ಸೋಮವಾರ, ಆಗಸ್ಟ್ 24, 2015

ಪ್ರೀತಿ ತುಂಬಿದ ಕಣ್ಣುಗಳು

ನಾವೇ ಮತ್ತೊಮ್ಮೆ ಮಕ್ಕಳಾಗುವುದು ನಮಗೆ ಮುದ್ದಿನ ಕೂಸು ಹುಟ್ಟಿದ ಮೇಲೆ. ನಮ್ಮ ಅಪ್ಪ ಅಮ್ಮ ನಮ್ಮನ್ನು ಹೇಗೆಲ್ಲಾ ಸಂಬಳಿಸಿ ಬೆಳೆಸಿದರು ಎಂಬುದು ಅರ್ಥವಾಗುವುದು ನಮ್ಮ ಕೂಸುಗಳನ್ನು ನೋಡಿಕೊಳ್ಳುವಾಗ.

ಮಕ್ಕಳು ನಮಗೆ ಕೇವಲ ಖುಷಿಯನ್ನು ಮಾತ್ರ ಕೊಡುವುದಿಲ್ಲ. ಅವುಗಳು ನೀಡುವ ಸಂಪತ್ತು ಏನೇಂದರೂ ವರ್ಣಿಸಲು ಸಾಧ್ಯವಿಲ್ಲ.

ಅವುಗಳ ಸ್ಪರ್ಷ ಮತ್ತು ಅವುಗಳ ಕಣ್ಣಿನ ನೋಟ ನಮಗೆ ಜಗತ್ತಿನಲ್ಲಿಯೇ ಯಾರು ಕೊಡದ ಒಂದು ಔಷದಿ. ಒಂದು ಮಗು
ನಮ್ಮನ್ನು ಒಂದೆರಡು ವರ್ಷ ಚಿಕ್ಕವರನ್ನಾಗಿ ಮಾಡಿಬಿಡುತ್ತವೆ.

ಅವುಗಳ ನಿಷ್ಕಲ್ಮಶವಾದ ಪ್ರೀತಿ ತುಂಬಿದ ಕಣ್ಣುಗಳು, ದೇವರ ಪ್ರೀತಿಯೇನೋ ಅನಿಸುತ್ತದೆ. ಅವುಗಳು ನಮ್ಮಿಂದ ನಿರೀಕ್ಷಿಸುವುದು ಪ್ರೀತಿ ಮಾತ್ರ!

ಅದು ಚಿಕ್ಕ ವಯಸ್ಸಿನ ಅಲಾಪ!

ಅವುಗಳ ಮುಗ್ಧವಾದ ನಗು ದೇವರೇ ಒಮ್ಮೆ ನಮ್ಮನ್ನು ನೋಡಿ ನಕ್ಕಂತೆ ಭಾಸವಾಗುತ್ತದೆ. ಮಕ್ಕಳಿಗೆ ಹೆತ್ತವರೇ ದೇವರಾದರೇ, ಪ್ರೀತಿಯ ಇನ್ನೊಂದು ಮುಖವನ್ನು ಮಕ್ಕಳ ಮೊಲಕ ಹೆತ್ತವರು ಕಂಡು ಕೊಳ್ಳುತ್ತಾರೆ.

ಅದು ಏನೇ ಆಗಲಿ, ಮಕ್ಕಳು ನಮ್ಮ ರಕ್ತವನ್ನು ಹಂಚಿಕೊಂಡ ಕರುಳ ಬಳ್ಳಿಗಳು. ಅದಕ್ಕೆ ಅಷ್ಟೊಂದು ಪ್ರೀತಿ-ಗೀತಿ ಎಂದು ಏನೂ ಹೇಳಿದರೂ.. ಯಾರು ಕೊಡಲಾರದ ಪ್ರೀತಿಯ ಪುತ್ಥಳಿಗಳಾಗಿರುವ ಈ ಪುಟಾಣಿ ಪುಟ್ಟ ಪುಷ್ಪಗಳನ್ನು ಹೊಂದಿರುವವರೇ ಧನ್ಯರು!



ಮಕ್ಕಳಿರಲವ್ವ ಮನೆ ತುಂಬ ಎಂಬ ಹಾಡು ಇಂದು ಹಾಡಲಾಗುವುದಿಲ್ಲ. ಒಂದು ಎರಡು ಸಾಕು ಎಂಬ ದಿನಮಾನದಲ್ಲಿರುವ ನಮಗೆ ಹೆಚ್ಚು ಮಕ್ಕಳನ್ನು ಹೊಂದಿ ಹೆಚ್ಚು ಸಂತೋಷಪಡಲು ಸಮಯ ಸಂಯಮ ಎರಡು ಇಲ್ಲ.

ಆದರೂ ಇರುವ ಮಕ್ಕಳೇ ನಮಗೆ ಎಲ್ಲಿಂದಲೂ ಸಿಗದ ಭಾಗ್ಯವನ್ನು ಕೊಟ್ಟು ಒಂದಷ್ಟು ವರುಷ ಹೆತ್ತವರನ್ನು ಹೆಚ್ಚು ಆರೋಗ್ಯದಿಂದ ಬಾಳುವಂತೆ ಮಾಡುವುವು ಎಂದರೇ ಅತಿಶಯೋಕ್ತಿಯಲ್ಲ.

ನೋಡಿ ಆ ಮಗು ದಿನ - ರಾತ್ರಿ ಎನ್ನದೇ ಒಂದೇ ರೀತಿಯಲ್ಲಿ ಪ್ರಫುಲ್ಲತೆಯನ್ನು ತನ್ನ ಮುಖದಲ್ಲಿ ಹೊಂದಿ, ನಾವು ಯಾವ ಸಮಯದಲ್ಲಿ ಅದನ್ನು ಮಾತನಾಡಿಸಿದರೂ ಅದೇ ಪ್ರೀತಿಯ ಗುದ್ದನ್ನು ಮುಖಕ್ಕೆ ಕೊಡುತ್ತದೆ. ಅದು ಅದೇ ಆಟವನ್ನು ದಣಿವಿಲ್ಲದೇ. ಮುಖದ ಮೇಲೆ ನಮಗೆ ಬಂದಿರುವ ವಯಸ್ಸಿನ ಸುಸ್ತನ್ನೇ ಒಂದು ಕಿರು ನಗು ಮತ್ತು ತೊದಲು ಮಾತಿನಲ್ಲಿ ಹೊಡೆದೋಡಿಸಿಬಿಡುತ್ತದೆ.

ಆ ಮಗುವನ್ನು ನೋಡುವುದೇ ಒಂದು ಹಬ್ಬವಾಗಿರುತ್ತದೆ. ಆದರ ಜೋತೆಯಲ್ಲಿ ಆಟವಾಡುವುದೇ ಒಂದು ಯೋಗವಾಗುತ್ತದೆ. ಅದರ ನಿದ್ದೆಯನ್ನು ನೋಡುವುದೇ ಒಂದು ತಪಸ್ಸು ಅನಿಸುತ್ತದೆ. ಅದನ್ನು ಮುಟ್ಟುವುದೇ ಸ್ಪರ್ಷ ಚಿಕಿತ್ಸೆ ಅನಿಸುತ್ತದೆ.

ಮನುಷ್ಯನ ಜೀವನ ಚಕ್ರದಲ್ಲಿ ಈ ಒಂದು ಘಟ್ಟ ಪ್ರತಿಯೊಬ್ಬರೂ ಒಮ್ಮೆಯಾದರೂ ಅನುಭವಿಸಬೇಕಾಗುತ್ತದೆ. ಅದೇ ಯಾಂತ್ರಿಕ ಬದುಕಿಗೆ ಒಂದು ವಿಭಿನ್ನವಾದ ಕ್ರಿಯಾಶೀಲತೆಯ ಟಚ್ ನ್ನು ಒಂದು ಪುಟ್ಟ ಜೀವ ಕೊಡುತ್ತದೆ.

ಅದು ಉಂಟು ಮಾಡುವ ಬದಲಾವಣೆ ಒಂದಾ ಎರಡಾ? ಬದಲಾವಣೆಯ ಪರ್ವವನ್ನು ಮಗು ಬಂದ ಘಳಿಗೆಯಿಂದ ಹೆಣ್ಣು ಮತ್ತು ಗಂಡಿನಲ್ಲಿ ಕಾಣಬಹುದು.

ತಾಯಂದಿರಿಗೆ ಒಂದು ಮಗು ಕೊಡುವ ಖುಷಿಯನ್ನು ಯಾರು ಪದಗಳಲ್ಲಿ ಹಿಡಿದಿಡಲಾರರು. ಅದು ಪ್ರತಿಯೊಬ್ಬ ಸ್ತ್ರೀಯರಿಗೆ ಪುನರ್ ಜನ್ಮ. ಸ್ತ್ರೀ ತನ್ನ ಹೊಸ ಜೀವವನವನ್ನು ಹೊಸ ಜೀವದಲ್ಲಿ ಕಂಡುಕೊಳ್ಳುವವಳು. ತನ್ನ ರಕ್ತವನ್ನು ತನ್ನ ಬಸಿರನ್ನು ಹಂಚಿಕೊಂಡು ತನ್ನ ಮುಂದೆಯೇ ಇರುವ ಈ ಜೀವವನ್ನು ತಾನು ಜಗತ್ತಿನಲ್ಲಿ ಯಾರನ್ನು ಪ್ರೀತಿಸದಷ್ಟು ಹೆಚ್ಚಾಗಿ ಪ್ರೀತಿಸುತ್ತಾಳೆ. ಅವಳ ದೇಹದ ಅಣು ಅಣು ಮಗುವಿನೆಡೆಗೆ ಪರಿತಪಿಸುತ್ತದೆ. ತಾಯಿಯ ಮಮತೆಯ ಮಹಾಪೂರವೇ ಆ ಮಗುವಿಗೆ ತಾಯಿಯ ಎದೆ ಹಾಲಾಗಿ ಹನಿ ಹನಿಯಾಗಿ ಮಗುವನ್ನು ಸೇರುತ್ತದೆ. ಮಗು ತಾನು ಪ್ರೀತಿಸುವುದನ್ನು ತಾಯಿಯಿಂದಲೇ ಕಲಿಯುವುದು. ಅದು ತಾನು ಬುದ್ಧಿ ಬರುವವರಿಗೂ ಸುತ್ತಲಿನ ಎಲ್ಲರಿಗಿಂತ ಹೆಚ್ಚಾಗಿ ಜೀವದಂತೆ ನಂಬುವುದು ತನ್ನ ತಾಯಿಯನ್ನು ಮಾತ್ರ. ಅವಳ ಮಡಿಲಲ್ಲಿ ಮಾತ್ರ ನಾನು ಸುರಕ್ಷಿತ ಎಂಬ ಭಾವನೆಯನ್ನು ಆ ದೇವರು ಆ ಪುಟ್ಟ ಕಂದನ ಹೃದಯದಲ್ಲಿ ಅದು ಹೇಗೆ ಇಟ್ಟಿರುವವನು ದೇವರೇ ಬಲ್ಲ!

ಎಷ್ಟೊಂದು ಸುಂದರ ಅನುಬಂಧ! ನೆನಸಿಕೊಂಡರೇ ಮೈ ಜುಮ್ಮೆನಿಸುತ್ತದೆ. ಜಗತ್ತಿನ ಜೀವ ಸಂತತಿಯ ಪುನರ್ ನವೀಕರಣ ಹೀಗೆ ಸಾಗುವುದು ಎಂದು ಆ ದೇವ ನಿರ್ಧರಿಸಿಬಿಟ್ಟಿದ್ದಾನೆ.

ಮಗು ಹೆತ್ತವರಿಗೆ ಮನ್ವಂತರವನ್ನು ಸೃಷ್ಟಿಸಿಬಿಡುತ್ತದೆ. ಹೆತ್ತವರು ಬದುಕುವುದೇ ಈ ನನ್ನ ಜೀವಕ್ಕಾಗಿ ಎಂದು ನಿರ್ಧರಿಸಿಬಿಡುತ್ತಾರೆ. ನನ್ನ ಜೀವನದಲ್ಲಿ ಇನ್ನೂ ಏನೂ ಇಲ್ಲ. ಈ ಒಂದು ಕಂದನ್ನನ್ನು ಚೆನ್ನಾಗಿ ನೋಡಿಕೊಂಡರೇ ಸಾಕು. ನಮಗೆ ಏನೂ ಬೇಡ. ಅವನೊಬ್ಬ ಚೆನ್ನಾಗಿ ಬೆಳೆದರೇ ಸಾಕು.

ಮಗುವಿನೊಂದಿಗೆ ಸುಂದರ ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿಕೊಂಡು ಅವನ ಏಳ್ಗೆ ಬಾಳ್ವೆಗಾಗಿ ತಮ್ಮ ದುಡಿತವನ್ನು ಹೆಚ್ಚು ಮಾಡಿಕೊಳ್ಳುವ ಮಂದಿಯನ್ನು ನಮ್ಮ ಸುತ್ತ ಕಾಣಬಹುದು.

ನಾವು ಕಷ್ಟಪಡುವುದನ್ನು ಈ ಮುದ್ದು ಜೀವ ನೋಡಬಾರದು. ನಾವು ಮಗು ಸ್ವಲ್ಪ ಖುಷಿಪಟ್ಟರು. ಈ ಕಂದಮ್ಮ ನಿರಮ್ಮಳಾಗಿ ನಗುತಿರಲಿ. ಇಂದು ಕೊಡಿಟ್ಟಿದ್ದೇಲ್ಲಾ ಅವನಿಗೆ ಮಾತ್ರ. ಅವನು ಮುಂದೆ ರಾಜನಾಗಿ ಬಾಳಲಿ ಎಂಬುದೇ ಎಲ್ಲಾರ ಆಶೀರ್ವಾದ.

ಈ ಭಾವನೆ ಹೆತ್ತವರನ್ನು ಗೊತ್ತಿಲ್ಲದೇ ಮಹನ್ನೊತ ಯೋಗಕ್ಕೆ ಕೊಂಡು ಹೋಗಿಬಿಡುತ್ತದೆ. ತಾನು ಮಾಡುವುದು ತನಗಲ್ಲಎನ್ನುವುದು.

ಜಗತ್ತಿನಲ್ಲಿ ಪ್ರತಿಯೊಬ್ಬರೂ ತನ್ನ ಅನಂತರ ಹೆಚ್ಚು ಪ್ರೀತಿಸುವುದು ತನ್ನ ಕರಳು ಬಳ್ಳಿಗಳನ್ನು ಮಾತ್ರವೇ!

ಅದೇ ಸತ್ಯ.

ಹೆತ್ತವರಿಗೆ ತನ್ನ ಮಕ್ಕಳೇ ಸರ್ವಸ್ವ. ಆ ಸಮಯದಲ್ಲಿ ಯಾವುದೇ ಪ್ರತಿಫಲ ಆಪೆಕ್ಷೆಯಿಲ್ಲದೇ ತನ್ನ ಮಕ್ಕಳ ಅಭಿವೃದ್ಧಿ ಮತ್ತು ಸಂರಕ್ಷಣೆಗಾಗಿ ತನ್ನ ಜೀವಮಾನವನ್ನೇ ಸವೆಸುವ ಎಷ್ಟೋ  ಮಂದಿಯನ್ನು ನಮ್ಮ  ಜಗತ್ತಿನಲ್ಲಿ ಕಾಣಬಹುದು.

ಈ ರೀತಿಯ ಬಾಂದವ್ಯವನ್ನು ಯಾರು ಯಾವತ್ತೂ ಎಂದು ಮರೆಯುವುದಿಲ್ಲ. ಅದೇ ಚಲನೆಯ ನಿಯಮ.. ಜಗತ್ತಿನ ಜೀವಂತಿಕೆಗೆ ಸಾಕ್ಷಿ!

ಮಗುವಿನ ಆಟ ಪಾಠಗಳನ್ನು ಹೆತ್ತವರು ಜಪಿಸುವುದು ಅವುಗಳು ಸ್ಕೋಲಿಗೆ ಹೋಗುವವರೆಗೂ. ನೋಡಲು ಎರಡು ಕಣ್ಣು ಸಾಲದು. ಮಕ್ಕಳು ಆ ಮನೆ ಮಂದಿಗೆಲ್ಲಾ ಹೊಸ ಸಡಗರವನ್ನೇ ತಂದುಕೊಟ್ಟಿರುತ್ತಾರೆ.  ಮಕ್ಕಳನ್ನು ಕಂಡರೇ ಮನೆಯವರೆಲ್ಲಾ ಪ್ರೀತಿಯ ಧಾರೆಯನ್ನೇ ಎರೆಯಲು  ನಾ ಮುಂದು ತಾ ಮುಂದು ಎಂದು  ನಿಂತಿರುತ್ತಾರೆ.

ಅವುಗಳ ತುಂಟಾಟ, ಅವುಗಳ ತೂದಲು ನುಡಿ, ಅವುಗಳ ಅಳು, ನಗು ನೋಡಿ ನೋಡಿ ಇನ್ನೂ ಬೇಕು ಅನಿಸುತ್ತದೆ. ಅವುಗಳ ಸಿಟ್ಟು, ಅವುಗಳ ಸೆಡೆವು ಅಬ್ಬಾ ಒಂದೊಂದು ಒಂದು ಕಾಂದಬರಿಯೇ ಸರಿ. ಅವುಗಳನ್ನು ಹೇಳುವುದಕ್ಕಿಂತ ಅನುಭವಿಸುವುದೇ ಮೇಲು.

ಈಗಂತೂ ನಮ್ಮ ಟೆಕ್ನಾಲಜಿಯ ಹಿರಿಮೆ ಮಕ್ಕಳ ಪ್ರತಿಕ್ಷಣವನ್ನು ಪೋಟೊಗಳಲ್ಲಿ, ವಿಡಿಯೋಗಳಲ್ಲಿ ಸೇರೆ ಹಿಡಿಯಲು ಮನೆ ಮಂದಿಯೇಲ್ಲಾ ನಿಂತಿರುತ್ತಾರೆ. ಅದು ಒಳ್ಳೆಯದು. ಮುಂದೆ ದೊಡ್ಡವರಾದಾಗ ಮಕ್ಕಳಿಗೆ ಅವರಾಡಿದ ಎಲ್ಲಾ ಕ್ಷಣಗಳನ್ನು ಪೋಟೋ ಅಥವಾ ವಿಡಿಯೋಗಳಲ್ಲಿ ಬಹುಮಾನವಾಗಿ ಕೊಟ್ಟರೆ ಒಟ್ಟಾಗಿ ಮಕ್ಕಳಿಗೆ ಅವರ ಬಾಲ್ಯವನ್ನೇ ವಾಪಸ್ಸು ನಿಡಿದಂತೆಯೇ?

ಮುಂಜಾನೆಯಿಂದ ರಾತ್ರಿ ಮಲಗುವವರೆಗೆ ಅವುಗಳ ಜೋತೆಯಲ್ಲಿ ಇರುವುದು ಅಜ್ಜ, ಅಜ್ಜಿ ಮತ್ತು ಹೆತ್ತ ತಾಯಿ ಮಾತ್ರ. ಅವರು ಅನುಭವಿಸುವ ಸಂಭ್ರಮವನ್ನು ಅವರ ಮುಖದಲ್ಲಿ ಕಾಣುವ ಸಂತೋಷದಿಂದ ಕಾಣಬಹುದು.

ಒಮ್ಮೊಮ್ಮೆ ಅಬ್ಬಾ ಈ ಮಗುವನ್ನು ಹಿಡಿದು ಹಿಡಿದು ಸಾಕಾಯಿತು ಎನಿಸಿದರೂ.. ಸ್ವಲ್ಪ ಸಮಯದಲ್ಲಿಯೇ ಆ ಮಗುವಿನ ಒಂದು ಬೊಚ್ಚು ನಗು ಎಂಥ ದಣಿವನ್ನು ನೀರ ಗುಳ್ಳೆಯನ್ನಾಗಿಸುತ್ತದೆ.

ಅಜ್ಜ ಅಜ್ಜಿಗಳಿಗಂತೂ ತಮ್ಮ ಹರೆಯವನ್ನು ಈ ಚಿಕ್ಕ ಜೀವಗಳು ವಾಪಸ್ಸು ತಂದುಕೊಟ್ಟಂತ್ತಾಗುತ್ತದೆ. ಅವುಗಳ ಜೋತೆಯ ಜೀವನ ಅವರನ್ನು ಎಂದು ನಾವು ಒಂಟಿಯಲ್ಲ ಎನ್ನುವಂತೆ ಮಾಡಿಕೊಡುತ್ತದೆ.

ಹೆಚ್ಚು ಪ್ರಫುಲ್ಲತೆಯನ್ನು ಹೊಂದಿರುವ ಮನೆಯೆಂದರೇ ಮಕ್ಕಳಿರುವ ಮನೆ. ಅ ಮನೆಯು ಹೆಚ್ಚು ಸ್ವಚ್ಚವಾಗಿರದಿದ್ದರೂ, ಅಲ್ಲಿರುವ ಹೈ ಹೊಲ್ಟೆಜ್ ಮುಟ್ಟಿದರೇ ಶಾಕ್ ಅನಿಸುತ್ತಿರುತ್ತದೆ. ಅದು ಕೇವಲ ಒಂದು ಚಿಕ್ಕ ಮಗುವಿನಿಂದ ಬೆಳಕಾಗಿರುತ್ತದೆ.

ಮಕ್ಕಳ ದಣಿವಿರದ ಆಟವನ್ನು ನೋಡಿ ನಾವು ಕಲಿಯುವುದು ಬಹಳವಿದೆ. ಅವುಗಳು ನೀಡುವ ಮರು ಪಾಠ ಯಾವ ಯುನಿವರ್ಸಿಟಿಯು  ಕಲಿಸಿರುವುದಿಲ್ಲ!  ಈ ಕ್ಷಣವನ್ನು ಯಾವ ಕೊರತೆಯಿಲ್ಲದೇ ಹೇಗೆ ಅನುಭವಿಸುತ್ತಾ ಬದುಕಬೇಕು ಎಂಬುದು ಎಲ್ಲಾ ಚಿಕ್ಕ ಮಕ್ಕಳು ದೊಡ್ಡವರಿಗೆ ನೀಡುವ ಅತಿ ದೊಡ್ಡ ಪಾಠ!

ಇನ್ನೂ ಏಕೆ ಕಾಯುತ್ತಿರೀ? ಬೇಗ ಒಂದಾದರೂ ಮಕ್ಕಳನ್ನು ಮಾಡಿಕೊಂಡು ಸಂತೋಷವೆಂದರೇ ಏನೂ ಎಂಬುದನ್ನು ಅನುಭವಿಸಬಾರದ?