ಗುರುವಾರ, ಜನವರಿ 26, 2012

ಫೀಶ್ ಮಾರ್ಕೆಟ್

ಕಾರ್ಪೊರೆಟ್ ಜಗತ್ತಿನಲ್ಲಿ ಕೆಲಸ ಕೆಲಸ ಮತ್ತು ಕೆಲಸ ಅನ್ನಿಸುವಂತಹ ವಾತವರಣವಿರುತ್ತದೆ. ಅಲ್ಲಿ ಮಾಡುವ ಕೆಲಸ ಬಿಟ್ಟು ಬೇರೆ ಯಾವ ವಿಷಯಗಳನ್ನು ಯೋಚಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಕಂಪ್ಯೂಟರ್ ಸ್ಕ್ರೀನ್ ಮುಂದೆ ಜಗತ್ತೇ ತನ್ನ ತಲೆ ಮೇಲೆ ಬಿದ್ದಿರುವಂತೆ ಕುಳಿತಿರುತ್ತಾರೆ. ಅಷ್ಟರ ಮಟ್ಟಿಗೆ ಎಂಟು ಗಂಟೆಗಳ ಕಾಲ, ಹೆಚ್ಚು ಕಡಿಮೆಯಾದರೇ ಹಗಲು ರಾತ್ರಿ ತಮ್ಮ ಕೆಲಸವನ್ನು ಮುಗಿಸಿಯೇ ಹೊರಗಡೆ ಹೆಜ್ಜೆ ಇಡಬೇಕಾಗುತ್ತದೆ.

ಇದು ಎಮ್.ಎನ್.ಸಿ, ಐ.ಟಿ, ಬಿ.ಪಿ.ಓ ಗಳ ಕೆಲಸದ ಶೈಲಿ.

ಅಷ್ಟರ ಮಟ್ಟಿಗೆ ಸಂಬಳವನ್ನು ಪಡೆಯುವೆವು ಅಂದರೇ ಅಷ್ಟೇ ಬೆಲೆಯ ಕೆಲಸದ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಅನುಭವಿಸಲೇ ಬೇಕು.

ಪ್ರತಿ ತಿಂಗಳ ಕೆಲಸದ ಸಾಧನೆ, ಅಪ್ರೈಸಲ್, ರೀವ್ಯೂವ್ ರೀಪೋರ್ಟ್ ಇತ್ಯಾದಿಗಳ ಒತ್ತಡವಿರುತ್ತದೆ ಮತ್ತು ಇವುಗಳು ಅವನ ಮುಂಬಡ್ತಿ, ಸಂಬಳದ ಹೆಚ್ಚಳ ಮುಂತಾದವುಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.

ಈ ರೀತಿಯಲ್ಲಿ ಅಲ್ಲಿ ಕೆಲಸ ಮಾಡುವ ನಮ್ಮ ಹುಡುಗ ಹುಡುಗಿಯರ ಯುವ ಮನಸ್ಸುಗಳು ೫ ದಿನಗಳು ಆಫೀಸ್ ಕೆಲಸ ಬಿಟ್ಟು ಬೇರೆಯದನ್ನು ಯೋಚಿಸಿದರೇ ಕೇಳಿ. ಯೋಚಿಸಲು ಸಾಧ್ಯವಿಲ್ಲ ಬಿಡಿ.ಒಮ್ಮೆ ಅಲ್ಲಿನ ಕ್ಲೋಸ್ಡ್ ಎ.ಸಿ ರೋಮ್ ನಲ್ಲಿ ಕುಳಿತರೇ ಮುಗಿದೇ ಹೋಯ್ತು ತಾನಾಯಿತು ತನ್ನ ಕಂಪ್ಯೊಟರ್ ಮತ್ತು ತಾನು ಕೆಲಸ ಮಾಡುವ ಕ್ಲೈಂಟ್ ಗಳ ಜೊತೆಯ ಅದು ಇದು ಕಾಲ್ಸ್, ಮೀಟಿಂಗ್ ಇಷ್ಟೇ.

ಈ ರೀತಿಯ ನಿತ್ಯ ನಿರಂತರ ಓಟ ಒಂದಾರೇಕ್ಷಣ ಸೃಜನಶೀಲ ಮನಸ್ಸುಗಳಿಗೆ ಘಾಸಿಯನ್ನುಂಟು ಮಾಡಿಯೇ ಮಾಡುತ್ತದೆ. ಅದು ಹೊಸದಾಗಿ ಕೆಲಸಕ್ಕೆ ಸೇರಿದ ಮನಸ್ಸುಗಳಿಗೆ ಅನಿಸುತ್ತದೆ. ಆದರೇ ಬರುತ್ತಾ ಬರುತ್ತಾ ಅದೇ ಅಭ್ಯಾಸವಾಗಿಬಿಡುತ್ತದೆ. ಆದರೂ ಒಂದು ಕ್ಷಣ ತಾನು ಕಳೆದ ದಿನಗಳನ್ನು ಹಿಂತಿರುಗಿ ನೋಡಿದಾಗ ಸುಮಾರು ಜೀವನದ ಅತ್ಯಂತ ಅಮೂಲ್ಯವಾದ ಕ್ಷಣಗಳನ್ನು, ಜೀವಗಳನ್ನು ತುಂಬಾನೇ ಮೀಸ್ ಮಾಡಿಕೊಂಡಿದ್ದೀವಿ ಅನಿಸುತ್ತದೆ.

ಎಂ. ಎನ್. ಸಿ ಗಳಲ್ಲಿ ಕೆಲಸ ಮಾಡುವವರಿಗೆ ಇವುಗಳೆಲ್ಲಾ ಅತ್ಯಂತಹ ಹತ್ತಿರವಾದಂತಹ ಅನುಭವಗಳು. ಎಲ್ಲದೂ ತುಂಬಾನೇ ಕೃತಕತೆ ಅನಿಸುತ್ತದೆ. ನಗಬೇಕು ಅನಿಸಿದಂತಹ ಸಮಯದಲ್ಲಿ ನಗಬೇಕಾದಂತಹದ್ದು, ಸಂಯಮದಿಂದ ಇರಲಾರದಂತಹ ಸಮಯದಲ್ಲಿ ಸಂಯಮದಿಂದ ವರ್ತಿಸಬೇಕಾದದ್ದು.. ಹೀಗೆ ಪ್ರತಿಯೊಂದು ಒಂದು ರೀತಿಯ ಸಪೋಸ್ಟಿಕೆಟೆಡ್ ಆದಂತಹ ನಮ್ಮ ಗುಣಾವಾಗುಣಗಳನ್ನು ಹೊಂದಿಸಿಕೊಳ್ಳಬೇಕೇ ಬೇಕು.

ಈ ರೀತಿಯ ನಿತ್ಯ ಯಾಂತ್ರಿಕವಾದ ರೋಟಿನ್ ಆದ ಆಫೀಸ್, ಕೆಲಸ, ಅದೇ ಸಹ ಉದ್ಯೋಗಿಗಳ ಮುಖ, ಅದೇ ಬಾಸ್, ಅದೇ ಉಟ, ಅದೇ ವೇಂಡಿಂಗ್ ಮೇಷಿನ್ ಕಾಫಿ, ಅದೇ ಅದೇ ಮುನ್ನೂರೈವತ್ತು ದಿನ - ಕಾಲ ಅದೇ ಮಾತ್ರ. ಯಾವುದೇ ಕಂಪನಿಯನ್ನು ಸೇರಿದರೂ ಒಂದೇ ಮಂತ್ರ. ಯು ಶುಡ್ ರನ್ ರನ್.. ಮ್ಯಾನ್!

ಇದು ಪೂರ್ಣವಾಗಿ ಬೋರ್...... ಅನಿಸುತ್ತದೆ.




ಈ ರೀತಿಯ ಮನಸ್ಸನ್ನು ಬದಲಾಯಿಸುವಂತಹ, ಕೆಲಸ ಮಾಡುವ ನಮ್ಮ ಜಾಗಗಳಲ್ಲಿ ಒಂದು ಕಿರುನಗೆಯ ಉತ್ಸಾಹವನ್ನು ಕೊಡುವಂತಹ ಒಂದು ಪಾಠವೇ ಪ್ರಸಿದ್ಧ ಫಿಶ್ ಫೀಲಾಸಪಿ.

ಈ ರೀತಿಯ ಯಾಂತ್ರಿಕ ಏಕಾತನತೆಯ ಕೆಲಸ, ಜಾಗ, ಸಹ ಉದ್ಯೋಗಿಗಳ ಮುಖಗಳನ್ನು ಕಂಡು ಕಂಡು ಬೇಜಾರದ ಒಬ್ಬ ಉದ್ಯೋಗಿ ಕಂಡುಕೊಂಡ ನೀತಿ ಪಾಠ ಇದಾಗಿದೆ.

ಒಂದು ದಿನ ಇದೇ ಉದ್ಯೋಗಿ ತಾನು ಈ ಜಾಗದಿಂದ ಅದಷ್ಟು ಬೇಗ ಹೊರಗಡೆ ಹೋದರೆ ಮಾತ್ರ ಖುಷಿಯಾಗುತ್ತದೆ, ಎಂದು ಬೇಸರವನ್ನು ಕಳೆಯಲು ಆಫೀಸಿನಿಂದ ಸ್ವಲ್ಫ ದೂರ ಹಾಗೆಯೇ ನಡೆದುಕೊಂಡು ಹೋಗುತ್ತಿತ್ತಾನೆ. ಅಲ್ಲಿ ಬಂದರು ತೀರದಲ್ಲಿ ಸಾಕಷ್ಟು ಗಲಾಟೆ ನಡೆಯುತ್ತಿರುತ್ತದೆ... ಅದೂ ಬಿಸಿ, ಬಿಸಿಯ ವಾತವರಣವಾಗಿರುತ್ತದೆ. ಅಲ್ಲಿ ಎಲ್ಲಾರು ಚಟುವಟಿಕೆಯಿಂದ ತಮ್ಮನ್ನೇ ತಾವು ಮೈ ಮರೆತು ಜೋರಾಗಿ ಮೀನುಗಳ ವ್ಯಾಪಾರವನ್ನು ಮಾಡುತ್ತಿರುತ್ತಾರೆ.

ಈಗಾಗಲೇ ನಿಮಗೆ ಅರ್ಥವಾಗಿರಬೇಕು. ಅದು ಒಂದು ಫೀಶ್ ಮಾರ್ಕೆಟ್ ಎಂದು. ಅಲ್ಲಿಯ ವ್ಯಾಪರಸ್ಥರ ಮಾತಿನ ಚಾಕಚಕ್ಯತೆ.. ಗ್ರಾಹಕರ ಜೊತೆಯಲ್ಲಿನ ಅವರ ನಡಾವಳಿ ಮತ್ತು ನಗು ಮುಖದ ಮಾತುಕತೆ. ಪ್ರತಿಯೊಬ್ಬರೂ ತಾಜಾವಾಗಿ ತಮ್ಮನ್ನು ತಾವು ಮರೆತು ಉತ್ತಮವಾದ ವ್ಯಾಪಾರವನ್ನು ನಡೆಸುತ್ತಿರುತ್ತಾರೆ.

ಈ ಐ.ಟಿ ಉದ್ಯೋಗಿಗೆ ತುಂಬಾ ಆಶ್ಚರ್ಯವಾಗುತ್ತದೆ. ಅಲ್ಲಾ! ಇಷ್ಟೊಂದು ಕೆಟ್ಟ ವಾಸನೆ, ಕೊಳಕು, ಅಸಹ್ಯವಾದ, ಗಲೀಜು ಜಾಗ ಇದಾಗಿದೆ. ಅದಷ್ಟು ಬೇಗ ಈ ಪರಿಸರದಿಂದ ಬಹುದೂರ ಓಡಿ ಹೋದರೇ ಸಾಕು ಅನಿಸುವಂತಹ ನೋಟವಿದು. ಆದರೋ ಇಲ್ಲಿನ ಪ್ರತಿಯೊಬ್ಬರೂ ತಾವು ಹಿಡಿದ ಮೀನುಗಳನ್ನು ಅಲ್ಲಿಂದ ಇಲ್ಲಿಗೆ ತೂರಿಕೊಂಡು ಆಟವಾಡುತ್ತಾ ಗ್ರಾಹಕರ ಜೊತೆಯಲ್ಲಿ ಖುಷಿಯಾಗಿ, ಆನಂದದಿಂದ ಮೀನುಗಳ ಗುಣಗಾನ ಮಾಡಿಕೊಳ್ಳುತ್ತಾ ತಮ್ಮ ವ್ಯಾಪಾರವನ್ನು ನಿತ್ಯ ನಡೆಸುವವರಲ್ಲಾ ಏನಿದು ಇದರ ಮರ್ಮ? ಎಂದು ಯೋಚಿಸಿದಾಗ ಇವರಿಗೆ ಅತಿ ಸರಳವಾದ ನಾಲ್ಕು ಅಂಶಗಳ ಹೊಳೆಯುತ್ತವೆ.

ಈ ಪರಿಸರಕ್ಕೆ ಹೊಲಿಸಿದರೇ ನಾನು ಕೆಲಸ ಮಾಡುವ ಜಾಗ ನೂರಕ್ಕೆ ನೂರರಷ್ಟು ಹೆಚ್ಚು ಉನ್ನತವಾದದ್ದು ಮತ್ತು ಸಹನೀಯವಾದದ್ದು. ಒಂದಷ್ಟು ಬದಲಾವಣೆಯ ಸೆಲೆ ನನ್ನಲ್ಲಿ ಬೇಕಿದೆ. ಆಗ ಮಾತ್ರ ಈ ಬೋರ್ ಭಾವನೆಯಿಂದ ಹೊರಬಂದು ನಾವು ಖುಷಿಯಾಗಿ, ನಮ್ಮ ಸೇವೆಯನ್ನು ಪಡೆಯುತ್ತಿರುವ ನಮ್ಮ ಗ್ರಾಹಕರ ಮನವನ್ನು ತಣಿಸಬಹುದು ಅನಿಸುತ್ತದೆ.

ಆ ನಾಲ್ಕು ಅಂಶಗಳ ಮುಖ್ಯ ಸಾರಂಶವೇ ಇಂದಿನ ನಮ್ಮ ಕಾರ್ಪೊರೇಟ್ ರಂಗದಲ್ಲಿ ಹೆಚ್ಚು ಪ್ರಸಿದ್ಧಿಯಾದ ಫಿಶ್ ಫೀಲಾಸಫಿ.

೧. ಉತ್ತಮವಾದ ಪಾಸೀಟಿವ್ ಭಾವನೆಯನ್ನು ಮನದಲ್ಲಿ ಇಟ್ಟುಕೊಳ್ಳಬೇಕು. ಯಾಕೆಂದರೇ ನಾವುಗಳು ಕೆಲಸ ಮಾಡುವ ಜಾಗಗಳನ್ನು ಬದಲಾಯಿಸುವುದಕ್ಕಿಂತಹ ನಮ್ಮಗಳ ನೋಟವನ್ನು ಬದಲಾಯಿಸಿಕೊಳ್ಳುವುದು ಅತಿ ಸುಲಭ.

೨. ಅತ್ಯಂತಹ ಹೆಚ್ಚು ಆಲರ್ಟ ಆಗಿರಬೇಕು.. ಅಂದರೇ ಚುರುಕಾದಂತಹ ಮನಸನ್ನು ಹೊಂದಿರಬೇಕು.

೩. ನಾವುಗಳು ಮಾಡುವ ಕೆಲಸದ ಅಥವಾ ಮಾತಿನ ಮೂಲಕ ಬೇರೆಯವ ದಿನವನ್ನಾಗಿ ಮಾಡಿ. ಬೇರೆಯವರಿಗೆ ಸಹಾಯ ಹಸ್ತವನ್ನು ಕೊಡುವ ಮೂಲಕ ರುಚಿಯನ್ನು ನಾವುಗಳು ಸವಿಯಬಹುದು.

೪.ಸುತ್ತಲಿನಲ್ಲಿರುವವರ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಿ. ಆಗ ನೋಡಿ ನಿಮ್ಮ ಬಗ್ಗೆ ನೀವಲ್ಲದೇ ಬೇರೆಯವರು ಸಹ ಯೋಚಿಸುವವರು.

ಈ ರೀತಿಯ ಸರಳವಾದ ಯಾರಾದರೂ ಅಳವಡಿಸಿಕೊಳ್ಳಬಲ್ಲಂತಹ ನಡೆಗಳನ್ನು ನಮ್ಮ ಕೆಲಸ ಕಾರ್ಯದಲ್ಲಿ ಇಟ್ಟುಕೊಂಡರೇ ನಾವುಗಳು ಮಾಡುವಂತಹ ಕೆಲಸದಲ್ಲಿ ಹೊಸದನ್ನು ಕಲಿಯಬಹುದು. ಹೊಸತನವನ್ನು ಹೊಂದಿರುವ ಮನಸ್ಸು ಯಾವಾಗಲೂ ಸುತ್ತಲಿನ ವಾತವರಣವನ್ನು ಹಚ್ಚ ಹಸಿರಾಗಿರುವಂತೆ ನೋಡಿಕೊಳ್ಳುತ್ತದೆ. ಈ ರೀತಿಯ ಬದಲಾವಣೆಯ ಮೊತ್ತ ನಾವುಗಳು ಮುಗಿಸುವ ಕೆಲಸದಲ್ಲಿ ಪ್ರತಿಫಲವಾಗಿರುತ್ತದೆ. ಇದನ್ನು ನೋಡಿದ ಬಾಸ್ ಆಗಿರಲಿ, ಕ್ಲೈಂಟ್ ಆಗಿರಲಿ ಖುಷಿಯಾಗಿಯೇ ಆಗುತ್ತಾರೆ.

ಯೋಚಿಸಿ ಒಂದು ಕಡೆ ಒಂದು ಚಿಕ್ಕ ರಿಪೇರಿಯಾದರೇ ಅದಕ್ಕೆ ಸಂಬಂದಿಸಿದ ಎಲ್ಲಾ ಕೊಂಡಿಗಳು ನವೀಕರಣಗೊಳ್ಳುತ್ತವೆ.

ಲೆಟ್ಸ್ ಟ್ರೈ ಇಟ್!!!!

ಗುರುವಾರ, ಜನವರಿ 19, 2012

ಒಂದು ಬಟನ್ ಒತ್ತಿದರೇ ಸಾಕು

ಅದು ಎಲ್ಲರಿಗೂ ಬರುವುದಿಲ್ಲ ಅನಿಸುತ್ತೆ. ಒಂದೇ ಕ್ಷಣಕ್ಕೆ ಎಂಥವರ ಮನಸ್ಸನ್ನಾದರೂ ಗೆಲ್ಲುವ ಚಾತುರ್ಯವಿರುತ್ತದೆ. ಅವರನ್ನು ನೋಡಿ. ತಮ್ಮ ಮಾತಿನ ಮೂಲಕ ಕ್ಷಣಾರ್ಧದಲ್ಲಿಯೇ ಎಂಥಾ ಹೊಸಬರನ್ನು ತಮ್ಮ ಜೊತೆಯಲ್ಲಿ ಮಾತನಾಡಿಸಲು ಕೆಡವಿಕೊಂಡುಬಿಟ್ಟಿರುತ್ತಾರೆ.

ಮಾತನ್ನೇ ಹಾಡದವರನ್ನು ಮಾತುಗಾರನ್ನಾಗಿ ಮಾಡಿಕೊಂಡು ಹಾಗೆ ಹೀಗೆ ಕುಶುಲೋಪರಿ ವಿಚಾರಿಸಲು ಪ್ರಾರಂಭಿಸಿಬಿಡುತ್ತಾರೆ. ನಿಮಗೆ ಗೊತ್ತಿರುತ್ತದೆ ಇಂಥ ವ್ಯಕ್ತಿಗಳು ನಮ್ಮ ಶಾಲೆ ಮತ್ತು ಕಾಲೇಜು ದಿನಗಳಲ್ಲಿಯೇ ಹೆಸರುವಾಸಿಯಾಗಿಬಿಟ್ಟಿರುತ್ತಾರೆ. ಅದಕ್ಕೆ ಲೋಕ ನುಡಿ ಇದೆ "ಕಲ್ಲನ್ನು ಮಾತನಾಡಿಸಿಬಿಡುತ್ತಾನೆ ಬಿಡಿ"

ನಾವುಗಳು ಸುಮ್ಮನೇ ಅವರನ್ನು ಹೊಗಳುತ್ತಿರುತ್ತೆವೆ ಅದನ್ನು ಅವರು ಪ್ಲಸ್ ಪಾಯಿಂಟು ಅಂದುಕೊಂಡು ಅದನ್ನು ಮುಂದುವರಿಸಿಕೊಂಡು ಅದರಲ್ಲಿಯೇ ಪಳಗಿಬಿಟ್ಟುಬಿಡುತ್ತಾರೆ.

ಹೊಸಬರನ್ನು ಸುಖ ಸುಮ್ಮನೇ ಕಂಡ ತಕ್ಷಣ ಪರಿಚಯ ಮಾಡಿಕೊಳ್ಳುವುದು ಎಂಥ ಸಾಮಾನ್ಯರಿಗೂ ಅಸಾಧ್ಯ. ಅದೂ ಕಣ್ಣಿಗೆ ಬಿದ್ದ ಮೊದಲೇ ಎಲ್ಲಾ ಕುಲ್ಲಂ ಕುಲ್ಲಾ ಹರಟೆಯನ್ನು... ಕಲ್ಪಿಸಿಕೊಳ್ಳುವುದು ಅಸಾಧ್ಯ!

ಆದರೇ ಹಾಗೇ ಮಾಡಿಕೊಳ್ಳುವುದು ಒಬ್ಬೂಬ್ಬರಿಗೆ ತೀರಾ ಸಾಮಾನ್ಯ ಎನಿಸುತ್ತದೆ.

ನಮ್ಮ ಕಾಲೇಜಿಗೆ ಹೊಸದಾಗಿ ಸೇರಿದ ಹುಡುಗಿಯರ ಬಯೋಡಾಟನೇ ಮೊದಲ ದಿನವೇ ಇಂಥವರ ಬಳಿ ಇರುತ್ತದೆ. ನಮಗೆಲ್ಲಾ ಒಂದು ಕ್ಷಣ ಆಶ್ಚರ್ಯ! "ಹೇ, ಇಷ್ಟು ಬೇಗ ಅವಳ ಬಗ್ಗೆ ಎಲ್ಲಾ ಚರಿತ್ರೆಯನ್ನೇ ಕೂಡಿ ಹಾಕಿದಿಯಲ್ಲಪ್ಪಾ" ಎಂದು ಹುಬ್ಬೇರಿಸುವುದೇ ನಮ್ಮ ಕೆಲಸ.

ಈ ರೀತಿಯ ತೀರಾ ಸೋಶಿಯಲ್ ಭಾವನೇ ಒಮ್ಮೊಮ್ಮೆ ಉಪಯುಕ್ತಕರವಾಗಿರುತ್ತದೆ. ಹಾಗೆಯೇ ಅವರನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಾರೆ.

ಅವರ ಯಾವುದೇ ಗಾಂಭಿರ್ಯವಿಲ್ಲದ ನಡೆಯನ್ನು ಜಾಸ್ತಿಯಾಗಿ ಹುಡುಗಿಯರು ಮೀಸ್ ಯುಜ್ ಮಾಡಿಕೊಂಡಿರುವುದನ್ನು ಸಾಮಾನ್ಯವಾಗಿ ನಾವುಗಳು ನೋಡಬಹುದು.

ಅವರ ಆ ಸಲಿಗೆಯನ್ನು ತಮ್ಮ ಕೆಲಸ ಕಾರ್ಯಗಳಿಗಾಗಿ, ಅನುಕೂಲಕ್ಕೆ ತಕ್ಕ ಹಾಗೇ ಬಳಸಿಕೊಳ್ಳುವುದು. ಈ ರೀತಿಯ ವ್ಯಕ್ತಿಗಳ ಮನದಲ್ಲಿ ಆ ಹುಡುಗಿಯ ಬಗ್ಗೆ ಸುಂದರ ಚೆಲುವಿನ ಚಿತ್ತಾರದ ರಂಗೋವಲಿಯನ್ನು ಮನದ ಮೂಲೆಯಲ್ಲಿ ಹಾಕಿಕೊಂಡು, ತನ್ನನ್ನು ತಾನೇ ಆ ಹುಡುಗಿಯರ ಸೇವೆಗೆಂದೇ ನಾನಿರುವುದು ಎಂದು ಕೊಂಡು ತಮ್ಮ ಬದುಕನ್ನು ಯಾರು ನಿರೀಕ್ಷಿಸದ ಮಟ್ಟಕ್ಕೆ ಅಸಹನೀಯವಾಗಿ ಮಾಡಿಕೊಂಡುಬಿಡುತ್ತಾರೆ.

ಇಂಥ ಸ್ವಭಾವ ಒಂದು ರೀತಿಯಲ್ಲಿ ಒಳ್ಳೆಯದು. ಹಾಗೆಯೇ ಒಂದೊಂದು ಸಲ ಬೇರೆಯವರ ಬಾಯಿಯಲ್ಲಿನ ಮಾತಿನ ವಸ್ತುವಾಗಿಬಿಡುವುದು ವಿಪರ್ಯಾಸ.

ಗೆಳೆಯರು ಕೇಳಬೇಕಾ.. ಏನಾಮ್ಮ ಒಂದೇ ದಿನದಲ್ಲಿ ಆ ಹುಡುಗಿಯನ್ನು ನಿನ್ನವಳನ್ನಾಗಿ ಮಾಡಿಕೊಂಡುಬಿಟ್ಟಿದ್ದೀಯಾ.. ಬಿಡಪ್ಪಾ ನಿನ್ನ ಕೇಳಬೇಕಾ.. ಅದು ಹೇಗೆ ಅಷ್ಟು ಬೇಗ ಅವಳು ನಿನ್ನ ನಂಬಿದ್ಲಮ್ಮಾ.. ಹೀಗೆ ಕೇಳುವ ಸುತ್ತಲಿನವರ ಪ್ರಶ್ನೇಗಳು ಇವನನ್ನು ನಿಜವಾಗಿಯು ಅವಳು ತನ್ನನ್ನು ಪ್ರೀತಿಸಲೂ ಪ್ರಾರಂಭಿಸಿದ್ದಾಳೆಂದು ಅಂದುಕೊಳ್ಳಲೂ ಶುರುಮಾಡುತ್ತಾನೆ.

ಮತ್ತೇ ಯೋಚಿಸುತ್ತಾನೆ. ಇಷ್ಟೊಂದು ಹುಡುಗರನ್ನೆಲ್ಲಾ ಬಿಟ್ಟು ತನ್ನ ಜೊತೆಯಲ್ಲಿಯೇ ಅವಳು ತಿನ್ನುವುದು, ಕುಡಿಯುವುದು, ಓದುವುದು, ಮಾತನಾಡುವುದು, ನಡೆಯುವುದು ಅಂದರೇ ಅದು ಅದೇ ಎಂಬ ಭಯಂಕರ ಕಲ್ಪನೆಗೆ ಬಂದು ನಿಂತುಬಿಡುತ್ತಾನೆ.

ಈ ರೀತಿಯ ಹುಡುಗಿಯ ಮೂವ್ ಇವನ ತಲೆಯನ್ನು ಎಲ್ಲಿಗೋ ತೆಗೆದುಕೊಂಡು ಹೋಗಿಬಿಟ್ಟಿರುತ್ತದೆ. ಇವನು ಅದನ್ನು ಬಿಟ್ಟು ಬೇರೆಯ ತರ್ಕವನ್ನೇ ಮಾಡುವುದಿಲ್ಲ.

ಇರಬೇಕು ಅವಳು ಮುಂಜಾನೆ ಒಂದು ಮೇಸೆಜ್, ಮನೆ ಬಿಟ್ಟ ಮೇಲೆ ಒಂದು ಮೇಸೆಜ್, ಕಾಲೇಜು ತಲುಪಿದ ಮೇಲೆ ಒಂದು ಮೇಸೆಜ್.. ಹೀಗೆ ರಾತ್ರಿ ತಾನು ಹಾಸಿಗೆಗೆ ಹೋಗುವವರೆಗೂ ಒಂದೊಂದು ಮೇಸೆಜ್ ತನಗೆ ಮಾತ್ರ ಕಳಿಸುತಿದ್ದಾಳೆ ಅಂದರೇ.........!

ನಮ್ಮ ಈ ಹುಡುಗ ಪುಲ್ ಚಿತ್ತ್!

ಗೊತ್ತಿರಬೇಕು. ಯಾವುದೇ ಹೊಸ ವ್ಯಕ್ತಿಗೆ ಆ ಪರಿಸರದ ಹೊಸತನವನ್ನು ತಿಳಿ ಮಾಡಿಕೊಳ್ಳಲು ತತ್ ತಕ್ಷಣ ಒಬ್ಬ ಸಂಗಾತಿಬೇಕಾಗಿರುತ್ತದೆ. ಅದು ಹೊಸ ವಾತವರಣದ ಪರಿಣಾಮ. ಹಾಗೆ ಪರಿಚಯವಾಗುವ ಮೂದಲ ವ್ಯಕ್ತಿ ಇಂಥವಾರದರೇ ಅವರಿಗೂ ಒಂದು ರೀತಿಯ ಧೈರ್ಯ ಮತ್ತು ಸಹಕಾರಿ ಅಷ್ಟೇ.

ಹುಡುಗಿಯರಿಗೆ ಈ ರೀತಿಯದ್ದು ಕೇವಲ ಸ್ನೇಹ ಬಂಧ ಮಾತ್ರ. ನಮ್ಮ ಈ ಹುಡುಗ ಕಲ್ಪಿಸಿಕೊಳ್ಳುವ ರೀತಿಯ ಯಾವುದೇ ಭಾವನೇ ಅವಳಲ್ಲಿ ಇರುವುದಿಲ್ಲ.

ಹಾಗೆಯೇ ದಿನ ಕಳೆದ ಮೇಲೆ ಈ ನಮ್ಮ ಹುಡುಗನ/ಹುಡುಗಿಯ ರೀತಿಯಲ್ಲಿಯೇ ಬೇರೆ ಬೇರೆಯವರು ಪರಿಚಯವಾಗುತ್ತಾರೆ.. ಅವರ ಜೊತೆಯಲ್ಲೂ ಅದೇ ರೀತಿಯ ಸ್ನೇಹ, ಮೇಸೆಜ್, ನಡೆ, ತಿಂಡಿ, ಕುಡಿತ, ಓದು ಶುರುವಾಗುತ್ತವೆ.

ಈ ಒಂದು ಸಹಜತನವನ್ನು ನಮ್ಮ ಸಂಬಂಧಗಳಲ್ಲಿ ಗುರುತಿಸಿ ಅದನ್ನು ಎಷ್ಟು ಬೇಕೋ ಅಷ್ಟು ಅಂತರದಿಂದ ಮುಂದುವರಿಸಿಕೊಂಡು ಹೋದರೇ ಸ್ನೇಹ ಸಂಬಂಧಗಳು ಶಾಶ್ವತವಾಗಿರುತ್ತವೆ.




ಆದರೇ ಆ ರೀತಿಯಲ್ಲಿ ನಮ್ಮಗಳ ಮನಸ್ಸು ಯೋಚಿಸಬೇಕಲ್ಲಾ?

ಒಂದು ಸುಂದರ ಹುಡುಗಿ ಸ್ನೇಹಿತಳಾಗಿ ಸಿಕ್ಕಿಬಿಟ್ಟರೇ.. ತನ್ನ ಸುತ್ತಲಿನವರಿಗೆಲ್ಲಾ ಅವಳ ಬಗ್ಗೆನೇ ಹೇಳಿಕೊಳ್ಳುವುದು. ಅವಳು ಹೀಗೆ ಮಾಡಿದಳು.. ಹೀಗೆ ಕೇಳಿದಳು.. ಅವಳು ಅಲ್ಲಿಗೆ ಕರೆದುಕೊಂಡು ಹೋದಳು.. ಇತ್ಯಾದಿ ಇತ್ಯಾದಿ.

ಇದನ್ನು ಕೇಳಿದ ನಮ್ಮ ಲವ್ ಸ್ಟೋರಿಗಳನ್ನು ನೋಡಿದ ಗೆಳೆಯರು ಒಂದು ಷರಾ ಬರೆದುಬಿಡುತ್ತಾರೆ. ಹೇ ಇವನು ಅವಳಲ್ಲಿ ಬಿದ್ದು ಹೋಗಿಬಿಟ್ಟಾನೇ ಕಣೋ ಎಂದು. ಇವನಿಗೋ ಆ ಸಮಯಕ್ಕೆ ಫುಲ್ ಖುಷ್!! ಈ ರೀತಿಯ ಮಾತುಕತೆಗಳು ಹಾಗೋ ಹೀಗೋ ಕೆಲವು ಸುತ್ತಲಿನ ವ್ಯಕ್ತಿಗಳ ಮೊಲಕ ಆ ಹುಡುಗಿಯ ಕಿವಿಗೆ ಬಿದ್ದಾಗ..

ನೋಡಬಾರದುಈ ಹುಡುಗನ ಜೀವನ ಜಿಗುಪ್ಸೆ! ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಹ ಅನುಭವ.

ಮತ್ತೇ ಒಂದು ವರಾತ ಶುರುಮಾಡುತ್ತಾನೆ. ಗುರು ಅವಳಿಗಾಗಿ ಏನೇನೆಲ್ಲಾ ಮಾಡಿದೆ. ಗೊತ್ತಾ? ಅವಳನ್ನಾ ನನ್ನ ಬೈಕ್ ನಲ್ಲಿ ೩೦ ಕೀ.ಮಿ ಸುತ್ತಿಸಿದೆ. ಅವಳ ಕೆಲಸಕ್ಕಾಗಿ ನನ್ನ ಎಕ್ಸ್ ಮ್ ಬರೆಯಲಿಲ್ಲಾ.. ಅವಳಿಗೆ ಎಂಥೇಂಥ ಗಿಫ್ಟ್ ಕೊಡಿಸಿದೆ..ಹುಡುಗಿಯರೇಲ್ಲಾ ಪಕ್ಕಾ ಪೂರ್ ಟೊಂಟ್ಟಿ!! ಎಂದು ಪುನಃ ತನ್ನ ಜೊತೆಯವರ ಜೊತೆ ಅವಳ ಗತಕಾಲದ ಗುಣಗಾನ ಮಾಡುತ್ತಾನೇ.

ಅದು ಸಹ ಅವರೋ ಇವರುಗಳ ಮೊಲಕ ಆ ಮಾಜಿ ಸ್ನೇಹಿತೆಯ ಕಿವಿಗೆ ಬಿದ್ದುಬಿಟ್ಟಿರುತ್ತದೆ. ಆ ಕ್ಷಣದಿಂದ ಅವಳ ಮನದಲ್ಲಿ ಅವನ ಬಗ್ಗೆ ಮೊದಲು ಇದ್ದಾಂತಹ ಯಾವುದೇ ರೀತಿಯ ಹಸಿರು ಬಾವನೆಗಳ ಸೆಲೆಯೆ ಇಲ್ಲದಂತಾಗಿಬಿಡುತ್ತದೆ. ಎದುರಿಗೆ ಕಂಡರೂ ಕಾಣದ ರೀತಿಯಲ್ಲಿ ಸಾಗುತ್ತಾಳೆ/ನೆ.

ಆ ಸಮಯದಲ್ಲಿಯೇ ಮತ್ತೇ ನಮ್ಮ ಹುಡುಗ ಪುನಃ ಹೊಸಬಳ/ನ ಸ್ನೇಹ. ಅದೇ ಹೊಸ ಪರಿಚಯಕ್ಕೆ ಪ್ರಯತ್ನಿಸುವುದು. ಹಾಗೋ ಹೀಗೋ ದಕ್ಕಿಸಿಕೊಂಡರೇ.. ಮತ್ತೇ ತನ್ನ ಜೊತೆಗಾರರ ಜೊತೆಯಲ್ಲಿ ಹೇಳಿಕೊಳ್ಳುವುದು.. ಗೊತ್ತಾ ಇವಳು ಅವಳಿಗಿಂತ ತುಂಬ ಒಳ್ಳೆಯವಳು.. ಅವಳ ರೀತಿಯಲ್ಲಿ ಇವಳಲ್ಲಾ... ಅವಳಿಗಿಂತ ನೋಡಲು ಚೆಂದವಿಲ್ಲವಾ? ಇವಳು ಇಷ್ಟು ಬ್ಯೂಟಿಯಾಗಿದ್ದರೂ ಕೊಂಚನೂ ಜಂಭ ಇಲ್ಲಾ ಕಣ್ರೋ ಅಂಥಾ ಹೊಸ ಹುಡುಗಿ/ಗ(ನ) ಬಗ್ಗೆ ಸಮರ್ಥನೆಯ ಗುಣಗಾನ.

ಈ ಜೊತೆಗಾರರು.. ಇವನದು ಮುಗಿಯಲಾರದ ಕಥೆ ಕಣ್ರೋ. ಅಂಥೂ ಮಗಾ ಪುಲ್ ಎಂಜಾಯ್ ಮಾಡ್ತಾನೇ ಬಿಡ್ರಿ.. ಒಂದೊಂದು ವರ್ಷ ಒಂದೊಂದು ಹುಡುಗಿ.. ಹೀಗೆ ಮಾತನಾಡಿಕೊಳ್ಳುತ್ತಾರೆ.

ಇದು ಯುವಕರಲ್ಲಿ ಒಂದು ವಯೋಮಾನ ಬರುವವರೆಗೂ ಸಂಭವಿಸುವ ಮಾಮೊಲಿ ಕ್ರಶ್ ಗಳು.

ಹೊಸದಾಗಿ ಅನುಭವಿಸುವ ಈ ಅನುಭವಗಳಿಂದ ತಾನು ಅಮರ ಪ್ರೇಮಿಯಾಗುತ್ತಿದ್ದೇನೆ ಎಂಬ ಭ್ರಮೆಯಲ್ಲಿ ತಮ್ಮನ್ನೇ ತಾನು ಮರೆಯಲು ಪ್ರಾರಂಭಿಸುವ ದಿನಗಳು. ಆದರೇ ಅದು ಕೇವಲ ಆಯಾ ಕಾಲ ಘಟ್ಟಕ್ಕೆ ಮಾತ್ರ ಸುಂದರವಾಗಿ ಕಾಣುವಂತದ್ದು.

ಸಿನಿಮಾದಲ್ಲಿ ನಡೆಯುವಂತೆ ನಮ್ಮ ಜೀವನದಲ್ಲಿ ಕೇವಲ ಒಂದೇ ದಿನದಲ್ಲಿ ಎಲ್ಲಾ ಕಾಣುವಂತೆ ಆಗಿಬಿಟ್ಟಿದ್ದರೇ.. ಯಾರೂ ಹೀಗೆ ಇರುತ್ತಿರಲಿಲ್ಲಾ.

ಸ್ನೇಹ ಸಂಬಂಧಗಳು ಪ್ರತಿಯೊಬ್ಬನಿಗೂ ಬೇಕೇ ಬೇಕು. ಆ ರೀತಿಯ ಒಂದು ಸುಂದರ ಅನುಭೂತಿಯನ್ನು ಎಚ್ಚರಿಕೆಯಿಂದ ಅನುಸರಿಸುವುದು ಇಂದಿನ ಈ ಹೈಟೆಕ್ ಜಗತ್ತಿನಲ್ಲಿ ತುಂಬಾ ಜರೂರು.

ಹಿಂದೆ ಇದ್ದಂತೆ ಒಂದು ಹುಡುಗಿಯ/ಹುಡುಗನ ಜೊತೆಯಲ್ಲಿ ಮಾತನಾಡಿಸಲೂ ವರುಷಗಳೇ ಕಾಯಬೇಕಾಗುತ್ತಿತ್ತು. ಇನ್ನೂ ತನ್ನಲ್ಲಿ ಘಟಿಸಿದ, ಇಷ್ಟಪಟ್ಟ, ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಸಾವಿರಾ ಸಾವಿರಾ ಗಂಟೆಗಳೇ ಬೇಕಾಗುತ್ತಿದ್ದವು.

ಇಂದೋ ನಮ್ಮ ಈ ಸೂಪರ್ ಪಾಸ್ಟ್ ಯುಗದಲ್ಲಿ ಕೇವಲ ಒಂದು ಬಟನ್ ಒತ್ತಿದರೇ ಸಾಕು ಎಂಥವರನ್ನು ಒಂದು ಸೇಕೆಂಡ್ ನಲ್ಲಿ ಮಾತನಾಡಿಸಬಹುದು, ಏನು ಹೇಳಬೇಕೆಂದುಕೊಂಡಿರುತ್ತೇವೋ ಅದನ್ನು ಹೇಳಬಹುದು. ತನ್ನ ಮನದಲ್ಲಿ ಮೋಡುವ ಯಾವುದೇ ಭಾವನೆಯನ್ನು ಹುಡುಗಿ/ಹುಡುಗನಿಗೆ ತಲುಪಿಸಬಹುದು. ಮುಖಾತಃ ಬೇಟಿ ಮಾಡುವ ಅವಶ್ಯಕತೆಯೇ ಇಲ್ಲಾ! ಏನಾದರೂ ಸರಿ ಬರಲಿಲ್ಲವೋ ಸಾರೀ ರಾಂಗ್ ನಂಬರ್ ಅನ್ನಬಹುದು.

ಅದರೇ ಅದು ಯಾವುದೇ ವ್ಯಕ್ತಿಯನ್ನು ಅವಮಾನಿಸುವುದು.. ನೋಯಿಸುವುದು... ಭಾವನೆಗಳ ಜೊತೆಯಲ್ಲಿ ಆಟವಾಡುವಂತಾಗಬಾರದು. ತಿಳಿದು ಕಾದು ಹೆಜ್ಜೆ ಇಡಬೇಕಾದದ್ದೂ ಪ್ರತಿಯೊಬ್ಬರ ಕರ್ತವ್ಯ. ಆಗಲೇ ಮಾತ್ರ ಯಾವುದೇ ಸಂಬಂಧಗಳು ಗಟ್ಟಿಯಾಗಿ ಉಳಿಯುವುದು.

ಬುಧವಾರ, ಜನವರಿ 11, 2012

ವೀರ ಸನ್ಯಾಸಿ ವಿವೇಕಾನಂದರು

ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ವಿದ್ಯಾರ್ಥಿ ದೆಸೆಯಲ್ಲಿ ದೇಶದ ಬಗ್ಗೆಯಾಗಲಿ, ಭಾರತದ ದೇಶದ ಬಗ್ಗೆ, ಹಿಂದೂ ಧರ್ಮದ ಬಗ್ಗೆಯಾಗಲಿ ಏನಾದರೂ ಕೂಂಚ ತಿಳಿದುಕೊಳ್ಳಬೇಕು ಎಂಬ ಅಸಕ್ತಿಪಟ್ಟರೆ ಒಂದೇ ಒಂದು ಆಯ್ಕೆ ಎಂದರೇ ಅದು ಸ್ವಾಮಿ ವಿವೇಕಾನಂದರ ಪುಸ್ತಕಗಳ ಮೊರೆ ಹೋಗುವುದು.

ಸ್ವಾಮಿ ವಿವೇಕಾನಂದರ ಬಗ್ಗೆ ಓದುವುದು ಎಂದರೇ ಅದು ನಮ್ಮ ಭಾರತ ದೇಶದ ಬಗ್ಗೆ ಓದಿದಂತೆ. ಅವರ ನುಡಿಗಳನ್ನು, ಅವರ ಅಪೂರ್ವ ಜೀವನ ಸರಣಿ, ಅವರ ಕೃತಿಗಳ ಅಧ್ಯಯನ ನಮ್ಮ ಭಾರತದ ನೈಜ ಸತ್ವವನ್ನು ಅತಿ ಹತ್ತಿರದಿಂದ ಪರಾಂಬರಿಸಿದಂತೆಯೇ ಸರಿ.

ಸ್ವಾಮಿವಿವೇಕಾನಂದರು ೧೨ ಜನವರಿ ೧೮೬೩ ಸೋಮವಾರದಂದು ಕೊಲ್ಕತ್ತಾದಲ್ಲಿ ಜನಿಸಿದರು. ೧೫೦ನೆ ಜನ್ಮದಿನವಾದ ಇಂದು ಭಾರತದ ವಿವಿದೆಡೆಯಲ್ಲಿ ಯುವಜನೋತ್ಸವವಾಗಿ ಆಚರಿಸುತ್ತಿದ್ದಾರೆ.

ನಮ್ಮ ಭಾರತದ ಹಿಂದೂ ಧರ್ಮವನ್ನು ಹೆಚ್ಚಿನ ಪರಾಮರ್ಶೆಗೆ ಒಳಪಡಿಸಿ ಅದರ ಸನಾತನತೆಯನ್ನು,ಬ್ರಾತೃತ್ವವನ್ನು, ವಿಶ್ವಶಾಂತಿಯನ್ನು ಜಗತ್ತಿಗೆ ಪ್ರಸ್ತುತಪಡಿಸಿದ ಕೀರ್ತಿ ಸ್ವಾಮಿವಿವೇಕಾನಂದರದಾಗಿದೆ.

೧೮೯೩ ರವರೆಗೂ ವಿಶ್ವದಲ್ಲಿ ಕೇವಲ ಕ್ರೀಸ್ತ ಧರ್ಮವೊಂದೇ ಎಂಬ ಭಾವನೆಯನ್ನು ಜಗತ್ತು ಹೊಂದಿತ್ತು. ಆದರೇ ಸ್ವಾಮಿವಿವೇಕಾನಂದರ ವಿಶ್ವವಾಣಿ ೧೮೯೩, ಸೆಪ್ಟಂಬರ್ ೧೧ ರಂದು ಚಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ನೀಡಿದ ಉಪನ್ಯಾಸದಲ್ಲಿ, ಅಲ್ಲಿ ಸೇರಿದ್ದ ಎಲ್ಲಾ ಧರ್ಮದ ಶ್ರೇಷ್ಠ ಸಾಧುಗಳು, ಪರಿಣತರುಗಳು ಭಾರತದ ಕಡೆಗೆ ನೋಡುವಂತೆ ಮಾಡಿತು.ಎಲ್ಲಾ ಧರ್ಮಗಳ ಮೊಲ ಬೇರು ಮೊಲ ಸೆಲೆ ಭಾರತದಲ್ಲಿದೆ ಎಂಬುದನ್ನು ಕಂಡು ಬೆಕ್ಕಸ ಬೆರಗಾದರು.

ಅಲ್ಲಿಯವರೆಗೂ ಭಾರತ ಎಂದರೇ ಹಿಂದುಳಿದ ಬಡವರ, ದೀನರ, ಮೌಢ್ಯದ ಉಪಖಂಡ ಎಂದು ನೋಡುತ್ತಿದ್ದರು. ಧರ್ಮಗಳು ಎಂದರೇ ಕೇವಲ ದೇವರ ಬಗ್ಗೆ ಮಾತನಾಡುವುದು ಮಾತ್ರ ಎಂಬಂತಾಗಿತ್ತು. ಆದರೇ ಅದು ವಿಶ್ವ ಜನಗಳ ನೆಮ್ಮದಿ, ಶಾಂತಿಯ ಹರಿಕಾರ ಮತ್ತು ಸರ್ವ ಸ್ವತಂತ್ರ ಅಭಿವ್ಯಕ್ತಿಯ ಮೊಲ ಎಂಬುದನ್ನು ಅರಿಯುವಂತೆ ಮಾಡಿತು.

ಯೋಚಿಸಿ ವಿವೇಕಾನಂದರ ಬಗ್ಗೆ ಮಾತನಾಡಲು ನಮಗಂತೂ ಏನೇನೂ ಅರ್ಹತೆಯಿಲ್ಲ. ವಿವೇಕಾನಂದರದು ಪ್ರಶ್ನಾರ್ಹವಲ್ಲದ ವ್ಯಕ್ತಿತ್ವ.




ಸಾಧು, ಸನ್ಯಾಸಿ ಅಂದರೇ ನಮ್ಮ ಕಣ್ಣ ಮುಂದೆ ಬರುವ ಮೊದಲ ಚಿತ್ರವೆಂದರೇ ಅದು ಸ್ವಾಮಿವಿವೇಕಾನಂದರು.

ಅವರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಿದೇವು ಅಂದರೇ ನಿಜವಾಗಿಯು ನೀವು ಸಹ ಸಾಧು ಸನ್ಯಾಸಿಯಾಗುವ ಮನಸ್ಸನ್ನು ಮಾಡಿಯೇ ಮಾಡಿರುತ್ತೀರಾ. ಒಂದು ವಿರಾಟ್ ಆದರ್ಶ ಪುರುಷರು ಇವರಾಗಿದ್ದಾರೆ.

"ಏಳಿ, ಏದ್ದೇಳಿ, ಗುರಿ ಸೇರುವವರೆಗೂ ನಿಲ್ಲದಿರಿ...!" ಅವರ ಪ್ರಸಿದ್ಧ ನುಡಿ ಎಂಥ ಜಡ ವ್ಯಕ್ತಿತ್ವವನ್ನು ಒಂದು ಕ್ಷಣದ ಮಟ್ಟಿಗೆಯಾದರೂ ರೋಮಾಂಚನವನ್ನುಂಟು ಮಾಡಿ ಏನಾದರೂ ಸಾಧಿಸುವಂತಹ ಛಲದ ಕಿಡಿಯನ್ನು ಮನದ ಮೊಲೆಯಲ್ಲಿ ಹುಟ್ಟು ಹಾಕಿಯೇ ಹಾಕುತ್ತದೆ.

ನನ್ನ ಶಾಲಾ ದಿನಗಳಲ್ಲಿ ಅವರ ಜನ್ಮದಿನಾಚರಣೆಯ ಪ್ರಯುಕ್ತ ಅವರ ಜನ್ಮ ಚರಿತ್ರೆಯ ಅಧ್ಯಯನ ಮತ್ತು ಪರೀಕ್ಷೆಯನ್ನು ನಗರದ ಎಲ್ಲಾ ಶಾಲೆಗಳಿಗಾಗಿ ಏರ್ಪಡಿಸಿದ್ದರು. ಅಂದು ಅವರ ಜೀವನ ಚರಿತ್ರೆಯ ಪುಸ್ತಕವಾದ "ವೀರ ಸನ್ಯಾಸಿ ವಿವೇಕಾನಂದರು" ಪುಸ್ತಕವನ್ನು ಓದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಎಲ್ಲರೂ ಅವರ ಭಾವ ಚಿತ್ರವಿರುವ ಪ್ರಮಾಣ ಪತ್ರವನ್ನು ಪಡೆದಿದ್ದ ಘಟನೆ... ಅವರ ಬಗ್ಗೆ ಇನ್ನೂ ಹೆಚ್ಚು ಹೆಚ್ಚೂ ಅರಿಯುವಂತೆ ಪ್ರೇರೆಪಿಸಿತು.

ಅವರ ಅಷ್ಟು ಕೃತಿ ಶ್ರೇಣಿಯನ್ನು ಓದುವಂತೆ ಮಾಡಿತು.

ಸಾಧು ಸಂತರು ಎಂದರೇ ಅವರು ಯಾವುದಾದರೂ ಒಂದು ದೇವರ ಬಗ್ಗೆ, ಸಾಧನೆಯ ಬಗ್ಗೆ, ಪವಾಡಗಳ ಬಗ್ಗೆ ಹೆಚ್ಚು ಹೆಚ್ಚು ಹೇಳಿಕೊಳ್ಳುತ್ತಾರೆ. ಆದರೆ ವಿವೇಕಾನಂದರು ಇದೆಲ್ಲಾಕ್ಕೂ ವಿಭಿನ್ನವಾದ ವಜ್ರದಂತಹ ದೂರ ದೃಷ್ಟಿಯನ್ನು, ಚಿಂತನೆಯನ್ನು, ದೇಶ ಪ್ರೇಮವನ್ನು ಕಾಣಬಹುದು.

ಈಶ್ವರ ಪೂಜೆಯೆಂದರೇ ಮೊದಲು ಬಡವರಾದ ನಮ್ಮ ನಮ್ಮ ಅಣ್ಣ ತಮ್ಮಂದಿರ ಸೇವೆ ಎಂದು ಹೇಳುತ್ತಾರೆ. ಅವರನ್ನು ಮೇಲು ಮಟ್ಟಕ್ಕೆ ತರುವುದೇ ದೇವರಿಗೆ ಮಾಡುವ ಶ್ರೇಷ್ಠ ಭಕ್ತಿ ಎನ್ನುತ್ತಾರೆ. ಗುಡಿ ಗುಂಡಾಂತರಗಳನ್ನೇಲ್ಲಾ ಬಿಟ್ಟು ಜನ ಸಾಮಾನ್ಯರ ನಡುವೆ ಅವರ ಸೇವೆಯನ್ನು ಮಾಡುತ್ತಾ ನಮ್ಮೆಲಾರ ಅರಿವಿಗೆ ಅವರು ನೀಡಿದ ಸಂದೇಶ ಸಾರವನ್ನು ಎಂದೇಂದಿಗೂ ಮನನ ಮಾಡಿಕೊಳ್ಳುವುದು ಸರ್ವಕಾಲಕ್ಕೂ ಪ್ರಸ್ತುತ.

ಸ್ವಾಮಿವಿವೇಕಾನಂದರ ಮೊಲಕ ಅವರ ಗುರುಗಳಾದ ರಾಮಕೃಷ್ಣ ಪರಮಹಂಸರು, ಶಾರದದೇವಿ ಇವರುಗಳ ಅಗಾಧ ವ್ಯಕ್ತಿತ್ವವನ್ನು ಅತ್ಯಂತ ಹತ್ತಿರದಿಂದ ನಮ್ಮ ನಾಡು ಕಾಣುವಂತಾಯಿತು.

ಇಂದಿನ ನಮ್ಮ ಹೈಟೆಕ್ ಸಾಧುಗಳ ಪ್ರದರ್ಶನಕ್ಕೆ ಮಾತ್ರ ಸೀಮಿತವಾದ ವ್ಯಕ್ತಿತ್ವವನ್ನು ಕಂಡರೇ ವಿವೇಕಾನಂದರು ಜನಿಸಿದ ನಾಡಿನವರಾ ಇವರುಗಳು ಎಂಬ ಭ್ರಮ ನಿರಸನವಾಗುತ್ತದೆ.

ಎಲ್ಲಾ ಧರ್ಮಗಳನ್ನು ಪ್ರೀತಿಸಿ ಆಗ ಮಾತ್ರ ನಿಮ್ಮ ಧರ್ಮಕ್ಕೆ ಪ್ರೀತಿ ನೀಡಿದಂತೆ ಎಂದು ಸಾರಿ ಸಾರಿ ಹೇಳಿದ್ದಾರೆ.

ಇಲ್ಲಿ ಯಾವ ಧರ್ಮವು ಮೇಲು ಅಲ್ಲಾ, ಯಾವುದು ಕೀಳಲ್ಲ. ಎಲ್ಲಾ ಧರ್ಮಗಳ ಮೂಲ ಸಾರ ಒಂದೇ!

ಅವರ ಅಗಾಧ ವಿದ್ವತ್ ಪೂರ್ಣ ವೈಚಾರಿಕತೆಯಿಂದ ಹಿಂದೂ ಧರ್ಮದ ಸರ್ವ ಶ್ರೇಷ್ಠ ಗ್ರಂಥಗಳ ನೈಜ ಅರ್ಥಗಳು ಜನಸಾಮಾನ್ಯರಿಗೆ ತಿಳಿಯುವಂತಾಯಿತು. ವೇದಗಳು, ಭಗಧ್ಗೀತೆ, ಪುರಾಣಗಳು.. ಇತ್ಯಾದಿ ಎಲ್ಲಾದರ ಬಗ್ಗೆಯು ಅವರುಗಳು ನಮ್ಮಲ್ಲಿ ಅರಿವನ್ನುಂಟು ಮಾಡಿದರು. ಅವುಗಳ ಮೂಲ ಆಶಯವನ್ನು ಸರಳವಾಗಿ ತಮ್ಮ ಉಪನ್ಯಾಸಗಳ ಮೂಲಕ ತಿಳಿಯಪಸಿದರು.

ಇಂದಿಗೂ ಅವರು ಕಟ್ಟಿ ಬೆಳಸಿದ ಸಂಸ್ಥೆಯಾದ ಶ್ರೀ ರಾಮಕೃಷ್ಣ ಆಶ್ರಮ ನಮ್ಮ ಧರ್ಮದ ಬಗ್ಗೆ ಜಾಗೃತಿಯನ್ನುಂಟು ಮಾಡುವ ದೆಸೆಯಲ್ಲಿ ಅವರ ಕೃತಿಗಳನ್ನು ಅತ್ಯಂತಹ ಕಡಿಮೆ ಬೆಲೆಗೆ ಜನರಿಗೆ ಸಿಗುವಂತೆ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಷಯ. ಭಾರತದ ಜನಗಳ ಸೇವೆಯೇ ಈಶ ಸೇವೆ ಎಂಬುದನ್ನು ದೀನ ದಲಿತರಿಗೆ, ಅಬಲರಿಗೆ ವಿವಿಧ ರೀತಿಯ ಯೋಜನೆಗಳ ಮೊಲಕ ಮೂಲಭೂತ ಸೌಕರ್ಯ ಮತ್ತು ಶಿಕ್ಷಣವನ್ನು ನೀಡುವುಲ್ಲಿ ಇಂದಿಗೂ ರಾಮಕೃಷ್ಣ ಮಿಷನ್ ಬಹು ಮುಖ್ಯ ಸಂಸ್ಥೆಯಾಗಿದೆ.

ನಾವುಗಳು ವಿವೇಕಾನಂದರು ಹೇಳಿದಂತಹ ಕೆಲವೊಂದು ಸಂದೇಶಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವರಿಗೆ ಸಲ್ಲಿಸುವ ನಮ್ಮ ಹೃದಯ ಪೂರ್ಣ ನಮನಗಳು.

ಜೈ ಗುರುದೇವಾ!!

ಸೋಮವಾರ, ಜನವರಿ 9, 2012

ಹೇಗಿದ್ದರೂ ಸಾಗುತ್ತದೆ...

ಮನುಷ್ಯನಿಗೆ ಎಲ್ಲಿಯು ನಿಲ್ಲರಾದಂತಹ ಮನಸ್ಸು ಮತ್ತು ಸ್ವಭಾವ. ಅವನು ನಿತ್ಯ ಏನಾದರೂ ಹೊಸದನ್ನು ಕಂಡುಕೊಳ್ಳುವ ತವಕ.

ಯೋಚಿಸಿ ಸುಮ್ಮನೇ ಕೂತರೂ ಸಹ ಕುಳಿತ ಜಾಗದಿಂದ ಇಡೀ ಜಗತ್ತನ್ನೇ ತನ್ನ ಮನಸ್ಸಿನ ಮೊಲಕ ಒಂದು ಸುತ್ತು ಹಾಕಿ ಕೊಂಡು ಬಂದಿರುತ್ತಾನೆ.

ನಿಶ್ಚಲವಾಗಿ ಒಂದು ಕ್ಷಣವು ಇರಲು ಸಾಧ್ಯವಿಲ್ಲ!

ಎಂದು ತಾಯಿಯ ಗರ್ಭದಲ್ಲಿ ಒಂದು ಕಣವಾಗಿ ಜೀವದ ಅಂಕುರವಾಗುತ್ತದೋ.. ಅಂದಿನಿಂದ ನಿರಂತರವಾಗಿ ಚಲಿಸುತ್ತಾ ಚಲಿಸುತ್ತಲೇ ಇರುತ್ತಾನೆ. ಅದೇ ಅವನ ಬೆಳವಣಿಗೆ ಅನಿಸುತ್ತದೆ.

ನನಗೆ ಅನಿಸುತ್ತದೆ ಯಾರೂ ಅರಿಯಲಾರದಂತಹ ಒಂದು ಉತ್ಕೃಷ್ಟವಾದ ಶಕ್ತಿಯನ್ನು ಈ ಮಾನವ ಜೀವ ಸಂಪಾಧಿಸಿದೆ ಅದಕ್ಕೆ ಎಷ್ಟೊಂದು ಕ್ಲಿಷ್ಟಕರವಾದ ಸಂಗತಿಗಳನ್ನು ಯೋಚಿಸುತ್ತಾನೆ, ಬಿಡಿಸುತ್ತಾನೆ, ಅನ್ವೇಷಿಸುತ್ತಾನೆ, ಎಷ್ಟೊಂದು ವಿಷಯಗಳನ್ನು ತನ್ನ ನೆನಪಿನಾಳದಲ್ಲಿ ಶೇಕರಿಸಿಟ್ಟುಕೊಂಡಿರುತ್ತಾನೆ, ಎಷ್ಟೊಂದು ಭಾವನೆಗಳನ್ನು ಒಂದೇ ಸಮಯದಲ್ಲಿ ವ್ಯಕ್ತಪಡಿಸುತ್ತಾನೆ, ಕ್ರೌರ್ಯ, ಹಿಂಸೆ, ರೋಷ.. ಹೀಗೆ ಬೇರೊಂದು ಯಾವ ಜೀವಿಯು ಇವನ ಹಂತಕ್ಕೆ ಯೋಚಿಸಿ ವರ್ತಿಸಲು ಸಾಧ್ಯವಿಲ್ಲ ಬಿಡಿ.

ಗಮನಿಸಿ ಮನುಷ್ಯ ಓಡಾಡುವ ಜಾಡಿನಲ್ಲಿ ಒಂದು ಹುಲ್ಲು ಗರಿಕೆಯು ಬೆಳೆಯಲು ಸಾಧ್ಯವಿಲ್ಲ. ಅಷ್ಟೊಂದು ಪ್ರಭಾವಳಿ ಅವನ ಸುತ್ತಾ ಪಸರಿಸಿರುತ್ತೇನೋ?

ಅವನ ಸಂಗತಿಗಳೆ ಮನುಷ್ಯರಾದ ಮನುಷ್ಯರಿಗೆ ಅರಿಯಲಾರದಂತಹ ಸ್ಥಿತಿಯಾಗಿದೆ. ಒಬ್ಬೊಬ್ಬರದು ಒಂದೊಂದು ರೀತಿ ನೀತಿ. ವೈವಿಧ್ಯಮಯವಾದ ನಡಾವಳಿಯೇ ಮನುಷ್ಯನನ್ನು ಈ ಜೀವ ಗೋಳದಲ್ಲಿ ಅತಿ ಉನ್ನತಿಗೇರಿಸಿದೆ ಅನಿಸುತ್ತದೆ.

ಅವನ(ಳ) ಸುಖ ದುಃಖಗಳನ್ನು ತನ್ನ ಜೀವನದ ಹಾದಿಯಲ್ಲಿ ನಿತ್ಯ ನಿರಂತರ ಕಂಡುಕೊಳ್ಳುತ್ತಲೆ ಇರುತ್ತಾರೆ. ಮುಂದಾಲೊಚನೆ, ದೂರದೃಷ್ಟಿ ಮನುಷ್ಯ ಜಾತಿಗೆ ಮಾತ್ರ ಇದೆ ಅನಿಸುತ್ತದೆ. ಇದು ಒಂದು ವರವೇ ಸರಿ.

ಮತ್ತು ಇಂದಿನ ಈ ಇಷ್ಟೊಂದು ವೇಗದ ಬದುಕಿನ ರೋವಾರಿ ಅವನಾಗಿರುವುದಕ್ಕೆ ಇದೆ ಮುಖ್ಯವಾಗಿದೆ.

ಯೋಚಿಸಿ ಮನುಷ್ಯ ತಾನು ತನ್ನ ಸಂಸಾರವನ್ನು ಕಟ್ಟಿಕೊಳ್ಳುವ ಬಗೆಯನ್ನು ಅಲ್ಲಿರುವ ಬಿಡಿಸಿಲಾರದ ಅನುಬಂಧವನ್ನು ಯಾರೊಬ್ಬರೂ ಯೋಚಿಸಲಾರದಂತದ್ದು. ಅದೇ ಅವನ ಏಳ್ಗೆಗೆ ದಿಕ್ಕಾಗಿರುತ್ತದೆ. ತಾನು ತನ್ನವರು ತನ್ನ ಮುಂದಿನ ಪೀಳಿಗೆ.

ಅವನ ಒಂದು ವಿದ್ಯುತ್ ಸಂಚಲನದ ಜೀವ ರಸವನ್ನು ತನ್ನವರೆಲ್ಲಾರೊಡನೆ ಪಸರಿಸಿಕೊಂಡಿರುತ್ತಾನೆ. ತಾನು ನೋವುಂಡಾಗ ತನ್ನವರು ವ್ಯಥೆಪಡುವರು. ತಾನು ಖುಷಿಪಟ್ಟಾಗ ತನ್ನವರು ಸಂತೋಷಪಡುವರು. ಈ ರೀತಿಯ ಒಂದು ಹಂದರವನ್ನು ಕಟ್ಟಿಕೊಂಡಿರುವುದರಿಂದಲೇ ಸಮಷ್ಟಿಯಲ್ಲಿ ತಾನು ಶ್ರೇಷ್ಠ ಎಂಬ ಭಾವನೆಯಿಂದ ತನ್ನ ಬೆಳವಣಿಗೆಯಲ್ಲಿ ದಾಪುಗಾಲು ಹಾಕುತ್ತಾ ಸಾಗುತ್ತಿರುವುದು.

ಈ ರೀತಿಯ ಒಂದು ಬಂಧನವು ಪ್ರತಿಯೊಂದು ಕುಟುಂಬದಿಂದ ಪ್ರಾರಂಭವಾಗಿ, ಕುಟುಂಬ-ಕುಟುಂಬ, ಊರು-ಊರು, ರಾಜ್ಯ-ರಾಜ್ಯ, ದೇಶ-ದೇಶ ಹೀಗೆ ಹರಿಯುವ ನಿತ್ಯ ಜೀವಂತಿಕೆಯ ನಾವೆಲ್ಲಾ ಒಂದೇ ಎಂಬ ಭಾವನೆಯ ಜೀವನದಿಯಾಗಿದೆ.

ಮನುಷ್ಯ ಯಾವಾಗ ಅತಿ ಸಂತೋಷಪಡುತ್ತಾನೆ ಎಂದರೇ? ನನಗೆ ಅನಿಸುತ್ತದೆ.. ತನ್ನ ತದ್ರೊಪದ ಒಂದು ಜೀವಂತ ಜೀವಿಗೆ ಜೀವದಾರಣೆ ಮಾಡಿದಾಗ ಮಾತ್ರ. ತನ್ನ ನಂತರದ ಜೀವನ ಹೊರಾಟಕ್ಕೆ ಪಕೃತಿದತ್ತವಾದ ಕಾಯಕವನ್ನು ಮಾಡಿದಾಗ ಇಡೀ ಪ್ರಕೃತಿಯೇ ಅಸ್ತು ಅನ್ನುತ್ತಿರುತ್ತದೆ ಮತ್ತು ನಲ್ಮಮೆಯ ಆನಂದದಲ್ಲಿ ತೇಲುತ್ತಿರುತ್ತದೆ.ಇದರಿಂದಾಗಿ ಅವನು ತನಗೆ ಗೊತ್ತಿಲ್ಲದ ರೀತಿಯಲ್ಲಿ ಅತಿ ಹೆಚ್ಚು ಸಂತೋಷವನ್ನು ಜೀವಮಾನದ ಒಂದು ಸಾಧನೆ ಅನಿಸುತ್ತದೆ. ಜೀವಾರ್ಪಣೆ ಅಂದ್ರೇ?

ಜೀವದ ಹುಟ್ಟು, ಬೆಳವಣಿಗೆ, ವಯಸ್ಸು ಹೀಗೆ ಕಾಲ ಚಕ್ರದ ಸುಳಿಯಲ್ಲಿ ತಾನು ಪಯಣಿಸುವಾಗ ತಾನು ಮಾಡಬೇಕಾದ ನೈಸರ್ಗಿಕ ಕ್ರಿಯೆಗಳನ್ನು ಮಾಡಿ ಅದರಲ್ಲಿ ತನ್ನ ಕರ್ತವ್ಯವನ್ನು ನಿರೂಪಿಸಿದಾಗ ಅವನ ಹಿರಿಮೆಯ ಮಹತ್ವವನ್ನು ಪೂರ್ಣವಾಗಿ ಕಾಣಬಹುದಾಗಿದೆ.

ಪ್ರತಿಯೊಬ್ಬರೂ ಈ ಬದುಕು ಜಟಕಾ ಬಂಡಿಯಲ್ಲಿ ಪ್ರಯಾಣಿಸುತ್ತಿರುವುದು ಆ ಒಂದು ಸ್ಥಳವನ್ನು ಸೇರಲು ಅನಿಸುತ್ತಿಲ್ಲವಾ? ಯೋಚಿಸಿ.




ಯಾವುದಕ್ಕಾಗಿ ಈ ರೀತಿಯಲ್ಲಿ ತನ್ನ ಎಲ್ಲಾ ದುಡಿಮೆಯನ್ನು, ಶಕ್ತಿಯನ್ನು ಪರಿಪೂರ್ಣವಾಗಿ ವ್ಯಯಿಸುತ್ತಿರುವುದು?

ತನ್ನ ಸುಖ, ದುಃಖದ ಮೊತ್ತವನ್ನು ಮುಡಿಪಾಗಿಡುತ್ತಿರುವುದು ಯಾವುದಕ್ಕಾಗಿ?

ಜೀವನ ಚಕ್ರದ ರೂಪದಲ್ಲಿ ಯಾವಾ ಯಾವ ಸಮಯಕ್ಕೆ ಏನೇನು ಮಾಡಬೇಕೋ, ಸುಖಿಸಬೇಕೋ ಆ ಎಲ್ಲಾ ಕಾರ್ಯಗಳನ್ನು ಚಾಚೂ ತಪ್ಪದೆ, ಗೊತ್ತಾಗದಾ ರೀತಿಯಲ್ಲಿ ನಮ್ಮಲ್ಲಿ ನಿತ್ಯ ಘಟಿಸುತ್ತಾ ಸಾಗುತ್ತಲೇ ಸಾಗಿರುತ್ತದೆ.

ಟೈಮ್ ಯಾರಿಗೂ ಎಂದು ಕಾಯುವುದಿಲ್ಲ. ನಮ್ಮ ನಮ್ಮ ನಿಲ್ದಾಣಕ್ಕೆ ಬಂದಾಗ ನಾವುಗಳು ಹತ್ತಬೇಕು. ಸಿಗುವವರ ಜೋತೆಯಲ್ಲಿ, ಸಿಗುವವ ಸಮಯದಲ್ಲಿ ಹೇಗೆ ಹೇಗೆ ಜೀವನವನ್ನು ಸವಿಯಬೇಕೋ ಸವಿಯಬೇಕು, ನಮ್ಮ ತಾಣ ಬಂದಾಗ ಇಳಿಯಲೇಬೇಕು.

ಹೇಗಿದ್ದರೂ ಸಾಗುತ್ತದೆ ಎಂಬುದು ಏನೂ ಮಾಡಲಾರದವನ ಮಾತಾಗುತ್ತದೆ. ನಮ್ಮ ಚೊಕ್ಕ ಜೀವನಕ್ಕೆ ಬೇಕಾದ ಅಲೋಚನೆ, ದುಡಿಮೆ, ಸಂಬಂಧಗಳ ಬಗ್ಗೆ ಕೊಂಚ ಕಾಳಜಿಯನ್ನು ಹೊಂದಿಬಿಟ್ಟರೆ ಯಾರು ಕಾಣಲಾರದಂತಹ ಸ್ವಂತಿಕೆಯ ಸ್ವರ್ಗಮಯ ಜೀವನವನ್ನು ಈ ಭೂಮಿಯ ಮೇಲೆ ಕಾಣಬಹುದು.

ಏನಂತಿರೀ?

ಮಂಗಳವಾರ, ಜನವರಿ 3, 2012

ನಾಯಿ ಬಾಲ ಯಾವತ್ತೂ ಡೊಂಕು...

ಎಲ್ಲ ಗೊತ್ತಿದ್ದು ಕೆಲವೊಂದು ವಿಷಯದಲ್ಲಿ ನಾವುಗಳು ಗೊತ್ತಿಲ್ಲದವವರ ರೀತಿಯಲ್ಲಿ ನಡೆದುಕೊಳ್ಳುತ್ತೇವೆ. ಅದು ಸಮಯ ಸಂದರ್ಭವನ್ನು ಅವಲಂಬಿಸಿರುತ್ತದೆ. ಇದು ಬೇರೆಯವರ ಬಗ್ಗೆ ಅತ್ಯಧಿಕವಾದದ್ದು. ಆದರೆ ನಮ್ಮಗಳ ಬಗ್ಗೆಯು ಸಹ ಅದೇ ರೀತಿಯಲ್ಲಿ ನಡೆದುಕೊಂಡಿರುತ್ತೇವೆ. ಅನಂತರ "ಓ! ಆ ರೀತಿಯಲ್ಲಿ ಮಾಡಬಾರದಾಗಿತ್ತು" ಎಂದು ಬೇಸರವನ್ನು ಮಾಡಿಕೊಂಡಿರುತ್ತೇವೆ.

ಅದಕ್ಕೆ ಹೇಳುವುದು "ನಾಯಿ ಬಾಲ ಯಾವತ್ತೂ ಡೊಂಕು". ಅದೇ ಗಾದೆಯ ಮಾತನ್ನು ನಮ್ಮ ಗುಣ ಸ್ವಭಾವಗಳಿಗೂ ಅನ್ವಯಿಸಿಕೊಳ್ಳಬಹುದೇನೋ. ನಾವುಗಳು ಏನನ್ನೂ ನೈಸರ್ಗಿಕವಾಗಿ ಗಳಿಸಿಕೊಂಡಿರುತ್ತೇವೋ ಅದನ್ನೇ ಬಹುಪಾಲು ಮುಖ್ಯ ಸಂದರ್ಭಗಳಲ್ಲಿ ಅಭಿವ್ಯಕ್ತಿಪಡಿಸಿರುತ್ತೇವೆ.

ಹೀಗೆ ಹೀಗೆ ಮುಂದೆ ಮಾಡಬಾರದು.. ಇನ್ನಾದರೂ ಸರಿಯಾಗಿ ಆ ಮೋವಿಯಲ್ಲಿ ನೋಡಿದ ರೀತಿಯಲ್ಲಿ ಇರಬೇಕು.. ನಾಳೆಯಿಂದ ಆ ಪುಸ್ತಕದಲ್ಲಿ ಓದಿದದ ವ್ಯಕ್ತಿವಿಕಾಸನದ ಪಾಠವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.. ಹೀಗೆ ತರಾವೇರಿ ಜೀವನದ ಗುರಿಗಳನ್ನು ನಮ್ಮ ನಮ್ಮ ಮನದಲ್ಲಿ ಗಟ್ಟಿ ಮಾಡಿಕೊಂಡಿದ್ದರೂ.. ಆ ಸಮಯ ಬಂದಾಗ ಅವುಗಳೆಲ್ಲಾ ನಮಗೆ ಗೊತ್ತಿಲ್ಲದ ರೀತಿಯಲ್ಲಿ ಗಾಳಿಯಲ್ಲಿ ಮಾಯವಾಗಿರುತ್ತವೆ ಯಾಕೇ?

ಮತ್ತೇ ಅದೇ ರಾಗ ಅದೇ ಹಾಡಿನಂತೆ ನಮ್ಮ ಪಾಡಾಗಿರುತ್ತದೆ!

ಯಾಕೆಂದರೇ ನೆನ್ನೆ ಮನ್ನೇ ಕಲಿತ ಕಲೆಗಳು ಎಂದಿಗೂ ನಮ್ಮೊಂದಿಗೆ ಇದ್ದು ಬಂದಂತಹ ಹಳೆ ಸ್ವಭಾವಗಳನ್ನು ಗೆಲ್ಲಲಾರವು. ಅವುಗಳೊಡನೆ ಸೆಣಸಾಡಿ ಸೆಣಸಾಡಿ ಒಂದಷ್ಟು ದಿನಗಳಾದ ಮೇಲೆ ಮಾತ್ರ ಏನಾದರೂ ಅವುಗಳು ನಮ್ಮಲ್ಲಿ ಉಳಿಯುವುವೇನೋ.. ಪ್ರಯತ್ನ ಮಾಡಬೇಕು.

ಪ್ರತಿಯೊಂದು ರೀತಿಯಲ್ಲೂ ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನವಾಗಿರುತ್ತಾನೆ. ಅವಾಗಲೇ ತಾನೇ ವ್ಯಕ್ತಿ ಅನಿಸಿಕೊಳ್ಳುವುದು.

ನಾವುಗಳು ಯಾವುದನ್ನೂ ಪರ್ಸನಾಲಿಟಿ ಡೆವಲಪ್ ಮೆಂಟ್, ವ್ಯಕ್ತಿವಿಕಾಸನ, ಸಕ್ಸಸ್ ಸ್ಟೋರಿಸ್ ಇತ್ಯಾದಿ ಪಾಠಗಳನ್ನು ಕಲಿತುಕೊಂಡು ಅವುಗಳನ್ನು ಅಳವಡಿಸಿಕೊಳ್ಳಲೂ ಎಷ್ಟು ಪ್ರಯತ್ನಪಟ್ಟರು ನಮ್ಮೊಂದಿಗೆ ಅವುಗಳು ತಾಳೆಯೇ ಆಗುವುದಿಲ್ಲ..




ಒಂದು ವೇಳೆ ಅವುಗಳನ್ನೇಲ್ಲಾ ಒಂದೇ ದಿನದಲ್ಲಿ ನಮ್ಮ ಜೀವನಕ್ಕೆ ಅಳವಡಿಸಿಕೊಂಡುಬಿಟ್ಟಿದ್ದರೇ.. ಉಹಿಸಲು ಸಾಧ್ಯವಿಲ್ಲ ಅಲ್ಲವಾ? ಒಬ್ಬರಂತೆ ಇನ್ನೂಬ್ಬರೂ ಎಲ್ಲಾ ಜೆರಾಕ್ಸ್ ಕಾಫೀಸ್.. ಉಫ್!

ಆದರೇ ನಮ್ಮ ಜೀವನ ಶೈಲಿಯೇ ಒಂದು ಚಮಾತ್ಕಾರ ಮತ್ತು ವೈಶಿಷ್ಟವಾಗಿದೆ. ಪ್ರತಿಯೊಬ್ಬರದು ಅವರದೇಯಾದ ಇಂಟರಸ್ಟಿಂಗ್ ಆದ ಸ್ವಭಾವ ಮತ್ತು ಗೆಲುವಿನ ಒಲುಮೆಯ ದಾರಿಗಳು.

ನಾನು ಇಷ್ಟಪಟ್ಟದ್ದನ್ನು ಇನ್ನೊಬ್ಬ ಇಷ್ಟಪಡದಂತೆ ಇರುವುದು. ನಾನು ಮಾಡುವ ರೀತಿ ಮತ್ತೊಬ್ಬ ಏನಂದರೂ ಮಾಡುವುದಿಲ್ಲ! ಆದರೇ ಕೊನೆಯ ಗುರಿ, ಸಾಧನೆ ಎಲ್ಲರದ್ದೂ ಒಂದೇಯಾಗಿದ್ದರೂ ಕ್ರಮಿಸುವ ದಾರಿ ವಿಭಿನ್ನವಾಗಿರುತ್ತದೆ. ಅದು ಆ ವ್ಯಕ್ತಿಗತ ಮನೋ/ಆತ್ಮ ಶಕ್ತಿಯ ಮೇಲೆ ಅವಲಂಬಿಸಿರುತ್ತದೆ.

ಅದಕ್ಕೆ ಇರಬೇಕು ನಮ್ಮಲ್ಲಿ ಇಂದು ಉತ್ಪತ್ತಿಯಾಗುತ್ತಿರುವ ವಿಪುಲವಾದ ಜೀವನ ನಿರೂಪಣೆಯ ಗೈಡ್, ಪುಸ್ತಕಗಳು, ಕೋಚಿಂಗ ಕ್ಲಾಸ್ ಗಳು, ಸತ್ಸಂಗಗಳು, ಉಪದೇಶಗಳು ಎಷ್ಟೊಂದು ಮಾರ್ಕೆಟ್ಸ್ ನಲ್ಲಿ ಅಲ್ಲವಾ?

ಎಲ್ಲವನ್ನೂ ಕೇಳಿ,ಓದಿ,ನೋಡಿ, ಅನುಭವಿಸಿದ ಮೇಲೆಯು ಸಹ ನಮ್ಮ ಗಟ್ಟಿಯಾದ ಸ್ವಭಾವಗಳನ್ನು ಅವುಗಳು ಏನಂದರೂ ಬದಲಾಯಿಸಲಾರವು. ಅದಕ್ಕೆ ಪುನಃ ಪುನಃ ಹೊಸ ಹೊಸ ಪುಸ್ತಕಗಳನ್ನು,ಕೋಚಿಂಗ್ ಕ್ಲಾಸ್ ಗಳನ್ನು, ಉಪದೇಶಗಳನ್ನು ಹುಡುಕಿಕೊಳ್ಳುತ್ತಾ ಹೋಗುತ್ತಾ ಹೋಗುತ್ತಾ ಅವರನ್ನು ಬೆಳೆಸುತ್ತೇವೆ ಮತ್ತು ನಮ್ಮ ಲ್ಲಿ ನಾವುಗಳೇ ಏನೋ ಒಂದು ಐಬೂ ಇದೆಯೇನೋ ಎಂಬ ರೀತಿಯಲ್ಲಿ ಕೂರಗುತ್ತಾ ಬದುಕುತ್ತೇವೆ.

ಸುಂದರವಾದ ಶಾಂತಿಮಯವಾದ ಉತ್ಕೃಷ್ಟವಾದ ಜೀವನವನ್ನು ನಡೆಸಲು ನಾವುಗಳು ಕೆಲವೊಂದು ಅಂಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ನಮ್ಮ ಮನಸ್ಸಿಗೆ, ಶರೀರಕ್ಕೆ ಅತ್ಯಂತ ಆರೋಗ್ಯಕರ. ಆಗಂತಹ ಯಾವಾಗಲೂ ಅಶಾಂತಿಯಿಂದ ನಿತ್ಯ ನಮ್ಮನ್ನು ಆಕರ್ಷಿಸುವ ಕೆವಲ ವ್ಯಾಪಾರಮಯವಾದ ವ್ಯಕ್ತಿತ್ವ ವಿಕಸನ ಶಿಭಿರ, ಪುಸ್ತಕ, ಉಪದೇಶಗಳಿಗೆ ಮನಸೋಲುವುದು ಮತ್ತು ನಮ್ಮನ್ನೇ ನಾವುಗಳು ನಮ್ಮ ನೈಜತ್ವವಾದ ವ್ಯಕ್ತಿತ್ವವನ್ನು ಕೀಳಾಗಿ ಕಾಣುವುದು ಏನು ಉಪಯೋಗ?

ನಮ್ಮಲ್ಲಿಯೇ ಇರುವ ಒಂದಷ್ಟು ಪಾಸಿಟಿವ್ ಅಂಶಗಳನ್ನು ಗುರುತಿಸಿ ಅವುಗಳೆಡೆಗೆ ಗಮನ ಹರಿಸಿ ಹೇಗೆ ನಮ್ಮ ಬದುಕನ್ನು ಅತ್ಯಂತ ಸುಂದರವಾಗಿ ಸಹ ಬಾಳ್ವೆಯಿಂದ ನಮ್ಮ ಸಹಚರರೊಡನೆ ಸಾಧನೆಯ ಕಡೆಗೆ ಸಾಗಬೇಕು ಎಂಬುದನ್ನು ಪ್ರತಿಯೊಬ್ಬರೂ ಕಲಿಯಬೇಕಾದದ್ದು ಬಹುಮುಖ್ಯವಾದದ್ದು.

ಹಾಗೆ ಏನಾದರೂ ಒಂದು ದಿನದಲ್ಲಿ, ಒಂದು ವಾರ, ತಿಂಗಳಿನಲ್ಲಿ ಆ ರೀತಿಯ ಬದಲಾವಣೆಯಾಗಿಬಿಟ್ಟಿದ್ದರೇ ಯೋಚಿಸಿ ಜಗತ್ತಿನಲ್ಲಿರುವವರೆಲ್ಲಾ ಮೋಸ್ಟ್ ಸಕ್ಸಸ್ ಫುಲ್ ವ್ಯಕ್ತಿಗಳಾಗಿಬಿಟ್ಟಿರುತ್ತಿದ್ದರು.

ಹಾಗೆ ಆಗಲು ಸಾಧ್ಯವಿಲ್ಲವೇ ಇಲ್ಲಾ ಅಂತ ಅಲ್ಲಾ.. ಆ ರೀತಿಯ ಸಾಧನೆಗಳು ಕೇವಲ ಯಾವುದೋ ಒಂದು ಪುಸ್ತಕ ಓದಿದ ಮಾತ್ರಕ್ಕೆ, ಉಪದೇಶ ಕೇಳಿದ ಮಾತ್ರಕ್ಕೆ ಬರುವಂತದ್ದಲ್ಲಾ.. ನಾವುಗಳು ಹೇಗೆ ನಮ್ಮ ಸಕರಾತ್ಮಕವಾದ ಗುಣಗಳನ್ನು ನಮ್ಮ ಬದುಕಿನಲ್ಲಿ ಕಂಡುಕೊಂಡು ಮುಂದುವರೆಯುತ್ತೇವೆ ಮತ್ತು ಗುರಿಯನ್ನು ಸಾಧಿಸಿಕೊಳ್ಳುತ್ತೇವೆ ಎಂಬುದು ನಿರ್ಧರಿಸುತ್ತದೆ..

ಐ ಹೋಪ್, ನಾನು ಉಪದೇಶವನ್ನು ಮಾಡಿಲ್ಲ ಅಲ್ಲವಾ?