ಶುಕ್ರವಾರ, ಡಿಸೆಂಬರ್ 25, 2015

ನಮ್ಮ ಅಭಿವ್ಯಕ್ತಿ

ದೇಶದ ಬಗ್ಗೆ ಚಿಂತೆ ಮಾಡುವವರು ನಾವುಗಳು ಎಂಬಂತೆ ಇಂದಿನ ದಿನದಲ್ಲಿ ಪ್ರತಿಯೊಬ್ಬರೂ ತಮಗೆ ಅನಿಸಿದ ವಿಷಯಗಳನ್ನು ಸಾಮಾಜಿ ತಾಣಗಳ ಗೋಡೆಗೆ ಅಂಟಿಸಿಕೊಂಡು ದಿನಗಟ್ಟಲೆ ಕಾಮೆಂಟ್ ಲೈಕ್ ಗಳಲ್ಲಿ ಮುಳುಗಿಕೊಂಡಿರುತ್ತಾರೆ.

ಯಾರು ಏನು ಬೇಕಾದರೂ ಹೇಳಿಕೊಳ್ಳಬಹುದು. ಯಾರು ಏನನ್ನಾದರೂ ಶೇರ್ ಮಾಡಿಕೊಳ್ಳಬಹುದು. ಅದು ಯಾರಿಗೆ ಹೇಗೆ ತಾಕುತ್ತೋ ಗೊತ್ತಿಲ್ಲ. ನನಗೆ ಅನಿಸಿದ್ದನ್ನು ನಾನು ಹೀಗೆ ಹೇಳಿಕೊಳ್ಳುತ್ತೇನೆ, ಎಂಬಂತೆ ಪ್ರತಿಯೊಬ್ಬರೂ ತಮ್ಮ ತಮ್ಮ ಅಕೌಂಟಗಳಲ್ಲಿ (ವಿ)ಚಿತ್ರಿಸಿಕೊಳ್ಳುತ್ತಾರೆ.

ಇದೇ ನಮ್ಮ ಅಭಿವ್ಯಕ್ತಿ ಎನ್ನುವಂತಾಗಿದೆ.

ಹಿಂದೆ ಯಾರೊಬ್ಬರ ಪ್ರತಿಕ್ರಿಯೆಗಳು ಸಾಮಾಜಿಕವಾಗಿ ತಲುಪಬೇಕಾಗಿತ್ತು ಅಂದರೇ ಅದು ಪತ್ರಿಕೆಗಳಲ್ಲಿ , ರೇಡಿಯೋ , ಟಿ.ವಿ ಗಳಲ್ಲಿ ಅಲ್ಲಿಯ ಸಂಪಾದಕರ ಸ್ಕ್ಯಾನ್ ನಂತರ ಪ್ರಕಟವಾಗಬೇಕಾಗಿತ್ತು. ಇಂದು ಹಾಗೇನು ಇಲ್ಲ. ಏನನ್ನಾದರೂ ಎಲ್ಲಿ ಬೇಕಾದರೂ ತನಗೆ ಗೊತ್ತಿರುವ ಸ್ನೇಹಿತರ ಗುಂಪಿನಲ್ಲಿ ಹಳಹಳಿಸಿಕೊಳ್ಳಬಹುದು. ಅದು ಹೇಗೆ ಹೇಗೋ ದೇಶದ ಆಚೆಗೂ ತಲುಪುವ ಅವಕಾಶಗಳುಂಟು.

ಹೀಗೆ ತಪ್ಪು ತಪ್ಪು ಕೇರಳಿಸುವ (ಸಾಮಾಜಿಕ) ಹೇಳಿಕೆಗಳಿಂದ ಜೈಲು ಬಂದಿಯಾಗಿರುವವರು ಎಷ್ಟು ಜನವೋ!

ಸ್ವತಂತ್ರ್ಯವನ್ನು ಈ ರೀತಿಯಲ್ಲಿ ದುರುಪಯೋಗಪಡಿಸಿಕೊಂಡು ಕೇವಲ ಸುದ್ಧಿಯಾಗುತ್ತಿರುವವರ ಸಂಖ್ಯೆ ಏನೂ ಕಡಿಮೆಯಿಲ್ಲ ಬಿಡಿ.

ಕೇವಲ ಕೈಯಲ್ಲಿಯೇ ಒಂದು ಬಟನ್ ಒತ್ತುವುದರ ಮೊಲಕ ಸಮಸ್ತವನ್ನು ತಲುಪುವುಷ್ಟು ವೇಗ, ಸಂಹವನದ ಕೊಡುಗೆ ಡಿಜಿಟಲ್ ಕ್ರಾಂತಿಯದ್ದಾಗಿದೆ. ತನಗೆ ಅನಿಸಿದ್ದನ್ನು ವೈಕ್ತಿಕ , ಸಾಮಾಜಿಕ ಯಾವುದನ್ನು ಮುಚ್ಚು ಮರೆಯಿಲ್ಲದೇ ಪ್ರತಿಯೊಬ್ಬರೊಂದಿಗೆ ಹಂಚಿಕೊಳ್ಳುವ ಬದ್ಧಿ ನಮ್ಮಗಳದಾಗಿದೆ. (ಒಳ್ಳೆಯದೋ?)

ದೇಶದ ಬಗ್ಗೆಯೇ ನಾವುಗಳು ನಮ್ಮ ತಲೆ ಬಿಸಿ ಮಾಡಿಕೊಂಡು ನಮ್ಮ ಲೋಕಲ್ ವಿಷಯ, ಸಮಸ್ಯೆಗಳಿಗಿಂತ ದೆಹಲಿ ಬೆಂಗಳೂರು ಬಗ್ಗೆಯೇ ಮಾತನಾಡುವುಂತಾಗಿದೆ.

ದೆಹಲಿ , ಬೆಂಗಳೂರು ತೀರ ಹತ್ತಿರವಾಗಿದೆ.

ಮೋದಿ , ಸರ್ಕಾರ , ರಾಜಕೀಯ  ಇತ್ಯಾದಿ ನಮ್ಮ ದಿನ ನಿತ್ಯದ ಮಂತ್ರಗಳಾಗಿವೆ.

ಹಿಂದೆ ಸೋಮಾರಿ ಕಟ್ಟೆಯಲ್ಲಿ ಹಳ್ಳಿಯ ವಯಸ್ಸಾದ ಕೇಲವರು ಅಲ್ಲಿ ಸಿಗುತ್ತಿದ್ದ ಹಳೆಯ ದಿನ ಪತ್ರಿಕೆಗಳಿಂದ ಸುದ್ಧಿ ತಿಳಿದು ತಮ್ಮಲ್ಲಿಯೇ ವಸ್ತು ವಿಷಯದ ಬಗ್ಗೆ ವಿಶ್ಲೇಷಣೆ ಮಾಡಿಕೊಂಡು ಮನೆಯ ದಾರಿಯನ್ನು ಹಿಡಿಯುತ್ತಿದ್ದರು.

ಇಂದು ಇದು ಆಗಾಗದೇ ಮೀಡಿಯಾದಲ್ಲಿ ಇದೆ ರೀತಿಯಲ್ಲಿ ಹಾಟ್ ಟಾಪಿಕ್ ಇಟ್ಟುಕೊಂಡು ಐದಾರು ಮಂದಿಯನ್ನು ಕೊಡಿಸಿಕೊಂಡು ವಾದವಿವಾದ ಮಾಡಿಕೊಳ್ಳುವಂತೆ ಮಾಡಿ ಅವರ ಮಾತುಗಳನ್ನು ಎಲ್ಲಾರ ಮನೆ ಮನೆಗೂ ತಲುಪಿಸಿ ಟೋಟಲಿ ತಲೆ ಚಿಟ್ಟು ಹಿಡಿಯುವಂತೆ ಮಾಡಿರುವ ಕೀರ್ತಿ ಯಾರಿಗೆ ಸೇರಬೇಕೋ ದೇವರಿಗೆ ಗೊತ್ತು!

ಯಾವುದು ಮುಖ್ಯ ಯಾವುದು ಅಮುಖ್ಯ ಎಂಬುದನ್ನೇ ಮರೆತು ಕೇವಲ ಟಿ.ಆರ್.ಪಿ ಯ ನಂಬರನಲ್ಲಿ ಜನರನ್ನು ಯಾವುದೋ ಒಂದು ಸುದ್ಧಿ, ಘಟನೆಗೆ ಬಂದಿಸಿರುವಂತಾಗಿದೆ.

ಮರೆಯೋಣ ಅಂದರೂ ಮರೆಯಲಾರದಂತೆ ಕಾಡುತ್ತಿದೆ ದೇಶದ ಸುದ್ದಿ.

ಯಾಕೇ ಇದು?

ಅವರನ್ನು ಇವರು ಛೇಡಿಸುವುದು, ಇವರನ್ನು ಅವರು ಕೀಳಾಗಿ ಕೆರಳಿಸುವುದು.

ಬುದ್ಧಿವಂತರೆಂದರೇ ಎಲ್ಲಾ ವಿಷಯಕ್ಕೊ ಏನನ್ನಾದರೂ ಪ್ರತಿಕ್ರಿಯಿಸಬೇಕಾ?

ಮಾತು ಮಾತು ಬರೀ ಮಾತು! ಅದು ಹರಿಯುವ ಪರಿಯನ್ನು ನೆನಸಿಕೊಂಡರೇ ಭಯವಾಗುತ್ತದೆ!

ತಿನ್ನುವುದರ ಬಗ್ಗೆಯೇ ಜಗಳ, ಅದನ್ನು ತಿನ್ನಬೇಕು, ಇದನ್ನು ತಿನ್ನಬಾರದು! ಇದಕ್ಕೆ ಜಾತಿ ಜಂಜಾಟ , ರಾಜಕೀಯ ಮೇಲಾಟ - ಪ್ರತಿಭಟನೆಗಳು! ತಿನ್ನುವುದು ಅವರವರ ಮರ್ಜಿಗೆ ಬಿಟ್ಟ ವಿಷಯ.

ಇದಕ್ಕೂ ಧರ್ಮಸಂಕಟ!

ದೇವರು ದಿಂಡಿರುಗಳ ಬಗ್ಗೆಯೂ ಹೋರಾಟ.. ದೇವರುಗಳೆ ಈ ರಗಳೆಗಳನ್ನು ನೋಡಿ ದೇಶದಾಚೆಗೆ ಹಾರಿರಬೇಕು!

ಓ ದೇವರೇ.

ಸಹಿಷ್ಣುತೆ - ಅದು ಹೇಗೆ ಎಲ್ಲಿ ಎನ್ನುವುದು ನನ್ನಂಥ ಅಲ್ಪ ತಿಳುವಳಿಕೆಯವನಿಗೆ ಅರ್ಥವಾಗದ ವಿಷಯವಾಗಿದೆ.

ಅವರು ಹೀಗೆ ಅಂದರು, ಇವರು ಹೀಗೆ ಅಂದರು. ಅದು ಈವಾಗ ಶುರುವಾಗಿರುವುದು. ಹಿಂದೆ ಇರಲೇ ಇಲ್ಲ. ಇಲ್ಲಿ ಬಾಳುವುದು ಅಸಾಧ್ಯ ಅನ್ನುವುದು... ಆದರೇ ಬಾಳುತ್ತಲೆ ಬಾಳುತ್ತಲೆ ತಮ್ಮ ಮಾತು ಮಾತು ಭಾಣಗಳನ್ನು ತೂರಿಬಿಡುವುದು.

ಇದೆ ಇತ್ಯಾದಿಯ ಸುದ್ಧಿಗಳ ಭರಾಟೆ ಅದೆ. ಆದಾಯ ಕೆಲವರಿಗೆ.

ಜಾತಿ ಧರ್ಮಗಳನ್ನೇ ಸುತ್ತಿಕೊಂಡಿರುವ ವಿರಾಟ ಶೋಷಣೆಯಾಗಿದೆ. ಸಮಾಜ ಸುಧಾರಣೆ ಆಗಬೇಕು ಎನ್ನುವವರೆ ತಮ್ಮ ಮಾತುಗಳಲ್ಲಿ ಇನ್ನು ಈ ರೀತಿಯ ಶೋಷಣೆಯ ಶಬ್ಧಗಳನ್ನು ಜೀವಂತವಾಗಿ ಶಾಶ್ವತವಾಗಿ ಕಾಪಾಡಿಕೊಳ್ಳಲು ಶ್ರಮವಯಿಸುವಂತಿದೆ.

ಆದರೇ ಇದರ ಯಾವುದೇ ಪರಿವೆಯಿಲ್ಲದೆ. ವರುಷಕ್ಕೆ ಇಷ್ಟು ದಿನ ಚೆನ್ನಾಗಿ ಮಳೆ ಬೇಳೆಯಾಗಿ ತನ್ನ ಹೊಟ್ಟೆ ತುಂಬ ಅನ್ನವನ್ನು ತಿನ್ನುತ್ತಾ, ಆರಾಮಾಗಿ ಸುತ್ತಲಿನ ಜನಗಳ ಜೊತೆಯಲ್ಲಿ ಹೊಂದಿಕೊಂಡು, ತಿಂಗಳಿಗೊಂದು ಹಬ್ಬ ಹುಣ್ಣಿಮೆ ಮಾಡಿಕೊಂಡು, ಯಾರನ್ನು ನೋಯಿಸದೇ ತನ್ನ ಪಾಡಿಗೆ ತಾನಿರುವ ರೈತಾಪಿ ಮಗನಿಂದ ದೇಶದ ಭವಿಷ್ಯ ಉತ್ತಮವಾಗುವುದೋ? ದೇಶದ ದಳ್ಳುರಿಯನ್ನು ನಿತ್ಯ (ಅ)ಪೋಷಿಸುವ ಹೇಳಿಕೆಗಳನ್ನು ಕೊಡುತ್ತಾ ನಿತ್ಯ ಸುದ್ಧಿಯಲ್ಲಿಯೇ ಇರುವ ಇಂಥ ಬುದ್ಧಿವಂತರಿಂದ ದೇಶ ಉದ್ದರವಾಗುವುದೋ ನೀವೆ ಹೇಳಬೇಕು.

ಹಳ್ಳಿ ಮುಕ್ಕ ಪೇಟೆಗೆ ಬಂದು ಕೆಟ್ಟ ಎಂಬ ಗಾದೆ ಸತ್ಯವೋ ಸುಳ್ಳೋ ಪೇಟೆಯ ಮಂದಿ ಹೇಳ್ತಾರೆ ಅಂದುಕೊಂಡಿದ್ದೀನಿ.

ಶನಿವಾರ, ನವೆಂಬರ್ 28, 2015

ಮಕ್ಕಳು ನಮ್ಮನ್ನು ನೋಡಿ ಮರುಗುವುವು

ಮಕ್ಕಳಂತೆ ಚಿರಕಾಲ ಬದುಕುವುದು ಯಾರೊಬ್ಬರಿಗೂ ಸಾಧವಿಲ್ಲ!

ಮಕ್ಕಳಿಗಿರುವ ಸಂತೋಷ ನಾವುಗಳು ಅತಿ ಬುದ್ಧಿವಂತರಾಗುವ ಧಾವಂತದಲ್ಲಿ ಪೂರ್ತಿಯಾಗಿ ಕಳೆದುಕೊಂಡುಬಿಡುತ್ತಿವಿ ಅನಿಸುತ್ತದೆ. ಅವರ ಬಾಲ್ಯದ ಆನಂದವನ್ನು ನಾವುಗಳು ಕೇವಲ ನಮ್ಮ ಚಿಕ್ಕ ಮಕ್ಕಳನ್ನು ನೋಡುತ್ತಾ ನಮ್ಮ ಜೀವನವನ್ನು ಕಂಡು ಪಶ್ಚತಾಪಪಡಬೇಕಷ್ಟೇ.

ವರ್ತಮಾನದಲ್ಲಿ ಬದುಕಬೇಕು ಎಂದು ನಾವುಗಳು ಎಷ್ಟೇ ಪ್ರಯತ್ನಪಟ್ಟರು, ಕಳೆದ ಕೆಟ್ಟ ಕ್ಷಣಗಳು ಭೂತಾಕರದಲ್ಲಿ ನಮ್ಮ ಮನವನ್ನು ತಿನ್ನುತ್ತಿರುತ್ತವೆ. ಭವಿಷ್ಯತ್ ನ ಯೋಚನೆಗಳು  ಮತ್ತು ಯೋಜನೆಗಳು ನಮ್ಮ ನೆಮ್ಮದಿಯನ್ನೇ ಹಾಳು ಮಾಡಿರುತ್ತವೆ.

ಏನು ಇದ್ದರೂ ಏನೂ ಇಲ್ಲವೆಂಬ ಕೊರಗು ನಿತ್ಯ ನಮ್ಮ ಸಂತೋಷವೆಂಬ ಪದದ ಅರ್ಥವೇ ಗೊತ್ತಿಲ್ಲದಂತೆ ಮಾಡಿರುತ್ತದೆ. ಇರುವುದದ
ರಲ್ಲಿ ಸುಖಪಡುವ ಪುಣ್ಯವೇ ಇಲ್ಲವೆಂಬಂತೆ ನಮ್ಮಲ್ಲಿ ಇಲ್ಲದ್ದರ ಬಗ್ಗೆಯೇ ತಲೆ ಕೆಡಿಸಿಕೊಂಡು, ಬದುಕುವುದೇ ಇಷ್ಟು ಕಷ್ಟ ಎಂದು ಹ್ಯಾಪು ಮೊರೆ ಹಾಕಿಕೊಂಡು ಸುತ್ತಲಿನ ಪಾಸಿಟಿವ್ ವಾತಾವರಣವನ್ನೇ ನೇಗೆಟಿವ್ ಮಾಡಿ ಅಲ್ಲಿ ಬಣ್ಣವೇ ಇಲ್ಲದ ಮುಖ ಮಾಡಿಕೊಂಡಿರುತ್ತೇವೆ.

ಮಕ್ಕಳ ಬದುಕು ನಾವುಗಳು ಬದುಕಲು ಸಾಧ್ಯವಿಲ್ಲ. ಅದಕ್ಕೆ ಮೂರು ಹೊತ್ತು ಊಟ, ಸಾಕಾಗುವಷ್ಟು ಆಟ, ರಾತ್ರಿ ಕಣ್ಣು ತುಂಬ ನಿದ್ದೆ. ಇಷ್ಟೇ ಸಾಕು. ದೇವರ ಪ್ರೀತಿ ಅನಿಸುತ್ತದೆ. ಮಕ್ಕಳ ಆ ಚಿಕ್ಕ ತಲೆಯಲ್ಲಿ ಇಷ್ಟು ಮಾತ್ರ ಇಟ್ಟು, ಇರೋ ವರುಷ ಚಿಕ್ಕ ಬಾಲ್ಯದ ದಿನಗಳನ್ನು ಸಂತೋಷವಾಗಿ ಕಳಿ, ಮುಂದೆ ಇದೆ ನಿನ್ನ ನಿತ್ಯ ಜಂಜಾಡ ಎಂದು ಹೇಳಿದಂತೆ ಅವುಗಳನ್ನು ತಯಾರು ಮಾಡಿರುತ್ತಾನೆನೋ ಆ ಬ್ರಹ್ಮ ಅನಿಸುತ್ತದೆ.

ಆದರೇ ನಾವುಗಳು ಮನುಷ್ಯರು ಮುಂದುವರೆದಿರುವವರು, ಶುರು ಮಾಡುತ್ತೇವೆ ನಮ್ಮ ವ್ರಾತಾ ಎರಡು ಮೂರು ವಯಸ್ಸಾಗಲಿ ಎಂದು ಕಾದಿದ್ದು ಓದು ಎಂಬ ಸಂಕಟದಿಂದ ಪ್ರಾರಂಭಿಸಿ, ಆ ಮುಗ್ಧ ಮನಸ್ಸನ್ನು ಮುಂದಿನ ಅಖಂಡ ಬದುಕಿನ ಜಂಜಾಟದ ಕುಲುಮೆಗೆ ದೂಡಲು ದಾಪುಗಾಲಿನಲ್ಲಿ ಕಾಯುತ್ತಿರುತ್ತೇವೆ.


 ಅಕಟಾಕಟ!

ನಮಗೆ ಗೊತ್ತೂ ನಾವು ಎಷ್ಟೇ ತಿಳುವಳಿಕೆವಸ್ತರಾಗಿದ್ದರೂ ನಾವುಗಳು ನಮ್ಮ ನೆಮ್ಮದಿಯನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ.

ನೆಮ್ಮದಿಯಾಗಿ ಇಲ್ಲದಿರುವುದೇ ಜೀವನದ ಮಹಾನ್ ಧ್ಯೇಯವೆಂದುಕೊಂಡು, ಹೆಚ್ಚು ಹೆಚ್ಚು ಸಮಸ್ಯೆಗಳಲ್ಲಿ ನಮ್ಮನ್ನು ನಾವುಗಳು ಸಿಲುಕಿಸಿಕೊಂಡು, ಹೆಚ್ಚು ಒತ್ತಡಗಳಿಗೆ ನಮ್ಮನ್ನು ನಾವು ಒಡ್ಡಿಕೊಂಡು ಹತ್ತು ಹಲವು ಆರೋಗ್ಯ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತೇವೆ.

ಆದರೇ ನಾವು ಕೊಡುವ ಉತ್ತರ: ವಯಸ್ಸಾಗುತ್ತಿದೆ! ತಾರುಣ್ಯದ ಆರೋಗ್ಯ ಇನ್ನು ಇರಬೇಕೆಂದರೇ ನಾವೇನು ಅಮೃತವನ್ನೇ ಕುಡಿಯುತಿರುವುದು? ಎಂದು ನಮ್ಮನ್ನೇ ನಾವು ಹುಸಿ ಸಮಧಾನ ಮಾಡಿಕೊಳ್ಳುತ್ತೇವೆ.

ಬಾಲ್ಯದಲ್ಲಿ ಕಳೆದ ಕ್ಷಣಗಳನ್ನೇ ಮರೆತುಬಿಡುತ್ತೇವೆ. ಆಗ ಹೇಗಿದ್ದೆವು? ಈಗ ಹೇಗೆಲ್ಲಾ ಬಾಳುತ್ತಿದ್ದೇವೆ? ಎಂಬುದನ್ನೇ ಪೂರ್ತಿ ಮರೆತುಬಿಡುತ್ತೇವೆ.

ಗೊತ್ತು ಗೊತ್ತಿಲ್ಲದೋ ಅತಿ ದೊಡ್ಡದಾದ ಸಮಸ್ಯೆಗಳಲ್ಲಿ ಪ್ರತಿಯೊಬ್ಬರೂ ಸಿಲುಕಿಕೊಂಡು ಪ್ರೀತಿ, ವಿಶ್ವಾಸ, ಶಾಂತಿ, ಸಹ ಬಾಳ್ವೆಯನ್ನು  ದುಡ್ಡುಕೊಟ್ಟು ಕಲಿಯಲು ಹೋಗುತ್ತೇವೆ. 


ಎಂಥ ವಿಪರ್ಯಾಸ!

ನೋಡಿ ಹಾಲು ಹಸುಳೆ ಕಂದಮ್ಮನನ್ನಾ! ಆದರ ಮುಖ, ಆ ಮುಗ್ಧ ಕಣ್ಣುಗಳೇ ಹೇಳುತ್ತವೆ. ಆ ಮಗು ಎಂಥ ಪ್ರೇಮ ಪುತ್ಥಳಿ ಎಂದು. ಅದು ಮನತುಂಬ ಖುಷಿಯಾಗಿದ್ದು ತನ್ನ ಸುತ್ತಲಿನಲ್ಲಿರುವವರಿಗೂ ತನ್ನ ಸಂತೋಷವನ್ನು ಹಂಚುತ್ತದೆ. 


ಅದಕ್ಕೆ ಹೇಳಿದ್ದು ನಮ್ಮ ಹಳ್ಳಿಯ ಹೆಣ್ಣು ಮಗಳು ಮಕ್ಕಳಿರಲವ್ವಾ ಮನೆ ತುಂಬ!

ಮಗುವಿಗೆ ಯಾರೊಬ್ಬರ ಬಗ್ಗೆಯು ಯಾವ ಕೆಟ್ಟ ಭಾವನೆಯಿಲ್ಲ! ಯಾವ ಕ್ಷಣವೂ ಕೆಟ್ಟದಾಗಿ ತನ್ನ ಮನದಲ್ಲಿ ನಿಲ್ಲುವುದಿಲ್ಲ! ಆ ಮಗುವಿಗೆ ಪ್ರತಿ ಕ್ಷಣವು ಹೊಸ ಕ್ಷಣ! ಪ್ರತಿ ಆಟವು ವಿಸ್ಮಯ! ಪ್ರತಿ ಹೆಜ್ಜೆಯು ಹೊಸ ಹುಮ್ಮಸ್ಸಿನ ಪ್ರತಿಬಿಂಬ!

ಯಾವೊಂದು ಕ್ಷಣವೂ ಬೋರು ಅನಿಸುವುದಿಲ್ಲ. ಅದಕ್ಕೆ ಚಿಕ್ಕ ಗೋಲಿಯೇ ಬಂಗಾರದ ನಕ್ಷತ್ರ! ಅದನ್ನೇ ನಿತ್ಯ ಹತ್ತು ಹಲವು ರೀತಿಯಲ್ಲಿ ನೋಡಿ ನೋಡಿ, ಆಡಿ ಆಡಿ ಸಂಭ್ರಮಿಸುತ್ತದೆ. ತನ್ನ ಸಲುವವರೇ ಉಸಿರು ಅಂದುಕೊಂಡು ಅಮ್ಮನ ಕೈ ಅಸರೆಯಲ್ಲಿ ಸ್ವರ್ಗ ಸುಖವನ್ನು ಕಾಣುತ್ತದೆ. ಹೆತ್ತಮ್ಮನ ಹಾಲೇ ಅಮೃತವೆಂದುಕೊಂಡು ಮನಸಾ: ತೃಪ್ತಿಪಡುತ್ತದೆ.

ಸುಸ್ತಾಗುವಷ್ಟು ಆಡುತ್ತದೆ, ಕಣ್ಣುತುಂಬುವಷ್ಟು ನಿದ್ದೆ ಮಾಡುತ್ತದೆ. ಪುನಃ ಎದ್ದಾಗ ಎಂಥ ಪ್ರಫುಲತೆ? ಯಾವಾ ಹೈ ಒಲ್ಟೇಜ್ ಲೈಟ್ ಗಿಂತಲೂ ಕಮ್ಮಿ ಇಲ್ಲದ ಬೆಳಕನ್ನು ಮನೆತುಂಬ ಕೊಡುತ್ತದೆ. ಅದು ಬೆಳೆಯುವವರೆಗೂ ಮನೆಮಂದಿಯನ್ನೇಲ್ಲಾ ಪುಲ್ ಆಕ್ಟೀವ್ ಆಗಿ ಇಟ್ಟಿರುತ್ತದೆ. ತಾನು ಸಂತೋಷವಾಗಿದ್ದು ತನ್ನವರನ್ನು ತನ್ನ ಪುಟ್ಟ ಪುಟ್ಟ ಮಾತುಗಳಿಂದ ಎಲ್ಲಾ ಯೋಚನೆಗಳನ್ನು ದೂರ ಮಾಡುತ್ತದೆ.

ಇದು ನಿಜವಾದ ಜೀವನ! ಇದನ್ನು ನಾವು ಬೆಳೆಯುತ್ತಾ ಬೆಳೆಯುತ್ತಾ ಮರೆತುಬಿಡುತ್ತೇವೋ? ಅಥವಾ ನಮ್ಮ ಈ ಬದುಕು ಆದರ ಬಗ್ಗೆ ಮೆಲಕು ಹಾಕುವುದಕ್ಕೂ ಪುರುಸತ್ತೂ ಕೊಡುವುದಿಲ್ಲವೋ? 


ಯಾವುದೋ ಗೊತ್ತು ಗುರಿ ಇಲ್ಲದ, ಏನೆಂದರೂ ಎಟುಕದ ದೂರ ತೀರದ ಸುಖಕ್ಕಾಗಿ ಗಾಣದೆತ್ತಿನಂತೆ ನಿತ್ಯ ಶ್ರಮಪಡುತ್ತಿರುತ್ತೇವೆ. ಸಂಭ್ರಮಪಡುವುದಕ್ಕೂ ಸಮಯವಿಲ್ಲ ಎಂದು ವಿಲವಿಲ ಒದ್ದಾಡುತ್ತೇವೆ.ಸಂತೋಷಿಸಲು ವಿಕೇಂಡ್ ಪ್ಲಾನ್ ಮಾಡುತ್ತೇವೆ.

ಪರಸ್ಪರ ಮನುಷ್ಯ ಮನುಷ್ಯರ ನಡುವಿನ ನವಿರಾದ ಭಾಂಧವ್ಯವನ್ನೇ ಕಡೆಗಣಿಸಿ, ನಮಗೆ ನಿಲುಕದ ಯಾವುದೋ ಮಾಯೆಯಂಥ ಬದುಕನ್ನು ಹೆಮ್ಮೆಯಿಂದ ನಿರ್ಮಿಸಿಕೊಂಡು, ಅದರಲ್ಲಿಯೇ ಸುಪ್ಪತ್ತಿಗಿಯ ಸುಖ ಕಾಣುವುದಕ್ಕೆ ಹೋಗಿ ನಾವೇ ಕಾಣದಂತಾಗಿ ಕಳೆದು ಹೋಗುತ್ತಿದ್ದೆವೆಂದು ಅನಿಸುತ್ತಿದೆ.

ನಮ್ಮ ನಮ್ಮ ಬದುಕು ನಮ್ಮ ಕೈಯಲ್ಲಿ. ಇಂದು ಕಷ್ಟಪಟ್ಟರೆ ಮುಂದೆ ಸುಖ ಎಂದುಕೊಂಡು, ಗೊತ್ತಿರದ ಭವಿಷ್ಯತ್ ನಲ್ಲಿ ಬ್ರಹ್ಮಾಂಡ (ಜ್ಯೋತಿಷ್ಯ?) ನಂಬಿಕೆಯನ್ನು ಇಟ್ಟುಕೊಂಡು ಸರಿಯಾಗಿ ಒಂದು ತಾಸು ನಿದ್ದೆಯನ್ನು ಕಾಣದೇ ವರ್ತಮಾನದಲ್ಲಿ ಕಕ್ಕಾಬಿಕ್ಕಿಯಾಗಿ ಬದುಕುವುದೇ ಹೈಟೆಕ್ ಎಂದುಕೊಂಡಿದ್ದೇವೆ. ಪ್ರತಿಯೊಬ್ಬರೂ ಒಬ್ಬರನ್ನೊಬ್ಬರೂ ನೋಡಿಕೊಂಡು ಹಾಗೆಯೇ ವೇಗವಾಗಿ ತಿಳಿಯದಂತ ದೂರವನ್ನು ಸೇರಲು ತೊಳಲಾಡುತ್ತಿದ್ದೇವೆ ಅನಿಸುತ್ತದೆ.

ಮಕ್ಕಳು ನಮ್ಮನ್ನು ನೋಡಿ ಕೊಂಚ ಕ್ಷಣ ಮರುಗಿದರೂ ಆಶ್ಚರ್ಯವಿಲ್ಲ! ಯಾಕೆಂದರೇ ನಮಗೆ ಅವುಗಳು ಏನನ್ನೂ ಹೇಳಲು ಸಾಧ್ಯವಿಲ್ಲ!


ಅವುಗಳು ನಮ್ಮಂತೆ ಇರಿ ಎಂದು ಅವುಗಳ ನಿತ್ಯ ಬದುಕಿನಿಂದ ದರ್ಶನ ಮಾಡಿಸುತ್ತಿರುತ್ತವೆ. ಅವುಗಳನ್ನು ನೋಡುತ್ತಾ ನೋಡುತ್ತಾ ನಾವು ಬದಲಾಗಬೇಕು! 


ಯಾಕೆಂದರೇ ನಾವುಗಳು ಎಲ್ಲಾ ತಿಳಿದುಕೊಂಡಿರುವ ತಿಳುವಳಿಕಾಸ್ಥರು!!

ಶನಿವಾರ, ಅಕ್ಟೋಬರ್ 10, 2015

ಮನಸ್ಸೇ ಮಾರ್ಗ!

ದೇಹಕ್ಕೆ ಬೇಸರವಾದರೇ ಕೊಂಚ ಸಮಧಾನ ಮಾಡಬಹುದು.

ಅದಕ್ಕೆ ಒಂದು ರೇಸ್ಟ್ ಕೊಡುವ ನಿದ್ದೆ ಅಥವಾ ಕೊಂಚ ಕೊತು ತಣ್ಣನೆಯ ನೀರನ್ನು ಕೊಡಿದರೂ ಆರಾಮ ಅನಿಸುತ್ತದೆ.

ಆದರೇ ಮನಸ್ಸು ಬೇಜರವಾದರೇ ಕೇಳುವುದೇ ಬೇಡ, ಏನೊಂದು ಖುಷಿ ಮುಖದಲ್ಲೂ ಇರುವುದಿಲ್ಲ ಮತ್ತು ದೇಹದಲ್ಲೂ ಇರುವುದಿಲ್ಲ.

ಯಾವುದನ್ನು ಮನಸ್ಸು ಕೊಟ್ಟು ಮಾಡಿದರೇನೇ ಅದಕ್ಕೊಂದು ಅಚ್ಚುಕಟ್ಟು. ಒಂದು ಹುಲ್ಲು ಕಡ್ಡಿಯನ್ನು ಎತ್ತಿಕೊಳ್ಳಲು ಮನಸ್ಸು ಬೇಕು, ಮನಸ್ಸೇ ಇಲ್ಲದಿದ್ದರೇ ಏನೂ ನಡೆಯದು.
ಮನಸ್ಸೆ ದೇಹವೆಂಬ ಮನೆಯ ವಾರಾಸುಧಾರ. ಅವನು ಸರಿಯಿದ್ದರೇ ಎಲ್ಲ ಸರಿ ಇಲ್ಲವೆಂದರೇ ಮಹಾ ಬೋರೂ ಬೋರೂ.

ಮನಸ್ಸಿನ ವ್ಯಾಪಾರ ಅವರ ಅವರು ಅನುಭವಿಸಿದವರಿಗೆ ಗೊತ್ತೂ. ಅದು ಚಿಕ್ಕ ವಯಸ್ಸಿನ ಮಗುವಿನಿಂದ ಹಿಡಿದು, ವಯಸ್ಸಾದ ಮುದುಕರವರಿಗೂ ಒಂದೇ ರೀತಿಯ ತವಕ ಮನಸ್ಸನ್ನು ಖುಷಿಯಲ್ಲಿಡುವುದು ಹೇಗೆ.

ಮನಸ್ಸು ಪ್ರಫುಲ್ಲತೆಯಿಂದ ಇರುವುದು ಬಹಳ ಕ್ಷಣಿಕ, ಅದು ಚಿಕ್ಕ ವಿಷಯವನ್ನು ಗಮನಿಸುತ್ತೆ, ಒಂದೊಂದು ಕ್ಷಣವೂ ತನ್ನ ಸುತ್ತಲಿನಲ್ಲಿ ಜರುವುಗುವ ಪ್ರತಿಯೊಂದು ಘಟನೆಗೂ ಸಾಕ್ಷಿ ಭೂತವಾಗುತ್ತದೆ. ತಾನು ಕಾಣುವ ನೋಡುವ ಪ್ರತಿಯೊಂದನ್ನು ತನಗೆ ತಾನು ಅರ್ಥಯಿಸಿಕೊಂಡು ಪ್ರತಿಕ್ರಿಯಿಸುತ್ತದೆ. ಅದಕ್ಕೆ ಅದು ಅಷ್ಟು ಬೇಗ ಕರಾಬ್ ಆಗಿಬಿಡುವುದು.

ಮನಸ್ಸನ್ನು ಅತೋಟಿಯಲ್ಲಿಟ್ಟುಕೊಂಡರೆ ಮುಗಿಯಿತು, ಏನನ್ನಾದರೂ ಜಯಿಸಬಹುದು. ಆದರೇ ಅದು ಅಷ್ಟು ಸುಲಭದ ಮಾತಲ್ಲ ಎನ್ನುವುದು ಪ್ರತಿಯೊಬ್ಬರೂ ತಮ್ಮ ಅನುಭವದ ಮೊಲಕ ಕಂಡುಕೊಂಡ ಒಂದು ಪ್ರಬಲವಾದ ಸತ್ಯವಾದ ಸತ್ಯ!

ಅದಕ್ಕೆ ಹಿರಿಯರು ಹೇಳಿದ್ದು ಮನಸ್ಸು ಎಂಬುದು ಮರ್ಕಟ! ಅದರ ಅಂಕೆಯನ್ನು ನಾವೇ ಮಾಡಿಕೊಳ್ಳಬೇಕು ಮತ್ತು ನಾವೇ ಸಮಧಾನ ಮಾಡಿಕೊಳ್ಳಬೇಕು.

ವಯಸ್ಸು ಮನಸ್ಸು ಸಂಬಂಧ ಇದ್ದಿರಲೇಬೇಕು. ಚಿಕ್ಕವಯಸ್ಸಿನ ಮನಸ್ಸು ಹೇಗೆ ಇರುತ್ತೇ ಏನ್ ಕಥೆ? ಅದೇ ಬುದ್ಧಿ ಬೇಳೆದಂತೆ, ವಯಸ್ಸಾದಂತೆ ಮನಸ್ಸಿಗೆ ಯಾವ್ಯಾವುದೋ ಭಾರ ಬಿಳುತ್ತೇ ಮನಸ್ಸು ಸಹ ಸುಸ್ತಾಗುತ್ತೇ. ಮನಸ್ಸು ಸುಸ್ತಾಗುತ್ತೇ.. ದೇಹವು ಸುಸ್ತಾಗುತ್ತೆ.. ಇದು ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ.

ಅದಕ್ಕೆ ಇರಬೇಕು ಮನಸ್ಸಿನ ಬಗ್ಗೆ ಅಧ್ಯಯನ ಶಾಸ್ತ್ರವೇ ಬಂದಿದೆ. ಅದನ್ನು ವಿಶೇಷವಾಗಿ ಸ್ಟಡೀ ಮಾಡಬೇಕೆಂದು, ಹತ್ತು ಹಲವಾರು ಥೇಯರಿ, ಪುಸ್ತಕಗಳು, ಪದವಿಗಳು ಹುಟ್ಟಿಕೊಂಡಿವೆ.

ಅದೊಂದು ಮನಸ್ಸಲಾಜಿ! ಮನಸ್ಸಿನ ಮರ್ಮ ಯಾರೊಬ್ಬರೂ ಅರ್ಥ ಮಾಡಿಕೊಳ್ಳಲಾರರು. ಆದರೇ ಮನಸ್ಸಿನ ಕನ್ನಡಿ ಮುಖವಾಗಿರುವುದರಿಂದ ವ್ಯಕ್ತಿ ಹೇಗೆ? ಯಾವ ಮೋಡಲ್ಲಿ ಇದ್ದಾನೆ ಎಂಬುದು ಕ್ಷಣ ಮಾತ್ರದಲ್ಲಿ ಗೊತ್ತು ಮಾಡಿಕೊಳ್ಳಬಹುದು.

ಆದರೇ ಕಳ್ಳ ಮನಸ್ಸಿನವರು ಹತ್ತು ಹಲವು ರೀತಿಯಲ್ಲಿ ನಟಿಸಿ ನಮ್ಮನ್ನು ಯಾಮಾರಿಸಬಹುದು, ನಾವು ಕಂಡ ಮುಖದಂತೆ ಮನಸ್ಸಿಲ್ಲದಿರಬಹುದು ಕೊಂಚ ಹುಶಾರ್!

ಮನಸ್ಸು ಕೇಡಿಸಿಕೊಂಡವರು ವಿಲ ವಿಲ ಒದ್ದಾಡುವವರು. ಎಲ್ಲರ ಮನಸ್ಸು ಒಂದೇ ಆಗಿರಲಾರದು. ಒಳ್ಳೆ ಮನಸ್ಸು ಕೆಟ್ಟ ಮನಸ್ಸು ಎಂಬ ಎರಡೇ ವಿಧವಾಗಿಲ್ಲ. ಅದನ್ನು ಅರಿಯುವು ಮನಸ್ಸು ಎಲ್ಲಾರಿಗೂ ಇರುವುದಿಲ್ಲ.

ಹತ್ತಿರವಿರುವವರ ಬಗ್ಗೆ ಹಾಗೆಯೇ ನನಗೆ ಗೊತ್ತೂ ಅವನ ಮನಸ್ಸು ಎಂದು ನಗುವುದು, ಎಂದು ನಿಜವಾಗಿರುವುದಿಲ್ಲ. ನಾವು ನೋಡುವ ಮುಖವಾಡವೇ ಮನಸ್ಸಾಗಿರುವುದಿಲ್ಲ.

ಒಳ ಮನಸ್ಸಿನ ಲೆಕ್ಕಚಾರ ಯಾರೊಬ್ಬರ ತಿಳಿವಿಗೂ ಬರುವುದಿಲ್ಲ. ಮನಸ್ಸೇ ಹಾಗೆಯೇ ನಮ್ಮ ಜೊತೆಯಲ್ಲಿ ಬಾಳುವವರ ಮನಸ್ಸು ಕೊನೆಯವರೆಗೂ ನಮ್ಮ ನಿಲುಕಿಗೂ ಸಿಗದಾಗಿರುತ್ತದೆ. ಮಾತನ್ನಾಡಿದಷ್ಟು ಅದು ಸುಲಭವಲ್ಲ.

ಮನಸ್ಸು ಎಲ್ಲಿದೇ ಎಂದು ಯಾರು ಹೇಳಲಾರರು. ಅದು ಎಲ್ಲಿದೆ ಎಂದು ವೈಧ್ಯಕೀಯ ಡಾಕ್ಟರ್ ಗಳು ಹೇಳಲಾರರು ಎಂದರೇ ಮನಸ್ಸಿನ ಅಳತೆ ಎಷ್ಟು ಕಷ್ಟ! ಅದಕ್ಕೆ ಮನಸ್ಸಿನ ವ್ಯಾಪಾರ ಅವರವರ ಇಚ್ಛೆಗೆ ಬಿಟ್ಟಿದ್ದು.

ಮನುಷ್ಯನ / ಜೀವಿಯ ಪ್ರತಿಯೊಂದು ಕ್ರೀಯೆಯು ಮನಸ್ಸಿನ ಕೀಲಿ ಕೈಯಿಂದ ನಿದರ್ಶಿತವಾಗಿರುತ್ತದೆ. ಅದಕ್ಕೆ ಹಿರಿಯರು ಹೇಳಿದ್ದು ಮನಸ್ಸಿದ್ದರೆ ಮಾರ್ಗ ಎಂದು. ಮನಸ್ಸು ಮಾಡಿದರೇ ಮನುಷ್ಯನಿಗೆ ಪ್ರತಿಯೊಂದು ಗೆಲುವೇ!

ಮನಸ್ಸು ವೈಪರಿತ್ಯದಿಂದ ನಡೆಯುವ ಅವಘಡಗಳನ್ನು ಪುನಃ ಮನಸ್ಸೆ ಸೈರಿಸಿಕೊಳ್ಳಬೇಕು. ಮನಸ್ಸಿನ ಸಮಧಾನವನ್ನು ಅದೇ ಮನಸ್ಸೇ ಮಾಡಿಕೊಳ್ಳಬೇಕು. ಮನಸ್ಸೆಂಬ ಮನಸ್ಸಿಗೆ ಸಾಠಿ ಮನಸ್ಸು ಮಾತ್ರ.


ಮನಸ್ಸು ಅಜಾಳಾಗಿ ಮಾಡಿಕೊಳ್ಳಲು ಬಹಳ ಸುಲಭ, ಅದೇ ಮನಸ್ಸ್ ನ್ನು ಏಕಾಗ್ರತೆಯಲ್ಲಿ ಇರಿಸಿಕೊಳ್ಳಲು ಸಾಧನೆ ಮಾಡಬೇಕು. ಹೆಚ್ಚು ಪ್ರಾಕಟಿಸ್ ಮಾಡಿರಬೇಕು.

ಅದಕ್ಕಾಗಿ ಸಾಧಕರು ಮನಸ್ಸಿನ ಮೇಲೆಯೆ ಮಂಟಪ ಕಟ್ಟಿಕೊಂಡು, ಮನಸ್ಸಿನ ಮೊಲಕ ಮಹದಾದ್ದನ್ನು ಸಾಧಿಸಿಕೊಂಡಿರುತ್ತಾರೆ.

ಮನಸ್ಸು ಮನಸ್ಸುಗಳ ಮೊಲಕ ಮಾತಾನಾಡಬಹುದು ಎಂಬುದನ್ನು ಸಾಧಕರ ಚರಿತ್ರೆಗಳನ್ನು ಓದಿದಾಗ ನೋಡಬಹುದು. ಮನಸ್ಸಿನಿಂದಲೇ ಎಂಥೆಂಥ ಸಾಧನೆಗಳನ್ನು ಮಾಡಿರುವರು ಎಂದರೇ ಅಚ್ಚರಿಯಾಗುತ್ತದೆ. ಅಂಥ ಮನಸ್ಸಿನ ನಿಯಂತ್ರಣ ಸಾಮಾನ್ಯನಿಗೆ ನಿಲುಕುವುದೇ ಎಂಬುದು ನಮ್ಮ ನಿಮ್ಮ ಮನಸ್ಸಿನ ಮೇಲೆ ನಿಂತಿದೆ.


ಅದರ ಜೋಪಾನ ಮನಸ್ಸಿರುವ ಮನಸ್ಸಿನಂತ ಮನಸ್ಸಿನ ಮನುಷ್ಯನ ಜವಬ್ಧಾರಿ! ಮನಸ್ಸು ಮನುಷ್ಯರಿಗೆ ಮಾತ್ರ ಇದೆ ಎಂದು ಹೆಮ್ಮೆಪಡಬೇಡಿ. ಪ್ರತಿಯೊಂದು ಜೀವಿಗೂ ಇದೆ.

ಮನಸ್ಸೇ ಮಾರ್ಗ!

 

ಸೋಮವಾರ, ಸೆಪ್ಟೆಂಬರ್ 7, 2015

ಕಾಲಯಾ ತಸ್ಮಯ ನಮಃ!

ಇಲ್ಲ ಬಿಡಿ! ನಮ್ಮ ಕಾಲದಲ್ಲಿ ರೀತಿ ಇರಲಿಲ್ಲ ಬಿಡಿ! ಕಾಲನೆ ಬೇರೆ ಕಾಲನೆ ಬೇರೆ ಏನು ಬೆಲೆ ಎಲ್ಲಾರಿಗೂ ಎಲ್ಲದಕ್ಕೂ , ತುಂಬ ಸಂತೋಷದ ದಿನಗಳು ಅವು, ಈಗ ಅವು ಬರಿ ಮೆಲುಕು ಅಷ್ಟೆ! ಎಂದು, ಇಂದು ನಮ್ಮ ಹಿರಿಯರು ನಿಟ್ಟುಸಿರು ಬಿಡುತ್ತಾ ನಮ್ಮ ಕಾಲವನ್ನು ತಮ್ಮ ಹಿಂದಿನ ಗತ ನೆನಪುಗಳನ್ನು ಕಷ್ಟ ನಷ್ಟಗಳ ಸಂಕಲನ, ವ್ಯವಕಲನ ಮಾಡುತ್ತಾ ಕಿರಿಯರಿಗೆ ಒಂದಿಷ್ಟು ಬುದ್ಧಿ ಹೇಳುತ್ತಾ ಜಗತ್ತಿನ ಮರ್ಮವನ್ನು ನೆನಪು ಮಾಡುತ್ತಾ ನಮ್ಮ ನಿಮ್ಮೆಲ್ಲರ ಬದುಕಿನ ಬಂಡಿಯನ್ನು ಸರಿಯಾದ ಪಥದಲ್ಲಿ ಚಲಿಸಲು ಸಹಾಯ ಮಾಡುತ್ತಿರುವ ಎಲ್ಲಾ ನಮ್ಮ ನಿಮ್ಮ ಹಿರಿಯರಿಗೆ ಒಂದು ಪ್ರಣಾಮ!


ಹೌದು ಕಣ್ರೀ, ಅವರ ಅಂದಿ ದಿನಗಳ ಮುಂದೆ ಇಂದಿನ ಎಲ್ಲಾ ಅನುಕೂಲತೆಯ ಹೈಟೆಕ್ ಬದುಕು ಕೊಂಚ ನೀರಸ ಅನಿಸದೆ ಇರದು. ಇಂದು ಕೇವಲ ಯಾಂತ್ರಿಕ ಏನು ಮಾಡಬೇಕು ಎಂಬಂತೆ ಮನಸೆಲ್ಲೂ, ಗುರಿಯೇಲ್ಲೂ ಎಂಬಂತೆ ಸಂಭ್ರಮದ ಕೊರತೆಡಾಳಾಗಿ ಕಾಣಿಸುತ್ತಿದೆ.


ಮುನ್ನೂರ ಮುವತ್ತು ಕಾಲ ಅಕ್ಕ ಪಕ್ಕ ಇದ್ದರು ನಗರ ಜೀವನವೆಂಬ ಗಾಂಭಿರ್ಯಕ್ಕೆ ಬಂಧಿಯಾಗಿ ಶಿಸ್ತಿನ ಸಿಪಾಯಿಯ ರೀತಿ ನಾವಾಯ್ತ್ ನಮ್ಮ ಕೆಲಸವಾಯ್ತ್ ಎಂಬಂತೆ ಪಕ್ಕದಲ್ಲಿ ಯಾರ್ ಏನಾದರು ಅದರ ಸಹವಾಸ ವೆ ಬೇಡ ಎನ್ನುವ ರೀತಿ ಅಲ್ಪ ಖುಷಿಯಲ್ಲಿ ನಾಲ್ಕು ಗೋಡೆಯ ಮದ್ಯದಲ್ಲಿ ನಮ್ಮ ಪ್ರೀತಿ ಮಾನವ ಸಹಜ ವರ್ತನೆಯನ್ನು ಬಲಿಕೊಟ್ಟು ಬಧುಕುವುದೇ ದೊಡ್ಡಸ್ತಿಕೆ ಎಂದು ಬಾವಿಸಿರುವುದು ವಿಪರ್ಯಾಸ!

ಮಾತನಾಡಿದರೇ ಇವನು ಎಲ್ಲಿ ನನ್ನ ಮೈ ಮೇಲೆ ಬರುವನು ಅನಿಸುವಂತೆ ಪರಿಚಿತರಾಗಿದ್ದರು ಅಪರಿಚಿತರಂತೆ ಎದುರು ಕಂಡರೂ ಕಣ್ಣು ಕಾಣದವರಂತೆ ನಾವುಗಳು ತರ್ತಿಸುತ್ತಿದ್ದೇವೆ.

ಹಳ್ಳಿಯ ಹಳೆಯ ಬದುಕು ಯಾಕೋ ಇಂದು ಬೇಕೂ ಬೇಕೂ ಅನಿಸುತ್ತದೆ. ನಮ್ಮ ಮನೆಯರಲ್ಲದದ್ದಿದ್ದರೂ ಯಾಕೋ ಅವರೆಲ್ಲಾ ನಮ್ಮವರೇ ಎಂಬ ಆತ್ಮೀಯ ಭಾವನೆಯನ್ನು ಕೊಡುತ್ತಿದೆ.

ನಮ್ಮ ಅಕ್ಕಪಕ್ಕದ ನೆರೆಹೊರೆಯ ಜನಗಳ ಪ್ರತಿಯೊಂದು ನಡೆನುಡಿ ನಮ್ಮದೇ ಅನಿಸುತ್ತಿತ್ತು. ಇಲ್ಲಿ ನೆರೆ ಹೊರೆ ಯಾಗುತ್ತಿದೆ. ನಗರದಲ್ಲಿ ನಮ್ಮ ನಮ್ಮ ಮನೆಯವರು ಮಾತ್ರ ನಮ್ಮವರು ಅನಿಸಿ ಒಬ್ಬಂಟಿ ಅನಿಸುತ್ತಿದೆ. ಇಷ್ಟೊಂದು ದೊಡ್ಡ ಶಹಾರ್ ದಲ್ಲಿ ಅಕೇಲೇ ಅನಿಸುತ್ತಿದೆ.

ಇದು ಇಂದು ಎಂದಿಗೂ ಮುಗಿಯದ ಗೋಳು ಅನಿಸಲು ಪ್ರಾರಂಭಿಸುತ್ತಿದೆ. ನಮ್ಮ ಮಕ್ಕಳು ನಮ್ಮ ಮನೆಯ ನಾಲ್ಕು ಗೋಡೆಯಲ್ಲಿ ತಮ್ಮದೇ ಪ್ರಪಂಚದಲ್ಲಿ ಎಲ್ಲವನ್ನು ಕಾಣಬೇಕಾಗಿರುವುದು ಇಂದಿನ ದೌರ್ಭಾಗ್ಯ.

ಮನುಷ್ಯ ಸಂಘ ಜೀವಿ ಎಂಬುದನ್ನೇ ಮರೆತು ಅತಿ ವೇಗವಾಗಿ ಮನುಷ್ಯ ಒಂಟಿಯಾಗುತ್ತಿದ್ದಾನೆ. ಇನ್ನೊಬ್ಬರ ಜೊತೆಯಲ್ಲಿ ಮಾತಾನಾಡುವುದೇ ಟೈಂ ವೇಸ್ಟ್ ಎಂಬ ಮನೋಭಾನೆಯನ್ನು ಹೊಂದಿರುವಂತಿದೆ. ಹೆಚ್ಚು ಹೆಚ್ಚು ನಾಗರಿಕರಾದಂತೆ ನಾವುಗಳು ಹೆಚ್ಚು ಹೆಚ್ಚು ಮೌನಿಗಳಾಗುತ್ತಿದ್ದೆವೆ.

ನಾವಾಯಿತು ನಮ್ಮ ಕೆಲಸವಾಯಿತು ಎಂಬಂತಿರು ಮತ್ತೊಬ್ಬರ ಗೊಜಲೇ ಬೇಡ ಎಂಬುದನ್ನು ಕಿರಿಯರಿಗೆ ನಮ್ಮ ಇಂದಿನ ಹಿರಿಯರು ಉಪದೇಶ ಕೊಡುತ್ತಿರುವಂತಾಗಿದೆ.

ಹೆಚ್ಚು ಹೆಚ್ಚು ಗಂಭೀರವಾಗಿರುವುದೇ ಉನ್ನತ ಬದುಕಿಗೆ ಮುನ್ನುಡಿಯಾಗಿದೆ. ಅದು ನಮ್ಮ ಚಿಕ್ಕ ವಯಸ್ಸಿನ ಕಾನ್ವೇಂಟಗಳಿಂದಲೇ ಶುರುವಾಗುತ್ತಿದೆ. ಕಡಿಮೆ ಗೆಳೆಯರನ್ನು ಹೊಂದಿರುವುದೇ ಏಳ್ಗೆಯಾಗಿದೆ. ಮಕ್ಕಳ ಮನಸ್ಸಿಗೆ ಗೊತ್ತೂ ಗೊತ್ತಿಲ್ಲದೇ ನಾವುಗಳು ವಯಸ್ಸಿಗೆ ಮೀರಿದ ನಡೆಯನ್ನು ಕಲಿಸುತ್ತಿದ್ದೇವೆ. ಇದು ಎಲ್ಲಿಗೆ ಹೋಗಿ ನಿಲ್ಲುವುದೋ ದೇವರಿಗೆ ಮಾತ್ರ ಗೊತ್ತು.

ದಿನೇ ದಿನೇ ಸಂಬಂಧಗಳು ಈ ಟೆಕ್ನಾಲಿಜಿ ಮತ್ತು ಗಜಿಬಿಜಿ ಬದುಕಿನಲ್ಲಿ ಹೆಚ್ಚು ಹೆಚ್ಚು ಸಂಕೀರ್ಣವಾಗುತ್ತಿವೆ. ಯಾವುದಕ್ಕೊ ಉತ್ತರವಿಲ್ಲದ ಮನಸ್ಸುಗಳಾಗುತ್ತಿವೆ.

ನಮ್ಮ ಹಿರಿಯರಿಗೆ ಒಂದು ಆದರ್ಶ, ಹೀಗೆ ಎಲ್ಲರನ್ನು ನಮ್ಮವರು ಎಂದು ಕಾಣುವ ನೋಟವಿತ್ತು. ಅದಕ್ಕೆ ಅವರ ಬದುಕು ಕೊಡಿ ಬಾಳುತ್ತಾ ಬಾಳು ಬೆಳಕು ಕಂಡಿದ್ದರು. ಇಂದಿನ ನಮ್ಮ ಎಡವಟ್ಟು ಕುರುಡು ಕಾಂಚಾಣದ ಓಟವನ್ನು ಕಂಡು ಮೊದಲಿಸುವುದು ಅವರ ದಿನ ನಿತ್ಯದ ಕರ್ಮವಾಗಿದೆ. ಹಾಗೆ ಅವರ ಅಂದಿನ ದಿನಗಳ ಮೆಲುಕು ನಮಗಳಿಗೆ ಮೊಸರಲ್ಲಿ ಕಲ್ಲು ಸಿಕ್ಕಂತೆ ಆಗಿದೆ.


ನಾವು ನಮ್ಮ ಮುಂದಿನ ಪೀಳಿಗೆಗೆ ಇದೆ ರೀತಿ ಉಪದೇಶವನ್ನು ಕೊಡಲು ಇದು ಉಪಯೋಗಕ್ಕೆ ಬರುತ್ತೆ ಎಂಬಂತೆ ಕೇಳಲಾರದ ರೀತಿ ಕಿವಿಗೊಡಬೇಕಾಗಿದೆ.


ಕಾಲಯಾ ತಸ್ಮಯ ನಮಃ!



ಭಾನುವಾರ, ಸೆಪ್ಟೆಂಬರ್ 6, 2015

ಸ್ನೇಹಶೀಲರು?

ಅವರು ಇಬ್ಬರೂ ಒಂದೇ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದೇ ಟೀಂ. ಕೆಲಸ ಮಾಡುವ ಜಾಗದಲ್ಲಿ ಗಳಸ್ಯ ಕಂಠಸ್ಯ. ಆದರೂ ಏನೋ ಒಂದು ಭಾವನೆ ನಮ್ಮ ಈ ಹುಡುಗನಲ್ಲಿ. ಅವನ ಈ ಕಂಠಸ್ಯ ಗೆಳೆಯನ ಬಗ್ಗೆ. ಮಾತಿಗೆ ಎಲ್ಲಾ ರೀತಿಯಲ್ಲಿ ಮಾತಾಡುತ್ತಾರೆ. ಅದು ಪ್ರೋಪೆಶನಲ್ ಆಗಿ ಅನಿಸುತ್ತದೆ.

ಮಾತು ಕಥೆಯೆಲ್ಲಾ ಇಂಗ್ಲೀಷ್ ನಲ್ಲಿ. ಯಾಕೆಂದರೆ ಇವನ ಆ ಟೀಂ ಮೇಟ್ ಮಾತೃ ಭಾಷೆ ಪರಭಾಷೆ. ನಿಮಗೂ ಗೊತ್ತಿರಬಹುದು. ಆ ನಾಡಿನ ಜನರ ಭಾಷಾಭಿಮಾನವನ್ನು ಎಷ್ಟು ಹೊಗಳಿದರೂ ಸಾಲದು. ಆದರ ಅನುಭವವನ್ನು ಅವರ ರಾಜಾಧಾನಿಗೆ ಮನ್ನೆ ಹೋದ ಇವನು ನೋಡಿದ್ದಾನೆ.

ಏನೇ ಕೇಳಿದರೂ ಆ ಭಾಷೆಯನ್ನು ಬಿಟ್ಟು ಬೇರೆಯ ಭಾಷೆಯನ್ನು ಅಲ್ಲಿಯ ಆಟೋ, ಅಂಗಡಿಯವರು, ಟ್ಯಾಕ್ಸಿಯವರು ಯಾರೇಂದರೇ ಯಾರು ಮಾತನಾಡುವುದಿಲ್ಲ. ಅಷ್ಟರ ಮಟ್ಟಿಗೆ ಕಟ್ಟರ್ ಭಾಷಾಭಿಮಾನಿಗಳು.

ಇಲ್ಲಿ ನಮ್ಮ ಬೆಂಗಳೂರಿನ ಜನಗಳನ್ನು ಕೇಳಬೇಕು ಎಷ್ಟೊಂದು ಸುಲಭವಾಗಿ ಎಂಥ ಭಾಷೆಯವರ ಜೊತೆಗೂ ಹೊಂದಿಕೊಂಡು ಬಿಡುತ್ತಾರೆ. ಅವರವರ ಭಾಷೆಯಲ್ಲಿಯೇ ಗೊತ್ತಿಲ್ಲದಿದ್ದರೂ ಪ್ರಯತ್ನಿಸಿ ಮಾತನಾಡುತ್ತಾರೆ. ಅಷ್ಟರ ಮಟ್ಟಿಗೆ ಸ್ನೇಹಶೀಲರು?

ಈ ರೀತಿಯಲ್ಲಿರಬೇಕಾದರೇ ಈ ನಮ್ಮ ಗೆಳೆಯನಿಗೆ ಆ ಗೆಳೆಯನ ಬಗ್ಗೆ ಬಹಳವಾದ ಅಸಹನೆ. ಅದರೇ ಎದುರಿಗೆ ಇರುವಾಗ ಅದನ್ನು ಎಂದು ತೋರಿಸಿಕೊಳ್ಳುವುದಿಲ್ಲ. ನೋಡುವವರಿಗೆ ಏನೂ ಅಪರೂಪದ ಸ್ನೇಹಿತರು ಅನ್ನುವಂತೆ ಎಲ್ಲಿಗೆ ಹೋದರೂ ಇಬ್ಬರೂ ಜೊತೆಯಲ್ಲಿಯೇ ಹೋಗುತ್ತಾರೆ. ಯಾವಾಗ ಎಂದರೇ ಆ ಭಾಷೆಯ ಗೆಳೆಯನಿಗೆ ಕಂಪನಿಯಲ್ಲಿ ಯಾರೂ ಅವನ ಭಾಷೆಯ ಸ್ನೇಹಿತರು ಜೊತೆಗೆ ಸಿಗದೇ ಇದ್ದಾಗ.

ಅದರ ಬಗ್ಗೆಯು ನಮ್ಮ ಈ ಸ್ನೇಹಿತನಿಗೆ ಅಸಹನೆ. "ನನ್ನ ಮಗಾ ಯಾರೂ ಸ್ನೇಹಿತರು ಇಲ್ಲಾಂತ ನನ್ನ ಜೊತೆ ಬರುತ್ತಿದ್ದಾನೆ". ಅನ್ನುತ್ತಾನೆ.

ನೀವು ಗಮನಿಸರಬಹುದು. ಆ ಭಾಷೆಯ ಜನ ತಮ್ಮವರ ಬಗ್ಗೆ ಉತ್ಕಟವಾದ ಅಭಿಮಾನವನ್ನು ಹೊಂದಿರುತ್ತಾರೆ. ಅವರುಗಳು ಎಲ್ಲಿಯೇ ಹೋಗಲಿ ಅಲ್ಲಿಯೇ ಇರುವ ತಮ್ಮವರ ಬಗ್ಗೆ ಒಂದು ಅಕೌಂಟ್ ನೋಡಿಕೊಂಡು ಎಲ್ಲರೂ ಒಂದು ದಿನವಾದರು ಒಂದು ಕಡೆ ಸೇರಿ ತಮ್ಮ ಮಾತೃ ಭಾಷೆಯಲ್ಲಿಯೇ ಮಾತನಾಡಿ ಏನೋ ಮನಸಿನ ಭಾರವನ್ನು ಕಡಿಮೆ ಮಾಡಿಕೊಳ್ಳುತ್ತಾರೆ.

ಈ ರೀತಿಯಲ್ಲಿರುವಾಗ ನಮ್ಮ ಸ್ನೇಹಿತನನ್ನು ಆ ಸ್ನೇಹಿತ ಒಂದು ಈ ವಾರದ ವಿಕೇಂಡ್ ಗೆ ನಮ್ಮ ರೂಮಿಗೆ ಬಾ ನಾವಿಬ್ಬರೂ ಸೇರಿ ಸಂಜೆಯ ಐ.ಪಿ.ಎಲ್ - ಸೂಪರ್ಸ್ ಕಿಂಗ್ ಮತ್ತು ಬೆಂಗಳೂರು ಚಾಲೆಂಜರ್ ಮ್ಯಾಚ್ ದೊಡ್ಡ ಟಿ.ವಿ ಯಲ್ಲಿ ನೋಡೂಣ. ಅಂದು ಕೇಳುತ್ತಾನೆ.

ಈ ನಮ್ಮ ಸ್ನೇಹಿತನಿಗೆ ಇಷ್ಟ ಇರುವುದಿಲ್ಲ. ಅವನಿಗೆ ಗೊತ್ತು ಇವನ ಬಗ್ಗೆ. ಅವನ ರೊಂ ಪಕ್ಕನೋ ಬರೀ ಅವರ ಕಡೆಯವರೇ.

ಒಮ್ಮೆ ಅವನ ರೊಂ ಗೆ ಹೋಗಿದ್ದಾ. ಯಾಕಾದರೂ ಬಂದೇನೋ ಅನ್ನುವ ಮಟ್ಟಿಗೆ ಕೇವಲ ಐದು ನಿಮಿಷಗಳಲ್ಲಿ ಮಹಾ ಬೋರ್ ಅನಿಸಿಬಿಟ್ಟಿತು. ಕಾರಣ ಅದೇ ಅವನ ಭಾಷೆಯ ಅಭಿಮಾನ. ಅವನ ರೋಂ ನಲ್ಲಿ ಆ ಭಾಷೆಯಲ್ಲಿಯೇ ಪ್ರತಿಯೊಂದು ಮಾತುಕತೆ. ಈ ನಮ್ಮ ಸ್ನೇಹಿತನಿಗೆ ತಲೆ ಚಿಟ್ಟು ಹಿಡಿದು ಹೋಗಿ ಬಿಟ್ಟಿತು.

ಅಲ್ಲಾ ನಾವುಗಳು ನಮ್ಮ ಮಾತೃ ಭಾಷೆಯನ್ನು ಎಲ್ಲಿ ಎಷ್ಟರ ಮಟ್ಟಿಗೆ ಉಪಯೋಗಿಸುತ್ತಿದ್ದೇವೆ. ಅದು ನಿತ್ಯ ಜೀವನದಲ್ಲಿ ಅನಿಸಿಬಿಟ್ಟಿತ್ತು. ಕೇವಲ ನನ್ನ ಹಳ್ಳಿಯ ಅಮ್ಮನ ಜೊತೆಯಲ್ಲಿ ಮಾತನಾಡಲು ಮಾತ್ರ ಎಂದು ನೆನಪಾಯಿತು.

ಆದರೂ ಏನೂ ಮಾಡುವುದು ಈ ವಾರ ಅವನ ರೋಂ ಗೆ ಹೋಗಿ ಅಲ್ಲಿಯೇ ಕ್ರೀಕೆಟ್ ಮ್ಯಾಚ್ ನೋಡಿದಾರಾಯಿತು ಅಂದುಕೊಂಡ.

ತಮಿಳು ಗೆಳೆಯನು ಖುಷಿಪಟ್ಟ.

ಅಂದು ಸಂಜೆ ಅವನ ರೋಂ ಗೆ ಹೋದ. ಆಗಲೇ ಅಲ್ಲಿ ಅವನ ಇಬ್ಬರೂ ಗೆಳೆಯರು ಸೇರಿದ್ದರು. ಇವನು ಒಳಗಡೆ ಹೆಜ್ಜೆ ಇಟ್ಟಾಗ ಅವರಿಗೆ ಇವನು ಅವನ ಭಾಷೆಯಲ್ಲಿಯೇ ಪರಿಚಯ ಮಾಡಿಕೊಟ್ಟ. ಇವನು ಅವರಿಗೆ ಇಂಗ್ಲಿಷ್ ನಲ್ಲಿಯೆ ಹಲೋ ಅಂದು. ಅಲ್ಲಿಯೆ ಇದ್ದ ಚೇರ್ ನಲ್ಲಿ ಕುಳಿತುಕೊಂಡಾ.

ಟಿವಿಯಲ್ಲಿ ಇನ್ನೂ ಅದು ಇದು ಆಡ್ಸ್ ಬರುತ್ತಿತ್ತು. ಮ್ಯಾಚ್ ಶುರುವಾಗಲೂ ಇನ್ನೂ ಐದು ನಿಮಿಷಗಳು ಇದ್ದವು. ಹಾಗೆಯೇ ಕ್ಯಾಸವಲ್ ಆಗಿ ಬೆಳೆಗ್ಗೆ ಏನೂ ಮಾಡಿದೆ ಇತ್ಯಾದಿ ಒಂದೇರಡು ಪ್ರಶ್ನೇಗಳ ವಿನಿಮಯ ಇಬ್ಬರ ಮಧ್ಯೆದಲ್ಲಿ ಜರುಗಿತು.

ಮ್ಯಾಚ್ ಶುರುವಾಯಿತು. ಅವನ ರಾಜ್ಯದವರ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಬೆಂಗಳೂರಿನವರ ಬೋಲಿಂಗ್ ಶುರುವಾಯಿತು. ಮ್ಯಾಚ್ ನಡೆಯುತ್ತಿದ್ದ ಸ್ಥಳ ಅವರ ರಾಜಾಧಾನಿ. ಏನೂ ಅಷ್ಟೊಂದು ಅವರ ಅಭಿಮಾನಿಗಳು ಸ್ಟೇಡಿಯಂ ಪೂರ್ತಿ ಸೇರಿದ್ದರೂ.

ಇವನಿಗೆ ಅನಿಸಿತು. ಏನೂ ಜನ, ಎಷ್ಟೊಂದು ಕ್ರೌಡ್! ಅದರೂ ಎನೂ ಎಷ್ಟೊಂದು ಉತ್ಸಹ. ಪ್ಲೇ ಕಾರ್ಡುಗಳು ಸಹ ಅವರ ಭಾಷೆಯಲ್ಲಿಯೇ ಇದ್ದವಲ್ಲಾ ಅಪ್ಪ ಅನಿಸಿತು.

ಹೀಗೆ ಶುರುವಾಯಿತು. ಮುತ್ತಯ್ಯ ಮುರುಳಿಧರನ್ ಬೆಂಗಳೂರಿನ ಪರ ಬೋಲಿಂಗ ಮಾಡುತ್ತಿದ್ದ. ಮೊದಲನೆ ಬಾಲ್ ನಲ್ಲಿ ಒಂದು ವಿಕೇಟ್ ಪಡೆದುಬಿಟ್ಟ. ಇವನಿಗೆ ಖುಷಿಯಾಯಿತು. ಮುಖದಲ್ಲಿ ನಗುವಿನ ಅಲೆ ಹಾಗೆಯೇ ಹಾದು ಹೋಯಿತು.

ಅನಂತರದ ಒವರ್ ಗೇಲ್ ಮಾಡಿದ ಅವನ ಬಾಲನ್ನು ದೋನಿ ಅಪ್ಪಚ್ಚಿ ಮಾಡುವ ರೀತಿಯಲ್ಲಿ ನಾಲ್ಕು ಸಿಕ್ಸ್ ರ್ ಗಳನ್ನು ಸಿಡಿಸಿದ.

ಆಗ ಶುರುವಾಯಿತು ನೋಡಿ ಈ ಸ್ನೇಹಿತನ ಗೆಳೆಯನ ಅಬ್ಬಾರ.. ಏನೂ ಪ್ರತಿಯೊಂದು ಸಿಕ್ಸರಗೂ ಕುಣಿದು ಕುಪ್ಪಳಿಸಿದ. ಕುರ್ಚಿಯಿಂದ ಎದ್ದು ಎದ್ದು ಎಗರಿ ನಿಂತು. ಅವನ ಭಾಷೆಯಲ್ಲಿಯೇ ಏನೋ ಜೈ ರೀತಿಯಲ್ಲಿ ಅಂದ. ನಮ್ಮ ಸ್ನೇಹಿತನಿಗೆ ಬೇಜರಾಯಿತು. ಏನೂ ಇವನು ಹೀಗೆ ಮಾಡುತ್ತಿದ್ದನಲ್ಲಾ ಎಂದು ಒಮ್ಮೆ ಅವನ ಕಡೆ ನೋಡಿದಾ. ಅವನು ಇವನ ಕಡೆ ನೋಡಿ ಚೇಡಿಸುವ ರೀತಿಯಲ್ಲಿ ಕೈಯನ್ನು ಮೇಲೆ ಎತ್ತಿದ. "ಮೈ ಟೀಂ ಇಸ್ ಸೂಪರ್ ಕಿಂಗ್" ಎಂದು ಇವನ ಕಡೆ ನೋಡುತ್ತಾ ಹೇಳಿದ.

ನಂತರದ ಒವರ್ ಮಾಡಲು ಮತ್ತೇ ಮುತ್ತಯ್ಯ ಮುರುಳಿಧರ್ ಬಂದ. ಎರಡನೇ ಬಾಲಿನಲ್ಲಿಯೇ ಧೋನಿಯ ವಿಕೇಟ್ ಪಡೆಯುವ ಅವಕಾಶ ಸ್ವಲ್ಪದರಲ್ಲಿಯೇ ತಪ್ಪಿ ಹೋಯಿತು. ಬಾಲು ನೇರವಾಗಿ ಗೇಲ್ ಕೈಗೆ ಬಂದಿತ್ತು ಸ್ವಲ್ಪದರಲ್ಲಿಯೇ ಜಾರಿಬಿಟ್ಟಿತು. ಆದರೂ ಮುರುಳಿಧರ್ ಔಟ್ ಗೆ ಅಫಿಲ್ ಮಾಡಿದ.. ಅದನ್ನು ಕಂಡು ಈ ಸ್ನೇಹಿತನ ಸ್ನೇಹಿತನ ಸ್ನೇಹಿತರಿಗೆ ಏನಾಯಿತೂ ಏನೇನೋ ಬಯ್ಯುವ ಮಾತುಗಳನ್ನು ಬೇಸರದ ನುಡಿಗಳನ್ನು ಈ ಸ್ನೇಹಿತನ ಕಡೆ ನೋಡುತ್ತಾ ಹೇಳಲು ಶುರು ಮಾಡಿದರು.

ಇವನಿಗೂ ರೇಗುವಂತಾಯಿತು. ಇವನು ಇಂಗ್ಲಿಷನಲ್ಲಿ ಏನೇನೂ ಎದುರು ಮಾತು ಆಡಿದ. "ನಿಮ್ಮ ಟೀಂ ಏನೂ ಮಹಾ ನಮ್ಮದು ಸೂಪರ್ ಪವರ್ ಟೀಂ. ಈ ಮ್ಯಾಚ್ ನಾವೇ ಗೆಲ್ಲುವುದು ಇತ್ಯಾದಿ..".

ಇದಕ್ಕೆ ಆವನ ಸ್ನೇಹಿತನಿಗೆ ಸಿಟ್ಟು ಬಂದಿತು. ಅದು ಆದ ನಂತರದ ಬಾಲಿನಲ್ಲಿಯೇ ದೋನಿ ಮುತ್ತಯ್ಯನಿಗೆ ಕ್ಲೀನ್ ಬೋಲ್ಡ್ ಆಗಿ ಪೇವಿಲಿನ್ ಕಡೆಮುಖ ಮಾಡಿದ. ಸ್ಟೇಡಿಯಂ ನಲ್ಲಿ ಇದ್ದ ಕೇಲವೆ ಕೆಲವು ಬೆಂಗಳೂರಿಗರು ಹೋ ಎಂದು ಕಿರುಚಿದರೂ ಅದನ್ನೂ ನೋಡಿದ ನಮ್ಮ ಸ್ನೇಹಿತನು ಅಲ್ಲಿಯೇ ಇದ್ದ ಮೇಜನ್ನು ಒಮ್ಮೆ ಗುದ್ದಿ ಹೇ ಕಮಾನ್ ಬೆಂಗಳೂರು ಅಂದ.

ಇದನ್ನೂ ಕಂಡ ಆ ಎಲ್ಲಾ ಅವನ ಸ್ನೇಹಿತರಿಗೆ ತಡೆಯಲಾರದ ಸಿಟ್ಟು ಬಂದಿತು.ಏನೇನೋ ಮಾತನ್ನು ಆಡಿದರು. ಇವನಿಗೂ ತಡೆಯಲಾರದ ಸಿಟ್ಟು ಬಂದಿತು. ಇವನು ತನ್ನ ಗೆಳೆಯ ಅನ್ನುವುದನ್ನು ಮರೆತು ಸಿಕ್ಕಪಟ್ಟೆ ಜಗಳವಾಡುವಂತಹ ನುಡಿಗಳನ್ನು ಕೈ ಕೈ ಎತ್ತಿ ಎತ್ತಿ ಜಟಪಟಿ ಮಾಡಿದರು. (ಅದು ನನ್ನ ಕಿವಿಗೆ ಗಲಾಟೆಯಲ್ಲಿ ಕೇಳಿಸಲಿಲ್ಲ. ಅದ್ದರಿಂದ ಅದನ್ನು ಇಲ್ಲಿ ದಾಖಲಿಸಲು ಆಗುತ್ತಿಲ್ಲ.)

ಇದನ್ನೂ ಗಮನಿಸಿ ಏನೋ ಅಗುತ್ತಿದೆ ಪಸ್ಟ್ ಪ್ಲೋರ್ ನಲ್ಲಿ ಎಂದು, ಗ್ರೌಂಡ್ ಪ್ಲೋರ್ ನಲ್ಲಿದ್ದ ಮನೆಯ ಯಜಮಾನರು ಅವರು ಕನ್ನಡಿಗರು ಆದರೂ ಪ್ರತಿಯೊಬ್ಬರ ಬಗ್ಗೆಯು ಅಭಿಮಾನ. ಅದಕ್ಕೆ ಕಾರಣ ಅವರು ಈ ನಮ್ಮ ಸ್ನೇಹಿತನ ಸ್ನೇಹಿತನಿಗೆ ಮನೆಯನ್ನು ಬಾಡಿಗೆಗೆ ಕೊಟ್ಟಿರುವುದು.

ಅವರು ಮೇಲೆ ಬಂದು ನೋಡುತ್ತಾರೆ. ಅವರ ಕಿರುಚಾಟ ಮುಖದಲ್ಲಿಯನ್ ಸಿಟ್ಟುಗಳನ್ನು ಗಮನಿಸಿ ದಂಗಾದರೂ. ನಮ್ಮ ಈ ಸ್ನೇಹಿತ ಒಂಟಿ ಆದರೂ ಸಾಧ್ಯವಾದಷ್ಟು ಸಮರ್ಥಿಸುವ ಮಟ್ಟಿಗೆ ವಾದಿಸುತ್ತಿದ್ದಾ.

ಅವರು ಕಿವಿ ಮುಚ್ಚಿಕೊಂಡು "ಸ್ಟಾಪಿಟ್" ಅಂದರು. ಅಷ್ಟರ ಹೊತ್ತಿಗೆ ಪರ ರಾಜ್ಯದವರು ೬ ವಿಕೇಟ್ ಗೆ ೧೮೫ ದಾಖಲಿಸಿ ಎಲ್ಲಾ ೨೦ ಓವರ್ ಪೂರ್ತಿ ಮಾಡಿತ್ತು.

ಮನೆಯ ಯಜಮಾನರು ಇಬ್ಬರಿಗೂ ತಿಳಿಯುವಂತೆ ಇಂಗ್ಲೀಷನಲ್ಲಿಯೇ ಕೇಳಿದರು. ಅದರ ಕನ್ನಡ ಅನುವಾದ ಇಲ್ಲಿದೆ.

"ಅಲ್ಲಾ! ನೀವುಗಳು ಯಾಕೆ ಈ ರೀತಿಯಲ್ಲಿ ಕಿತ್ತಾಡುತ್ತಿದ್ದೀರಾ? ಅದು ಕೇವಲ ಆಟ. ಆಟವನ್ನು ಆಟದ ರೀತಿಯಲ್ಲಿ ನೋಡಿ"

ಅದಕ್ಕೆ ನಮ್ಮ ಸ್ನೇಹಿತ ಹೇಳಿದ. "ಸಾರ್! ಇವನಿಗೆ ಮಹಾ ಕೊಬ್ಬು ನಮ್ಮ ಜಾಗಕ್ಕೆ ಬಂದು ನಮ್ಮನ್ನೇ ಕೇವಲವಾಗಿ ನೋಡುತ್ತಾನೆ" ಎಂದು ಕನ್ನಡದಲ್ಲಿ ಹೇಳಿದ.

ಅದಕ್ಕೆ ಅವನ ಸ್ನೇಹಿತ ಅರ್ಥವಾಗದ ರೀತಿಯಲ್ಲಿಯೇ ಯಜಮಾನರ ಮುಖವನ್ನು ಇವನ ಮುಖವನ್ನು ನೋಡಿದ.

ಯಜಮಾನರು ಹೇಳಿದರು. "ಅದು ಏನೇ ಆಗಲಿ ನಮ್ಮದು ವೈವಿಧ್ಯಮಯವಾದ ದೇಶ. ಇಲ್ಲಿ ಹತ್ತು ಹಲವು ಭಾಷೆಗಳ, ಸಂಸ್ಕೃತಿಯ ಜನರುಗಳು ಇದ್ದಾರೆ. ಇಲ್ಲಿಯೇ ನೋಡು ಬೆಂಗಳೂರು ಎಂಬುದು ಮಿನಿ ಭಾರತವಾಗಿದೆ. ಹಾಗಂತ ಅವರು ಬೇರೆ ನಾವು ಬೇರೆ ಎಂದು ಜೀವಿಸಲು ಸಾಧ್ಯವಿಲ್ಲ."

"ಈ ಐ.ಪಿ.ಎಲ್ ಆದರೂ ಅಷ್ಟೇ ಗಮನಿಸಿ ಪ್ರತಿಯೊಂದು ಟೀಂ ನಲ್ಲೂ ವಿವಿಧ ದೇಶ, ನಮ್ಮ ದೇಶದ ವಿವಿಧ ರಾಜ್ಯದ ಆಟಗಾರರು ಆಟವನ್ನು ಆಡುತ್ತಿದ್ದಾರೆ. ಯಾಕೆ ಈ ರೀತಿಯ ಟೀಂ ರಚಿಸಿದ್ದಾರೆ ಗೊತ್ತಾ?" ಎಂದು ಈ ಇವರುಗಳಿಗೆ ಕೇಳಿದರು.

ಇವರುಗಳು ಏನೂ ತಿಳಿಯದ ರೀತಿಯಲ್ಲಿ ಕಣ್ಣು ಕಣ್ಣು ಬಿಟ್ಟರು.

ಯಜಮಾನರು " ಪ್ರತಿಯೊಬ್ಬರೂ ಎಲ್ಲಾ ಒಂದೇ ಎಂಬ ರೀತಿಯಲ್ಲಿ ಬೆರೆಯಲಿ ಮತ್ತು ಪ್ರತಿಯೊಂದು ಮನಸ್ಸುಗಳಲ್ಲೂ ಸ್ನೇಹ ಸಾಮರಸ್ಯ ಬೆಳೆಯಲಿ. ಅದು ರಾಜ್ಯ ಮತ್ತು ದೇಶ ದೇಶಗಳ ಮಧ್ಯದ ಬಾಂಧವ್ಯಕ್ಕೆ ಕಾರಣವಾಗಲಿ ಎಂದು."

"ಅದು ಬಿಟ್ಟು ವೈರಿಗಳ ರೀತಿಯಲ್ಲಿ ನೋಡಲಿ ಎಂಬುದಾಗಿದ್ದಾರೇ ಈ ಆಟೋಪಾಟಗಳನ್ನು ಯಾರೊಬ್ಬರೂ ಇಷ್ಟರ ಮಟ್ಟಿಗೆ ಪ್ರೊತ್ಸಾಹಿಸುತ್ತಿರಲಿಲ್ಲ. ನೋಡಿ ಒಲಂಪಿಕ್ಸ್ ಸಹ ಇದೇ ಒಂದು ಮುಖ್ಯಾಂಶದ ಮೇಲೆ ನಾಲ್ಕು ವರುಷಗಳಿಗೊಮ್ಮೆ ವೇದಿಕೆಯಾಗಿ ಜಗತ್ತಿನಲ್ಲಿನ ಎಲ್ಲಾ ಕ್ರಿಡಾಪಟುಗಳ ಸಾಮರ್ಥ್ಯವನ್ನು ಜಗತ್ತಿನ ಮುಂದಿಡಲು ಅವಕಾಶ ಮಾಡಿಕೊಡುತ್ತಾದೆ."

ಈ ಮಾತುಗಳನ್ನು ಕೇಳಿದಾಗ ಸ್ವಲ್ಪ ಕೂಲ್ ಅದರು ಅನಿಸುತ್ತದೆ. ಬುದ್ಧಿವಂತರಾಗಿ ವೈರಿಗಳ ರೀತಿಯಲ್ಲಿ ನಡೆದುಕೊಂಡಿದ್ದಕ್ಕೆ ಅವರುಗಳಿಗೆ ಅವಮಾನವಾದ ರೀತಿಯಲ್ಲಿ ತಲೆ ತಗ್ಗಿಸಿಕೊಂಡು ನಿಂತಿದ್ದರು.

ಯಜಮಾನರು ಮುಂದುವರಿಸುತ್ತಾ "ಇಲ್ಲಿ ಯಾವೊಬ್ಬ ಆಟಗಾರನು ನಮ್ಮವನು ಅವರವನು, ಯಾವೊಂದು ಟೀಂ ನಮ್ಮದು ಅವರದು ಎಂಬ ರೀತಿಯಲ್ಲಿ ನೋಡಬಾರದು. ಮತ್ತು ಅವರು ನಮ್ಮವರು ಆದ್ದರಿಂದ ಗೆಲ್ಲಲೇ ಬೇಕು ಎಂಬ ಹುಚ್ಚು ಅಭಿಮಾನವಿರಬಾರದು. ಇದು ಆಟ ಆಟವನ್ನು ಮಾತ್ರ ಕಾಣಬೇಕು. ಅದನ್ನು ಮಾತ್ರ ಸಂತೋಷದಿಂದ ನೋಡಿ ಸಂತಸಪಡಬೇಕು. ಸೋತವರು ನಮ್ಮವರೇ ಗೆದ್ದವರು ನಮ್ಮವರೇ ಎಂದುಕೊಳ್ಳಬೇಕು. ಗಮನಿಸಿ ದೋನಿ,ಮುರುಳಿಧರನ್,ಗೇಲ್ ಎಲ್ಲಿಯವರು? ಅವರುಗಳೇ ಆಟ ಎಂಬ ರೀತಿಯಲ್ಲಿ ಆಟವಾಡುತ್ತಿದ್ದಾರೆ. ಆದರೇ ಪ್ರೇಕ್ಷಕರಾದ ನಾವುಗಳು ಹೀಗೆ ಕಿತ್ತಾಡುವುದು ಎಷ್ಟು ಸರೀ?"

ನಮ್ಮ ಸ್ನೇಹಿತನಿಗೆ ಅವರು ಹೇಳಿದರು. "ನಾವುಗಳು ಪ್ರತಿಯೊಂದನ್ನು ಬೇರೊಬ್ಬರಿಂದ ಕಲಿಯುವುದು ಬಹಳ ಇರುತ್ತದೆ. ನಮ್ಮದರ ಬಗ್ಗೆ ಅಭಿಮಾನ ಪಡುವುದು ಆರೋಗ್ಯಕರ ಅದೇ ರೀತಿಯಲ್ಲಿ ದುರಾಭಿಮಾನಪಡುವುದು ಅಷ್ಟೇ ಅಪಾಯಕಾರಿ" ಎಂದು ತಮಿಳು ಸ್ನೇಹಿತರ ಕಡೆ ಮುಖ ಮಾಡಿದರು.

"ಬನ್ನಿ ಕೈ ಕೈ ಜೋಡಿಸಿ. ಬೆಂಗಳೂರಿನ ಬ್ಯಾಟಿಂಗ್ ನ್ನು ಆಟ ಎನ್ನುವ ರೀತಿಯಲ್ಲಿ ಎಲ್ಲಾರೂ ಒಟ್ಟಿಗೆ ಸೇರಿ ನೋಡಿ ಆನಂದಿಸಿ. ನಮ್ಮೆಲ್ಲಾರಿಗಿಂತ ನಮ್ಮ ದೇಶ ದೊಡ್ಡದು. ಇದನ್ನು ಗಮನದಲ್ಲಿ ಇಡೀ. ಜೈ ಭಾರತ್!"

ಎಂದು ಹೇಳಿ ಅವರುಗಳು ನಗು ನಗುತ್ತಾ ರೋಂ ಹೊರಗಡೆ ಹೋದರೂ.

ಇವರುಗಳು ಎಲ್ಲಾದನ್ನು ಮರೆತು ಖುಷಿಯಾಗಿ ಹೆಗಲ ಮೇಲೆ ಕೈ ಹಾಕಿಕೊಂಡು ಪೇಪ್ಸಿ ಕುಡಿಯುತ್ತಾ ಥಂಡಾ ಥಂಡಾ ಆಗಿಬಿಟ್ಟರು.

ಸೋಮವಾರ, ಆಗಸ್ಟ್ 24, 2015

ಪ್ರೀತಿ ತುಂಬಿದ ಕಣ್ಣುಗಳು

ನಾವೇ ಮತ್ತೊಮ್ಮೆ ಮಕ್ಕಳಾಗುವುದು ನಮಗೆ ಮುದ್ದಿನ ಕೂಸು ಹುಟ್ಟಿದ ಮೇಲೆ. ನಮ್ಮ ಅಪ್ಪ ಅಮ್ಮ ನಮ್ಮನ್ನು ಹೇಗೆಲ್ಲಾ ಸಂಬಳಿಸಿ ಬೆಳೆಸಿದರು ಎಂಬುದು ಅರ್ಥವಾಗುವುದು ನಮ್ಮ ಕೂಸುಗಳನ್ನು ನೋಡಿಕೊಳ್ಳುವಾಗ.

ಮಕ್ಕಳು ನಮಗೆ ಕೇವಲ ಖುಷಿಯನ್ನು ಮಾತ್ರ ಕೊಡುವುದಿಲ್ಲ. ಅವುಗಳು ನೀಡುವ ಸಂಪತ್ತು ಏನೇಂದರೂ ವರ್ಣಿಸಲು ಸಾಧ್ಯವಿಲ್ಲ.

ಅವುಗಳ ಸ್ಪರ್ಷ ಮತ್ತು ಅವುಗಳ ಕಣ್ಣಿನ ನೋಟ ನಮಗೆ ಜಗತ್ತಿನಲ್ಲಿಯೇ ಯಾರು ಕೊಡದ ಒಂದು ಔಷದಿ. ಒಂದು ಮಗು
ನಮ್ಮನ್ನು ಒಂದೆರಡು ವರ್ಷ ಚಿಕ್ಕವರನ್ನಾಗಿ ಮಾಡಿಬಿಡುತ್ತವೆ.

ಅವುಗಳ ನಿಷ್ಕಲ್ಮಶವಾದ ಪ್ರೀತಿ ತುಂಬಿದ ಕಣ್ಣುಗಳು, ದೇವರ ಪ್ರೀತಿಯೇನೋ ಅನಿಸುತ್ತದೆ. ಅವುಗಳು ನಮ್ಮಿಂದ ನಿರೀಕ್ಷಿಸುವುದು ಪ್ರೀತಿ ಮಾತ್ರ!

ಅದು ಚಿಕ್ಕ ವಯಸ್ಸಿನ ಅಲಾಪ!

ಅವುಗಳ ಮುಗ್ಧವಾದ ನಗು ದೇವರೇ ಒಮ್ಮೆ ನಮ್ಮನ್ನು ನೋಡಿ ನಕ್ಕಂತೆ ಭಾಸವಾಗುತ್ತದೆ. ಮಕ್ಕಳಿಗೆ ಹೆತ್ತವರೇ ದೇವರಾದರೇ, ಪ್ರೀತಿಯ ಇನ್ನೊಂದು ಮುಖವನ್ನು ಮಕ್ಕಳ ಮೊಲಕ ಹೆತ್ತವರು ಕಂಡು ಕೊಳ್ಳುತ್ತಾರೆ.

ಅದು ಏನೇ ಆಗಲಿ, ಮಕ್ಕಳು ನಮ್ಮ ರಕ್ತವನ್ನು ಹಂಚಿಕೊಂಡ ಕರುಳ ಬಳ್ಳಿಗಳು. ಅದಕ್ಕೆ ಅಷ್ಟೊಂದು ಪ್ರೀತಿ-ಗೀತಿ ಎಂದು ಏನೂ ಹೇಳಿದರೂ.. ಯಾರು ಕೊಡಲಾರದ ಪ್ರೀತಿಯ ಪುತ್ಥಳಿಗಳಾಗಿರುವ ಈ ಪುಟಾಣಿ ಪುಟ್ಟ ಪುಷ್ಪಗಳನ್ನು ಹೊಂದಿರುವವರೇ ಧನ್ಯರು!



ಮಕ್ಕಳಿರಲವ್ವ ಮನೆ ತುಂಬ ಎಂಬ ಹಾಡು ಇಂದು ಹಾಡಲಾಗುವುದಿಲ್ಲ. ಒಂದು ಎರಡು ಸಾಕು ಎಂಬ ದಿನಮಾನದಲ್ಲಿರುವ ನಮಗೆ ಹೆಚ್ಚು ಮಕ್ಕಳನ್ನು ಹೊಂದಿ ಹೆಚ್ಚು ಸಂತೋಷಪಡಲು ಸಮಯ ಸಂಯಮ ಎರಡು ಇಲ್ಲ.

ಆದರೂ ಇರುವ ಮಕ್ಕಳೇ ನಮಗೆ ಎಲ್ಲಿಂದಲೂ ಸಿಗದ ಭಾಗ್ಯವನ್ನು ಕೊಟ್ಟು ಒಂದಷ್ಟು ವರುಷ ಹೆತ್ತವರನ್ನು ಹೆಚ್ಚು ಆರೋಗ್ಯದಿಂದ ಬಾಳುವಂತೆ ಮಾಡುವುವು ಎಂದರೇ ಅತಿಶಯೋಕ್ತಿಯಲ್ಲ.

ನೋಡಿ ಆ ಮಗು ದಿನ - ರಾತ್ರಿ ಎನ್ನದೇ ಒಂದೇ ರೀತಿಯಲ್ಲಿ ಪ್ರಫುಲ್ಲತೆಯನ್ನು ತನ್ನ ಮುಖದಲ್ಲಿ ಹೊಂದಿ, ನಾವು ಯಾವ ಸಮಯದಲ್ಲಿ ಅದನ್ನು ಮಾತನಾಡಿಸಿದರೂ ಅದೇ ಪ್ರೀತಿಯ ಗುದ್ದನ್ನು ಮುಖಕ್ಕೆ ಕೊಡುತ್ತದೆ. ಅದು ಅದೇ ಆಟವನ್ನು ದಣಿವಿಲ್ಲದೇ. ಮುಖದ ಮೇಲೆ ನಮಗೆ ಬಂದಿರುವ ವಯಸ್ಸಿನ ಸುಸ್ತನ್ನೇ ಒಂದು ಕಿರು ನಗು ಮತ್ತು ತೊದಲು ಮಾತಿನಲ್ಲಿ ಹೊಡೆದೋಡಿಸಿಬಿಡುತ್ತದೆ.

ಆ ಮಗುವನ್ನು ನೋಡುವುದೇ ಒಂದು ಹಬ್ಬವಾಗಿರುತ್ತದೆ. ಆದರ ಜೋತೆಯಲ್ಲಿ ಆಟವಾಡುವುದೇ ಒಂದು ಯೋಗವಾಗುತ್ತದೆ. ಅದರ ನಿದ್ದೆಯನ್ನು ನೋಡುವುದೇ ಒಂದು ತಪಸ್ಸು ಅನಿಸುತ್ತದೆ. ಅದನ್ನು ಮುಟ್ಟುವುದೇ ಸ್ಪರ್ಷ ಚಿಕಿತ್ಸೆ ಅನಿಸುತ್ತದೆ.

ಮನುಷ್ಯನ ಜೀವನ ಚಕ್ರದಲ್ಲಿ ಈ ಒಂದು ಘಟ್ಟ ಪ್ರತಿಯೊಬ್ಬರೂ ಒಮ್ಮೆಯಾದರೂ ಅನುಭವಿಸಬೇಕಾಗುತ್ತದೆ. ಅದೇ ಯಾಂತ್ರಿಕ ಬದುಕಿಗೆ ಒಂದು ವಿಭಿನ್ನವಾದ ಕ್ರಿಯಾಶೀಲತೆಯ ಟಚ್ ನ್ನು ಒಂದು ಪುಟ್ಟ ಜೀವ ಕೊಡುತ್ತದೆ.

ಅದು ಉಂಟು ಮಾಡುವ ಬದಲಾವಣೆ ಒಂದಾ ಎರಡಾ? ಬದಲಾವಣೆಯ ಪರ್ವವನ್ನು ಮಗು ಬಂದ ಘಳಿಗೆಯಿಂದ ಹೆಣ್ಣು ಮತ್ತು ಗಂಡಿನಲ್ಲಿ ಕಾಣಬಹುದು.

ತಾಯಂದಿರಿಗೆ ಒಂದು ಮಗು ಕೊಡುವ ಖುಷಿಯನ್ನು ಯಾರು ಪದಗಳಲ್ಲಿ ಹಿಡಿದಿಡಲಾರರು. ಅದು ಪ್ರತಿಯೊಬ್ಬ ಸ್ತ್ರೀಯರಿಗೆ ಪುನರ್ ಜನ್ಮ. ಸ್ತ್ರೀ ತನ್ನ ಹೊಸ ಜೀವವನವನ್ನು ಹೊಸ ಜೀವದಲ್ಲಿ ಕಂಡುಕೊಳ್ಳುವವಳು. ತನ್ನ ರಕ್ತವನ್ನು ತನ್ನ ಬಸಿರನ್ನು ಹಂಚಿಕೊಂಡು ತನ್ನ ಮುಂದೆಯೇ ಇರುವ ಈ ಜೀವವನ್ನು ತಾನು ಜಗತ್ತಿನಲ್ಲಿ ಯಾರನ್ನು ಪ್ರೀತಿಸದಷ್ಟು ಹೆಚ್ಚಾಗಿ ಪ್ರೀತಿಸುತ್ತಾಳೆ. ಅವಳ ದೇಹದ ಅಣು ಅಣು ಮಗುವಿನೆಡೆಗೆ ಪರಿತಪಿಸುತ್ತದೆ. ತಾಯಿಯ ಮಮತೆಯ ಮಹಾಪೂರವೇ ಆ ಮಗುವಿಗೆ ತಾಯಿಯ ಎದೆ ಹಾಲಾಗಿ ಹನಿ ಹನಿಯಾಗಿ ಮಗುವನ್ನು ಸೇರುತ್ತದೆ. ಮಗು ತಾನು ಪ್ರೀತಿಸುವುದನ್ನು ತಾಯಿಯಿಂದಲೇ ಕಲಿಯುವುದು. ಅದು ತಾನು ಬುದ್ಧಿ ಬರುವವರಿಗೂ ಸುತ್ತಲಿನ ಎಲ್ಲರಿಗಿಂತ ಹೆಚ್ಚಾಗಿ ಜೀವದಂತೆ ನಂಬುವುದು ತನ್ನ ತಾಯಿಯನ್ನು ಮಾತ್ರ. ಅವಳ ಮಡಿಲಲ್ಲಿ ಮಾತ್ರ ನಾನು ಸುರಕ್ಷಿತ ಎಂಬ ಭಾವನೆಯನ್ನು ಆ ದೇವರು ಆ ಪುಟ್ಟ ಕಂದನ ಹೃದಯದಲ್ಲಿ ಅದು ಹೇಗೆ ಇಟ್ಟಿರುವವನು ದೇವರೇ ಬಲ್ಲ!

ಎಷ್ಟೊಂದು ಸುಂದರ ಅನುಬಂಧ! ನೆನಸಿಕೊಂಡರೇ ಮೈ ಜುಮ್ಮೆನಿಸುತ್ತದೆ. ಜಗತ್ತಿನ ಜೀವ ಸಂತತಿಯ ಪುನರ್ ನವೀಕರಣ ಹೀಗೆ ಸಾಗುವುದು ಎಂದು ಆ ದೇವ ನಿರ್ಧರಿಸಿಬಿಟ್ಟಿದ್ದಾನೆ.

ಮಗು ಹೆತ್ತವರಿಗೆ ಮನ್ವಂತರವನ್ನು ಸೃಷ್ಟಿಸಿಬಿಡುತ್ತದೆ. ಹೆತ್ತವರು ಬದುಕುವುದೇ ಈ ನನ್ನ ಜೀವಕ್ಕಾಗಿ ಎಂದು ನಿರ್ಧರಿಸಿಬಿಡುತ್ತಾರೆ. ನನ್ನ ಜೀವನದಲ್ಲಿ ಇನ್ನೂ ಏನೂ ಇಲ್ಲ. ಈ ಒಂದು ಕಂದನ್ನನ್ನು ಚೆನ್ನಾಗಿ ನೋಡಿಕೊಂಡರೇ ಸಾಕು. ನಮಗೆ ಏನೂ ಬೇಡ. ಅವನೊಬ್ಬ ಚೆನ್ನಾಗಿ ಬೆಳೆದರೇ ಸಾಕು.

ಮಗುವಿನೊಂದಿಗೆ ಸುಂದರ ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿಕೊಂಡು ಅವನ ಏಳ್ಗೆ ಬಾಳ್ವೆಗಾಗಿ ತಮ್ಮ ದುಡಿತವನ್ನು ಹೆಚ್ಚು ಮಾಡಿಕೊಳ್ಳುವ ಮಂದಿಯನ್ನು ನಮ್ಮ ಸುತ್ತ ಕಾಣಬಹುದು.

ನಾವು ಕಷ್ಟಪಡುವುದನ್ನು ಈ ಮುದ್ದು ಜೀವ ನೋಡಬಾರದು. ನಾವು ಮಗು ಸ್ವಲ್ಪ ಖುಷಿಪಟ್ಟರು. ಈ ಕಂದಮ್ಮ ನಿರಮ್ಮಳಾಗಿ ನಗುತಿರಲಿ. ಇಂದು ಕೊಡಿಟ್ಟಿದ್ದೇಲ್ಲಾ ಅವನಿಗೆ ಮಾತ್ರ. ಅವನು ಮುಂದೆ ರಾಜನಾಗಿ ಬಾಳಲಿ ಎಂಬುದೇ ಎಲ್ಲಾರ ಆಶೀರ್ವಾದ.

ಈ ಭಾವನೆ ಹೆತ್ತವರನ್ನು ಗೊತ್ತಿಲ್ಲದೇ ಮಹನ್ನೊತ ಯೋಗಕ್ಕೆ ಕೊಂಡು ಹೋಗಿಬಿಡುತ್ತದೆ. ತಾನು ಮಾಡುವುದು ತನಗಲ್ಲಎನ್ನುವುದು.

ಜಗತ್ತಿನಲ್ಲಿ ಪ್ರತಿಯೊಬ್ಬರೂ ತನ್ನ ಅನಂತರ ಹೆಚ್ಚು ಪ್ರೀತಿಸುವುದು ತನ್ನ ಕರಳು ಬಳ್ಳಿಗಳನ್ನು ಮಾತ್ರವೇ!

ಅದೇ ಸತ್ಯ.

ಹೆತ್ತವರಿಗೆ ತನ್ನ ಮಕ್ಕಳೇ ಸರ್ವಸ್ವ. ಆ ಸಮಯದಲ್ಲಿ ಯಾವುದೇ ಪ್ರತಿಫಲ ಆಪೆಕ್ಷೆಯಿಲ್ಲದೇ ತನ್ನ ಮಕ್ಕಳ ಅಭಿವೃದ್ಧಿ ಮತ್ತು ಸಂರಕ್ಷಣೆಗಾಗಿ ತನ್ನ ಜೀವಮಾನವನ್ನೇ ಸವೆಸುವ ಎಷ್ಟೋ  ಮಂದಿಯನ್ನು ನಮ್ಮ  ಜಗತ್ತಿನಲ್ಲಿ ಕಾಣಬಹುದು.

ಈ ರೀತಿಯ ಬಾಂದವ್ಯವನ್ನು ಯಾರು ಯಾವತ್ತೂ ಎಂದು ಮರೆಯುವುದಿಲ್ಲ. ಅದೇ ಚಲನೆಯ ನಿಯಮ.. ಜಗತ್ತಿನ ಜೀವಂತಿಕೆಗೆ ಸಾಕ್ಷಿ!

ಮಗುವಿನ ಆಟ ಪಾಠಗಳನ್ನು ಹೆತ್ತವರು ಜಪಿಸುವುದು ಅವುಗಳು ಸ್ಕೋಲಿಗೆ ಹೋಗುವವರೆಗೂ. ನೋಡಲು ಎರಡು ಕಣ್ಣು ಸಾಲದು. ಮಕ್ಕಳು ಆ ಮನೆ ಮಂದಿಗೆಲ್ಲಾ ಹೊಸ ಸಡಗರವನ್ನೇ ತಂದುಕೊಟ್ಟಿರುತ್ತಾರೆ.  ಮಕ್ಕಳನ್ನು ಕಂಡರೇ ಮನೆಯವರೆಲ್ಲಾ ಪ್ರೀತಿಯ ಧಾರೆಯನ್ನೇ ಎರೆಯಲು  ನಾ ಮುಂದು ತಾ ಮುಂದು ಎಂದು  ನಿಂತಿರುತ್ತಾರೆ.

ಅವುಗಳ ತುಂಟಾಟ, ಅವುಗಳ ತೂದಲು ನುಡಿ, ಅವುಗಳ ಅಳು, ನಗು ನೋಡಿ ನೋಡಿ ಇನ್ನೂ ಬೇಕು ಅನಿಸುತ್ತದೆ. ಅವುಗಳ ಸಿಟ್ಟು, ಅವುಗಳ ಸೆಡೆವು ಅಬ್ಬಾ ಒಂದೊಂದು ಒಂದು ಕಾಂದಬರಿಯೇ ಸರಿ. ಅವುಗಳನ್ನು ಹೇಳುವುದಕ್ಕಿಂತ ಅನುಭವಿಸುವುದೇ ಮೇಲು.

ಈಗಂತೂ ನಮ್ಮ ಟೆಕ್ನಾಲಜಿಯ ಹಿರಿಮೆ ಮಕ್ಕಳ ಪ್ರತಿಕ್ಷಣವನ್ನು ಪೋಟೊಗಳಲ್ಲಿ, ವಿಡಿಯೋಗಳಲ್ಲಿ ಸೇರೆ ಹಿಡಿಯಲು ಮನೆ ಮಂದಿಯೇಲ್ಲಾ ನಿಂತಿರುತ್ತಾರೆ. ಅದು ಒಳ್ಳೆಯದು. ಮುಂದೆ ದೊಡ್ಡವರಾದಾಗ ಮಕ್ಕಳಿಗೆ ಅವರಾಡಿದ ಎಲ್ಲಾ ಕ್ಷಣಗಳನ್ನು ಪೋಟೋ ಅಥವಾ ವಿಡಿಯೋಗಳಲ್ಲಿ ಬಹುಮಾನವಾಗಿ ಕೊಟ್ಟರೆ ಒಟ್ಟಾಗಿ ಮಕ್ಕಳಿಗೆ ಅವರ ಬಾಲ್ಯವನ್ನೇ ವಾಪಸ್ಸು ನಿಡಿದಂತೆಯೇ?

ಮುಂಜಾನೆಯಿಂದ ರಾತ್ರಿ ಮಲಗುವವರೆಗೆ ಅವುಗಳ ಜೋತೆಯಲ್ಲಿ ಇರುವುದು ಅಜ್ಜ, ಅಜ್ಜಿ ಮತ್ತು ಹೆತ್ತ ತಾಯಿ ಮಾತ್ರ. ಅವರು ಅನುಭವಿಸುವ ಸಂಭ್ರಮವನ್ನು ಅವರ ಮುಖದಲ್ಲಿ ಕಾಣುವ ಸಂತೋಷದಿಂದ ಕಾಣಬಹುದು.

ಒಮ್ಮೊಮ್ಮೆ ಅಬ್ಬಾ ಈ ಮಗುವನ್ನು ಹಿಡಿದು ಹಿಡಿದು ಸಾಕಾಯಿತು ಎನಿಸಿದರೂ.. ಸ್ವಲ್ಪ ಸಮಯದಲ್ಲಿಯೇ ಆ ಮಗುವಿನ ಒಂದು ಬೊಚ್ಚು ನಗು ಎಂಥ ದಣಿವನ್ನು ನೀರ ಗುಳ್ಳೆಯನ್ನಾಗಿಸುತ್ತದೆ.

ಅಜ್ಜ ಅಜ್ಜಿಗಳಿಗಂತೂ ತಮ್ಮ ಹರೆಯವನ್ನು ಈ ಚಿಕ್ಕ ಜೀವಗಳು ವಾಪಸ್ಸು ತಂದುಕೊಟ್ಟಂತ್ತಾಗುತ್ತದೆ. ಅವುಗಳ ಜೋತೆಯ ಜೀವನ ಅವರನ್ನು ಎಂದು ನಾವು ಒಂಟಿಯಲ್ಲ ಎನ್ನುವಂತೆ ಮಾಡಿಕೊಡುತ್ತದೆ.

ಹೆಚ್ಚು ಪ್ರಫುಲ್ಲತೆಯನ್ನು ಹೊಂದಿರುವ ಮನೆಯೆಂದರೇ ಮಕ್ಕಳಿರುವ ಮನೆ. ಅ ಮನೆಯು ಹೆಚ್ಚು ಸ್ವಚ್ಚವಾಗಿರದಿದ್ದರೂ, ಅಲ್ಲಿರುವ ಹೈ ಹೊಲ್ಟೆಜ್ ಮುಟ್ಟಿದರೇ ಶಾಕ್ ಅನಿಸುತ್ತಿರುತ್ತದೆ. ಅದು ಕೇವಲ ಒಂದು ಚಿಕ್ಕ ಮಗುವಿನಿಂದ ಬೆಳಕಾಗಿರುತ್ತದೆ.

ಮಕ್ಕಳ ದಣಿವಿರದ ಆಟವನ್ನು ನೋಡಿ ನಾವು ಕಲಿಯುವುದು ಬಹಳವಿದೆ. ಅವುಗಳು ನೀಡುವ ಮರು ಪಾಠ ಯಾವ ಯುನಿವರ್ಸಿಟಿಯು  ಕಲಿಸಿರುವುದಿಲ್ಲ!  ಈ ಕ್ಷಣವನ್ನು ಯಾವ ಕೊರತೆಯಿಲ್ಲದೇ ಹೇಗೆ ಅನುಭವಿಸುತ್ತಾ ಬದುಕಬೇಕು ಎಂಬುದು ಎಲ್ಲಾ ಚಿಕ್ಕ ಮಕ್ಕಳು ದೊಡ್ಡವರಿಗೆ ನೀಡುವ ಅತಿ ದೊಡ್ಡ ಪಾಠ!

ಇನ್ನೂ ಏಕೆ ಕಾಯುತ್ತಿರೀ? ಬೇಗ ಒಂದಾದರೂ ಮಕ್ಕಳನ್ನು ಮಾಡಿಕೊಂಡು ಸಂತೋಷವೆಂದರೇ ಏನೂ ಎಂಬುದನ್ನು ಅನುಭವಿಸಬಾರದ?



ಶುಕ್ರವಾರ, ಜುಲೈ 3, 2015

ಸಂಸ್ಕೃತಿ ವಿಚಿತ್ರ ಮತ್ತು ಸತ್ಯ

ಸಂಸ್ಕೃತಿ ಜನರಿಗಾಗಿ ಇರುವುದು ಅನಿಸುತ್ತದೆ. ಅಥವಾ ಜನರೇ ತಮ್ಮ ಅನುಕೂಲಕ್ಕಾಗಿ ಮಾಡಿಕೊಂಡಿರುವ ರೀತಿ ನೀತಿಗಳ ಸಂಕಲನದ ಮೊತ್ತವೇ ಸಂಸ್ಕೃತಿ. ಅದು ಕುಟುಂಬ ಸಮಾಜ ಊರು ರಾಜ್ಯ ದೇಶಗಳನ್ನುಳಗೊಂಡ ಸಹ ಜೀವನ ಶೈಲಿಯಾಗಿದೆ.

ನಾವು ಆಚರಿಸುವ ಆಚಾರ ವಿಚಾರ ಒಂದು ಒಂದು ಮೈಲಿಗೂ ವ್ಯತ್ಯಾಸವಾಗಿರುತ್ತದೆ. ನಾವು ಮಾಡುವ ನೋಡುವ ನಮ್ಮ ಜಾಗದ ರೀತಿ ನಿನ್ನೊಂದೂರಲ್ಲಿ ವಿಚಿತ್ರವಾಗಿ ಕಾಣಬಹುದು. ನಮ್ಮಲ್ಲಿ ಮಾಮೊಲಿ ಎನಿಸುವ ಪದ್ಧತಿ ಇನ್ನೊಂದು ಕುಟುಂಬದಲ್ಲಿ ಅಭಾಸವಾಗಿ ಕಾಣಬಹುದು. ಅದು ಅವರಲ್ಲಿ ಪುರಾತನ ಕಾಲದಿಂದ ಮಾಮೊಲಿಯಾಗಿ ಯಾವುಂದೂ ಹೊಸದು ಅನಿಸದೇ ಇರುವುದಾಗಿದೆ.

ಸಂಸ್ಕೃತಿ ಅಧ್ಯಯನ ಒಂದು ಕುತೂಹಲವಾದ ವಿಚಾರವಾಗಿದೆ. ಅದು ಜಗತ್ತಿನಲ್ಲಿ ಲಕ್ಷ ಲಕ್ಷ ಜನರ ಲಕ್ಷ ಲಕ್ಷ ಸಂಸ್ಕೃತಿಗಳು ಮನುಷ್ಯನ ಉಹೆಗೂ ಅವನ ಮೀತಿಗೂ ನಿಲುಕದಾಗಿದೆ.

ತಾನು ಬದುಕುವ ಬದುಕೇ ಮನುಷ್ಯನಿಗೆ ತನ್ನ ಜೀವನ ಅನುಕೂಲಕ್ಕೆ ಅನುಗುಣವಾಗಿ ತನ್ನ ರೀತಿ ನೀತಿ ಪದ್ಧತಿಗಳನ್ನು ತನ್ನ ಏಳ್ಗೆ ಬಾಳ್ಗೆಗಾಗಿ ಅನುಸರಿಸಿಕೊಂಡು ಹೋಗುವನು.



ನಮ್ಮ ಪದ್ಧತಿಗೇ ವಿರುದ್ಧವಾಗಿ ಇನ್ನೊಬ್ಬರದೂ ಇದ್ದರೇ ನಮಗೆ ಅಲ್ಲಿ ಒಂದು ಕ್ಷಣವೂ ಇರಲಾಗುವುದಿಲ್ಲ. ಆಗ ಅನ್ನುವ ಮೊದಲ ಮಾತೇ ಅವರ ಕಲ್ಚರ್ ನಮ್ಮ ಕಲ್ಚರ್ ಬಿನ್ನ ಅಂದು ಸುಮ್ಮನಾಗುತ್ತೇವೆ. ಅವರಂತೆ ನಾವು ನಮ್ಮ ಸಂಸ್ಕಾರವನ್ನು ಬದಲಿಸಿಕೊಳ್ಳಲು ಆಗುವುದಿಲ್ಲ. ನಾವು ಎಷ್ಟೇ ಓದಿ ತಿಳಿದುಕೊಂಡರು ನಮ್ಮ ಹಿರಿಯರಿಂದ ಬಳುವಳಿಯಾಗಿ ನಮಗೆ ಬಂದಿರುವ ನಮ್ಮ ಪದ್ಧತಿಗಳನ್ನು ಬಿಟ್ಟುಕೊಡಲು ಆಗುವುದಿಲ್ಲ.

ಇದು ಧರ್ಮ, ದೇವರು, ಅನುಸರಿಸುವ ನಡಾವಳಿಗಳು ಪ್ರತಿಯೊಂದು ಒಂದಕ್ಕೊಂದು ತಳಕು ಹಾಕಿಕೊಂಡು ಒಂದು ಭವ್ಯವಾದ ಶ್ರೀಮಂತ ಸಂಪನ್ನ ಸಂಸ್ಕೃತಿಗೆ ಅಡಿಪಾಯವಾಗಿರುತ್ತದೆ. ಪ್ರತಿಯೊಬ್ಬರು ಒಂದೇ ಅನಿಸಿದರೂ ಸಹ ಇದು ಒಂದೇಯಾಗಿ ಇಲ್ಲ! ಅಲ್ಲಿಯೇ ಇರುವುದು ಮನುಷ್ಯನ ಅವನ ಹುಡುಕಾಟದ ಯಾವುದೊ ಒಂದು ಪವಾಡದಂತೆ ಕಾಣಿಸುವುದು.

ಇದೊಂತೂ ಸತ್ಯ! ಭಾರತ ಹೊರದೇಶದ ಜಾಗದಲ್ಲಿ ನಿಂತು ನೋಡಿದರೇ ಅಲ್ಲಿರುವ ಬೇರೆ ಬೇರೆ ಲಕ್ಷ ಲಕ್ಷ ವಿಭಿನ್ನ ಸಂಸ್ಕೃತಿ ಪದ್ಧತಿಗಳೆಲ್ಲಾ ಒಂದೇ ಅನಿಸುತ್ತದೆ. ಹೊರದೇಶದ ಆ ಪದ್ಧತಿ ನಡಾವಳಿಗಳು ನಮಗಂತೂ ಒಂದು ಕ್ಷಣ ಎಲ್ಲಾ ಹೊಸದು ಹೊಸದು ಅನಿಸುತ್ತದೆ. ಆ ಜನಗಳು ನಮ್ಮನ್ನು ಹೊರಗಿನವರಂತೆ ನೋಡುತ್ತಾರೆ! ನಾವುಗಳು ಅವರನ್ನು ಅಪರಿಚಿತರಂತೆ ನೊಡುತ್ತೇವೆ. ಅವರ ವೇಷ, ಭೋಷಣ, ಊಟ, ಪಾಠ ಪ್ರತಿಯೊಂದು ನಮಗೆ ಅಜೀರ್ಣವಾಗಿ ಕಾಣುತ್ತದೆ. ಅವರಿಗು ನಮ್ಮನ್ನ ಕಂಡರೇ ಹೀಗೆ ಅನಿಸುತ್ತದೆ. ಮನುಷ್ಯರೆಲ್ಲಾ ಒಂದೇ ಅನಿಸಿದರೂ ಅದು ಒಂದೇ ಅನಿಸುವುದಿಲ್ಲ!

ಎಷ್ಟೊಂದು ವಿಚಿತ್ರ ಅನಿಸಿದರೂ ಅದು ಸತ್ಯ! ಮನುಷ್ಯ ಕೇವಲ ಒಂದು ಪ್ರಾಣಿಯಲ್ಲ ಮತ್ತು ಮನುಷ್ಯನಲ್ಲ! ಅವನ ವ್ಯಕ್ತಿತ್ವ ಅವನ ಗುರುತು ಅವನ ಸಂಸ್ಕೃತಿಯನ್ನು ಹೊತ್ತಿಕೊಂಡು ಒಬ್ಬ ಸಂಸ್ಕೃತಿಯ ಒಡೆಯನಾಗಿ ಕಾಣುತ್ತಾನೆ. ಅವನು ಮಾತಾನಾಡುವ ಭಾಷೆಯಿಂದ ಹಿಡಿದು ಅವನ ವ್ಯಕ್ತಿತ್ವದವರೆಗೂ ಅವನು ವಾಸಿಸುವ ಜಾಗ, ರಾಜ್ಯ, ದೇಶವನ್ನು ಪ್ರತಿಬಿಂಬಿಸುತ್ತದೆ.

ಒಬ್ಬ ವ್ಯಕ್ತಿಯನ್ನು ನೋಡಿದ ಕ್ಷಣ ಇವನು ಇಲ್ಲಿಯವನೇ ಎಂದು ಗುರುತಿಸುವುದು ಅದರಿಂದಲೇ! ಆಚಾರ ವಿಚಾರದ ಅಚ್ಚು ಅಷ್ಟರ ಮಟ್ಟಿಗೆ ವ್ಯಕ್ತಿಯ ಮೇಲೆ ಮುದ್ರೆಯನ್ನು ಹೊತ್ತಿರುತ್ತದೆ. ಅವನ ಭಾವನೆ, ಭರವಸೆಗಳ ಆಳ ಅವನು ವಾಸಿಸುವ ಮಣ್ಣಿನ ವಾಸನೆಯಲ್ಲಿರುತ್ತದೆ.

ಅವನಿಗೆ ಒಳ್ಳೆಯದಾಗಿರುವುದು ಪರಕಿಯರಾಗಿರುವ ನಮಗೆ ಕೆಟ್ಟದಾಗಿ ಕಾಣುತ್ತದೆ. ನಮಗೆ ಓ ಎಷ್ಟೊಂದು ಚೆನ್ನಾಗಿದೆ ಅನಿಸುವುದು ಅವರಿಗೆ ತುಂಬ ಅಸಹ್ಯವಾಗಿ ಕಾಣಬಹುದು. ಈ ರೀತಿಯ ಚಿಂತನೆಗೆ ಮೊಲ ನಾವು ಬೆಳೆದು ಬಂದಿರುವ ಜಾಗ ಹಾಗೂ ನಮ್ಮನ್ನು ಹೆತ್ತು ಹೊತ್ತು ಸುತ್ತುವರಿದಿರುವ ನಮ್ಮ ಸಂಸ್ಕೃತಿ.

ಸಂಸ್ಕೃತಿ ಎಷ್ಟೊಂದು ಬಲಿಷ್ಟವಾದದ್ದು ಎಂದರೇ ಅದೇ ಮನುಷ್ಯ ಅಂದರೇ ಹೀಗೆ ಎಂದು ಗೊತ್ತು ಮಾಡಿಕೊಡುವುದರಲ್ಲಿ ಇದರ ಘನತೆ ನಮ್ಮ ನಿಲುಕಿಗೆ ಸಿಲುಕದಂತಹದ್ದು. ಆದರೂ ಅದು ನಮ್ಮ ಜೊತೆಯಲ್ಲಿ ಗೊತ್ತಿಲ್ಲದ ರೀತಿಯಲ್ಲಿ ಜೊತೆಯಲ್ಲಿಯೇ ಸಾಗುತ್ತದೆ.

ಅದು ನಾವು ಮಾಡುವ ಕೆಲಸ, ಉಡುವ ಉಡುಪು, ತಿನ್ನುವ ಆಹಾರ, ಕುಡಿಯುವ ಪಾನಿಯಗಳು, ಮಾತನಾಡುವ ಶೈಲಿ ಭಾಷೇ ಹೀಗೆ ಪ್ರತಿಯೊಂದರ ಮೇಲೂ ತನ್ನ ಪ್ರಭಾವವನ್ನು ಅಚ್ಚಾಗಿ ಇಟ್ಟಿರುತ್ತದೆ.

ಸಾಮಾನ್ಯ ಜನಕ್ಕೆ ಕೇವಲ ಮಾತಿನ ಸಂಸ್ಕೃತಿಯಾಗಿದ್ದರೇ ಸಮಾಜಿಕ ಚಿಂತಕರಿಗೆ ಅದು ನೀಡುವ ವಿಶಾಲವಾದ ತಿಳುವಳಿಕೆ ಅದನ್ನು ಅಧ್ಯಯನ ಮಾಡಿದವರಿಗೇ ತಿಳಿಯುವುದು.

ಗೊತ್ತಾ ಆಂದ್ರದಲ್ಲಿ ತೆಲಂಗಾಣ ಪ್ರಾಂತ್ಯದಲ್ಲಿ ವಾಸಿಸುವ ಮಂದಿಗೆ ಮನೆಗೆ ಮೊದಲು ಆಗಮಿಸಿದಾಗ ನೀರಿಗೆ ಬದಲಾಗಿ ಕುಡಿಯಲು ಮಧ್ಯವನ್ನು ಕೊಡುವುದು ಅವರ ಆಚಾರ. ಅದು ನಮ್ಮ ಕರ್ನಾಟಕದಲ್ಲಿ ಹೇಗೆ ಕಾಣಬಹುದು ಊಹಿಸಿ? ಒಂದೊಂದು ಜಾತಿ ಜಾಗದಲ್ಲೂ ವಿಭಿನ್ನ ವಿಭಿನ್ನವಾದ ಈ ರೀತಿಯ ಚಿಕ್ಕ ಚಿಕ್ಕ ವಿಚಾರಗಳೇ ನಮ್ಮ ನೆಲದ ವಾಸನೆಯನ್ನು ಉಹಿಸಲು ಅಸಧ್ಯಾವದಷ್ಟು ಶ್ರಿಮಂತಗೊಳಿಸಿರುವುದು.

ಭಾರತವಂತೋ ಒಂದೊಂದು ಮೈಲಿಗೂ ಒಂದೊಂದು ಪದ್ಧತಿಯನ್ನು ಕಾಣಬಹುದು! ಅದು ವಿಶಾಲ ಪುಟ್ಟ ಸಂಸ್ಕೃತಿಗಳ ಭವ್ಯ ಮಂಡಲವಾಗಿದೆ. ಯಾವೊಂದು ದೇಶದಲ್ಲೂ ಈ ರೀತಿಯ ಅಧ್ಯಯನ ಯೋಗ್ಯವಾದ ರಿಚ್ ಆದ ಕಲ್ಚರ್ ಕಾಣಲಾರೇವು. ವ್ಯಕ್ತಿಯ ಹುಟ್ಟಿನಿಂದ ಅವನ ಯೌವನ, ಮುಪ್ಪು ಅಂತಿಮ ಕಾಲದವರೆಗೂ ಅವನ ಪ್ರತಿಯೊಂದು ನಡೆಗೂ  ಒಂದೊಂದು ಬಣ್ಣ ಬಣ್ಣವಾದ ಪದ್ಧತಿ ಉಂಟು ಅದು ಜಗತ್ತಿನ ಯಾವೊಂದು ದೇಶದಲ್ಲೂ ಕಾಣಲು ಸಾಧ್ಯವಿಲ್ಲ.

ಅದಕ್ಕೆ ನಾವು ಹುಟ್ಟಿರುವ ನಮ್ಮ ಭಾರತಾಂಭೆಯ ಮಡಿಲಿಗೆ ಋಣಿಯಾಗಿರದಿದ್ದರೇ ಕೃತ‘ಘ್ನರಾದಂತೆ!

ಏನಂತೀರಾ?

ಭಾನುವಾರ, ಮೇ 17, 2015

ಜಗತ್ತಿನ ಅಣ್ಣ & ಗೊರೂರು

ಅಮೇರಿಕಾದಲ್ಲಿ ಗೊರೂರು ಪುಸ್ತಕ ಓದುವ ದಿನದಿಂದಲೂ ನಮ್ಮ ಜನಗಳಿಗೆ ಅಮೇರಿಕಾ ಎಂದರೇ ಏನೋ ಒಂದು ಆಕರ್ಷಣೆ. ಅದು ಯಾವ ಕಾರಣಕ್ಕೋ ತಿಳಿಯದಾಗಿದೆ. ಅದು ದೂರದ ದೇಶ ಎನ್ನುವುದರಿಂದಲೋ, ಅದು ಮುಂದುವರಿದ ದೇಶ ಎನ್ನುವುದರಿಂದಲೋ, ಅವರ ಡಾಲರ್ ನಮ್ಮ ರೂಪಾಯಿಗಿಂತ ದೊಡ್ಡದು ಎನ್ನುವುದರಿಂದಲೋ! ಗೊತ್ತಾಗುತ್ತಿಲ್ಲ. ಭಾರತೀಯರನ್ನೊಳಗೊಂಡಂತೆ ವಿಶ್ವದ ಎಲ್ಲಾ ಭಾಗದ ಜನಗಳನ್ನು ಒಂದು ಅಯಸ್ಕಾಂತದಂತೆ ಸೆಳೆಯುವ ಶಕ್ತಿ ಈ ದೇಶಕ್ಕೆ ಇದೆ ಎಂದರೇ ತಪ್ಪಾಗುವುದಿಲ್ಲ.

ಇದಕ್ಕೆ ನಿದರ್ಶನ ಎಂದರೇ.. ಅವರು ವರುಷಕ್ಕೆ ಒಮ್ಮೆ ಕೊಡುವ ವೀಸಾಗಳು. ಯಾವೊಂದು ದೇಶಕ್ಕೂ ಇಷ್ಟೊಂದು ಸಂಖ್ಯೆಯ ಆಪ್ಲಿಕೇಷನ್ ಗಳು ಬರುವುದಿಲ್ಲ. ಅದು ಲಾಟರಿಯ ಮೊಲಕ ಆರಿಸುವ ಮಟ್ಟಿಗೆ!!

ಜಗತ್ತಿನ ಅಣ್ಣ ಎನ್ನುವುದನ್ನು ನಾವೆಲ್ಲಾ ಮಾಧ್ಯಮಗಳಲ್ಲಿ ಓದುತ್ತಿರುತ್ತೇವೆ. ಅದು ಅತಿ ಹೆಚ್ಚು ಮುಂದುವರಿದಿರುವ ದೇಶ ಶ್ರೀಮಂತ ದೇಶ ಇತ್ಯಾದಿ ಇತ್ಯಾದಿ. ರಾಜಕೀಯ, ಟೆಕ್ನಾಲಜಿ, ಎಕನಾಮಿ ಪ್ರತಿಯೊಂದರಲ್ಲೂ ನಮ್ಮ ಯುವ ತರುಣರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಪ್ರತಿ ವಿಚಾರದಲ್ಲೂ ಪಸ್ಟ್ ಕ್ಲಾಸ್ ಅನಿಸುವಂತ ದೇಶವಾಗಿದೆ ಎಂದು ಓದಿದ್ದೇವೆ.

ಪ್ರತಿ ಭಾರತೀಯ ತರುಣ ಮನಸುಗಳ ಒಂದೇ ಒಂದು ಆಸೆ. ಅಲ್ಲಿ ಎಂ.ಎಸ್ , ಎಂ.ಬಿ.ಎ ಮಾಡಬೇಕು. ಅಲ್ಲಿ ಒಮ್ಮೆಯಾದರೂ ಕೆಲಸ ಮಾಡಬೇಕು. ಅಲ್ಲಿಯೇ ಕೆಲಸ ಮಾಡುತ್ತಾ ಮಾಡುತ್ತಾ.. ಹೇಗಾದರೂ ಗ್ರೀನ್ ಕಾರ್ಡ ಸಂಪಾಧಿಸಿ ಇಲ್ಲಿಯೇ ನೆಲಸಿಬಿಡಬೇಕು.

ಇದು ನಮ್ಮ ಭಾರತೀಯರ ಕನಸು.

ಅದು ಯಾಕೋ ಭಾರತದಲ್ಲಿರುವವರೆಗೂ ಈ ಒಂದು ಗುರಿಯನ್ನು ಮನಸ್ಸಿನಲ್ಲಿಯೇ ಜೊಪಾನವಾಗಿಟ್ಟುಕೊಂಡು ತಮ್ಮ ಶಿಕ್ಷಣವನ್ನು ಪೂರೈಸಿಕೊಳ್ಳುತ್ತಾರೆ.

ಇಂದು ಅಮೇರಿಕಾ ಎಂಬುದು ಪಕ್ಕದ ಊರು ಎನ್ನುವಂತಾಗಿದೆ.. ಹೀಗೆ ಮಾಡಿದ ಕೀರ್ತಿ ನಮ್ಮ ಎಂ.ಎನ್ಸಿ & ಐ.ಟಿ ಕಂಪನಿಗಳಿಗೆ ಸೇರಬೇಕು. ಇಂದು ಐ.ಟಿ ಅಂದರೇ ಅಮೇರಿಕಾ, ಇದಕ್ಕೆ ನಮ್ಮ ಭಾರತೀಯರು ಬೇಕೆಬೇಕು. ಅದಕ್ಕೆ ಅದು ಕೆಲಸದ ವೀಸಾ ಕೊಟ್ಟು , ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಯೊಬ್ಬರಿಗೂ ವಿದೇಶದಲ್ಲಿ ಕೆಲಸ ಮಾಡುವ ಕನಸನ್ನು ನನಸು ಮಾಡಿಕೊಟ್ಟಿದೆ.

ಯಾರದರೂ ಐ.ಟಿ ಗೆ ಜಾಯನ್ ಆದರೂ ಎಂದರೇ ಮುಗಿಯಿತು. ಅವನು ಪಾಸಪೋರ್ಟ್ ರೇಡಿ ಮಾಡಿಕೊಳ್ಳಬೇಕು. ಅವನಿಗೆ ಗೊತ್ತಿಲ್ಲಾ  ಕಂಪನಿಯವರು ಯಾವಾಗ ಬೇಕಾದರೂ ಆಮೇರಿಕಾಕ್ಕೆ ಕಳಿಸಬಹುದು.

ಅದು ಸರ್ವೇಸಾಮಾನ್ಯ! ಹೋಗಿಲ್ಲ ಅಂದರೇ ಅವನಲ್ಲಿಯೇ ಏನೋ ಐಬೂ ಎಂಬಂತೆ ನಮ್ಮ ದೇಶದ ಜನ ನೋಡುತ್ತಾರೆ. ಐ.ಟಿ ಯಲ್ಲಿ ಇದ್ದುಕೊಂಡು ಒಮ್ಮೆಯೂ ಅಮೇರಿಕಾಕ್ಕೆ ಹೋಗಿಲ್ಲವಾ..!

ಥತ್ತ್ ....! ಅನ್ನುತ್ತಾರೆ.

ಹೀಗೆ ಅಮೇರಿಕಾ ಪ್ರತಿಯೊಬ್ಬರ ವಿಚಾರದಲ್ಲೊ ಒಂದೊಂದು ಹೊಸ ರೀತಿಯ ಬಣ್ಣದ ಕನಸನ್ನು ಕಟ್ಟಿರುತ್ತದೆ. ಅದೇ ಅವರ ಜೀವಮಾನದ ಒಂದು ಮಹಾನ್ ಸಾಧನೆ ಎನ್ನುವಂತಾಗಿದೆ.

ಇದು ನಮ್ಮ ಅನುಭವಕ್ಕೆ ಬರುವುದು. ಅಮೇರಿಕಾ ಎಂದು ಯಾರದರೂ ಬಾಯಿ ಬಿಟ್ಟರೂ... ಎಷ್ಟು ದೊಡ್ಡ ಮರ್ಯಾದೆ ನಮ್ಮ ಊರು ಮನೆಗಳಲ್ಲಿ,  ಅದೇ ಒಂದು ಸ್ಟೇಟಸ್!

ಪ್ರತಿಯೊಂದು ಅಮೇರಿಕಾ ಆಗಿರಬೇಕು ಅನ್ನುವ ಅಭಿಮಾನ! ತನ್ನನ್ನು ಮಾತ್ರ ಬಿಟ್ಟು!! ಯಾಕೆಂದರೇ ನಾ ಹುಟ್ಟಿರುವುದೇ ಇಲ್ಲಿ ಅದನ್ನು ಬದಲಾಯಿಸಲೂ ಸಾಧ್ಯವಿಲ್ಲವಲ್ಲ!

ಓ ದೇವಾ?

ಹೀಗೆ ಸಾವಿರಾರು ಮೈಲಿಯ ದೂರದ ದೇಶದಲ್ಲಿ ಬದುಕು ಕಟ್ಟಿಕೊಳ್ಳುವ ತವಕ. ಎಲ್ಲರನ್ನು, ಎಲ್ಲದನ್ನೂ ಬಿಟ್ಟು ಇಲ್ಲಿಯೇ ತನ್ನ ಕೊನೆಯನ್ನು ಕಾಣುವ ತವಕ ಅತಿ ಹೆಚ್ಚು ಮಂದಿಗಳದು.

ಅಲ್ಲಿ ಏನಿದೆ? ಭಾರತ ಅದು ಬಡ ದೇಶ. ಡಾಲರ್ ಸಮಕ್ಕೆ ರೂಪಾಯಿ ಬರಲು ಶತಮಾನಗಳೇ ಬೇಕು. ಇಲ್ಲಿಯ ರೋಡ್ ರೋಡ್ ಸಮ ಅಲ್ಲಿಯ ನ್ಯಾಷನಲ್ ಹೈವೆ ಬರಲು ಯಾವ ದಿನಮಾನ ಬೇಕು ಸ್ವಾಮಿ? ಇಲ್ಲಿಯ ಕಲ್ಚರ್ ಅಲ್ಲಿ ಬರಲು ಇಡೀ ಭಾರತವೇ ಒಮ್ಮೆ ವಾಶ್ ಔಟ್ ಆಗಬೇಕು ಎನ್ನುತ್ತಾರೆ.

ಇಲ್ಲಿ ಎಲ್ಲಾ ಎಷ್ಟು ನೀಟ್! ಏನ್ ರೂಲ್! ಏನ್ ರೋಡ್! ಜನಗಳ ಪಿತಿಪಿತಿ ಇಲ್ಲಾ ಏನೂ ಇಲ್ಲಾ. ಸ್ವರ್ಗ ಎನ್ನುವುದು ಯಾವುದಾದರೂ ಇದ್ದರೇ ಅದು ಅಮೇರಿಕಾ!!?

ಇಲ್ಲಿಯ ಹಳ್ಳಿಗಳೇ ನಮ್ಮ ಬೆಂಗಳೂರಿಗಿಂತ ಮೇಲಾಗಿವೆ. ನಮ್ಮ ದೇಶದಲ್ಲಿ ಇದು ಕಾಣಲು ಸಾಧ್ಯವಿಲ್ಲ.

ಸ್ಟುಪೀಡ್ ರಾಜಕೀಯ, ಕರಪಶ್ಯನ್, ಜನ ಸಂಖ್ಯೆ,ಬಡತನ.. ಇತ್ಯಾದಿ ಒಂದಾ ಎರಡಾ ಸಮಸ್ಯೆಗಳ ಸರಮಾಲೆ ಎಂದರೇ ಅದು ಇಂಡಿಯಾ.ಅಲ್ಲಿ ಇಲ್ಲಿಯ ಕನಸು ಕಾಣಲು ಯಾವ ದಿಕ್ಕಿಗೆ ಮಲಗಬೇಕು ದೇವಾ?

ನೋಡಿ ಇಲ್ಲಿ ಇಷ್ಟು ಪ್ರೀ..! ಎಲ್ಲೇಲ್ಲೂ ಪ್ರೀ! ಎಷ್ಟು ಆರಮಾಗಿ ಜೀವನ ಸಾಗಿಸಬಹುದು!

ನಮ್ಮ ಚಿಕ್ಕ ಮುದ್ದು ಮಕ್ಕಳ ಬಾಯಲ್ಲಿ ಬರುವ ಇಂಗ್ಲಿಷ್ ಆಸೆಂಟ್ ಅಷ್ಟು ಸಾಕು ಈ ಮಗುವಿನ ಭವಿಷ್ಯ ಬೊಂಬಟ್ ಆಗಲೂ.. ಎರಡನೆ ಮಗು ಇಲ್ಲಿಯೇ ಹುಟ್ಟಿದೆ...ಯು.ಎಸ್.ಎ ಸಿಟಿಜನ್ ಆರಮಾಗಿ ೧೬ ರ ನಂತರ ಸಿಕ್ಕೇ ಸಿಗುತ್ತೇ.

ಅದು ಪುನಃ ಭಾರತದ ನಕಾಶೆಯನ್ನು ನೆನಪು ಮಾಡಿಕೊಳ್ಳುವ ಜರೂರತು ಎಂದಿಗೂ ಇಲ್ಲ. ಓ ದೇವರೇ ಇಷ್ಟು ಕರುಣಿಸಿದ ನೀನೆ ಕರುಣಾಮಯಿ! ಎಂದು ಮನದಲ್ಲಿಯೇ ಡಾಲರ್ ಹುಂಡಿಯನ್ನು ತಿರುಪತಿಯ ತಿಮ್ಮಪ್ಪನಿಗೆ ಅರ್ಪಿಸಿಬಿಡುತ್ತಾರೆ.

ಅಲ್ಲಾ ಇಷ್ಟೊಂದು ಆಕರ್ಷಣೆಯ ಮೊಲ ಇರುವುದಾದರೂ ಎಲ್ಲಿ? ಯಾಕೆ ಎಲ್ಲರೂ ಭಾರತ ಎಂದರೇ ತಾತ್ಸರ ಮಾಡುವಂತೆ ಮಾಡಿರುವುದು. ಡಾಲರ್ರಾ.. ಇಲ್ಲಿಯ ಇಂಗ್ಲಿಷಾ, ಇಲ್ಲಿಯಾ ನೀಟ್ ರೂಲ್ಸಾ? ಗೊತ್ತಾಗುತ್ತಿಲ್ಲ! ಇಲ್ಲಿರುವುದು ನಮ್ಮ ದೇಶದಲ್ಲಿ ಇಲ್ಲವಲ್ಲಾ ಎಂದು ಮನದಲ್ಲಿಯೇ ಕೊರಗೂವವರು ಇದ್ದಾರೆ.

ಅಮೇರಿಕಾಕ್ಕೆ ಬರುವಂತೆ ಮಾಡಲು ಭಾರತ ಬೇಕು. ಅಮೇರಿಕಾಕ್ಕೆ ಬಂದ ಮೇಲೆ ಭಾರತ ಕೇವಲ ಪೇಸ್ ಬುಕ್, ವಾಟ್ಸಫ್ ಗಳಲ್ಲಿ ಲೈಕ್, ಕಾಮೆಂಟ್  ಮಾಡುವ ವಸ್ತುವಾಗಿಬಿಡುತ್ತದೆ.

ತಾನು ಅಮೇರಿಕಾದಲ್ಲಿ ಸುತ್ತುವ ಪ್ರತಿ ನಡೆಯು ವಜ್ರ ಬೆಲೆಯುಳ್ಳದ್ದಾಗಿರುತ್ತದೆ. ಅದು ಭಾರತದ ಯಾವೊಂದು ಹಿರಿಮೆಯ ಜಾಗಗಳಿಗೂ ಸಾಟಿಯಿಲ್ಲ ಅನಿಸುವುದು ಯಾಕೆ?

ಇದು ಮನಸ್ಸಿನ ವ್ಯಕ್ತಿಗತ ಸಮಸ್ಯೆಯಾ? ಅಥವಾ ಒಟ್ಟು ವ್ಯವಸ್ಥೆಯ ಸಮಸ್ಯೆಯ..? ಇಷ್ಟೊಂದು ಇಷ್ಟಪಡುವ ಮಟ್ಟಿಗೆ ಇಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರೂ ಸಂತೋಷದಿಂದ ನಿಜವಾಗಿಯೂ ಇದ್ದಾರಾ?

ಗೊತ್ತಾಗುವುದಿಲ್ಲ. ಯಾರು ಮನ ಬಿಚ್ಚಿ ಹೇಳಲಾರರು.

ಇದೆ ಸ್ಥಿತಿ ನಮ್ಮ ದೇಶದಲ್ಲಿರುವ ಪ್ರತಿಯೊಬ್ಬ ಹಳ್ಳಿಗ ಮತ್ತು ಪಟ್ಟಣದಲ್ಲಿ ವಾಸಿಸುವವನಾಗಿದೆ ಎಂದರೇ ಅತಿಶಯೋಕ್ತಿಯಲ್ಲ. ಹಳ್ಳಿಯಿಂದ ಪಟ್ಟಣ, ನಗರಳಿಗೆ ಬಂದ ಯಾರೊಬ್ಬರೂ ಏನೇ ಅಂದರೂ ಹಳ್ಳಿಗಳಿಗೆ ಪುನಃ ಮುಖ ಮಾಡುತ್ತಿಲ್ಲ. ಕಷ್ಟವೋ ಸುಖವೋ ಇಲ್ಲಿಯೇ ಬದುಕುವೆವು ಎಂದು ನಿರ್ಧರಿಸಿರುವಂತಿದೆ. ಇದೆ ಮನೋ ಸ್ಥಿತಿಯನ್ನು ಕಣ್ಣಿಗೆ ಕಾಣದ ದೂರದ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ನಮ್ಮ ನಮ್ಮ ಗೆಳೆಯರು, ನಮ್ಮ ದೇಶ ವಾಸಿಗಳದು ಆಗಿದ್ದರೇ ಅಚ್ಚರಿಯಿಲ್ಲ ಅಲ್ಲವಾ?

ಯಾಕೆ ಅಷ್ಟೊಂದು ಹೈಪ್, ಮಹತ್ವವನ್ನು ನಮ್ಮ ಜನ ನಮ್ಮಲಿಯೇ ತಿಳಿಯದೆ ಕೊಡುತ್ತಾರೋ ದೇವರೇ ಬಲ್ಲ!

ಹಳ್ಳಿಯವನಿಗಿಂತ ಪಟ್ಟಣದಲ್ಲಿದ್ದವನನ್ನು, ಹೊರದೇಶದಲ್ಲಿ ಇದ್ದವನನ್ನು ನಮ್ಮ ಜನ ತುಂಬ ವ್ಯತ್ಯಾಸದಿಂದ ಕಾಣುತ್ತಾರೆ. ಅದು ಯಾವುದಕ್ಕೆ ಹಾಗೆ ಬೇರೆಯಾಗಿ ನೋಡುತ್ತಾರೋ ಅವರೆ ಯೋಚಿಸಬೇಕು.

ಹೊಸ ಜಾಗದಲ್ಲಿ ಹೊಸತನದಿಂದ ಹೊಸ ವಿಚಾರಗಳನ್ನು ತಿಳಿದಿರುವನು ಎಂದು ಬೆರಗಾಗಿ ಕಂಡರೇ ಅದು ಉತ್ತಮ ಲಕ್ಷಣ. ಅದು ಬಿಟ್ಟು ಬೇರೆಯಾಗಿ ಇನ್ನೂ ಏನೇ ಅದರೂ ವಿಪರ್ಯಾಸವೇ ಸರಿ!

ಇಲ್ಲಿ ಮಣ್ಣು ಹೊರಿದರೂ, ಅಲ್ಲಿ ಮಣ್ಣು ಹೊರಿದರೂ ಏನೂ ವ್ಯತ್ಯಾಸವಿಲ್ಲ. ಅಲ್ಲಿಯ ಲೈಫ್ ಸ್ಟೈಲ್ ಗೆ ತಕ್ಕನಾಗಿ ಅಲ್ಲಿ ಕೆಲಸ, ಸಂಬಳ, ವಿಚಾರ ಎಲ್ಲಾವು ಇರುತ್ತವೆ. ಅದಕ್ಕೆ ಹೆಚ್ಚು ವಿಶೇಷವನ್ನು ಕೊಡುವ ವಿಶೇಷತೆಯೆನಿಲ್ಲ.

ಮನುಷ್ಯ ಹೇಗೆ ಬುದ್ದಿವಂತಿಕೆಯಿಂದ ಅವನ ಒಟ್ಟಾರೆ ಜೀವನವನ್ನು ಸಂತೋಷದಿಂದ ಇಟ್ಟುಕೊಂಡಿದ್ದಾನೇ ಎಂಬುದೇ ಮುಖ್ಯ. ಅವನ ಒಟ್ಟಾರೆ ಜೀವನ ಅವನ ವೈಕ್ತಿಕ ಮತ್ತು ಅವನ ಕುಟುಂಬದ ಆರೋಗ್ಯವಂತಿಕೆಗೆ ದ್ಯೋತಕವಾಗಿರುತ್ತದೆ. ಅದು ಒಟ್ಟಾರೆಯ ವ್ಯವಸ್ಥೆಯ ಮತ್ತು ಆರೋಗ್ಯವಂತ ಸಮಾಜದ ಗುಟ್ಟಾಗಿರುತ್ತದೆ. ಅದು ಪ್ರತಿಯೊಬ್ಬರಲ್ಲೂ ಚಿಮ್ಮುವಂತಿರಬೇಕು.

ಅದು ಬಿಟ್ಟು ವ್ಯಕ್ತಿ ಮತ್ತು ಸಮಾಜದ ನಡುವೆ ಕಂದಕದಂತಿರಬಾರದು. ಎಲ್ಲಾ ಸ್ತರದ ಎಲ್ಲಾ ಜೀವನಾಡಿಗಳು ಸಮರ್ಪಕವಾಗಿ ಕಾರ್ಯ ನಡೆಸಿದರೇ ದೇಹ ಆರೋಗ್ಯವಾಗಿರುವುದು, ಹಾಗೆಯೇ ವ್ಯವಸ್ತೆಯು ಆರೋಗ್ಯವಾಗಿರುವುದು.

ಇಲ್ಲಿ ಯಾವುದು ದೊಡ್ಡದು ಚಿಕ್ಕದು ಇಲ್ಲ. ದೊಡ್ಡದಾಗಿದೆ ಎಂದರೇ ಅದಕ್ಕೆ ಹಲವು ದಿನಗಳ ದುಡಿಮೆಯೆ ಕಾರಣವಾಗಿರುತ್ತದೆ. ಅದು ಸಮಾಜ, ಜನಗಳ ಕೈಯಲ್ಲಿಯೇ ಇರುತ್ತದೆ. ನಮ್ಮ ಜನ, ನಮ್ಮ ಜಾಗ ನಾವು ಪ್ರೀತಿಸದೇ ಇನ್ನು ಯಾರು ಪ್ರೀತಿಸಬೇಕು? ನಮ್ಮಮ್ಮ ಬಡವಳು ಎಂದು ನಾವು ದೂರ ಇಡುವುವೇ?

ಅದು ಬಿಟ್ಟು ಇರುವುದ ಬಿಟ್ಟು ಇಲ್ಲದ ಕಡೆ ಚಿಂತಿಸುವಂತಾಗುತ್ತದೆ.

ಕಣ್ ಕಣ್ ಬಿಟ್ಟು ಅಮೇರಿಕಾ ಅಮೇರಿಕಾ ಎಂದು ಜಪಿಸುವುದನ್ನು ನಮ್ಮ ಬುದ್ಧಿವಂತ ಜನ ಕೈ ಬಿಡಬೇಕು. ಏನೇ ಆದರೂ ಹೆತ್ತ ಊರು ಯಾವುದೇ ಸ್ವರ್ಗಕ್ಕೊ ಎಂದು ಸಮನಾಗಲಾರದು.

ನಮ್ಮೊರೇ ನಮಗೆ ಶಾಶ್ವತ!

ಶುಕ್ರವಾರ, ಏಪ್ರಿಲ್ 24, 2015

ಮನುಷ್ಯನ ಮನಸ್ಸೇ ಹೀಗೆ

ಪ್ರೀತಿಸುವುದು, ಸಂಬಳಿಸುವುದು, ಜೊತೆ ಇರುವುದು. ಎಲ್ಲಾ ಮನಸ್ಸಿಗೆ ಸಂಬಂಧಿಸಿದ್ದಾ ಅಥವಾ ಅದು ಒಂದು ಕೆಲಸವಾ. ಅದು ಹೇಗೆ ನಮ್ಮ ಮನಸ್ಸು ಆ ಕ್ಷಣಕ್ಕೆ ತಕ್ಕ ಹಾಗೆ ನಡೆದುಕೊಳ್ಳುವುದು. ಹತ್ತಿರವಿದ್ದಾಗ ನೀನೇ ನನ್ನ ಜೀವ ಅನ್ನುವುದು. ನೀನೇ ನನ್ನವನು, ನನ್ನವಳು ಎನ್ನುವುದು. ಅತಿ ಉತ್ತಮರು ನಾನು ನೀನು ಎಂದು ಪುನಃ ಪುನಃ ಜೊತೆ ಇರುವವರೊಂದಿಗೆ ಗೊತ್ತೂ ಮಾಡಿಕೊಳ್ಳುವುದು. ಇದು ಯಾಕೆ ಎನಿಸುತ್ತದೆ.

ಸಂಬಂಧಗಳು ಮನುಷ್ಯನಿಗೆ ಬೇಕ ಬೇಡವಾ? ಹಾಗೆಂದು ಕೇಳಿದರೇ ಪುನಃ ಸಮಾಜ ಸೈನ್ಸ್ ಎಂದು ಅಲ್ಲಿಂದ ಅದೇ ಪಠ್ಯಗಳ ಸಾಲುಗಳನ್ನು ಉದ್ಗರಿಸುತ್ತೇವೆ. ಮಾನವ ಸಂಘ ಜೀವಿ. ಒಂಟಿಯಾಗಿ ಬಾಳಲಾರ ಅನ್ನುತ್ತೇವೆ.

ಅದಕ್ಕೆ ಸಂಸಾರ, ಸಂಬಂಧಗಳು, ನೆರೆ ಹೊರೆ, ಸ್ನೇಹಿತರು, ಇಷ್ಟರು ಇತ್ಯಾದಿಯಾಗಿ ತನ್ನದೇ ಒಂದು ಗ್ರೂಪ್ ಮಾಡಿಕೊಂಡುಬಿಡುತ್ತಾನೆ. ಇದು ಮನುಷ್ಯನ ದೌರ್ಬಲ್ಯವೋ ವರವೋ ಒಂದು ಗೊತ್ತಾಗುವುದಿಲ್ಲ. ಮನಸ್ಸಿಗೆ ಇದು ಬೇಕು ಬೇಡ ಎನ್ನುವುದು ಅದು ಒಂದು ಕ್ಷಣ ಮಾತ್ರ. ಪುನಃ ಈ ಜನಜಂಗುಳಿಯೇ ಬೇಜಾರಾಗುವುದು, ಸಂತೆಯಾಗುವುದು. ನಾನೇ ನಾನು ಒಂಟಿಯಾಗಿ ಒಂದು ಕ್ಷಣ ಕಳೆಯಬೇಕು ಅನಿಸುತ್ತದೆ. ಅತಿ ಪ್ರೀತಿಪಾತ್ರರರನ್ನು ದೂರಮಾಡಿ ನಾನು ನಾನೇ ಇರಬೇಕು. ಅದು ನಾನೇ ಆಗಿರಬೇಕು ಅನಿಸುವುದು ಯಾವ ರೀತಿ ಅನಿಸುತ್ತದೆ.

ಮನುಷ್ಯನ ಮನಸ್ಸೇ ಹೀಗೆ ಅನಿಸುತ್ತದೆ. ಅದು ಪಕ್ಕ ಕೋತಿಯೇ ಸರಿ. ಈ ಮರದಿಂದ ಆ ಮರಕ್ಕೆ ಯಾವಾಗಲೂ ಜಿಗಿಯುವ ಮಂಗನಂತೆ. ಎಲ್ಲಿಯು ನೆಮ್ಮದಿಯ ಉಸಿರಾಡುವುದಿಲ್ಲ. ಇರುವುದ ಬಿಟ್ಟು ಇಲ್ಲದ ಕಡೆಗೆ ಮನಸ್ಸು. ಹೌದು! ಅದೇ ಜೀವನ ಅನಿಸುತ್ತದೆ. ಅದೇ ಮನುಷ್ಯ ಹಸಿರಾಗಿರುವನು.ಅದೇ ಅವನ ಏಳ್ಗೆಯ ಗುರುತು. ಅದೇ ಅಲ್ಲಿಯೇ ಬಿದ್ದು ಒದ್ದಾಡುವುದು ಅಸಾಧ್ಯವಾದದ್ದು ಅಲ್ಲ. ನಿಂತ ನೀರು ಕೊಳತು ನಾರುವುದು. ಇರಬಹುದು!

ಅದು ಹೇಗೆ ಮನುಷ್ಯನ ಮನಸ್ಸು ಆ ಆ ಸಮಯಕ್ಕೆ ತಕ್ಕ ಹಾಗೆಯೇ, ಎಂಥ ಹೃದಯ ಹತ್ತಿರವಾದವರನ್ನು, ತನ್ನ ತನು ಮನವನ್ನು ಅರ್ಪಿಸಿದವರನ್ನು ಆ ಕ್ಷಣ ಮರೆತು ಮರೆಯಾಗಿ ತನ್ನ ಕ್ಷಣಿಕ ಸುಖ, ಸಂತೋಷವನ್ನೇ ಮುಖ್ಯ ಮಾಡಿಕೊಳ್ಳುತ್ತಾನೇ? ದೇವರೇ ಬಲ್ಲ.

ಪಾಪ ಪುಣ್ಯ ಎಂಬುದು ಪುಸ್ತಕದ ಬದನೇ ಕಾಯಿ ಅನ್ನುತ್ತಾನೆ. ಮುಂದುವರಿದ ಬುದ್ಧಿವಂತ ಮನುಷ್ಯ. ಯಾರು ಅತಿ ಒಳ್ಳೆಯವರಲ್ಲ! ಅತಿ ಒಳ್ಳೆಯವನಾಗಿರುವುದು ಇಂದಿನ ಜಗತ್ತಿಗೆ ಸೂಟ್ ಅಲ್ಲ. ಸ್ವಲ್ಪ ಕೆಟ್ಟವರಾಗಿರುವುದು. ಸ್ವಲ್ಪ ಅಪ್ರಮಾಣಿಕರಾಗಿರುವುದು. ಸ್ವಲ್ಪ ಸುಳ್ಳು ಹೇಳುವುದು ಏನೂ ಪಾಪವಲ್ಲ! ಎಂದು ನಮ್ಮ ನಮ್ಮಲ್ಲಿಯೇ ಒಂದು ರಹದಾರಿಯ ಸಣ್ಣ ಕಿಂಡಿಯನ್ನು ತೆರೆದುಕೊಂಡು ಅದರಲ್ಲಿಯೇ ನೆಮ್ಮದಿಯನ್ನು ಕಾಣುತ್ತೇವೆ.

ಅತಿಯಾಗಿ ಪ್ರೀತಿಸುವುದು, ಅತಿಯಾಗಿ ಯಾರನ್ನು ಹಚ್ಚಿಕೊಳ್ಳುವುದು, ಅತಿಯಾಗಿ ಒಳ್ಳೆಯವರಾಗಿರುವುದು ಒಳ್ಳೆ ಮನುಷ್ಯನ ರೂಪವಲ್ಲ ಎಂದು ಪುನಃ ಪುನಃ ಮನನ ಮಾಡಿಕೊಳ್ಳುವುದು ಯಾವುದರ ದ್ಯೋತಕ ಅನಿಸುತ್ತದೆ.

ಯಾಕೆ ಯಾರು ತಮ್ಮ ಮನಸಾಕ್ಷಿಗೆ ತಕ್ಕನಾಗಿ ನಡೆದುಕೊಳ್ಳುವುದಿಲ್ಲ. ಒಂದು ಸ್ಪರ್ಷಕ್ಕೂ ಒಂದು ಅರ್ಥವಿರುವಂತೆ. ಆ ಸ್ಪರ್ಷ ಈ ಸ್ವರ್ಷ ಎಂಬುವುದಕ್ಕೆ ವ್ಯತ್ಯಾಸವೇ ಇಲ್ಲವೇ ಅಂದುಕೊಳ್ಳುವರಾ? ಮನ ಮೆಚ್ಚಿದವಳನ್ನು/ನನ್ನು ಅದು ಹೇಗೆ ದೂರ ಮಾಡುವರು.

ತನ್ನವರು ತನ್ನನ್ನೇ ಜೀವ ಅಂದುಕೊಂಡುವವರನ್ನು ಆ ಕ್ಷಣಕ್ಕೆ ಅದು ಹೇಗೆ ಮರೆಯುವವರು? ಯಾರು ಯಾರ ಮುಂದೆಯು ಕೆಟ್ಟವನಾಗಿ ಬಿಂಬಿಸಿಕೊಳ್ಳಲು ಇಚ್ಚಿಸುವುದಿಲ್ಲ. ಎಂಥ ದುಷ್ಟನಾದರೂ ಆ ಕ್ಷಣಕ್ಕೆ ತನ್ನ ಇಷ್ಟಪಡುವವರ ಮುಂದೆ ಕರುಣಮಯಿಯಾಗಿಯೇ ಇರಲು ಪ್ರಯತ್ನಿಸುತ್ತಾನೆ. ಯಾಕೆಂದರೇ ಅವನು ಆ ಕ್ಷಣಕ್ಕೆ ಅವರಿಗೆ ಆ ರೀತಿಯಲ್ಲಿ ಒಂದು ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸಲು ಪ್ರೇರಪಿಯಾಗಿರುತ್ತಾನೆ.

ಅದರೇ ತಾನು ತನ್ನ ಮನದಲ್ಲಿಯೇ ಹುದುಗಿರುವ ಇನ್ನೊಂದು ಮುಖವನ್ನು ಮುಖವಾಡವನ್ನು ತನ್ನವರ್ಯಾರು ಜೊತೆಯಲ್ಲಿರದ ಸಮಯದಲ್ಲಿ, ತನ್ನವರಲ್ಲದವರೊಂದಿಗೆ ಅತಿ ಕೆಟ್ಟವನಾಗಿ ನಡೆದುಕೊಳ್ಳುವಂತಾಗುವುದು ಹೇಗೋ ಗೊತ್ತಾಗುವುದಿಲ್ಲ. ಮನುಷ್ಯ ಮನುಷ್ಯನಾಗಿರುವುದು ಅಷ್ಟು ಸುಲಭವಲ್ಲ ಅನಿಸುತ್ತದೆ. ಅತಿ ಕೆಟ್ಟವನಾಗುವುದು ಈ ಮನುಷ್ಯ ಜೀವಿಯೇ.ತನ್ನ ಬುದ್ಧಿಗೆ ತಿಳಿದಂತೆ ಏನಾದರೂ ಮಾಡುವವನು. ಹಾಗೆಯೇ ತಾನು ಬದುಕುವನು! ಅದು ಒಂದು ಮುಖವಾಡವೇ ಅನಿಸುತ್ತದೆ.

ನಿಜವಾದ ಮುಖ ಯಾರೊಬ್ಬರಿಗೂ ತಿಳಿಯುವುದಿಲ್ಲ. ತೆರೆದ ಪುಸ್ತಕದಂತ ಸರಳ ಜೀವನ ಸಾಮಾನ್ಯ ಮನುಷ್ಯನಿಗೆ ಅಸಾಧ್ಯ ಅನಿಸುತ್ತದೆ. ತನ್ನನ್ನು ತಾನು ಮೀರಿ ಬೆಳೆಯಲಾರ ಅನಿಸುತ್ತದೆ. ತನ್ನ ವಿಷಾಯಾಸಕ್ತಿಗಳೆ ತನ್ನ ಎಲ್ಲೆಯನ್ನು ಮೀರುತ್ತದೆ. ತಾನು ಒಂಟಿಯಾಗಿದ್ದಾಗ, ತನ್ನವರು, ಪರಿಚಯದವರೂ ಯಾರು ಇಲ್ಲದಿದ್ದಾಗ ಹೇಗೆ ನಡೆದುಕೊಳ್ಳುತ್ತಾನೆ ಎಂಬುದು ಅವನು ಹೇಗೆ ಅಂಥ ತಿಳಿಯಬಹುದು.. ಯಾರು ಕೇಳುವವರಿಲ್ಲಾ ಅಂದರೇ ಮುಗಿಯಿತು ಅಂಥ ನಮಗೆ ನಾವೇ ರೂಢಿಯಾಗಿ ಹೇಳುತ್ತಿರುತ್ತೇವೆ. ಅದು ನಿಜವಾ?

ಮೋಸ ಅನ್ನುವುದು ಮನುಷ್ಯರಿಗೆ ಮಾತ್ರ ಅನಿಸುತ್ತದೆ. ಬೇರೆ ಯಾವ ಜೀವಿಯು ಎಂದು ಮೋಸ ಮಾಡುವುದಿಲ್ಲ. ಬೇರೆಯವರಿಗೆ ಮಾಡುವ ಮೋಸ, ಬೇರೆಯವರು ನಮಗೆ ಮಾಡುವ ಮೋಸಕ್ಕಿಂತ, ತಾನು ತನಗೆ ಮಾಡಿಕೊಳ್ಳುವ ಮೋಸವೇ ದೊಡ್ಡದು ಅನಿಸುತ್ತದೆ. ಅದನ್ನು ಯಾರು ಕೇಳುವವರು ಇರುವುದಿಲ್ಲ. ಕೊನೆ ಕೊನೆಗೂ ಒಂದು ಪಶ್ಚಾತಾಪವು ಸಹ ಇರುವುದಿಲ್ಲ. ಯಾಕೆಂದರೇ ಅದನ್ನು ಯಾರಿಗೂ ಗೊತ್ತಾಗದಂತೆ ಮಾಡಿರುತ್ತಾನೆ.

ಹಾಗೆಯೇ ಯಾರದರೂ ಅದನ್ನು ತಿಳಿದುಕೊಂಡರೇ ಇಲ್ಲಾ ಅದು ಒಂದು ಅನುಭವ, ಎಲ್ಲಾದನ್ನೂ ನೋಡಬೇಕು, ಮಾಡಬೇಕು ಅಷ್ಟೇ ಅದಕ್ಕಾಗಿ ಮಾಡಿದೆ ಎಂದು ಸಮರ್ಥಿಸಿಕೊಳ್ಳುತ್ತಾನೆ. ಅದರೇ ತನ್ನವರಿಗೆ ತನ್ನ ಮನಸ್ಸಾಕ್ಷಿಗೆ ಅದು ತಪ್ಪು ಎಂದು ಗೊತ್ತಿದ್ದರೂ ಯಾಕಾದರೂ ಮಾಡುವವ ಈ ಬುದ್ಧಿವಂತ ಮಾನವ? ತಿಳಿಯದಾಗಿದೆ. ಹೀಗೆ ಇರುವುದೇ ಪ್ರಕೃತಿ ಸಹಜವೋ ಅಸಹಜವು ಗೊತ್ತಾಗುವುದಿಲ್ಲ!

ಚಿನ್ನಾ ರನ್ನಾ ಎನ್ನುವ ಬಾಯಿಯೇ ಬಾಯಿಗೆ ಬಂದಾಗೇ ಬಯ್ಯುವುದು. ಅದೇ ಸವಿಯ ಸ್ಪರ್ಷವೇ ಮುಳ್ಳೂ ಸುಚ್ಚಿದಾಂತಾಡುವುದು. ಮುಂಚೆ ಮುಖ ನೋಡುತ್ತಿದ್ದರೇ ಹೊತ್ತೇ ಹೋಗುವುದು ಗೊತ್ತಾಗುವುದಿಲ್ಲ ಎಂದೇಳುವ ಕಣ್ಣೆ ಯಾಕಾದರೂ ನಿನ್ನ ನೋಡಲಿ ಎಂದು ಸಿಂಡರಿಸುವುದು ಯಾಕೇ?

ಅದಕ್ಕೆ ಇರಬೇಕು ಹಿರಿಯವರು ಹೇಳಿರುವುದು. ಈ ಮನುಷ್ಯ ಎಂಬ ಪ್ರಾಣಿಯ ಖಯಾಲಿಗಳು ಹೀಗೆಯೇ ಅದಕ್ಕೆ ಹೊಂದಿಕೊಂಡು ಹೋಗಬೇಕು. ಇಂದು ಹೀಗೆ ಇರುವುದು ಮುಂದೆ ಹಾಗೆ ಇರುವುದು ಊಟಕ್ಕೆ ಉಪ್ಪಿನ ಕಾಯಿಯಂತೆ ಎನ್ನುತ್ತಿದ್ದದ್ದು. ಗಂಡ ಹೆಂಡತಿಯ ಜಗಳ ಉಂಡು ಮಲಗುವವರೆಗೆ ಎಂದು ಒಂದೇ ಒಂದು ಗಾದೆಯಲ್ಲಿ ನಮ್ಮ ನಿಮ್ಮ ಎಲ್ಲಾ ದೌರ್ಬಲ್ಯಗಳನ್ನು ನಗಣ್ಯ ಮಾಡಿಬಿಟ್ಟರು.

ಅದರೂ ಮನಸ್ಸು ಎಂಬುದು ಇಷ್ಟು ಬೇಗ ಬಣ್ಣವಾಗಿ ಬದಲಾಗುವುದು. ಭಾವನೆಗಳು ಮುಖ್ಯವಲ್ಲವೇ? ಪ್ರತಿ ಜೀವಿಗೂ ಅವರದೇಯಾದ ವ್ಯಕ್ತಿತ್ವವಿರುತ್ತದೆ. ಅದಕ್ಕೆ ಬೆಲೆಯನ್ನು ಪ್ರತಿಯೊಬ್ಬರೂ ಕೊಡಬೇಕು. ಆಗಲೇ ಎಲ್ಲರೂ ಎಲ್ಲರನ್ನೂ ಗೌರವದಿಂದ ಕಾಣುವಂತಾಗುತ್ತದೆ. ಜೀವಕ್ಕೆ ಜೀವವೇ ಬೆಲೆಕೊಡಬೇಕು. ಜೀವ ಬೇಡುವುದು ಭಾವನೆಗಳ ಕಾಣಿಕೆಯನ್ನು ಮತ್ತೆನಲ್ಲಾ!



ಶನಿವಾರ, ಮಾರ್ಚ್ 21, 2015

ಚಿನ್ನಾ ಎಂದು ವಾಟ್ಸಪ್ ನಲ್ಲಿ

ಇಂದು ಯುಗಾದಿ ನಮ್ಮ ನಾಡಿಗೆ ಹೊಸ ವರುಷದ ಪ್ರಾರಂಭದ ದಿನ. ಮನ್ಮಥ ನಾಮ ಸಂವತ್ಸರ ಶುರುವಾಗುವ ದಿನ. ಅದು ಎಷ್ಟೊಂದು ಸಂಭ್ರಮ ಎಲ್ಲೆಲ್ಲೂ. ಪ್ರತಿಯೊಬ್ಬರೂ ಹೊಸ ಹೊಸ ಬಟ್ಟೆಯನ್ನು ತೊಟ್ಟುಕೊಂಡು ಅದು ಹೇಗೆ ಖುಷಿಪಡುತ್ತಿದ್ದಾರೆ. ಒಳಗೆಲ್ಲೋ ಅಮ್ಮ ನಮಗಾಗಿ ಹೊಸ ಸಿಹಿ ಅಡುಗೆಯನ್ನು ಮಾಡುತ್ತಿದ್ದಾಳೆ.

ಇದೆ ದಿನ ಅನಿಸುತ್ತದೆ. ನಾನು ಅವನನ್ನು ನೋಡಿದ್ದು. ಇದೆ ಒಂದು ವರುಷದ ಹಿಂದೆ ನಾನು ಅವನು ಮೂರು ಹೆಜ್ಜೆ ಹಾಕಿ ನಮ್ಮ ನಮ್ಮ ಮನಸ್ಸಿನಲ್ಲಿ ನಾವಿಬ್ಬರೂ ಸಂಗಾತಿಗಳು ಎಂದುಕೊಂಡಿದ್ದು. ನನಗೆ ಮೊದಲಿನಿಂದಲೂ ಹೀಗೆ. ಇಷ್ಟಪಟ್ಟವರನ್ನು ಪಟ್ ಅಂಥ ಒಪ್ಪಿಕೊಂಡುಬಿಡಬೇಕು.ಇಷ್ಟಪಟ್ಟಿದ್ದನ್ನು ಏನೆಂದರೂ ಬಿಡಬಾರದು ಎಂಬುದು ನನ್ನ ಮನದಾಳದ ನಂಬಿಕೆ.

ಅದು ಹೇಗೆ ಇವನು ನನಗೆ ಇಷ್ಟವಾದನೋ ಗೊತ್ತಿಲ್ಲ. ಅವನಿಲ್ಲದ ಈ ವರುಷದ ಯುಗಾದಿ ಖಾಲಿ ಖಾಲಿ ಅನಿಸುತ್ತಿದೆ.

ನಾನು ಎಷ್ಟು ಕೇಳಿಕೊಂಡೇ.. ಬೇಡ ಕಣೋ ಹೋಗಬೇಡ ನನ್ನ ಬಿಟ್ಟು.. ನನಗೆ ನೀ ಇಲ್ಲದ ಒಂದು ಕ್ಷಣವನ್ನು ಯುಗವಾಗಿ ಕಳೆಯಬೇಕು.. ನಾನು ಟ್ರೈ ಮಾಡುತ್ತಿನಿ. ಮುಂದಿನ ವರುಷ ನಿಜವಾಗಿಯೋ ಕಷ್ಟಪಟ್ಟು ಓದಿ ಜಿ.ಆರ್.ಈ ಯನ್ನು ಕ್ಲೀಯರ್ ಮಾಡುತ್ತಿನಿ ಎಂದು ಪರಿಪರಿಯಾಗಿ ಕೇಳಿಕೊಂಡರೂ ಕಿವಿಯ ಮೇಲೆ ಹಾಕಿಕೊಳ್ಳದೇ ಮೂರು ತಿಂಗಳ ಹಿಂದೆ ಹಾರಿಬಿಟ್ಟ.

ಈ ಹುಡುಗರೇ ಇಷ್ಟು ಪ್ರೀತಿ ಮಾಡುತ್ತಿರುವಾಗ ಇಲ್ಲದ ಜವಾಬ್ದಾರಿ ಹುಡುಗಿ ಸಿಕ್ಕಿದ ಮೇಲೆ ನೆನಪಾಗುತ್ತದೆ.

ಹುಡುಗಿ ನನ್ನವಳೆ ಬಿಡು ಎಂಬ ಕೊಬ್ಬು ಅನಿಸುತ್ತದೆ.

ನಾವುಗಳು ಒಮ್ಮೆ ಕೊಟ್ಟ ಒಬ್ಬರಿಗೆ ಕೊಟ್ಟದ್ದನ್ನು ಜೀವ ಇರುವವರೆಗೂ ಕಾಪಾಡಿಕೊಳ್ಳುತ್ತೇವೆ ಎಂಬ ನಂಬಿಕೆ ಈ ತರಲೆ ಹುಡುಗು ಬುದ್ಧಿಗಳಿಗೆ ಅದು ಹೇಗೋ ಗೊತ್ತಾಗಿಬಿಟ್ಟಿರುತ್ತದೆ ಅನಿಸುತ್ತದೆ.

ಹುಡುಗಿ ಸಿಗುವವರೆಗೂ ನಮ್ಮ ಹಿಂದೆ ಮುಂದೆ ಸುತ್ತಾಡುತ್ತವೆ. ನಾವು ನಿನ್ನವಳೆ ಎಂದು ಅಂದಕ್ಷಣಕ್ಕೆ, ಅದು ಎಲ್ಲಿಯ ವೈರಗ್ಯಾ ವಕ್ಕರಿಸುತ್ತೋ.. ನಮ್ಮನ್ನೂ ಕೊಂಚ ಕೊಂಚ ಅವಾಯ್ಡ ಮಾಡಿಕೊಳ್ಳಲು ಪ್ರಾರಂಭಿಸುತ್ತವೆ. ಅವಾಯ್ಡ್ ಅಂಥ ಏನಿಲ್ಲಾ. ನನ್ನ ಹುಡುಗ ಹೇಳುವುದು ನಿಜವೇ. ನಿತ್ಯ ನನ್ನ ಮುಖ ಅವನು ಅವನ ಮುಖ ನಾನು ನೋಡಿಕೊಳ್ಳುತ್ತಾ ಕೂತರೆ ನಾವು ಬೆಳೆಯುವುದು ಹೇಗೆ. ಕನಸಿನ ನಮ್ಮ ಸಂಸಾರ ಕಟ್ಟುವುದು ಯಾವಾಗಾ?

ಅದು ನಿಜ ಒಪ್ಪಿಕೊಂಡೇ ಗೆಳೆಯ!

ಆದರೇ ನನಗಂತೂ ಒಂದು ಮನಸ್ಸಿಲ್ಲಾ. ಪ್ರಪಂಚದಲ್ಲಿ ಪ್ರತಿಯೂಬ್ಬರೂ ಏನಾದರೂ ಸಾಧಿಸಬೇಕು ಎಂಬ ಮನಸ್ಸಿನ ದುಡಿತವಿರುವಂತೆ ನನ್ನ ಈ ಹೃದಯವಂತನಿಗೆ ಸ್ವಲ್ಪ ಜಾಸ್ತಿಯೇ ಇದೆ. ಅದಕ್ಕೆ ಎರಡು ವರುಷ ಅದು ಹೀಗೆ ಹೋಗಿ ಹಾಗೆ ಬರುತ್ತದೆ ಚಿನ್ನಾ ಎಂದು ವಾಟ್ಸಪ್ ನಲ್ಲಿ ನಿತ್ಯ ಹೇಳುತ್ತಾನೆ.

ಅದು ಹೇಗೆ ಹುಡುಗರಿಗೆ ಹುಡುಗಿಯರ ನಿತ್ಯ ಕಾಳಜಿ ಕಳವಳ ಅರ್ಥವಾಗುತ್ತದೆ? ಒಂದು ಕ್ಷಣ ಅವನ ನೆನಪು ಮಾಡಿಕೊಳ್ಳದಿದ್ದರೇ ನಾನು ನಾಗಿರುವುದಿಲ್ಲ.

ಅವನ ನೆನಪೇ ನಾನು.

ಹುಡುಗಿಯರ ಈ ಒಂದು ಪ್ರೀತಿಯ ಶಕ್ತಿಯೇ ಹುಡುಗರಿಗೆ ಸ್ವಲ್ಪ ಧಿಮಾಕು ಕೊಟ್ಟಿರುತ್ತದೆ ಅನಿಸುತ್ತದೆ.

ನಾನು ಮುಂದಿನ ವರುಷದೊಳಗೆ ಅವನನ್ನು ಸೇರಿಕೊಂಡುಬಿಟ್ಟರೆ ಚೆನ್ನಾಗಿರುತ್ತದೆ ಎಂದು ಕಷ್ಟಪಟ್ಟು ಓದಲು ಮನಸ್ಸು ಬರುತ್ತಿಲ್ಲ. ಪುಸ್ತಕ ಇಡುದುಕೊಂಡರೇ ಅವನಲ್ಲಿಗೆ ನನ್ನ ಮನ ಜಾರುತ್ತದೆ. ಓ ದೇವರೇ ಇದು ಯಾಕೆ. ಯಾಕಿಷ್ಟು ಅವನನ್ನು ನಾನು ಪ್ರೀತಿಸುತ್ತೇನೆ? ಅವನು ಸಹ ನನ್ನನ್ನು ಇಷ್ಟೇ ಪ್ರೀತಿಸುತ್ತಾನಾ?

ನಿಜವಾಗಿಯೂ ಅವನು ನನ್ನಷ್ಟು ಪ್ರೀತಿಸಲು ಸಾಧ್ಯವಿಲ್ಲ. ಅದು ಹೇಗೆ ಯು.ಎಸ್.ಎ ನಲ್ಲಿ ಓದಲು ಅವಕಾಶ ಸಿಕ್ಕಿತು ಎಂದು ಕುಣಿದಾಡಿದ.. ಆ ಕ್ಷಣ ನನ್ನನ್ನೇ ಮರೆತವನಂತೆ ಅದು ಇದು ಎಂದು ಎಷ್ಟು ಬೇಗ ಎಲ್ಲಾ ಏರ್ಪಾಡು ಮಾಡಿಕೊಂಡು ಹಾರಲು ಸಜ್ಜಾದ ನೆನಸಿಕೊಂಡರೆ ಮೈಯೆಲ್ಲಾ ಊರಿಯುತ್ತದೆ. ಇವನೇನ್ನಾ ನಾನು ಪ್ರೀತಿಸಿದ್ದು ಎಂದು ಅವಮಾನವಾಗಿದ್ದು ಅಂದು..

ಅದು ಏನೂ ಹುಡುಗರೋ ಪರದೇಶದ ವ್ಯಾಮೋವನ್ನು ಇಷ್ಟೊಂದು ಬೆಳೆಸಿಕೊಂಡುಬಿಟ್ಟಿದ್ದಾವೆ.

ನಾ ಹೇಳಿದೆ. ಯಾಕೆ ಹೋಗುವೇ ಇಲ್ಲಿಯೇ ಓದಿ ಯಾವುದಾದರೂ ಕೆಲಸ ಹಿಡಿ. ಅಷ್ಟೊತ್ತಿಗೆ ನನ್ನ ಓದು ಮುಗಿದು ನಾನು ಒಂದು ಕಾಲೇಜಿನಲ್ಲಿ ಲೇಕ್ಚರ್ ಆಗುವೆ. ಇಬ್ಬರೂ ದುಡಿದರೂ ಸಾಕು. ಯಾಗೋ ಸಂಸಾರ ಸಾಗುತ್ತದೆ. ತಲೆಹರಟೆ ನನ್ನ ಮಾತು ಏನೂ ಕೇಳಲಿಲ್ಲ..ಹೊರಟೆ ಹೋಗಿಬಿಟ್ಟ.

ಅವನು ಹೋಗುವವರೆಗೂ ಅದು ಎಷ್ಟು ಮಾತನ್ನಾಡುತ್ತಿದ್ದೇವು. ದಿನ ರಾತ್ರಿ ಎನ್ನದೇ. ಈಗ ಒಂದು ಗಂಟೆ ಮಾತನ್ನಾಡಲು ಸಾಧ್ಯವಿಲ್ಲ. ನಾನು ಮಲಗುವ ವೇಳೆಗೆ ಅವನಿಗೆ ಕಾಲೇಜಿಗೆ ಹೋಗಲು ಸಮಯವಾಗಿರುತ್ತದೆ. ನಾನು ಏದ್ದೇಳಿ ಮಾತಾನಾಡುವ ಎನ್ನುವ ವೇಳೆಗೆ ಅವನಿಗೆ ಸರಿ ರಾತ್ರಿಯಾಗಿರುತ್ತದೆ.

ಸರಿಯಾಗಿ ಮಾತನಾಡಲು ಆಗುತ್ತಿಲ್ಲ! ಎಂದರೇ, ಇಂಡಿಯಾದಲ್ಲಿ ನೀವೆಲ್ಲಾ ಬರೀ ಮೋಬೈಲ್ ಒಂದಕ್ಕೆ ಅಂಟಿಕೊಂಡಿದ್ದೀರಾ.. ಅದೇನು ಮಾತು ಮಾತು ಬರೀ ಮಾತು! ಇಲ್ಲಿ ಬಾ ನೋಡು ಎಷ್ಟೇ ಟೆಕ್ನಾಲಜಿ ಇದ್ದರೂ ಯಾರೂ ನಮ್ಮ ಭಾರತದಂತೆ ಮೋಬೈಲ್ಗೆ  ಅಂಟಿಕೊಂಡಿಲ್ಲಾ. ಯಾವುದನ್ನು ಹೇಗೆ ಮಾಡಬೇಕು. ಎಲ್ಲಿ ಮಾಡಬೇಕು ಎಂಬುದನ್ನು ಮತ್ತು ಸಮಯದ ಮಹತ್ವವನ್ನು ಅರಿತವರು ಈ ಜನ. ಅದಕ್ಕೆ ಅದು ಹೇಗೆ ಮುಂದುವರಿದಿದ್ದಾರೆ ನೋಡು  ಎಂದು ದೊಡ್ಡ ಲೇಕ್ಚರ್ ಕೊಡುತ್ತಾನೆ.

ನನ್ನ ಪ್ರೀತಿಯ ಸ್ಟುಪಿಡ್!

ಅದು ಸರಿ ಹೀಗೆ ಭಾರತ ಬಿಟ್ಟು ಹೋಗುವ ಪ್ರತಿಯೊಬ್ಬರೂ ಭಾರತವನ್ನು ಅದು ಇಲ್ಲ, ಇದು ಸರಿಯಿಲ್ಲಾ ಎಂದು ತೆಗಳುವವರೆ ಆಗಿಬಿಡುತ್ತಾರೆ.

ನಾನು ಒಮ್ಮೊಮ್ಮೆ ಮನದಲ್ಲಿಯೇ ಅಂದುಕೊಳ್ಳುತ್ತೇನೆ. ನಮ್ಮ ಮೋದಿ ಏನಾದರೂ ಮೋಡಿ ಮಾಡಿ ಭಾರತವನ್ನು ಎಲ್ಲಾ ದೇಶಗಳಿಗಿಂತ ಮುಂದೆ ತರಬೇಕು. ಆಗ ಸರಿ ಇರುತ್ತಾದೆ ಈ ಪರದೇಶ ಡಾಲರ್ ವ್ಯಮೋಹದ ಭಾರತ ದ್ವೇಷಿಗಳಿಗೆ.

ಅದು ಅಷ್ಟು ಸುಲಭ ಅಲ್ಲ ಎಂಬುದು ಮೋದಿಗೆ ಈಗಾ ಈಗ ಅರ್ಥವಾಗಿರುವಂತಿದೆ. ಅದಕ್ಕೆ ಭಾಷಣ ಮಾಡುವುದನ್ನು ಮೋದಿ ಕೊಂಚ ತಗ್ಗಿಸಿದ್ದಾನೆ.

ಉಫ್ ಯುಗಾದಿಯ ದಿನದಂದೂ ನನ್ನ ಪ್ರೀತಿಯ ಕಥೆಯನ್ನು ಹೇಳಲು ಹೋಗಿ ನಮ್ಮ ಭಾರತದ ಅಭಿವೃದ್ಧಿ ಮೋದಿ ಎಂದು ರಾಜಕೀಯ ಪ್ರೀತಿ ಮಾಡುತ್ತಿದ್ದೇನೆ.

ಏನೂ ಮಾಡುವುದು ಅಮ್ಮ ಮಾಡಿದ ಹೋಳಿಗೆಯನ್ನು ತಿನ್ನಲು ಮನಸ್ಸು ಬರುತ್ತಿಲ್ಲ.

ಈ ನನ್ನ ಪ್ರೀತಿಯ ಕೋತಿ ದೂರದ ಅಮೇರಿkaದಲ್ಲಿ ಈಗ ಮಲಗಿದೇ ನನ್ನ ದ್ಯಾನವಿಲ್ಲದೇ...!?

ಮಂಗಳವಾರ, ಮಾರ್ಚ್ 17, 2015

ಹಣವೊಂದಿದ್ದರೇ..ಮರ್ಯಾದೆ..

ಸತ್ಯವಂತರಾಗಿ ಬದುಕುವುದೇ ಇಂದಿನ ದಿನಗಳಲ್ಲಿ ದುಬಾರಿ ಅನಿಸುತ್ತದೆ. ಉತ್ತಮರಾಗಿರುವುದೇ ಪಾಪ ಅನಿಸುತ್ತದೆ. ಶುದ್ಧ ಅಸ್ತರಾಗಿರುವುದೇ ಅಮಂಗಲ ಅನಿಸುತ್ತದೆ. ಸರಳವಾಗಿ ಬದುಕುವುದೇ ಟೀಕೆ ಮಾಡುವವರಿಗೆ ಬಾಯಿ ವಸ್ತುವಾಗುವಂತಾಗಿದೆ.

ಯಾಕೆಂದರೇ ಇದು ಕಲಿಗಾಲ.

ಕಲಿಗಾಲದಲ್ಲಿ ಎಲ್ಲಾ ತದ್ವಿರುದ್ಧವಾಗಿರಬೇಕು. ಅಂದರೇ ಯಾರು ಉತ್ತಮರಾಗಿರುವವರೋ ಅವರಿಗೆ ಉಳಿಗಾಲವಿಲ್ಲ.

ಎಷ್ಟು ದಿನ ಶುದ್ಧವಾಗಿದ್ದರೇನು ಫಲ ಅನಿಸುವಂತಾಗಿದೆ.

ನೀ ಪ್ರಾಮಾಣಿಕನಾಗಿದ್ದಷ್ಟು ನಿನಗೆ ಕಷ್ಟ ಕಣಮ್ಮಾ! ಎಂದು ಗೆಳೆಯರುಗಳು ಹೇಳುವ ಮಟ್ಟಿಗೆ ಸಮಾಜ ನಡೆದುಕೊಳ್ಳುತ್ತಿದೆ ಅನಿಸುತ್ತಿದೆ.

ಚೆನ್ನಾಗಿ ಬದುಕಬೇಕೆಂದರೇ ಹೆಚ್ಚು ಕೆಟ್ಟವನಾಗಿರಬೇಕು ಮಗು ಎಂದು ಹಿರಿಯರು ಚಿಕ್ಕ ಮಕ್ಕಳಿಗೆ ನೀತಿ ಬೋಧನೆಯನ್ನು ಮಾಡುವಂತಾಗಿದೆ.

ಪುರಾಣ ಪುಣ್ಯ ಕಥೆಗಳು ಪುರಾತನ ದಿನಗಳಿಗೆ ಮಾತ್ರ ಎಂಬಂತಾಗಿದೆ. ಇದು ಅದುನಿಕ ಯುಗ. ಇಲ್ಲಿ ಹಿಂದಿನ ಆ ನೀತಿ ನಿಯತ್ತುಗಳು ಯಾರಿಗೂ ಬೇಡವಾಗಿದೆ.

ಹುಟ್ಟಿದಂದಿನಿಂದ ಮಗು ನಿತ್ಯ ಬರೀ ಈ ದುರಾಡಳಿತ, ದುಷ್ಟ ಕೊಟ, ದುರ್ಜನರ ಸಂಗ ಮಾಡಿ ಜಮ್ಮಾಂತಾ ಬದುಕು. ಎಂದು ಹೇಳು ಕಲಿಯುಗದ ಗಾದೆಯಂತಾಗಿದೆ ಈ ಪ್ರಪಂಚ.

ಯಾರು ನಿನ್ನ ರಕ್ಷಿಸಲಾರರು. ಯಾಕೆಂದರೇ ನೀ ಅತಿ ಉತ್ತಮ! ಎಂದು ನಮ್ಮ ನಮ್ಮ ನೆರೆಹೊರೆಯವರೆ ಮೂಗು ಮುರಿಯುವಂತಾಗಿದೆ.

ನಾನು ಒಳ್ಳೆಯವನು ಎಂದು ಅದು ಹೇಗೆ ನೀನು ಎದೆ ಉಬ್ಬಿಸಿ ಹೇಳುತ್ತಿಯ ಬಾಯ್ ಮುಚ್ಚಿಕೋ ಎನ್ನುವಂತಾಗಿದೆ.

ಆ ನಿನ್ನ ಉಪದೇಶಗಳು ನಮಗೆ ಹೇಳಬೇಡ. ನೀ ಹೇಳುವ ಮಾತು ಇಂದು ಯಾರು ಕೇಳುತ್ತಾರೆ? ಥಿಂಕ್ ಪ್ರಾಕ್ಟೀಕಲ್ ಮ್ಯಾನ್ ಎನ್ನುತ್ತಾರೆ.

ನೀ ಇಷ್ಟು ಸಭ್ಯನಾಗಿದ್ದರೇ ನಿನ್ನ ಮೇಲೆ ಇಡೀ ಊರೇ ಸವಾರಿ ಮಾಡುತ್ತದೆ ಅಷ್ಟೇ. ನೀ ಸ್ವಲ್ಪ ರಫ್ ಅಂಡ್ ಟಫ್ ಆಗು ಮಗು. ಎಂದು ಮಗುವನ್ನು ಮಗುವಾಗಿದ್ದಾಗಲೇ  ಈ ರಫ್ ಆದ ಸಮಾಜದಲ್ಲಿ ಬೆಳೆಸಲು, ಎಷ್ಟು ಕಷ್ಟಪಡುತ್ತಿದ್ದಾರೆ ನಮ್ಮ ಜನ ಎಂದರೇ ಉಸ್ಸ್ ಅಪ್ಪಾ! ಬಹಳಷ್ಟು ಕಷ್ಟಪಡಬೇಕು.

ಹೆಚ್ಚು ಅದ್ವಾನವಾದಷ್ಟು ನಿನಗೆ ಭವಿಷ್ಯವಿದೆ! ಹೆಚ್ಚು ಹೆಚ್ಚು ಭ್ರಷ್ಟನಾದಷ್ಟು ಹೆಚ್ಚು ಸಂಭ್ರಮದಲ್ಲಿ ಬದುಕಬಹುದು. ಹೆಸರು, ಹಣ, ಅಧಿಕಾರ ಬಲ ಪ್ರತಿಯೊಂದು ನೀ ಕೇಳದಿದ್ದರು ನಿನ್ನ ಹುಡುಕಿಕೊಂಡು ಬರುತ್ತದೆ.

ಅದಕ್ಕೆ ರಾಜಕೀಯದಲ್ಲಿರುವವರ ಬಗ್ಗೆ ಮತ್ತು ಚುನಾವಣೆಯ ಸಮಯದಲ್ಲಿ ನಾವೇ ಒಂದು ಸಿದ್ಧಾಂತವನ್ನು ಹಾಕಿಕೊಂಡಿದ್ದೇವೆ. ಅತಿ ಕಡಿಮೆ ಕೆಟ್ಟವರನ್ನು ಆರಿಸಿ. ಅವರಿಗೆ ಮತ ಹಾಕಬೇಕು. ಎಂದು ರಾಜರೋಷವಾಗಿ ಹೇಳಿಕೊಳ್ಳುತ್ತೇವೆ. ಅಂದರೇ ಯೋಚಿಸಿ. ಎಲ್ಲಿಗೆ ಬಂದಿದೆ ಈ ವ್ಯವಸ್ಥೆ.

ಇವರು ಒಳ್ಳೆಯವರು. ಇವರಿಗೆ ಏನೂ ಇಲ್ಲ. ಮುಂದೆ ನಮ್ಮ ಸೇವೆಯನ್ನು ಮಾತ್ರ ಮಾಡಲು ಬಂದಿರುವ ನಮ್ಮ ಜನನಾಯಕ ಎನ್ನುವವನು. ಗೆದ್ದ ಮಾರೆಯ ದಿನವೇ ನಮ್ಮ ಉಯೇಗೂ ನಿಲುಕದ ರೀತಿಯಲ್ಲಿ ಅವನ ಸೇವೆಯನ್ನು, ಅವನ ಸಂಬಂಧಿಕರ ಸೇವೆಯನ್ನು ದೇವರ ಕಾರ್ಯವೆನ್ನುವಂತೆ ಮಾಡುತ್ತಾ ಮಾಡುತ್ತಾ ನಮ್ಮ ಕಣ್ಣುಗಳಿಗೆ ಪಳ ಪಳ ಹೊಳೆಯುತ್ತಾ.. ಇವನೇ ನಾವು ಆರಿಸಿದ ನಮ್ಮ ನೇತಾರ ಎನ್ನುವಂತೆ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡುತ್ತಾನೆ.

ಇಂದು ಮೋಸ ಮಾಡುವವನೇ ಬಲಿಷ್ಟ. ಮೊಸಕ್ಕೆ ಒಳಗಾಗುವನಿಗೆ  ಬುದ್ಧಿ ಇಲ್ಲ. ಅವನು ಪಾಪಿ! ಈ ವ್ಯವಸ್ಥೆಯಲ್ಲಿ ಬದುಕಲು ಯೋಗ್ಯತೆ ಇಲ್ಲದವನಾಗಿದ್ದಾನೆ ಎನ್ನುತ್ತೇವೆ.

ಕಳ್ಳರು ಸುಳ್ಳರು, ಅಸತ್ಯ ನುಡಿಯುವವರು, ಮೋಸ ಮಾಡುವವರೇ ಕಲಿಯುಗದ ಕಲಿ ಮಣಿಗಳಾಗಿದ್ದಾರೆ.

ಹೇ ನೀ ಹೇಗೆ ಎನ್ನುವುದು, ನಿನ್ನ ದುಡಿಮೆಯಲ್ಲಿದೆ. ಹೆಚ್ಚು ಹಣ ಹೊಂದಿರುವವನು ಹೆಚ್ಚು ಗೌರವವನ್ನು ಸಂಪಾಧಿಸುವವನಾಗಿದ್ದಾನೆ. ಹೆಚ್ಚು ಹೆಚ್ಚು ವ್ಯವಾಹರ ಕೌಶಲತೆಯನ್ನು ಹೊಂದಿರುವವನು ಹೆಚ್ಚು ಗಮನ ಸೇಳೆಯುವನಾಗಿದ್ದಾನೆ.

ನಾನು ಅತಿ ಒಳ್ಳೆಯವನು ಎಂದುಕೊಂಡು ಇದ್ದರೆ. ನೀನು ಅಲ್ಲಿಯೇ ಇರು ಮಗು. ಎಂದು ಅಸಡ್ಡೆಯಾಗಿ ನೋಡುವಂತಾಗಿದೆ.

ಪ್ರಾಮಾಣಿಕ ಎಂದು ಹೇಳಿದರೇ, ಜೊತೆಯಲ್ಲಿರುವವರೆ ನೋಡಿ  ನಗುವಂತಾಗಿದೆ.

ಪ್ರಾಮಾಣಿಕ ಎಂದು ಹಣೆ ಪಟ್ಟಿಗೆ ಪಕ ಪಕ ಎಂದು ಹಾಡಿಕೊಳ್ಳುತ್ತಾರೆ.

ಹೇ ಬಂದ ನೋಡು ಗಾಂಧಿ ಎಂದು ನಮಗೆ ಸ್ವಾತಂತ್ರ್ಯ ತಂದುಕೊಟ್ಟ ನಮ್ಮ ಬಾಪುವನ್ನು ಎಳೆದು ತಂದು ನಗೆಗೀಡು ಮಾಡುತ್ತೇವೆ.

ಕೆಟ್ಟವರಾಗಿದ್ದಾರೇ ಯಾರಿಗೂ ಹೆದರಬೇಕಿಲ್ಲ. ನೀ ಬಹಳ ಒಳ್ಳೆಯವನು ನೋಡು ಇನ್ನು ಮುಂದೆ ಹೇಗೆಲ್ಲಾ ಕಷ್ಟಪಡಬೇಕು ಜೀವನದಲ್ಲಿ, ಎಂದು ನಮ್ಮ ನಮ್ಮಲ್ಲಿಯೇ ಹೇಳಿಕೊಳ್ಳುತ್ತೇವೆ.

ಸತ್ಯ ಹರಿಶ್ಚಂದ್ರ ಸಾಧು, ಬದುಕು ನೋಡಿದರೇ ಕೇಳೋದು ಬೇಡ ಅನ್ನುತ್ತಾರೆ.

ಏನೇ ಮಾಡು ಚೆನ್ನಾಗಿ ಮಾಡು, ಹೆಚ್ಚು ದುಡ್ಡು ಸಂಪಾಧಿಸು ಬಿಂದಾಸಾಗಿ ಇರಬೇಕು ಎನ್ನುತ್ತಾರೆ.

ನಾವುಗಳು ಆದರ್ಶ ಎಂದು ನಮ್ಮ ಮಕ್ಕಳಿಗೆ ಯಾರನ್ನು ತೋರಿಸಿ ಹೇಳಲಾರದಾಗಿದ್ದೇವೆ. ಹೀಗೆ ಬದುಕು ಎಂದು ಹೇಳಿದರೇ ಎಲ್ಲಿ ಕಷ್ಟ ಎನ್ನುವಷ್ಟರ ಮಟ್ಟಿಗೆ ದಕ್ಷ, ಪ್ರಾಮಾಣಿಕ ಕೆಲವೇ ಕೆಲವು ಮಂದಿಗಳ ಜೀವನ ದುರಂತಮಯವಾಗುತ್ತಿರುವುದು ಭಯವನ್ನುಂಟು ಮಾಡುತ್ತಿದೆ.

ಒಳ್ಳೆಯವರಿಗೆ ಯಾರ ರಕ್ಷಣೆ ಇಲ್ಲ ಎನ್ನುವಂತಾಗಿದೆ.

ಹಣವೊಂದಿದ್ದರೇ ಇಂದು ಯಾರೇ ಬಂಧಿಸಲಿ, ಮಾರನೆಯ ದಿನ ಹೇಗಾದರೂ ಹೊರ ಬರುವನು. ಒಂದೆರಡು ದಿನ ಸಜಾ ಅಮೇಲೆ ಇದೆ ಮಜಾ ಎನ್ನುವಂತಾಗಿದೆ.

ಯಾರಿಗೂ ಸರ್ಕಾರ ಮತ್ತು ಅದರಲ್ಲಿರುವ ಕಾನೂನಿನ ಮೇಲೆಯೇ ನಂಬಿಕೆ ಹೋಗುವಂತಾಗಿದೆ. ಸತ್ಯವಾಗಿ ಕೆಲಸ ಮಾಡುವವರಿಗೂ ನಡುಕವುಂಟು ಮಾಡುವ ಘಟನೆಗಳು ನಿತ್ಯ ಜರುಗುತ್ತಿವೆ.

ಅನಾಚಾರ ಮಾಡಿರುವವನಿಗೆ ಮರ್ಯಾದೆ. ಅವನೇ ಎಲ್ಲಾ ಸಮೊಹ ಮಾಧ್ಯಮಗಳಲ್ಲಿ ಮೆರೆಯುವವನು.

ಉನ್ನತವಾಗಿ ಬದುಕುವುದೆಂದರೇ ಇದೇ ಎಂಬುಂತಾಗಿದೆ. ಉನ್ನತ ಎಂದರೇ ಯಾವುದೇ ಕೊರತೆಯಿಲ್ಲದೇ ಹೇಗಾದರೂ ಬದುಕು ಅನ್ನುವಂತಾಗಿದೆ.

ಒಳ್ಳೆಯ ಜೀವಕ್ಕೆ ಬೆಲೆಯೇ ಇಲ್ಲ ಅನ್ನುವಂತಾಗಿದೆ. ಒಳ್ಳೆಯವರಾಗಿರುವುದೇ ಅಪರಾಧ ಅನಿಸುತ್ತಿದೆ. ಲಂಚ ಕೇಳುವುದು ಮಾಮುಲು ಎನ್ನುವಂತಾಗಿದೆ.

ಜನ ಬಳಸುವ ಯಾವುದೇ ಮಾಮುಲಿ ಇಲಾಖೆಗಳಲ್ಲಿ, ಅದು ಕೊಡುವುದು ಕಾಮನ್, ಅದು ಕೊಡದಿದ್ದರೇ ನೀ ಎಷ್ಟು ದಿನದವರೆಗೂ ಕಾಯಬೇಕಾಗುತ್ತದೆ ಗೊತ್ತಾ? ಎಂದು ನೆರೆಹೊರೆಯವರು ಸಲಹೆ ಕೊಡುವಂತಾಗಿದೆ.

(ದಕ್ಷ ಅಧಿಕಾರಿ D K ರವಿಯವರ ಹತ್ಯೆಯನ್ನು ಕಂಡು ಈ ಮನ ಮಿಡಿದ ಸಾಲುಗಳು)

ಶನಿವಾರ, ಮಾರ್ಚ್ 7, 2015

ಹೆಣ್ಣು - ಗಂಡು ಜೀವನ ಚಕ್ರ

ನಾವೇನು ಸಾಧಿಸಲಿಲ್ಲ.  ಎಷ್ಟೊಂದು ಓದಿದೆನು. ಹೇಗೆಲ್ಲಾ ಬದುಕಬಹುದಾಗಿತ್ತು. ನಾನು ನನ್ನ ಗಂಡನಿಗಿಂತ, ನನ್ನ ಅಣ್ಣನಿಗಿಂತ ದೊಡ್ಡ ಹುದ್ದೆಯಲ್ಲಿ, ದೊಡ್ಡ ಸ್ಥಾನದಲ್ಲಿ ಇರಬಹುದಾಗಿತ್ತು. ಆದರೂ ಎಲ್ಲಾ ತ್ಯಾಗ ಮಾಡಿದೆ. ಯಾರಿಗಾಗಿ ನಿನಗಾಗಿ ಆ ನೀನು ಅಂದರೇ ಪುನಃ ಗಂಡ, ಮಗ ಹೀಗೆ ಗಂಡಸಿಗಾಗಿ ಮಾತ್ರ.. ಇದು ಪ್ರತಿಯೊಂದು ಹೆಣ್ಣು ಜೀವದ ನೊಂದ ಮಾತುಗಳು.

ತ್ಯಾಗ ಮೂರ್ತಿ ಅಂದರೇ ಅದು ಸ್ತ್ರೀ ಜೀವವೇ ಯಾಕಾಗುತ್ತದೆ?

ಕ್ಷಮಯ ಧರಿತ್ರಿ ಎಂದು ಯಾರು ಹೆಣ್ಣನ್ನು ಕರೆದರೋ, ಹೆಣ್ಣಿಗೆ ಎಲ್ಲವನ್ನು ತನ್ನಲ್ಲಿ ಮೊಕವಾಗಿ ಹುದುಗಿಸಿಕೊಳ್ಳುವ ಆ ಭೂ ತಾಯಿಯ ಗುಣವನ್ನು ಆ ಕಾಣದ ದೇವರು ಹೆಣ್ಣು ಧರೆಗೆ ಬರುವ ಸಮಯದಲ್ಲಿ ಇಟ್ಟು ಕಳಿಸಿಬಿಡುತ್ತಾನೆ ಅನಿಸುತ್ತದೆ.

ಪ್ರತಿಯೊಂದನ್ನು ತನ್ನ ಒಡಲಲ್ಲಿಯೇ ಇಟ್ಟುಕೊಂಡು ತನ್ನ ಸುತ್ತ ಇರುವವರ ಕ್ಷೇಮ ಮತ್ತು ಅವರ ಸಂತೋಷದಲ್ಲಿಯೇ ತನ್ನ ಸಂತೋಷವನ್ನು ಕಾಣುವ ಈ ಕರುಣ ಗುಣದ ತೇವವನ್ನು ಯಾರಲ್ಲೊ ಕಾಣದಾಗಿದೆ.

ಅದಕ್ಕೆ ಹೆಣ್ಣಿನ ದ್ವನಿಯೇ ಮಧುರ. ಆ ಮಾತಿನ ಸವಿ ಕೇಳಿದರೇ ಸಾವಿರ ಜಂಜಾಟಗಳು ದೂರ. ಕೋಗಿಲೆಯ ಕಂಠ ಎಂದು ಕರೆಯುವುದು, ಗಾಯಕಿಗೆ. ದ್ವನಿಯಲ್ಲಿ ಇರುವ ಮಮತೆಯ ಪದಗಳ ಮುತ್ತು ಎಂಥವರನ್ನು ಒಂದು ಕ್ಷಣ ಮಮ್ ಮಾಡುತ್ತದೆ. ಅದಕ್ಕೆ ಕಾರಣ ಅವಳ ಪ್ರತಿ ರಕ್ತ ರಕ್ತ ಕಣದಲ್ಲಿ ಇರುವ ಪ್ರೀತಿಯ ಕರುಣಾ ರಸ.

ಮಗು ತನ್ನ ಮೊದಲ ಜೀವದ ದ್ವನಿಯನ್ನು ಕೇಳುವುದು ತಾಯಿಯದೆ! ಮೊದಲ ಪ್ರೀತಿಯ ಹಾಲನ್ನು ಕುಡಿಯುವುದು ತಾಯಿಯದೆ. ಅಂದಿನಿಂದ ಆ ಮಗುವಿಗೆ ಗೊತ್ತಾಗುತ್ತದೆ ಪೊರೆಯುವುದು ಎಂದರೇ ಸ್ರ್ತೀ.

ಅವಳಿಗೆ ಇದನ್ನು ಯಾರು ಅರಿವು ಮೊಡಿಸಿದರೋ ಗೊತ್ತಿಲ್ಲ!

ಅವಳಿದ್ದರೇ ಒಂದು ರೀತಿಯ ಬೇರೆಯ ವಾತವರಣವೇ ಏರ್ಪಡುತ್ತದೆ. ಅವಳಿದ್ದರೇ ಅಲ್ಲಿರುವ ಗಾಳಿಯು ತಂಗಾಳಿಯಾಗಿ ಸೊಂಪಾದ ಇಂಪಾದ ಗೀತೆಯನ್ನು ಪಾಡಿದಂತಿರುತ್ತದೆ.  ನಾವು ಯಾವುದೇ ಜಾಗವನ್ನು ಗಮನಿಸಿದರೂ ಆ ಮಮತ ಮಹಿಯ ಸ್ಪರ್ಷವನ್ನು ಕಾಣಬಹುದು.

ಕಟ್ಟುವುದು ಸ್ತ್ರೀಯ ಕಾಯಕ. ಹೊಸತನಕ್ಕೆ ಸ್ರ್ತೀ ದ್ಯೋತಕ.

ಇದಕ್ಕೆ ಇರಬೇಕು ನಮ್ಮ ಪ್ರತಿಯೊಬ್ಬರ ಜೀವನದ ಪ್ರತಿ ಹಂತದಲ್ಲೂ ಈ ಸ್ರ್ತೀ ತಾಯಿಯಾಗಿ, ಗೆಳತಿಯಾಗಿ, ಸಂಗಾತಿಯಾಗಿ, ಮಗಳಾಗಿ ಹಾಸು ಹೊಕ್ಕಾಗಿ ನಮ್ಮ ಬಾಳನ್ನು ಸದಾ ಕಾಲ ನಲಿವಿನಿಂದ ಇಡುವುದಕ್ಕೆ ಶ್ರಮಿಸುತ್ತಾಳೆ. ನಮ್ಮ ನಮ್ಮ ಸಂತೋಷದಲ್ಲಿಯೇ ಅವಳ ನೆಮ್ಮದಿಯನ್ನು ಕಾಣುತ್ತಾಳೆ.

ನಮ್ಮ ನಮ್ಮ ಮನದಲ್ಲಿರುವ ಆತುರತೆ, ಆಕ್ರಮಣ ಗುಣವನ್ನು ಕೊಂಚ ತಗ್ಗಿಸುವುದು ಈ ಹೆಣ್ಣಿನ ಕಣ್ಣಿನಿಂದನೇ. ಅವಳಿಗಾಗಿ ನಾವು ಏನಾದರೂ ಮಾಡಬೇಕು. ನಾನು ಹೀಗೆ ಇರಬೇಕು.. ಎಂದು ಗಂಡು ಕೊಂಚ ತನ್ನ ವ್ಯಕ್ತಿತ್ವವನ್ನು ಅಚ್ಚುಕಟ್ಟು ಮಾಡಿಕೊಳ್ಳುವುದು ಹೆಣ್ಣಿನ ಕಾರಣದಿಂದಲೇ ಎಂದು ಘಂಟಾಘೋಷವಾಗಿ ಹೇಳಬಹುದು. ಇಲ್ಲವೆಂದರೇ ಹೇಳುವವರು ಕೇಳುವವರೂ ಯಾರು ಇರುವುದಿಲ್ಲ. ಅಡ್ದಾ ದಿಡ್ಡಿಗೇ ಸಾಕ್ಷಿಯನ್ನು ಯಾರು ಕೊಡಬೇಕಿಲ್ಲ!

ಆದರೂ ನಮ್ಮ ಗಂಡು ಹೃದಯಗಳು ಈ ಎಲ್ಲಾ ಸತ್ಯಗಳನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ.ಇಂದಿಗೂ ಹೆಣ್ಣು ಎಂದರೇ ಯಾಕೋ ಒಂದು ಹೆಜ್ಜೆ ಅವರನ್ನು ಹಿಂದಿಡಬೇಕು ಎಂಬ ದೋರಣೆಯ ಭಾವನೆಗಳನ್ನು ಗೊತ್ತಿಲ್ಲದೇ ತಮ್ಮಲ್ಲಿ ಇಟ್ಟುಕೊಂಡಿದ್ದಾರೆ ಎಂದರೇ ತಪ್ಪಲ್ಲಾ.

ಹೆಣ್ಣು ಎಂದರೇ ಅಬಲೆ!

ಈ ರೀತಿಯ ಋಣಾತ್ಮಕವಾದ ಮಾತುಗಳನ್ನು ತಮ್ಮ ಮಾತು ಮತ್ತು ನಡವಳಿಕೆಯಲ್ಲಿ ತೋರಿಸುವುದು ಆಕ್ಷಮ್ಯ ಅಂದರೇ ತಪ್ಪಲ್ಲಾ.

ನಾವುಗಳು ಯಾವುದನ್ನು ನಿರೀಕ್ಷೆ ಮಾಡುವುದಕ್ಕೂ ಸಾಧ್ಯವಿಲ್ಲವೋ ಅಂತಹ ಎಲ್ಲಾ ರಂಗದಲ್ಲೂ ಪುರುಷರಿಗಿಂತ ತಾನೇನೂ ಕಡಿಮೆ ಇಲ್ಲ ಎಂಬುದನ್ನು ಸ್ರ್ತೀ ತಾನು ಮನೆಯಲ್ಲಿ ಅಡಿಗೆ, ಮಕ್ಕಳ ಆರೈಕೆ, ಹೆತ್ತವರನ್ನು ಪೊರೆಯುವುದು, ಮನೆಗೆ ಕಣ್ಣಾಗಿ, ತಾಳ್ಮೆ ಎಂದರೇ ನಾನೇ ಎಂದುಕೊಂಡೇ ಪ್ರತಿಯೊಂದನ್ನೂ ಪುರುಷರು ಮನೆಯಲ್ಲಿ ಯಾವ ಕಾರ್ಯಗಳನ್ನು ಮಾಡದೇ ಹೊರಗಡೇ ಮಾಡುವುದನ್ನೇಲ್ಲಾ ತಾನು ಮಾಡಿ ನಾನೇ ಮುಂದು ಎಂದು ತೋರಿಸಿಕೊಟ್ಟಿದ್ದಾಳೆ.

ಪುರುಷರಿಗಿಂತ ಹೆಣ್ಣು ಯಾವುದರಲ್ಲೂ ಹಿಂದಿಲ್ಲಾ ಎಂಬುದನ್ನು ಸಾಬೀತು ಮಾಡಿ ಎಷ್ಟೋ ಶತಮಾನಗಳೇ ಆಗಿವೆ. ಇಂದೊಂತೂ ಹೆಣ್ಣನ್ನು ಕೀಳಾಗಿ ಕಾಣುವ ಜಮಾನ ದೂರವಾಗಿ ಅವಳನ್ನು ಸರಿಸಮಾನಾಗಿ ಪೈಪೋಟಿಯಾಗಿ ಪರಿಗಣಿಸುವಂತಾಗಿದೆ. ಸ್ತ್ರೀಯರೇ ಆದರ್ಶವಾಗಿ ಕಾಣುವಂತಾಗಿದೆ.

ಅದಕ್ಕೆ ಕಾರಾಣ ಅವಳ ಬೇಜಾರಿಲ್ಲದ, ತಾಳ್ಮೆಯ, ಜಾಣ್ಮೆಯ ದುಡಿಮೆ. ಅವಳು ದುಡಿಯುವುದು ತನಗೆ ಮಾತ್ರವಲ್ಲಾ ತನ್ನವರಿಗಾಗಿ, ತನ್ನ ಕುಟುಂಬಕ್ಕಾಗಿ. ಜವಬ್ದಾರಿ ಎಂದರೇ ಆ ಹುಡುಗಿದು! ನೋಡು ಆ ಹುಡುಗಿ ಬಂದ ಮೇಲೆ ಈ ಮನೆಯ ವಾತಾವರಣವೇ ಚೇಂಜ್ ಆಗಿದೆ ಎಂದು ಹುಬ್ಬೇರಿಸಿ ಮಾತಾಡುವಂತಾಗಿದೆ.

ಇದು ಹೆಣ್ಣಿನ ಯುಗ. ಹೆಣ್ಣಿಗೂ ಎಲ್ಲಾ ಸ್ಥಾನ ಸಿಗಬೇಕು ಎಂಬ ಮಾತು ಇಂದಿನದು. ಅದು ಇಂದು ಸಿಗುತ್ತಿದೆ. ಅವಳು ಶಕ್ತಿಯ ಆವತರಣಿಯಾಗಿದ್ದಾಳೆ. ಅವಳು ಮನೆಯಲ್ಲು ಸೈ! ಹೊರಗಿನ ಕೆಲಸದಲ್ಲೂ ಸೈ! ಎಂದು ಪ್ರತಿಯೊಬ್ಬರೂ ಒಪ್ಪುವಂತೆ ಸಾಧಿಸುವ ಕಡೆ ಹೆಜ್ಜೆ ಇಟ್ಟಿದ್ದಾಳೆ.

ನನಗೆ ನನ್ನ ಅಮ್ಮನೇ ಮಾದರಿ, ನನಗೆ ನನ್ನ ಹೆಂಡತಿಯೇ ಶಕ್ತಿ, ನನಗೆ ನನ್ನ ಮಗಳೇ ಸ್ಫೂರ್ತಿ ಎಂದು ಗಂಡು ಜೀವಗಳು ಹೇಳುವಂತಾಗಿದೆ.

ಮನೆಯಲ್ಲಿ ಒಂದು ಹೆಣ್ಣು ಜೀವ ಇರಬೇಕಪ್ಪಾ ಎಂದು ಪ್ರತಿಯೊಬ್ಬರೂ ಯಾವ ವಿರೋಧವಿಲ್ಲದೇ ಒಪ್ಪಿಕೊಳ್ಳುವಂತಾಗಿದೆ.

ಆದರೂ ಇಂದಿಗೂ ನಮ್ಮ ಜನ ಹೆಣ್ಣು ಎಷ್ಟೇ ಓದಿ ತಿಳಿದವಳಾಗಿದ್ದರೂ ನಿನಗೇನೂ ಗೊತ್ತು? ಎಂದು ಮೊದಲಿಸಿದಾಗ. ಆ ಹೆಣ್ಣು ಅಂದುಕೊಳ್ಳುತ್ತಾಳೇ (ಅದು ತನ್ನ ಮನದಲ್ಲಿ) ’ಗೊತ್ತೂ ನಿನಗಿಂತ ಜಾಸ್ತಿ’ ಅದರೇ ತೋರಿಸಿಕೊಳ್ಳುವುದಿಲ್ಲ ನಿನ್ನಂಗೇ!

ಹೌದು ಬದಲಾಗಬೇಕಿರುವುದು ನಾವು ಮತ್ತು ನಮ್ಮ ಸಮಾಜ. ನಾವು ನೋಡುವ ನೋಟದಲ್ಲಿ. ಅವರನ್ನು ಸಹ ಇನ್ನುಮುಂದೆ ಅಬಲೆ, ಅಸರೆಗಾಗಿ ಕಾದಿರುವವಳು, ಮತ್ತೊಬ್ಬರ ಜೊತೆ ಬೇಕೇ ಬೇಕು ಎಂಬ ಮಾತುಗಳು ಇಂದು ಎಷ್ಟೊಂದು ಅಪ್ರಸ್ತುತ ಎನ್ನುವುದು ಒಬ್ಬಂಟಿಯಾಗಿ ದೊಡ್ಡ ದೊಡ್ಡ ಕಾರ್ಯ ಸಾಧನೆಗಳನ್ನು ಮಾಡಿರುವವ ಸ್ತ್ರೀಯರನ್ನು ನೋಡಿದಾಗ ನಮಗೆಲ್ಲಾ ಗೊತ್ತಾಗುತ್ತಿದೆ.

ಹೆಣ್ಣು - ಗಂಡು ಜೀವನ ಚಕ್ರದ ಎರಡು ಗಾಲಿಗಳು ಇದರಲ್ಲಿ ಯಾವುದು ಸಹ ಮೇಲು ಕೀಳು ಎಂಬುದಿಲ್ಲ.

ಹೆಚ್ಚು ಸಹಿಷ್ಣುತೆ ಗಂಡಿಗಿಂತ ಹೆಣ್ಣಿಗೆ ಇರುವುದು. ಅವಳು ಬರಿಸುವ ನೋವುಗಳು ಯಾರೊಬ್ಬರೂ ಎಂದಿಗೂ ತಮ್ಮ ಜೀವನದಲ್ಲಿ ಬರಿಸಲು ಸಾಧ್ಯವಿಲ್ಲ. ಅವಳಿಗೆ ಆ ದೇವರೇ ಕೊಟ್ಟಿರುವ ಅಪರೂಪದ ಒಂದು ಸ್ವಭಾವ ಅಂದರೇ ಈ ಸಹಿಷ್ಣುತೆ. ಅದಕ್ಕೆ ಪ್ರತಿಯೊಬ್ಬರೂ ಹ್ಯಾಟ್ಸ್ ಪ್ ಹೇಳಲೇ ಬೇಕು. ಆಗಂತಾ ಏನೂ ಮಾಡಿದರೂ ಅವಳು ಸುಮ್ಮನಿರುವವಳು ಎಂದುಕೊಂಡರೇ ನಮ್ಮಂತ ದೊಡ್ಡ ಮೂರ್ಖರು ಮತ್ತೊಬ್ಬರಿಲ್ಲ.

ಏನೇ ಆಗಲಿ ಇಂಥ ಜೀವಗಳನ್ನು ನಮ್ಮ ನಮ್ಮ ಕುಟುಂಬದಲ್ಲಿ ಹೊಂದಿರುವ ನಾವುಗಳೇ ಧನ್ಯರು. ಅವರನ್ನು ಗೌರವಿಸೋಣ ಒಟ್ಟಿಗೆ ಸೇರಿಕೊಂಡು ಸಂತಸದಿಂದ ಬಾಳೋಣ.

ಕೂಡಿ ಬಾಳಿದರೆ ಬಾಳು ಸವಿ ಜೇನು ಅಲ್ಲವಾ?

ಶುಕ್ರವಾರ, ಫೆಬ್ರವರಿ 20, 2015

ಬೆಂಗಳೂರು ಬಾಡಿಗೆ ಮನೆ ಮನ

ಬೆಂಗಳೂರಿನಲ್ಲಿ ಜೀವಿಸುವ ಪ್ರತಿಯೊಬ್ಬರ ಒಂದೇ ಒಂದು ಕನಸು ಅಂದರೇ.. ಏನಾದರೂ ಸರಿ ಒಂದು ಮನೆಯನ್ನು ಇಲ್ಲಿಯೇ ಕಟ್ಟಬೇಕು. ಇದೇ ಅವರ ಜೀವಿತಾದ ಮಹಾದಾಸೆ.

ತಮ್ಮ ಹೆತ್ತ ಊರನ್ನು ಬಿಟ್ಟು ಹೊಟ್ಟೆ ಹೊರೆಯುವುದಕ್ಕೆಂದು ಮಹಾನಗರಕ್ಕೆ ಬಂದ ದಿನದಿಂದ ಬಾಡಿಗೆ ಮನೆಯನ್ನು ಹಿಡಿದು ತಮ್ಮ ಬದುಕನ್ನು ಒಂದೊಂದೇ ಹೆಜ್ಜೆ ಇಡುತ್ತಾ ಕಟ್ಟಿಕೊಳ್ಳುವ ಜಾಣ್ಮೆಯನ್ನು ಬೆಂಗಳೂರಿನಲ್ಲಿ ಜೀವಿಸುವ ಪ್ರತಿಯೊಬ್ಬರಲ್ಲೂ ಕಾಣಬಹುದು. ಅದು ಒಂದು ನ್ಯಾಚರಲ್ ಪೇನಮಿನ ಎಂಬಂತೆ ಯಾರು ಗಮನಿಸುವುದಿಲ್ಲ.

ಬೆಂಗಳೂರು ಎಲ್ಲದನ್ನೂ ಕಲಿಸುತ್ತದಂತೆ. ಏನೂ ಗೊತ್ತಿಲ್ಲದವನಿಗೂ ಎಲ್ಲಾ ಗೊತ್ತೂ ಮಾಡುತ್ತದಂತೆ

ನಾವುಗಳು ಮೊದ ಮೊದಲು ನಮ್ಮ ಇಂಜಿನಿಯರಿಂಗ್ ಮುಗಿಸಿ ಕೆಲಸ ಹುಡುಕಲು ಬಂದ ಹೊಸತದರಲ್ಲಿ. ನಾವುಗಳು ಕೆಲಸ ಹುಡುಕಿ ಹುಡುಕಿ ಶನಿವಾರ,ಬಾನುವಾರ ದಿನಗಳಂದೂ ಯಾವುದಾದರೂ ಒಬ್ಬರ ಮನೆಯಲ್ಲಿ ಮೀಟಿಂಗ್ ಸೇರುತ್ತಿದ್ದೇವು.

ಮನೆ ಅಂದರೇ ರೂಂ. ಬ್ಯಾಚಲರ್ಸ್ ರೂಂ. ಒಂದು ಬೆಡ್ ರೂಂ, ಒಂದು ಹಾಲು ಮತ್ತು ಒಂದು ಕಿಚನ್. ಈ ರೀತಿಯ ಮನೆಯಲ್ಲಿ ಆ ಮನೆಯ ಓನರನ ತಕರಾರು ಏನೂ ಇಲ್ಲದಿದ್ದರೇ ಎಷ್ಟು ಜನ ಇರುವುದಕ್ಕೆ ಸಾಕಾಗುತ್ತಿತ್ತೋ ಅಷ್ಟು ಜನವು ಇರುತ್ತಿದ್ದೇವು. ಅದು ಪುನಃ ನಮ್ಮ ಕಾಲೇಜು ದಿನಗಳನ್ನು ನೆನಪಿಸು ಮಟ್ಟಿಗೆ ನಮ್ಮ ನಮ್ಮ ಗೆಳೆಯರೇ ಇರುತ್ತಿದ್ದೇವು. ಈ ರೀತಿ ಬೇರೆ ಬೇರೆ ಮನೆಯಲ್ಲಿ ಇರುವವರೆಲ್ಲಾ ರಜಾ ದಿನಗಳಲ್ಲಿ ಒಬ್ಬರ ಮನೆಯಲ್ಲಿ ಬೇಟಿಯಾಗುತ್ತಿದ್ದೇವು. ಮುಂಜಾನೆಯಿಂದ ಸಂಜೆಯವರೆಗೂ ಅಲ್ಲಿಯೇ ತಿಂಡಿ, ಊಟ, ನಿದ್ದೆ, ಮಾತುಕತೆಯನ್ನಾಡಿ ಸಂಜೆ ನಮ್ಮ ನಮ್ಮ ಬಾಡಿಗೆ ಮನೆಗೆ ಸೇರಿಕೊಳ್ಳುತ್ತಿದ್ದೇವು.


ಆಗ ನಾವುಗಳು ನಮ್ಮ ಗೆಳೆಯರಲ್ಲಿ ಏನಾದರೂ ಕೊಂಚ ಬದಲಾವಣೆ ಕಂಡರು.. ನೋಡು ಬೆಂಗಳೂರು ಹೇಗೆ ಬದಲಾಯಿಸಿತು ಇವನನ್ನು ಎಂದು ಹಾಡಿಕೊಳ್ಳುತ್ತಿದ್ದೇವು.

ಹೌದು! ನಿಜವಾಗಿಯೂ ಈ ಊರಿಗೆ ಏನೋ ಒಂದು ಶಕ್ತಿಯಿದೆ. ಎಂಥವರನ್ನು ಬೆಂಗಳೂರಿಗರನ್ನಾಗಿ ಮಾಡಿಕೊಳ್ಳುತ್ತದೆ.

ಬೆಂಗಳೂರಿಗರು ಅಂದರೇ ಬುದ್ಧಿವಂತರು ಎಂಬಂತೆ ಸ್ವಲ್ಪ ಬುದ್ಧಿಯನ್ನು ಕಲಿಸುತ್ತದೆ. ಹೇಗೆ ಚೆನ್ನಾಗಿ ಬದುಕಬೇಕು. ಹೇಗೆ ದುಡಿಮೆಯನ್ನು ಮಾಡಬೇಕು, ಎನ್ನುವುದನ್ನು ಯಾವುದೇ ಬೇಡಿಕೆಯಿಲ್ಲದೇ ಎಲ್ಲಾರಿಗೂ ಸಮನಾಗಿ ತಾನೇ ದಯಪಾಲಿಸುತ್ತದೆ.

ಇದಕ್ಕೆಲ್ಲಾ ಪ್ರತಿಯೊಬ್ಬ ಬೆಂಗಳೂರಿಗನು ಬೆಂಗಳೂರಿಗೆ ಕೃತಘ್ನನಾಗಿರಬೇಕು.

ಅಂದಿನಿಂದ ಹುಟ್ಟುವ ಕನಸೇ ಬೇಗ ದುಡ್ಡು ಸಂಪಾಧಿಸಬೇಕು ಮತ್ತು ಸ್ವಂತ ಮನೆಯನ್ನು ಮಾಡಿಕೊಳ್ಳಬೇಕು. ಸ್ವಂತ ಮನೆಗೆ ಬುನಾದಿಯಾಗುವುದು ಇಲ್ಲಿಂದಲೇ.

ಇಲ್ಲಿಯ ಬಾಡಿಗೆ ಮನೆಯ ಒನರ್ ಗಳ ಒರತಾ. ಅವರ ಡಿಮ್ಯಾಂಡ್. ಅವರ ಕಂಡಿಷನ್ ಗಳು. ಅವರ ತರಾವೇರಿ ಬಾಡಿಗೆ ದರಗಳು. ಏನ್ ಒಂದು ಮನೆಯಿದ್ದರೇ ಮುಗಿತು ನೋಡು, ಹೇಗೆಲ್ಲಾ ಈಜೀಯಾಗಿ ದುಡ್ಡು ಮಾಡುತ್ತಾರೆ. ನಮಗೆ ಒಂದು ಮನೆ ಇದ್ದರೇ ಸಾಕು ಕಣೋ ಬೆಂಗಳೂರಲ್ಲಿ ಹೇಗೋ ಜೀವನ ಸಾಗುತ್ತದೆ. ಎಂದು ನಮ್ಮ ನಮ್ಮಲ್ಲಿಯೇ ನಾವುಗಳು ಕನಸನ್ನು ಕಾಣಲು ಶುರು ಮಾಡುತ್ತಾರೆ.

ಹೌದು, ಬಾಡಿಗೆ ಮನೆಯ ಬದಲಾವಣೆ! ಇದು ಅತ್ಯಂತ ಬೇಸರದ ಘಟನೆ. ಬೆಂಗಳೂರಿನ ಎಲ್ಲಾ ಬಾಡಿಗೆದಾರರ ತಲೆ ತಿನ್ನುವ ವಿಷಯ.

ನಮ್ಮ ಪ್ರೀತಿಯ ಗೂಡಿಗೆ ನಾವು ಸೇರಿಸುವ ನಮ್ಮದೇ ಬೆವರ ಬೆಲೆಯ ಸಾಮಾನುಗಳ ರಾಶಿ. ಕನಸು ಮನಸಲ್ಲೂ ನಿರೀಕ್ಷಿಸದಂತೆ ದೊಡ್ಡ ರಾಶಿಯಾಗಿರುತ್ತದೆ. ಇಷ್ಟೆಲ್ಲಾ ಸಾಮನುಗಳನ್ನು ನಾವು ಯಾವಾಗ ಖರೀದಿಸಿದಿವಿ ಎಂದು ತಿಳಿಯುವುದು ನಮಗೆ ಈ ಸಾಮಾನುಗಳನ್ನು ನಿನ್ನೊಂದು ಮನೆಗೆ ಸಾಗಿಸಲು ಪ್ಯಾಕ್ ಮಾಡುವಾಗ.

ಮನೆಯನ್ನು ಶಿಪ್ಟ್ ಮಾಡುವ ಕೆಲಸ ಯಾವ ದೇವರಿಗೂ ಬೇಡ ಅನಿಸುತ್ತದೆ. ಪ್ರೀತಿಯಿಂದ ಎಷ್ಟೊಂದು ಮಮತೆಯಿಂದ ಸ್ವಲ್ಪ ಕಾಸ್ಟ್ ಲಿ ವಸ್ತುಗಳನ್ನೇ ಖರೀದಿಸಿರುತ್ತೇವೆ. ಅವುಗಳ ಒಳಪು ಬಿಳುಪು ನಮಗೆ ಒಂದು ರೀತಿಯ ಹೆಮ್ಮೆಯನ್ನುಂಟು ಮಾಡಿರುತ್ತದೆ. ಯಾಕೆಂದರೇ ನಿತ್ಯ ಅವುಗಳ ಮದ್ಯದಲ್ಲಿಯೇ ಆ ಚಿಕ್ಕ ಮನೆಯಲ್ಲಿ ಅವುಗಳ ಸ್ಪರ್ಷದಲ್ಲಿ ಜೀವಿಸಿರುತ್ತೆವೆ.

ಜೀವ ಇರುವ ಮನುಷ್ಯರಿಗಿಂತ ನಮಗೆ ಅವುಗಳೇ ಮುಖ್ಯ. ಅವುಗಳಿಗೆ ಎಲ್ಲಿ ಏನಾಗುತ್ತೋ ಎಂದು ಸಾಮಾನುಗಳನ್ನು ಬೇರೆ ಮನೆಗೆ ಸಾಗಿಸುವಗ ನಮ್ಮ ಎದೆ ಡವಡವ ಎಂದು ಬಡಿದುಕೊಳ್ಳುತ್ತದೆ. ಅವುಗಳು ಏನಾದರೂ ಮುಕ್ಕಾದರೇ ದೇವರೇ? ಎಷ್ಟೊಂದು ದುಡ್ಡು ಕೊಟ್ಟು ತಂದಿರುವುದು! ಎಂದು ಮನೆಯ ಪ್ರತಿ ಸದಸ್ಯನು ಮನದಲ್ಲೆ ಹಲುಬುತ್ತಾನೆ.

ಏನೊಂದು ಊನಾ ಬರದಂತೆ ಇನ್ನೊಂದು ಮನೆಗೆ ಶಿಪ್ಟ್ ಆದರೇ ಸಾಕಪ್ಪಾ ದೇವರೆ.. ನಿನಗೆ ಒಂದು ತೆಂಗಿನ ಕಾಯಿಯನ್ನು ಹೊಡೆಸುತ್ತೇನೆ ಎಂದು ಮನೆ ದೇವರಿಗೆ ಹರಕೆ ಹೊರುತ್ತಾನೆ.

ಹೌದು, ಇದು ತನ್ನ ಬೆವರು, ಸಮಯ ಮತ್ತು ಪರಿಶ್ರಮದಿಂದ ತಾನೇ ತನ್ನ ಕೈಯಾರ ತಂದಿರುವ ವಸ್ತುಗಳು. ಅವುಗಳ ಜವಬ್ದಾರಿ ಆ ಮನೆಯವರಿಗೆ ಸೇರಿದ್ದು. ಅದಕ್ಕೆ ಅಷ್ಟೊಂದು ಕಾಳಜಿ. ಅಷ್ಟೇ!

ಅಂದೆ ಅವನು ನಿರ್ಧರಿಸುತ್ತಾನೆ. ಮುಂದಿನ ಮನೆ ಅಂಥ ಏನಾದರೂ ಶಿಪ್ಟ ನಾನು ಮಾಡಿದರೇ.. ಅದು ನನ್ನದೇ ಸ್ವಂತ ಮನೆಗೆ ಶಿಫ್ಟ ಮಾತ್ರ. ಸಾಲ-ಸುಲ ಆದರೂ ಚಿಂತೆಯಿಲ್ಲ. ಒಂದು ಚಿಕ್ಕ ಮನೆಯನ್ನು ತೆಗೆದುಕೊಳ್ಳಬೇಕು. ಯಾಕೆಂದರೇ ಈ ಮನೆಯನ್ನು ಶಿಫ್ಟ್ ಮಾಡುವ ಜಂಜಾಡವೇ ಬೇಡ ಎಂದು. ಅಲ್ಲಿಯೇ ನಮ್ಮ ಪ್ರೀತಿಯ ವಸ್ತುಗಳಿಗೆ ಶಾಶ್ವತವಾದ ಜಾಗವನ್ನು ಕಲ್ಪಿಸಬಹುದು. ನಾವುಗಳೂ ಹೇಗಾದರೂ ಇರಬಹುದು. ಒನರ್ ಕಿರಿಕಿರಿ, ಪ್ರತಿ ವರುಷ ಬೇರೆ ಮನೆಗೆ ಹೋಗುವ ಪರಿಪರಿ ಎಲ್ಲಾದರಿಂದ ಮುಕ್ತಿ ಎಂದು ತಾನೇ ಒಂದು ಗಟ್ಟಿ ಮನಸ್ಸಿಗೆ ಬರುತ್ತಾನೆ. ಈ ಕನಸು ಹಿಡೇರಿಸಿಕೊಳ್ಳುವ ದಾರಿಗಳನ್ನು ಹುಡುಕುತ್ತಾನೆ. ಹುಡುಕುವವನಿಗೆ ನೂರಾರು ದಾರಿಗಳೂ ಎಂಬಂತೆ ಒಂದಲ್ಲಾ ಒಂದು ವೇ ಸಿಕ್ಕೇ ಸಿಗುತ್ತಾದೆ.

ಒಂದು ಎರಡು ವರುಷದಲ್ಲಿ ತನ್ನದೇ ಮನೆ, ಒಂದು ಕಾರು ಮತ್ತೊಂದು ಮನೆ. ಒಂದು ಮನೆ ನನಗೆ ಮತ್ತೊಂದು ಬಾಡಿಗೆಗೆ ಎಂದು ಎರಡು ಮನೆಯ ವಾರಸುದಾರನಾಗುತ್ತಾನೆ. ಹಳ್ಳಿಯಿಂದ ಬಂದ ಹೈದ ಬೆಂಗಳೂರು ಪೇಟೆಯಲ್ಲಿ.

ಇದೂ ಬೆಂಗಳೂರು. ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎನ್ನುವ ಗಾದೆಗೆ, ಬೆಂಗಳೂರಲ್ಲಿ ಮನೆ ಕಟ್ಟಿನೋಡು ಗೊತ್ತಾಗುತ್ತದೆ ಎಂದು ಹೊಸದಾಗಿ ಬೆಂಗಳೂರಿಗೆ ಬರುವ, ಬಂದಿರುವವರಿಗೆ ಚಿಕ್ಕದಾದ ಪಾಠವನ್ನು ಹೇಳುವ ಮಟ್ಟಿಗೆ ಬೆಂಗಳೂರನ್ನು ತನ್ನದಾಗಿ ಮಾಡಿಕೊಂಡಿರುತ್ತಾನೆ.

ಇದು ಬೆಂಗಳೂರು. ಬದುಕಲೇಬೇಕು. ಏನೇ ತಕರಾರು ಇದ್ದರು ಚಿಂತೆಯಿಲ್ಲ. ಎಲ್ಲದಕ್ಕೂ ಒಂದು ಉತ್ತರ ಇರುತ್ತದೆ. ಎಲ್ಲಾ ಹಳ್ಳಿಗಳು ಸೇರಿ ಬೆಂಗಳೂರು. ಎಲ್ಲಾ ಮನಸುಗಳು ಸೇರಿ ಬೆಂಗಳೂರು!


ಭಾನುವಾರ, ಫೆಬ್ರವರಿ 15, 2015

ಕನ್ನಡ ಪ್ರೀತಿ


ನಮಸ್ಕಾರಗಳು

ನಿಮ್ಮ ಈ ವಾರದ ಲೇಖನ ’ತಾಯ್ನುಡಿಯ ದಿನ ಮತ್ತು ದೇವನೂರರ ಮಾತಿನ ಸುತ್ತ’ ಹತ್ತು ಹಲವು ಭಾಷೆಯ ಬಗೆಯ ಮಜಲುಗಳನ್ನು ಪರಿಚಯಿಸಿತು. ಇದು ಕನ್ನಡ ನಾಡು ನುಡಿಯ ಉಳಿವಿನ ಬಗ್ಗೆ ಪ್ರತಿಯೊಬ್ಬರೂ ಯೋಚಿಸುವಂತೆ ಮಾಡಿದೆ.

ಭಾಷೆಯ ಮಾದ್ಯಮವನ್ನು ಒತ್ತಾಯ ಪೂರಕವಾಗಿ ಯಾರ ಮೇಲೂ ಹೇರಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಸಾವಿರಾರು ವಿವಿಧ ಭಾಷೆಗಳನ್ನು ಮಾತನಾಡುವ ಜನ ಸಮೂಹವೇ ಇದೆ. ಅದು ಅವರ ತಾಯಿ ನುಡಿ ಮತ್ತು ಮನೆಯ ಮಾತು.

ಕನ್ನಡಕ್ಕೆ ಬಂದರೇ ಕನ್ನಡದ ಉಳಿವು ಅಳಿವಿನ ಕೂಗು ಜಾಸ್ತಿ ಕೇಳಿ ಬರುವುದು ಬೆಂಗಳೂರಿನಲ್ಲಿ ಮಾತ್ರ ಅನಿಸುತ್ತದೆ. ಯಾಕೆಂದರೇ ಬೆಂಗಳೂರು ಅದು ಯಾವಗಲೋ ಕಂಗ್ಲೀಷ್ ಮಯವಾಗಿದೆ. ದುರ್ಬಿನ್ ಹಾಕಿಕೊಂಡು ಹುಡುಕಿದರೂ ಪೂರ್ಣ ಕನ್ನಡ ಮಾತನಾಡುವ ಜನಗಳು ಸಿಗುವುದು ದುರ್ಲಬ ಅನಿಸುವಂತಾಗಿದೆ.

ಇದಕ್ಕೆ ಉದಾಹರಣೆ ಎನ್ನುವಂತೆ ಬೆಂಗಳೂರಿನಿಂದ ಹೊರಡುವ ಪತ್ರಿಕೆಗಳು, ಟಿ.ವಿ, ರೇಡಿಯೋ ಕಾರ್ಯಕ್ರಮಗಳಲ್ಲಿ ಬಳಸುವ ಯಾವುದೇ ವಿಷಯಗಳು ಪೂರ್ಣ ಅಥವಾ ಇಂಗ್ಲಿಷ್ ಮಿಶ್ರ ಕನ್ನಡವಾಗಿರುತ್ತದೆ. ಕನ್ನಡ ಪತ್ರಿಕೆಗಳಿಗೆ ಒಮ್ಮೊಮ್ಮೆ ಮುಖಪುಟದಲ್ಲಿ ಬಳಸುವ ಸುದ್ದಿಯ ಹಣೆಬರಹಗಳನ್ನು ಸಹ ಇಂಗ್ಲಿಷ್ ನಲ್ಲಿಯೇ ಕೊಡುತ್ತಾರೆ. ಸಿನಿಮಾಗಳಂತೂ ಯಾವಗಲೋ ಇಂಗ್ಲಿಷ ಟೈಟಲ್ ಇಟ್ಟರೆ ಕ್ಲಿಕ್ ಎನ್ನುವಷ್ಟರ ಮಟ್ಟಿಗೆ ಮೊರೆ ಹೋಗಿದ್ದಾರೆ.

ಪತ್ರಿಕೆಗಳು,ಸಿನಿಮಾ,ಸಮೊಹ ಮಾಧ್ಯಮಗಳಿಗೆ ಯಾಕಪ್ಪಾ ಇಂಗ್ಲಿಷ್ ಮೋಹ ಎಂದು ಕೇಳಿದರೇ.. ಸಾರ್ ಜನಕ್ಕೆ ಬೇಕಾದ ಕ್ಯಾಚಿ ಟೈಟಲ್/ಪದಗಳನ್ನು ಇಂಗ್ಲಿಷ್ ನಲ್ಲಿ ಕೊಡುತ್ತೇವೆ. ಅದು ಜನರಿಗೆ ಬೇಗ ತಲುಪುತ್ತದೆ ಎನ್ನುತ್ತಾರೆ.

ನಾವು ಇಲ್ಲಿ ಬದುಕಬೇಕೆಂದರೇ ಕಂಗ್ಲಿಷ್ ಬೇಕೇ ಬೇಕು ಎಂದು ತಿಳಿದವರೇ ಕನ್ನಡ ಕನ್ನಡ ಎಂದು ಕೂಗುವರೇ ತಮ್ಮ ಅಸಹಾಯಕತೆಯನ್ನು ತೊಡಿಕೊಳ್ಳುತ್ತಾರೆ.

ಬೆಂಗಳೂರಿನಿಂದ ಪ್ರಾರಂಭಿಸಿ ಕಂಗ್ಲಿಷ್ ನ್ನು ಹಳ್ಳಿ ಹಳ್ಳಿಗೂ ಪಸರಿಸುವ ಕಾಯಕವನ್ನು ಕನ್ನಡವನ್ನು ಬೆಳೆಸಬೇಕಾದ ಈ ಜನರೇ ಕನ್ನಡವನ್ನು ಕೊಲ್ಲುವ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದರೇ ತಪ್ಪಿಲ್ಲ. ಅಪ್ಪಿ ತಪ್ಪಿ ಶುದ್ಧ ಶುದ್ಧ ಕನ್ನಡ ಇನ್ನೂ ಸ್ವಲ್ಪ ಇದೇ ಅಂದರೇ ಅದು ಯಾವುದೋ ಕೊನೆಯ ಮೊಲೆಯ ಹಳ್ಳಿಗಳ ಪಡಸಾಲೆಯಲ್ಲಿ ಮಾತ್ರ. ಇಲ್ಲೂ ಇನ್ನೂ ಸ್ವಲ್ಪ ದಿನದಲ್ಲಿ ಪೂರ್ಣ ಬದಲಾವಣೆಯಾದರೇ ಆಶ್ಚರ್ಯವಿಲ್ಲ. ಕನ್ನಡಕ್ಕೆ ಬೆಲೆಯೇ ಇಲ್ಲ ಎಂದರೇ ಅತಿಶಯೋಕ್ತಿಯಲ್ಲ. ಇದಕ್ಕೆ ಸಂಕಟಪಡಬೇಕಾದವರು ಯಾರು?

ಈ ರೀತಿಯ ಸನ್ನಿವೇಶದಲ್ಲಿ. ಕನ್ನಡವೇ ಬೇಕು. ಕನ್ನಡವೇ ಮಾಧ್ಯಮವಾಗಬೇಕು. ಕನ್ನಡವನ್ನೇ ಮಾತನಾಡಬೇಕು ಎಂದು ಶಾಸನವನ್ನು ಮಾಡಿದರೇ ಕನ್ನಡ ಉಳಿಯುವುದೇ?

ಕನ್ನಡವನ್ನು ಉಳಿಸಬೇಕೆಂದರೇ ಕನ್ನಡದ ಬಗ್ಗೆ ಜನರಿಗೆ ಅತಿ ಪ್ರೀತಿ ಬರುವಂತೆ ಮಾಡಬೇಕು. ಕನ್ನಡದಲ್ಲೂ ಎಲ್ಲಾ ಇದೆ ಎಂಬ ಮರ್ಮವನ್ನು ಪ್ರತಿಯೊಬ್ಬರೂ ತಿಳಿಯುವಂತಾಗಬೇಕು. ಕೊನೆ ಕೊನೆಗೆ ಹುಟ್ಟು ಕನ್ನಡಿಗರಿಗಾದರೂ ಇದರ ಘನತೆ ಅರಿಯುವಂತಾಗಬೇಕು.

ಎಲ್ಲಿ ಕನ್ನಡ ಮಾತನಾಡಿದರೇ, ಕನ್ನಡ ಪತ್ರಿಕೆ - ಪುಸ್ತಕ ಓದಿದರೇ, ಕನ್ನಡ ಸಿನಿಮಾ ನೋಡಿದರೇ, ಕನ್ನಡ ಶಾಲೆಯಲ್ಲಿ ಓದಿದರೇ ತಮ್ಮ ಮಾನ ಮರ್ಯಾದೆ ಹೋಗುತ್ತದೆ ಎಂಬ ಭಾವನೆಯನ್ನು ನಮ್ಮ ಕನ್ನಡದ ಗಡಿಯಾಚೆಗೆ ಹೊಡೆದೋಡಿಸಬೇಕು.

ಕನ್ನಡಿಗರಿಗೆ ಯಾಕೇ ಈ ನಿರಾಭಿಮಾನ ಕನ್ನಡದ ಬಗ್ಗೆ? ಯಾವ ಕಡೆಯಿಂದ ಯೋಚಿಸಿದರೂ ಉತ್ತರವೇ ಸಿಗುತ್ತಿಲ್ಲ!

ಪ್ರತಿ ವರುಷ ಜರುಗುವ ಕನ್ನಡ ರಾಜ್ಯೋತ್ಸವ, ಕನ್ನಡ ಸಮ್ಮೇಳನಗಳ ಸಂದರ್ಭದಲ್ಲಿ ಮಾತ್ರ ಈ ಬಗ್ಗೆ ಮಾತನಾಡುವುದು ಮಾತ್ರ ಎನ್ನುವಂತಾಗಬಾರದು.

ಕನ್ನಡದಲ್ಲಿ ಏನೇನೂ ಇಲ್ಲ ಎನ್ನುವವರ ಕಣ್ಣು ತೆರೆಯಿಸುವ ಕರ್ತವ್ಯ ಸರ್ಕಾರಕ್ಕಿಂತ ಜನ ಸಮೊಹ ಮತ್ತು ಜನರಿಂದಾಗಬೇಕು. ಕೇವಲ ಸರ್ಕಾರದ ಶಾಸನದಿಂದ ಯಾವುದು ಬದಲಾಗದು. ಒತ್ತಾಯದಿಂದ ಯಾರನ್ನು ಬದಲಾಯಿಸಲಾಗದು ಅಲ್ಲವಾ? ಅದು ಪ್ರೀತಿಯಿಂದಾಗಬೇಕು. ಅದೇ ಮಾತ್ರ ಶಾಶ್ವತವಾದದ್ದು.

ಇಲ್ಲವೆಂದರೇ ಈ ಕೂಗು ನಿರಂತರವಾಗಿರುತ್ತದೆ. ಕನ್ನಡದ ಜರೂರತೇ ಬೇಡ ಎಂದು ಕನ್ನಡಿಗರೇ ನಿರ್ಧಾರ ಮಾಡಿಬಿಟ್ಟರೇ ಮುಂದಿನ ಪೀಳಿಗೆಗೆ ಕನ್ನಡದ ಹಿರಿಮೆ, ಕನ್ನಡ ಕಲಿಸಿಕೊಡುವವರು ಯಾರು ಸ್ವಾಮಿ?

ಕನ್ನಡಿಗರೂ ಕೊಂಚ ತನ್ನ ತಾಯ್ನುಡಿಯ ಮೇಲಿನ ಪ್ರೇಮವನ್ನು ಅಕ್ಕ ಪಕ್ಕದ ರಾಜ್ಯದವರನ್ನು ನೋಡಿ ಕಲಿಯುವುದು ಬಹಳ ಇದೆ. ಅವರಲ್ಲಿ ಇರುವ ಪ್ರೀತಿ ನಮ್ಮಲ್ಲಿ ಯಾಕಿಲ್ಲ? ಅವರು ಎಲ್ಲಾ ರೀತಿಯಲ್ಲೂ ಮುಂದುವರಿದಿದ್ದಾರೆ. ಅವರು ಅವರ ಮಾತೃ ಭಾಷೆಯಲ್ಲಿಯೆ ತಮ್ಮ ವ್ಯವಾಹರನ್ನು ಮಾಡುತ್ತಾರೆ. ನಮ್ಮಲ್ಲಿರುವಷ್ಟು ತಮ್ಮ ಭಾಷೆಯ ಉಳಿವಿನ ಕೂಗು ಎಲ್ಲಿ ಎಂದಿಗೂ ಇಲ್ಲ. ಇದ್ದರೂ ನಮ್ಮಲ್ಲಿದ್ದಷ್ಟು ಆತಂಕಕಾರಿಯಗಿಲ್ಲ.


ಆ ಮನೋಭಾವನೆ ನಮ್ಮಲ್ಲಿ ಸ್ವಯಂ ಘೋಷಿತವಾಗಿ ಬರಬೇಕು. ಆಗ ತನ್ನಷ್ಟಕ್ಕೆ ತಾನೇ ಕನ್ನಡ ಮಾದ್ಯಮಕ್ಕೆ ಒಲಿಯುವ ಮತ್ತು ಮಣಿಯುವ ಗಟ್ಟಿ ಕನ್ನಡ ಕಲಿಗಳು ಸಿಗುತ್ತಾರೆ. ಇದರಿಂದ ಮಾತ್ರ ಕನ್ನಡದ ಭವಿಷ್ಯವನ್ನು ಕೊಂಚ ನಿರಕ್ಷಿಸಬಹುದು.


 

ಶನಿವಾರ, ಫೆಬ್ರವರಿ 7, 2015

ನಾನು ನನ್ನ ಜೀವ!

ಸಂತೋಷ, ಪೂರ್ಣ ಸಂತೋಷ ಕ್ಷಣ ಯಾವುದು ಎಂದು ಹೇಳಲು ನಾನು ನನ್ನ ಜೀವದ ಜೀವವನ್ನು ಕಾಣಬೇಕಾಯಿತು.

ಇದೆ ಇರಬೇಕು. ಅಬ್ಬಾ ಒಂಬತ್ತು ತಿಂಗಳು ಹೊತ್ತು ಎತ್ತಿದ ಈ ನನ್ನ ಜೀವದ ಜೀವ ಅಂಕುರವಾದ ದಿನದಿಂದ ಇಂದು ನನ್ನ ಮುಖಕ್ಕೆ ಅದು ನೀಡುವ ಕಚ್ಚು ಕಚ್ಚು ಮುತ್ತಿನವರೆಗೂ ಒಂದೊಂದು ಕ್ಷಣವನ್ನು ನಾನು ನನ್ನ ಉಸಿರಾಗಿ ಅನಿಭವಿಸಿದ್ದೇನೆ.

ಅದಕ್ಕೆ ಇರಬೇಕು ಎಲ್ಲಾ ತಾಯಂದಿರಿಗೆ ಎಲ್ಲಾ ಮಕ್ಕಳ ಮೇಲೆ ಅದೇ ಸಮಾನದ ಪ್ರೀತಿಯನ್ನು ಕೊಡಲು ಸಾಧ್ಯ.

ಅದು ಮಾತ್ರ ಒಬ್ಬ ತಾಯಿಗೆ ಮಾತ್ರ ಸಾಧ್ಯ. ಅದಕ್ಕೆ ಮಮತಾಮಹಿ ಎನ್ನುವುದು.

ತಾಯಿಯಾಗುವುದು ಹೆಣ್ಣಿನ ಪುನರ್ ಜನ್ಮವೇ ಸರಿ. ಎಷ್ಟು ಭಯ, ಕಾತುರಗಳು.

ನನ್ನ ಮಡಿಲಲ್ಲಿ ಅದು ಪ್ರಾರಂಭಿಸುವ ಚಲನೆಗಳು ನನ್ನನ್ನು ಒಮ್ಮೊಮ್ಮೆ ಭಯ ಮತ್ತು ಅಚ್ಚರಿಗೆ ದೂಡುತ್ತಿತ್ತು. ಒಂದು ಚಿಕ್ಕ ಬಿಂದು ಅಂಶದಿಂದ ಸಮಸ್ತತತೆಗೆ ಬಂದು ನಿಲ್ಲುವ ಆ ಉಸಿರಿನ ವಿಸ್ಮಯ ಎಷ್ಟೊಂದು ಅಗಾಧವಾದದ್ದು.

ನಾನು ನನ್ನನ್ನೇ ಚೆನ್ನಾಗಿ ನೋಡಿಕೊಳ್ಳಲು ಬರುವುದಿಲ್ಲ ಎಂಬುದು ನನ್ನ ಅಮ್ಮ, ಅಪ್ಪರ ದೂರು.

ಆದರೆ ನನಗೆ ನನ್ನದೆಯಾದ ಜೀವ ನನ್ನ ಕೈಯಲ್ಲಿದೆ. ತಾಯಿತನವೇ ಹೆಣ್ಣನ್ನು ಪೂರ್ಣ ಹೆಣ್ಣಾಗಿ ಮಾರ್ಪಡಿಸಿಬಿಡುತ್ತದೆ ಅನಿಸುತ್ತದೆ.


 

ಒಂಬತ್ತು ತಿಂಗಳ ಪ್ರತಿ ಸೆಕೆಂಡು ಇನ್ನೊಂದು ಜೀವ ನನ್ನ ಮಡಿಲಲ್ಲಿ ಇದೆ. ಆದರ ಬಗ್ಗೆ ಪ್ರತಿ ಸೆಕೆಂಡು ಚಿತ್ರ ವಿಚಿತ್ರವಾದ ಚಿತ್ತಾರವನ್ನು ಮನಸ್ಸಲ್ಲಿ ಕಲ್ಪಿಸಿಕೊಳ್ಳುವುದು ಯಾರೊಬ್ಬರಿಗೂ ಸಿಗದ ಅಪರೂಪದ ಅನುಭವ.

ಬಸುರಿತನ ನನಗೊಬ್ಬಳಿಗೆ ಅಲ್ಲಾ. ಮನೆಯಲ್ಲಿ ನನ್ನ ಗಂಡನಿಂದ ನನ್ನ ಹೆತ್ತವರು, ಸಂಬಂಧಿಕರು, ನೆರೆಹೊರೆಯವರು ಪ್ರತಿಯೊಬ್ಬರೂ ಆಧರಿಸುವ ರೀತಿಯನ್ನು ಕಂಡು ಇನ್ನೂ ಹೆಚ್ಚು ಹೆಚ್ಚು ನನ್ನ ಜೀವದ ಬಗ್ಗೆ ನಾನು ಅಚ್ಚಿಕೊಳ್ಳಲು ಪ್ರಾರಂಭಿಸಿದೆ ಅನಿಸುತ್ತದೆ. ಈ ಒಂದು ಮಗು ಸುಖವಾಗಿ ಜನನವಾಗಿಬಿಟ್ಟರೆ ಸಾಕು ಎಂದು ದಿನ ನಿತ್ಯ ದೇವರಿಗೆ ಪ್ರಾರ್ಥನೆಯನ್ನು ಮಾಡುತ್ತಿದ್ದೆ.

ಜೀವ ಹೊಟ್ಟೆಯಲ್ಲಿ ಇದ್ದಾಗ ಎಷ್ಟೊಂದು ಕುತೂಹಲ. ಆದರೆ ಮೊದಲ ಸಲ ಆಸ್ಪತ್ರೆಯಲ್ಲಿ ಹೊಟ್ಟೆಯಲ್ಲಿ ಚಲಿಸುತ್ತಿರುವ ಆ ಅಸ್ಪಷ್ಟ ಚಿತ್ರವನ್ನು ನೋಡಿದಾಗ ಆದ ಭ್ರಮೆ ಆ ರಾತ್ರಿಯಿಡಿ ಸಂಭ್ರಮದಲ್ಲಿ ಇರುವಂತೆ ಮಾಡಿತ್ತು. ಅದು ನನ್ನ ಬೇಸ್ಟ್ ದಿನವಾಗಿತ್ತು. ನನ್ನ ಮುದ್ದು ಜೀವವನ್ನು ನನ್ನ ಯಜಮಾನರು ನೋಡಿ ಅವರ ಕಣ್ಣಲ್ಲಿ ಕಂಡ ಆಶ್ಚರ್ಯವನ್ನು ಕಂಡು ನನಗಂತೂ ಕುತೂಹಲವಾಯಿತು. ಅವರಿಗು ಹೆಮ್ಮೆಯಾಗಿರಬೇಕು ಅಪ್ಪನಾಗುತ್ತಿದ್ದೇನೆ ಎಂದು!

ಡಾಕ್ಟರ್ ಹೇಳಿದಕ್ಕೆಲ್ಲಾ ನಾವಿಬ್ಬರು ಕತ್ತು ಆಡಿಸಿದ್ದು. ಅವರು ನಮ್ಮನ್ನು ಇನ್ನೂ ಚೆನ್ನಾಗಿ ಹೆದರಿಸಬೇಕೇ ಎಂಬ ರೀತಿಯಲ್ಲಿ ಹೇಳುತ್ತಿದ್ದಾರೆ ಎಂದು ನಮ್ಮಿಬ್ಬರಿಗೂ ಅನಿಸುತ್ತಿತ್ತು. ನಮ್ಮವರು ಅವರು ಬರೆದುಕೊಟ್ಟಿದ್ದ ಔಷದಿಗಳನ್ನೇಲ್ಲಾ ಎಷ್ಟೊಂದು ಸಂಭ್ರಮದಲ್ಲಿ ತಂದುಕೊಟ್ಟು, ಅದು ಇದು ಹೀಗೆ ಜೀವದ ಕಾಳಜಿಯ ಬಗ್ಗೆ ಹೇಳಿದ್ದು ನಾನೊಂತೂ ಒಳಒಳಗೆ ಖುಷಿಪಟ್ಟಿದ್ದೆ.

ಪಾಪ ಈ ಗಂಡ ಪ್ರಾಣಿ ನನ್ನ ಬಗೆ ಎಷ್ಟೊಂದು ಮುತುವರ್ಜಿವಹಿಸುತ್ತಿದ್ದಿಯಲ್ಲಾ! ಪಾಪ ಒಳ್ಳೆ ಗಂಡ! ಎಂದು ಹೆಮ್ಮೆಯಾಯಿತು.

ನನಗೆ ಅನಿಸುತ್ತದೆ. ಗಂಡನಿಂದ, ಹೆತ್ತವರಿಂದ, ನೆರೆಹೊರೆಯವರಿಂದ ನಮ್ಮ ಬಗ್ಗೆ ಹೆಚ್ಚು ಕಾಳಜಿವಹಿಸಿಕೊಳ್ಳಬೇಕು ಅಂತಾ ನಿಮಗೆ ಆಸೆಯಿದ್ದರೆ ಒಂದು ಮಗುವನ್ನು ಹೇರಬೇಕು! ( ನನ್ನ ಮಾತು ನಂ(ಬಿ)ಬಬೇಡಿ)

ಜೀವದ ಕುರುಹು ಸಿಕ್ಕ ಮೇಲೂ ನಾವಿಬ್ಬರೂ ನಮ್ಮ ನಮ್ಮ ಮನೆಯವರಿಗೆ ಹೇಳಲು ಪಟ್ಟ ಸಂಕೋಚ ಯಾವ ದೇವರಿಗೂ ಬೇಡ. ಅವರೇ ಮೊದಲು ಅವರ ಮನೆಯವರಿಗೆ ಹೇಳಿ ಅವರ ಭಾರವನ್ನು ಇಳಿಸಿಕೊಂಡರು.

ನಾನು ನನ್ನ ಅಮ್ಮನಿಗೆ ಹೇಳಲು ಒಂದು ವಾರ ಕಾದಿದ್ದು.. ಯಾಕೇ? ಇನ್ನು ನಾನು ಅವರ ಪಾಲಿನ ಚಿಕ್ಕ ಮಗುವೇನೂ ಅಂದುಕೊಂಡಿರಬೇಕು ನಾನು. ಅದಕ್ಕೆ ಅವರಿಗೆ ಈ ನಾನು ಅಮ್ಮನಾಗುವ ವಿಷಯ ತಿಳಿಸಲು ಕಸಿವಿಸಿಯಾಗಿರಬೇಕು.

ಹೀಗೆ ಹೀಗೆ ಸಾಗಿ ಒಂದೊಂದು ತಿಂಗಳು ಜೀವ ತನ್ನ ರೂಪ ತಾನು ಪಡೆಯಿತ್ತಿತ್ತು. ಹೀಗೆಯೇ ನಾನು ಸಹ ನನ್ನ ಅಮ್ಮನ ಮಡಿಲಲ್ಲಿ ಹೇಗೆಲ್ಲಾ ಇದ್ದಿರಬಹುದು... ಹೀಗೆ ನನ್ನ ಅಮ್ಮ ನನ್ನನ್ನು ಹೊತ್ತುಕೊಂಡಿದ್ದಾಗ ನಾನು ಈಗ ಯೋಚಿಸಿರ ರೀತಿಯಲ್ಲಿ ಅವರ ಅಮ್ಮನ ಬಗ್ಗೆ ಯೋಚಿಸಿರಬಹುದೇ ಎಂದು ನನ್ನ ನನ್ನಲ್ಲಿಯೇ ಅಂದುಕೊಳ್ಳುತ್ತಿದ್ದೆ.

ನಮಗಾಗಿ ನಮ್ಮ ಹೆತ್ತವರ ಕಾಣಿಕೆಯ ಅರಿವಾಗಬೇಕು ಎಂದರೇ, ನಾವುಗಳು ಸಹ ತಂದೆ ತಾಯಿಗಳೂ ಆಗಬೇಕು! ಆದರೂ ಸಹ ಯಾಕೆ ಇಂದು ಮಕ್ಕಳು ಅವರ ಹೆತ್ತವರನ್ನು ದೊಡ್ಡವರಾದ ಮೇಲೆ ಕೇವಲವಾಗಿ ಕಾಣುತ್ತಾರೆ. ಅವರಿಗೂ ಮಕ್ಕಳಾಗಿರುತ್ತಾರೆ. ಅವರಿಗೂ ಗೊತ್ತು ಅವರ ಹೆತ್ತವರು ಅವರಿಗಾಗಿ ಎಷ್ಟು ತ್ಯಾಗ ಮಾಡಿರುತ್ತಾರೆ ಎಂದು. ಯಾಕೆ? ಹೆತ್ತವರ ಪ್ರಾಮುಖ್ಯತೆ ಇನ್ನೂ ಸಹ ನಮ್ಮ ಜನಗಳಿಗೆ ಅರ್ಥವಾಗುತ್ತಿಲ್ಲ?

ನಿಜವಾಗಿಯೂ ಈ ಜೀವ ಬಂದ ಮೇಲೆ ನನ್ನ ಒಂದೊಂದು ಉಸಿರು ಈ ಜೀವದ ಉನ್ನತೆಗಾಗಿ ಬಡಿಯುತ್ತದೆ. ನನ್ನ ನಿದ್ದೆಯೆಲ್ಲಾ ಈ ಜೀವ ಆರಾಮಾಗಿ ರಾತ್ರಿಯೆಲ್ಲಾ ಚೆನ್ನಾಗಿ ಮಲಗಿದರೇ ಸಾಕಪ್ಪ ಅನಿಸುತ್ತದೆ. ಯಾವ ಕಾಯಿಲೆ ಕಸಾಲೆ ಇಲ್ಲದೆ ಇದ್ದರೆ ಸಾಕು. ಹೊತ್ತಾಲ್ಲ ಹೊತ್ತಲ್ಲಿ ಗಳಿಗೆ ಗಳಿಗೂ ಎದ್ದು ಮಗು ಹೇಗೆ ಮಲಗಿದೆ. ಅದಕ್ಕೆ ಹಾಲು ಬೇಕಾ? ಏನಾದರೂ ಆಗಿದೇಯಾ? ರಾತ್ರಿಯಲ್ಲಿ ಏನಾದರೂ ಹಾಸಿಗೆಯಲ್ಲಿ ಒದ್ದೆ ಮಾಡಿಕೊಂಡು ಶೀತವಾಗಿ ಮಲಗಲು ತೊಂದರೆಯಾಗಬಹುದೆಂದು ಬಾರಿ ಬಾರಿ ಬಟ್ಟೆಯನ್ನು ಬದಲಿಸುವುದು... ಜೀವ ಹುಟ್ಟಿದ ಎರಡು ತಿಂಗಳು ಕಣ್ಣುಮುಚ್ಚಿ ಪೂರ್ಣ ನಿದ್ದೆಯನ್ನಂತೂ ನಾನು ಎಂದು ಮಾಡಿಲ್ಲ.

ಅದು ನನ್ನ ಪಕ್ಕ ಮಲಗಿದ್ದಾಗ ನನಗೆ ಎಷ್ಟು ಸಂಭ್ರಮ. ಅದಕ್ಕೆ ಏನೊಂದು ಅರಿವಾಗುವುದಿಲ್ಲ. ಅದಕ್ಕೆ ಬೇಕಿರುವುದು ತಾಯಿಯ ಪ್ರೀತಿಯ ಎದೆ ಹಾಲು ಮತ್ತು ಬೆಚ್ಚನೆಯ ಮಡಿಲು. ಅವೆರೆಡೇ ಅದಕ್ಕೆ ದೈರ್ಯ ಅನಿಸುತ್ತದೆ.

ಇದನ್ನು ನೋಡಿ ನನ್ನ ಅಪ್ಪ,ಅಮ್ಮ ನನ್ನ ಬಗ್ಗೆ ಹೇಗೆ ಯೋಚಿಸಿರಬಹುದು? ಎಂದು ಮನದಲ್ಲಿಯೇ ಲೆಕ್ಕ ಹಾಕಿಕೊಳ್ಳುತ್ತಿದ್ದೆ.

ಅಪ್ಪನಿಗಿಂತ ಅಮ್ಮನಿಗೆ ಮಕ್ಕಳ ಬಗ್ಗೆ ಎಲ್ಲೂ ಇಲ್ಲದ ಕಕ್ಕುಲಾತಿ. ಹೌದು ಅದು ನಿಜ. ಅಮ್ಮನಿಗೆ ಮಕ್ಕಳು ಅವಳ ಜೀವದ ಇನ್ನೊಂದು ಭಾಗವೇ ಸರಿ. ಅವಳು ತನ್ನ ರಕ್ತದಿಂದ ಇನ್ನೊಂದು ಜೀವವನ್ನು ಸೃಷ್ಟಿಸಿದ್ದಾಳೆ ಅಂದರೇ ತಪ್ಪಲ್ಲಾ!

ಅದಕ್ಕೆ ಇರಬೇಕು ಅದರ ಒಂದೊಂದು ಮೊಮೆಂಟು ತನ್ನದೇ ಮೊಮೆಂಟು ಅನಿಸುತ್ತದೆ. ಅದಕ್ಕೆ ಏನಾದರೂ ತನಗೆ ನೋವಾದ ಅನುಭವವಾಗುತ್ತದೆ. ಪ್ರತಿಕ್ಷಣವೂ ಅದರ ಜೊತೆಯಲ್ಲಿರುವ ಭಾಗ್ಯ ಮಗು ಹುಟ್ಟಿದ ಆ ಎರಡು ತಿಂಗಳು ನನಗೆ ಬೇರೆಯ ಪ್ರಪಂಚವೇ ಆಗಿತ್ತು.

ಹುಟ್ಟುವ ದಿನ ಸಂಭ್ರಮಪಡಬೇಕೋ? ಆ ನೋವು ಯಾತಾನೇಗೆ ಅಳಬೇಕೋ?

ಒಂದು ಕಡೆ ಮಗು ನೋಡಿ ಖುಷಿಯಾಗುತ್ತಿತ್ತು. ಇನ್ನೊಂದು ಕಡೆ ಆ ನೋವು ಜನ್ಮದಲ್ಲಿ ಮತ್ತೆಂದೂ ಇನ್ನೊಂದು ಮಗುವೇ ಬೇಡಪ್ಪ ಅನಿಸಿದ್ದಂತೂ ನಿಜ.

ಪ್ರತಿಯೊಬ್ಬರ ಮುಖದಲ್ಲು ಖುಷಿ. ಸುಖವಾಗಿ ಹೆರಗೆಯಾಗಿದೆ. ಮಗುವು ಚೆನ್ನಾಗಿದೆ. ನನಗಂತೂ ಅದರ ಮುಖ ನೋಡಿ ಕಣ್ಣಲ್ಲಿ ಆನಂದ ಭಾಷ್ಪವೇ ಬರುತ್ತಿತ್ತು.

ದೇಹದಲ್ಲಿ ಸಾವಿರ ನೋವುಗಳು ಇದ್ದರೂ ಅದರ ಮುಖ ನೋಡಿದಾಗ ಆ ನೋವುಗಳನ್ನು ಶಮನ ಮಾಡುವ ಆಕರ್ಷಣೆ ಈ ಪುಟ್ಟ ಮುಗದಲ್ಲಿ ಆ ದೇವರು ಅದು ಹೇಗೆ ಇಟ್ಟಿದ್ದಾನೆ! ಎಂದು ಅಚ್ಚರಿಯಾಗುತ್ತಿತ್ತು.

ಇಂದು ನನ್ನ ಹುಟ್ಟು ಹಬ್ಬ ನನ್ನ ಕೈಯಲ್ಲಿ ನನ್ನ ಜೀವವಿದೆ. ಅದಕ್ಕೆಲ್ಲಿ ಗೊತ್ತು ಹೆತ್ತಮ್ಮನ ಜನ್ಮ ದಿನ ಇಂದು ಎಂದು. ಬುದ್ಧಿಬರಬೇಕು ಬಂದು ಅದರ ಕೈಯಿಂದ ನಾನು ನನ್ನ ಜನ್ಮ ದಿನದ ಉಡುಗೊರೆಯನ್ನು ನಾನೇ ನನ್ನ ಕೈಯಾರೇ ಪಡೆಯಬೇಕು. ಆಗ ನನ್ನ ನಿಜವಾದ ಜನ್ಮದಿನ.

ಇದೆ ವರುಷದ ಹಿಂದೆ ನನ್ನ ಹೊಟ್ಟೆಯಲ್ಲಿ ಬುಳು ಬುಳು ಎಂದು ಓಡಾಡುತ್ತಿದ್ದ. ಇಂದು ನನ್ನ ತೊಡೆಯ ಮೇಲೆ ಆ.. ಊ..ಈ ಎಂದು ಕುಣಿಯುತ್ತಿದ್ದಾನೆ. ಅದು ದೇವರ ನಗುವನ್ನು ತನ್ನ ಬೊಚ್ಚು ಬಾಯಿಯಲ್ಲಿ ನನ್ನ ನೋಡಿ ನೋಡಿ!

ಇದಕ್ಕಿಂತ ದೊಡ್ಡ ಉಡುಗೊರೆ ಬೇಕೇ? ಆ ದೇವರು ಕೊಟ್ಟ ಅತಿ ದೊಡ್ಡ ಗಿಫ್ಟ್ ಈ ನನ್ನ ಜೀವ.

ನಾನು ನನ್ನ ಜೀವ!