ಭಾನುವಾರ, ಅಕ್ಟೋಬರ್ 21, 2012

ಎಲ್ಲಿಂದ ಬಂದೆ?

ಕನಸು ಮನಸ್ಸಿನಲ್ಲೂ ನೆನಸಿರಲಿಲ್ಲ. ಹೊಸ ಜಾಗ ಹೊಸ ನೋಟದಲ್ಲಿ ಬರೀ ಅಚ್ಚರಿಗಳ ಸಂತೆಯಲ್ಲಿ ಅಂದು ನಿಂತಿದ್ದೆ. ಪ್ರತಿಯೊಂದು ನೋಟವು ನವತರುಣಿಯನ್ನು ಕಂಡು ನನ್ನನ್ನು ನಾನು ಮರೆತಂತ ಅನುಭವ. ಕೊಂಚ ಭಯ ಕೊಂಚ ಸಂಕೋಚಬರಿತ ವಾತವರಣವೇ ಆಗಿತ್ತು.


ಇದಕ್ಕೆ ಮೊದಲು ಇಲ್ಲಿಯ ಜಾಗವನ್ನು ಎಂದು ನೋಡಿರಲಿಲ್ಲ. ಯಾರ ಜೊತೆಯಲ್ಲೂ ಮಾತನಾಡುವುದು ಇರಲಿ. ಪ್ರತಿಯೊಂದು ಮೊಕ ಸಂಭಾಷಣೆ. ಯಾಕೆಂದರೇ ನಾನು ಮಾತನಾಡುವ ಭಾಷೆಗೆ ನನ್ನಾಣೆ ಯಾರೊಬ್ಬರೂ ಪ್ರತಿಕ್ರಿಯಿಸುವುದಿಲ್ಲ.


ಇಂಥ ನಗರದಲ್ಲಿ ಅದು ಎಲ್ಲಿಂದ ನೀ ಅವತರಿಸಿ ನನ್ನ ಬಳಿ ಬಂದೆ?


ನನ್ನ ಕಸಿವಿಸಿಯಲ್ಲಿ ಆ ಕಪ್ಪು ರೋಡಿನಲ್ಲಿನ ಸಿ.ಟಿ ಬಸ್ ನಲ್ಲಿ ನಾನು ಸುಲ್ತಾನ್ ಪೇಟೆ ಎಂದು ಕಂಡಕ್ಟರನ್ನು ಕೇಳುತ್ತಾ ಕೇಳುತ್ತಿದ್ದರೇ.. ಆ ಕಂಡಕ್ಟರ್ ನನ್ನನ್ನು ನನಗೆ ಅರ್ಥವಾಗದ ಭಾಷೆಯಲ್ಲಿ ಎಲ್ಲಿಗೆ ಎಲ್ಲಿಗೆ ಟಿಕೇಟ್ ಬೇಕು ಎಂದು ಎರಡೇರಡು ಬಾರಿ ಕೇಳುತ್ತಿರುವಾಗ.. ನನಗೆ ಸಹಾಯ ಮಾಡಲು ಬಂದಂತೆ ತುಮ್ ಕಿದರ್ ಜಾನಾ ಚಾ ಥೀ?


ಎಂದಾಗ ಅಯ್ಯೋ ನಾನು ನನ್ನನ್ನು ಮರೆತುಬಿಟ್ಟೆ!


ನಾನು ಏನೊಂದು ಉತ್ತರವನ್ನು ಕೊಡುವ ಮೋಡಿನಲ್ಲಿಯೇ ಆಗ ಇರಲಿಲ್ಲ.


ಯಾಕೆಂದರೇ ಈ ಕಂಡಕ್ಟರ್ ಏನೇನು ಹೇಳುತ್ತಿದ್ದಾನೆ.. ಈ ಸುಂದರ ಪುತ್ಥಳಿಯ ಬಾಯಿಯಲ್ಲಿ ಹಿಂದಿ ಭಾಷೆ. ನನಗೆ ನಾನೇ ಕನಸೋ ನನಸೋ ಅನಿಸಿಬಿಟ್ಟಿತು.


ಪಕ್ಕದಲ್ಲಿ ನಿಂತಿರುವವನು ಕಂಡಕ್ಟರ್ ಬಾಷೆಯಲ್ಲಿ ನನ್ನನ್ನು ಮೈ ಮುಟ್ಟಿ ಎಚ್ಚರಿಸಿದಾಗ ತಡವರಿಸಿ ಸುಲ್ತಾನ್ ಪೇ..ಟೆ ಎಂದಾಗ.. "ನೀನು ಅಂಥ ಏರಿಯಾ ನೇ ಇಲ್ಲಿ ಇಲ್ಲ. ಸೈದಾಪೇಟೆ ಗೆ ತಾನೆ ಹೋಗಬೇಕಾಗಿರುವುದು?" ಎಂದಾಗ ಹುಂ ಎನ್ನದೇ ಬೇರೆ ದಾರಿಯೇ ಇರಲಿಲ್ಲ.


ನನ್ನ ಬಾಯಿಯಲ್ಲಿ ಇಲ್ಲದ ಊರು ಬಂದಿತ್ತು. ನಾನು ಅದು ಹೇಗೋ ಅಂದು ದಾರಿಯಲ್ಲಿ ಹೋಗುತ್ತಿರುವ ಬಸ್ ಬೋರ್ಡನಲ್ಲಿ ಹಾಗೆ ಓದಿಕೊಂಡಿದ್ದು ಹಾಗೆಯೇ ತಪ್ಪಾಗಿ ಉತ್ತರಿಸಿದ್ದೆ.


ಕಂಡಕ್ಟರ್ ನಗುತ್ತಾ ಒಂಬತ್ತು ರೂಪಾಯಿಯ ಚೀಟಿ ಹರಿದು ಒಂದು ರೂಪಾಯಿಯ ಜೊತೆ ಹಿಂದುರುಗಿಸಿದ. ಆ ಎರಡನ್ನು ಜೇಬಲ್ಲಿ ಸೇರಿಸುವಾಗ ನಾನು ನೋಡುತ್ತಿದ್ದದ್ದು ನಿನ್ನನ್ನೇ..


ಅಲ್ಲಾ ಇಲ್ಲಿ ಇಂಥ ಸಾದ ಸೀದಾ ಸರಳ ಸುಂದರಿಯರು ಇರುವರಲ್ಲಾ ಅನಿಸಿತು.


ನಾನು ಅಂತೂ ಗೊತ್ತಿರುವ ಒಂದು ಭಾಷೆಯಲ್ಲಿ ಮಾತನಾಡುವವರು ಸಿಕ್ಕಿದರಲ್ಲ ಎಂದು.. ಹುಡುಗಿ ಚೆನ್ನಾಗಿದ್ದಾಳೆ.. ನೋಡಿದರೇ ನನ್ನ ರೀತಿಯಲ್ಲಿಯೇ ಬೇರೆ ಊರಿಂದ ಬಂದು ಇಲ್ಲಿರಬೇಕು.. ಎಂದುಕೊಂಡು ಹಾಗೆಯೇ ಅವಳ ಚಿಕ್ಕ ಪರಿಚಯ ಮಾಡಿಕೊಂಡಿದ್ದೂ..


ಈ ಹುಡುಗಿಯು ಸಹ ನಾನು ಕೇಳಿದ ಜಾಗಕ್ಕೆ ಹೋಗುತ್ತಿದ್ದಾಳೆ. ನಾನು ನನ್ನ ಭಾಷೆಯ ಕಷ್ಟವನ್ನು ಇಲ್ಲಿ ಜೀವಿಸಬೇಕಾದ ಅನಿವಾರ್ಯತೆಯನ್ನು ಹೇಳಿಕೊಂಡು ಹಗುರಾದೇ.


ನಿಂತುಕೊಂಡೇ ಇದ್ದಾಗ ನಾನು ಇಳಿಯುವ ಜಾಗ ಬಂದಿತು. ಅವಳು ಸಹ ಅಲ್ಲಿಯೆ ಇಳಿದಳು. ನಾನು ಇಳಿದೆ. ನಾನು ಅಲ್ಲಿಂದ ಮುಂದೆ ಕಿಲಪಾಕ್ ಗಾರ್ಡನ್ ಕಡೆ ಹೋಗುವ ೪೭ ಎ ಮತ್ತೊಂದು ಬಸ್ ಗಾಗಿ ಕಾಯುವೆ ಎಂದಾಗ.


ಅವಳು ನಾನು ಬೆಂಗಳೂರಿನಲ್ಲಿ ಇರುವುದು. ಇಲ್ಲಿ ನನಗೆ ಎಂ. ಎನ್. ಸಿ ಯಲ್ಲಿ ಕೆಲಸ ಸಿಕ್ಕಿರುವುದರಿಂದ ಇಲ್ಲಿ ವಾಸ ಮಾಡುತ್ತಿದ್ದೇನೆ. ಎಂದು ಹುಡುಗಿ ಹೇಳಿಕೊಂಡಿತು. ಪರವಾಗಿಲ್ಲ. ಎಷ್ಟೊಂದು ಭಾಷೆಯನ್ನು ಕಲಿತಿರುವಿರಲ್ಲಾ? ಎಂದಾಗ.. ಅವಳು ನಕ್ಕ ನೋಟ ನಿಜವಾಗಿಯೂ ಇವಳು ತುಂಬ ಮುಗ್ಧವಾದ ಹುಡುಗಿ. ರೂಪಕ್ಕೆ ತಕ್ಕಂತ ಮಾತು. ಮಾತಿಗೆ ತಕ್ಕಂತ ಗಂಭೀರತೆ. ಗಂಭೀರತೆಗೆ ತಕ್ಕಂತಹ ಧೀರಿಸು. ನೋಡಿದ ತಕ್ಷಣ ಗೌರವವನ್ನು ಕೊಡುವಂತ ವ್ಯಕ್ತಿತ್ವ. ಈ ರೀತಿಯ ಹುಡುಗಿಯರು ಅಪರೂಪಕ್ಕೆ ಸಿಗುತ್ತಿರುತ್ತಾರೆ. ಕೈ ಎತ್ತಿ ಮುಗಿಯಬೇಕು.


ನನಗೆ ಮೊದಲು ಮೋಡಿ ಮಾಡಿದ್ದು. ಆ ಹಸಿರು ಚೋಡಿದಾರದಲ್ಲಿದ್ದದ್ದು. ಹಾಗೆಯೇ ಹಣೆಗೆ ಇದೇಯೋ ಇಲ್ಲವೊ ಎಂಬಂತೆ ಚಿಕ್ಕ ಬಿಂದಿ. ತಲೆಗೆ ಚಿಕ್ಕ ಎರಳು ಬಿಳಿ ಹೂ. ಕೈಯಲ್ಲಿ ಮೂರೇ ಮೂರು ಹಸಿರು ಬಳೆಗಳು. ಬೆರಳಲ್ಲಿ ಒಂದು ಚಿಕ್ಕ ವಜ್ರದ ಉಂಗುರ. ಅಲ್ಲಾ? ಈ ಕಾಲದಲ್ಲೂ ಈ ಮೆಟ್ರೋ ನಗರದಲ್ಲಿ ಎಮ್. ಎನ್. ಸಿ ಯಲ್ಲಿ ಕೆಲಸ ಮಾಡುವ ಹುಡುಗಿಯಾಗಿ ಭಾರತೀಯ ಸಂಸ್ಕೃತಿಯನ್ನು ಪ್ರತಿಪಾಧಿಸುವ ನಾರಿಮಣಿಯಾಗಿ ನಿದರ್ಶನವಾಗಿದ್ದಾಳಲ್ಲ ಅನಿಸಿತು.


ಹುಡುಗಿ ಆ ಸುಮಧುರ ಕಂಠದಿಂದ "ಬೆಂಗಳೂರಿನಲ್ಲಿ ನಾನು ಹುಟ್ಟಿದ್ದು, ಬೆಳದದ್ದು. ನನ್ನ ಓಣಿಯಲ್ಲಿನ ಮನೆಯವರಲ್ಲಿ ತಮಿಳು ಬ್ರಾಹ್ಮಣರ ಮನೆಯು ಇತ್ತು. ಅಲ್ಲಿಯೇ ನನಗೆ ತಮಿಳಿನ ಓ ನಾಮ ಸಿಕ್ಕಿದ್ದು. ಹಿಂದಿ,ಇಂಗ್ಲಿಷ್ ಶಾಲೆಯಲ್ಲಿ ದೊರೆಯಿತು. ಆದ್ದರಿಂದ ಸುಮಾರಾಗಿ ಮ್ಯಾನೇಜ್ ಮಾಡುವಷ್ಟು, ತೆಲಗು,ತಮಿಳು,ಹಿಂದಿ ಭಾಷೆಗಳು ಕನ್ನಡ ಮತ್ತು ಇಂಗ್ಲೀಷ್ ಜೊತೆಯಲ್ಲಿ ಸಿಕ್ಕಿದೆ.


ನನಗೆ ತುಂಬ ಖುಷಿಯಾಯಿತು. ಆದರೂ ನೀವು ನಿಮ್ಮ ಮನೆಯವರನ್ನೇಲ್ಲಾ ಬಿಟ್ಟು ಇಲ್ಲಿದ್ದೀರಲ್ಲಾ? ಬೆಂಗಳೂರಿನಲ್ಲಿ ಟ್ರೈ ಮಾಡಿದ್ದರೇ ಅಲ್ಲಿಯೇ ಕೆಲಸ ಮಾಡಬಹುದಾಗಿತ್ತು ಅಂದೇ? ಹೌದು. ಆದರೂ ನನಗೆ ಒಂದು ಕನಸಿದೆ ಭಾರತದ ಎಲ್ಲಾ ಮುಖ್ಯ ರಾಜ್ಯಗಳಲ್ಲೂ ಕೆಲಸ ಮಾಡಬೇಕು. ಒಂದೆರಡು ವರುಷ ಕೆಲಸ ಮಾಡುತ್ತಾ ಅಲ್ಲಿನ ಜನ, ಆಚಾರ, ವಿಚಾರ, ಸಂಸ್ಕೃತಿಯನ್ನು ಅರಿಯಬೇಕು ಎಂಬುದು. ಎಂದು ಉತ್ತರಿಸಿದಾಗ ನನಗೆ ನಾನೇ ಅಚ್ಚರಿಗೊಂಡೆ.



ಈಗ ಎಲ್ಲಿಗೆ ಹೋಗುತ್ತಿದ್ದೀರಾ ಎಂದಾಗ ಹುಡುಗಿ ನಾನು ಇಲ್ಲಿಯೇ ಅಣ್ಣ ಸ್ಕೋಯರ್ ಬಳಿ ಇಂದು ಒಂದು ತಮಿಳು ಸಂಸ್ಕೃತಿ ಸಾಹಿತ್ಯ ಪ್ರತಿಕ್ಷ ಸಮ್ಮೇಳನಕ್ಕೆ ಹೋಗುತ್ತಿದ್ದೇನೆ. ಎಂದಾಗ ಅಲ್ಲಾ ಎಲ್ಲಿಯಾ ಐ.ಟಿ? ಎಲ್ಲಿಯ ಸಾಹಿತ್ಯ? ಇಂದು ಇನ್ನೂ ಈ ರೀತಿಯ ಯೋಚಿಸುವ ಹುಡುಗಿಯರು ಇದ್ದಾರಲ್ಲಾ ಅನಿಸಿತು.


ವಿಕೇಂಡ್ ಸಿಕ್ಕಿದರೇ ಸಾಕು ಯಾವುದಾದರೂ ಶಾಪಿಂಗ್ ಮಾಲ್ ಗೆ ದಾಳಿ ಇಟ್ಟು. ಪೋರಂ ಮಾಲ್ ನಲ್ಲಿ ಸುತ್ತಾಡಿ. ಪಿ.ವಿ.ಆರ್ ನಲ್ಲಿ ಇಂಗ್ಲೀಷ್ ಮೋವಿ ನೋಡುವ ತರುಣ ತರುಣಿಯರ ಯುಗದಲ್ಲೂ ನಮ್ಮ ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಇಷ್ಟಪಟ್ಟು ಸವಿಯುವರು ಇದ್ದಾರಲ್ಲಾ. ಬೇಷ್ ಅನಿಸಿತು.


ನಾನು ನನ್ನ ಬಗ್ಗೆ ಅದು ಇದು ಹೇಳಿಕೊಂಡೆ. ಹುಡುಗಿಯು ಸಹ ತುಂಬ ಕುತೂಹಲದಿಂದ ನನ್ನನ್ನೇ ದಿಟ್ಟಿಸುತ್ತಾ ನಾನು ಹೇಳುವುದನ್ನು ಕಿವಿಯಾಗಿ ಕೇಳಿತು. ನನಗೋ ಇವಳ ಜೊತೆಯಲ್ಲಿಯೇ ಇದ್ದರೇ ಸಾಕು ಅನಿಸುತ್ತಿತ್ತು. ಕಿಲಾಪಾಕ್ ಗೇ ಗೋಲಿ ಮಾರೋ ಅನ್ನಿಸಿತು. ಆದರೇ ಮೊದಲ ಬೇಟಿಯಲ್ಲಿಯೇ ಆ ರೀತಿಯ ಸಲುಗೆಯನ್ನು ತೆಗೆದುಕೊಳ್ಳುವುದು ಬೇಡ ಅನಿಸಿತು.


ಅವಳು ಕೇಳಿದಳು "ನೋಡಿ ನಿಮಗೆ ಇಂಟರಸ್ಟ್ ಇದ್ದರೇ ಈ ಸಮ್ಮೇಳನ್ನಕ್ಕೆ ಜೊತೆಯಲ್ಲಿಯೇ ಹೋಗಿಬರೋಣ" ಅಂದಳು. ನಾನೇ ಇಲ್ಲಾರೀ ನನ್ನ ಸ್ನೇಹಿತರ ಮನೆಗೆ ಬರುತ್ತೇನೆ ಎಂದು ಹೇಳಿದ್ದೇನೆ. ಆದ್ದರಿಂದ ಅಲ್ಲಿಗೆ ಹೋಗಲೆ ಬೇಕು. ಅವರುಗಳು ಕಾಯುತ್ತಿರುತ್ತಾರೆ ಅಂದೇ. ಓ ಹಾಗದರೇ ಯು ಕ್ಯಾನ್ ಕ್ಯಾರಿ ಆನ್. ಮುಂದಿನ ವಿಕೇಂಡ್ ನೀವು ಪ್ರೀ ಇದ್ದರೇ ಮತ್ತೇ ಸಿಗೋಣ. ನಾನು ಇರುವುದು ಅಲ್ಲಿಯೇ ರಾಮಪುರಂ ಬಸ್ ಸ್ಟಾಪ್ ಹಿಂದಿನ ರೋಡ್ ನಲ್ಲಿರುವ ಲೇಡಿಸ್ ಪಿ.ಜಿ ಯಲ್ಲಿ. ಅಂದಳು.


ಅಲ್ಲಾ ಇವಳನ್ನು ಪುನಃ ಹೇಗೆ ಹಿಡಿಯಲಿ. ಪೋನ್ ನಂಬರನ್ನು ನಾನೇ ಬಾಯಿ ಬಿಟ್ಟು ಕೇಳುವುದು ಅಸಭ್ಯತೆ ಅನಿಸಿತು. ಹೋಗಲಿ ಅವಳಾದರು ಕೊಡಬಾರದ ಅಂತಾ ಯೋಚಿಸುವಾಗ.. "ನಿಮ್ಮ ಪೋನ್ ನಂಬರ್ ಹೇಳಿ" ಎಂದಾಗ. ನಾನು ತಡವರಿಸುತ್ತಾ ನನ್ನ ಇಲ್ಲಿನ ನಂಬರನ್ನು ಮೋಬೈಲ್ ತೆಗೆದುಕೊಂಡು ನೋಡಿಕೊಂಡು ಕೊಟ್ಟೆನು. ಅವಳು ಮೀಸ್ ಕಾಲ್ ಕೊಟ್ಟಳು.

ನಾನು ನನ್ನ ಬಸ್ ಗಾಗಿ ಕಾಯುತ್ತಿದ್ದಂತೆಯೇ ಅವಳು ಹೋಗುವ ಬಸ್ ಬಂದಿತು. ಅವಳು ಅದರಲ್ಲಿ ಹತ್ತಿಕೊಂಡು ಬಾಯ್ ಎಂದು ಟಾಟ ಮಾಡುತ್ತಾ.. ಹಿಂದಿನ ಡೋರ್ ನಲ್ಲಿ ಹತ್ತಿ ಹೋರಟು ಹೋದಳು.

ಬೀರು ಬಿಸಿಲಿನ ಬೇಗೆ ಈಗ ಪ್ರಾರಂಭವಾಯಿತು. ಅವಳು ಇದ್ದಷ್ಟು ಹೊತ್ತೂ ಏನೊಂದು ಅನಿಸಿದ್ದಿಲ್ಲ. ಅವಳನ್ನು ನೋಡುತ್ತಾ. ಅವಳು ಮಾತನ್ನಾಡುತ್ತಿದ್ದ ಮಾತನ್ನು ಕೇಳುತ್ತಾ. ನನ್ನನ್ನೇ ನಾನು ಮರೆತುಬಿಟ್ಟಿದ್ದೇ. ಮರಳುಗಾಡಿನಲ್ಲಿ ಓಯಾಸಿಸ್ ಕಂಡುಷ್ಟು ಖುಷಿಯಲ್ಲಿದ್ದೇ.


ಪುನಃ ಈ ಹುಡುಗಿಯನ್ನು ಕಾಣಬೇಕೆಂದರೇ ಒಂದು ವಾರ ಕಾಯಬೇಕಲ್ಲ? ಅನಿಸಿತು.


ಹುಡುಗಿಯನ್ನು ನೋಡಿದರೇ ಎಂಗೇಜ್ ಆಗಿರುವಂತೆ ಇಲ್ಲ ಅನಿಸುತ್ತದೆ. ಇದ್ದಿದ್ದರೇ ಅವಳ ಬಾಯ್ ಪ್ರೇಂಡೂ ಸಹ ಜತೆಯಲ್ಲಿಯೇ ಬರಬೇಕಾಗಿತ್ತು.


ಅವಳ ಸರಳ ನಡೆನುಡಿಯನ್ನು ಗಮನಿಸದರೇ ಒಳ್ಳೆಯವಳು ನಂಬುವಂತವಳು ಅನಿಸುತ್ತಿದೆ. ಹೀಗೆ ಹೀಗೆ ಏನೇನೋ ಹಗಲು ಕನಸನ್ನು ಕಾಣುತ್ತಾ ನಿಂತಿದ್ದಾಗ. ೪೭ ಎ ಬಸ್ ದೂಳೆಬ್ಬಿಸುತ್ತಾ ನಾನು ನಿಂತಲ್ಲಿಗೆ ಬಂದಿತು.

ಅವಳ ಗುಂಗಿನಲ್ಲಿಯೇ ನಾನು ಬಸ್ ಹತ್ತಿ ಕಂಡಕ್ಟರ್ ಗೆ ೧೦ರ ನೋಟನ್ನು ಕೊಟ್ಟು ನಾನು ಹೋಗಬೇಕಾಗಿರುವ ಸ್ಥಳಕ್ಕೆ ಚೀಟಿಯನ್ನು ತೆಗೆದುಕೊಂಡು ಹಿಂದಿನ ಮೊಲೆಯ ಸೀಟಿನಲ್ಲಿ ಕುಳಿತುಕೊಂಡೆ. ಮನವೆಲ್ಲಾ ಅವಳ ಬಗ್ಗೆಯೇ ಯೋಚಿಸುತ್ತಿತ್ತು....?
 

ಶನಿವಾರ, ಅಕ್ಟೋಬರ್ 13, 2012

ಅತಿಥಿ ದೇವೋಭವ

ಅತಿಥಿ ದೇವೋಭವ ಎಂಬುದು ನಮ್ಮ ಸಂಸ್ಕೃತಿ. ನಾವುಗಳು ಯಾರಾದರೂ ಹೊಸಬರು/ಪರಿಚಿತರು ನಮ್ಮ ನಮ್ಮ ಮನೆಗಳಿಗೆ ಬೇಟಿ ಕೊಟ್ಟರೆ ಎಷ್ಟೊಂದು ಪ್ರೀತಿಯಿಂದ ನೋಡಿಕೊಳ್ಳುತ್ತೇವೆ ಎಂದರೇ ನಮ್ಮ ಮನೆ ದೇವರನ್ನು ಎಷ್ಟು ಭಯ ಭಕ್ತಿ ಮತ್ತು ಪ್ರೀತಿಯಿಂದ ಉಪಚರಿಸುತ್ತೇವೋ ಅದೇ ರೀತಿಯಲ್ಲಿ ಅತಿಥಿಗಳನ್ನು ಕಾಣುತ್ತೇವೆ.




ತಕ್ಷಣ ಮನೆಯ ಬಾಗಿಲಿಗೆ ಬಂದಾಗ ಮೊದಲು ಮಾಡುವ ಕೆಲಸ ಎಂದರೇ ನಗು ನಗುತ ಒಳಗಡೆಗೆ ಕರೆಯುತ್ತೇವೆ. ಮನೆಯಲ್ಲಿ ಯಾರದಾರೂ ಕುಳಿತುಕೊಂಡಿದ್ದರೆ ಪ್ರತಿಯೊಬ್ಬರೂ ಎದ್ದು ಒಳಗಡೆ ಬರುತ್ತಿರುವ ವ್ಯಕ್ತಿಯನ್ನು ಸ್ವಾಗತಿಸುತ್ತೇವೆ. ಅದು ಅವರಿಗೆ ಕೊಡುವ ಮನೆಯ ಮೊದಲ ಗೌರವ. ಇದನ್ನು ಯಾರು ಸಹ ಹೇಳಿಕೊಟ್ಟ ಪಾಠವೆನಲ್ಲಾ. ನಮ್ಮ ಸಂಸ್ಕೃತಿಯೇ ಹಾಗೆ ಮಾಡಬೇಕು ಎಂಬುದನ್ನು ಮನನ ಮಾಡಿರುತ್ತದೆ.



ಬಂದವರನ್ನು ಉನ್ನತವಾದ ಆಸನದಲ್ಲಿ ಕೂರಿಸುತ್ತೇವೆ. ನಾವುಗಳು ಅವರು ಕೂರುವವರೆಗೂ ನಿಂತೆ ಇರುತ್ತೇವೆ. ಅವರು ಕೂತ ಅನಂತರ ಕೂರುತ್ತೇವೆ. ಮನೆಯಲ್ಲಿರುವವರ ಪರಿಚಯವನ್ನು ನಗು ನಗು ಮುಖದೊಡನೆ ಮಾಡಿಕೊಡುತ್ತೇವೆ. ಇದರಿಂದ ಹೊಸಬರಿಗೆ/ಪರಿಚಯದವರಿಗೆ ಮನೆಯವರ ಬಗ್ಗೆ ಪರಸ್ಪರ ವಿಶ್ವಾಸ ಬರುತ್ತದೆ. ಅದು ಇದು ಮಾತನ್ನಾಡಲು ಪ್ರಾರಂಭ ಮಾಡುವ ಮೊದಲು ನೀರನ್ನು ಕುಡಿಯಲು ಕೊಡುತ್ತೇವೆ. ಇದಂತು ಒಂದು ಮಾದರಿಯ ಉಪಚಾರ.



ಉತ್ತರ ಕರ್ನಾಟಕದ ಕಡೇ ನೀರಿನ ಜೊತೆಯಲ್ಲಿ ಬೆಲ್ಲವನ್ನು ಕೊಡುವುದು ವಾಡಿಕೆ.



ಅನಂತರ ಅಡಿಗೆಯ ಮನೆಯಿಂದ ಕಾಫಿ, ಟೀ ಇತ್ಯಾದಿ ಸಿಹಿ ಪಾನಿಯಗಳು ಅತಿಥಿಗೆ ಬರುತ್ತವೆ. ಅವನ್ನು ಅವರು ಸೇವಿಸುತ್ತಾರೆ. ಆನಂತರ ದಿನದ ಸಮಯಕ್ಕೆ ಅನ್ವಯಿಸಿ ತಿಂಡಿ,ಊಟ ಇತ್ಯಾದಿ.



ಮಕ್ಕಳಿದ್ದರೇ ಅವರುಗಳು ಇಂಥ ಅತಿಥಿ ಬರುವುದನ್ನೇ ಕಾಯುತ್ತಿರುತ್ತಾರೆ. ಯಾಕೆಂದರೇ ಆಗ ಯಾವ ರೀತಿಯಲ್ಲೂ ಮನೆಯವರು ಇವರ ಮೇಲೆ ಮುನಿಸು ಮಾಡುವುದಿಲ್ಲ. ಅತಿಥಿಗಳಿಗೆ ಸಿಗುವ ಎಲ್ಲಾ ಉಪಚಾರ ಇವರಿಗೂ ಅನಾಯಸವಾಗಿ ಬರುತ್ತದೆ. ಆದ್ದರಿಂದ ತುಂಬ ಖುಷಿ.



ಗೊತ್ತಾ..ನಾವು ಹಳ್ಳಿಯಲ್ಲಿರುವಾಗ ಅದು ನಿಜವಾ ಇಂದಿಗೂ ಗೊತ್ತಿಲ್ಲಾ. ಸಾಂಬರ್ ಕಾಗೆ ಎಂಬ ಕಾಗೆಯಂತಿರುವ ಒಂದು ಪಕ್ಷಿ. ಸ್ವಲ್ಪ ಕಾಫಿ ಬಣ್ಣವನ್ನು ಹೊಂದಿರುವ ಸೇಮ್ ಕಾಗೆಯಂತಿರುವ ಪಕ್ಷಿ ದರ್ಶನವಾದರೇ ಯಾರಾದರೂ ನೆಂಟರು ಮನೆಗೆ ಬೇಟಿಕೊಡುತ್ತಾರೆ. ಎಂದು ನಮ್ಮ ನಮ್ಮಲ್ಲಿಯೇ ಶಕುನವನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದೇವು.



ಇದೆ ರೀತಿಯಲ್ಲಿ ಮತ್ತೊಂದು ಶಕುನವೆಂದರೇ. ಅಡಿಗೆ ಮಾಡುವ ಒಲೆ ಹರಿಸಿದರೆ ನೆಂಟರು ಮನೆಗೆ ಬರುತ್ತಾರೆ. ಹಳ್ಳಿಯಲ್ಲಿ ಇಂದಿಗೂ ಬಹುತೆಕ ಮಂದಿ ಸೌದೆ ಒಲೆಯನ್ನೆ ಬಳಸುವುದು. ಈ ಸೌದೆ ಒಲೆ ಗಾಳಿ ಅಥವಾ ಸೌದೆಯಲ್ಲಿನ ಟೊಳ್ಳು ಇತ್ಯಾದಿಗಳಿಂದ ಒಂದು ರೀತಿಯಲ್ಲಿ ಶಬ್ಧ ಮಾಡಿಕೊಂಡು ಒಲೆ ಉರಿಯುತ್ತದೆ. ಇದನ್ನು ಒಲೆ ಹರಿಸುತ್ತಿದೆ ಎಂದು ಹಳ್ಳಿಯವರು ಕರೆಯುವುದು. ಒಲೆ ಏನಾದರೂ ಹರಿಸಿದರೇ ಖಂಡಿತವಾಗಿ ಮನೆಗೆ ಯಾರಾದರೂ ಅತಿಥಿಗಳು ಆಗಮಿಸುತ್ತಾರೆ ಎನ್ನುತ್ತಿದ್ದರು.



ಒಮ್ಮೊಮ್ಮೆ ನಿಜವಾಗುತ್ತಿತ್ತು. ಆದ್ದರಿಂದ ಈ ಎರಡು ಶಕುನಗಳನ್ನು ನಾವುಗಳೂ ಬಾಲ್ಯದಲ್ಲಿ ಗಟ್ಟಿ ಮಾಡಿಕೊಂಡು ಖುಷಿಪಡುತ್ತಿದ್ದೇವು.



ಇಂದು ನಗರ ಜೀವನದಲ್ಲಿ ಈ ಎಲ್ಲಾ ಕೇವಲ ಕತೆ ಸಿನಿಮಾಗಳಲ್ಲಿ ನೋಡುವಂತಾಗಿದೆ. ಗ್ಯಾಸ್ ಒಲೆಗಳು ಅವುಗಳನ್ನು ಮೊಲೆಗುಂಪು ಮಾಡಿಬಿಟ್ಟಿದೆ.



ಅತಿಥಿಗಳೆಂದರೆ ಪರಸ್ಥಳದಿಂದ ಬರುತ್ತಿದ್ದರು. ಅವರು ಬಂದರೇ ಸುಖಸುಮ್ಮನೇ ಬರೀ ಕೈಯಲ್ಲಿ ಎಂದು ಬರುತ್ತಿರಲಿಲ್ಲ. ಅವರು ಮಕ್ಕಳಿಗಾಗಿಯೇ ಎಂಬಂತೆ ಏನಾದರೂ ತಿಂಡಿ ತಿನಿಸುಗಳನ್ನು ತರುತ್ತಿದ್ದರು. ಆದ್ದರಿಂದ ನಮಗೋ ಅವರ ಬಗ್ಗೆ ಎಲ್ಲಿಲ್ಲದ ಕಾಳಜಿ. ಅವರು ಇರುವಷ್ಟು ದಿನ ನಮಗೇ ನಾವೇ ರಾಜರು.



ನನಗೆನಿಸುತ್ತದೆ ಅಂದಿನಿಂದ ನಮ್ಮಗಳಿಗೆ ಗೊತ್ತಾಗದ ರೀತಿಯಲ್ಲಿ ನಮ್ಮ ನಮ್ಮ ಮನೆಯವರುಗಳು ಅತಿಥಿಗಳ ಉಪಚಾರವನ್ನು ತಿಳಿಸಿಕೊಟ್ಟಿರುತ್ತಾರೆ. ಹಿರಿಯರನ್ನು ನಾವುಗಳು ಗಮನಿಸಿರುತ್ತಿರುತ್ತೇವೆ. ಅವರು ಮಾಡುವ ಉಪಚಾರವನ್ನು ನಾವುಗಳೂ ಸಹ ಮುಂದುವರಿಸಿಕೊಂಡು ಮುಂದಿನ ಪೀಳಿಗೆಗೆ ಅಸ್ತಂತರಿಸುತ್ತಿದ್ದೇವೆ.



ನಾವುಗಳೂ ಸಹ ಬೇರೆ ಯಾರಾದರೂ ಮನೆಗೆ ಪರ ಊರಿಗೆ ಹೋದಾಗ ಇದೆ ರೀತಿಯಲ್ಲಿ ನಮಗೂ ಅತಿಥ್ಯ ಸತ್ಕಾರ ಸಿಕ್ಕಿರುತ್ತದೆ. ಆದರ ಋಣವನ್ನು ಅವರುಗಳು ನಮ್ಮ ಮನೆಗಳಿಗೆ ಬಂದಾಗ ತೀರಿಸಿಕೊಳ್ಳುತ್ತಿದ್ದೇವು.



ನಾವುಗಳು ಮಾಡುವ ಅತಿಥಿ ಸತ್ಕಾರದ ಮೇಲೆ ನಮ್ಮ ನಡಾವಳಿಯನ್ನು ನಿರ್ಧರಿಸುವಂತಿರುತ್ತದೆ ಅಲ್ಲವಾ?



ಇದಕ್ಕೆ ಇರಬೇಕು. ಇದಕ್ಕೆ ಹೊಂದಿಕೊಂಡಂತೆ ಹತ್ತು ಹಲವಾರು ಗಾದೆಗಳನ್ನು ನಮ್ಮ ಜನಪದ ರಚಿಸಿಬಿಟ್ಟಿದ್ದಾರೆ.



"ಬಡವರ ಮನೆ ಊಟ ಚೆನ್ನ. ಶಾನಭೋಗರ ಮನೆ ಬಡಿವರ ಚೆನ್ನ."



"ಅನ್ನ ಇಟ್ಟ ಮನೆ ಎಂದು ಕೆಡುವುದಿಲ್ಲ"



ಮತ್ತೂ ನಮ್ಮ ಕತೆ,ಪುರಾಣಗಳಲ್ಲಿ ದೇವರು ಒಮ್ಮೊಮ್ಮೆ ಅತಿಥಿಗಳ ರೂಪದಲ್ಲಿ ಜನ ಸಾಮಾನ್ಯರ ಮನೆಗಳಿಗೆ ಬೇಟಿಕೊಡುವುದು. ಅರಿಯದ ಮನುಷ್ಯ ಅವನನ್ನು ಬೇರೆಯಾಗಿ ಅಸಡ್ಡೆಯಾಗಿ ಕಾಣುವುದು. ಅದಕ್ಕಾಗಿ ಕಷ್ಟಪಡುವುದು. ದೇವರು ಮುನಿಸಿಕೊಳ್ಳುವುದು.. ಹೀಗೆ ನಾನ ರೀತಿಯ ನಿದರ್ಶನಗಳಿಂದ ನಮ್ಮಗಳಿಗೆ ಅತಿಥಿ ಎಂದರೇ ಸಾಕ್ಷತ್ ದೇವರು ಎಂಬಂತಾಗಿದೆ.



ಆದರೇ ಗೊತ್ತಿರುವವರು ಬಂದರೇ ಮಾತ್ರ ನಾವು ಒಂದು ಸ್ವಲ್ಪ ಹೆಚ್ಚಾಗಿ ಆಧಾರಿಸುತ್ತೇವೆ. ಗೊತ್ತಿಲ್ಲದವರು ಯಾರಾದರೂ ಬಂದರೇ ಇಂದಿನ ಜಮಾನದಲ್ಲಿ ಯಾರನ್ನು ನಂಬುವುದು? ಯಾರನ್ನು ಬಿಡುವುದು ಎಂಬಂತಾಗಿದೆ ಇದು ಸಿಟಿ ಲೈಫ್!



ಅದು ಸರಿ ಎಲ್ಲರನ್ನೂ ಅತಿಥಿ ಎಂದುಕೊಂಡು ಆಧರಿಸುತ್ತಾ ಕೂರುವ ಸಮಯಾವಕಾಶ ನಮ್ಮಗಳ ಬಳಿ ಇರಲಾರದು... ಇದು ವಾಸ್ತವ.



ಆದರೂ ಈ ರೀತಿಯ ಒಂದು ನಡಾವಳಿ ನಮ್ಮ ಭಾರತದಲ್ಲಿ ಮಾತ್ರ ಯಾರೊಬ್ಬರೂ ಭಾರ ಎಂದು ಎಂದಿಗೂ ಅಂದುಕೊಳ್ಳುವುದಿಲ್ಲ.



ಇದು ಒಂದು ನಮ್ಮ ನಮ್ಮ ಬಂದುಗಳು,ಹತ್ತಿರದವರ ನಡುವೆ ಸ್ನೇಹ ಸಂಬಂಧವನ್ನು ಇನ್ನು ಗಟ್ಟಿಯಾಗಿ ಬೆಸೆಯುವ ಒಂದು ಸದಾವಕಾಶ. ಪರಸ್ಪರ ಒಬ್ಬರನ್ನೊಬ್ಬರೂ ಅರಿಯಲು, ನಾವುಗಳೆಲ್ಲಾ ಒಂದೇ ಎಂಬುದನ್ನು ನಮ್ಮಲ್ಲಿ ಮತ್ತು ನಮ್ಮ ಮುಂದಿನ ಪೀಳಿಗೆಗೆ ಮುನ್ನಡಿಸಿಕೊಂಡು ಹೋಗಲು ಸರಿಯಾದ ದಾರಿ ಮಾಡಿಕೊಟ್ಟಂತೆ.



ನನಗಂತೂ ಈ ರೀತಿಯ ಅತಿಥಿ ಸತ್ಕಾರವನ್ನು ಕೆಲವರಿಂದ ಪಡೆದು ತುಂಬ ಸಂತೋಷಗೊಂಡಿದ್ದೇನೆ. ನನಗೆ ನಾನೇ ವಿಸ್ಮಯಗೊಂಡಿದ್ದೇನೆ. ನನ್ನ ಸ್ನೇಹಿತನ ಮನೆಗೆ ಬೇಟಿಕೊಟ್ಟಾಗ ಸ್ನೇಹಿತನ ತಂದೆ ತಾಯಿ,ಅವರ ಮಡದಿಯವರ ಅತಿಥ್ಯವನ್ನು ಕಂಡು ಬೆಂಗಳೂರಿನಲ್ಲೂ ಇಂಥವರು ಈಗಲೂ ಇದ್ದಾರೆಯೇ ಎಂದು ಮೂಕನಾಗಿದ್ದೇನೆ. ಒಂದಿಷ್ಟು ಬೇಸರವಿಲ್ಲದೆ ನಮಗೋಸ್ಕರ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಮಾಡಿ ನಮ್ಮ ಬಾಯಿಯನ್ನು ಸಕ್ಕರೆ ಮಾಡುವ ಅವರ ಬದುಕು ಎಂದು ಹಾಲು ಸಕ್ಕರೆಯಾಗಿರಲಿ ಎಂಬುದೇ ನನ್ನ ಆಸೆ.



ಇತ್ತೀಚೆಗೆ ನಾನು ಬೇರೊಂದು ರಾಜ್ಯಕ್ಕೆ ಬೇಟಿಕೊಟ್ಟಾಗ ನನ್ನ ಸ್ನೇಹಿತರ ಮನೆಯವರು ನನ್ನನ್ನು ಸತ್ಕರಿಸಿದ್ದನ್ನು ನೆನಸಿಕೊಂಡರೇ.... ಅಲ್ಲಾ ಈ ರೀತಿಯ ಒಂದು ನಡಾವಳಿ ಭಾಷೆ/ರಾಜ್ಯ/ಸಂಸ್ಕೃತಿಯ ಗಡಿಯನ್ನು ಮೀರಿ ನಿಂತಿದೆಯೆಲ್ಲಾ ಎಂದು ಅಚ್ಚರಿಗೊಂಡಿದ್ದೇನೆ. ಯಾರಾದರೂ ಬಂದರೇ ಯಾಕಾದರೂ ಬರುವರೋ ಎಂಬ ದುಬಾರಿ ಯುಗದಲ್ಲಿ ಯಾವ ಯಾವ ರೀತಿಯಲ್ಲಿ ಅತಿಥಿಯನ್ನು ಅವನ ಮನೆಯೇ ಎಂಬ ಫೀಲ್ ಬರುವ ಮಟ್ಟಿಗೆ ಸಂಬಳಿಸುವವರು ಇರುವುದರಿಂದಲೇ ನಮ್ಮ ಭಾರತೀಯ ಸಂಸ್ಕೃತಿಯನ್ನು ಐರೋಪ್ಯ ದೇಶಗಳು ನೋಡಿ/ಅನುಭವಿಸಿ ಅಳವಡಿಸಿಕೊಳ್ಳಲು ಇಂದು ತವಕಗೊಂಡಿರುವುದು.



ನಮ್ಮ ನಮ್ಮ ಮನೆಯ ಈ ಸಂಸ್ಕೃತಿಗೆ ನಾವುಗಳು ಹೆಮ್ಮೆಪಡಬೇಕು!!

ಶುಕ್ರವಾರ, ಅಕ್ಟೋಬರ್ 5, 2012

ಅಷ್ಟಕ್ಕೂ ಈ ಪ್ರೀತಿಯಲ್ಲಿ ಏನಿದೆ?

ಇಲ್ಲ ಈ ಕಥೆಯನ್ನು ಅವನ ಬಾಯಿಂದಲೇ ಕೇಳಿದ್ದರೆ ಚೆನ್ನಾಗಿರುತ್ತಿತ್ತು.


ನನಗೋ ತುಂಬ ಕುತೂಹಲ ಯಾರಾದರೂ ಲವ್, ಪ್ರೇಮ ಎಂಬುವುದರಲ್ಲಿ ಸಿಲುಕಿರುವವರನ್ನು ಕಂಡರೇ ತುಂಬ ಅಕ್ಕರೆ. ಪರವಾಗಿಲ್ಲ ಲವ್ ನಲ್ಲಿ ಬಿದ್ದುಬಿಟ್ಟಿದ್ದನಲ್ಲಾ/ಬಿದ್ದಿದ್ದಳಲ್ಲಾ ಎಂದು ಅವರನ್ನು ದೇವರನ್ನು ನೋಡುವ ರೀತಿಯಲ್ಲಿಯೇ ಭಯ ಭಕ್ತಿಯಿಂದ ಗಮನಿಸುತ್ತಿರುತ್ತೇನೆ.


ಯಾರಾದರೂ ಸ್ನೇಹಿತರು ಲವ್ ನಲ್ಲಿ ಬಿದ್ದಿದ್ದಾನೆ ಎಂದ ತಕ್ಷಣ ಅವನ ಪ್ರತಿಯೊಂದು ಚಹರೆ, ಮಾತು, ಕಥೆಯನ್ನು ಹತ್ತಿರದಿಂದ ನೋಡುತ್ತಿರುತ್ತೇನೆ. ಲವ್ ನಲ್ಲಿ ಬಿದ್ದ ಹುಡುಗರ, ಹುಡುಗಿಯರ ಬಗ್ಗೆ ಸಿನಿಮಾ, ಕಥೆಯಲ್ಲಿ ನೋಡಿ ಓದಿದ ರೀತಿಯಲ್ಲಿ ಏನಾದರೂ ಈ ಮೇಟಿರಿಯಲ್ ವರ್ತಿಸುತ್ತಿದೀಯೇ ಎಂದು ಪರೀಕ್ಷಿಸುತ್ತೇನೆ.


ಹುಡುಗಿಯರು ಸಹಜವಾಗಿ ತಮ್ಮ ಪ್ರೇಮದ ಬಗ್ಗೆ ಏನಂದರೂ ಸುಖ ಸುಮ್ಮನೆ ತಮ್ಮ ಸ್ನೇಹಿತರ ಬಳಿ ಬಾಯಿಬಿಡುವುದಿಲ್ಲ.


ಗೊತ್ತಿಲ್ಲಾ ಹುಡುಗರು ತಮ್ಮ ಮೊದಲ, ಎರಡನೇಯ ಪ್ರತಿಯೊಂದು ಪ್ರೇಮದ ಗುಟ್ಟನ್ನು ಜಗತ್ತಿಗೆ ತಿಳಿಯಪಡಿಸಲು ಕಾತುರರಾಗಿರುತ್ತಾರೆ. ಯಾರಾದರೂ ಕೇಳುಗರು ಸಿಕ್ಕಿದರೇ ಇಂಚು ಇಂಚು ಕಥೆಯನ್ನು ಮನನವಾಗುವಂತೆ ತೆರೆದಿಟ್ಟುಬಿಡುತ್ತಾರೆ. ಆದರೇ ಹುಡುಗಿಯರು ಅವರ ಯಾವುದೇ ಒಂದು ಪ್ರೇಮದ ಗುಟ್ಟನ್ನು ನನ್ನಾಣೆ ಯಾವ ಕಾರಣಕ್ಕೂ ತಿಳಿಯಪಡಿಸುವುದಿಲ್ಲ. ಅವರು ಅಷ್ಟರ ಮಟ್ಟಿಗೆ ಅವರ ಎದೆಯ ಗೊಡಿನಲ್ಲಿ ಬೆಚ್ಚಗೆ ಬಚ್ಚಿಟ್ಟು ಕಾಪಡಿಕೊಳ್ಳುತ್ತಾರೆ? (ಅಥವಾ ಹೆದರಿಕೆಯ??)


ನನಗಂತೂ ಗೊತ್ತಿಲ್ಲಾ. ಯಾರಾದರೂ ಕಾಸ ದೋಸ್ತ್ ಗಳ ಬಳಿ ಹುಡುಗಿಯರು ಸಹ ತಮ್ಮ ಪ್ರೇಮವನ್ನು ಜಗಜ್ಜಾಹೀರು ಮಾಡಿರಬಹುದೇನೋ? ಇದುವರೆಗೂ ಅಂಥ ಗೆಳೆತಿಯರು ನನ್ನ ಬಳಿ ತಮ್ಮ ಪ್ರೇಮಾನುರಾಗವನ್ನು ಹರಿದುಬಿಟ್ಟಿಲ್ಲ.


ಆದರೇ ಹುಡುಗಿಯರ ನಡವಳಿಕೆಯಿಂದ ನನಗೆ ಏನೂ ಪ್ರತಿಯೊಬ್ಬರಿಗೂ ಗೊತ್ತಾಗೇ ಗೊತ್ತಾಗಿರುತ್ತದೆ. ಈ ಹುಡುಗಿಗೆ ಒಬ್ಬ ಬಾಯ್ ಪ್ರೇಂಡ್ ಇದ್ದಾನೆ ಎಂಬುದು. ಆದರೆ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೇ ಯಾರಿಗೂ ಗೊತ್ತಾಗುವುದಿಲ್ಲ ಎಂಬ ರೀತಿಯಲ್ಲಿ ಗುಸು ಗುಸಾ, ಪಿಸ ಪಿಸ,ಟಪ ಟಪಾ ಮಾತು-ಮೇಸೆಜ್ ಮಾಡುವುದು ಮೊದಲ ಮುನ್ನೂಚನೆಯಲ್ಲಿ ಜಗತ್ತಿಗೆ ಸಾರಿರುತ್ತಾರೆ. ಆ ಸಮಯಕ್ಕೆ ನಾವುಗಳು ನಿರ್ಧರಿಸಬಹುದು.ಈ ಹುಡುಗಿ ಹಾದಿ ಬಿಟ್ಟಿದ್ದಾಳೆ ಎಂದು. ಗಮನಿಸಿ ಹುಡುಗಿಯರು ಬಾಯ್ ಪ್ರೇಂಡ್ ಹೊಂದಿದ್ದರೇ ಮುಗಿದೇ ಹೋಯ್ತು. ಇಡೀ ಪ್ರಪಂಚವನ್ನೇ ಮರೆತುಬಿಡುತ್ತಾರೆ. ಅವಳಿಗೆ ಅವನ ಗೆಳೆಯನೇ ಸಾಕ್ಷತ್ ದೇವರು. ಅವನ ಬಿಟ್ಟು ಬೇರೆಯವರು ಕವಡೆ ಕಾಸಿಗೂ ಕಿಮ್ಮತ್ತು ಬರುವುದಿಲ್ಲ. ಅವನ ಜಪಾನೇ ನಿತ್ಯ. ಅವನನ್ನು ಗೋಳು ಹೋಯ್ದುಕೊಳ್ಳುವುದೇ ಅವರ ಮುಖ್ಯ ಕಾರ್ಯಕ್ರಮವಾಗಿರುತ್ತದೆ. ಮುಂಜಾನೆಯಿಂದ ರಾತ್ರಿ ರಾತ್ರಿ ದೆವ್ವಗಳು ಬರುವ ವೇಳೆಯವರೆಗೂ ಅವನ ಗೆಳೆಯನನ್ನು ಮೇಸೆಜ್,ಪೋನ್ ಹೀಗೆ ಬಿಡುವುದಿಲ್ಲ. ಹುಡುಗನ ಪಾಡು ದೇವರಿಗೆ ಪ್ರೀತಿ. ಅಷ್ಟರ ಮಟ್ಟಿಗೆ ಹುಡುಗಿ ಹುಡುಗನ ಬಗ್ಗೆ ಕೇರ್ ತೆಗೆದುಕೊಳ್ಳುತ್ತಾಳೆ?


ಹುಡುಗರು ಹುಡುಗಿಯರಿಗಾಗಿ ತಮ್ಮ ತಮ್ಮ (ಮೊದಲ?) ಪ್ರೇಮಕ್ಕಾಗಿ ಹೇಗೆಲ್ಲಾ ಕಷ್ಟಪಡುತ್ತಾರೆ ಎಂದರೇ.. ದೇವರಾಣೆ ಪ್ರೀತಿ ಎಂಬ ಈ ಎರಡು ಅಕ್ಷರಕ್ಕೆ ಇಷ್ಟೊಂದು ಶಕ್ತಿಯನ್ನು ಎಲ್ಲಿಂದ ಯಾರು ಕೊಟ್ಟರು ಗುರು?


ಪ್ರೇಮಿಗಳನ್ನು ಈ ಪ್ರೀತಿ ಏನನ್ನೆಲ್ಲಾ ಮಾಡಿಸುತ್ತದೆ? ಒಂದು ಅಕ್ಷರವನ್ನು ಬರೆಯದ ಹುಡುಗ ತನ್ನ ನೆಚ್ಚಿನ ಹುಡುಗಿಗಾಗಿ ಪ್ರೇಮ ಪತ್ರವನ್ನು ಬರೆಯಲು ಶುರು ಮಾಡುತ್ತಾನೆ. ಜೀವನದಲ್ಲಿ ಒಂದೇ ಒಂದು ಸಾಲು ಪದ್ಯವನ್ನು ಓದದವನು ಹುಡುಗಿಗಾಗಿ ತಾನೇ ಕಷ್ಟಪಟ್ಟು ಪ್ರೇಮ ಕವನವನ್ನು ಗೀಚಲು ಪೆನ್ನು ಹಿಡಿಯುತ್ತಾನೆ. ಅವಳಿಗಾಗಿ ಯಾವ ತ್ಯಾಗಕ್ಕಾದರೂ ಸಿದ್ಧನಾಗುತ್ತಾನಲ್ಲ. ಅಬ್ಬಾ?


ಅಲ್ಲಾ ಹುಡುಗಿಯರು ಇದೆ ರೀತಿಯಲ್ಲಿ ತಮ್ಮ ಮುಂದಿನ ಜೀವನ ಪಯಣವನ್ನು ಹೊಸ ಹುಡುಗನೊಂದಿಗೆ ಕಟ್ಟಿಕೊಳ್ಳಲು ತವಕಿಸುವ ಪರಿಯನ್ನು ಹೇಗೆ,ಎಲ್ಲಿ ಕಲಿತರು?


ಯಾವ ಗುರು ಮಾರ್ಗದರ್ಶನವಿಲ್ಲದೆ ಕಲಿಯುವ ಏಕೈಕ ವಿಧ್ಯೆ ಅಂದರೇ "ಪ್ರೇಮ" ಮಾತ್ರ!


ವಯೋಸಹಜವಾಗಿ ಪ್ರತಿಯೊಬ್ಬ ತರುಣ ತರುಣಿಯರಲ್ಲಿ ಮೊದ ಮೊದಲು ಆಕರ್ಷಣೆಯೆಂದೂ ಪ್ರಾರಂಭವಾಗಿ ಅದು ನಿಜವಾದ ಪ್ರೇಮ ಎಂದು ತಮ್ಮಲ್ಲಿಯೇ ಕಂಡುಕೊಂಡು ಎರಡು ದೇಹ ಒಂದೇ ಹೃದಯ ಎಂಬವಷ್ಟರ ಮಟ್ಟಿಗೆ ಒಬ್ಬರನ್ನೂ ಒಬ್ಬರೂ ಬಿಡಲಾರದ ಮಟ್ಟಿಗೆ ಉಸಿರಲ್ಲಿ ಉಸಿರಾಗಿ ಬೆರತುಹೋಗಿಬಿಡುತ್ತಾರೆ.


ಎಂದೂ ಸಹ ಒಬ್ಬರ ಮುಖವನ್ನೊಬ್ಬರೂ ಯಾವತ್ತಿಗೂ ಕಂಡಿರಿದವರು.. ಅದು ಯಾವ ಮಾಯದಲ್ಲೋ ಸ್ನೇಹ, ಪರಿಚಯವೆಂದು ಶುರುವಾಗಿ ಪ್ರೇಮದ ಘಟ್ಟಕ್ಕೆ ಬಂದು ಒಬ್ಬರಿಗೊಬ್ಬರೂ ಸುಂದರ ಗೀತೆಯಾಗಿ ಮೀಡಿಯುತ್ತರಲ್ಲಾ?


ಪ್ರೀತಿ ಎಂದರೇ ಹೀಗೇನಾ ಎಂದು ತಮ್ಮನ್ನು ತಾವೇ.. ತಮ್ಮ ಪ್ರೀತಿಯ ಭಾಷೆಯಲ್ಲಿ ಕೇಳಿಕೊಳ್ಳುತ್ತಾರಲ್ಲಾ?


ನಿಜವಾಗಿಯೋ ಅಲ್ಲಿ ಹುಡುಗ ಒಂದು ರೀತಿಯಲ್ಲಿ .. ಇಲ್ಲಿ ಹುಡುಗಿ ಒಂದು ರೀತಿಯಲ್ಲಿ..


ನಾವೇ ಸಾಕಷ್ಟು ಭಾರಿ ಈ ಇಬ್ಬರೂ ಜೊಡಿಯನ್ನು ಕಂಡು ಮಾತನ್ನಾಡಿರುತ್ತೇವೆ.. "ಅಲ್ಲಾ ಪ್ರೇಮಕ್ಕೆ ಕುರುಡು ಎಂಬುದು ಇವರನ್ನು ಕಂಡೇ ಹೇಳಿರಬೇಕು. ನೋಡಿ ಆ ಹುಡುಗಿಯನ್ನು ಕೈ ತೊಳೆದುಕೊಂಡು ಮುಟ್ಟಬೇಕು. ಇವನೋ ಕಪ್ಪು ಕರಿಯ.. ಅದು ಹೇಗೆ ಇಬ್ಬರಲ್ಲಿ ಆ ಪ್ರೇಮ ರಸ ತೊಟ್ಟಿಕ್ಕಿತೂ?"


ಹೀಗೆ ಜಾತಿ, ಮತ, ಚಹರೆ, ಗುಣಾವಾಗುಣ,ಅಂತಸ್ತುಗಳನ್ನೆಲ್ಲಾ ಮೀರಿ ಹುಟ್ಟುವ ಆ ಪ್ರೀತಿಗೆ ನನ್ನಲ್ಲಿ ನಾನೇ ಅಚ್ಚರಿಪಟ್ಟಿದ್ದೇನೆ. ಪ್ರೀತಿಯನ್ನು ಮಾಡುವವರೂ ನಿಜಕ್ಕೂ ದೇವರಿಗೆ ಸಮನಾದವರು ಅನಿಸುತ್ತದೆ. ಆ ಒಂದು ಭಾವನೇ ನಿಜವಾಗಿಯೋ ಅತಿ ಉನ್ನತವಾದ ಭಕ್ತಿಯೇ ಸರಿ.


ರಾಧೆಗೆ ಕೃಷ್ಣನಲ್ಲಿ ಹುಟ್ಟಿದ ಭಕ್ತಿಯ ರೀತಿಯಲ್ಲಿ. ಈ ಪ್ರೇಮಿಗಳಿಗೆ ಅದೇ ಒಂದು ಭಕ್ತಿರಸ. ಅದಕ್ಕಾಗಿ ತನ್ಮಯತೆಯಲ್ಲಿ ಅದು ಹೇಗೆಲ್ಲಾ ಪರಿತಪಿಸುವರಲ್ಲಾ? ಆ ಒಂದು ನಿಲುವು. ಆ ಒಂದು ಅರ್ಪಣೆ ಪ್ರಾರ್ಥನೆಗೆ ಸಮ ಅನಿಸುತ್ತದೆ.


ಆದರೇ ಎಲ್ಲಾ ಪ್ರೀತಿಗಳು ಗೆಲುವಾಗುವುದಿಲ್ಲ. ಪ್ರೀತಿ ಮಾಡುವುವರೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ಸುತ್ತಲಿನ ಸಮಾಜ, ತಮ್ಮದೆಯಾದ ಕುಟುಂಬದಿಂದ ತೀರಾಸ್ಕರಕ್ಕೆ ಗುರಿಯಾಗಿಬಿಡುತ್ತಾರೆ. ಜಗತ್ತೇ ಈ ಇಬ್ಬರೂ ಪ್ರೇಮಿಗಳ ವಿರುದ್ಧ ನಿಂತಂತೆ ಬಾಸವಾಗುತ್ತದೆ. ಪ್ರೀತಿ ಎಂಬ ಒಂದೇ ಒಂದು ವಿಷಯಕ್ಕಾಗಿ ಪ್ರತಿಯೊಬ್ಬರನ್ನೂ ಎದುರು ಹಾಕಿಕೊಂಡು ನಿಲ್ಲಬೇಕಾಗುತ್ತದೆ. ನಿಂತವರು ಗೆಲ್ಲುತ್ತಾರೆ. ಇಲ್ಲವಾದರೇ ಅದಕ್ಕೆ ಎಳ್ಳು ನೀರು ಬಿಟ್ಟು ನಿತ್ಯ ಕೊರಗುತ್ತಲೇ ತಮ್ಮ ಮುಂದಿನ ಜೀವನವನ್ನು ದೂಡುತ್ತಾರೆ.


ಪ್ರತಿಯೊಬ್ಬ ಪ್ರೇಮಿಗಳು ಶಾಶ್ವತವಾಗಿ ಒಂದಾಗಿರಲಿ ಎಂಬ ಶಾಸನವಿದ್ದರೇ ಎಷ್ಟು ಚೆಂದ?


"ಗೊತ್ತಿಲ್ಲಾ ಯಾವುದೋ ಮಾಯೆಯಲ್ಲಿ ಅವಳನ್ನು ನಾನು ಇಷ್ಟಪಟ್ಟೆ. ಅವಳಲ್ಲಿ ಏನೋ ಒಂದು ಗುಣ ನನ್ನನ್ನೂ ಹುಚ್ಚನನ್ನಾಗಿ ಮಾಡಿದೆ. ಅದು ಏನೂ ಎಂದು ನಾನು ಪದಗಳಲ್ಲಿ ಹೇಳಲಾರೇ" ಎಂದು ಚಟಪಟಿಸುವ ಹುಡುಗನ ಪ್ರೀತಿಗೆ ಬೆಲೆಯನ್ನು ಯಾರಾದರೂ ಕಟ್ಟಲು ಸಾಧ್ಯವೇ?


"ಇಲ್ಲಾರೀ ಅವನನ್ನು ಕಂಡರೇ ನನಗೆ ಇಷ್ಟ ಅಷ್ಟೇ. ಅವನಿಲ್ಲದ ಜೀವನವನ್ನು ನಾನು ಕನಸಲ್ಲೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ನನಗೆ ಅವನು ಏನದರೂ ಆಗಿರಲಿ ನನಗೆ ಅವನು ಮಾತ್ರ ಬೇಕು." ಎಂದು ಹಂಬಲಿಸುವ ಸಾವಿರಾರು ಪ್ರೀತಿಯ ಹುಡುಗಿಯರನ್ನು ನಾವುಗಳು ಏನೆಂದು ಕರೆಯಲಿ.


ಅಲ್ಲಾ ಅಷ್ಟಕ್ಕೂ ಈ ಪ್ರೀತಿಯಲ್ಲಿ ಏನಿದೆ?


ಎಷ್ಟೆಲ್ಲಾ ಪುರಾಣ, ಕಥೆ, ಕಾವ್ಯ, ಕವನ, ಸಿನಿಮಾಗಳು ಬಂದವು. ಅವುಗಳಲ್ಲಿ ಪ್ರೀತಿಯ ಬಗ್ಗೆ ಹೇಗೆಲ್ಲಾ ವ್ಯಾಖ್ಯಾನ ಮಾಡಿದರೂ ಇದರ ಮರ್ಮವನ್ನು ಇನ್ನೂ ಈ ಹುಲು ಮಾನವ ಬಿಡಿಸಲಾರದಷ್ಟು ದಡ್ಡನಾಗಿರುವನೂ ಅನಿಸುತ್ತದೆ. ಈ ಒಂದು ದೌರ್ಬಲ್ಯವೇ ಮತ್ತೇ ಮತ್ತೇ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ತಮ್ಮಲ್ಲಿಯೇ ಘಟಿಸುವ ಪ್ರೇಮಕ್ಕೆ ಸಿಲುಕುತ್ತಿರುತ್ತಾರೆ....

Oh Sorry! ಗೆಳೆಯನ ಕತೆಯನ್ನೆ ಬರೆಯಲಿಲ್ಲ! ಎಂದಾದರೂ ಒಮ್ಮೆ ಬರೆಯೋಣ..................!

ಅಲ್ಲಾ ಪ್ರೇಮ ಎಂದರೇ ಇಷ್ಟೇನಾ?

ಬುಧವಾರ, ಅಕ್ಟೋಬರ್ 3, 2012

ಎಲ್ಲಾ ಇದ್ದೂ ಏನನ್ನೋ

ಮೆಟ್ರೋಪಾಲಿಟನ್ ನಗರಗಳ ಒಂದು ಜಾಯಮನವೆಂದರೇ ತಮ್ಮತನವನ್ನು ಮರೆತು ಕೇವಲ ಕೃತಕವಾದ ಬದುಕನ್ನು ಬದುಕುವುದು.




ನೀವು ಗಮನಿಸಿ ನೀವು ಯಾವುದೇ ಮೆಟ್ರೋ ನಗರಗಳಿಗೆ ಬೇಟಿ ಕೊಟ್ಟರು ಅವುಗಳ ಮೊದಲ ನೋಟ ಒಂದೇ ರೀತಿ ಇರುತ್ತದೆ. ಅದರಲ್ಲಿ ಅಕ್ಷರಶಃ ವ್ಯತ್ಯಾಸವಿರುವುದಿಲ್ಲ.



ಅದೇ ಯಾವುದಾದರೂ ಒಂದು ಚಿಕ್ಕ ನಮ್ಮ ಪಟ್ಟಣಗಳಿಗೆ ಮೊದಲ ಕಾಲೂರಿದರೇ ನಿಮಗೆ ಒಂದು ವ್ಯತ್ಯಾಸ ಸಿಕ್ಕೇ ಸಿಕ್ಕಿರುತ್ತದೆ. ಅದೇ ಅಲ್ಲಿನ ನೈಸರ್ಗಿಕ ಗುಣ.



ದೊಡ್ಡ ದೊಡ್ಡ ನಗರಗಳ ಹಣೆಬರಹವೇ ಹೀಗೆ. ಜನರಿಂದ ಹಿಡಿದು ಪ್ರತಿಯೊಂದು ಯಾವುದೋ ಒಂದು ಯಂತ್ರಕ್ಕೆ ಕೀಲಿ ಕೊಟ್ಟಂತೆ ತಮ್ಮ ಪಾಡಿಗೆ ತಾವುಗಳು ಜೀವಂತ ಚಲಿಸುತ್ತಿರುವಂತೆ ಭಾಸವಾಗುತ್ತಿರುತ್ತದೆ. ಪ್ರತಿಯೊಂದು ಮತ್ತೊಂದರ ಪೊಟೋ ಕಾಪಿಯಂತೆ ಕಾಣಿಸುತ್ತದೆ.



ಆ ನಗರದ ನೈಜತೆಯನ್ನು ಗಮನಿಸಬೇಕೆಂದರೇ ಪುನಃ ಯಾವುದಾದರೂ ಹಳೆಯ ಸಿಟಿ ಮಧ್ಯದ ಗಲ್ಲಿಗಳಿಗೆ ಬೇಟಿ ಕೊಟ್ಟುಕೊಂಡು, ಹೌದು ನಾನು ಇರುವುದು ಚೆನೈ,ಬೆಂಗಳೂರು ಎಂದು ಮನನ ಮಾಡಿಕೊಳ್ಳಬೇಕಾಗುತ್ತದೆ.



ಇಲ್ಲವಾದರೇ ನಾವಿರುವುದು ಹೆಸರೇ ಇಲ್ಲದ ಒಂದು ಕೆಲಸ ಮಾಡುವ ನಗರ ಅನಿಸಿಬಿಡುತ್ತದೆ.



ಎಲ್ಲಿ ನೋಡಿದರೂ ವಾಹನಗಳು, ಸೂಟೂಬೂಟು ಹಾಕಿಕೊಂಡ ತರುಣರ ಮೆರವಣಿಗೆ,ಜನವೋ ಜನ ಯಾವುದೋ ಅಧಮ್ಯವಾದದ್ದನ್ನು ತಮ್ಮದಾಗಿಸಿಕೊಳ್ಳಲು ಎಲ್ಲಿಗೂ ಹೋಗುತ್ತಿದ್ದಾರೆಂಬ ಭಾವನೆಯನ್ನು ಭರಿಸುತ್ತಾರೆ. ಮಾತು ಕತೆಯೆಲ್ಲಾ ಬೇರೆ ಅದೇ ಹಿಂದಿ ಅಥವಾ ಇಂಗ್ಲೀಷ್. ದೊಡ್ಡ ದೊಡ್ಡ ಮಿಂಚುವ ಗಗನಚುಂಬಿ ಕಟ್ಟಡಗಳು ಅದರ ಮಹಾದ್ವಾರದ ಮುಂದೆ ಅದೇ ಸೆಕ್ಯೂರಿಟಿ ಜನಗಳು ಮತ್ತು ಅವರ ಪರೀಕ್ಷೆ. ವೇಗವಾಗಿ ನುಗ್ಗುವ ಎರಡು ಚಕ್ರದ ಬೈಕುಗಳು, ಕಪ್ಪು ಗ್ಲಾಸ್ ಏರಿಸಿಕೊಂಡು ಸೂಯ್ ಎಂದು ದುಳೆಬ್ಬಿಸುವ ಕಾರುಗಳು. ಇದೆಲ್ಲಾ ಐ.ಟಿ ಬಿ.ಟಿ ಪರಿಣಾಮ ಮಾರಾಯ್ರೆ ಎಂದು ಮೂಗು ಎಳೆಯಬೇಡಿ.



ಜಗತ್ತು ಬದಲಾಗುತ್ತಿರುವ ಪರಿ ಇದು. ಸಾಕಾಷ್ಟು ಉದ್ಯೋಗಾವಾಕಾಶಗಳನ್ನು ಈ ಒಂದು ರಂಗ ನಮ್ಮ ತರುಣರಿಗೆ ಕೊಟ್ಟಿದೆ. ಅಷ್ಟರ ಮಟ್ಟಿಗೆ ನಮ್ಮ ನೆಲದ ನಿಜವಾದ ಜೀವಂತ ಜೀವನ ಸೆಲೆಯನ್ನು ಅದು ತನ್ನಲ್ಲಿ ಸೇರಿಸಿಕೊಂಡಿದೆ.



ನೀ ಬದುಕಬೇಕೆಂದರೇ ಅದರಂತೆಯೇ ನೀನು ಕೋಲು ಹಾಕಬೇಕು.



ಆದ್ದರಿಂದ ಹೊಸ ಜಾಗ, ಹೊಸ ಊರುಗಳಿಗೆ, ಹೊಸ ನಗರಗಳಿಗೆ ಬಂದಾಗ ಆಗುವ ಪುಳಕ ನನ್ನಾಣೆ ನಮ್ಮಲ್ಲಿ ಏನೂ ಮಾಡಿದರೂ ಆಗುವುದಿಲ್ಲ.



ಏ ಇದು ಮತ್ತೊಂದು ಬೆಂಗಳೂರು ಅನಿಸುತ್ತದೆ. ಇದೆ ಭಾವನೇ ನೂಯಾರ್ಕ್ ನೋಡಿದಾಗಲೂ ಅನಿಸುತ್ತದೆಯೆಂದರೇ ನಾವು ನೋಡುತ್ತಿರುವುದೆಲ್ಲಾ ಕೇವಲ ಜೆರಾಕ್ಸ್ ಮಾತ್ರ.



ಹೌದು! ಮನುಷ್ಯ ಏನೇ ಮಾಡಿದರೂ ಪ್ರಕೃತಿಯ ಮುಂದೆ ಅದು ಹೇಗೆ ವಿಭಿನ್ನವಾಗಿ ಮತ್ತು ಅಷ್ಟೇ ಅದ್ಬುತವಾಗಿರಲು ಸಾಧ್ಯ? ಅದು ಮತ್ತೊಂದರ ಕನಸು.. ಮತ್ತೊಂದರ ಯೋಚನೆಯೇ ಆಗಿರಲೇ ಬೇಕು.



ನೀವು ಗಮನಿಸಿರಬಹುದು ಇದು ನಗರ, ಪಟ್ಟಣಗಳು, ಕಟ್ಟಡಗಳು, ಕಪ್ಪು ರಸ್ತೆಗಳನ್ನು ಬಿಡಿ ವ್ಯಕ್ತಿ ವ್ಯಕ್ತಿಗಳಿಗೂ ಒಂದೇ ಹೊಲಿಕೆ ಅನಿಸುತ್ತದೆ. ಎಲ್ಲಿಯೇ ನೋಡಿ ಪ್ರತಿಯೊಬ್ಬರೂ ಅದು ಏನೋ ಎಲೆಕ್ಟ್ರಾನಿಕ್ಸ್ ಗ್ಯಾಜೆಟ್ ಕಿವಿಯಲ್ಲಿ ಕೈಯಲ್ಲಿ ಸಿಗಿಸಿಕೊಂಡು ಅವರದೇಯಾದ ಲೋಕದಲ್ಲಿ ಮುಳುಗಿರುತ್ತಾರೆ. ಅವರ ಪ್ರತಿ ವರ್ತನೆ ಒಂದೇ ರೀತಿಯಿರುತ್ತದೆ. ಇಲ್ಲಿಯು ಸೇಮ್ ಟೂ ಸೇಮ್ ಹೊಲಿಕೆ.. ಕಣ್ಣಬಿಟ್ಟ ಕಡೆ ಅದೇ ಪುನಾರವರ್ತಿತ ನೋಟಗಳು. ವ್ಯಕ್ತಿಯ ಗುಣಗಳು ಮಾತ್ರ ಬದಲಾಗದಿದ್ದರೇ ಸಾಕು ಅಲ್ಲವಾ?



ಇನ್ನೂ ಯಾವುದೇ ನಗರಗಳಿಗೆ ಹೊಸದಾಗಿ ಹೆಜ್ಜೆ ಇಟ್ಟಾಗ ಪ್ರತಿಯೊಬ್ಬರಿಗೂ ಮೊದಲು ಬರುವ ಯೋಚನೆ ಇಲ್ಲಿಯ ಆಟೋ, ಟ್ಯಾಕ್ಸಿಗಳು ನಮ್ಮನ್ನು ಹೊಸಬರು ಎಂದುಕೊಂಡು ಸುಲಿಯುತ್ತಾರೆ..! ಹೌದು ಇದು ಇದ್ದುದ್ದೇ ಆ ಮೊಲಕ ನಾವುಗಳು ಮುಂದೆ ಆ ಊರಿನಲ್ಲಿ ಹೇಗೆಲ್ಲಾ ಸರಿಯಾಗಿ ಬದುಕಬೇಕು ಎಂಬ ಪಾಠವನ್ನು ಅವರು ಕಲಿಸುತ್ತಾರೆ. ಅದಕ್ಕಾಗಿ ಹೇಳಿ ಮತ್ತೆ ಆ ಎಲ್ಲಾ ಬಾಯಿಗೆ ಬಂದಂತೆ ಕೇಳುವ ಮಂದಿಗೆ ಒಂದು ಜೈ!!



ಗಮನಿಸಿ ನಮಗೆ ನಮ್ಮ ಸ್ವಂತ ಊರು ಕೊಟ್ಟಷ್ಟು ಅಚ್ಚರಿಗಳನ್ನು ಯಾವಾ ಸ್ವರ್ಗಸಮನಾದ ನಾಡು ಕೊಟ್ಟಿರುವುದಿಲ್ಲ.



ನೀವು ಅನ್ನಬಹುದು ಏಯ್ ನೀ ನಿನ್ನ ಊರಿನಲ್ಲಿಯೇ ಹುಟ್ಟಿ ಬೆಳದಿದ್ದೀಯ ಇನ್ನೂ ಏನೂ ಇದೆ ಅಲ್ಲಿ ಮಣ್ಣಂಗಟ್ಟಿ?



ಆದರೇ ಆ ಜನ್ಮ ಭೂಮಿ ಕೊಡುವ ನೆಮ್ಮದಿಯನ್ನು ಯಾವ ಲಕ್ಷದ ನಗರವು ನಮ್ಮಗಳಿಗೆ ಎಂದು ಕೊಡುವುದಿಲ್ಲ. ಅ ನಿನ್ನ ಚಿಕ್ಕ ಮೊಲೆಯ ಪುಟ್ಟ ಊರು ನಿತ್ಯ ಹೊಸ ಹೊಸ ಆಶ್ಚರ್ಯಗಳಿಗೆ ತೆರೆದುಕೊಳ್ಳುತ್ತಿರುತ್ತದೆ. ಎತ್ತಾ ನೋಡಿದರೂ ಏನೋ ಆಹ್ಲಾದ. ಎತ್ತಾ ತಿರುಗಿದರು ಏನೋ ಒಂದು ಸಂತೋಷ. ಊರೇ ನಾವಾಗಿರುತ್ತೇವೆ ನಾವೇ ಊರಾಗಿರುತ್ತದೆ.



ಅದರ ಪ್ರತಿಯೊಂದು ಚಿಕ್ಕ ಗಲ್ಲಿಯು, ಅಲ್ಲಿರುವ ವಾಸನೆ ಭರಿತ ಹರಿಯುವ ಚರಂಡಿಗಳು, ತಿಪ್ಪೆಗುಂಡಿಗಳು, ಊರ ಹೊರಬಾಗದಲ್ಲಿರುವ ಹಸಿರು ಮರಗಳು, ಅಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿ ಪಕ್ಷಿಗಳು, ಹಣ್ಣು ಹಣ್ಣು ಮುದುಕರು, ನಿತ್ಯ ಅಚ್ಚರಿಯನ್ನುಂಟು ಮಾಡುವ ಹೊಸ ಹೊಸ ಹುಡುಗಿಯರ ಮುಖಗಳು, ಅದೇ ಗಲ್ಲಿಯಲ್ಲಿ ಎಂದೋ ಮುಖತೊಳೆದಂತೆ ಕಾಣುವ ಚಿಟಿಪಿಟಿಯೆಂದು ಆಟವಾಡುವ ಆ ಮಕ್ಕಳು ಪ್ರತಿಯೊಬ್ಬರೂ ನಮ್ಮವರೇ ಎಂಬ ಭಾವನೆಯೇ ನಮ್ಮನ್ನು ತುಂಬ ನೆಮ್ಮದಿಯಾಗಿ ಸಂತೋಷವಾಗಿ ಇಟ್ಟಿರುತ್ತದೆ.



ಈ ಯಾವುದೇ ಒಂದು ಚಿಕ್ಕ ಭಾವನೇ ನಾವು ಕಾಣುವ ನಮ್ಮ ಹೈಟೆಕ್ ಸಿಟಿಗಳಲ್ಲಿ ಲಕ್ಷ ಕೊಟ್ಟರೂ ಸಿಗಲಾರದು. ಎಲ್ಲಾ ಇದ್ದೂ ಏನನ್ನೋ ಕಳೆದುಕೊಂಡ ಭಾವನೆ ನಿತ್ಯ ಕಾಡುತ್ತಿರುತ್ತದೆ. ಅದಕ್ಕೆ ಅನಿಸುತ್ತದೆ ಸ್ವಲ್ಪ ದಿನಗಳಲ್ಲಿಯೇ ಈ ಎಲ್ಲಾ
ಐಷಾರಮ್ಯ ಜೀವನ ಮಹಾ ಬೋರ್ ಅನಿಸುತ್ತದೆ..!!



ನಿಮಗೋ?