ಭಾನುವಾರ, ಡಿಸೆಂಬರ್ 15, 2013

ಪ್ರೀತಿಯ ಆಕರ್ಷಣೆಯ

ಪ್ರೀತಿ ಮಾಯೆ ಎಂದು ಹೇಳುತ್ತಾರೆ. ಅದಂತೂ ನಿಜವೆನಿಸಿಬಿಟ್ಟಿದೆ.ಅದು ಯಾವ ಸಮಯದಲ್ಲಿ ಹೇಗೆಲ್ಲಾ ಸಂಭವಿಸುತ್ತದೋ ದೇವರಿಗೆ ಮಾತ್ರ ಗೊತ್ತು. ಪ್ರೀತಿ, ಪ್ರೇಮ ಎಂಬ ಜಾಲದಲ್ಲಿ ನಾನು ಎಂದಿಗೂ ನನಗೆ ತಿಳಿದ ಮಟ್ಟಕ್ಕೆ ಬೀಳಲೇ ಬಾರದು ಎಂದು ಶತ ಶತ ಶಪಥ ಮಾಡಿದ್ದೇನು.ಯಾರದರೂ ಸ್ನೇಹಿತರು ಹುಡುಗಿಯರು, ಪ್ರೀತಿಗೀತಿ ಎಂದು ಮಾತನ್ನಾರಂಭಿಸಿದರೇ ಓ ಶುರುವಾಯಿತು ಇವನ ಪುರಾಣ ಎಂದು ನಿತ್ಯ ಮೂಗು ಮುರಿದಿದ್ದೇನು.

ಇನ್ನೂ ನನ್ನನ್ನು ತಿಳಿದವರೆಲ್ಲಾ ಈ ಪ್ರಾಣಿಗೆ ಪ್ರೀತಿ, ಸ್ನೇಹ, ಹುಡುಗಿಯರು ಈ ಪದಗಳ ಅರ್ಥವೇ ಗೊತ್ತಿಲ್ಲ ಬಿಡ್ರೋ ಎಂದು ನನ್ನನ್ನು ನನ್ನ ಗೆಳೆಯರ ಸರ್ಕಲ್ ನಲ್ಲಿ ಬೇರೊಂದು ಗ್ರಹದಿಂದ ಬಂದವನಂತೆ ಕಾಣುತ್ತಿದ್ದರು. ಆದರೂ ನನಗಂತೂ ಎಂದಿಗೂ ಆ ಸಮಯಕ್ಕೆ ಬೇಜಾರು ಆಗುತ್ತಿರಲಿಲ್ಲ. ನನಗೆ ನನ್ನಲ್ಲಿಯೇ ಖುಷಿಯಾಗುತ್ತಿತ್ತು.  ನನ್ನನ್ನು ನನ್ನ ಗೆಳೆಯರೆಲ್ಲಾ ಹೀಗೆ ಗುರುತಿಸುತ್ತಿದ್ದರಲ್ಲಾ! ಎಂಬ ಸಂತೋಷ ಒಂದು ಕಡೆಯಾದರೇ.. ಅಂತೂ ಆ ಸಿನಿಮಾದಲ್ಲಿ ತೋರಿಸುವ ಪ್ರೀತಿ, ಆ ನೋವು, ಆ ಹುಡುಗಿಯರು ಹೇಳುವಂತೆ ಕೇಳುವುದು, ಅವರಿಗಾಗಿ ಬದುಕುವುದು, ಅವರಿಗಾಗಿ ಅಲ್ಲಿ ಅಲ್ಲಿ ತಿರುಗಾಡುವುದು ಏನೊಂದು ಇಲ್ಲದೇ ನನಗೆ ನಾನೇ ರಾಜನು ಅನಿಸಿಬಿಟ್ಟಿತ್ತು.

ನನ್ನ ಕಿವಿಗೆ ಅಲ್ಲಿ ಇಲ್ಲಿಂದ ಆಗಾಗ ಸ್ನೇಹಿತರ ಪ್ರೇಮ ಕಥೆಗಳು ಬಿದ್ದಾಗ.. ಅವರ ಪಲಿತಾಂಶಕ್ಕಿಂತ, ಅವರುಗಳು ಹೇಗಲ್ಲಾ ಹುಡುಗಿಯರನ್ನು ತಮ್ಮ ಕಡೆ ಸೆಳೆಯಲ್ಲು ಮಾಡುತ್ತಿದ್ದ ಕಸರತ್ತುಗಳು, ಅವರಿಗಾಗಿ ಕಾಲೇಜು ಕ್ಯಾಂಪಸ್ ಗಳಲ್ಲಿ ತಮ್ಮ ಅಮೊಲ್ಯವಾದ ಕ್ಷಣಗಳನ್ನು ವ್ಯರ್ಥ ಮಾಡಿಕೊಂಡು ಪರಿತಪಿಸುವ ಮಾತುಗಳು ಕರ್ಣಾನಂದವಾಗುತ್ತಿತ್ತು. ಮನದಲ್ಲಿಯೇ ಮಕ್ಕಳಿಗೆ ಹೀಗೆ ಆಗಬೇಕು. ಈಗಲೇ ಅದು ಎಲ್ಲಿಂದ ಲವ್ ಮತ್ತು ಪ್ರೀತಿಯ ಆಕರ್ಷಣೆಯ ಸೆರೆಗೆ ಬಿದ್ದು ಬಿಳುತ್ತಿದ್ದರಲ್ಲಾಪ್ಪಾ ಎಂದು ಆಶ್ಚರ್ಯಪಡುತ್ತಿದ್ದೆ. ಹಾಗೆಯೇ ನಿಜವಾಗಿಯೂ ಈ ಪ್ರೀತಿ ಸಿನಿಮಾ ಕಥೆಗಳಲ್ಲಿ ವರ್ಣಿಸಿದ ರೀತಿಯಲ್ಲಿ ಆಕಸ್ಮಿಕವಾಗಿ ಹೀಗೆ ಪ್ರತಿಯೊಬ್ಬರಿಗೂ ತನ್ನೊಳಗೆ ಸೆಳೆದುಕೊಳ್ಳುತ್ತದೆಯೇ.. ಯಾಕೆ ನನಗೆ ಒಮ್ಮೆಯೂ ಆ ರೀತಿಯ ಅನುಭವವೇ ಆಗಿಲ್ಲ. ಯಾಕೆ ಯಾರೊಬ್ಬರೂ ನನ್ನ ಮನವನ್ನು ಮೆಚ್ಚುವಂತೆ ನನ್ನ ಮುಂದೆ ನಿಂತಿಲ್ಲ. ಯಾಕೆ ಕ್ಯಾಂಪಸ್ ನಲ್ಲಿಯ ಒಬ್ಬಳೇ ಒಬ್ಬಳಾದರೂ ಯಾವ ರೀತಿಯಲ್ಲಿಯಾದರೂ ನನಗೆ ಹಿಡಿಸಿಲ್ಲ ಎಂದು ಚಿಕ್ಕದಾಗಿ ಮನಸ್ಸಿಗೆ ಬರುತ್ತಿತ್ತು. ಆದರೂ ಅದರ ಬಗ್ಗೆಯೇ ಹೆಚ್ಚು ತಲೆ ಕೆಡಿಸಿಕೊಳ್ಳಬೇಕೆಂಬ ಆಸೆಗಿಂತ ಕಾಲೇಜು, ಕ್ಲಾಸ್, ಸಿಲಬಸ್ ಎಂಬ ತಲೆ ನೋವೆ ಜಾಸ್ತಿಯಾಗಿಬಿಡುತ್ತಿತ್ತು. ಪರೀಕ್ಷೆ ತಯಾರಿ ಇತ್ಯಾದಿಯಲ್ಲಿ ನನ್ನೇಲ್ಲಾ ಸಮಯವನ್ನು ಕಳೆದು ಬಿಟ್ಟೆ ಎಂದು ಅಂದು ಆ ಹುಡುಗಿ ಸಿಕ್ಕಿದ ದಿನವೇ ಅನಿಸಿದ್ದು.

ಅದು ಆಕಸ್ಮಿಕವೇ.. ಅಥವಾ ಅದೃಷ್ಟವೋ ಗೊತ್ತಿಲ್ಲ. ಇಂಜಿನಿಯರ್ ಕೊನೆಯ ವರುಷ, ಕೊನೆಯ ದಿನ.. ಅಂದು ಕಾಲೇಜಿನಲ್ಲಿ ಕಾಲೇಜೆ ಮದುವಣಗೀತ್ತಿಯಂತೆ ಶೃಂಗಾರಗೊಂಡಿತ್ತು. ನನಗೋ ಮನದಲ್ಲಿಯೇ ಬೇಸರ ನಾಲ್ಕು ವರುಷದ ಪ್ರೀತಿಯ ಕಾಲೇಜಿನ ಓಡನಾಟಕ್ಕೆ ಕೊನೆ ಇಂದು. ನಾಳೆ ಇಲ್ಲಿಗೆ ಪುನಃ ಬರಲಾರೇನು. ಬಂದರು ಅದೇ ಪ್ರೀತಿಯ ತರಗತಿ, ಪಾಠ, ಹಿಂದಿನ ಬೆಂಚು, ಲೆಕ್ಚರ್ ಇವರುಗಳನ್ನೆಲ್ಲಾ ಕಾಣಲಾರೇನು. ಮುಂದಿನ ಎರಡು ತಿಂಗಳಾದ ಮೇಲೆ ಬೆಂಗಳೂರು ಪಯಣ ಕೆಲಸದ ಹುಡುಕಾಟ ನೆನಸಿಕೊಂಡರೇ ಮೈ ಜುಂ ಎಂದಿತು. ಆದರೂ ಇಂದು ತರಗತಿಯ ಎಲ್ಲಾ ವಿದ್ಯಾರ್ಥಿಗಳ ಗ್ರೂಪ್ ಪೋಟೋ ಸೆಷನ್, ಅದ್ದರಿಂದ ಇದ್ದುದರಲ್ಲಿಯೇ ಒಳ್ಳೆಯ ಬಿಳಿ ಶರ್ಟ ಹಾಕಿಕೊಂಡು, ನಾಲ್ಕು ವರುಷಗಳಲ್ಲಿ ಎಂದೂ ಇನ್ ಶರ್ಟ್ ಮಾಡಿಕೊಳ್ಳದವನು ಅಂದು ಗೆಳೆಯರ ಒತ್ತಾಯಕ್ಕಾಗಿ ಮಾಡಿಕೊಂಡು ಅರ್ಧ ಖುಷಿ, ಅರ್ಧ ಭಯದಿಂದ ಹೊರಟಿದ್ದೆ.

ಅಂದು ಯಾಕೊ ಏನನ್ನೋ ಕಳೆದಕೊಂಡ ಅನುಭವ.. ನಾಲ್ಕು ವರುಷ ಅಲ್ಲಿ ಆ ಜಾಗದಲ್ಲಿಯೇ ಕಾಲೇಜು ಬಸ್ಸಿಗಾಗಿ ಮುಂಜಾನೇ ಸರಿಯಾಗಿ ೬.೪೫ಕ್ಕೆ ಬಂದು ಕಾಯುತ್ತಿದ್ದ ಜಾಗವನ್ನು ಪುನಃ ಇಲ್ಲಿ ನಾಳೆ ನಿಲ್ಲಲಾರೆನು ಎಂಬ ಭಯದಲ್ಲಿ ನಿಂತು ಪುನಃ ಪುನಃ ನೋಡಿದ್ದೇನೂ. ಹುಡುಗರು ಒಂದು ಕಡೆ ನಿಲ್ಲುವುದು, ಹುಡುಗಿಯರು ಒಂದು ಕಡೆ ನಿಲ್ಲುವುದು ನಮ್ಮಲ್ಲಿನ ವಾಡಿಕೆ.. ನಾವು ನಿಲ್ಲುವ ಕಡೆ ಆ ಹುಡುಗಿಯರು ಯಾಕೋ ಎಂದು ಬಂದು ನಿಂತಿಲ್ಲ. ಅದು ಯಾಕೆ ಎಂದು ನಾನಾಗಲಿ ನಮ್ಮಲ್ಲಿನ ಯಾರೊಬ್ಬರೂ ಎಂದು ಕೇಳಿಕೊಂಡಿದ್ದಿಲ್ಲ. ಬಸ್ ಬಂದಾಗ ನಾವುಗಳು ಅವರು ನಿಂತಿರುವ ಜಾಗಕ್ಕೆ ಹೋಗಿ ಹಿಂದಿನ ಡೋರ್ ನಲ್ಲಿ ಬಸ್ ಹತ್ತುತ್ತಿದ್ದೇವು. ಹುಡುಗಿಯರು ಮುಂದಿನ ಡೋರ್ ನಲ್ಲಿ ಹತ್ತುತ್ತಿದ್ದರು. ಈ ಪರಿಪಾಟ ಯಾಂತ್ರಿಕತೆಯಲ್ಲಿ ಸಾಗುತ್ತಿತ್ತು.  ಅಂದು ಯಾಕೋ ಬಸ್ ಬೇಗ ಬಂದುಬಿಡುತ್ತೇನೋ ಎಂಬ ಭಯ ಸಂಕೋಚ ಕೊಂಚ ಲೇಟ್ ಆಗಿ ಬಂದಿದರೇ ಸಾಕು ಎಂಬ ಕೋರಿಕೆ.

ಇಂದು ಆ ಕಡೆಯ ಹುಡುಗಿಯರು ನಿಲ್ಲುವ ಜಾಗದ ದೃಶ್ಯ ಸಂಪೂರ್ಣ ವರ್ಣಮಯವಾಗಿತ್ತು. ಇವರುಗಳು ನಮ್ಮ ಕಾಲೇಜು, ನಮ್ಮ ಕ್ಲಾಸ್ ನವರ ಎಂಬ ರೀತಿಯಲ್ಲಿ ಪ್ರತಿಯೊಬ್ಬರ ಧಿರಿಸು ಬದಲಾಗಿತ್ತು. ಪ್ರತಿಯೊಬ್ಬರೂ ಬಣ್ಣ ಬಣ್ಣದ ಸೀರೆಗಳನ್ನು ಉಟ್ಟುಕೊಂಡು ಬಂದಿದ್ದರೂ. ಮುಖಗಳು ಸಹ ಹೆಚ್ಚು ಸುಂದರವಾಗಿಯೇ ಕಂಡವು. ನಾನು ಹೊಸದಾಗಿ ನೋಡುತ್ತಿದ್ದೇನೋ ಎಂಬ ರೀತಿಯಲ್ಲಿ ನೋಡಿದೆ. ನನ್ನ ತರಗತಿಯ ಹುಡುಗಿಯರನ್ನು ಹೊಸದಾಗಿ ನೋಡುವಂತೆ ನೋಡಿದೆ. ಅಯ್ಯೋ ಇಷ್ಟೊಂದು ಚೆನ್ನಾಗಿದ್ದಾರಲ್ಲಾ ಎಂದು ಮನದಲ್ಲಿಯೇ ಅಂದುಕೊಂಡೇ ಅಷ್ಟೊತ್ತಿಗೆ ಬಸ್ ಬಂತು.. ಎಲ್ಲರೂ ಸಡಗರದಲ್ಲಿ ಬಸ್ ಹತ್ತಿ ಕಾಲೇಜಿಗೆ ಬಂದೆವು.

ಪ್ರತಿಯೊಬ್ಬರೂ ತಮ್ಮ ತಮ್ಮ ಸ್ಲ್ಯಾಮ್ ಪುಸ್ತಕದಲ್ಲಿ ತಮ್ಮ ತಮ್ಮ ಕಾಂಟ್ಯಾಕ್ಟ್ ಗಳನ್ನು ವಿನಿಮಯ ಮಾಡಿಕೊಂಡು ಟಚ್ ಲ್ಲಿ ಇರ್ರೀ ಎಂದು ಹೇಳುತ್ತಾ ಹೇಳುತ್ತಾ ಕೊನೆಯ ಕಾರ್ಯಕ್ರಮ ಪೋಟೋ ಸೇಷನ್ ಗೆ ಕಾಯುತ್ತಿರುವಾಗ.. ಅದು ಏನೂ ಮಾಯೆಯೋ ಮರುಳೋ.. ಇಂಪಾದ ದ್ವನಿಯೊಂದು ನನ್ನ ಹೆಸರನ್ನು ಕರೆದಂತಾಯಿತು... ನಾನು ನನ್ನ ಸ್ನೇಹಿತರೊಡನೆ ಅದು ಇದು ಮುಂದೆ ಹೇಗೆ ಏನೂ ಎಂದು ಕೊಳ್ಳುತ್ತಾ ನಗುತ್ತಿರುವಾಗ ನನ್ನ ಹೆಸರು ಮುದ್ದಾದ ದ್ವನಿಯಲ್ಲಿ ಬಂದಿದ್ದು ನನಗೆ ಮಾತ್ರವಲ್ಲಾ.. ಅಲ್ಲಿನ ಎಲ್ಲಾ ಹುಡುಗರಿಗೂ ಅಚ್ಚರಿಯಾಯಿತು. ನಾನು ಸಂಕೋಚದಲ್ಲಿ ಹಿಂದೆ ತಿರುಗಿದಾಗ ನನ್ನ ಕಣ್ಣನ್ನೇ ನಾನು ನಂಬದಂತಾಗಿದ್ದೆ. ಅವಳು ನಾನು ಅಷ್ಟೇನೂ ಜಾಸ್ತಿ ಗಮನಿಸಿದ್ದಿರಲಿಲ್ಲ. ಯಾಕೆಂದರೇ ಅವಳು ನನ್ನ ತರಗತಿಯವಳಲ್ಲಾ.. ಅವಳು ಕಂಪ್ಯೂಟರ್ ಸೈನ್ಸ್ ಬ್ರಾಂಚಿನವಳು. ಆದರೂ ಅವಳಿಗೆ ಯಾಕಪ್ಪಾ ನನ್ನ ಹೆಸರು ಎಂಬ ಭಯದಲ್ಲಿ ಪ್ರಶ್ನೇ ಮಾಡುವ ರೀತಿಯಲ್ಲಿ ಮುಖ ಕೊಟ್ಟಾಗ ಸ್ವಲ್ಪ ಬರುತ್ತಿರಾ ಎಂದಾಗ ನಾಲ್ಕು ಹೆಜ್ಜೆ ಅವಳ ಜೊತೆಯಲ್ಲಿ ಅನುಮಾನದಲ್ಲಿ ಹಿಂದಕ್ಕೆ ಹೋದಾಗ. ನನ್ನ ಸ್ನೇಹಿತರೆಲ್ಲಾ ನನ್ನನ್ನು ಅವಳನ್ನು ಬಿಟ್ಟ ಕಣ್ಣು ಬಿಟ್ಟುಕೊಂಡು ಏನು? ಎಂಬಂತೆ ನನ್ನನ್ನೇ ಗುರಾಯಿಸಿದ್ದಾಗ ನನಗೆ ಏನೇನೋ ತಳಮಳ. ಅವಳ ಜೊತೆಯಲ್ಲಿ ಬಂದು ಆ ಸಂಪಿಗೆ ಮರದ ಬುಡದ ಹತ್ತಿರ ನಿಂತಾಗ ಅವಳು ಹೇಳಿದ ಆ ಒಂದೇ ಒಂದು ಮಾತು ನನ್ನ ಇಷ್ಟು ದಿನದ ಕಲ್ಪನೆಯನ್ನು ಪುಲ್ ೧೦೦ ಕೀ ಮಿ ವೇಗದಲ್ಲಿ ಜರ್ರ್ ಅಂತ ಬ್ಯಾಕ್ ಗೆ ಓಡಿಸಿದಂತಾಯಿತು.

ಅಂದು ನಾನು ನಾನಾಗಿರಲಿಲ್ಲ. ಅಂದು ಅದು ಹೇಗೆ ಮನೆ ತಲುಪಿದನೋ ದೇವರೇ ಬಲ್ಲ.. ನಾನಂತೂ ಯಾರನ್ನು ಮಾತನಾಡಿಸದೇ ನೇರವಾಗಿ ಮನೆ ತಲುಪಿದೆ... ಮನೆಗೆ ಬಂದು ಸ್ಲ್ಯಾಮ್ ಬುಕ್ ನ ಕೊನೆಯ ಎರಡನೆ ಪುಟದಲ್ಲಿದ್ದ ಅವಳು ಹೇಳಿದ  ಪೂರ್ಣ ಪಾಠವನ್ನು ಅಚ್ಚರಿಯಿಂದ ಓದಿದೆ.. ಪುನಃ ಪುನಃ ಎರಡು ಮೂರು ಸಾರಿ ಓದಿದೆ. ಯಾಕೋ ಏನೋ ಆ ರಾತ್ರಿ ಊಟ ಮಾಡುವ ಮನಸಾಗಲಿಲ್ಲ... ಅವಳ ಆ ಕೊನೆಯ ಸೆಲ್ ನಂಬರ್ ನನ್ನನ್ನು ಪುನಃ ಪುನಃ ಕಾಡುವಂತಾಯಿತು... ಬೆಳೆಕರದಿದ್ದೂ ಗೊತ್ತಗದಂತೆ ಮುಂಜಾನೆ ಹತ್ತರವರೆಗೆ ಹಾಸಿಗೆಯಲ್ಲಿಯೇ ವಿಚಿತ್ರವಾಗಿ ಮಲಗಿದ್ದೆ. ಅಪ್ಪ ಅಮ್ಮ ಮಗಾ ಅಂತೂ ನಾಲ್ಕು ವರುಷದ ಹಂಬಲದ ಇಂಜಿನಿಯರಿಂಗ್ ಮುಗಿಸಿದೆ.. ಮಲಗಲಿ ಬಿಡು ಎಂದು ಬಿಟ್ಟಿರಬೇಕು... ಯಾಕೋ ನನಗೆ ಅವಳನ್ನು ಮಾತನಾಡಿಸಬೇಕು.. ಆ ನಂಬರ್ ಗೆ ಆ ಮೊಲೆ ಅಂಗಡಿಯಲ್ಲಿರುವ ಕಾಯ್ ನ್ ಬೂತ್ ನಿಂದ ಕಾಲ್ ಮಾಡಿ ಬಿಡಲೇ ಎನ್ನುವಂತಾಗುತ್ತಿತ್ತು.

ಅಮ್ಮ ಕೊಟ್ಟ ಆ ಆರಿದ ಉಪ್ಪಿಟ್ಟು ತಿಂದು.. ಇಲ್ಲಿಯೇ ಲೈಬ್ರರಿಗೆ ಹೋಗಿಬರುತ್ತೇನೆ ಎಂದು ಹೇಳಿ ಹೋರಟೆ. ಜೇಬಿನಲ್ಲಿರುವ ಐದು ರೂಪಯಿ ಕಾಯನ್ ನ್ನು ಅಂಗಡಿಯವನಿಗೆ ಕೊಟ್ಟು ಐದು ರೂಪಯಿ ಒಂದು ಒಂದು ರೂಪಯಿ ಕಾಯನ್ ತೆಗೆದುಕೊಂಡು ಭಯದಿಂದಲೇ ಆ ಹತ್ತು ನಂಬರಗಳನ್ನು ಡಯಲ್ ಮಾಡಿದೆ... ಡಯಲ್ ಮಾಡಿದ ತಕ್ಷಣ ಕೇಳಿದ ಕಾಲ್ ರ್ ಟ್ಯೂನ್.. ’ಎಲ್ಲಿ ಜಾರಿತೋ ಈ ಮನವೂ...’ ಅಶ್ವತ್ ಸಂಗೀತ ಸಂಯೋಜನೆ ಬೆಚ್ಚನೆಯ ಹಾಡು.. ಪರವಾಗಿಲ್ಲಾ ಹುಡುಗಿಗೇ ಈ ಟೇಸ್ಟ್ ಬೇರೆ ಇದೆ ಎಂದು ಸ್ವಲ್ಪವೇ ಬಾಯಲ್ಲಿ ಉಗುಳು ನುಂಗಿಕೊಂಡೆ ಎರಡನೇ ಸಾಲಿಗೆ ಬರುವ ಹೊತ್ತಿಗೆ.. ಕಾಲ್ ರೀಸಿವ್ ಮಾಡಿದ್ದು ಅದೇ ಹುಡುಗಿ.. ದ್ವನಿಯಿಂದ ಗುರುತು ಹಿಡಿದೆ, ಆಗ ಕೊಂಚ ಸಮಾದಾನವಾಯಿತು. ಅವಳೂ ಸಹ ನನ್ನ ಪೋನ್ ಗಾಗಿ ಕಾದಿದ್ದಳು ಅನಿಸುತ್ತದೆ.

ಅಂದಿನಿಂದ ನನ್ನ ಲೈಫ್ ಸ್ಟೈಲ್ ಬದಲಾಯಿತು. ಜೀವನಕ್ಕೊಂದು ಅರ್ಥ ಸಿಗಲು ಶುರುವಾಯಿತು. ಇಷ್ಟು ದಿನ ಕಳೆದ ಬದುಕೇ ಬದುಕಲ್ಲ ಅನಿಸಿತು. ಇವಳನ್ನು ನೋಡಬೇಕು, ಮಾತನಾಡಿಸಬೇಕು, ಅವಳಿಗಾಗಿ ಏನಾದರೂ ತಂದು ಕೊಡಬೇಕು, ಅವಳ ಮಾತನ್ನು ಕಿವಿ ತುಂಬ ಕಾಯಬೇಕು, ಅವಳೇ ನಾನಾಗಬೇಕು, ಅವಳೇ ನನ್ನ ಉಸಿರು ಮಾಡಿಕೊಳ್ಳಬೇಕು.. ಎನ್ನುವಷ್ಟರ ಮಟ್ಟಿಗೆ ಈ ಹುಡುಗಿ ನನ್ನ ಪ್ರಾಣದ ಗೆಳತಿಯಾಗಿಬಿಟ್ಟಿದ್ದಳು. ಇಷ್ಟು ದಿನ ಎಲ್ಲಿ ಕಾಲೇಜು ಕ್ಯಾಂಪಸ್ ನಲ್ಲಿ ಎಲೆ ಮರೆಯ ಕಾಯಿಯಂತೆ ಇದ್ದೇ ನನ್ನ ಪ್ರೀತಿ ಎಂದು ನೂರು ಬಾರಿಯಾದರು ಅವಳನ್ನು ಕೇಳಿರಬಹುದು.

ಕಾಲಕ್ಕೆ ಮೀತಿಯಿಲ್ಲ ಅನಿಸುವಂತೆ ಅದೇ ಎಲ್ಲದನ್ನೂ ನಿರ್ಧರಿಸುವಂತೆ.. ನನ್ನ ಈ ಪ್ರೇಮ ಮಯ ಬಾಳು ಅವಳೊಂದಿಗೆ ಹೀಗೆ ನಿತ್ಯ ನೂತನವಾಗಿ ಹಚ್ಚ ಹಸಿರಾಗಿ ಸಾಗುತ್ತಲೇ ಇದೆ. ಪ್ರೇಮಿಗಳಿಗೆ ಯಾವುದು ಅಸಾಧ್ಯವೆಂಬಂತೆ ಪ್ರತಿಯೊಂದನ್ನು ಖುಷಿಯಾಗಿ ಜೀವಂತವಾಗಿ ಇಬ್ಬರೂ ಅನುಭವಿಸುತ್ತಿದ್ದೇವೆ. ಇನ್ನೂ ಏನೂ ಹೇಳುವುದು..? ನೋಡಬೇಕಷ್ಟೇ!!