ಬುಧವಾರ, ಆಗಸ್ಟ್ 8, 2012

ಏಳಿ ಏದ್ದೇಳಿ


ಪುನಃ ಮತ್ತೊಂದು ಸ್ವಾತ್ರಂತ್ರ್ಯ ದಿನಾಚಾರಣೆಯ ಹೊಸ್ತಿಲಲ್ಲಿ ನಾವೆಲ್ಲಾ ನಿಂತಿದ್ದೇವೆ. ಅಂದು ನಮ್ಮ ದೇಶದ ಸ್ವಾತ್ರಂತ್ರ್ಯಕ್ಕಾಗಿ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ತನು,ಮನ,ಧನಗೊಡಗೂಡಿ ತಮ್ಮ ತಮ್ಮ ಪ್ರಾಣವನ್ನೇ ದೇಶಕ್ಕಾಗಿ ಕೊಟ್ಟಿದ್ದಾರೆ.

ಅವರೆನ್ನೆಲ್ಲಾ ಒಮ್ಮೆ ನೆನಪು ಮಾಡಿಕೊಳ್ಳುವ ದಿನವೇ ಆಗಸ್ಟ್ ೧೫.

ಅಂದು ಅವರುಗಳು ಹೋರಾಡಿದ ಪ್ರತಿ ಫಲವೇ ನಾವುಗಳು ಇಂದು ಬೆಚ್ಚಗೆ ಈ ದೇಶದಲ್ಲಿ ಸರ್ವ ಸ್ವತಂತ್ರವಾಗಿ, ನಿರಾಳವಾಗಿ ನಾವೇ ನಾವಾಗಿ ಬದುಕುತ್ತಿರುವುದು. ಪರಕೀಯರ ೨೦೦ ವರುಷದ ಆಳ್ವಿಕೆಯಿಂದ ಬಿಡುಗಡೆ ಪಡೆದ ದಿನವನ್ನು ಕಲ್ಪಿಸಿಕೊಳ್ಳಲು ಎಷ್ಟೊಂದು ಸಂತೋಷವಾಗುತ್ತದೆ.

ನಮ್ಮನ್ನು ನಾವುಗಳೇ ಆಳಿಕೊಳ್ಳುವುದು. ನಮ್ಮ ಸರ್ಕಾರವನ್ನು ನಾವೇ ಆರಿಸಿಕೊಳ್ಳುವುದು. ನಮ್ಮ ಕಾನೂನುಗಳನ್ನು ನಾವೇ ರೂಪಿಸಿಕೊಳ್ಳುವುದು. ನಮ್ಮ ಅಭಿವೃದ್ಧಿಯ ನಕ್ಷೆಯನ್ನು ನಾವೇ ಬರೆದುಕೊಳ್ಳುವುದು. ಈ ಎಲ್ಲಾ ಅನುಕೂಲಗಳು ಸ್ವಾತ್ರಂತ್ರ್ಯ ದೊರಕಿದ ನಂತರ ನಮ್ಮಗಳಿಗೆ ಪರಿಪೂರ್ಣವಾಗಿ ಸಿಕ್ಕಿದ್ದು.

ಅದಕ್ಕಾಗಿ ಅದೆಷ್ಟು ಬೆವರನ್ನು ಗಾಂಧಿಜೀಯರೊಡಗೂಡಿ ನೂರಾರು ಮಹಾನ್ ನೇತಾರರು, ನಾಯಕರುಗಳು ದೇಶದ ಉದ್ದಾಗಲಕ್ಕೂ ಸುತ್ತಾಡಿ ನಮ್ಮ ನಮ್ಮ ಜನಗಳ ಜನ ಮನವನ್ನು ಬಡಿದೆಬ್ಬಿಸಿ ದೇಶ ಸೇವೆ ಎಂದರೇ ಏನು? ಸತ್ಯಾಗ್ರಹ ಎಂದರೇ ಏನೂ? ಅಹಿಂಸೆಯ ಮೂಲಕವೇ ಹೇಗೆ ಬ್ರೀಟಿಷರನ್ನು ಹಿಮ್ಮೆಟ್ಟಿಸಬಹುದು? ಎಂಬುದನ್ನು ತಮ್ಮ ಸತ್ಯ ಮತ್ತು ತ್ಯಾಗದ ಮೂಲಕ ಮನನ ಮಾಡಿಕೊಂಡು ಭಾರತದ ಪ್ರತಿಯೊಬ್ಬ ಪ್ರಜೆಯನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು.

ಅದು ಅಷ್ಟು ಸುಲಭದ ಕೆಲಸವಲ್ಲ ಎಂಬುದು ನಮ್ಮಗಳಿಗೆ ಇತ್ತೀಚೆಗೆ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ಹೋರಾಟದಿಂದ ಮತ್ತಷ್ಟು ಸರಿಯಾಗಿ ಮನನವಾಗಿದೆ.

ಕಳೆದ ವರುಷದ ಇದೆ ಸಮಯದಲ್ಲಿ ಅಣ್ಣಾ ಹಜಾರೆ ಪ್ರಾರಂಭಿಸಿದ ಭ್ರಷ್ಟಾಚಾರ ಅಭಿಯಾನದ ಕಾವು ಹೇಗಿತ್ತು? ಕಾಲಕ್ರಮೇಣ ಅದರ ಬಿಸಿ ಹೇಗೆ ಕಡಿಮೆಯಾಯಿತು? ಅದನ್ನು ಹೇಗೆ ಎಲ್ಲಾ ರೀತಿಯಲ್ಲೂ ತಣ್ಣಗೆ ಮಾಡಲೂ ಭಾರತಾದ್ಯಾಂತ ಒಂದು ಸಮೊಹವೇ ಕಂಕಣ ಬದ್ಧರಾಗಿ ನಿಂತಿದ್ದು. ಹಾಗೆಯೇ ಇವರುಗಳು ಈ ಹೋರಾಟವನ್ನು ಕಳೆದ ವಾರದಲ್ಲಿ ಪರಿಪೂರ್ಣವಾಗಿ ವಿಫಲಗೊಳ್ಳುವಂತೆ ಮಾಡಿರುವುದನ್ನು ಕಂಡರೇ ನಮ್ಮ ದೇಶ ಮತ್ತು ನಮ್ಮ ಜನ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮಹತ್ವವನ್ನು ಸರಿಯಾಗಿ ಅರ್ಥ ಮಾಡಿಕೊಂಡೇ ಇಲ್ಲಾವೇನೋ ಅನಿಸುತ್ತದೆ.

ಇಂದು ಎಷ್ಟರ ಮಟ್ಟಿಗೆ ಕ್ಲೀಷೆಯಾಗಿ ರಾಜಕೀಯ, ಸರ್ಕಾರ, ಯೋಜನೆಗಳು, ಕಾನೂನುಗಳು, ಅಧಿಕಾರ ವರ್ಗ ಇತ್ಯಾದಿಗಳು ಸಾಮಾನ್ಯ ಜನರ ಕಣ್ಣಿಗೆ ಬೀಳುತ್ತಿದ್ದಾವೆ ಎಂದರೇ ಅದರಲ್ಲಿ ಕೊಂಚ ಮಟ್ಟಿಗೂ ಭರವಸೆಯ ಕಿರಣವನ್ನು ಕಾಣದಂತಾಗಿದೆ.

ಜನಗಳು ಸಹ ಒಳ್ಳೆಯ ಹೋರಾಟಕ್ಕೆ ಬೆಂಬಲವನ್ನು ಎಷ್ಟರ ಮಟ್ಟಿಗೆ ಕೊಡುವವರು ಎಂಬುದು ಅಣ್ಣ ಹಜಾರೆಯ ಹೋರಾಟ ಹಳ್ಳ ಹಿಡಿದ್ದದ್ದೇ ಸಾಕ್ಷಿ. ಯಾಕೋ ಇದನ್ನೆಲ್ಲಾ ಅರ್ಥ ಮಾಡಿಕೊಳ್ಳುವಷ್ಟರ ಮಟ್ಟಿಗೆ ನಾವುಗಳು ಅಸಮರ್ಥರೇನೋ ಅನಿಸುತ್ತದೆ.

ದೇಶವನ್ನು ಇಂದು ಅತ್ಯಂತ ನಿಷ್ಕೃಷ್ಟವಾಗಿ ಪೀಡಿಸುತ್ತಿರುವ ಅತ್ಯಂತ ದೊಡ್ಡ ರೋಗವೆಂದರೇ ಭ್ರಷ್ಟಾಚಾರ/ಲಂಚಗುಳಿತನ. ಅದು ಎಷ್ಟರ ಮಟ್ಟಿಗೆ ಸರ್ವ ವ್ಯಾಪಿಯಾಗಿ ವ್ಯಾಪಿಸಿದೆ ಎಂದರೇ.. ಅದೇ ನಮ್ಮ ದೇಶದ ಪ್ರಗತಿಗೆ ದೈತ್ಯಾಕಾರವಾಗಿ ಅಡ್ಡಗಾಲಾಗಿ ನಿಂತಿದೆ. ಇದನ್ನು ಬೇರು ಸಮೆತ ಕಿತ್ತು ಹಾಕದವರೆಗೆ ದೇಶಕ್ಕೆ ದೇಶದ ಜನಕ್ಕೆ ಮುಕ್ತಿಯೇ ಇಲ್ಲ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯ.

ಆದರೂ ಯಾಕೋ ನಮ್ಮ ಜನಗಳಿಂದ ದೊಡ್ಡ ಮಟ್ಟದ ಹೋರಾಟದ ಕೊರತೆ ಎದ್ದು ಕಾಣುತ್ತಿದೆ. ಅಂದು ೧೯೪೫ ಕ್ಕೂ ಮುನ್ನಾ ಇದ್ದಂತಹ ದೇಶಾಭಿಮಾನದ ಕಿಚ್ಚು ಸಾಮಾನ್ಯ ಜನಗಳ ಒಡಲಲ್ಲಿ ಇಂದು ಇಲ್ಲವಾಗಿದೆಯೇನೋ ಅನಿಸುತ್ತಿದೆ.

ಸ್ವಾಮಿ ವಿವೇಕಾನಂದರು ಅಂದು ಹೇಳಿದ "ಏಳಿ ಏದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ" ಎಂಬ ಮಾತನ್ನು ಹೇಳುವ ಒಬ್ಬ ಗಟ್ಟಿ ನಾಯಕನ ಅವಶ್ಯಕತೆ ಇಂದು ನಮಗೆ ಹೆಚ್ಚಾಗಿ ಇರುವಂತಿದೆ.

ಇಂದು ಯಾವ ಸತ್ಯಾಗ್ರಹ, ಉಪವಾಸಕ್ಕೂ ಜನಗಳು, ಜನ ನಾಯಕರುಗಳು, ಸರ್ಕಾರಗಳು ಕವಡೆ ಕಾಸಿನ ಕಿಮ್ಮತ್ತನ್ನು ಕೊಡದಾರದ ಮಟ್ಟಿಗೆ ಜಡವಾಗಿ ಬಿಟ್ಟಿವೆ. ಉಪವಾಸ ಮಾಡುತ್ತಿದ್ದಾರೆ ಎಂದರೇ ಸರ್ಕಾರದಲ್ಲಿ ಅತ್ಯುನ್ನತ ಅಧಿಕಾರವನ್ನು ಹೊಂದಿರುವ ಮಂದಿಯ ಉಡಾಪೆಯ ಮಾತುಗಳನ್ನು ಕೇಳಿದರೇ..! ಅಂದು ಬ್ರೀಟಿಷ ಸರ್ಕಾರವೇ ಪರವಾಗಿಲ್ಲ ಅನಿಸುತ್ತದೆ. ಗಾಂಧಿಜೀ ಮತ್ತು ಅವರ ಅನುಯಾಯಿಗಳು ಉಪವಾಸ ಸತ್ಯಾಗ್ರಾಹ ಮಾಡಿದರೇ ಇಡೀ ಬ್ರೀಟಿಷ್ ಸರ್ಕಾರವೇ ನಡುಗುತ್ತಿತ್ತು. ಆದಷ್ಟು ಬೇಗ ಈ ನಾಯಕರುಗಳು ಉಪವಾಸ ಮಾಡುವುದನ್ನು ನಿಲ್ಲಿಸಲು ಬೇಕಾದಂತಹ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುತ್ತಿದ್ದರು.

ಆದರೇ ಇಂದು ಗಮನಿಸಿ ಅಣ್ಣಾ ಮತ್ತು ಅವರ ಟೀಂ ಎಷ್ಟು ಬಾರಿ ಉಪವಾಸ ಮಾಡಿತು. ಇದಕ್ಕೆ ಏನೊಂದು ಪ್ರತಿಕ್ರಿಯೇಯನ್ನು ನೀಡದೆ ಇರುವುದರಿಂದ ಉಪವಾಸ ಮಾಡುವವರೇ (ಅಣ್ಣಾ ಮತ್ತು ಅವರ ಟೀಂ) ಸ್ವತಃ ಉಪವಾಸ ನಿಲ್ಲಿಸಿ ಇಡೀ ಹೋರಾಟದ ಸಂಘಟನೆಯನ್ನು ವಿಸರ್ಜಿಸುವ ಮಟ್ಟಿಗೆ ತಮ್ಮ ನೋವಿನ ಹೆಜ್ಜೆಯನ್ನು ಇಡಬೇಕಾಯಿತು.

ಇದು ಅತ್ಯಂತಹ ದುರಾದೃಷ್ಟಕರ ಸಂಗತಿ.

ಯಾವೊಂದು ಅನಿಷ್ಟವನ್ನು ದೇಶದಿಂದ ತೊಲಗಿಸಬೇಕಾಗಿತ್ತೊ ಅದು ಇನ್ನೂ ಪುಷ್ಟಕರವಾಗಿ ನಮ್ಮ ನೆಲದಲ್ಲಿ ಬೇಳೆಯುತ್ತಿದೆ. ಅದಕ್ಕೆ ನೀರು,ಗೊಬ್ಬರವನ್ನು ಆಯಾ ಆಯಾಕಟ್ಟಿನ ಜಾಗದಲ್ಲಿರುವ ಮಹನೀಯರುಗಳೂ ಹಾಕುತ್ತಿದ್ದಾರೆ. ಇದಕ್ಕೆ ಕೊನೆಯೆಂಬುದು ಮರುಭೂಮಿಯಲ್ಲಿ ನೀರನ್ನು ಕಂಡಂತಹ ಕನಸಾಗಿದೆ.

ಇಂದು ಯವೊಬ್ಬನೂ ಕನಸು ಮನಸಿನಲ್ಲೂ ಭಾರತದ ಶಾಸಕಾಂಗಕ್ಕೆ ಸಾಮಾನ್ಯ ಪ್ರಜೆಯಾಗಿ ಚುನಾವಣೆಗೆ ನಿಂತು ಗೆಲ್ಲಲಾರದ ಸ್ಥಿತಿಯನ್ನು ತಲುಪಿದ್ದಾನೆ. ಹೆಚ್ಚು ಹಣವಂತನಿಗೆ ಮಾತ್ರ ಬಹುಮತ, ಅವನೇ ಮಂತ್ರಿ, ಮುಖ್ಯಮಂತ್ರಿ ಮಾತ್ರ, ಆವನೇ ಅಧಿಕಾರಿ!

ಗಮನಿಸಿ ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ತಮ್ಮ ಕಾಲದಲ್ಲಿ ಯಾವ್ಯಾವ ದೇಶ ಸುತ್ತಬೇಕಾಗಿತ್ತೋ ಅವುಗಳನ್ನು ಈಗಲೇ ತಿರುಗಾಡಿ ಬಿಡಬೇಕು ಎಂದು ತುದಿಗಾಲಲ್ಲಿ ನಿಂತುಕೊಂಡು ವಿದೇಶ ಪ್ರವಾಸಕ್ಕೆ ಸಜ್ಜಾಗುತ್ತಾರೆ.

ಜನರುಗಳು ಜನಪ್ರತಿನಿಧಿಗಳನ್ನು ಆರಿಸಿಕಳಿಸುವುದು ಇವರುಗಳು ನಮ್ಮ ಪ್ರತಿನಿಧಿಯಾಗಿ ನಮ್ಮಗಳಿಗೆ ನೆರವಾಗಿರಲಿ ಎಂಬ ಆಶಯದಿಂದ. ಅದರೇ ಅದು ಯಾವುದು ಈ ನಾಯಕರುಗಳಿಗೆ ನೆನಪಿರುವುದಿಲ್ಲ. ಕೇವಲ ತಮ್ಮ ತಮ್ಮ ಏಳ್ಗೆಯನ್ನು ಕಾಣುವುದೇ ಅವರ ಒಂದು ಅಂಶದ ಬಹು ಮುಖ್ಯ ಯೋಜನೆಯಾಗಿದೆ.

ಮೊದಲು ಬೇರು ಮಟ್ಟದಿಂದ  ಈ ಭ್ರಷ್ಟಾಚಾರ ನಿಲ್ಲುವಂತಾಗಬೇಕು.

ಮತದಾನ ಮಾಡುವ ಮತದಾರ ತನಗೆ ಒಳ್ಳೆಯವನು ಅನಿಸಿದವನಿಗೆ ಯಾವುದೇ ಆಸೆ ಅಮೀಷಕ್ಕೆ ಬಲಿಯಾಗದೇ ಸೂಕ್ತ ವ್ಯಕ್ತಿಯನ್ನು ಆರಿಸಬೇಕು. ಆಗ ಮಾತ್ರ ಅವನಿಗೆ ಅವನ್ನನ್ನು ಅಧಿಕಾರದಲ್ಲಿ ಇದ್ದಾಗ ಪ್ರಶ್ನೆ ಮಾಡುವ ಅಧಿಕಾರವಿರುತ್ತದೆ. ಅದು ಬಿಟ್ಟು ತಾನೇ ಅವನು ಕೊಡುವ ಅವನ ಎಂಜಲನ್ನು ಮತದಾನ ಮಾಡುವ ಸಮಯದಲ್ಲಿ ತಿಂದರೇ ಕೇಳಲು ಯಾವ ಬಾಯಿಯಿರುತ್ತದೆ. ಅಲ್ಲವಾ?

ಯಾವುದೇ ಸರ್ಕಾರಿ ಕೆಲಸಗಳು ಸರಿಯಾಗಿ ಆಗಬೇಕು ಎಂದರೇ ಮಾಮೂಲಿ ಕೊಡಲೇಬೇಕು ಎಂಬವಷ್ಟರ ಮಟ್ಟಿಗೆ ಪ್ರತಿಯೊಬ್ಬರೂ ತಿಳಿದುಕೊಂಡಿರುವಂತೆ ಮಾಡಿರುವುದರ ಪರಿ ಏನೂ?

ಯಾಕೇ ಇಂದು ಪ್ರತಿಯೊಬ್ಬ ರಾಜಕಾರಣಿಯನ್ನು ಅನುಮಾನದ ದೃಷ್ಟಿಯಲ್ಲಿ ನೋಡುವಂತಾಗಿರುವುದು ಯಾವ ಕಾರಣಕ್ಕೆ?

ಒಮ್ಮೆ ಎಂ.ಎಲ್.ಎ ಅಥವಾ ಎಮ್.ಪಿ ಆದರೇ ಮುಗಿಯಿತು ಅವನ ಜೀವನದಲ್ಲಿ ಸೇಟ್ಲ್ ಆದಂತೆ ಎಂಬುವಷ್ಟರ ಮಟ್ಟಿಗೆ ಈ ಅಧಿಕಾರಿಗಳಿಗೆ, ಉಳ್ಳವರಿಗೆ ಇದು ಪ್ಯಾಶ್ ನ್ ಆಗಿಬಿಟ್ಟಿದೆ?

ನಿಜವಾಗಿಯೂ ಈ ಮಂದಿಗೆ ಜನಸೇವೆಯೇ ಅಧ್ಯ ಕರ್ತವ್ಯವಾಗಿದೆಯೇ? ಯೋಚಿಸಿ!

ಇಂದು ನಡೆಯುತ್ತಿರುವ ಈ ನಾಯಕ ಮಣಿಗಳ ದರ್ಬಾರನ್ನು ಹಿಂದೆ ನಮ್ಮ ನಾಡಿಗೆ ಸ್ವಾತಂತ್ರ್ಯ ತಂದುಕೊಟ್ಟ ಮಂದಿ ಏನಾದರೂ ನೋಡಿಬಿಟ್ಟಿದ್ದರೇ ನಿಜವಾಗಿಯೂ ಅವರು ಎಷ್ಟರ ಮಟ್ಟಿಗೆ ದಿಗ್ಬ್ರಮೆಗೆ ಒಳಗಾಗುತ್ತಿದ್ದರೂ ಆ ಭಾರತಾಂಭೇಯೆ ಬಲ್ಲಳು.

ಎಲ್ಲಾದರಲ್ಲೂ ಸ್ವಾರ್ಥ,ಸ್ವಜನಪಾತ,ಸ್ವಜಾತಿಯೇ ತುಂಬಿ ತುಳುಕುತ್ತಿದೆ. ಪ್ರತಿಯೊಂದು ಚುನಾವಣೆಯು ಈ ಮೂರು ಅಂಶಗಳ ಮೇಲೆಯೇ ನಡೆಯುತ್ತಿದೆ. ಮಾತಿಗೆ ದೇಶ ಸೇವೆ, ದೇಶ ಅಭಿವೃದ್ಧಿ.

ತಾವು ಮಾಡುವ ಎಲ್ಲಾ ಪಾಪಗಳ ರಕ್ಷಣೆಗಾಗಿ ನಿತ್ಯ ನಿರಂತರ ಒಳ್ಳೆ ಒಳ್ಳೆಯ ಹುದ್ದೆ, ಅಧಿಕಾರದಲ್ಲಿ ಇರಬೇಕು. ಅದೇ ಅವರ ಮುಖ್ಯ ಯೋಜನೆ. ತಾನಾದ ಮೇಲೆ ತನ್ನ ಮಕ್ಕಳು, ಮೊಮ್ಮಕ್ಕಳು ಹೀಗೆ ನಿತ್ಯ ವಂಶಪಾರಂಪರ್ಯವಾಗಿ ರಾಜ ಸಿಂಹಾಸಾನದ ಮೇಲೆ ವಿರಾಜಾಮಾನವಾಗಿ ಪಳ ಪಳ ನಿತ್ಯ ಹೊಳೆಯತ್ತಿರಬೇಕು.

ಬಡವರು ನಿತ್ಯ ಬಡತನದಲ್ಲಿ ಅಭಿವೃದ್ಧಿಯನ್ನುಂದುತಿರಬೇಕು. ಶ್ರೀಮಂತರು ನಿತ್ಯ ಶ್ರೀಮಂತರಾಗುತ್ತಿರಬೇಕು. ಇದೇ ಇವರು ಹೇಳುವ ಸಮಾಜವಾದ ಮತ್ತು ಸಹ ಬಾಳ್ವೇ!!

ಇನ್ನಾದರೂ ಕೂಂಚ ಬದಲಾವಣೆಯನ್ನು ನಮ್ಮ ಈ ಭೂಮಿ ಕಾಣಬೇಕಾಗಿದೆ. ಕಪ್ಪು ಹಣ, ಭ್ರಷ್ಟಾಚಾರ, ಅನೀತಿ ಶಾಶ್ವತವಾಗಿ ತೊಲಗಿ ಸ್ವಚ್ಛ ಸಮಾಜದ ಉಗಮವಾಗಬೇಕು.

ಇದು ನನಸಾಗಬೇಕೆಂದರೇ ಪ್ರತಿಯೊಬ್ಬ ಭಾರತೀಯ ಪ್ರಜೆಯ ಸ್ವಚ್ಛವಾದ, ಶುದ್ಧ ಚುನಾವಣಾ ಮತದಾನವಾಗಬೇಕು. ಅದು ಕೇವಲ ಒಬ್ಬ ಪ್ರಭಾವಶಾಲಿ,ಹಣವುಳ್ಳವನು,ಸ್ವಜಾತಿಯವನು ಇತ್ಯಾದಿಯನ್ನು ಅವಲಂಬಿಸದೇ ನಿಜವಾದ ಸಮಾಜ ಪ್ರೇಮ, ದೇಶ ಪ್ರೇಮವನ್ನು ಹೊಂದಿರುವ ವಿದ್ಯಾವಂತ ಸರಳ ಭರವಸೆಯ ವ್ಯಕ್ತಿಯ ಆಯ್ಕೆ ಮಾಡುವುದರಲ್ಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ