್ಲಿಷ್ ಮಿಶ್ರ ಕನ್ನಡವಾಗಿರುತ್ತದೆ. ಕನ್ನಡ ಪತ್ರಿಕೆಗಳಿಗೆ ಒಮ್ಮೊಮ್ಮೆ ಮುಖಪುಟದಲ್ಲಿ ಬಳಸುವ ಸುದ್ದಿಯ ಹಣೆಬರಹಗಳನ್ನು ಸಹ ಇಂಗ್ಲಿಷ್ ನಲ್ಲಿಯೇ ಕೊಡುತ್ತಾರೆ. ಸಿನಿಮಾಗಳಂತೂ ಯಾವಗಲೋ ಇಂಗ್ಲಿಷ ಟೈಟಲ್ ಇಟ್ಟರೆ ಕ್ಲಿಕ್ ಎನ್ನುವಷ್ಟರ ಮಟ್ಟಿಗೆ ಮೊರೆ ಹೋಗಿದ್ದಾರೆ.

ಪತ್ರಿಕೆಗಳು,ಸಿನಿಮಾ,ಸಮೊಹ ಮಾಧ್ಯಮಗಳಿಗೆ ಯಾಕಪ್ಪಾ ಇಂಗ್ಲಿಷ್ ಮೋಹ ಎಂದು ಕೇಳಿದರೇ.. ಸಾರ್ ಜನಕ್ಕೆ ಬೇಕಾದ ಕ್ಯಾಚಿ ಟೈಟಲ್/ಪದಗಳನ್ನು ಇಂಗ್ಲಿಷ್ ನಲ್ಲಿ ಕೊಡುತ್ತೇವೆ. ಅದು ಜನರಿಗೆ ಬೇಗ ತಲುಪುತ್ತದೆ ಎನ್ನುತ್ತಾರೆ.

ನಾವು ಇಲ್ಲಿ ಬದುಕಬೇಕೆಂದರೇ ಕಂಗ್ಲಿಷ್ ಬೇಕೇ ಬೇಕು ಎಂದು ತಿಳಿದವರೇ ಕನ್ನಡ ಕನ್ನಡ ಎಂದು ಕೂಗುವರೇ ತಮ್ಮ ಅಸಹಾಯಕತೆಯನ್ನು ತೊಡಿಕೊಳ್ಳುತ್ತಾರೆ.

ಬೆಂಗಳೂರಿನಿಂದ ಪ್ರಾರಂಭಿಸಿ ಕಂಗ್ಲಿಷ್ ನ್ನು ಹಳ್ಳಿ ಹಳ್ಳಿಗೂ ಪಸರಿಸುವ ಕಾಯಕವನ್ನು ಕನ್ನಡವನ್ನು ಬೆಳೆಸಬೇಕಾದ ಈ ಜನರೇ ಕನ್ನಡವನ್ನು ಕೊಲ್ಲುವ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದರೇ ತಪ್ಪಿಲ್ಲ. ಅಪ್ಪಿ ತಪ್ಪಿ ಶುದ್ಧ ಶುದ್ಧ ಕನ್ನಡ ಇನ್ನೂ ಸ್ವಲ್ಪ ಇದೇ ಅಂದರೇ ಅದು ಯಾವುದೋ ಕೊನೆಯ ಮೊಲೆಯ ಹಳ್ಳಿಗಳ ಪಡಸಾಲೆಯಲ್ಲಿ ಮಾತ್ರ. ಇಲ್ಲೂ ಇನ್ನೂ ಸ್ವಲ್ಪ ದಿನದಲ್ಲಿ ಪೂರ್ಣ ಬದಲಾವಣೆಯಾದರೇ ಆಶ್ಚರ್ಯವಿಲ್ಲ. ಕನ್ನಡಕ್ಕೆ ಬೆಲೆಯೇ ಇಲ್ಲ ಎಂದರೇ ಅತಿಶಯೋಕ್ತಿಯಲ್ಲ. ಇದಕ್ಕೆ ಸಂಕಟಪಡಬೇಕಾದವರು ಯಾರು?

ಈ ರೀತಿಯ ಸನ್ನಿವೇಶದಲ್ಲಿ. ಕನ್ನಡವೇ ಬೇಕು. ಕನ್ನಡವೇ ಮಾಧ್ಯಮವಾಗಬೇಕು. ಕನ್ನಡವನ್ನೇ ಮಾತನಾಡಬೇಕು ಎಂದು ಶಾಸನವನ್ನು ಮಾಡಿದರೇ ಕನ್ನಡ ಉಳಿಯುವುದೇ?

ಕನ್ನಡವನ್ನು ಉಳಿಸಬೇಕೆಂದರೇ ಕನ್ನಡದ ಬಗ್ಗೆ ಜನರಿಗೆ ಅತಿ ಪ್ರೀತಿ ಬರುವಂತೆ ಮಾಡಬೇಕು. ಕನ್ನಡದಲ್ಲೂ ಎಲ್ಲಾ ಇದೆ ಎಂಬ ಮರ್ಮವನ್ನು ಪ್ರತಿಯೊಬ್ಬರೂ ತಿಳಿಯುವಂತಾಗಬೇಕು. ಕೊನೆ ಕೊನೆಗೆ ಹುಟ್ಟು ಕನ್ನಡಿಗರಿಗಾದರೂ ಇದರ ಘನತೆ ಅರಿಯುವಂತಾಗಬೇಕು.

ಎಲ್ಲಿ ಕನ್ನಡ ಮಾತನಾಡಿದರೇ, ಕನ್ನಡ ಪತ್ರಿಕೆ - ಪುಸ್ತಕ ಓದಿದರೇ, ಕನ್ನಡ ಸಿನಿಮಾ ನೋಡಿದರೇ, ಕನ್ನಡ ಶಾಲೆಯಲ್ಲಿ ಓದಿದರೇ ತಮ್ಮ ಮಾನ ಮರ್ಯಾದೆ ಹೋಗುತ್ತದೆ ಎಂಬ ಭಾವನೆಯನ್ನು ನಮ್ಮ ಕನ್ನಡದ ಗಡಿಯಾಚೆಗೆ ಹೊಡೆದೋಡಿಸಬೇಕು.

ಕನ್ನಡಿಗರಿಗೆ ಯಾಕೇ ಈ ನಿರಾಭಿಮಾನ ಕನ್ನಡದ ಬಗ್ಗೆ? ಯಾವ ಕಡೆಯಿಂದ ಯೋಚಿಸಿದರೂ ಉತ್ತರವೇ ಸಿಗುತ್ತಿಲ್ಲ!

ಪ್ರತಿ ವರುಷ ಜರುಗುವ ಕನ್ನಡ ರಾಜ್ಯೋತ್ಸವ, ಕನ್ನಡ ಸಮ್ಮೇಳನಗಳ ಸಂದರ್ಭದಲ್ಲಿ ಮಾತ್ರ ಈ ಬಗ್ಗೆ ಮಾತನಾಡುವುದು ಮಾತ್ರ ಎನ್ನುವಂತಾಗಬಾರದು.

ಕನ್ನಡದಲ್ಲಿ ಏನೇನೂ ಇಲ್ಲ ಎನ್ನುವವರ ಕಣ್ಣು ತೆರೆಯಿಸುವ ಕರ್ತವ್ಯ ಸರ್ಕಾರಕ್ಕಿಂತ ಜನ ಸಮೊಹ ಮತ್ತು ಜನರಿಂದಾಗಬೇಕು. ಕೇವಲ ಸರ್ಕಾರದ ಶಾಸನದಿಂದ ಯಾವುದು ಬದಲಾಗದು. ಒತ್ತಾಯದಿಂದ ಯಾರನ್ನು ಬದಲಾಯಿಸಲಾಗದು ಅಲ್ಲವಾ? ಅದು ಪ್ರೀತಿಯಿಂದಾಗಬೇಕು. ಅದೇ ಮಾತ್ರ ಶಾಶ್ವತವಾದದ್ದು.

ಇಲ್ಲವೆಂದರೇ ಈ ಕೂಗು ನಿರಂತರವಾಗಿರುತ್ತದೆ. ಕನ್ನಡದ ಜರೂರತೇ ಬೇಡ ಎಂದು ಕನ್ನಡಿಗರೇ ನಿರ್ಧಾರ ಮಾಡಿಬಿಟ್ಟರೇ ಮುಂದಿನ ಪೀಳಿಗೆಗೆ ಕನ್ನಡದ ಹಿರಿಮೆ, ಕನ್ನಡ ಕಲಿಸಿಕೊಡುವವರು ಯಾರು ಸ್ವಾಮಿ?

ಕನ್ನಡಿಗರೂ ಕೊಂಚ ತನ್ನ ತಾಯ್ನುಡಿಯ ಮೇಲಿನ ಪ್ರೇಮವನ್ನು ಅಕ್ಕ ಪಕ್ಕದ ರಾಜ್ಯದವರನ್ನು ನೋಡಿ ಕಲಿಯುವುದು ಬಹಳ ಇದೆ. ಅವರಲ್ಲಿ ಇರುವ ಪ್ರೀತಿ ನಮ್ಮಲ್ಲಿ ಯಾಕಿಲ್ಲ? ಅವರು ಎಲ್ಲಾ ರೀತಿಯಲ್ಲೂ ಮುಂದುವರಿದಿದ್ದಾರೆ. ಅವರು ಅವರ ಮಾತೃ ಭಾಷೆಯಲ್ಲಿಯೆ ತಮ್ಮ ವ್ಯವಾಹರನ್ನು ಮಾಡುತ್ತಾರೆ. ನಮ್ಮಲ್ಲಿರುವಷ್ಟು ತಮ್ಮ ಭಾಷೆಯ ಉಳಿವಿನ ಕೂಗು ಎಲ್ಲಿ ಎಂದಿಗೂ ಇಲ್ಲ. ಇದ್ದರೂ ನಮ್ಮಲ್ಲಿದ್ದಷ್ಟು ಆತಂಕಕಾರಿಯಗಿಲ್ಲ.


ಆ ಮನೋಭಾವನೆ ನಮ್ಮಲ್ಲಿ ಸ್ವಯಂ ಘೋಷಿತವಾಗಿ ಬರಬೇಕು. ಆಗ ತನ್ನಷ್ಟಕ್ಕೆ ತಾನೇ ಕನ್ನಡ ಮಾದ್ಯಮಕ್ಕೆ ಒಲಿಯುವ ಮತ್ತು ಮಣಿಯುವ ಗಟ್ಟಿ ಕನ್ನಡ ಕಲಿಗಳು ಸಿಗುತ್ತಾರೆ. ಇದರಿಂದ ಮಾತ್ರ ಕನ್ನಡದ ಭವಿಷ್ಯವನ್ನು ಕೊಂಚ ನಿರಕ್ಷಿಸಬಹುದು.


 

ಶನಿವಾರ, ಫೆಬ್ರವರಿ 7, 2015

ನಾನು ನನ್ನ ಜೀವ!

ಸಂತೋಷ, ಪೂರ್ಣ ಸಂತೋಷ ಕ್ಷಣ ಯಾವುದು ಎಂದು ಹೇಳಲು ನಾನು ನನ್ನ ಜೀವದ ಜೀವವನ್ನು ಕಾಣಬೇಕಾಯಿತು.

ಇದೆ ಇರಬೇಕು. ಅಬ್ಬಾ ಒಂಬತ್ತು ತಿಂಗಳು ಹೊತ್ತು ಎತ್ತಿದ ಈ ನನ್ನ ಜೀವದ ಜೀವ ಅಂಕುರವಾದ ದಿನದಿಂದ ಇಂದು ನನ್ನ ಮುಖಕ್ಕೆ ಅದು ನೀಡುವ ಕಚ್ಚು ಕಚ್ಚು ಮುತ್ತಿನವರೆಗೂ ಒಂದೊಂದು ಕ್ಷಣವನ್ನು ನಾನು ನನ್ನ ಉಸಿರಾಗಿ ಅನಿಭವಿಸಿದ್ದೇನೆ.

ಅದಕ್ಕೆ ಇರಬೇಕು ಎಲ್ಲಾ ತಾಯಂದಿರಿಗೆ ಎಲ್ಲಾ ಮಕ್ಕಳ ಮೇಲೆ ಅದೇ ಸಮಾನದ ಪ್ರೀತಿಯನ್ನು ಕೊಡಲು ಸಾಧ್ಯ.

ಅದು ಮಾತ್ರ ಒಬ್ಬ ತಾಯಿಗೆ ಮಾತ್ರ ಸಾಧ್ಯ. ಅದಕ್ಕೆ ಮಮತಾಮಹಿ ಎನ್ನುವುದು.

ತಾಯಿಯಾಗುವುದು ಹೆಣ್ಣಿನ ಪುನರ್ ಜನ್ಮವೇ ಸರಿ. ಎಷ್ಟು ಭಯ, ಕಾತುರಗಳು.

ನನ್ನ ಮಡಿಲಲ್ಲಿ ಅದು ಪ್ರಾರಂಭಿಸುವ ಚಲನೆಗಳು ನನ್ನನ್ನು ಒಮ್ಮೊಮ್ಮೆ ಭಯ ಮತ್ತು ಅಚ್ಚರಿಗೆ ದೂಡುತ್ತಿತ್ತು. ಒಂದು ಚಿಕ್ಕ ಬಿಂದು ಅಂಶದಿಂದ ಸಮಸ್ತತತೆಗೆ ಬಂದು ನಿಲ್ಲುವ ಆ ಉಸಿರಿನ ವಿಸ್ಮಯ ಎಷ್ಟೊಂದು ಅಗಾಧವಾದದ್ದು.

ನಾನು ನನ್ನನ್ನೇ ಚೆನ್ನಾಗಿ ನೋಡಿಕೊಳ್ಳಲು ಬರುವುದಿಲ್ಲ ಎಂಬುದು ನನ್ನ ಅಮ್ಮ, ಅಪ್ಪರ ದೂರು.

ಆದರೆ ನನಗೆ ನನ್ನದೆಯಾದ ಜೀವ ನನ್ನ ಕೈಯಲ್ಲಿದೆ. ತಾಯಿತನವೇ ಹೆಣ್ಣನ್ನು ಪೂರ್ಣ ಹೆಣ್ಣಾಗಿ ಮಾರ್ಪಡಿಸಿಬಿಡುತ್ತದೆ ಅನಿಸುತ್ತದೆ.


 

ಒಂಬತ್ತು ತಿಂಗಳ ಪ್ರತಿ ಸೆಕೆಂಡು ಇನ್ನೊಂದು ಜೀವ ನನ್ನ ಮಡಿಲಲ್ಲಿ ಇದೆ. ಆದರ ಬಗ್ಗೆ ಪ್ರತಿ ಸೆಕೆಂಡು ಚಿತ್ರ ವಿಚಿತ್ರವಾದ ಚಿತ್ತಾರವನ್ನು ಮನಸ್ಸಲ್ಲಿ ಕಲ್ಪಿಸಿಕೊಳ್ಳುವುದು ಯಾರೊಬ್ಬರಿಗೂ ಸಿಗದ ಅಪರೂಪದ ಅನುಭವ.

ಬಸುರಿತನ ನನಗೊಬ್ಬಳಿಗೆ ಅಲ್ಲಾ. ಮನೆಯಲ್ಲಿ ನನ್ನ ಗಂಡನಿಂದ ನನ್ನ ಹೆತ್ತವರು, ಸಂಬಂಧಿಕರು, ನೆರೆಹೊರೆಯವರು ಪ್ರತಿಯೊಬ್ಬರೂ ಆಧರಿಸುವ ರೀತಿಯನ್ನು ಕಂಡು ಇನ್ನೂ ಹೆಚ್ಚು ಹೆಚ್ಚು ನನ್ನ ಜೀವದ ಬಗ್ಗೆ ನಾನು ಅಚ್ಚಿಕೊಳ್ಳಲು ಪ್ರಾರಂಭಿಸಿದೆ ಅನಿಸುತ್ತದೆ. ಈ ಒಂದು ಮಗು ಸುಖವಾಗಿ ಜನನವಾಗಿಬಿಟ್ಟರೆ ಸಾಕು ಎಂದು ದಿನ ನಿತ್ಯ ದೇವರಿಗೆ ಪ್ರಾರ್ಥನೆಯನ್ನು ಮಾಡುತ್ತಿದ್ದೆ.

ಜೀವ ಹೊಟ್ಟೆಯಲ್ಲಿ ಇದ್ದಾಗ ಎಷ್ಟೊಂದು ಕುತೂಹಲ. ಆದರೆ ಮೊದಲ ಸಲ ಆಸ್ಪತ್ರೆಯಲ್ಲಿ ಹೊಟ್ಟೆಯಲ್ಲಿ ಚಲಿಸುತ್ತಿರುವ ಆ ಅಸ್ಪಷ್ಟ ಚಿತ್ರವನ್ನು ನೋಡಿದಾಗ ಆದ ಭ್ರಮೆ ಆ ರಾತ್ರಿಯಿಡಿ ಸಂಭ್ರಮದಲ್ಲಿ ಇರುವಂತೆ ಮಾಡಿತ್ತು. ಅದು ನನ್ನ ಬೇಸ್ಟ್ ದಿನವಾಗಿತ್ತು. ನನ್ನ ಮುದ್ದು ಜೀವವನ್ನು ನನ್ನ ಯಜಮಾನರು ನೋಡಿ ಅವರ ಕಣ್ಣಲ್ಲಿ ಕಂಡ ಆಶ್ಚರ್ಯವನ್ನು ಕಂಡು ನನಗಂತೂ ಕುತೂಹಲವಾಯಿತು. ಅವರಿಗು ಹೆಮ್ಮೆಯಾಗಿರಬೇಕು ಅಪ್ಪನಾಗುತ್ತಿದ್ದೇನೆ ಎಂದು!

ಡಾಕ್ಟರ್ ಹೇಳಿದಕ್ಕೆಲ್ಲಾ ನಾವಿಬ್ಬರು ಕತ್ತು ಆಡಿಸಿದ್ದು. ಅವರು ನಮ್ಮನ್ನು ಇನ್ನೂ ಚೆನ್ನಾಗಿ ಹೆದರಿಸಬೇಕೇ ಎಂಬ ರೀತಿಯಲ್ಲಿ ಹೇಳುತ್ತಿದ್ದಾರೆ ಎಂದು ನಮ್ಮಿಬ್ಬರಿಗೂ ಅನಿಸುತ್ತಿತ್ತು. ನಮ್ಮವರು ಅವರು ಬರೆದುಕೊಟ್ಟಿದ್ದ ಔಷದಿಗಳನ್ನೇಲ್ಲಾ ಎಷ್ಟೊಂದು ಸಂಭ್ರಮದಲ್ಲಿ ತಂದುಕೊಟ್ಟು, ಅದು ಇದು ಹೀಗೆ ಜೀವದ ಕಾಳಜಿಯ ಬಗ್ಗೆ ಹೇಳಿದ್ದು ನಾನೊಂತೂ ಒಳಒಳಗೆ ಖುಷಿಪಟ್ಟಿದ್ದೆ.

ಪಾಪ ಈ ಗಂಡ ಪ್ರಾಣಿ ನನ್ನ ಬಗೆ ಎಷ್ಟೊಂದು ಮುತುವರ್ಜಿವಹಿಸುತ್ತಿದ್ದಿಯಲ್ಲಾ! ಪಾಪ ಒಳ್ಳೆ ಗಂಡ! ಎಂದು ಹೆಮ್ಮೆಯಾಯಿತು.

ನನಗೆ ಅನಿಸುತ್ತದೆ. ಗಂಡನಿಂದ, ಹೆತ್ತವರಿಂದ, ನೆರೆಹೊರೆಯವರಿಂದ ನಮ್ಮ ಬಗ್ಗೆ ಹೆಚ್ಚು ಕಾಳಜಿವಹಿಸಿಕೊಳ್ಳಬೇಕು ಅಂತಾ ನಿಮಗೆ ಆಸೆಯಿದ್ದರೆ ಒಂದು ಮಗುವನ್ನು ಹೇರಬೇಕು! ( ನನ್ನ ಮಾತು ನಂ(ಬಿ)ಬಬೇಡಿ)

ಜೀವದ ಕುರುಹು ಸಿಕ್ಕ ಮೇಲೂ ನಾವಿಬ್ಬರೂ ನಮ್ಮ ನಮ್ಮ ಮನೆಯವರಿಗೆ ಹೇಳಲು ಪಟ್ಟ ಸಂಕೋಚ ಯಾವ ದೇವರಿಗೂ ಬೇಡ. ಅವರೇ ಮೊದಲು ಅವರ ಮನೆಯವರಿಗೆ ಹೇಳಿ ಅವರ ಭಾರವನ್ನು ಇಳಿಸಿಕೊಂಡರು.

ನಾನು ನನ್ನ ಅಮ್ಮನಿಗೆ ಹೇಳಲು ಒಂದು ವಾರ ಕಾದಿದ್ದು.. ಯಾಕೇ? ಇನ್ನು ನಾನು ಅವರ ಪಾಲಿನ ಚಿಕ್ಕ ಮಗುವೇನೂ ಅಂದುಕೊಂಡಿರಬೇಕು ನಾನು. ಅದಕ್ಕೆ ಅವರಿಗೆ ಈ ನಾನು ಅಮ್ಮನಾಗುವ ವಿಷಯ ತಿಳಿಸಲು ಕಸಿವಿಸಿಯಾಗಿರಬೇಕು.

ಹೀಗೆ ಹೀಗೆ ಸಾಗಿ ಒಂದೊಂದು ತಿಂಗಳು ಜೀವ ತನ್ನ ರೂಪ ತಾನು ಪಡೆಯಿತ್ತಿತ್ತು. ಹೀಗೆಯೇ ನಾನು ಸಹ ನನ್ನ ಅಮ್ಮನ ಮಡಿಲಲ್ಲಿ ಹೇಗೆಲ್ಲಾ ಇದ್ದಿರಬಹುದು... ಹೀಗೆ ನನ್ನ ಅಮ್ಮ ನನ್ನನ್ನು ಹೊತ್ತುಕೊಂಡಿದ್ದಾಗ ನಾನು ಈಗ ಯೋಚಿಸಿರ ರೀತಿಯಲ್ಲಿ ಅವರ ಅಮ್ಮನ ಬಗ್ಗೆ ಯೋಚಿಸಿರಬಹುದೇ ಎಂದು ನನ್ನ ನನ್ನಲ್ಲಿಯೇ ಅಂದುಕೊಳ್ಳುತ್ತಿದ್ದೆ.

ನಮಗಾಗಿ ನಮ್ಮ ಹೆತ್ತವರ ಕಾಣಿಕೆಯ ಅರಿವಾಗಬೇಕು ಎಂದರೇ, ನಾವುಗಳು ಸಹ ತಂದೆ ತಾಯಿಗಳೂ ಆಗಬೇಕು! ಆದರೂ ಸಹ ಯಾಕೆ ಇಂದು ಮಕ್ಕಳು ಅವರ ಹೆತ್ತವರನ್ನು ದೊಡ್ಡವರಾದ ಮೇಲೆ ಕೇವಲವಾಗಿ ಕಾಣುತ್ತಾರೆ. ಅವರಿಗೂ ಮಕ್ಕಳಾಗಿರುತ್ತಾರೆ. ಅವರಿಗೂ ಗೊತ್ತು ಅವರ ಹೆತ್ತವರು ಅವರಿಗಾಗಿ ಎಷ್ಟು ತ್ಯಾಗ ಮಾಡಿರುತ್ತಾರೆ ಎಂದು. ಯಾಕೆ? ಹೆತ್ತವರ ಪ್ರಾಮುಖ್ಯತೆ ಇನ್ನೂ ಸಹ ನಮ್ಮ ಜನಗಳಿಗೆ ಅರ್ಥವಾಗುತ್ತಿಲ್ಲ?

ನಿಜವಾಗಿಯೂ ಈ ಜೀವ ಬಂದ ಮೇಲೆ ನನ್ನ ಒಂದೊಂದು ಉಸಿರು ಈ ಜೀವದ ಉನ್ನತೆಗಾಗಿ ಬಡಿಯುತ್ತದೆ. ನನ್ನ ನಿದ್ದೆಯೆಲ್ಲಾ ಈ ಜೀವ ಆರಾಮಾಗಿ ರಾತ್ರಿಯೆಲ್ಲಾ ಚೆನ್ನಾಗಿ ಮಲಗಿದರೇ ಸಾಕಪ್ಪ ಅನಿಸುತ್ತದೆ. ಯಾವ ಕಾಯಿಲೆ ಕಸಾಲೆ ಇಲ್ಲದೆ ಇದ್ದರೆ ಸಾಕು. ಹೊತ್ತಾಲ್ಲ ಹೊತ್ತಲ್ಲಿ ಗಳಿಗೆ ಗಳಿಗೂ ಎದ್ದು ಮಗು ಹೇಗೆ ಮಲಗಿದೆ. ಅದಕ್ಕೆ ಹಾಲು ಬೇಕಾ? ಏನಾದರೂ ಆಗಿದೇಯಾ? ರಾತ್ರಿಯಲ್ಲಿ ಏನಾದರೂ ಹಾಸಿಗೆಯಲ್ಲಿ ಒದ್ದೆ ಮಾಡಿಕೊಂಡು ಶೀತವಾಗಿ ಮಲಗಲು ತೊಂದರೆಯಾಗಬಹುದೆಂದು ಬಾರಿ ಬಾರಿ ಬಟ್ಟೆಯನ್ನು ಬದಲಿಸುವುದು... ಜೀವ ಹುಟ್ಟಿದ ಎರಡು ತಿಂಗಳು ಕಣ್ಣುಮುಚ್ಚಿ ಪೂರ್ಣ ನಿದ್ದೆಯನ್ನಂತೂ ನಾನು ಎಂದು ಮಾಡಿಲ್ಲ.

ಅದು ನನ್ನ ಪಕ್ಕ ಮಲಗಿದ್ದಾಗ ನನಗೆ ಎಷ್ಟು ಸಂಭ್ರಮ. ಅದಕ್ಕೆ ಏನೊಂದು ಅರಿವಾಗುವುದಿಲ್ಲ. ಅದಕ್ಕೆ ಬೇಕಿರುವುದು ತಾಯಿಯ ಪ್ರೀತಿಯ ಎದೆ ಹಾಲು ಮತ್ತು ಬೆಚ್ಚನೆಯ ಮಡಿಲು. ಅವೆರೆಡೇ ಅದಕ್ಕೆ ದೈರ್ಯ ಅನಿಸುತ್ತದೆ.

ಇದನ್ನು ನೋಡಿ ನನ್ನ ಅಪ್ಪ,ಅಮ್ಮ ನನ್ನ ಬಗ್ಗೆ ಹೇಗೆ ಯೋಚಿಸಿರಬಹುದು? ಎಂದು ಮನದಲ್ಲಿಯೇ ಲೆಕ್ಕ ಹಾಕಿಕೊಳ್ಳುತ್ತಿದ್ದೆ.

ಅಪ್ಪನಿಗಿಂತ ಅಮ್ಮನಿಗೆ ಮಕ್ಕಳ ಬಗ್ಗೆ ಎಲ್ಲೂ ಇಲ್ಲದ ಕಕ್ಕುಲಾತಿ. ಹೌದು ಅದು ನಿಜ. ಅಮ್ಮನಿಗೆ ಮಕ್ಕಳು ಅವಳ ಜೀವದ ಇನ್ನೊಂದು ಭಾಗವೇ ಸರಿ. ಅವಳು ತನ್ನ ರಕ್ತದಿಂದ ಇನ್ನೊಂದು ಜೀವವನ್ನು ಸೃಷ್ಟಿಸಿದ್ದಾಳೆ ಅಂದರೇ ತಪ್ಪಲ್ಲಾ!

ಅದಕ್ಕೆ ಇರಬೇಕು ಅದರ ಒಂದೊಂದು ಮೊಮೆಂಟು ತನ್ನದೇ ಮೊಮೆಂಟು ಅನಿಸುತ್ತದೆ. ಅದಕ್ಕೆ ಏನಾದರೂ ತನಗೆ ನೋವಾದ ಅನುಭವವಾಗುತ್ತದೆ. ಪ್ರತಿಕ್ಷಣವೂ ಅದರ ಜೊತೆಯಲ್ಲಿರುವ ಭಾಗ್ಯ ಮಗು ಹುಟ್ಟಿದ ಆ ಎರಡು ತಿಂಗಳು ನನಗೆ ಬೇರೆಯ ಪ್ರಪಂಚವೇ ಆಗಿತ್ತು.

ಹುಟ್ಟುವ ದಿನ ಸಂಭ್ರಮಪಡಬೇಕೋ? ಆ ನೋವು ಯಾತಾನೇಗೆ ಅಳಬೇಕೋ?

ಒಂದು ಕಡೆ ಮಗು ನೋಡಿ ಖುಷಿಯಾಗುತ್ತಿತ್ತು. ಇನ್ನೊಂದು ಕಡೆ ಆ ನೋವು ಜನ್ಮದಲ್ಲಿ ಮತ್ತೆಂದೂ ಇನ್ನೊಂದು ಮಗುವೇ ಬೇಡಪ್ಪ ಅನಿಸಿದ್ದಂತೂ ನಿಜ.

ಪ್ರತಿಯೊಬ್ಬರ ಮುಖದಲ್ಲು ಖುಷಿ. ಸುಖವಾಗಿ ಹೆರಗೆಯಾಗಿದೆ. ಮಗುವು ಚೆನ್ನಾಗಿದೆ. ನನಗಂತೂ ಅದರ ಮುಖ ನೋಡಿ ಕಣ್ಣಲ್ಲಿ ಆನಂದ ಭಾಷ್ಪವೇ ಬರುತ್ತಿತ್ತು.

ದೇಹದಲ್ಲಿ ಸಾವಿರ ನೋವುಗಳು ಇದ್ದರೂ ಅದರ ಮುಖ ನೋಡಿದಾಗ ಆ ನೋವುಗಳನ್ನು ಶಮನ ಮಾಡುವ ಆಕರ್ಷಣೆ ಈ ಪುಟ್ಟ ಮುಗದಲ್ಲಿ ಆ ದೇವರು ಅದು ಹೇಗೆ ಇಟ್ಟಿದ್ದಾನೆ! ಎಂದು ಅಚ್ಚರಿಯಾಗುತ್ತಿತ್ತು.

ಇಂದು ನನ್ನ ಹುಟ್ಟು ಹಬ್ಬ ನನ್ನ ಕೈಯಲ್ಲಿ ನನ್ನ ಜೀವವಿದೆ. ಅದಕ್ಕೆಲ್ಲಿ ಗೊತ್ತು ಹೆತ್ತಮ್ಮನ ಜನ್ಮ ದಿನ ಇಂದು ಎಂದು. ಬುದ್ಧಿಬರಬೇಕು ಬಂದು ಅದರ ಕೈಯಿಂದ ನಾನು ನನ್ನ ಜನ್ಮ ದಿನದ ಉಡುಗೊರೆಯನ್ನು ನಾನೇ ನನ್ನ ಕೈಯಾರೇ ಪಡೆಯಬೇಕು. ಆಗ ನನ್ನ ನಿಜವಾದ ಜನ್ಮದಿನ.

ಇದೆ ವರುಷದ ಹಿಂದೆ ನನ್ನ ಹೊಟ್ಟೆಯಲ್ಲಿ ಬುಳು ಬುಳು ಎಂದು ಓಡಾಡುತ್ತಿದ್ದ. ಇಂದು ನನ್ನ ತೊಡೆಯ ಮೇಲೆ ಆ.. ಊ..ಈ ಎಂದು ಕುಣಿಯುತ್ತಿದ್ದಾನೆ. ಅದು ದೇವರ ನಗುವನ್ನು ತನ್ನ ಬೊಚ್ಚು ಬಾಯಿಯಲ್ಲಿ ನನ್ನ ನೋಡಿ ನೋಡಿ!

ಇದಕ್ಕಿಂತ ದೊಡ್ಡ ಉಡುಗೊರೆ ಬೇಕೇ? ಆ ದೇವರು ಕೊಟ್ಟ ಅತಿ ದೊಡ್ಡ ಗಿಫ್ಟ್ ಈ ನನ್ನ ಜೀವ.

ನಾನು ನನ್ನ ಜೀವ!

ಗುರುವಾರ, ಫೆಬ್ರವರಿ 5, 2015

ಒಂದೇ ಮಾತು ಅಲ್ಲಾ ನೀವು ಎಲ್ಲಿ ಹೋಗಿದ್ದಿರೀ

ಒಂದೇ ಮಾತು ಅಲ್ಲಾ ನೀವು ಎಲ್ಲಿ ಹೋಗಿದ್ದಿರೀ... ನಿಮ್ಮ ಬರಹವನ್ನು ಕಾಣದೇ ನಾನು ಕಂಗಾಲಾಗಿದ್ದೇ. ನೀವು ಈ ದೇಶದಲ್ಲಿ ಇದ್ದೀರೋ ಇಲ್ಲವೋ ಎಂದು ಆ ಗೆಳತಿಯ ಕಕ್ಕುಲಾತಿಯನ್ನು ಕಂಡು ನಾನಂತೂ ಇಂದು ಕರಗಿ ಹೋದೆ.

ಅದೇ ಮೊದಲ ಮೊದಲ ಪರಿಚಯದಲ್ಲಿ, ಅದೇ ಮುಗ್ಧ ಮುಗ್ಧವಾದ ಮನಸ್ಸಿನ ಮುಖದಲ್ಲಿ ಅಂದು ಬೇಟಿಯಾದಾಗ ಕಿರು ನೋಟ ಬೀರಿದಂತೆ ಈ ನನ್ನ ಗೆಳತಿಯ ಆ ವಾಟ್ಸಾಫ್ ಮೇಸೆಜು, ಒಂದು ಸುತ್ತು ಆ ಸವಿ ಸವಿ ದಿನಗಳಿಗೆ ಕರೆದುಕೊಂಡು ಹೋಯಿತು.

ನನ್ನನ್ನೇ ನಾನು ಒಂದು ಕ್ಷಣ ಮರೆತು... ಸಿನಿಮಾದಲ್ಲಿ ತೋರಿಸುವಂತೆ ಆ ದಿನಗಳ ಒಂದು ಸುಂದರ ಕಲರ್ ಕಲರ್ ಝಲಕ್ ಹಾಗೆಯೇ ಕಣ್ಣ ಮುಂದೆ ಕೊಲಿಂಗ ಗ್ಲಾಸ್ ಹಾಕಿಕೊಂಡಿದ್ದರು ಕಂಡಿತು. ಹಾಗೆಯೇ ನನ್ನ ಮನ ಈ ಕೊರೆಯುವ ಚಳಿಯಲ್ಲಿ ಕೊಂಚ ಬೆಚ್ಚನೆಯ ಭಾವದಲ್ಲಿ ಮುಚ್ಚಿಕೊಂಡು ಮಲಗಿತು.

ಈ ಗೆಳತಿಯ ಬಗ್ಗೆ ನಾನು ಹಲವು ಬಾರಿ ಬರೆದಿದ್ದೇನೆ. ಈ ಗೆಳತಿಯ ಬಗ್ಗೆ ಹಲವು ಬಾರಿ ಹೇಳಿಕೊಂಡಿದ್ದೇನೆ. ಅಷ್ಟು ಅಕ್ಕರೆಯ ಕಾಳಜಿಯನ್ನು ಮಾಡುವ ಹುಡುಗಿ ಸಿಗುವುದು ಅಪರೂಪ. ಗೆಳೆತನಕ್ಕೆ ಇಂಥ ಒಂದು ಹೃದಯವಿದ್ದರೇ ಸಾಕು ಎನಿಸುವಂತ ಗುಣ.

ಏನೂ ಮಾಡುವುದು ಜೀವನದ ದಾರಿಯಲ್ಲಿ ಯಾವುದೋ ಒಂದು ಚಕ್ರಕ್ಕೆ ಸಿಕ್ಕ ಪಕ್ಷಿಯಂತೆ ರೆಕ್ಕೆ ನೋಂದುಕೊಂಡು ಅಲ್ಲಿ ಇಲ್ಲಿ ಅಲೆಯಾಗಿ ಸಾಗಿದಾಗ ಯಾವ ಹಿಂದಿನ ಜೊತೆಯವರನ್ನು ನೆನಪು ಮಾಡಿಕೊಳ್ಳದಷ್ಟು ಬದುಕು ಬಂದಿಸಿದಂತೆ ಇತ್ತು.

ಯಾರಿಗೂ ಏನನ್ನು ಹೇಳದಾರದಷ್ಟು ಬೆಂಗಳೂರಿನ ಬಿ.ಎಂ.ಟಿ.ಸಿ ಬಸ್ ಪ್ರಯಾಣದಂತಾಗಿತ್ತು. ಹೇಳಬಾರದು ಅದನ್ನು ಅನುಭವಿಸಬೇಕು. ಮತ್ತು ಬಿ.ಎಂ.ಟಿ.ಸಿ ಬಸ್ ಅನಿವಾರ್ಯ. ಬಿಡುವಂತಿಲ್ಲ!

ಅದು ನಮ್ಮ ಉಸಿರು. ಬೆಂಗಳೂರಿನ ಲಕ್ಷ ಜನರ ವಾಹಿನಿ ಅದು! ಕೇವಲವಾಗಿ ಮಾತನಾಡಿದರೇ ಅದರಲ್ಲಿ ಪ್ರಯಾಣಿಸುವ ಲಕ್ಷ ಜನಕ್ಕೆ ಅವಮಾನ ಮಾಡಿದಂತೆ. ನಾನು ಕೇವಲ ಉದಾಹರಣೆಗೇ ಹೇಳಿದ್ದು..


ಮರೆತು ಬಿಡಿ ದೇವ್ರು.

ಗಂಡು ಮನಸ್ಸಿಗೆ ಹಸಿರು ಎರೆಯವುದೇ ಹೆಣ್ಣು ಹೃದಯ! ಅವರ ಒಂದು ಮೆಚ್ಚುಗೆಯ ನುಡಿ ನೂರು ನೋಬೆಲ್ ಬಹುಮಾನಕ್ಕೆ ಸಮ.

ಅವರ ಒಂದು ಅಚ್ಚರಿಯ ನೋಟ ೧೦೦ ವೋಲ್ಟ್ ಬೆಳಕಿಗೆ ಸಮ. ಎಂಥ ಕತ್ತಲೆಯ ಜಂಜಾಟವನ್ನು ಈಜಿಯಾಗಿ ದಾಟುವಂತೆ ಮಾಡುತ್ತದೆ. ಅದಕ್ಕೆ ಅಲ್ಲವ ಹಿರಿಯವರು ಹೇಳಿದ್ದು. ’ಪ್ರತಿಯೊಬ್ಬ ಯಶಸ್ವಿ ಗಂಡಸಿನ ಹಿಂದೆ ಒಬ್ಬ ಹೆಣ್ಣು ಇರುತ್ತಾಳೆ’ ನೂರಕ್ಕೆ ನೂರು ಸತ್ಯವಾದ ಮಾತು.

ಮಾರೆನೇಯ ದಿನವೇ ಇನ್ನೊಂದು ಬರವಣಿಗೆಗೆ ಕೂರುವಂತೆ ಮಾಡಿದ್ದು ಅಂಥ ಒಂದು ಮಾತು. ಭಾವನೆಗೆ ರೆಕ್ಕೆಯನ್ನು ಕೊಟ್ಟಿದ್ದು ಆ ಒಂದು ಸವಿಯಾದ ನುಡಿ ಅದಕ್ಕೆ ನೂರು ನಮನ.

ಒಬ್ಬ ಅಡ್ಡದಿಡ್ಡಿಯ ಮನುಷ್ಯನನ್ನು ನೇರ ಮಾಡಿದ ಸ್ತ್ರೀ ಗೇ ದೊಡ್ಡ ಸಲಾಮು. ಬ್ಯಾಚುಲರ್ ಲೈಫ್ ಎಂಬ ಪ್ರೀ ದಿಕ್ಕು ಇಲ್ಲದ ಲೈಫ್ ನ್ನು ಕೊನೆ ಮಾಡಿ ಗಂಡಗುಂಡಿ ಮಾಡಿ ಅದಕ್ಕೆ ಒಂದು ನಿರ್ದಿಷ್ಟ ಗುರಿಯತ್ತಾ ತೆಗೆದುಕೊಂಡು ಹೋಗುವ ನಾವಿಕಳೇ ಹೆಣ್ಣು. ಆ ಹೆಣ್ಣು ಗೆಳತಿ/ಜೀವನದ ಇನ್ನೊಂದು ಚಕ್ರವೇ ಸರಿ.


ಜೀವಕ್ಕೆ ಜೀವ ಕೊಡುವ ಮನಸ್ಸು ಆ ಒಂದು ಬಂಧನಕ್ಕೆ ಇರುತ್ತದೆ. ಎರಡು ದೇಹ ಒಂದೇ ಮನಸ್ಸು ಎಂದು ನೂರಾರು ವರುಷ ಬಾಳುವಂತೆ ಮಾಡುವಂತೆ ಮಾಡುವ ಆ ಶಕ್ತಿಯನ್ನು ಆ ದೇವರು ಹೆಣ್ಣು ಮತ್ತು ಗಂಡಿಗೆ ಅದು ಹೇಗೆ ಕೊಟ್ಟಿರುತ್ತಾನೋ ಇಂದಿಗೂ ನನಗೆ ಅಚ್ಚರಿಯ ವಿಷಯವಾಗಿದೆ.

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು... ಹೊಸ ಜೀವದ ಜೋತೆ ಹೊಸ ಜಾಗದಲ್ಲಿ ತನ್ನ ಅಸ್ತಿತ್ವವನ್ನು ದಟ್ಟವಾಗಿ ನೆಲೆ ನಿಲ್ಲುವಂತೆ ಮಾಡುವ ಹೆಣ್ಣು ಜೀವವೇ ಗ್ರೇಟ್ ಮತ್ತು ಪದಗಳಿಗೆ ನಿಲುಕಲಾರದಂತು.

ಕ್ಷಮಾಯ ಧರಿತ್ರಿ ಎಂದು ಹೆಣ್ಣನ್ನು ಭೂಮಿಗೆ ಹೊಲಿಸುವುದು ಈ ಒಂದು ಗುಣಕ್ಕೆ ಇರಬೇಕು.


ನಾನು ನನ್ನ ಗೆಳತಿಯನ್ನು ಹೊಗಳುವ ಸಲುವಾಗಿ ಎಲ್ಲೆಲ್ಲಿಗೋ ಹೋಗಿಬಿಟ್ಟೆ ಕ್ಷಮೆ ಇರಲಿ. ಆದರೂ ನಾನು ಹೇಳಿದ ಮೇಲಿನ ಸತ್ಯವಾದ ಮಾತುಗಳನ್ನು ನೀವು ಹೌದ್ ಹೌದ್! ಎಂದು ಒಪ್ಪಿಕೊಂಡಿರುತ್ತಿರಾ ಅಲ್ಲವಾ.

ಹೌದು! ನನ್ನ ಅನುಭವ ನಿಮಗೂ ಆಗಿರುತ್ತೇ.. ನಿಮ್ಮದನ್ನು ನಾನು ಹೇಳಿದೇ ಎಂದು ಒಳ ಒಳಗೆ ಖುಷಿಪಟ್ಟು ನಗಬೇಡಿ... !

ಬುಧವಾರ, ಫೆಬ್ರವರಿ 4, 2015

ಜೀವನ ಸಂಘರ್ಷ

ಜೀವನ ಎಲ್ಲಿಂದ ಎಲ್ಲಿಗೊ ಬಂದು ನಿಲ್ಲುತ್ತದೆ. ಇಂದು ಏನಾಗಿದ್ದೇವೋ ಅಂದು ಏನಾಗಿದ್ದೇವೋ ಎಂದು ಪುನಃ ಪುನಃ ಪರಮರ್ಶಿಸಿಕೊಳ್ಳುವಂತೆ ಮಾಡುತ್ತದೆ.

ಇಂದು ಹೀಗೆ ಇರುವುದಕ್ಕೆ ಹತ್ತು ಹಲವಾರು ಹಿಂದಿನ ಶ್ರಮಗಳು ಇರುತ್ತವೆ.

ಏನೂ ಮಾಡದಿದ್ದರೂ ಕಾಲ ಯಾರನ್ನು ಕಾಯದೆ ನಿರಂತರವಾಗಿ ಸಾಗುತ್ತದೆ. ಕಾಲದ ಜೊತೆಯಲ್ಲಿ ನಾವುಗಳು ಸಹ ಸಾಗುತ್ತೇವೆ.

ನಾವು ಬೆಳೆಯುತ್ತೇವೆ, ಕಾಲವು ಎಲ್ಲೆ ಮೀರಿ ಹೋಗಿರುತ್ತದೆ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕಿದವನು ಬದುಕನ್ನು ಸಂಭ್ರಮವಾಗಿಟ್ಟುಕೊಂಡಿರುತ್ತಾನೆ. ಹೇ ಬಿಡು ಅನ್ನುವನು ದಿಕ್ಕುಗೆಟ್ಟು ಕಂಗಾಲಗಿರುತ್ತಾನೆ.

ಅಷ್ಟಕ್ಕೂ ಯಾಕೆ ಪ್ರತಿಯೊಬ್ಬರೂ ಜೀವನದಲ್ಲಿ ಹೀಗೆ ಇರಬೇಕು. ಇದನ್ನೇ ಮಾಡಬೇಕು. ಹೀಗೆ ಇದ್ದರೇ ಚೆನ್ನ! ಇಲ್ಲದಿದ್ದರೇ ಸರಿಯಲ್ಲಾ ಎಂದು ಅಂದುಕೊಳ್ಳುವುದು?



ಸ್ವತಃ ಯಾರನ್ನು ಯಾರು ಕೇಳುವುದಿಲ್ಲ. ದೂಸರಾ ಮಾತಾನ್ನಾಡಿಸುವುದಿಲ್ಲ. ಆದರೂ ನಾವುಗಳೆ ನಮ್ಮ ನಮ್ಮಲ್ಲಿಯೇ ಈ ಸ್ಪರ್ದೆಯನ್ನು ಕಂಡುಕೊಂಡುಬಿಡುತ್ತೇವೆ.

ನಮ್ಮ ನಮ್ಮಲ್ಲಿಯೇ ಒಬ್ಬೊರನ್ನೊಬ್ಬರೂ ಕಟ್ಟ ವೈರಿಗಳಂತೆ ಅವನು ಬೆಳೆದ, ಅವನು ಏನೋ ಮಾಡಿದ, ಅವನು ಅಲ್ಲಿಗೆ ಹೋದ, ಅವನು ಅದನ್ನು ಅಕ್ರಮಿಸಿಕೊಂಡ! ಹೀಗೆ ಬೇರೆಯವರನ್ನು ನೋಡುತ್ತಾಲೆ ನಾವುಗಳು ನಮ್ಮ ನಮ್ಮ ನೆಮ್ಮದಿಯನ್ನು ಕಳೆದುಕೊಂಡು, ಅದರಲ್ಲಿಯೇ ತೊಳಲಾಡಿ ಖುಷಿಪಡುತ್ತಾ, ಉಫ್ ಜೀವನ ಏನೂ ಕಷ್ಟ ಮಗಾ ಏಂದು ವೇದಾಂತ ಹೇಳುತ್ತೇವೆ.

ಇದು ನಾವು ಅಂದುಕೊಳ್ಳುವಷ್ಟು ಸುಲಭವು ಅಲ್ಲ ಮತ್ತು ಕಷ್ಟವು ಅಲ್ಲ. ಇದು ಏಕೆ ಹೀಗೆ ಎಂದು ಅಂದಿನಿಂದ ಇಂದಿನವರೆಗೂ ಪ್ರತಿಯೊಬ್ಬರೂ ಒಂದಲ್ಲ ಒಂದು ಸಮಯದಲ್ಲಿ ನಿಂತು ತಮ್ಮಲ್ಲಿಯೇ ಪ್ರಶ್ನಿಸಿಕೊಂಡಿರುತ್ತಾರೆ.

ಉತ್ತರ ಸಿಗಬೇಕು ಸಿಗಬೇಕು ಎಂದು ತಲೆ ಚಚ್ಚಿಕೊಂಡಿರುತ್ತಾರೆ. ಉತ್ತರ ಸಿಗದೇ ಈ ಬದುಕೇ ಇಷ್ಟು ಎಂದು ಮುಂದೆ ಮುಂದೆ ವೇಗದಿಂದ ಓಡುತ್ತಾರೆ. ಚಿಂತೆ ಮಾಡುತ್ತಾ ಕುಳಿತರೇ ಹಿಂದಿನವರು ಇವನನ್ನು ಅನಾಮತ್ತ್ ತುಳಿದುಕೊಂಡು ಕಾಲು ಕಸ ಮಾಡಿಬಿಡುತ್ತಾರೆ.

ಅದಕ್ಕೆ ಈ ಜಂಜಾಟದ ವೇಗದ ಬದುಕು.

ಉಫ್ ಕಾಲು ಎಷ್ಟು ಸವೆದು ಹೋಗಿದೆ.

ಅಷ್ಟೊಂದು ಓಟ!

ಬದುಕು ಯಾವ ಯಾವ ಕಡೆ ಸವೆದು, ಹೊಸತನ ಕಂಡುಕೊಳ್ಳಬೇಕು ಆಯಾ ಕಡೆಗೆ ತಿರುಗಣೆಯಂತೆ ನಿರಂತರ ಮನದ ಮರ್ಮದ ಚಲನೆಯನ್ನು ಕಂಡುಕೊಂಡಿರುತ್ತದೆ.





ಯಾರು ಯಾರನ್ನು ನಿಲ್ಲಿಸುವಂತಿಲ್ಲ. ಎಲ್ಲಾ ಕಾಲಾಯ ತಸ್ಮಯಾಃ ನಮಃ! ನಾವು ಮಾತ್ರ ಬದುಕಬೇಕು. ನಾವು ಮಾತ್ರ ಎಂದೇಂದಿಗೂ ಮುಂದಿರಬೇಕು. ಇಲ್ಲವೆಂದರೆ ಯಾರಿಗೂ ಬೆಲೆ ಇಲ್ಲ. ಮನುಷ್ಯನಿಗೆ ಕುದುರೆಯ ಬೆಲೆ ಬೇಕು ಅಂದರೆ.. ನಿರಂತರ ವೇಗವಾಗಿ ಸಾಗುವಂತಿರಬೇಕು. ಯಾವುದಕ್ಕು ನಿಲ್ಲುವಂತಿಲ್ಲ! ಉಸಿರು ನಿಲ್ಲುವಂತಿಲ್ಲ. ಇಂಥ ದಟ್ಟನೆಯ ಅವಮಾನದಲ್ಲಿ ಅನುಮಾನವಿಲ್ಲದೇ ನಮ್ಮ ನಮ್ಮ ಉಸಿರು ಕಂಡುಕೊಂಡು ನಾವು ಮಾತ್ರ ಉಸಿರಾಡಬೇಕು. ಇದು ಬದುಕು! ನಮಗೆ ಬೇಕಿಲ್ಲದಿದ್ದರೂ ಬೇಕಾದ..ಇದೇ ಮಾತ್ರವಾದ ಬದುಕು.

ಏನೂ ಹೇಳಿದರೂ..ಏನೂ ಕೇಳಿದರೂ ಯಾರೂ ಇದು ಹೀಗೆ ಎಂದು ಒಂದು ಪಾರ್ಮೂಲವಿಲ್ಲದೇ ಎತ್ತಾ ಎತ್ತಾ ಸಾಗುವ ಒಂದು ನಿರ್ದಿಷ್ಟ ಬದುಕು.

ಕಂಡುಕೊಂಡವನು ಕಾಣುತ್ತಾನೆ ಅದರ ಸಂತೋಷ!

ಹುಟ್ಟಿನಿಂದ ಶುರುವಾಗುವ ಈ ಓಟ ಕೊನೆ ಉಸಿರು ಇರುವವರೆಗೂ ನಿಲ್ಲುವುದಿಲ್ಲ. ಪ್ರತಿಯೊಬ್ಬರೂ ಯಾವುದಕ್ಕೂ ಒಂದು (ಕಾಣದ) ಗುರಿಯನ್ನು ನೋಡುವುದಕ್ಕೆ ಸಾಗುತ್ತಿರುವಂತೆ ಈ ಜೀವನ ಓಟ ಕಾಣುತ್ತದೆ.

ಎಲ್ಲಾ ಗೊತ್ತಿದೆ. ಓದಿ, ಕೇಳಿ ತಿಳಿದುಕೊಂಡಿದ್ದೇವೆ. ಇಷ್ಟೇ ಗುರು ಅಂದುಕೊಂಡರು, ಇಲ್ಲಾ ಇನ್ನೂ ಏನೋ ಇದೆ. ಗೊತ್ತಿರುವುದು ಅರೇಪಾವು ಅನ್ನಿಸುತ್ತದೆ ಒಮ್ಮೊಮ್ಮೆ. ಎಲ್ಲಾ ನಿರರ್ಥಕ ಅನಿಸಿದ ಕ್ಷಣವೇ ಏನೋ ಒಂದು ಸಣ್ಣ ಸೂಜಿ ಮನೆಯಷ್ಟು ಅರ್ಥ ಅರ್ಧ ಸತ್ಯವಾಗಿ ಗೊಚರಿಸುತ್ತದೆ.

ಮತ್ತೇ ಪುನಃ ಅದೇ ನಿರಾಸೆ, ಉದಸೀನತೆ, ಜಡತೆ ಮೈಗೊಡುತ್ತದೆ. ಸೂರ್ಯ ಹೇಗೆ ಮುಂಜಾನೆ ಪ್ರಪುಲ್ಲತೆಯ ಕಿರಣವನ್ನು ಮೈ ಸೊಕಿಸುತ್ತಾನೋ ಹಾಗೆಯೇ ಹೊಸ ಆಸೆ ಆಶಾ ಕಿರಣದ ಹಸಿರು ನಮ್ಮ ಮನವನ್ನು ತಣಿಸಿ ಹೊಸ ಜವಬ್ದಾರಿಗೆ ಅಣಿ ಮಾಡುತ್ತದೆ. ಆದರೇ ಯಾಕೋ ಅದು ಸ್ವಲ್ಪ ಕ್ಷಣದಂತೆ ಕಂಡು ಮತ್ತೆ ಸಂಜೆಯ ಸೂರ್ಯ ಮರೆಯಾಗುವಂತೆ ನಮ್ಮ ಮನಸ್ಸು ಏನನ್ನೋ ಬೇಕು ಎಂಬ ಮೊಂಡುತನಕ್ಕೆ ಸಜ್ಜಾಗಿ ಇದು ಅಲ್ಲಾ ಅನಿಸುತ್ತದೆ. ಇದು ಯಾಕೆ? ನಿಜವಾಗಿಯೂ ತಿಳಿದಿಲ್ಲ!

ನೀವು ಏನಾಂತೀರಾ ಗುರು?