ಗುರುವಾರ, ಜೂನ್ 28, 2012

ಕನ್ನಡ ಭಾಷೆಗೆ ಕನ್ನಡಿಗರು ಮಾತ್ರ ಬಲ


ಮಾತೃ ಭಾಷೆಯಲ್ಲಿಯೇ ಶಿಕ್ಷಣ ಬೇಕು. ಇದು ಪ್ರಸ್ತುತವಾದ ಕೂಗು. ಅದಕ್ಕಾಗಿ ಕಾನೂನಿನ ಹೋರಾಟ. ಸರ್ಕಾರವನ್ನು ಹಲವು ಧರಣಿಗಳ ಮೂಲಕ ಕನ್ನಡವನ್ನು ಪ್ರೀತಿಸುವ ಎಲ್ಲಾ ಮನಸ್ಸುಗಳು ಕೋರಿಕೊಳ್ಳುತ್ತಿವೆ.

ಈ ರೀತಿಯ ಒಂದು ಹೋರಾಟವನ್ನು ಕನ್ನಡದ ನೆಲದಲ್ಲಿ ಕನ್ನಡಕ್ಕಾಗಿ ಮಾಡುತ್ತಿರುವುದು ಬೇರೆ ರಾಜ್ಯದ ಜನಗಳಿಗೆ ಆಶ್ಚರ್ಯಕರವಾಗಿ ಕಾಣುತ್ತಿರಬಹುದು. ಏನೂ ಮಾಡುವುದು ಇದು ನಮ್ಮ ಕರ್ನಾಟಕ ರಾಜ್ಯದ ದುರಾದೃಷ್ಟ!

ಇಂದು ಕನ್ನಡದ ಬಗ್ಗೆ ನಮ್ಮ ಕನ್ನಡದ ಮನಗಳಿಗೆ ಎಷ್ಟರ ಮಟ್ಟಿಗೆ ತಾತ್ಸರವುಂಟಾಗಿದೆ ಎಂಬುದು ಇದರಿಂದ ತಿಳಿಯುತ್ತದೆ.

ಕನ್ನಡ ಎಂಬುದು ಕೇವಲ ಹಳ್ಳಿಗಾಡಿನ ಜನಗಳಿಗೆ ಸೀಮಿತವಾದದ್ದು?

ನೀನು ಏನಾದರೂ ದೊಡ್ಡ ದೊಡ್ಡ ಹುದ್ದೆ, ಕೆಲಸಗಳನ್ನು ಗಳಿಸ ಬೇಕೆಂದರೆ, ದೇಶ ವಿದೇಶವನ್ನು ಸುತ್ತಬೇಕೆಂದರೇ ಇಂಗ್ಲಿಷ್ ನ್ನು ಮಾತ್ರ ಕಲಿ ಎನ್ನುವಂತಾಗಿದೆ.

ನಾವು ಓದುವಾಗ ಇಷ್ಟೊಂದೂರ ಮಟ್ಟಿಗೆ ಕಾನ್ವೇಂಟ್ ಗಳ ಭರಾಟೆ ಇರಲಿಲ್ಲ. ಇದ್ದರೂ ಅಲ್ಲೊ ಇಲ್ಲೋ ಕಣ್ಣಿಗೆ ವಿರಳವಾಗಿ ಬೀಳುತ್ತಿದ್ದವು. ಕಾನ್ವೇಂಟ್ ಅಂದರೇ ಅದು ಇಂಗ್ಲಿಷ್ ಮಾಧ್ಯಮನ್ನು ಬೋಧಿಸುವ ಶಾಲೆಗಳು ಎಂದು ಕರೆಯುತ್ತಿದ್ದೇವು. ಕನ್ನಡದಲ್ಲಿ ಮಾತನಾಡಿದರೇ ಶಿಕ್ಷೆ ಕೊಡುತ್ತಾರಂತೆ!

ಅಲ್ಲಿ ಓದುವ ಶಾಲೆಯ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗಿಂತ ತುಂಬ ಹೊಳೆಯುತ್ತಿದ್ದವು. ಶಿಸ್ತು ಬದ್ಧವಾದ ಶಾಲಾ ಸಮ ವಸ್ತ್ರಗಳನ್ನು ಧರಿಸಿಕೊಂಡು ಹೋಗುತ್ತಿದ್ದುದು ನಮ್ಮ ಚಿಕ್ಕ ಮನಸ್ಸುಗಳಿಗೆ ತುಂಬ ಕುತೂಹಲದ ಆಕರ್ಷಣೆಯಾಗಿ ಕಾಣುತ್ತಿತ್ತು.

ಸರ್ಕಾರಿ ಶಾಲೆಗಳೆಂದರೇ ಅದು ಬಡವರ ರೈತಾಪಿ ಜನರ ಮಕ್ಕಳಿಗೆ ಮಾತ್ರ ಎಂಬ ನೀತಿ ಹತ್ತು ಇಪ್ಪತ್ತು ವರುಷಗಳ ಹಿಂದೆಯು ಇತ್ತು. ಇಂದು ಸಹ ಇದೆ. ನಗರದಲ್ಲೂ ಸಹ ಅದು ಕೇವಲ ಸ್ಲಂ, ಬಡ ಜನರ, ಕೂಲಿ ಕಾರ್ಮಿಕರ ಮಕ್ಕಳಿಗೆ ಅದು ಪುನಃ ಹಳ್ಳಿಯಿಂದ ಬಂದಂತವರ ಮಕ್ಕಳಿಗೆ!

ನಮ್ಮ ಕೈಯಿಂದ ಖಾಸಗಿ ಶಾಲೆಗಳಿಗೆ ಕಳಿಸಲು ಸಾಧ್ಯವಿಲ್ಲ ಎಂದು ಅನಿಸಿದರೇ ನೀವು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸಬಹುದು. ಎಂಬ ಅಲಿಖಿತ ಶಾಸನ ಹಿಂದಿನಿಂದಲೂ ರೂಢಿಯಲ್ಲಿದೆ. ಅದರಂತೆ ಹೆತ್ತವರು ತಮ್ಮ ತಮ್ಮ ಶಕ್ತಿ ಅನುಸಾರ ತಮ್ಮ ತಮ್ಮ ಕಂದಮ್ಮಗಳನ್ನು ಈ ಶಾಲೆಗಳಿಗೆ ಕಳಿಸುತ್ತಾರೆ.

ಹಿಂದೆ ನಮ್ಮ ನಮ್ಮ ಮನೆಯಲ್ಲಿ ಮಾತನ್ನಾಡುವ ಭಾಷೆಯಲ್ಲಿಯೇ ನಮ್ಮ ಗುರುಗಳು ನಮಗೆ ಪಾಠವನ್ನು ಹೇಳಿಕೊಡುತ್ತಿದ್ದರು. ಕನ್ನಡದಲ್ಲಿ ಪಾಠ ಮಾಡಿದರೇ ಎಲ್ಲವೂ ಹಿತವೇ ತಾನೇ. ಅವರುಗಳು ಹೇಳುತ್ತಿದ್ದ ವಿಷಯ, ಕಥೆಗಳು, ಗಣಿತ, ವಿಙ್ಞಾನ ಪ್ರತಿಯೊಂದು ಮನನವಾಗುತ್ತಿತ್ತು.

ಆ ಸಮಯಕ್ಕೆ ನಮಗೆ ಇನ್ನೊಂದು ಶಿಕ್ಷಣ ಮಾಧ್ಯಮವು ಸಹ ಇದೆ ಎಂಬ ಅರಿವು ಸಹ ನಮಗೆ ಇರಲಿಲ್ಲ. ನಮ್ಮ ಹಳ್ಳಿಯಲ್ಲಿದ್ದ ನಮ್ಮ ಹೆತ್ತವರಿಗೂ ಇರಲಿಲ್ಲ.

ಓದುವುದು ಅಂದರೇ ಮನೆಯ ಕೆಲಸ ಕಾರ್ಯ ಬಿಟ್ಟು ಶಾಲೆಗೆ ಹೋಗುವುದು ಎನ್ನುವುದಾಗಿತ್ತು. ಇದರಿಂದ ಏನೂ ಉಪಯೋಗವಾಗುತ್ತದೆ. ಇದರಿಂದ ನಾವುಗಳು ಏನಾದರೂ ಸಾಧಿಸುವುವೆವು, ಎಂಬುದು ಸಹ ಗೊತ್ತಿಲ್ಲದಂತಹ ಮುಗ್ಧ ಮನಸ್ಸು ಉಳ್ಳವರಾಗಿದ್ದೆವು.

ನಮ್ಮ ಹೆತ್ತವರು ಸಹ ಹಾಗೆಯೇ. ಫೇಲ್ ಆಗುವವರೆಗೂ ನೀ ಓದು ಮಗಾ. ಎಂದು ನಮ್ಮನ್ನು ಪ್ರೋತ್ಸಾಹಿಸುತ್ತಿದ್ದರೂ. ನಮ್ಮ ಹಳ್ಳಿಯಲ್ಲಿ ಒಂದು ಮಾತು ಬಲು ಪ್ರಸಿದ್ಧಿಯಾಗಿತ್ತು. ಯಾರಾದರೂ ಕೇಳಿದರೇ ನಿಮ್ಮ ಮಗಾ ಏನೂ ಮಾಡುತ್ತಿದೆ? ಎಂದರೇ. ಇನ್ನೇನೂ ಶಾಲೆಗೆ ಹೋಗುತ್ತಿದೆ. ಎಸ್. ಎಸ್. ಎಲ್. ಸಿ ವರೆಗೆ ಓದಲಿ ಬಿಡು. ಹೇಂಗೂ ಅದರಲ್ಲಿ ಡುಮುಕ್ಕಿ ಹೊಡೆಯುತ್ತದೆ. ಆಮೇಲೆ ಬ್ಯಾಸಾಯಕ್ಕೆ ಹಾಕಿಕೊಂಡರಾಯಿತು ಎನ್ನುತ್ತಿದ್ದರು.

ಓದುವುದು ಅಂದರೇ ಹತ್ತನೇ ತರಗತಿಯವರೆಗೆ ಮಾತ್ರ ಎಂಬುದಾಗಿತ್ತು. ಮನೆಯವರು ಸಹ ಹತ್ತನೇ ತರಗತಿಯವರೆಗೆ ಅದು ಹೇಗೆ ನೀನು ಉತ್ತೀರ್ಣನಾಗಿದ್ದೀಯಾ ಎಂದು ವಿಚಾರಿಸುತ್ತಿರಲಿಲ್ಲ. ಶಾಲೆಗೆ ತಪ್ಪದೇ ಹೋಗುತ್ತಾನಲ್ಲಾ ಅದಕ್ಕೆ ಪಾಸ್ ಆಗಿದ್ದಾನೆ ಎಂದುಕೊಳ್ಳುತ್ತಿದ್ದರು.

ಆದರೆ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಈ ಮಾನದಂಡವನ್ನು ಯಾರೂ ಉಪಯೋಗಿಸುತ್ತಾರೆ? ಇದರಿಂದ ದಾರಾಳವಾಗಿ ಸಾಮಾನ್ಯ ವಿದ್ಯಾರ್ಥಿಗಳು ಒಂದು, ಎರಡು, ಮೂರು ಸಬ್ಜೇಕ್ಟ್ ಗಳಲ್ಲಿ ಫೇಲ್ ಆಗುತ್ತಿದ್ದರೂ.  ಉಪ ಪರೀಕ್ಷೆಗಳನ್ನು ತೆಗೆದುಕೊಂಡು ಪಾಸು ಮಾಡುವವರು ಮಾಡುತ್ತಿದ್ದರು. ಮಿಕ್ಕಿದವರು ವಿಧ್ಯೆಗೆ ಒಂದು ದೊಡ್ಡ ನಮಸ್ಕಾರವನ್ನು ಹಾಕಿ ಕೃಷಿ ಆರಂಭ ಮಾಡಲು ತೊಡಗುತ್ತಿದ್ದರು.

ಪ್ರಳಯಾಂತಕ, ಜಾಣ, ಚುರುಕು ವಿದ್ಯಾರ್ಥಿಗಳು ಮಾತ್ರ ಪಾಸಾಗಿ ಮುಂದೆ ಪಿ.ಯು.ಸಿ, ಬಿ.ಎ, ಟಿ.ಸಿ.ಎಚ್ ಇತ್ಯಾದಿ ಎಂದು ಓದಲು ಪಟ್ಟಣದ ಕಡೆ ಹೆಜ್ಜೆ ಹಾಕುತ್ತಿದ್ದರು.

ನೀವು ಗಮನಿಸಿರಬಹುದು. ಹಳ್ಳಿಯಲ್ಲಿನ ಬಹುಪಾಲು ವಿದ್ಯಾರ್ಥಿಗಳು ಹತ್ತನೇ ತರಗತಿಯಲ್ಲಿ ಡುಮುಕ್ಕಿ ಹೊಡೆಯುತ್ತಿದ್ದದೂ ಇಂಗ್ಲಿಷ್ ನಲ್ಲಿ. ಅದು ಅಷ್ಟರ ಮಟ್ಟಿಗೆ ಕಬ್ಬಿಣದ ಕಡಲೆಯಾಗಿರುತ್ತಿತ್ತು.

ಆದರೇ ಇಂದಿನ ಯುಗದಲ್ಲಿ ನಮ್ಮ ಪ್ರತಿಯೊಂದು ಚಿಕ್ಕ ಹುಡುಗನಿಗೂ ಗೊತ್ತು ಓದಿನ ಗುರಿ. ಶಿಕ್ಷಣ ಅಂದರೇ ಏನು? ತಾನು ಏಕೆ ಓದಬೇಕು? ಎಷ್ಟು ಮಾರ್ಕ್ಸ್ ತೆಗೆದುಕೊಳ್ಳಬೇಕು? ಎಷ್ಟು ಅಂಕ ಪಡೆದರೇ ಎಲ್ಲಿ ಸೀಟ್ ಸಿಗುವುದು? ಯಾವ ಕಾಲೇಜಿನಲ್ಲಿ ಓದಿದರೇ ಯಾವ ಯಾವ ಕೆಲಸಗಳು ಸಿಗುವುದು? ಇತ್ಯಾದಿ ವಿಷಯಗಳನ್ನು ಅವರು ಎಷ್ಟರ ಮಟ್ಟಿಗೆ ಮನನ ಮಾಡಿರುತ್ತಾರೆ ಎಂದರೇ...? ಕೇಳುವುದೇ ಬೇಡ ಬಿಡಿ.

ಇಂದು ಹೆತ್ತವರಿಗೆ ಮಕ್ಕಳು ಓದುತ್ತಿದ್ದಾರೆಂದರೆ ಏನೋ ಒಂದು ಯುದ್ಧಕ್ಕೆ ಸಿದ್ಧತೆಗೊಳ್ಳುತ್ತಿದ್ದಾರೆ ಎಂಬ ಅನುಭವ. ಅಷ್ಟರ ಮಟ್ಟಿಗೆ ಪ್ರತಿಯೊಂದು ಕುಟುಂಬವು ಶಿಕ್ಷಣದ ಮಹತ್ವವನ್ನು ಕಂಡುಕೊಂಡಿದೆ. ಇಂದು ಹಳ್ಳಿಗಾಡಿನ ಮಕ್ಕಳು ಸಹ ಹತ್ತು ಇಪ್ಪತ್ತು ಕಿಲೊ ಮೀಟರ್ ದೂರದ ಕಾನ್ವೇಂಟ್ ಗಳಿಗೆ ಬಂದು ಇಂಗ್ಲಿಷ್ ಮಾಧ್ಯಮದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.  ಬಾಯಿಬಿಟ್ಟರೇ ಮಮ್ಮಿ, ಡ್ಯಾಡಿ,ಅಂಟಿ,ಅಂಕಲ್ ಮುಂತಾದ ಇಂಗ್ಲಿಷ್ ಪದಪುಂಜಗಳು ಚಿಕ್ಕ ಚಿಕ್ಕ ಬಾಯಿಂದ ಪುಂಕಾನುಪುಂಕವಾಗಿ ಹೊರ ಬರುತ್ತಿವೆ. ಅಷ್ಟರ ಮಟ್ಟಿಗೆ ಇಂಗ್ಲಿಷ್ ನಮ್ಮ ನಮ್ಮ ಮನೆಗಳ ಮನದಲ್ಲಿ ಹಾಸು ಹೊಕ್ಕಾಗಿದೆ.

ಗಮನಿಸಿ. ಇಂದು ಯಾವುದೇ ಒಂದು ಕೆಲಸವನ್ನು ದೊರಕಿಸಿಕೊಳ್ಳಬೇಕೆಂದರೇ ಅದು ವಿಪರೀತ ಕಷ್ಟ. ಹತ್ತು ಹಲವಾರು ಟೆಸ್ಟ್ ಗಳು. ಅದಕ್ಕಾಗಿ ವಿವಿಧ ರೀತಿಯಲ್ಲಿ ನಾವುಗಳು ಸಿದ್ಧತೆಯನ್ನು ಮಾಡಿಕೊಳ್ಳಬೇಕು. ದೊಡ್ಡ ದೊಡ್ಡ ಓದನ್ನು ಓದಬೇಕೆಂದರೇ ಇಂಗ್ಲಿಷ್ ಬೇಕೇ ಬೇಕು. ಕನ್ನಡದಲ್ಲಿ ಮಾತ್ರ ಓದಿ ಏನಾದರೂ ಸಾಧಿಸಿದವರು ಇದ್ದಾರೆಯೇ ತೋರಿಸಿ. ಎಂದು ಮಕ್ಕಳುಗಳು ಹಿರಿಯರನ್ನು ಪ್ರಶ್ನೆ ಮಾಡುತ್ತಾರೆ.

ಯಾವುದೇ ಒಂದು ವಿಷಯದ ಬಗ್ಗೆ ಹೆಚ್ಚು ಅರಿಯಬೇಕು ಎಂದರೇ ಅದೇ ಇಂಗ್ಲಿಷ್ ಪುಸ್ತಕಗಳ ಮೊರೆ ಹೋಗಬೇಕು.

ಉನ್ನತ ಶಿಕ್ಷಣವನ್ನು ನೀಡುವ ಎಲ್ಲಾ ಕರ್ನಾಟಕದ ವಿಶ್ವ ವಿದ್ಯಾನಿಲಯಗಳು ದೊಡ್ಡ ವಿಷಯಗಳನ್ನು ಇಂಗ್ಲಿಷ್ ನಲ್ಲಿಯೇ ಕೊಡುವುದು. ಪುಸ್ತಕಗಳು ಸಹ ಕನ್ನಡದಲ್ಲಿ ದೊರೆಯುವುದಿಲ್ಲ. ಎಕ್ಸಾಮ್ ಗಳು ಸಹ ಕನ್ನಡ ಮಾಧ್ಯಮದಲ್ಲಿ ಇರುವುದಿಲ್ಲ. ಕನ್ನಡದಲ್ಲಿ ಅಭ್ಯಾಸ ಮಾಡಬೇಕೆಂದು ಬರುವ ಕನ್ನಡದ ಮನಗಳಿಗೆ ಹೆಜ್ಜೆ ಹೆಜ್ಜೆಗೂ ಇಂಗ್ಲಿಷ್ ಕಾಡುತ್ತದೆ. ಇದರಿಂದ ತಮ್ಮ ವ್ಯಕ್ತಿತ್ವದಲ್ಲಿಯೇ ಪ್ರತಿಕೂಲ ಪರಿಣಾಮಗಳನ್ನು ಅನುಭವಿಸಿ ಕೀಳುಹಿರಿಮೆ ಬೆಳೆಸಿಕೊಳ್ಳುತ್ತಾ ತಾವೆ ಕೊರಗುವುಂತಾಗಿದೆ.

ಈ ಎಲ್ಲಾ ಕಾರಣಗಳನ್ನು ನಮ್ಮ ಸರ್ಕಾರ ಮತ್ತು ಹಿರಿ ಕಿರಿ ಹೋರಾಟಗಾರರು ನೋಡುತ್ತಿದ್ದಾರೆಯೇ? ಇದನ್ನು ಬದಲಾಯಿಸುವ ಕಡೆ ಇವರು ಏಕೆ ಮನಸ್ಸು ಮಾಡಬಾರದು.

ಕನ್ನಡ ಮಾಧ್ಯಮದಲ್ಲಿ ಓದಿದರೂ ಸಹ ಏನಾದರೂ ಸಾಧಿಸಬಹುದು. ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾವಂತನಿಗೂ ಸಹ ಸುಲಭವಾಗಿ ಕೆಲಸಗಳು ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಸಿಗುವುವು ಎಂಬ ಭರವಸೆಯ ಬೆಳಕನ್ನು ಶಾಸನವನ್ನು ರೂಪಿಸುವವರು ಕೊಡಬೇಕು.

ಅದು ಬಿಟ್ಟು ಕೇವಲ ಅಭಿಮಾನಕ್ಕೊಸ್ಕರ ಕನ್ನಡದಲ್ಲಿಯೇ ಓದಿ ಎಂದರೇ ಯಾರೂ ಕೇಳುತ್ತಾರೆ?

ಯಾಕೆಂದರೇ ಬೆಳೆದು ದೊಡ್ಡವರಾದ ಮೇಲೆ ಕೆಲಸ ಮಾಡಲೇಬೇಕು ಅಲ್ಲವಾ?

ಬೆಂಗಳೂರಿನಂತಹ ನಗರದಲ್ಲಿ ಒಂದು ಚಿಕ್ಕ ಕೆಲಸವನ್ನು ಗಿಟ್ಟಿಸಲು ಸಹ ಟಸ್ಸೂ, ಪುಸ್ಸೂ ಇಂಗ್ಲಿಷ್ ಮಾತನ್ನಾಡಬೇಕಾದಂತಹ ವ್ಯವಸ್ಥೆಯನ್ನು ನಿರ್ಮಿಸಿರುವುದಾದರೂ ಯಾರೂ?

ಇದು ಮೊದಲು ಸರಿಯಾದರೇ ಈ ರೀತಿಯ ಧರಣಿ, ಹೋರಾಟಗಳಿಲ್ಲದೇ ಕನ್ನಡ ಜನಗಳು ಕನ್ನಡದ ಬಗ್ಗೆ ಇಟ್ಟುಕೊಂಡಿರುವ ಅಂತರಂಗದ ಅಭಿಮಾನವನ್ನು ತಾವು ಮಾಡುವ ಸಂಸ್ಥೆಯಲ್ಲಿ, ಕೆಲಸಗಳಲ್ಲೂ ಮತ್ತು ಎಲ್ಲಾ ರಂಗದಲ್ಲೂ ಕೆಂಪು ಹಳದಿ ಪತಾಕೆಯನ್ನು ಆರಿಸುವವರು.

ಗಮನಿಸಿ ಮತ್ತು ಮನನ ಮಾಡಿಕೊಳ್ಳಿ ಕನ್ನಡಕ್ಕೆ ಕನ್ನಡಿಗರೇ ಬಲ!

ಕನ್ನಡದ ಜನರು ಮಾತ್ರ ಕನ್ನಡವನ್ನು ಕಲಿಯುವತ್ತಾ ಅಸಕ್ತಿ ಹೊಂದಿರುವವರು. ಪರ ರಾಜ್ಯದವರೂ ಯಾಕೆ ಈ ಭಾಷೆಯನ್ನು ಕಲಿಯುತ್ತಾರೆ? ಕನ್ನಡವೆಂದರೇ ಕೇವಲ ಕಥೆ, ಕಾದಂಬರಿ, ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಬಾರದು. ಅದರ ಬಲಿಷ್ಟತೆಯನ್ನು ಜಗತ್ತಿಗೆ ತೋರಿಸುವಂತೆ ಮಾಡುವ ಶಕ್ತಿ ಪ್ರತಿಯೊಬ್ಬರಲ್ಲೂ ಇದೆ. ಅದರ ಕಡೆ ಗಮನ ಹರಿಸಬೇಕು ಅಷ್ಟೇ!!

ಮಂಗಳವಾರ, ಜೂನ್ 19, 2012

ಕಾಲೇಜು ಕುಮಾರೂ..ಡಿಚ್ಚಿಗೇ...!


ಕಾಲೇಜು ದಿನಗಳೆಂದರೇ ನಮ್ಮನ್ನು ಯಾರೂ ಕೇಳುವ ದಿನಗಳಲ್ಲಾ. ಅಲ್ಲಿ ನಮಗೆ ನಾವೇ ಜವಾಬ್ದಾರರು. ನಾವು ಮಾಡುವುದೇ ನಮಗೆ ನಮ್ಮ ದಾರಿ. ಅಲ್ಲಿ ದಿನ ಪೂರ್ತಿಯಾಗಿ ನಾಲ್ಕು ಗೋಡೆ ಎಂಬ ಕ್ಲಾಸ್ ಗಳಲ್ಲಿ ಕುಳಿತುಕೊಳ್ಳುವ ಯೋಚನೆಯಿಲ್ಲ.  ದಿನಕ್ಕೆ ಇಂತಿಷ್ಟು ಎಂಬ ಕ್ಲಾಸ್ ಗಳು ಇರುತ್ತವೆ. ಅವುಗಳನ್ನು ಹಾಜರಿ ಮಾಡಿ ಬಿಟ್ಟರೆ ಸಾಕು.

ಶಾಲಾ ದಿನಗಳಲ್ಲಿ ಇರುವಂತೆ ಮಾಸ್ತರ್ ಗಳ ಕಣ್ಣುಗಳು ನಮ್ಮನ್ನು ನೋಡುವುದಿಲ್ಲ,ಕಾಯುವುದಿಲ್ಲ. ಅಲ್ಲಿರುವವರೆಲ್ಲಾ ಲೆಕ್ಚರ್ ಗಳು ಅವರುಗಳು ಶಾಲೆಯ ಮಾಸ್ತರ್ ಗಳ ರೀತಿಯಲ್ಲಿ ಗದರುವುದಿಲ್ಲ, ಹೊಡೆಯುವುದಿಲ್ಲ.  ನಮಗೆ ನಾವೇ ಯಜಮಾನರುಗಳು ಎಂಬ ಕನಸನ್ನು ಬೇಸಿಗೆಯ ರಜೆಯ ದಿನಗಳಲ್ಲಿ ನಿತ್ಯ ಕಾಣುತ್ತಿದ್ದೆವು.

ಕಾಲೇಜು ಅಂಗಳಕ್ಕೆ ಹೆಜ್ಜೆ ಇಡಲು ಏನೋ ಸಂತೋಷ ಮತ್ತು ಸಡಗರ!

ಒಂದೇ ಶಾಲೆಯಲ್ಲಿ ಒಂದನೇ ಕ್ಲಾಸ್ ನಿಂದ ಹತ್ತನೇ ತರಗತಿಯವರಿಗೆ ಓದಿದ್ದೂ. ಚಡ್ಡಿ ದೋಸ್ತಗಳು ಗಳಸ್ಯ ಕಂಠಸ್ಯ ಎನ್ನುವಷ್ಟರ ಮಟ್ಟಿಗೆ ನಮ್ಮ ಸ್ನೇಹ ಸಂಬಂಧವಿತ್ತು. ಶಾಲೆಯ ಪ್ರತಿಯೊಬ್ಬನೂ ಪ್ರತಿಯೊಬ್ಬಳೂ ಗೊತ್ತು. ಇಲ್ಲಿ ಅತಿ ಆತ್ಮೀಯ ಎನ್ನುವವರು ಉಂಟು. ಹಾಗೆಯೇ ಶಾಲೆಯ ಶಿಕ್ಷಕ ವೃಂದವೊ ನಮ್ಮ ಕುಟುಂಬದವರಂತೆ. ಸುಮಾರು ಹತ್ತು ವರುಷ ಒಂದೇ ಶಾಲೆಯಲ್ಲಿ ಓದುವ ಒಂದು ಲಾಭ ಎಂದರೇ ಇದೇ. ಪ್ರತಿಯೊಬ್ಬರೂ ತುಂಬ ವಿಶ್ವಾಸದಿಂದ ತಮ್ಮ ತಮ್ಮ ಮನೆಯ ಮಕ್ಕಳು ಎಂಬ ರೀತಿಯಲ್ಲಿ ನೋಡಿಕೊಳ್ಳುತ್ತಾರೆ ಮತ್ತು ನಮ್ಮ ಏಳ್ಗೆಯನ್ನು ನಿರೀಕ್ಷಿಸುತ್ತಾರೆ.

ಏನಾದರೂ ಒಂದು ಘಟನೆ ಜರುಗಿದರೂ ಅದು ನಮ್ಮ ಮನೆಗೂ ಸಹ ತಲುಪಿಬಿಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತುಂಬ ಕಟ್ಟೆಚ್ಚರಿದಂದ ತಮ್ಮ ತಮ್ಮ ಓದನ್ನು ಸಾಗಿಸಬೇಕು. ತರಗತಿಯ ಮಾಸ್ತರ್ ಗಳ ಬೆತ್ತದ ರುಚಿ ಹಾಗೊಮ್ಮೆ ಇಗೊಮ್ಮೆ ನಮ್ಮಗಳಿಗೆ ಸಿಗತ್ತಲೇ ಇರುತ್ತಿತ್ತು. ನಮ್ಮ ನಮ್ಮ ತುಂಟಾಟವನ್ನು ಯಾರೂ ಸಹ ಯಾಕೆ ಸಹಿಸಿಕೊಂಡರು. ಹೊಡೆದು ಹೇಳುವವರು ಬದುಕುವುದಕ್ಕೆ ಹೇಳುತ್ತಾರೆ ಎಂದು ನಮ್ಮ ಹೆತ್ತರವರ ಹಿತವಚನ!

ಆದರೂ ನಾವುಗಳು ಬಿಡಬೇಕಲ್ಲಾ. ಪಿ.ಟಿ ಕ್ಲಾಸ್ ನಲ್ಲಿ ಅವರ ಮೇಲೆ ಇವರುಗಳು ಕುಸ್ತಿ, ಜಗಳ, ಕಾಲೇಳೆಯುವುದು ಇದ್ದುದ್ದೇ ಇದ್ದದ್ದು. ಅದು ಕೇವಲ ಆ ವಯಸ್ಸಿನ ಹುಡುಗಾಟ ಮಾತ್ರ. ಇಂದು ಜಗಳವಾಡಿದವರು ನಾಳೆ ಒಂದಾಗಿ ಸಾಗುತ್ತಿರುತ್ತಿದ್ದೆವು. ಏಕೆಂದರೇ ಅಲ್ಲಿರುವವರೆಲ್ಲಾ ಒಂದೇ ಶಾಲೆ ಎಂಬ ಸೂರಿನ ಕೆಳಗಡೆ ಅಭ್ಯಾಸ ಮಾಡುತ್ತಿರುವವರು ಮುಗ್ಧ ಮಕ್ಕಳು. ಆ ಸಮಯಕ್ಕೆ ನಮ್ಮಗಳ ಮನಸ್ಸಿಗೆ ಯಾವೊಂದು ಕಲ್ಮಶವು ಇರಲಿಲ್ಲ.

ಪ್ರಾಥಮಿಕ, ಪ್ರೌಢ ಶಿಕ್ಷಣವೆಂದರೇ ಹಾಗೆಯೇ ಪ್ರತಿಯೊಂದಕ್ಕೂ ಅಚ್ಚರಿ ಬೆರತ ಮನಸ್ಸುಗಳನ್ನು ಹೊಂದಿರುವವರು. ಹೊಸ ಹೊಸ ಸಾಹಸಗಳನ್ನು ಆಟಗಳನ್ನು ತುಂಬಾನೆ ಎಂಜಾಯ್ ಮಾಡುತ್ತಾ ಮಾಡುತ್ತಾ ನಮ್ಮ ನಮ್ಮ ಗುರಿಯ ಕಡೆಗೆ ಸಾಗುವ ದಿನಗಳು ಅವುಗಳು.

ಇಂಥ ದಿನಗಳಿಂದ ಬೇರ್ಪಟ್ಟು ಕಾಲೇಜು ಅಂಗಳಕ್ಕೆ ಬಂದ ಮೊದಲ ದಿನವೆಂದರೇ ಅಳುವೆ ಬಾಯಿಗೆ ಬಂದಂತೆ, ಎನ್ನುವ ಅನುಭವ. ಹಾಗೆಯೇ ಚಿಕ್ಕದಾಗಿ ಹಳೆಯ ದಿನಗಳು ಪ್ಲಾಶ್ ಬ್ಯಾಕ್ ನಲ್ಲಿ ಹಾದು ಹೋಗಿಬಿಡುತ್ತವೆ. ಅದರೇ ಪುನಃ ಆ ದಿನಗಳಿಗೆ ಮರಳಲಾರದಂತಹ ಕಟು ಸತ್ಯ ನಮ್ಮ ಮುಂದೆ ಇರುತ್ತದೆ. ಮುಖದ ಮೇಲೆ ಚಿಗುರು ಮೀಸೆ! ಏನೋ ಒಂದು ಹೊಸತನದ ಕುರುಹು ಎಂಬಂತೆ ನಮ್ಮಲ್ಲಿ ಹೊಸ ಹೊಸ ಬದಲಾವಣೆ.

ಶಾಲಾ ದಿನಗಳಲ್ಲಿರುವಂತೆ ನಿತ್ಯ ಯೂನಿಪಾರ್ಮ್ ಗಳ ಜಂಜಾಟವಿಲ್ಲಾ. ನಮಗೆ ತಿಳಿದ ಬಣ್ಣ ಬಣ್ಣದ ಅಂಗಿ ಪ್ಯಾಂಟ್ ಗಳನ್ನು ಹಾಕಿಕೊಂಡು ಹೋಗಬಹುದು. ಅದು ನಿತ್ಯ ಹೊಸ ಹೊಸ ಅವತಾರದಲ್ಲಿ.

ಬರೀ ಗಂಡು ಹುಡುಗರು, ಬರೀ ಹೆಣ್ಣು ಹುಡುಗಿಯರು ಇರುವ  ಶಾಲೆಗಳಿಂದ ಬಂದಂತಹ ಹುಡುಗ-ಹುಡುಗಿಯರಿಗೆ ಮಾತ್ರ ವಿಪರೀತವಾದ ಪುಳಕ. ಯಾಕೆಂದರೇ ಈ ಕಾಲೇಜುಗಳಲ್ಲಿ ಕೋ ಎಜುಕೇಶನ್ ಹುಡುಗ ಹುಡುಗಿಯರು ಜೊತೆಯಲ್ಲಿಯೇ ಅಭ್ಯಾಸ ಮಾಡುವುದು.

ಹಾಗೆಯೇ ಒಂದು ಸುತ್ತು ಕಣ್ಣು ಹಾಯಿಸಿದಾಗ ಬಗೆ ಬಗೆಯ ಉಡುಪಿನಲ್ಲಿ ಹೊಸ ಹೊಸ ಮುಖಗಳು.

ನಮ್ಮ ನಮ್ಮ ಶಾಲೆಗಳಿಂದ ಒಬ್ಬರೋ ಇಬ್ಬರೋ ಮಾತ್ರ ಈ ಕಾಲೇಜಿಗೆ ಬಂದಿದ್ದಾರೆ. ಅದರಲ್ಲೂ ಆ ಇಬ್ಬರೂ, ಒಬ್ಬರೂ ಬೇರೆ ವಿಭಾಗದಲ್ಲಿ ಸೇರಿಕೊಂಡಿದ್ದಾರೆ. ನನ್ನ ಸ್ನೇಹಿತ/ತೆ ಅನ್ನುವವರೇ ಇಲ್ಲಾ. ಹೊಸಬರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಲೇ ಬೇಕಾದ ಅನಿವಾರ್ಯತೆ. ನಡೆಯಲ್ಲಿಯೇ ಸಂಕೋಚ. ಇದು ಹುಡುಗ ಹುಡುಗಿ ಇಬ್ಬರಿಗೂ ಆಗುವ ಕಾಲೇಜಿನ ಮೊದಲ ದಿನದ ಅನುಭವ.

ಲೆಕ್ಚರ್ ಗಳು ಹೇಗೆ ಇರುತ್ತಾರೋ ಅವರ ನಡೆ ನುಡಿ ಹೇಗೋ? ಇತ್ಯಾದಿ ಯೋಚನೆಗಳು. ಏಕೆಂದರೇ ನಮ್ಮ ನಮ್ಮ ಹಳೆಯ ಶಾಲೆಗಳಲ್ಲಿ ನಾವು ಕಂಡಿರುವಂತೆ ಒಂದಷ್ಟು ಶಿಕ್ಷಕ ಶಿಕ್ಷಕಿಯರು ಬೇಜಾನ್ ಕಿರಿಕ್ ಪಾರ್ಟಿಗಳಾಗಿದ್ದಾರಲ್ಲಾ! ಆ ರೀತಿಯಲ್ಲಿ ಇಲ್ಲಿಯು ಸಹ ಎಂಬ ಒಂದು ಚಿಕ್ಕ ಬೆವರು ಹನಿ ಕತ್ತಿನಲ್ಲಿ ಸಣ್ಣಗೆ ಹಾಗೆಯೇ ಇಳಿಯುತ್ತದೆ.

ಏನೂ ಮಾಡುವುದಕ್ಕೂ ಬರುವುದಿಲ್ಲ. ಒಂದೇರಡು ದಿನ ಸಾಗಲೇಬೇಕು. ಹೊಸ ಸ್ನೇಹಿತರ ಬಳಗ ಕಟ್ಟಬೇಕು. ಬಿಗು ವಾತಾವರಣವನ್ನು ತಿಳಿ ಮಾಡಬೇಕು. ಆಗ ಮಾತ್ರ ಕಾಲೇಜು ಲೈಫ್ ಎಂಜಾಯ್ ಮಾಡಲು ಸಾಧ್ಯ. ಎಂದುಕೊಂಡು ಮನಸ್ಸಿನಲ್ಲಿ ಚಿಕ್ಕ ಭರವಸೆಯನ್ನು ಕೊಂಡುಕೊಳ್ಳಬೇಕು. ಯಾಕೆಂದರೇ ನಮ್ಮನ್ನು ನಾವೇ ಸಂತಯಿಸಿಕೊಳ್ಳಬೇಕು. ಯಾಕೆಂದರೇ ನಾವು ಕಾಲೇಜು ಎಂಬ ದೊಡ್ಡ ಮೆಟ್ಟಿಲನ್ನು ಏರಿದ್ದೇವೆ! ಇದಕ್ಕೆಲ್ಲಾ ನಮ್ಮ ತಂದೆ ತಾಯಿಯರನ್ನು ಕೇಳಬಾರದು.

ನನ್ನ ಚಡ್ಡಿ ದೋಸ್ತಗಳೆಲ್ಲಾ ಬೇರೆ ಬೇರೆ ಕಾಲೇಜುಗಳಿಗೆ ಸೇರಿದ್ದಾರೆ. "ನನ್ ಮಕ್ಕಳು ಇಲ್ಲಿಯೇ ಸೇರ್ರೋ ಎಂದು ಬಡೆದುಕೊಂಡರೂ ಸೇರಲಿಲ್ಲ. ಅವಳನ್ನು ಇಲ್ಲಿಯೆ ಸೇರೇ ಅಂದ್ರೇ ನನ್ನ ಮಾತು ಎಲ್ಲಿ ಕೇಳುತ್ತಾಳೆ, ಆ ಅಳು ಮುಂಜಿ ನನ್ನ ಪ್ರಾಣ ಸ್ನೇಹಿತೆ?" ಎಂದು ಈ ಹುಡುಗ ಹುಡುಗಿಯರ ವ್ಯರ್ಥ ಆಲಾಪ!

ಏನೂ ದೊಡ್ಡ ಕಾಲೇಜು! ಎಷ್ಟೊಂದು ಅಂತಸ್ತುಗಳ ಕಟ್ಟಡ. ಇದೆ ಮೊದಲು ನೋಡಿದ ಅನುಭವ! ಇನ್ನೂ ಎರಡು ವರುಷ ಅದು ಹೇಗೆ ನನ್ನ ಜೀವ ಇಲ್ಲಿ ಬೇಯುವುದೋ!  ಏನೋ ಧಾವಂತ!

ಅಂತೂ ಮೊದಲನೇ ತರಗತಿ ಎಂದು ಕೊಂಡು ನನ್ನ ತರಗತಿಯನ್ನು ಯಾವ ಕೊಠಡಿಯಲ್ಲಿ ಎಂದು ಹುಡುಕಿಕೊಂಡು ಎರಡು ಮೂರು ಬೆಂಚನ್ನು ಬಿಟ್ಟು ನಾಲ್ಕರಲ್ಲಿ ಮೊಲೆಯಲ್ಲಿ ಕುಳಿತೇ. ಅಬ್ಬಾ ಏನೂ ಹುಡುಗರು ಹುಡುಗಿಯರುಗಳು. ಸಖತ್ ಪಾಸ್ಟ್ ಇದ್ದಾರೆ? ಅನಿಸಿತು. ಅವರ ಉಡುಪು ಮತ್ತು ನಡಾವಳಿಯನ್ನು ಕಂಡು.

ಪಕ್ಕದಲ್ಲಿ ಕುಳಿತುಕೊಂಡವಳು/ನು ಸುಮ್ಮನೇ ನೋಡಿ ನಕ್ಕನು/ಳು ಯಾವ ಸ್ಕೋಲ್ ನಿಂದ ಎಂದು ಕೇಳಿದಳು/ನು ನಾನು ಹೀಗೆ ಹೀಗೆ ಎಂದು ಉತ್ತರಿಸಿ ಉಗುಳನ್ನು ಹಾಗೆಯೇ ನುಂಗಿದೆ.

ಯಾಕೋ ಅಷ್ಟೊಂದು ಭಯವಾಗಿತ್ತು.

ಅಷ್ಟೊತ್ತಿಗೆ ಲೆಕ್ಚರ್ ಬಂದರು ನಮ್ಮ ಹೆಸರುಗಳನ್ನು ಹಾಜರಾತಿ ಪುಸ್ತಕದಲ್ಲಿ ಓದಿದಾಗ ಎಸ್ ಸಾರ್ ಎಂದು ಹೇಳಿ ಕುಳಿತುಕೊಂಡೆ. ಹಾಗೆಯೇ ಹೆಸರನ್ನು ಹೇಳಿದಾಗ ತಲೆ ಎತ್ತಿ ಯಾರ್ಯಾರ ಹೆಸರು ಏನೂ ಎಂದು ಗುರುತಿಸಿಕೊಂಡೆ. ಯಾರದಾದರೂ ಆತ್ಮೀಯ ಎಂಬ ಮುಖ ಕಾಣುವುದೋ ಎಂಬ ಚಿಕ್ಕ ಆಸೆಯಿಂದ. ಲೆಕ್ಚರ್ ತಮ್ಮ ಸಬ್ಜೆಕ್ಟ್ ಬಗ್ಗೆ ಪೀಠಿಕೆಯನ್ನು ಕೊಟ್ಟರು. ಹಾಗೆಯೇ ಒಂದು, ಎರಡು, ಮೂರು ಕ್ಲಾಸ್ ಗಳು ಒಂದರ ನಂತರ ಒಂದು ನಡೆದು ಹೋಗಿ ಸ್ವಲ್ಪ ವಾರ್ಮ್ ಅಪ್ ಆದೇವು!


ಉಫ್!

ನಮ್ಮ ನಮ್ಮ ಪಕ್ಕದಲ್ಲಿ ಕುಳಿತ ಮೊದಲ ಹುಡುಗ ಹುಡುಗಿಯರೆ ನಮ್ಮ ಸ್ನೇಹಿತರಾದರೂ. ಅದು ಇದು ವಿಷಯಗಳನ್ನು ವಿನಿಮಯ ಮಾಡಿಕೊಂಡು ಸ್ವಲ್ಪ ಧೈರ್ಯವನ್ನು ತೆಗೆದುಕೊಂಡೆವು. ಅವರವರ ಅಂತಸ್ತು ಮತ್ತು ಮನೆ ಕಡೆ ಹೇಗೆ ಎಂಬುದನ್ನು ನಮ್ಮ ನಮ್ಮ ಬುದ್ಧಿಯಿಂದ ಚಿಕ್ಕದಾಗಿ ಮನಸ್ಸಿನಲ್ಲಿಯೇ ಅಳೆದೆವು.

ಆದರೂ ಆ ದಿನ ಮಾತ್ರ ನಮ್ಮ ಶಾಲೆಯ ದಿನಗಳು ಮತ್ತು ನಮ್ಮ ಶಿಕ್ಷಕರ ನೆನಪು ತುಂಬಾನೇ ಬಾಧಿಸಿತು!

ಇದಕ್ಕೂ ಮುನ್ನಾ ಸಿನಿಮಾಗಳಲ್ಲಿ ನೋಡಿದಂತಹ ಕಾಲೇಜು ದಿನಗಳು ಹೀರೋ ಮತ್ತು ಹೀರೋ ಇನ್ ಗಳ ಮಿಲನ. ಎಲ್ಲಾ ಕೇವಲ ಸಿನಿಮಾ ಎಂದು ಅರಿವಾಯಿತು. ಆ ರೀತಿಯ ಯಾವ ದೃಶ್ಯಗಳು ನನ್ನಾಣೆ ನನ್ನ ಕಣ್ಣಿಗೆ ಬೀಳಲಿಲ್ಲ. ಇದುವೇ ಅಲ್ಲವಾ ನಿಜವಾದ ಲೈಫ್.

ಅಂತೂ ಎಷ್ಟು ಹೊತ್ತಿಗೆ ಈ ಮೊದಲ ದಿನ ಮುಗಿದು ಹೋಗುತ್ತದೋ ಅನ್ನಿಸಿತ್ತು.

ಬೇಸಿಗೆ ರಜೆಯಲ್ಲಿ ನಾವು ಕಂಡ ಕಾಲೇಜು ದಿನಗಳ ಭವಿಷ್ಯತ್ ನೋಟವೆಲ್ಲಾ ಜರ್ರನೇ ಇಳಿದು ಹೋಗಿ ತುಂಬ ನಿರಸವಾಗಿ ಸಂಜೆಯಾಯಿತು.

ನೋಡೋಣ ಮುಂದಿನ ದಿನಗಳಲ್ಲಾದರೂ ಆ ಚಲನಚಿತ್ರಗಳಲ್ಲಿನ ಕಾಲೇಜು ನೋಟಗಳು ನಮ್ಮ ನಮ್ಮ ಕಣ್ಣಿಗೆ ಬೀಳುವವೋ? ಯಾರು ಯಾರೂ ಹೀರೋ ಹೀರೋ ಇನ್ ಗಳ ರೀತಿಯಲ್ಲಿ ಪರಿಚಯವಾಗುವವರೋ?

ಈ ರೀತಿಯ ಭರವಸೆಯಿಂದ ಮನೆಯ ಕಡೆಗೆ ಹೆಜ್ಜೆ ಹಾಕಿದೆ.

ಶುಕ್ರವಾರ, ಜೂನ್ 15, 2012

ಕನ್ನಡ ಸಂಸ್ಕೃತಿ ಬತ್ತಲಾರದ ತೊರೆ


ಕನ್ನಡ, ಕರ್ನಾಟಕ ಎಂದರೇ ಏನೋ ಒಂದು ಆಹ್ಲಾದ!

ಈ ಅಕ್ಷರಗಳಲ್ಲಿಯೇ ಒಂದು ಒಲವಿದೆ, ಮೃದುವಿದೆ,ಮಮತೆಯಿದೆ,ವೈವಿಧ್ಯತೆಯಿದೆ,ನೈಸರ್ಗಿಕತೆಯ ಶ್ರೀಮಂತಿಕೆಯಿದೆ, ಉತ್ಕೃಷ್ಟತೆಯಿದೆ. ಸಂಪತ್ತಿನ ಖನಿ, ಮಹಾನ್ ಮೇಧಾವಿಗಳ ಪಡೆ, ಸುಸಂಸ್ಕೃತ ಸಂಸ್ಕೃತಿಯ ಸಂತತಿ. ಹೀಗೆ ಒಂದು ಕ್ಷಣ ಕನ್ನಡ ಎಂದರೇ ಒಂದು ಮಹಾನ್ ಇತಿಹಾಸ ಪರಂಪರೆಯ ದರ್ಶನವಾಗುತ್ತದೆ.

ಕರ್ನಾಟಕ ಬೌಗೋಳಿಕವಾಗಿಯು ಅಗಾಧವಾದ ಸಸ್ಯ, ಜೀವ ಸಂಕುಲ,ನೈಸರ್ಗಿಕವಾದ ನೆಲೆಬೀಡಾಗಿದೆ. ಎಲ್ಲೆಲ್ಲಿ ನೋಡಿದರೂ ಉನ್ನತವಾದ ಗಿರಿಶಿಖರಗಳು, ಅಲ್ಲಿರುವ ಗಗನ ಚುಂಬಿ ಬೃಹತ್ತಾದ ಮರಗಳು. ಪಶ್ಚಿಮ ಘಟ್ಟಗಳೇಂದರೇ ಕನ್ನಡ ಜನತೆಗೆ ಜೀವ ಜಲವನ್ನು ನೀಡುವ ಕಾಮದೇನು. ಅಲ್ಲಿ ಇರದ ಸಸ್ಯ ಮೊಲವೇ ಇಲ್ಲವೇನೋ. ಅಲ್ಲಿರುವ ಪ್ರಾಣಿ ಪಕ್ಷಿಗಳೇ ಎಲ್ಲೂ ಇಲ್ಲವೇನೋ. ಅದಲ್ಲದೆ ನಮ್ಮ ನಾಡಿನಲ್ಲಿ ಹರಿಯುತ್ತಿರುವ ನೂರಾರು ಹಳ್ಳ ಕೊಳ್ಳ, ನದಿಗಳ ಉಗಮ ಸ್ಥಾನ ಈ ನಮ್ಮ ಪಶ್ಚಿಮ ಘಟ್ಟಗಳಾದ ಗಿರಿ ಶಿಖರಗಳು.

ಇಂದಿನ ಅಧುನಿಕ ಜಗತ್ತಿನಲ್ಲಿ ನಾವುಗಳು ಅಲ್ಲಿಗೆ ಸುಲಭವಾಗಿ ಹೋಗಬಹುದಾಗಿದೆ. ಅಲ್ಲಿ ಸ್ವತಃ ನಾವುಗಳೇ ನಡೆದಾಡುತ್ತ ಕಾಲ ಕಳೆದು ಬರಬಹುದಾಗಿದೆ. ಅದಕ್ಕಾಗಿಯೇ ಕರ್ನಾಟಕ ಅರಣ್ಯ ಇಲಾಖೆ ಸಾಕಷ್ಟು ರೀತಿಯಲ್ಲಿ ಮೃಗಾಲಯ, ಜಂಗಲ್ ಕಾಟೇಜ್ ಈ ರೀತಿಯಲ್ಲಿ ದಟ್ಟ ಅರಣ್ಯದ ಅನುಭವವನ್ನು ಸವಿಯುವ ಅವಕಾಶವನ್ನು ಪ್ರತಿಯೊಬ್ಬರಿಗೂ ಮಾಡಿಕೊಟ್ಟಿದೆ.

ನಿಸರ್ಗ ಸಂಪತ್ತು ಪ್ರತಿಯೊಬ್ಬರಿಗೂ ಸೇರಿದ್ದು. ಭೂ ತಾಯಿಯ ಒಡಲಲ್ಲಿ ಏನಿಲ್ಲಾ? ಏನುಂಟು? ಬಲ್ಲವರೇ ಬಲ್ಲರು. ನಮ್ಮ ಕನ್ನಡ ನೆಲ ಜಲ ಇದಕ್ಕೆ ಸಾಕ್ಷಿಭೂತವಾಗಿದೆ. ಹಟ್ಟಿಯ ಚಿನ್ನದ ಗಣಿ ಇದಕ್ಕೆ ಸಾಕ್ಷಿ. ಚಿನ್ನ ಸೇರಿ ಪ್ರತಿಯೊಂದು ಖನಿಜ ಸಂಪತ್ತುಗಳನ್ನು ತನ್ನ ಒಡಲಿನಲ್ಲಿ ಈ ಭೂ ತಾಯಿ ಕಾಪಿಟ್ಟುಕೊಂಡಿದ್ದಾಳೆ.

ವರುಷದಲ್ಲಿ ಅತಿ ಹೆಚ್ಚು ಮಳೆಯನ್ನು ಪಡೆಯುವ ಜಾಗವು ನಮ್ಮ ಕನ್ನಡ ನಾಡಿನಲ್ಲಿ ಇರುವುದು ಒಂದುವರದಾನವೇ ಸರಿ. ಅಗುಂಬೆ ದೇಶದಲ್ಲಿಯೇ ಪ್ರಶಿದ್ಧ ಸ್ಥಳ. ಅಲ್ಲಿನ ಸೂರ್ಯಾಸ್ತಮಾನವನ್ನು ನೋಡುವುದು ಕಣ್ಣಿಗೆ ಒಂದು ಹಬ್ಬ!

ಜೋಗ ಜಲಪಾತ ವಿಶ್ವದಲ್ಲಿಯೇ ಶ್ರೇಷ್ಠವಾದ ಅತಿ ದೊಡ್ಡ ಜಲಪಾತ. ಇದರ ಉಪಯೋಗವನ್ನು ಮಹಾನ್ ಇಂಜೀನಿಯರ್ ಸರ್. ಎಂ. ವಿಶ್ವೇಶ್ವರಯ್ಯನವರ ದೃಷ್ಟಿಯಿಂದ ನಾವು ಇಂದು ಮನೆ ಮನೆ ಬೆಳಕನ್ನು ಕಂಡಿದ್ದೇವೆ. ವಿಶ್ವೇಶ್ವರಯ್ಯನವರ ಜಾಣ್ಮೆಯ ಕೊಡುಗೆಯಾಗಿ ಮೈಸೂರು, ಮಂಡ್ಯದ ಜನತೆಯ ಹೊಟ್ಟೆಯನ್ನು ನಿತ್ಯ ಹಸಿರುವ ಮಾಡುವ ಯೋಜನೆ ಮೈಸೂರು ಕನ್ನಾಂಬಾಡಿ ಕಟ್ಟೆ, ಭದ್ರಾವತಿಯ ಕಾರ್ಖಾನೆಗಳು ಇಂದು ನಮ್ಮ ಮುಂದೆ ಇವೆ.

ಈ ರೀತಿಯಲ್ಲಿ ಹೊಸ ಹೊಸ ಗಿರಿ, ಜಲಪಾತ, ಝರಿಗಳು ನಿತ್ಯವು ನಮ್ಮಗಳನ್ನು ಹೊಸ ಹೊಸ ಅಚ್ಚರಿಯ ಕಡೆಗೆ ಕರೆದುಕೊಂಡು ಹೋಗಿ ಕನ್ನಡ ನಾಡನ್ನು ಪ್ರತಿಯೊಬ್ಬರೂ ಇನ್ನೂ ಹೆಚ್ಚು ಮೆಚ್ಚುವಂತೆ ಮಾಡುತ್ತವೆ.

ನಮ್ಮ ನಾಡು ವಿವಿಧ ಧರ್ಮಕ್ಕೆ ಹೆಸರುವಾಸಿಯಾದದ್ದು. ಹಿಂದಿನಿಂದಲೂ ರಾಜ ಮಹಾರಾಜರ ಕಾಲದಿಂದಲೂ ಬಹು ಧರ್ಮಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಲೇ ಬರುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಇಂದು ನಮ್ಮನ್ನು ಆಶ್ಚರ್ಯದ ಕಡೆಗೆ ನೋಡುವಂತೆ ನಿಂತಿರುವ ಶ್ರವಣ ಬೆಳಗೋಳ, ಬೆಲೂರು ಹಳೆಬೀಡು, ಹಂಪಿ, ಬಿಜಾಪುರದ ಗೂಲ್ ಗುಂಬಜ್,ಶ್ರಿರಂಗಪಟ್ಟಣ, ಮೈಸೂರಿನ ಚಾಮುಂಡೇಶ್ವರಿ ದೇವಸ್ಥನಗಳೇ ಮುಖ್ಯ ಉದಾಹರಣೆಗಳು. ಇವುಗಳೆಲ್ಲಾ ನಮ್ಮ ನಾಡಿನಲ್ಲಿ ಅಂದು ಇಂದು ಇರುವ ವಾಸ್ತು ಶಿಲ್ಪಿಗಳಿಗಳ ಚಾಕಚಕ್ಯತೆಗೆ ನಿದರ್ಶನ.

ಇವುಗಳನ್ನೂ ಕೇವಲ ಆಯಾ ಆ ಧರ್ಮಿಯರಲ್ಲದೇ ಎಲ್ಲ ಜನಗಳು ಉಪಯೋಗಿಸುವುದು. ಹಬ್ಬ-ಹರಿ ದಿನಗಳಲ್ಲಿ ಪ್ರತಿಯೊಂದು ಧರ್ಮಿಯರು ಒಟ್ಟಿಗೆ ಕೊಡಿ ಆಚರಿಸುವುದು. ಬೇರೊಂದು ಜಾಗದಲ್ಲಿ ಕಾಣುವುದು ಬಲು ಕಷ್ಟ.

ನೀವು ಅಲ್ಲಿ ಇಲ್ಲಿ ಕೇಳಿರಬಹುದು. ಚಿತ್ರದುರ್ಗದ ನಾಯಕನಹಟ್ಟಿಯಲ್ಲಿನ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಜೀವೈಕ್ಯವಾದ ಸ್ಥಳದಲ್ಲಿರುವ ದೇವಳದ ಗೂಪುರ ಮಸೀದಿಯ ಶೈಲಿಯ ಕಟ್ಟಡವಾಗಿದೆ. ಇದನ್ನು ಹೈದರಾಲಿಯು ಕಟ್ಟಿಸಿದ ಎಂಬ ಮಾತು. ಇದಕ್ಕೆ ಸಾಕ್ಷಿ ಎನ್ನುವಂತೆ ವರುಷಕ್ಕೊಮ್ಮೆ ಜರುಗುವ ಜಿಲ್ಲೆಯ ಅತಿ ದೊಡ್ಡ ರಥ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಧರ್ಮೀಯರುಗಳನ್ನು ಸೇರಿಕೊಂಡು ಪ್ರತಿಯೊಂದು ಧರ್ಮದವರು ಭಾಗವಹಿಸುತ್ತಾರೆ ಮತ್ತು ಆ ದೇವರ ಕೃಪೆಗೆ ಪಾತ್ರರಾಗುತ್ತಾರೆ.

ಹಾಗೆಯೇ ಮತ್ತೊಂದು ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿ. ಅಲ್ಲಿ ಬಾಬನು ಇದ್ದಾನೆ ಮತ್ತು ದತ್ತತ್ರೇಯನೂ ಇದ್ದಾನೇ. ಇಲ್ಲಿ ಆ ದೇವಸ್ಥಳ ಹಿಂದೂ ಮತ್ತು ಮುಸ್ಲಿಂ ಇಬ್ಬರಿಗೂ ಆರಾಧನ ಕ್ಷೇತ್ರವಾಗಿ ಪ್ರಸಿದ್ಧವಾಗಿದೆ.

ಹೀಗೆ ನಮ್ಮ ಬಹು ಧರ್ಮದ ಸಹ ಬಾಳ್ವೆಗೆ ಒಂದು ಇದು ಚಿಕ್ಕ ದರ್ಶನ.

ಈ ರೀತಿಯಲ್ಲಿ ಅದೆಷ್ಟೋ ಸ್ಥಳಗಳಲ್ಲಿ ಎಲ್ಲಾ ಧರ್ಮದವರು ಸಹ ಬಾಳ್ವೆಯಿಂದ ನಾವೆಲ್ಲಾ ಒಂದೇ ಕನ್ನಡಿಗರು ಎಂದು ಪರಸ್ಪರ ಸೇರಿಕೊಂಡು ತಮ್ಮನ್ನು ತಾವು ಸಂತೈಸಿಕೊಳ್ಳುವ ನೋಟ ಬೇರೆ ಯಾವ ಜಾಗಗಳಲ್ಲಿಯು ಕಾಣಸಿಗುವುದಿಲ್ಲ. ಇದೇ ಅಲ್ಲವಾ ನಿಜವಾದ ಏಕತೆ!

ಧರ್ಮಕ್ಕೆ ಸಂಬಂಧಿಸಿದ ಮಹಾನ್ ಕ್ರಾಂತಿಗೆ ನಮ್ಮ ನಾಡು ಸಾಕ್ಷಿ ಎಂದರೇ.. ಅದು ಹನ್ನೆರಡನೇ ಶತಮಾನದಲ್ಲಿ ಜರುಗಿದ ವಚನಕ್ರಾಂತಿ. ಅತ್ಯಂತ ಸುಲಭವಾದ ಅಚ್ಚ ಕನ್ನಡದ ವೈಚಾರಿಕ ಸಾಹಿತ್ಯ ಸೃಷ್ಟಿ. ಅದು ಒಂದು ಮಹಾನ್ ಧರ್ಮದ ಉಗಮಕ್ಕೆ ಕಾರಣವಾಯಿತು. ಕೆಳ ಮಟ್ಟದ ಕಂದಾಚಾರ, ಉಚ್ಛ ವರ್ಗದವರ ಶೋಷಣೆಯ ವಿರುದ್ಧವಾಗಿ ನಿಂತು ಸರ್ವರಿಗೂ ಸಮಬಾಳ್ವೆ ಮತ್ತು ಸಮಾನ ಅವಕಾಶವನ್ನು ಧರ್ಮದ ನೆಲೆಯಲ್ಲಿ ದೊರಕಿಸಿಕೊಟ್ಟ ಕೀರ್ತಿಗೆ ಕಲ್ಯಾಣದ ಅಣ್ಣ ಶ್ರೀ ಬಸವಣ್ಣನವರ ಕೊಡುಗೆ ವಿಶ್ವವೇ ಒಮ್ಮೆ ಹಿಂತಿರುಗಿ ನೋಡುವಂತೆ ಮಾಡಿದ್ದು. ಆ ಸ್ಥಳ ನಮ್ಮ ಕರ್ನಾಟಕ ಎಂದರೇ ಎಷ್ಟೊಂದೂ ಹೆಮ್ಮೆಯಲ್ಲವಾ?

ನಮ್ಮ ಕನ್ನಡ ಜನಗಳೆಂದರೇ ಸತ್ಯ ಸಂದರು. ಮಮತೆಯ ಮನಸ್ಸುಳ್ಳವರು ಎಂಬುದಕ್ಕೆ ನಮ್ಮ ಜನಪದದಲ್ಲಿ ಇಂದಿಗೂ ಹಚ್ಚ ಹಸಿರಾಗಿ ಅತ್ಯಂತ ದೊಡ್ಡ ಸತ್ಯ ಮಾದರಿಯಾಗಿರುವ ಗೋವಿನ ಹಾಡು. ಈ ಹಾಡೇ ಸಾಕು ನಾವುಗಳು ಎಂಥವರು ನಮ್ಮ ಮಣ್ಣಿನ ಹಿರಿಮೆ ಏನೂ ಎಂಬುದನ್ನು ಅರಿಯಲು. ಅಷ್ಟರ ಮಟ್ಟಿಗೆ ಸತ್ಯದ ಬಗ್ಗೆ ಸತ್ಯದ ಗೆಲುವಿಗೆ ಯಾವತ್ತೂ ಕಟಿಬದ್ಧರಾದವರು ನಮ್ಮ ಜನ ಮನ.

ಪರರನ್ನು ಕಂಡರೇ ಮಮ್ಮಲು ಮರುಗುವ ಗುಣ, ಸ್ನೇಹವೇ ನಮ್ಮ ಮುಖ್ಯ ಅಸ್ತ್ರ.

ಯಾರಾದರೂ ನಮ್ಮಲ್ಲಿಗೆ ಬಂದರೇ ಸಾಕು ಅವರನ್ನು ಸ್ವತಃ ವಿಚಾರಿಸಿ ಉಪಚರಿಸುವ ಗುಣ ಬೇರೊಂದು ಜನಾಂಗದಲ್ಲಿ ಕಾಣಲಾರೆವು. ಅತಿಥಿಗಳೆಂದರೇ ದೇವರೇ ಸರಿ. ಅವರ ಉಪಚಾರವನ್ನು ದೇವರನ್ನು ಉಪಚರಿಸಿದ ರೀತಿಯಲ್ಲಿಯೇ ಉಪಚರಿಸಿ ಸತ್ಕರಿಸುವೆವು.

ಇದು ಪ್ರತಿ ಮನೆ ಮನೆಯಲ್ಲೂ ಮನಸ್ಸಿನಲ್ಲೂ ಜಾರಿಯಲ್ಲಿರುವ ಒಂದು ಅಲಿಖಿತ ಸಂಸ್ಕೃತಿ. ಇದಕ್ಕೆ ಸಾಕ್ಷಿ ನಮ್ಮ ಇಂದಿನ ಬೆಂಗಳೂರು. ನೋಡಿ ಇದೇ ಒಂದು ಮಿನಿ ಭಾರತವಾಗಿದೆ. ಇಲ್ಲಿರುವ ಪ್ರತಿಯೊಂದು ಹೊರ ರಾಜ್ಯದವರು ಎಷ್ಟರ ಮಟ್ಟಿಗೆ ಇದು ಅವರವರ ತವರು ಮನೆ ರಾಜ್ಯವೇನೋ ಎಂಬ ರೀತಿಯಲ್ಲಿ ನಮ್ಮಲ್ಲಿಯೇ ಬೆರತು ಹೋಗಿ ಬಿಟ್ಟಿದ್ದಾರೆ! ಅಷ್ಟರ ಮಟ್ಟಿಗೆ ನಮ್ಮ ಕನ್ನಡದ ಜನಮನಗಳು ಧಾರಳತನವನ್ನು ತೋರಿಸುತ್ತಲೇ ಇರುತ್ತಾರೆ!!!?

ರಾಜಕೀಯವಾಗಿ, ಅರ್ಥಿಕವಾಗಿ, ಸಾಂಸ್ಕೃತಿಕವಾಗಿ ಅತಿರಥ ಮಹಾರಥರನ್ನು ನಮ್ಮ ನಾಡು ಕಂಡಿದೆ. ಯಾವತ್ತಿಗೂ ಕಲೆ, ಕಲಾವಿದರಿಗೆ ಮತ್ತು ಸಾಧಕರಿಗೆ ನಮ್ಮ ಕನ್ನಡಾಂಬೆ ಬಂಜೆಯಾಗಿಲ್ಲ. ನಿತ್ಯ ನೂರಾರು ಸಾಧಕರು ತಮ್ಮ ಹಿರಿಯ ಹಿರಿಮೆ ಗರಿಮೆಯ ನೊಗವನ್ನು ಹೊತ್ತುಕೊಂಡು ಪ್ರತಿಯೊಂದು ರಂಗದಲ್ಲೂ ಮುಂದೆ ಮುಂದೆ ಸಾಗುತ್ತಾ ವಿಶ್ವದಲ್ಲಿಯೇ ಕನ್ನಡ ಎಂದರೇ ಬೆರಗುಗಣ್ಣಿಂದ ನೋಡುವಂತೆ ಮಾಡಿದ್ದಾರೆ.

ಒಂದು ನಾಡನ್ನು ಸುಖ ಸಂಪತ್ತುಭರಿತವಾದದ್ದು ಎಂಬುದನ್ನು ಗುರುತಿಸುವುದು ಅಲ್ಲಿರುವ ಸುಸಂಸ್ಕೃತ ವಿಧ್ವಾಂಸರುಗಳಿಂದ ಮತ್ತು ಸಜ್ಜನರುಗಳಿಂದ.

ನಮ್ಮ ಮಣ್ಣಿನಲ್ಲಿ ಸರಸ್ವತಿಯ ಪುತ್ರರ ಸಾಲು ಸಾಲೇ ಇದೆ. ಪಂಪ, ರನ್ನ ರಿಂದ ಮೊದಲು ಮಾಡಿ ರಾಷ್ಟ್ರವೇ ಮೆಚ್ಚುವ ರೀತಿಯಲ್ಲಿ ಕನ್ನಡ ಪದಗಳನ್ನು ತಮ್ಮ ಲೇಖನಿಯ ಮೊಲಕ ಕನ್ನಡ ಜನಕ್ಕೆ ಕೊಟ್ಟು ರಾಷ್ಟ್ರ ಕವಿಯೆಂದು ಬಿರುದು ಪಡೆದ ಕುವೆಂಪು.

ಕನ್ನಡವೇ ಎಂದೆಂದಿಗೂ ಮೊದಲು ಎಂಬ ರೀತಿಯಲ್ಲಿ ೮ ಙ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವುದು ನಮ್ಮ ಕನ್ನಡ ಭಾಷೆಯ ಸತ್ವಕ್ಕೆ ಒಂದು ಕೀರಿಟ. ಭಾರತದ ಯಾವೊಂದು ಭಾಷೆಯು ಇಷ್ಟೊಂದು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿಲ್ಲ. ಇಲ್ಲಿನ ಸರಸ್ವತಿ ಪುತ್ರರು ತಮ್ಮ ತಮ್ಮ ಕೃತಿಗಳ ಮೊಲಕ ವಿಶ್ವಕ್ಕೆ ಮಾಧರಿಯಾಗಿದ್ದಾರೆ. ನೊಬೆಲ್ ಪ್ರಶಸ್ತಿಗೂ ಸಡ್ಡು ಹೊಡೆಯುವ ಮಟ್ಟಿಗೆ ತಮ್ಮ ಛಾಪನ್ನು ನಿತ್ಯ ಜಗತ್ತಿನ ಮುಂದೆ ಇಡುತ್ತಿದ್ದಾರೆ. ಎಂದರೇ ನಾವುಗಳೇ ಧನ್ಯರು.

ಎರಡು ಸಾವಿರ ವರುಷ ಇತಿಹಾಸವಿರುವ ಕನ್ನಡ ಭಾಷೆ ಸುಲಿದ ಬಾಳೆ ಹಣ್ಣೇ ಸರಿ!

ನೂರಾರು ವಿಙ್ಞಾನಿಗಳು ವಿವಿಧ ಸಂಶೋಧನೆಗಳ ಮೊಲಕ ನಮ್ಮ ನಾಡನ್ನು ಸೇರಿಸಿಕೊಂಡು ದೇಶ ಮತ್ತು ವಿಶ್ವಕ್ಕೆ ಕಾಣಿಕೆಗಳನ್ನು ನಿತ್ಯ ನೀಡುತ್ತಲೇ ಇದ್ದಾರೆ.

ರಾಜಕೀಯವಾಗಿ ಅತಿ ಉನ್ನತ ಸ್ಥಾನವಾದ ಪ್ರಧಾನ ಮಂತ್ರಿ, ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿರುವ ಮಹಾನೀಯರುಗಳು ಕರ್ನಾಟಕದವರಾಗಿದ್ದಾರೆ ಎಂಬುದು ನಮ್ಮಗಳ ರಾಜಕೀಯ ಕೌಶಲತೆಗೆ ಮೆರಗು.

ದೊಡ್ಡ ದೊಡ್ಡ ಉದ್ಧಿಮೇದಾರರುಗಳು ಇಲ್ಲಿದ್ದಾರೆ. ಅವರು ತಮ್ಮ ಕೌಶಲದಿಂದ ಜಗತ್ತಿನಲ್ಲಿಯೇ ನಮ್ಮ ಬೆಂಗಳೂರು ಕರ್ನಾಟಕವನ್ನು ಪ್ರತಿಯೊಬ್ಬರೂ ತಿರುಗಿ ನೋಡುವಂತೆ ಮಾಡಿದ್ದಾರೆ. ಪರದೇಶದವರು ಸಹ ಬೆಂಗಳೂರಿನಲ್ಲಿ ಕೆಲಸ ಮಾಡಬೇಕು.. ಎಂಬ ಕನಸನ್ನು ಕಾಣುತ್ತಿದ್ದಾರೆ ಎಂದರೇ ನಮ್ಮ ನಮ್ಮ ಬುದ್ಧಿಶಾಲಿಗಳ ಸತ್ವವನ್ನು ಗಮನಿಸಬೇಕು.

ಜನಪದವೆಂದರೇ ಅನುಭವಗಳ  ಮೂಟೆಯೇ ಸರಿ. ಅಲ್ಲಿ ಇರುವ ಸಿರಿ ಸಂಪತ್ತು ಯಾವತ್ತಿಗೂ ಎಂದೂ ಬತ್ತಲಾರದ ತೂರೆ. ಅವರುಗಳ ಜನಪದ ಗೀತೆಗಳು, ಗಾದೆ, ಒಗಟುಗಳು,ಪದ,ಲಾವಣಿಗಳ ಮರ್ಮವನ್ನು ಎಂಥ ಶಿಷ್ಟ ವಿದ್ವಾಂಸರಿಗೂ ಇಂದಿಗೂ ಬಿಡಿಸಿಲಾರದ ಙ್ಞಾನವಾಗಿದೆ.

ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಗಾದೆಯ ಮಾತೇ ಇದಕ್ಕೆ ಬಲವನ್ನು ಕೊಡುತ್ತದೆ. ಅಷ್ಟರ ಮಟ್ಟಿಗೆ ನಮ್ಮ ಜನಗಳು "ಕುರಿತೋದದೆಯು ಕಾವ್ಯ ಪ್ರಯೋಗ ಪರಿಣತ ಮತಿಗಳ್". ಎನ್ನುವಷ್ಟರ ಮಟ್ಟಿಗೆ ಬುದ್ಧಿವಂತರುಗಳೂ.

ಜನಪದವೆಂದರೇ ಅದು ಹಳ್ಳಿಯ ರೈತಾಪಿ ಜನಗಳು. ಇವರೇ ನಮ್ಮ ನಾಡಿನ ದೇಶದ ಬೆನ್ನೆಲಬು. ದೇಶಕ್ಕೆ ಅನ್ನವನ್ನು ನೀಡುವ ಕೋಟ್ಯಾಂತರ ಅನ್ನದಾತರು ಇರುವುದರಿಂದಲೇ ಈ ನಮ್ಮ ನಾಡು ಸುಭಿಕ್ಷೆಯಾಗಿರುವುದು. ಅವರನ್ನು ಮರೆತರೆ ನಾವುಗಳು ಇರುವುದಿಲ್ಲ!

ದೇಶ, ಗಡಿ ರಕ್ಷಣೆಗೆ ಯಾವಾಗಲೂ ಸುಸಜ್ಜಿತವಾದ ಸೈನ್ಯ ಸೈನಿಕರು ಬೇಕೇ ಬೇಕು. ಇದಕ್ಕಾಗಿ ನಿತ್ಯ ಹುಡುಕಾಟ ನಡೆದೇ ಇರುತ್ತದೆ. ಇಂದು ನಾವುಗಳು ನೆಮ್ಮದಿಯಾಗಿ ಉಸಿರಾಡುತ್ತಿದ್ದೇವೆ ಎಂದರೇ ಅದು ನಮ್ಮ ಸೈನಿಕ ಅಣ್ಣ ತಮ್ಮಂದಿರ ಗಡಿ ಕಾಯುವಿಕೆಯಿಂದ ಮಾತ್ರ!

ಇದರ ಸೇವೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಸೇನೆಗೆ ಸೇರ್ಪಡೆಯಾಗುವುದು ನಮ್ಮ ಕೊಡಗಿನ ಜೆಲ್ಲೆಯ ಶೂರರು ಎಂಬುದು ಹೆಮ್ಮೆಯ ವಿಷಯ. ಧೈರ್ಯವಂತರ ತವರು ಕೊಡಗಾಗಿದೆ. ಅವರಿಗೆ ದೇಶ ಸೇವೆಯೇ ಹೆಮ್ಮೆಯ ಕಾಯಕವಾಗಿದೆ. ಇದಕ್ಕೆ ದೇಶದ ಮೊದಲ ಮೆಜರ್ ಜನರಲ್ ಕಾರ್ಯಪ್ಪನವರೇ ಸಾಕ್ಷಿ.

ನಾಟಕ, ಸಿನಿಮಾ, ಸಂಗೀತ ಕಲೆಗಳು ನಮ್ಮ  ನಾಡಿನ ನೈಜತೆ ಮತ್ತು ಜೀವಂತಿಕೆಯ ಕುರುಹುಗಳು.

ಇದರಲ್ಲಿ ತಮ್ಮದೇ ಛಾಪನ್ನು ಮೈಲುಗಲ್ಲಾಗಿಸಿದ ನೂರಾರು ಕಲಾವಿದರುಗಳು ಬಂದು ಹೋಗಿದ್ದಾರೆ ಮತ್ತು ಇಂದಿಗೂ ಬರುತ್ತಿದ್ದಾರೆ. ಕನ್ನಡ ನಾಡು ಕಂಡ ವರನಟ ಡಾ. ರಾಜ್ ಕುಮಾರ್ ವಿಶ್ವ ಸಿನಿಮಾ ರಂಗದಲ್ಲಿಯೇ ಒಂದು ಮೊಡಿಯ ಹೆಸರು. ಅಂಥ ಒಬ್ಬ ನಟ ಮತ್ತೊಮ್ಮೆ ಈ ದೇಶದಲ್ಲಿಯೇ ಹುಟ್ಟಿ ಬರಲಾರನೇನೋ ಎಂಬುವಷ್ಟರ ಮಟ್ಟಿಗೆ ಅವರ ನಟನೆಯ ಚಲನಚಿತ್ರಗಳು ಇಂದಿನ ಯುವಪೀಳಿಗೆಗೆ ಕಾಲೇಜು ಪಾಠಗಳಾಗಿವೆ. ಇವರ ಹೆಸರನ್ನು ಕೇಳದೇ ಇರುವ ಒಂದು ಜೀವವು ಕನ್ನಡ ನೆಲದಲ್ಲಿ ಇರಲಾರದು.

ಹಾಸ್ಯ ನಟನಾಗಿ ರಾಜ್ ಸಮಕಾಲೀನರಾಗಿ ಇದ್ದ. ಹಾಸ್ಯ ನಟ ದಿವಂಗತ ನರಸಿಂಹರಾಜ್ ವಿಶ್ವ ಕಂಡ ಅಪರೂಪದ ನಟ.ಇವರು ಚಾರ್ಲಿ ಚಾಂಪಿನ್ ರನ್ನು ನೆನಪು ಮಾಡಿಕೊಡುತ್ತಾರೆ. ಅಷ್ಟರ ಮಟ್ಟಿಗೆ ಕನ್ನಡ ಮನದಲ್ಲಿ ನಗುವನ್ನು ಇಂದಿಗೂ ಸ್ಪುರಿಸುವ ಶಕ್ತಿ ಆ ಹೆಸರಿಗೆ ಇದೆ.

ಅವರನ್ನು ನೆನಪು ಮಾಡಿಕೊಂಡರೇ.. ಹಿಂದೆ ರಾಜ ಕೃಷ್ಣದೇವರಾಯನ ಅಸ್ಥಾನದಲ್ಲಿದ್ದ ವಿಕಟಕವಿಯಾದ ತೇನಾಲಿ ರಾಮಕೃಷ್ಣನ ನೆನಪು ಬರುತ್ತದೆ.

ಹೀಗೆ ನಮ್ಮ ನಾಡಿಗೆ ಒಂದೊಂದು ಕಾಲದಲ್ಲೂ ಒಬ್ಬೊಬ್ಬರೂ ಬಂದು ನಮ್ಮ ಸಂಸ್ಕೃತಿಗೆ ತಮ್ಮದೇ ಕೊಡುಗೆಗಳನ್ನು ನೀಡುತ್ತಲೇ ತಮ್ಮ ತಾಯಿನಾಡನ್ನು ಇನ್ನೂ ಹೆಚ್ಚು ಹೆಚ್ಚು ಎತ್ತರಕ್ಕೆ ಕೊಂಡು ಹೋಗುತ್ತಿದ್ದಾರೆ. ಆ ಎಲ್ಲಾ ಮಹನೀಯರುಗಳಿಗೂ ಮತ್ತೊಮ್ಮೆ ನಮ್ಮ ನಮನಗಳು.

ಹೀಗೆ ಯಾವ ಕೋನದಲ್ಲಿ ನೋಡಿದರು ನಮ್ಮ ನಾಡಲ್ಲಿ ಒಂದೊಂದು ಅನರ್ಘ್ಯ ರತ್ನಗಳೇ ಸಿಗುತ್ತವೆ.

ಕಲೆಯಾಗಿರಲಿ, ಶಿಕ್ಷಣವಾಗಿರಲಿ, ವಾಸ್ತುಸಿಲ್ಪವಾಗಿರಲಿ, ನಿಸರ್ಗದತ್ತವಾದ ತಾಣಗಳಾಗಿರಲಿ, ಊರು, ಕೇರಿ, ಜನಸಾಮನ್ಯರಾಗಿರಲಿ. ಪ್ರತಿಯೊಂದು ಪ್ರತಿಯೊಬ್ಬರೂ ಒಂದೊಂದು ರತ್ನದಷ್ಟು ಶ್ರೇಷ್ಠವಾದ ಕೆಲಸಗಳನ್ನು ಮಾಡಿ ನಮ್ಮ ನಾಡನ್ನು ಶ್ರೀಮಂತಗೊಳಿಸಿದ್ದಾರೆ.

ಅದಕ್ಕೆ ಆಭಾರಿಗಳಾಗಿರುವುದು ಮಾತ್ರ ನಾವು ಮಾಡುವ ವಂದನೆಗಳು.

ಇದನ್ನೂ ಇನ್ನೂ ಹೆಚ್ಚು ಹೆಚ್ಚು ಹಸಿರು ಮಾಡುವ ಕಾಯಕ ನಮ್ಮ ಇಂದಿನ ಯುವ ಪೀಳಿಗೆಗೆ ಇದೆ. ಇದರ ಹಿರಿಮೆಯನ್ನು ಕಾಪಾಡುವುದು ಮತ್ತು ಅದನ್ನು ಹೆಚ್ಚು ಅರ್ಥಪೂರ್ಣವಾಗಿ ಹೊರಗಿನವರಿಗೆ ತೋರಿಸುವುದನ್ನು ಸರ್ಕಾರ ಸೇರಿ ಪ್ರತಿಯೊಂದು ಸಂಘ ಸಂಸ್ಥೆಗಳು ನೆರವೇರಿಸುವುದು ಪ್ರತಿಯೊಬ್ಬರ ದೊಡ್ಡ ಜವಾಬ್ದಾರಿ ಮತ್ತು ಹೊಣೆ.


ನೀವುಗಳು ಏನು ಹೇಳ್ತೀರಾ........?

ಶನಿವಾರ, ಜೂನ್ 9, 2012

ಅಭಿಮಾನಿಗಳ ಹುಚ್ಚು ಹೊಳೆ


ಸಾರ್ವಜನಿಕವಾಗಿ ಪ್ರಸಿದ್ಧರಾಗಿರುವವರ ಬಗ್ಗೆ ಸಾಮಾನ್ಯ ಜನಕ್ಕೆ ತುಂಬ ಕುತೂಹಲವಿರುತ್ತದೆ.

ಅದೇ ನಮ್ಮ ಒಂದು ಕೇರಿಯಿಂದ ಮತ್ತೊಂದು ಕೇರಿಗೂ ಗೊತ್ತಿರದ ನಮ್ಮ ನೆರೆಹೊರೆಯವರ ಬಗ್ಗೆ ಅಷ್ಟೊಂದು ದೊಡ್ಡ ಅಚ್ಚರಿ ಭರಿತ ಕುತೂಹಲ ಖಂಡಿತವಾಗಿಯೂ ಯಾರಿಗೂ ಇರುವುದಿಲ್ಲ.

ಯಾಕೆಂದರೇ ಅದೇ ಮುಖವನ್ನು ದಿನದ ಇಪ್ಪತ್ತು ನಾಲ್ಕು ಘಂಟೆ ಹೆಚ್ಚು ಕಡಿಮೆಯಾಗಿ ನೋಡುತ್ತಲೇ ಇರುತ್ತೇವೆ. ಇನ್ನೂ ಈ ನಮ್ಮ ನೆರೆಹೊರೆಯ ವ್ಯಕ್ತಿಗಳೇನೂ ಪೇಪರಲ್ಲಿ, ಟಿ.ವಿ, ಸೀನಿಮಾದಲ್ಲಿ ಬರುವ ಮುಖಗಳಲ್ಲವಲ್ಲಾ. ಅದ್ದರಿಂದ ಅವರುಗಳ ಬಗ್ಗೆ ಹೆಚ್ಚು ಅರಿಯುವ ಮನಸ್ಸಂತೂ ಯಾರೊಬ್ಬರಿಗೂ ಬರುವುದಿಲ್ಲ.

ಆದರೂ ಅವರುಗಳು ತಮ್ಮನ್ನು ತಾವು ಎಷ್ಟರ ಮಟ್ಟಿಗೆ ತೆರೆದುಕೊಳ್ಳುತ್ತಾರೂ ಅಷ್ಟರ ಮಟ್ಟಿಗೆ ಅವರುಗಳನ್ನು ಅರಿಯುವೆವು. ಅದೂ ಬೇಕಾದರೇ ಮಾತ್ರ.

ಅದೇ ಹೆಚ್ಚು ಹೆಚ್ಚು ಸಾಧನೆ ಮಾಡಿರುವವರು, ಸಿನಿಮಾ ತಾರೆಯರುಗಳ,ಲೆಖಕರುಗಳು, ಸೆಲೆಬ್ ಗಳ ಬಗ್ಗೆ ಯಾವಾಗಲೂ ಅತಿ ಹೆಚ್ಚು ಕುತೂಹಲ. ಯಾಕೆಂದರೇ ನಾವುಗಳು ಅವರ ಹಾಗೆ ಇರುವುದಿಲ್ಲ. ಅವರುಗಳು ನಮ್ಮ ಕೈಗೆ ಎಟುಕುವುದಿಲ್ಲ. ಅವರುಗಳ ಲೈಫ್ ಸ್ಟೈಲ್ ನಮ್ಮದಕ್ಕಿಂತ ವಿಭಿನ್ನವಾಗಿರುತ್ತದೆ. ಅವರುಗಳು ನಮ್ಮ ಕಣ್ಣಿಗೆ ಬೀಳುವುದು ಟಿ.ವಿ.ಪತ್ರಿಕೆ ಮತ್ತು ಸಿನಿಮಾಗಳ ಮೂಲಕ ಮಾತ್ರ.

ಅವರ ನಿಜ ಜೀವನದ ಬಗ್ಗೆ ಏನೊಂದು ಗೊತ್ತಿರುವುದಿಲ್ಲ. ಗೊತ್ತಿರುವುದೆಲ್ಲಾ ಕೇವಲ ಸಾರ್ವಜನಿಕವಾಗಿ ಹೇಗೆ ಬಿಂಬಿಸಿಕೊಂಡಿರುತ್ತಾರೋ ಅದು ಮಾತ್ರ.

ಅವರ ಬಗ್ಗೆ ಏನೊಂದು ಚಿಕ್ಕ ಗಾಸಿಪ್ ಬಂದರೂ ಅಚ್ಚರಿಯ ಕಣ್ಣಿನೊಡನೆ ನೋಡುತ್ತೇವೆ ಮತ್ತು ಮಾತನಾಡುತ್ತಾ ಮಾತನಾಡುತ್ತಾ ಸುತ್ತ ಮುತ್ತಲಿನವರಿಗೂ ಹಬ್ಬಿಸಿಬಿಡುತ್ತೇವೆ.

ಅದರಿಂದ ನಮಗೇನೂ ಉಪಯೋಗವಾಗಲಿ ಆಗದಿರಲಿ ಅದು ನಮ್ಮ ಮಾತಿನೊಡನೆ ಹಾಸುಹೊಕ್ಕಾಗಿರುತ್ತದೆ. ಯಾಕೆಂದರೇ ಅವರುಗಳೆನ್ನೇಲ್ಲಾ ನಿತ್ಯ ಬೆರಗುಗಣ್ಣಿನಿಂದ ನೋಡುತ್ತಿರುತ್ತೇವೆ.

ನಮ್ಮಲ್ಲಿ ಇರದ ಯಾವುದೋ ಒಂದು ಉನ್ನತವಾದ ಗುಣ, ಸಾಧನೆ, ನಾಯಕತನ, ಕೆಲಸ-ಕಾರ್ಯಗಳನ್ನು ಹೆಚ್ಚು ಹೆಚ್ಚಾಗಿ ಹುಚ್ಚಾಗಿ ಇಷ್ಟಪಡುತ್ತಿರುತ್ತೇವೆ.

ನಮಗೆ ಗೊತ್ತು ಅವುಗಳನ್ನು ನಮ್ಮಿಂದ ಮಾಡಲು ಸಾಧ್ಯವಿರುವುದಿಲ್ಲ ಎಂದು. ನಮ್ಮಲ್ಲಿ ಆ ಕನಸು ಇರುತ್ತದೆ. ಅದರೆ ಅದನ್ನು ನನಸು ಮಾಡಿಕೊಳ್ಳಲು ಸಮಯ, ಶಕ್ತಿ ಸಾಕಾಗಿರುವುದಿಲ್ಲ.

ಅದಕ್ಕಾಗಿ ಅಂಥವರನ್ನು ನಮ್ಮ ಆದರ್ಶವಾಗಿಟ್ಟುಕೊಳ್ಳುತ್ತೇವೆ. ಇಷ್ಟೊಂದು ಪ್ರಸಿದ್ಧಿಯನ್ನು ಪಡೆದಿರುವವರು ಎಂದರೇ ಅವರ ಸಾಧನೆಯ ಪಥ ಯಾವುದು? ಅದನ್ನು ಮುಟ್ಟಿದ ಬಗೆ ಹೇಗೆ? ಅವನ ನಿಜವಾದ ಗುಣಾವಾಗುಣಳೇನೂ? ಬಾಲ್ಯದಲ್ಲಿ ಹೇಗಿದ್ದಾ? ಕಾಲೇಜು ಜೀವನ, ವೃತ್ತಿ ಜೀವನ? ಅವನ ಗೆಳೆಯರು ಯಾರು? ಅವನ ಒಳ್ಳೆಯ ಕೆಟ್ಟ ಹವ್ಯಾಸಗಳೇನೂ? ಇತ್ಯಾದಿಯನ್ನು ತಿಳಿಯುವ ಹಂಬಲ ಪ್ರತಿಯೊಬ್ಬರಿಗೂ ಇರುತ್ತದೆ.

ಇದೇ ಎಲ್ಲಾ ಸೆಲೆಬ್ರೇಟಿಗಳ ಬಗ್ಗೆ ನಮ್ಮ ನಿಮ್ಮಂತಹ ಸಾಮಾನ್ಯ ಮಂದಿಗೆ ವಿಷಯ ತಿಳಿದುಕೊಳ್ಳಬೇಕು ಎಂಬ ಕಾತುರತೆ. ಅವನ ಅವಳ ಜೀವನ ಶೈಲಿಯ ಯಾವುದೋ ಒಂದು ಘಟನೆ, ಸನ್ನಿವೇಶ ನಮ್ಮದಾಗಿಬಿಟ್ಟರೇ ಮುಗಿಯಿತು. ನೋಡು ಅವನು ಸಹ ನಮ್ಮ ಹಾಗೆಯೇ ಮಣ್ಣು ಹೊತ್ತಿದ್ದಾನೇ. ಆದರೂ ಅವನು ಅಲ್ಲಿ ನಾವು ಇಲ್ಲಿ. ಸ್ವಲ್ಪದರಲ್ಲಿ ನಮ್ಮದುಕ್ಕೇ ಮೀಸ್ ಆಗಿಬಿಟ್ಟು ನಾನು ಇಲ್ಲಿದ್ದೇನೆ. ಅವನು ಅಲ್ಲಿದ್ದಾನೆ. ಎಂಬ ಮಾತನ್ನು ದಾರಾಳವಾಗಿ ಹೇಳಿಕೊಳ್ಳುತ್ತಿರುತ್ತೇವೆ.

ಅದಕ್ಕೆ ಇರಬೇಕು. ಅಭಿಮಾನಿಗಳ ಹುಚ್ಚು ಹೊಳೆಯಲ್ಲಿ ಇಂದಿನ ಎಲ್ಲಾ ಪ್ರಸಿದ್ಧ ವ್ಯಕ್ತಿಗಳೆಲ್ಲಾ ಮುಳುಗೇಳುತ್ತಿದ್ದಾರೆ.

ತಾವು ಕಾಣುವ ಬೆಳ್ಳಿ ಪರದೆಯ ಮೇಲೆ ಬರುವ ಸಿನಿಮಾ ನಾಯಕ/ನಾಯಕಿಯರನ್ನಂತೂ ಅವರು ಎಷ್ಟು ಇಷ್ಟಪಡುತ್ತಾರೆ ಎಂದರೇ ಅವರು ನಿಜ ಜೀವನದಲ್ಲಿ ಬೆಳ್ಳಿ ಪರದೆಯ ಮೇಲೆ ಇರುವಂತೆಯೇ ಇರುವವರು ಎಂಬ ಭ್ರಮೆಯಲ್ಲಿ ಪೂಜೆ ಮಾಡುವಷ್ಟರ ಮಟ್ಟಿಗೆ.

ನನಗಂತೂ ನಾನು ಓದುವ ಕಥೆ, ಕಾದಂಬರಿಗಳನ್ನು ಬರೆಯುವ ಲೇಖಕರ ಜೀವನ ಚರಿತ್ರೆ, ನಿಜ ಜೀವನದ ತುಣುಕಗಳನ್ನು ಓದಲು ತುಂಬ ಖುಷಿಯಾಗುತ್ತದೆ.

ಅಲ್ಲಾ ಇಂಥ ಸುಂದರವಾದ ಕೃತಿಗಳನ್ನು ಎಲ್ಲಿ ಕೂತು, ಯಾವ ಸಮಯದಲ್ಲಿ ಅದು ಹೇಗೆ ಇಷ್ಟೊಂದು ಸುಂದರವಾದ ಅನುಭವ ಪದಗಳ ಜೊಡಣೆಯನ್ನು ಮಾಡಿರುವುದನ್ನು ತಿಳಿಯಬೇಕು ಅನಿಸುತ್ತದೆ.

ಅದು ಹೇಗೆ ಕವಿ ಸಮಯವಿರುತ್ತದೆ.ಅವರಿಗೆ ಅದು ಹೇಗೆ ಕೃತಿಗೆ ಇಳಿಸಬೇಕೆನಿಸುತ್ತದೆ. ಪಾತ್ರಗಳನ್ನೆಲ್ಲಾ ಅದು ಹೇಗೆ ಕಲ್ಪಿಸಿಕೊಂಡು ಅವರನ್ನು ಪದಗಳಲ್ಲಿ ಹಿಡಿದುಹಿಡುತ್ತಾರೆ? ಇತ್ಯಾದಿ ಇತ್ಯಾದಿ ನಮಗೆ ಗೊತ್ತಿರದ ಕೃತಿಕಾರನ ಇನ್ನೊಂದು ಮುಖವನ್ನು ಹತ್ತಿರದಿಂದ ಕಾಣುವ ಬಯಕೆಯಾಗುತ್ತದೆ.

ಅವರು ಕೊಡುವ ಕೃತಿ, ಪದಗಳ ಸಾಲಿನ ಮೊಲಕ ನಮ್ಮ ಸಹೃದಯಕ್ಕೆ ಹತ್ತಿರವಾದವರನ್ನು ಇನ್ನೂ ಹೆಚ್ಚು ಹೆಚ್ಚು ಅರಿಯುವ ಹಂಬಲವಂತೂ ಎಲ್ಲಾ ಓದುಗರಿಗೂ ಇರುತ್ತದೆ.

ಕೃತಿಯನ್ನು ಇಷ್ಟಪಡುತ್ತೇವೆ ಎಂದರೇ ಆ ಕೃತಿ ಜನಕನನನ್ನು ಇಷ್ಟಪಟ್ಟೇಪಡುತ್ತೇವೆ. ಯಾಕೆಂದರೇ ನಮಗೆ ಅವನು ಹೇಳುವ ಕಥೆ, ನೀತಿ, ಘಟನೆ, ಸನ್ನಿವೇಶ ನಮ್ಮ ಎದೆಯನ್ನು ತಟ್ಟಿರುತ್ತದೆ. ಅದಕ್ಕಾಗಿಯೇ ಅವನ ಪ್ರತಿಯೊಂದು ಹೆಜ್ಜೆಯನ್ನು ದೂರದಿಂದ ಸಿಗುವ ಮಾಧ್ಯಮಗಳ ಮೊಲಕ ಬಿಟ್ಟು ಬಿಡುದೇ ಗಮನಿಸುತ್ತಿರುತ್ತೇವೆ.

ಇದಕ್ಕಾಗಿಯೇ ಎಲ್ಲಾ ಸಾಧಕರ ಜೀವನ ಚರಿತ್ರೆಗಳಿಗೆ ಬಹು ಮಹತ್ವ ಬರುತ್ತದೆ.

ನಮ್ಮ ನಿಮ್ಮಂತಹ ಸಾಮಾನ್ಯನ ಚರಿತ್ರೆಯನ್ನು ಯಾರು ಇಷ್ಟಪಡುತ್ತಾರೆ?

ಎಲ್ಲಾರಿಗಿಂತ ಮೀಗಿಲಾಗಿ ವಿಭಿನ್ನವಾಗಿ ಸಾರ್ವಜನಿಕವಾಗಿ ಗುರುತಿಸಿಕೊಂಡಂತವರ ಜೀವನ ಪಥವನ್ನು ಪ್ರತಿಯೊಬ್ಬರೂ ಓದೋಣ ಅನಿಸುತ್ತಿರುತ್ತದೆ.

ಅದು ಕೇವಲ ವಿಷಯ ತಿಳುವಳಿಕೆಯೇ ಅಥವಾ ಅವರಂತೆಯೇ ನಾವುಗಳು ಬದುಕಲು ಹಾಕಿಕೊಟ್ಟ ಹಾದಿಯೇ?

ಇಲ್ಲಿಯವರೆಗೂ ಎಷ್ಟೊಂದು ಮಹಾನೀಯರುಗಳು ಈ ಭುವಿಯ ಮೇಲೆ ಅವತರಿಸಿದ್ದಾರೆ. ಅವರುಗಳ ಬಗ್ಗೆ ನಿತ್ಯ ಅಗಾಧವಾದ ಸಾಹಿತ್ಯ ಹರಿದು ಬರುತ್ತಿದೆ. ಇವುಗಳೆಲ್ಲಾ ಒಬ್ಬರಲ್ಲಾ ಒಬ್ಬರ ಮೇಲೆ ಪ್ರಭಾವ ಬೀರಿರಲೇಬೇಕು.

ಪುನಃ ಇಲ್ಲಿ ಲೋಕೊಭಿನ್ನರುಚಿ. ಅವರವರಿಗೆ ಇಷ್ಟವಾಗುವವರು ಅವರುಗಳಿಗೆ ಅರಾಧ್ಯ ದೇವರುಗಳಾಗಿ ಅವರಿಗೆ ಮಾದರಿ. ಅವರುಗಳೇ ಇವರುಗಳಿಗೆ ದ್ರೋಣಾಚಾರ್ಯರಾಗುವವರು.ನಮ್ಮ ನೆಲೆಯಲ್ಲಿ ಏನಾದರೂ ಸಾಧಿಸುವಂತಹ ಪ್ರೇರಪಣೆಯಾಗುವವರು.

ವ್ಯಕ್ತಿ ವ್ಯಕ್ತಿಗಳ ಬಗ್ಗೆ ಪೂರ್ಣವಾಗಿ ಅರಿಯುವಂತಹ ವಿಧ್ಯೆ ಸಾಮಾನ್ಯವಾಗಿ ಬಲು ಕಠಿಣವಾದದ್ದು. ದಕ್ಕಿದಷ್ಟು ಮಾತ್ರ ನಮ್ಮದಾಗುತ್ತದೆ. ಏನೇ ಮಾಡಿದರೂ ಅವರಂತೆಯೇ ಯಾರೊಬ್ಬರೂ ಆಗಲು ಸಾಧ್ಯವಿಲ್ಲ.ಎಂದಿಗೂ ಅವರು ಅವರೇ, ನಾವು ನಾವೇ.

ಇದೇ ಕಾರಣವಿರಬಹುದು. ಜಗತ್ತು ಇಷ್ಟೊಂದು ವೈವಿಧ್ಯಮಯವಾಗಿ ಕ್ಷಣ ಕ್ಷಣಕ್ಕೂ ಜೀವಂತವಾಗಿ ಹಚ್ಚ ಹಸಿರಾಗಿ ಎಂದಿಗೂ ಬೋರೂ ಎಂದು ಅನಿಸದಾಗಿರುವುದು, ಕುತೂಹಲಗಳ ಗಣಿಯಾಗಿರುವುದು.

ಮೊಗೆದಷ್ಟು  ಸಿಗುತ್ತಲೇ ಇರುತ್ತದೆ. ಪ್ರಯತ್ನ ಮಾತ್ರ ಮಾಡುತ್ತಲೇ ಇರಬೇಕು.

ಮಂಗಳವಾರ, ಜೂನ್ 5, 2012

ನೀ ಎಂದರೇ..!


ಆ ದಿನ ನಿನ್ನ ಬಳಿ ಆ ರೀತಿಯಲ್ಲಿ ಮಾತನಾಡಬಾರದಿತ್ತು. ಅದು ಏಕೆ ಹಾಗೆ ಆ ಸಮಯಕ್ಕೆ ನನ್ನ ಮನಸ್ಸಿಗೆ ಆ ಕೇಳಲಾರದ ಮಾತು ಪದವಾಗಿ ನನ್ನ ಬಾಯಿಂದ ಜಾರಿತೋ ಆ ದೇವರೆ ಬಲ್ಲ!

ಮನುಷ್ಯ ತಾನು ಅಂದುಕೊಳ್ಳುವುದಕ್ಕಿಂತ ವಿಭಿನ್ನವಾಗಿ ಸಮಯದ ಗೊಂಬೆಯಾಗಿಬಿಡುತ್ತಾನೆ. ಆ ಪರಿಸ್ಥಿತಿಗೆ ತಕ್ಕಂತೆ ಯಾವುದೋ ಒಂದು ಬಲಿಷ್ಠವಾದ ಸೂತ್ರದಾರ ಆಡಿಸುವಂತೆ ವರ್ತಿಸಿಬಿಡುತ್ತಾನೆ ಅನಿಸುತ್ತದೆ.

ಆದರೇ ಅದನ್ನು ಯಾರೂ ಕೇಳಬೇಕು? ಆ ಸಮಯಕ್ಕೆ ನಿನಗೆ ನನ್ನ ಬಗ್ಗೆ ಎಷ್ಟರ ಮಟ್ಟಿಗೆ ತೀರಾಸ್ಕಾರ ಬಂದಿತೂ ಎಂಬುದು ಆ ನಿನ್ನ ಮುದ್ದು ಕಣ್ಣುಗಳನ್ನು ನೋಡಿದಾಗ ತಿಳಿಯಿತು.  ಆ ನಿನ್ನ ಕೆಂಪಾದ ಕೆನ್ನೆಯನ್ನೂ ನೋಡಿ ನಾನಂತೂ ಪೂರ್ತಿ ತಣ್ಣಗಾಗಿ ಬಿಟ್ಟೆ. ಎಲ್ಲಿ ಕೆಂಪನೆಯ ರಕ್ತ ನಿನ್ನ ಆ ಕೆನ್ನೆಯಿಂದ ಚಿಮ್ಮುವುದೋ ಎಂದು ಭಯವಾಗಿತ್ತು. ನಿಜವಾಗಿಯೂ ನಿನ್ನಲ್ಲೂ ಇಷ್ಟರ ಮಟ್ಟಿಗೆ ಸಿಟ್ಟನ್ನು ಕಾಣಬಹುದು ಎಂಬುದು ಆ ದಿನವೇ ಮನವರಿಕೆಯಾಯಿತು.


ಆದರೇ ಜಾರಿಬಿದ್ದ ಗಾಜನ್ನು ಹೇಗೆ ಪುನಃ ಒಂದುಗೊಡಿಸಲೂ ಸಾಧ್ಯವಿಲ್ಲವೋ ಆ ರೀತಿಯಲ್ಲಿ ನನ್ನ ಆ ಮಾತನ್ನೂ ವಾಪಾಸ್ಸು ತೆಗೆದುಕೊಳ್ಳಲು ಸಾಧ್ಯವಾಗದೇ ಅಸಹಾಯಕದ ಮೊರೆಯನ್ನು ನಿನ್ನ ಮುಂದೆ ಇಟ್ಟಿದ್ದೇ...

ಅದು ವರೆಗೂ ನೀನಂದರೇ ಪ್ರಫುಲತೆಯ ಲತೆಯಾಗಿದ್ದೆ ನನ್ನ ಮನಕ್ಕೆ. ಆದರೆ ಗೆಳತಿ ಇದೀಗ ನಿನ್ನದೇ ಆ ಮುಖ ಬೆಂಕಿಯ ಬಿರುಗಾಳಿಯಾಗಿ ಸುಯ್ಯುತ್ತಿದೆ. ಎಷ್ಟೋ ಬಾರಿ ಮರೆತರೂ ಆ ಸಮಯದ ನಿನ್ನ ಸ್ವಭಾವವೇ ನನ್ನನ್ನು ಕುಕ್ಕುತ್ತಿದೆ. ಆ ರೀತಿಯಲ್ಲಿ ನಿನ್ನನ್ನು ಕೇಳಬಾರದಾಗಿತ್ತು. ಕೇಳಿ ನಾನು ಮಹಾನ್ ತಪ್ಪು ಮಾಡಿದೆ ಅನಿಸುತ್ತಿದೆ.

ಒಮ್ಮೊಮ್ಮೆ ಯೋಚಿಸಿದರೇ ಅದರಲ್ಲೇನೂ ದೊಡ್ಡ ಲೋಪ ಕಾಣಿಸುತ್ತಿಲ್ಲ. ಆದರೇ ಅದು ಏಕೆ ನೀನು ಎರಡು ವರುಷದ ನನ್ನ ನಿನ್ನ ನಡುವಿನ ಪ್ರೀತಿಯ ಪ್ರೇಮವನ್ನು ಕನಸು ಎಂಬಂತೆ ಜಾಡಿಸಿ, ಆ ಪರಿಸ್ಥಿತಿಯ ಕೈಗೆ ಕೊಟ್ಟೆ ಎಂದು ತುಂಬ ದುಃಖವಾಗುತ್ತಿದೆ.

ನೀನು ನನ್ನನ್ನು ಅರ್ಥಮಾಡಿಕೊಂಡಷ್ಟು ಬೇರೆಯವರು ಯಾರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಭರವಸೆಯಿಂದಲೇ.. ಆ ದಿನ ನನ್ನ ಮೊದಲ ಪ್ರೇಮದ ಸುಳಿವನ್ನು ನಿನ್ನಲ್ಲಿ ಮನತೆರೆದು ಬಿಚ್ಚಿಕೊಂಡಿದ್ದು. ಆಗ ನೀನು ಗಮನಿಸಿದ್ದೀಯಾ ಪಶ್ಚಿಮದಲ್ಲಿ ಆ ಕೆಂಪು ಸೂರ್ಯ ಕೆಂಪು ಕಿರಣವನ್ನು ನಿನ್ನ ಮುಖಾರವಿಂದದ ಮೇಲೆ ಚೆಲ್ಲಲೂ ನೀನೂ ಸಹ ನಾಚಿ ನೀರಾಗಲೂ  ಎಷ್ಟೊಂದು ಕಾಕತಾಳಿಯವಾಗಿತ್ತು. ನೀನಗೂ ಅನಿಸಿತ್ತು ಎಂದು ನನ್ನ ಎದೆಯಲ್ಲಿ ನಿನ್ನ ಮೊಗವನ್ನು ಇಟ್ಟುಕೊಂಡು ಉಸಿರುಬಿಟ್ಟಿದ್ದು. ಇನ್ನೂ ಹಾಗೆಯೇ ಬಿಸಿಗಾಳಿ ನನ್ನ ಎದೆಯೊಳಗೆ ಸುಳಿಯುತ್ತಿದೆ.

ಅದೇ ಅನಿಸುತ್ತೇ ನನ್ನ ನಿನ್ನ ಮೊದಲ ಸ್ವರ್ಷ. ಅಮ್ಮ ನಂತರದ ಸ್ತ್ರೀಯ ಸ್ಪರ್ಷವೆಂದರೇ ಏನೂ ಎಂಬುದು ಗೊತ್ತಾಗಿದ್ದು. ಏನೋ ರೋಮಾಂಚನ! ಏನೋ ಸಮಧಾನ! ಏನಾದರೂ ಸಾಧಿಸುವ ಛಲ ಆ ಸಮಯಕ್ಕೆ ನನ್ನ ಎದೆಯಲ್ಲಿ ಪ್ರೀತಿಯ ಜೊತೆಗೆ ಸ್ಥಾಯಿಯಾಗಿ ನಿಂತುಬಿಟ್ಟಿತ್ತು.

ಆಮೇಲೆ ನಿತ್ಯ ನನ್ನ ನಿನ್ನ ಸಂಮಿಲನ, ಮಾತು ಮಾತು.. ಒಂದು ಅರಗಳಿಗೆ ನನ್ನಿಂದ ಬೇರೆಯಾಗಲಾರದಷ್ಟು ನೀನು ನನ್ನನ್ನು ಹಚ್ಚಿಕೊಂಡಿದ್ದು. ಜಗತ್ತೇ ಶೂನ್ಯ ನಾನು ನೀನು ಮಾತ್ರ ಈ ಪ್ರಪಂಚದಲ್ಲಿ ಎಂಬಂತೆ ಮೈ ಮರೆತಿದ್ದು.

ಆ ಎಲ್ಲಾ ಕ್ಷಣಗಳು ಸುಂದರ ಸ್ವಪ್ನಗಳಾಗಿ ನನ್ನನ್ನು ಇಂದು ಕೊರೆಯುತ್ತಿವೆ.

ಗೆಳತಿ ಅಂದು ನಿನ್ನ ನನ್ನ ಆ ಮೊದಲ ಸ್ಪರ್ಷದ ಮೊಲಕ ಬೆಸದ ಆ ಪ್ರೀತಿಯ ನಿವೇಧನೆಯ ಅಸಲಿ ಸತ್ಯ ಇಷ್ಟು ತೆಳುವಾಗಿತ್ತಾ? ಮಂಜಿನ ಪರದೆಯಾಗಿತ್ತಾ? ಯಾವುದೋ ಒಂದು ಪರಿಸ್ಥಿತಿಯ ಬಿಸಿಲ ಜಳಕ್ಕೆ ಆವಿಯಾಗುವಷ್ಟು?

ಇದಕ್ಕೆ ನೀನೇ ಉತ್ತರಿಸಬೇಕು...

ನಾನು ಏನಾದರೂ ಗಂಡಸು.. ಆತುರ.. ಕಾತುರ.. ಎಲ್ಲಾ ಬೆರೆತ ದೇಹ. ಆದರೇ.. ಸ್ತ್ರೀ ಅಂದರೇ ತಾಳ್ಮೆಯ ಖನಿ.. ಮಮತೆಯ ಮಡಿಲು.. ಸಮಾಧಾನದ ಸಂತೃಪ್ತಿಯ ಖಜಾನೆ ಎಂದು ಯಾರ್ಯಾರೋ ಹೇಳಿರುವುದೇಲ್ಲಾ ಶುದ್ಧ ಸುಳ್ಳು ಅನ್ನುವ ರೀತಿಯಲ್ಲಿ ನಿನ್ನ ಮನವನ್ನು ಅಂದು ಮಾಡಿಕೊಂಡು ನನ್ನ ನಿನ್ನ ಪ್ರೇಮಕ್ಕೆ ಒಂದು ಪುಲ್ ಸ್ಟಾಪ್ ನ್ನು ಎಷ್ಟು ಬೇಗ ಇಟ್ಟುಬಿಟ್ಟಿಯೆಲ್ಲಾ?

ಚಿಕ್ಕದಾದ ಒಂದು ಪ್ರೀತಿಯ ಸೆಲೆಯ ಒಂದು ಜೀವ ತಂತು ಸಹ ನಿನ್ನ ಬಳಿ ನನ್ನ ಬಗ್ಗೆ ಇಲ್ಲವಾಯಿತಾ?

ಅನುಮಾನವಿಲ್ಲದ ಪ್ರೇಮವಿಲ್ಲಾ ಎಂದು ಹೇಳಿದ ಕವಿವಾಣಿಯೇ ಸುಳ್ಳಾ?

ಅದು ಯಾಕೇ ನನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಈ ಪ್ರೇಮಿ ಹೀಗೆ ಕೇಳಿದ? ಎಂಬ ಚಿಕ್ಕ ಯೋಚನೆಯು ನಿನ್ನಲ್ಲಿ ಅಂದು ಮೂಡಲಿಲ್ಲವಾ? ಎಷ್ಟು ಸುಲಭವಾಗಿ ಒಂದೇ ಕ್ಷಣಕ್ಕೆ ಅಪರಿಚತರಂತೆ ವರ್ತಿಸಿದೆಯಲ್ಲ?

ನಿನಗೆ ನನ್ನ ಮನದ ವೇದನೆಯ ಅಳತೆ ಇನ್ನೂ ತಿಳಿದಿರಲಾರದು ಅನಿಸುತ್ತದೆ. ನಾನು ಆ ಕ್ಷಣಕ್ಕೆ ಏನೂ ಮಾಡಲಾರದವನಾಗಿದ್ದೆ. ಆತುರಪಟ್ಟು ವರ್ತಿಸಿದ ಗುಣಾವಗುಣದ ಬಗ್ಗೆ ನನಗೆ ಆದ ಪಶ್ಚಾತಾಪದ ಬಿಸಿಯನ್ನು ನೀನು ಅರಿಯಲಾರದೆ ಹೋದೆ. ಎಷ್ಟು ಬೇಡಿಕೊಂಡರೂ ನೀನು ಆ ನಿನ್ನ ಸ್ವಭಾವತವಾದ ಮೊಂಡಾಟವನ್ನು ಬಿಡಲೇ ಇಲ್ಲ.

ಶಾಶ್ವತವಾಗಿ ಈ ನಮ್ಮ ಸ್ನೇಹ, ಪ್ರೀತಿಯನ್ನು ಹರಿದುಕೊಳ್ಳಲು ನಿಂತು ಬಿಟ್ಟೆ?

ಅಲ್ಲಾ ಗೆಳತಿ ನಾನು ಅಷ್ಟೊಂದು ಕೆಟ್ಟವನಾ....?

ಪ್ರೀತಿ ಪ್ರೇಮದ ಬಗ್ಗೆ ನೀನು ಏನೇನೂ ಕಥೆಗಳನ್ನು, ಕಥಾನಾಯಕ/ನಾಯಕಿಯರ ಬಗ್ಗೆ ಹೇಳಿಕೊಂಡಿದ್ದೇನೂ.. ನಾವು ಆ ರೀತಿಯಲ್ಲಿ ಇರೋಣ.. ಈ ರೀತಿಯಲ್ಲಿ ಬಾಳೋಣ.. ಯಾರು, ಯಾವುದೇ ವಿಷ ಘಳಿಗೆ ಬಂದರೂ ಗಟ್ಟಿಯಾಗಿ ಎರಡು ಜೀವ ಒಂದೇ ಪ್ರಾಣವಾಗಿ ಬದುಕೋಣ.. ಎಂದು ಮಾತು ಮಾತಿಗೂ ನೀನು ಹೇಳಿದ್ದೆಲ್ಲಾ ನಿಜಾವಾಗಿಯೂ ಕಥೆ ಮಾತ್ರವಾ?


ಇಂದು ನನಗೆ ಇಂದಿನ ಈ ನಿನ್ನ ನನ್ನ ಬಾಳು-ಬದುಕು ಕಂಡು ನನ್ನ ಮನದಲ್ಲಿ ಕಿಂಚಿತ್ತೂ ಬೇಜಾರಿಲ್ಲಾ.

ಪ್ರೀತಿ ಯಾವತ್ತೂ ಶಾಶ್ವತವಾದದ್ದು. ಎಲ್ಲಿದ್ದರೂ ನೀನು ಸುಖವಾಗಿರಲಿ ಎಂದು ಪ್ರಾರ್ಥಿಸುವ ಮನಸ್ಸು ನನ್ನಲ್ಲಿ ಇದೆಯಲ್ಲಾ ಎಂದು ನನಗೆ ನಾನೇ ಸಮಧಾನಪಟ್ಟುಕೊಳ್ಳುತ್ತಿದ್ದೇನೆ.

ನಿನಗೆ ಇಂದು ಒಬ್ಬ ಗಂಡ ಸಿಕ್ಕಿರಬಹುದು. ಆದರೇ ನಿನ್ನ ಮೊದಲ ಮತ್ತು ಕೊನೆಯ ಪ್ರೇಮಿ ನಾನು  ಮಾತ್ರ ಎಂದು ಅಣೆ ಮಾಡುತ್ತೇನೆ. ಕೊನೆಯವರಿಗೂ ಪ್ರೀತಿಸುವವನು.. ನಿನ್ನ ಏಳ್ಗೆಯ ಬಗ್ಗೆ ಅಚ್ಚರಿಪಡುವ ಪ್ರೀತಿಯ ಹೃದಯ ಮಾತ್ರ ಎಂದೆಂದಿಗೂ ನನ್ನದು.

ಈ ನನ್ನ ಬದುಕೇ ನಿನ್ನದು. ಇದರ ಏಳ್ಗೆ ಬಾಳ್ವೆ ಎಲ್ಲಾ ನಿನಗೆ ಸೇರಿದ್ದು.

ಅದು ಹೇಗೆ ಅದನ್ನೇಲ್ಲಾ ನಿನ್ನ ಮನಸ್ಸಿನಿಂದ ಅಳಿಸಿದೇ ಗೆಳತಿ. ಹೊಸದಾದ ಆ ಮದುವೆ ಎಂಬ ಪ್ರಪಂಚಕ್ಕೆ ಎಷ್ಟು ಸುಲಭವಾಗಿ ಪಾದ ಇಟ್ಟುಬಿಟ್ಟೇ? ನನಗಂತೂ ಇನ್ನೂ ಹಸಿ ಹಸಿಯಾಗಿ ನಿತ್ಯ (ಕಾಣುತ್ತಿದೆ) ಕಾಡುತ್ತಿದೆ .

ಅದು ದೇವರ ಸೃಷ್ಟಿ ಅನಿಸುತ್ತದೆ. ಅಂಥ ದೈರ್ಯ ಸ್ಥೈರ್ಯವನ್ನು ದೇವರು ಸ್ತ್ರೀಯರಿಗೆ ಮಾತ್ರ ಕೊಟ್ಟಿರುವವನು. ಯಾವುದೇ ಸಂಬಂಧವನ್ನು ಶಾಶ್ವತವಾಗಿ ಅಳಿಸಿಕೊಳ್ಳುವ ಬೆಳೆಸಿಕೊಳ್ಳುವ ಶಕ್ತಿಯನ್ನು ನಿಮ್ಮಗಳಿಗೆ ಮಾತ್ರ ಕೊಟ್ಟಿರುವವನು.

ಈ ಪ್ರಪಂಚದಲ್ಲಿರುವ ಒಂದೊಂದು ಅಶಕ್ತ ವಿಫಲ ಪ್ರೀತಿಯ ಗೋಳನ್ನು ಗಂಡು ಜನ್ಮಕ್ಕೆ ಮಾತ್ರ ಮೀಸಲಿಟ್ಟಿರುವವನು ಅನಿಸುತ್ತದೆ. ಅದಕ್ಕೆ ಅಲ್ಲವಾ ಪ್ರೀತಿಯಿಂದ ಹುಚ್ಚರಾಗಿ ಅದರಲ್ಲಿಯೇ ಕೊರಗುತ್ತಾ.. ಹುಡುಗರು ತಮ್ಮ ಮುಂದಿನ ಜನ್ಮವನ್ನು ಕೇವಲ ಸಾರಾಯಿ ಸೀಶೆಯಲ್ಲಿ ತಮ್ಮ ತಮ್ಮ ದೇವಿಯರನ್ನು ಕಾಣುತ್ತಾ ಕಾಣುತ್ತಾ ಕೊನೆಯಾಗುತ್ತಿರುವುದು.

ಇರಲಿ ಬಿಡು ನಮ್ಮ ನಮ್ಮ ಅದೃಷ್ಟಕ್ಕೆ ಯಾರನ್ನೂ ಯಾಕಾದರೂ ಹೊಣೆ ಮಾಡಲಿ...!

ನಿನ್ನೆ ಮುಂಜಾನೆ ಆ ದೇವಸ್ಥಾನದಲ್ಲಿ ನಿನ್ನ ಮುದ್ದು ಮಗಳನ್ನು ಸೂಂಟದ ಮೇಲೆ ಇಟ್ಟುಕೊಂಡು ನೀನು ಬರುತ್ತಿರುವುದನ್ನು ನೋಡಿದೆ. ಮೂರು ವರುಷದ ಹಿಂದೆ ನನ್ನ ನಿನ್ನ ಮಧ್ಯೆ ಇದ್ದ ಪ್ರೀತಿಯ ಆ ಒಂದು ಝರಿ ಹಾಗೆಯೇ ಸುಳಿಯಿತು. ಅದು ಒಂದು ನೆನಪು ಮಾತ್ರ.

ಅದಕ್ಕಾಗಿ  ಈ ಪತ್ರವನ್ನು ಈ ಮೇಲ್ ಮಾಡುತ್ತಿದ್ದೇನೆ. ನೀನು ಇದನ್ನು ಓದಿದ್ದಿಯಾ ಅಂದುಕೊಳ್ಳುತ್ತೇನೆ. ಇದೆ ಮೊದಲ ಪತ್ರ, ಕೊನೆಯದು ಸಹ ಎಂದು ಅನಿಸುತ್ತದೆ...!

ಗೆಳೆಯರು ಪ್ರೇಮಿಗಳಾಗಬಹುದು, ಆದರೆ ಪ್ರೇಮಿಗಳು ಎಂದು ಗೆಳೆಯರಾಗಲಾರರು!

ಯಾವುತ್ತೂ ಒಳ್ಳೆಯದಾಗಲಿ ಎಂದು ಆರೈಸುವ ನಿನ್ನ ಗೆಳೆಯ?

ಶುಕ್ರವಾರ, ಜೂನ್ 1, 2012

ಗುಂಡು ಪುರಾಣ(Little Hangover)


ಎಷ್ಟೊಂದು ಕಷ್ಟಕರವಾಗಿತ್ತು ಅಂದು ನಮ್ಮ ನಮ್ಮ ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ. ಯಾರಿಗೆ? ಎಂದು ಕೇಳುತ್ತಿರಾ.. ಇನ್ಯಾರಿಗೆ!


ಕುಡಿಯುವಂತಹ ಅಭ್ಯಾಸವಿದ್ದವರಿಗೆ. ಆ ದಿನಗಳಲ್ಲಿ ಕುಡಿಯುವವರು ಎಂದರೇ ಸುಲಭವಾಗಿ ಮೂಗು ಮುರಿಯುತ್ತಿದ್ದರು. ಅದು ವಿಪರೀತವಾದ ದುರಾಭ್ಯಾಸವಾಗಿತ್ತು. ಇಂತಹ ಚಟ ಇದ್ದವರನ್ನು ಸಮಾಜದಲ್ಲಿ ತೀರಾಸ್ಕಾರವಾಗಿ ಕಾಣುತ್ತಿದ್ದರು. ಅದ್ದರಿಂದ ಕುಡಿಯುವವರು ಬಹಳ ಸಂಕೋಚಪಟ್ಟುಕೊಳ್ಳುತ್ತಿದ್ದರು.

ಆದರೂ ಕುಡಿಯುವಂತಹ ಅಭ್ಯಾಸವನ್ನು ಅದು ಹೇಗೋ ಕಲಿತು ಬಿಟ್ಟಿರುತ್ತಿದ್ದರು. ಅದಕ್ಕಾಗಿ ನಿತ್ಯ ಅವರುಗಳು ನರಕ ಯಾತನೆಯನ್ನು ಅನುಭವಿಸುತ್ತಿದ್ದರು. ಬಿಡುವುದಕ್ಕೂ ಆಗುತ್ತಿರಲಿಲ್ಲ, ಇಟ್ಟುಕೊಳ್ಳುವುದಕ್ಕೂ ಆಗುತ್ತಿರಲಿಲ್ಲ.

ಹಳ್ಳಿಗಳಲ್ಲಿನ ಸೇಂದಿ ಅಂಗಡಿಗಳೋ.. ಊರಿನ ಹೊರಬಾಗದಲ್ಲಿ. ಅದು ಎಷ್ಟೋ ಕಿಲೋ ಮೀಟರ್ ನಡೆದುಕೊಂಡು ಹೋಗಬೇಕಾಗುತ್ತಿತ್ತು. ಒಂದು ಅಡಸಲು ಪಡಸಲು ಗರಿಯ ಗುಡಿಸಲಿನಲ್ಲಿ, ಬಿಳಿ ಪ್ಲಾಸ್ಟಿಕ್ ಕ್ಯಾನಿನಲ್ಲಿ ಸಾರಾಯಿ ಪಾಕೀಟ್ ಗಳು ಇರುತ್ತಿದ್ದವು. ಅವುಗಳನ್ನು ಕುಡಿಯಲು ಇವರುಗಳು ಅಷ್ಟು ದೂರ ಯಾರಿಗೂ ಗೊತ್ತಾಗದ ರೀತಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅಲ್ಲಿಯೇ ಕುಡಿದು ಸ್ವಲ್ಪ ಹೊತ್ತಾದ ಮೇಲೆ ಮನೆಗಳಿಗೆ ವಾಪಾಸ್ಸಾಗುತ್ತಿದ್ದರು.

ನಡೆದುಕೊಂಡು ಬರುವಾಗ ಯಾರಾದರೂ ಗೊತ್ತಿರುವವರೋ ಊರಿನವರೋ ಎದುರಿಗೆ ಸಿಕ್ಕಿದರೇ ಒಂದೇರಡು ಹೆಜ್ಜೆ ದೂರ ನಿಂತು ಮಾತುಕತೆಯಾಡುತ್ತಿದ್ದರು. ಅದು ಹೆದರಿಕೆಯಿಂದ. ಯಾಕೆಂದರೇ ಕುಡಿದಿರುವ ವಾಸನೆಯೆಲ್ಲಿ ಇವರುಗಳಿಗೆ ತಿಳಿಯುವುದೋ ಎಂಬ ನಾಚಿಕೆಯಿಂದ!!

ಸಭ್ಯ ಸಮಾಜಕ್ಕೆ ಊರಿನಲ್ಲಿ ಕುಡಿಯುವ ಅಂಗಡಿ ಇದೆ ಎಂಬ ನೆನಪೆ ಇರುತ್ತಿರಲಿಲ್ಲ. ಯಾಕೆಂದರೇ ಅದು ಕುಡುಕರಿಗೆ ಮಾತ್ರ ಸಂಬಂಧಿಸಿದ ವಿಷಯವಾಗಿತ್ತು. ಚಿಕ್ಕ ಮಕ್ಕಳಿಗೆ ಮತ್ತು ಸ್ತ್ರೀಯರಿಗೆ ಅದರ ಬಗ್ಗೆ ಖಂಡಿತವಾಗಿ ಏನೊಂದೂ ಏನೂ ತಿಳಿಯುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಇದು ಒಂದು ಹೊರ ಜಗತ್ತಿಗೆ ಸಂಬಂಧಿಸಿದ ವಿಷಯವಾಗಿತ್ತು.


ಒಂದೊಂದು ಹಳ್ಳಿಗಳಲ್ಲಿ ಇಂಥ ಅಂಗಡಿಗಳೇ ಇರುತ್ತಿರಲಿಲ್ಲ. ಈ ಹಳ್ಳಿಯಲ್ಲಿನ ಕುಡಿಯುವವರು ಬೇರೆ ಊರಿಗೆ ಸಂಜೆಯ ವೇಳೆ ಹೋಗಿ ಅಲ್ಲಿನ ಊರ ಹೊರಗಿನ ಅಂಗಡಿಗಳಲ್ಲಿ ಸೇವಿಸಿ ರಾತ್ರಿ ಕಪ್ಪು ಕವಿದ ಮೇಲೆ ತಮ್ಮ ದಾರಿಯನ್ನು ಹಿಡಿದು ಮನೆಗಳಿಗೆ ಸೇರುತ್ತಿರುತ್ತಿದ್ದರೂ.


ಇಷ್ಟೇಲ್ಲಾ ಕಷ್ಟಗಳ ನಡುವೆ ಈ ಅಭ್ಯಾಸವನ್ನು ಬಲು ಅಪರೂಪವಾಗಿ ಯಾವುದೋ ಹಬ್ಬ ಹರಿದಿನಗಳಲ್ಲಿ, ಯಾರಾದರೂ ನೆಂಟರು ಇಷ್ಟರು ಬಂದಾಗ ಅಥವಾ ಸೆಂತೆಗೆ ಹೋದಾಗ ಒಮ್ಮೆ  ಮಾತ್ರ ಅಲ್ಲಿ ಕುಡಿದು ಬರುತ್ತಿದ್ದರು.

ಕುಡುಕರು ನಮ್ಮ ನಡುವೆ ಇದ್ದರು ಸಹ ಅವರುಗಳು ಕುಡುಕರು ಎಂದು ಇನ್ನೊಂದು ಸಮಾಜಕ್ಕೆ ಒಂದೀಷ್ಟು ಸಂಶಯಾತ್ಮಕವಾಗಿ ಪ್ರಙ್ಞೆಗೆ ಬರುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಿದ್ದರು.

ಇದು ಹತ್ತು ಹದಿನೈದು ವರುಷಗಳ ಹಿಂದಿನ ಮಾತು.

ಇಂದು ನಮ್ಮ ಜನಜೀವನದ ಜನಪದ ಶೈಲಿಯೇ ಉಹಿಸಲಾರದಷ್ಟು ಬದಲಾಗಿದೆ. ಚಿಕ್ಕ ಮಗುವಿಗೂ ಅದು ಏನೂ.. ? ಅದನ್ನು ಕುಡಿದರೇ ಏನಾಗುವುದು..? ಯಾಕೇ ಒಂದು ಟ್ರೈ ಮಾಡಬಾರದು. ಎಂಬುವಷ್ಟರ ಮಟ್ಟಿಗೆ ಎಲ್ಲಾ ಮಾಧ್ಯಮಗಳಲ್ಲಿ ಅದರ ಬಗ್ಗೆ ನಿತ್ಯ ಪ್ರದರ್ಶನವಾಗುತ್ತಿದೆ.

ಹಳ್ಳಿಯಿಂದ ಇಡಿದು ಪಟ್ಟಣಗಳವರೆಗೆ ಪಾನ ಸೇವನೆಯ ಶಾಪ್ ಗಳು ಲಕ್ಸುರಿಯಾಗಿ ಗಲ್ಲಿ ಗಲ್ಲಿಗೂ ಸಿಗುತ್ತಿವೆ. ನಮ್ಮ ನಮ್ಮ ಮನೆಯ ಪಕ್ಕದಲ್ಲಿಯೇ ಈ ಅಂಗಡಿಗಳು ನಿತ್ಯ ಕಣ್ಣಿಗೆ ಬೀಳುತ್ತಿವೆ. ಇದು ಒಂದು ಹೋಟೆಲ್, ದಿನಸಿ ಅಂಗಡಿಗಳೋಪಾದಿಯಲ್ಲಿ ನಮ್ಮಗಳಿಗೆ ನಿತ್ಯ ದರ್ಶನ ನೀಡುತ್ತಿವೆ.

ಅಷ್ಟರ ಮಟ್ಟಿಗೆ ಆಕರ್ಷಕವಾಗಿ ಕಣ್ಣು ಕೊರೈಸುವಂತೆ ಮಾಡುತ್ತಿವೆ. ಇದು ನಮ್ಮಗಳನ್ನು ಸೆಳೆಯುವ ಒಂದು ತಂತ್ರವೇ?

ಮುಚ್ಚು ಮರೆಯಲ್ಲಿ ನಡೆಯುತ್ತಿದ್ದ ನಿತ್ಯ ಪಾನಾಭಿಷೇಕ ಇಂದು ರಾಜಾರೋಷವಾಗಿ ಮುಂಜಾನೆಯಿಂದ ಮಧ್ಯರಾತ್ರಿಯವರೆಗೂ ಜರುಗುತ್ತಲೇ ಇರುತ್ತಿದೆ.

ಕುಡಿಯುವ ಅಭ್ಯಾಸ ಅದು ಒಂದು ನಾವು ನಿತ್ಯ ಸೇವಿಸುವ ಚಾ, ಕಾಫಿಯಂತಾಗಿದೆ. ಹಿಂದೆ ನಮ್ಮ ನಮ್ಮ ಹಳ್ಳಿಗಳಲ್ಲಿ ಈ ಅಭ್ಯಾಸ ಕೇವಲ ವಯಸ್ಸಾದ ಪುರುಷರಿಗೆ ಮತ್ತು (ಮಹಿಳೆಯರಿಗೆ) ಅದು ಹಿಂದುಳಿದ ವರ್ಗಗಳಿಗೆ ಮಾತ್ರ ಸೀಮಿತವಾಗಿತ್ತು.

ಅದರೇ ಇಂದು ಇದು ಒಂದು ಲೇವಲ್ ಮನೆಯ ಅಂತಸ್ತನ್ನು ತೋರಿಸುವ ಪರಿಯಾಗಿದೆ. ಯಾರು ಕುಡಿಯುತ್ತಾರೋ ಅವರುಗಳನ್ನು ಸಮಾಜದಲ್ಲಿ ಹೆಚ್ಚು ಆಧಾರದಿಂದ ನೋಡುವಂತಾಗಿದೆ. ಅವರುಗಳು ಹೆಚ್ಚು ಮುಂದುವರಿದಿರುವುದರ ಸಂಕೇತವಾಗಿದೆ?

ಐ.ಟಿ ಬಿ.ಟಿ ಬಂದ ಮೇಲಂತೋ ಇದು ವ್ಯಾಪಾರ, ಬ್ಯುಸಿನೇಸ್ ಗೆ ಅತಿ ಅವಶ್ಯಕವಾದ ಒಂದು ಒಡನಾಡಿಯಾಗಿದೆ.

ನಾವುಗಳು ಕೆಲಸ ಕಾರ್ಯಗಳನ್ನು ಮಾಡುತ್ತಿರುವುದು ವಿದೇಶಿಯರಿಗೆ. ಅವರಿಂದ ನಾವುಗಳು ಕೆಲಸ ಪಡೆಯಬೇಕೆಂದರೇ.. ಅವರನ್ನು ಮೆಚ್ಚಿಸಬೇಕೆಂದರೇ.. ನಾವುಗಳು ಒಂದು ಎರಡು ಪೆಗ್ ಹಾಕುವ ಪಾರ್ಟಿಗಳನ್ನು ಆಯೋಜಿಸಬೇಕು. ಅವರ ಜೊತೆಗೆ ಕಂಪನಿಯನ್ನು ಕೊಡಬೇಕು. ಆಗ ಅವರುಗಳು ಇಂಪ್ರೇಸ್ ಆಗುತ್ತಾರೆ. ನಮ್ಮ ನಮ್ಮ ನಡುವೆ ದಾರಳತನ ಹೆಚ್ಚುತ್ತದೆ. ಅಷ್ಟರ ಮಟ್ಟಿಗೆ ಆಟ್ಯಾಚ್ ಮೆಂಟ್ ಬೆಳೆಯುತ್ತದೆ ಎನ್ನುತ್ತದೆ ಇಂದಿನ ಲೋಕ!!

ಇಲ್ಲವೆಂದರೇ ಏನೋ ನೀನು ಐ.ಟಿಯಲ್ಲಿ ಇದ್ದೀಯ ಇದು ಕಲಿತಿಲ್ಲವಾ? ವೇರಿ ಬ್ಯಾಡ್! ಎಂದು ಹಂಗಿಸುತ್ತಾರೆ.

ಇಂದು ವಿವಿಧ ರೀತಿಯ ಬ್ರ್ಯಾಂಡ್ ಗಳಲ್ಲಿ ಮಧ್ಯ ದ ಪ್ರವಾಹವೇ ನಮ್ಮ ಬಳಿಗೆ ಹರಿದು ಬರುತ್ತಿದೆ. ಹೆಚ್ಚು ಹೆಚ್ಚು ದುಭಾರಿಯಾದ ಪೇಯಗಳು ವಿದೇಶದಿಂದ ಅಮದು ಆಗುತ್ತಿವೆ.

ನೀವು ಗಮನಿಸಿರಬೇಕು. ಅದು ಎಷ್ಟೋ ಸಾವಿರ ಲೀಟರ್ ಮಧ್ಯ ವಾರಾಂತ್ಯದ ಶುಕ್ರವಾರ, ಶನಿವಾರಗಳಂದು ಖರ್ಚಾಗುತ್ತದೆ ಎಂದರೇ.. ಯೋಚಿಸಿ ಅದು ಎಷ್ಟರ ಮಟ್ಟಿಗೆ ಒಂದು ಜೀವ ನಾಡಿಯಾದಂತ ಪೇಯವಾಗಿದೆ.

ಬದುಕಿನ ಎಲ್ಲಾ ಜಂಜಾಟಕ್ಕೆ ತತ್ ಕ್ಷಣ ಮುಕ್ತಿಯೆಂದರೇ ಈ ಗುಂಡಿನ ಪಾರ್ಟಿ! ಗಂಡು ಹೆಣ್ಣು ಎಂಬ ಬೇದವಿಲ್ಲದೇ ಅದು ಅತ್ಯುತ್ತಮವಾದ ರೆಸ್ಟೋರೆಂಟ್ ಗಳಲ್ಲಿ  ಅದು ಸಹ ಕುಟುಂಬ ಸಮೇತ ಕುಳಿತು ಚೆನ್ನಾಗಿ ಹೀರಬಹುದು.

ಅಷ್ಟರ ಮಟ್ಟಿಗೆ ನಾವುಗಳು ಮುಂದುವರೆದಿದ್ದೇವೆ. ಕುಡಿತದ ಬಗ್ಗೆ ಇದ್ದಂತಹ ಹತ್ತು ಹದಿನೈದು ವರುಷಗಳ ಹಿಂದಿನ ಸ್ಥಿತಿಗೂ, ಇಂದಿನ ಸ್ಥಿತಿಗೂ ಮತ್ತು ಇಂದಿನ ಯೋಚನೆಗೂ ನಿಲುಕದ ರೀತಿಯಲ್ಲಿ ವ್ಯತ್ಯಾಸ ಮತ್ತು ಕ್ರಾಂತಿಯಾಗಿದೆ.

ಯುವತಿಯರು ಮತ್ತು ಯುವಕರು ಇದರ ಬಗ್ಗೆ ಇರುವಂತಹ ಮಡಿವಂತಿಕೆಯನ್ನು ಎರಡು ಮೂರು ಪೇಗ್ ನಿಂದ  ಸಂಪೂರ್ಣವಾಗಿ ತೊಳೆದು ಬಿಟ್ಟಿದ್ದಾರೆ.


ಒಮ್ಮೊಮ್ಮೆ ಕುಡಿಯುವುದರಿಂದ ಏನೂ ಆಗುವುದಿಲ್ಲ. ಅದರೇ ಸಂಪೂರ್ಣ ಮಧ್ಯ ವ್ಯಸನಿಗಳಾಗಬಾರದು ಅಷ್ಟೇ. ಎಂದು ಪ್ರತಿಯೊಬ್ಬರೂ ಅದರ ಬಗ್ಗೆ ಇರುವ ಒಳ್ಳೆಯ ಥೇಯರಿಯನ್ನು ಕೇಳುವವರಿಗೆಲ್ಲಾ ಒಪ್ಪಿಸುತ್ತಾರೆ.

ಕುಡಿಯುವುದು ಗೊತ್ತಿಲ್ಲದವನೂ ಇಂದಿನ ಸಮಾಜದಲ್ಲಿ ಜೀವಿಸುವುದಕ್ಕೆ ಅರ್ಹನಲ್ಲ! ಎಂಬುವಷ್ಟರ ಮಟ್ಟಿಗೆ ಗಂಡು ಹೆಣ್ಣು ತಮ್ಮ ತಮ್ಮನ್ನೂ ಅದರಲ್ಲಿ ಅಮೊಲಾಗ್ರವಾಗಿ ನೆನಸಿಕೊಂಡುಬಿಟ್ಟಿದ್ದಾರೆ.

"ಎಸ್, ಒಮ್ಮೆ ಟೇಸ್ಟ್ ನೋಡಿದ್ದೇನೆ. ಕುಡಿಯುತ್ತೇನೆ! ಯಾರಾದರೂ ಪಾರ್ಟಿ ಗೀರ್ಟಿ ಕೊಟ್ಟಾಗ ಅದರಲ್ಲಿ ನಮ್ಮನ್ನು ನಾವುಗಳು ತೊಡಗಿಸಿಕೊಂಡು ಎಂಜಾಯ್ ಮಾಡುವಾಗ ಒಂದೇರಡು ಪೆಗ್ ಹಾಕುತ್ತೀನಿ." ಎಂದು ಯಾವುದೇ ಕಸಿವಿಸಿಯಿಲ್ಲದೇ ಹೇಳಿಕೊಳ್ಳುವಷ್ಟರ ಮಟ್ಟಿಗೆ ನಾವುಗಳು ಮುಂದುವರೆದಿದ್ದೇವೆ.

ಇದು ಒಂದು ಜೀವನದ ಭಾಗವಾಗಿರುವುದರಿಂದ. ಯಾರ ಅಂಜಿಕೆಯಿಲ್ಲದೇ ರಸ್ತೆಯಲ್ಲಿ ಯುವಕರು ಕೈಯಲ್ಲಿ ಬಾಟಲಿಯನ್ನು ಹಿಡಿದುಕೊಂಡು ಅದು ಬೇರೆ ಜ್ಯೂಸ್ ರೀತಿಯಲ್ಲಿ ಸೇವಿಸುವ ದೃಶ್ಯವನ್ನು ಬೆಂಗಳೂರಿನಂತಹ ಪಟ್ಟಣಗಳಲ್ಲಿರುವ ಪ್ರತಿಯೊಬ್ಬರೂ ಕಂಡೇ ಕಂಡಿರುತ್ತೀರಿ!! ಅದು ಹಗಲಾಗಿರಲಿ ಇರುಳಾಗಿರಲಿ ಯಾವುದೇ ಮೂಲಾಜು ಇಲ್ಲದೆ.

ಇದೆ ಅಲ್ಲವಾ ಬದಲಾವಣೆಯೆಂದರೇ!!?