ಮಂಗಳವಾರ, ನವೆಂಬರ್ 29, 2011

ಯು ಆರ್ ವೆರೀ ಮಚ್ ಪೂರ್ ಪೆಲೋ

ಹೊರಗಡೆ ತುಂತುರು ಮಳೆ, ಜೋರಾಗಿ ಬರುತ್ತಾನು ಇಲ್ಲ, ಪೂರ್ತಿ ನಿಲ್ಲುತ್ತಲೂ ಇಲ್ಲ. ಹೊರಗಡೆ ಹೆಜ್ಜೆ ಇಡಲು ಸಂಕೋಚ. ಏನೋ ಒಂದು ರೀತಿಯ ಬೇಜಾರು.

ಏನು ಮಾಡುವುದು? ಹಸಿ ಹಸಿ ಮಣ್ಣು ಕೊಂಚ ಕೊಂಚ ನೆನದ ನುಣ್ಣನೆಯ ಮಣ್ಣು ಚಪ್ಪಲಿಯ ಹಟ್ಟೆಗೆ ಪೂರ್ತಿ ಮೆತ್ತಿಕೊಂಡಿದೆ. ಇನ್ನೂ ಸುಮಾರು ದೂರ ನಡೆದರೆ ಮಾತ್ರ ಶೇರ್ಡ್ ಆಟೋ ಸಿಗುವುದು. ತಣ್ಣನೆಯ ಗಾಳಿ ಮೈಗೆ ಬೀಸುತ್ತಿದೆ. ಗಾಳಿಯಲ್ಲಿ ಚಿಕ್ಕ ಚಿಕ್ಕ ಹನಿಗಳನ್ನು ಸಾಗಿಸುತ್ತಿದೆ. ಮುಖಕ್ಕೆ ಚಿಕ್ಕ ಚಿಕ್ಕ ನುಣ್ಣನೆಯ ಹನಿಗಳ ಸ್ಪರ್ಶ. ದಾರಿಯನ್ನು ನೋಡುತ್ತಾ ನೋಡುತ್ತಾ ಯಾವುದಾದರೂ ಆಟೋ ಬರಬಹುದೇನೂ ಎಂಬ ಆಸೆಯ ಕಣ್ಣಿನ ನಿರೀಕ್ಷೆ.

ನಗರದ ಹೊರ ಭಾಗದಿಂದ ಸಿಟಿಯನ್ನು ತಲುಪಲು ಏನೂ ತೊಂದರೆಯಿಲ್ಲ. ಸುಂದರ ಸಂಜೆಯ ದಿನಗಳಲ್ಲಿ ಕಾಲಿಗೆ ಹಿತವಾದ ಒಂದು ನಡೆಯನ್ನು ಒದಗಿಸುತ್ತದೆ. ೪೫ ನಿಮಿಷಗಳ ನಡೆಯಲ್ಲಿ ಏಕಾಂತವಾಗಿ ದಾರಿಯನ್ನು ಸುತ್ತ ಮುತ್ತಾ ಗಮನಿಸುತ್ತಾ ಸುಲಭವಾಗಿ ನಗರವನ್ನು ಸೇರಿಬಿಡಬಹುದು. ಆದರೇ ಇಂದು ಯಾಕೋ ಮನಸ್ಸಿಗೆ ಮಂಕು ಕವಿದಂತೆ ಮಾಡಿದೆ ಈ ಮೋಡಕವಿದ ತುಂತುರು ಜಿಗುಟು ಮಳೆ.

ನಾ ಸೇರುವ ಮುಖ್ಯ ರಸ್ತೆಯವರೆಗೂ ಯಾವುದೇ ಒಂದು ಆಟೋ ಬರಲಿಲ್ಲ. ಸ್ವಲ್ಪ ಹೊತ್ತು ಅಲ್ಲಿಯೇ ಕಾದೇ. ಮಳೆಯಲ್ಲಿ ಸ್ವಲ್ಪ ಸ್ವಲ್ಪ ತಲೆ ನೆನೆಯುತ್ತಿತ್ತು. ಛತ್ರಿಯನ್ನು ಹಿಡಿದುಕೊಂಡು ಹೋಗಬೇಕು ಎನಿಸುವಂತಹ ಮಳೆಯಲ್ಲ ಇದು.

ಅಂತೋ ಗಾಂಧಿ ನಗರದಿಂದ ಒಂದು ಆಟೋ ನಗರದ ಕಡೆಗೆ ಸಾಗುತ್ತಾ ಬಂತು.




ನಾನು ಕೈ ಅಡ್ಡ ಹಿಡಿದ ತಕ್ಷಣ ನಿಂತಿತು. ಡ್ರೈವರ್ ಕೇಳಿದ "ಎಲ್ಲಿಗೆ ಹೋಗಬೇಕು ಸಾರ್?" ನಾನು "ಸರ್ಕಲ್ ಗೆ ಹೋಗಬೇಕು ಹೋಗುತ್ತಿರಾ?" ಅಂದೆ. "ಹೋ ನಾವು ಅಲ್ಲಿಯವರೆಗೂ ಹೋಗುವುದಿಲ್ಲಾ, ಅಸ್ಪತ್ರೆಯವರೆಗೂ ಹೋಗುತ್ತಿವಿ" ಅಂದಾ. "ಅಲ್ಲಿಂದ ಮುಂದಕ್ಕೆ ಹೋಗಿ" ಅಂದೆ. "ಇಲ್ಲ ಇದು ಶೇರ್ಡ ಅಲ್ಲಾ. ಆಸ್ಪತ್ರೆಯ ಹತ್ತಿರ ಬೇರೆಕಡೆ ಹೋಗುತ್ತೆ" ಅಂದಾ. "ಸರಿ!" ಅಂದೆ. "ಅಲ್ಲಿಯವರೆಗೂ ಬನ್ನಿ" ಅಂದಾ. ನನಗೋ ಆಗಲೆ ಐದು ನಿಮಿಷಗಳಿಂದ ಕಾದು ಕಾದು ಈ ಮಳೆಯ ಹನಿಗಳ ಕವನವನ್ನು ನೋಡಿದ್ದು ಸಾಕು ಅನಿಸಿರಬೇಕು. ಮತ್ತೇ ಕಾದರೆ ಯಾವ ಹೊಸ ಆಟೋಗಳು ಬರುವ ಸೂಚನೆಗಳೆ ಕಾಣದಂತಾಗಿತ್ತು. ಆದ್ದರಿಂದ ಆಟೋವನ್ನು ಹತ್ತಲು ಶುರುಮಾಡಿ ಹಿಂದೆ ಹೋಗಿ ಕುರಲು ತಯಾರಿ ನಡೆಸಿದೆ. ಹಿಂದೆ ಹೀಗಾಗಲೆ ಕುಳಿತವರು ಜಾಗವನ್ನು ಕೂಡಲು ಕೂಂಚ ಬಲಕ್ಕೆ ಸರಿದು ಕುಳಿತರು. "ಬೇಡ, ಇಲ್ಲೇ ಮುಂದೆ ನನ್ನ ಪಕ್ಕ ಕುಳಿತುಕೊಳ್ಳಿ ಸಾರ್" ಅಂದಾ. ನಾನು ಅವನ ಜೋತೆ ಕುಳಿತೆ.

ಆಟೋ ಸಾಗಿತು. ನಾನು ಯೋಚಿಸಲು ಪ್ರಾರಂಭಿಸಿದೆ. ಆಸ್ಪತ್ರೆಯವರೆಗೆ ಸಾಗಬೇಕು ಅಲ್ಲಿಂದ ಮತ್ತೇ ಇನ್ನೊಂದು ಆಟೋ ಹಿಡಿಯಬೇಕು. ನೋಡು ಏನು ಬುದ್ಧಿವಂತಿಕೆ ಬಾಡಿಗೆ ದುಡ್ಡು ಮತ್ತೇ ನನ್ನ ಬಳಿಯಿಂದ ಎಕ್ಸ್ ಟ್ರಾ ದುಡ್ಡು ಬೇರೆ. ಸ್ವಲ್ಪ ಹೆಚ್ಚಿಗೆ ಸಂಪಾದಿಸಿಕೊಳ್ಳಬಹುದು ಅಂತಾ ನನ್ನ ಹತ್ತಿಸಿಕೊಂಡಿದ್ದಾನೆ. ಹೊಟ್ಟೆ ಪಾಡು!

ಮತ್ತೇ ನನ್ನ ಯೋಚನೆಯ ದಿಕ್ಕು....ಈಗ ಇವನಿಗೆ ಎಷ್ಟು ದುಡ್ಡು ಕೊಡಬೇಕು. ನೇರವಾದ ಆಟೋ ಆಗಿದ್ದರೆ, ಐದು ರೂಪಯಿಗಳಿಗೆ ಸರ್ಕಲ್ ವರೆಗೆ ಕರೆದುಕೊಂಡು ಹೋಗುತ್ತಿದ್ದಾ. ಈಗ ಇವನು ಆಸ್ಪತ್ರೆಯವರೆಗೆ ಕರೆದುಕೊಂಡು ಹೋಗುತ್ತಿದ್ದಾನೆ. ಅರ್ದ ಚಾರ್ಜು ಕೊಟ್ಟರೆ ನನ್ನ ಮುಖ ನೋಡಬಹುದು. ಏನ್ ಕಂಜ್ಯೂಸ್ ಜನ ಎನ್ನಬಹುದು. ಇಲ್ಲಾ ಪೂರ್ತಿ ಹತ್ತು ರೂಪಾಯಿಗಳನ್ನೇ ಕೊಡೊಣಾ. ಅವನೇ ಎಷ್ಟು ಜಾರ್ಜು ಮುರಿದುಕೊಂಡು ಹಿಂತಿರುಗಿಸುತ್ತಾನೋ ತಿರುಗಿಸಲಿ ಎಂದು ಮನದಲ್ಲೇ ನಿರ್ಧರಿಸಿದೆ. ತಣ್ಣನೆಯ ಗಾಳಿ ಮುಖಕ್ಕೆ ಬೀಸುತ್ತಿತ್ತು. ಒಂದು ಎರಡು ಹನಿಗಳು ಮುಖಕ್ಕೆ ಬೀಳುತ್ತಿದ್ದವು. ಆಟೋ ಪುಲ್ ನಿಶಬ್ಧ ಕೇವಲ ಆಟೋ ಇಂಜೀನ್ ಶಬ್ಧ ಮಾತ್ರ ಕೇಳಿಸುತ್ತಿತ್ತು.

ಆಸ್ಪತ್ರೆ ಹತ್ತಿರ ಬಂದಂತಾಯಿತು. ನಾನು "ನೀವು ಎಡಗಡೆ ಆಸ್ಪತ್ರೆ ಮುಂದೆ ಹೋಗುತ್ತಿರಾ?" ಎಂದೆ. "ಹೌದು!" ಎಂದಾ. "ಇಲ್ಲಿಯೇ ನಿಲ್ಲಿಸಿ" ಅಂದೆ.

ಆಟೋ ನಿಂತಿತು. ನಾನು ಆಟೋ ಇಳಿಯುವ ಸಮಯದಲ್ಲಿಯೇ ಜೇಬಿಗೆ ಕೈ ಹಾಕಿ ಹತ್ತು ರೂಪಾಯಿಯನ್ನು ತೆಗೆಯುತ್ತಾ ಇಳಿದೆ. ಹತ್ತು ರೂಪಾಯಿ ನೋಟ್ ನ್ನು ತೆಗೆದು, "ತಗೋಳ್ಳಿ" ಅಂದೆ. ಆದರೇ ಆಟೋ ಡ್ರೈವರ್ ನಗುತ್ತಾ "ಪರವಾಗಿಲ್ಲಾ ಬೇಡ" ಅನ್ನುತ್ತಾ ಆಟೋದ ಎಕ್ಸ್ ಲೇಟರ್ ನ ಕಿವಿ ಹಿಂಡುತ್ತಾ ಮುಂದೆ ಸಾಗಿಬಿಟ್ಟ.

ನನಗೆ ಶಾಕ್! ಏನೂ ಇವನು ನನ್ನ ಮನದ ಮಣ್ಣಿಗೆಯನ್ನು ಕಂಡುಬಿಟ್ಟನೇ? ಮತ್ತು ಇರಲಿಕ್ಕಿಲ್ಲಾ. ಏನೋ ಒಂದು ಸಹಾಯವನ್ನು ಮಾಡಿರಬೇಕು. ಮಳೆಯಲ್ಲಿ ನೆನೆಯುತ್ತಾ ನಿಲ್ಲುವಬದಲು ಮುಖ್ಯ ರಸ್ತೆಗೆ ಇವರುಗಳನ್ನು ಬಿಟ್ಟರೆ ಬೇರೊಂದು ವಾಹನದಲ್ಲಿ ಇವರುಗಳು ಸೇರುವ ಜಾಗ ಸೇರಬಹುದು ಎಂಬ ಉಯೆಯಿಂದ? ಗೊತ್ತಿಲ್ಲಾ.

ನಾನು ಅಯ್ಯೋ ಒಂದು ಥ್ಯಾಂಕ್ಸ್ ಆದರೂ ಹೇಳಬಹುದಾಗಿತ್ತು. ಅವನು ಅದು ಯಾವುದಕ್ಕೂ ಅಸ್ಪದ ಕೊಡದೆ ನನ್ನ ಎಲ್ಲಾ ಲೆಕ್ಕಚಾರವನ್ನೆ ಒಂದೇ ಕ್ಷಣದಲ್ಲಿ ಉಲ್ಟಾ ಮಾಡಿಬಿಟ್ಟು ದೊಡ್ಡ ವ್ಯಕ್ತಿ ಅನಿಸಿಕೊಂಡುಬಿಟ್ಟನಲ್ಲಾ ಅನಿಸಿತು.

ನನಗೆ ನಾನೇ ನಗುತ್ತಾ ಅಲ್ಲಿಂದ ಇಲ್ಲಿಯವರೆಗೂ ಎಷ್ಟೊಂದು ಲೆಕ್ಕಚಾರ ಹಾಕಿಕೊಂಡು ಬಂದೆನಲ್ಲಾ. "ಯು ಆರ್ ವೆರೀ ಮಚ್ ಪೂರ್ ಪೆಲೋ" ಅಂದುಕೊಂಡೆ.

ಇದೆ ಅಲ್ಲವಾ ವಿಪರ್ಯಾಸ ಅನ್ನುವುದು. ಏನೂ ಏನೋ ಮನದಲ್ಲಿ ಮಣ್ಣಿಗೆಯನ್ನು ಬೇರೆಯವರ ಬಗ್ಗೆ ತಿನ್ನುತ್ತಿರುತ್ತೇವೆ. ಅದರೆ ಸಾಮಾನ್ಯ ಜನಗಳು ಅಸಾಮಾನ್ಯವಾಗಿ ವರ್ತಿಸುತ್ತಾರೆ. ಆಟೋದವರೂ ಅಂದರೇ ಸುಲಿಯುವವರು ಅಂಥಾ ನಾವುಗಳು ದೂರುತ್ತೇವೆ. ಎಲ್ಲಾ ರಂಗಗಳಲ್ಲೂ ಅಂಥವರು ಇರುತ್ತಾರೆ, ಇಂಥವರುಗಳು ಇರುತ್ತಾರೆ.

ಸೋಮವಾರ, ನವೆಂಬರ್ 21, 2011

ಬದಲಾವಣೆಗೆ ಮುಂದಾಗಬೇಕು!

ಜೀವನವೇ ಹೀಗೆ ಅನಿಸುತ್ತದೆ. ನಾವು ಕೆಲಸ ಮಾಡುವ ಜಾಗ, ನಾವು ಇರುವ ತಾಣಗಳು ಒಂದು ರೀತಿಯಲ್ಲಿ ನಮ್ಮಗಳ ಅಲ್ಲಿನ ಪರಿಸರಕ್ಕೆ ತಕ್ಕಂತೆ ನಮ್ಮ ಮೇಲೆ ಪರಿಣಾಮ ಬೀರುತ್ತವೆ.

ಆ ಜಾಗಗಳಲ್ಲಿ ಅವುಗಳಿಗೆ ಒಪ್ಪುವಂತೆ ನಾವುಗಳು ವರ್ತಿಸಬೇಕಾಗುತ್ತದೆ. ಮತ್ತು ಅದಕ್ಕಾಗಿಯೇ ನಮ್ಮ ನಡವಳಿಕೆಯ ಶೈಲಿಯೇ ಬದಲಾವಣೆಯಾಗುತ್ತದೆ. ಇದು ಜಾಗದ ಮಹಿಮೆಯಾ? ನಮ್ಮಗಳ ಆ ರೀತಿಯ ಭಾವನೆಯಾ? ಗೊತ್ತಿಲ್ಲ!

ಅದಕ್ಕೆ ಹೇಳುವುದು ಚಿಕ್ಕವರಾಗಿದ್ದಾಗ ಒಳ್ಳೆ ಪರಿಸರದಲ್ಲಿ ಮಕ್ಕಳನ್ನು ಬೆಳಸಬೇಕು. ಪರಿಸರದ ಕೂಸುಗಳೇ ನಾವುಗಳು ಅನಿಸುತ್ತದೆ?

ನಿಮಗೆ ಗೊತ್ತು. ಕಾಲೇಜು ರಂಗದಲ್ಲಿ ಓದುವಂತಹ ಹುಡುಗ ಹುಡುಗಿಯರ ಜೀವನ ಶೈಲಿ ಅವರುಗಳ ಮಾತು, ವರಸೆಯೇ ವಿಭಿನ್ನ.

ಅದು ಕಾಲೇಜು ಡೇಸ್ ಅನ್ನಬಹುದು. ಅವರುಗಳ ಮಾತಿನ ದಾಟಿಯೇ ಡಿಪರೇಂಟ್! ಆ ವಾತವರಣದಲ್ಲಿ ನಿತ್ಯ ಅವರುಗಳು ಮಾತನಾಡುವುದು ಅದೇ ಸಾಮಾನ್ಯವಾಗಿ ಪುನಃ ಪುನಃ ಪುನವರ್ತನೆಯಾಗುವ ಒಂದಷ್ಟು ಶಬ್ಧಾಭಂಡಾರವನ್ನೆ ಬಳಸುತ್ತಾರೆ.

ಅದೇ ಕಾಲೇಜು, ಕ್ಲಾಸ್, ಲೇಕ್ಚರ್, ಪ್ರೀನ್ಸಿಪಾಲ್, ಹುಡುಗಿಯರು, ಡ್ರೇಸ್, ಮೋವಿ, ಹಾಡು, ತಿಂಡಿ ಇತ್ಯಾದಿಗಳಿಗೆ ಸೀಮಿತವಾದ ಪದಗಳ ಬಳಕೆಯಿರುತ್ತದೆ.

ಅವುಗಳನ್ನು ನಾವುಗಳು ನಾವು ಸೇರಿ ಕೆಲಸ ಮಾಡುವ ಜಾಗದವರೆಗೂ ತಂದು, ಒಂದಷ್ಟು ವರ್ಷ ಬಳಸುತ್ತಲೇ ಇರುತ್ತೇವೆ. ಅದು ಸವಕಲಾಗುವುದು ಪುನಃ ಹೊಸ ಪರಿಸರದ ಪರಿಣಾಮದಿಂದ.

ಗಮನಿಸಿ ನಮ್ಮ ನಡಾವಳಿಯ ಮೇಲೆ ಪರಿಸರಕ್ಕಿಂತ ಅಲ್ಲಿ ನಮ್ಮಗಳಿಗೆ ಜೊತೆಯಾಗುವ ನಮ್ಮ ಆತ್ಮೀಯರ ನಡಾವಳಿಯೇ ನಮ್ಮ ಮೇಲೆ ಪರಿಣಾಮ ಬೀರಿರುತ್ತದೆ. ಅವರುಗಳು ಮಾತನಾಡುವ ಮಾತುಗಳು, ಧರಿಸುವ ಬಟ್ಟೆ, ಬರಿ, ತಿನ್ನುವ ತಿಂಡಿ, ತೀರ್ಥ ಮತ್ತು ಅವರುಗಳ ಯೋಚನಾ ಲಹರಿ ನಮ್ಮನ್ನು ಅದೇ ಚಾನಲ್ ನಲ್ಲಿ ಯೋಚಿಸುವಂತೆ ಮಾಡಿ ನಮ್ಮನ್ನು ಬದಲಾವಣೆಗೆ ಒಡ್ಡುತ್ತದೆ.

ಬದಲಾವಣೆಯೇ ಜೀವನ! ಎನ್ನುವಂತೆ ಮನುಷ್ಯ ತಾನು ಇರುವ ಜಾಗಗಳಲ್ಲಿ ಹೊಸ ಹೊಸತನಕ್ಕೆ ತೆರೆದುಕೊಳ್ಳುತ್ತಲೇ ಸಾಗುತ್ತಾನೆ.

ನಮ್ಮ ಐ.ಟಿ-ಬಿ.ಟಿ ಮಂದಿಯನ್ನು ಕೇಳುವುದೇ ಬೇಡ. ಅದು ಅದರದೇಯಾದ ಒಂದು ಪ್ರಪಂಚ. ಅದನ್ನು ಬಿಟ್ಟು ಹೊರ ಜಗತ್ತಿನ ಪರಿವೇ ಇಲ್ಲದ ರೀತಿಯ ಧ್ಯಾನಸ್ಥ ಸಮಾಧಿ?

ಕೆಲವೊಂದು ಮಂದಿಯಿದ್ದಾರೆ ನಮ್ಮ ಸುತ್ತಲಿನ ಪರಿಸರದಲ್ಲಿ ಏನೂ ಏನಾಗುತ್ತಿದೆ ಎಂಬುದು ಸಹ ಗೊತ್ತಿಲ್ಲದ ಗಾವಿದರ ರೀತಿಯಲ್ಲಿ ತಮ್ಮ ಕೆಲಸದಲ್ಲಿ ಮುಳುಗಿ ಹೋಗಿಬಿಟ್ಟಿರುತ್ತಾರೆ. ಅದು ಕೆಲಸದ ಒತ್ತಡ ಎಂದು ನಾವುಗಳು ನೀವುಗಳು ಹೇಳಬಹುದು ಅದರೂ ಏನೇ ಕೆಲಸದ ಒತ್ತಡವಿದ್ದರೂ ಇಂಟರಸ್ಟ್ ಎಂಬುದು ಇಲ್ಲದಿದ್ದರೇ ಏನು ಮಾಡಲಾಗುವುದಿಲ್ಲ.

ಕೆಲವೊಂದು ಮಂದಿ ಚಿಕ್ಕ ನ್ಯೂಸ್ ಪೇಪರ್ ಓದಲಾರದಷ್ಟು ತಮ್ಮ ಕೆಲಸದಲ್ಲಿ ನಿರತರಾಗಿರುತ್ತಾರೆ. ಆದರೆ ಅದೇ ಅವರ ಕೆಲಸಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಅವರಲ್ಲಿ ಇರುತ್ತದೆ. ಮತ್ತೇ ಅದೇ ಟೆಕ್ನಾಲಜಿ, ಕಾಲು, ಮೀಟಿಂಗು, ಹೈಕು, ಮಾರ್ಕೆಟ್ ಅಪಡೇಟ್ಸ್ ಇತ್ಯಾದಿಯಲ್ಲಿಯೇ ಮುಳುಗಿ ಹೋಗಿರುತ್ತಾರೆ.





ನಾವು ಕೆಲಸ ಮಾಡುವ ಜಾಗಗಳು ಹಾಗೆಯೇ ಫುಲ್ ಪ್ಯಾಕ್. ಒಳಗಡೆ ಬಂದು ಕಂಪ್ಯೂಟರ್ ಮುಂದೆ ನಾವುಗಳು ಸ್ಥಾಪಿತವಾದರೇ ಮುಗಿಯಿತು ಹೊರಗಡೆ ದೋ......! ಎಂದು ಮಳೆ ಬಂದರೂ ಒಳಗಡೆ ಫುಲ್ ಎ.ಸಿ ಪ್ಲೋರ್ ಆಗಿರುವುದರಿಂದ ಯಾವೊಂದು ಪರಿವೆಯೇ ಇರುವುದಿಲ್ಲ. ಆ ರೀತಿಯ ವಾತವರಣದ ಕೊಡಗೆ ಐ.ಟಿ ಕಡೆಯಿಂದ. ಒಂದು ವಾರದ ಐದು ದಿನಗಳಲ್ಲಿ ಏನೊಂದನ್ನು ಚಿಂತಿಸುವುದಕ್ಕೆ ಬಿಡುವುದಿಲ್ಲ.

ಮನೆಗೆ ಹೊತ್ತಲ್ಲಾ ಹೊತ್ತಿನಲ್ಲಿ ಬಂದು.. ಯಾವುದೋ ಸಮಯದಲ್ಲಿ ಮಲಗಿ ಪುನಃ ಆಫೀಸ್ ಕಡೆ ಮುಖ ಮಾಡುವುದು.. ಮನೆಯಲ್ಲಿ ಯಾರೊಂದಿಗೂ ಒಂದು ಕ್ಷಣ ಸಮಧಾನದ ಮಾತುಗಳನ್ನು ಮಾತನಾಡಲು ಆಗುವುದಿಲ್ಲ. ಅದೇ ಮನದ ತುಂಬ ಆ ಲಾಜಿಕ್, ಆ ಕಾಲು, ಆ ಕ್ಲೈಂಟ್ ಯಸ್ಕಾಲೇಶನ್, ಆ ಕೋಡಿಂಗ್, ಆ ಮ್ಯಾನೇಜರ್ ಕಿರಿಕ್.. ಇತ್ಯಾದಿ ಇತ್ಯಾದಿಗಳ ಚಿತ್ತಾರವೇ ತುಂಬಿರುತ್ತದೆ. ಅದನ್ನು ಬಿಟ್ಟು ಬೇರೆಯದನ್ನು ಚಿಂತಿಸಿದರೇ ಕೇಳಿ!

ಪಾಪ ಅನಿಸುತ್ತಿದಿಯೇ?

ಹೌದು! ಇದೇ ನಮ್ಮಗಳ ಕೆಲಸ. ಇಲ್ಲವೆಂದರೇ ನಮ್ಮಗಳ ಬದುಕು ಸಾಗುವುದು ದುರ್ಲಬ ಸ್ವಾಮಿ!

ಯಾಕೆಂದರೇ ಅಷ್ಟೊಂದು ಸಂಬಳ ಕೊಟ್ಟು ಸುಮ್ಮನೇ ಕೂರಿಸುವುದಕ್ಕೆ ಅವರೇನೂ ನಮ್ಮ ಮಾವಂದಿರೇ? ಅದು ವ್ಯಾಪಾರದ ಜೀವನ. ಹಣಕ್ಕೆ ತಕ್ಕ ಹಾಗೆ ಸೇವೆ ನೀಡಬೇಕು. ಅದಕ್ಕೆ ತಕ್ಕಂತೇ ನೀವು ವೇಗವಾಗಿ ಓಡಬೇಕು..ಅದು ಸಮಯ ಗೀಮಯದ ಎಲ್ಲೆ ಮೀರಿ.

ಇಂಥ ಪರಿಸರದಲ್ಲಿ ದಿನದ ಹೆಚ್ಚು ಸಮಯ ಜೀವಿಸುವ ಮಂದಿಯ ನಡಾವಳಿಯನ್ನು ಯಾವ ರೀತಿಯಲ್ಲಿ ಕಾಣಬೇಕೋ... ಅದು ತುಂಬ ಕ್ಲೀಷ್ಟಕರವಾದ ಸಂಗತಿ.

ನೋಡುವುದಕ್ಕೆ ಪಳ ಪಳ ಬಟ್ಟೆಗಳನ್ನು ಹಾಕಿಕೊಂಡಿರುತ್ತಾರೆ ಅಷ್ಟೇ. ಮನದ ತುಂಬ ಅತಿಯಾದ ಧಾವಂತ.. ಕೆಲಸದ ಬಗ್ಗೆ ಮಾತ್ರ ಯೋಚನೆ.. ತೃಪ್ತಿ ಅನ್ನುವುದು ಪದ ಮಾತ್ರವೇ ಸರಿ.

ಅಷ್ಟೊಂದೂ ಸಂಬಳ ಪಡೆದಿರುತ್ತಾರೆ. ಮಜಾ ಮಾಡಲು ಜಗತ್ತೇ ಕಾದಿರುತ್ತದೆ. ಆದರೇ ಎಲ್ಲಿ ಮಜಾ ಮಾಡಲಾಗುತ್ತದೆ? ಸಾಧ್ಯವಿಲ್ಲದ ಮಾತು ಅನಿಸುತ್ತದೆ. ಯಾಕೆಂದರೇ ಯಾವಗಲೂ ಧಾವಂತದ ಬದುಕು ಮಾತ್ರ. ಬರೀ ರನ್ನಿಂಗ ರೇಸ್ ಅಷ್ಟೇ...........?

ಬಾಯಿಬಿಡುವುದು ಸಹ ಕಷ್ಟಕರವಾದ ಸಂಗತಿ. ಯಾವಾಗಲೂ ಏನೋ ಗಾಡವಾದ ಯೋಚನೆಯಲ್ಲಿ ಮಗ್ನ. ತಿನ್ನುವಾಗಲೂ ಅದು ಹೀಗೆ, ನಮ್ಮ ಟೀಂ ಸರಿಯಿಲ್ಲ ಗುರು.. ಎಲ್ಲಿಂದ ಬಂದಿದಾರೋ......? ಡೇಡ್ ಲೈನ್ ಬೇರೆ ಬರುತ್ತಿದೆ.. ವಿಕೇಂಡ್ ವರ್ಕ ಮಾಡಬೇಕು.. ಉಫ್!

ಎದುರಿಗೆ ಬಂದವರಿಗೆ ಹಾಯ್! ಎನ್ನಲಾರದಷ್ಟು ಸಂಕೋಚ. ಹಾಯ್ ಎಂದರೂ ಅದೇ ಕೇವಲ ಎರಡೇ ಎರಡು ಸವಕಲಾದ ಮಾತುಗಳು.

ಹೌ ಆರ್ ಯು?

ಹೌ ಇಸ್ ಯುವರ್ ವರ್ಕ್?

ವಿಚ್ ಟೆಕ್ನಾಲಜಿ ಯು ಆರ್ ವರ್ಕಿಂಗ್?

ಕೆಲಸ ಚೇಂಜ್ ಮಾಡ್ತಾ ಇದ್ದೀಯ?

ಪೇಪರ್ ಹಾಕಿದ್ಯಾ? ಇತ್ಯಾದಿ..

ಬೇರೆ ವಿಷಯಗಳೇ ಬಾಯಿಗೆ ಬರುವುದಿಲ್ಲ. ನನಗೆ ಅನಿಸುತ್ತದೆ ಸ್ವಲ್ಪ ದಿನಗಳಲ್ಲಿ ಈ ಮಂದಿ ಒಂದಷ್ಟು ಪದಗಳನ್ನು ಇತಿಹಾಸ ಸೇರಿಸಿಬಿಡುತ್ತಾರೆ.

ಇದು ನಮ್ಮ ಕೇವಲ ಐ.ಟಿ ರಂಗದಲ್ಲಿ ಮಾತ್ರವಲ್ಲಾ ಮಾರಾಯ್ರೆ ಪ್ರತಿಯೊಂದು ರಂಗದಲ್ಲೂ ಅದರದೇಯಾದ ಒಂದು ಪರಿಸರ ಪರಿಣಾಮವನ್ನು ಗೊತ್ತಿಲ್ಲದ ರೀತಿಯಲ್ಲಿ ಬಿತ್ತಿರುತ್ತದೆ. ಬಿತ್ತುವವರು ಮತ್ಯಾರೂ ಅಲ್ಲ. ನಾವುಗಳು ನೀವುಗಳು!

ಇದು ಯಾಕೇ?

ಇದನ್ನು ಸ್ವಲ್ಪ ಬದಲಾಯಿಸಿಕೊಂಡು, ಇಂಥ ಬಿಗಿಯಾದ ವಾತಾವರಣವನ್ನು ಸುಲಲಿತವಾದ ಸಂತಸ ನೀಡುವಂತಹ ಜಾಗಗಳನ್ನಾಗಿ ಮಾಡಿಕೊಂಡು ಬದುಕಲು ಸಾಧ್ಯವಿಲ್ಲವೇ?

ಕೆಲಸ ಎಂಬುದು ಜೀವನದ ಒಂದು ಭಾಗ ಮಾತ್ರ. ಅದೇ ಪೂರ್ತಿ ಜೀವನವಲ್ಲ ಅಲ್ಲವೇ? ಅದನ್ನು ಬಿಟ್ಟು ಸಾವಿರ ಸಾವಿರ ವಿಷಯ ವಿಶೇಷಗಳು ನಮ್ಮ ನಿಮ್ಮಗಳ ಮಧ್ಯ ಇವೆ.

ಇಂದಿನ ಈ ದಿನಗಳಲ್ಲಿ ನಾವುಗಳು ತುಂಬ ಯಾಂತ್ರಿಕವಾಗಿ ಬದುಕುವುದು ಬೇಡ ಅನ್ನಿಸುತ್ತದೆ.

ಎಲ್ಲಾ ನಮ್ಮಗಳ ಕೈಯಲ್ಲಿ ಇರುವಾಗ ನಾವುಗಳು ಸ್ವಲ್ಪ ಬದಲಾವಣೆಗೆ ಮುಂದಾಗಬೇಕು. ಯಾಕೆಂದರೇ ಯಾವುದನ್ನು ನಾವುಗಳು ಸೃಷ್ಟಿಸಿರುವೆವೋ ಅದಕ್ಕೆ ಇತಿ ಮೀತಿಗಳನ್ನು ನಾವುಗಳೇ ಹಾಕಿಕೊಳ್ಳಬೇಕು.. ಆಗ ಮಾತ್ರ ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ಸಮರಸದಿಂದ ಜೀವಿಸಲು ಸಾಧ್ಯ!

ಸೋಮವಾರ, ನವೆಂಬರ್ 14, 2011

ಮಕ್ಕಳಿರಲವ್ವಾ ಮನೆ ತುಂಬ..

ಬಾಲ್ಯ ಯಾರೂ ಯಾವತ್ತಿಗೂ ಮರೆಯಲಾರದಂತ ದಿನಗಳು. ಅವುಗಳ ಪುನರ್ ಮೆಲುಕು ನಮ್ಮ ವಯಸ್ಸು ಕಳೆದ ಈ ದಿನಗಳಲ್ಲಿ ಬಹಳ ಹಿತವಾಗಿರುವಂತಹ ನೆನಪುಗಳಾಗಿರುತ್ತವೆ. ನವಮಾಸಗಳನ್ನು ಕಳೆದು ತಾಯಿಯ ಗರ್ಭದಿಂದ ಭೂಮಿಗೆ ಅವತರಿಸಿದ ದಿನಗಳಿಂದ ಪ್ರಾರಂಭವಾಗುವ ಮೊದಲ ದಿನಗಳೇ ಬಾಲ್ಯ.

ಮಕ್ಕಳಿರಲವ್ವಾ ಮನೆ ತುಂಬ ಎಂಬ ಜನಪದರ ಹಾಡಿನ ರೀತಿಯಲ್ಲಿ ಬಾಲ್ಯದಲ್ಲಿ ಮಾಡುವ ಪ್ರತಿಯೊಂದು ಆಟ-ಪಾಠಗಳು, ರೀತಿ ನೀತಿಗಳು ಮನೆಮಂದಿಯನ್ನೆಲ್ಲಾ ಮೆಚ್ಚಿಸುತ್ತದೆ. ಮಕ್ಕಳ ಅಳು, ಕೇಕೆ, ಕೂಗು, ಹಠಮಾರಿತನ, ರಂಪಾ ರಾಡಿ ಪ್ರತಿಯೊಂದು ಕಲಾತ್ಮಕವಾಗಿ ಎಲ್ಲರನ್ನು ರಂಜಿಸುತ್ತದೆ.

ಹೆತ್ತವರ ಕರುಳು ಆ ಸಮಯದಲ್ಲಿ ಸಂಭ್ರಮಿಸುವುದನ್ನು ಏನೂ ಕೊಟ್ಟಾಗಲು ಕಾಣುವುದಿಲ್ಲ. ಬಳ್ಳಿಗೆ ಕಾಯಿ ಭಾರವಲ್ಲ ಎಂಬ ರೀತಿಯಲ್ಲಿ ಎಷ್ಟೇ ಮಕ್ಕಳಿದ್ದರೂ ಹೆತ್ತ ತಾಯಿಗೆ ಕಷ್ಟ ಅನಿಸುವುದಿಲ್ಲ. ಯಾಕೆಂದರೇ ಅವು ಕರುಳ ಬಳ್ಳಿಗಳು.

ಒಂದೂ ಐದು ವರ್ಷದವರೆಗೆ ನಾವುಗಳು ಮಾಡಿದ ಯಾವೊಂದು ಚಟುವಟಿಕೆಗಳು ನಮ್ಮ ಮನಸ್ಸಿನಲ್ಲಿ ನೆನಪಾಗಿ ನಿಂತಿರುವುದಿಲ್ಲ. ಆ ವಯಸ್ಸೇ ಹಾಗೆ ಯಾವುದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಆದರೇ ನಾವುಗಳು ಇಂದು ನಮ್ಮ ಮುಂದೆ ಇರುವ ಅದೇ ವಯಸ್ಸಿನ ಮಕ್ಕಳನ್ನು ನೋಡಿಕೊಂಡು ಅವರುಗಳು ಮಾಡುವ ತುಂಟಾಟವನ್ನು,ಹೆತ್ತವರಿಗೆ ಕೊಡುವ ತೊಂದರೆಯನ್ನು ಕಂಡು ನಾವುಗಳು ಹೀಗೆ ಚಿಕ್ಕವರಾಗಿದಾಗ ನಕ್ಕು, ನಲಿದಿರಬಹುದು, ಗೋಳು ಹೊಯ್ದುಕೊಂಡಿರಬಹುದು ಎಂದುಕೊಳ್ಳಬಹುದು.



ಗಮನಿಸಿ ಅತಿ ಚಿಕ್ಕ ಮಕ್ಕಳನ್ನು ಸಾಕಿ ಸಲುಹಿದ ತಂದೆ-ತಾಯಿ, ಅಜ್ಜ - ಅಜಿಗಳೇ ಗ್ರೇಟ್ ಅವರುಗಳ ಸಂಬಾಳಿಕೆ ಇಲ್ಲದಿದ್ದರೇ ನಾವುಗಳು ಈ ರೀತಿ ಬೆಳೆದು ದೊಡ್ಡವರಾಗುತ್ತಿರಲೇ ಇಲ್ಲ. ಅವರ ಹಾರೈಕೆಯ ಫಲವೇ ಇಂದಿನ ನಾವುಗಳು. ನಮ್ಮ ಸಮಾಜದ ಈ ಒಂದು ಬಿಡಿಸಿಲಾರದ ಕೌಟಂಬಿಕ ನಂಟನ್ನು ಎಷ್ಟು ಕೊಂಡಾಡಿದರೂ ಕಡಿಮೆಯೆ.

ಹಾಲು ಕುಡಿಯು ಹಸುಳೆಯಿಂದ ಈ ಮಟ್ಟಗೆ ಬೆಳೆದು ದೊಡ್ಡವರಾಗಲು ಸಹಕರಿಸಿದ ಮನೆಯ ಮಂದಿಯ ಹಿರಿಯರ ಸೇವೆಯ ಹಿರಿಮೆ ದೊಡ್ಡದು. ಹೇಗೆ ಹೇಗೆ ನಮ್ಮ ಹೆತ್ತವರನ್ನು ಗೋಳು ಹೋಯ್ದು ಕೊಂಡಿರುವೆವು ಎಂಬುದನ್ನು ತಿಳಿಯಲು, ನಾವುಗಳು ಯಾವುದಾದರೂ ಒಂದು ಚಿಕ್ಕ ಮಗುವನ್ನು ಒಂದು ದಿನದ ಮಟ್ಟಿಗೆ ಸಂಬಾಳಿಸಿಕೊಂಡು ಇಟ್ಟುಕೊಂಡರೆ ಗೊತ್ತಾಗುತ್ತದೆ.

ಆದರೇ ಹಾಗೆ ನಾವುಗಳು ನಮ್ಮ ಬಾಲ್ಯದಲ್ಲಿ ನಮ್ಮ ಮನೆಯವರಿಗೆಲ್ಲಾ ಯಾವುದೇ ಒಂದು ರೀತಿಯಲ್ಲಿ ಮಾಡಿದ್ದರೂ ಅದಕ್ಕೆ ಮನ್ನಣೆ ಇರುತ್ತದೆ. ಯಾಕೆಂದರೇ "ಮಗು ಕಣಮ್ಮಾ ಅದಕ್ಕೆ ಏನೂ ಗೊತ್ತಾಗುತ್ತದೆ. ಹಠ ಮಾಡುತ್ತದೆ". ಹೀಗೆ ನಮ್ಮ ಅಜ್ಜ-ಅಜ್ಜಿಯರಿಂದ ನಮ್ಮಗಳಿಗೆ ಅಸರೆಯ ಕಕ್ಕುಲಾತಿಯ ಮಾತು ಸಿಕ್ಕಿರುತ್ತದೆ. ಅಪ್ಪ -ಅಮ್ಮ ಹೊಡೆಯಲು ಬಂದಾಗ ಅಜ್ಜಿಯ ಸೆರಗಿನಲ್ಲಿ ಹುದುಗಿಕೊಂಡ ಕ್ಷಣ. ಅಂಗಡಿಯಿಂದ ಅಜ್ಜ ತಂದುಕೊಟ್ಟ ಪೇಪ್ಪರಮೆಂಟು ತಿಂದ ದಿನಗಳ ಮೆಲುಕು.. ಇಂದು ನೆನಪಿಸಿಕೊಂಡರೂ ಅದರ ಸವಿಯ ರಸ ಬಾಯಲ್ಲಿ ಎಲ್ಲೂ ಇನ್ನೂ ನಿಂತಿದೆ ಅನ್ನಿಸುತ್ತದೆ.

ಮೊದಲ ಸಲ ಶಾಲೆಗೆ ಹೋಗಲು ಸುತಾರಾಮ್ ಒಪ್ಪದೆ ಕೊಂಟಾಟವಾಡಿದ್ದು.. ಶಾಲೆಯ ಮೇಸ್ಟರ್ ಭಯದಲ್ಲಿ ನಡುಗಿದ ಅಳುವಿನ ಕಣ್ಣೀರು ಇಂದು ಸಹ ನೆನಪಿದೆ. ಅಲ್ಲಿ ಆಟವಾಡುತ್ತಾ ಎಡವಿ ಬಿದ್ದು ಕಾಲಿನ ಉಗರನ್ನು ಕಳೆದುಕೊಂಡು ನೋವಿನಲ್ಲಿ ಒಂದು ವಾರ ಅತ್ತು ಕರೆದದ್ದು.

ಅಜ್ಜಿಯ ಅನುಭವದ ಮೂಸೆಯಲ್ಲಿ ಒಡಮೂಡಿದ ಸಣ್ಣ ಸಣ್ಣ ಕಥೆಗಳು, ಅದನ್ನು ಕೇಳಲೆಬೇಕೆಂಬ ರೀತಿಯಲ್ಲಿ ರಾತ್ರಿಯೀಡಿ ಅಜ್ಜಿಯ ಮಗ್ಗುಲಲ್ಲಿ ಮಲಗಲು ಅತ್ತಿದ್ದು.

ಅಮ್ಮ ಎಲ್ಲಾದರೂ ಹೋಗಲು ತಯಾರಿ ನಡೆಸಿದರೇ ನಾನು ನಿನ್ನ ಜೊತೆಯಲ್ಲಿ ಬರುವೆನೆಂದು ದಂಬಾಲು ಬೀಳುತ್ತಿದ್ದದ್ದು.

ಮೊದಲ ರೂಪಾಯಿಯನ್ನು ಮಾವನಿಂದ ಪಡೆದದ್ದು. ಅದನ್ನು ಕೊಟ್ಟು ಅಂಗಡಿಯಲ್ಲಿ ಮೀಠಾಯಿ ಖರೀದಿ ಮಾಡಿದ್ದು. ಅದನ್ನೇ ಜೇಬಿನಲ್ಲಿ ದಿನವೀಡಿ ಇಟ್ಟುಕೊಂಡು ಸ್ವಲ್ಪ ಸ್ವಲ್ಪವೇ ಕಡಿದುಕೊಂಡು ಸವಿದಿದ್ದು. ಗೆಳೆಯರಿಗೆ ಅದನ್ನು ತೋರಿಸಿಕೊಂಡು ನಿಮಗೆ ಬೇಕಾ? ಎಂದು ಕೇಳಿ ಕೇಳಿ ಕೊಡಲ್ಲಪ್ಪಾ ಎಂದು ಹೇಳುತ್ತಾ ಹೇಳುತ್ತಾ ಕೊಟ್ಟಿದ್ದು... ಜೊತೆಯಲ್ಲಿ ಕಳ್ಳಿ ಸಾಲೆ ಸುತ್ತಿದ್ದು.. ಹೊಲದಲ್ಲಿ ಬೆಳೆದ ಕಾಯಿ ಕಸರನ್ನು ಕದ್ದು ತಿಂದಿದ್ದು..

ಮೊದಲ ಸಲ ನಗರಕ್ಕೆ ಬಂದಿದ್ದು.. ಅಚ್ಚರಿ ಪಟ್ಟಿದ್ದು.. ಮೊದಲ ಸಲ ಬಸ್ಸನ್ನು ನೋಡಿದ್ದು.. ಮೊದಲಸಲ ಸೈಕಲ್ ಮೇಲೆ ಕುಳಿತುಕೊಂಡಿದ್ದು... ಮೊದಲ ಸಲ ಮರವೇರಿದ್ದು.. ಅಯ್ಯೋ ಆ ದಿನಗಳ ಒಂದು ಒಂದು ಕ್ಷಣಗಳು ಹೀಗೆ ರಂಗು ರಂಗಾಗಿ ಮನದ ಮೂಲೆಯಿಂದ ಇಣಿಕಿ ಇಣಿಕಿ ನೋಡುತ್ತಿವೇ...

ಚಿಕ್ಕ ಮನಸ್ಸಿನಲ್ಲಿ ಹಗಲು ಕನಸುಕಂಡಿದ್ದು. ಮುಂದೆ ಅದನ್ನು ಮಾಡಬೇಕು. ಅದನ್ನು ತಿನ್ನಬೇಕು. ಅಲ್ಲಿ ಹೋಗಬೇಕು. ಅಲ್ಲಿ ಹೋಗಿ ಹಾಗೆ ಸಂಭ್ರಮಿಸಬೇಕು. ಹೊಸ ಬಟ್ಟೆಯನ್ನು ಧರಿಸಿ ಎದುರು ಮನೆಯ ಗೆಳೆಯನಿಗೆ ತೋರಿಸಬೇಕು..

ಹೀಗೆ..ಅ ದಿನಗಳ ಸಂಭ್ರಮಕ್ಕೆ ಇಂದಿನ ಈ ಯಾವ ದಿನಗಳು ಎಂದೂ ಸರಿಸಾಟಿ ಇಲ್ಲ ಬಿಡಿ...

ಕೇವಲ ಸವಿ ಸವಿ ನೆನಪು ಮಾತ್ರ.. ಮಕ್ಕಳ ದಿನವೆಂದರೇ ಯಾವುದೇ ಜಂಜಾಟವಿಲ್ಲದ ಕೇವಲ ಸಂತಸವಾದ ಆಟವಾಡುವ ದಿನಗಳು.. ಮತ್ತೇ ಆ ದಿನಗಳಿಗೆ ಹೋಗಲಾರದಷ್ಟು ದೂರ ಬಂದಿರುವೆವು ಅಲ್ಲವಾ?

ಜೀವನದಲ್ಲಿ ಒಮ್ಮೆ ಮಾತ್ರ ಬರುವ ಈ ದಿನಗಳ ಸಂಭ್ರಮಕ್ಕೆ ನಾವುಗಳು ನಮ್ಮ ಮಕ್ಕಳನ್ನು ಅವರ ಪಾಡಿಗೆ ಅವರನ್ನು ಅನುಭವಿಸಲು ಬಿಡುವ ಜರೂರತು ಇಂದು ಅತ್ಯವಶ್ಯಕವಾಗಿದೆ. ಹಕ್ಕಿ ಪಕ್ಷಿಗಳಾಗಿ ಸ್ವತಂತ್ರವಾಗಿ ನಲಿಯುವಂತಹ ದಿನಗಳನ್ನು ಇಂದಿನ ಈ ಮುಂದುವರೆದ ಯಾಂತ್ರಿಕ ದಿನಮಾನದಲ್ಲಿ ನಮ್ಮ ಚಿಕ್ಕವರಿಗೆ ಪ್ರತಿಯೊಬ್ಬರೂ ಕೊಡಬೇಕಾಗಿದ್ದು ನಮ್ಮ ಕರ್ತವ್ಯ.

ಆದರೂ ಅದೇಷ್ಟೋ ಮಕ್ಕಳು ಈ ಒಂದು ಸುಂದರ ದಿನಗಳನ್ನು ನಿತ್ಯ ಮೀಸ್ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣಗಳು ಹಲವಾರು ಇವೆ. ಅದರೇ ಅವರ ಬಾಲ್ಯದ ಈ ದಿನಗಳನ್ನು ಯಾರೂ ಕದಿಯಬಾರದು. ಅದು ಅವರುಗಳಿಗೆ ಮಾತ್ರ ಮೀಸಲು. ನಾವುಗಳು ದೂರದಿಂದ ನಿಂತು ನೋಡಿ ನಲಿಯುದುದೊಂದೇ ನಮ್ಮ ಸೌಭಾಗ್ಯ!

ಮಕ್ಕಳ ದಿನಾಚರಣೆಯ ಶುಭಾಶಯಗಳು!

ಗುರುವಾರ, ನವೆಂಬರ್ 3, 2011

ಕಾಲದ ರೇಖೆಯ ಮೇಲೆ..

ಕಾಲವೇ ಎಲ್ಲಾ ಅನಿಸುತ್ತದೆ. ದಿನಗಳು ಕಳೆದಂತೆ ಎಲ್ಲವೂ ಬದಲಾಗುತ್ತವೆ. ಎಲ್ಲವನ್ನು ಮರೆಸುತ್ತವೆ.. ಎಲ್ಲವನ್ನು ಕೊಡುತ್ತದೆ.. ಎಲ್ಲವನ್ನು ಕಿತ್ತುಕೊಳ್ಳುತ್ತದೆ..

ಕಾಲದ ಮೇಲೆ ನಮ್ಮ ನಿಮ್ಮೆಲ್ಲಾರ ಪಯಣ. ಕಾಲದ ರೇಖೆಯ ಮೇಲೆ ನಮ್ಮಗಳ ಸುಖ, ನಲಿವು, ನೆನವು, ಸಾಧನೆ, ದ್ವೇಷ, ಪ್ರೀತಿ, ಅಸೂಯೆ ಇತ್ಯಾದಿ ಇತ್ಯಾದಿ ಕೃತ್ಯಗಳ ಕಲಸುಮೆಲೋಗರ.. ಇದೇ ಜೀವನ ಅನಿಸುತ್ತದೆ.

ದಿನಗಳು ಉರುಳಿದಂತೆ ವ್ಯಕ್ತಿಯ ಪ್ರಯಾರಿಟಿಗಳಲ್ಲಿ ಸಣ್ಣ ಪಲ್ಲಟಗಳು. ಆ ಸಮಯಕ್ಕೆ ಆ ದಿನಕ್ಕೆ ಬಹುಮುಖ್ಯ ಎನಿಸಿದ ವಿಷಯ ವಿಶೇಷಗಳು ಇಂದಿನ ಸಮಯಕ್ಕೆ ನಗಣ್ಯವೆನಿಸುತ್ತವೆ. ಅಂದು ಮುಖ್ಯ ಎಂದು ಕಷ್ಟಪಟ್ಟು ಸಂಪಾದಿಸಿದ ವಿಧ್ಯೆ, ಬುದ್ಧಿ, ಹಣ, ಸ್ನೇಹಿತರು, ಆಸ್ತಿ ಮುಂತಾದವುಗಳು ಇಂದಿನ ನಮ್ಮ ಬದುಕುವ ಜೀವನಕ್ಕೆ ಬೇಕೇ ಆಗಿಲ್ಲವೆನೋ ಅನಿಸುತ್ತದೆ.

ಎಷ್ಟು ವಿಚಿತ್ರ ಅನಿಸಿದರೂ ಇದು ಸತ್ಯವಾದದ್ದು. ಬದಲಾದ ಪರಿಸ್ಥಿತಿಗಳಿಗೆ ವ್ಯಕ್ತಿ ಹೊಂದಿಕೊಂಡು ಹೊಸ ಹೊಸ ದಿಕ್ಕಿನ ಕಡೆ ಮುಖ ಮಾಡಲೇ ಬೇಕು. ತನ್ನನ್ನು ತಾನು ಹತ್ತು ಹಲವು ಹೊಸತನಗಳಿಗೆ ತೆರೆದುಕೊಂಡು ಮುಂದುವರಿಯಲೇಬೇಕು.

ಪುನಃ ಕಾಲಾಯಾ ತಸ್ಮಯಾ ನಮಃ ಎಂಬ ಗೂಣಗಿನಿಂದ ಏನೂ ಮಾಡಲಾರದಂತಹ ಮನಸ್ಸಿನಿಂದ ಏನೋ ಮಾಡಬೇಕು ಮತ್ತು ಏನನ್ನಾದರೂ ಸಾಧಿಸಬೇಕು ಎಂಬ ಹಂಬಲವೆ ಈ ಜೀವನ.




ಯೋಚಿಸಿ ಇಂದು ನಾವುಗಳು ಎಷ್ಟೊಂದು ವಿಷಯಗಳನ್ನು ಹಿಂದೆ ಗಮನಿಸದಂತೆ, ಪ್ರಾಮುಖ್ಯ ಕೊಟ್ಟಂತೆ ಇಂದು ಕೊಡಲಾರೆವು. ಯಾಕೆಂದರೇ ನಮ್ಮ ಅಸಕ್ತಿ ಮತ್ತು ಖುಷಿಯ,ಅವಶ್ಯಕತೆಯ ಪ್ರಯಾರೀಟಿಗಳು ಬೇರೆಯಾಗಿವೆ.

ನಾವುಗಳು ಚಿಂತಿಸುವ ವಿಷಯಗಳು, ಬಳಸುವ ದಾರಿಗಳು,ಪದಗಳು,ಮಾತನಾಡಿಸುವ ವ್ಯಕ್ತಿಗಳು, ಸ್ನೇಹಿತರುಗಳು, ನೋಡುವ ನೋಟಗಳೆ ಹಿಂದೆ ಇದ್ದಂತೆ ಈ ಸಮಯಕ್ಕೆ ಇಲ್ಲವೇ ಇಲ್ಲ.

ಎಷ್ಟೋ ಹಳೆಯ ಪದಗಳು ಇಂದು ನೆನಪಿಗೆ ಬರುತ್ತಿಲ್ಲ. ಮರತೇ ಹೋದಂತೆ ಅನಿಸುತ್ತಿದೆ. ಎಲ್ಲಾವೂ ಇತಿಹಾಸ ಸೇರಿದಂತಹ ಅನುಭವ. ಹಳೆಯ ಮಾತುಗಳು, ಹಳೆಯ ಪದಗಳನ್ನು ಕೇಳಿದರೇ ಬೆರಗಾಗಿ ನೋಡುವಂತಾಗಿದೆ.

ನಮ್ಮ ಇಂದಿನ ಪ್ರಸ್ತುತ ಸಮಯದಲ್ಲಿ ಪದಗಳ ಬಳಕೆಯನ್ನು ಗಮನಿಸಿದರೂ ಕೇವಲ ಕೆಲವೇ ಕೆಲವು ಪದಗಳ ಜೋತೆಯ ಜುಗಲ್ ಬಂದಿ. ಇದು ನಾವುಗಳು ಬಳಸುವ ಭಾಷೆಗೆ ಅನ್ವಯಿಸಿದರೇ. ನಮ್ಮಗಳ ಸಂಬಂಧಗಳ ಅನುಭಾವದ ತಂತುಗಳು ಬಹಳ ಕಿರಿದಾಗಿದೆ ಅಂತಾ ಅನ್ನಿಸುವುದಿಲ್ಲವಾ?

ಇದು ಯಾಕೆ ಎಂದರೇ ಪುನಃ ಅದೇ ಸಾಮಾನ್ಯ ಉತ್ತರಾ! "ಮುಂದುವರಿಯಬೇಕೆಂದರೇ ಕೆಲವೊಂದನ್ನೂ ಕಳಚಿಕೊಳ್ಳಬೇಕು ಮಗಾ" ಅಂತಾ. ಆದರೂ ಒಮ್ಮೊಮ್ಮೆ ನಮಗೆಲ್ಲಾರಿಗೂ ಅನಿಸುತ್ತಿರುತ್ತದೆ ಏನೋ ಒಂದನ್ನು ಮಿಸ್ ಮಾಡಿಕೊಳ್ಳುತ್ತಿದ್ದಿವಿ ಅಂತಾ. ಆದರೂ ಹೀಗೆ ಒಂದೊಂದನ್ನು ಪಡೆಯುವುದಕ್ಕೋಸ್ಕರ ಮತ್ತೊಂದನ್ನು ದಿಕ್ಕರಿಸುತ್ತಾ ಬದುಕು ಸಾಗಿಸಬೇಕಾಗುತ್ತದೆ?

ಇದು ಒಂದು ರೀತಿಯಲ್ಲಿ ಯಾರ ಅರಿವಿಗೂ ಬಾರದ ರೀತಿಯಲ್ಲಿ ಎಲ್ಲರಲ್ಲೂ ಸಾಮಾನ್ಯವಾಗಿ ಸಂಭವಿಸುವ ಸಾಮಾನ್ಯ ಘಟನೆ ಅನಿಸುತ್ತದೆ.

ಇದು ಎಲ್ಲದಕ್ಕೂ ಸಂಬಂಧಿಸಿದಾಗಿದೆ. ಅಂದು ಚಿನ್ನಾ ರನ್ನಾ ಎಂದೂ ಮುದ್ದಾಡಿದವರು.. ಮುದ್ದಾಡಿಸಿಕೊಂಡವರು.. ಇಂದು ಕಾಲ ಕಸವಾಗಿ ಕಾಣುವಂತಾಗುವುದು. ಅಂದು ಇವರೇ ನಮ್ಮಗಳ ದೀಪ ಎಂದುಕೊಂಡವರು ಇಂದು ಏನೂ ಅಲ್ಲವೇ ಅಲ್ಲ ಅಂತಾ ಅನಿಸುವುದು. ಇದೇ ಜೀವನವಾ?

ತರ್ಕಕ್ಕೂ ನಿಲುಕಲಾರದಂತಹ ತುಂಬ ಸಂಕೀರ್ಣಮಯವಾದ ಈ ಯೋಚನೆಗಳು ಎಲ್ಲರಿಗೂ ಕಾಡುತ್ತವಾ ಎಂಬುದು ಬಹು ಮುಖ್ಯ ಪ್ರಶ್ನೆ.

ಕಾಡಲೇ ಬೇಕು ಅಲ್ಲವಾ.. ಇಂದಿನ ಕಾಲದ ಮಿತಿಯಲ್ಲಿ, ಒಂದು ನಿರ್ಧಿಷ್ಟವಾದ ಕಾಲದ ನಿಲ್ದಾಣದಲ್ಲಿ ಎಲ್ಲವನ್ನೂ ಒಮ್ಮೆ ನೋಡಿಕೊಳ್ಳುವ ಮನಸ್ಸು ಪ್ರತಿಯೊಬ್ಬರಿಗೂ ಬಂದೇ ಬಂದಿರುತ್ತದೆ.

ಹಾಗೆಯೇ ಹಳೆಯ ಸಿಹಿ, ಕಹಿ ಅನುಭವಗಳ ಮೇಲೆಯೆ ಅಲ್ಲವಾ ಮುಂದಿನ ಅಥವಾ ಪ್ರಸ್ತುತ ನಮ್ಮ ಬದುಕನ್ನು ರೂಪಿಸಿಕೊಳ್ಳುವಂತಾಗುವುದು. ಕಳೆದ ಗಳಿಗೆ, ವ್ಯಕ್ತಿಗಳ ಒಡನಾಟ, ಕೇಳಿದ ನೋಡಿದ ಬೆಡಗು ಮುಂದಿನ ಬದುಕಿಗೆ ಸ್ಫೂರ್ತಿ.

ಯಾವುದನ್ನು ಇದು ಹೀಗೆ ಎಂದು ಎಲ್ಲೂ ಹೇಳಿಲ್ಲ. ಅದು ಆ ಆ ಸಮಯಕ್ಕೆ ಸರಿಯಾಗಿ ಹೇಗೆ ಹೇಗೆ ನಾವುಗಳು ನಮ್ಮ ನಮ್ಮಲ್ಲಿ ತೆಗೆದುಕೊಳ್ಳುತ್ತೇವೋ ಹಾಗೆ ಆ ಕ್ಷಣಕ್ಕೆ ಅದು ಸತ್ಯವಾಗಿರುತ್ತದೆ. ಆ ಪರಿಧಿಯಲ್ಲಿ ಸಾಗುವುದು ನಮ್ಮಗಳ ಬದುಕು ಅಲ್ಲವಾ?

ಮಂಗಳವಾರ, ನವೆಂಬರ್ 1, 2011

ಕನ್ನಡವೆನೆ ಮನ ಕುಣಿದಾಡುವುದು!!



"ಕನ್ನಡ..." ಹೀಗೆ ಅಂದರೇ ಏನೋ ನೆಮ್ಮದಿ. ಆ ಶಬ್ಧವನ್ನು ಕೇಳಿದರೇ ಒಂದು ಕ್ಷಣ ಮೈ ರೋಮಾಂಚನವಾಗುವುದು ಮತ್ತು ನಮ್ಮದೇ ಭಾಷೆ ಎಂಬ ದೈರ್ಯ ಬರುವುದು. ಕನ್ನಡ ಮಾತನ್ನಾಡುವ ಇಡಿ ಸಮೊಹವನ್ನು ಕಂಡರಂತೂ ಇನ್ನೂ ಖುಷಿ ಯಾಕೆಂದರೇ ಎಲ್ಲರೂ ನಮ್ಮವರೇ ಎಂಬ ಸಂತಸ. ಮಾತೃ ಭಾಷೆಗೆ ಇರುವಂತಹ ಜಾದು ಈ ರೀತಿಯದು.

ಅದು ಬಿಸಿಲಿನ ಜಳದಲ್ಲಿ ನಮ್ಮ ದಾಹವನ್ನು ಹಿಂಗಿಸಿಕೊಳ್ಳಲು ನೀರಿಲ್ಲದ ಜಾಗದಲ್ಲಿ ಏನೂ ಏನೋ ತಂಪಾದ ಪಾನಿಯಗಳನ್ನು ಲೀಟರ್ ಗಟ್ಟಲೆ ಕುಡಿದರೂ ಹಿಂಗದ ದಾಹ ಅದೇ ಸಾಮಾನ್ಯವಾದ ಒಂದು ಲೋಟ ನೀರನ್ನು ಕುಡಿದಾಗ ಸಿಗುವಂತಹ ಮನಸ್ಸ್ ತೃಪ್ತಿ ಮಾತೃ ಭಾಷೆಯನ್ನು ಮಾತನಾಡಿದಾಗ, ಬರೆದಾಗ, ನುಡಿದಾಗ, ಓದಿದಾಗ ಸಿಗುವುದು.

ಯಾವುದೇ ನೋವುಂಟಾದಾಗ, ಬೇಸರವಾದಾಗ,ಖುಷಿಯಾದಾಗ ಮನದಲ್ಲಿ ಮೊದಲು ಮೂಡುವ ಮಾತೇ ಕನ್ನಡ ಪದ. ನಮ್ಮ ಮನದ ಭಾವನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಯಾರಿಗಾದರೂ ಹೇಳಬೇಕು ಅಂದಾಗ ಬರುವಂತಹ ನುಡಿ ಶಬ್ಧವೇ ಕನ್ನಡ. ಕನ್ನಡ ಬಿಟ್ಟು ಯಾವುದೇ ಬೇರೆ ಭಾಷೆಯಲ್ಲಿ ಮಾತನಾಡಿದರೂ ಏನೋ ಒಂದು ಸ್ವಲ್ಪ ಕೂರತೆಯನ್ನು ಅನುಭವಿಸುವೆವು.

ಗೊತ್ತಿರಬಹುದು ಯಾವುದೇ ಭಾಷೆಯ ಸಿನಿಮಾವನ್ನು ನೋಡಿದರೂ ನಮ್ಮ ಭಾಷೆಯ ಚಲನಚಿತ್ರವನ್ನು ನೋಡುವಾಗ ಅನುಭವಿಸುವ ಸಂಭ್ರಮ ಸಂತಸವನ್ನು ನಿಜವಾಗಿ ಅನುಭವಿಸಲು ಸಾಧ್ಯವಿಲ್ಲ.

ಬಾಲ್ಯದಲ್ಲಿ ಮಗುವಿನ ಓ ನಾಮ ಪ್ರಾರಂಭವಾಗುವುದೇ ಅದರ ಮಾತೃ ಮತ್ತು ಮನೆಯ ಆಡು ಭಾಷೆಯಿಂದ. ನಾವುಗಳು ದಾರಿ ತಪ್ಪಿದಾಗ ನಮ್ಮಗಳಿಗೆ ಅಸರೆಯ ದಾರಿ ದೀಪವಾಗುವುದು ನಮ್ಮ ಕನ್ನಡ ಮಾತ್ರ.

ಕನ್ನಡ ಅಂದರೇ ಅದು ಎಲ್ಲಾ ಎಂದು ಮಾತ್ರ ಹೇಳಬಹುದೇನೊ. ಭಾಷೆಯಲ್ಲಿಯೇ ಸಂಸ್ಕೃತಿ, ಚರಿತ್ರೆ, ಪರಂಪರೆ ಅಡಗಿದೆ. ಅದು ಒಂದು ಭವ್ಯ ಭವಿಷ್ಯ ಮತ್ತು ಉನ್ನತವಾದ ಗಿರಿ ಶಿಖರವೇ ಸರಿ. ಇದು ನಮ್ಮನ್ನು ಬೆಳೆಸುತ್ತಾ ಅದು ಬೆಳೆಯುತ್ತಾ ಇದೆ. ಹಿಂದಿನಿಂದ ಇಂದಿನವರೆಗೂ ನೂರಾರು ಮಹನೀಯರುಗಳು ತಮ್ಮ ಜೀವನವನ್ನು ಅದರ ಏಳ್ಗೆ ಮತ್ತು ಬೆಳವಣಿಗೆಗೆ ಮುಡಿಪಿಟ್ಟು ತಾವುಗಳು ಅತಿ ಎತ್ತರದ ಸ್ಥಾನಕ್ಕೆ ಏರಿದ್ದಾರೆ.

ಸಾವಿರಾರು ವರುಷಗಳ ಇತಿಹಾಸವನ್ನು ಹೊಂದಿರುವ ಪ್ರಾಚೀನ ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ ಲಿಪಿಯಂತೂ ಮುತ್ತು ಪೋಣಿಸಿದ ರೀತಿಯಲ್ಲಿ. ಕಲಿಯುವುದಂತೂ ಅತಿ ಸುಲಭ. ಸುಲಿದ ಬಾಳೆ ಹಣ್ಣಿನೋಪಾದಿಯಲ್ಲಿ. ಕನ್ನಡಾಂಭೆಯ ಸರಸ್ವತಿಯ ಪುತ್ರರ ಕಾಣಿಕೆಯನ್ನು ನಮ್ಮ ಜೀವನ ಪೂರ್ತಿ ಓದಿ ಅಭ್ಯಾಸಿಸಿದರೂ ಎಂದಿಗೂ ಮುಗಿಯಲಾರದಂತಹ ಅಗಾಧ ಸಮುದ್ರದೋಪಾದಿ, ಅಳತೆಗೂ, ಮಿತಿಗೂ ಸಿಗಲಾರದಂತಹದ್ದು.

ಮನ್ನೆ ಮನ್ನೇ ೮ನೇ ಙ್ಞಾನಪೀಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಕನ್ನಡಾಂಭೆ ತನ್ನ ಹಿರಿಮೆಯನ್ನು ಪುನಃ ಕನ್ನಡ ಜನಪದಕ್ಕೇ ತನ್ನ ಉತ್ಕೃಷ್ಟತೆಯನ್ನು ಮನನ ಮಾಡಿಕೊಟ್ಟಿದೆ. ಭಾರತೀಯ ಯಾವೊಂದು ಭಾಷೆಗೂ ಇಷ್ಟೊಂದು ಪ್ರಶಸ್ತಿಗಳ ಗೌರವ ಸಿಕ್ಕಿರದೇ ಇರುವುದು ಕನ್ನಡವನ್ನು ಪ್ರತಿಯೊಬ್ಬರೂ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ.

ಆದರೂ ಹಿತ್ತಲ ಗಿಡ ಮದ್ದು ಅಲ್ಲ! ಎಂಬ ರೀತಿಯಲ್ಲಿ ನಮ್ಮ ಕನ್ನಡ ಜನಗಳಿಗೆ ಅದೂ ನಗರ ಪ್ರದೇಶದ ಮಂದಿಗೊಂತೂ ಇಂಗ್ಲೀಷ್ ವ್ಯಾಮೋಹ ಹೇಳತಿರದು. ಕನ್ನಡ ಎಂದರೇ ಬೇಡದ್ದು. ಅದು ಕೀಳುಹಿರಿಮೆ ಎಂಬ ರೀತಿಯಲ್ಲಿ ನೋಡುತ್ತಿದ್ದಾರೆ. ನಮ್ಮ ಮಕ್ಕಳೆಲ್ಲಾ ಟಸ್ಸು ಪುಸ್ಸು ಇಂಗ್ಲೀಷ್ ಮಾತನ್ನಾಡಬೇಕು ಎಂಬ ಮಹಾತ್ವಕಾಂಕ್ಷಿತನದಿಂದ ಕಾನ್ವೇಂಟೇ ನಮ್ಮ ಪೀಳಿಗೆಗಳಿಗೆ ಭವಿಷ್ಯ ಎಂಬ ರೀತಿಯ ಬದಲಾವಣೆಯ ಗಾಳಿ ಎಲ್ಲಾ ಕಡೆ ಬಿಸುತ್ತಿದೆ. ಕನ್ನಡ ಮಾದ್ಯಮದ ಸರ್ಕಾರಿ ಶಾಲೆಗಳನ್ನು ಕೇಳುವವರು ಇಲ್ಲದಂತಾಗುವ ಪರಿಸ್ಥಿತಿ ಬರುತ್ತಿದೆ. ಬಡವರ ಭಾಷೆ ಕನ್ನಡ ಎಂಬಂತಾಗಿದೆ.ಬಡವರ ಮಕ್ಕಳಿಗೆ ಮಾತ್ರ ಕನ್ನಡ ಮಾಧ್ಯಮ ಶಿಕ್ಷಣ ಎಂಬಂತಾಗಿರುವುದು ಯಾವುದರ ಪ್ರತೀಕ?

ಈ ರೀತಿಯ ಬದಲಾವಣೆಯನ್ನು ನಿಲ್ಲಿಸಬೇಕಾಗಿದ್ದು ಸರ್ಕಾರ ಮತ್ತು ಸಂಘ ಸಂಸ್ಥೆಗಳ ಕರ್ತವ್ಯ. ಕನ್ನಡದಲ್ಲಿ ಕಲಿತರೂ ಏನಾದರೂ ದೊಡ್ಡದಾಗಿ ಸಾಧಿಸಬಹುದು ಎಂಬ ಒಂದು ಭರವಸೆಯನ್ನು ಎಳೆಯರಲ್ಲಿ ಬಿತ್ತಬೇಕಾಗಿದ್ದು ಹಿರಿಯರ ಕೆಲಸ.

ಹೈ ಟೆಕ್ ಅಂದರೇ ಇಂಗ್ಲೀಷ್ ಮಾತ್ರ ಎಂಬ ದೋರಣೆ ಹೋಗಲಾಡಿಸಬೇಕು. ಮಾತೃ ಭಾಷೆಯಲ್ಲಿಯೇ ದೊಡ್ಡ ದೊಡ್ಡ ಪದವಿಗಳು ಸಿಗುವಂತಹ ಕಾಲ ಬರಬೇಕು. ಅದನ್ನು ಪರಿಣಾಮಕಾರಿಯಾಗಿ ಎಲ್ಲಾ ರಂಗದಲ್ಲೂ ಉಪಯೋಗಿಸುವಂತಾಗಬೇಕು. ಇಂಗ್ಲೀಷ್ ಎಂಬುದು ಒಂದು ಭಾಷೆಯಾಗಿರಬೇಕು. ಅದು ಬಿಟ್ಟು ಅದೇ ಒಂದು ಸಂಸ್ಕೃತಿಯನ್ನು ದಮನಾಕಾರಿಯಾಗಿ ತುಳಿಯುವಂತಾಗಬಾರದು.

ಈ ದಿಕ್ಕಿನಲ್ಲಿ ಪ್ರತಿಯೊಬ್ಬರೂ ಚಿಂತಿಸುವ ಸಮಯ ಇಂದು ಬಂದಿದೆ. ಕೇವಲ ನವಂಬರ್ ೧ ರಂದು ವೀರಾವೇಷದ ಕನ್ನಡ ಪರ ಮಾತುಗಳು ಎಲ್ಲಾ ಕಡೆಯಿಂದ ಬರದೇ, ಆ ಮಾತುಗಳು ಬಲಿಷ್ಟವಾದ ಕನ್ನಡ ಸಂಸ್ಕೃತಿಯನ್ನು ಉಳಿಸಿ - ಬೆಳೆಸುವಂತಾಗಿ ಪ್ರತಿಯೊಬ್ಬರೂ ಪ್ರೀತಿಪಟ್ಟು, ಇಷ್ಟಪಟ್ಟು ಕಲಿಯುವಂತಾಗಬೇಕು. ಆಗಲೇ ಯಾವುದೇ ಭಾಷೆಯ ಅಳಿವು ಉಳಿವು ನಿರ್ಧರವಾಗುವುದು.

ಅದು ಕೇವಲ ಹಳ್ಳಿಯವರ ಭಾಷೆ ಮಾತ್ರ ಆಗಬಾರದು. ಕನ್ನಡ ಮಾತನ್ನಾಡಲು ಹೆಮ್ಮೆ ಪಡುವಂತಹ ಕಾಲವಾಗಬೇಕು. ಇದು ಎಂದು ಬರುವುದೋ? ಆ ಕನ್ನಡಾಂಭೆಯೇ ಹೇಳಬೇಕು!