ಶನಿವಾರ, ನವೆಂಬರ್ 28, 2015

ಮಕ್ಕಳು ನಮ್ಮನ್ನು ನೋಡಿ ಮರುಗುವುವು

ಮಕ್ಕಳಂತೆ ಚಿರಕಾಲ ಬದುಕುವುದು ಯಾರೊಬ್ಬರಿಗೂ ಸಾಧವಿಲ್ಲ!

ಮಕ್ಕಳಿಗಿರುವ ಸಂತೋಷ ನಾವುಗಳು ಅತಿ ಬುದ್ಧಿವಂತರಾಗುವ ಧಾವಂತದಲ್ಲಿ ಪೂರ್ತಿಯಾಗಿ ಕಳೆದುಕೊಂಡುಬಿಡುತ್ತಿವಿ ಅನಿಸುತ್ತದೆ. ಅವರ ಬಾಲ್ಯದ ಆನಂದವನ್ನು ನಾವುಗಳು ಕೇವಲ ನಮ್ಮ ಚಿಕ್ಕ ಮಕ್ಕಳನ್ನು ನೋಡುತ್ತಾ ನಮ್ಮ ಜೀವನವನ್ನು ಕಂಡು ಪಶ್ಚತಾಪಪಡಬೇಕಷ್ಟೇ.

ವರ್ತಮಾನದಲ್ಲಿ ಬದುಕಬೇಕು ಎಂದು ನಾವುಗಳು ಎಷ್ಟೇ ಪ್ರಯತ್ನಪಟ್ಟರು, ಕಳೆದ ಕೆಟ್ಟ ಕ್ಷಣಗಳು ಭೂತಾಕರದಲ್ಲಿ ನಮ್ಮ ಮನವನ್ನು ತಿನ್ನುತ್ತಿರುತ್ತವೆ. ಭವಿಷ್ಯತ್ ನ ಯೋಚನೆಗಳು  ಮತ್ತು ಯೋಜನೆಗಳು ನಮ್ಮ ನೆಮ್ಮದಿಯನ್ನೇ ಹಾಳು ಮಾಡಿರುತ್ತವೆ.

ಏನು ಇದ್ದರೂ ಏನೂ ಇಲ್ಲವೆಂಬ ಕೊರಗು ನಿತ್ಯ ನಮ್ಮ ಸಂತೋಷವೆಂಬ ಪದದ ಅರ್ಥವೇ ಗೊತ್ತಿಲ್ಲದಂತೆ ಮಾಡಿರುತ್ತದೆ. ಇರುವುದದ
ರಲ್ಲಿ ಸುಖಪಡುವ ಪುಣ್ಯವೇ ಇಲ್ಲವೆಂಬಂತೆ ನಮ್ಮಲ್ಲಿ ಇಲ್ಲದ್ದರ ಬಗ್ಗೆಯೇ ತಲೆ ಕೆಡಿಸಿಕೊಂಡು, ಬದುಕುವುದೇ ಇಷ್ಟು ಕಷ್ಟ ಎಂದು ಹ್ಯಾಪು ಮೊರೆ ಹಾಕಿಕೊಂಡು ಸುತ್ತಲಿನ ಪಾಸಿಟಿವ್ ವಾತಾವರಣವನ್ನೇ ನೇಗೆಟಿವ್ ಮಾಡಿ ಅಲ್ಲಿ ಬಣ್ಣವೇ ಇಲ್ಲದ ಮುಖ ಮಾಡಿಕೊಂಡಿರುತ್ತೇವೆ.

ಮಕ್ಕಳ ಬದುಕು ನಾವುಗಳು ಬದುಕಲು ಸಾಧ್ಯವಿಲ್ಲ. ಅದಕ್ಕೆ ಮೂರು ಹೊತ್ತು ಊಟ, ಸಾಕಾಗುವಷ್ಟು ಆಟ, ರಾತ್ರಿ ಕಣ್ಣು ತುಂಬ ನಿದ್ದೆ. ಇಷ್ಟೇ ಸಾಕು. ದೇವರ ಪ್ರೀತಿ ಅನಿಸುತ್ತದೆ. ಮಕ್ಕಳ ಆ ಚಿಕ್ಕ ತಲೆಯಲ್ಲಿ ಇಷ್ಟು ಮಾತ್ರ ಇಟ್ಟು, ಇರೋ ವರುಷ ಚಿಕ್ಕ ಬಾಲ್ಯದ ದಿನಗಳನ್ನು ಸಂತೋಷವಾಗಿ ಕಳಿ, ಮುಂದೆ ಇದೆ ನಿನ್ನ ನಿತ್ಯ ಜಂಜಾಡ ಎಂದು ಹೇಳಿದಂತೆ ಅವುಗಳನ್ನು ತಯಾರು ಮಾಡಿರುತ್ತಾನೆನೋ ಆ ಬ್ರಹ್ಮ ಅನಿಸುತ್ತದೆ.

ಆದರೇ ನಾವುಗಳು ಮನುಷ್ಯರು ಮುಂದುವರೆದಿರುವವರು, ಶುರು ಮಾಡುತ್ತೇವೆ ನಮ್ಮ ವ್ರಾತಾ ಎರಡು ಮೂರು ವಯಸ್ಸಾಗಲಿ ಎಂದು ಕಾದಿದ್ದು ಓದು ಎಂಬ ಸಂಕಟದಿಂದ ಪ್ರಾರಂಭಿಸಿ, ಆ ಮುಗ್ಧ ಮನಸ್ಸನ್ನು ಮುಂದಿನ ಅಖಂಡ ಬದುಕಿನ ಜಂಜಾಟದ ಕುಲುಮೆಗೆ ದೂಡಲು ದಾಪುಗಾಲಿನಲ್ಲಿ ಕಾಯುತ್ತಿರುತ್ತೇವೆ.


 ಅಕಟಾಕಟ!

ನಮಗೆ ಗೊತ್ತೂ ನಾವು ಎಷ್ಟೇ ತಿಳುವಳಿಕೆವಸ್ತರಾಗಿದ್ದರೂ ನಾವುಗಳು ನಮ್ಮ ನೆಮ್ಮದಿಯನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ.

ನೆಮ್ಮದಿಯಾಗಿ ಇಲ್ಲದಿರುವುದೇ ಜೀವನದ ಮಹಾನ್ ಧ್ಯೇಯವೆಂದುಕೊಂಡು, ಹೆಚ್ಚು ಹೆಚ್ಚು ಸಮಸ್ಯೆಗಳಲ್ಲಿ ನಮ್ಮನ್ನು ನಾವುಗಳು ಸಿಲುಕಿಸಿಕೊಂಡು, ಹೆಚ್ಚು ಒತ್ತಡಗಳಿಗೆ ನಮ್ಮನ್ನು ನಾವು ಒಡ್ಡಿಕೊಂಡು ಹತ್ತು ಹಲವು ಆರೋಗ್ಯ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತೇವೆ.

ಆದರೇ ನಾವು ಕೊಡುವ ಉತ್ತರ: ವಯಸ್ಸಾಗುತ್ತಿದೆ! ತಾರುಣ್ಯದ ಆರೋಗ್ಯ ಇನ್ನು ಇರಬೇಕೆಂದರೇ ನಾವೇನು ಅಮೃತವನ್ನೇ ಕುಡಿಯುತಿರುವುದು? ಎಂದು ನಮ್ಮನ್ನೇ ನಾವು ಹುಸಿ ಸಮಧಾನ ಮಾಡಿಕೊಳ್ಳುತ್ತೇವೆ.

ಬಾಲ್ಯದಲ್ಲಿ ಕಳೆದ ಕ್ಷಣಗಳನ್ನೇ ಮರೆತುಬಿಡುತ್ತೇವೆ. ಆಗ ಹೇಗಿದ್ದೆವು? ಈಗ ಹೇಗೆಲ್ಲಾ ಬಾಳುತ್ತಿದ್ದೇವೆ? ಎಂಬುದನ್ನೇ ಪೂರ್ತಿ ಮರೆತುಬಿಡುತ್ತೇವೆ.

ಗೊತ್ತು ಗೊತ್ತಿಲ್ಲದೋ ಅತಿ ದೊಡ್ಡದಾದ ಸಮಸ್ಯೆಗಳಲ್ಲಿ ಪ್ರತಿಯೊಬ್ಬರೂ ಸಿಲುಕಿಕೊಂಡು ಪ್ರೀತಿ, ವಿಶ್ವಾಸ, ಶಾಂತಿ, ಸಹ ಬಾಳ್ವೆಯನ್ನು  ದುಡ್ಡುಕೊಟ್ಟು ಕಲಿಯಲು ಹೋಗುತ್ತೇವೆ. 


ಎಂಥ ವಿಪರ್ಯಾಸ!

ನೋಡಿ ಹಾಲು ಹಸುಳೆ ಕಂದಮ್ಮನನ್ನಾ! ಆದರ ಮುಖ, ಆ ಮುಗ್ಧ ಕಣ್ಣುಗಳೇ ಹೇಳುತ್ತವೆ. ಆ ಮಗು ಎಂಥ ಪ್ರೇಮ ಪುತ್ಥಳಿ ಎಂದು. ಅದು ಮನತುಂಬ ಖುಷಿಯಾಗಿದ್ದು ತನ್ನ ಸುತ್ತಲಿನಲ್ಲಿರುವವರಿಗೂ ತನ್ನ ಸಂತೋಷವನ್ನು ಹಂಚುತ್ತದೆ. 


ಅದಕ್ಕೆ ಹೇಳಿದ್ದು ನಮ್ಮ ಹಳ್ಳಿಯ ಹೆಣ್ಣು ಮಗಳು ಮಕ್ಕಳಿರಲವ್ವಾ ಮನೆ ತುಂಬ!

ಮಗುವಿಗೆ ಯಾರೊಬ್ಬರ ಬಗ್ಗೆಯು ಯಾವ ಕೆಟ್ಟ ಭಾವನೆಯಿಲ್ಲ! ಯಾವ ಕ್ಷಣವೂ ಕೆಟ್ಟದಾಗಿ ತನ್ನ ಮನದಲ್ಲಿ ನಿಲ್ಲುವುದಿಲ್ಲ! ಆ ಮಗುವಿಗೆ ಪ್ರತಿ ಕ್ಷಣವು ಹೊಸ ಕ್ಷಣ! ಪ್ರತಿ ಆಟವು ವಿಸ್ಮಯ! ಪ್ರತಿ ಹೆಜ್ಜೆಯು ಹೊಸ ಹುಮ್ಮಸ್ಸಿನ ಪ್ರತಿಬಿಂಬ!

ಯಾವೊಂದು ಕ್ಷಣವೂ ಬೋರು ಅನಿಸುವುದಿಲ್ಲ. ಅದಕ್ಕೆ ಚಿಕ್ಕ ಗೋಲಿಯೇ ಬಂಗಾರದ ನಕ್ಷತ್ರ! ಅದನ್ನೇ ನಿತ್ಯ ಹತ್ತು ಹಲವು ರೀತಿಯಲ್ಲಿ ನೋಡಿ ನೋಡಿ, ಆಡಿ ಆಡಿ ಸಂಭ್ರಮಿಸುತ್ತದೆ. ತನ್ನ ಸಲುವವರೇ ಉಸಿರು ಅಂದುಕೊಂಡು ಅಮ್ಮನ ಕೈ ಅಸರೆಯಲ್ಲಿ ಸ್ವರ್ಗ ಸುಖವನ್ನು ಕಾಣುತ್ತದೆ. ಹೆತ್ತಮ್ಮನ ಹಾಲೇ ಅಮೃತವೆಂದುಕೊಂಡು ಮನಸಾ: ತೃಪ್ತಿಪಡುತ್ತದೆ.

ಸುಸ್ತಾಗುವಷ್ಟು ಆಡುತ್ತದೆ, ಕಣ್ಣುತುಂಬುವಷ್ಟು ನಿದ್ದೆ ಮಾಡುತ್ತದೆ. ಪುನಃ ಎದ್ದಾಗ ಎಂಥ ಪ್ರಫುಲತೆ? ಯಾವಾ ಹೈ ಒಲ್ಟೇಜ್ ಲೈಟ್ ಗಿಂತಲೂ ಕಮ್ಮಿ ಇಲ್ಲದ ಬೆಳಕನ್ನು ಮನೆತುಂಬ ಕೊಡುತ್ತದೆ. ಅದು ಬೆಳೆಯುವವರೆಗೂ ಮನೆಮಂದಿಯನ್ನೇಲ್ಲಾ ಪುಲ್ ಆಕ್ಟೀವ್ ಆಗಿ ಇಟ್ಟಿರುತ್ತದೆ. ತಾನು ಸಂತೋಷವಾಗಿದ್ದು ತನ್ನವರನ್ನು ತನ್ನ ಪುಟ್ಟ ಪುಟ್ಟ ಮಾತುಗಳಿಂದ ಎಲ್ಲಾ ಯೋಚನೆಗಳನ್ನು ದೂರ ಮಾಡುತ್ತದೆ.

ಇದು ನಿಜವಾದ ಜೀವನ! ಇದನ್ನು ನಾವು ಬೆಳೆಯುತ್ತಾ ಬೆಳೆಯುತ್ತಾ ಮರೆತುಬಿಡುತ್ತೇವೋ? ಅಥವಾ ನಮ್ಮ ಈ ಬದುಕು ಆದರ ಬಗ್ಗೆ ಮೆಲಕು ಹಾಕುವುದಕ್ಕೂ ಪುರುಸತ್ತೂ ಕೊಡುವುದಿಲ್ಲವೋ? 


ಯಾವುದೋ ಗೊತ್ತು ಗುರಿ ಇಲ್ಲದ, ಏನೆಂದರೂ ಎಟುಕದ ದೂರ ತೀರದ ಸುಖಕ್ಕಾಗಿ ಗಾಣದೆತ್ತಿನಂತೆ ನಿತ್ಯ ಶ್ರಮಪಡುತ್ತಿರುತ್ತೇವೆ. ಸಂಭ್ರಮಪಡುವುದಕ್ಕೂ ಸಮಯವಿಲ್ಲ ಎಂದು ವಿಲವಿಲ ಒದ್ದಾಡುತ್ತೇವೆ.ಸಂತೋಷಿಸಲು ವಿಕೇಂಡ್ ಪ್ಲಾನ್ ಮಾಡುತ್ತೇವೆ.

ಪರಸ್ಪರ ಮನುಷ್ಯ ಮನುಷ್ಯರ ನಡುವಿನ ನವಿರಾದ ಭಾಂಧವ್ಯವನ್ನೇ ಕಡೆಗಣಿಸಿ, ನಮಗೆ ನಿಲುಕದ ಯಾವುದೋ ಮಾಯೆಯಂಥ ಬದುಕನ್ನು ಹೆಮ್ಮೆಯಿಂದ ನಿರ್ಮಿಸಿಕೊಂಡು, ಅದರಲ್ಲಿಯೇ ಸುಪ್ಪತ್ತಿಗಿಯ ಸುಖ ಕಾಣುವುದಕ್ಕೆ ಹೋಗಿ ನಾವೇ ಕಾಣದಂತಾಗಿ ಕಳೆದು ಹೋಗುತ್ತಿದ್ದೆವೆಂದು ಅನಿಸುತ್ತಿದೆ.

ನಮ್ಮ ನಮ್ಮ ಬದುಕು ನಮ್ಮ ಕೈಯಲ್ಲಿ. ಇಂದು ಕಷ್ಟಪಟ್ಟರೆ ಮುಂದೆ ಸುಖ ಎಂದುಕೊಂಡು, ಗೊತ್ತಿರದ ಭವಿಷ್ಯತ್ ನಲ್ಲಿ ಬ್ರಹ್ಮಾಂಡ (ಜ್ಯೋತಿಷ್ಯ?) ನಂಬಿಕೆಯನ್ನು ಇಟ್ಟುಕೊಂಡು ಸರಿಯಾಗಿ ಒಂದು ತಾಸು ನಿದ್ದೆಯನ್ನು ಕಾಣದೇ ವರ್ತಮಾನದಲ್ಲಿ ಕಕ್ಕಾಬಿಕ್ಕಿಯಾಗಿ ಬದುಕುವುದೇ ಹೈಟೆಕ್ ಎಂದುಕೊಂಡಿದ್ದೇವೆ. ಪ್ರತಿಯೊಬ್ಬರೂ ಒಬ್ಬರನ್ನೊಬ್ಬರೂ ನೋಡಿಕೊಂಡು ಹಾಗೆಯೇ ವೇಗವಾಗಿ ತಿಳಿಯದಂತ ದೂರವನ್ನು ಸೇರಲು ತೊಳಲಾಡುತ್ತಿದ್ದೇವೆ ಅನಿಸುತ್ತದೆ.

ಮಕ್ಕಳು ನಮ್ಮನ್ನು ನೋಡಿ ಕೊಂಚ ಕ್ಷಣ ಮರುಗಿದರೂ ಆಶ್ಚರ್ಯವಿಲ್ಲ! ಯಾಕೆಂದರೇ ನಮಗೆ ಅವುಗಳು ಏನನ್ನೂ ಹೇಳಲು ಸಾಧ್ಯವಿಲ್ಲ!


ಅವುಗಳು ನಮ್ಮಂತೆ ಇರಿ ಎಂದು ಅವುಗಳ ನಿತ್ಯ ಬದುಕಿನಿಂದ ದರ್ಶನ ಮಾಡಿಸುತ್ತಿರುತ್ತವೆ. ಅವುಗಳನ್ನು ನೋಡುತ್ತಾ ನೋಡುತ್ತಾ ನಾವು ಬದಲಾಗಬೇಕು! 


ಯಾಕೆಂದರೇ ನಾವುಗಳು ಎಲ್ಲಾ ತಿಳಿದುಕೊಂಡಿರುವ ತಿಳುವಳಿಕಾಸ್ಥರು!!