ಬುಧವಾರ, ಆಗಸ್ಟ್ 15, 2012

ಈ ಪ್ರೀತಿಯ ಹೊಳೆ


ಹಾಯ್ ನಿರ್ಮಲಾ,

ಇಂದಿಗೆ ಒಂದು ವರುಷವಾಯಿತು ನನ್ನ ನಿನ್ನ ಮಧ್ಯೆ ಹುಟ್ಟಿಕೊಂಡ ಈ ಸ್ನೇಹ, ಪ್ರೇಮ ಮತ್ತು ಪ್ರೀತಿಗೆ!

ಅಬ್ಬಾ ಎಷ್ಟು ಬೇಗ ಮೊದಲ ವರ್ಷಾಚಾರಣೆಯ ಹೊಸ್ತಿಲಲ್ಲಿ ನಾವಿಬ್ಬರು ನಿಂತು ಬಿಟ್ಟಿದ್ದೇವೆ. ಇಂದು ಸಹ ನೀನು ನನಗೆ ನಿನ್ನೆ ಮೊನ್ನೆ ಪರಿಚಯವಾದಂತಿದೆ.

ಅದಕ್ಕೆ ಇರಬೇಕು ಕಣ್ಣಿಗಿಂತ ಹೃದಯಕ್ಕೆ ಇಷ್ಟವಾದವರ ಜೊತೆಯಲ್ಲಿ ಕಳೆಯುವ ಕ್ಷಣಗಳು ಕೇವಲ ಕ್ಷಣಗಳು ಮಾತ್ರ!

ಅಂದು  ಸ್ವಾತಂತ್ರ್ಯ ದಿನಾಚಾರಣೆ. ನನಗೋ ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಆಚರಣೆಯ ಉತ್ಸವಗಳ ಸಂಭ್ರಮವನ್ನು ಕಣ್ಣುತುಂಬಿಕೊಳ್ಳಲು ತುಂಬ ಆಸೆಯಾಗಿತ್ತು. ಅದಕ್ಕಾಗಿಯೇ ಅಂದು ಮುಂಜಾನೆ ಬಹು ಬೇಗ ಎದ್ದು ರೇಡಿಯಾಗಿ ನಿತ್ಯ ನಾನು ಕಾಲೇಜಿಗೆ ಹೋಗಲು ನಾನು ಹಿಡಿಯುವ ಬಸ್ಸು ಬರುವ ಜಾಗದಲ್ಲಿ ನಿಂತು ಎಂ.ಜಿ ರೋಡ್ ಕಡೆಗೆ ಹೋಗುವ ಬಸ್ಸು ಬರುವ ದಾರಿಯನ್ನೆ ನೋಡುತ್ತಾ ಸುಮಾರು ಅರ್ಧ ಗಂಟೆಯಿಂದ ಕಾಯುತ್ತಿದ್ದೆ.

ಗೊತ್ತಾ ನಮಗೆ ಬೇಕಾದ ಸಮಯಕ್ಕೆ ಯಾವ ಬಸ್ಸುಗಳು ಬರುವುದಿಲ್ಲ. ನಮಗೆ ಬೇಕಿಲ್ಲದಿರುವಾಗ ಹಿಂದೆ ಮುಂದೆ ಬಸ್ಸುಗಳ ಸಾಲೇ ಸಾಲೂ! ಇದೇ ಜೀವನದ ಮರ್ಮ ಅನಿಸುತ್ತದೆ. ಇದು ಪ್ರತಿಯೊಂದಕ್ಕೂ ಅನ್ವಯವಾಗುತ್ತದೆ.

ಹಾಗೆ ಕಾದು ಕಾದು ನಿರಾಶನಾಗಿರುವಾಗ. ಗೊತ್ತಿಲ್ಲ ಅಂದು ಆ ಮುಂಜಾನೆಯ ವಾತವರಣವೇ ಹಾಗೆ ಇತ್ತೇನೋ. ಎತ್ತಾ ಕಡೆ ನೋಡಿದರೂ ಚಿಕ್ಕ ಚಿಕ್ಕ ಶಾಲಾ ಮಕ್ಕಳ ಶಾಲಾ ಸಮವಸ್ತ್ರ ಮತ್ತು ಕೈಯಲ್ಲಿ ಕೆಸರಿ,ಬಿಳಿ,ಹಸಿರು ದ್ವಜದ ಬ್ಯಾಂಡ್, ಬಾವುಟ. ಆ ಮಕ್ಕಳ ಹೆಜ್ಜೆ,ನಗು,ಉತ್ಸಾಹವನ್ನು ಕಂಡು ಭಾರತಾಂಬೆಗೆ ಅಲ್ಲಿಯೇ ಒಂದು ನಮನ ಸಲ್ಲಿಸಿದೆ.

ನಮ್ಮ ದೇಶದ ಸ್ವಾತಂತ್ರ್ಯದ ಹಿರಿಮೆಯನ್ನು ನೋಡಬೇಕೆಂದರೇ ಅದು ಆಗಸ್ಟ ೧೫ ಮಾತ್ರ! ಅದು ನಮ್ಮೆಲ್ಲರ ಪಾಲಿಗೆ ಬಿಡುಗಡೆಯ ದಿನವೇ ಸರಿ.

ಹೀಗಿರುವಾಗಲೇ ಒಂದರೆಕ್ಷಣ ನನಗೆ ನನ್ನಲ್ಲಿಯೇ ಏನೋ ಆದಂತೆ ಅನಿಸಿಬಿಟ್ಟಿತು.

ಹಾಗೆಯೇ ಮುಂಜಾನೆಯ ನಿದ್ದೆಯಿಂದ ಎದ್ದು ಯಾವುದೋ ಘಮದ ಪರಿಮಳವೇ ನನ್ನ ಮೂಗಿಗೆ ತಲುಪಿದಂತಾಯಿತು. ಹಾಗೆಯೇ ಸುಮ್ಮನೇ ನಾನು ಯಾಕಿರಬಹುದು? ಏನಿರಬಹುದು? ಎಂದುಕೊಂಡು ನಾನು ನಿಂತು ಕೊಂಡಿದ್ದ ಆ ಅರಳಿ ಮರದಿಂದ ಬಲಕ್ಕೆ ತಿರುಗಿದರೇ..

ನಾನು ಹಾಗೆಯೇ ಸ್ಥಬ್ಧ!

ಅಲ್ಲಾ ದೇವರೇ ಇಂಥ ಶುಭ ದಿನದಂದೂ ಈ ರೀತಿಯಲ್ಲಿ ಈ ಹುಡುಗಿಯನ್ನು ನನ್ನ ಕಣ್ಣಿಗೆ ನೀ ಹೀಗೆ ಬೀಳಿಸಬಹುದೇ? ಅನಿಸಿತು.

ಈ ಪರಿಮಳ ಈ ಹುಡುಗಿ ಹಾಕಿಕೊಂಡಿರುವ ಪರಪ್ಯೂಮ್ ದೇ  ಅನಿಸಿತು.

ಅಲ್ಲಾ ನೀನು ಅದು ಹೇಗೆ ಅಂಥ ಟೇಸ್ಟ್ ಇರುವ ಪರಪ್ಯೂಮ್ ಖರೀದಿಸುತ್ತಿಯಾ?

ಅದಕ್ಕೂ ಒಂದು ಅಸಕ್ತಿ ಬೇಕು ಅನಿಸುತ್ತದೆ. ಅದರಲ್ಲಿಯೇ ಏನೂ ಒಂದು ಅಹ್ಲಾದ. ಹುಡುಗಿಯ ಬಗ್ಗೆ ಈ ಸುಮಧುರ ಸುಗಂಧದ ಪರಿಮಳವೇ ಮುನ್ನುಡಿಯಾಗಿತ್ತು.

ಹುಡುಗಿಯರಿಗೆ ಇಂಥ ಒಳ್ಳೆಯ ಟೇಸ್ಟ್ ಇರುತ್ತೇ ಎಂದು ಕೇಳಿದ್ದೆ. ಆದರೇ ನೀನು ಅಂದು ಅದನ್ನು ನಿಜ ಮಾಡಿದ್ದೆ.

ಇಷ್ಟು ದಿನವೂ ನೀನು ಇದೆ ಏರಿಯಾದಲ್ಲಿಯೆ ಇದ್ದೀಯಾ! ಎಂದು ನನಗೆ ನಾನೇ ತಬ್ಬಿಬ್ಬು ಆಗಿಬಿಟ್ಟಿದ್ದೇ.!

ಯಾಕೆಂದರೇ ನಾನು ಅಷ್ಟು ಬೇಗ ಯಾವಾತ್ತೂ ಎದ್ದಿಲ್ಲಾ! ಅಷ್ಟು ಬೇಗ ಎದ್ದು ಬಸ್ ನಿಲ್ಧಾಣಕ್ಕೆ ಯಾಕೇ ಬರಬೇಕು ಅಲ್ಲವಾ?

ನನ್ನ ಮನದಲ್ಲಿಯೇ ಆ ದೇವರಿಗೆ ಒಂದು ಚಿಕ್ಕ ನಮಸ್ಕಾರವನ್ನು ಹಾಕಿಬಿಟ್ಟೆ!

ನೀನು ಇನ್ನೂ ಇನ್ನೂ ಹತ್ತಿರಕ್ಕೆ ಬಂದಂತೆ ನನ್ನ ಎದೆಯ ಢವ  ಢವ  ಜಾಸ್ತಿಯಾಗಿಬಿಟ್ಟಿತು.

ಇದುವರೆಗೂ ಹಾಗೆ ನನಗೆ ಎಂದೂ ಸಹ ಈ ರೀತಿಯಲ್ಲಿ ಅನಿಸಿರಲಿಲ್ಲ.

ನಾನು ಓದುವ ಕಾಲೇಜಿನಲ್ಲಿ ಮಾಮೊಲಿಯಾಗಿ ಸುಮಾರು ಹುಡುಗಿಯರು ಇದ್ದಾರೆ. ಎಂದೂ ಅವರನ್ನು ನೋಡಿದಾಗ ಹೀಗೆ ಆದ ಅಂದಿನ ಅನುಭವವಾಗಿರಲಿಲ್ಲ.

ನನಗೆ ನಾನೇ ಮನದಲ್ಲಿ ಸಮಾಧಾನ ಮಾಡಿಕೊಂಡು ನಿನ್ನ ಆ ಸುಂದರ ಮುಖಾರವಿಂಧವನ್ನು ನನ್ನ ಕಣ್ಣಲ್ಲಿ ತುಂಬಿಸಿಕೊಳ್ಳಬೇಕು ಎಂದು ಕಣ್ಣುರೆಪ್ಪೆ ಬಡಿಯದೇ ನಿನ್ನನ್ನೇ ನೋಡುತ್ತಾ ಇರುವಾಗ.. ನೀನು ಏನಕ್ಕೋ ಹಾಗೆಯೇ ಹಿಂದಕ್ಕೆ ತಿರುಗಿ ನೋಡಿದಾಗ ಅಬ್ಬಾ ಏನೂ ಆ ನಿನ್ನ ಕಪ್ಪು ಕೊದಲು? ಹಾಗೆಯೇ ಪೂರ್ಣವಾಗಿ ನಿನ್ನ ಹಿಂಬದಿಯನ್ನು ಅವರಿಸಿಕೊಂಡುಬಿಟ್ಟಿವೆ. ತಲೆಗೆ ಚಿಕ್ಕದಾದ ಮಲ್ಲಿಗೆಯ ಹೊವನ್ನು ಇಟ್ಟುಕೊಂಡಿರುವುದು ಇನ್ನೂ ಹೆಚ್ಚು ಅಲಂಕಾರವಾಗಿ ನಿನ್ನನ್ನು ನನಗೆ ತೋರಿಸಿತು.

ನನಗೆ ನಾನೇ ತುಂಬ ವ್ಯಥೆಪಟ್ಟುಕೊಂಡೆ..

ಅಲ್ಲಾ ಇಲ್ಲಿಯೇ ಹತ್ತು ವರುಷದಿಂದ ವಾಸ ಮಾಡುತ್ತಿದ್ದೇನೆ. ನನಗೆ  ಒಂದು ದಿನವಾದರೂ ಇವಳ ದರ್ಶನ ಆಗಿಲ್ಲವಲ್ಲಾ?

ಇರಲಿ ಬಿಡು. ಇಂದು ನಾನು ತುಂಬಾ ಲಕ್ಕಿ! ಎಂದು ಕೊಳ್ಳುತ್ತಾ ಇರುವಾಗಲೇ..

ನೀನು ನನ್ನನ್ನು ಕುರಿತು "ರೀ ಎಂ.ಜಿ ರೋಡ್ ಕಡೆ ಹೋಗುವ ಬಸ್ಸು ಈಗ ತಾನೇ ಹೋಯ್ತು ಅನಿಸುತ್ತದೆ. ಮುಂದೆ ಎಷ್ಟೋತ್ತಿಗೆ ಇನ್ನೊಂದು ಬಸ್?" ಎಂದು ಕೇಳಿದಾಗಲೇ ನಾನು ಈ ಪ್ರಪಂಚಕ್ಕೆ ವಾಪಾಸ್ಸು ಬಂದಿದ್ದು.

ನಾನು "ಹೌದಾ! ಈಗ ಹೋಯ್ತಾ" ಎಂದು ಉದ್ಗಾರವನ್ನು ಸಣ್ಣದಾಗಿ ತೆಗೆದುಕೊಂಡು. ಬಸ್ ಕಳೆದುಕೊಂಡರು ತೊಂದರೆ ಇಲ್ಲಾ ಎಂದು. "ಇನ್ನೂ ೧೫- ೨೦ ನಿಮಿಷದ ನಂತರ ಮತ್ತೊಂದು ಬಸ್ ಇದೆ" ಎಂದೆ.

ಅಗ ನೀನು ಆ ನಿನ್ನ ಹಸಿರು ಚೂಡಿದಾರದ ಉದ್ದನೇಯ ವೇಲ್ ನ್ನು ಹಾಗೆಯೇ ತೀಡಿ ಮುಂದಕ್ಕೆ ಹೆಗಲ ಮೇಲೆ ಎಳೆದುಕೊಂಡಾಗ  ನಾನು ಅಯ್ಯೋ ಇಂದು ಏನೇ ಆಗಲಿ ನಿನ್ನನ್ನು ಪುಲ್ ಪರಿಚಯ ಮಾಡಿಕೊಳ್ಳಬೇಕು ಎನಿಸಿ. ಮಾತಿಗೆ ನಿನ್ನನ್ನಾ. "ನೀವು ಎಂ.ಜಿ ರೋಡ್ ನಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವಕ್ಕೆ ಹೋಗುತ್ತಾ ಇದ್ದೀರಾ?" ಎಂದು ಕೇಳಿಬಿಟ್ಟೆ.

ಆಗ ನೋಡಬೇಕಾಗಿತ್ತು ನಿನ್ನ ಮುಖವನ್ನು. ಏನೂ ಇವನು ಹುಟ್ಟು ತರಲೆ ಥರಾ ಏನೇನೋ ಕೇಳುತ್ತಿದ್ದಾನೆ ಎಂದು ಕೊಂಡು ನನ್ನನ್ನೆ ದಿಟ್ಟಿಸಿ ನೋಡಿದಾಂಗೆ ಇತ್ತು. ಗೊತ್ತಾ ಆ ನಿನ್ನ ಕಣ್ಣುಗಳು ಆ ಸಮಯದಲ್ಲಿ ಎಷ್ಟೊಂದು ಸುಂದರವಾಗಿ ನನಗೆ ಕಂಡಿದ್ದವು. ಏನೂ ಸುಂದರ ಕಣ್ಣುಗಳೂ ನಿನ್ನವು ನಿರ್ಮಲಾ. ಎರಡು ಚಿಕ್ಕ ಸುಂದರ ಬೆಳ್ಳಿ ಮೀನಿನಂತೆ. ಆದರಲ್ಲಿಯೇ ಏನೋ ಬಿಡಿಸಲಾರದ ಆಕರ್ಷಣೆ ಇದೆ ಅನಿಸುತ್ತದೆ.

"ಹೌದು!" ಎಂದು ಒಂದೇ ಮಾತಿನ ಉತ್ತರ ನನ್ನನ್ನು ತುಂಬಾನೇ ನಿರಾಸೆಯನ್ನುಂಟು ಮಾಡಿತು.

ನೀನೋ ಹಾಗೊಮ್ಮೆ ಇಗೊಮ್ಮೆ ಅತ್ತಾ ಇತ್ತಾ ನೋಡುತ್ತಿದ್ದೇ. ಅದೇ ಸಮಯಕ್ಕೆ ಅನಿಸುತ್ತದೆ. ಒಂದು ಪೋನ್ ಕಾಲು ನಿನ್ನ ಮೊಬೈಲ್ ಗೆ ಬಂತು. ನೀನು ಏನೇನೋ ಗುಸ-ಗುಸ, ಪಿಸ-ಪಿಸ ಎಂದು ಮಾತಾಡಿದ ನಂತರ ಹೆಗಲಿನಲ್ಲಿದ್ದ ಆ ಕಪ್ಪನೆಯ ವೇನಿಟಿ ಬ್ಯಾಗ್ ನಲ್ಲಿ ತುರುಕಿದೆ.

ಮತ್ತೆ ನನ್ನನ್ನೊಮ್ಮೆ ನೋಡಿದೆ. ನಾನೋ ಹಂಬಲದ ಕಣ್ಣುಗಳಿಂದ ನಿನ್ನನ್ನೇ ದಿಟ್ಟಿಸಿದೆ. ಪುನಃ ಬಸ್ ಬರುವ ಎಡಗಡೆಯ ದಾರಿಯನ್ನು ನೀ ನೋಡುತ್ತಿದ್ದೆ. ನಾನು ಆ ದಾರಿಯನ್ನು ನೋಡುವ ರೀತಿಯಲ್ಲಿ ನಿನ್ನನ್ನೇ ಗಮನಿಸುತ್ತಿದ್ದೆ.

ಮನಸ್ಸಿನಲ್ಲಿಯೇ ಆ ದೇವರಿಗೆ ಆಗಲೇ ನಾನು ನನ್ನ ಹತ್ತು ಅರ್ಜಿಗಳನ್ನು ಹಾಕಿಬಿಟ್ಟಿದ್ದೆ.

ಮೊದಲನೇಯದು ಬಸ್ ಆದಷ್ಟು ಸ್ವಲ್ಪ ಲೇಟಾಗಿ ಬರಲಿ ಎಂದು.

ಪುನಃ ನಾನೇ ಹೇಳಿದೆ "ನಾನು ಎಂ.ಜಿ ರೋಡ್ ನಲ್ಲಿರುವ ಆ ಸ್ವಾತಂತ್ರ್ಯ ಸಮಾರಂಭಕ್ಕೆ ಹೋಗುತ್ತಿರುವುದು".

ಆಗ ನೀನು "ಓ!" ಅಂದು ಹಾಗೆಯೇ ವಿರುದ್ಧವಾಗಿ ಮುಖ ತಿರುಗಿಸಿದೆ.

ಅಲ್ಲಾ ಹುಡುಗರಿಗೆ ಇಷ್ಟೊಂದು ಕಷ್ಟವನ್ನು ಈ ಹುಡುಗಿಯರು ಯಾಕೆ ಕೊಡುತ್ತಾರೋ ಆ ದೇವರೇ ಬಲ್ಲ!

ಅದು ಹೊಸದಾಗಿ  ಒಬ್ಬರನ್ನೊಬ್ಬರೂ ಪರಿಚಯ ಮಾಡಿಕೊಳ್ಳುವವರೆಗೆ?

ನಮ್ಮ ಕಣ್ಣುಗಳನ್ನು, ನಮ್ಮ ಮನಸ್ಸನ್ನು ಅರಿಯುವ ಕಣ್ಣುಗಳೂ ಹುಡುಗಿಯರಾದ ನಿಮ್ಮಲ್ಲಿ ಇಲ್ಲವೇನ್ರಿ?

ಎಂಥವರನ್ನು ಒಂದು ಕ್ಷಣದಲ್ಲಿ ಅಳೆಯುವ ಆ ನಿಮ್ಮ ಬುದ್ಧಿ ನಿಮ್ಮನ್ನು ಇಷ್ಟಪಡುವ ನಮ್ಮಂಥ ಪ್ರೇಮಿಗಳ ಹೃದಯದ ಮಾತನ್ನು ಕೇಳಿಸಿಕೊಳ್ಳದಷ್ಟು ಕೀವುಡಾ?

ಮತ್ತೇ ನೀವೇ "ಯಾಕೋ ಈ ಬಸ್ ತುಂಬಾ ಹೊತ್ತಾಗುತ್ತಿದೆ ಕಣ್ರೀ.. ಬರುತ್ತೋ ಇಲ್ಲವೋ ಏನೋ ಗೊತ್ತಿಲ್ಲಾ?" ಎಂದು ನನ್ನನ್ನು ಕೇಳಿದಾಗ ನನಗೆ ಒಂದು ಚಿಕ್ಕ ಭರವಸೆಯ ಕಿರಣ ಇಣುಕಿದಂತಾಯಿತು.

ಪರವಾಗಿಲ್ಲ ಈ ಹುಡುಗಿ ನನ್ನನ್ನು ಚಿಕ್ಕದಾಗಿ ವಿಶ್ವಾಸದಿಂದ ಕಾಣುತ್ತಿದ್ದಾಳೆ ಎಂದುಕೊಂಡು ನನಗೆ ನಾನೇ ಸಮಾಧಾನ ಮಾಡಿಕೊಂಡೇ.

ಅಂದು ನಾನು ತುಂಬ ಸಭ್ಯ ರೀತಿಯಲ್ಲಿ  ಡ್ರೇಸ್ ಹಾಕಿಕೊಂಡಿದ್ದೇ. ಪುಲ್ ವೈಟ್ ಅಂಡ್ ವೈಟ್ ಬಿಳಿ ಕುರ್ತಾ ಮತ್ತು ಪೈಜಾಮ್. ನೋಡಿದರೇ ಮರಿ ಪುಡಾರಿ ಕಂಡಂತೆ ಕಾಣುತ್ತಿದ್ದೆ. ಅಲ್ಲವಾ?

ನನ್ನ ಪಟಾಲಂ ಅಂದು ನನ್ನ ಜೊತೆಯಲ್ಲಿ ಎಂ.ಜಿ ರೋಡ್ ಪ್ರೋಗ್ರಾಂ ಗೆ ಬರಲ್ಲೊಲ್ಲದೆ ಇದ್ದಿದ್ದು ನನಗೆ ಹಾಲು ಕುಡಿದಷ್ಟು ಆನಂದವಾಗಿತ್ತು. ಅವರಿಗೆಲ್ಲಾ ಹತ್ತು ದೊಡ್ಡ ಥ್ಯಾಂಕ್ಸ್ ನ್ನು ಮನಸ್ಸಿನಲ್ಲಿಯೇ ಅರ್ಪಿಸಿದ್ದೆ.

ಆಗ ನಾನೇ ಒಂದು ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಸಮಯಕ್ಕೆ ಬಂದೆ.

"ರೀ ನಿಮಗೇನೂ ಅಭ್ಯಂತಾರ ಇಲ್ಲಾ ಅಂದ್ರೇ, ನಾವ್ಯಾಕೆ ಒಂದು ಆಟೋದಲ್ಲಿ ಈಗಲೇ ಅಲ್ಲಿಗೆ ಹೋಗಬಾರದು? ಬೇಗ ಹೋದರೇ ಸಮಾರಂಭ ಶುರುವಾಗುವುದಕ್ಕೆ ಮುನ್ನಾ  ಸರಿಯಾಗಿ ಅಲ್ಲಿರಬಹುದು" ಅಂದಾಗಾ.. ನೀನು ಸ್ವಲ್ಪ ಯೋಚಿಸಿ ಆಯ್ತು ಎಂದು ಒಪ್ಪಿಕೊಂಡಿದ್ದು. ನಾನು ಬಹುಬೇಗ ಒಂದು ಆಟೋ ಗೊತ್ತು ಮಾಡಿಕೊಂಡು ಹೋರಟಿದ್ದು. ಆಗಲೇ ಮೈಸೂರು ರೋಡ್ ಪ್ಲೈ ಒವರ್ ಮೇಲೆ ನಮ್ಮ ಆಟೋ ಕೊಯ್ಯೋ ಮರ್ರೋ ಎಂದು ಕೊಂಡು ಸಾಗುತ್ತಿದ್ದದ್ದು.. ಇಂದು ನೆನಸಿಕೊಂಡರೇ ಎಲ್ಲಾ ವಿಚಿತ್ರ ಅನಿಸುತ್ತದೆ.

ನೀವೆ ನಿಮ್ಮ ಪರಿಚಯ ಹೇಳಿಕೊಂಡಿದ್ದು. ಅದೇ ಸಮಯ ಅನಿಸುತ್ತದೆ. ೮.೪೨ ಗಂಟೆ. ಆಗಲೆ ನಿರ್ಮಲಾ ಎಂಬ ಮೂರು ಅಕ್ಷರದ ಆ ಪ್ರೀತಿಯ ಹೆಸರು ನನ್ನ ಹೃದಯದಲ್ಲಿ ಸ್ಥಾಪಿತವಾಗಿದ್ದು.

ಆಮೇಲೆ ನೀನು ಬಹುಬೇಗ ನನ್ನನ್ನು ಸ್ನೇಹಿತನ ರೀತಿಯಲ್ಲಿ ಕಂಡಿದ್ದು. ನನ್ನ ಬಗ್ಗೆ ನಾನು,ನಿನ್ನ ಬಗ್ಗೆ ಎಲ್ಲಾ ಎಲ್ಲಾ  ಪರಿಚಯ ಮಾಡಿಕೊಂಡಿದ್ದು.

ನೀನು ನನ್ನ ಕಾಲೇಜು ಪಕ್ಕದ "ರಾಣಿ" ಕಾಲೇಜು ಹುಡುಗಿ ಎಂದು ತಿಳಿದಾಗಾಂತೂ ನನ್ನ ಮನಸ್ಸಿನಲ್ಲಿಯೇ ನನ್ನನ್ನೇ ನಾನು ತುಂಬಾನೇ ಬೈದುಕೊಂಡೆ...

ಅಲ್ಲಾ ಪಕ್ಕದಲ್ಲಿಯೇ ಇದ್ದರೂ ಇಂಥ ಹೃದಯ ತುಂಬುವ ಹುಡುಗಿಯನ್ನು ನನ್ನ ಈ ಎರಡು ವರುಷದ ಕಾಲೇಜಿನ ದಿನಗಳಲ್ಲಿ ಕಾಣಲಾರದೇ ಹೋದೇನೇ? ಎಂದು ಕೊಂಡಾಗ "ಯಾವುದಕ್ಕೂ ಅದೃಷ್ಟ ಬೇಕು ಮಗಾ!" ಎಂದು ನನ್ನದೇ ಮನಸ್ಸು ನನ್ನ ನೋಂದ ಮನವನ್ನು ಸಂತಯಿಸಿತು.

ಅಂದಿನಿಂದ ಶುರುವಾಯಿತು ಅನಿಸುತ್ತದೆ. ನಂತರದ ನನ್ನ ಕಾಲೇಜು ಆರಂಭವಾಗುತ್ತಿದ್ದು ನಿನ್ನ ಕಾಲೇಜು ಟೈಂ ಟೇಬಲ್ ಜೊತೆಯಲ್ಲಿ. ಮುಂಜಾನೇಯೇ ನಿನ್ನ ಜೊತೆಯಲ್ಲಿ ಕಾಲೇಜಿಗೆ ನನ್ನ ಪಯಣ.

ನನ್ನ ಕಾಲೇಜು ಪ್ರಾರಂಭವಾಗುವುದು ಇನ್ನೂ ನಾಲ್ಕು ಘಂಟೆಯಾದರೂ ನಿನ್ನ ಜೊತೆಯಲ್ಲಿ ನಾನು ಇರಬೇಕು, ನಿನ್ನ ಜೊತೆಯಲ್ಲಿ ಮಾತನ್ನಾಡಬೇಕು, ನಿನ್ನ ಜೊತೆಯಲ್ಲಿ ನನ್ನ ಮನದ ಹಂಬಲವನ್ನು ಹೇಳಿಕೊಳ್ಳಬೇಕು! ಹೀಗೆ ಯಾವಾಗಲೂ ನಿನ್ನದೇ ಧ್ಯಾನ..

ನಿನಗೆ ಗೊತ್ತಾ ನನ್ನ ಎಲ್ಲಾ ಸ್ನೇಹಿತರನ್ನು ಈ ಒಂದು ವರುಷದಲ್ಲಿ ಪೂರ್ಣವಾಗಿ ಮರೆತೆ ಬಿಟ್ಟಿದ್ದೇನೆ. ಅವರಿಗೂ ಗೊತ್ತೂ ಈ ಪ್ರೇಮಿಗಳ ಬಾಳು.

ಅಲ್ಲಾ ಈ ಒಂದು ಸಂಬಂಧ ಎಂಥವರನ್ನು ಇಷ್ಟು ಸ್ವಾರ್ಥಿಗಳನ್ನಾಗಿ ಮಾಡಿಬಿಟ್ಟು ಬಿಡುತ್ತದೆಯೇ?

ನಮ್ಮ ಪರಿಧಿಯಲ್ಲಿ ನಾವಿಬ್ಬರಲ್ಲಾದೆ ಮತ್ತ್ಯಾರನ್ನೂ ಸೇರಿಸಿಕೊಳ್ಳುವುದಿಲ್ಲ. ನಾವುಗಳೇನೇ ಮಾಡಿದರೂ ಎಲ್ಲದೂ ಈ ಪ್ರೇಮ,ಪ್ರೀತಿಯ ಪೋಷಣೆಗಾಗಿ ಮಾತ್ರ.

ನೀ ಇಷ್ಟಪಡುವ ಹಾಡನ್ನು, ನೀ ಇಷ್ಟಪಡುವ ಪುಸ್ತಕವನ್ನು, ನೀ ಇಷ್ಟಪಡುವ ತಿನಿಸನ್ನು ನಾನು ಹೇಗೇಗೋ ಒಂದಿಸಿಕೊಂಡು ಅವುಗಳು ನೀನಗೆ ಸಮಯಕ್ಕೆ ಸರಿಯಾಗಿ ದೊರೆಯುವಂತೆ ಮಾಡುತ್ತಿದ್ದೆ.

ಅದರಲ್ಲಿಯೇ ಏನೋ ಆನಂದ ನನ್ನ ಪಾಲಿಗೆ ಸಿಗುತ್ತಿತ್ತು.

ನಾನು ನೀನು ಜೊತೆಯಲ್ಲಿ ಕೊನೆಯೆಂದರೂ ೧೦೦ ದೇಶಗಳನ್ನು ನಮ್ಮ ಜೀವನದಲ್ಲಿ ಸುತ್ತಿಬಿಡೋಣ ಎಂದು ಮಾಡಿಕೊಂಡ ಸಂಕಲ್ಪವನ್ನು ನೆನಸಿಕೊಂಡರೇ ಈ ಪ್ರೇಮಿಗಳಿಗೆ ನಿಜವಾಗಿಯೂ ಈ ರೀತಿಯ ಹುಚ್ಚು ಹುಚ್ಚು ಕನಸುಗಳಾ ಅಂಥಾ ನಾನೇ ಒಮ್ಮೊಮ್ಮೆ ಆಶ್ಚರ್ಯಪಟ್ಟಿದ್ದೀನಿ.

ಹೌದು! ಈ ಲವ್ ಎಂಬ ನಾಲ್ಕು ಅಕ್ಷರದಲ್ಲಿರುವ ಆ ಜಾದೂ ನಮ್ಮಂಥ ಯುವ ಜೋಡಿಗಳಿಗೆ ಏನನ್ನಾದರೂ ಸಾಧಿಸುವ ಒಂದು ದೈರ್ಯ ಮತ್ತು ಸ್ಥೈರ್ಯವನ್ನು ಕೊಟ್ಟೆ ಕೊಟ್ಟಿರುತ್ತದೆ.

ಗೊತ್ತಾ ನಾನು ನೀನು ಸೇರಿ ಅಂದು ಜನವರಿ ೨೬ ರಂದು ಎಸ್. ಎಲ್. ಬೈರಪ್ಪನವರ "ದಾಟು" ಕಾದಂಬರಿಯನ್ನು ಹೇಗೆ ಒಂದೇ ಪಟ್ಟಿಗೆ ಮುಂಜಾನೆಯಿಂದ ಮುಂದಿನ ಮುಂಜಾನೆಯವರೆಗೂ ಬಿಡದೇ ಓದಿ ಮುಗಿಸಿದ್ದು. ಆಗ ನೀನೆ ಸತ್ಯ ನಾನೇ ಶ್ರೀನಿವಾಸನಾಗಿದ್ದು. ನಾವುಗಳು ಸಹ ಈ ರೀತಿಯಲ್ಲಿಯೇ ಈ ನಮ್ಮ ಪ್ರೇಮವನ್ನು ಮದುವೆಯೆಂಬ ಬಂಧನದಲ್ಲಿ ಇಟ್ಟು ಎಲ್ಲಾ ಜಾತಿ, ಮತಗಳಾಚೆಗೆ ತೆಗೆದುಕೊಂಡು ಹೋಗೋಣ ಎಂಬ ಅಣೆ ಮಾಡಿದ್ದೂ.

ನೆನಸಿಕೊಂಡರೇ ಈ ಒಂದು ವರುಷದಲ್ಲಿ ಎನೆಲ್ಲಾ ದೊಡ್ಡ ದೊಡ್ಡ ಹೆಜ್ಜೆಗಳನ್ನು ನಾನು ನನ್ನ ಇಪ್ಪತ್ತು ವರುಷಗಳಲ್ಲಿ ತೆಗೆದುಕೊಳ್ಳಲಾಗದೆ ನೀನ್ನಿಂದಾಗಿ ಇಂದು ತೆಗೆದುಕೊಳ್ಳುವ  ಸ್ಫೂರ್ತಿಯಾಗಿ ನೀನು ಈ ನನ್ನ ಬಾಳಿಗೆ ಬಂದೆ ಅನಿಸುತ್ತದೆ.

ಅಬ್ಬಾ! ಬಿಡು ಇದು ಕೇವಲ ನನ್ನ ನಿನ್ನ ವರುಷದ ಪ್ರೀತಿಯ ಒಂದು ಕಿರು ಹಿನ್ನೋಟ ಮಾತ್ರ.

ಈ ರೀತಿಯಲ್ಲಿ ಇದು ನಿನ್ನ ನನ್ನ ಸವಿ ಘಳಿಗೆಗಳ ದಾಖಲಾತಿ ಮಾತ್ರ.

ನೀನು ಮುಂಜಾನೆ ಅದೇ ಆ ನಿನ್ನ ಹೆಸರನ್ನು ಮೊದಲು ನನ್ನ ಕಿವಿಗೆ ಹಾಕಿದ ಜಾಗವಾದ ಮೈಸೂರು ಪ್ಲೈ ಓವರ್ ನ ಆ ಜಾಗಕ್ಕೆ ಬರುತ್ತಿಯಲ್ಲಾ?

ಅದೇ ೮.೪೨ಕ್ಕೆ ಸರಿಯಾಗಿ?

ನಾನು ಅಲ್ಲಿಯೇ ನಿನಗಾಗಿ ಕಾಯುತ್ತಿರುತ್ತೇನೆ. ಅಲ್ಲಿಂದಲೇ ಮೋವಿಲ್ಯಾಂಡ್ ಗೆ ಹೋಗಿ ಮೊದಲ ಸಲ ಸಿನಿಮಾ ನೋಡಿಕೊಂಡು ಬರೋಣ..


ಹೀಗೆಯೇ ನಿತ್ಯನೊತನವಾಗಿ ಈ ಪ್ರೀತಿಯ ಹೊಳೆ ನಮ್ಮಿಬ್ಬರ ಮಧ್ಯೆ ಮೈಸೂರು ರಸ್ತೆಯಲ್ಲಿ ಚಲಿಸುವ ವಾಹನಗಳೋಪಾದಿಯಲ್ಲಿ ಸದಾ ಹರಿಯುತ್ತಿರಲಿ!

1 ಕಾಮೆಂಟ್‌:

  1. What a writer you are?? I went through your recent article, It was really amazing, it will takes any reader to his personal life, if he had such kind of experience in the past, and I am sure everyone would have come across more or less that kind of situation, but here the thing is everyone cannot put their feelings in words as it is, only less people would be having such kind of talent, really you are having amazing talent, your blog was really touching,

    One thing I would like to bring to your notice is that, three pages are not enough sir…. Try to write some books on that, I would love to read such kind of writings….!!!

    You made my Day

    Regards,

    Guru

    ಪ್ರತ್ಯುತ್ತರಅಳಿಸಿ