ಗುರುವಾರ, ಆಗಸ್ಟ್ 30, 2012

Costly Feelings!!


ಭಾವನೆಗಳ ದರ್ಶನಕ್ಕೆ ಅವಕಾಶವೇ ಇಲ್ಲ! ಇಂದು ನಾವುಗಳು ಒಂದು ಕ್ಷಣ ಒಬ್ಬರನ್ನು ಕಂಡು ನಗಲಾರದಷ್ಟು ಕಂಜೂಸ್ ಆಗಿಬಿಟ್ಟಿದ್ದೇವೆ.

ಮಾತೇ ಮಾಣಿಕ್ಯವಾಗಿದೆ. ನಗಬೇಕು ಎಂದರೇ ನಗೆ ಹಬ್ಬದಂತಹ ಕಾರ್ಯಕ್ರಮಗಳೇ ಬೇಕು. ಸಹಜ ನಗುವೇ ಮಾಯವಾಗಿಬಿಟ್ಟಿದೆ.

ಹುಟ್ಟಿದ ಕಂದಮ್ಮಗಳಿಗೆ ಅಳು  ನಗು ವೇ ಸುತ್ತಲಿನವರ ಜೊತೆಯೊಂದಿಗಿನ ಸಂವಹನ ಮಾಧ್ಯಮವಾಗಿರುತ್ತದೆ. ಆದರ ನಗು ಸುತ್ತಲಿನವರನ್ನು ಖುಷಿಪಡಿಸುತ್ತದೆ. ಅದರ ಅಳು ಮಗುವಿಗೆ ಏನೋ ತೊಂದರೆ ಇದೆ ಮತ್ತು ಅದಕ್ಕೆ ಏನೋ ಬೇಕಾಗಿದೆ ಎಂಬ ಸನ್ನೆಗಳಾಗಿ ಹೆತ್ತವರಿಗೆ ಗೊತ್ತಾಗುತ್ತದೆ.

ಹೀಗೆ ಮೊದಲ ಮೊಲಭೂತ ಭಾವನೆಗಳಿಗೆ ಕಡಿವಾಣವಾಕುವ ರೀತಿಯಲ್ಲಿ ನಾವುಗಳೆಲ್ಲಾ ತುಂಬ ಗಂಭೀರವಾಗುತ್ತಿದ್ದೇವೆ. ಇಂದು ತುಂಬ ಸೀರಿಯಸ್ ಆಗಿ ಎಲ್ಲಾ ಕಡೆ ವರ್ತಿಸುವ ರೀವಾಜನ್ನು ಅಘೋಷಿತವಾಗಿ ಜಾರಿ ಮಾಡಿಕೊಂಡುಬಿಟ್ಟಿದ್ದೇವೆ.

ಎಲ್ಲೇಲ್ಲೂ ನಿಶಬ್ಧ. ಶ್!

ಬೇರೆಯವರ ಜೊತೆಯಲ್ಲಿ ನಾಲ್ಕು ಮಾತನಾಡುವುದು ದುಬಾರಿಯ ವಿಷಯವಾಗಿದೆ. "ಅಲ್ಲಾ ಮಾತಾಡಿದರೂ ಸಿಗುವ ಲಾಭವೇನೂ?" ಎಂದು ಕೇಳುವಂತಾಗಿದೆ. ಪರಿಚಿತರು ಅಪರಿಚಿತರು ಎಂಬ ಬೇದವೇ ಇಲ್ಲದೇ ಈ ಒಂದು ಸ್ಥಿತಿ ನಮ್ಮ ಹೈಟೆಕ್ ಸಮಾಜಕ್ಕೆ ಬಂದು ಒದಗಿದೆ.

ನನಗೆ ಅನಿಸುತ್ತಿದೆ ಇದಕ್ಕೆಲ್ಲಾ ಕಾರಣ ಡಿಜಿಟಲ್ ಜಮಾನ!

ಇಂದು ನಮ್ಮೊಂದಿಗೆ ಈ ಡಿಜಿಟಲ್ ವಸ್ತುಗಳು ಎಷ್ಟರ ಮಟ್ಟಿಗೆ ಹಾಸುಹೊಕ್ಕಾಗಿವೆ ಅಂದರೇ ಅವುಗಳಿಲ್ಲದ ಮಾನವನ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ನಿತ್ಯ ಪ್ರತಿ ಕ್ಷಣವೋ ಮನುಷ್ಯನ ಓಡನಾಡಿ ಡಿಜಿಟಲ್ ವಸ್ತುಗಳೆ ಆಗಿಬಿಟ್ಟಿವೆ. ಅವುಗಳ ಜೊತೆಯಲ್ಲಿ ಕಳೆಯುವ, ಸ್ವರ್ಶಿಸುವ, ಮಾತನಾಡುವ, ಪ್ರೀತಿಸುವ ಕ್ಷಣಗಳು ಯಾವ ಜೀವಂತ ಮನುಷ್ಯರೊಂದಿಗೂ ಇಲ್ಲಾ!

ಅಲ್ಲಾ ಇಷ್ಟರ ಮಟ್ಟಿಗೆ ನಮಗೆ ಏನೊಂದು ಬೇಕಾಗಿಲ್ಲಾ.

ಒಂದು ಲ್ಯಾಪ್ ಟಾಪ್, ಒಂದು ಮೊಬೈಲ್, ಒಂದು ಐಪ್ಯಾಡ್, ಒಂದು ಟಿ.ವಿ, ಇಂಟರ್ ನೇಟ್ ಸಿಕ್ಕಿದರೇ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಮಾನವ ಅನ್ನುವಂತಾಗಿದೆ.

ಪ್ರತಿಯೊಬ್ಬರೂ ಅವುಗಳ ಜೊತೆಯಲ್ಲಿದ್ದಾಗ ಇಡೀ ಜಗತ್ತನ್ನೇ ಮರೆಯುವಷ್ಟರ ಮಟ್ಟಿಗೆ ಅವುಗಳ ಅವಶ್ಯಕತೆ ಮತ್ತು ಅನಿವಾರ್ಯತೆಯನ್ನು ಕಂಡುಕೊಂಡುಬಿಟ್ಟಿದ್ದಾನೆ.

ಯಾವುದೇ ನೋಟ, ಸ್ಪರ್ಶ,ಭಾವನೆ, ಮಾತು ಏನೊಂದು ಇಲ್ಲದೆ ತನ್ನಲ್ಲಿ ಉಂಟಾಗುವ ಎಲ್ಲಾ ತುಮುಲಗಳನ್ನು, ಆನಂದ, ಖುಷಿಯ ಕ್ಷಣಗಳನ್ನು ತನ್ನ ತುದಿ ಬೆರಳುಗಳಲ್ಲಿ ಎಲ್ಲಾ ನಿಶಬ್ಧವಾಗಿ ಮತ್ತೊಬ್ಬರಿಗೆ ತಲುಪಿಸುವಂತಾಗಿದ್ದಾನೆ. ಮಾತಿಗೆ ಪೂರ್ತಿ ಬರವಾಗಿದೆ ಅನಿಸುತ್ತಿದೆ.

ಯಾರನ್ನಾದರೂ ಮಾತನಾಡಿಸುವುದೇ ತುಂಬ ಕಷ್ಟಕರವಾಗಿದೆ. ಯಾರನ್ನಾದರೂ ನಗಿಸುವುದು, ಅಳಿಸಬೇಕೆಂದರೇ ಪುನಃ ಡಿಜಿಟಲ್ ಮೊರೆ ಹೋಗಬೇಕಾಗಿದೆ. ಇಲ್ಲವೆಂದರೇ ಬೇರೆಯವರ ಜೊತೆಗಿನ ಪೂರ್ತಿ ಕಮ್ಯುನಿಕೇಶನ್ ಕಟ್!

ನಿತ್ಯ ನಮ್ಮನ್ನು ನಾವುಗಳು ಕನ್ನಡಿಯಲ್ಲಿ ನೋಡಿಕೊಳ್ಳದಿದ್ದರೂ ಪೇಸ್ ಬುಕ್ ನಲ್ಲಿ ತಪ್ಪದೇ ಲಾಗಿನ್ ಆಗಿ ನಮ್ಮನ್ನು ನಾವುಗಳು ಸಮಾಧಾನ ಮಾಡಿಕೊಳ್ಳುವುಂತಾಗಿದೆ. ಅಲ್ಲಿ ಒಬ್ಬರನ್ನೊಬ್ಬರೂ ಕೇವಲ ಬೆರಳ ತುದಿಯಿಂದ ನಮ್ಮ ಮನಸ್ಸಿನ ಭಾವನೆಗಳ ಜಲಪಾತವನ್ನು ಹರಿಯಬಿಡಬಹುದಾಗಿದೆ. ನಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಅದೇ ಒಂದು ವೇದಿಕೆಯಾಗಿದೆ.


ಏನಾದರೂ ನಮ್ಮಲ್ಲಿ ಘಟಿಸಿದ್ದರೇ.. ಏನಾದರೂ ವಿಶೇಷತೆಯಿದ್ದರೇ.. ಯಾರನ್ನಾದರೂ ಏನಾದರೂ ಕೇಳಬೇಕೆಂದರೇ.. ಯಾರನ್ನಾದರೂ ಏನಾದರೂ ತಮಾಷೆ ಮಾಡಬೇಕೆಂದರೇ.. ಪೇಸ ಬುಕ್ ವಾಲ್ ಮೇಲೆ ನಿಮ್ಮ ಅಭಿಪ್ರಾಯಗಳನ್ನು, ಪೋಟೋಗಳನ್ನು, ವಿಡಿಯೋಗಳನ್ನು ಅಪ್ ಲೋಡ್ ಮಾಡಿ ನಿಮ್ಮ ಸ್ನೇಹಿತರ ಪ್ರತಿಕ್ರಿಯೆಗೆ ಕಾದು ಕುಳಿತಿರಬೇಕಾದ ಅನಿವಾರ್ಯತೆಯನ್ನು ನಾವುಗಳು ಇಂದು ಮಾಡಿಕೊಂಡಿದ್ದೇವೆ.

ಅಲ್ಲಿಯೇ ನಮ್ಮ ನಮ್ಮ ಹೊರ ಪ್ರಪಂಚ ತೆರೆದುಕೊಳ್ಳುವುದು. ಅಲ್ಲಿರುವ ಸಾವಿರಾರು ಸ್ನೇಹಿತರನ್ನು ಕೇವಲ ಅವರುಗಳು ಅಪ್ ಲೋಡ್ ಮಾಡಿರುವ ಪೋಟೋಗಳು, ಅವರು ಟೈಪಿಸಿರುವ ಅಕ್ಷರಗಳಿಂದ ನಾವುಗಳು ನಗಬೇಕು, ಅಳಬೇಕು. ಅವರ ವಾಲ್ ನ್ನು ಅರ್ಥಮಾಡಿಕೊಂಡು ನಮ್ಮ ಭಾವನ ಪ್ರಪಂಚದ ಫೀಲಿಂಗ್ ನ್ನು ಹರಿಯಬಿಡಬೇಕು.

ಉಫ್!

ಮೊನ್ನೇ ನನ್ನ ಸ್ನೇಹಿತ ಪೇಸ್ ಬುಕ್ ನಲ್ಲಿ ತನ್ನ ಹೆಂಡತಿ ಮಾಡಿದ ಹೊಸ ತಿನಿಸಿನ ಪೋಟೋ ಮತ್ತು ಅದರ ಗುಣಗಾನ ಮಾಡಿದ್ದ. ಅವನ  ಜೊತೆಯಲ್ಲಿ ಬಾಯಿ ತುಂಬ ನಾಲ್ಕು ಮಾತನಾಡಿ ಎಷ್ಟೊ ವರುಷಗಳಾಗಿವೆ. ಆದರೂ ಅವನು ನನ್ನ ಕಣ್ಣಳತೆಯಲ್ಲಿಯೇ ಇದ್ದಾನೆ. ಅವನ ಪ್ರತಿ ಚಲನೆಯು ನನಗೆ ನಿತ್ಯ ಫೇಸ್ ಬುಕ್ ಮೊಲಕ ತಿಳಿಯುತ್ತಿರುತ್ತದೆ. ಆ ಅಡಿಗೆಯ ಭಾವಚಿತ್ರ ನೋಡಿ ಬಾಯಿಯಲ್ಲಿಯೇ ನೀರೂರಿತು. ಆದರೇ ಅದನ್ನು ಹೇಗೆ ವ್ಯಕ್ತಪಡಿಸುವುದು. ತಮಾಷೇಗಾಗಿ ಅಲ್ಲಪ್ಪಾ ಹೇಗೆ ರುಚಿ ನೋಡುವುದು ಎಂದು ಕಾಮೇಂಟ್ ಹಾಕಿದೆ. ಆಗ ಅವನು ಹೇಳಿದ ಮನೆಗೆ ಬಾ ರುಚಿ ನೋಡುವಂತೆ! ಅಲ್ಲಾ ನಾನು ಹೋಗುವವರೆಗೂ ಆ ತಿನಿಸು ಇರುವುದೇ? ಆ ತಿನಿಸು ಇದ್ದರೂ ಅದೇ ಬಿಸಿ, ಬಿಸಿ ತಾಜಾತನವನ್ನು ಅದು ಉಳಿಸಿಕೊಂಡಿರುವುದೇ? ಉಳಿಸಿಕೊಂಡರೂ ಆ ಕ್ಷಣಕ್ಕೆ ಉದ್ಬವಿಸಿದ ಆ ನನ್ನ ಭಾವನೆಗಳನ್ನು ಪುನಃ ಹೇಗೆ ತರುವುದು!!

ಉಫ್! ನೆನಸಿಕೊಂಡರೇ ಎಷ್ಟೊಂದು ವಿಚಿತ್ರ ಅನಿಸುತ್ತದೆ.

ನಮ್ಮ ನಿತ್ಯ ಜೀವನದ ನೋವು ನಲಿವುಗಳನ್ನು ಕೇವಲ ದೃಶ್ಯ ಮತ್ತು ಶ್ರವಣ ಮಾಧ್ಯಮದ ಮೊಲಕವೇ ಹಿಡಿದಿಟ್ಟುಕೊಂಡು ಹರಿಯಬಿಡಬೇಕಾಗಿದೆ.

ಪ್ರತಿಯೊಂದನ್ನೂ ಮತ್ತೊಬ್ಬರಿಗೆ ನೇರ ನೇರ ತಲುಪಿಸುವುದಕ್ಕೆ ಇಂದು ಎಷ್ಟೇ ತಂತ್ರಙ್ಞಾನ ಮುಂದುವರಿದಿದ್ದರೂ ಮನುಷ್ಯ ಮನುಷ್ಯನ ಮಧ್ಯೆ ಈ ಡಿಜಿಟಲ್ ಮ್ಯಾನ್ ನಿಂತುಬಿಟ್ಟಿದ್ದಾನೆ ಅನಿಸುತ್ತದೆ.

ಪೋನ್ ನಲ್ಲಿ ಏನೇ ಸುಂದರವಾಗಿ ನಮ್ಮ ಫೀಲಿಂಗ್ ಗಳನ್ನು ವ್ಯಕ್ತಪಡಿಸಿದರೂ ನಮ್ಮಲ್ಲಿ ಆ ಭಾವನೆಗಳನ್ನು ವ್ಯಕ್ತಪಡಿಸುವಾಗ ನಮ್ಮ ಇಡೀ ದೇಹ, ನಮ್ಮ ಅಂಗಾಂಗಳ ಚಲನೆ, ಕಣ್ಣಿನ ಹೊಳಪು, ದ್ವನಿಯ ಜೊತೆಯಲ್ಲಿ ಏರಿಳಿತವಾಗುವ ನಮ್ಮ ಮುಖದ ಚಹರೆ ಈ ಯಾವೊಂದರ ಕಲ್ಪನೆಯಿಲ್ಲದೆ ಕೇವಲ ಕೀರಲು ದ್ವನಿಯಿಂದ ನಮ್ಮ ಖುಷಿ, ದುಃಖದ ಕ್ಷಣಗಳನ್ನು ವ್ಯಕ್ತಪಡಿಸುವ ಸ್ಥಿತಿಗೆ ಇಂದು ನಾವುಗಳು ಬಂದಿದ್ದೇವೆ.

ಎಷ್ಟೊಂದು ಸುಲಭವಾಗಿ ನಮ್ಮ ನಮ್ಮ ಭಾವನೆಗಳನ್ನು ಈ ಮೇಲ್, ಚಾಟ್ ಗಳಲ್ಲಿ ವ್ಯಕ್ತಪಡಿಸುವಂತೆ ಇಂದು ಎದುರಿನಲ್ಲಿ ನಮ್ಮ ಪ್ರೀತಿ ಪಾತ್ರರರು ಬಂದರೇ ಒಂದು ಮಾತು ಬಾಯಿಯಿಂದ ಹೊರಡುವುದು ಕಷ್ಟವಾಗಿದೆ. ಈ ಮೇಲ್ ಗಳಲ್ಲಿ ಟೈಪಿಸುವ ನೂರಾರು ಪದಗಳು, ಮೊಬೈಲ್ ನಲ್ಲಿ ಟೈಪಿಸು ನೂರಾರು ಎಸ್.ಎಂ.ಎಸ್ ಭಾವನೆಗಳು ವ್ಯಕ್ತಿ ಪ್ರತ್ಯಕ್ಷವಾದಗ ಮೂಕವಾಗಿಬಿಡುತ್ತೇವೆ.

ಈ ಮೇಲ್, ಚಾಟ್, ಪೇಸ್ ಬುಕ್, ವಿಡಿಯೋ ನಲ್ಲಿ ನೋಡಿ ಆನಂದಪಡುವ ಕ್ಷಣಗಳು ಎದುರು ಬದಿರು ನಿಂತಾಗ ಪುಲ್ ಸೈಲೆಂಟಾಗಿ ಅಪರಿಚಿತರಂತೆ ಕಕ್ಕಾಬಿಕ್ಕಿಯಾಗಿ ನಿಂತುಬಿಡುತ್ತೇವಲ್ಲಾ ಯಾಕೇ?

ಅಲ್ಲಾ ನಾವುಗಳು ನಮ್ಮ ಜೀವನವನ್ನು ಯಾವ ಕಡೆ ತೆಗೆದುಕೊಂಡು ಹೋಗುತ್ತಿದ್ದೇವೆ?

ಮಾನವನ ಸಹಜತೆಯೇ ಇಂದು ಅಸಹಜತೆಯಾಗಿ ಪರಿಣಮಿಸಿದೆ. ಮಾತಿಗೆ ಕಡಿವಾಣ ಪೂರ್ತಿಯಾಗಿಬಿಟ್ಟಿದೆ.

ಭಾವನೆಯೆಂದರೇ ಅದು ಬೆರಳ ತುದಿಯ ಮೇಲಿನ ಮೇಸೆಜ್ ಗಳಾಗಿರಬೇಕು ಎಂಬುವಂತಾಗಿದೆ ಎಂದು ನಿಮಗೆ ಅನಿಸುತ್ತಿಲ್ಲವಾ?

ಎಷ್ಟೇ ಮುಂದುವರಿದಿದ್ದರೂ ಮಾನವ ಎಂದೆಂದಿಗೂ ಸಂಘ ಜೀವಿ. ಅವನಿಗೆ ಅವನ ನೋವು ನಲಿವು ಭಾವನೆಯ ಆರಾಧಕರು ಅತಿ ಹತ್ತಿರದಲ್ಲಿಯೇ ಸ್ವೀಕರಿಸುವಂತಿರಬೇಕು.

ಯಾವುದೇ ಒಂದು ಫೀಲಿಂಗ್ ನ್ನು ಹಿಡಿದು ಹಿಡಿದು ಸ್ಟಾಕ್ ಮಾಡಿ ಅನಂತರ ಹರಿಯಬಿಡುವಂತಾಗದಿರಲಿ. ಅದು ನಮ್ಮ ಜೊತೆಯಲ್ಲಿರುವ ಹೆತ್ತವರು, ಪ್ರೀತಿ ಪಾತ್ರರು, ಸ್ನೇಹಿತರು, ನೆರೆಹೊರೆಯವರ ಜೊತೆಯಲ್ಲಿ ಅದೇ ಲೈವ್ ರೀಯಲ್ ಆಗಿ ಹರಿಯುವಂತಿರಬೇಕು.

ಎಂದೋ ಬಂದ ನಗು, ಅಳುವನ್ನು ಇಂದು ಪ್ಲೇ ಮಾಡುವಂತಾಗಬಾರದು ಅಲ್ಲವಾ?


ಗುರುವಾರ, ಆಗಸ್ಟ್ 23, 2012

ನಮ್ಮ ಗೆಲುವಿಗೆ ಚಪ್ಪಾಳೆ!!

ಕರ್ನಾಟಕಕ್ಕೆ ಹೊಸದಾಗಿ ಒಂದು ಸುತ್ತು ಮಳೆಯಾಗಿ ಬರಗಾಲ, ಬರಗಾಲ ಎಂದು ಆಕಾಶವನ್ನು ನೋಡುತ್ತಿದ್ದ ಕನ್ನಡ ಮನಗಳಿಗೆ ಪ್ರಕೃತಿ ಕೊಂಚ ತಂಪನ್ನು ಎರೆದಿದೆ.


ಹಳ್ಳಿಯ ರೈತಾಪಿ ಜನಗಳಿಗೆ ಮಳೆಯೇ ಷೇರು, ಸನಸೇಕ್ಸ್. ಆದರ ಮೇಲೆ ಅವರ ವರುಷದ ಗಳಿಕೆ ನಿರ್ಧಾರವಾಗುತ್ತದೆ. ಹಳ್ಳಿಯ ರೈತ ಚೆನ್ನಾಗಿದ್ದರೆ ದಿಲ್ಲಿಯ ದೊರೆ ಸುಖವಾಗಿರಬಹುದು. ಅವನು ನಿಟ್ಟುಸಿರಿಟ್ಟರೆ ದೇಶವೆ ಒಂದು ಕ್ಷಣ ನಡುಗಿಬಿಡುತ್ತದೆ. ನಮ್ಮದು ರೈತಾಪಿ ದೇಶ ಅವರ ಸುಖವೇ ದೇಶದ ಸುಖ. ಅವರನ್ನು ಬಿಟ್ಟು ನಾವುಗಳು ನಮ್ಮ ಭಾರತವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.


ಪ್ರಚಲಿತ ರಾಜಕೀಯದ ಗೊಂದಲಗಳಲ್ಲಿ ಕೇಂದ್ರ ಸರ್ಕಾರಕ್ಕೆ ಕಲ್ಲಿದ್ದಲಿನ ಕಪ್ಪು ಮೆತ್ತಿಕೊಂಡಿದೆ. ಕಲ್ಲಿದ್ದಲು ಮತ್ತು ಇಂದನ ಖಾತೆಯನ್ನು ಮಾನ್ಯ ಪ್ರಧಾನ ಮಂತ್ರಿಗಳೆ ನೋಡಿಕೊಳ್ಳುತ್ತಿದ್ದಾರೆ. ಅವರು ಇದ್ದರೂ ಈ ರೀತಿಯ ಬೃಹದಾಕಾರವಾದ ಭ್ರಷ್ಟಾಚಾರ ನೆಡೆದಿದೆ ಎಂದರೇ.. ಭಾರತೀಯರಿಗೆ ನಿತ್ಯ ಒಂದಲ್ಲಾ ಒಂದು ಭ್ರಷ್ಟಾಚಾರದ ಸುದ್ಧಿಗಳ ಸುರಿಮಳೆ. ೨ಜಿ ನಂತರದ ಬಹು ದೊಡ್ಡ ಆಕ್ರಮ ಇದಾಗಿದೆ.


ಆದರೇ ಕೇಳುವವರು ಯಾರು? ನಮ್ಮ ಪ್ರಜಾಡಳಿತದಲ್ಲಿ ಕೇವಲ ಐದು ವರುಷಕ್ಕೆ ಒಮ್ಮೆ ಮಾತ್ರ ನೆಚ್ಚಿನ ಸರ್ಕಾರವನ್ನು ಆರಿಸುವ ಅವಕಾಶ. ಬದಲಾಯಿಸುವ ಅವಕಾಶ ಇದೀಯಾ? ಅಲ್ಲಿಯವರೆಗೂ ಅವರು ಏನೇನೋ ನಾಟಕ ಮಾಡಿದರೂ ಮೂಕ ಪ್ರೇಕ್ಷಕನಾಗಿ ನೋಡುವುದೊಂದೆ ಮತದಾರನ ಕಾಯಕ.


ಬದಲಾವಣೆಯ ಒಂದು ಸಣ್ಣ ಗಾಳಿ ಎಲ್ಲಿಯೂ ಕಾಣುತ್ತಿಲ್ಲಾ! ಅಷ್ಟರ ಮಟ್ಟಿಗೆ ನಿರಾಶದಾಯಕ ವಾತವಾರಣ ಇದಾಗಿದೆ.


ಸಾಮಾನ್ಯ ಜನಗಳ ನಿತ್ಯ ಜೀವನದ ವೆಚ್ಚ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ! ಪ್ರತಿಯೊಂದು ಸಾಮಗ್ರಿಗಳು ಗಗನ ಕುಸುಮದ ರೀತಿಯಲ್ಲಿ ದುಬಾರಿ ಬೆಲೆಗೆ ಏರಿಬಿಟ್ಟಿವೆ. ಆದರೆ ಅದೆ ರೀತಿಯಲ್ಲಿ ಅವನ ಆದಾಯ ಸಿಗುತ್ತಿಲ್ಲ! ಇದೆ ಅತಿ ದೊಡ್ಡ ವಿಪರ್ಯಾಸ.


ಬೆಂಗಳೂರಿಗೆ ಬಂದರೆ. ಎಲ್ಲೆಲ್ಲೂ ವಾಸನೆಯದೆ ಮಾತು!


ಬೆಂಗಳೂರು ಇಂದು ಮತ್ತೊಂದು ಅಪಖ್ಯಾತಿಗೆ ಗುರಿಯಾಗುತ್ತಿದೆ. ಉಧ್ಯಾನ ನಗರಿ, ಶಾಂತಿಯ ಸ್ವಚ್ಛ ನಗರ, ಐಟಿ, ಬಿಟಿಯ ನಗರ ಎಂಬ ಬಿರುದುಗಳೆಲ್ಲಾ ಮಣ್ಣುಪಾಲು ಮಾಡುವ ರೀತಿಯಲ್ಲಿ ಡರ್ಟಿ ಗಾರ್ಬೆಜ್ ಸಿಟಿಯಾಗುತ್ತಿದೆ. ಎಲ್ಲೆಲ್ಲಿ ನೋಡಿದರೂ, ವಾರವಾದರೂ ವಿಲೇವರಿಯಾಗದ ರಾಶಿ, ರಾಶಿ, ಗುಪ್ಪೆಯ ಕಸ, ಕಸ ಮತ್ತು ಕಸ. ಪ್ರತಿಯೊಬ್ಬರೂ ಮೂಗುಮುಚ್ಚಿಕೊಂಡು ರಸ್ತೆಗಳಲ್ಲಿ ನಡೆದಾಡುವಂತಹ ಪರಿಸ್ಥಿತಿ ಬಂದುಬಿಟ್ಟಿದೆ.


ಜನಗಳು ಸಹ ಬೇಕಾಬಿಟ್ಟಿಯಾಗಿ ನಿತ್ಯ ಟನ್ ಗಳಟ್ಟಲೆ ಕಸವನ್ನು ಉತ್ವಾದಿಸುವುದಕ್ಕೆ ಸ್ವಯಂ ಕಡಿವಾಣ ಹಾಕಿಕೊಳ್ಳಬೇಕು.


ಅಲ್ಲಾ ನಗರದ ಇಷ್ಟೊಂದು ವೇಸ್ಟ್ ಎಲ್ಲಿಗೆ ಹಾಕಬೇಕು? ನೀವೆ ಹೇಳಿ?


ನಿತ್ಯ ದೊರೆಯುವ ಈ ಗಾರ್ಬೇಜ್ ನ್ನು ನಗರದಿಂದ ದೊರಕ್ಕೆ ತೆಗೆದುಕೊಂಡು ಹೋದರೂ ಅದು ಪುನಃ ನಮ್ಮ ರಾಜ್ಯದ ಯಾವುದೋ ಒಂದು ಹಳ್ಳಿಯ ಹೊಲ, ಜಾಗ, ನೀರು ಇರುವ ಜಾಗಕ್ಕೆ ಹಾಕಬೇಕಲ್ಲವಾ? ನಮ್ಮ ನಗರಗಳು ಮಾತ್ರ ಸುಂದರ ಮತ್ತು ಆರೋಗ್ಯಕರವಾಗಿದ್ದರೇ ಸಾಕೇ? ಅಕ್ಕ ಪಕ್ಕದ ಹಳ್ಳಿಯ ಜನಗಳೇನೂ ಪಾಪ ಮಾಡಿದ್ದಾರೆ. ನಗರದ ಮಂದಿ ಉತ್ಪಾದಿಸುವ ಈ ಕಸವನ್ನು ಮತ್ತು ಕಸದ ವಾಸನೆಯನ್ನು ಕುಡಿಯಲು. ಆದ್ದರಿಂದ ಬೆಂಗಳೂರಿನ ಜನಗಳು ಇನ್ನಾದರೂ ಕಸವನ್ನು ಮಾಡುವ ಮೊದಲು ನೂರು ಬಾರಿ ಯೋಚಿಸುವುದು ಇಂದಿನ ತುರ್ತು ಕೆಲಸವಾಗಿದೆ.


ಇದು ವರ್ತಮಾನದ ಒಂದು ರೌಂಡ್ ಸಮಾಚಾರ!


ಗೆಳೆಯರ ಲೋಕದಲ್ಲಿ ವಿಶೇಷವಾದ ಘಟನೆಗಳು ಜರುಗುತ್ತಿವೆ. ಅವರುಗಳು ಅಗಾಧವಾದ ಸಾಧನೆಗಳನ್ನು ಮಾಡಲೇಬೇಕು ಎಂಬ ಒತ್ತಡದಲ್ಲಿ ವಿಭಿನ್ನವಾದ ಚಿಕ್ಕ ಚಿಕ್ಕ ಸಾಧನೆಗಳನ್ನು ಅವರುಗಳು ಕೆಲಸ ಮಾಡುತ್ತಿರುವ ಸಂಸ್ಥೆಗಳಲ್ಲಿ, ಓದುತ್ತಿರುವ ಕಾಲೇಜುಗಳಲ್ಲಿ, ಇರುವ ಊರುಗಳಲ್ಲಿ ಮಾಡುತ್ತಿದ್ದಾರೆ.


ಯಾಕೆಂದರೇ ಈ ಜೀವನ ಅನ್ನುವುದು ನಿಂತ ನೀರಾಗಬಾರದು. ಏನಾದರೂ ಒಂದು ಹೊಸತನಕ್ಕೆ ಸದಾ ನಮ್ಮನ್ನು ನಾವುಗಳು ತೆರೆದುಕೊಳ್ಳಬೇಕು.


ಹಾಗೆಯೇ ಸುಮಾರು ಸ್ನೇಹಿತರು ಹೊಸ ಹೊಸ ಕೆಲಸಗಳನ್ನು ಹುಡುಕಿಕೊಂಡು ಬೇರೆ ಬೇರೆ ಹೊಸ ಕಂಪನಿಗಳಿಗೆ ಹೋಗಿದ್ದಾರೆ. ಅಲ್ಲಿ ಪುನಃ ಹೊಸ ಕೆಲಸ, ಹೊಸ ಜನ, ಹೊಸ ವಾತವರಣವನ್ನು ಕಂಡು ಅಚ್ಚರಿಪಟ್ಟಿದ್ದಾರೆ. ಇನ್ನೊಂದಷ್ಟು ಮಂದಿ ಹೊರದೇಶಗಳಿಗೆ ತಮ್ಮ ಸಂಸ್ಥೆಗಳಿಂದ, ಓದುತ್ತಿರುವ ಕಾಲೇಜುಗಳಿಂದ ಹೋಗಿ ಹೊಸ ಅನುಭವವನ್ನು ಪಡೆದುಕೊಂಡು ಬಂದಿದ್ದಾರೆ. ಮತ್ತೊಂದಷ್ಟು ಸ್ನೇಹಿತರು ಹೊಸ ಕೆಲಸ, ಹೊಸ ಓದನ್ನು ಹುಡುಕುತ್ತಿದ್ದಾರೆ.


ನಮ್ಮಂತಹ ಸಾಮಾನ್ಯ ಜನಗಳಿಗೆ ಈ ರೀತಿಯ ಚಿಕ್ಕ ಚಿಕ್ಕ ಸಾಹಸಗಳೆ ಜೀವನದ ಮೈಲುಗಲ್ಲುಗಳು.


ನಾವುಗಳು ನಮ್ಮ ಸವೆದ ಹೆಜ್ಜೆಗಳನ್ನು ಗಮನಿಸಿದರೇ ನಾವುಗಳು ಈಗ ಇಲ್ಲಿದ್ದೇವಲ್ಲಾ ಎಂಬ ಹೆಮ್ಮೆಯನ್ನು ಮನದಲ್ಲಿ ಮೊಡಿಸಿರುತ್ತದೆ.


ಹೆತ್ತವರಿಗೆ ಇದೆ ನಾವುಗಳು ಕೊಡುವ ಒಂದು ಲೈಫ್ ಟೈಂ ಸಂತೋಷ ಅನಿಸುತ್ತದೆ. ನಮ್ಮಗಳ ಏಳ್ಗೆಯೇ ಅವರ ಗೌರವವಾಗಿರುತ್ತದೆ.


ಅಂತೂ ಈ ಸವಿ ಸವಿ ಬಾಳಿನಲ್ಲಿ ನಿತ್ಯ ಸ್ನೇಹಮಯವಾದ ವಾತಾವರಣವೇ ಬದುಕಿಗೊಂದು ಭರವಸೆಯನ್ನು ಕೊಡುತ್ತದೆ.




ನಮ್ಮ ಗೆಲುವಿಗೆ ನಮ್ಮ ಜೊತೆಯವರ ಚಪ್ಪಾಳೆಯೇ ಸ್ಫೂರ್ತಿ! ಅಷ್ಟರ ಮಟ್ಟಿಗೆ ನಾವೆಲ್ಲಾ ಧನ್ಯರು.


ಏನಾಂತೀರಾ?

Pictures Rights@ Hema Bharadwaj,Ramya Rao and Sagar Krishna 

ಬುಧವಾರ, ಆಗಸ್ಟ್ 15, 2012

ಈ ಪ್ರೀತಿಯ ಹೊಳೆ


ಹಾಯ್ ನಿರ್ಮಲಾ,

ಇಂದಿಗೆ ಒಂದು ವರುಷವಾಯಿತು ನನ್ನ ನಿನ್ನ ಮಧ್ಯೆ ಹುಟ್ಟಿಕೊಂಡ ಈ ಸ್ನೇಹ, ಪ್ರೇಮ ಮತ್ತು ಪ್ರೀತಿಗೆ!

ಅಬ್ಬಾ ಎಷ್ಟು ಬೇಗ ಮೊದಲ ವರ್ಷಾಚಾರಣೆಯ ಹೊಸ್ತಿಲಲ್ಲಿ ನಾವಿಬ್ಬರು ನಿಂತು ಬಿಟ್ಟಿದ್ದೇವೆ. ಇಂದು ಸಹ ನೀನು ನನಗೆ ನಿನ್ನೆ ಮೊನ್ನೆ ಪರಿಚಯವಾದಂತಿದೆ.

ಅದಕ್ಕೆ ಇರಬೇಕು ಕಣ್ಣಿಗಿಂತ ಹೃದಯಕ್ಕೆ ಇಷ್ಟವಾದವರ ಜೊತೆಯಲ್ಲಿ ಕಳೆಯುವ ಕ್ಷಣಗಳು ಕೇವಲ ಕ್ಷಣಗಳು ಮಾತ್ರ!

ಅಂದು  ಸ್ವಾತಂತ್ರ್ಯ ದಿನಾಚಾರಣೆ. ನನಗೋ ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಆಚರಣೆಯ ಉತ್ಸವಗಳ ಸಂಭ್ರಮವನ್ನು ಕಣ್ಣುತುಂಬಿಕೊಳ್ಳಲು ತುಂಬ ಆಸೆಯಾಗಿತ್ತು. ಅದಕ್ಕಾಗಿಯೇ ಅಂದು ಮುಂಜಾನೆ ಬಹು ಬೇಗ ಎದ್ದು ರೇಡಿಯಾಗಿ ನಿತ್ಯ ನಾನು ಕಾಲೇಜಿಗೆ ಹೋಗಲು ನಾನು ಹಿಡಿಯುವ ಬಸ್ಸು ಬರುವ ಜಾಗದಲ್ಲಿ ನಿಂತು ಎಂ.ಜಿ ರೋಡ್ ಕಡೆಗೆ ಹೋಗುವ ಬಸ್ಸು ಬರುವ ದಾರಿಯನ್ನೆ ನೋಡುತ್ತಾ ಸುಮಾರು ಅರ್ಧ ಗಂಟೆಯಿಂದ ಕಾಯುತ್ತಿದ್ದೆ.

ಗೊತ್ತಾ ನಮಗೆ ಬೇಕಾದ ಸಮಯಕ್ಕೆ ಯಾವ ಬಸ್ಸುಗಳು ಬರುವುದಿಲ್ಲ. ನಮಗೆ ಬೇಕಿಲ್ಲದಿರುವಾಗ ಹಿಂದೆ ಮುಂದೆ ಬಸ್ಸುಗಳ ಸಾಲೇ ಸಾಲೂ! ಇದೇ ಜೀವನದ ಮರ್ಮ ಅನಿಸುತ್ತದೆ. ಇದು ಪ್ರತಿಯೊಂದಕ್ಕೂ ಅನ್ವಯವಾಗುತ್ತದೆ.

ಹಾಗೆ ಕಾದು ಕಾದು ನಿರಾಶನಾಗಿರುವಾಗ. ಗೊತ್ತಿಲ್ಲ ಅಂದು ಆ ಮುಂಜಾನೆಯ ವಾತವರಣವೇ ಹಾಗೆ ಇತ್ತೇನೋ. ಎತ್ತಾ ಕಡೆ ನೋಡಿದರೂ ಚಿಕ್ಕ ಚಿಕ್ಕ ಶಾಲಾ ಮಕ್ಕಳ ಶಾಲಾ ಸಮವಸ್ತ್ರ ಮತ್ತು ಕೈಯಲ್ಲಿ ಕೆಸರಿ,ಬಿಳಿ,ಹಸಿರು ದ್ವಜದ ಬ್ಯಾಂಡ್, ಬಾವುಟ. ಆ ಮಕ್ಕಳ ಹೆಜ್ಜೆ,ನಗು,ಉತ್ಸಾಹವನ್ನು ಕಂಡು ಭಾರತಾಂಬೆಗೆ ಅಲ್ಲಿಯೇ ಒಂದು ನಮನ ಸಲ್ಲಿಸಿದೆ.

ನಮ್ಮ ದೇಶದ ಸ್ವಾತಂತ್ರ್ಯದ ಹಿರಿಮೆಯನ್ನು ನೋಡಬೇಕೆಂದರೇ ಅದು ಆಗಸ್ಟ ೧೫ ಮಾತ್ರ! ಅದು ನಮ್ಮೆಲ್ಲರ ಪಾಲಿಗೆ ಬಿಡುಗಡೆಯ ದಿನವೇ ಸರಿ.

ಹೀಗಿರುವಾಗಲೇ ಒಂದರೆಕ್ಷಣ ನನಗೆ ನನ್ನಲ್ಲಿಯೇ ಏನೋ ಆದಂತೆ ಅನಿಸಿಬಿಟ್ಟಿತು.

ಹಾಗೆಯೇ ಮುಂಜಾನೆಯ ನಿದ್ದೆಯಿಂದ ಎದ್ದು ಯಾವುದೋ ಘಮದ ಪರಿಮಳವೇ ನನ್ನ ಮೂಗಿಗೆ ತಲುಪಿದಂತಾಯಿತು. ಹಾಗೆಯೇ ಸುಮ್ಮನೇ ನಾನು ಯಾಕಿರಬಹುದು? ಏನಿರಬಹುದು? ಎಂದುಕೊಂಡು ನಾನು ನಿಂತು ಕೊಂಡಿದ್ದ ಆ ಅರಳಿ ಮರದಿಂದ ಬಲಕ್ಕೆ ತಿರುಗಿದರೇ..

ನಾನು ಹಾಗೆಯೇ ಸ್ಥಬ್ಧ!

ಅಲ್ಲಾ ದೇವರೇ ಇಂಥ ಶುಭ ದಿನದಂದೂ ಈ ರೀತಿಯಲ್ಲಿ ಈ ಹುಡುಗಿಯನ್ನು ನನ್ನ ಕಣ್ಣಿಗೆ ನೀ ಹೀಗೆ ಬೀಳಿಸಬಹುದೇ? ಅನಿಸಿತು.

ಈ ಪರಿಮಳ ಈ ಹುಡುಗಿ ಹಾಕಿಕೊಂಡಿರುವ ಪರಪ್ಯೂಮ್ ದೇ  ಅನಿಸಿತು.

ಅಲ್ಲಾ ನೀನು ಅದು ಹೇಗೆ ಅಂಥ ಟೇಸ್ಟ್ ಇರುವ ಪರಪ್ಯೂಮ್ ಖರೀದಿಸುತ್ತಿಯಾ?

ಅದಕ್ಕೂ ಒಂದು ಅಸಕ್ತಿ ಬೇಕು ಅನಿಸುತ್ತದೆ. ಅದರಲ್ಲಿಯೇ ಏನೂ ಒಂದು ಅಹ್ಲಾದ. ಹುಡುಗಿಯ ಬಗ್ಗೆ ಈ ಸುಮಧುರ ಸುಗಂಧದ ಪರಿಮಳವೇ ಮುನ್ನುಡಿಯಾಗಿತ್ತು.

ಹುಡುಗಿಯರಿಗೆ ಇಂಥ ಒಳ್ಳೆಯ ಟೇಸ್ಟ್ ಇರುತ್ತೇ ಎಂದು ಕೇಳಿದ್ದೆ. ಆದರೇ ನೀನು ಅಂದು ಅದನ್ನು ನಿಜ ಮಾಡಿದ್ದೆ.

ಇಷ್ಟು ದಿನವೂ ನೀನು ಇದೆ ಏರಿಯಾದಲ್ಲಿಯೆ ಇದ್ದೀಯಾ! ಎಂದು ನನಗೆ ನಾನೇ ತಬ್ಬಿಬ್ಬು ಆಗಿಬಿಟ್ಟಿದ್ದೇ.!

ಯಾಕೆಂದರೇ ನಾನು ಅಷ್ಟು ಬೇಗ ಯಾವಾತ್ತೂ ಎದ್ದಿಲ್ಲಾ! ಅಷ್ಟು ಬೇಗ ಎದ್ದು ಬಸ್ ನಿಲ್ಧಾಣಕ್ಕೆ ಯಾಕೇ ಬರಬೇಕು ಅಲ್ಲವಾ?

ನನ್ನ ಮನದಲ್ಲಿಯೇ ಆ ದೇವರಿಗೆ ಒಂದು ಚಿಕ್ಕ ನಮಸ್ಕಾರವನ್ನು ಹಾಕಿಬಿಟ್ಟೆ!

ನೀನು ಇನ್ನೂ ಇನ್ನೂ ಹತ್ತಿರಕ್ಕೆ ಬಂದಂತೆ ನನ್ನ ಎದೆಯ ಢವ  ಢವ  ಜಾಸ್ತಿಯಾಗಿಬಿಟ್ಟಿತು.

ಇದುವರೆಗೂ ಹಾಗೆ ನನಗೆ ಎಂದೂ ಸಹ ಈ ರೀತಿಯಲ್ಲಿ ಅನಿಸಿರಲಿಲ್ಲ.

ನಾನು ಓದುವ ಕಾಲೇಜಿನಲ್ಲಿ ಮಾಮೊಲಿಯಾಗಿ ಸುಮಾರು ಹುಡುಗಿಯರು ಇದ್ದಾರೆ. ಎಂದೂ ಅವರನ್ನು ನೋಡಿದಾಗ ಹೀಗೆ ಆದ ಅಂದಿನ ಅನುಭವವಾಗಿರಲಿಲ್ಲ.

ನನಗೆ ನಾನೇ ಮನದಲ್ಲಿ ಸಮಾಧಾನ ಮಾಡಿಕೊಂಡು ನಿನ್ನ ಆ ಸುಂದರ ಮುಖಾರವಿಂಧವನ್ನು ನನ್ನ ಕಣ್ಣಲ್ಲಿ ತುಂಬಿಸಿಕೊಳ್ಳಬೇಕು ಎಂದು ಕಣ್ಣುರೆಪ್ಪೆ ಬಡಿಯದೇ ನಿನ್ನನ್ನೇ ನೋಡುತ್ತಾ ಇರುವಾಗ.. ನೀನು ಏನಕ್ಕೋ ಹಾಗೆಯೇ ಹಿಂದಕ್ಕೆ ತಿರುಗಿ ನೋಡಿದಾಗ ಅಬ್ಬಾ ಏನೂ ಆ ನಿನ್ನ ಕಪ್ಪು ಕೊದಲು? ಹಾಗೆಯೇ ಪೂರ್ಣವಾಗಿ ನಿನ್ನ ಹಿಂಬದಿಯನ್ನು ಅವರಿಸಿಕೊಂಡುಬಿಟ್ಟಿವೆ. ತಲೆಗೆ ಚಿಕ್ಕದಾದ ಮಲ್ಲಿಗೆಯ ಹೊವನ್ನು ಇಟ್ಟುಕೊಂಡಿರುವುದು ಇನ್ನೂ ಹೆಚ್ಚು ಅಲಂಕಾರವಾಗಿ ನಿನ್ನನ್ನು ನನಗೆ ತೋರಿಸಿತು.

ನನಗೆ ನಾನೇ ತುಂಬ ವ್ಯಥೆಪಟ್ಟುಕೊಂಡೆ..

ಅಲ್ಲಾ ಇಲ್ಲಿಯೇ ಹತ್ತು ವರುಷದಿಂದ ವಾಸ ಮಾಡುತ್ತಿದ್ದೇನೆ. ನನಗೆ  ಒಂದು ದಿನವಾದರೂ ಇವಳ ದರ್ಶನ ಆಗಿಲ್ಲವಲ್ಲಾ?

ಇರಲಿ ಬಿಡು. ಇಂದು ನಾನು ತುಂಬಾ ಲಕ್ಕಿ! ಎಂದು ಕೊಳ್ಳುತ್ತಾ ಇರುವಾಗಲೇ..

ನೀನು ನನ್ನನ್ನು ಕುರಿತು "ರೀ ಎಂ.ಜಿ ರೋಡ್ ಕಡೆ ಹೋಗುವ ಬಸ್ಸು ಈಗ ತಾನೇ ಹೋಯ್ತು ಅನಿಸುತ್ತದೆ. ಮುಂದೆ ಎಷ್ಟೋತ್ತಿಗೆ ಇನ್ನೊಂದು ಬಸ್?" ಎಂದು ಕೇಳಿದಾಗಲೇ ನಾನು ಈ ಪ್ರಪಂಚಕ್ಕೆ ವಾಪಾಸ್ಸು ಬಂದಿದ್ದು.

ನಾನು "ಹೌದಾ! ಈಗ ಹೋಯ್ತಾ" ಎಂದು ಉದ್ಗಾರವನ್ನು ಸಣ್ಣದಾಗಿ ತೆಗೆದುಕೊಂಡು. ಬಸ್ ಕಳೆದುಕೊಂಡರು ತೊಂದರೆ ಇಲ್ಲಾ ಎಂದು. "ಇನ್ನೂ ೧೫- ೨೦ ನಿಮಿಷದ ನಂತರ ಮತ್ತೊಂದು ಬಸ್ ಇದೆ" ಎಂದೆ.

ಅಗ ನೀನು ಆ ನಿನ್ನ ಹಸಿರು ಚೂಡಿದಾರದ ಉದ್ದನೇಯ ವೇಲ್ ನ್ನು ಹಾಗೆಯೇ ತೀಡಿ ಮುಂದಕ್ಕೆ ಹೆಗಲ ಮೇಲೆ ಎಳೆದುಕೊಂಡಾಗ  ನಾನು ಅಯ್ಯೋ ಇಂದು ಏನೇ ಆಗಲಿ ನಿನ್ನನ್ನು ಪುಲ್ ಪರಿಚಯ ಮಾಡಿಕೊಳ್ಳಬೇಕು ಎನಿಸಿ. ಮಾತಿಗೆ ನಿನ್ನನ್ನಾ. "ನೀವು ಎಂ.ಜಿ ರೋಡ್ ನಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವಕ್ಕೆ ಹೋಗುತ್ತಾ ಇದ್ದೀರಾ?" ಎಂದು ಕೇಳಿಬಿಟ್ಟೆ.

ಆಗ ನೋಡಬೇಕಾಗಿತ್ತು ನಿನ್ನ ಮುಖವನ್ನು. ಏನೂ ಇವನು ಹುಟ್ಟು ತರಲೆ ಥರಾ ಏನೇನೋ ಕೇಳುತ್ತಿದ್ದಾನೆ ಎಂದು ಕೊಂಡು ನನ್ನನ್ನೆ ದಿಟ್ಟಿಸಿ ನೋಡಿದಾಂಗೆ ಇತ್ತು. ಗೊತ್ತಾ ಆ ನಿನ್ನ ಕಣ್ಣುಗಳು ಆ ಸಮಯದಲ್ಲಿ ಎಷ್ಟೊಂದು ಸುಂದರವಾಗಿ ನನಗೆ ಕಂಡಿದ್ದವು. ಏನೂ ಸುಂದರ ಕಣ್ಣುಗಳೂ ನಿನ್ನವು ನಿರ್ಮಲಾ. ಎರಡು ಚಿಕ್ಕ ಸುಂದರ ಬೆಳ್ಳಿ ಮೀನಿನಂತೆ. ಆದರಲ್ಲಿಯೇ ಏನೋ ಬಿಡಿಸಲಾರದ ಆಕರ್ಷಣೆ ಇದೆ ಅನಿಸುತ್ತದೆ.

"ಹೌದು!" ಎಂದು ಒಂದೇ ಮಾತಿನ ಉತ್ತರ ನನ್ನನ್ನು ತುಂಬಾನೇ ನಿರಾಸೆಯನ್ನುಂಟು ಮಾಡಿತು.

ನೀನೋ ಹಾಗೊಮ್ಮೆ ಇಗೊಮ್ಮೆ ಅತ್ತಾ ಇತ್ತಾ ನೋಡುತ್ತಿದ್ದೇ. ಅದೇ ಸಮಯಕ್ಕೆ ಅನಿಸುತ್ತದೆ. ಒಂದು ಪೋನ್ ಕಾಲು ನಿನ್ನ ಮೊಬೈಲ್ ಗೆ ಬಂತು. ನೀನು ಏನೇನೋ ಗುಸ-ಗುಸ, ಪಿಸ-ಪಿಸ ಎಂದು ಮಾತಾಡಿದ ನಂತರ ಹೆಗಲಿನಲ್ಲಿದ್ದ ಆ ಕಪ್ಪನೆಯ ವೇನಿಟಿ ಬ್ಯಾಗ್ ನಲ್ಲಿ ತುರುಕಿದೆ.

ಮತ್ತೆ ನನ್ನನ್ನೊಮ್ಮೆ ನೋಡಿದೆ. ನಾನೋ ಹಂಬಲದ ಕಣ್ಣುಗಳಿಂದ ನಿನ್ನನ್ನೇ ದಿಟ್ಟಿಸಿದೆ. ಪುನಃ ಬಸ್ ಬರುವ ಎಡಗಡೆಯ ದಾರಿಯನ್ನು ನೀ ನೋಡುತ್ತಿದ್ದೆ. ನಾನು ಆ ದಾರಿಯನ್ನು ನೋಡುವ ರೀತಿಯಲ್ಲಿ ನಿನ್ನನ್ನೇ ಗಮನಿಸುತ್ತಿದ್ದೆ.

ಮನಸ್ಸಿನಲ್ಲಿಯೇ ಆ ದೇವರಿಗೆ ಆಗಲೇ ನಾನು ನನ್ನ ಹತ್ತು ಅರ್ಜಿಗಳನ್ನು ಹಾಕಿಬಿಟ್ಟಿದ್ದೆ.

ಮೊದಲನೇಯದು ಬಸ್ ಆದಷ್ಟು ಸ್ವಲ್ಪ ಲೇಟಾಗಿ ಬರಲಿ ಎಂದು.

ಪುನಃ ನಾನೇ ಹೇಳಿದೆ "ನಾನು ಎಂ.ಜಿ ರೋಡ್ ನಲ್ಲಿರುವ ಆ ಸ್ವಾತಂತ್ರ್ಯ ಸಮಾರಂಭಕ್ಕೆ ಹೋಗುತ್ತಿರುವುದು".

ಆಗ ನೀನು "ಓ!" ಅಂದು ಹಾಗೆಯೇ ವಿರುದ್ಧವಾಗಿ ಮುಖ ತಿರುಗಿಸಿದೆ.

ಅಲ್ಲಾ ಹುಡುಗರಿಗೆ ಇಷ್ಟೊಂದು ಕಷ್ಟವನ್ನು ಈ ಹುಡುಗಿಯರು ಯಾಕೆ ಕೊಡುತ್ತಾರೋ ಆ ದೇವರೇ ಬಲ್ಲ!

ಅದು ಹೊಸದಾಗಿ  ಒಬ್ಬರನ್ನೊಬ್ಬರೂ ಪರಿಚಯ ಮಾಡಿಕೊಳ್ಳುವವರೆಗೆ?

ನಮ್ಮ ಕಣ್ಣುಗಳನ್ನು, ನಮ್ಮ ಮನಸ್ಸನ್ನು ಅರಿಯುವ ಕಣ್ಣುಗಳೂ ಹುಡುಗಿಯರಾದ ನಿಮ್ಮಲ್ಲಿ ಇಲ್ಲವೇನ್ರಿ?

ಎಂಥವರನ್ನು ಒಂದು ಕ್ಷಣದಲ್ಲಿ ಅಳೆಯುವ ಆ ನಿಮ್ಮ ಬುದ್ಧಿ ನಿಮ್ಮನ್ನು ಇಷ್ಟಪಡುವ ನಮ್ಮಂಥ ಪ್ರೇಮಿಗಳ ಹೃದಯದ ಮಾತನ್ನು ಕೇಳಿಸಿಕೊಳ್ಳದಷ್ಟು ಕೀವುಡಾ?

ಮತ್ತೇ ನೀವೇ "ಯಾಕೋ ಈ ಬಸ್ ತುಂಬಾ ಹೊತ್ತಾಗುತ್ತಿದೆ ಕಣ್ರೀ.. ಬರುತ್ತೋ ಇಲ್ಲವೋ ಏನೋ ಗೊತ್ತಿಲ್ಲಾ?" ಎಂದು ನನ್ನನ್ನು ಕೇಳಿದಾಗ ನನಗೆ ಒಂದು ಚಿಕ್ಕ ಭರವಸೆಯ ಕಿರಣ ಇಣುಕಿದಂತಾಯಿತು.

ಪರವಾಗಿಲ್ಲ ಈ ಹುಡುಗಿ ನನ್ನನ್ನು ಚಿಕ್ಕದಾಗಿ ವಿಶ್ವಾಸದಿಂದ ಕಾಣುತ್ತಿದ್ದಾಳೆ ಎಂದುಕೊಂಡು ನನಗೆ ನಾನೇ ಸಮಾಧಾನ ಮಾಡಿಕೊಂಡೇ.

ಅಂದು ನಾನು ತುಂಬ ಸಭ್ಯ ರೀತಿಯಲ್ಲಿ  ಡ್ರೇಸ್ ಹಾಕಿಕೊಂಡಿದ್ದೇ. ಪುಲ್ ವೈಟ್ ಅಂಡ್ ವೈಟ್ ಬಿಳಿ ಕುರ್ತಾ ಮತ್ತು ಪೈಜಾಮ್. ನೋಡಿದರೇ ಮರಿ ಪುಡಾರಿ ಕಂಡಂತೆ ಕಾಣುತ್ತಿದ್ದೆ. ಅಲ್ಲವಾ?

ನನ್ನ ಪಟಾಲಂ ಅಂದು ನನ್ನ ಜೊತೆಯಲ್ಲಿ ಎಂ.ಜಿ ರೋಡ್ ಪ್ರೋಗ್ರಾಂ ಗೆ ಬರಲ್ಲೊಲ್ಲದೆ ಇದ್ದಿದ್ದು ನನಗೆ ಹಾಲು ಕುಡಿದಷ್ಟು ಆನಂದವಾಗಿತ್ತು. ಅವರಿಗೆಲ್ಲಾ ಹತ್ತು ದೊಡ್ಡ ಥ್ಯಾಂಕ್ಸ್ ನ್ನು ಮನಸ್ಸಿನಲ್ಲಿಯೇ ಅರ್ಪಿಸಿದ್ದೆ.

ಆಗ ನಾನೇ ಒಂದು ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಸಮಯಕ್ಕೆ ಬಂದೆ.

"ರೀ ನಿಮಗೇನೂ ಅಭ್ಯಂತಾರ ಇಲ್ಲಾ ಅಂದ್ರೇ, ನಾವ್ಯಾಕೆ ಒಂದು ಆಟೋದಲ್ಲಿ ಈಗಲೇ ಅಲ್ಲಿಗೆ ಹೋಗಬಾರದು? ಬೇಗ ಹೋದರೇ ಸಮಾರಂಭ ಶುರುವಾಗುವುದಕ್ಕೆ ಮುನ್ನಾ  ಸರಿಯಾಗಿ ಅಲ್ಲಿರಬಹುದು" ಅಂದಾಗಾ.. ನೀನು ಸ್ವಲ್ಪ ಯೋಚಿಸಿ ಆಯ್ತು ಎಂದು ಒಪ್ಪಿಕೊಂಡಿದ್ದು. ನಾನು ಬಹುಬೇಗ ಒಂದು ಆಟೋ ಗೊತ್ತು ಮಾಡಿಕೊಂಡು ಹೋರಟಿದ್ದು. ಆಗಲೇ ಮೈಸೂರು ರೋಡ್ ಪ್ಲೈ ಒವರ್ ಮೇಲೆ ನಮ್ಮ ಆಟೋ ಕೊಯ್ಯೋ ಮರ್ರೋ ಎಂದು ಕೊಂಡು ಸಾಗುತ್ತಿದ್ದದ್ದು.. ಇಂದು ನೆನಸಿಕೊಂಡರೇ ಎಲ್ಲಾ ವಿಚಿತ್ರ ಅನಿಸುತ್ತದೆ.

ನೀವೆ ನಿಮ್ಮ ಪರಿಚಯ ಹೇಳಿಕೊಂಡಿದ್ದು. ಅದೇ ಸಮಯ ಅನಿಸುತ್ತದೆ. ೮.೪೨ ಗಂಟೆ. ಆಗಲೆ ನಿರ್ಮಲಾ ಎಂಬ ಮೂರು ಅಕ್ಷರದ ಆ ಪ್ರೀತಿಯ ಹೆಸರು ನನ್ನ ಹೃದಯದಲ್ಲಿ ಸ್ಥಾಪಿತವಾಗಿದ್ದು.

ಆಮೇಲೆ ನೀನು ಬಹುಬೇಗ ನನ್ನನ್ನು ಸ್ನೇಹಿತನ ರೀತಿಯಲ್ಲಿ ಕಂಡಿದ್ದು. ನನ್ನ ಬಗ್ಗೆ ನಾನು,ನಿನ್ನ ಬಗ್ಗೆ ಎಲ್ಲಾ ಎಲ್ಲಾ  ಪರಿಚಯ ಮಾಡಿಕೊಂಡಿದ್ದು.

ನೀನು ನನ್ನ ಕಾಲೇಜು ಪಕ್ಕದ "ರಾಣಿ" ಕಾಲೇಜು ಹುಡುಗಿ ಎಂದು ತಿಳಿದಾಗಾಂತೂ ನನ್ನ ಮನಸ್ಸಿನಲ್ಲಿಯೇ ನನ್ನನ್ನೇ ನಾನು ತುಂಬಾನೇ ಬೈದುಕೊಂಡೆ...

ಅಲ್ಲಾ ಪಕ್ಕದಲ್ಲಿಯೇ ಇದ್ದರೂ ಇಂಥ ಹೃದಯ ತುಂಬುವ ಹುಡುಗಿಯನ್ನು ನನ್ನ ಈ ಎರಡು ವರುಷದ ಕಾಲೇಜಿನ ದಿನಗಳಲ್ಲಿ ಕಾಣಲಾರದೇ ಹೋದೇನೇ? ಎಂದು ಕೊಂಡಾಗ "ಯಾವುದಕ್ಕೂ ಅದೃಷ್ಟ ಬೇಕು ಮಗಾ!" ಎಂದು ನನ್ನದೇ ಮನಸ್ಸು ನನ್ನ ನೋಂದ ಮನವನ್ನು ಸಂತಯಿಸಿತು.

ಅಂದಿನಿಂದ ಶುರುವಾಯಿತು ಅನಿಸುತ್ತದೆ. ನಂತರದ ನನ್ನ ಕಾಲೇಜು ಆರಂಭವಾಗುತ್ತಿದ್ದು ನಿನ್ನ ಕಾಲೇಜು ಟೈಂ ಟೇಬಲ್ ಜೊತೆಯಲ್ಲಿ. ಮುಂಜಾನೇಯೇ ನಿನ್ನ ಜೊತೆಯಲ್ಲಿ ಕಾಲೇಜಿಗೆ ನನ್ನ ಪಯಣ.

ನನ್ನ ಕಾಲೇಜು ಪ್ರಾರಂಭವಾಗುವುದು ಇನ್ನೂ ನಾಲ್ಕು ಘಂಟೆಯಾದರೂ ನಿನ್ನ ಜೊತೆಯಲ್ಲಿ ನಾನು ಇರಬೇಕು, ನಿನ್ನ ಜೊತೆಯಲ್ಲಿ ಮಾತನ್ನಾಡಬೇಕು, ನಿನ್ನ ಜೊತೆಯಲ್ಲಿ ನನ್ನ ಮನದ ಹಂಬಲವನ್ನು ಹೇಳಿಕೊಳ್ಳಬೇಕು! ಹೀಗೆ ಯಾವಾಗಲೂ ನಿನ್ನದೇ ಧ್ಯಾನ..

ನಿನಗೆ ಗೊತ್ತಾ ನನ್ನ ಎಲ್ಲಾ ಸ್ನೇಹಿತರನ್ನು ಈ ಒಂದು ವರುಷದಲ್ಲಿ ಪೂರ್ಣವಾಗಿ ಮರೆತೆ ಬಿಟ್ಟಿದ್ದೇನೆ. ಅವರಿಗೂ ಗೊತ್ತೂ ಈ ಪ್ರೇಮಿಗಳ ಬಾಳು.

ಅಲ್ಲಾ ಈ ಒಂದು ಸಂಬಂಧ ಎಂಥವರನ್ನು ಇಷ್ಟು ಸ್ವಾರ್ಥಿಗಳನ್ನಾಗಿ ಮಾಡಿಬಿಟ್ಟು ಬಿಡುತ್ತದೆಯೇ?

ನಮ್ಮ ಪರಿಧಿಯಲ್ಲಿ ನಾವಿಬ್ಬರಲ್ಲಾದೆ ಮತ್ತ್ಯಾರನ್ನೂ ಸೇರಿಸಿಕೊಳ್ಳುವುದಿಲ್ಲ. ನಾವುಗಳೇನೇ ಮಾಡಿದರೂ ಎಲ್ಲದೂ ಈ ಪ್ರೇಮ,ಪ್ರೀತಿಯ ಪೋಷಣೆಗಾಗಿ ಮಾತ್ರ.

ನೀ ಇಷ್ಟಪಡುವ ಹಾಡನ್ನು, ನೀ ಇಷ್ಟಪಡುವ ಪುಸ್ತಕವನ್ನು, ನೀ ಇಷ್ಟಪಡುವ ತಿನಿಸನ್ನು ನಾನು ಹೇಗೇಗೋ ಒಂದಿಸಿಕೊಂಡು ಅವುಗಳು ನೀನಗೆ ಸಮಯಕ್ಕೆ ಸರಿಯಾಗಿ ದೊರೆಯುವಂತೆ ಮಾಡುತ್ತಿದ್ದೆ.

ಅದರಲ್ಲಿಯೇ ಏನೋ ಆನಂದ ನನ್ನ ಪಾಲಿಗೆ ಸಿಗುತ್ತಿತ್ತು.

ನಾನು ನೀನು ಜೊತೆಯಲ್ಲಿ ಕೊನೆಯೆಂದರೂ ೧೦೦ ದೇಶಗಳನ್ನು ನಮ್ಮ ಜೀವನದಲ್ಲಿ ಸುತ್ತಿಬಿಡೋಣ ಎಂದು ಮಾಡಿಕೊಂಡ ಸಂಕಲ್ಪವನ್ನು ನೆನಸಿಕೊಂಡರೇ ಈ ಪ್ರೇಮಿಗಳಿಗೆ ನಿಜವಾಗಿಯೂ ಈ ರೀತಿಯ ಹುಚ್ಚು ಹುಚ್ಚು ಕನಸುಗಳಾ ಅಂಥಾ ನಾನೇ ಒಮ್ಮೊಮ್ಮೆ ಆಶ್ಚರ್ಯಪಟ್ಟಿದ್ದೀನಿ.

ಹೌದು! ಈ ಲವ್ ಎಂಬ ನಾಲ್ಕು ಅಕ್ಷರದಲ್ಲಿರುವ ಆ ಜಾದೂ ನಮ್ಮಂಥ ಯುವ ಜೋಡಿಗಳಿಗೆ ಏನನ್ನಾದರೂ ಸಾಧಿಸುವ ಒಂದು ದೈರ್ಯ ಮತ್ತು ಸ್ಥೈರ್ಯವನ್ನು ಕೊಟ್ಟೆ ಕೊಟ್ಟಿರುತ್ತದೆ.

ಗೊತ್ತಾ ನಾನು ನೀನು ಸೇರಿ ಅಂದು ಜನವರಿ ೨೬ ರಂದು ಎಸ್. ಎಲ್. ಬೈರಪ್ಪನವರ "ದಾಟು" ಕಾದಂಬರಿಯನ್ನು ಹೇಗೆ ಒಂದೇ ಪಟ್ಟಿಗೆ ಮುಂಜಾನೆಯಿಂದ ಮುಂದಿನ ಮುಂಜಾನೆಯವರೆಗೂ ಬಿಡದೇ ಓದಿ ಮುಗಿಸಿದ್ದು. ಆಗ ನೀನೆ ಸತ್ಯ ನಾನೇ ಶ್ರೀನಿವಾಸನಾಗಿದ್ದು. ನಾವುಗಳು ಸಹ ಈ ರೀತಿಯಲ್ಲಿಯೇ ಈ ನಮ್ಮ ಪ್ರೇಮವನ್ನು ಮದುವೆಯೆಂಬ ಬಂಧನದಲ್ಲಿ ಇಟ್ಟು ಎಲ್ಲಾ ಜಾತಿ, ಮತಗಳಾಚೆಗೆ ತೆಗೆದುಕೊಂಡು ಹೋಗೋಣ ಎಂಬ ಅಣೆ ಮಾಡಿದ್ದೂ.

ನೆನಸಿಕೊಂಡರೇ ಈ ಒಂದು ವರುಷದಲ್ಲಿ ಎನೆಲ್ಲಾ ದೊಡ್ಡ ದೊಡ್ಡ ಹೆಜ್ಜೆಗಳನ್ನು ನಾನು ನನ್ನ ಇಪ್ಪತ್ತು ವರುಷಗಳಲ್ಲಿ ತೆಗೆದುಕೊಳ್ಳಲಾಗದೆ ನೀನ್ನಿಂದಾಗಿ ಇಂದು ತೆಗೆದುಕೊಳ್ಳುವ  ಸ್ಫೂರ್ತಿಯಾಗಿ ನೀನು ಈ ನನ್ನ ಬಾಳಿಗೆ ಬಂದೆ ಅನಿಸುತ್ತದೆ.

ಅಬ್ಬಾ! ಬಿಡು ಇದು ಕೇವಲ ನನ್ನ ನಿನ್ನ ವರುಷದ ಪ್ರೀತಿಯ ಒಂದು ಕಿರು ಹಿನ್ನೋಟ ಮಾತ್ರ.

ಈ ರೀತಿಯಲ್ಲಿ ಇದು ನಿನ್ನ ನನ್ನ ಸವಿ ಘಳಿಗೆಗಳ ದಾಖಲಾತಿ ಮಾತ್ರ.

ನೀನು ಮುಂಜಾನೆ ಅದೇ ಆ ನಿನ್ನ ಹೆಸರನ್ನು ಮೊದಲು ನನ್ನ ಕಿವಿಗೆ ಹಾಕಿದ ಜಾಗವಾದ ಮೈಸೂರು ಪ್ಲೈ ಓವರ್ ನ ಆ ಜಾಗಕ್ಕೆ ಬರುತ್ತಿಯಲ್ಲಾ?

ಅದೇ ೮.೪೨ಕ್ಕೆ ಸರಿಯಾಗಿ?

ನಾನು ಅಲ್ಲಿಯೇ ನಿನಗಾಗಿ ಕಾಯುತ್ತಿರುತ್ತೇನೆ. ಅಲ್ಲಿಂದಲೇ ಮೋವಿಲ್ಯಾಂಡ್ ಗೆ ಹೋಗಿ ಮೊದಲ ಸಲ ಸಿನಿಮಾ ನೋಡಿಕೊಂಡು ಬರೋಣ..


ಹೀಗೆಯೇ ನಿತ್ಯನೊತನವಾಗಿ ಈ ಪ್ರೀತಿಯ ಹೊಳೆ ನಮ್ಮಿಬ್ಬರ ಮಧ್ಯೆ ಮೈಸೂರು ರಸ್ತೆಯಲ್ಲಿ ಚಲಿಸುವ ವಾಹನಗಳೋಪಾದಿಯಲ್ಲಿ ಸದಾ ಹರಿಯುತ್ತಿರಲಿ!

ಬುಧವಾರ, ಆಗಸ್ಟ್ 8, 2012

ಏಳಿ ಏದ್ದೇಳಿ


ಪುನಃ ಮತ್ತೊಂದು ಸ್ವಾತ್ರಂತ್ರ್ಯ ದಿನಾಚಾರಣೆಯ ಹೊಸ್ತಿಲಲ್ಲಿ ನಾವೆಲ್ಲಾ ನಿಂತಿದ್ದೇವೆ. ಅಂದು ನಮ್ಮ ದೇಶದ ಸ್ವಾತ್ರಂತ್ರ್ಯಕ್ಕಾಗಿ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ತನು,ಮನ,ಧನಗೊಡಗೂಡಿ ತಮ್ಮ ತಮ್ಮ ಪ್ರಾಣವನ್ನೇ ದೇಶಕ್ಕಾಗಿ ಕೊಟ್ಟಿದ್ದಾರೆ.

ಅವರೆನ್ನೆಲ್ಲಾ ಒಮ್ಮೆ ನೆನಪು ಮಾಡಿಕೊಳ್ಳುವ ದಿನವೇ ಆಗಸ್ಟ್ ೧೫.

ಅಂದು ಅವರುಗಳು ಹೋರಾಡಿದ ಪ್ರತಿ ಫಲವೇ ನಾವುಗಳು ಇಂದು ಬೆಚ್ಚಗೆ ಈ ದೇಶದಲ್ಲಿ ಸರ್ವ ಸ್ವತಂತ್ರವಾಗಿ, ನಿರಾಳವಾಗಿ ನಾವೇ ನಾವಾಗಿ ಬದುಕುತ್ತಿರುವುದು. ಪರಕೀಯರ ೨೦೦ ವರುಷದ ಆಳ್ವಿಕೆಯಿಂದ ಬಿಡುಗಡೆ ಪಡೆದ ದಿನವನ್ನು ಕಲ್ಪಿಸಿಕೊಳ್ಳಲು ಎಷ್ಟೊಂದು ಸಂತೋಷವಾಗುತ್ತದೆ.

ನಮ್ಮನ್ನು ನಾವುಗಳೇ ಆಳಿಕೊಳ್ಳುವುದು. ನಮ್ಮ ಸರ್ಕಾರವನ್ನು ನಾವೇ ಆರಿಸಿಕೊಳ್ಳುವುದು. ನಮ್ಮ ಕಾನೂನುಗಳನ್ನು ನಾವೇ ರೂಪಿಸಿಕೊಳ್ಳುವುದು. ನಮ್ಮ ಅಭಿವೃದ್ಧಿಯ ನಕ್ಷೆಯನ್ನು ನಾವೇ ಬರೆದುಕೊಳ್ಳುವುದು. ಈ ಎಲ್ಲಾ ಅನುಕೂಲಗಳು ಸ್ವಾತ್ರಂತ್ರ್ಯ ದೊರಕಿದ ನಂತರ ನಮ್ಮಗಳಿಗೆ ಪರಿಪೂರ್ಣವಾಗಿ ಸಿಕ್ಕಿದ್ದು.

ಅದಕ್ಕಾಗಿ ಅದೆಷ್ಟು ಬೆವರನ್ನು ಗಾಂಧಿಜೀಯರೊಡಗೂಡಿ ನೂರಾರು ಮಹಾನ್ ನೇತಾರರು, ನಾಯಕರುಗಳು ದೇಶದ ಉದ್ದಾಗಲಕ್ಕೂ ಸುತ್ತಾಡಿ ನಮ್ಮ ನಮ್ಮ ಜನಗಳ ಜನ ಮನವನ್ನು ಬಡಿದೆಬ್ಬಿಸಿ ದೇಶ ಸೇವೆ ಎಂದರೇ ಏನು? ಸತ್ಯಾಗ್ರಹ ಎಂದರೇ ಏನೂ? ಅಹಿಂಸೆಯ ಮೂಲಕವೇ ಹೇಗೆ ಬ್ರೀಟಿಷರನ್ನು ಹಿಮ್ಮೆಟ್ಟಿಸಬಹುದು? ಎಂಬುದನ್ನು ತಮ್ಮ ಸತ್ಯ ಮತ್ತು ತ್ಯಾಗದ ಮೂಲಕ ಮನನ ಮಾಡಿಕೊಂಡು ಭಾರತದ ಪ್ರತಿಯೊಬ್ಬ ಪ್ರಜೆಯನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು.

ಅದು ಅಷ್ಟು ಸುಲಭದ ಕೆಲಸವಲ್ಲ ಎಂಬುದು ನಮ್ಮಗಳಿಗೆ ಇತ್ತೀಚೆಗೆ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ಹೋರಾಟದಿಂದ ಮತ್ತಷ್ಟು ಸರಿಯಾಗಿ ಮನನವಾಗಿದೆ.

ಕಳೆದ ವರುಷದ ಇದೆ ಸಮಯದಲ್ಲಿ ಅಣ್ಣಾ ಹಜಾರೆ ಪ್ರಾರಂಭಿಸಿದ ಭ್ರಷ್ಟಾಚಾರ ಅಭಿಯಾನದ ಕಾವು ಹೇಗಿತ್ತು? ಕಾಲಕ್ರಮೇಣ ಅದರ ಬಿಸಿ ಹೇಗೆ ಕಡಿಮೆಯಾಯಿತು? ಅದನ್ನು ಹೇಗೆ ಎಲ್ಲಾ ರೀತಿಯಲ್ಲೂ ತಣ್ಣಗೆ ಮಾಡಲೂ ಭಾರತಾದ್ಯಾಂತ ಒಂದು ಸಮೊಹವೇ ಕಂಕಣ ಬದ್ಧರಾಗಿ ನಿಂತಿದ್ದು. ಹಾಗೆಯೇ ಇವರುಗಳು ಈ ಹೋರಾಟವನ್ನು ಕಳೆದ ವಾರದಲ್ಲಿ ಪರಿಪೂರ್ಣವಾಗಿ ವಿಫಲಗೊಳ್ಳುವಂತೆ ಮಾಡಿರುವುದನ್ನು ಕಂಡರೇ ನಮ್ಮ ದೇಶ ಮತ್ತು ನಮ್ಮ ಜನ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮಹತ್ವವನ್ನು ಸರಿಯಾಗಿ ಅರ್ಥ ಮಾಡಿಕೊಂಡೇ ಇಲ್ಲಾವೇನೋ ಅನಿಸುತ್ತದೆ.

ಇಂದು ಎಷ್ಟರ ಮಟ್ಟಿಗೆ ಕ್ಲೀಷೆಯಾಗಿ ರಾಜಕೀಯ, ಸರ್ಕಾರ, ಯೋಜನೆಗಳು, ಕಾನೂನುಗಳು, ಅಧಿಕಾರ ವರ್ಗ ಇತ್ಯಾದಿಗಳು ಸಾಮಾನ್ಯ ಜನರ ಕಣ್ಣಿಗೆ ಬೀಳುತ್ತಿದ್ದಾವೆ ಎಂದರೇ ಅದರಲ್ಲಿ ಕೊಂಚ ಮಟ್ಟಿಗೂ ಭರವಸೆಯ ಕಿರಣವನ್ನು ಕಾಣದಂತಾಗಿದೆ.

ಜನಗಳು ಸಹ ಒಳ್ಳೆಯ ಹೋರಾಟಕ್ಕೆ ಬೆಂಬಲವನ್ನು ಎಷ್ಟರ ಮಟ್ಟಿಗೆ ಕೊಡುವವರು ಎಂಬುದು ಅಣ್ಣ ಹಜಾರೆಯ ಹೋರಾಟ ಹಳ್ಳ ಹಿಡಿದ್ದದ್ದೇ ಸಾಕ್ಷಿ. ಯಾಕೋ ಇದನ್ನೆಲ್ಲಾ ಅರ್ಥ ಮಾಡಿಕೊಳ್ಳುವಷ್ಟರ ಮಟ್ಟಿಗೆ ನಾವುಗಳು ಅಸಮರ್ಥರೇನೋ ಅನಿಸುತ್ತದೆ.

ದೇಶವನ್ನು ಇಂದು ಅತ್ಯಂತ ನಿಷ್ಕೃಷ್ಟವಾಗಿ ಪೀಡಿಸುತ್ತಿರುವ ಅತ್ಯಂತ ದೊಡ್ಡ ರೋಗವೆಂದರೇ ಭ್ರಷ್ಟಾಚಾರ/ಲಂಚಗುಳಿತನ. ಅದು ಎಷ್ಟರ ಮಟ್ಟಿಗೆ ಸರ್ವ ವ್ಯಾಪಿಯಾಗಿ ವ್ಯಾಪಿಸಿದೆ ಎಂದರೇ.. ಅದೇ ನಮ್ಮ ದೇಶದ ಪ್ರಗತಿಗೆ ದೈತ್ಯಾಕಾರವಾಗಿ ಅಡ್ಡಗಾಲಾಗಿ ನಿಂತಿದೆ. ಇದನ್ನು ಬೇರು ಸಮೆತ ಕಿತ್ತು ಹಾಕದವರೆಗೆ ದೇಶಕ್ಕೆ ದೇಶದ ಜನಕ್ಕೆ ಮುಕ್ತಿಯೇ ಇಲ್ಲ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯ.

ಆದರೂ ಯಾಕೋ ನಮ್ಮ ಜನಗಳಿಂದ ದೊಡ್ಡ ಮಟ್ಟದ ಹೋರಾಟದ ಕೊರತೆ ಎದ್ದು ಕಾಣುತ್ತಿದೆ. ಅಂದು ೧೯೪೫ ಕ್ಕೂ ಮುನ್ನಾ ಇದ್ದಂತಹ ದೇಶಾಭಿಮಾನದ ಕಿಚ್ಚು ಸಾಮಾನ್ಯ ಜನಗಳ ಒಡಲಲ್ಲಿ ಇಂದು ಇಲ್ಲವಾಗಿದೆಯೇನೋ ಅನಿಸುತ್ತಿದೆ.

ಸ್ವಾಮಿ ವಿವೇಕಾನಂದರು ಅಂದು ಹೇಳಿದ "ಏಳಿ ಏದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ" ಎಂಬ ಮಾತನ್ನು ಹೇಳುವ ಒಬ್ಬ ಗಟ್ಟಿ ನಾಯಕನ ಅವಶ್ಯಕತೆ ಇಂದು ನಮಗೆ ಹೆಚ್ಚಾಗಿ ಇರುವಂತಿದೆ.

ಇಂದು ಯಾವ ಸತ್ಯಾಗ್ರಹ, ಉಪವಾಸಕ್ಕೂ ಜನಗಳು, ಜನ ನಾಯಕರುಗಳು, ಸರ್ಕಾರಗಳು ಕವಡೆ ಕಾಸಿನ ಕಿಮ್ಮತ್ತನ್ನು ಕೊಡದಾರದ ಮಟ್ಟಿಗೆ ಜಡವಾಗಿ ಬಿಟ್ಟಿವೆ. ಉಪವಾಸ ಮಾಡುತ್ತಿದ್ದಾರೆ ಎಂದರೇ ಸರ್ಕಾರದಲ್ಲಿ ಅತ್ಯುನ್ನತ ಅಧಿಕಾರವನ್ನು ಹೊಂದಿರುವ ಮಂದಿಯ ಉಡಾಪೆಯ ಮಾತುಗಳನ್ನು ಕೇಳಿದರೇ..! ಅಂದು ಬ್ರೀಟಿಷ ಸರ್ಕಾರವೇ ಪರವಾಗಿಲ್ಲ ಅನಿಸುತ್ತದೆ. ಗಾಂಧಿಜೀ ಮತ್ತು ಅವರ ಅನುಯಾಯಿಗಳು ಉಪವಾಸ ಸತ್ಯಾಗ್ರಾಹ ಮಾಡಿದರೇ ಇಡೀ ಬ್ರೀಟಿಷ್ ಸರ್ಕಾರವೇ ನಡುಗುತ್ತಿತ್ತು. ಆದಷ್ಟು ಬೇಗ ಈ ನಾಯಕರುಗಳು ಉಪವಾಸ ಮಾಡುವುದನ್ನು ನಿಲ್ಲಿಸಲು ಬೇಕಾದಂತಹ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುತ್ತಿದ್ದರು.

ಆದರೇ ಇಂದು ಗಮನಿಸಿ ಅಣ್ಣಾ ಮತ್ತು ಅವರ ಟೀಂ ಎಷ್ಟು ಬಾರಿ ಉಪವಾಸ ಮಾಡಿತು. ಇದಕ್ಕೆ ಏನೊಂದು ಪ್ರತಿಕ್ರಿಯೇಯನ್ನು ನೀಡದೆ ಇರುವುದರಿಂದ ಉಪವಾಸ ಮಾಡುವವರೇ (ಅಣ್ಣಾ ಮತ್ತು ಅವರ ಟೀಂ) ಸ್ವತಃ ಉಪವಾಸ ನಿಲ್ಲಿಸಿ ಇಡೀ ಹೋರಾಟದ ಸಂಘಟನೆಯನ್ನು ವಿಸರ್ಜಿಸುವ ಮಟ್ಟಿಗೆ ತಮ್ಮ ನೋವಿನ ಹೆಜ್ಜೆಯನ್ನು ಇಡಬೇಕಾಯಿತು.

ಇದು ಅತ್ಯಂತಹ ದುರಾದೃಷ್ಟಕರ ಸಂಗತಿ.

ಯಾವೊಂದು ಅನಿಷ್ಟವನ್ನು ದೇಶದಿಂದ ತೊಲಗಿಸಬೇಕಾಗಿತ್ತೊ ಅದು ಇನ್ನೂ ಪುಷ್ಟಕರವಾಗಿ ನಮ್ಮ ನೆಲದಲ್ಲಿ ಬೇಳೆಯುತ್ತಿದೆ. ಅದಕ್ಕೆ ನೀರು,ಗೊಬ್ಬರವನ್ನು ಆಯಾ ಆಯಾಕಟ್ಟಿನ ಜಾಗದಲ್ಲಿರುವ ಮಹನೀಯರುಗಳೂ ಹಾಕುತ್ತಿದ್ದಾರೆ. ಇದಕ್ಕೆ ಕೊನೆಯೆಂಬುದು ಮರುಭೂಮಿಯಲ್ಲಿ ನೀರನ್ನು ಕಂಡಂತಹ ಕನಸಾಗಿದೆ.

ಇಂದು ಯವೊಬ್ಬನೂ ಕನಸು ಮನಸಿನಲ್ಲೂ ಭಾರತದ ಶಾಸಕಾಂಗಕ್ಕೆ ಸಾಮಾನ್ಯ ಪ್ರಜೆಯಾಗಿ ಚುನಾವಣೆಗೆ ನಿಂತು ಗೆಲ್ಲಲಾರದ ಸ್ಥಿತಿಯನ್ನು ತಲುಪಿದ್ದಾನೆ. ಹೆಚ್ಚು ಹಣವಂತನಿಗೆ ಮಾತ್ರ ಬಹುಮತ, ಅವನೇ ಮಂತ್ರಿ, ಮುಖ್ಯಮಂತ್ರಿ ಮಾತ್ರ, ಆವನೇ ಅಧಿಕಾರಿ!

ಗಮನಿಸಿ ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ತಮ್ಮ ಕಾಲದಲ್ಲಿ ಯಾವ್ಯಾವ ದೇಶ ಸುತ್ತಬೇಕಾಗಿತ್ತೋ ಅವುಗಳನ್ನು ಈಗಲೇ ತಿರುಗಾಡಿ ಬಿಡಬೇಕು ಎಂದು ತುದಿಗಾಲಲ್ಲಿ ನಿಂತುಕೊಂಡು ವಿದೇಶ ಪ್ರವಾಸಕ್ಕೆ ಸಜ್ಜಾಗುತ್ತಾರೆ.

ಜನರುಗಳು ಜನಪ್ರತಿನಿಧಿಗಳನ್ನು ಆರಿಸಿಕಳಿಸುವುದು ಇವರುಗಳು ನಮ್ಮ ಪ್ರತಿನಿಧಿಯಾಗಿ ನಮ್ಮಗಳಿಗೆ ನೆರವಾಗಿರಲಿ ಎಂಬ ಆಶಯದಿಂದ. ಅದರೇ ಅದು ಯಾವುದು ಈ ನಾಯಕರುಗಳಿಗೆ ನೆನಪಿರುವುದಿಲ್ಲ. ಕೇವಲ ತಮ್ಮ ತಮ್ಮ ಏಳ್ಗೆಯನ್ನು ಕಾಣುವುದೇ ಅವರ ಒಂದು ಅಂಶದ ಬಹು ಮುಖ್ಯ ಯೋಜನೆಯಾಗಿದೆ.

ಮೊದಲು ಬೇರು ಮಟ್ಟದಿಂದ  ಈ ಭ್ರಷ್ಟಾಚಾರ ನಿಲ್ಲುವಂತಾಗಬೇಕು.

ಮತದಾನ ಮಾಡುವ ಮತದಾರ ತನಗೆ ಒಳ್ಳೆಯವನು ಅನಿಸಿದವನಿಗೆ ಯಾವುದೇ ಆಸೆ ಅಮೀಷಕ್ಕೆ ಬಲಿಯಾಗದೇ ಸೂಕ್ತ ವ್ಯಕ್ತಿಯನ್ನು ಆರಿಸಬೇಕು. ಆಗ ಮಾತ್ರ ಅವನಿಗೆ ಅವನ್ನನ್ನು ಅಧಿಕಾರದಲ್ಲಿ ಇದ್ದಾಗ ಪ್ರಶ್ನೆ ಮಾಡುವ ಅಧಿಕಾರವಿರುತ್ತದೆ. ಅದು ಬಿಟ್ಟು ತಾನೇ ಅವನು ಕೊಡುವ ಅವನ ಎಂಜಲನ್ನು ಮತದಾನ ಮಾಡುವ ಸಮಯದಲ್ಲಿ ತಿಂದರೇ ಕೇಳಲು ಯಾವ ಬಾಯಿಯಿರುತ್ತದೆ. ಅಲ್ಲವಾ?

ಯಾವುದೇ ಸರ್ಕಾರಿ ಕೆಲಸಗಳು ಸರಿಯಾಗಿ ಆಗಬೇಕು ಎಂದರೇ ಮಾಮೂಲಿ ಕೊಡಲೇಬೇಕು ಎಂಬವಷ್ಟರ ಮಟ್ಟಿಗೆ ಪ್ರತಿಯೊಬ್ಬರೂ ತಿಳಿದುಕೊಂಡಿರುವಂತೆ ಮಾಡಿರುವುದರ ಪರಿ ಏನೂ?

ಯಾಕೇ ಇಂದು ಪ್ರತಿಯೊಬ್ಬ ರಾಜಕಾರಣಿಯನ್ನು ಅನುಮಾನದ ದೃಷ್ಟಿಯಲ್ಲಿ ನೋಡುವಂತಾಗಿರುವುದು ಯಾವ ಕಾರಣಕ್ಕೆ?

ಒಮ್ಮೆ ಎಂ.ಎಲ್.ಎ ಅಥವಾ ಎಮ್.ಪಿ ಆದರೇ ಮುಗಿಯಿತು ಅವನ ಜೀವನದಲ್ಲಿ ಸೇಟ್ಲ್ ಆದಂತೆ ಎಂಬುವಷ್ಟರ ಮಟ್ಟಿಗೆ ಈ ಅಧಿಕಾರಿಗಳಿಗೆ, ಉಳ್ಳವರಿಗೆ ಇದು ಪ್ಯಾಶ್ ನ್ ಆಗಿಬಿಟ್ಟಿದೆ?

ನಿಜವಾಗಿಯೂ ಈ ಮಂದಿಗೆ ಜನಸೇವೆಯೇ ಅಧ್ಯ ಕರ್ತವ್ಯವಾಗಿದೆಯೇ? ಯೋಚಿಸಿ!

ಇಂದು ನಡೆಯುತ್ತಿರುವ ಈ ನಾಯಕ ಮಣಿಗಳ ದರ್ಬಾರನ್ನು ಹಿಂದೆ ನಮ್ಮ ನಾಡಿಗೆ ಸ್ವಾತಂತ್ರ್ಯ ತಂದುಕೊಟ್ಟ ಮಂದಿ ಏನಾದರೂ ನೋಡಿಬಿಟ್ಟಿದ್ದರೇ ನಿಜವಾಗಿಯೂ ಅವರು ಎಷ್ಟರ ಮಟ್ಟಿಗೆ ದಿಗ್ಬ್ರಮೆಗೆ ಒಳಗಾಗುತ್ತಿದ್ದರೂ ಆ ಭಾರತಾಂಭೇಯೆ ಬಲ್ಲಳು.

ಎಲ್ಲಾದರಲ್ಲೂ ಸ್ವಾರ್ಥ,ಸ್ವಜನಪಾತ,ಸ್ವಜಾತಿಯೇ ತುಂಬಿ ತುಳುಕುತ್ತಿದೆ. ಪ್ರತಿಯೊಂದು ಚುನಾವಣೆಯು ಈ ಮೂರು ಅಂಶಗಳ ಮೇಲೆಯೇ ನಡೆಯುತ್ತಿದೆ. ಮಾತಿಗೆ ದೇಶ ಸೇವೆ, ದೇಶ ಅಭಿವೃದ್ಧಿ.

ತಾವು ಮಾಡುವ ಎಲ್ಲಾ ಪಾಪಗಳ ರಕ್ಷಣೆಗಾಗಿ ನಿತ್ಯ ನಿರಂತರ ಒಳ್ಳೆ ಒಳ್ಳೆಯ ಹುದ್ದೆ, ಅಧಿಕಾರದಲ್ಲಿ ಇರಬೇಕು. ಅದೇ ಅವರ ಮುಖ್ಯ ಯೋಜನೆ. ತಾನಾದ ಮೇಲೆ ತನ್ನ ಮಕ್ಕಳು, ಮೊಮ್ಮಕ್ಕಳು ಹೀಗೆ ನಿತ್ಯ ವಂಶಪಾರಂಪರ್ಯವಾಗಿ ರಾಜ ಸಿಂಹಾಸಾನದ ಮೇಲೆ ವಿರಾಜಾಮಾನವಾಗಿ ಪಳ ಪಳ ನಿತ್ಯ ಹೊಳೆಯತ್ತಿರಬೇಕು.

ಬಡವರು ನಿತ್ಯ ಬಡತನದಲ್ಲಿ ಅಭಿವೃದ್ಧಿಯನ್ನುಂದುತಿರಬೇಕು. ಶ್ರೀಮಂತರು ನಿತ್ಯ ಶ್ರೀಮಂತರಾಗುತ್ತಿರಬೇಕು. ಇದೇ ಇವರು ಹೇಳುವ ಸಮಾಜವಾದ ಮತ್ತು ಸಹ ಬಾಳ್ವೇ!!

ಇನ್ನಾದರೂ ಕೂಂಚ ಬದಲಾವಣೆಯನ್ನು ನಮ್ಮ ಈ ಭೂಮಿ ಕಾಣಬೇಕಾಗಿದೆ. ಕಪ್ಪು ಹಣ, ಭ್ರಷ್ಟಾಚಾರ, ಅನೀತಿ ಶಾಶ್ವತವಾಗಿ ತೊಲಗಿ ಸ್ವಚ್ಛ ಸಮಾಜದ ಉಗಮವಾಗಬೇಕು.

ಇದು ನನಸಾಗಬೇಕೆಂದರೇ ಪ್ರತಿಯೊಬ್ಬ ಭಾರತೀಯ ಪ್ರಜೆಯ ಸ್ವಚ್ಛವಾದ, ಶುದ್ಧ ಚುನಾವಣಾ ಮತದಾನವಾಗಬೇಕು. ಅದು ಕೇವಲ ಒಬ್ಬ ಪ್ರಭಾವಶಾಲಿ,ಹಣವುಳ್ಳವನು,ಸ್ವಜಾತಿಯವನು ಇತ್ಯಾದಿಯನ್ನು ಅವಲಂಬಿಸದೇ ನಿಜವಾದ ಸಮಾಜ ಪ್ರೇಮ, ದೇಶ ಪ್ರೇಮವನ್ನು ಹೊಂದಿರುವ ವಿದ್ಯಾವಂತ ಸರಳ ಭರವಸೆಯ ವ್ಯಕ್ತಿಯ ಆಯ್ಕೆ ಮಾಡುವುದರಲ್ಲಿದೆ.

ಭಾನುವಾರ, ಆಗಸ್ಟ್ 5, 2012

ಸ್ನೇಹ ಸಂಬಂಧ!


ಸ್ನೇಹಿತರ ದಿನ. ಹತ್ತು ಹಲವಾರು ರೀತಿಯಲ್ಲಿ ತಮಗೆ ಪ್ರೀತಿ ಪಾತ್ರರಾದ ಸ್ನೇಹಿತರೊಡಗೂಡಿ ಸಂಭ್ರಮಿಸುತ್ತಾರೆ.

ಈ ಮೇಲ್, ಫೇಸ್ ಬುಕ್ ನಲ್ಲಿ ಹತ್ತು ಹಲವಾರು ಸುಂದರ ಚಿತ್ರಗಳಿರುವ ಶುಭಾಶಯ ಪತ್ರಗಳ ವಿನಿಮಯ. ಮೊಬೈಲ್ ಗಳಲ್ಲಿ ಮುಂಜಾನೆಯಿಂದಲೇ ಅವೇ ಪಾರ್ ವರ್ಡ್ ಆದ ಸ್ನೇಹಕ್ಕೆ ಸಂಬಂಧಿಸಿದ ಸುಂದರ ನುಡಿಮುತ್ತುಗಳ ಓಡಾಟ.

ಇದು ನಮ್ಮ ಪ್ರೇಂಡ್ಸ್ ಡೇ ಆಚರಣೆಯ ನೋಟ.

ಹೊರದೇಶದ ಜನಗಳು ಪ್ರತಿಯೊಂದಕ್ಕೂ ಒಂದು ದಿನವನ್ನು ಗುರುತು ಮಾಡಿ ಇಟ್ಟು ಬಿಟ್ಟಿದ್ದಾರೆ. ಯಾಕೆಂದರೇ ವರುಷದ ಬ್ಯುಸಿ ದಿನಗಳಲ್ಲಿ ಎಲ್ಲದನ್ನೂ, ಎಲ್ಲರನ್ನೂ ಸಾವಾಕಾಶವಾಗಿ ಕಾಣುವುದಕ್ಕೆ ಆಗುವುದಿಲ್ಲ ಎಂಬ ಭಯವಿರಬೇಕು.(?)

ಆದರೇ ಸಂಬಂಧಗಳಿಗೂ ಒಂದೊಂದು ದಿನವನ್ನು ಗುರುತಿಸಿರುವುದು ತುಂಬ ವಿಪರ್ಯಾಸ!(?) ಹಾಗೆಯೇ ಇಂದು ಅದು ನಮಗೆ ಬೇಕೇನೋ ಅನಿಸುತ್ತದೆ. ಆಟ್ ಲಿಸ್ಟ್ ಆ ದಿನಗಳಂದಾದರೂ ನಮ್ಮ ನಮ್ಮ ಪ್ರೀತಿಯ ಸಂಬಂಧಗಳನ್ನು ನವೀಕರಿಸಿಕೊಂಡಂತಾಗುತ್ತದೆ!

ನಮ್ಮ ಈ ದೇಶದ ಮಣ್ಣಿನಲ್ಲಿ ಈ ರೀತಿಯಲ್ಲಿ ಸಂಬಂಧಗಳಿಗಾಗಿ ಹಬ್ಬಗಳು ಹಿಂದಿನಿಂದ ಎಂದೂ ರೂಡಿಯಲ್ಲಿ ಬಂದಿಲ್ಲಾ ಅನಿಸುತ್ತದೆ. ಯಾಕೆಂದರೇ ನಮ್ಮಗಳಿಗೆ ನಿತ್ಯ ನಮ್ಮ ನಮ್ಮ ಸಂಬಂಧಗಳ ಹಬ್ಬದಲ್ಲಿಯೇ ಮುಳುಗಿರುತ್ತೆವೆ. ಎಲ್ಲರೂ ನಮ್ಮ ಸುತ್ತಲಲ್ಲೇ, ಎಲ್ಲರನ್ನೂ ಗಂಟು ಹಾಕಿಕೊಂಡು ತುಂಬ ಒಡನಾಡಿಯಾಗಿ ಒಬ್ಬರನ್ನೊಬ್ಬರೂ ಬಿಟ್ಟು ಇರದಾರದಂತಹ ನಾವೆಲ್ಲಾ ಒಂದೇ ಎಂಬ ಸುಂದರ ಭಾವನೆಯ ನಿತ್ಯ ಮೆರವಣಿಗೆಯಾಗಿರುತ್ತಿತ್ತು. ಇದಕ್ಕೆ ಉದಾಹರಣೆಯೆಂದರೇ ನಮ್ಮ ಹಳ್ಳಿಗಳಲ್ಲಿ ಇರುತ್ತಿದ್ದ ಭವ್ಯವಾದ ದೊಡ್ಡ ದೊಡ್ಡ ಅವಿಭಕ್ತ ಕುಟುಂಬಗಳು.

ಆ ಕುಟುಂಬವೋ ಇಡೀ ಊರನ್ನೇ ತನ್ನವರನ್ನಾಗಿ ಮಾಡಿಕೊಂಡಿರುತ್ತಿತ್ತು. ಊರಲ್ಲಿ ಇರುವವರೆಲ್ಲರೂ ಪರಿಚಿತರೇ ಮತ್ತು ಸ್ನೇಹಿತರೇ. ಇದು ಸಾಲದು ಎಂಬಂತೆ ಅಕ್ಕ ಪಕ್ಕದ ಊರಿನ ಮುಖ್ಯ ಮುಖ್ಯ ಜನಗಳು ಇಡೀ ಊರಿಗೆ ಅವರಿವರಿಗೆಲ್ಲಾ ಪರಿಚಿತರಾಗಿ ಅವರೆಲ್ಲಾ ನಮ್ಮವರೇ ಎಂಬಂತೆ ಆಧರಿಸುತ್ತಿದ್ದರು.

ಸಂಬಂಧಗಳ ಸರಪಣಿ ಆ ರೀತಿಯಲ್ಲಿ ಜೋಡಣೆಯಾಗಿರುತ್ತಿತ್ತು.

ಇದನ್ನೂ ಬೇರೊಂದು ರೀತಿಯಲ್ಲಿ ನೋಡುವ, ನಿರೀಕ್ಷಿಸುವ, ಅಳೆಯುವ ಸಮಯವೇ ಇರುತ್ತಿರಲ್ಲಿಲ್ಲ. ಹಾಗೆಯೇ ಆ ರೀತಿಯ ಋಣಾತ್ಮಕವಾದ ಮನಸ್ಸೆ ಬರುತ್ತಿರಲಿಲ್ಲ.

ಅಲ್ಲಿ ಇದ್ದಿದ್ದು ಒಬ್ಬರನ್ನೊಬ್ಬರೂ ಕಾಳಜಿಯಿಂದ ಕಾಣುವ ನಿಷ್ಕಲ್ಮಶವಾದ ಹೃದಯ ಮಾತ್ರ.

ಇದು ಇಂದು ಎಲ್ಲಿ ಕಾಣಬೇಕು ಗುರೂ ಅನ್ನುತ್ತೀರಾ!

ನಾವು ಬದುಕುತ್ತಿರುವ ಕಾಲವೇ, ಜನವೇ ನಮ್ಮನ್ನು ದಿಕ್ಕು ತಪ್ಪಿಸಿದೀಯಾ ಎನ್ನುವಂತಾಗಿದೆ. ಯಾವುದಕ್ಕೂ ಸಮಯವಿಲ್ಲ. ಪ್ರತಿಯೊಂದು ಸಮಯ ವ್ಯರ್ಥ ಅನಿಸುತ್ತಿದೆ. ಒಂದು ಕ್ಷಣದ ನಗುವನ್ನು ಪರಿಚತರಿಗೆ/ಅಪರಿಚಿತರಿಗೆ ನೀಡುವುದಕ್ಕೂ ಕಂಜೂಸ್ ಮಾಡುತ್ತಿದ್ದೇವೆ.

ಈ ರೀತಿಯಲ್ಲಿ ಇರಬೇಕಾದರೇ ಮನುಷ್ಯ ಮನುಷ್ಯನ ನಡುವೆ ಇರಬೇಕಾದಂತಹ ಸಹಜವಾದ ಸರಳ ಆ ಒಂದು ಹೊಂದಾಣಿಕೆಯ ಸ್ನೇಹ ಸೆಲೆ ಎಲ್ಲಿಯೋ ಬತ್ತಿ ಹೋಗಿಬಿಟ್ಟಿದೆ ಅನಿಸುತ್ತದೆ.

ಪ್ರತಿಯೊಂದನ್ನೂ ಪ್ರಶ್ನಿಸಿ, ಎರಡು ಮೂರು ಬಾರಿ ಪರೀಕ್ಷಿಸಿ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ನಾವುಗಳು ಇಂದು ಇದ್ದೇವೆ.

ಯಾರನ್ನೂ, ಯಾವುದನ್ನೂ ಥಟ್ ಅಂದುಕೊಂಡು ಸಹಜವಾದ ಬಂಧನವನ್ನು, ಭಾವನೆಗಳನ್ನು ವ್ಯಕ್ತಪಡಿಸಲಾರದಷ್ಟು ಕಠಿಣ ಮನಸ್ಥಿತಿಯವರಾಗಿದ್ದೇವೆ.

ಅಲ್ಲವಾ?

ಎಂಥವರನ್ನೂ ಅನುಮಾನದ ಮೂಲಕ ನೋಡುವ ಕಣ್ಣುಗಳನ್ನು, ಜಾಣ್ಮೆಯನ್ನು ನಾವುಗಳು ಸಂಪಾಧಿಸಿರುವುದೇ ನಮಗೆ ಹೆಮ್ಮೆಯ ವಿಷಯವಾಗಿದೆ. ಪ್ರತಿಯೊಂದು ಸಂಬಂಧವನ್ನು, ವಿಶ್ವಾಸವನ್ನು, ಲಾಭ-ನಷ್ಟಗಳ ಮೇಲೆ ನಿಲ್ಲಿಸಲು ತಯಾರಿ ನಡೆಸುತ್ತಿದ್ದೇವೆ. ಈ ಸಮಯವನ್ನು ಇದಕ್ಕಾಗಿ/ಇವ(ನಿ)ಳಿಗಾಗಿ ಇಷ್ಟು ಕೊಟ್ಟಿದ್ದೇವೆ. ಮುಂದೆ ಅದೆಷ್ಟು ಲಾಭ ಬರುತ್ತದೆ? ಎಂದು ಮುಖಾಕ್ಕೆ ಹೊಡೆದ ರೀತಿಯಲ್ಲಿ ಕೇಳುತ್ತಿದ್ದೇವೆ.

ಇಲ್ಲವೆಂದರೇ ಸ್ನೇಹದ ಬೆಲೆ ಏನು? ಎನ್ನುತ್ತಿದ್ದೇವೆ.

ನಿನ್ನ ಸ್ನೇಹಿತರು ನಿನಗೆ ಉಪಕಾರಿಯಾಗಿರಬೇಕು. ಅವರಿಂದ ನೀನಗೆ ಲಾಭವಿರಬೇಕು. ಸುಖಸುಮ್ಮನೇ ಬಾಯಿಯಲ್ಲಿ ಮಾತು ಸುರಿಸಿದರೇ ಏನೂ ಉಪಯೋಗ ಗುರೂ! ಅನ್ನುತ್ತಿದ್ದೇವೆ. ಈ ರೀತಿಯಲ್ಲಿ ಪ್ರತಿಯೂಬ್ಬರನ್ನೂ ಮೊದ ಮೊದಲೇ ಆ ರೀತಿಯ ಸಂಕಲನ, ವ್ಯವಕಲನದ ಲೆಕ್ಕಾಚಾರದಲ್ಲಿ ನಮ್ಮವರನ್ನಾಗಿಸಿಕೊಳ್ಳುತ್ತಿದ್ದರೇ.. ಯಾವ ಸಂಬಂಧಗಳಾದರೂ ಶಾಶ್ವತವಾಗಿ ಉಳಿಯಲು ಹೇಗೆ ಸಾಧ್ಯ?

ಅಲ್ಲಿ ಸುಂದರ ಮದುವೆಯ ಸಂಜೆಯ ಅರತಕ್ಷತೆ. ನಾಳೆ ಮುಂಜಾನೆ ಎರಡು ಹೊಸ ಜೋಡಿಗಳು ಸಪ್ತಪದಿ ತುಳಿಯುವವರಿದ್ದಾರೆ.

ಅರತಕ್ಷತೆಯಲ್ಲಿ ಭಾವಿ ವದುವರರಿಗೆ ಶುಭಕೋರಲು ಬಂದಂತಹ ದಂಪತಿಗಳ ಮಾತು " ನಾನು ಈ ನನ್ನ ಸ್ನೇಹಿತನಿಗೆ ಹೇಳುತ್ತಿದ್ದೇನೆ. ನಿನ್ನ ಮಗಳನ್ನು ಪೂರ್ತಿ ಓದಿಸಿ ಅವಳ ಕಾಲ ಮೇಲೆ ಅವಳನ್ನು ನಿಲ್ಲುವಂತೆ ಮೊದಲು ಮಾಡು. ಈ ಮದುವೆಯಾಗುವ ಗಂಡುಗಳು ಎಲ್ಲಿಯವರೆಗೆ ಜೊತೆಯಲ್ಲಿ ಇರುತ್ತಾರೋ ಗೊತ್ತಿಲ್ಲಾ. ಯಾವಾಗ ಬೇಕಾದರೂ ಕೈ ಬಿಡಬಹುದು."

ನನಗೆ ತುಂಬ ಆಶ್ಚರ್ಯವಾಯಿತು. ಮದುವೆಯ ಹಾಲ್ ನಲ್ಲಿ ಈ ರೀತಿಯ ಋಣಾತ್ಮಕವಾದ ಭಾವನೆಯ ಬೀಜ!

ಸಂಬಂಧಗಳು ಅಷ್ಟರ ಮಟ್ಟಿಗೆ ಶೀಥಿಲವಾಗಿಬಿಟ್ಟಿದ್ದಾವೇಯೇ ಅಥವಾ ನಾವು ನಿತ್ಯ ನೋಡುವ ಈ ಸಿನಿಮಾ, ಟಿ.ವಿ ಈ ದೃಶ್ಯ ಮಾಧ್ಯಮಗಳಲ್ಲಿ ಬರುವ ಕಥೆಗಳು ನಮ್ಮ ಜನಗಳ ಮನಸ್ಸನ್ನು ಈ ರೀತಿಯಲ್ಲಿ ಯೋಚಿಸಲು ಪ್ರೇರಪಿಸುತ್ತಿದ್ದಾವೆಯೇ?

ಯಾಕೆ ಇಂದು ಮದುವೆ ಎಂಬ ಬ್ರಹ್ಮ ಮಾಡಿದ ಗಂಟು/ಬಂಧನ ಯಾವಾಗ ಬೇಕಾದರು ಹರಿದುಕೊಳ್ಳುವಂತಹದ್ದು ಎಂಬ ರೀತಿಯಲ್ಲಿ ನಮ್ಮ ಯುವಪೀಳಿಗೆಗೆ ನಾವು ತೋರಿಸಿಕೊಡುತ್ತಿದ್ದೇವೆ?

ಪುರಾಣದ ರಾಮ-ಸೀತೆ, ನಳ-ದಮಯಂತಿಯರು ಜೀವನದಲ್ಲಿ ಏನೇ ಕಷ್ಟಕೋಟಲೆಗಳು ಬಂದರು ಎಂದಿಗೂ ಒಬ್ಬರನ್ನೊಬ್ಬರೂ ಬೇರೆಯಾಗದೇ ಹೋರಾಡಿದ ಗಟ್ಟಿ ಬಂಧನದ ಸಂಬಂಧದ ಕಥೆಗಳ್ಯಾಕೆ ನಮ್ಮ ಯುವಕ ಯುವತಿಯರ ಮನಸ್ಸಿನಲ್ಲಿ ಇಂದು ನಿಂತಿಲ್ಲಾ?

ಇಂದು ತುಂಬ ಚಿಕ್ಕ ಚಿಕ್ಕ ವ್ಯತ್ಯಾಸಕ್ಕೆ ಡೈವರ್ಸ್ ಮೊರೆ ಹೋಗುತ್ತಿರುವುದು. ಇದು ಏನನ್ನು ಸೂಚಿಸುತ್ತದೆ.

ಸ್ನೇಹವೆಂದರೇ ಎಲ್ಲಾ ಸಂಬಂಧಕ್ಕೂ ಮೀಗಿಲಾಗಿದ್ದು ಎನ್ನುವುದಕ್ಕೆ ಆದರ್ಶವಾದ  ಶ್ರೀ ಕೃಷ್ಣ-ಸುಧಾಮ, ದುರ್ಯೋಧನ-ಕರ್ಣರ ಕಥೆಗಳೆಲ್ಲಾ ಇಂದು ಸುಳ್ಳು ಎನ್ನುವಷ್ಟರ ಮಟ್ಟಿಗೆ ನಮ್ಮ ನಮ್ಮ ಯುವ ಮನಸ್ಸುಗಳನ್ನು ಟ್ಯೂನ್ ಮಾಡಿಕೊಂಡಿರುವಿವೆಲ್ಲಾ ಯಾಕೆ?

ಯಾವುದೂ ಶಾಶ್ವತವಲ್ಲಾ ಎಂಬ ವ್ಯರಾಗ್ಯ ಭಾವನೆಯನ್ನು ನೈಸರ್ಗಿಕವಾಗಿರುವ ಮಾನವ ಸಂಬಂಧಗಳಿಗೆ, ಭಾವನೆಗಳಿಗೆ ತಳುಕು ಹಾಕುವ ಮನಸ್ಸನ್ನು ವೇಗದ ಯುಗದಲ್ಲಿ ನಾವು ಯಾಕೇ ಮಾಡುತ್ತಿದ್ದೇವೆ?

ಇದಕ್ಕೆಲ್ಲಾ ಉತ್ತರ ನಮ್ಮ ನಮ್ಮಲ್ಲಿಯೇ ಉಂಟು.

ಒಂದು ಸುಂದರವಾದ ಆರೋಗ್ಯಕರವಾದ ವ್ಯಕ್ತಿ ವ್ಯಕ್ತಿ ಸಮಷ್ಠಿಯ ತಂತುವಿನ ಕೊಂಡಿಗಳ ನಡುವಿನ ಬಂಧನವನ್ನು ನಿರಂತರವಾಗಿ ಹಾಗೆಯೇ ಇರುವಂತೆ ಮಾಡುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕಾಗಿರುವುದು ಅಧ್ಯ ಕರ್ತವ್ಯ!