ಗುರುವಾರ, ಮಾರ್ಚ್ 29, 2012

ರಾಜ-ಕಾರಣ

ಆರಿಸಿ ಕಳಿಸಿದ ಮತದಾರರುಗಳು ನಿಟ್ಟುಸಿರು ಬಿಡುವಂತಾಗಿದೆ. ನಾಯಕರುಗಳು, ಜನ ಪ್ರತಿನಿಧಿಗಳು ಎಂದು ಹೇಳಿಕೊಂಡು ತಿರುಗುವ. ಶಾಸನವನ್ನು ನಾವುಗಳೇ ರಚಿಸುವವರು ಎಂದು ಬೀಗುವವರ. ಯಾವುದೇ ಹೊಸ ಯೋಜನೆ ಕಾರ್ಯಕ್ರಮಗಳು ನಡೆದರು ಅಲ್ಲಿ ನಾವಿರಬೇಕು ಎನ್ನುವವರ ಅಸಲಿ ನಿಯತ್ತು ಜನಗಳಿಗೆ ಗೊತ್ತಾಗಿಬಿಟ್ಟಿದೆ.

ಚುನಾವಣೆಯ ವೇಳೆ ಇಲಿಯಂತೆ ಬಂದು. ಹಾಗೆ ಹೀಗೆ ಎಂದು ಸಾವಿರಾರು ಸುಳ್ಳು ಆಶ್ವಾಸನೆಗಳನ್ನು ರಂಗು ರಂಗಾಗಿ, ಅಂಗೈಯಲ್ಲಿಯೇ ಆಕಾಶವನ್ನು ತೋರಿಸುವವರು ಇವರುಗಳೇನಾ ಎನ್ನುವಂತಾಗಿದೆ.

ಜನಲೋಕಪಾಲ್ ಬೇಕೇ ಬೇಕು ಎಂದು ೭೦ರ ವಯಸ್ಸಿನ ಅಣ್ಣಾ ಕನಸು ಹಗಲು ಕನಸಾಗುವವಂತಾಗಿದೆ. ಯಾಕೆಂದರೇ ಈ ಒಂದು ಶಾಸನ ಹೊರಬೀಳುವುದನ್ನು ತಡೆಯಲು ಪಕ್ಷ ಬೇದ ಮರೆತು ಪ್ರತಿಯೊಬ್ಬ ಜನಪ್ರತಿನಿಧಿಯು ಎದ್ದು ನಿಂತು ಕೊಂಡು ಹೋರಾಡುತ್ತಿದ್ದಾರೆ.

ಜನರಿಗೆ ಏನೂ ಬೇಕೋ ಅದನ್ನು ನಾವುಗಳು ಕೊಡುತ್ತೇವೆ. ನಮ್ಮ ಸರ್ಕಾರವೇ ನಿಮ್ಮದು ಎಂದು ಸುಳ್ಳು ಸಿನಿಮಾ ತೋರಿಸಿದ ಮಂದಿಯೇ ಇಂದು ಜನರ ಆಶೋತ್ತರಗಳಿಗೆ ಎಳ್ಳು ನೀರು ಬಿಡುವಂತಹ ಮನಸ್ಸು ಮಾಡುತ್ತಿದ್ದಾರೆ.

ಯುವಕರುಗಳಿಗೆ, ಮುಂದಿನ ಪೀಳಿಗೆಗೆ ಮಾದರಿಯಾಗಿರಬೇಕಾದವರೇ ಜನರಿಂದ ಛೀ! ಥೋ! ಎಂದು ಉಗುಳಿಸಿಕೊಳ್ಳುವ ಮಟ್ಟಕ್ಕೆ ಬರುತ್ತಿದ್ದಾರೆ.

ಪ್ರಜಾಪ್ರಭುತ್ವ ಎಂದರೇ ಪ್ರಜೆಗಳೆ ತಮ್ಮ ಸರ್ಕಾರವನ್ನು ನಡೆಸುವ ಸವಲತ್ತು ಹೊಂದಿರುವಂತಹದ್ದು.

ನೋಡಿ ಈಗ ಇರುವವರು ಜನರ ಆಸೆಗಳಿಗೆ ಕನಸುಗಳಿಗೆ ಕೊಳ್ಳಿ ಇಡುವಂತಹ ಮನಸ್ಥಿತಿಯವರುಗಳಾಗಿದ್ದಾರೆ.

ಭ್ರಷ್ಟಾಚಾರ ಯಾವ ರೀತಿಯಲ್ಲಿ ಸರ್ವವ್ಯಾಪಿಯಾಗಿದೆ ಎಂದರೇ.. ಅದು ಮಾಮೂಲು ಬಿಡಿ ಎಂಬ ಮಟ್ಟಿಗೆ ಹಾದಿಯಿಂದ ಅಂತ್ಯದವರೆಗೆ ಜೀವನಾಡಿಯಾಗಿದೆ.

ಇನ್ನಾದರೂ ಭಾರತದಲ್ಲಿ ಹೊಸ ಬೆಳಕಿನ ಕಿರಣ ಮೂಡುವುದು ಎಂಬ ದೂರದ ಆಶಾ ಭಾವನೆಯೇ ಇಲ್ಲದಂತಾಗಿದೆ.

ಮನುಷ್ಯನಿಗೆ ಹಣ ಎಷ್ಟು ಬೇಕು? ಹಣವೇ ಜೀವನವಾ?

ನೋಡಿರಬಹುದು ಎಲ್ಲಾ ರಾಜಕೀಯ ನಾಯಕರುಗಳ ವರಮಾನ ಘೊಷಣೆಯ ಪತ್ರವನ್ನು ಯಾರೊಬ್ಬರು ಅಂಥ ಬಡವರೇನೂ ಅಲ್ಲಾ.

ಅಂದರೇ ಒಬ್ಬ ಬಡ ಸಾಮಾನ್ಯ ಪ್ರಜೆ ರಾಜಕೀಯ ರಂಗಕ್ಕೆ ದುಮುಕಲು ಸಾಧ್ಯವಿಲ್ಲ ಎಂಬ ಮಟ್ಟಿಗೆ ಹಣವಂತರಿಗೆ ಮಾತ್ರ ರಾಜಕೀಯ ಎನ್ನುವುದನ್ನು ಅವರುಗಳ ವರಮಾನ ತೋರಿಸುತ್ತಿದೆ.

ಚುನಾವಣೆಗೆ ಏನನ್ನು ಖರ್ಚು ಮಾಡದೇ ಯಾರೂ ಜಯಗಳಿಸಲಾರದ ಸ್ಥಿತಿ ತಂದು ನಿಲ್ಲಿಸಿರುವುದು ನಮ್ಮ ದುರ್ವೀಧಿಯೇ ಸರಿ.




ಚುನಾವಣೆಯ ಭವಿಷ್ಯ ಹಣದ ಮೇಲೆ ನಿಂತಿದೆ ಅಂದರೇ.. ಮೊಲವೇ ಸರಿಯಿಲ್ಲದಾಗ ಪ್ರತಿಫಲವಾದ ರಾಜಕೀಯ ನಾಯಕರುಗಳು.. ಸರ್ಕಾರ.. ಯೋಜನೆಗಳು.. ಅಡಳಿತ.. ಇದರಲ್ಲಿ ಪ್ರಾಮಾಣಿಕತೆಯನ್ನು ದುರ್ಬಿನು ಹಾಕಿ ಹುಡುಕಬೇಕು ಅಷ್ಟೇ.

ಬಡ ಮಕ್ಕಳಿಗೆ ಕೊಡುವಂತಹ ಉಚಿತ ಆಹಾರ, ಪೌಷ್ಟಿಕಾಂಶಗಳಲ್ಲೂ ಸಹ ನಮ್ಮ ಅಧಿಕಾರಶಾಯಿಗಳು ಮೇಯುತ್ತಾರಲ್ಲಾ ಶಿವಾ ಶಿವಾ...!!

ಇನ್ನೂ ಏನೂ ಬಿಡುತ್ತಾರೆ ಯೋಚಿಸಿ!

ಹೀಗೆ ಯಾವುದರಲ್ಲೂ ಅನುಮಾನದಿಂದ ನೋಡುವಂತಹ/ನೋಡಬೇಕಾದಂತಹ ವ್ಯಕ್ತಿಗಳ ಸೃಷ್ಟಿಯಾಗುತ್ತಿದೆಯೇ? ಗೊತ್ತಿಲ್ಲಾ.

ನೈತಿಕತೆ ಎಂಬುದು ಪುಸ್ತಕದ ಮಾತು. ನಿಜ ಜೀವನದಲ್ಲಿ ಅವುಗಳಿಗೆ ಯಾರು ಕೇರ್ ಮಾಡಲ್ಲಾ ಎನ್ನುವುದನ್ನು ನಾವುಗಳು ನಮ್ಮ ಕಿರಿಯ ಪೀಳಿಗೆಗೆ ಕಿವಿ ಮಾತಿನಲ್ಲಿ ಹೇಳುವಂತಹ ಸ್ಥಿತಿ ಬಂದಿದೆ.

ಜಟ್ಟಿ ಬಿದ್ದರು ಮೀಸೆ ಮಣ್ಣಾಗಲಿಲ್ಲ ಎಂಬಂತೆ ಯಾವೆಲ್ಲಾ ಅಪಾಧಾನೆಗಳು ತನ್ನ ಮೇಲೆ ಇದ್ದರೂ ಸರ್ಕಾರದ ಅತಿ ಉನ್ನತ ಸ್ಥಾನಗಳು ತನಗೆ ಮಾತ್ರ ಮೀಸಲು ಎಂಬ ರೀತಿಯಲ್ಲಿ ನಮ್ಮ ಜನಗಳು ಮರ್ಯಾದೆಯನ್ನು ಮೀರಿ-ಮೆಟ್ಟಿ ಅಪಹಾಸ್ಯಕ್ಕೆ ಇಡಾಗುತ್ತಿರುವುದು ಯಾವುದರ ದ್ಯೋತಕ!!........?

ತಾವೇ ಎಲ್ಲಾ ಬಾರಿ ಅ ಸ್ಥಾನದಲ್ಲಿ ಕೂರಬೇಕು. ತನ್ನ ವಂಶದವರೇ ಅಧಿಕಾರದಲ್ಲಿ ಇರಬೇಕು. ತಾನು ಮಾತ್ರ ಎಲ್ಲಾ ಗೌರವವಕ್ಕೆ ಅರ್ಹ! ತನ್ನವರಿಗೆ ಮಾತ್ರ ಎಲ್ಲಾ ಅನುಕೂಲ ಸಿಗಬೇಕು.ಎಂಬ ಮನಸ್ಸಾದರೂ ಯಾಕೆ ಈ ಮಂದಿಗೆ.

ಗಮನಿಸಿರಬಹುದು. ಒಂದು ಚಿಕ್ಕ ಉದ್ಯೋಗಕ್ಕೂ ಎಷ್ಟೊಂದು ಸಂದರ್ಶನ, ಪರೀಕ್ಷೆಗಳನ್ನು ಮಾಡುತ್ತಾರೆ. ಆ ವ್ಯಕ್ತಿ ಪರೀಕ್ಷೆಗಳಲ್ಲಿ ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ಮತ್ತು ಉತ್ತಮ ವ್ಯಕ್ತಿತ್ವವವನ್ನು ಹೊಂದಿದರೆ ಮಾತ್ರ ಸೇಲೆಕ್ಟ್. ಅನಂತರವೋ ಪ್ರೊಬೇಶನರಿ ಪೀರಿಯಡ್ ಆರು ತಿಂಗಳು ಅಥಾವ ಒಂದು ವರುಷ. ಅವನ ಕೆಲಸ ಚೆನ್ನಾಗಿದ್ದರೆ ಮುಂದುವರಿಕೆ ಇಲ್ಲ ಎಂದರೇ ಔಟ್!

ಅದರೇ ಅತಿ ಉನ್ನತವಾದ ಎಮ್.ಎಲ್.ಎ, ಎಂ.ಪಿ. ಸಿ.ಎಂ ಮುಂತಾದ ರಾಜಕಾರಣದ, ದೇಶದ ಅಧಿಕಾರವನ್ನು ನಡೆಸುವಂತಹ ಮುಂದಾಳುಗಳಿಗೆ ಈ ರೀತಿಯ ಯಾವಾ ಪರೀಕ್ಷೆಗಳಿವೆ ಹೇಳಿ?

ಕೇವಲ ಜನ ಮತದಿಂದ ಆರಿಸಿ ಬಂದು ಮುಖ್ಯ ಆಯಕಟ್ಟು ಜಾಗಗಳಲ್ಲಿ ಸ್ಥಾಪಿತರಾಗಿಬಿಡುತ್ತಾರೆ. ಆ ಸ್ಥಾನದ ಮಹತ್ವವಾದರೂ ಈ ಮಂದಿಗಳಿ ಗೊತ್ತಿರಲಾರದು ಅನಿಸುತ್ತದೆ? ಒಬ್ಬ ಎ.ಎಲ್.ಎ ಅಥವಾ ಎಂ.ಪಿ ಲಕ್ಷ ಜನಗಳ ಪ್ರತಿನಿಧಿ. ಈ ವ್ಯಕ್ತಿ ಅಷ್ಟು ಮಂದಿಯ ಪ್ರತಿನಿಧಿ. ಅಷ್ಟೂ ಜನಗಳ ಕನಸಿನ ಸಾರಥಿ ಅಲ್ಲವಾ?

ಅದರೇ ಅದು ಅವನಿಗೆ ಎಲ್ಲಿ ಗೊತ್ತಾಗಬೇಕು? ಎಲ್ಲಾ ಮರೆತು ತನಗೆ ಅನಿಸಿದ್ದನ್ನು ಮಾಡುತ್ತಾನೆ.

ಅಭಿವೃದ್ಧಿ ಎಂಬುದು ಆವನಿಗೆ ಮಾತ್ರ! ಜನಗಳ ಕಷ್ಟ ಸುಖಗಳು ನೆನಪಿಗೂ ಸಹ ಬರುವುದಿಲ್ಲವೇನೋ..

ನನಗೆ ಅನಿಸುತ್ತದೆ. ನಮ್ಮ ಜನಗಳು ಇನ್ನಾದರೂ ಬುದ್ಧಿವಂತರಾಗಬೇಕು. ಕೇವಲ ಕ್ಷಣಿಕವಾದ ಹಣ, ಹೆಂಡದಾಸೆಗೆ ಮಾರೂ ಹೋಗದೇ ಯಾರೂ ಉನ್ನತವಾದ ದೂರದೃಷ್ಟಿ ಮತ್ತು ಕನಸನ್ನು ಹೊಂದಿರುವವನು. ಯಾರೂ ನಯಾ ಪೈಸೆಯನ್ನು ಜನಗಳಿಗೆ ಕೊಡುವುದಿಲ್ಲವೋ. ಯಾರೂ ವಿದ್ಯವಂತ ಮತ್ತು ನಂಬುವಂತಹ ಪ್ರಾಮಾಣಿಕನಾದ ಸಾಮಾನ್ಯ ವ್ಯಕ್ತಿಯನ್ನು ಗೆಲ್ಲಿಸುವಂತಾಗಬೇಕು.

ಈ ರೀತಿಯ ಬದಲಾವಣೆಯ ಗಾಳಿ ಯಾವ ಕಾಲಕ್ಕೆ ಬೀಸುವುದೋ ಕಾದು ನೋಡಬೇಕು. ಸರ್ಕಾರ ಏನೂ ಮಾಡುತ್ತೇ ನಮ್ಮ ವ್ಯವಸಾಯವನ್ನು ಯಾರೂ ತಪ್ಪಿಸಲಾರರರು ಎಂಬ ಮನಸ್ಸನ್ನು ಬಿಡಬೇಕು. ನಮ್ಮಗಳ ರಕ್ಷಣೆಗೆ, ಅಭಿವೃದ್ಧಿಗೆ ಉತ್ತಮವಾದ ಸರ್ಕಾರ ಎಷ್ಟು ಮುಖ್ಯ ಎಂಬ ಪಾಠವನ್ನು ಅರಿಯಬೇಕು.

ಒಬ್ಬ ಒಬ್ಬ ಮತದಾರ ಸರಿಯಾದರೇ ಒಬ್ಬ ಜನಪ್ರತಿನಿಧಿ ಸರಿಯಾಗಿರುವವನು. ಒಬ್ಬ ಜನಪ್ರತಿನಿಧಿ ಸರಿಯಾಗಿದ್ದರೆ ಅವನು ಪ್ರತಿನಿಧಿಸುವ ಅವನ ಕ್ಷೇತ್ರದ ಪ್ರತಿಯೊಂದು ಸರ್ಕಾರಿ ಇಲಾಖೆಯಲ್ಲಿರುವ ಅಧಿಕಾರಿ ವರ್ಗ ಸರಿಯಾಗಿ ಕೆಲಸ ಮಾಡುವುದು. ಹೌದಲ್ಲವಾ? ಮನೆಯ ಯಜಮಾನ ಗಟ್ಟಿ ಮತ್ತು ನೈತಿಕವಾಗಿದ್ದರೆ ಮನೆಯ ಮಂದಿ ಕೊಂಚವಾದರೂ ಅಂಜಿಕೊಂಡು ನಡೆಯುತ್ತಾರೆ.

ಪ್ರತಿಯೊಬ್ಬರೂ ಸಹ ನೈತಿಕತೆ, ಮರ್ಯಾದೆಗೆ,ಉತ್ತಮ ಚಿಂತನೆಗೆ, ಉತ್ತಮ ಕೆಲಸಕ್ಕೆ ಬೆಂಬಲ ಕೊಡುವಂತ ಸಾಮಾಜಿಕ ಬದಲಾವಣೆಯನ್ನು ತರಬೇಕು.

ಬುಧವಾರ, ಮಾರ್ಚ್ 28, 2012

ಜಗವೇ ಒಂದು ನಾಟಕ ಮಂದಿರ!

ಯಾವತ್ತಿಗೂ ಒಂದು ಬೆರಗನ್ನು ಸದಾ ಇಟ್ಟುಕೊಂಡಿರುವ ಕಾರ್ಯ ಕ್ಷೇತ್ರ ಎಂದರೇ ಅದು ನಾಟಕ ಮತ್ತು ಸಿನಿಮಾ ರಂಗ. ಅದು ಪ್ರತಿಯೊಬ್ಬರನ್ನು ಸೂಜಿಯಂತೆ ಆಕರ್ಷಿಸುತ್ತದೆ. ಅದಕ್ಕೆ ಮರುಳಾಗದವರು ಇಲ್ಲವೇ ಇಲ್ಲ ಎನಿಸುತ್ತದೆ. ನಟ/ನಟಿಯರುಗಳು ಅಂದ್ರೇ ಕೇಳುವುದೇ ಬೇಡ ಅವರ ಜೋತೆಯಲ್ಲಿ ಒಂದು ಫೋಟೋ ತೆಗೆಸಿಕೊಳ್ಳಲೇ ಬೇಕು ಅನ್ನಿಸುತ್ತದೆ.

ನಾಟಕ ಎನ್ನುವ ಶಬ್ಧವನ್ನು ನಾವುಗಳು ನಿತ್ಯ ನಮ್ಮ ಮಾತಿನಲ್ಲಿ ಬಳಸಿಯೇ ಬಳಸಿರುತ್ತೇವೆ. ಏನಾದರೂ ಸ್ವಲ್ಪ ಜಾಸ್ತಿ ಮಾತನಾಡಿದರೇ.. ಯಾಮಾರಿಸಿದರೇ.. "ಜಾಸ್ತಿ ನಾಟಕ ಮಾಡಬ್ಯಾಡ!" ಎನ್ನುತ್ತೇವೆ.

ಅಂದರೇ ನಾವುಗಳು ಸ್ವಭಾವತಃ ನಟನೆಯನ್ನು ನಮ್ಮ ನಮ್ಮಲ್ಲಿಯೇ ಇಟ್ಟುಕೊಂಡಿರುತ್ತೇವೆ. ಯೋಚಿಸಿ ಹತ್ತು ಹಲವು ಬಾರಿ ನಾವು ತುಂಬ ಚೆನ್ನಾಗಿ ನಂಬುವ ರೀತಿಯಲ್ಲಿ ನಟಿಸಿರುತ್ತೇವೆ.ಯಾಕೆಂದರೇ ಆ ಸಮಯದಲ್ಲಿ ಏನಾದರೂ ಮಾಡಿ ನಾವುಗಳು ಬಚಾವ್ ಆಗಬೇಕಿರುತ್ತದೆ.

ನಾಟಕ/ಸಿನಿಮಾ ಅಂದರೇ ಸುಳ್ಳು ಮಾತ್ರ! ಆದರೇ ಅದನ್ನು ಕಲಾತ್ಮಕವಾಗಿ ಅಭಿನಯಿಸುತ್ತಾರಲ್ಲಾ! ಅದಕ್ಕೆ ಮೆಚ್ಚಬೇಕು.




ಸುಳ್ಳಿನ ಮಾಯ ಬಜಾರ್ ಎಂಥವರಿಗೂ ಆ ಕ್ಷಣಕ್ಕೆ ಇಷ್ಟವಾಗುತ್ತದೆ. ನಾವುಗಳು ನಮ್ಮ ನಿತ್ಯ ನಿಜ ಜೀವನದ ಜಂಜಾಟದಿಂದ ಒಂದೇರಡು ಘಂಟೆಗಳನ್ನು ಕಳೆಯುತ್ತೇವೆ ಅಂದರೇ.. ಅದು ನಾಟಕ ನೋಡುವಾಗ ಅಥಾವ ಸಿನಿಮಾ ನೋಡುವಾಗ. ನಿಜ ಜೀವನ ಯಾವತ್ತಿಗೂ ಬೋರು!

ಅದಕ್ಕೇ ಇರಬೇಕು ಇಂದಿಗೂ ಏನೇ ತಂತ್ರಙ್ಞಾನ ಬಂದಿದ್ದರೂ, ಟಿ.ವಿ, ವಿಡಿಯೋ ಇತ್ಯಾದಿ ನಮ್ಮ ಮುಂದೆ ಇದ್ದರೂ. ಅದು ಸುಳ್ಳು. ಅದು ನಿಜವಲ್ಲಾ ಎಂದು ಗೊತ್ತಿದ್ದರೂ ಸಹ ಪ್ರತಿಯೊಬ್ಬರೂ ಯಾವುದೇ ಸಿನಿಮಾ ಶೋಟಿಂಗ್, ನಾಟಕ ಅಭಿನಯ ನಡೆಯುತ್ತಿರುವುದನ್ನು ಬೆರಗುಗಣ್ಣಿನಿಂದ ವೀಕ್ಷಿಸುತ್ತಾರೆ.

ಚಾನ್ಸ್ ಸಿಕ್ಕಿದರೇ ಸಾಕು, ನಾನು ಒಂದು ಕೈ ನೋಡಿಯೇ ಬಿಡೋಣ ಎನ್ನುತ್ತಿರುತ್ತೇವೆ ಯಾಕೆ?

ಪ್ರತಿಯೊಬ್ಬರೂ ಕ್ಯಾಮರಾ ತಮ್ಮ ಮುಂದೆ ಬಂದರೇ ಸಾಕು ತಮ್ಮ ನೈಜತೆಯಿಂದ ಅಭಿನಯದ ಕಡೆ ಮುಖ ಮಾಡುವವರಲ್ಲಾ ಯಾಕೆ?

ಅದಕ್ಕೆ ಇರಬೇಕು ಹಿರಿಯರು ಹೇಳಿದ್ದಾರೆ. ಜಗವೇ ಒಂದು ನಾಟಕ ಮಂದಿರ! ನಾವುಗಳೆಲ್ಲಾ ಪಾತ್ರಧಾರಿಗಳು! ಆ ದೇವರೇ ಸೂತ್ರಧಾರಿ ನಿರ್ದೇಶಕ!! ಅವನಾಡಿಸಿದಂತೆ ನಾವುಗಳು ವರ್ತಿಸುತ್ತಿದ್ದೇವೆ ಅಂತೆ?

ಇಸ್ ಇಟ್?

ನಾನಾಗ ಐದು ಆರನೇ ತರಗತಿಯಲ್ಲಿ ಓದುತ್ತಿದ್ದೆ ಅನಿಸುತ್ತದೆ. ನೆನಪಿನಲ್ಲಿ ಇರುವುದು ಆ ವಯಸ್ಸಿನದೇ ಚಿತ್ರ. ಬಯಲಾಟ ಎಂದು ಹಳ್ಳಿಯಲ್ಲಿ ವರುಷಕ್ಕೆ ಒಮ್ಮೆ ಊರ ದೇವರ ಕೆಂಡಾರ್ಚನೆ ಉತ್ಸವದ ಪ್ರಯುಕ್ತ ಶ್ರೀ ದೇವಿ ಮಹಾತ್ಮೆ ನಾಟಕವನ್ನು ಪ್ರದರ್ಶಿಸುವವರು. ಎರಡು ತಿಂಗಳಿಗೆ ಮುಂಚೆನೇ ನಿತ್ಯ ರಾತ್ರಿ ಒಂಬತ್ತರ ನಂತರ ಊರಿನವರು ಪ್ರಾಕಟಿಸ್ ಮಾಡುತ್ತಿದ್ದರು. ಅವರುಗಳು ಮಾಡುತ್ತಿದ್ದಾ ಅಲಾಪನವನ್ನು, ತಾಳ,ತಬಲ, ಹಾರ್ಮೊನಿಯಮ್ ಸಂಗೀತದ ಅಲೆಯನ್ನುನಿದ್ದೆಗೆ ಜಾರುವ ಮೊದಲು ಕಿವಿಯ ಮೇಲೆ ಹಾಕಿಕೊಳ್ಳುತ್ತಿದ್ದೇವು. ನಾವುಗಳು ಆ ಪ್ರಾಕಟಿಸ್ ನೋಡಲು ಹೋಗುತ್ತೇವೆ ಅಂದರೇ ದೊಡ್ಡವರು "ಏ ಸುಮ್ಮನಿರ್ರಿ ಈಗ ನೋಡಿದರೇ ಪೂರ್ಣ ನಾಟಕವನ್ನು ಹಬ್ಬದ ದಿನ ನೋಡಲು ಇಷ್ಟ ಆಗುವುದಿಲ್ಲ" ಎಂದು ನಮ್ಮ ಬಾಯಿ ಮುಚ್ಚುತ್ತಿದ್ದರು.

ನಾಟಕವನ್ನು ಮಾಡುತ್ತಿದ್ದ ಎಲ್ಲಾ ಪಾತ್ರಧಾರಿಗಳು ಗಂಡಸರೇ. ಹೆಣ್ಣು ಪಾತ್ರವನ್ನು ಗಂಡಸರೇ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಸಾಮಾಜಿಕ ನಾಟಕಗಳಿಗೆ ಹೆಣ್ಣು ಪಾತ್ರಧಾರಿಗಳನ್ನು ಸಿಟಿಗಳಿಂದ ಕರೆಯಿಸುತ್ತಿದ್ದರು. ಹಾಗೆ ಒಂದೇರಡು ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸಿದ್ದು ನೆನಪು.

ನಾಟಕವನ್ನು ಪ್ರದರ್ಶಿಸುವ ದಿನವನ್ನು ನೋಡಬೇಕು. ಏನೂ ರಂಗು ರಂಗಿನ ಸೀನರಿಗಳು, ಜಗಮಗಿಸುವ ವಿಧ್ಯುತ್ ದ್ವೀಪಗಳ ಅಲಂಕಾರ, ಬಣ್ಣ ಬಣ್ಣದ ವೇಷಭೂಷಣ, ಮೇಕಪ್, ಬಂಗಾರ ಬಣ್ಣದ ಕೀರಿಟ, ಗದೆ, ಬಿಲ್ಲು, ಭಾಣ,ಸಿಂಹಾಸನ.. ಉಫ್ ನಮಗಂತೂ ಅಂದು ಸಂಜೆ ಐದು ಗಂಟೆಯಿಂದ ಮುಂಜಾನೆ ನಾಟಕ ಮುಗಿಯುವವರೆಗೂ ಕುತೂಹಲ ಬರಿತರಾಗಿ ಅಲ್ಲಿಯೇ ಠೀಕಾಣಿಯುರುತ್ತಿದ್ದೇವು. ನಾಟಕದ ಮುಂದೆ ಇರುವುದಕ್ಕಿಂತ ಸ್ಟೇಜ್ ಹಿಂದೆ ಅವರುಗಳು ಧರಿಸುತ್ತಿದ್ದ ವೇಷಭೊಷಣಗಳನ್ನು ನೋಡುವುದಕ್ಕೆ ತುಂಬ ಇಷ್ಟವಾಗುತ್ತಿತ್ತು.

ಕಪ್ಪು ಮುಖದ ನಮ್ಮ ಅಣ್ಣಂದಿರುಗಳು ಪುಲ್ ಬಿಳಿಯರಾಗಿ ಗುರುತು ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಸ್ವರ್ಗದಿಂದ ಧರೆಗೆ ಇಳಿದ ದೇವತೆಗಳ ರೀತಿಯಲ್ಲಿ ಶಿವ,ವಿಷ್ಣು, ಬ್ರಹ್ಮ, ಮಹಿಷಸುರ, ದೇವಿ, ಋಷಿ ಮುನಿಗಳ ಪಾತ್ರಗಳು ಭಾಸವಾಗುತ್ತಿದ್ದರು.

ನಾವುಗಳು ನಿದ್ದೆಗೆಟ್ಟು ಪೂರ್ಣ ನಾಟಕವನ್ನು ನೋಡುತ್ತಿದ್ದೇವು. ಹೇಗೆ ಅವರುಗಳಿಗೆ ಮೇಕಪ್ ಮಾಡುತ್ತಾರೆ. ಅವರುಗಳ ಡ್ರೇಸ್ ಹೇಗೆ ಹಾಕುತ್ತಾರೆ ಇತ್ಯಾದಿ ಇತ್ಯಾದಿ ಅಪರೂಪದ ನೋಟಗಳನ್ನು ಕಣ್ಣುತುಂಬಿಕೊಳ್ಳಲು ಕಾತರಿಸುತ್ತಿದ್ದೇವು.

ದೊಡ್ಡವರಾದ ಮೇಲೆ ನಾವುಗಳು ಈ ರೀತಿಯ ಒಂದು ನಾಟಕದ ಪಾತ್ರವನ್ನು ಮಾಡಿಯೇ ತಿರಬೇಕು ಎಂದು ಅಂದು ನಿರ್ಧರಿಸಿಕೊಳ್ಳುತ್ತಿದ್ದೇವು.




ಪೌರಾಣಿಕ ನಾಟಕವಾಗಿದ್ದ ಇದನ್ನು ನಮ್ಮ ಊರಿನವರು ಭಯ ಭಕ್ತಿಯಿಂದ ಅಭಿನಯಿಸುತ್ತಿದ್ದರು. ನಾಟಕ ಮಾಡುತ್ತಿದ್ದ ಪಾತ್ರಧಾರಿಗಳು ಸಹ ಹಾಗೆಯೇ ಉಪವಾಸವಿದ್ದು ಬಣ್ಣ ಹಚ್ಚಿಕೊಂಡು ಅಭಿನಯಿಸುತ್ತಿದ್ದರು.

ಊರಿನವರಿಗೂ ಏನೋ ನಂಬಿಕೆ. ಈ ನಾಟಕ ಆಡುವುದರಿಂದ ಮಳೆ ಬೆಳೆ ಈ ವರ್ಷ ಚೆನ್ನಾಗಿ ಆಗುತ್ತದೆ ಎನ್ನುತ್ತಿದ್ದರು. ಸುತ್ತಲಿನ ಹತ್ತು ಹಲವು ಊರಿನವರುಗಳು ಈ ನಾಟಕ ನೋಡುವುದಕ್ಕೆ ಹಿಂಡು ಹಿಂಡಾಗಿ ಬರುತ್ತಿದ್ದರು.

ಈ ನಾಟಕದ ಮುಖ್ಯ ಹೈಲೈಟ್ ಅಂದರೇ ಸಾರಥಿ! ಅವನು ಮಾತಾನಾಡುತ್ತಿದ್ದ ತಮಾಷೆಯ ಮಾತುಗಳು ಚಿಕ್ಕವರನ್ನೆಲ್ಲಾ ಹೊಟ್ಟೆ ತುಂಬ ನಗಿಸುತ್ತಿತ್ತು. ಇದು ನಮ್ಮ ಮನದಲ್ಲಿ ಶಾಶ್ವತವಾಗಿರುತ್ತಿತ್ತು. ಈ ಪಾತ್ರಕ್ಕೆ ತುಂಬ ತಯಾರಿಯೇನೂ ಬೇಕಿರಲಿಲ್ಲ.

ಆ ದಿನಗಳಲ್ಲಿ ಇಂದು ಇದ್ದಂತೆ ಟಿ.ವಿ ಗಳಿರಲಿಲ್ಲವಲ್ಲಾ!

ನಾಟಕ ಮುಂಜಾನೆ ಮುಗಿಯುತ್ತಿತ್ತು. ನಾಟಕದ ಪರದೆ, ಸೀನರಿಗಳನ್ನು ಆ ಜಾಗದಿಂದ ತೆಗೆದುಕೊಂಡು ಹೋಗುತ್ತಿದ್ದರು.ಆಮೇಲೆ ನಾವುಗಳು ಆ ಜಾಗಕ್ಕೆ ದಾಳಿ ಇಡುತ್ತಿದ್ದೇವು. ಅಲ್ಲಿ ನಮಗೆ ಬಣ್ಣ ಬಣ್ಣದ ಬಟ್ಟೆ, ಕಾಗಜ, ಗ್ಲಾಸ್, ಮಿಂಚು ಕಾಗದ ಇನ್ನೂ ಏನೂ ಏನೂ ಸಿಕ್ಕರೂ ಆಯ್ದುಕೊಳ್ಳುತ್ತಿದ್ದೇವು. ಅವುಗಳನ್ನೆಲ್ಲಾ ತಂದು ನಾವುಗಳು ಸಹ ಅದೇ ರೀತಿಯಲ್ಲಿ ಪಾತ್ರ ಅಭಿನಯವನ್ನು ಮಾಡಲು ತಯಾರಾಗುತ್ತಿದ್ದೇವು. ಬೇಸಿಗೆ ರಜೆ ಪೂರ್ತಿ. ನೆನಪು ಇರುವವರೆಗೂ ಅದೇ ನಾಟಕದ ಗುಂಗು ಮನದ ತುಂಬ. ಮನೆಯಲ್ಲಿನ ಟವಲ್, ಪಂಚೆ, ಸೀರೆಗಳೆ ನಾಟಕದ ಪರದೆಗಳು, ತೆಂಗಿನ ಕಾಯಿ ಮತ್ತು ಕೋಲೇ ಗಧೆ, ಬಿಲ್ಲುಗಳನ್ನು ಭಾಣಗಳನ್ನು ನಾವೇ ಮಾಡಿಕೊಂಡು, ರಟ್ಟಿನಲ್ಲಿ ಕೀರಿಟಗಳನ್ನು ಧರಿಸಿಕೊಳ್ಳುತ್ತಾ ಸಿದ್ಧರಾಗುತ್ತಿದ್ದೇವು. ಮನೆಯಲ್ಲಿನ ಅಮ್ಮಂದಿರ ಮುಖದ ಪವಡರ್ರೇ ಮೇಕಪ್ಪಿಗೆ ಬಳಸುತ್ತಿದ್ದೇವು. ನೆನಪಿನಲ್ಲಿ ಉಳಿದ ಯಾವುದೋ ಒಂದು ದೃಶ್ಯವನ್ನು ಅಭಿನಯಿಸುತಿದ್ದೇವು.ಪ್ರೇಕ್ಷಕರುಗಳು ನಾವೇ ಪಾತ್ರಧಾರಿಗಳು ನಾವೇ!!

ನೆನಪಿಸಿಕೊಂಡರೇ ಆ ವಯಸ್ಸಿನಲ್ಲೂ ಅಷ್ಟೊಂದು ಆಕರ್ಷಿತರಾಗಿದ್ದೇವೆ ಈ ನಾಟಕಕ್ಕೆ ಅನ್ನಿಸುತ್ತದೆ?

ಆ ವಯಸ್ಸೇ ಹಾಗೆ ಅನಿಸುತ್ತದೆ... ಮನಸ್ಸಿನಲ್ಲಿ ಬಂದಿದ್ದನ್ನೂ ಕಾರ್ಯರೂಪಕ್ಕೆ ಯಾವ ರೀತಿಯಲ್ಲೋ ತಂದು ಬಿಡುತ್ತಿದ್ದೇವು. ಮುಂದೇನಾಗುತ್ತದೋ ಎಂಬುದನ್ನು ಏನಂದರೂ ಯೋಚಿಸುತ್ತಿರಲಿಲ್ಲ. ಪ್ರತಿಯೊಂದನ್ನೂ ಅನುಕರಿಸುತ್ತಿದ್ದೇವು. ಮನಸ್ಸಿಗೆ ಇಷ್ಟಪಟ್ಟಿದ್ದನ್ನು ಮಾಡುತ್ತಿದ್ದೇವು.

ನಾನು ಮತ್ತು ನನ್ನ ಗೆಳೆಯರುಗಳು ಸೇರಿ ಕುವೆಂಪು ರಚಿತ "ಬೆರಳ್ಗೆ ಕೊರಳ್" ನಾಟಕ ಪುಸ್ತಕವನ್ನು ತೆಗೆದುಕೊಂಡು, ಈ ನಾಟಕವನ್ನು ಅಭಿನಯಿಸೋಣ ಎಂದುಕೊಂಡು ಒಂದೇರಡು ದಿನ ನಮ್ಮ ಕಣದಲ್ಲಿ ಪ್ರಾಕ್ಟಿಸ್ ಮಾಡಿದ್ದ ನೆನಪು!

ಒಡೆದ ಕನ್ನಡಿಯ ಗಾಜನ್ನು ತೆಗೆದುಕೊಂಡು ನೆರಳು ಬೆಳಕಿನ ಆಟದಲ್ಲಿ ಏನೇನೂ ಚಿತ್ರಗಳನ್ನು ಬೆರಳುಗಳ ಮೊಲಕ ಕತ್ತಲಿನ ಕೋಣೆಯಲ್ಲಿ ಸಿನಿಮಾ ಅಂದುಕೊಂಡು ಬಿಡುತ್ತಿದ್ದದ್ದು.

ಉಫ್! ಇದೆಲ್ಲವನ್ನು ದೊಡ್ಡವರಾಗುತ್ತಾ ದೊಡ್ಡವರಾಗುತ್ತಾ ನಿಜ ಮರ್ಮ ಗೊತ್ತಾಗುತ್ತಾಲೂ ಏನೋ ಮಾಡುವುದನ್ನು ಬಿಟ್ಟು ಬಿಟ್ಟೇವೆನೋ ತಿಳಿಯದು. ಇಂದು ನೆನಸಿಕೊಂಡರೇ ಅಚ್ಚರಿಯಾಗುತ್ತದೆ.

ಇದ್ಯಾಲ್ಲಾ ಯಾಕೆ ನೆನಪಾಯಿತು ಅಂದರೇ..... ನನ್ನ ಗೆಳೆಯರಾದ (ಯೋ) ಅವರು ನೀವು ಒಂದು ಕಥೆ ಬರಯಬೇಕು ಸಾರ್! ಅದು ತುಂಬ ಇಂಟರ್ ಸ್ಟಿಂಗ್ ಆಗಿರಬೇಕು. ಅದು ಥ್ರೀಲ್, ಮಿಸ್ಟರಿಯಾಗಿರಬೇಕು. ಕೆಲವೇ ಕೆಲವು ಗೆಳೆಯರನ್ನು ಒಂದಿರುವ ಪಾತ್ರಗಳಿರುವ ಚಿಕ್ಕ ಕಥೆಯನ್ನು ಬರಿಯಿರಿ. ಅದನ್ನ ಕಿರುಚಿತ್ರದ ರೀತಿಯಲ್ಲಿ ನಾವೇ ಶೋಟ್ ಮಾಡೋಣ.. ನಾವುಗಳೇ ಅಭಿನಯಿಸೋಣ.. ಎಂದು ನನ್ನಲ್ಲಿ ತಮ್ಮ ಹೊಸ ಸೃಜಶೀಲತೆಯ ಯೋಚನೆಯನ್ನು ಹಂಚಿಕೊಂಡರೂ. [ಹೇಳಿದ್ದು ೨೭ ಮಾರ್ಚ್. *ಕೊನೆಯಲ್ಲಿ ಓದಿ ಆ ದಿನದ ಮಹತ್ವ]

ಹೌದಲ್ಲವಾ! ಯಾಕೆ ಮಾಡಬಾರದು ಅನಿಸಿತು. ಅವರುಗಳು ಸಹ ಆ ರಂಗದಲ್ಲಿ ತಮ್ಮದೇ ಛಾಪನ್ನು ತೋರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಸಮಯ ಮತ್ತು ಅವಕಾಶ ಬೇಕು ಅಷ್ಟೇ.

ಎಲ್ಲರೂ ತಮ್ಮ ಕೈಯಲ್ಲಿ ಆಗುವುದಿಲ್ಲ! ಅದು ನಮ್ಮಂತವರಿಗಲ್ಲಾ! ಎಂದುಕೊಳ್ಳುತ್ತಾ ತಮ್ಮಲ್ಲಿರುವ ನಿಜವಾದ ಸಾಮರ್ಥ್ಯವನ್ನು ಅದುಮಿಟ್ಟುಕೊಂಡಿರುತ್ತಾರೆ.

ಆದರೇ ಈ ರೀತಿಯಲ್ಲಿ ನಾವುಗಳು ಮಾಡುವ ನಮ್ಮ ನಿತ್ಯ ಕೆಲಸದಿಂದ ಬೇರೆಯದ್ದೇ ಏನಾದರೂ ಒಂದನ್ನೂ ಮಾಡುವುದು ನಮ್ಮ ನೀರಸ ಜೀವನಕ್ಕೆ ಸಂಜೀವಿನಿ ಇದ್ದ ಹಾಗೆ.

ನೋಡಬೇಕು ಅವರುಗಳು ಕೇಳಿದಂತಹ ಕಥೆಯನ್ನು ರಚಿಸಲು ನನ್ನಿಂದ ಸಾಧ್ಯವಾ? ಗೊತ್ತಿಲ್ಲಾ! ನಾನೇನೂ ಕಥೆಗಾರನಲ್ಲ.

ಏನೋ ತಿಳಿದ, ಅನಿಸಿದ, ಭಾವಿಸಿದ ಯೋಚನೆಗಳಿಗೆ ಅಕ್ಷರ ರೂಪವನ್ನು ಈ ಬ್ಲಾಗಿನಲ್ಲಿ ಕೊಡುತ್ತಿದ್ದೀನಿ. ಎಷ್ಟು ಜನಕ್ಕೆ ಈ ನನ್ನ ಪದಗಳ ರಂಗೋಲಿ ಇಷ್ಟವಾಗಿದಿಯೋ, ಇಷ್ಟವಾಗಿಲ್ಲವೋ? ಗೊತ್ತಿಲ್ಲಾ!




[* ಮಾರ್ಚ ೨೭, ವಿಶ್ವ ನಾಟಕ ದಿನ. ರಂಗಶಂಕರ ಬೆಂಗಳೂರಿನಲ್ಲಿ ವೈವಿಧ್ಯಮಯವಾದ ಕಾರ್ಯಕ್ರಮಗಳು ಜರುಗಿದ್ದಾವೆ. ಎಲ್ಲಾ ಹವ್ಯಾಸಿ ನಾಟಕ/ಸಿನಿಮಾ ಕಲಾವಿದರುಗಳು, ನಾಟಕ/ಸಿನಿಮಾ ನಿರ್ದೇಶಕರುಗಳು ಮತ್ತು ನಾಟಕ/ಸಿನಿಮಾ ರಚನಕಾರರುಗಳು ಸೇರಿ ಹತ್ತು ನಾಟಕಗಳನ್ನು ಅಂದೇ ರಚಿಸಿ. ಅಂದೇ ಪ್ರಾಕ್ಟೀಸ್ ಮಾಡಿ. ಅಂದೇ ಪ್ರದರ್ಶಿಸಿದ್ದಾರೆ. ಇದು ಒಂದು ಹೊಸ ಪ್ರಯೋಗ ಮತ್ತು ದಾಖಲೆಯೇ ಸರಿ. ಅಂದು ರಂಗ ಶಂಕರ ನಾಟಕ ಮಂದಿರದ ಮುಂಭಾಗದಲ್ಲಿ ಹೌಸ್ ಫುಲ್ ಬೋರ್ಡ ಇತ್ತಂತೇ!

ನಾಟಕ ಎಂದರೇ ಸಿನಿಮಾ ಮಂದಿಗೆ ಗರಡಿ ಮನೆಯಿದ್ದಂತೆ. ಇಂದಿನ ಎಲ್ಲಾ ಪ್ರತಿಭಾವಂತ ನಟ/ನಟಿಯರುಗಳ ಮೊಲ ಬೇರು ನಾಟಕ ರಂಗವಾಗಿದೆ. ಇದು ಬೆಳೆದರೇ ಅದು ಬೆಳೆಯುವುದು. ಆದ್ದರಿಂದ ನಾಟಕವೇ ಅತ್ಯಂತಹ ಹೆಚ್ಚಿನ ಜವಾಬ್ದಾರಿಯುತವಾದ ಕಲೆಯಾಗಿದೆ.]

ಭಾನುವಾರ, ಮಾರ್ಚ್ 18, 2012

ಹೊಸ ಹೊಸ ಮನ್ವಂತರಕ್ಕೆ

ಕಾಲಾಯಾ ತಸ್ಮಯಾ ನಮ:!

ಈ ರೀತಿಯಲ್ಲಿ ದಿನಗಳು ಎಷ್ಟು ಬೇಗ ಬೇಗ ಕಳೆದು ಹೋಗುತ್ತವು ನಮಗಂತೂ ಗೊತ್ತಾಗುವುದಿಲ್ಲ. ನೆನ್ನೆ ಮೊನ್ನೆ ಎಂದದ್ದು ಆಗಲೇ ತಿಂಗಳು, ವರುಷಗಳಾಗಿರುತ್ತವೆ.

ಪ್ರತಿಯೊಬ್ಬರಿಗೆ ಪತಿಭಾರಿ ತಪ್ಪದ ರೀತಿಯಲ್ಲಿ ತಾನು ಜನಿಸಿದ ದಿನ ಬರುತ್ತದೆ. ಒಂದು ವರುಷ ಹೆಚ್ಚಾಗಿ ತನ್ನ ವಯಸ್ಸಿಗೆ ಸೇರಿಕೊಳ್ಳುತ್ತದೆ. ಜೀವಕ್ಕೆ ಒಂದು ವರುಷ ಹೆಚ್ಚಾಗಿ ವಯಸ್ಸಾಗುತ್ತದೆ. ಒಂದು ಕಡೆ ಅಪ್ತರು ಜನ್ಮ ದಿನದ ಶುಭಾಶಯಗಳನ್ನು ಹೇಳುತ್ತಾರೆ. ಇದನ್ನು ಖುಷಿಯಿಂದ ಆಚರಿಸಬೇಕೋ? ಏನೋ? ಗೊತ್ತಿಲ್ಲಾ?ಇದೇ ಜೀವನ.

ಕಳೆದ ದಿನಗಳ ರೀತಿಯಲ್ಲಿ ಇಂದು ಮತ್ತು ಮುಂದೆ ಬರುವ ದಿನಗಳು ಇರುವುದಿಲ್ಲ. ದೇಹಕ್ಕೆ ವಯಸ್ಸೆಂಬುದು ಬಿಡದೇ ಕಾಡುವ ನಿತ್ಯ ಸಂಗಾತಿ. ಹದಿಹರೆಯದ ಶಕ್ತಿ, ಸಡಗರ, ಬೆರಗು ದಿನಗಳದಂತೆ ಎಲ್ಲಿ ಹೋಗುತ್ತದೋ ಗೊತ್ತಾಗುವುದಿಲ್ಲ. ದೇಹದ ನೋಟದಲ್ಲಿ ಅದನ್ನು ಧಾರಾಳವಾಗಿ ಕಾಣಬಹುದು. ಅದನ್ನು ಯಾವ ರೀತಿಯಲ್ಲಿ ಬಚ್ಚಿಡಲು ಆಗುವುದಿಲ್ಲ. ಅದರೇ ಮನಸ್ಸನ್ನು ಮನಸ್ಸು ಮಾಡಿದರೇ ಇನ್ನೂ ಹದಿನೆಂಟರ ಯುವಕನಂತೆ/ಯುವತಿಯಂತೆ ಇಟ್ಟುಕೊಳ್ಳಬಹುದು. ಅದು ನಾವುಗಳು ಯೋಚಿಸುವ ರೀತಿಯ ಮೇಲೆ ನಿಂತಿರುತ್ತದೆ.

ನಿತ್ಯ ಜೀವನದ ಚಕ್ರದಲ್ಲಿ ಎಷ್ಟೊಂದು ಮಂದಿಗಳು ಹತ್ತಿರ ಬರುತ್ತಿರುತ್ತಾರೆ. ಅಷ್ಟೆ ಮಂದಿಗಳು ದೂರ ಸರಿಯುತ್ತಿರುತ್ತಾರೆ.

ಒಂದು ವರುಷದ ಹಾದಿಯಲ್ಲಿ/ಕೊನೆಯಲ್ಲಿ ಬಂದು ನಿಂತು ಗಮನಿಸಿದಾಗ ನಮಗೆ ಗೊತ್ತಾಗುತ್ತದೆ, ಎಷ್ಟು ಮಂದಿಗಳನ್ನು ಅಪ್ತರನ್ನಾಗಿ ಮಾಡಿಕೊಂಡಿರುತ್ತೇವೆ. ಎಷ್ಟು ಮಂದಿಗಳನ್ನು ನಮ್ಮ ನಡಾವಳಿ, ನಮ್ಮ ಚಿಕ್ಕತನ, ನಮ್ಮ ದುಷ್ಟತನ, ನಮ್ಮ ಸ್ವಭಾವದಿಂದ ದೂರ ಮಾಡಿಕೊಂಡಿರುತ್ತೇವೆ. ನಮ್ಮದೇಯಾದ ಯಾವುದೋ ಒಂದು ಕೊಂಕು ಮಾತು ಜೀವಕ್ಕೆ ಜೀವವಾದವರನ್ನೂ ಶಾಶ್ವತವಾಗಿ ಬೇರೆ ಮಾಡಿಕೊಂಡಿರುತ್ತೇವೆ.

ಮೊನ್ನೆ ಕಳೆದ ಸಿಹಿ ಕ್ಷಣಗಳು ಇಂದು ವಿಷದ ನೆನಪಾಗಿ ಕಾಡುತ್ತವೆಯಲ್ಲಾ.. ಅನ್ನಿಸುತ್ತದೆ...

ಅಂದು ನಾನೇ ಒಂದು ಹೆಚ್ಚಿಗೆ ಮಾತನ್ನಾಡದೇ ನಾನೇ ಮೌನವಹಿಸಿ ಇರಬೇಕಾಗಿತ್ತು. ನಿತ್ಯ ಸಂಗಾತಿಯಾಗಿದ್ದಾ ಆ ನನ್ನ ಗೆಳೆಯ/ಗೆಳತಿಯನ್ನು ಇಂದು ಹೇಗೆ ಮುಖಾತಾಃ ನೋಡುವುದು ದೇವನೇ!! ಎಂಬ ನಿಟ್ಟುಸಿರು. ಆದರೇ ಮಿಂಚಿ ಹೋದ ಆ ಕ್ಷಣವನ್ನು ಪುನಃ ಹೇಗೆ ವಾಪಸ್ಸು ತರುವುದು ಗುರು?

ಹೀಗೆ ಗೊತ್ತಾಗದ ಸಮಯದಲ್ಲಿ ನಮ್ಮ ಬಳಿ ಸುಳಿದ ಎಂಥೆಂತಹ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳದೇ ದಿಕ್ಕೆಟ್ಟು ಪರಿತಪಿಸಿರುತ್ತೇವೆ. ಅಂಥ ಸುವರ್ಣವಕಾಶಕ್ಕಾಗಿ ಜೀವನಪರ್ಯಂತಾ ಪುನಃ ಕಾಯಬೇಕಾಗುತ್ತದೆ.




ನಮ್ಮ ಬದುಕಿಗೆ ಒಂದು ಚಿಕ್ಕದಾದ ಸಹಾಯ ಮಾಡುವ ಚೈತನ್ಯವಿದ್ದರೂ.. ಯಾವುದೋ ದುರಾಸೆಯಿಂದ, ಯಾವುದೋ ಬಿಗುಮಾನದಿಂದ ಹತ್ತಿರದವಾರದ ನಮ್ಮವರಿಗೆ ಏನೂ ಮಾಡದವರಾಗಿರುತ್ತೇವೆ. ಆ ಸಮಯಕ್ಕೆ ಅವನೇನೂ ನಿತ್ಯ ನಮ್ಮ ಸಹಾಯ ಕೇಳಲಾರ. ನಿತ್ಯ ನಮ್ಮ ಮನೆಗೆ ಬರಲಾರರು. ಯಾವುದೋ ಒಂದು ಕೆಟ್ಟ ಘಳಿಗೆಯ ಕಾರಣದಿಂದ ನಮ್ಮ ಕಡೆಗೆ ಸಹಾಯ ಹಸ್ತವನ್ನು ಚಾಚಿರುತ್ತಾನೆ ಎಂಬ ಸಮಾನ್ಯ ಙ್ಞಾನವನ್ನು ಉಪಯೋಗಿಸಿ ಯೋಚಿಸಿರುವುದಿಲ್ಲ.

ಜೀವನವೆಂಬ ಪಾಠಶಾಲೆಯಲ್ಲಿ ಪ್ರತಿ ಕ್ಷಣವು ಹೊಸ ಹೊಸ ಪರೀಕ್ಷೆಯನ್ನು ನಮ್ಮ ನಮ್ಮಲ್ಲಿಯೇ ಎದುರಿಸಬೇಕಾಗಿರುತ್ತದೆ. ಆ ಪರೀಕ್ಷೆಯಲ್ಲಿ ಹೇಗೆ ಹೇಗೆ ಹಿಂದಿನ ಅನುಭವದ ಸಾರವನ್ನು ಅನುಸರಿಸಿ ಹೇಗೆ ಪಾಸು ಮಾಡುತ್ತೇವೆ ಎಂಬುದು ನಮ್ಮ ಯಶಸ್ಸು, ಸಾಧನೆಗಳೇ ಪ್ರಮಾಣ ಪತ್ರಗಳಾಗಿರುತ್ತವೆ.

ಯಾರ್ಯಾರೊದೋ ಅಸರೆಯಿಂದ ಯಾವ್ಯಾವೋ ಆಸೆಗಳನ್ನು ಕನಸುಗಳನ್ನು ಹಿಡೆರಿಸಿಕೊಳ್ಳಲು ನಿತ್ಯ ಹಾದಿಯನ್ನು ಸವೆಸುತ್ತಿರುತ್ತೇವೆ.

ನಮ್ಮ ನಮ್ಮ ಇತಿಮಿತಿಗೆ ಸಿಗುವಷ್ಟು ಯಶಸ್ಸುಗಳನ್ನು ಗಳಿಸುತ್ತೇವೆ.

ಅದು ಅವನಿಗೆ ಆ ಘಟ್ಟಕ್ಕೆ ಅದೇ ಒಂದು ಮಹಾನ್ ಸಾಧನೆ. ಯಶಸ್ಸು ಎಂಬುದು ವ್ಯಕ್ತಿ ವ್ಯಕ್ತಿಗೂ ಬಿನ್ನವಾಗಿರುತ್ತದೆ. ನಮಗೆ ಬಹುಮುಖ್ಯ ಎಂಬುದು ಮತ್ತೊಬ್ಬನಿಗೆ ಏನೂ ಅಲ್ಲವೆನಿಸುತ್ತದೆ.

ನಾವು ನಮ್ಮ ಮಟ್ಟಿಗೆ ಎಲ್ಲಾರಿಗಿಂತ ತುಂಬಾ ಒಳ್ಳೆಯವನು ಅದಕ್ಕೆ ಈ ರೀತಿಯಲ್ಲಿ ಕಷ್ಟ ನಷ್ಟಗಳನ್ನು ಅನುಭವಿಸುತ್ತಿದ್ದೇನೆ ಎಂಬ ಭಾವನೆ ಪ್ರತಿಯೊಬ್ಭರಲ್ಲಿ ಇರುತ್ತದೆ. ಅದರೇ ಗಮನಿಸಿ ನಾವು ಅಂದುಕೊಂಡಂತೆಯೇ ಎಲ್ಲಾರೂ ಅಂದುಕೊಳ್ಳುತ್ತಿರುತ್ತಾರೆ. ಹಾಗೆಯೇ ನಾನೊಬ್ಬನಲ್ಲದೇ ಜಗತ್ತಿನಲ್ಲಿ ಇರುವ ಬಹುಪಾಲು ಮಂದಿ ಅದೇ ರೀತಿಯಲ್ಲಿ ಒಳ್ಳೆಯವರಾಗಿರುತ್ತಾರೆ. ಹಾಗೆಯೇ ಪ್ರತಿಯೊಬ್ಬರಿಗೂ ತಾನು ಇರುವ ಜೀವನದಲ್ಲಿ ತನ್ನ ಬದುಕನ್ನು ಹೆಚ್ಚು ಉನ್ನತವಾಗಿ ಒಳ್ಳೆಯತನದಲ್ಲಿ ಕಾಣಬೇಕು ಮತ್ತು ದಕ್ಕಿಸಿಕೊಳ್ಳಬೇಕು ಎಂಬ ಅಕಾಂಕ್ಷೆ ಇದ್ದೇ ಇರುತ್ತದೆ.

ಪ್ರತಿ ಜೀವಿಗೂ ಆ ಚೈತನ್ಯ ಎಂಬುದು ಕೊನೆ ಉಸಿರು ಇರುವವರೆಗೂ ಇರುತ್ತದೆ ಅನಿಸುತ್ತದೆ. ನೂರಾರು ದಿನಗಳನ್ನು ತಾನು ಅನುಭವಿಸಿದರೂ ಇನ್ನೂ ಹಲವಾರು ವರುಷ ಬದುಕ ಬೇಕು ಎಂಬ ಆಸೆ ಪ್ರತಿಯೊಂದು ಜೀವಿಗೂ ಇರುತ್ತದೆ. ಯಾರೂ ಸಹ ನಿಕೃಷ್ಟವಾಗಿ ತಮ್ಮ ಬದುಕು ಇಂದಿಗೆ ಕೊನೆಯಾಗಲಿ ಎಂದು ಅಂದುಕೊಳ್ಳಲಾರರು.

ಪ್ರಾಣ ಉಸಿರು ಎಂಬುದೇ ಪ್ರತಿ ಜೀವಿಗೂ ಚೈತನ್ಯ. ಅದೇ ಪವರ್ ಅನಿಸುತ್ತದೆ. ಉಸಿರನ್ನು ಒಳಗೆ ತೆದುಕೊಳ್ಳುವುದು ಹೊರಗೆ ಬಿಡುವುದು. ಜೀವಿಯ ಉನ್ನತಿಯನ್ನು ಆ ಮೂಲಕ ಹೆಚ್ಚಿಸಿಕೊಳ್ಳುವವನು ಎಂದು ಅನಿಸುತ್ತದೆ.. ಹಾಗೆಯೇ ತನ್ನಲ್ಲಿರುವ ನೇಗೆಟಿವ್ ಅಂಶವನ್ನು ಪ್ರಕೃತಿಯ ಮಡಿಲಿಗೆ ಹಾಕುತ್ತಾ ಪಾಸೀಟಿವ್ ಮಾಡಿಕೊಳ್ಳುವನು ಮತ್ತೇ ಅದನ್ನು ವಾಪಸ್ಸು ಸೇವಿಸುತ್ತಾ ತನ್ನ ಬೆಳವಣಿಗೆಯನ್ನು ಕಾಣುವನು.ಅದೇ ಜೀವ!

ಇದು ಎಂದಿಗೂ ಒಂದು ಕ್ಷಣವು ನಿಲ್ಲಲಾರದಂತಹ ಪ್ರಕ್ರಿಯೆ ಅದು ನಿಂತ ಕ್ಷಣವೇ ನಾವುಗಳು ಇರುವುದಿಲ್ಲ. ಈ ರೀತಿಯ ಪ್ರಕೃತಿಯ ಪಾಠ ನಮ್ಮ ಎಲ್ಲಾ ಏಳ್ಗೆ ಮತ್ತು ಬಾಳ್ವೆಗೆ ಅನ್ವಹಿಸಿಕೊಂಡು ಬದುಕುವುದೇ ನಮ್ಮ ಬದುಕಾಗಬೇಕು.

ಯುಗದ ಹಾದಿಯಲ್ಲಿ ಯುಗ ಯುಗಗಳೇ ಸಾಗಿದರೂ ಈ ಬದುಕು ಹೀಗೆ ಇನ್ನೂ ಹೆಚ್ಚಿಗೆ ಹಚ್ಚ ಹಸಿರಾಗಿ ಹೊಸ ಹೊಸ ಹೊವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಜೀವನ ಚೈತ್ರವಾಗಿ ವಸಂತ ಋತುವಿನೋಪಾದಿಯಲ್ಲಿ ಹೊಸ ಹೊಸ ಮನ್ವಂತರಕ್ಕೆ ತೆರೆದುಕೊಳ್ಳುತ್ತಲೇ ಇರುತ್ತದೆ. ಅಲ್ಲವಾ?

ಹೊಸ ವರುಷದ ಹೊಸ ಯುಗಾದಿಯ ಹೊಸ ಶುಭಾಶಯಗಳು!!

ಬುಧವಾರ, ಮಾರ್ಚ್ 7, 2012

ರಂಗು ರಂಗಿನ ಹೋಳಿ!!

ಹೋಳಿ ಹಬ್ಬ ರಂಗು ರಂಗಿನ ವೈವಿಧ್ಯಮಯವಾದ ಹಬ್ಬವಾಗಿದೆ. ಭಾರತದಲ್ಲಿ ಬಹುಭಾಗ ಹೆಚ್ಚಾಗಿ ಉತ್ತರ ಭಾರತದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಒಂದು ಹಬ್ಬವಾಗಿದೆ.

ಕಾಮನ ಹುಣ್ಣಿಮೆಯ ನಂತರ ಬರುವ ಬಣ್ಣದ ಹಬ್ಬ. ಕಾಮನ ಹುಣ್ಣಿಮೆಯ ರಾತ್ರಿ ಕಾಮನ ಪ್ರತಿಕೃತಿಯನ್ನು ಬೆಂಕಿಯಲ್ಲಿ ಸುಡುವ ಮೊಲಕ ಈ ಹಬ್ಬಕ್ಕೆ ಮುನ್ನುಡಿಯನ್ನು ಬರೆಯುತ್ತಾರೆ. ಮುಂಜಾನೆ ತಂದಿರುವ ತರವೇರಿ ಬಗೆಯ ಎಲ್ಲ ಬಣ್ಣಗಳ ಹೋಕಳಿಯನ್ನು ಪರಸ್ಪರ ಎರಚುವ ಮೊಲಕ ವಿವಿಧತೆಯಲ್ಲಿ ಏಕತೆಯನ್ನು, ಸಾಮರಸ್ಯವನ್ನು, ಪರಸ್ಪರರ ನಗೆಯಲ್ಲಿ, ಸಂತಸವನ್ನು ಅನುಭವಿಸುತ್ತಾರೆ.

ಮಕ್ಕಳಿಗಂತೂ ಕೇಳುವುದೇ ಬೇಡ! ವಿವಿಧ ಬಗೆಯಲ್ಲಿ ಒಂದು ವಾರದಿಂದ ಈ ಹಬ್ಬಕ್ಕಾಗಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಾರೆ. ನಾನ ಬಗೆಯ ಬಣ್ಣಗಳ ಪುಡಿಯನ್ನು ಖರೀದಿಸುವುದು. ಯಾರ್ಯಾರಿಗೆ ಈ ಬಣ್ಣವನ್ನು ಅಂದು ಎರಚಬೇಕು ಎಂದು ಲೆಕ್ಕಾಚಾರವನ್ನು ಮಾಡುತ್ತಾರೆ.

ನಮ್ಮ ಎಲ್ಲಾ ಸೀನಿಮಾಗಳಲ್ಲಿ ಹೋಳಿಯ ಬಣ್ಣವನ್ನು ಎರಚುವ ಸೀನ್ ಗಳಂತೂ ಹೇರಳವಾಗಿ ನಮಗೆ ತೋರಿಸಿದ್ದಾರೆ. ಈ ಹಬ್ಬ ಪ್ರಿಯಕರನಿಗೆ ತನ್ನ ಪ್ರೇಯಸಿಯನ್ನು ಕಾಣುವ ದಿನವಾಗಿರುತ್ತದೆ. ಪ್ರೇಯಸಿಗೆ ಗೊತ್ತಿಲ್ಲದ ರೀತಿಯಲ್ಲಿ ಬಣ್ಣದ ಸ್ನಾನ ಮಾಡಿಸುವ ದೃಶ್ಯ. ಬಣ್ಣವನ್ನು ಹಚ್ಚುವ ಮೊಲಕ ಪ್ರೇಯಸಿಯ ಮುಖವನ್ನು ಸ್ಪರ್ಷಿಸುವ ಸದಾವಕಾಶ ಇದಾಗಿರುತ್ತದೆ. ಪ್ರೇಯಸಿಯ ಜೊತೆಯಲ್ಲಿ ಬಣ್ಣದಲ್ಲಿ ಮಿಂದು ಒಂದು ಹೋಳಿಯ ಡ್ಯುಯಟ್ ಸಾಂಗ್ ನಲ್ಲಿ ನರ್ತಿಸುವುದು.. ಇತ್ಯಾದಿಯಾಗಿ ಎಲ್ಲಾ ಭಾರತೀಯ ಭಾಷೆಗಳ ಚಲನಚಿತ್ರಗಳಲ್ಲಿ ಈ ಹಬ್ಬವನ್ನು ಧಾರಳವಾಗಿ ಬಳಸಿಕೊಂಡು ಚಿತ್ರದ ಜಯವನ್ನು ಕಂಡಿದ್ದಾರೆ.

ಅಷ್ಟರ ಮಟ್ಟಿಗೆ ಈ ಹಬ್ಬಕ್ಕೆ ರಂಗು ಮೆತ್ತಿಕೊಂಡಿದೆ.

ಬಣ್ಣಗಳನ್ನು ಇಷ್ಟಪಡದವರು ಯಾರು ಇದ್ದಾರೆ ಹೇಳಿ?

ಪ್ರತಿಯೊಬ್ಬರೂ ತಮ್ಮ ಜೀವನವನ್ನು ಕಲರ್ ಫುಲ್ ಆಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾರೆ.




ಈ ಕಾಮನಬಿಲ್ಲಿನ ಏಳು ಬಣ್ಣಗಳಲ್ಲಿಯೇ ಒಂದು ಮರ್ಮವಿದೆ. ಒಂದೊಂದು ಬಣ್ಣವನ್ನು ಸಮಪ್ರಮಾಣದಲ್ಲಿ ಸೇರಿಸಿದರೇ ಮತ್ತೊಂದು ಬಣ್ಣದ ಹುಟ್ಟು. ಎಲ್ಲಾ ಬಣ್ಣಗಳ್ಳು ಸೌಮ್ಯವಾಗಿ ಸೇರಿದರೇ ಹಚ್ಚ ಹಾಲು ಬಿಳುಪು ಬಣ್ಣ. ಬಿಳಿ ಬೆಳಕನ್ನು ಒಂದು ಕೋನದಲ್ಲಿ ಗಾಜಿನಲ್ಲಿ ತೋರಿಸಿದರೇ ಎಲ್ಲಾ ಏಳು ಬಣ್ಣಗಳನ್ನು ಕಾಣಬಹುದು. ಗೊತ್ತಿಲ್ಲದ ರೀತಿಯಲ್ಲಿ ಬಿಳುಪು ಬಣ್ಣ ತನ್ನಲ್ಲಿಯೇ ಇಂಥ ಚಿತ್ತಾರವನ್ನು ಬಚ್ಚಿಟ್ಟುಕೊಂಡಿರುತ್ತದೆ. ಒಂದೊಂದು ಬಣ್ಣವು ಒಂದೊಂದು ರೀತಿಯಲ್ಲಿ ಮನಸ್ಸಿಗೆ ಮುದ ನೀಡುವಂತದ್ದು.

ಪ್ರಕೃತಿಯಲ್ಲಿ ನಾವುಗಳು ಕಾಣುವ ಪ್ರತಿಯೊಂದು ದೃಶ್ಯಗಳು ಸುಂದರ ಹೋಳಿಯ ಹಬ್ಬವನ್ನು ನೆನಪಿಸುವುದು. ಇದನ್ನು ಸೃಷ್ಟಿಸಿದ ಆ ಕತೃಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು! ನೋಡಿ ನಾವು ಕಾಣುವ ಆ ಸೊರ್ಯನನ್ನು ಮುಂಜಾನೆಯಲ್ಲಿ ಅವನು ಹೊಳೆಯುವ ಬಂಗಾರದ ಬಣ್ಣ, ಸಂಜೆಯ ಕೆಂದೂಳು. ಈ ಬಗೆಯಲ್ಲಿ ತನ್ನ ಬಣ್ಣವನ್ನು ಕ್ಷಣ ಕ್ಷಣ್ಕೊ ಬದಲಾಯಿಸುತ್ತಾ ಜಗತ್ತಿಗೆ ಬೆಳಕನ್ನು ನೀಡುತ್ತಾನೆ.

ಸಸ್ಯ ಪ್ರಬೇಧದಲ್ಲಿರುವ ವಿಭಿನ್ನವಾದ ಸಸ್ಯ ಸಂಕೋಲ ಮತ್ತು ಅವುಗಳ ಹೊವುಗಳನ್ನು ಯಾರೂ ಪುನರೊಪಿಸಲೂ ಸಾಧ್ಯವಿಲ್ಲ. ಆ ಚಿತ್ತಾರದ ಹೊವುಗಳನ್ನು ನೋಡುವುದೇ ನಮ್ಮ ಕಣ್ಣುಗಳಿಗೆ ದಿವ್ಯ ಭಾಗ್ಯ! ಅವುಗಳ ಅಲಂಕಾರವೇ ಪ್ರಕೃತಿ ಮಾತೆಯ ಕಣ್ಣಾಗಿ ಕಾಣಿಸುತ್ತದೆ.

ಆ ಹೊವುಗಳು ನಮಗೇ ಮಾತ್ರ ಎಂಬ ರೀತಿಯಲ್ಲಿ ಅವುಗಳ ಮಕರಂಧವನ್ನು ಹೀರಲು ಬರುವ ದುಂಬಿ ಸಂಕುಲಗಳ ಪರಿ ಪರಿ ರಂಗು ರಂಗಿನ ರೆಕ್ಕೆಗಳ ಚಿತ್ತಾರದ ಜಾದು ಯಾವ ಮಹಿಮನ ಕಾರ್ಯವೋ ಬಲ್ಲವನೇ ಬಲ್ಲ ಕಣ್ರೀ!

ಇದು ಒಂದು ರೀತಿಯಲ್ಲಿ ಪ್ರಕೃತಿಯ ಹಬ್ಬವೇ ಸರಿ. ಅತ್ಯಂತಹ ಸನೀಹದಿಂದ ಪ್ರತಿಯೊಂದು ಬಣ್ಣವನ್ನು ನಮ್ಮಗಳ ಮೇಲೆ ಎರಚಿಕೊಂಡು ನಾವುಗಳು ಪಡುವ ಸಂಭ್ರಮವೇ ನಾವೆಲ್ಲಾ ಪ್ರಕೃತಿಯ ಮಕ್ಕಳು. ಎಂದು ನಮ್ಮನ್ನು ನಾವುಗಳು ಪುನರ ಮನನ ಮಾಡಿಕೊಂಡಂತೆ ಅಲ್ಲವಾ?

ಕಾಮನ ಬಲಿ ಎಂದರೇ ನಮ್ಮಗಳ ಎಲ್ಲಾ ದುರಾಸೆ, ದುಃಖ ದುಮ್ಮಾನಗಳು, ಕೆಟ್ಟತನಗಳನ್ನು ಕಳಚಿಕೊಂಡು ಏಳು ಬಣ್ಣಗಳ ರೀತಿಯಲ್ಲಿ ಏಳು ಗುಣಗಳ ಏಕೀಕರಣವೇ ಈ ಹಬ್ಬದ ಆಚರಣೆ. ಇಲ್ಲಿ ಎಲ್ಲಾ ವಯೋಮಾನದ ಎಲ್ಲಾ ವರ್ಗದವರು ಈ ಬಣ್ಣಗಳ ಜೊತೆಯಲ್ಲಿ ಒಂದೇ ಎಂದು ಭಾವಿಸುವಂತಾಗಿದೆ.

ಕಲೆಗಾರನಿಗೆ ಬಣ್ಣಗಳೇ ಜೀವಾಳ ಅವುಗಳಲ್ಲಿಯೇ ಮೈದುಂಬಿಬರುವಂತಹ ಚಿತ್ರಗಳನ್ನು ರಚಿಸುವವನು. ಒಂದೊಂದು ಬಣ್ಣವನ್ನು ಒಂದೊಂದು ಭಾವನೆಯನ್ನು ತೋರಿಸಲು ಜಾಣ್ಮೆಯಿಂದ ಉಪಯೋಗಿಸುವವನು. ಬಣ್ಣಗಳ ಮಹತ್ವ ಅವನಿಗೆ ಮಾತ್ರ ಸರಿಯಾಗಿ ಗೊತ್ತು ಅನಿಸುತ್ತದೆ.

ಪ್ರತಿಯೊಬ್ಬರು ಒಂದೊಂದು ಬಣ್ಣವನ್ನು ಮೆಚ್ಚುವರು. ಆ ಮೆಚ್ಚುಗೆ ಆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತೆ,ಇದರ ಮೊಲಕ ಆ ವ್ಯಕ್ತಿಯ ಅಭಿರುಚಿಯನ್ನು ಮನೋವಿಙ್ಞಾನಿಗಳು ಕಂಡುಕೊಳ್ಳುವವರು.

ಹೀಗೆ ನಮ್ಮ ಜೀವನದಲ್ಲಿ ಬಣ್ಣಗಳೇ ತುಂಬಿಕೊಂಡಿದೆ. ಹೊಸತನದ ಹೋಳಿ ಯಾವಾಗಲೂ ನಿತ್ಯ ಚಾಲ್ತಿಯಲ್ಲಿರುತ್ತದೆ. ಬದಲಾವಣೆ ಎಂದರೇ ಬೇರೊಂದು ಬಣ್ಣದ ವಸ್ತು, ಜಾಗ, ನೋಟವಾಗಿದೆ ಅಲ್ಲವಾ? ಇದೆ ನಮಗೆ ನಮ್ಮ ಮನಸ್ಸಿಗೆ ಒಂದು ನೆಮ್ಮದಿಯನ್ನು ಕೊಡುವಂತಾಗಿದೆ. ಹಚ್ಚ ಹಸಿರು ಎಲೆಗಳನ್ನು ತುಂಬಿರುವ ದೃಶ್ಯವನ್ನು ಕಲ್ಪಿಸಿಕೊಳ್ಳಿ ಎಷ್ಟರ ಮಟ್ಟಿಗೆ ನೆಮ್ಮದಿಯನ್ನು ನಾವುಗಳು ಪಡೆಯುತ್ತೇವೆ ಅಲ್ಲವಾ?

ಹಾಗೆಯೇ ಬಿಳುಪು ಕೊಡುವ ಶಾಂತಿಯನ್ನು ಯಾವುದಾದರೂ ಕೊಡಲು ಸಾಧ್ಯವೇ ಕಲ್ಪಿಸಿಕೊಳ್ಳಿ.. ಸಾಧ್ಯವಿಲ್ಲ!

ಕೆಂಪು ಎಂದರೇ ಹೆದರಿಕೆ, ಭಯದ ಸಂಕೇತವೇನೋ ಸರಿ. ರಕ್ತವನ್ನು ಕಂಡರೇ ಸ್ವಲ್ಪ ಮಂದಿ ಹಾಗೆಯೇ ಮೂರ್ಚೆ ಹೋಗುವಷ್ಟರ ಮಟ್ಟಿಗೆ ಒಂದೊಂದು ಬಣ್ಣಗಳ ಅಲರ್ಜಿಯು ನಮ್ಮಲ್ಲಿ ಉಂಟು!

ನಮ್ಮ ತರುಣರಿಗೆ ತಮ್ಮ ಪ್ರೀತಿಯನ್ನು ನಿವೇದಿಸಿಕೊಳ್ಳಲು ಒಂದೊಂದು ಕಲರ್ ಗುಲಾಬಿ ಹೊವುಗಳೇ ಬೇಕು. ಅದೂ ಪ್ರೇಮಿಗಳ ದಿನದಂದು, ಈ ಹೊವುಗಳಿಗೆ ಫುಲ್ ಡಿಮ್ಯಾಂಡ್!

ಮ್ಯಾಚಿಂಗ್ ಕಲರ್, ಮ್ಯಾಚಿಂಗ್ ಸೀರೆ, ಮ್ಯಾಚಿಂಗ್ ಲಿಫಸ್ಟಿಕ್, ಐಶೇಡ್ಸ್, ಬ್ಯಾಗ್ಸ್,ಚಪ್ಪಲಿ ಇತ್ಯಾದಿಯಾಗಿ ನಮ್ಮ ಮಹಿಳೆಯರಿಗೆ ವಿವಿಧ ಬಣ್ಣದ ವಿವಿಧ ರೀತಿಯ ತಾವು ಧರಿಸುವ ಪ್ರತಿಯೊಂದು ವಸ್ತುವನ್ನು ಎಣಿಸಿ ತಮ್ಮದಾಗಿಸಿಕೊಳ್ಳುತ್ತಾರೆ. ಆ ರೀತಿಯಲ್ಲಿ ಹೆಚ್ಚು ಆಕರ್ಷಕವಾಗಿ ಮತ್ತು ಸುಂದರವಾಗಿ ಕಾಣಲು ನಿತ್ಯ ತವಕಿಸುತ್ತಾರೆ.




ಒಂದೊಂದು ಬಣ್ಣದ ಒಂದೊಂದು ಹರಳನ್ನು ಧರಿಸಿದರೇ ಒಂದೊಂದು ರೀತಿಯಲ್ಲಿ ನಮ್ಮ ಜಾತಕ, ಜ್ಯೋತಿಷ್ಯವೇ ಬದಲಾಗುತ್ತದಂತೇ? ಇದೇ ಒಂದು ವ್ಯಾಪಾರವಾಗಿದೆ ಇಂದಿನ ದಿನಗಳಲ್ಲಿ.

ಗಮನಿಸಿ ನಮ್ಮ ನಿತ್ಯ ಬದುಕು ಪರಿಪೂರ್ಣವಾಗಿ ಕೇವಲ ಈ ಬಣ್ಣಗಳಲ್ಲಿಯೇ ಹುದುಗಿದೆ.

ಆದ್ದರಿಂದ ಸಡಗರದಿಂದ ರಂಗು ರಂಗಿನ ಹೋಳಿಯನ್ನು ಆಚರಿಸಿ, ಯಾರ್ಯಾರಿಗೆ ಯಾವ ಯಾವ ಬಣ್ಣವನ್ನು ಯಾವ್ಯಾವ ರೀತಿಯಲ್ಲಿ ಹಾಕುವಿರಿ?

ಹ್ಯಾಪಿ ಹೋಳಿ!!