ಶುಕ್ರವಾರ, ಡಿಸೆಂಬರ್ 25, 2015

ನಮ್ಮ ಅಭಿವ್ಯಕ್ತಿ

ದೇಶದ ಬಗ್ಗೆ ಚಿಂತೆ ಮಾಡುವವರು ನಾವುಗಳು ಎಂಬಂತೆ ಇಂದಿನ ದಿನದಲ್ಲಿ ಪ್ರತಿಯೊಬ್ಬರೂ ತಮಗೆ ಅನಿಸಿದ ವಿಷಯಗಳನ್ನು ಸಾಮಾಜಿ ತಾಣಗಳ ಗೋಡೆಗೆ ಅಂಟಿಸಿಕೊಂಡು ದಿನಗಟ್ಟಲೆ ಕಾಮೆಂಟ್ ಲೈಕ್ ಗಳಲ್ಲಿ ಮುಳುಗಿಕೊಂಡಿರುತ್ತಾರೆ.

ಯಾರು ಏನು ಬೇಕಾದರೂ ಹೇಳಿಕೊಳ್ಳಬಹುದು. ಯಾರು ಏನನ್ನಾದರೂ ಶೇರ್ ಮಾಡಿಕೊಳ್ಳಬಹುದು. ಅದು ಯಾರಿಗೆ ಹೇಗೆ ತಾಕುತ್ತೋ ಗೊತ್ತಿಲ್ಲ. ನನಗೆ ಅನಿಸಿದ್ದನ್ನು ನಾನು ಹೀಗೆ ಹೇಳಿಕೊಳ್ಳುತ್ತೇನೆ, ಎಂಬಂತೆ ಪ್ರತಿಯೊಬ್ಬರೂ ತಮ್ಮ ತಮ್ಮ ಅಕೌಂಟಗಳಲ್ಲಿ (ವಿ)ಚಿತ್ರಿಸಿಕೊಳ್ಳುತ್ತಾರೆ.

ಇದೇ ನಮ್ಮ ಅಭಿವ್ಯಕ್ತಿ ಎನ್ನುವಂತಾಗಿದೆ.

ಹಿಂದೆ ಯಾರೊಬ್ಬರ ಪ್ರತಿಕ್ರಿಯೆಗಳು ಸಾಮಾಜಿಕವಾಗಿ ತಲುಪಬೇಕಾಗಿತ್ತು ಅಂದರೇ ಅದು ಪತ್ರಿಕೆಗಳಲ್ಲಿ , ರೇಡಿಯೋ , ಟಿ.ವಿ ಗಳಲ್ಲಿ ಅಲ್ಲಿಯ ಸಂಪಾದಕರ ಸ್ಕ್ಯಾನ್ ನಂತರ ಪ್ರಕಟವಾಗಬೇಕಾಗಿತ್ತು. ಇಂದು ಹಾಗೇನು ಇಲ್ಲ. ಏನನ್ನಾದರೂ ಎಲ್ಲಿ ಬೇಕಾದರೂ ತನಗೆ ಗೊತ್ತಿರುವ ಸ್ನೇಹಿತರ ಗುಂಪಿನಲ್ಲಿ ಹಳಹಳಿಸಿಕೊಳ್ಳಬಹುದು. ಅದು ಹೇಗೆ ಹೇಗೋ ದೇಶದ ಆಚೆಗೂ ತಲುಪುವ ಅವಕಾಶಗಳುಂಟು.

ಹೀಗೆ ತಪ್ಪು ತಪ್ಪು ಕೇರಳಿಸುವ (ಸಾಮಾಜಿಕ) ಹೇಳಿಕೆಗಳಿಂದ ಜೈಲು ಬಂದಿಯಾಗಿರುವವರು ಎಷ್ಟು ಜನವೋ!

ಸ್ವತಂತ್ರ್ಯವನ್ನು ಈ ರೀತಿಯಲ್ಲಿ ದುರುಪಯೋಗಪಡಿಸಿಕೊಂಡು ಕೇವಲ ಸುದ್ಧಿಯಾಗುತ್ತಿರುವವರ ಸಂಖ್ಯೆ ಏನೂ ಕಡಿಮೆಯಿಲ್ಲ ಬಿಡಿ.

ಕೇವಲ ಕೈಯಲ್ಲಿಯೇ ಒಂದು ಬಟನ್ ಒತ್ತುವುದರ ಮೊಲಕ ಸಮಸ್ತವನ್ನು ತಲುಪುವುಷ್ಟು ವೇಗ, ಸಂಹವನದ ಕೊಡುಗೆ ಡಿಜಿಟಲ್ ಕ್ರಾಂತಿಯದ್ದಾಗಿದೆ. ತನಗೆ ಅನಿಸಿದ್ದನ್ನು ವೈಕ್ತಿಕ , ಸಾಮಾಜಿಕ ಯಾವುದನ್ನು ಮುಚ್ಚು ಮರೆಯಿಲ್ಲದೇ ಪ್ರತಿಯೊಬ್ಬರೊಂದಿಗೆ ಹಂಚಿಕೊಳ್ಳುವ ಬದ್ಧಿ ನಮ್ಮಗಳದಾಗಿದೆ. (ಒಳ್ಳೆಯದೋ?)

ದೇಶದ ಬಗ್ಗೆಯೇ ನಾವುಗಳು ನಮ್ಮ ತಲೆ ಬಿಸಿ ಮಾಡಿಕೊಂಡು ನಮ್ಮ ಲೋಕಲ್ ವಿಷಯ, ಸಮಸ್ಯೆಗಳಿಗಿಂತ ದೆಹಲಿ ಬೆಂಗಳೂರು ಬಗ್ಗೆಯೇ ಮಾತನಾಡುವುಂತಾಗಿದೆ.

ದೆಹಲಿ , ಬೆಂಗಳೂರು ತೀರ ಹತ್ತಿರವಾಗಿದೆ.

ಮೋದಿ , ಸರ್ಕಾರ , ರಾಜಕೀಯ  ಇತ್ಯಾದಿ ನಮ್ಮ ದಿನ ನಿತ್ಯದ ಮಂತ್ರಗಳಾಗಿವೆ.

ಹಿಂದೆ ಸೋಮಾರಿ ಕಟ್ಟೆಯಲ್ಲಿ ಹಳ್ಳಿಯ ವಯಸ್ಸಾದ ಕೇಲವರು ಅಲ್ಲಿ ಸಿಗುತ್ತಿದ್ದ ಹಳೆಯ ದಿನ ಪತ್ರಿಕೆಗಳಿಂದ ಸುದ್ಧಿ ತಿಳಿದು ತಮ್ಮಲ್ಲಿಯೇ ವಸ್ತು ವಿಷಯದ ಬಗ್ಗೆ ವಿಶ್ಲೇಷಣೆ ಮಾಡಿಕೊಂಡು ಮನೆಯ ದಾರಿಯನ್ನು ಹಿಡಿಯುತ್ತಿದ್ದರು.

ಇಂದು ಇದು ಆಗಾಗದೇ ಮೀಡಿಯಾದಲ್ಲಿ ಇದೆ ರೀತಿಯಲ್ಲಿ ಹಾಟ್ ಟಾಪಿಕ್ ಇಟ್ಟುಕೊಂಡು ಐದಾರು ಮಂದಿಯನ್ನು ಕೊಡಿಸಿಕೊಂಡು ವಾದವಿವಾದ ಮಾಡಿಕೊಳ್ಳುವಂತೆ ಮಾಡಿ ಅವರ ಮಾತುಗಳನ್ನು ಎಲ್ಲಾರ ಮನೆ ಮನೆಗೂ ತಲುಪಿಸಿ ಟೋಟಲಿ ತಲೆ ಚಿಟ್ಟು ಹಿಡಿಯುವಂತೆ ಮಾಡಿರುವ ಕೀರ್ತಿ ಯಾರಿಗೆ ಸೇರಬೇಕೋ ದೇವರಿಗೆ ಗೊತ್ತು!

ಯಾವುದು ಮುಖ್ಯ ಯಾವುದು ಅಮುಖ್ಯ ಎಂಬುದನ್ನೇ ಮರೆತು ಕೇವಲ ಟಿ.ಆರ್.ಪಿ ಯ ನಂಬರನಲ್ಲಿ ಜನರನ್ನು ಯಾವುದೋ ಒಂದು ಸುದ್ಧಿ, ಘಟನೆಗೆ ಬಂದಿಸಿರುವಂತಾಗಿದೆ.

ಮರೆಯೋಣ ಅಂದರೂ ಮರೆಯಲಾರದಂತೆ ಕಾಡುತ್ತಿದೆ ದೇಶದ ಸುದ್ದಿ.

ಯಾಕೇ ಇದು?

ಅವರನ್ನು ಇವರು ಛೇಡಿಸುವುದು, ಇವರನ್ನು ಅವರು ಕೀಳಾಗಿ ಕೆರಳಿಸುವುದು.

ಬುದ್ಧಿವಂತರೆಂದರೇ ಎಲ್ಲಾ ವಿಷಯಕ್ಕೊ ಏನನ್ನಾದರೂ ಪ್ರತಿಕ್ರಿಯಿಸಬೇಕಾ?

ಮಾತು ಮಾತು ಬರೀ ಮಾತು! ಅದು ಹರಿಯುವ ಪರಿಯನ್ನು ನೆನಸಿಕೊಂಡರೇ ಭಯವಾಗುತ್ತದೆ!

ತಿನ್ನುವುದರ ಬಗ್ಗೆಯೇ ಜಗಳ, ಅದನ್ನು ತಿನ್ನಬೇಕು, ಇದನ್ನು ತಿನ್ನಬಾರದು! ಇದಕ್ಕೆ ಜಾತಿ ಜಂಜಾಟ , ರಾಜಕೀಯ ಮೇಲಾಟ - ಪ್ರತಿಭಟನೆಗಳು! ತಿನ್ನುವುದು ಅವರವರ ಮರ್ಜಿಗೆ ಬಿಟ್ಟ ವಿಷಯ.

ಇದಕ್ಕೂ ಧರ್ಮಸಂಕಟ!

ದೇವರು ದಿಂಡಿರುಗಳ ಬಗ್ಗೆಯೂ ಹೋರಾಟ.. ದೇವರುಗಳೆ ಈ ರಗಳೆಗಳನ್ನು ನೋಡಿ ದೇಶದಾಚೆಗೆ ಹಾರಿರಬೇಕು!

ಓ ದೇವರೇ.

ಸಹಿಷ್ಣುತೆ - ಅದು ಹೇಗೆ ಎಲ್ಲಿ ಎನ್ನುವುದು ನನ್ನಂಥ ಅಲ್ಪ ತಿಳುವಳಿಕೆಯವನಿಗೆ ಅರ್ಥವಾಗದ ವಿಷಯವಾಗಿದೆ.

ಅವರು ಹೀಗೆ ಅಂದರು, ಇವರು ಹೀಗೆ ಅಂದರು. ಅದು ಈವಾಗ ಶುರುವಾಗಿರುವುದು. ಹಿಂದೆ ಇರಲೇ ಇಲ್ಲ. ಇಲ್ಲಿ ಬಾಳುವುದು ಅಸಾಧ್ಯ ಅನ್ನುವುದು... ಆದರೇ ಬಾಳುತ್ತಲೆ ಬಾಳುತ್ತಲೆ ತಮ್ಮ ಮಾತು ಮಾತು ಭಾಣಗಳನ್ನು ತೂರಿಬಿಡುವುದು.

ಇದೆ ಇತ್ಯಾದಿಯ ಸುದ್ಧಿಗಳ ಭರಾಟೆ ಅದೆ. ಆದಾಯ ಕೆಲವರಿಗೆ.

ಜಾತಿ ಧರ್ಮಗಳನ್ನೇ ಸುತ್ತಿಕೊಂಡಿರುವ ವಿರಾಟ ಶೋಷಣೆಯಾಗಿದೆ. ಸಮಾಜ ಸುಧಾರಣೆ ಆಗಬೇಕು ಎನ್ನುವವರೆ ತಮ್ಮ ಮಾತುಗಳಲ್ಲಿ ಇನ್ನು ಈ ರೀತಿಯ ಶೋಷಣೆಯ ಶಬ್ಧಗಳನ್ನು ಜೀವಂತವಾಗಿ ಶಾಶ್ವತವಾಗಿ ಕಾಪಾಡಿಕೊಳ್ಳಲು ಶ್ರಮವಯಿಸುವಂತಿದೆ.

ಆದರೇ ಇದರ ಯಾವುದೇ ಪರಿವೆಯಿಲ್ಲದೆ. ವರುಷಕ್ಕೆ ಇಷ್ಟು ದಿನ ಚೆನ್ನಾಗಿ ಮಳೆ ಬೇಳೆಯಾಗಿ ತನ್ನ ಹೊಟ್ಟೆ ತುಂಬ ಅನ್ನವನ್ನು ತಿನ್ನುತ್ತಾ, ಆರಾಮಾಗಿ ಸುತ್ತಲಿನ ಜನಗಳ ಜೊತೆಯಲ್ಲಿ ಹೊಂದಿಕೊಂಡು, ತಿಂಗಳಿಗೊಂದು ಹಬ್ಬ ಹುಣ್ಣಿಮೆ ಮಾಡಿಕೊಂಡು, ಯಾರನ್ನು ನೋಯಿಸದೇ ತನ್ನ ಪಾಡಿಗೆ ತಾನಿರುವ ರೈತಾಪಿ ಮಗನಿಂದ ದೇಶದ ಭವಿಷ್ಯ ಉತ್ತಮವಾಗುವುದೋ? ದೇಶದ ದಳ್ಳುರಿಯನ್ನು ನಿತ್ಯ (ಅ)ಪೋಷಿಸುವ ಹೇಳಿಕೆಗಳನ್ನು ಕೊಡುತ್ತಾ ನಿತ್ಯ ಸುದ್ಧಿಯಲ್ಲಿಯೇ ಇರುವ ಇಂಥ ಬುದ್ಧಿವಂತರಿಂದ ದೇಶ ಉದ್ದರವಾಗುವುದೋ ನೀವೆ ಹೇಳಬೇಕು.

ಹಳ್ಳಿ ಮುಕ್ಕ ಪೇಟೆಗೆ ಬಂದು ಕೆಟ್ಟ ಎಂಬ ಗಾದೆ ಸತ್ಯವೋ ಸುಳ್ಳೋ ಪೇಟೆಯ ಮಂದಿ ಹೇಳ್ತಾರೆ ಅಂದುಕೊಂಡಿದ್ದೀನಿ.