ಬುಧವಾರ, ಮಾರ್ಚ್ 13, 2013

ನೋಡಿದ ನೋಟ ನಾಳೆ ಬದಲಾಗಿರುತ್ತದೆ

ಬದುಕು ಹೀಗೆ ಸಾಗುತ್ತಿರುತ್ತದೆ. ಇಂದು ಇದ್ದದ್ದು ನಾಳೆ ಇರುವುದಿಲ್ಲ. ಇಂದು ನೋಡಿದ ನೋಟ ನಾಳೆ ಬದಲಾಗಿರುತ್ತದೆ. ಇಂದಿನ ಸವಿಗಾಳಿ ನಾಳೆ ಬಿರುಗಾಳಿಯಾಗಬಹುದು. ಇಂದಿನ ಕಷ್ಟದ ಸಮಯ ನಾಳೆಯ ಸುಖಮಯವಾಗಿರಬಹುದು.




ನಾವು ಹೀಗೆ ಎಂದೆಂದು.. ಎಂದು ಯಾರು ಗ್ಯಾರಂಟಿ ಕೊಟ್ಟು ಹೇಳಲಾರರು ಅಲ್ಲವಾ? ಅದಕ್ಕೆ ಇರಬೇಕು ಜಗತ್ತು ಯಾವುದೋ ಒಂದು ರೀತಿಯಾದ ಏನನ್ನೋ ಹುಡುಕುತ್ತಾ ಎತ್ತಲೋ ಸಾಗುತ್ತಿದೆ ಅನಿಸುತ್ತಿದೆ.



ಇದೇ ಜಗತ್ತಿನ ಜನಮನಕ್ಕೆ ಒಂದು ಕ್ರಿಯಾಶೀಲತೆಯ ಸೃಜನತೆಯಲ್ಲಿ ತಮ್ಮನ್ನು ತಾವು ಪೂರ್ಣವಾಗಿ ಅರ್ಪಿಸಿಕೊಂಡು ತಮ್ಮ ಕಾಲವನ್ನು ತಾವು ಸಾಗಿಸುವಂತೆ ಮಾಡಿದೆ.



ಯಾವುದೇ ಒಂದು ಬದುಕಿಗೆ ಹೊಸ ತಿರುವು ಬರಲೇ ಬೇಕು. ಆಗ ಮಾತ್ರ ನಮ್ಮ ಬದುಕಿನ ಯಾಂತ್ರಿಕತೆಗೆ ಒಂದು ಪುಲ್ ಸ್ಟಾಪ್ ಸಿಗುತ್ತದೆ.



ಹೊಸತನದ ನೋಟಕ್ಕೆ ಪ್ರತಿಯೊಬ್ಬರು ಯಾವಾಗಲೂ ಖುಷಿಯಿಂದ ಕಾತುರತೆಯಿಂದ ಕಾಯುತ್ತಿರುತ್ತೇವೆ.



ಪ್ರತಿಯೊಂದು ಕ್ಷಣವನ್ನು ಸ್ವಂತವಾಗಿ ಅನುಭವಿಸಬೇಕು ಎಂದರೇ..! ಅಲ್ಲಿ ಹೊಸತನವಿರಲೇ ಬೇಕು. ಏನಾದರೂ ಹೊಸ ಕಲಿಕೆ ಅಲ್ಲಿರಬೇಕು. ಇಲ್ಲವಾದರೇ ಮನಸ್ಸಿಲ್ಲದ ಮನಸ್ಸಿನಿಂದ ನಮ್ಮ ಸಮಯವನ್ನು ನಾವು ದೂಡುವಂತಾಗುತ್ತದೆ.



ಹೊಸತನದ ಬದುಕಿಗೆ ತೆರೆದುಕೊಳ್ಳುವ ಮುನ್ನ ಒಂದು ಬ್ರೇಕ್ ನಮ್ಮಗಳಿಗೆ ಸಿಗಬೇಕಾದದ್ದು ಅತ್ಯವಶ್ಯ. ಯಾಕೆಂದರೇ ಆ ಒಂದು ಗ್ಯಾಪ್ ನಲ್ಲಿ ನಮ್ಮ ಹಿಂದಿನ ಮತ್ತು ಬರುವ ಮುಂದಿನ ಹೊಸ ವಿಚಾರಕ್ಕೆ ತೆರೆದುಕೊಳ್ಳುವ ಮುನ್ನ ನಮ್ಮನ್ನು ನಾವುಗಳೂ ಸಜ್ಜು ಮಾಡಿಕೊಳ್ಳಲು ಆ ಒಂದು ಸಮಯ ನಮಗಾಗಿಯೇ ಬಂದಿದೆ ಅನಿಸಿರುತ್ತದೆ. ಇದು ಯಾವುದೇ ಹೊಸ ಕೆಲಸ, ಹೊಸ ವಿಚಾರ, ಹೊಸ ಊರು, ಹೊಸ ಪುಸ್ತಕ, ಹೊಸ ಓದು, ಹೊಸ ಸಂಗೀತ, ಹೊಸ ಸ್ನೇಹ, ಹೊಸ ಮಾರ್ಗ ಪ್ರತಿಯೊಂದಕ್ಕೂ ಹಿಂದಿನ ಗತ ಜೀವನಕ್ಕೂ ಮುಂದಿನ ಬರುವ ಹೊಸ ದಿನಕ್ಕೊ ನಾವು ಹೇಗೆಲ್ಲಾ ಅನುಭವಿಸಬೇಕು.. ಸರಿ ತಪ್ಪುಗಳ ಬದುಕಿನ ಗಣಿತಕ್ಕೆ ಆ ಒಂದು ಚಿಕ್ಕ ಗ್ಯಾಪ್ ನಮ್ಮನ್ನು ನಾವು ನೋಡಿಕೊಳ್ಳಲು ಅನುಕೂಲ ಮಾಡಿಕೊಡುವ ನಮ್ಮ ಸಮಯವಾಗಿರುತ್ತದೆ.



ಹಾಗಂತಹ ಸುಮಾರು ದಿನಗಳು ಗ್ಯಾಪ್ ಬ್ರೇಕ್ ಎಂದು ನಮ್ಮ ಸಮಯವನ್ನು ನಿಷ್ಕರುಣೆಯಾಗಿ ಕೊಲ್ಲುವುದು ಸಹ ಅಲ್ಲಾ! ಸುಖವಾಗಿ ಮಜಾ ಮಾಡುವುದು ಸಹ ಅಲ್ಲಾ. ಅದು ನಾವುಗಳೂ ಹೆಚ್ಚು ಬ್ಯುಸಿ ದಿನಗಳಿಂದ ಕಡಿಮೆ ಬ್ಯುಸಿ ದಿನಗಳು ಎಂದು ಹೇಳಬಹುದು. ಈ ಸಮಯದಲ್ಲಿ ಹೊಸತನದ ಹೆಜ್ಜೆಗೆ ಕಾಲು ಇಡುವ ಮುನ್ನ ನಮ್ಮನ್ನು ನಾವುಗಳೂ ಉನ್ನತವಾಗಿ ಸಜ್ಜು ಮಾಡಿಕೊಳ್ಳುವ ತಾಲಿಮು ದಿನಗಳು.



ಆ ಸಮಯದಲ್ಲಿ ನಾವು ನಡೆದ ಹಳೆಯ ದಿನಗಳನ್ನು ಚಿಕ್ಕದಾಗಿ ಮೆಲುಕು ಹಾಕಿಕೊಂಡು ಸರಿ ತಪ್ಪುಗಳನ್ನು ಗಮನಿಸಿ. ಬರಲಿರುವ ಹೊಸ ಹರುಷದ ಹಾದಿಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಉತ್ಕೃಷ್ಟವಾಗಿ ಕಳೆಯಲು ಬರುವ ದಿನಗಳ ಬಗ್ಗೆ ಭರವಸೆಯನ್ನು ಕಂಡುಕೊಳ್ಳುವಂತಾಗಬೇಕು.



ಈ ಬ್ರೇಕ್ ಒಮ್ಮೊಮ್ಮೆ ನಮಗೆ ನಮ್ಮ ನಮ್ಮ ಕೆಲಸದಿಂದ ನಾವುಗಳು ಇಟ್ಟುಕೊಂಡಿರುವ ನಮ್ಮ ಹವ್ಯಾಸಗಳಿಗೆ ಬರಬಹುದು. ಇದು ನಾವುಗಳು ಬಹುಮುಖ್ಯವಾದ ಕೆಲಸದ ಜಂಜಾಟದಲ್ಲಿ ಮುಳುಗಿ ಹೋದ ಸಮಯದಲ್ಲಿ ನಾವುಗಳು ನಿತ್ಯ ಸಂತೋಷಪಡುವ ಹವ್ಯಾಸಗಳನ್ನು ಒಂದಷ್ಟು ದಿನಗಳ ಮಟ್ಟಿಗೆ ಮುಟ್ಟಲಾರದವಾಗಿರುತ್ತೇವೆ.



ಬ್ರೇಕ್ ಸಮಯದಲ್ಲಿ ನಾವುಗಳು ನಮ್ಮ ಪ್ರೀತಿಪಾತ್ರರನ್ನು ಸಹ ಮೊದಲು ಮಾತನಾಡಿಸುತ್ತಿದ್ದಂತೆ ಮಾತನಾಡಿಸಲಾರೆವು, ಮೇಸೆಜ್ ಸಹ ಮಾಡಲಾರೆವು. ಮೊದಲು ಬರೆಯುತ್ತಿದ್ದ, ಓದುತ್ತಿದ್ದ, ನೋಡುತ್ತಿದ್ದ, ಬೇಟಿ ಮಾಡುತ್ತಿದ್ದ ಸ್ಥಳಗಳನ್ನು ಬೇಟಿ ಮಾಡಲಾರೆವು, ಏನೊಂದನ್ನು ಮಾಡದಂತಾಗಿಬಿಟ್ಟಿರುತ್ತೇವೆ. ಯಾಕೆಂದರೇ ಆ ಸಮಯಕ್ಕೆ ಬಹುಮುಖ್ಯವಾದ ಜೀವನದ ಯಾವುದೋ ಒಂದು ಕೆಲಸದಲ್ಲಿ ಮುಳುಗೇಳುತ್ತಿರುತ್ತೇವೆ.



ಈ ರೀತಿಯ ಒಂದು ಸಮಯ ಪ್ರತಿಯೊಬ್ಬರಿಗೂ ಜೀವನದಲ್ಲಿ ಒಮ್ಮೊಮ್ಮೆ ಬಂದೇ ಬಂದಿರುತ್ತದೆ. ಈ ರೀತಿಯ ಬ್ರೇಕ್ ನಮಗೆ ಬರಬೇಕು ಅನಿಸುತ್ತದೆ. ಇಲ್ಲವೆಂದರೇ ನಾವುಗಳು ಪ್ರತಿಯೊಂದರ ಮಹತ್ವವನ್ನು ಗಮನಿಸಲಾರದವಾಗಿರುತ್ತೇವೆ. ಒಂದು ಮತ್ತೊಂದರ ಮಹತ್ವ ಆ ಸಮಯದಲ್ಲಿ ತಿಳಿಯಬೇಕು ಎಂದರೇ ಈ ರೀತಿಯ ಅನುಭವ ಪ್ರತಿಯೊಬ್ಬರಿಗೂ ತಿಳಿಯಲೇಬೇಕು.


ಪ್ರೀತಿಯನ್ನು ಮಾಡುತ್ತಿರುವ ಪ್ರೆಮಿಗಳು ಹಲವು ದಿನಗಳ ಮೇಲೆ ತನ್ನ ಪ್ರಿಯಕರನ/ಪ್ರಿಯತಮೆಯ ಒಂದು ಸವಿ/ಕಹಿ ಮಾತಿಗಾಗಿ ಕಾಯುವ ಕಾತುರತೆಯಂತೆ, ನಾವು ಇಷ್ಟಪಟ್ಟು ಮಾಡುವ ಕೆಲಸವನ್ನು ಕೆಲವು ದಿನಗಳ ಮಟ್ಟಿಗೆ ಮಾಡದೇ ಇರುವಾಗ ಅನುಭವಿಸುವ ಕಾತುರತೆಯೇ ನಮ್ಮ ಮನವನ್ನು ನಾವು ಹೆಚ್ಚು ಪಾಸಿಟಿವ್ ಆಗಿ ಇಟ್ಟುಕೊಳ್ಳುವಂತೆ ಮಾಡುತ್ತದೆ ಅಲ್ಲವಾ?



ಗಮನಿಸಿ ಬಹುದಿನಗಳ ನಂತರ ನಾವು ಕಾಣುವ ಪ್ರತಿಯೊಂದು ಹೆಚ್ಚು ಅಪ್ಯಾಯಮಾನವಾಗಿರುತ್ತದೆ. ಆ ಸಮಯಕ್ಕೆ ನಾವುಗಳು ಏನೋ ಒಂದನ್ನು ಸಾಧಿಸಿರುವ ಹೆಮ್ಮೆ, ಜೊತೆಗೆ ಏನೋ ಹೊಸತನವನ್ನು ಕಾಣುವ ಹೊಸ ಹುರುಪು.


 ಹೊಸ ಛಾಯೆಗೆ ಹಳೆಯದು ಬೆಳಕಾಗಿರುತ್ತದೆ.