ಭಾನುವಾರ, ಜೂನ್ 30, 2013

ಹೀಗೊಂದು ವಿಷಯ

ನಾವು ಇವನು ಈ ರೀತಿ ಇರುವುವನು ಎಂದು ಕನಸು ಮನಸಿನಲ್ಲಿನಲ್ಲೂ ಯೋಚಿಸಿದ್ದಿಲ್ಲ. ಏನೋ ಹೇಗೋ ನಮ್ಮ ಜೊತೆಯಲ್ಲಿಯೇ ನಿತ್ಯ ಇರುತ್ತಿದ್ದಾನೆ ಬಿಡು. ಅವನು ನಮ್ಮ ಹಾಗೆಯೇ ಏನೋ ಓದುತ್ತಿದ್ದಾನೆ ಎಂದು ಅಷ್ಟಾಗಿ ಗಮನ ಹರಿಸಿದ್ದಿಲ್ಲ.

ಆದರೇ ಇಂದು ನನ್ನ ಸ್ನೇಹಿತ ಸಿದ್ದು ಅವನ ಬಗ್ಗೆ ,ಏ, ನಿನಗೆ ಗೊತ್ತಾ ಅವನು ತುಂಬ ಬದಲಾಯಿಸಿಬಿಟ್ಟಿದ್ದಾನೆ ಕಣೋ. ನಾನು ಮುಂಜಾನೆ ಅವನ ಎದುರಿಗೆ ಹೋದರೂ ನನ್ನ ಗಮನಿಸದ ರೀತಿಯಲ್ಲಿಯೇ ಹಾಗೆಯೇ ಹೋದ ಕಣೋ..’ ಅಂದನು.

ನನಗೆ ಕೊಂಚ ಶಾಕ್ ಆಯ್ತು ’ಏಲೇ ಏನೋ ನೀನು ಹೇಳುತ್ತಿರುವುದು...’ ಅವನು ಸ್ನೇಹಿತರು ಅಂದ್ರೇ ಪ್ರಾಣ ಬಿಡುವ ಹುಡುಗ ನೀನೇ ಎಲ್ಲೋ ಎತ್ತಲೋ ನೋಡುತ್ತಾ ಬಂದಿರಬಹುದು ಬಿಡು ಎಂದೇ.

ಇಲ್ಲಾ ಕಣೋ ನನ್ನಾಣೆ ಅವನು ಹಾಗೆಯೇ ಹೋದ ಎಂದಾಗ.. ನನಗೂ ಚಿಕ್ಕ ಕುತೂಹಲ ಅವನ ಬಗ್ಗೆ ಬಂದಿತು.

ಕಾಲೇಜು ಹುಡುಗರು ಇಂದು ಇದ್ದಂತೆ ನಾಳೆ ಇರಬೇಕು ಎಂಬ ಕಾನೂನು ಯಾವ ಕಾಲೇಜು ಪುಸ್ತಕದಲ್ಲೂ ಬರೆದಿಲ್ಲ. ಅವರು ಹೀಗೆಯೇ ಕೊನೆಯವರೆಗೂ ಇರಬೇಕು ಎಂದು ಯಾರು ಬಯಸುವುದಕ್ಕೂ ಸಾಧ್ಯವಿಲ್ಲ. ಯಾಕೆಂದರೇ ಆ ವಯಸ್ಸೇ ಅಂತಹವುದು. ಯಾವಾಗಲೂ ಹೊಸತನಕ್ಕೆ ಹೊಸ ನೋಟಕ್ಕೆ ತೆರೆದುಕೊಳ್ಳುವಂತಹ ವಯಸ್ಸು, ಮನಸ್ಸು.

ಮನಸ್ಸಲ್ಲಿ ತರಾಹವೇರಿ ಸುಂದರ ರಂಗು ರಂಗಿನ ಕನಸುಗಳ ಸಂಮಿಲನ. ವಯೋಸಹಜವಾದ ಆಸೆ ನಿರೀಕ್ಷೆಗಳನ್ನು ಪ್ರತಿಯೊಬ್ಬ ಹುಡುಗ ಹುಡುಗಿಯರು ಕಟ್ಟಿಕೊಳ್ಳುವ ಒಂದು ಮಹತ್ತರ ಘಟ್ಟ.

ಓದು ಎಂಬುವುದು ಕೇವಲ ನೆಪ ಮಾತ್ರ ಎನ್ನುವಂತಹ ಮನೋಸ್ಥಿತಿ. ಓದುವುದಕ್ಕಾಗಿಯೇ ಕಾಲೇಜಿಗೆ ಹೋಗುವವರು ಯುವಕರು ಮತ್ತು ಯುವತಿಯರು ಎಂದು ಹಿರಿ ತಲೆಗಳು ಯೋಚಿಸಿದರೇ..ಅದು  ದೇವರಾಣೆ ನೂರಕ್ಕೆ ನೂರು ತಪ್ಪು ನಂಬಿಕೆ.

ಹಿರಿಯರು ಸಹ ಆ ಒಂದು ಘಟ್ಟವನ್ನು ದಾಟಿಯೇ ತಾನೇ ಬಂದಿರುವುದು. ನಮ್ಮನ್ನು ನೋಡಿದರೇ ಅವರಿಗೂ ಅನಿಸಿರುತ್ತದೆ..  ಈ ಸಮಯದಲ್ಲಿ ತರುಣ ತರುಣಿಯರ ಮನೋ ರಂಗಭೂಮಿಯಲ್ಲಿ ನಡೆಯುವ ಎಲ್ಲಾ ರಂಗು ರಂಗಿನ ಒಲವಿನ ಚಿತ್ತಾರಗಳನ್ನು ನಿರೀಕ್ಷಿಸಿಯೇ ಇರುತ್ತಾರೆ.

ಅದೇ ರೀತಿಯಲ್ಲಿ ನನಗೆ ಈ ನನ್ನ ಸ್ನೇಹಿತನ ಮೇಲೆ ಮೊದಲೇನೆಯ ಅನುಮಾನ ಬಂದಿದ್ದು. ಇವನು ಯಾರೋ ಮಾಯಾಂಗನೆಗೆ ಸೋತಿದ್ದಾನೆ. ಆದರೂ ಅವನು ಅಷ್ಟು ಸುಲಭದಲ್ಲಿ ಈ ಪ್ರೀತಿ, ಪ್ರೇಮ ಎಂಬುದರಲ್ಲಿ ಸುಲಭವಾಗಿ ಸಿಕ್ಕಿಕೊಳ್ಳುವ ತಲೆ ಅಲ್ಲಾ ಅನಿಸಿತ್ತು.

ಆದರೇ ಸಿದ್ದುವಿನ ಒಂದು ಲೈನ್ ರಿಪೋರ್ಟ್, ಆ ಜಾಡಿನಲ್ಲಿ ನನ್ನನ್ನು ಯೋಚಿಸಿ ಯೋಚಿಸುವಂತೆ ಮಾಡಿತು. ನಾನು ಮನಸ್ಸಿನಲ್ಲಿಯೇ ಅಂದುಕೊಂಡೆ. ಮಗಾ ಬರಲಿ ಕಾಲೇಜಿಗೆ ಒಂದು ಕಣ್ಣನ್ನು ಅವನ ಮೇಲೆ ಇಡೋಣ ಅನಿಸಿತು.

ನಾನು ನನ್ನ ಮೊದಲ ಪ್ರೇಮದ ಸುದ್ಧಿಯನ್ನು ಸ್ನೇಹಿತರ ಬಳಿ ಹೇಳಿಕೊಳ್ಳುವಾಗ ಅದು ಏನೂ ಜೋರಾಗಿ ಮೂಗು ಮುರಿದಿದ್ದ. ಮಕ್ಕಳಾ ನೀವೆಲ್ಲಾ ಸುಮ್ಮನೆ ನಿಮ್ಮ ಅಮೊಲ್ಯವಾದ ಕಾಲೇಜು ವಿದ್ಯಾರ್ಥಿ ಜೀವನವನ್ನು ಪ್ರೀತಿ, ಪ್ರೇಮ, ಲವ್ವು,ಗಿವ್ವು ಎಂಬ ಎರಡೇ ಎರಡು ಮಾಯ ಅಕ್ಷರದಲ್ಲಿ ಕಳೆದುಕೊಳ್ಳುತ್ತಿರಾ ಎಂದಿದ್ದ. ಆಗ ನಮಗೆ ಇವನೂ ಒಬ್ಬ ಅಧುನಿಕ ಸಂತನಂತೆ ಕಂಡಿದ್ದ.

ಅಲ್ಲವಾ ಅವನ ಓದಿನ ದಾಟಿಯು ಅದೇ ರೀತಿಯಲ್ಲಿ ಇತ್ತು. ಮೊದಲಿನಿಂದಲೂ ಅವನ ಓದಿನ ರೇಕಾರ್ಡ್ ಆಗಿತ್ತು. ಅವನು ಏನಾದರೂ ಹೇಳಿದರೇ ನಮ್ಮ ಗೆಳೆಯರ ಬಳಗ ಗಂಭೀರವಾಗಿ ಕಿವಿಕೊಟ್ಟು ಕೇಳುತ್ತಿತ್ತು. ಅವನು ಏನಾದರೂ ಬೈದರೇ ನಮ್ಮನ್ನು ಉದ್ಧಾರ ಮಾಡಲೇ ಹೇಳುತ್ತಿದ್ದಾನೆ ಬಿಡು ಎಂಬ ಅಭಿಮಾನ ನಮ್ಮೆಲ್ಲಾರಲ್ಲಿ ಇತ್ತು.

ಅಂಥಾ ಸಾದಾ ಸೀದಾ ಹುಡುಗ ನಮ್ಮಗಳ ರೀತಿಯಲ್ಲಿ, ನಾವು ನಡೆಯುತ್ತಿರುವ ದಾರಿಗೆ ಜಾರುತ್ತಿದ್ದಾನೇ ಎಂಬ ಕಲ್ಪನೆಯೇ ನನ್ನನು ಅದೀರನಾಗಿಸಿತು. ಇದನ್ನು ಸುಳ್ಳು ಅನಿಸಬೇಕು ಎಂಬ ಆಸೆಯಿಂದ ಬಹು ಬೇಗನೇ ಕಾಲೇಜು ಅಂಗಳಕ್ಕೆ ಬಂದೇ.

ಅಂದು ದಟ್ಟವಾದ ಆಷಾಡದ ಮೊಡಗಳು ಅನುಮಾನದಂತೆ ಕವಿದಿತ್ತು. ಒಮ್ಮೊಮ್ಮೆ ತುಂತುರು ಮಳೆ ಹನಿಗಳು ನನ್ನ ಕಾತುರತೆಗೆ ತಣ್ಣೀರು ಎರಚುವಂತೆ ಬಿಳುತ್ತಿತ್ತು.

ನನ್ನ ಗೆಳೆಯರ ಬಳಗ ಆಗಲೇ ನಿತ್ಯ ಸೇರುತ್ತಿದ್ದಾ ಆ ಮೊಟು ಕಲ್ಲಿನ ಮೇಲೆ ಕುಳಿತು ದಾರಿಯಲ್ಲಿ ಬರುತ್ತಿದ್ದ ಕಾಲೇಜು ಹುಡುಗಿಯರ ಕಡೆ ಕಿಡಿ ನೋಟವನ್ನು ಬೀರುತ್ತಾ, ಅದು ಇದು ಮಾತನಾಡುತ್ತಾ ತಮಾಷೆಯಲ್ಲಿ ಕಾಲವನ್ನು ಕಳೆಯುತ್ತಿತ್ತು. ಕಾಲೇಜಿನ ಮೊದಲನೇ ಕ್ಲಾಸ್ ಶುರುವಾಗಲೂ ಇನ್ನೂ ೪೫ ನಿಮಿಷಗಳು ಬಾಕಿ ಇದ್ದವು. ನಾನು ಅಲ್ಲಿ ಬಂದ ತಕ್ಷಣ ಗುಬ್ಬೀರಾ ಗೊತ್ತಾ ಅಂದ ತಕ್ಷಣ ಇವನು ಆದೇ ವಿಷಯಕ್ಕೆ ಪೀಠಿಕೆ  ಹಾಕುತ್ತಿದ್ದಾನೆ ಎಂದು ಮನನವಾಯಿತು.

ಕಾಲೇಜು ಕ್ಯಾಂಪಸ್ ನಲ್ಲಿ ಏನೋ ನಡೆಯಬಾರದ ಘಟನೆ ಘಟಿಸಿದೆ ಎಂಬ ರೀತಿಯಲ್ಲಿ ಇಡೀ ನನ್ನ ಗೆಳೆಯರ ಬಳಗದಲ್ಲಿ ಈ ಒಂದು ವಿಷಯ ತೀವ್ರ ರೀತಿಯಲ್ಲಿ ಸಂಚಲವನ್ನುಂಟು ಮಾಡಿಬಿಟ್ಟಿತ್ತು. ಅದಕ್ಕೆ ತುಪ್ಪ ಸುರಿಯವ ಕೆಲಸವನ್ನು ನನ್ನ ಎಲ್ಲಾ ಸ್ನೇಹಿತರು ತಾವೇ ಏನೋ ಒಂದು ಘನ ಕಾರ್ಯವನ್ನು ನಡೆಸುತ್ತಿದ್ದೇವೆ ಎಂಬ ರೀತಿಯಲ್ಲಿ ಆ ನೋಗವನ್ನು ಹೊತ್ತುಕೊಂಡು ನಡೆಯಲು ಸಜ್ಜಾಗಿಬಿಟ್ಟಿದ್ದರು.

ನಮ್ಮಲ್ಲಿ ನಾವೇ ಯಾರದರೂ ಈ ರೀತಿಯಲ್ಲಿ ಮಾಡಿದ್ದರೇ ನನ್ನಾಣೆ ಇಷ್ಟೊಂದು ರೀತಿಯಲ್ಲಿ ಗುಲ್ಲಾಗುತ್ತಿರಲಿಲ್ಲ ಅಲ್ಲವಾ? ನಮ್ಮ ಮನಸ್ಸಿನಲ್ಲಿ ಎಲ್ಲಾರ ಬಗ್ಗೆನೂ ಹೀಗೆ ಹೀಗೆ ಇರಬೇಕು ಇವರುಗಳು. ಎಂಬ ಅಲಿಖಿತ ಶಾಸನವನ್ನು ನಮ್ಮ ಸಮಾಜ ಸೃಷ್ಟಿ ಮಾಡಿಕೊಂಡುಬಿಟ್ಟಿರುತ್ತದೆ. ಅದರಲ್ಲಿನ ಯಾವುದಾದರೂ ಒಂದು ಬದಲಾವಣೆಯಾದರೂ ನಾವುಗಳೂ ನಾವಾಗಿರುವುದಿಲ್ಲ. ನಾವುಗಳೂ ಅವರುಗಳೂ ನಮ್ಮಂತೆಯೇ ಮನುಷ್ಯರಂತೆಯೇ, ಅವರು ಸಹ ಸಾಮಾನ್ಯರು ಎಂದು ಯೋಚಿಸುವುದಿಲ್ಲ. ಅವರು ಹೀಗೆಯೇ ಇರಬೇಕು ಎಂದು ಒಂದು ದೊಡ್ಡ ಅಭಿಪ್ರಾಯಗಳನ್ನು ಅವರುಗಳ ಮೇಲೆ ಏರಿಬಿಟ್ಟಿರುತ್ತೇವೆ.. ಯಾಕೆ?

ಅವನು ಕ್ಲಾಸ್ ಶುರುವಾಗುವುದು ಇನ್ನೂ ಏನೋ ಐದು ನಿಮಿಷವಿದೆ ಎನ್ನುವ ಸಮಯಕ್ಕೆ ಸರಿಯಾಗಿ ಮಾಮೊಲಾಗಿಯೇ ಬಂದ. ನನಗೆ ಅವನಲ್ಲಿ ಅಂಥ ಏನೂ ಒಂದು ಬದಲಾವಣೆಯು ಕಾಣಿಸಲಿಲ್ಲ. ಆದರೇ ಈ ಗೆಳೆಯರ ಗುಂಪು ಅವನನ್ನು ನೋಡಿದ ರೀತಿಯನ್ನು ಗಮನಿಸಬೇಕಾಗಿತ್ತು. ಅವನನ್ನು ತೀರ ಅಪರಚಿತನಂತೆ ಇವರು ’ಏನಮ್ಮಾ ಸಮಾಚಾರಾ?, ಏನ್ ವಿಷ್ಯಾ?’ ಎಂದು ಪ್ರಶ್ನೇ ಮಾಡಿದರು. ಅದಕ್ಕೆ ಅವನು ಒಂದೇ ಒಂದು ಬುದ್ಧಿವಂತ ಮುಗುಳ್ನಗೆಯ ಉತ್ತರವನ್ನು ಕೊಟ್ಟು, ಕ್ಲಾಸ್ ಗೆ ಲೇಟ್ ಆಯ್ತು ಬನ್ರೋ ಎಂದು ನಮ್ಮನ್ನೆಲ್ಲಾ ಕರೆದುಕೊಂಡು ಹೋದ.

ಅವನ ಹಿಂದೆ ನಾವುಗಳು ಹಾಗೆಯೇ ಸಾಗಿದೆವು.

ನಾನು ಏನೂ ತಿಳಿಯದ ರೀತಿಯಲ್ಲಿ ಸ್ನೇಹಿತರ ಜೊತೆಯಲ್ಲಿ ಸಾಗಿದೆ.

ಕ್ಲಾಸ್ ನಲ್ಲಿ ಪಾಠವನ್ನು ಕೇಳುವ ಮನಸ್ಸೇ ಇರಲಿಲ್ಲ. ಮನದ ತುಂಬೆಲ್ಲಾ ಇವನ ಬಗ್ಗೆಯೇ ಯೋಚನೆ. ತಿರುಗಿ ತಿರುಗಿ ಹಿಂದಿನ ಡೆಸ್ಕ್ ಕಡೆ ನೋಡುತ್ತಿದ್ದೇ. ನನಗೆ ಅವನಲ್ಲಿ ಅಂಥ ಯಾವ ವ್ಯತ್ಯಾಸವು ಕಾಣಲಿಲ್ಲ. ನಿತ್ಯ ಹೇಗೆ ಅವನು ಕಾಣುತ್ತಿದ್ದನು ಅದೇ ರೀತಿಯಲ್ಲಿ ನನಗೆ ಕಾಣಿಸಿದ. ಆದರೇ ಹಿಂದಿನ ದಿನಗಳಿಗಿಂತ ಚೆನ್ನಾಗಿ ಅವನ ಮುಖದಲ್ಲಿ ಹೊಸ ಕಳೆ ಕಾಣಿಸುತ್ತಿತ್ತು. ಇದು ಆ ಪ್ರೀತಿ, ಪ್ರೇಮ ಎಂಬ ಎರಡಕ್ಷರದ ಜಾದುವೇ ಎಂದು ನನ್ನ ತಲೆಯಲ್ಲಿ ಕೊರೆಯುತ್ತಿತ್ತು. ಯಾವ ಹುಡುಗಿ ದೇವರೇ ಇವನನ್ನು ಲವ್ ಎಂಬ ಯಾರು ಹೇಳಿಕೊಡದ ಹಾಗೆಯೇ ಘಟಿಸುವ ಪಾಠಕ್ಕೆ ಕರೆಸಿಕೊಂಡಿರುವವಳು.. ಎಂಬ ರೀತಿಯಲ್ಲಿ ಮುಂದಿನ ಎರಡು ಸಾಲಿನಲ್ಲಿ ಕುಳಿತಿರುವ ನಮ್ಮ ಕ್ಲಾಸ್ ಹುಡುಗಿಯರನ್ನು ಹಾಗೆಯೇ ಸೂಕ್ಷ್ಮವಾಗಿ ನೋಡಿದೆ. ನನಗೆ ಅಂಥ ರೀತಿಯಲ್ಲಿ ಇಂಥ ಹುಡುಗನ ಮನವನ್ನು ಗೆಲ್ಲುವ ಯಾವ ಕಲರ್ ಇಲ್ಲಿ ಇಲ್ಲ ಬಿಡು ಎಂಬ ಒಂದು ಸಣ್ಣ ಧೈರ್ಯ ಬಂದಿತು.

ಹೊರಗಡೆ ಸಣ್ಣದಾಗಿ ಕಪ್ಪು ಮೊಡಗಳು ಕಳೆದು ಸೂರ್ಯನ ಕಿರಣಗಳು ಬೀಳಲು ಶುರುವಾಯಿತು. ಹೊರಗಡೆಯ ನೋಟ ನನ್ನ ಮನಸ್ಸು ಸ್ವಲ್ಪ ಭರವಸೆಯ ಖುಷಿಯಾಯಿತು. ಗುಬ್ಬೀರ ನನ್ನ ಕಡೆ ನೋಡಿ ಹಾಗೆಯೇ ಏನೋ ಹೇಳಲು ತವಕಿಸುಂತಿರುತಿತ್ತು. ಆದರೇ ಈ ಕ್ಲಾಸ್ ಲೇಕ್ಚರ್ ನ ಮಧ್ಯೆ ಅದನ್ನು ಸಾವಾಕಾಶವಾಗಿ ಚರ್ಚಿಸಲು ಯಾರೊಬ್ಬರಿಗೂ ಸಾಧ್ಯವಾಗಲಿಕಿಲ್ಲ ಎಂದುಕೊಂಡು ಹಾಗೆಯೇ ಒಮ್ಮೆ ಸಿದ್ದು ಕಡೆ ನೋಡಿ ಲೇಕ್ಚರ್ ಹೇಳುವ ನೋಟ್ಸನ್ನು ಮನಸ್ಸಿಲ್ಲದೆ ಪೆನ್ನಿನಿಂದ ಕೆತ್ತಲು ಶುರು ಮಾಡಿದೆ.

ಇದಕ್ಕೆ ಒಂದು ಅಂತ್ಯವನ್ನು ಕಂಡುಕೊಳ್ಳಬೇಕು ಎಂದು ಸಂಜೆಯವರೆಗೂ ಯೋಚಿಸುತ್ತಾ ಯೋಚಿಸುತ್ತಾ ಇಂದಿನ ಕಾಲೇಜು ಒಂದು ಚೂರು ರುಚಿಸಲಿಲ್ಲ.

ನನ್ನ ಗೆಳತಿ ರುಚಿಯನ್ನು ಸಹ ನೋಡಲು ಹೋಗಲು ಮನಸ್ಸಾಗಲಿಲ್ಲ. ಅವಳು ಸಹ ಇಂದು ಕಾಲೇಜಿಗೆ ಬಂದಿದ್ದಳು ಇಲ್ಲವೋ ಎಂಬುದು ನನಗೆ ಗೊತ್ತಾಗಲಿಲ್ಲ. ಮನದ ತುಂಬೆಲ್ಲಾ ಈ ಒಂದು ಸಂಚಲನದ ನಿಜ ಸತ್ಯಶೋಧನೆಯನ್ನು ಮಾಡಿಯೇಬಿಡಬೇಕು ಎಂದುಕೊಂಡು ಯಾರೊಬ್ಬರೊಂದಿಗೂ ಮಾತನಾಡದೇ ಮನೆಗೆ ಮರಳಿದೆ.....