ಬುಧವಾರ, ಜುಲೈ 25, 2012

ನನ್ನೂರು ನನ್ನ ಜನ


ಹುಟ್ಟೂರು ಅಂದರೇ ಅದು ನಮ್ಮದೇ ಊರು ಎಂಬ ಅಭಿಮಾನ. ಅಲ್ಲಿ ನಾವು ಹೇಗೆ ಇದ್ದರೂ ಇರಬಹುದು. ನಮಗೆ ಉಸಿರು ಕೊಟ್ಟ ಜಾಗ. ನಾವು ಬೆಳೆಯಲು ಕಾರಣವಾದ ಪರಿಸರವನ್ನು ನೀಡಿದ ಸ್ಥಳ. ಅಲ್ಲಿ ಏನೇಲ್ಲಾ ತನಗಳನ್ನು ಮಾಡಿರುತ್ತೇವೋ ಗೊತ್ತಿಲ್ಲ!

ನಮ್ಮನ್ನು ಒಂದು ಮರ್ಯಾದೆಯ ಸ್ಥಿತಿಗೆ ತಂದಿರುವ ತಾಣ ಅದು.ಅದೆ ನಮಗೆ ಕರ್ಮ ಭೂಮಿ. ಅಲ್ಲಿಂದಲೇ ನಮ್ಮ ಎಲ್ಲಾ ತಪ್ಪು ಒಪ್ಪುಗಳನ್ನು ಕಲಿತುಕೊಂಡಿರುತ್ತೇವೆ. ನಾವು ಮನುಷರು ಎಂದು ಹೇಳಿದ್ದೇ ಆ ನಮ್ಮ ಹುಟ್ಟಿದ ಭೂಮಿ.

ಜಗತ್ತಿನ ಯಾವೊಂದು ಜಾಗದಲ್ಲೂ ಸಿಗದ ನೆಮ್ಮದಿ ಸ್ವಾತಂತ್ರ್ಯ ನಮ್ಮ ಊರಿಗೆ ನಾವು ಬಂದಾಗ ಸಿಗುತ್ತದೆ. ಸುಖದ ಸುಪ್ಪತ್ತಿಗೆಯ ಮೇಲೆ ನಿತ್ಯ ಇದ್ದಾಗಲೂ ಇಲ್ಲದ ನೆಮ್ಮದಿಯ ರಾತ್ರಿಯ ನಿದ್ದೆ ಇಲ್ಲಿಯ ಒಂದು ಚಿಕ್ಕ ಹಳೆ ಚಾಪೆಯ ಮೇಲೆ ದೂರಕುತ್ತದೆ.

ಹಲವು ದಿನಗಳನ್ನು ದೂರದಲ್ಲಿ ಕಳೆದು ತನ್ನ ಊರಿಗೆ ವಾಪಾಸ್ಸಾಗುವಾಗ ಸಿಗುವ ಮನಸ್ಸಿನ ಆನಂದವನ್ನು ವರ್ಣಿಸಲು ಸಾಧ್ಯವಿಲ್ಲ ಬಿಡಿ. ಅದೇ ಮನುಷ್ಯನ ಸಂತೋಷದ ಉತ್ಕೃಷ್ಟ ಸಮಯ ಅನಿಸುತ್ತದೆ.

ಯಾವೊಂದು ಕಟ್ಟುಪಾಡುಗಳಿಲ್ಲದೆ ಎಲ್ಲಿ ಬೇಕೆಂದರಲ್ಲಿ ಧಾರಾಳವಾಗಿ, ನಿರಾಂತಕವಾಗಿ ಅಡ್ಡಾಡುವ ಜಾಗವೆಂದರೇ ನಮ್ಮೊರೂ ಮಾತ್ರ. ಅಲ್ಲಿ ಸಿಗುವ ಪ್ರತಿಯೊಬ್ಬರೂ ನಮ್ಮವರೇ. ಅವರಿಗೆ ನಾನು ಗೊತ್ತೂ ನನಗೆ ಅವರು ಗೊತ್ತೂ. ಯಾವೊದೇ ಸಂಕೋಚವಿಲ್ಲದೇ ಮಾಮೊಲಿ ಮನುಷ್ಯನಾಗಿ ವರ್ತಿಸುವೆವು.


ಯಾವುದೇ ಕೃತಕವಾದ ಮುಖವಾಡಗಳನ್ನು ನಮ್ಮ ಮುಖದ ಮೇಲೆ ನಾವು ಇಟ್ಟುಕೊಳ್ಳುವ ಅವಶ್ಯಕತೆಯಿಲ್ಲ.

ದಾರಿಯಲ್ಲಿ ಸಿಗುವ ನನ್ನೂರಿನ ಜನಗಳ ನೈಸರ್ಗಿಕವಾದ ಆ ನಗುವಿನ ಮುಂದೆ ಎಲ್ಲಾದನ್ನೂ ನಿವಾಳಿಸಿ ಹಾಕಬೇಕು.

ಅವರು ಕೇಳುವ ಕುಶಲೋಪಾಚಾರ ದೇವರೆ ನನ್ನ ಬಳಿ ಬಂದು ವಿಚಾರಿಸಿದಂತೆ!

ನಾನು ನಾನಾಗಿ ನನಗೆ ತಿಳಿದ ರೀತಿಯಲ್ಲಿ ಸಾಮಾನ್ಯನಾಗಿ ಅಡ್ಡಾಡಬಹುದು.

ಈ ರೀತಿಯ ಭಾವನೆಯನ್ನು ಪರಸ್ಥಳದಲ್ಲಿ ಕಾಣುವುದು ಅಸಾಧ್ಯ. ನಮಗೆ ಇಷ್ಟವಿಲ್ಲದಿದ್ದರೂ ಹತ್ತು ಹಲವಾರು ಮುಖವಾಡಗಳನ್ನು ಧರಿಸಿ ಬೇರೆಯವರಿಗಾಗಿ ಬದುಕನ್ನು ದೂಡಬೇಕಾದ ಸ್ಥಿತಿ.

ಅದಕ್ಕೆ ಇರಬೇಕು. ಹೊಸ ಸ್ಥಳಗಳಲ್ಲಿ ನಮ್ಮದಲ್ಲದ ಜಾಗಗಳಲ್ಲಿ ಏನೋ ಒಂದು ರೀತಿಯ ಆತಂಕದ ಕ್ಷಣಗಳು, ಭಯ ಮಿಶ್ರಿತವಾದ ನೋಟಗಳನ್ನು ಕಣ್ಣಿನಲ್ಲಿ ನಿತ್ಯ ಕಟ್ಟಿಕೊಂಡಿರಬೇಕಾಗುತ್ತದೆ. ಮನೆಯಿಂದ ಒಂದು ಹೆಜ್ಜೆ ಹೊರ ಇಡಬೇಕಾದರೂ ಹತ್ತು ಹಲವು ಬಾರಿ ಮುಂಜಾಗರುಕತೆಯಂತೆ ನನ್ನನ್ನೇ ನಾನು ಪರೀಕ್ಷಿಸಿಕೊಂಡು ಎಲ್ಲಾ ಸರಿ ಇದ್ದಂಗೆ ಇದೆ ಎಂದು ಕೊಂಡು ಬರುವುದು.

ಕೆಲವೇ ಪರಿಚಿತ ಮುಖಗಳ ಜೊತೆಯಲ್ಲಿ ಅಸಂಖ್ಯವಾದ ಅಪರಿಚತ ಜನಗಳ ನಡುವೆ ನನ್ನ ಬದುಕು ಜೀವನವನ್ನು ಸಾಗಿಸಬೇಕಾದ ಅನಿವಾರ್ಯತೆಯೇ ಈ ಪಟ್ಟಣ ಜೀವನ.

ಎಷ್ಟೊಂದು ಜನರಿದ್ದಾರೆ. ಜನರೇ ಜನರೂ ಪ್ರತಿಯೊಬ್ಬರೂ ಎಲ್ಲಾ ಜಾಗದಲ್ಲೂ ಜೊತೆಯಲ್ಲಿಯೇ ಸಾಗುತ್ತಾರೆ. ಅದರೇ ಯಾರೊಬ್ಬರೂ ನನ್ನನ್ನು "ನೀನೂ ಯಾರು?" ಎಂದು ಕ್ಯಾರೇ ಅನ್ನುವುದಿಲ್ಲ. ಎಲ್ಲರೂ ಅವರವರ ಪಾಡಿಗೆ ಅವರದೇಯಾದ ಲೋಕದಲ್ಲಿ ದೂರದಲ್ಲಿ ನಿಲ್ಲುತ್ತಾರೆ.

ನನಗೆ ಅನಿಸುತ್ತದೆ ಇದೆ ಭಾವನೆ ಅವರುಗಳಿಗೆಲ್ಲಾರಿಗೂ ನಿತ್ಯ ಆಗುತ್ತಿರಲೇ ಬೇಕು.

ನಿಜ! ಅವರು ನನ್ನಂತೆಯೇ ಮನುಷರಲ್ಲವಾ?

ಎಷ್ಟೊಂದು ವಿಪರ್ಯಾಸ ಎಲ್ಲಾ ಇದ್ದು ಏನೂ ಇಲ್ಲದ ಜೀವನ.

ನನ್ನೂರು ಅದಕ್ಕೆ ನನಗೆ ಹೆಚ್ಚು ಇಷ್ಟವಾಗುವುದು. ಪರ ಊರಿನಿಂದ ನನ್ನೂರುಕಡೆಗೆ ಮುಖ ಮಾಡಿದ ಕ್ಷಣದಿಂದ ನನ್ನ ಮನೋಲೋಕವೇ ಹಾರುವ ಹಕ್ಕಿಯಾಗಿ ಬಿಡುತ್ತದೆ. ಸರ್ವ ಸ್ವತಂತ್ರದ ಲತೆಯಾಗಿ ಎಲ್ಲೆಲ್ಲೂ ಹರಿದುಬಿಡುತ್ತದೆ. ಅತಿ ಹೆಚ್ಚು ಆನಂದಮಯವಾದ ಕ್ಷಣ ಇದಾಗಿರುತ್ತದೆ ಅನಿಸುತ್ತದೆ.

ಬಿಗಿಯಾದ ಒಂದು ವಾತವರಣದಿಂದ ತಿಳಿಯಾದ ತಣ್ಣನೆಯ ಹಚ್ಚ ಹಸಿರಿನ ಸಾಮಾನ್ಯವಾದ ನಿಶಬ್ಧವಾದ ಸುಂದರ ಸ್ವರ್ಗದಂತಹ ತಾಣಕ್ಕೆ ಹೋದ ಅನುಭವ.

ಅಲ್ಲಿ ನಾನು ಕಾಲೂರುವ ಭೂ ಮಣ್ಣಿನ ಸ್ಪರ್ಷದಿಂದ ಪ್ರಾರಂಭಿಸಿ ನಾನು ನೋಡುವ ಪ್ರತಿಯೊಂದು ನೋಟವು ನನ್ನದೆ ಅನಿಸುವ ಫಿಲಿಂಗೇ ನನ್ನ ಮನೋ ಲಹರಿಗೆ ಉತ್ತೇಜನ ನೀಡುತ್ತದೆ.

ಅದೇ ನಾ ಓಡಾಡಿದ ಕೇರಿ, ಮುರುಕಲು ಗುಡಿಸಲುಗಳು, ಹಳೆಯ ಮನೆಗಳು, ಮನೆಯ ಮುಂದೆ ಹರಿಯುವ ಕಪ್ಪನೆಯ ಚರಂಡಿ, ದಾರಿಯಲ್ಲಿ ಎದುರಾಗುವ ಅವರಿವರ ಎಮ್ಮೆ,ಎತ್ತು,ಧನ ಕರುಗಳು, ಭೀದಿ ನಾಯಿಗಳು, ಹಳ್ಳಿಯಲ್ಲಿನ ಹಣ್ಣು ಹಣ್ಣು ಮುದುಕರು,ಅಜ್ಜಿಯರುಗಳು, ಕಮ್ಮನೇ ಸಗಣಿ ಮಣ್ಣಿನ ವಾಸನೆಗಳು. ಅವರಿವರು ಆಡುವ ಸುಮ್ಮನೇ ಸಣ್ಣ ಸಣ್ಣ ಜಗಳಗಳು. ಇತ್ಯಾದಿ ಇತ್ಯಾದಿ ನಾನು ನಿಜವಾಗಿಯೋ ಈ ಲೋಕದಲ್ಲಿಯೇ ಇದ್ದೇನೆ ಎಂಬ ಅರಿವನ್ನುಂಟು ಮಾಡುತ್ತವೆ.

ರಾತ್ರಿಯೋ ಹಳ್ಳಿಗೆ ಹಳ್ಳಿಯೇ ನಿರವ ಮೌನದ ಕತ್ತಲಲ್ಲಿ ಕರಗಿ ಲೀನವಾದಂತೆ ಕಾಣಿಸುತ್ತದೆ. ಆಕಾಶವನ್ನು ದಿಟ್ಟಿಸಿದರೇ ಪ್ರತಿಯೊಂದು ನಕ್ಷತ್ರಗಳ ಮಿಳುಕು! ಅವುಗಳೆಲ್ಲಾ ನಮ್ಮ ಊರಿಗೆ ಮಾತ್ರ ಸೇರಿದವರು ಮತ್ತು ನನ್ನವರೇ ಅನಿಸುತ್ತದೆ.

ಯಾವೊಂದು ಕೃತಕವಾದ ಯಂತ್ರ ಮಂತ್ರದ ಹಾವಳಿಯಿಲ್ಲದೇ ಕೇವಲ ಊರು ನಾಯಿಗಳು,ಧನ ಕರುಗಳ ದ್ವನಿ ಮತ್ತು ನಮ್ಮ ಹಳ್ಳಿಗರ ಒಂದೇರಡು ಮಾತುಕತೆಗಳು ಅಷ್ಟೊಂದು ದೂರದಿಂದಲೂ ನನ್ನ ಕಿವಿಯ ಮೇಲೆ ಬೀಳುತ್ತಿರುತ್ತದೆ. ಅದೇ ಸಂಜೆಯ ನನ್ನ ಸವಿ ನಿದ್ದೆಗೆ ಸಿಹಿಯಾದ ಜೋಗುಳ

ಊರು ಚಿಕ್ಕದಾದರಂತೂ ಮುಗಿಯಿತು. ಸುತ್ತಾ ಹೊಲ, ಕಾಡುಗಳಿಂದ ಮುತ್ತಿಕೊಂಡು ಒಂದು ಹೊಳೆಯುವ ದ್ವಿಪವಾಗಿ ನನ್ನೂರು ಕಾಣುವುದೋ ಏನೋ!


ಮಳೆ,ಬೆಳೆಯ ಸಮಯದಲ್ಲಿ ಒಂದು ಸಲ ಹೊಚ್ಚ ಹೊಸದಾಗಿ ಇಡೀ ಊರೇ ತನ್ನನ್ನು ತಾನು ತೊಳೆದುಕೊಂಡ ಅನುಭವ. ಊರಿಗೆ ಹೊಂದಿಕೊಂಡು ಹರಿಯುವ ಹಳ್ಳವೇ ನಮ್ಮೊರ ಗಂಗಾಮಾತೆಯಾಗಿ ನಮ್ಮನ್ನೂ ಪೊರೆಯುವವಳು ಅನಿಸುತ್ತದೆ. ನಮ್ಮ ಎಲ್ಲಾ ಕೆಟ್ಟದ್ದನ್ನೂ ವರುಷಕ್ಕೆ ಒಮ್ಮೆ ಪರಿಪೂರ್ಣವಾಗಿ ತೊಳೆಯಲು ಬರುವ ದೇವತೆ ಅನಿಸುತ್ತದೆ.

ಹಬ್ಬ ಹರಿದಿನಗಳು ಕೇವಲ ನಮ್ಮ ಮನೆಯ ಹಬ್ಬವಾಗಿರುವುದಿಲ್ಲ. ಅದು ಊರು ಹಬ್ಬವಾಗಿರುತ್ತದೆ. ಅವರಿವರ ಮನೆಯಲ್ಲಿ ಮಾಡುವ ಪ್ರತಿಯೊಂದು ಸಿಹಿ ತಿಂಡಿಗಳ ವಿಚಾರ ಪ್ರತಿಯೊಬ್ಬರಿಗೂ ತಿಳಿದಿರುತ್ತದೆ. ನಮ್ಮ ಮನೆಯಲ್ಲಿಯೇ ನಾವುಗಳು ಉಣ್ಣಬೇಕು ಎಂದು ಏನೂ ಇಲ್ಲಾ. ಪ್ರತಿಯೊಬ್ಬರದು ನಮ್ಮ ಮನೆಯೇ. ಆ ಮೂಲಿ ಮನೆ, ಈ ಕೊನೆ ಮನೆ, ಈ ಮಧ್ಯ ಮನೆ, ಈ ಎತ್ತರದ ಮನೆ, ಆ ದೊಡ್ಡ ಮನೆ,ಈ ಕೆಳಗಿನ ಮನೆ ಹೀಗೆ ಎಲ್ಲಾ ನನ್ನದೇ ಅನಿಸುವಂತೆ ಹೊಂದಿಕೊಂಡು ಸವಿಯುವ ರುಚಿಯಾದ ಊಟ-ನೋಟ.

ಇದೇ ಹೊಸ ಸ್ಥಳಗಳಿಗೂ ನಾನು ಹುಟ್ಟಿದ ಊರಿಗೂ ಇರುವ ಅಜಗಜಾಂತರವಾದ ವ್ಯತ್ಯಾಸ. ಇಲ್ಲಿ ನಾನು ನಾನೇ. ನಾನು ನಾನು ಮಾತ್ರ. ಕಷ್ಟಕ್ಕೂ ಸುಖಕ್ಕೂ ನಾನೇ ವಾರಸುಧಾರ. ನನಗೆ ನಾನೇ ಒಬ್ಬನೇ ಯಜಮಾನ!

ಪ್ರತಿಯೊಬ್ಬರೂ ಹುಟ್ಟಿದ ಊರಿಗೆ ಕೊಡುವ ಒಂದು ಉನ್ನತ ಸ್ಥಾನವನ್ನು ಬೇರೆ ಯಾವ ಊರು, ಸ್ಥಳಕ್ಕೆ ಕೊಡಲಾರರು.

ಅಲ್ಲಿ ಮಾತ್ರ ನಮ್ಮನ್ನು ನಾವು ಹೆಚ್ಚು ಹೆಚ್ಚು ಪರಿಪೂರ್ಣವಾಗಿ ನೋಡಿಕೊಳ್ಳಲು ಮಾತ್ರ ಸಾಧ್ಯ.

ನನಗೆ ಅನಿಸುತ್ತದೆ. ಇಂದಿನ ಈ ಯಾಂತ್ರಿಕ ಯುಗದ ಕಾರಣ ನಮ್ಮ ಅನೇಕ ಹಿರಿಯರು ತಮ್ಮ ಮಕ್ಕಳು ಮರಿಗಳ ಕೆಲಸ ಕಾರ್ಯಗಳ ನಿಮಿತ್ತಾ ತಮ್ಮ ಉಸಿರಾಗಿ ತಮ್ಮನ್ನೂ ಪೊರೆದ ಹುಟ್ಟಿದ ಊರುಗಳನ್ನು ಬಿಟ್ಟು ವಲಸೆಯೋಪಾದಿಯಲ್ಲಿ ನಗರವಾಸಿಗಳಾಗಿ ತಮ್ಮ ಮಕ್ಕಳ ಜೊತೆಯಲ್ಲಿ ತಮ್ಮ ಅಂತಿಮ ಕ್ಷಣಗಳನ್ನು ಕಳೆಯವಾಗ... ಆ ತಮ್ಮ ಬಾಲ್ಯವನ್ನು, ತಮ್ಮನ್ನು ತಿದ್ದಿ ತೀಡಿದ ಆ ತನ್ನೂರನ್ನೂ ತುಂಬಾನೆ ಮೀಸ್ ಮಾಡಿಕೊಂಡು ಕೂರಗುತ್ತಿರುವವರು ಎಂದು ನನಗೆ ಅನಿಸುತ್ತದೆ.

ಯಾಕೆಂದರೇ ಇಲ್ಲಿ ನಿತ್ಯ ಮುಂಜಾನೆ, ಸಂಜೆ ನಗರದ ಪಾರ್ಕಗಳಲ್ಲಿ ಕಾಣುವ ಈ ನನ್ನ ವಯಸ್ಸಾದ ಹಿರಿಯರ ಬಾಡಿದ ಮುಖಗಳನ್ನು ನೋಡಿದರೇ ಹಾಗೆ ಅನಿಸುತ್ತದೆ!


ನೀವು ಏನ್ ಹೇಳ್ತಿರಾ?

ಸೋಮವಾರ, ಜುಲೈ 16, 2012

ಹಣ್ಣೆಲೆಯ ಬದುಕು


ನಾನು ಕನಸು ಕಂಡಿದ್ದೆ. ನಾನು ಚಿಕ್ಕವಳಾಗಿದ್ದಾಗ. ನಾನು ಬೆಳೆಯಬೇಕು. ನಾನು ಹೇಗೆ ನನ್ನ ಅಪ್ಪ ಅಮ್ಮನಿಗೆ ಮುದ್ದಿನ ಮಗಳಾಗಿರುವೆನೋ ಆ ರೀತಿಯಲ್ಲಿಯೇ ನನಗೆ ನನ್ನದೆಯಾದ ಒಂದೇರಡು ಕೂಸುಗಳನ್ನು ಹೆರಬೇಕು.

ಗೊತ್ತಾ ಎಂಟು ಹತ್ತು ವರುಷಳಾಗಿರುವಾಗ ಅನಿಸುತ್ತದೆ. ಪಕ್ಕದ ಮನೆಯ ಹುಡುಗಿಯರ ಜೊತೆಯಲ್ಲಿ ಸೇರಿ ಮನೆ, ಅಪ್ಪ, ಅಮ್ಮ, ಮಗಳು ಈ ರೀತಿಯ ಪಾತ್ರಗಳಾಗಿ ಆಟವಾಡುತ್ತಿದ್ದೆ.

ಅದನ್ನು ನೆನಸಿಕೊಂಡರೇ ಈಗಲೂ ನಗು ಬರುತ್ತದೆ.

ಕೇವಲ ಆಟವಾಡುವಷ್ಟರ ಮಟ್ಟಿಗೆ ಈ ಬದುಕಿನ ಬಿಡಿಸಲಾರದ ಬಂಧನಗಳು ನಿಂತಿರುವಂತಿದೆ ಅನಿಸುತ್ತದೆ.

ಇಂದಿಗೆ ಸುಮಾರು ಅರುವತೈದು ಎಪ್ಪತ್ತು ವರುಷ ನನಗೆ ಆಗಿರಬೇಕು.ಜೀವನದಲ್ಲಿ ಎಷ್ಟೊಂದು ಮಳೆಗಾಲ, ಚಳಿಗಾಲ ಗಳನ್ನು ಈ ನನ್ನ ದೇಹ ಕಂಡಿದೆಯೋ ದೇವರೇ ಬಲ್ಲ.

ಚಿಕ್ಕವರಾಗಿದ್ದಾಗ ಇದ್ದಂತಹ ಕಲ್ಪನೆಯ ಸಂಬಂಧಗಳು ದೊಡ್ಡವರಾಗಿ ಬೆಳೆದಂತೆಲ್ಲಾ ಯಾಕೆ ಹುಸಿಯಾಗುವುವೋ ನನಗಂತೂ ಇಂದಿಗೂ ತಿಳಿದಿಲ್ಲ.

ಹೆಣ್ಣು ಜೀವಕ್ಕೆ ತಾಯಿಯಾದ ಮೇಲೆಯೇ ಪರಿಪೂರ್ಣತೆ! ಎಂಬುದನ್ನು ಚಿಕ್ಕವಳಿದ್ದಾಗ ಯಾರೂ ಯಾರೋ ಮಾತನ್ನಾಡುವವಾಗ ನನ್ನ ಕಿವಿಯ ಮೇಲೆ ಬಿಳಿಸಿಕೊಂಡಿರುತ್ತಿದ್ದೆ.

ಆ ಸಮಯದಲ್ಲಿ ಎಲ್ಲಿತ್ತೂ ಶಾಲೆ ಪಾಠ? ಓದುವುದು ಎನಿದ್ದರೂ ನನ್ನ ಅಣ್ಣ ತಮ್ಮ ಎನಿಸಿಕೊಂಡ ಗಂಡು ಪಾತ್ರಗಳಿಗೆ ಮಾತ್ರ.

ಅವರು ನಿತ್ಯ ಆಟ ಪಾಠದಲ್ಲಿದ್ದರೆ ನಾನು ನನ್ನ ಅಮ್ಮನಿಗೆ ಮನೆಯಲ್ಲಿ ಕೈ ಆಸರೆಯಾಗಿ ಎಲ್ಲಾ ಕೆಲಸ ಮಾಡುತ್ತಿದ್ದೆ.

ಅಪ್ಪನೋ ನೀನು ಮುಂದೆ ಮದುವೆಯಾಗಿ ಬೇರೆಯವರ ಮನೆಗೆ ಹೋಗುವುವಳು ಎಲ್ಲಾ ಕೆಲಸಗಳನ್ನು ಕಲಿಯಬೇಕು. ಗಂಡನ ಮನೆಯಲ್ಲಿ ಯಾರು ಕೂರಿಸಿ ಇಡುವವರು. ಎನ್ನುತ್ತಿದ್ದರು.

ಹೀಗೆ ಅಂಜುತ್ತಾ ಅಳುಕುತ್ತಾ ವಯಸ್ಸಿಗೆ ಬಂದಾಗ ಮನಸ್ಸಿನಲ್ಲಿ ಚೆಲುವಿನ ಚಿತ್ತಾರ. ನಾನು ಮದುವೆಯಾಗುವುವೆನು. ನಾನು ನನ್ನದೇಯಾದ ಮುದ್ದಾದ ಎರಡು ಗಂಡು ಮಕ್ಕಳನ್ನು ಹೆತ್ತು, ಸಾಕಿ ನನ್ನ ಜೀವವಾಗಿ ಕಾಪಾಡುವುವೆನು ಎಂಬ ಕನಸು ಆಸೆಯ ಹೊಡಲಾಗಿದ್ದೆ.

ನಮ್ಮದು ಅಂಥ ಹೇಳಿಕೊಳ್ಳುವಷ್ಟು ಉತ್ತಮಸ್ಥರ ಮನೆಯೆನಲ್ಲಾ. ಅದರೂ ಹೊಟ್ಟೆ ಬಟ್ಟೆಗೆ ಯಾವುದಕ್ಕೂ ಕಡಿಮೆಯಿರಲಿಲ್ಲ. ನಮ್ಮ ಅಪ್ಪ ಆಗಿನ ದಿನಕ್ಕೆ ನಗರದಲ್ಲಿ ಯಾವುದೋ ಒಂದು ಅಂಗಡಿಯನ್ನು ಇಟ್ಟುಕೊಂಡು ಸುಮಾರಾಗಿ ಸಂಪಾದಿಸುತ್ತಿದ್ದರು.

ಅಲ್ಲಿಯೇ ನಗರದಲ್ಲಿರುವ ನಮ್ಮ ಅಂತಸ್ತಿಗೆ ತಕ್ಕಂತ ಒಬ್ಬ ವರನನ್ನು ಹುಡುಕಿದರು. ನನಗೊ ಏನೂ ಹೇಳುವುದಕ್ಕೂ ಬಾಯಿಯಿಲ್ಲ. ನನ್ನ ಅವ್ವ ಹೇಳಿದ್ದಕ್ಕೆ ನಾನು ಒಪ್ಪಿ ಆ ಗಂಡಸಿನ ಕೈ ಹಿಡಿದು ನಗರಕ್ಕೆ ಬಂದೇ.

ನನ್ನ ಗಂಡನೋ ನನಗೆ ಮದುವೆಯ ಸುಖ, ಸಂಬಂಧಗಳನ್ನು ಒಂದಷ್ಟು ವರುಷ ಚೆನ್ನಾಗಿಯೇ ಉಣಿಸಿದ. ಆ ಸಮಯದಲ್ಲಿ ನನಗೆ ನಾನೇ ಸಾಟಿ ಎಂಬಂತೆ ತುಂಬ ಸುಖವಾಗಿ ಇದ್ದೆ.

ಇದೆ ಸಮಯಕ್ಕೆ ಸರಿಯಾಗಿ ನನಗೆ ಎರಡು ಕೂಸುಗಳು ಹುಟ್ಟಿದವು. ಅಯ್ಯೋ ನನ್ನ ಖುಷಿಗೆ ಪಾರವೇ ಇರಲಿಲ್ಲ. ಅವುಗಳನ್ನು ಕಾಪಾಡುವುದೇ ನನ್ನ ಮಹತ್ವವಾದ ಕಾರ್ಯಗಳಲ್ಲಿ ಒಂದಾಗಿತ್ತು. ನನ್ನ ಅತ್ತೆ ಮಾವಂದಿರೆಗೆ ಹೊಟ್ಟೆ ಕಿಚ್ಚು ಬರುವ ರೀತಿಯಲ್ಲಿ ನನ್ನ ದೇಹವನ್ನು ಸೀಳಿಕೊಂಡು ಬಂದಿರುವ ಈ ಎರಡು ಮುದ್ದು ಕಂದಮ್ಮಗಳನ್ನು ನಿತ್ಯ ಪೊರೆಯುತ್ತಿದ್ದೆ.

ಅವುಗಳ ತುಂಟಾಟ, ಪಾಠ, ತರಲೆಗಳೆ ನನಗೆ ನಿತ್ಯ ಸಂಗೀತವಾಗಿತ್ತು. ಮನೆಯ ದುಡಿತದ ಜೊತೆ ಜೊತೆಗೆ ಅವುಗಳ ನೋವು ನಲಿವು ನನ್ನದಾಗಿತ್ತು. ನನ್ನ ಯಜಮಾನರು ಸಹ ತಂದೆಯ ಕರ್ತವ್ಯಗಳನ್ನು ನನ್ನ ಜೊತೆಯಲ್ಲಿ ನಿಂತುಕೊಂಡು ನೆರವೇರಿಸಿದರು.

ಈ ಇಬ್ಬರು ನನ್ನ ಎರಡು ಮುತ್ತುಗಳು ಅನಿಸುತ್ತಿತ್ತು. ನನ್ನ ಜೀವನ ಸಾರ್ಥಕ್ಯವಾಯಿತು ಅನಿಸುತ್ತಿತ್ತು. ನನ್ನನ್ನು ದೊಡ್ಡವರಾದ ಮೇಲೆ ಎಂದಿಗೂ ಈ ಜೀವಗಳು ಮರೆಯಲಾರರು ಎನ್ನುವಂತೆ.. ನಾನು ಒಂದಿಷ್ಟು ಜಾಸ್ತಿ ಊಂಡರೇ ಅವುಗಳಿಗೆ ಎಲ್ಲಿ ಕಮ್ಮಿಯಾಗುವುದೋ ಎಂಬ ಕಕ್ಕುಲಾತಿಯಿಂದ ಪ್ರತಿಯೊಂದನ್ನು ಎತ್ತಿ ಈ ಮಕ್ಕಳಿಗಾಗಿ ಇಡುತ್ತಿದ್ದೆ.

ಇಬ್ಬರೂ ಸುಮಾರಾಗಿ ಓದುತ್ತಾ ಓದುತ್ತಾ ಇದ್ದರೂ.

ದೊಡ್ಡವನು ಯಾವುದೋ ಒಂದು ಅಂಗಡಿಯಲ್ಲಿ ಲೆಕ್ಕ ಬರೆಯುವ ಕೆಲಸಕ್ಕೆ ಸೇರಿದ. ಚಿಕ್ಕವನು ಇನ್ನೂ ಓದುತ್ತಿದ್ದ. ಆ ಸಮಯಕ್ಕೆ ಅನಿಸುತ್ತದೆ ನನ್ನ ಯಜಮಾನರು ಯವುದೋ ಒಂದು ಕಾಯಿಲೆಗೆ ತುತ್ತಾದರೂ.

ಅಂದು ನನ್ನ ಜೀವನದ ಒಂದು ಭಾಗವೇ ಇಲ್ಲವಂತಾಯಿತು. ಮದುವೆ, ಮನೆ, ಮಕ್ಕಳು ಈ ಎಲ್ಲಾ ಕನಸಿನ ಸೌಧಕ್ಕೆ ಕಾರಣೀಭೂತರಾದ ನನ್ನ ಪ್ರಾಣದ ಒಂದು ಪ್ರಾಣ ಶಾಶ್ವತವಾಗಿ ದೂರವಾಗಿತ್ತು. ಆದರೂ ನನ್ನ ಮಕ್ಕಳು ನನ್ನ ಜೊತೆಯಲ್ಲಿರುವರಲ್ಲಾ ಯಾಕೆ ವ್ಯಥೆ ಎಂದುಕೊಂಡು ಆ ಚಿಕ್ಕ ಮನೆಯಲ್ಲಿಯೇ ಜೀವನ ಕಂಡುಕೊಂಡಿದ್ದೆ.

ಪ್ರತಿಯೊಂದನ್ನೂ ನಾನೇ ತೂಗಿಸಿಕೊಂಡು ಎರಡು ಮೂರು ವರುಷಗಳವರೆಗೆ ಸಾಗಿಸಿದೆ. ಅಕ್ಕಪಕ್ಕದವರು ಮಗ ದೊಡ್ಡವನಾಗಿದ್ದಾನೇ ಯಾಕೆ ಮದುವೆ ಮಾಡುವುದಿಲ್ಲವೇ? ಎಂದು ಕೇಳಿದಾಗಲೇ ಹೌದಲ್ಲವಾ! ಮಕ್ಕಳು ಬೆಳೆದಿದ್ದಾರೆ ಎಂಬ ಅರಿವುಂಟಾಗಿದ್ದು.

ಅದು ಯಾರೋ ನಮ್ಮ ಪಕ್ಕದ ಮನೆಯವರಿಗೆ ಗೊತ್ತಿರುವುವರಿಂದ ಪಕ್ಕದ ಹಳ್ಳಿಯಲ್ಲಿ ಒಂದು ವಧುವನ್ನು ಗೊತ್ತು ಮಾಡಿ ಮದುವೆಯನ್ನು ಮಾಡಿದೆ.

ಚಿಕ್ಕವನು ಮುಂದೆ ಓದಲಾರದೇ ಅದು ಯಾವುದೋ ಗ್ಯಾರೇಜ್ ನಲ್ಲಿ ಕೆಲಸಕ್ಕೆ ಸೇರಿಕೊಂಡು ಬಿಟ್ಟಿದ್ದ. ಮನೆ ಚಿಕ್ಕದಾಗಿತ್ತು. ಮನೆತುಂಬ ಮಕ್ಕಳು. ಮನೆಗೆ ಹೊಸ ಜೀವಗಳು ಬಂದಿದ್ದವು. ಹೀಗೆ ಒಂದೆರಡು ವರುಷ ಕಳೆದಿರಬೇಕು.

ಚಿಕ್ಕವನು ಅಲ್ಲಿಯೇ ಯಾವುದೋ ಒಂದು ಹುಡುಗಿಯನ್ನು ಮನಸಾರೆ ಮೆಚ್ಚಿ ಮದುವೆಯಾಗಿ ಮನೆಯ ಬಾಗಿಲ ಬಳಿ ನಿಂತಾಗ ಧರೆಯೇ ನನ್ನ ಮೇಲೆ ಉರುಳಿದಂತೆ ಭಾಸವಾಗಿತ್ತು. ಅವನ ಅಣ್ಣನೋ ತುಂಬ ಯಕ್ಕಾ ಮಕ್ಕಾ ಬೈದ. ಮನೆಯಲ್ಲಿ ನೀನಗೆ ಸ್ಥಳವಿಲ್ಲಾ ಎಂದು ಹೇಳಿ ಅಲ್ಲಿಂದಲೇ ಹೊರಗಟ್ಟಿದ.

ಆ ಸಮಯಕ್ಕೆ ಹೆತ್ತ ಕರುಳಿನ ಒಂದು ಮಾತನ್ನು ಕೇಳದವರಾಗಿದ್ದರು ನನ್ನ ಈ ಇಬ್ಬರು ಮಕ್ಕಳು. ನಾನೇ ಪ್ರೀತಿಪಟ್ಟು ಹೆತ್ತು ಹೊತ್ತು ಸಾಕಿದ ನನ್ನ ಜೀವಗಳೇ ಇವರುಗಳು ಎನ್ನಿಸುವಂತಾಗಿತ್ತು. ಆದರೂ ನನ್ನ ದೇಹ ಮನಸ್ಸು ಆಗಲೇ ತುಂಬ ಸವೆದಿತ್ತು.

ಮನೆಯಲ್ಲಿ ನನ್ನ ನೇರಕ್ಕೆ ಯಾವೊಂದು ವಿಷಯಗಳು ಜರುಗುತ್ತ ಇರುತ್ತಿರಲಿಲ್ಲ. ಅವರು ಅವರುಗಳೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರುಗಳಿಗೆ ತಿಳಿದ ರೀತಿಯಲ್ಲಿ ತಿರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದರು.ಅವರವರ ಸಂಭ್ರಮದಲ್ಲಿ ಅವರಿದ್ದರು. ನನ್ನಕಡೆ ಕಿರುಗಣ್ಣು ಸಹ ಹಾಕುತ್ತಿರಲ್ಲಿಲ್ಲ. ಆ ಸಮಯಕ್ಕೆ ನನಗೆ ತುಂಬ ಬೇಜಾರಾಗುತ್ತಿತ್ತು. ನನಗೆ ಇನ್ನೂ ಹೆಚ್ಚು ವಯಸ್ಸಾದ ಅನುಭವವಾಗುತ್ತಿತ್ತು.

ಇದೇ ಏನೂ ನಾನು ಕನಸು ಕಂಡ ನನ್ನ ಮದುವೆ, ಮನೆ, ಮಕ್ಕಳು ಜೀವನ ಪಥ ಅನಿಸುತ್ತಿತ್ತು.

ಗೊತ್ತಿಲ್ಲಾ!

ಮೊಮ್ಮಕ್ಕಳು ಬಂದರು. ಅವುಗಳನ್ನು ದೊರದಿಂದಲೇ ನೋಡಿ ಖುಷಿಪಡುವುದು ಮಾತ್ರ ನನ್ನ ಸರದಿಯಾಗಿತ್ತು. ನನ್ನ ಸೂಸೆಯು ಸಹ ನನ್ನನ್ನು ಪೂರ್ತಿ ಬೆರೆಯವಳು ಎಂಬ ರೀತಿಯಲ್ಲಿ ಕಾಣಲಾರಂಭಿಸಿದಳು. ಇದು ಮೊದ ಮೊದಲು ಸಣ್ಣದಾಗಿ ಶುರುವಾಗಿ ಬೃಹದಾಕಾರವಾಗಿ ಬೆಳೆಯಿತು.

ವಯಸ್ಸನ್ನು ಯಾರೂ ತಡೆಯಬೇಕು. ನಾನೇ ನನ್ನ ಕೈಯಾರೆ ಹೆತ್ತ ಮಗನ ಮುಂದೆ ನಾನೇ ಚಿಕ್ಕವಳಾಗಿ ಕಾಣಿಸುತ್ತಿದ್ದೆ. ನಾನೇ ಅವನ ಎಲ್ಲಾ ಬೇಕು ಬೇಡಗಳನ್ನು ನಿರ್ಧರಿಸುವವಳಾಗಿದ್ದವಳು ಇಂದು ಅವನ ಮಾತು, ಅವನ ನೀಲುವಿಗೆ ಅಂಜುವಂತಾಗುತ್ತಿತ್ತು.

ಇದೇ ಏನೂ ಮಕ್ಕಳು ಅಂದರೇ?

ಮನೆಯಲ್ಲಿ ಒಂದು ಮೊಲೆಗೆ ನನ್ನನ್ನು ದೂಡಿ ಬಿಟ್ಟರು. ಕೇವಲ ದೊರದಿಂದ ಸಿನಿಮಾ ರೀತಿಯಲ್ಲಿ ಅವರ ಸಂಭ್ರಮವನ್ನು ನೋಡಬೇಕಾಗುತ್ತಿತ್ತು. ಅದರಲ್ಲಿ ನನ್ನ ಪಾತ್ರ ಏನೊಂದು ಇರುತ್ತಿರಲಿಲ್ಲ. ಮೂರು ಹೊತ್ತು ಮೂರು ಊಟ ಮಾತ್ರ ಸಿಗುತ್ತಿತ್ತು. ಬೇರೆ ಬೇಕು ಬೇಡಗಳನ್ನು ಯಾರೊಬ್ಬರೂ ವಿಚಾರಿಸುತ್ತಿರಲಿಲ್ಲ.

ಹಾಗೆಯೇ ಸಂಜೆಯಲ್ಲಿ ಹೊರಗಡೆ ಸುತ್ತಾಡಿಕೊಂಡು ಬರುವಾಗ ಅಕ್ಕ ಪಕ್ಕದವರು ಕೇಳುತ್ತಿದ್ದರು "ಅದೃಷ್ಟವಂತೆ ಚೊಕ್ಕವಾದ ಸಂಸಾರ ಸೊಸೆ, ಮಗ ಮತ್ತು ಮೊಮ್ಮಕ್ಕಳು ಏನೂ ಸಂಭ್ರಮ!" ಆದರೇ ನಾಲ್ಕು ಗೋಡೆಯ ಮಧ್ಯದಲ್ಲಿನ ಸಮಾಚಾರ ಇವರಿಗೇನೂ ಗೊತ್ತೂ ಎಂದು ಮನಸ್ಸಿನಲ್ಲಿಯೇ ನಗುತ್ತಿದ್ದೆ.

ಅನಿಸುತ್ತಿತ್ತು ಇದೇ ಏನು ನಿಜವಾದ ಜೀವನ..?

ವಯಸ್ಸಿರುವಾಗ ನಮಗೆ ನಾವೇ.. ನಾನೇ ಈ ಮನೆಗೆ ಅಧಿಪತಿ ಎಂದುಕೊಳ್ಳುತ್ತಿದ್ದದೂ. ನನ್ನ ದೃಷ್ಟಿ ಇಲ್ಲದೇ ಏನೊಂದು ಅತ್ತ ಇತ್ತಾ ಚಲಿಸದು ಎಂಬ ಭರವಸೆ ಈಗ ಎತ್ತ ಹೋಯಿತು.

ಕೆಲಸಕ್ಕೆ ಬಾರದವಳಾಗಿ ಬದುಕುವುದು ಸತ್ತಂತೆಯೇ ಸರಿ ಅನಿಸುತ್ತಿತ್ತು. ಆದರೂ ನನಗೆ ನನ್ನ ಮಕ್ಕಳು ಮರಿಯ ಮೇಲೆ ಪ್ರಾಣ ಹೋಗುವಷ್ಟು ಪ್ರೀತಿ. ಯಾಕೆಂದರೇ ಅವರುಗಳು ನಾನೇ ನನ್ನ ರಕ್ತವನ್ನು ಕೊಟ್ಟು ಬೆಳೆಸಿದ ಕರುಳಿನ ಕೂಡಿಗಳು ಅಲ್ಲವಾ?

ಆದರೇ ಯಾಕೆ ನಾನು ನನ್ನ ವಯಸ್ಸಿನಲ್ಲಿ ಅವರುಗಳು ಚಿಕ್ಕವರಾಗಿದ್ದಾಗ ಬಸಿದುಕೊಟ್ಟ ಪ್ರೀತಿಯ ಝರಿಯನ್ನು ಎಲ್ಲಿ ಹರಿಯಲು ಬಿಟ್ಟರು?

ಹೀಗೆ ಸಾಗುತ್ತಾ ಸಾಗುತ್ತಾ ಒಂದು ಮೂರು ವರುಷ ಸಾಗಿರಬೇಕು. ನನಗೆ ಅನಿಸುತ್ತಿತ್ತು. ಇನ್ನೂ ಈ ಮನೆಯಲ್ಲಿ ನಾನು ಏನೊಂದು ಕೆಲಸಕ್ಕೂ ಬಾರದ ಒಂದು ವಸ್ತು ಮಾತ್ರ. ಅವರುಗಳಿಗೆ ಅನಿಷ್ಟ ಮತ್ತು ಭಾರವಾದ ಒಂದು ಕಸವೇನೋ...!

ಇದಕ್ಕೆ ಉತ್ತರವೇನೋ ಅನಿಸುವಂತೆ ಅಂದು ಒಂದು ಮುಂಜಾನೆ ನನ್ನ ಮಗ ಮತ್ತು ಸೂಸೆ ಇಬ್ಬರೂ "ನೀನು ಮನೆಯ ಹೊರಗಡೆ ಇರುವ ಮೆಟ್ಟಿಲುಗಳ ಕೆಳಗಡೆ ಕೂರಬಾರದ? ಅಲ್ಲಿಯೇ ಕೂತುಕೊಂಡು ಕಾಲ ಕಳೆಯಬಾರದ? ಅಲ್ಲಿಯೇ ಊಟ ಮಾಡಬಾರದ?" ಈ ರೀತಿಯ ಮಾತುಗಳನ್ನು ನಾನು ಯಾಕಾದರೂ ನನ್ನ ಕಿವಿಗಳಿಂದ ಕೇಳಿಸಿಕೊಳ್ಳುತ್ತಿರುವುವೆನೋ ಎನಿಸಿತು. ಆ ಭಗವಂತನಿಗೆ ಎಷ್ಟು ಭಾರಿ ಬೇಡಿಕೊಂಡಿದ್ದೇನೇನೋ ದೇವಾ ಯಾಕಾದರೂ ಈ ಜೀವವನ್ನು ಇಷ್ಟು ಬೆಸರದಿಂದ ಇಲ್ಲಿಯೇ ಬಿಟ್ಟಿರುವೆಯೆಲ್ಲಾ? ಎಂದು.

ಆ ದೇವರೇನೂ ಅಷ್ಟು ಸುಲಭವಾಗಿ ನರ ಮನುಷ್ಯನ ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳುವನೇ? ಅಂದು ತುಂಬ ನೊಂದು ಒಂದು ಹನಿ ನೀರನ್ನೂ ಬಾಯಿಗೆ ಸೊಂಕಿಸದೇ ಹಾಗೆಯೇ ಅವರು ತೋರಿಸಿದ ಜಾಗದಲ್ಲಿಯೇ ಮಲಗಿದ್ದೆ. ಮುಂಜಾನೇ ಎದ್ದು ನೋಡುತ್ತಿನಿ. ಒಂದೇ ಒಂದು ಬೇಡ್ ಸಿಟ್ ಮಾತ್ರ ಕಾಲಿಂದ ಎದೆಯವರೆಗೆ ಮುಚ್ಚಿತ್ತು!

ತುಂಬ ನೋವಾಯಿತು. ನನ್ನ ಚಿಕ್ಕಂದಿನ ಆ ಎಲ್ಲಾ ಆಟಗಳೆಲ್ಲಾ ನೆನಪಾಯಿತು. ನನ್ನ ಯಜಮಾನರೇ ಅದೃಷ್ಟವಂತರು ಅನಿಸಿತು. ಎಲ್ಲಾ ಮನೆಯಲ್ಲೂ ಇದೆ ರೀತಿನಾ ಎಂದು ನನ್ನನ್ನೇ ನಾನು ಕೇಳಿಕೊಂಡೇ.

ಮನೆಯ ಬಾಗಿಲು ಮುಚ್ಚಿತ್ತು. ಇನ್ನೂ ನನ್ನ ಹೆತ್ತ ಕರುಳುಗಳು ಬೆಚ್ಚನೆಯ ಸುಖವಾದ ನಿದ್ದೆಯಲ್ಲಿರಬೇಕು ಅನಿಸಿತು. ಹಾಗೆಯೇ ಹೊರಗಡೆ ಬಂದೆ. ಹೊಟ್ಟೆಯಲ್ಲಿ ವಿಪರೀತವಾದ ಹಸಿವು. ಒಂದು ದಿನ ಪೂರ್ತಿ ಏನನ್ನು ತಿನ್ನದಿರುವುದು ಅರಿವಿಗೆ ಬಂದಿತ್ತು. ಅವರು ಕೊಟ್ಟಿದ್ದ ಊಟವೆಲ್ಲಾ ಬೀದಿ ನಾಯಿಗಳ ಪಾಲಾಗಿತ್ತು. ಅದಕ್ಕೆ ಸಾಕ್ಷಿಯಾಗಿ ತಟ್ಟೆ, ಲೋಟಗಳು ಬೀದಿಗೆ ಬಂದಿದ್ದವು.

ಹಾಗೆಯೇ ಒಂದು ಸುತ್ತು ಹಾಕಿಕೊಂಡು ಮನೆಗೆ ಬಂದಾಗ.. ನನ್ನ ಸೂಸೆ ಮನೆಯ ಮುಂದೆ ರಂಗೋಲಿಯನ್ನು ಹಾಕುತ್ತಿದ್ದಳು. ಮಗ ಮನೆಯ ಒಳಗೆ ಟಿ.ವಿ ಯಲ್ಲಿ ಏನನ್ನೂ ನೋಡುತ್ತಿದ್ದ. ಮೊಮ್ಮಕ್ಕಳು ಇನ್ನೂ ಹಾಸಿಗೆಯಲ್ಲಿಯೇ ಇರಬೇಕು ಅನಿಸುತ್ತದೆ... ಅಂದಿನಿಂದ ನನ್ನ ವಾಸ್ಥವ್ಯ ಪೂರ್ತಿ ಮನೆಯ ಎಡ ಬದಿಯಲ್ಲಿನ  ಮೆಟ್ಟಿಲುಗಳ ಕೆಳಗಿನ ಆ ಚಿಕ್ಕದಾದ ಮೂರು ಅಡಿ ಜಾಗವಾಯಿತು.

ನಾನು ನನ್ನ ಯಜಮಾನರು ಎಷ್ಟೊಂದು ಕಷ್ಟಪಟ್ಟು ಇದು ನಮ್ಮ ಮಕ್ಕಳಿಗೆ ಒಂದು ಆಸರೆಯಾದ ಮನೆ ಎಂದು ದುಡಿದು ಕಟ್ಟಿಸಿದ ಮನೆ  ಪೂರ್ಣವಾಗಿ ಮಗನಿಗೆ ಇಂದು ಸೇರಿದ್ದಾಗಿತ್ತು.

ಹೀಗೆ ಅದೇಷ್ಟು ಮಳೆ, ಚಳಿಗಾಲದ ರಾತ್ರಿಗಳನ್ನು ಈ ಒಂದು ಹರಿದ ಹಳೆ ದುಪ್ಪಡಿಯಲ್ಲಿ ಕಳೆದಿದ್ದೇನೋ ಆ ದೇವರಿಗೆ ಇನ್ನೂ ಕರುಣೆಯೇ ಬಂದಿಲ್ಲಾ!!

ಆದರೂ ನನಗೆ ಏನೋ ನನ್ನ ಕರಳು ಬಳ್ಳಿಗಳ ಮೇಲೆ ಬೇಸರವಿಲ್ಲ. ಇದೇ ನಿಜವಾದ ಪಕೃತಿ ಧರ್ಮವಾಗಿರಬೇಕು. ಅಕ್ಕ ಪಕ್ಕದವರು ಗಮನಿಸುವವರೇನೋ? ಏನೇನೂ ತಮ್ಮ ತಮ್ಮಲ್ಲಿಯೇ ಮಾತನಾಡಿಕೊಂಡಿರುವವರೇನೋ?

ಇದನ್ನೆಲ್ಲಾ ಯಾಕೆ ನಾನು ಯೋಚಿಸಲಿ.

ಆದರೆ ನನಗೆ ಒಂದೇ ಒಂದು ಆಸೆ ಆ ದೇವರು ನನ್ನ ಜೀವಗಳನ್ನು ಚೆನ್ನಾಗಿ ಇಟ್ಟಿರಲಿ. ಆದಷ್ಟು ಬೇಗ ನನ್ನನ್ನು ಅವನ ಬಳಿ ಕರೆದುಕೊಂಡು ಹೋಗಲಿ.

ತಾಯಿಯನ್ನು ಕ್ಷಮಯಾಧರಿತ್ರಿ. ಭೂಮಿಯೇ ಹೆತ್ತ ತಾಯಿ ಇತ್ಯಾದಿಯಲ್ಲಿ ಸಂಭೋದಿಸುವುದು ನನ್ನಂತಹ ಅನಕ್ಷರಸ್ಥೆಗೆ ಅದು ಹೇಗೆ ತಿಳಿಯುವುದು. ಆದರೂ ವಯಸ್ಸಾದ ತಂದೆ ತಾಯಿಗಳಿಗೆ ಇದಕ್ಕಿಂತ ಹೆಚ್ಚು ಕಮ್ಮಿಯಾದ ಅನುಭವಗಳು ಎಲ್ಲಾ ಕಡೆಯಲ್ಲೂ ಸಮನಾಗಿಯೇ ಆಗಿರಬೇಕು ಅನಿಸುತ್ತದೆ.

ಇಂದಿನವರಿಗೆ ನಮ್ಮಂತಹ ಹಳಬರು ವಯಸ್ಸಾದವರೂ ಒಂದು ಹೊರೆ ಮಾತ್ರ ಅನಿಸುತ್ತದೆ. ನಾವು ಅವರನ್ನು ಪ್ರೀತಿಸಿದಷ್ಟು ಅವರುಗಳು ನಮ್ಮನ್ನು ಪ್ರೀತಿಸಲಾರರು.


ಇದು ಒಂದು ಚಕ್ರ ಮಾತ್ರ ಇಂದು ನಾನು ಮುಂದೆ ನನ್ನ ಮಗ ಮತ್ತು ನನ್ನ ಸೂಸೆಯೇನೋ?

ಭಾನುವಾರ, ಜುಲೈ 8, 2012

ಎಷ್ಟು ಕಷ್ಟವೋ ಹೊಂದಾಣಿಕೆ


ಹೊಂದಾಣಿಕೆಯೇ ಬದುಕು ಎಂಬುವುದನ್ನು ನಾವೆಲ್ಲಾ ಯಾಕೆ ಮನನ ಮಾಡಿಕೊಳ್ಳುವುದಿಲ್ಲವೋ?

ಮನುಷ್ಯ ಸಂಘ ಜೀವಿ. ಒಂಟಿಯಾಗಿ ಬದುಕುವುದು ದುಸ್ತರ.

ನೀನೇ ನೀನು ಏಕಾಂಗಿಯಾಗಿ ಯಾರ ಹಂಗು ಮತ್ತು ಸಂಬಂಧವಿಲ್ಲದೆ ಬದುಕುವುದು ಎಷ್ಟು ಕಷ್ಟ ಎಂಬುದು ಬೇರೆಯಾಗಿ ಏಕಾಂಗಿಯಾಗಿ ಹೋಗಿ ತಮ್ಮ ತಮ್ಮ ಬದುಕು ಕಟ್ಟಿಕೊಂಡವರಿಗೆ ಮಾತ್ರ ಗೊತ್ತು.

ನಾವುಗಳು ನಾವೆಯಾಗಿ ದುತ್ತನೆ ಈ ಭೂಮಿಗೆ ಬೀಳುವುದಿಲ್ಲ!

ಕುಟುಂಬ ವ್ಯವಸ್ಥೆಯಲ್ಲಿ ಹೆತ್ತವರು, ಸಾಕಿದವರು ಮುಂತಾದ ಹಲವು ಜೀವಿಗಳ ಪೋಷಣೆಯ ಪ್ರತಿ ಫಲವೇ ಈ ನಮ್ಮ ಯೋಚನೆಯನ್ನು ಮಾಡುವ ದೇಹ ಮತ್ತು ಮನಸ್ಸು.

ಯೋಚಿಸಿ ಹುಟ್ಟಿದ ತಕ್ಷಣ ಎಲ್ಲೋ ಒಂದು ಕಡೆ ಒಂಟಿಯಾಗಿ ನಮ್ಮನ್ನು ಬಿಟ್ಟಿದ್ದರೇ ಈಗ ಇರುವ ಈ ನಮ್ಮ ಸ್ಥಿತಿ ಆರೋಗ್ಯಕರವಾಗಿರುತ್ತಿತ್ತೇ?

ಸಾಧ್ಯವಿಲ್ಲ ಅಲ್ಲವಾ?

ಈ ರೀತಿಯಾಗಿ ಬದುಕು ಇರಬೇಕಾದರೇ ನಾವುಗಳು ಏಕೆ ಪ್ರತಿಯೊಂದು ಸಮಯದಲ್ಲೂ ಅಯ್ಯೋ ಯಾರೋ ನನ್ನ ಸ್ವತಂತ್ರ ಹರಣ ಮಾಡಿಬಿಟ್ಟರೂ.. ಅಯ್ಯೋ ಯಾರೋ ನನ್ನ ಭಾವನೆಗೆ ಬೆಲೆಯನ್ನೇ ಕೊಡಲಿಲ್ಲಾ.. ಅಯ್ಯೋ ಯಾವಾಗಲೂ ಎಲ್ಲಾರ ಜೊತೆಯಲ್ಲೂ ಅನುಸರಿಸಿಕೊಂಡೇ ಈ ನನ್ನ ಜೀವನವನ್ನು ಕಳೆದುಕೊಂಡು ಬಿಟ್ಟೆ.. ಎಂಬ ಈ ಕೂರಗು ದ್ವನಿಗಳು ಏಕೆ?

ಯಾಕೆ "ಎಲ್ಲಾರ ಜೊತೆಯಲ್ಲಿ ಕೊಡಿ ಬಾಳಿದರೇ ಅದೇ ಸ್ವರ್ಗ ಸುಖ!" ಎಂದು ಅಂದುಕೊಳ್ಳುವುದಿಲ್ಲ. ಪ್ರತಿಯೊಂದನ್ನೂ ಋಣಾತ್ಮಕವಾಗಿ ಮನಸ್ಸಿಗೆ ತೆಗೆದುಕೊಂಡು ನೋಯಿವುದೂ ಏಕೆ?

ಚಿಂತಿಸಿ ಹುಟ್ಟಿದ ದಿನದಿಂದ ಒಬ್ಬರಲ್ಲಾ ಒಬ್ಬರ ಜೊತೆಯಲ್ಲಿ ನಮ್ಮ ಈ ಪಯಣವನ್ನು ಕೊಡಿಕೊಂಡು ಸಾಗಿಸುತ್ತಿದ್ದೇವೆ. ಹೆತ್ತವರು, ಅಣ್ಣ, ತಂಗಿ, ಶಾಲೆಯಲ್ಲಿ ಗೆಳೆಯರು, ಕಾಲೇಜಿನಲ್ಲಿ ಗೆಳತಿಯರು, ಕೆಲಸ ಮಾಡುವ ಜಾಗದಲ್ಲಿ ಉದ್ಯೋಗಿ ಸ್ನೇಹಿತರು. ಪ್ರತಿಯೊಂದು ಕ್ಷಣವು ಇನ್ನೊಬ್ಬರ ಜೊತೆಯಲ್ಲಿಯೇ ಸರಿಯಾದ ಹೆಜ್ಜೆಯನ್ನು ಹಾಕುವ ಪಾಡಾಗಿದೆ.

ಹೀಗೆ ಇರುವಾಗ, ಪುನಃ ಇಲ್ಲಾ ಈ ರೀತಿಯ ನನ್ನ ಮನೋಸ್ಥಿತಿಯಿಂದ ನಾನು ಏನನ್ನು ಸಾಧಿಸಲೂ ಸಾಧ್ಯವಾಗಲಿಲ್ಲ. ಬರೀ ಅವರು ಇವರಿಗಾಗಿ ಕಾಂಪ್ರಮೈಸ್ ಆಗುವುದೇ ನನ್ನ ಜೀವನವಾಯಿತು. ಎಂದು ಮನಸ್ಸಿನಲ್ಲಿ ಅಂದುಕೊಳ್ಳುವುದು ಎಷ್ಟು ಸರಿ?

ಪ್ರತಿಯೊಬ್ಬರಿಗೂ ತನ್ನ ಮನದ ದುಃಖ-ಸುಖದ ಭಾವನೆ, ಅನಿಸಿಕೆಗಳನ್ನು ವ್ಯಕ್ತಪಡಿಸಲು ತನ್ನ ಜೀವವಲ್ಲದೇ ಇನ್ನೊಂದು (ಸ)ಜೀವದ ಅವಶ್ಯಕತೆಯಿದೆ.

ಇಲ್ಲವಾದರೇ ಉಫ್ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಷ್ಟೊಂದು ಮನಸ್ಸಿನ ತುಮುಲಗಳನ್ನು ನಮ್ಮ ನಮ್ಮಲ್ಲಿಯೇ ಇಟ್ಟುಕೊಂಡು ಯಾವ ಅಣು ಬಾಂಬಿಗಿಂತಲೂ ಮಿಗಿಲಾದ ಅತಿ ದೊಡ್ಡ ಒತ್ತಡದ ಬಾಂಬ್ ಈ ನಮ್ಮ ಮಿದುಳು ಆಗುತ್ತಿತ್ತೇನೋ.

ಈ ರೀತಿಯ ಒಂದು ಯೋಚನೆ ಚಿಕ್ಕವರದಾಗಿದ್ದಾಗ ಬರುತ್ತಿರಲಿಲ್ಲ. ಒಂದಷ್ಟು ವಿವೇಕವನ್ನು ಕಲಿತ ಮೇಲೆ, ಪ್ರತಿಯೊಬ್ಬರ ಬಗ್ಗೆ ಪರಾಮರ್ಶೆ ಮಾಡುವ ಚೈತನ್ಯ ಬಂದ ಮೇಲೆ, ನಮ್ಮ ಮನಸ್ಸು ವಾರದ ಸಂತೆಯಾಗಿಬಿಟ್ಟಿದೆ. ಎಲ್ಲದನ್ನೂ,ಎಲ್ಲರನ್ನೂ ನೂರಾರು ದಿಕ್ಕಿನಲ್ಲಿ ಪರೀಕ್ಷೆ ಮಾಡಿ ಮಾಡಿ ಬರೀ ಗೊಂದಲಗಳ ಗೂಡು ಮಾಡಿಕೊಂಡು ಸಂತೋಷ ಎಂಬುದು ಇಲ್ಲೇ ಇಲ್ಲಾ ಬಿಡಿ! ಎಲ್ಲಾದರೂ ದೂರ ಒಂಟಿಯಾಗಿ ಬಾಳಬೇಕು. ಏನೂ ಬರೀ ಜೀವನದಲ್ಲಿ ಬೇರೆಯವರಿಗಾಗಿಯೇ ಬದುಕುವಂತಾಯಿತು.

ಅಪ್ಪ, ಅಮ್ಮ, ಗಂಡ, ಹೆಂಡತಿ, ಸ್ನೇಹಿತರು, ಮಕ್ಕಳು, ಆಫೀಸ್ ನವರು, ನೆರೆಹೊರೆಯವರು.. ಯಾರು ನಮ್ಮನ್ನು ನೆಮ್ಮದಿಯಾಗಿ ಇರಲು ಬಿಡುವುದಿಲ್ಲ ಬಿಡಿ. ಅಂತ ಅನಿಸುವುದಕ್ಕೆ ಪ್ರಾರಂಭಿಸುತ್ತಿವಲ್ಲಾ ಯಾಕೆ?

ಇರುವುದನ್ನು ಬಿಟ್ಟು ಇಲ್ಲದೇ ಇರುವುದನ್ನು ಕಾಣುವುದೇ ಬದುಕಾ?

ಪ್ರತಿಯೊಂದು ಒಂದಷ್ಟು ದಿನಗಳಾದ ಮೇಲೆ ಬೋರ್ ಅಂತ ಅನಿಸಿಬಿಡುತ್ತಲ್ಲಾ?

ನಮಗೆಲ್ಲಾರಿಗೂ ಗೊತ್ತೂ ಒಂಟಿತನವು ಒಂದು ದಿನ ಮಹಾ ಜುಗುಪ್ಸೆಯಾಗಿ ಕಾಡುತ್ತದೆ. ಆದರೆ ಅದನ್ನು ಇಂದು ಯಾರೂ ಯೋಚಿಸುತ್ತಾರೆ? ಇರುವ ಈ ನಮ್ಮತನವನ್ನು ಕಳಚಿಕೊಳ್ಳುವುದೇ ನಮ್ಮ ಹೋರಾಟವಾಗಿರುತ್ತದೆ.ಕಾಣದ ಕಡಲಿಗೆ ಹಂಬಲಿಸುವುದೇ ನಮ್ಮ ಮನಸ್ಸಾಗಿರುತ್ತದೆ.

ಹೊಸಬರುಗಳು ಯಾರಾದರೂ ನಮ್ಮ ಬದುಕಿಗೆ ಪಾದಾರ್ಪಣೆ ಮಾಡಿದರೇ ಮುಗಿದೇ ಹೋಯಿತು. ಏನಂದರೂ ಅವರನ್ನು ನಾವುಗಳು ನಮ್ಮವರನ್ನಾಗಿ ಕಾಣಲಾರೆವು. ಕೊನೆಯತನಕ ಅವರು ಪರಕೀಯರೇ ಎಂಬ ರೀತಿಯಲ್ಲಿ ಕಾಣುತ್ತೇವೆ. ಇದು ಪ್ರತಿಯೊಬ್ಬರು ಪರಸ್ಪರವಾಗಿ ಕಾಣುವ ಮನೋಸ್ಥಿತಿ.

ನಾನು ಯಾಕೆ ಅವನಿಗಾಗಿ/ಅವಳಿಗಾಗಿ ಬದಲಾಗಬೇಕು. ನಾನು ಏಕೆ ತಗ್ಗಿ ಬಗ್ಗಿ ನಡೆಯಬೇಕು. ನಾನು ಇರುವುದೇ ಹೀಗೆ. ಅವನೇ/ಳೇ ಬದಲಾಗಲಿ. ಎಂಬ ದೋರಣೆಯನ್ನು ಪ್ರತಿಯೊಬ್ಬರೂ ಘರ್ಷಣೆಯ ರೂಪದಲ್ಲಿ ನಿತ್ಯ ನಮ್ಮ ಹತ್ತಿರದವರೊಂದಿಗೆ ನಮ್ಮ ಮನಸ್ಸಿನಲ್ಲಿಯೇ ಪ್ರತಿಭಟಿಸುತ್ತಿರುತ್ತೇವೆ. ಎದುರು ಬದುರು ಬಂದಾಗ ಮಾತ್ರ ಕೃತಕ ನಗೆ,ಮಾತು,ಅನುಕಂಪ ಪ್ರತಿಯೊಂದನ್ನು ಕೊಡುವ ನಾವು ಮನಸ್ಸಿನಲ್ಲಿಯೆ ಪರಸ್ಪರ ಕತ್ತಿ ಮಸೆಯುತ್ತಿರುತ್ತೇವೆ!

ಇದು ಯಾರಾದರೂ ಇರಬಹುದು. ನಮ್ಮ ನಮ್ಮ ಬದುಕಿಗೆ ಬಂದಂತಹ ಸ್ನೇಹಿತರು,ಸಂಗಾತಿ,ಅತ್ತೆ,ಸೂಸೆ ಹೀಗೆ ಹೊಸದಾಗಿ ಸೇರಿಕೊಂಡ ಎಲ್ಲಾರನ್ನು ಪರಸ್ಪರ ಕಾಣುವುದು ಅದೇ ಪವರ್ ಫುಲ್ ಅಟ್ಯಾಕ್ ಮೂಡ್ ನಲ್ಲಿ.

ಇದು ಬದಲಾಗುವುದೇ ಇಲ್ಲವಾ?

ಆಗದೇ ಏನೂ ಇದಕ್ಕೆ ಒಂದು ಸುಂದರ ಅನುಸರಿಸಿಕೊಂಡು ಹೋಗುವ ಮನೋಸ್ಥಿತಿ ಪ್ರತಿಯೊಬ್ಬರಲ್ಲೂ ಹುಟ್ಟಬೇಕು. ನಮ್ಮನ್ನು ನಾವುಗಳು ಕಡೆಗಣಿಸಿಕೊಳ್ಳದೇ ಜೊತೆಯಲ್ಲಿರುವವರ ಬಗ್ಗೆ ಗೌರವವನ್ನು, ಅವರ ಅಭಿರುಚಿಗಳು, ವರ್ತನೆಯನ್ನು ನಮ್ಮ ನೆರದಲ್ಲಿ ನೋಡುವ ಬದಲು ಅವರ ಸ್ಥಳದಲ್ಲಿ ನಿಂತು ನೋಡುವುದನ್ನು ಕಲಿಯಬೇಕು.

ನಮ್ಮದೇ ದೇಹದ ನಮ್ಮ ಕೈ ಕಾಲುಗಳ ಬೆರಳುಗಳೇ ಅಸಮಾನವಾಗಿರುವಾಗ. ನಾನು ಇದ್ದ ರೀತಿಯಲ್ಲಿಯೇ, ನಾನು ಚಿಂತಿಸುವ ರೀತಿಯಲ್ಲಿ, ನಾನು ಮಾಡುವ ರೀತಿಯಲ್ಲಿ ಬೇರೆಯವರು ಎಂದೆಂದಿಗೂ ಇರಲಿ ಎಂದುಕೊಳ್ಳುವುದು ಶತ ಮೂರ್ಖತನ!

ಈ ರೀತಿಯ ಮನೋದೋರಣೆಯನ್ನು ಬಿಟ್ಟು ಪ್ರೀತಿಯಿಂದ ಆ ಜೀವವು ನನ್ನ ರೀತಿಯಲ್ಲಿಯೇ ವೈವಿಧ್ಯಮಯಾಗಿರುವುದು. ಎಂದುಕೊಂಡರೇ ಎಷ್ಟೋ ನಿತ್ಯ ಕೌಟಂಬಿಕ ಜಗಳಗಳು, ವಿರೋಧಭಾಸಗಳು ಇಲ್ಲದೇ ನೆಮ್ಮದಿಯ ಸುಖ ತಾಣಗಳಾಗುವುದರಲ್ಲಿ ನಿಸಂಶಯವಿಲ್ಲ.

ಏನಂತೀರಾ?

ಗುರುವಾರ, ಜುಲೈ 5, 2012

ದೇವ ಕಣದ ಲೀಲೆ!


ಬಹಳ ದಿನಗಳಿಂದ ನಮ್ಮ ಎಲ್ಲಾ ಮನುಕುಲದ ತಲೆಯಲ್ಲಿ ಕೊರೆಯುತ್ತಿದ್ದ ಒಂದು ಪ್ರಶ್ನೆಗೆ ಉತ್ತರ ಸ್ವಲ್ಪ ಸಿಕ್ಕಿದಂತಾಗಿದೆ.

ಈ ವಿಶ್ವ ಹೇಗೆ ರಚನೆಯಾಯಿತು. ಮೊದಲು ಯಾರು ಭೂಮಿಗೆ ಬಂದರು? ಈ ಪರ್ವತ, ನೀರು, ಪರಿಸರ, ಪ್ರಾಣಿ ಪಕ್ಷಿ, ಸುಂದರವಾದ ವಾತವರಣದ ಕತೃ ಯಾರು? ಎಂಬ ಬಿಡಿಸಲಾರದ ಜಿಙ್ಞಾಸೆಗೆ ನಮ್ಮ ವಿಙ್ಞಾನಿಗಳು ಹಲವಾರು ವರುಷಗಳ ಪ್ರಯೋಗದ ಮೊಲಕ ಇಂದು ಉತ್ತರವನ್ನು ಕಂಡು ಕೊಂಡಿದ್ದಾರೆ.

ಹೌದು. ನಮ್ಮ ನಮ್ಮ ಪಠ್ಯದಲ್ಲಿ ನಾವು ಓದಿದಂತಹ ಬಿಗ್ ಬ್ಯಾಂಗ ಥೇಯರಿಯ ಪ್ರಕಾರ ಒಂದು ಅಟಾಂ ಬಾಂಬ್ ರೀತಿಯಲ್ಲಿ ಮಹಾ ಸ್ಪೋಟದಿಂದ ಈ ವಿಶ್ವವು ಸೃಷ್ಟಿಯಾಯಿತು. ಆ ಸಮಯದಲ್ಲಿ ಈ ಭೂಮಿ ಹಲವು ಖಂಡಗಳು, ಪರಿಸರ ಸೃಷ್ಟಿಯಾಯಿತು. ಹಾಗೆಯೇ ಸಾವಿರಾರು ಗ್ರಹಗಳು, ಕೋಟ್ಯಾನುಕೋಟಿ ನಕ್ಷತ್ರಗಳು, ಆಕಾಶ ಕಾಯಗಳು ಅವತರಿಸಿದವು. ಜೀವ ಜಲವು ಸೃಷ್ಟಿಯಾಯಿತು. ಅಲ್ಲಿ ಏಕ ಕಣ ಜೀವಿಯಿಂದ ಕೋಟ್ಯಾಂತರ ವರುಷಗಳ ಮಾರ್ಪಟಿನಿಂದ ಈ ರೀತಿಯ ಬುದ್ಧಿವಂತ ಮಾನವನ ಉಗಮವಾಯಿತು.

ಈ ವಿಷಯವನ್ನು ಓದಿದರೂ ಸಹ ಪುನಃ ನಮ್ಮ ತಲೆಯಲ್ಲಿ, ಅದು ಹೋಗಲಿ ಎಲ್ಲಿಂದ ಹೇಗೆ ಈ ರೀತಿಯ ಜೀವ ಹುಟ್ಟಿತು? ಎಂದು ನಮ್ಮ ಮನುಕುಲದ ತಲೆಯನ್ನು ನಿತ್ಯ ತಿನ್ನುತ್ತಿತ್ತು.

ಈಗ ಇದಕ್ಕೆಲ್ಲಾ ಉತ್ತರವಾಗಿ. ದೇವಕಣ ಎಂಬ ಒಂದು ಗಾಡ್ ಪಾರ್ಟಿಕಲ್ ನಿಂದ ಜೀವ ಜಗತ್ತು ಸೃಷ್ಟಿಯಾಯಿತು!

ನಿರಂತರ ಐದು ದಶಕಗಳ ಸಂಶೋಧನೆಯ ಬಳಿಕ ಪ್ರಾನ್ಸ್ ಸ್ವಿಜರ್ಲೆಂಡ್ ನಡುವಿನ ಭೂ ಅಳದಲ್ಲಿ ನಿರ್ಮಿಸಿರುವ ಪ್ರಯೋಗಾಲಯದಿಂದ "ಹಿಗ್ಸ್ ಬೋಸನ್" ಕಣವನ್ನು ವಿಙ್ಞಾನಿಗಳು ಪತ್ತೆ ಹಚ್ಚಿದ್ದಾರೆ.


ಇದನ್ನು ಕಂಡು ನಾವೆಲ್ಲಾ ನಂಬಿರುವ ನಮ್ಮ ದೇವರು ಸಹ ಒಂದು ಅಚ್ಚರಿಯ ಕಿರುನಗೆಯನ್ನು ಚಿಮ್ಮಿದ್ದರೇ ಆಶ್ಚರ್ಯವಿಲ್ಲ!

ಇದೊಂತು ತುಂಬ ಅಚ್ಚರಿಯ ವಿಷಯವಾಗಿದೆ. ನಮ್ಮ ಭಾರತವು ಸಹ ಈ ಪ್ರಯೋಗದ ಪಲಿತಾಂಶಕ್ಕೆ ದುಪ್ಪಟ್ಟು ಸಂತೋಷಪಡುವಂತಾಗಿದೆ. ಯಾಕೆಂದರೇ ಈ ಪ್ರಯೋಗದಲ್ಲಿ ಪಾಲ್ಗೊಂಡ ಬಹುತೇಕ ವಿಙ್ಞಾನಿಗಳು ಭಾರತದ ಮೊಲದವರು. ಹಾಗೆಯೇ ಇದರ ಮರ್ಮವನ್ನು ಬಹು ದಿನಗಳ ಹಿಂದೆಯೇ ಸತ್ಯೇಂದ್ರನಾಥ್ ಬೋಸ್ ರವರು ಪ್ರತಿಪಾಧಿಸಿದ್ದರು. ಅವರ ನಿಲುವನ್ನು ಪುಷ್ಟೀಕರಿಸುವ ರೀತಿಯಲ್ಲಿ ಈ ದೇವ ಕಣ ಪತ್ತೆಯಾಗಿದೆ. ದೇವ ಕಣಕ್ಕೆ "ಹಿಗ್ ಬೋಸ್" ಎಂದು ಹಿಗ್ ಥೇಯರಿ ಹೆಸರಿನ ಜೊತೆಯಲ್ಲಿ ಬೋಸ್ ಅವರ ಹೆಸರನ್ನು ಸೇರಿಸಿ ಇಡಿ ಪ್ರಪಂಚಕ್ಕೆ ಪರಿಚಯಿಸಿರುವುದು ನಮಗೆಲ್ಲಾ ಹೆಮ್ಮೆಯ ವಿಚಾರ.

ಇದು ನಿರಂತರವಾಗಿ ನಿತ್ಯ ನಮ್ಮ ಪ್ರಪಂಚದ ವಿಷಯಗಳನ್ನು ತಿಳಿದುಕೊಳ್ಳುವವ ವಿಙ್ಞಾನಿ ಸಮೊಹಕ್ಕೆ ಸಿಕ್ಕ ದೊಡ್ಡ ಜಯ.

ಒಂದು ಜೀವದ ಉಗಮ ಯಾವ ರೀತಿಯಲ್ಲಿ ಆಗಿರಬಹುದು ಎಂಬ ಸತ್ಯದ ಅನಾವರಣವನ್ನು ಮಾಡಿದ್ದಾರೆ ಎಂದರೇ.. ನಮ್ಮ ಬುದ್ಧಿವಂತ ಮನುಕುಲದ ಚಿಂತನೆ, ಜಾಣ್ಮೆಗೆ ಯಾವ ರೀತಿಯಲ್ಲಿ ವಂದನೆಗಳನ್ನು ಹೇಳಬೇಕೋ ತಿಳಿಯದಾಗಿದೆ.

ಇದು ಒಂದು ಮೈಲುಗಲ್ಲಾಗಿ ಮನುಕುಲದ ಏಳ್ಗೆಗೆ ಸಹಕಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಈ ಒಂದು ಪಲಿತಾಂಶ ಜಗತ್ತಿನಲ್ಲಿರುವ ನೂರಾರು ಸಿದ್ಧಾಂತಗಳನ್ನು ಪುನರ್ ಪರಿಶೀಲನೆಯನ್ನು ಮಾಡುವಂತೆ ಮಾಡಿದರೂ ಅತಿಶಯೋಕ್ತಿಯಲ್ಲಾ..

ನಾವುಗಳು ನೋಡಿದ ಇಂಗ್ಲಿಷ್ ಚಿತ್ರಗಳಲ್ಲಿ ತೋರಿಸಿದಂತ ಕಲ್ಪನೆಯ ಚಿತ್ರಗಳು ನಿಜ ರೂಪ ಪಡೆಯುತ್ತಿರುವುದು ನಮ್ಮ ಮಾನವ ಕುಲದ ವೇಗಕ್ಕೆ ಸಾಕ್ಷಿ.

ಈ ರೀತಿಯ ಸತ್ಯದ ಅನ್ವೇಷಣೆ ನಮ್ಮ ಮಾನವ ಜನಾಂಗ ಮತ್ತು ನಮ್ಮ ಸುಂದರ ಭೂ ವಾತವರಣದ ಸಂರಕ್ಷಣೆಗೆ ಕಾಣಿಕೆಯಾಗಬೇಕು.

ಮುಂದೆ ಬರುವಂತಹ ಯುವ ಜನಾಂಗಕ್ಕೆ ಒಂದು ಹೊಸ ಪಥವನ್ನು ಹಾಕಿಕೊಡುವಂತಾಗಬೇಕು. ವೈಙ್ಞಾನಿಕವಾಗಿ ನಡೆಯುತ್ತಿರುವ ಹೊಸ ಹೊಸ ಅವಿಷ್ಕಾರಗಳಿಗೆ ಸ್ಪೂರ್ತಿಯಾಗಬೇಕು.

ಈ ಮೊಲಕ ಇಡೀ ಸಮಾಜ ತಮ್ಮ ಪ್ರಮುಖ್ಯತೆಯನ್ನು ಅರಿತು ಸಹ ಬಾಳ್ವೆಯಾಗಿ ಬಾಳುವ ಕನಸು ನನಸಾಗಬೇಕು.

ಯಾವುದೇ ಸಂಶೋಧನೆ, ಪರಿಶೋಧನೆ ನಮ್ಮೆಲ್ಲಾರ ಶಾಂತಿ ಮತ್ತು ರಕ್ಷಣೆಯ ಬಾಳ್ವೆಗಾಗಿ ಅಲ್ಲವಾ?

ಇನ್ನೂ ನಮ್ಮ ಹುಟ್ಟು ಸಾವಿನ ಎರಡು ದಡಗಳ ಯಕ್ಷ ಪ್ರಶ್ನೆಗಳನ್ನು ಬೇದಿಸುವ ಸಮಯವು ಬಂದರೂ ಅಚ್ಚರಿಯಿಲ್ಲಾ? ಅಲ್ಲವಾ?