ಮಂಗಳವಾರ, ಮೇ 22, 2012

ಸೌಂದರ್ಯ ವಿಮಾಂಸೆ!

ಅಲಂಕಾರದ ಬಗ್ಗೆ ಪ್ರತಿಯೊಬ್ಬ ಮನುಷ್ಯನಿಗೂ ಅವನದೇಯಾದ ಕಲ್ಪನೆ ಮತ್ತು ನಂಬಿಕೆಯಿರುತ್ತದೆ. ಅವನು ಅವನಿಗೆ ತಾನು ಅತಿ ಸುಂದರ ಮತ್ತು ಲಕ್ಷಣವಂತ/ತೆ ಎಂದು ಭಾವಿಸಿಕೊಳ್ಳುತ್ತಾರೆ.



ಕನ್ನಡಿಯ ಮುಂದೆ ನಿಂತರೇ ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ. ಎಷ್ಟೆ ತಿದ್ದಿ ತೀಡಿದರೂ ಕೊನೆಗೂ ತೃಪ್ತಿಯಿರದೇ ಕನ್ನಡಿಯಿಂದ ನಿರ್ಗಮಿಸಬೇಕಾಗುತ್ತದೆ. ಅದರಲ್ಲೂ ಸ್ತ್ರೀಯರಿಗೆ ಕನ್ನಡಿಯೇ ನಿತ್ಯ ಸಂಗಾತಿ. ಅತ್ಯಂತ ಹೆಚ್ಚಾಗಿ ಬೇರೆಯವರನ್ನೂ ನಂಬುವುದಕ್ಕಿಂತ ಅದರಲ್ಲಿ ಹೇಳಲಾರದಂತಹ ನಂಬಿಕೆ!


ಈ ಅಲಂಕಾರ, ಸೌಂದರ್ಯ ನಮ್ಮ ನಮ್ಮ ಬಾಲ್ಯದಿಂದಲೇ ಪ್ರಾರಂಭವಾಗಿಬಿಡುತ್ತದೆ. ನಮ್ಮ ಮನೆಯಲ್ಲಿ, ಸುತ್ತಲಿನವರಿಂದ ಆಹಾ! ಏನೂ ಸುಂದರವಾಗಿ ಕಾಣುತ್ತಿದೆಯಲ್ಲಾ ಈ ಮಗು, ಎಷ್ಟೊಂದು ಕ್ಯೂಟ್, ಸಕತ್ ಮುಗ್ಧವಾಗಿದ್ದಾಳೆ/ನೆ ಎಂದು ಶುರುವಾಗಿಬಿಡುತ್ತದೆ.


ಇನ್ನೂ ಹರೆಯಕ್ಕೆ ಕಾಲಿಟ್ಟರೆ ಮುಗಿಯಿತು. ತಾನುಂಟು ಮತ್ತು ಜಗತ್ತು ಉಂಟು ಎಂಬಂತೆ.


ತಾನೂ ಹೆಚ್ಚು ಸುಂದರಾಗಿ ಕಾಣುತ್ತಾನೆ ಮತ್ತು ತಾನು ಕಾಣುವ ಪ್ರತಿಯೊಬ್ಬರೂ ಸುಂದರವಾಗಿ ತನಗೆ ಕಾಣುತ್ತಾರೆ.


ಪ್ರತಿಯೊಬ್ಬರೂ ತನ್ನ ಮುಖವನ್ನೂ ದಿನಕ್ಕೆ ಇಪ್ಪತೈದಕ್ಕೂ ಹೆಚ್ಚು ಭಾರಿ ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಕೊಳ್ಳುತ್ತಾ ತನ್ನಲ್ಲಿಯೇ ಪ್ರಶಂಸಿಕೊಳ್ಳೂತ್ತಾನೆ/ಳೆ. ಏನೂ ಚೆಂದ ಇದ್ದೇನೆ. ಬಣ್ಣನೂ ಅಷ್ಟೆ. ಕೂದಲು ಸಹ ನೆರಳೆ ಬಣ್ಣದಷ್ಟು ಕಪ್ಪು. ಕೆನ್ನೆಯೇನೂ ಕೆಂದಾವರೆಯಾಗಿದೆ.ಹಲ್ಲುಗಳು ದಾಳಿಂಬೆಯಾಗಿದೆ ಎಂದುಕೊಳ್ಳುತ್ತಾ ಮೆರೆದುಬಿಡುತ್ತಾರೆ.


ಅದು ನಿಜವೇ ಹರೆಯದಲ್ಲಿ ವ್ಯಕ್ತಿ ಎಂದು ಕಾಣದಷ್ಟು ಸುಂದರವಾಗಿ ಒಂದಾರು ವರುಷ ನೋಡುವವರಿಗೆ ಕಾಣುತ್ತಾರೆ. ಅದು ಪ್ರಕೃತಿಯ ಮಹಿಮೆ. ನೀವು ಗಮನಿಸರಬಹುದು. ಪ್ರತಿಯೊಂದು ಪ್ರಾಣಿಯು ತನ್ನ ಚಿಕ್ಕ ಹರೆಯದಲ್ಲಿ ಅತಿ ಸುಂದರವಾಗಿ ಕಾಣುತ್ತದೆ! ನಿಜವೇ?


ಇಲ್ಲಿಂದ ಶುರು ನೋಡಿ. ಪ್ರತಿಯೊಬ್ಬರಿಗೂ ಈ ದಿನಗಳಲ್ಲಿ ಕಾಣುವ ಸೌಂದರ್ಯವನ್ನು ದೀರ್ಘಕಾಲ ಹಾಗೆಯೇ ಪ್ರೀಜ್ ನಲ್ಲಿ ಇಡುವಂತೆ ಇಟ್ಟುಕೊಳ್ಳಬೇಕು.ಒಂದು ಚೂರು ಅದಕ್ಕೆ ಮುಕ್ಕಾಗಬಾರದು. ಯಾವುದೇ ವಯಸ್ಸಿನ ಮೀತಿಯಿಲ್ಲದೇ. ಎಂಬ ಹಂಬಲದ ಹುಳು ಮನಸ್ಸಿನಲ್ಲಿ ಬಿಟ್ಟುಕೊಂಡುಬಿಡುತ್ತಾರೆ.


ಆಗಿನಿಂದಲೇ ಪ್ರಾರಂಭ. ನಮ್ಮಲ್ಲೋ ನಿತ್ಯ ಹತ್ತು ಹಲವು ಕಾಸ್ಮಟಿಕ್, ಯೋಗ, ಜಿಮ್, ಔಷದಿಗಳ ಭರ್ಜರಿ ವ್ಯಾಪಾರ. ಇವುಗಳ ಗುಣಗಾನ ನಿತ್ಯ ನಾವು ನೋಡುವ ನಮ್ಮ ಮನೆಯಲ್ಲಿರುವ ಮಾಯಾ ಪೆಟ್ಟಿಗೆಯಲ್ಲಿ ಬರುತ್ತದೆ. ಅಲ್ಲಿಯೋ ಸುರಸುಂದರಾಂಗನೆಯರ ಮಾತು, ನಗು ಈ ಎಲ್ಲಾ ವ್ಯಾಪಾರಿ ವಸ್ತುಗಳ ಜೊತೆಯಲ್ಲಿ. ನಮಗೋ ಅದು ಹೇಗೆ ಈ ನಟಿ ಮಣಿಗಳೆಲ್ಲಾ ಎಷ್ಟು ವರುಷದಿಂದ ಇದ್ದ ಹಾಗೆಯೇ ಇದ್ದಾರಲ್ಲಾ, ಏನಿದು ಮರ್ಮ ಎಂದು ಮಂಡಿಗೆ ತಿನ್ನಲಾರಂಬಿಸುತ್ತದೆ.


ನಮಗೋ ಇವರು ತೋರಿಸುತ್ತಿರುವ ಈ ವಸ್ತುಗಳೇ ಇದಕ್ಕೆ ಸಹಕಾರಿಯಾಗಿರಬೇಕು. ನೋಡಿ ನೋ ಮಾರ್ಕ್ಸ್ ಮುಖದಲ್ಲಿನ ಕಪ್ಪು ಕಲೆಗಳನ್ನೂ ಹೇಳ ಹೆಸರಿಲ್ಲದಂತೆ ಮಾಯಾ ಮಾಡಿಬಿಡುತ್ತದಂತೆ. ಈ ಎಣ್ಣೆ ಕಣ್ಣಿಗೆ ತಂಪು ನೀಡಿ ಧೀರ್ಘಕಾಲದವರೆಗೆ ಕಪ್ಪು ಕೂದಲು ವಿಫುಲವಾಗಿ ಬೆಳೆಯುವಂತೆ ಮಾಡುತ್ತದಂತೆ. ಆ ಶಾಂಪು, ಈ ಸೋಪು, ಈ ಫೆಸಿಯಲ್ ಕ್ರೀಂ ಮುಖದಲ್ಲಿನ/ದೇಹದಲ್ಲಿನ ಚರ್ಮದ ಸುಕ್ಕುಗಳನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಿ ಹದಿಹರೆಯದವರನ್ನಾಗಿ ಇಡುತ್ತದಂತೆ. ಇತ್ಯಾದಿ ಇತ್ಯಾದಿ ವಸ್ತುಗಳು ನಮ್ಮ ಬಯಕೆಗಾಗಿಯೇ ಬಂದಿರುವುವೇನೋ ಎಂದು ಉಪಯೋಗಿಸಲೂ ಪ್ರಾರಂಭಿಸುತ್ತೇವೆ ಮತ್ತು ಉಪಯೋಗಿಸುತ್ತಲೇ ಇರುತ್ತೇವೆ.


ನಿತ್ಯ ಅವುಗಳನ್ನು ಧಾರಾಳವಾಗಿ ಎಲ್ಲೆಲ್ಲಿಗೆ ಹಚ್ಚಬೇಕು ಹಚ್ಚಿಕೊಳ್ಳುತ್ತಾ ಕೊಳ್ಳುತ್ತಾ ಕನ್ನಡಿಯ ಮೇಲೆ ನಮ್ಮಲ್ಲಿ ಆಗುವಂತ ಬದಲಾವಣೆಯನ್ನು ಪೂರ್ಣವಾಗಿ ನಂಬಿ ಖುಷಿಪಡುತ್ತೇವೆ.


ಅವಳಿಗಿಂತಹ ನಾನೇನೂ ಕಮ್ಮಿಯಿಲ್ಲ. ನಾನೇ ಸುರಸುಂದರಾಂಗಿ ಎಂದು ಹೆಮ್ಮೆಪಟ್ಟುಕೊಳ್ಳುತ್ತಾ ಏರುತ್ತಿರುವ ವಯಸ್ಸಿಗೆ ಸೆಡ್ಡು ಹೊಡೆದು ಮನದಲ್ಲಿಯೇ ನಗುವುವೆವು.


"ದೇಹವೆಂಬುದು ಮೂಳೆ ಮಾಂಸದ ತಡಿಕೆ" ಎಂದು ದಾಸರು ಹೇಳಿದ ಮಾತನ್ನೂ ತಪ್ಪಿದರೂ ನೆನಪು ಮಾಡಿಕೊಳ್ಳುವುದಿಲ್ಲ.
ವಯಸ್ಸಾದಂತೆ ದೇಹದ ಪ್ರತಿಯೊಂದು ಅಂಗಾಂಗಳು ಸವೆಯುತ್ತವೆ. ತನ್ನ ಹೊಳಪು, ಮಿಂಚನ್ನು ಕಡಿಮೆ ಮಾಡಿಕೊಳ್ಳುತ್ತವೆ.


ಅದರೂ ನಾವು ಬಿಡಬೇಕಲ್ಲಾ! ಏನೇನೂ ತರಾವೇರಿ ಡಯಟ್, ಯೋಗ, ಜೀಮ್, ವಾಕ್ ಇತ್ಯಾದಿಗಳನ್ನು ರೂಡಿಸಿಕೊಳ್ಳುತ್ತಾ... ಕಟ್ಟು ನಿಟ್ಟಿನ ಪಥ್ಯವನ್ನು ಮಾಡುತ್ತೇವೆ.


ನಮಗೆಲ್ಲಾ ಅಶ್ಚರ್ಯ ಮತ್ತು ಭರವಸೆಯ ಕಿರಣವೆಂದರೇ.. ಅದು ನಮ್ಮ ಬಾಲಿವುಡ್, ಸ್ಯಾಂಡಲ್ ವುಡ್ ನಟಿ ಮಣಿಗಳು. ಇಂದಿಗೂ ಹರೆಯದವರಾಗಿ ಸ್ವೀಟ್ ಸಿಕ್ಸ್ ಟಿನ್ ಆಗಿ ಕಾಣಲು ಅವರಿಗೆ ಸಾಧ್ಯವಾಗಿದೆ ಎಂದರೇ....! ನಮಗ್ಯಾಕೇ ಸಾಧ್ಯವಾಗದು ಎಂಬುದು?


ಅದಕ್ಕಾಗಿ ಭಾರಿ ಪರಿಶ್ರಮಪಡುತ್ತೇವೆ.


ಇತ್ತೀಚೆಗೆ ನನ್ನ ಗೆಳೆಯ/ಗೆಳತಿಯರು ತುಂಬ ಸುಂದರವಾಗಿ ಒಂದಷ್ಟು ತಿಂಗಳು ಕಂಡುಬಂದರೂ ನನಗೋ ಅತಿ ಆಶ್ಚರ್ಯ ಅದು ಹೇಗೆ ಇಷ್ಟೊಂದು ಹೊಳೆಯುವಂಥ ಕಾಂತಿಯನ್ನು ಮುಖದಲ್ಲಿ ಹೊಂದಿದ್ದಾರೆ ಎಂದು..!



ನನ್ನ ಸ್ನೇಹಿತರ ಬಳಿ ಹೀಗೆ ಚರ್ಚಿಸಿದಾಗ ಅವರು ಹೇಳಿದರೂ. ನೀನಗೆ ಇನ್ನೂ ಗೊತ್ತಿಲ್ಲಾ! ಏನೇನೂ ಟ್ರಿಟ್ ಮೆಂಟ್ ಗಳು ಬೆಂಗಳೂರಿಗೆ ಬಂದಿವೆ. ಕಪ್ಪಾಗಿದ್ದವರನ್ನೂ ಬಿಳಿಯರನ್ನಾಗಿ ಮಾಡುತ್ತಾರೆ. ದಪ್ಪ ಇರುವವರನ್ನೂ ಸಣಕಲರನ್ನಾಗಿ ಮಾಡುತ್ತಾರೆ. ಮೂಗು ಸರಿಯಿಲ್ಲದಿದ್ದರೆ ಸುಂದರ ಮೂಗನ್ನು ಸರ್ಜರಿ ಮಾಡುತ್ತಾರೆ. ಕೂದಲು ಇಲ್ಲದಿದ್ದರೇ ಸುಕೋಮಲವಾದ ಕೂದಲನ್ನು ಬೆಳೆಸುತ್ತಾರೆ. ನಂಬಲು ಸಾಧ್ಯವಿಲ್ಲ? ಅದರೇ ನಂಬಲೇ ಬೇಕು.


ಮನುಷ್ಯ ಪ್ರತಿಯೊಂದನ್ನೂ ತನ್ನ ನಿಯಂತ್ರಣದಲ್ಲಿಟ್ಟುಕೊಂಡು.. ದೇಹಕ್ಕೆ ಆಗುವ ವಯಸ್ಸನ್ನು ಅದಷ್ಟು ಕಷ್ಟಪಟ್ಟು ದೂರ ಮಾಡುತ್ತಿದ್ದಾನೆ.


ಕೆಲವು ವಾರಗಳಲ್ಲಿ ನೀವು ಗಮನಿಸಿರಬಹುದು. ಬಹು ಚರ್ಚಿತ ಸುದ್ಧಿ ನಮ್ಮ ದೇಶದ ಅತ್ಯಂತ ಸುಂದರಿಯಾದ ಐಶ್ವರ್ಯಾ ರೈ ತಾನು ಮಗು ಹೆತ್ತ ಮೇಲೆ ಮುಖದ ಮೇಲಿನ ಮತ್ತು ದೇಹದಲ್ಲಿನ ಬೊಜ್ಜು ವಿಫರೀತ ಹೆಚ್ಚಾಗಿರುವುದು. ಅದಕ್ಕಾಗಿ ನಮ್ಮ ಸೌಂದರ್ಯಪ್ರಿಯ ಮಾಧ್ಯಮ ಮತ್ತು ಅಭಿಮಾನಿಗಳು ಯಾವ ಪರಿ ಪರಿತಪಿಸುತ್ತಿದ್ದಾರೆ ಎಂಬುದು.


ಈ ಒಂದು ನಿದರ್ಶನವನ್ನು ಯಾಕೆ ನಮ್ಮ ಜನಗಳು ಧನಾತ್ಮಕವಾಗಿ ನೋಡುವುದಿಲ್ಲ?



ಸೌಂದರ್ಯ ಎಂಬುದು ಶಾಶ್ವತವಾದದ್ದಲ್ಲ. ಅದಕ್ಕೆ ಒಂದು ಎಕ್ಸ್ ಪೈರಿ ಇದ್ದೇ ಇರುತ್ತದೆ. ನಾವುಗಳು ಏನೇನೂ ಮುಖಕ್ಕೆ ಮಜ್ಜನ ಮಾಡಿದರೂ ಅದು ಒಂದು ದಿನ ನಿಜವಾದ ರೂಪವನ್ನು ತೋರಿಸುತ್ತದೆ.


ಹಾಗೆಯೇ ಸೌಂದರ್ಯ ಎಂಬುದು ದೇಹದಲ್ಲಿ ಅಥಾವ ಮುಖದಲ್ಲಿ ಇಲ್ಲ. ಅದು ನೋಡುವ ನಮ್ಮ ನಿಮ್ಮಗಳ ಕಣ್ಣಿನಲ್ಲಿ ಇದೆ.


ನಮ್ಮ ಮನಸ್ಸು ಸುಂದರವಾಗಿದ್ದರೇ ನಾವುಗಳು ಸುಂದರವಾಗಿ ಕಾಣುತ್ತೇವೆ. ನಾವು ಹೇಗೆ ಯೋಚಿಸಿತ್ತೇವೋ ಹಾಗೆಯೇ ನಮ್ಮ ದೇಹ ಪ್ರತಿಪಲಿಸುತ್ತದೆ.


ಒಮ್ಮೆ ಅದು ಇದು ಮುಖಕ್ಕೆ ಹಚ್ಚುವುದನ್ನಾ ಶುರು ಮಾಡಿದರೇ... ಅದನ್ನೂ ನಿತ್ಯ ಉಪಯೋಗಿಸಬೇಕು. ಆ ರೀತಿಯ ಒಂದು ತಂತ್ರ ಎಲ್ಲಾ ಕಾಸ್ಮಟಿಕ್ ಉತ್ಪಾದಕರ ಮಂತ್ರ.


ಇರುವ ನೈಸರ್ಗಿಕವಾದ ಸೌಂದರ್ಯವನ್ನು ಸ್ವಾಭಾವಿಕವಾಗಿ ಕಾಣಲು ಬಿಡಿ. ಅದೇ ಶಾಶ್ವತವಾದದ್ದು .


ನಮ್ಮ ನಿಮ್ಮ ಮುಂದೆ ನೂರಾರು ನಿದರ್ಶನಗಳಿವೆ. ವಯಸ್ಸು ಎಂಬ ಕಾಲನಿಗೆ ತಕ್ಕಂತೆ ನಮ್ಮ ದೇಹ ಮನಸ್ಸು ನಡೆಯುತ್ತದೆ. ದೇಹವಂತೂ ಹದಿಹರೆಯದವಾರಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅದರೇ ಎಷ್ಟೇ ವಯಸ್ಸಾದರೂ ನಮ್ಮ ಮನಸ್ಸನ್ನೂ ಇನ್ನೂ ಚಿಕ್ಕ ಮಕ್ಕಳಂತೆ ಯೋಚಿಸುತ್ತಾ.. ಚಿಂತಿಸುತ್ತಾ.. ಚಿರಯೌವನದ ಚಿರಂಜೀವಿಯಾಗಿ ಕಾಪಾಡಿಕೊಳ್ಳಬಹುದು.

ಬುಧವಾರ, ಮೇ 16, 2012

ಕಲ್ಪನೆಗೂ ನಿಲುಕದ..

ಪ್ರಕೃತಿಯ ಮುಂದೆ ಎಲ್ಲರೂ ಸಣ್ಣವರೇ.


ಒಂದು ಸುತ್ತು ಭಾರೀ ಮಳೆ ಬಂದು ಇಳೆಯನ್ನು ತಂಪು ಮಾಡಿದೆ.


ಉಸ್ಸಪ್ಪಾ!ಎಂದು ಬಿರು ಬೇಸಿಗೆಯಲ್ಲಿ ಬೆಂದ ಮನಗಳಿಗೆ ತಂಪನ್ನು ಸಿಂಪಡಿಸಿದೆ. ಬರಗಾಲ ಬರಗಾಲ ಎಂದು ಪರಿತಪಿಸುತ್ತಿದ್ದ ರೈತಾಪಿ ಮಂದಿಗೆ ಒಂದಿಷ್ಟು ಭರವಸೆಯನ್ನು ಆಸೆಯನ್ನು ಮೂಡಿಸಿದೆ.


ಯಾವ ಯಾವ ಕಾಲಕ್ಕೆ ಏನೇನೂ ಜರುಗಬೇಕು ಅದನ್ನು ಪ್ರಕೃತಿ ಎಷ್ಟೊಂದು ಕರಾರುವಕ್ಕಾಗಿ ಜರುಗಿಸುತ್ತದೆ. ವಿಶ್ವವೇ ಒಂದು ವಿಸ್ಮಯ. ಅದರ ಮುಂದೆ ನಾವುಗಳು ಕಣ ಮಾತ್ರ.


ಎಷ್ಟೊಂದು ನಕ್ಷತ್ರಗಳು, ಗ್ರಹಗಳು! ಅವುಗಳನ್ನು ಹಿಡಿದಿಟ್ಟಿರುವ ಆ ಬಂಧನ! ನಮ್ಮ ಗ್ರಹ ಭೂಮಿ ಸೂರ್ಯ ಎಂಬ ಒಂದು ನಕ್ಷತ್ರದ ಸುತ್ತಲೇ ತಿರುಗುವುದು. ಈ ಚಲನೆಯೆ ಹಗಲು ಇರುಳನ್ನು ಕೊಡುವುದು. ಸೂರ್ಯ ಮುಳುಗಿ ಹೋದ ಅಂತಾ ನಮಗೆ ಅನಿಸುವುದು. ಅದರೇ ಅವನು ನಿಜವಾಗಿಯೂ ಮುಳುಗಿ ಹೋಗುವುದಿಲ್ಲ. ಕೇವಲ ನಮ್ಮ ಭೂಮಿಯ ಒಂದು ಭಾಗಕ್ಕೆ ಮರೆಯಾಗಿರುತ್ತದೆ. ಭೂಮಿಯ ಇನ್ನೊಂದು ಭಾಗದಲ್ಲಿ ಅವನು ಬೆಳಕನ್ನು ನೀಡುತ್ತಿರುತ್ತಾನೆ.


ಈ ಭೂಮಿಯ ಮೇಲೋ ಕಲ್ಪನೆಗೂ ನಿಲುಕದ ಹಳ್ಳ,ಕೊಳ್ಳ,ನದಿ,ಸಾಗರ, ಎತ್ತರದ ಪರ್ವತಗಳು, ದಟ್ಟ ಕಾಡು, ನೀರೇ ಇಲ್ಲದ ಮರುಭೂಮಿ, ಯಾವಾಗಲೂ ಶೀತವಿರುವ ಶೀತವಲಯ, ಯಾವಾಗಲೂ ಮಳೆ ಬರುವ ಜಾಗಗಳು, ಕಲ್ಲು, ಮಣ್ಣು ಇತ್ಯಾದಿ ತರಾವೇರಿ ನೈಸರ್ಗಿಕ ತಾಣಗಳು. ವೈವಿಧ್ಯಮಯವಾದ ಪ್ರಾಣಿಗಳು, ಸಸ್ಯ ಸಂಕುಲ, ಕ್ರಿಮಿ, ಕೀಟಗಳು, ಸಾಗರದಲ್ಲಿರುವ ಬೃಹತ್ ಆದ ಜೀವ ಸಂಕುಲ!


ನಮ್ಮ ಭೂಮಿಗೆ ಒಂದು ಉಪಗ್ರಹ ಚಂದ್ರ. ಅದು ರಾತ್ರಿಯ ವೇಳೆ ಬೆಳ್ಳಿಯ ತಟ್ಟೆಯೋಪಾದಿಯಲ್ಲಿ ಹೊಳೆಯುವನು. ಚಂದ್ರ ನಾವುಗಳು ಎಷ್ಟು ದೂರ ಹೋದರು, ಯಾವುದೇ ಜಾಗಕ್ಕೆ ಹೋದರೂ ನಾವುಗಳು ಒಂಟಿಯಲ್ಲಾ ಎಂಬ ರೀತಿಯಲ್ಲಿ ನಮ್ಮ ಸಂಗಾತಿಯಾಗಿ ನಮ್ಮನ್ನೇ ಹಿಂಬಾಲಿಸುವವನು. ಇರುಳ ಸಮಯದಲ್ಲಿ ಅವನನ್ನು ನೋಡಿದರೇ ಮನಸ್ಸಿಗೆ ಏನೋ ಒಂದು ತೃಪ್ತಿ ಮತ್ತು ತಂಪು.


ಹೀಗೆ ಈ ಒಂದು ವಿಸ್ಮಯವಾದ ವಿಶ್ವ ಜಾದುವನ್ನು ಮಾಡಿರುವುವನಾದರೂ ಯಾರೂ? ಎಂದು ಪ್ರತಿಯೊಬ್ಬರಿಗೂ ಬಿಡಿಸಿಲಾರದ ಪ್ರಶ್ನೆಯಾಗಿರುತ್ತದೆ. ನಮ್ಮ ನಮ್ಮ ಅರಿವಿಗೆ ನಿಲುಕುವ ಮಟ್ಟಕ್ಕೆ ಅಲ್ಲಿ ಇಲ್ಲಿ ಓದಿ, ಕೇಳಿ ಒಂದಿಷ್ಟು ಙ್ಞಾನವನ್ನು ಪಡೆದು ಇದು ಹೀಗೆ ಹಾಗೆ ಎಂದು ಅದರ ಬಗ್ಗೆ ಮಾತನ್ನಾಡುತ್ತಿರುತ್ತೇವೆ.


ನಮ್ಮ ನಮ್ಮ ಪ್ರಾಥಮಿಕ ಪಾಠ ಶಾಲಾ ಪಠ್ಯದಲ್ಲಿ ಅದರ ಬಗ್ಗೆ ಸಂಕ್ಷಿಪ್ತವಾಗಿ ಅಭ್ಯಾಸಿಸಿರುತ್ತೇವೆ. ಆದರೂ ಅದರ ಬೆರಗು ಇನ್ನೂ ಕಳೆದು ಕೊಂಡಿರುವುದಿಲ್ಲ.


ನಿತ್ಯ ನಮ್ಮ ಹಿರಿಯ ಕಿರಿಯ ವಿಙ್ಞಾನಿಗಳು ಸಂಶೋಧನೆಗಳನ್ನು ನಡೆಸುತ್ತಲೆ ಇರುತ್ತಾರೆ. ಹೊಸ ಹೊಸ ಅವಿಷ್ಕಾರಗಳನ್ನು, ಹೊಸ ಹೊಸ ವಿಷಯಗಳನ್ನು ಈ ವಿಶ್ವದ ಬಗ್ಗೆ ತಿಳಿಯಪಡಿಸುತ್ತಲೇ ಇರುತ್ತಾರೆ.


ಈ ಜಗತ್ತಿನಲ್ಲಿ ನಿತ್ಯ ಸಾವಿರಾರು ಅಚ್ಚರಿಯ ನೈಸರ್ಗಿಕ ಘಟನೆಗಳು, ಅನುಭವಗಳು ಘಟಿಸುತ್ತಲೆ ಇರುತ್ತವೆ. ಅವುಗಳ ಮನನ ಮಾಡಿಕೊಳ್ಳುವ ಶಕ್ತಿ ಇರುವಷ್ಟು ನಮಗೆ ದಕ್ಕುತ್ತದೆ. ಮಿಕ್ಕಿದ್ದು ಕೇವಲ ಪ್ರಶ್ನೆಗಳಾಗಿ ಉಳಿಯುತ್ತವೆ.


ನಾವು ಏನೇ ಮುಂದುವರಿದಿದ್ದರೂ ಈ ಭೂಮಿ ಮೇಲೆ ಇರುವ ಒಂದೇ ಒಂದು ಚಿಕ್ಕ ನೈಸರ್ಗಿಕವಾದ ವಸ್ತು ವಿಶೇಷವನ್ನು ನಮ್ಮಿಂದ ಸೃಷ್ಟಿ ಮಾಡಲು ಸಾಧ್ಯವಿಲ್ಲಾ ಬಿಡಿ.


ನಮ್ಮನ್ನೆಲ್ಲಾ ಮೀರಿದ ಒಂದು ಶಕ್ತಿ ಇರಲೇ ಬೇಕು ಅದೇ ಅದನ್ನು ನಿಯಂತ್ರಿಸುತ್ತಿರುತ್ತದೆ. ಅಲ್ಲವಾ?


ಅದನ್ನೇ ಒಬ್ಬೊಬ್ಬರೂ ಒಂದು ರೀತಿಯಲ್ಲಿ ಹೇಳಿಕೊಂಡು ಕೊನೆಗೆ ಅದೇ "ದೇವರು" ಅಂದುಕೊಳ್ಳುತ್ತಾರೆ.


ಹಿಂದಿನಿಂದಲೂ ನಾವುಗಳು ಪ್ರಕೃತಿಯನ್ನೇ ಪ್ರಕೃತಿಮಾತೆ/ದೇವರು ಎಂದು ಪೂಜಿಸಿಕೊಂಡು ಬರುತ್ತಿರುವ ಮರ್ಮ ಇದೇ ಅನಿಸುತ್ತದೆ. ಪ್ರಕೃತಿಯ ಮುಂದೆ ಯಾರೊಬ್ಬರೂ ಏನೂ ಅಲ್ಲಾ! ನಾಸ್ತಿಕನೂ ಸಹ ಇದನ್ನೂ ಒಪ್ಪಿಕೊಳ್ಳಲೇ ಬೇಕು.


ನಾವುಗಳು ನಮ್ಮ ನಮ್ಮ ಅಹಂ ನಲ್ಲಿ ಕೆಲವೊಂದು ಭಾರಿ ಇರುತ್ತೇವೆ. ಆ ಕ್ಷಣದಲ್ಲಿ ಪ್ರಕೃತಿಯ ಬಗ್ಗೆ ಒಂದು ಕ್ಷಣ ಯೋಚಿಸಿದರೇ ನಾವೆಷ್ಟರವರು ಎಂಬುದು ಗೊತ್ತಾಗುತ್ತದೆ.


ನಮಗೆಲ್ಲಾ ಇದು ಒಂದು ವರ! ಈ ಪರಿಸರದಲ್ಲಿ ಇರುವಂತಹ ಸಂಪತ್ತು, ಅನುಕೂಲ, ಸುಂದರ ದೃಶ್ಯ, ಮನಸೂರೆ ಮಾಡುವ ನೈಸರ್ಗಿಕ ತಾಣಗಳು ನಮ್ಮ ಜೊತೆಯಲ್ಲಿ ಇರುವುದು ನಮ್ಮೆಲ್ಲಾರ ಅದೃಷ್ಟ.


ಇದನ್ನು ಸಂರಕ್ಷಿಸಿ ನಮ್ಮ ಮುಂದಿನ ಪೀಳಿಗೆಗೆ ಕೊಡುವುದು ನಮ್ಮೆಲ್ಲಾರ ಕರ್ತವ್ಯವಾಗಬೇಕು. ಕೇವಲ ನಮ್ಮ ಮಾನವ ಕುಲಕ್ಕೆ ಮಾತ್ರವಲ್ಲ. ಈ ಭೂಮಿಯ ಮೇಲೆ ಇರುವ ಕೋಟ್ಯಾಂತರ ಅಣುರೇಣು ಜೀವಸಂಕುಲದ ಸ್ವತ್ತು ಇದಾಗಿದೆ.


ಸ್ವಾರ್ಥ ಮನೋಭಾವವನ್ನು ಬಿಟ್ಟು ಇದರ ಉಳಿವಿಗಾಗಿ ಶ್ರಮಿಸುವುದು ನಾವುಗಳು ನಮಗೆ ಮಾಡಿಕೊಳ್ಳುವ ರಕ್ಷಣೆಯೇ ಸರಿ!


ಎಂಥ ಜಂಜಾಟದಲ್ಲೂ ನಮ್ಮ ಮನವನ್ನು ಸಮಧಾನ ಮಾಡಲೂ ಸಾಧ್ಯವಿರುವುದು ಪ್ರಕೃತಿಗೆ ಮಾತ್ರ! ಇದರ ಮಹತ್ವವನ್ನು ಪ್ರತಿಯೊಬ್ಬರೂ ಯೋಚಿಸುವ ಕಾಲ ಇದಾಗಿದೆ ಎಂದು ಅನಿಸುವುದಿಲ್ಲವೆ?

ಗುರುವಾರ, ಮೇ 10, 2012

ಕೈಯಿಂದ ಸ್ಪರ್ಷಿಸಿದರೇ ಅಂಗೈಯಲ್ಲಿಯೇ ಮಾಯ

ಮದ್ಯ ರಾತ್ರಿ ಕತ್ತಲೆ, ಕೆಲವೊಂದು ಬೀದಿ ದೀಪಗಳು ಇವೆ. ಮಳೆ ಬಂದು ತಣ್ಣನೆಯ ತಂಗಾಳಿ ಬೀಸುತ್ತಿದೆ.


ಅಪರಾತ್ರಿಯಲ್ಲಿ ಸೆಕೆಂಡ ಶೀಫ್ಟ್ ಮುಗಿಸಿಕೊಂಡು ಮನೆ ಕಡೆಗೆ ಸಾಗುತ್ತಿರುವ ಟಿ.ಟಿಗಳು, ಸುಮೋಗಳ ಚಲೆನೆ ಕಪ್ಪನೆಯ ಟಾರ್ ರೋಡ್ ಮೇಲೆ.


ಅಲ್ಲಿ ರಸ್ತೆಯನ್ನು ಅಗಿಯುತ್ತಿದ್ದಾರೆ. ಎರಡು ಬದಿಯ ವಾಹನಗಳು ಒಂದೇ ಕಡೆ ಚಲಿಸುತ್ತಿದ್ದಾವೆ. ಪಾದಚಾರಿ ರಸ್ತೆಯ ಮೇಲೂ ವಾಹನಗಳು ಒಮ್ಮೊಮ್ಮೆ ಬರುತ್ತವೆ. ಅವುಗಳ ವೇಗ ಕಂಡು ಜೀವಕ್ಕೆ ಭಯವೆನಿಸುತ್ತದೆ. ಮೇಲೆ ಆಕಾಶವನ್ನು ನೋಡಿದರೇ ಕಪ್ಪನೇ ಕಾರ್ಮೊಡಗಳು. ಅಲ್ಲಾಲ್ಲಿಯೇ ಚಳಕು ಎಂಬಂತೆ ಸಣ್ಣನೆಯ ಮಿಂಚು! ಯಾವಾಗ ಬೇಕಾದರೂ ಪುನಃ ಮಳೆ ಶುರುವಾಗಬಹುದು.


ಇಂಥ ಸಂದರ್ಭದಲ್ಲಿ ಮೂರು ಗುಂಪುಗಳಲ್ಲಿ ಒಂದಿಷ್ಟು ಜನಗಳು ರಸ್ತೆಯ ಬದಿಯಲ್ಲಿ ನಡೆಯುತ್ತಿದ್ದಾರೆ.


ನೋಡಿದರೇ ಇಂದೇ ಈ ಬೆಂಗಳೂರು ಎಂಬ ಮಾಯ ನಗರಿಗೆ ಬಂದಿರುವಂತಿದೆ.


ಕ್ಯಾಬ್ ಗಳ ಎಡ್ ಲೈಟ್ ಬೆಳಕು ಅವರ ಮುಖಗಳ ಮೇಲೆ ಚಿಮ್ಮುತ್ತಿದೆ. ಏನೋ ಭಯ ಮಿಶ್ರಿತವಾದ ಅನುಭವ ಅವರ ಕಣ್ಣುಗಳಲ್ಲಿ. ಅವುಗಳು ಎದುರಿಗೆ ಬರುವ ರಭಸಕ್ಕೆ ಪಕ್ಕಕ್ಕೆ ಸರಿದುಕೊಂಡು ದಾರಿ ಇನ್ನೂ ಎಷ್ಟು ದೂರ ಇದೆಯೋ ಎಂದುಕೊಂಡು ನಡೆಯುತ್ತಿದ್ದಾರೆ.



ಅತಿ ಮುಂದೆ ಎರಡು ಚಿಕ್ಕ ಮಕ್ಕಳು ಏನೋ ಕುತೂಹಲಭರಿತರಾಗಿ ತಲೆಯ ಮೇಲೆ ಪುಟ್ಟದಾದ ಬ್ಯಾಗ್ ಇಟ್ಟುಕೊಂಡು ಎರಡು ಕೈಯಲ್ಲಿ ಅದನ್ನು ಬಿಳದಂತೆ ಹಿಡಿದುಕೊಂಡು ಹೆಜ್ಜೆ ಹಾಕುತ್ತಿದ್ದಾರೆ. ಅವರ ಇಂದೆ ಅವರ ಅಮ್ಮಂದಿರಬೇಕು, ಅಕ್ಕಂದಿರುಗಳಿರಬೇಕು ಕಂಕುಳದಲ್ಲಿ ಚಿಕ್ಕ ಕೂಸು, ಕೈಯಲ್ಲಿ ಮತ್ತೊಂದು ಬ್ಯಾಗ್. ಅವರ ಹಿಂದೆ ಪಂಚೆಯನ್ನು ಕಟ್ಟಿಕೊಂಡ ಆರು ಏಳು ಮಂದಿ ಅವರ ತಲೆಯ ಮೇಲೆಯು ಒಂದೊಂದು ಚೀಲ. ಇದು ಮೊದಲ ಗುಂಪು.


ಇವರ ಹಿಂದೆ ಇದೆ ರೀತಿಯಲ್ಲಿ ಹತ್ತು ಜನಗಳ ಗುಂಪು. ಇಲ್ಲೂ ಸಹ ಎಲ್ಲಾ ವಯೋಮಾನದವರು ಇದ್ದಾರೆ. ಕೆಲವರ ಕೈಯಲ್ಲಿ ಚೀಲಗಳಿವೆ ಮತ್ತೆ ಕೆಲವರ ಬಳಿ ಏನೂ ಇಲ್ಲಾ.


ಹೀಗೆ ಮೂರು ಗುಂಪುಗಳು ಮೇಜೆಸ್ಟಿಕ್ ನಿಂದ ಮಾರತಳ್ಳಿಯ ಕಡೆಗೆ ನಡೆಯುತ್ತಿವೆ.


ಯಾರನ್ನೂ ಬೆಂಗಳೂರಿನ ಮಂದಿ ಕ್ಯಾರೇ ಅಂದಿರಲಾರರು.


ಪಾಪ!


ಇವರುಗಳು ಗುಳೆ ಹೊರಟು ಬಂದಿರಬಹುದು. ತಮ್ಮ ತವರು ಊರಿನಲ್ಲಿ ಏನಾಗಿತ್ತೊ, ಏನೂ ಕಷ್ಟವೋ? ದೇವರಿಗೆ ಗೊತ್ತಿರಬೇಕು.


ಅವರುಗಳು ಎಂದೂ? ಎಲ್ಲಿಂದ? ಯಾವಾಗ? ಬೆಂಗಳೂರು ಎಂಬ ಕನಸನ್ನು ಇಟ್ಟುಕೊಂಡು ಯಾವ ಬಸ್, ರೈಲಿನಲ್ಲಿ ಹೊರಟು ಬಂದಿದ್ದಾರೂ.. ಈ ಸರಿ ರಾತ್ರಿಗೆ ಮೊದಲ ಹೆಜ್ಜೆಯನ್ನು ಕೆಂಪೇಗೌಡನ ರಾಜಧಾನಿಯಲ್ಲಿ ಊರಿದ್ದಾರೆ.


"ಕೆಟ್ಟು ಪಟ್ಟಣ ಸೇರು" ಎಂಬ ಗಾದೆಯ ಮಾತನ್ನು ನಿಜ ಮಾಡಲೇ ಎಂಬಂತೆ ಎಷ್ಟು ಕುಟುಂಬಗಳು ಎಷ್ಟು ದಿನಗ ಯೋಚನೆಯ ಮೇಲೆ ಬಂದಿರುವವರೋ?


ಈ ಮೊದಲೂ ತಮಗೆ ಗೊತ್ತಿರುವವರು ಯಾರೋ ಇಲ್ಲಿಗೆ ಆಗಲೇ ಬಂದಿರಬೇಕು. ಅವರನ್ನೂ ನೋಡಿ ಇವರು ಬಂದಿರಬೇಕು.


ಹೀಗೆ ಗುಂಪಾಗಿ ಇದೆ ಸಮಯದಲ್ಲಿ ಅವರ ಹಳ್ಳಿಗಳಲ್ಲಿ ನಡೆಯುತ್ತಿದ್ದರೇ ಎಷ್ಟೊಂದು ದಾರಿಹೋಕರು ಇಷ್ಟು ಹೊತ್ತಿಗೆ ಏನೇನಲ್ಲಾ ಪ್ರಶ್ನೇಗಳನ್ನು ಕೇಳಿರುತ್ತಿದ್ದರೋ.


ಯಾರಾದರೂ ತಮ್ಮ ಗಾಡಿಯನ್ನು ಹೊಡೆದುಕೊಂಡು ಹೋಗುತ್ತಿದ್ದರೇ "ಬನ್ನಿ ಕುಳಿತುಕೊಳ್ಳಿ ನಿಮ್ಮ ಜಾಗದವರೆಗು ಈ ಹೆಣ್ಣು ಮಕ್ಕಳು, ವಯಸ್ಸಾದವರು ಕೂರಿ" ಎಂಬ ಸಹಕಾರವನ್ನು ಕೇಳಿ ಕೊಟ್ಟಿರುತ್ತಿದ್ದರು.


ಆದರೇ..! ಇಲ್ಲಿ ಅದೇ ಎರಡು ಮೂರು, ಕೆಂಪನೆಯ, ಪೂರ್ತಿ ಮುಚ್ಚಿದ ಗ್ಲಾಜಿನ, ಪೂರ್ತಿ ಖಾಲಿ ಸೀಟುಗಳಿರುವ ದೊಡ್ಡ ಬಸ್ ಗಳು ಪಕ್ಕನೇ ಹಾದು ಹೋದವು. ಇವರ ಬಗ್ಗೆ ಏನೊಂದು ಕನಿಕರವಿಲ್ಲದ ರೀತಿಯಲ್ಲಿ ರೋಯ್ಯನೇ ಹೊಗೆಯೆಬ್ಬಿಸಿದ್ದು ಮಾತ್ರ ಈ ಸೋತ ಕಣ್ಣುಗಳು ನೋಡಿದವು. ಮಕ್ಕಳೋ ಅಚ್ಚರಿಯಿಂದ ಬಸ್ ಕಾಣುವವರೆಗೂ ನೋಡುತ್ತಾ ನೋಡುತ್ತಾ ಒಮ್ಮೆ ಎಡವಿಬಿದ್ದವು.



ಹಿಂದಿನಿಂದ ಅವರ ಅಪ್ಪ ಇರಬೇಕು. ತಲೆ ಮೇಲೆ ಕುಕ್ಕಿದ. "ಭೂಮಿ ನೋಡಿಕೊಂಡು ನಡೆಯಬಾರದ!" ಈ ದ್ವನಿ ಆ ನಿಶಬ್ಧ ರಾತ್ರಿಯಲ್ಲಿ ರೀಂಗಣಿಸಿತು. ಹಾಗೆಯೇ ಅದು ಯಾವೂದೋ ಕ್ಯಾಬ್ ಹಾರ್ನ ಸದ್ಧಿನಲ್ಲಿ ಲೀನವಾಯಿತು.


ಇಷ್ಟೂ ಮಂದಿಯ ರಾತ್ರಿಯ ಊಟ ಆಗಿದೇಯೋ ಇಲ್ಲವೋ ಗೊತ್ತಿಲ್ಲಾ!


ಇನ್ನೂ ಬೆಂಗಳೂರು ಬಿಟ್ಟು ಹೊರ ವಲಯಕ್ಕೆ ತಮ್ಮವರು ಗುರುತು ಇರುವ ಜಾಗಕ್ಕೆ ಎಷ್ಟು ಸಮಯ ನಡೆಯಬೇಕೋ ಅವರ್ಯಾರಿಗೂ ತಿಳಿದಿರಲಾರದು. ಪೋನ್ ನಲ್ಲಿ ದಾರಿ ಹೇಳಿರಬೇಕು.


ಸಿ.ಟಿ ಬಸ್ ನಲ್ಲಿ ಬರಬಹುದಾಗಿತ್ತೇನೋ. ಅದರೇ ೧೧ ರ ನಂತರ ಇವರು ಸೇರುವ ಜಾಗಕ್ಕೆ ಬಸ್ ಗಳು ಇರಲಾರವೇನೋ? ಆಟೋದಲ್ಲಿ!


ಸಾಧ್ಯವಾಗಿರಿಲಿಕ್ಕಿಲ್ಲಾ.


ಖಾಲಿ ಮೋಟಾರುಗಳು ಹೋಗುತ್ತಿದ್ದಾವೆ. ಅವುಗಳು ಇವರನ್ನು ಎಲ್ಲಿ ಗಮನಿಸಬೇಕು?


ಇಲ್ಲಿ ಚಾಲನೆ ಮಾಡುವ ಕೆಲವು ಮೋಟಾರು ಡ್ರೈವರ್ ಗಳು ಅವರ ಊರುಗಳ ಕಡೆಯವರು ಇರುತ್ತಾರೆ. ಹಾಗಂತಹ ಎಲ್ಲಿ ಎಲ್ಲಾರನ್ನೂ ಕರೆದುಕೊಂಡು ಹೋಗಲಾಗುತ್ತದೆ. ಇದೆ ರೀತಿಯಲ್ಲಿ ನಿತ್ಯ ಸಾವಿರಾರು ಮಂದಿ ಅಪರಾತ್ರಿಯಲ್ಲಿ ಹಳ್ಳಿಯಿಂದ ಬರುತ್ತಲೇ ಇರುತ್ತಾರೆ.


ಹೀಗೆ ಕರುಣೆಯಿಂದಲೋ ಮಾನವೀಯತೆಯಿಂದಲೋ ಸಹಾಯ ಮಾಡೋಣ ಎಂದುಕೊಂಡರೇ.. ಇವರುಗಳ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆಯೇ ಗತಿ.


ಇವರು ಚಾಲನೆ ಮಾಡುವ ವಾಹನಗಳು. ಅದೇ ತೆಳ್ಳಗೆ ಬೆಳ್ಳಗೆ ಬಟ್ಟೆ ಹಾಕಿಕೊಂಡು ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವವರೆಗೆ ಮಾತ್ರ! ಅವರುಗಳಿಗೆ ಡೋರ್ ಡ್ರಾಪ್! ಡೋರ್ ಪಿಕಪ್!. ಯಾಕೆಂದರೇ ಇದಕ್ಕಾಗಿ ವಿದೇಶಿ ಕಂಪನಿಗಳು ದೊಡ್ಡ ಮೊತ್ತದ ಹಣ ಕೊಡುತ್ತದೆ. ಟೈಂ ಇಸ್ ವೇರಿ ಇಂಪಾರ್ಟೆಂಟ್! ಅದಕ್ಕೆ ವೇಗವಾಗಿ ಓಡಿಸುತ್ತಲೆ ಇರಬೇಕಾಗುತ್ತದೆ. ಯಾರೊಬ್ಬರನ್ನೂ ನೋಡದೇ.


ಈ ರೀತಿಯಲ್ಲಿ ಹಳ್ಳಿಯಿಂದ ಗುಂಪು ಗುಂಪಾಗಿ ಬರುವವಗಿಗೆ ಮಾಡಲು ಸಿಗುವ ಕೆಲಸ ಅಂದರೇ ಅದೇ ದಿನಗೂಲಿ ಕೂಲಿ ಕೆಲಸ. ಬೆಂಗಳೂರು ನಿತ್ಯ ಬೆಳೆಯುವ ನಗರ. ಯಾವುದರಲ್ಲಿ ಎಂದರೇ ಪೆಟ್ಟೆಗೆಯೋಪಾದಿಯಲ್ಲಿ ನಿಂತಿರುವ ಅಪಾಂರ್ಟ್ ಮೆಂಟ್ ಗಳ ಕಾಮಗಾರಿ. ಅಲ್ಲಿ ಸಿಮೆಂಟ್, ಗಾರೆ, ಕಲ್ಲು ಕುಟ್ಟುವುದು. ಇದಕ್ಕೆ ಹೆಂಗಸರು, ಗಂಡಸರು ಹೆಚ್ಚಿನ ಸಂಖ್ಯೆಯಲ್ಲಿ ಬೇಕೇ ಬೇಕು.


ಇವರುಗಳಿಗೆ ಅಪಾರ್ಟ ಮೆಂಟ್ ಕಟ್ಟುವ ಜಾಗಕ್ಕೆ ಸಮೀಪದಲ್ಲಿಯೇ ತಗಡಿನ ಗುಡಿಸಲು ಶೇಡ್ ಗಳನ್ನು ಕೊಟ್ಟಿರುತ್ತಾರೆ. ಅದೇ ಅವರ ಮನೆ ಮನ ಪ್ರಪಂಚ. ಎಷ್ಟು ಮಂದಿಯಾದರೂ ಅರಾಮಾಗಿ ವಾಸ ಮಾಡಬಹುದು. ಅದಕ್ಕೂ ಅವರು ಕೊಡುವ ಕೂಲಿಯಲ್ಲಿ ಇಷ್ಟು ಅಂತಾ ಹಿಡಿದುಕೊಳ್ಳುತ್ತಾರೆ.


ದುಡಿದು ಹಣವನ್ನು ಬಹುಬೇಗ ಕೂಡಿಟ್ಟು ಪುನಃ ಹಳ್ಳಿಗೆ ಹೋಗಬೇಕು ಎಂಬ ಹಂಬಲದಿಂದ ನಗರದ ಕಡೆ ಮುಖ ಮಾಡಿರುತ್ತಾರೆ. ಅದರೇ ಅದು ಎಷ್ಟು ಕಷ್ಟ ಎನ್ನುವುದು ಎರಡು ಮೂರು ತಿಂಗಳಲ್ಲಿಯೇ ಮನವರಿಕೆಯಾಗಿರುತ್ತದೆ.


ಇಲ್ಲಿನ ಸವಲತ್ತುಗಳು, ಮೂಲಭೂತ ಸೌಲಭ್ಯಗಳು, ಈ ವ್ಯಕ್ತಿ ಕಡಿಮೆ ದುಡಿಮೆಯವನು ಇವನಿಗೆ ಈ ಈ ರೀತಿಯಲ್ಲಿ ರೀಯಾಯಿತಿ ಎಂದು ಸಿಗುವುದಿಲ್ಲ. ನಿನಗೆ ಏನೂ ಸಾಮರ್ಥ್ಯವಿದೇಯೋ ಅದನ್ನು ನೀನು ಪಡಿ ಎಂಬ ಸಿದ್ಧಾಂತ! ನಿನಗೆ ಆಗುವುದಿಲ್ಲ ಎಂದರೇ ಅದು ನಿನ್ನ ಹಣೆ ಬರಹ ಎಂಬ ನೀತಿ.


ಅಚ್ಚರಿಯಿಂದ ಶ್ರೀಮಂತಿಕೆಯನ್ನೂ ಈ ಮಂದಿ ನಿತ್ಯ ನೋಡಬೇಕಾಗುತ್ತದೆ.


ಹೌದು! ಇವರಿಂದಲೇ ನಾಲ್ಕು ಕಾಸುಗಳನ್ನು ಕೂಲಿ ಎಂಬ ರೀತಿಯಲ್ಲಿ ದಿನ ನಿತ್ಯ ಪಡೆಯುತ್ತಿರುತ್ತಾರೆ.


ಅವರು ಉಳ್ಳವರು ಇವರು ಇಲ್ಲದವರು. ಅವರುಗಳಿಗೆ ಅರ್ಹತೆಯಿದೆ ನಮ್ಮಗಳಿಂದ ಆ ಕೆಲಸ ಮಾಡಿಸಿಕೊಳ್ಳುತ್ತಾರೆ. ಇಂಥ ದೊಡ್ಡ ದೊಡ್ಡ ಬಂಗಲೆಗಳಲ್ಲಿ ಒಂಟಿಯಾಗಿ ಜೀವಿಸುತ್ತಾರೆ. ಇವರುಗಳು ಈ ಬಂಗಲೆ ಕಟ್ಟುವ ಕೆಲಸ ಪೂರ್ತಿ ಮುಗಿಯಿತೋ ಮತ್ತೊಂದನ್ನು ಕಟ್ಟಲು ಇನ್ನೊಂದು ಜಾಗಕ್ಕೆ ಸ್ಥಳಾಂತರವಾಗುತ್ತಾರೆ.


ಏನೇ ಬೆವರು ಹರಿಸಿದರು ಇವರಿಗೆ ಅವರ ವೇಗಕ್ಕೆ ಹೆಜ್ಜೆ ಹಾಕಲು ಸಾಧ್ಯವಿಲ್ಲ ಎನಿಸುತ್ತದೆ. ಹಾಗೆಯೇ ಒಂದೀಷ್ಟು ಕಾಸು ಸಂಪಾಧಿಸುತ್ತಾರೆ. ಸ್ವಲ್ಪ ದಿನಗಳ ಮೇಲೆ ತಿಳಿಯುತ್ತದೆ. ಇಲ್ಲಿ ದುಡಿಮೆ ಮಾತ್ರ ಇದೆ ಮತ್ತೇನೂ ಇಲ್ಲಾ!


ಎಷ್ಟೊಂದು ಮಂದಿ ಇದ್ದಾರೆ. ಆದರೇ ಅವರುಗಳು ಯಾರು ನಮ್ಮವರಲ್ಲಾ.


ಮೊದಲ ದಿನ ಇಲ್ಲಿ ಹೆಜ್ಜೆ ಇಟ್ಟಂದಿನಿಂದ ನೋಡುತ್ತಿದ್ದಾರೆ ಇಂದಿಗೂ ಅಪ್ತರೂ ಎಂಬವರು ಇದುವರೆಗೂ ಒಬ್ಬನೇ ಒಬ್ಬ ಸಿಕ್ಕಿಲ್ಲಾ. ಅವರುಗಳು ಅವರ ಅವರ ಪಾಡಿಗೆ ನಿತ್ಯ ಧಾರಿಯಲ್ಲಿ ಸಿಗುತ್ತಿರುತ್ತಾರೆ, ಹೋಗುತ್ತಿರುತ್ತಾರೆ.


ಈ ರೀತಿಯ ನೋಟ ಇವರುಗಳಿಗೆ ಪರಮಾಶ್ಚರ್ಯ ವಾಗುತ್ತದೆ!


ಆದರೇ ಇದೇ ಸತ್ಯ!


ಈ ದುಡಿಮೆಯಿಂದ ಆರಕ್ಕೆ ಏರಲಿಲ್ಲ ಮೂರಕ್ಕೆ ಇಳಿಯಲಿಲ್ಲ ಎನ್ನುವುದು ತಿಳಿಯುತ್ತದೆ.


ಈ ದುಭಾರಿ ನಗರ ನಮ್ಮಗಳಿಗೆ ಅಲ್ಲಾ ಸ್ವಾಮಿ ಎಂಬ ನಿರ್ಧಾರಕ್ಕೆ ಬರುತ್ತಾರೆ.


ಏನೂ ಮಹಲುಗಳು, ಏನೂ ರಸ್ತೆಗಳು, ಏನೂ ಜನ, ಏನೂ ದುಡ್ಡು ಎಲ್ಲಾ ಕೇವಲ ಕಣ್ಣಿನಿಂದ ದೂರ ನಿಂತು ನೋಡಲು ಮಾತ್ರ! ಕೈಯಿಂದ ಸ್ಪರ್ಷಿಸಿದರೇ ಅಂಗೈಯಲ್ಲಿಯೇ ಮಾಯ ಎನಿಸುತ್ತದೆ.


ಹಿಂತಿರುಗಿ ನೋಡಿದರೇ ಇಲ್ಲಿಗೆ ಬಂದಾಗ ಹೇಗಿದ್ದರೂ ಹಾಗೆಯೇ ಇದ್ದಾರೆ. ಅದೇ ಬಡತನ. ಅದೇ ಮೂರುಕಾಸು ಕೈಯಲ್ಲಿ. ಮಕ್ಕಳು ಓದಲಿಲ್ಲ. ನಿತ್ಯ ನೋಡುವ ಕನಸಿನ ಗುರಿಯನ್ನು ಯಾರೊಬ್ಬರೂ ಸೇರಲಿಲ್ಲ! ಸ್ವಂತದಾದ ಒಂದು ಚಿಕ್ಕ ನೆಲೆಯನ್ನು ಪಡೆಯಲಾಗಲಿಲ್ಲ. ಬರೀ ಕನಸು ಕನಸು!


ಒಂದು ದಿನ!


ಅದೇ ರೀತಿಯಲ್ಲಿ ಮದ್ಯ ರಾತ್ರಿಯಲ್ಲಿ. ಯಾಕೋ ಈ ನಗರವೇ ಪರಕೀಯ ಎನಿಸಿ ಅದೇ ರಸ್ತೆ ಬದಿಯಲ್ಲಿ ಮೇಜೆಸ್ಟಿಕ್ ಬಸ್ ನಿಲ್ಧಾಣದ ಕಡೆಗೆ ಬಾರವಾದ ಹೆಜ್ಜೆಗಳನ್ನು ಹಾಕುತ್ತಾನೆ.


ಒಂದೇ ವ್ಯತ್ಯಾಸ ಈಗ ಅಂದು ಬೆಂಗಳೂರಿಗೆ ಬಂದಾಗ ಇದ್ದಂತಹ ತನ್ನವರ ನಲ್ಮೆಯ ಆ ಮೂರು ಗುಂಪುಗಳು ಇಲ್ಲಾ!


ಕೇವಲ ಇವನೂ ಮತ್ತು ಇವನ ಸಂಗಾತಿ ಮಾತ್ರ!

ಮಂಗಳವಾರ, ಮೇ 8, 2012

ವಾರಾಂತ್ಯಕ್ಕೆ ಒಟ್ಟಿಗೆ ಸೇರಿ ನಕ್ಕು ಹಗುರಾಗಿರಿ

ನಗರದ ಜಂಜಾಟದ ಬದುಕಿನಲ್ಲಿ ಯಾವೂದಕ್ಕೂ ಟೈಂ ಇರಲಾರದು.


ಬಹುಮುಖ್ಯವಾದ ಸ್ನೇಹಿತರ, ಸಂಬಂಧಿಕರ ಮದುವೆಗಳನ್ನು ಆಟೆಂಡ್ ಮಾಡಲಾರದಷ್ಟು ಬ್ಯುಸಿ ಲೈಫ್.


ನಮ್ಮಗಳ ಜೀವನ ಶೈಲಿಯನ್ನು ಕೇಳುವುದೇ ಬೇಡ ಬಿಡಿ. ದಿಕ್ಕು ತಪ್ಪಿದರೆ ವಾರಂತ್ಯದಲ್ಲೂ ಆಫೀಸ್ ನಲ್ಲಿ ಕೂರಬೇಕಾಗುತ್ತದೆ. ಆದ್ದರಿಂದ ಹತ್ತಿರದವರ ಕಾರ್ಯಕ್ರಮಗಳು, ಪೂಜೆ ಪುರಾಸ್ಕಾರಗಳು, ಹಬ್ಬ ಹರಿದಿನಗಳು ಅಂದರೇ ಅವುಗಳು ನಮಗಲ್ಲಾ ಎಂಬುವಂತಾಗಿದೆ. ಹಬ್ಬಗಳ ದಿನಗಳಲ್ಲಿ ನಮಗೆ ರಜೆಯಿರುವುದಿಲ್ಲ. ಅಂದು ಸಹ ಕೆಲಸಕ್ಕೆ ಹಾಜರಾಗಬೇಕು. ಹಬ್ಬಗಳು ಇಲ್ಲದ ದಿನಗಳಂದು ನಮ್ಮಗಳಿಗೆ ರಜಾ. ಅಂದು ಎಲ್ಲೂ ಹೋಗದೇ ಮನೆಯಲ್ಲಿ ಕಣ್ಣು ತುಂಬಿ ನಿದ್ದೆ ಮಾಡಿಬಿಡಬೇಕು ಎಂಬ ನಿರ್ಧರವನ್ನು ಬಹುತೇಕ ಮಂದಿ ಮಾಡಿಕೊಳ್ಳುತ್ತಾರೆ.


ಆದರೇ ಅದು ನೆರವೇರಲಾರದು!


ಇಂಥ ಸಮಯದಲ್ಲಿಯೇ ಕಳೆದ ವಾರಾಂತ್ಯದಲ್ಲಿ ನಮ್ಮ ಸಹ ಉದ್ಯೋಗಿಯ ಮಗಳ ಮೊದಲನೇ ವರುಷದ ಹುಟ್ಟಿದ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು.


ಅದರಲ್ಲಿ ಪಾಲ್ಗೊಳ್ಳುವವರೆಗೂ ಇದು ಪ್ಯಾಮಿಲಿ ಪಂಕ್ಷನ್ ರೀತಿ ಇದೆ ಅನಿಸುತ್ತದೆ. ಕೊನೆಯಲ್ಲಿ ಹೋಗಿ ಊಟ ಮಾಡಿಕೊಂಡು ಬಂದರೇ ಸಾಕು ಅನಿಸಿತ್ತು.


ಆದರೇ ಮುಂಚೆನೇ ಪಾಲ್ಗೊಂಡು ತುಂಬ ಒಳ್ಳೆಯ ಕೆಲಸ ಮಾಡಿದೆ ಅನಿಸಿತು.


ಈ ಮೊದಲೇ ತಿಳಿದಿತ್ತು. ಇವರ ತಂದೆ ತಾಯಿಗಳು ಜನ ಬಳಕೆಯವರು. ಕಿರಿಯರು, ಹಿರಿಯರು, ಸಂಬಂಧಿಕರು, ಸ್ನೇಹಿತರು ಎಂಬ ಯಾವೊಂದು ಬೇದಭಾವವಿಲ್ಲದೇ ಎಲ್ಲರನ್ನೂ ಸಮನಾಗಿ ಗಮನಿಸುವುದು, ಪ್ರೀತಿಯಿಂದ ಮಾತನಾಡಿಸುವುದನ್ನು ಕಂಡು ನಾನು ನಮ್ಮ ಸ್ನೇಹಿತನೊಂದಿಗೆ ಆಶ್ಚರ್ಯದಿಂದ ಮಾತನ್ನಾಡಿಕೊಂಡಿದ್ದೇವು. "ಇಂದು ಸಹ ಇಂಥವರು ಇದ್ದಾರಾ?" ಎಂದು.


ನಮ್ಮ ನಮ್ಮ ಮನೆಯಲ್ಲಿ ನಮ್ಮ ಹೆತ್ತವರುಗಳು ಇವರಂತೆ ಇರಲಿ ಎಂದು ಬಾವಿಸಿದ್ದು ಉಂಟು.


ಇದರ ಪ್ಲಸ್ ಪಾಯಿಂಟೋ ಏನೋ ಬರ್ತಡೇ ಪಂಕ್ಷನ್ ಸರಳವಾಗಿ ಸುಮ್ಮನೇ ಮಾಮೊಲಿ ಕಾರ್ಯಕ್ರಮವಾಗದೇ ನೆನಪಿನಲ್ಲಿ ಚಿರಸ್ಥಾಯಿಯಾಗಿ ಇರುವಂತಾಯಿತು.


ಸುಮಾರು ನೂರು ಜನಗಳು ಬಾಗವಹಿಸಿದ್ದರು ಅನಿಸುತ್ತದೆ. ಅವರ ಸಂಬಂಧಿಕರುಗಳು ಮತ್ತು ಸ್ನೇಹಿತರುಗಳೂ ಬೆಂಗಳೂರು, ಅವರ ಊರಾದ ಮಂಗಳೂರು, ಕಾಸರಗೋಡು ಕಡೆಯಿಂದೆಲ್ಲಾ ಬಂದಿದ್ದರು. ನಮ್ಮ ಸ್ನೇಹಿತನ ಕಂಪನಿಯವರು ಮತ್ತು ನಾವಂದಿಷ್ಟು ಗೆಳೆಯರೆಲ್ಲಾ ಹೋಗಿದ್ದೇವು.


ಬರ್ತಡೇ ಕೇಕ್ ಕಟ್ ಮಾಡಿ ಉಡುಗೊರೆಯ ವಿನಿಮಯವಾದ ನಂತರ ಊಟದ ಹಾಲ್ ಗೆ ಧಾವಿಸಿ ಎಷ್ಟು ಬೇಗ ಇಲ್ಲಿಂದ ಕಾಲು ಕೀಳುವೆವೋ ಎಂಬ ರೀತಿಯಲ್ಲಿ... ಈ ಮೊದಲು ನಾನು ನೋಡಿದ ಸಾಕಷ್ಟು ಕಾರ್ಯಕ್ರಮಗಳ ಚಿತ್ರಣ!


ಆದರೇ ಇಲ್ಲಿ ಪೂರ್ತಿ ತದ್ವಿರುದ್ಧ.


ಕೇಕ್ ಕಟ್ ಮಾಡಿದ ನಂತರ ಅಲ್ಲಿರುವವರೆಲ್ಲಾ ಭಾಗವಹಿಸುವಂತೆ ಪ್ರೇರಪಿಸುವ ಚಿಕ್ಕ ಚಿಕ್ಕ ಸ್ಪರ್ದೆಗಳು. ಹಾಡು, ನೃತ್ಯ. ರಸ ಪ್ರಶ್ನೇ ಬುದ್ಧಿಯನ್ನು ಚುರುಕು ಮಾಡಲು. ಇತ್ಯಾದಿ ಇತ್ಯಾದಿ ಕಾರ್ಯಕ್ರಮಗಳು. ಒಂದು ಕೌಟಂಬಿಕ ಕಾರ್ಯಕ್ರಮದಲ್ಲಿ ಇಷ್ಟೊಂದು ರಚನಾತ್ಮಕ ಕಾರ್ಯಕ್ರಮಗಳು? ನಮಗೆಲ್ಲಾ ಅಚ್ಚರಿಯಾಯಿತು.


ಹಿರಿಯರು ಕಿರಿಯರು ಎಂಬ ಯಾವೊಂದು ಬೇದವಿಲ್ಲದೇ, ಸಂಬಂಧಿಕರು, ಸ್ನೇಹಿತರು, ಅಪರಿಚತರು ಎಂಬ ಬಿಗು ಇಲ್ಲದೇ ಎಲ್ಲಾರನ್ನೂ ಅದರಲ್ಲಿ ಪಾಲ್ಗೊಳ್ಳುವಂತೆ ಮಾಡಲು ವಾತಾವರಣವನ್ನು ತಾಜಾವಾಗಿಡಲೂ ಶ್ರಮಿಸಿದ ಹೋಸ್ಟ್ ಮಂಗಳೂರಿನವಾರದ ನಮ್ಮ ಸ್ನೇಹಿತನ ತಾಯಿಯವರ ಸಂಬಂಧಿಕರು. ಅವರ ಪಾದರಸದಂತಹ ಚಟುವಟಿಕೆಯನ್ನು ಕಂಡು ನಾವುಗಳು ಒಂದೇರಡು ವರುಷ ಕಿರಿಯರಾದೇವು. ಆ ತಾಯಿಯವರು ನಿಜವಾಗಿಯೋ ಯಾವೂದೋ ಶಾಲೆಯಲ್ಲಿ ಶಿಕ್ಷಕಿಯಾಗಿರಲೇ ಬೇಕು. ಇಲ್ಲದಿದ್ದರೇ ಇಂಥ ಒಂದು ಕಾರ್ಯಕ್ರಮಗಳಲ್ಲಿ ಗೊತ್ತಿಲ್ಲದವರ ಜೊತೆಯಲ್ಲಿ ಎಲ್ಲರೂ ಪರಿಚತರು ಎಂಬ ರೀತಿಯಲ್ಲಿ ನಗುವಿನ ಅಲೆಯಲ್ಲಿ ಮತ್ತು ನಮ್ಮನೆಲ್ಲಾ ಸ್ಪರ್ಧೆಯಲ್ಲಿ ಭಾಗವಹಿಸಲೇ ಬೇಕೆಂಬ ಮನಸ್ಸು ಮಾಡುವವಂತೆ ಕಾರ್ಯಕ್ರಮವನ್ನು ನಡೆಸಿಕೊಟ್ಟರಲ್ಲಾ ಗ್ರೇಟ್!


ಕಾರ್ಯಕ್ರಮ ಮುಗಿದ ಮೇಲೆ ಅವರುಗಳು ಪ್ರತಿಯೊಬ್ಬರ ಬಳಿ ಸಾಗಿ ಹೇಗೆ ಕಾರ್ಯಕ್ರಮ ಬಂತೂ? ಚೆನ್ನಾಗಿತ್ತಾ? ಎಂದು ನಗುಮುಖದಿಂದ ಕೇಳಿಕೊಂಡಿದ್ದೂ ಅವರ ಬಗ್ಗೆ ಹೆಗ್ಗಳಿಕೆಯಾಯಿತು. "ಸಾರಿ ನನಗೆ ಜಾಸ್ತಿ ಕೊಂಕಣಿಯೇ ಬಂದು ಬಿಡುತ್ತೇ, ಕನ್ನಡವನ್ನೇ ಮಾತನಾಡಲೂ ಪ್ರಯತ್ನಿಸಿದರೂ ಅಲ್ಲಾಲ್ಲಿ ಕೊಂಕಣಿ ನುಸಳಿಬಿಡುತ್ತೂ" ಅಂದರೂ. ನಾನು ಹೇಳಿದೇ "ಪರವಾಗಿಲ್ಲ ಆ ಭಾಷೆಯ ನುಡಿಗಳನ್ನೂ ಕನ್ನಡದ ಜೊತೆ ಜೊತೆಯಲ್ಲಿ ಕೇಳುವ ಅವಕಾಶ ಮಾಡಿಕೊಟ್ಟರಲ್ಲಾ ಥ್ಯಾಂಕ್ಸ್!"


ಅಲ್ಲಿನ ಪುಠಾಣಿಗಳು ಅಷ್ಟೇ ಎಷ್ಟೊಂದು ಸುಂದರವಾಗಿ ಚಿಕ್ಕ ಚಿಕ್ಕ ಹೆಜ್ಜೆ ಗಳನ್ನು ಹಾಕಿ ನೃತ್ಯವನ್ನು ಮಾಡಿ ಹಿರಿಯರನ್ನೇಲ್ಲಾ ಮೂಕರನ್ನಾಗಿ ಮಾಡಿದರು.


ಹಿರಿಯ ಯಜಮಾನರು ಮತ್ತು ಕಿರಿಯ ಯುವತಿ ಸೇರಿ ನಟಿಸಿದ ಬಬ್ರುವಾಹನ ಅರ್ಜುನ ಕಾಳಗದ ಯಕ್ಷಗಾನ ಪ್ರಸಂಗ ತುಂಬ ಚೆನ್ನಾಗಿತ್ತು. ಅದನ್ನು ಇಂದಿನ ನಮ್ಮ ರಾಜಕೀಯ ಪಕ್ಷಗಳ ಚುನಾವಣೆಯ ಘೋಷಣೆಗೆ ಪರಿವರ್ತಿಸಿದ್ದು, ಅವರ ಕ್ರೀಯಶೀಲತೆಗೆ ಸಾಕ್ಷಿ.


ನಮ್ಮ ಸ್ನೇಹಿತರು ಸಹ ಸ್ವತಃ ಉತ್ತಮ ಗಾಯಕರುಗಳು, ಅವರ ಎರಡು ಹಾಡುಗಳು ಯಾವುದೇ ಗಾಯನ ಮಂಡಳಿಗೂ ಕಡಿಮೆ ಇರಲಿಲ್ಲ.


ಎರಡು ಮೂರು ಗಂಟೆಗಳ ಕಾಲ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ.


ಪ್ರತಿಯೊಂದು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪುಠಾಣಿ ಬಹುಮಾನಗಳನ್ನು ನಮ್ಮ ಗೆಳೆಯರು ಕೊಡುತ್ತಿದ್ದರು.


ನಂತರ ಕೊನೆಯಲ್ಲಿ ಮಾಡಿದ ಮಂಗಳೂರು ಶೈಲಿ ಊಟ ಮರೆಯುವಂತೆಯೇ ಇಲ್ಲಾ.


ಇದೇ ಮೊದಲೂ ಅನಿಸುತ್ತದೆ. ಈ ರೀತಿಯಲ್ಲಿ ಯಾವುದೇ ಬೋರ್ ಅನಿಸದೇ ಮನತುಂಬಿ ಭಾಗವಹಿಸಿದ ಕಾರ್ಯಕ್ರಮ. ಇದರಲ್ಲಿ ಭಾಗಿ ಆದವರಿಗೆಲ್ಲಾ ಇದೇ ಅನುಭವಾಗಿರುತ್ತದೆ. ಇದು ಸತ್ಯ!


ಇದು ಒಂದು ವಿನೊತನವಾದ ಯೋಚನೆ. ನಾವುಗಳು ಗಮನಿಸಿರಬಹುದು. ನಮ್ಮ ಕುಟುಂಬಗಳಲ್ಲಿ ಜರುಗುವ ಕಾರ್ಯಕ್ರಮಗಳ ಶೈಲಿಯನ್ನು. ಎಲ್ಲರೂ ಬರುವರು. ಗೊತ್ತಿರುವವರ ಜೊತೆಯಲ್ಲಿ ನಾಲ್ಕು ನಗೆಯ ಮಾತುಗಳು. "ಹಾಯ್! ಬಾಯ್!" ಅಷ್ಟೇ. ಎಲ್ಲಾರಿಗೂ ಧಾವಂತ ಒಂದು ನಿಮಿಷ ಹೆಚ್ಚಿಗೆ ಕಳೆಯಲು ಜೀಪುಣತನ.


ಮನತುಂಬಿ ಒಟ್ಟು ಕುಟುಂಬ ನಕ್ಕು ಎಷ್ಟು ವರುಷಗಳಾಗಿರುತ್ತವೋ ದೇವರೇ ಬಲ್ಲ! ಇನ್ನೂ ಹತ್ತಿರದವರು, ಸಂಬಂಧಿಕರುಗಳು, ಸ್ನೇಹಿತರೆಲ್ಲಾ ಒಟ್ಟಿಗೆ ಸೇರಿ ನಗುವುದು, ಚರ್ಚಿಸುವುದು, ಸಂವಾಧಿಸುವುದು, ಪರಸ್ಪರ ತಮ್ಮ ಅನುಭವಗಳ ಶೇರ್ ಮಾಡಿಕೊಳ್ಳುವುದು ಇಂದಿನ ದಿನಗಳಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಬಿಡಿ.


ನಿಮಗೆ ತಿಳಿದಿರಬಹುದು. ಹಿಂದೆ ೧೨ ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ತಮ್ಮ ರಾಜಾಧಾನಿ ಕಲ್ಯಾಣ ನಗರದಲ್ಲಿ ಪ್ರತಿಯೊಬ್ಬ ಸ್ತ್ರೀ ಸಾಮಾನ್ಯನಿಗೂ ಅನುಭವ ಮಂಟಪ ಎಂಬ ಚರ್ಚ ಗೋಷ್ಠಿಯಲ್ಲಿ ನಿತ್ಯ ಭಾಗವಹಿಸುವ ಅವಕಾಶವನ್ನು ಕಲ್ಪಿಸಿದ್ದರು. ದಿನ ನಿತ್ಯ ತಮ್ಮಲ್ಲಿರುವ ಯಾವುದೇ ರೀತಿಯ ಸಂಶಯಗಳು, ಅನುಭವಗಳನ್ನು ಸಂವಾದದ ಮೊಲಕ, ಹಾಡುಗಳನ್ನು ಹಾಡುವ ಮೊಲಕ, ವಚನಗಳನ್ನು ಕಟ್ಟುವ ಮೊಲಕ ಸಮಾಜದ ಮತ್ತು ತಮ್ಮ ವೈಕ್ತಿಕ ಜೀವನವನ್ನು ಉನ್ನತ ಸ್ತರಕ್ಕೇರಿಸಿಕೊಳ್ಳಲೂ ಎಷ್ಟರ ಮಟ್ಟಿಗೆ ಹೆಸರುವಾಸಿಯಾಗಿತ್ತು ಎಂದು.


ಇಂದು ಇಬ್ಬರೂ ಸೇರಿ ನಾಲ್ಕು ಮಾತನಾಡುವುದೇ ಕಷ್ಟವಾದಂತಹ ದಿನಗಳಾಗಿವೆ. ನಮ್ಮಲ್ಲಿರುವ ಯಾವುದೇ ಭಾವನೆಯನ್ನು ಮತ್ತೊಬ್ಬರ ಬಳಿ ಹೇಳಿಕೊಳ್ಳಲು ಸಂಕೋಚಪಡುವಂತಾಗಿದೆ. ಯಾವೂದೋ ಗೊತ್ತಿಲ್ಲದ ಗುರಿಯ ಬೆನ್ನ ಹತ್ತಿ ಪ್ರತಿಯೊಬ್ಬರೂ ಓಡುತ್ತಿರುವಂತೆ ಭಾಸವಾಗುತ್ತದೆ. ಸಹಕಾರ, ಸ್ನೇಹ, ಪ್ರೀತಿ,ನಗೆ, ನೆರೆಹೊರೆ ಎಂಬ ಮಾತುಗಳು ಹೆಚ್ಚು ಕ್ಲೀಷೆ ಎನ್ನುವಂತಾಗಿದೆ.


ಈ ರೀತಿಯಲ್ಲಿ ಗೊತ್ತಿರುವವರ, ನೆರೆ ಹೊರೆಯಲ್ಲಿ ನಡೆಯುವ ಚಿಕ್ಕ ಚಿಕ್ಕ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ರಚನಾತ್ಮಕವಾಗಿ ಮಾಡಿಕೊಳ್ಳಬೇಕು. ಇದರಿಂದ ಕಿರಿಯ ಪೀಳಿಗೆಗೂ ಸಹ ಇವರೆಲ್ಲಾ ನಮ್ಮವರು ಎಂಬ ಬಂಧನ ಬರುತ್ತದೆ. ಹಿರಿಯರಿಂದ ಕಲಿಯುವಂತಹ ಅನುಭವಗಳ ಮಾತುಗಳು ಕಿರಿಯರಿಗೆ ಸಂಜೀವಿನಿಯಂತಾಗುತ್ತದೆ. ಹಿರಿಯರಿಗೂ ಬೋರ್ ಅನಿಸುವಂತಹ ಲೈಫ್ ಕಿರಿಯರ ಆಟ ಪಾಠಗಳನ್ನು ಆಹ್ಲಾದಿಸಿ ಅವರುಗಳು ಒಂದೇರೆಡು ವರುಷ ಚಿಕ್ಕವರಾಗುವರೇನೋ!!


ಇಂಥ ಎಲ್ಲಾರೂ ಒಟ್ಟಿಗೆ ಸೇರುವ ಕಾರ್ಯಕ್ರಮಗಳು ಕನಿಷ್ಠ ಅಂದರೂ ಎರಡು ತಿಂಗಳಿಗೋ, ಮೂರು ತಿಂಗಳಿಗೋ ಒಮ್ಮೆ ಕಡಿಮೆ ಖರ್ಚಿನಲ್ಲಿ ಜರುಗಬೇಕು.


ಕಲ್ಯಾಣದ ಅನುಭವಮಂಟಪದಂತೆ ನಮ್ಮ ನಮ್ಮ ಅನುಭವ, ಯೋಚನೆ, ಚಿಂತನೆ, ವ್ಯಕ್ತಿತ್ವದ ದರ್ಶನವನ್ನು ನಮ್ಮ ಜೊತೆ ಇರುವವರ ಜೊಡಿ ಹಂಚಿಕೊಳ್ಳುವಂತಾಗಲಿ. ಇದರಿಂದ ವ್ಯಕ್ತಿ ತನ್ನ ನೆಲೆಯಲ್ಲಿಯೇ ಅತಿ ಉನ್ನತ ಮಟ್ಟಕ್ಕೆ ಬೆಳೆಯಲು ತನ್ನ ಸುತ್ತಲಿನ ಸಮಾಜವನ್ನು ಆ ಹಂತಕ್ಕೆ ತೆಗೆದುಕೊಂಡು ಹೋಗಲು ಪ್ರೇರಕವಾಗುತ್ತದೆ.


ಏನಂತಿರೀ?