ಶುಕ್ರವಾರ, ಏಪ್ರಿಲ್ 24, 2015

ಮನುಷ್ಯನ ಮನಸ್ಸೇ ಹೀಗೆ

ಪ್ರೀತಿಸುವುದು, ಸಂಬಳಿಸುವುದು, ಜೊತೆ ಇರುವುದು. ಎಲ್ಲಾ ಮನಸ್ಸಿಗೆ ಸಂಬಂಧಿಸಿದ್ದಾ ಅಥವಾ ಅದು ಒಂದು ಕೆಲಸವಾ. ಅದು ಹೇಗೆ ನಮ್ಮ ಮನಸ್ಸು ಆ ಕ್ಷಣಕ್ಕೆ ತಕ್ಕ ಹಾಗೆ ನಡೆದುಕೊಳ್ಳುವುದು. ಹತ್ತಿರವಿದ್ದಾಗ ನೀನೇ ನನ್ನ ಜೀವ ಅನ್ನುವುದು. ನೀನೇ ನನ್ನವನು, ನನ್ನವಳು ಎನ್ನುವುದು. ಅತಿ ಉತ್ತಮರು ನಾನು ನೀನು ಎಂದು ಪುನಃ ಪುನಃ ಜೊತೆ ಇರುವವರೊಂದಿಗೆ ಗೊತ್ತೂ ಮಾಡಿಕೊಳ್ಳುವುದು. ಇದು ಯಾಕೆ ಎನಿಸುತ್ತದೆ.

ಸಂಬಂಧಗಳು ಮನುಷ್ಯನಿಗೆ ಬೇಕ ಬೇಡವಾ? ಹಾಗೆಂದು ಕೇಳಿದರೇ ಪುನಃ ಸಮಾಜ ಸೈನ್ಸ್ ಎಂದು ಅಲ್ಲಿಂದ ಅದೇ ಪಠ್ಯಗಳ ಸಾಲುಗಳನ್ನು ಉದ್ಗರಿಸುತ್ತೇವೆ. ಮಾನವ ಸಂಘ ಜೀವಿ. ಒಂಟಿಯಾಗಿ ಬಾಳಲಾರ ಅನ್ನುತ್ತೇವೆ.

ಅದಕ್ಕೆ ಸಂಸಾರ, ಸಂಬಂಧಗಳು, ನೆರೆ ಹೊರೆ, ಸ್ನೇಹಿತರು, ಇಷ್ಟರು ಇತ್ಯಾದಿಯಾಗಿ ತನ್ನದೇ ಒಂದು ಗ್ರೂಪ್ ಮಾಡಿಕೊಂಡುಬಿಡುತ್ತಾನೆ. ಇದು ಮನುಷ್ಯನ ದೌರ್ಬಲ್ಯವೋ ವರವೋ ಒಂದು ಗೊತ್ತಾಗುವುದಿಲ್ಲ. ಮನಸ್ಸಿಗೆ ಇದು ಬೇಕು ಬೇಡ ಎನ್ನುವುದು ಅದು ಒಂದು ಕ್ಷಣ ಮಾತ್ರ. ಪುನಃ ಈ ಜನಜಂಗುಳಿಯೇ ಬೇಜಾರಾಗುವುದು, ಸಂತೆಯಾಗುವುದು. ನಾನೇ ನಾನು ಒಂಟಿಯಾಗಿ ಒಂದು ಕ್ಷಣ ಕಳೆಯಬೇಕು ಅನಿಸುತ್ತದೆ. ಅತಿ ಪ್ರೀತಿಪಾತ್ರರರನ್ನು ದೂರಮಾಡಿ ನಾನು ನಾನೇ ಇರಬೇಕು. ಅದು ನಾನೇ ಆಗಿರಬೇಕು ಅನಿಸುವುದು ಯಾವ ರೀತಿ ಅನಿಸುತ್ತದೆ.

ಮನುಷ್ಯನ ಮನಸ್ಸೇ ಹೀಗೆ ಅನಿಸುತ್ತದೆ. ಅದು ಪಕ್ಕ ಕೋತಿಯೇ ಸರಿ. ಈ ಮರದಿಂದ ಆ ಮರಕ್ಕೆ ಯಾವಾಗಲೂ ಜಿಗಿಯುವ ಮಂಗನಂತೆ. ಎಲ್ಲಿಯು ನೆಮ್ಮದಿಯ ಉಸಿರಾಡುವುದಿಲ್ಲ. ಇರುವುದ ಬಿಟ್ಟು ಇಲ್ಲದ ಕಡೆಗೆ ಮನಸ್ಸು. ಹೌದು! ಅದೇ ಜೀವನ ಅನಿಸುತ್ತದೆ. ಅದೇ ಮನುಷ್ಯ ಹಸಿರಾಗಿರುವನು.ಅದೇ ಅವನ ಏಳ್ಗೆಯ ಗುರುತು. ಅದೇ ಅಲ್ಲಿಯೇ ಬಿದ್ದು ಒದ್ದಾಡುವುದು ಅಸಾಧ್ಯವಾದದ್ದು ಅಲ್ಲ. ನಿಂತ ನೀರು ಕೊಳತು ನಾರುವುದು. ಇರಬಹುದು!

ಅದು ಹೇಗೆ ಮನುಷ್ಯನ ಮನಸ್ಸು ಆ ಆ ಸಮಯಕ್ಕೆ ತಕ್ಕ ಹಾಗೆಯೇ, ಎಂಥ ಹೃದಯ ಹತ್ತಿರವಾದವರನ್ನು, ತನ್ನ ತನು ಮನವನ್ನು ಅರ್ಪಿಸಿದವರನ್ನು ಆ ಕ್ಷಣ ಮರೆತು ಮರೆಯಾಗಿ ತನ್ನ ಕ್ಷಣಿಕ ಸುಖ, ಸಂತೋಷವನ್ನೇ ಮುಖ್ಯ ಮಾಡಿಕೊಳ್ಳುತ್ತಾನೇ? ದೇವರೇ ಬಲ್ಲ.

ಪಾಪ ಪುಣ್ಯ ಎಂಬುದು ಪುಸ್ತಕದ ಬದನೇ ಕಾಯಿ ಅನ್ನುತ್ತಾನೆ. ಮುಂದುವರಿದ ಬುದ್ಧಿವಂತ ಮನುಷ್ಯ. ಯಾರು ಅತಿ ಒಳ್ಳೆಯವರಲ್ಲ! ಅತಿ ಒಳ್ಳೆಯವನಾಗಿರುವುದು ಇಂದಿನ ಜಗತ್ತಿಗೆ ಸೂಟ್ ಅಲ್ಲ. ಸ್ವಲ್ಪ ಕೆಟ್ಟವರಾಗಿರುವುದು. ಸ್ವಲ್ಪ ಅಪ್ರಮಾಣಿಕರಾಗಿರುವುದು. ಸ್ವಲ್ಪ ಸುಳ್ಳು ಹೇಳುವುದು ಏನೂ ಪಾಪವಲ್ಲ! ಎಂದು ನಮ್ಮ ನಮ್ಮಲ್ಲಿಯೇ ಒಂದು ರಹದಾರಿಯ ಸಣ್ಣ ಕಿಂಡಿಯನ್ನು ತೆರೆದುಕೊಂಡು ಅದರಲ್ಲಿಯೇ ನೆಮ್ಮದಿಯನ್ನು ಕಾಣುತ್ತೇವೆ.

ಅತಿಯಾಗಿ ಪ್ರೀತಿಸುವುದು, ಅತಿಯಾಗಿ ಯಾರನ್ನು ಹಚ್ಚಿಕೊಳ್ಳುವುದು, ಅತಿಯಾಗಿ ಒಳ್ಳೆಯವರಾಗಿರುವುದು ಒಳ್ಳೆ ಮನುಷ್ಯನ ರೂಪವಲ್ಲ ಎಂದು ಪುನಃ ಪುನಃ ಮನನ ಮಾಡಿಕೊಳ್ಳುವುದು ಯಾವುದರ ದ್ಯೋತಕ ಅನಿಸುತ್ತದೆ.

ಯಾಕೆ ಯಾರು ತಮ್ಮ ಮನಸಾಕ್ಷಿಗೆ ತಕ್ಕನಾಗಿ ನಡೆದುಕೊಳ್ಳುವುದಿಲ್ಲ. ಒಂದು ಸ್ಪರ್ಷಕ್ಕೂ ಒಂದು ಅರ್ಥವಿರುವಂತೆ. ಆ ಸ್ಪರ್ಷ ಈ ಸ್ವರ್ಷ ಎಂಬುವುದಕ್ಕೆ ವ್ಯತ್ಯಾಸವೇ ಇಲ್ಲವೇ ಅಂದುಕೊಳ್ಳುವರಾ? ಮನ ಮೆಚ್ಚಿದವಳನ್ನು/ನನ್ನು ಅದು ಹೇಗೆ ದೂರ ಮಾಡುವರು.

ತನ್ನವರು ತನ್ನನ್ನೇ ಜೀವ ಅಂದುಕೊಂಡುವವರನ್ನು ಆ ಕ್ಷಣಕ್ಕೆ ಅದು ಹೇಗೆ ಮರೆಯುವವರು? ಯಾರು ಯಾರ ಮುಂದೆಯು ಕೆಟ್ಟವನಾಗಿ ಬಿಂಬಿಸಿಕೊಳ್ಳಲು ಇಚ್ಚಿಸುವುದಿಲ್ಲ. ಎಂಥ ದುಷ್ಟನಾದರೂ ಆ ಕ್ಷಣಕ್ಕೆ ತನ್ನ ಇಷ್ಟಪಡುವವರ ಮುಂದೆ ಕರುಣಮಯಿಯಾಗಿಯೇ ಇರಲು ಪ್ರಯತ್ನಿಸುತ್ತಾನೆ. ಯಾಕೆಂದರೇ ಅವನು ಆ ಕ್ಷಣಕ್ಕೆ ಅವರಿಗೆ ಆ ರೀತಿಯಲ್ಲಿ ಒಂದು ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸಲು ಪ್ರೇರಪಿಯಾಗಿರುತ್ತಾನೆ.

ಅದರೇ ತಾನು ತನ್ನ ಮನದಲ್ಲಿಯೇ ಹುದುಗಿರುವ ಇನ್ನೊಂದು ಮುಖವನ್ನು ಮುಖವಾಡವನ್ನು ತನ್ನವರ್ಯಾರು ಜೊತೆಯಲ್ಲಿರದ ಸಮಯದಲ್ಲಿ, ತನ್ನವರಲ್ಲದವರೊಂದಿಗೆ ಅತಿ ಕೆಟ್ಟವನಾಗಿ ನಡೆದುಕೊಳ್ಳುವಂತಾಗುವುದು ಹೇಗೋ ಗೊತ್ತಾಗುವುದಿಲ್ಲ. ಮನುಷ್ಯ ಮನುಷ್ಯನಾಗಿರುವುದು ಅಷ್ಟು ಸುಲಭವಲ್ಲ ಅನಿಸುತ್ತದೆ. ಅತಿ ಕೆಟ್ಟವನಾಗುವುದು ಈ ಮನುಷ್ಯ ಜೀವಿಯೇ.ತನ್ನ ಬುದ್ಧಿಗೆ ತಿಳಿದಂತೆ ಏನಾದರೂ ಮಾಡುವವನು. ಹಾಗೆಯೇ ತಾನು ಬದುಕುವನು! ಅದು ಒಂದು ಮುಖವಾಡವೇ ಅನಿಸುತ್ತದೆ.

ನಿಜವಾದ ಮುಖ ಯಾರೊಬ್ಬರಿಗೂ ತಿಳಿಯುವುದಿಲ್ಲ. ತೆರೆದ ಪುಸ್ತಕದಂತ ಸರಳ ಜೀವನ ಸಾಮಾನ್ಯ ಮನುಷ್ಯನಿಗೆ ಅಸಾಧ್ಯ ಅನಿಸುತ್ತದೆ. ತನ್ನನ್ನು ತಾನು ಮೀರಿ ಬೆಳೆಯಲಾರ ಅನಿಸುತ್ತದೆ. ತನ್ನ ವಿಷಾಯಾಸಕ್ತಿಗಳೆ ತನ್ನ ಎಲ್ಲೆಯನ್ನು ಮೀರುತ್ತದೆ. ತಾನು ಒಂಟಿಯಾಗಿದ್ದಾಗ, ತನ್ನವರು, ಪರಿಚಯದವರೂ ಯಾರು ಇಲ್ಲದಿದ್ದಾಗ ಹೇಗೆ ನಡೆದುಕೊಳ್ಳುತ್ತಾನೆ ಎಂಬುದು ಅವನು ಹೇಗೆ ಅಂಥ ತಿಳಿಯಬಹುದು.. ಯಾರು ಕೇಳುವವರಿಲ್ಲಾ ಅಂದರೇ ಮುಗಿಯಿತು ಅಂಥ ನಮಗೆ ನಾವೇ ರೂಢಿಯಾಗಿ ಹೇಳುತ್ತಿರುತ್ತೇವೆ. ಅದು ನಿಜವಾ?

ಮೋಸ ಅನ್ನುವುದು ಮನುಷ್ಯರಿಗೆ ಮಾತ್ರ ಅನಿಸುತ್ತದೆ. ಬೇರೆ ಯಾವ ಜೀವಿಯು ಎಂದು ಮೋಸ ಮಾಡುವುದಿಲ್ಲ. ಬೇರೆಯವರಿಗೆ ಮಾಡುವ ಮೋಸ, ಬೇರೆಯವರು ನಮಗೆ ಮಾಡುವ ಮೋಸಕ್ಕಿಂತ, ತಾನು ತನಗೆ ಮಾಡಿಕೊಳ್ಳುವ ಮೋಸವೇ ದೊಡ್ಡದು ಅನಿಸುತ್ತದೆ. ಅದನ್ನು ಯಾರು ಕೇಳುವವರು ಇರುವುದಿಲ್ಲ. ಕೊನೆ ಕೊನೆಗೂ ಒಂದು ಪಶ್ಚಾತಾಪವು ಸಹ ಇರುವುದಿಲ್ಲ. ಯಾಕೆಂದರೇ ಅದನ್ನು ಯಾರಿಗೂ ಗೊತ್ತಾಗದಂತೆ ಮಾಡಿರುತ್ತಾನೆ.

ಹಾಗೆಯೇ ಯಾರದರೂ ಅದನ್ನು ತಿಳಿದುಕೊಂಡರೇ ಇಲ್ಲಾ ಅದು ಒಂದು ಅನುಭವ, ಎಲ್ಲಾದನ್ನೂ ನೋಡಬೇಕು, ಮಾಡಬೇಕು ಅಷ್ಟೇ ಅದಕ್ಕಾಗಿ ಮಾಡಿದೆ ಎಂದು ಸಮರ್ಥಿಸಿಕೊಳ್ಳುತ್ತಾನೆ. ಅದರೇ ತನ್ನವರಿಗೆ ತನ್ನ ಮನಸ್ಸಾಕ್ಷಿಗೆ ಅದು ತಪ್ಪು ಎಂದು ಗೊತ್ತಿದ್ದರೂ ಯಾಕಾದರೂ ಮಾಡುವವ ಈ ಬುದ್ಧಿವಂತ ಮಾನವ? ತಿಳಿಯದಾಗಿದೆ. ಹೀಗೆ ಇರುವುದೇ ಪ್ರಕೃತಿ ಸಹಜವೋ ಅಸಹಜವು ಗೊತ್ತಾಗುವುದಿಲ್ಲ!

ಚಿನ್ನಾ ರನ್ನಾ ಎನ್ನುವ ಬಾಯಿಯೇ ಬಾಯಿಗೆ ಬಂದಾಗೇ ಬಯ್ಯುವುದು. ಅದೇ ಸವಿಯ ಸ್ಪರ್ಷವೇ ಮುಳ್ಳೂ ಸುಚ್ಚಿದಾಂತಾಡುವುದು. ಮುಂಚೆ ಮುಖ ನೋಡುತ್ತಿದ್ದರೇ ಹೊತ್ತೇ ಹೋಗುವುದು ಗೊತ್ತಾಗುವುದಿಲ್ಲ ಎಂದೇಳುವ ಕಣ್ಣೆ ಯಾಕಾದರೂ ನಿನ್ನ ನೋಡಲಿ ಎಂದು ಸಿಂಡರಿಸುವುದು ಯಾಕೇ?

ಅದಕ್ಕೆ ಇರಬೇಕು ಹಿರಿಯವರು ಹೇಳಿರುವುದು. ಈ ಮನುಷ್ಯ ಎಂಬ ಪ್ರಾಣಿಯ ಖಯಾಲಿಗಳು ಹೀಗೆಯೇ ಅದಕ್ಕೆ ಹೊಂದಿಕೊಂಡು ಹೋಗಬೇಕು. ಇಂದು ಹೀಗೆ ಇರುವುದು ಮುಂದೆ ಹಾಗೆ ಇರುವುದು ಊಟಕ್ಕೆ ಉಪ್ಪಿನ ಕಾಯಿಯಂತೆ ಎನ್ನುತ್ತಿದ್ದದ್ದು. ಗಂಡ ಹೆಂಡತಿಯ ಜಗಳ ಉಂಡು ಮಲಗುವವರೆಗೆ ಎಂದು ಒಂದೇ ಒಂದು ಗಾದೆಯಲ್ಲಿ ನಮ್ಮ ನಿಮ್ಮ ಎಲ್ಲಾ ದೌರ್ಬಲ್ಯಗಳನ್ನು ನಗಣ್ಯ ಮಾಡಿಬಿಟ್ಟರು.

ಅದರೂ ಮನಸ್ಸು ಎಂಬುದು ಇಷ್ಟು ಬೇಗ ಬಣ್ಣವಾಗಿ ಬದಲಾಗುವುದು. ಭಾವನೆಗಳು ಮುಖ್ಯವಲ್ಲವೇ? ಪ್ರತಿ ಜೀವಿಗೂ ಅವರದೇಯಾದ ವ್ಯಕ್ತಿತ್ವವಿರುತ್ತದೆ. ಅದಕ್ಕೆ ಬೆಲೆಯನ್ನು ಪ್ರತಿಯೊಬ್ಬರೂ ಕೊಡಬೇಕು. ಆಗಲೇ ಎಲ್ಲರೂ ಎಲ್ಲರನ್ನೂ ಗೌರವದಿಂದ ಕಾಣುವಂತಾಗುತ್ತದೆ. ಜೀವಕ್ಕೆ ಜೀವವೇ ಬೆಲೆಕೊಡಬೇಕು. ಜೀವ ಬೇಡುವುದು ಭಾವನೆಗಳ ಕಾಣಿಕೆಯನ್ನು ಮತ್ತೆನಲ್ಲಾ!