ಶನಿವಾರ, ನವೆಂಬರ್ 3, 2012

ಸುಖದಸುಪ್ಪತ್ತಿಗೆ

ನಮ್ಮ ಮನಸ್ಸಿಗೆ ಮೊಟ್ಟ ಮೊದಲು ಬರುವುದು ಸುಲಭವಾದ ಯೋಚನೆ ಮತ್ತು ಸರಳ ಕೆಲಸ.


ಯಾವುದನ್ನಾದರೂ ನೋಡಿದಾಗ ಇದು ಇಷ್ಟೆ ಅಂದು ಬಿಡುತ್ತೇವೆ. ಅದು ಅತ್ಯಂತ ಸುಲಭವಾದದ್ದು ಬಿಡಿ ಅನ್ನುತ್ತೇವೆ. ಅದನ್ನು ಯಾರಾದರೂ ಬೇರೆಯವರು ಮಾಡಿಬಿಟ್ಟಿದ್ದರೇ ಮುಗಿಯಿತು ಅಪ್ಪಿ ತಪ್ಪಿಯು ಅವರ ಪರಿಶ್ರಮವನ್ನು ಒಂದೇ ಒಂದು ನಮ್ಮ ಮಾತಿನ ವಾಕ್ಯದಲ್ಲಿ ಮಣ್ಣು ಮಾಡಿಬಿಟ್ಟಿರುತ್ತೇವೆ.


ಅದೇ ನಾವುಗಳು ನಮ್ಮ ಕೈಯಾರ ಮಾಡುವ ಪ್ರತಿಯೊಂದನ್ನು ಮೆಚ್ಚಿ ಮೆಚ್ಚಿ ಒಂದು ಸುತ್ತು ಹೊಗಳಿಕೊಂಡು ಬಂದಿರುತ್ತೇವೆ.


ನಮ್ಮ ಮನೆಯ ಅಕ್ಕಪಕ್ಕ ಯಾರಾದರೊಬ್ಬ ಶ್ರೀಮಂತನಿದ್ದರೇ ಮುಗಿಯಿತು. ಅಲ್ಲ ಅವರ ಅಪ್ಪ,ಅಜ್ಜ ಮಾಡಿಟ್ಟಿದ್ದಾರೆ ಮಗಾ ಈಗ ಅನುಭವಿಸುತ್ತಿದ್ದಾನೆ ಅಂದುಬಿಡುತ್ತೇವೆ. ಅದು ನಿಜವಾ ಎಂದು ಒಂದು ಕ್ಷಣವು ಚಿಂತಿಸಿರುವುದಿಲ್ಲ.



ಯಾರದಾದರೂ ಅದ್ದೂರಿ ಮನೆಯನ್ನು ನೋಡಿಬಿಟ್ಟರೆ. ಗಮನಿಸಿ ದೇವರಾಣೆಗೂ ಅವನು ಪರಿಶ್ರಮಪಟ್ಟು ಸಂಪಾಧಿಸಿ ಕಟ್ಟಿಸಿದ್ದಾನೆ ಎಂದೂ ಯಾವತ್ತಿಗೂ ಯಾರೊಂದಿಗೂ ಹೇಳುವುದಿಲ್ಲ. ಹೇಳುವುದೆಲ್ಲಾ ಪ್ರತಿಯೊಂದು ಗೊತ್ತಿರುವವರ ರೀತಿಯಲ್ಲಿ ಎಷ್ಟು ಮುಂಡಾ ಮೋಚಿಬಿಟ್ಟಿದ್ದಾನೆ. ಅದಕ್ಕೆ ಇಂಥ ಬಂಗಲೆಯನ್ನು ಕಟ್ಟಿಸಿದ್ದಾನೆ. ನಾವು ಎಲ್ಲಿ ಕಟ್ಟಿಸಬೇಕು. ಅನ್ಯಾಯದಲ್ಲಿ ಬದುಕುವುದಕ್ಕೂ ಯೋಗ ಬೇಕು ಎಂದು ಮಾತನ್ನಾಡುತ್ತಿರುತ್ತೇವೆ.


ಯಾವುದಾದರೂ ಅತ್ಯಂತ ಉನ್ನತ ಹುದ್ದೆಯನ್ನು ಯಾರಾದರೂ ನಮಗೆ ತಿಳಿದಿರುವರು ಏರಿದರೂ, ಇದೆ ಕೊಂಕು ಅಡ್ಡ ದಾರಿಯ ದರ್ಶನ. ಇವನಿಗೆ ಎಲ್ಲಿ ಆ ಯೋಗ್ಯತೆ? ಯಾರದೋ ಶಿಪಾರಸ್ಸಿನಿಂದ ಈ ಹುದ್ದೆಯಲ್ಲಿ ಇದ್ದಾನೆ. ಇವನ ಮಾವಾ ಕಾಸಾ ಸಿ.ಎಂ. ಸೆಕ್ರೇಟ್ರಿ ಅಂತೆ ಕಂತೆಗಳನ್ನು ಸರಾಗವಾಗಿ ಹರಿಬಿಟ್ಟಿರುತ್ತೇವೆ.


ನಾವುಗಳು ಎಂದಿಗೂ ಅವನ ನಿತ್ಯದ ಕಷ್ಟ ನಷ್ಟಗಳನ್ನು ಒಂದು ಚೂರು ಗಮನಿಸುವುದಿಲ್ಲ ಮತ್ತು ಯೋಚಿಸುವುದಿಲ್ಲ.


ಮೊಟ್ಟ ಮೊದಲಿಗೆ ಬರುವುದು ಅಡ್ಡ ದಾರಿಯಲ್ಲಿಯೇ ಇವನು ಹೋಗಿ ಹೀಗೆಲ್ಲಾ ಇರುವುದು ಎಂಬ ಒಂದೇ ಲೈನ್ ಉತ್ತರವನ್ನು ಗೊತ್ತೂ ಮಾಡಿಕೊಂಡುಬಿಟ್ಟಿರುತ್ತೇವೆ.


ಯಾರಾದರೂ ಪರೀಕ್ಷೆಯಲ್ಲಿ ಪರಿಶ್ರಮದಿಂದ ಉನ್ನತ ಅಂಕಗಳನ್ನು ಪಡೆದಿದ್ದರೆ ಮೊದಲು ಯೋಚಿಸುವುದು ಅದೇ ಕಳ್ಳ ದಾರಿಯನ್ನು, ಏನೋ ಪ್ರಶ್ನೆ ಪತ್ರಿಕೆ ಮೊದಲೇ ಸಿಕ್ಕಿರಬೇಕು. ಅದು ಹೇಗೆ ನೂರಕ್ಕೆ ನೂರು ಅಂಕಗಳು ಬಂದಿದ್ದಾವೆ. ಎಂದು ಹುಬ್ಬೇರಿಸುತ್ತೇವೆ.


ಹೀಗೆ ಪ್ರತಿಯೊಂದು ಸಾಧನೆಯನ್ನು ನಾವುಗಳು ಗುರುತಿಸುವುದು ಕೇವಲ ಅನ್ಯಾಯದ ದಾರಿಯಲ್ಲಿ ಮಾತ್ರ ಎಂಬ ಸತ್ಯವನ್ನು ನಮ್ಮ ಮನಸ್ಸು ನಂಬಿದ್ದಾದರೂ ಎಲ್ಲಿ?


ಯಾಕೆ ನ್ಯಾಯಕ್ಕೆ ಮತ್ತು ಸತ್ಯವಾದ ದಾರಿಯಲ್ಲಿ ಈ ಎಲ್ಲಾ ಜಯಗಳು ಸಿಗಲಾರವೇನೋ?


ಯಾರಾದರೂ ಸತ್ಯ ಮತ್ತು ಸರಳವಾದ ದಾರಿಯಲ್ಲಿ ನಡೆಯುತ್ತಿರುತ್ತಾನೆ ಎಂದರೇ ಅವನು ಶ್ರೀಮಂತನಾಗಿರಲಾರ, ಅವನು ಉನ್ನತ ಹುದ್ದೆಯಲ್ಲಿ ಇರಲಾರ, ಅವನನ್ನು ಜಗತ್ತು ಗಮನಿಸಲಾರದು, ಅವನನ್ನು ಲೋಕಮಾನ್ಯ ಮಾಡಲಾರದು. ಎಂಬ ಸತ್ಯಗಳನ್ನು ನಮ್ಮ ತಲೆಗೆ ತುಂಬಿದವರಾದರೂ ಯಾರು?


ಅಂದರೇ ನೀ ಮುಂದುವರೆಯಬೇಕು ಎಂದರೇ ಯಾರನ್ನಾದರೂ ತುಳಿಯಲೇಬೇಕು ಎಂಬ ನೀತಿಯನ್ನು ಇಂದಿನ ಮುಂದಿನ ಮಕ್ಕಳ ಮೆದುಳಿಗೆ ತುರುಕಿರುವರು ಯಾರು?


ಇದೆ ನಮ್ಮ ನೀತಿಯನ್ನಾಗಿ ಮಾಡಿರುವುವರಾದರೂ ಯಾರು? ಏನಾದರೂ ಸಾಧಿಸಲು ಹಣ,ಅಧಿಕಾರ,ಪರಿಚಯ,ಗಾಡ್ ಪಾದರ್ ಗಳು ಇರಲೇಬೇಕು ಎಂಬಂತಾಗಿರುವುದಾದರೂ ಯಾಕೆ?


ಯಾರಾದರೂ ಐ.ಪಿ.ಎಸ್, ಐ.ಎ.ಎಸ್, ಕೆ.ಎ.ಎಸ್ ಎಕ್ಸಾಮ್ ತೆಗೆದುಕೊಳ್ಳುತ್ತಿದ್ದೇನೆ ಅಂದರೇ ಅವನನ್ನು ಏನೋ ಐಬೂ ಇರುವನನ್ನು ನೋಡುವಂತೆ ನೋಡುವುದಾದರೂ ಯಾಕೆ?


ಅಂದರೇ ಸಾಮಾನ್ಯ ವ್ಯಕ್ತಿ ಅಸಾಮಾನ್ಯನಾಗಲಾರನೇ?


ಈ ವ್ಯವಸ್ಥೆಯನ್ನು ನಾವುಗಳು ನಮಗಾಗಿ ಮಾಡಿಕೊಂಡಿದ್ದೇವೆ. ಆದರೇ ಅದೆ ವ್ಯವಸ್ಥೆಯನ್ನು ಯಾರೂ ನಂಬುವ ಸ್ಥಿತಿಯಲ್ಲಿ ಇಲ್ಲದವರಾಗಿದ್ದೇವೆ.. ಪ್ರತಿಯೊಬ್ಬರೂ ಮುಖವಾಡವನ್ನು ಧರಿಸಿರುವವರಂತೆ ಕಾಣಿಸುತ್ತಿದ್ದಾರೆ. ಯಾರನ್ನೂ ನೂರಕ್ಕೆ ನೂರು ನಂಬದಂತಾಗಿದೆ.


ಏನಾದರೂ ಸತ್ಯ, ನಿಷ್ಠೆ,ಧರ್ಮ, ಕರ್ಮ ಎಂದು ಮಾತನಾಡಿದರೇ ಸುತ್ತಲಿನವರು ವಿಚಿತ್ರವಾಗಿ ಕಾಣುತ್ತಾರೆ. ಅಂಥವರನ್ನು ಸಾಮಾನ್ಯ ಜನಗಳಿಂದ ಬೇರೆಯವರನ್ನಾಗಿಯೇ ಕಾಣುತ್ತಾರೆ. ಅಂದರೇ ನ್ಯಾಯ ನೀತಿಗಳಿಗೆ ಇಂದಿನ ಕಾಲದಲ್ಲಿ ಬೆಲೆಯೇ ಇಲ್ಲವೇ?


ಸತ್ಯ ಹೇಳಿಕೊಂಡ ಹರಿಶ್ಚಂದ್ರ ಏನಾದ ಎಂಬ ಮಾತನ್ನೇ ನೀತಿಗೆ ನಿಯತ್ತಿಗೆ ಉದಾಹರಣೆ ಕೊಡುತ್ತಿರುವ ನೋಟ ಯಾವುದರ ದಿಕ್ಸೂಚಿ?


ಕೇವಲ ಹಣವೇ ಮುಖ್ಯವಾಗುತ್ತಿರುವ ಪ್ರಸ್ತುತ ಸಮಾಜದಲ್ಲಿ ನೀತಿ, ನಿಯತ್ತಿಗೆ ಕಿಂಚಿತ್ತು ಬೆಲೆಯೇ ಕೊಡದವರಾಗಿದ್ದಾರೆ.


ಕೇವಲ ಎಷ್ಟು ವೇಗವಾಗಿ ಸಂಪತ್ತನ್ನು ಸಂಪಾಧಿಸುವುದು. ಎಷ್ಟು ವೇಗವಾಗಿ ಇರುವ ಜೀವನವನ್ನು ಸಾಕಷ್ಟು ರಿಚ್ ಆಗಿ ಅನುಭವಿಸುವುದೇ ಜೀವನದ ಧ್ಯೇಯವಾಗಿಸಿಕೊಳ್ಳುತ್ತಿರುವುದು ಯಾಕೇ?


ನಾವು ಇಂದು ಲೋಕಪ್ರಸಿದ್ಧ ವ್ಯಕ್ತಿಗಳು ಎನ್ನುವವರ ನಿತ್ಯ ಲೋಕ ಪ್ರಸಿದ್ಧ ನಡತೆಗಳೇ ಈ ರೀತಿಯಲ್ಲಿ ಯೋಚಿಸುವಂತೆ ಮಾಡಿರಬಹುದು(!)?. ಈ ಉದಾಹರಣೆಗಳೇ ಸತ್ಯಕ್ಕೆ ಬೆಲೆ ಇಲ್ಲ ಎನ್ನುವಂತಾಗಿರಬಹುದು.


ವ್ಯಾಪಾರಂ ದ್ರೋಹ ಚಿಂತನಂ ಅನ್ನುವಂತೆ ಮೋಸ ಮಾಡುವುದೇ ನಮ್ಮ ಏಳ್ಗೆಗೆ ದಾರಿ ಅನ್ನುವಂತಾಗಿರುವುದು. ಎಲ್ಲದನ್ನು ವ್ಯಾಪಾರ-ಬ್ಯುಸಿನೆಸ್ ದೃಷ್ಟಿಯಲ್ಲಿ ನೋಡಿದಾಗ ಈ ರೀತಿಯ ಕ್ಲೀಷೆಯನ್ನು ನಮ್ಮ ಜೀವನದಲ್ಲಿ ಕಾಣಬಹುದಾಗಿದೆ ಅನಿಸುತ್ತದೆ.


ಪ್ರತಿಯೊಂದನ್ನು ಹಣ ಮಾಡುವ ಕಣ್ಣಿನಲ್ಲಿ ನೋಡಿದಾಗ ಸಂಬಂಧಗಳ ಪರದೆಗಳು ಅತಿ ತೆಳುವಾಗುತ್ತಾ ತೆಳುವಾಗುತ್ತಾ ಪ್ರತಿಯೊಬ್ಬರೂ ಅವರವರ ವೈಕ್ತಿಕ ಪ್ರತಿಷ್ಠೆಗಾಗಿ ಹೋರಾಡುವಂತಾಗುತ್ತದೆ. ಆಗ ಪಕ್ಕದಲ್ಲಿ ಇರುವ ಹತ್ತಿರದವರನ್ನು ಗಮನಿಸದವರಾಗುತ್ತೆವೆ.


ಅತ್ಯಂತ ಸುಖದ ಸುಪ್ಪತಿಗೆಯ ಶ್ರೀಮಂತ ಆರಮನೆಯಲ್ಲಿ ಎಲ್ಲವೂ ಇದೆ. ಆದರೇ ಅದು ಕೇವಲ ನಾಲ್ಕು ಗೋಡೆಗಳ ಮಧ್ಯದಲ್ಲಿ ಮಾತ್ರ. ಅಲ್ಲಿರುವುದೆಲ್ಲಾ ಶ್ರೀಮಂತಿಕೆಯ ಮನುಷ್ಯ ಜನ್ಯ ವಸ್ತುಗಳು. ಆ ಸಮಯಕ್ಕೆ ಅದೇ ಅವನಿಗೆಲ್ಲಾ. ಆದರೇ ಆ ರೀತಿಯ ನಾಲ್ಕುಗೋಡೆಯ ವೈಭೋಗದ ಜಗತ್ತು ನಾಲ್ಕು ಗೋಡೆಯ ಸೆರೆಮನೆಗೂ ಸಮ ಎಂದು ಮುಂದೊಮ್ಮೆ ಅಲ್ಲಿರುವ ವ್ಯಕ್ತಿಗಳಿಗೆ ಅನಿಸಬಹುದಲ್ಲ?

ಮನುಷ್ಯ ಯಾವತ್ತಿಗೂ ಸುಖದ ಬೆನ್ನು ಹತ್ತುತ್ತಿರುತ್ತಾನೆ.

ಅವನ ಒಂದೇ ಒಂದು ಕನಸು ನಾನು ಮತ್ತು ನನ್ನ ಪರಿವಾರ  ಚೆನ್ನಾಗಿರಬೇಕು. ಅದಷ್ಟು ಬೇಗೆ ಹೆಚ್ಚು ಸಂಪಾಧಿಸಬೇಕು. ಮುಂದೆ ಭವಿಷ್ಯತ್ ನಲ್ಲಿ ಯಾವೊಂದು ಕಷ್ಟವಿಲ್ಲದ ಜೀವನವನ್ನು ನಾನು ನಡೆಸಬೇಕು ಮತ್ತು  ನನ್ನ ಮುಂದಿನ ಪೀಳಿಗೆಯು ನಡೆಸಬೇಕು.

ಈ ರೀತಿಯ ಒಂದು ಕನಸೇ ಇರಬೇಕು ಅವನ ಎಲ್ಲಾ ಜೈವಿಕ ಜೀವನ ದಿನಚರಿಗೆ. ಅದಕ್ಕಾಗಿ ಅವನು ಮಾಡುವ ಕೆಲಸ, ದಾರಿ, ಯಾವ್ಯಾವ ರೀತಿಯಲ್ಲಿ ಇರುತ್ತವೋ ಎಲ್ಲವನ್ನು ಅವನ ಬುದ್ಧಿಮತ್ತೆಯೊಂದಿಗೆ ಅನ್ವೇಷಿಸಿಬಿಡುತ್ತಾನೆ.



ಅದರಲ್ಲಿ ಅವನು ಜಯಶಾಲಿಯಾದರೂ ಆಗಬಹುದು. ಆಗದೇಯು ಇರಬಹುದು.

ಆ ಒಂದು ತುಡಿತವೇ ಇಂದಿನ ಈ ನಾಗರೀಕ ಸಮಾಜದ ಜೀವನ ಬಡಿದಾಟದ ಬಹು ಮುಖ್ಯ ಹೋರಾಟದ ಒಂದೇ ಒಂದು ಅಂಶವಾಗಿದೆ.


ಅದಷ್ಟು ಸುಖವಾಗಿ ಬದುಕಬೇಕು ಎಂಬುದೇ ಜಗತ್ತಿನ ಪ್ರತಿಯೊಬ್ಬ ಕಟ್ಟ ಕಡೆಯ ವ್ಯಕ್ತಿಯ ಮುಖ್ಯ ಹೋರಾಟ! ಎಂದು ನಿಮಗ ಅನಿಸುವುದಿಲ್ಲವೇ?