ಬುಧವಾರ, ಸೆಪ್ಟೆಂಬರ್ 21, 2011

ಹೊಸಬೆಳಕಿನ ಹೊಸ ಜ್ಯೋತಿಯ ಉಗಮ

ಇಂದು ನಾವು ನೋಡುತ್ತಾ ಇದ್ದೇವೆ ತಪ್ಪು ಮಾಡಿದವರೆಲ್ಲರಿಗೂ ಶಿಕ್ಷೆಯಾಗುತ್ತಿದೆ. ಒಬ್ಬರ ಹಿಂದೆ ಒಬ್ಬರು ಜೈಲು ಪಾಲಾಗುತ್ತಿದ್ದಾರೆ.

ಇದು ಏನನ್ನು ಸೂಚಿಸುತ್ತದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತು. ನಾನು ಯೋಚಿಸುತ್ತೇನೆ ಇದು ಜೈಲು ಪಾಲಾದ ಎಲ್ಲಾ ಮಹನೀಯರಿಗಳಿಗೂ ಸತ್ಯವಾಗಿ ಗೊತ್ತು. ಮತ್ತೇ ಗೊತ್ತಿದ್ದು ಯಾಕೆ ಹೀಗೆ ತಪ್ಪು ಮಾಡುತ್ತಾರೆ. ಮುಂದೆ ನಾವೊಂದು ದಿನ ಕಾನೂನು ಎಂಬ ಕಾವಲುಗಾರನ ಕೈಯಲ್ಲಿ ಸಿಕ್ಕೆ ಸಿಗುತ್ತೇವೆ ಎಂಬುದು ತಿಳಿಯರಲಾರದ ಗಾವಿದರೇನಲ್ಲ.

ಆದರೂ ಯಾಕೆ ಈ ರೀತಿ ಗೊತ್ತಿರುವಂತಹ ತಪ್ಪುಗಳನ್ನು ಮಾಡಿ ಸಮಾಜದಲ್ಲಿ ಕೆಟ್ಟ ವ್ಯಕ್ತಿಗಳು ನಾವುಗಳು ಎಂಬುದನ್ನು ಜಗಜ್ಜಾಹೀರುಮಾಡಿಕೊಂಡು ಜೈಲ್ ಪೇರೆಡ್ -ಕೋರ್ಟ್ ಪೇರೆಡ್ ಮಾಡುತ್ತಿದ್ದಾರೆ?

ಉತ್ತರ ನಿಜವಾಗಿಯೂ ಗೊತ್ತಿಲ್ಲ ಅಲ್ಲವಾ?

ಪ್ರತಿಯೊಬ್ಬರೂ ಸ್ವಾರ್ಥದ ಆಸೆಯ ಮೋಡಿಗೆ ಬಲಿಯಾಗಿ ಈ ರೀತಿಯಲ್ಲಿ ನಗ್ನರಾಗಿ ನಿಂತಿರುವಂತೆ ಬಾಸವಾಗುತ್ತಿದ್ದಾರೆ. ಮನುಷ್ಯನ ಮನಸ್ಸೆ ಆ ರೀತಿ ಇರಬೇಕು. ಸಿಗುವಂತಹ ಅವಕಾಶ ಮತ್ತು ಯಾರೂ ಪ್ರಶ್ನೆ ಮಾಡದಂತಹ ಸನ್ನಿವೇಶ ವ್ಯಕ್ತಿಯ ಮನಸ್ಸನ್ನು ಎಲ್ಲಿ ಎಲ್ಲಿಗೋ ತೆಗೆದುಕೊಂಡು ಹೋಗಿಬಿಡುತ್ತದೆ ಅನ್ನಿಸುತ್ತದೆ.

ತನಗೆ ಎಷ್ಟು ಬೇಕು ಜೀವಿಸಲು, ಸಂತೋಷವಾಗಿರಲು ಮತ್ತು ಅದಕ್ಕೂ ಮೀರಿದ ಸಂಪತ್ತು, ಸುಪ್ಪತ್ತಿಗೆ,ಆಸ್ತಿ, ವೈಡೂರ್ಯಗಳ ದಣಿಯಾಗಬೇಕು ಎಂಬ ಮಹನ್ ಹಂಬಲಕ್ಕೆ ಅದೂ ಹೇಗೆ ಮರಳಾಗುತ್ತಾರೂ ದೇವರೇ ಬಲ್ಲ.

ಅದಕ್ಕಾಗಿ ತಾನು ಏನನ್ನಾದರೂ ಮಾಡಲೂ ಸಿದ್ಧನಾಗುತ್ತಾನೆ. ಏನ್ನನ್ನಾದರೂ ದಕ್ಕಿಸಿಕೊಳ್ಳಲು ತೊಡಗುತ್ತಾನೆ. ಅವನ ಮನಸ್ಸಿನಲ್ಲಿ ಒಂದೇ ಒಂದು ದುರಾಸೆಯೆಂದರೆ ಎಲ್ಲವನ್ನು ತನ್ನದು ಮಾಡಿಕೊಳ್ಳಬೇಕು. ಅದು ಅನ್ಯಾಯ ಮಾರ್ಗವಾಗಿರಲಿ, ದುರ್ಮಾರ್ಗವಾಗಿರಲಿ, ಏನಾದರಾಗಿರಲಿ ತಾನು ಮಾತ್ರ, ತನಗೆ ಮಾತ್ರ ಎಲ್ಲಾ ಸುಖಗಳು ಸಿಗಬೇಕು ಎಂಬ ದುರಾಸೆಯ ಕೂಪದಲ್ಲಿ ಬಿದ್ದು ಬಿಡುತ್ತಾನೆ ಅನ್ನಿಸುತ್ತದೆ.

ಅಲ್ಲಿ ಅವನಿಗೆ ಯಾವೊಂದು ಪಾಪ, ಪುಣ್ಯದ, ಧರ್ಮದ ಅಲೆಗಳು ಕಾಣಿಸುವುದಿಲ್ಲ. ಅಷ್ಟಕ್ಕೂ ಅಂದು ಸುಖದ ಸುಪ್ಪತ್ತಿಗೆಯಲ್ಲಿ ತೆಲಿದಂತಹ ಮಂದಿ ಇಂದು ಸರ್ಕಾರದ ದೃಷ್ಟಿಯಲ್ಲಿ, ಜನರ ದೃಷ್ಟಿಯಲ್ಲಿ ಯಾವ ರೀತಿ ಕಾಣುತ್ತಾರೆ ಎಂದು ಪ್ರತಿಯೊಬ್ಬರಿಗೂ ಅರ್ಥವಾಗಬೇಕು.

ಎಲ್ಲದಕ್ಕೂ ಒಂದು ಕೂನೆಯೆಂಬುದು ಇದ್ದೇ ಇರುತ್ತದೆ. ಈ ಒಂದು ಸಿದ್ಧಾಂತವನ್ನು ಮನಗತ ಮಾಡಿಕೊಳ್ಳಬೇಕಾದದ್ದು ಪ್ರತಿಯೊಬ್ಬರಿಗೂ ಅವಶ್ಯ. ನಾವುಗಳು ಮೂಕ ಪ್ರಾಣಿ ಪಕ್ಷಿಗಳನ್ನು ನೋಡಿ ಕಲಿಯಬೇಕು. ಅವುಗಳ ಜೀವನ ಧರ್ಮ, ಸಹ ಬಾಳ್ವೆಯ ಸರಳ ಪಾಠವನ್ನು ನಿತ್ಯ ನೋಡಿದರೂ ನೋಡದ ರೀತಿಯಲ್ಲಿ ನಾವುಗಳೇ ಅತಿ ಬುದ್ಧಿವಂತ ಪ್ರಾಣಿ ಎಂಬ ದೋರಣೆಯಲ್ಲಿ ಸಿಕ್ಕಿದ್ದನ್ನೇಲ್ಲಾ ಬಾಚಿಕೊಳ್ಳಲು ಮುಂದಾಗುವುದು ಯಾವ ನ್ಯಾಯ.

ಅದು ಸರಿ. ಆಸೆ ಬೇಕು ಮನುಷ್ಯನ ಜೀವನಕ್ಕೆ, ಉತ್ತಮ ಅಭಿವೃದ್ಧಿಗೆ ಅನ್ನುತ್ತಾರೆ. ಆದರೇ ದುರಾಸೆಯನ್ನು ಇಟ್ಟುಕೊಳ್ಳಿ ಎಂದು ಯಾರು ಹೇಳುವುದಿಲ್ಲ. ಇದೇ ಇಂದು ಪ್ರತಿಯೊಂದು ರಂಗದಲ್ಲೂ ಅಪನಂಬಿಕೆಯನ್ನು, ಬಿನ್ನಾಭಿಪ್ರಾಯಗಳನ್ನು, ಅಶಾಂತಿ, ಅಸಹಜ ನಡವಳಿಕೆಗೆ ದಾರಿ ಮಾಡಿಕೊಟ್ಟಿದೆ.

ಸಿ.ಬಿ.ಐ ಯರವರು ಇಂಥ ವ್ಯಕ್ತಿಗಳ ಸಂಪತ್ತನ್ನು ವಶಪಡಿಸಿಕೊಂಡಾಗ ನೀಡುವ ವರದಿಯನ್ನು ಗಮನಿಸಿದರೇ ಒಬ್ಬನೇ ಒಬ್ಬ ವ್ಯಕ್ತಿಗೆ ಇಷ್ಟೇಲ್ಲಾ ವಸ್ತು, ಹಣ, ಆಸ್ತಿ ಬೇಕಾ ಗುರೂ? ಎಂದು ಯೋಚಿಸುವಂತಾಗುತ್ತದೆ. ಒಬ್ಬನ ಬಳಿಯಲ್ಲೇ ಇಡೀ ರಾಜ್ಯದ ಸಂಪತ್ತು ಕೊಳೆತು ಬಿದ್ದಿದೆ ಎಂದಾಗ ಮನಸ್ಸಿಗೆ ಬೇಜಾರಾಗುತ್ತದೆ. ಅಸಹಜವಾಗಿ ಬಂದಂತಹ ಸಂಪತ್ತು ಎಂದಿಗೂ ಶಾಶ್ವತವಲ್ಲ ಎಂಬುದು ಎಲ್ಲಾರಿಗೂ ತಿಳಿದಿರುವ ವಿಚಾರ.

ಇಲ್ಲಿ ಯಾರೂ ಶಾಶ್ವತವಲ್ಲ! ಹಾಗಂತ ಪೂರ್ತಿ ಸನ್ಯಾಸಿಯಾಗಿ ಜೀವಿಸಬೇಕಾಗಿಲ್ಲ.

ನಿಸರ್ಗ,ದೇಶ ಸಂಪತ್ತು ಎಲ್ಲಾರಿಗೂ ಸೇರಿದ್ದು. ಅದನ್ನು ಅನ್ಯ ಮಾರ್ಗದಲ್ಲಿ ತಾನೊಬ್ಬನೇ ಅನುಭವಿಸುದು ದೇವರಿಗೆ ಮಾಡಿದ ದ್ರೋಹದಂತೆ ಅಲ್ಲವಾ?

ಗಣಿ ದಣಿ ದೋಳಿನಲ್ಲಿ ಇಡಿ ಕರ್ನಾಟಕವೇ ಮುಚ್ಚಿ ಹೋಗಿರುವಂತಹ ಅನುಭವವನ್ನು ಕಳೆದ ದಿನಗಳಿಂದ ನೋಡುತ್ತಿದ್ದೇವೆ. ಇದರ ಕಾರಣದಿಂದ ಸರ್ಕಾರವೇ ಬೀಳುವ ಮಟ್ಟಕ್ಕೆ ಹೋಗಿದ್ದು, ಮುಖ್ಯಮಂತ್ರಿ, ಮಂತ್ರಿಗಳ ಅಧಿಕಾರದ ಖುರ್ಚಿ ಬಿದ್ದು ಹೋಗಿದ್ದು. ಯಾವುದರ ಮುನ್ಸೂಚನೆ ದೇವರೇ ಬಲ್ಲ.

ಮಾತು ಎತ್ತಿದರೇ ಸಾಕು ಲಂಚಾ.. ಲಂಚಾ... ಭ್ರಷ್ಟಾಚಾರ ಉಫ್!

ಸಾವಿಲ್ಲದ ಮನೆಯ ಸಾಸಿವೆಯಂತೆ, ನಂಬುವಂತಹ ಒಬ್ಬನೇ ಒಬ್ಬ ವ್ಯಕ್ತಿ(ಗಳು) ಸಿಗುವಂತಹ ಕಷ್ಟ ಈ ದಿನಮಾನಗಳಲ್ಲಿರುವುದು ನಿಜವಾಗಿಯೋ ವಿಪರ್ಯಾಸದ ವಿಚಾರ. ಯಾರೊಬ್ಬರನ್ನು ಅನುಮಾನದ ದೃಷ್ಟಿಯಲ್ಲಿ ನೋಡುವಂತಹ ದಿನಗಳು ಬರುತ್ತ ಇವೆಯೇನೂ ತಿಳಿಯದಾಗಿದೆ.

ಎಲ್ಲಿ ನೋಡಿದರೂ ಅಕ್ರಮ ಸಕ್ರಮಗಳ ಕಾರುಬಾರೂ ಇದು ಎಲ್ಲಿಗೆ ಹೋಗಿ ನಿಲ್ಲುತ್ತದೂ ಗೊತ್ತಿಲ್ಲಾ ಬಿಡಿ.

ಶಕ್ತನಾಗಿದ್ದಾನೇ ಅಷ್ಟು ಮಾಡಿದ್ದಾನೆ. ದಕ್ಕಿಸಿಕೊಳ್ಳುವ ತಾಕತ್ತು ಇದೆ ಅವನಿಗೆ ಬಿಡಿ! ಎಂಬ ಮಾತುಗಳು ಸಹಜವಾಗಿ ಕೇಳಿ ಬರುತ್ತ ಇವೆ.

ನಿನ್ನ ಕೈಲಿ ಆಗುತ್ತಿಲ್ಲ ಅದಕ್ಕೆ ನೀತಿ ಧರ್ಮದ ಮಾತನ್ನಾಡುತ್ತಾ ಇದ್ದೀಯ... ಮರಿ ಗಾಂಧಿ! ಎಂಬ ಹಿಯಾಳಿಕೆಯ ಮಾತುಗಳು ಸಭ್ಯರನ್ನು ಚುಚ್ಚುತ್ತ ಇವೆ.

ಯಾವುದು ಸರಿ? ಯಾವುದು ತಪ್ಪು? ಯಾರು ನಿರ್ಧಾರ ಮಾಡಿಕೊಡಬೇಕೋ ತಿಳಿಯದಾಗಿದೆ.

ಪ್ರತಿಯೊಂದು ರಂಗದಲ್ಲೂ ಮನುಷ್ಯರೇ ತಾನೇ ಇರುವವರು.. ಅದ್ದರಿಂದ ಪ್ರತಿಯೊಂದು ರಂಗವು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಅದ್ವಾನವಾಗಿ ಹೋಗುತ್ತಿದೆ. ಬಡ ವ ಬಲ್ಲಿದನ ನಡುವಿನ ಅಂತರ ದಿನೇ ದಿನೇ ಅತ್ಯಂತ ವೇಗವಾಗಿ ಹೆಚ್ಚಾಗುತ್ತಿದೆ.

ಅವರನ್ನೂ ನೋಡಿ, ಇವರು ಇವರನ್ನಾ ನೋಡಿ ಅವರು ತಮ್ಮ ಅಭಿವೃದ್ಧಿಯ ಕರ್ಮದಲ್ಲಿ ನಿರತರಾಗುತ್ತಾ ಇದ್ದಾರೆ ಅನ್ನಿಸುತ್ತಿದೆ. ಕರುಣೆ, ಧಯೆಯ ಮಾತು ಕೇಳುವುದೇ ಬೇಡವೇನೂ ಎಂಬ ಕಾಲ ಬಂದರೂ ಆಶ್ಚರ್ಯವಿಲ್ಲ ಅನಿಸುತ್ತಿದೆ.

ಈ ಎಲ್ಲಾ ಅಮೊಲಾಗ್ರ ಬದಲಾವಣೆಯ ಹರಿಕಾರನಿಗಾಗಿ ನಾಡು ಕಾಯುತ್ತಿದೆ ಅನಿಸುತ್ತಿದೆ. ಹೊಸಬೆಳಕಿನ ಹೊಸ ಜ್ಯೋತಿಯ ಉಗಮವಾಗಬೇಕಾದ ಜರೂರತು ಇಂದು ಅತ್ಯವಶ್ಯವಾಗಿದೆ. ಎಲ್ಲಾದರಲ್ಲೂ ನಂಬಿಕೆಯನ್ನು ಕಳೆದುಕೊಳ್ಳುತ್ತಿರುವ ಜನತೆಗೆ ಹೊಸ ಭರವಸೆಯ ಹೊಸತನದ ನಾಯಕತ್ವದ ಅಗತ್ಯತೆ ಇಂದು ಹೆಚ್ಚಾಗಿದೆ ಅಂತಾ ನಿಮಗೆ ಅನಿಸುತ್ತಿಲ್ಲಾವಾ ಗೆಳೆಯರೇ.....

ಯೋಚಿಸಿ ಒಮ್ಮೆ ಫ್ಲೀಜ್!!!!!!!!!!!

ಶನಿವಾರ, ಸೆಪ್ಟೆಂಬರ್ 17, 2011

ಅನಾವರಣ ಒಂದು ಮೆಲುಕು............

ನಮ್ಮ ಮದ್ಯಮ ವರ್ಗದ ಒಂದು ಇಡೀ ಸಮೋಹ ತಮ್ಮ ಬಿಡುವಿನ ವೇಳೆಯನ್ನು ಮನೆಯಲ್ಲಿ ಹೇಗಾಪ್ಪ ಕಳೆಯುವುದು ಅಂದರೇ.. "ಅದೇ ಟಿ.ವಿ ಮೂರ್ಖರ ಪೆಟ್ಟಿಗೆ ಮುಂದೆ.." ಎಂದು ಏನಂದರೂ ಅದು ಇಂದು ಅತಿ ಅವಶ್ಯಕವಾದ ಒಂದು ವಸ್ತುವಾಗಿದೆ. ಅದು ಇಲ್ಲದ ಮನೆಯೇ ಮನೆಯಲ್ಲಾ.. ಅದೇ ಎಲ್ಲಾ ಎನ್ನುವಷ್ಟರ ಮಟ್ಟಿಗೆ.

ಮನೆಯಲ್ಲಿ ಕಾಲ ಕಳೆಯುವ ವಯಸ್ಸಾದ ಮುದುಕ ಮುದುಕಿಯರಿಗೆ, ಮನೆಕೆಲಸ ಮಾಡುವ ಗೃಹಿಣಿಯರಿಗೆ ಹೀಗೆ ಅದು ಒಂದು ಮನರಂಜನೆಯನ್ನು ಒದಗಿಸುವ ಒಂದು ಸೃಜನ ಶೀಲ ವಸ್ತುವಾಗಿದೆ.

ಚಿಕ್ಕ ಪರದೆಯ ಮೇಲೆ ಇಡೀ ಜಗತ್ತನ್ನೇ ಕಾಣಬಹುದಾಗಿದೆ. ಚಿಕ್ಕ ಪರದೆಯ ಮೇಲೆ ಬೇಕು ಬೇಡವಾದ ಎಲ್ಲದನ್ನೂ ನೋಡಬಹುದಾಗಿದೆ.

ಇದು ಎಲ್ಲಾ ವಯೋಮಾನದ ಮನುಷ್ಯರನ್ನು ಒಂದು ರೀತಿಯಾದ ಬದಲಾವಣೆಗೆ ಈಡೂ ಮಾಡಿರುವ ಮೋಡಿಗಾರ.

ಅಲ್ಲಿ ಒಳ್ಳೆಯದು ಇದೆ. ಕೆಟ್ಟದು ಇದೆ. ಅದರ ಆಯ್ಕೇ ಪುನಃ ನಮ್ಮ ನಿಮ್ಮಗಳ ಕೈಯಲ್ಲಿ ಮಾತ್ರ.

ಗಮನಿಸದರೆ ಇಲ್ಲೂ ಅತ್ಯುತ್ತಮವಾದ ಕಾರ್ಯಕ್ರಮಗಳು ಪ್ರಸಾರವಾಗುತ್ತ ಇರುತ್ತವೆ.

ಇಲ್ಲೂ ಸಹ ಒಂದು ಪುಸ್ತಕವನ್ನು ಓದಿದಾಗ ಸಿಗುವಂತಹ ಚಿಂತನೆ, ನೀತಿ, ಬದುಕಿನ ನೋಟವನ್ನು ಪ್ರಸಾರವಾಗುವ ದಾರವಾಹಿಗಳಲ್ಲಿ, ಕಾರ್ಯಕ್ರಮಗಳಲ್ಲಿ ಕಾಣಬಹುದಾಗಿದೆ. ಕೆಲವೊಂದು ಕಾರ್ಯಕ್ರಮಗಳು ಎಷ್ಟರಮಟ್ಟಿಗೆ ಜನಮನ ಗೆದ್ದಿದ್ದಾವೆ ಎಂದರೇ ಪ್ರತಿಯೊಂದು ಮನೆಯಲ್ಲಿ ಆ ಸಮಯಕ್ಕೆ ಸರಿಯಾಗಿ ಪ್ರತಿಯೊಬ್ಬರೂ ಕಾದು ಕುಳಿತು ಕಾರ್ಯಕ್ರಮಗಳನ್ನು ವೀಕ್ಷಿಸುವಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ಗಳಿಸಿವೆ.

ಹೀಗೆ ಬಹಳ ದಿನಗಳಾದ ಮೇಲೆ ಕನ್ನಡದಲ್ಲಿ ವಿಭಿನ್ನವಾಗಿ ದಾರವಾಹಿಯನ್ನು ನಿರ್ದೇಶಿಸುವುದರಲ್ಲಿ ಎತ್ತಿದ ಕೈಯಾಗಿರುವ ಹಿರಿಯರಾದ ಎಸ್. ಎನ್. ಸೇತೂರಾಮ್ ರವರ "ಅನಾವರಣ" ನಿಜವಾಗಿಯೂ ನಮ್ಮ ದಿನ ನಿತ್ಯದ ಬದುಕು, ಪ್ರಸ್ತುತತವಾದ ಜನ ಮನಗಳ ನಗ್ನ ಸತ್ಯದ ಅನಾವರಣವಾಗಿದೆ.

ವಯಸ್ಸಾದ ತಂದೆ-ತಾಯಿ ಮತ್ತು ಅವರ ನಾಲ್ಕು ಜನ ಮಕ್ಕಳುಗಳ ಸಂಸಾರವನ್ನು ಇಟ್ಟುಕೊಂಡು ಹೆಣೆದಿರುವ ಕಥೆ ಸಹಜವಾಗಿ ತೀರ ಮಾಮೊಲಾದ ಕಥೆ ಮತ್ತು ವೇರಿ ಸಿಂಪಲ್ ಅನಿಸುತ್ತದೆ.

ಆದರೆ! ವ್ಯಕ್ತಿ ವ್ಯಕ್ತಿಗಳ ಸಂಬಂಧ, ಮಾನವನ ಜೀವ/ಜೀವನಗಳ ತಂತು, ವ್ಯಕ್ತಿಗಳ ಅಸ್ವಾಭಾವಿಕ ನಡಾವಳಿ, ಇಂದಿನ ಮುಂದುವರೆದ ದಿನಮಾನಗಳಲ್ಲಿ ದುಡ್ಡೇ ಎಲ್ಲಾ ಎನ್ನುವ ಯಾಂತ್ರಿಕವಾದ ನಗರ ಜೀವನದಲ್ಲಿನ ತಲ್ಲಣಗಳು, ಬದಲಾದ ಜೀವನ ಶೈಲಿಯ ಒಂದು ವಿಮರ್ಶೆಯೇ ಈ ಅನಾವರಣವಾಗಿದೆ.

ಸೇತೂರಾಮ್ ಕಣ್ಣಲ್ಲಿ ಬದುಕಿನ ನಿಜವಾದ ಅರ್ಥವಂತಿಕೆಯ ಒಂದು ಜೀವಂತ ದರ್ಶನವಾಗಿದೆ.

ಅವರು ರಚಿಸಿರುವ ಪಾತ್ರ ಪೋಷಣೆಯಲ್ಲಿ ಕಾಣಿಸಿಕೊಂಡಿರುವ ಪ್ರತಿಯೊಬ್ಬ ನಟ-ನಟಿಯರ ಮಾತು, ಅಭಿನಯಕ್ಕೆ ಪ್ರತಿಯೊಬ್ಬ ಕನ್ನಡಿಗನ ಸಲ್ಯೂಟ್! ಇಟ್ಸ್ ಸಿಂಪ್ಲಿ ಕ್ಲಾಸ್ ಅನ್ನಬಹುದು.

ಪಾತ್ರಗಳ ಮಾತುಗಳು, ಅವರ ಕನ್ನಡ ಉಚ್ಛಾರಣೆ, ಪೋಟೂಗ್ರಫಿ ತುಂಬ ಉನ್ನತವಾಗಿದೆ.

ಪ್ರತಿಯೊಂದು ಎಪಿಸೋಡ್ ನ್ನು ಹಾಗೆಯೇ ಯಾವುದೇ ಕಂಟ್ಯೂನಿಟಿ ಇಲ್ಲದೇ ನೋಡಬಹುದಾಗಿದೆ. ಹಾಗೆ ಕಥೆಯನ್ನು ಎಣಿದಿದ್ದಾರೆ.

ಇಲ್ಲಿ ನನಗೆ ಇಷ್ಟವಾಗಿದ್ದು, ಎಲ್ಲಾ ಪಾತ್ರಗಳ ಮಾತುಗಳು. ಸಾಮಾನ್ಯವಾಗಿ ಎಲ್ಲರೂ ಮಾತನ್ನಾಡುವವರು ಅದರೇ ಜೀವನದ ಸತ್ಯವಾದಂತ ಮಾತುಗಳು ಮತ್ತು ಅದು ಇಂದಿನ ಜೀವನದ ದುಡಿಮೆಯಲ್ಲಿ ಎಷ್ಟು ಅರ್ಥಗರ್ಭಿತ ಎನ್ನುವಂತಾಗುತ್ತದೆ.

ನಾವುಗಳು ಯಾವುದಾದರೂ ಒಂದು ಉತ್ತಮವಾದ ಕನ್ನಡ ಕಾದಂಬರಿಯನ್ನು ಓದಿದಾಗ ಹೇಗೆ ಒಂದು ಸುಂದರ ಅನುಭವವನ್ನು ಅನುಭವಿಸುವೆವೋ ಆ ರೀತಿಯ ಅನುಭವವನ್ನು ಪ್ರತಿಯೊಬ್ಬ ವೀಕ್ಷಕನು ಕಾಣುವವನು. ಮತ್ತು ಈ ದಾರವಾಹಿ ನಮ್ಮನ್ನು ಆ ದಿಕ್ಕಿನಲ್ಲಿ ಚಿಂತನೆಗೆ ಹಚ್ಚುವ ಕೆಲಸವನ್ನು ಮಾಡುತ್ತಿದೆ.

ನೈತಿಕತೆ, ಕೆಟ್ಟತನ, ಬದುಕಿನ ಜಂಜಾಟ, ದುಡಿಮೆ, ಗುರಿ, ಸಂಬಂಧಗಳ,(ಅ)ಸ್ವಾಭಾವಿಕತೆ ಪುನರನವೀಕರಣದ ಹಾದಿಯ ಹುಡುಕಾಟವಾಗಿದೆ ಎಂದರೇ ಅತಿಶಯೋಕ್ತಿಯಲ್ಲ.

ಇಂಥ ಒಂದು ಸುಂದರ ದೃಶ್ಯ ಕಾವ್ಯವನ್ನು ಕನ್ನಡದಲ್ಲಿ ಟಿ.ವಿ ದಾರವಾಹಿಯಾಗಿ ಮನೆ ಮನೆ ತಲುಪಿಸುವಲ್ಲಿ ನಿಂತಿರುವ ಸೇತೂರಾಮ್ ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ....

ಅದರ ಝಲಕುಗಳ ಅನಾವರಣ ಇಲ್ಲಿ............






೧. ಗಂಡಸರು ಸುಖಕ್ಕಾಗಿ ಸಂಬಂಧಗಳನ್ನು ಹುಡುಕುತ್ತಾರೆ. ಆದರೆ ಹೆಂಗಸರು ಸಂಬಂಧದಲ್ಲಿಯೇ ಸುಖವನ್ನು ಹುಡುಕುತ್ತಾರೆ.

೨. ಮಗ ಎಂಬುದು ಭಾವ, ಅಂಕೆ ಸಂಖ್ಯೆ ಆಗಬಾರದು ಅಲ್ಲವಾ?

೩. ಹೆಂಗಸರು ಅವಶ್ಯಕತೆಗಳಿಗೆ ಸಂಬಂಧ ಹುಡುಕುತ್ತಾರೆ. ಇಲ್ಲ ಅಂದರೆ ಬಿಟ್ಟುಬಿಡುತ್ತಾರೆ.

೪. ಹೆತ್ತವರು ಮಕ್ಕಳ ಸಂಬಂಧ ಭಾವನ್ಮಾತಕವಾದದ್ದು, ವ್ಯವಹಾರವಲ್ಲ.

೫.ಮಕ್ಕಳಿಗೆ ತಂದೆ ತಾಯಿ ಮನೆ ಯಾವತ್ತೂ ಸ್ವಂತ, ಹೆತ್ತವರಿಗೆ ಮಕ್ಕಳ ಮನೆಯಲ್ಲ.

೬. ಭಾಷೆ ಕಲಿತಿದ್ದಾನೆ. ಭಾವ ಸತ್ತಿದೆ.

೭. ಬದುಕಿಗೋಸ್ಕರ ಕೆಲಸ. ಕೆಲಸಕ್ಕೊಸ್ಕರ ಬದುಕಾದಾ?

೮. ಬದುಕಿಗೆ ಹಣ. ಹಣಕ್ಕಾಗಿ ಬದುಕಾ?

೯.ಮಕ್ಕಳ ತರಾ ಉಳಿಯಬೇಕು ಎಂದರೇ, ದೊಡ್ಡವರು ದೊಡ್ಡವರ ತರಾ ಇರಬೇಕು.

೧೦. ಪಾಪಿಗಳ ಪ್ರಪಂಚದಲ್ಲಿ ಸತ್ತವರೇ ಪುಣ್ಯವಂತರು.

೧೧. ಕೆಟ್ಟ ಮಕ್ಕಳು ಹೃದಯಕ್ಕೆ ಹತ್ತಿರ.

೧೨. ಗಂಡಸರು ಕೆಟ್ಟವರು ಅಂತಹ ಗೊತ್ತಿದ್ದು ಸಂಪರ್ಕ ಬೆಳೆಸಿದರೆ ಹಾದರ ಅನಿಸುತ್ತದೆ. ಯಾವ ಹೆಣ್ಣು ಗೊತ್ತಿದ್ದು ಹಾದರಕ್ಕೆ ಇಳಿಯಲ್ಲಾ ಗಂಡಸರು ಇಳಿಸುತ್ತಾರೆ.

೧೩. ಹೆತ್ತರೆ, ಹೊತ್ತರೆ ವ್ಯಾಮೋಹ ಬರಲ್ಲ. ಸಾಕಬೇಕು.

೧೪. ಹಗಲು ಮರೆತು ಕಾಡುತ್ತೀರಿ. ರಾತ್ರಿ ನೆನಪಿಸಿ ಕಾಡುತ್ತೀರಿ.

೧೫. ಮದುವೆಗೆ ಮೊದಲು ಇದ್ದಲನ್ನು ವಜ್ರ ಅನ್ನುತ್ತೇವೆ, ಹೊಳೆಯುತ್ತದೆ ಅನ್ನುತ್ತೇವೆ. ಮದುವೆ ಆದಮೇಲೆ ವಜ್ರವನ್ನು ಇದ್ದಲು ಅನ್ನುತ್ತೇವೆ.

೧೬. ಮೆದುಳನ್ನು ಸರಿಯಾಗಿ ಇಟ್ಟುಕೊಂಡು ಹೆಣ್ಣನ್ನು ಆರಿಸಬೇಕು. ಹೃದಯದ ಮೀಡಿತ ಇಟ್ಟುಕೊಂಡು ಸಂಸಾರವನ್ನು ನಡೆಸಬೇಕು. ಹೃದಯ ಬಡಿತು ಅಂತಹ ಆರಿಸಿಕೊಳ್ಳುತ್ತಾರೆ. ಜೀವನಪರ್ಯಾಂತ ಮೆದುಳನ್ನು ಉಪಯೋಗಿಸಿ ಕಷ್ಟಪಡುತ್ತಾರೆ.

೧೭. ಬಾಲ್ಯಕ್ಕೆ ಯೌವನ, ಬಯಕೆ ಅರ್ಥವಾಗುತ್ತದೆ. ಆದರೆ ವೃದ್ಧಾಪ್ಯಕ್ಕೆ ಇದು ಅರ್ಥವಾಗುವುದಿಲ್ಲ.

೧೮. ಕೆಟ್ಟ ಗಂಡನನ್ನು ಬಿಡಬಹುದು. ಕೆಟ್ಟ ಮಕ್ಕಳನ್ನು ಓಡಿಸಬಹುದು. ಆದರೆ ಕೆಟ್ಟ ಅಪ್ಪನನ್ನು ಬಿಡಕ್ಕೆ ಆಗಲ್ಲ.

೧೯. ಹಕ್ಕು ಇರಕಡೆ ಸ್ವಾತಂತ್ರ್ಯ ಬದುಕಲ್ಲಾ.

೨೦. ನೋವು ಮಿತಿಮೀರಿದಾಗ ಕೀಚಕ ಕೊಡಾ ಅಮ್ಮ ಅನ್ನುತ್ತಾನೆ. ಆಗಲೇ ಹೆಣ್ಣನ್ನು ಗುರುತಿಸಬಲ್ಲ.

೨೧.ಎಲ್ಲೇ ಇಲ್ಲದ ಸ್ವಾತಂತ್ರ್ಯ ಸ್ವೇಚ್ಛೆ.

೨೨. ಸ್ನೇಹಿತರು ಒಳ್ಳೆ ಸುದ್ಧಿ ಹುಡುಕುತ್ತಾರೆ. ನೆಂಟರು ಕೆಟ್ಟ ಸುದ್ಧಿ ಹುಡುಕುತ್ತಾರೆ.

೨೩. ಹತ್ತಿರದವರು ಮುಚ್ಚಿಡುತ್ತಾರೆ; ಹಿತೈಷಿಗಳು ಬಿಚ್ಚಿಡುತ್ತಾರೆ.

೨೪. ಚಟ ಇರುತ್ತೇ ಹೋಗುತ್ತೆ.ಆದರೆ ರೂಡಿಸಿಕೊಂಡ ಭಾವ ಸ್ಥಿರ ಅಲ್ಲವಾ?

೨೫. ಆಳೋ ಚೈತನ್ಯ ಇರುವ ಗಂಡಸು ಶೀಲದ ಬಗ್ಗೆ ಮಾತನ್ನಾಡಲ್ಲ. ಷಂಡರೇ ಶೀಲದ ಬಗ್ಗೆ ಮಾತನಾಡುವುದು.

೨೬. ಸ್ವಾತಂತ್ರ್ಯ ಭಾವದಲ್ಲಿ ತಿಳಿಯಬೇಕು.

೨೭. ತಾಯಿಗೆ ಮಗಳು ಕರಳು. ಮಗಳಿಗಲ್ಲಾ ಅಲ್ಲವಾ?

೨೮. ಮರೆತಿದ್ದರೆ ಅಲ್ಲವಾ ನೆನಪು ಆಗುವುದು.

೨೯. ಅವಶ್ಯಕ ಅನಿಸದ ಸಂಬಂಧಗಳು ಉಳಿಯುವುದಿಲ್ಲ.

೩೦. ಕಣ್ಣುಗಳಿಗೆ ಬಿಳದಿದ್ದರೆ ದೇವರನ್ನೇ ಮರೆಯುತ್ತಾನೆ ಅಂತೆ ಮನುಷ್ಯ. ಇನ್ನೂ ಮನುಷ್ಯರನ್ನ ಬಿಡುತ್ತಾನಾ..

೩೧. ಸುಖಕ್ಕೆ ಗಂಡು ಸಾಕು. ಆದರೆ ಸಂಸಾರಕ್ಕೆ ಗಂಡ ಬೇಕು.

೩೨. ಗಂಡಸು ಎಂಬ ಅಹಂಕಾರ ಇರಬೇಕಾದರೆ ಗುಲಾಮಗಿರಿ ಇರಬಾರದು.

೩೩. ಜಗತ್ತಿನಲ್ಲಿ ಗಂಡು ಹೆಣ್ಣು ಅಂತ ಆಗಿದ್ದು ಸೃಷ್ಟಿಗಾಗಿ. ಸುಖಕ್ಕಾಗಿ ಅಲ್ಲಾ.

೩೪. ಪ್ರಕೃತಿ ಸೃಷ್ಟಿಸುವುದರಲ್ಲಿ ಸುಖ ಕಾಣುತ್ತದೆ. ಮನುಷ್ಯ ಸ್ವಂತ ಸ್ವಾರ್ಥಕ್ಕಾಗಿ ಸೃಷ್ಟಿಸುವುದರಲ್ಲಿ ಸುಖ ಕಾಣುತ್ತಾನೆ.

೩೫. ಹರಿದು ಹಂಚಿಕೊಳ್ಳುವರನ್ನೇ ಅಲ್ಲವಾ ಮಕ್ಕಳು ಅನ್ನುವುದು.

೩೬. ವಿಷಯ ಚರ್ಚೆಗೆ ಬರದಿದ್ದರೆ ಅರ್ಥವಾಗುವುದಾದರೂ ಹೇಗೆ.

೩೭. ಮಕ್ಕಳ ನೆನಪಲ್ಲಿ ಇಲ್ಲದ ಹೆತ್ತವರು ಇದ್ದು ಇಲ್ಲದ ಹಾಗೆ. ಇದ್ದು ಸತ್ತಾ ಹಾಗೆಯೇ.

೩೮. ಮಕ್ಕಳು ಕೆಡಕ್ಕೂ ಮೊದಲು ಯಮ ಬಂದರೇ ಧರ್ಮ!

೩೯. ಮುಂದೆ ಬದುಕು ಚೆನ್ನಾಗಿರಲಿ ಎಂದು ಹೆಂಗಸರು ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ಗಂಡಸರು ಹಿಂದೆ ಮಾಡಿದ ಪಾಪಗಳನ್ನು ಕ್ಷಮೀಸು ಅಂತಾ ದೇವಸ್ಥಾನಕ್ಕೆ ಹೋಗುತ್ತಾರೆ.

೪೦. ಬದುಕಿಗೆ ಮನುಷ್ಯರನ್ನು ನೆಚ್ಚಿಕೊಂಡರೇ ದಾಸ್ಯ. ಭಗವಂತನನ್ನು ನೆಚ್ಚಿಕೊಂಡರೇ ಸ್ವಾತಂತ್ರ್ಯ.

೪೧. ಗಂಡಸರಿಗೆ ಕನಸು ಗ್ರಾಸ. ಹೆಂಗಸರಿಗೆ ಕನಸು ಗ್ರಾಸ.

೪೨. ಪಾಪದ್ದು ಭಿಕ್ಷೆ. ಪುಣ್ಯದ್ದು ಪ್ರಸಾದ.

೪೩. ಬದುಕು ಕಲೆ ಅಲ್ಲ, ಸ್ವಾಭಾವಿಕ. ಬದುಕದನೇ ಬದುಕುತ್ತಾ ಇರುವೇವು ಎಂಬುದು ಕಲೆ.

೪೪. ಕಳ್ಳ ಲೋಕದಲ್ಲಿ ಕಾನೂನಿಗೆ ಜಾಗವಿಲ್ಲ.

೪೫. ಸುಖವಿಲ್ಲದಿದ್ದರೇ ಮಕ್ಕಳು ಹೆತ್ತವರನ್ನು ಸಾಕುವುದಿಲ್ಲ.

೪೬. ಬದುಕಿನಲ್ಲಿ ಸ್ನೇಹಿತರನ್ನು ಮರೆಯಬಹುದಂತೆ, ಶತ್ರುಗಳನಲ್ಲಾ. ಸ್ನೇಹಿತರನ್ನ ದೂರ ಇಟ್ಟರು ತೊಂದರೆಯಿಲ್ಲ. ಅವರು ಹಿತಕಾಂಕ್ಷಿಗಳು.

೪೭. ಸ್ವಂತಹ ಸಮಸ್ಯೆಗಳು ಗಟ್ಟಿ ಮಾಡುತ್ತವೆ. ಆದರೆ ಮಕ್ಕಳಗಳದು ಮೆತ್ತಗೆ ಮಾಡುತ್ತವೆ.

೪೮. ಪ್ರೀತಿಯಲ್ಲಿ ಸುಖವಿರುತ್ತದೆ. ಉಪೇಕ್ಷೆಯಲ್ಲಿ ನೋವು.ದ್ವೇಷ ಶಕ್ತಿ ಕೊಡುತ್ತದೆ.

೪೯. ಹಣ ಯಾವತ್ತೂ ತೃಪ್ತಿಕೊಟ್ಟಿಲ್ಲ. ಅದು ಯಾವತ್ತೂ ಅತೃಪ್ತಿ.

೫೦. ಗಾಳಿಯಲ್ಲಿ ತೇಲುವ ಕಸಕ್ಕೆ ಗುರಿ ಏನೂ ಇರುತ್ತೇ?

೫೧. ಬದುಕಿಗೆ ಭೂತದ ನೆನಪು ಇರಬೇಕು. ವರ್ತಮಾನದಲ್ಲಿ ಸುಖವಿರುಬೇಕು. ಭವಿಷ್ಯತನಲ್ಲಿ ಕನಸು ಇರಬೇಕು.

೫೨. ಮನುಷ್ಯ ಅಂದರೇ ಅಷ್ಟೇ, ಅಪರಾಧಗಳ ಮೂಟೆ.

೫೩. ಇಷ್ಟ ಬಂದಾಗ ಸಾಯಬಹುದು. ಆದರೆ ಇಷ್ಟ ಬಂದಂಗೇ ಬದುಕಕಾಗಲ್ಲ.

೫೪. ಗಂಡಸರು ಬದುಕದು ಹಕ್ಕಿನ ಮೇಲೆ. ಹೆಂಗಸರು ಬದುಕದು ಜವಬ್ದಾರಿಯ ಮೇಲೆ.

೫೫. ವಯಸ್ಸಿನಲ್ಲಿ ಬದುಕಿಗೆ ಹೆದರಬಾರದು. ವಯಸ್ಸಾದ ಮೇಲೆ ಸಾವಿಗೆ ಹೆದರಬಾರದು.

ಭಾನುವಾರ, ಸೆಪ್ಟೆಂಬರ್ 11, 2011

ಇದಕ್ಕೆ ಕೊನೆಯಾದರೂ ಹೇಗೆ? ಎಂದು?

ಹೆಸರು, ಹಣ ಮಾಡಬೇಕು ಎಂದು ನಮ್ಮ ಜನಗಳು ಯಾಕೆ ಪರಿತಪಿಸುವವರು ಎಂಬುದು ಕಳೆದ ದಿನಗಳಲ್ಲಿ ಘಟಿಸಿದ ಮತ್ತು ಓದಿದ ವರದಿಗಳಿಂದ ಪುಷ್ಟಿ ದೊರೆತಂತಾಯಿತು. ಯಾವುದೇ ದೊಡ್ಡ ಅಧಿಕಾರ, ಸ್ಥಾನವನ್ನ ಮತ್ತು ಸಮಾಜದಲ್ಲಿ ದೊಡ್ಡ ಗೌರವವನ್ನು ಹೊಂದಿರುವ ವ್ಯಕ್ತಿ ತನಗೆ ಗೊತ್ತಿರುವವಂತೆ ತನ್ನನ್ನು ಪಾಲೋ ಮಾಡುವ ಒಂದು ಸಮೊಹವನ್ನು ಹೊಂದಿರುತ್ತಾನೆ. ಸಮಾಜದ ಜನಗಳು ಸಹ ಅವನನ್ನು ತನ್ನ ಆರಾಧ್ಯ ದೈವ ಎಂಬ ರೀತಿಯಲ್ಲಿ ನೋಡಿ ಆನಂದಿಸುತ್ತಾರೆ.

ಅದು ಅವನ ಕಲೆ, ಮಾತು, ಹಣ, ಅಧಿಕಾರ, ಸಮಾಜದ ಕಡೆಗೆ ಇರುವ (ಪ್ರೀತಿ?) ಏನಾದರೂ ಇರಬಹುದು ತುಂಬ ಹಚ್ಚಿಕೊಂಡುಬಿಟ್ಟು ಬಿಡುತ್ತಾರೆ. ಅದು ಆ ವ್ಯಕ್ತಿಗಳ ಅಹಂ ನ್ನು ಒಂದು ಮಟ್ಟದಲ್ಲಿ ಮೇಲಕ್ಕೆ ಏರಿಸಿಬಿಡುತ್ತದೆ. ಅವರುಗಳಿಗೆ ಒಂದು ಸಂಘ, ಬೆಂಬಲ, ಅವರಿಗಾಗಿ ಕಾರ್ಯಕ್ರಮಗಳು ಇತ್ಯಾದಿ ಇತ್ಯಾದಿ.

ಅವರುಗಳು ಮಾಡುವುದೆಲ್ಲಾ ಸರಿ ಎಂಬ ನಂಬಿಕೆ ನಮ್ಮ ಜನಗಳದಾಗಿರುತ್ತದೆ. ಆ ವ್ಯಕ್ತಿಗಳು ಮಾತನಾಡುವ ಪ್ರಜಾ ಕಾಳಜಿ ಮಾತುಗಳು, ಅವರುಗಳ ಹೇಳಿಕೆಗಳು ಟಿ.ವಿ, ಪತ್ರಿಕೆಗಳಲ್ಲಿ, ಸಿನಿಮಾಗಳಲ್ಲಿ ತೋರಿಸುವ ಕಾಳಜಿಗಳೆಲ್ಲಾ ಆ ವ್ಯಕ್ತಿಯ ವ್ಯಕ್ತಿತ್ವದ ನಿಜ ಸ್ವರೂಪ ಎಂಬ ರೀತಿಯಲ್ಲಿ ಎಂದು ಕೊಂಡಿರುತ್ತಾರೆ.

ಅವನು ಸಹ ನಡೆದಾಡುವ ಸಾಮಾನ್ಯ ಮನುಷ್ಯ ಎಂಬುದನ್ನೇ ಮರೆತುಬಿಟ್ಟಿರುತ್ತಾರೆ. ಅದು ಯಾವ ಪರಕಾಷ್ಠೇಯೊ ದೇವರಿಗೆ ಪ್ರೀತಿ. ಇಷ್ಟೊಂದು ರೀತಿಯಲ್ಲಿ ವ್ಯಕ್ತಿಗಳನ್ನು ಆರಾಧಿಸುವ ಜನಗಳು ನಮ್ಮ ಭಾರತದಲ್ಲಿ ಸಿಗುವಂತೆ ಬೇರೆಲ್ಲೂ ಸಿಗಲಾರರು ಏನೋ.

ಯಾರೇ ಆಗಿರಲಿ ಅತಿ ಕಡಿಮೆ ದಿನಗಳಲ್ಲಿ ಹೀಗೆ ನಮ್ಮ ಜನಮಾನಸದಲ್ಲಿ ಸ್ಥಾಪಿತರಾಗಿಬಿಡುತ್ತಾರೆ. ಕೇವಲ ಒಂದು ಪಂದ್ಯದಲ್ಲಿ ಒಂದು ಸೆಂಚುರಿ, ಒಂದು ಮೋವಿಯ ೧೦೦ ದಿನಗಳು, ಒಂದು ಭಾರಿ ಚುನಾವಣೆಯಲ್ಲಿ ಗೆದ್ದು ಬಂದು ಒಂದು ಮಂತ್ರಿಗಿರಿ, ಒಂದು ಆಶ್ರಮದ/ಸಂಘ/ಸೇವಾ ಮುಖ್ಯಸ್ಥನಾಗಿ, ಒಂದೇರಡು ಮನ ಕರಗುವ ಪ್ರವಚನಗಳು ಇತ್ಯಾದಿ ಏನಾದರೂ ಒಂದನ್ನು ಸಾರ್ವಜನಿಕವಾಗಿ ಕೊಟ್ಟು ಬಿಟ್ಟರೇ ಸಾಕು... ನಂತರದ ದಿನಗಳಲ್ಲಿ ಅವನು ಏನೂ ಮಾಡಿದರೂ ದೇವರಾಣೆ ನಮ್ಮ ಜನ ಯಾಕಪ್ಪಾ ಅವನು ತಪ್ಪು ಮಾಡಿದಾ ಎಂದು ಕೇಳುವುದಿಲ್ಲ.

ಜನಗಳು ಕೊಡುವ ಸಮಜಾಯಿಷಿ ನೀವುಗಳು ನೋಡಬೇಕು. ಇಲ್ಲಾ ಬಿಡಿ ಅವರುಗಳು ಆ ರೀತಿಯಲ್ಲಿ ಮಾಡಿರುವುದಕ್ಕೆ ಸಾಧ್ಯವಿಲ್ಲ. ಅವರುನಮ್ಮ ಗುರು.. ಅವನು ನಮ್ಮ ಸ್ಟಾರ್, ಅವನು ನಮ್ಮ ನಾಯಕ, ಅವನು ನಮ್ಮ ಜಾತಿಯವನೇ ಕಣ್ರೀ.. ಅದೇಗೆ ಸಾಧ್ಯ? ಎಂಬ ಸಮರ್ಥನೆಯ ಸರಮಾಲೆಯನ್ನೇ ಕೊಡುತ್ತಾರೆ.

ಇದೇ ಅಲ್ಲವಾ ಮಹಿಮೆ!

ಅದೇ ನೀವು ನೋಡಿರಬೇಕು. ಅಪ್ಪಿ ತಪ್ಪಿ ಚಿಕ್ಕ ಜೇಬು ಕಳ್ಳ ನಮ್ಮ ಜನಗಳ ಕೈಗೆ ಸಿಕ್ಕಿ ಬಿದ್ದರೇ ದೇವರಿಗೆ ಪ್ರೀತಿಯಾಗಬೇಕು ಅಷ್ಟರ ಮಟ್ಟಿಗೆ ಧರ್ಮದೇಟು ಕೊಡಲು ನಾನು ಮುಂದು ತಾನು ಮುಂದು ಎಂದು ಎಲ್ಲಾ ಸೇರಿ ಹಾಕುತ್ತಾರೆ.

ಅದೇ ನಮ್ಮ ದೊಡ್ಡ ದೊಡ್ಡ ಸ್ಟಾರಗಳು, ನಾಯಕರುಗಳು, ದೇವ ಮಾನವರುಗಳು ಮಾಡುವ ದೊಡ್ಡ ತಪ್ಪುಗಳಿಗೆ ತೆಪ್ಪಗೆ ಇದ್ದು.. ಮರುಗುತ್ತಾ ಯಾಕೆ ಹೀಗೆ ಆಯ್ತಾಪ್ಪ? ದೇವರೇ ಅವರುಗಳು ಕ್ಷೇಮವಾಗಿ ಮನೆಗಳಿ ಹಿಂದಿರುಗಿ ಯಾವುದೇ ಕಳಂಕರಹಿತರಾಗಿ ತ(ನ)ಮ್ಮ ಸೇವೆ, ಸಹಾಯ, ರಂಜನೆಯನ್ನು ಜನರ ಮಾನಸಕ್ಕೆ ಕೊಡಲಿ ಎಂದು ನಾಡಿನ ಎಲ್ಲಾ ದೇವಸ್ಥಾನಗಳಲ್ಲಿ ಹೋಮ, ಹವನ, ಪೂಜೆಗಳನ್ನು, ಅನ್ನ ಸಂತಾರ್ಪಣೆಗಳನ್ನು ಅವರ ಭಕ್ತ ಸಮೊಹ ಹಮ್ಮಿಕೊಳ್ಳುತ್ತದೆ ಯಾಕೆ?

ನಮ್ಮ ಜನಗಳು ಯಾವುದಕ್ಕೆ ಬೆಲೆ ಕೊಡುತ್ತ ಇದ್ದಾರೆ ಎಂದು ನಮಗೆ ಒಂದು ಕ್ಷಣ ಗೊಂದಲ ಆಗುವುದಿಲ್ಲವೇ?

ದೊಡ್ಡವರು, ಉಳ್ಳವರು, ಪ್ರಸಿದ್ಧವರಿಗೆ ಮಾತ್ರ ಒಂದು ನ್ಯಾಯಾ. ಏನೂ ಇಲ್ಲದ ಸಾಮಾನ್ಯ ಪ್ರಜೆಗೆ ಒಂದು ನ್ಯಾಯವಾ? ನೀವೆ ಹೇಳಿ.

ಯಾಕೆ ನಾವುಗಳು ಅವರುಗಳನ್ನು ಒಬ್ಬ ಸಾಮಾನ್ಯ ಮನುಷ್ಯನಂತೆ ನೋಡಲಾಗುವುದಿಲ್ಲ. ಅವನು ಮಾಡುವ ಸಾವಿರ ತಪ್ಪುಗಳು, ತಪ್ಪು ಎಂದು ನಿರೂಪಿತವಾಗಿದ್ದರೂ ಒಂದು ಕೊದಲು ಎಳೆಯಷ್ಟು ಸಂಶಯಗಳು ಬರುವುದಿಲ್ಲ.

ಅವರುಗಳು ಜೈಲು, ಕಟೆಕಟೆಯಲ್ಲಿ ನಿಂತರು, ಪತ್ರಿಕೆಗಳು ಅಷ್ಟು ದುಡ್ಡು ಹೊಡೆದ ಇಷ್ಟು ಭ್ರಷ್ಟಾಚಾರ ಮಾಡಿದ ಎಂದು ಪುಟ ಪುಟಗಟ್ಟಲೇ ಓದಿದರೂ ನಾವುಗಳು ಯಾಕೆ ಅವರುಗಳನ್ನು ಅಷ್ಟೊಂದು ಸಾಪ್ಟ್ ಆಗಿ ಕಾಣುತ್ತೇವೆ? ಸಣ್ಣ ತಪ್ಪು, ದೊಡ್ಡ ತಪ್ಪು ಎಂಬ ರೀತಿಯ ತಪ್ಪುಗಳು ಇರುವುವೆ?

ಅದೇ ಸಾಮಾನ್ಯ ಮನುಷ್ಯ ಒಂದು ಸಣ್ಣದಾಗಿ ಎಡವಿದರು ಸಾಕು ಹೇಗೆಲ್ಲಾ ಆಡಿಕೊಂಡು ಅವನ ಮನಸ್ಸನ್ನು ನೋಯಿಸುವ ನಾವುಗಳು ಕೋಟಿಗಟ್ಟಲೆ ತಿಂದಿರುವ ಆ ಮುಖಗಳಲ್ಲಿರುವ ಝಲಕು, ಒಂದೀಷ್ಟು ಬತ್ತಿರದ ರೀತಿಯಲ್ಲಿ ಟಿ.ವಿ ಯಲ್ಲಿ ವಿನ್ನರ್ ಸೈನ್ ನ್ನು ತೋರಿಸಿಕೊಳ್ಳುತ್ತಾ ಕೋರ್ಟಿಗೆ ಹೋಗುತ್ತಿರುವ ನಾಯಕರ ದೃಶ್ಯ ಏನನ್ನು ನಿದರ್ಶಿಸುತ್ತದೆ?

ನಿಜವಾಗಿಯು ನೈತಿಕತೆ ಎಂದರೇ ಏನೂ ಎಂಬ ಹೊಸ ಪರಿಭಾಷೆಯನ್ನು ಹುಡುಕುವಂತಾಗಿದೆ.

ಹೆಚ್ಚಾಗಿ ದುಡ್ಡು ಮಾಡಿದರೇ ಸಾಕು ಮಗ ಎಲ್ಲವನ್ನು ಜಯಿಸಬಹುದು ಎನ್ನುವಂತಾಗಿದೆ. ಪಾಪ ಪುಣ್ಯವನ್ನು ಮೋಟೆ ಕಟ್ಟಿ ಮಾರಾಟಕ್ಕೆ ಇಟ್ಟು ಬಿಟ್ಟಿದ್ದಾರೇನೂ ಎನಿಸುತ್ತಿದೆ.

ಮೊನ್ನೆಯ ದಿನಪತ್ರಿಕೆಯಲ್ಲಿ ಓದಿದ ಒಂದು ವರದಿ ಮನಕರಗಿಸಿ ನಾವು ಯಾವ ಲೋಕದಲ್ಲಿ ಇದ್ದೇವೆ ಎನ್ನುವಂತಾಯಿತು.

ದೆಹಲಿಯಲ್ಲಿ ಭಯೋತ್ಪಾದಕರ ಬಾಂಬ್ ಗೆ ಬಲಿಯಾದವರ ಶವಗಳನ್ನು ಅವರ ಸಂಬಂಧಿಕರುಗಳು ತಮ್ಮ ಜಾಗಗಳಿಗೆ ಸಾಗಿಸುವಾಗ ಶವಗಳನ್ನು ಇಟ್ಟಿರುವ ಆಸ್ಪತ್ರೆಯಲ್ಲಿ ಶವಗಳನ್ನು ಮುಚ್ಚಿಕೊಂಡುಹೋಗಲು ಪ್ಲಾಸ್ಟಿಕ್ ಕವರಗಳನ್ನು ಬೇಡಿದ್ದಾರೆ. ಅವುಗಳ ನಿಜವಾದ ಬೆಲೆ ೩೦೦ ರೂಗಳು. ಆದರೇ ಅಲ್ಲಿನ ಸಿಬ್ಬಂಧಿ ದುಃಖತಪ್ತ ಮನೆಯವರುಗಳಿಂದ ಹೆಚ್ಚಿನ ಬೆಲೆಯನ್ನು ಕೇಳಿ ಮಾರಾಟ ಮಾಡಿರುವುದು ಯಾವುದರ ಸಂಕೇತ?

ನಿಜವಾಗಿಯು ನಾವುಗಳು ಏನೆಲ್ಲಾ ಆದರ್ಶ, ನೈತಿಕತೆ, ದೇಶ ಪ್ರೇಮ ಇತ್ಯಾದಿ ದೊಡ್ಡ ಮಾತುಗಳು ನಮ್ಮ ನಾಡಿನ ಯಾವ ಜನಗಳಿಗೋಸ್ಕರ. ನಿತ್ಯ ಭ್ರಷ್ಟಾಚಾರ ತೂಲಗಲಿ, ಸುರ‍ಕ್ಷತೆಯ ಸ್ವರಾಜ್ಯ ಸ್ಥಾಪಿತವಾಗಲಿ ಎಂದು ಕೆಲವೊಂದು ಮಂದಿ ತಮ್ಮ ಜೀವವನ್ನೆ ಪಣವಾಗಿಟ್ಟು ಹೋರಾಡುತ್ತಾರೆ. ಆದರೇ ಕೆಲವೊಂದು ಮಂದಿ ತಮ್ಮ ನೀಚತನವನ್ನು, ತಮ್ಮ ದುರಾಸೆಯನ್ನು ಸಮಯ ಸಂದರ್ಭ,ಸ್ಥಳ ಎನಿಸದೇ ಹೆಗ್ಗಿಲ್ಲದೇ ಕಿತ್ತು ತಿನ್ನಲು ಮಣೆ ಹಾಕಿಕೊಂಡು ಕುಳಿತಿರುವವರಲ್ಲ!

ಇದಕ್ಕೆ ಕೊನೆಯಾದರೂ ಹೇಗೆ ಮತ್ತು ಎಂದು?

ಸೋಮವಾರ, ಸೆಪ್ಟೆಂಬರ್ 5, 2011

ಗುರುವೇ ನಮಃ..



ಗುರು ಬ್ರಹ್ಮ, ಗುರು ವಿಷ್ಣು ಗುರುದೇವಾ ಮಹೇಶ್ವರ.. ಈ ಶ್ಲೋಕವನ್ನು ಅಕ್ಷರ ಕಲಿತ ಪ್ರತಿಯೊಬ್ಬರೂ ಒಮ್ಮೆ ತಮ್ಮ ಮನದಲ್ಲಿ ಹೇಳಿಕೊಂಡಿರಲೇ ಬೇಕು. ಇದರ ಹೇಳಿಕೆ ಹೀಗೆ ಗುರುವೆ ಎಲ್ಲಾ. ಗುರು ಮುಟ್ಟಿದ್ದು ಗುಡ್ಡ ಎಂಬ ನಮ್ಮ ಹಳ್ಳಿಯ ಗಾದೆಯಂತೆ ಗುರು ದೊಡ್ಡವನು. ಅದು ನಿಜವೂ ಹೌದು.

ನಾವುಗಳು ಏನಾದರೂ ಒಂದಿಷ್ಟು ಕಲಿತಿರುವೆವು ಅಂದರೇ ಅದು ನಮ್ಮ ಟೀಚರ್, ಮೇಸ್ಟರ್ ಗಳ ಬೋಧನೆಯಿಂದ ಮಾತ್ರ. ನಮ್ಮ ಬಾಲ್ಯದಲ್ಲಿ ಅವರೇ ಎಲ್ಲಾ. ಅವರು ಹೇಳಿದ ಪ್ರತಿಯೊಂದು ಮಾತು ನಮಗೆಲ್ಲಾ ವೇದ ವಾಕ್ಯ. ಅವರು ಏನೂ ಹೇಳಿದರೂ ಪ್ರಶ್ನೇ ಮಾಡದೆ ಒಪ್ಪಿಕೊಂಡು ಸಾಗುವ ಹಂಬಲ. ಅಷ್ಟೊಂದು ಭರವಸೆ ನಮ್ಮ ಮೇಡಮ್, ಮಾಸ್ತರ್ ಗಳ ಮೇಲೆ.

ಅಂದಿನ ದಿನಗಳಲ್ಲಿ ನಮ್ಮಗಳಿಗೆ ಅವರುಗಳೇ ರೋಲ್ ಮಾಡಲ್, ಆದರ್ಶ ವ್ಯಕ್ತಿಗಳು.

ಯಾರಾದರೂ ಮುಂದೆ ನೀನು ಏನಾಗಲು ಬಯಸುವೆ? ಎಂದು ಕೇಳಿದರೇ ಹಿಂದೆ ಮುಂದೆ ನೋಡದೆ ನಾನು ಮಾಸ್ತರ್/ಟೀಚರ್ ಆಗುವೆ ಎಂದು ಜಂಬದಿಂದ ಹೇಳಿಕೊಂಡಿರುತ್ತೇವೆ.

ಮನೆಯೇ ಮೊದಲ ಪಾಠಶಾಲೆ ತಾಯಿಯೆ ಮೊದಲ ಗುರುವಾದರು.. ನಮಗೆ ಗುರುಗಳು ಎಂದರೇ ನಮ್ಮ ಶಾಲೆಗಳಲ್ಲಿ ನಮ್ಮನ್ನು ಒಂದು ಅದ್ದು ಬಸ್ತಿನಲ್ಲಿ ಇಟ್ಟು ಅ, ಆ, ಇ, ಈ.. ಕಲಿಸಿದ ಮೊದಲ ಮೇಷ್ಟ್ರು. ಅಲ್ಲಿ ನಮ್ಮ ತಪ್ಪುಗಳಿಗೆ ಶಿಕ್ಷೆ ಇರುತ್ತದೆ, ನಮ್ಮ ಗೆಲುವಿಗೆ ಒಳ್ಳೆಯತನಕ್ಕೆ ಮೆಚ್ಚುಗೆಯಿರುತ್ತದೆ, ದಾರಿ ತಪ್ಪಿದಾಗ ಮಾರ್ಗದರ್ಶನ ಮಾಡುವವರಾಗಿರುತ್ತಾರೆ.

ಗುರುವೇ ಎಲ್ಲಾ ಎಂಬ ಭಾವನೆಯನ್ನು ನಾವುಗಳು ಹೊಂದಿರುತ್ತೇವೆ. ಅಂದಿನ ದಿನಗಳಲ್ಲಿ ನಾವುಗಳು ಏನೂ ಅಂದುಕೊಂಡಿರುತ್ತೇವೆ ಅಂದರೇ ನಮ್ಮ ಟೀಚರ್ ದೊಡ್ಡ ಙ್ಞಾನಿಗಳು ಅವರಿಗೆ ತಿಳಿಯದ ವಿಷಯಗಳೇ ಇಲ್ಲಾ.. ಅವರು ಹೇಳಿದರೇ ಮುಗಿಯಿತು.. ನಮ್ಮ ಹೆತ್ತವರಿಗಿಂತ ಹೆಚ್ಚಿಗೆ ಅವರುಗಳಿಗೆ ಗೊತ್ತು ಎಂಬ ಒಂದು ಗೌರವಾಯುತವಾದ ಅಭಿಪ್ರಾಯ ನಮ್ಮ ಮುಗ್ಧ ಮನಸ್ಸುಗಳಲ್ಲಿ ಸ್ಥಾಪಿತವಾಗಿರುತ್ತದೆ.

ನಾವುಗಳು ಇಂದು ಹೀಗೆ ಇರುವೆವು ಎಂದರೇ ಅದು ನಮ್ಮ ಗುರುಗಳು ನಮ್ಮನ್ನು ರೂಪಿಸಿದ್ದರಿಂದ. ಅವರುಗಳು ನಮ್ಮ ಚಿಕ್ಕ ಚಿಕ್ಕ ಮನಸ್ಸಿನಲ್ಲಿ ಬಿತ್ತಿದ ಕನಸಿನ ಬೀಜಗಳಿಂದ.

ಯಾರೊಬ್ಬರಾದರೂ ಗುರುವಿಲ್ಲದೆ ಯಾವುದೇ ಒಂದು ಸಾಧನೆಯನ್ನು ಮಾಡಿದ ಉದಾಹರಣೆ ತೀರಾ ಕಡಿಮೆ. ನಮ್ಮ ಬಾಲ್ಯದ ಶಾಲಾ ದಿನಗಳಿಂದ ಹಿಡಿದು.. ಇಂದು ನಾವುಗಳು ನಮ್ಮ ಕಾಲ ಮೇಲೆ ಇಂದು ನಿಂತುಕೊಂಡು ಎಲ್ಲಾದರೂ ಒಂದು ಕಾರ್ಯವನ್ನು ನಡೆಸುತ್ತಿದ್ದೇವೆ ಎಂದರೇ ಅಲ್ಲಲ್ಲಿ ನಮಗೆ ಗೊತ್ತಿಲ್ಲದ ರೀತಿಯಲ್ಲಿ ಯಾರಾದರೊಬ್ಬ ಗುರುವಿನ ಮಾರ್ಗದರ್ಶನ ದೊರಕಿದೆ ಅಂತ ಅರ್ಥ.

ಯೋಚಿಸಿ ನಮ್ಮಗಳ ಕಗ್ಗಲ್ಲಿನ ರೀತಿಯ ವ್ಯಕ್ತಿತ್ವಕ್ಕೆ ಒಂದು ಮೆರಗು ಯಾವಾಗ ಸಿಕ್ಕಿತು?. ಏನೊಂದು ಗೊತ್ತಿಲ್ಲದ ದಿನಗಳಿಂದ ಇಂದು ಸ್ವಲ್ಪ ಏನಾದರೂ ತಿಳಿದಿದೆ ಎಂದು ಬೀಗುವಂತಾಗಿರುವುದರ ಪ್ರೇರಣೆ ಯಾರು? ಅದು ಸರಿ ಇದು ತಪ್ಪು ಎಂಬ ನಿಷ್ಕರ್ಷವನ್ನು ಮಾಡುವಂತೆ ಮಾಡಿದವರು ಯಾರು? ಹೀಗೆ ನಮ್ಮ ಬದುಕಿಗೆ ಒಂದು ಅರ್ಥವನ್ನು ಕೊಟ್ಟವರು ಅವರುಗಳೇ ಅಲ್ಲವಾ?

ಯಾವುದೇ ಕ್ಷೇತ್ರದಲ್ಲಿ ಇಂದು ಒಂದು ದೊಡ್ಡ ಸಾಧನೆಗಳನ್ನು ಮಾಡಿರುವ ವ್ಯಕ್ತಿಗಳನ್ನು ಕೇಳಿ ನೋಡಿ ಅವರುಗಳ ಇಂದಿನ ಸ್ಥಿತಿಗೆ ಅವರುಗಳು ನೆನಪು ಮಾಡಿಕೊಳ್ಳಲು ತವಕಿಸುವ ಹೆಸರುಗಳೆಂದರೇ ಅವೇ ಅವರ ಸಾಮಾನ್ಯ ಗುರುಗಳು ಮಾತ್ರ. ಗುರುವಿನ ಗುರಿ ಅಷ್ಟು ಮಾತ್ರ ಅವರುಗಳು ಏನೊಂದು ಅಪೇಕ್ಷೆ ಪಡದೆ ತನ್ನ ಶಿಷ್ಯ ಕೋಟಿಯ ಒಂದು ಸಜ್ಜನಿಕೆಯ ಉದ್ಧಾರವೇ ಮೊಲ ಮಂತ್ರವಾಗಿರುತ್ತದೆ. ತನ್ನ ಶಿಷ್ಯ ತನ್ನನ್ನು ಮೀರಿಸಿದಾಗ ಗುರುವಿಗೆ ಸಿಗುವ ಆನಂದ ವರ್ಣಿಸಲು ಅಸಾಧ್ಯ.

ಒಳ್ಳೆಯ ತನಕ್ಕೆ ಮತ್ತೊಂದು ಹೆಸರು ಗುರು ಮಾತ್ರ. ನೀವು ನೋಡಬೇಕು ಹಳ್ಳಿಗಳಲ್ಲಿ ಶಿಕ್ಷಕರನ್ನು ಅಲ್ಲಿನ ಜನಗಳು ಗೌರವಿಸುವ ರೀತಿ. ಬಾಯಿ ತುಂಬ ಮಾಸ್ತರ್ ಎಂದು ಅವರನ್ನು ತುಂಬ ಗೌರವದಿಂದ ಕಾಣುತ್ತಾರೆ. ಯಾಕೆಂದರೇ ತಮ್ಮ ಮಕ್ಕಳಿಗೆ ಸರಿಯಾದ ದಾರಿಯನ್ನು, ನಾಲ್ಕು ಅಕ್ಷರವನ್ನು ಕಲಿಸಿ ಅವರ ಬಾಳನ್ನು ಬಂಗಾರ ಮಾಡುತ್ತಿರುವ ಮೊಲ ಕತೃವೇ ಅವನಾಗಿರುತ್ತಾನೆ ಎಂದುಕೊಂಡು.

ಪ್ರತಿಯೊಂದು ಹೊಸ ಕಲಿಕೆಗೂ ಗುರು ಬೇಕೆ ಬೇಕು ಎಂಬುದನ್ನು ನಾವು ನಮ್ಮ ಹಿಂದಿನ ಪುರಾಣ ಕಥೆಗಳಲ್ಲಿಯೇ ಕೇಳಿದ್ದೇವೆ. ನೋಡಿ ಏಕಲವ್ಯನ ಸಾಧನೆ. ಗುರುಗಳು ತನಗೆ ಕಲಿಸಲಾಗದು ಎಂಬ ಕ್ಷಣದಲ್ಲಿಯು.. ತನಗೆ ಒಬ್ಬ ಗುರುವು ಬೇಕು ಎಂದು ನಿರ್ಧರಿಸಿ ದ್ರೋಣಾಚಾರ್ಯರ ಮಣ್ಣಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಆ ಮೊರ್ತಿಯ ಮುಂದೆ ತನ್ನ ಕಲಿಕೆಯನ್ನು ಮಾಡುತ್ತಾ ಎಲ್ಲಾ ವಿದ್ಯೆಗಳನ್ನು ಕಲಿಯುತ್ತಾ.. ಶಬ್ದವೇದಿ ವಿದ್ಯೆಯಲ್ಲಿ ಅರ್ಜುನನ್ನೇ ಮೀರಿಸಿಬಿಡುತ್ತಾನೆ. ಹಾಗೆಯೇ ದ್ರೋಣಾಚಾರ್ಯರು ತಮ್ಮ ಗುರುದಕ್ಷಿಣೆಯಾಗಿ ಅವನ ಬಲಗೈ ಹೆಬ್ಬೆರಳನ್ನು ಕೇಳಿದಾಕ್ಷಣ ಹಿಂದೆ ಮುಂದೆ ನೋಡದೇ ಬೆರಳನ್ನು ಕತ್ತರಿಸಿ ಗುರು ಕಾಣಿಕೆಯಾಗಿ ಅರ್ಪಿಸಿಬಿಡುತ್ತಾನೆ.

ಗುರು - ಶಿಷ್ಯ ರ ಸಂಬಂಧಕ್ಕೆ ಒಂದು ನಿದರ್ಶನವಾಗಿ ಏಕಲವ್ಯ ನಮ್ಮ ಮುಂದೆ ಇಂದಿಗೂ ಪ್ರಸ್ತುತವಾಗಿದ್ದಾನೆ.

ಅಂದು ನಮ್ಮಗಳಿಗೆ ಅವರಿಂದ ಏಟು ತಿಂದ ಕ್ಷಣಗಳು ಇಂದು ನೆನಸಿಕೊಂಡರೇ ಅದೇ ಒಂದು ಸವಿನೆನಪು.

ನಿನ್ನೇ ಕೊಟ್ಟ ಹೊಡೆತದಂತೆ ಸವಿಯಾದ ನವೆಯನ್ನು ಇಂದು ಕಾಣುವಂತಾಗುತ್ತದೆ. ಆ ದಂಡನೆ ಪ್ರೀತಿಯ ಕಕ್ಕುಲಾತಿಯು ಒಂದು ಎಚ್ಚರಿಕೆಯ ಭಯವನ್ನು...ಸರಿಯಾಗಿ ಕಲಿಯಲಿ.. ಎಂಬುದಾಗಿತ್ತು ಎಂದು ಈಗ ಅನಿಸುತ್ತದೆ. ಆದರೆ ಅಂದು ನಾವುಗಳು ನಮ್ಮ ಗುರುಗಳ ಮೇಲೆ ಮುನಿಸಿಕೊಂಡಿದ್ದೇನೂ.. ಅವರನ್ನು ಮನದಲ್ಲಿಯೇ ಬೈದುಕೊಂಡಿದ್ದೇನೂ.. ಅವರು ಮಾತು ಎತ್ತಿದರೇ ಹೊಡೆಯುತ್ತಾರೆ ಕಣಾಮ್ಮ ಎಂದು ಅಮ್ಮನ ಮುಂದೆ ದೂರು ಕೊಟ್ಟಿದ್ದೇನೂ.. ಒಂದು ದಿನವವು ಕೋಲನ್ನೇ ಮುಟ್ಟದೆ ಮುದ್ದಿನಿಂದ ಪಾಠ ಕಲಿಸಿದ ಮಿಸ್ ಗಳನ್ನು ಕೊಂಡಾಡಿದ ದಿನಗಳೇನೂ.. ಅಬ್ಬಾ ಎಷ್ಟೊಂದು ರೋಮಾಂಚನವನ್ನುಂಟು ಮಾಡುವ ಆ ದಿನಗಳು ಗತಕಾಲಕ್ಕೆ ಸರಿದಿವೆ.

ಇಂದು ಕೇವಲ ನೆನಪುಗಳು ಮಾತ್ರ.

ಅದರೇ ಇಂದು ಎಷ್ಟು ಮಂದಿ ಅಂಥ ಒಂದು ಉನ್ನತವಾದ ಉದ್ಯೋಗವನ್ನು ಆರಿಸಿಕೊಳ್ಳುವವರು? ಅಂದಿನ ನಮ್ಮ ಬಾಲ್ಯದಲ್ಲಿ ನಮ್ಮ ಕನಸು ಮತ್ತೊಬ್ಬ ಒಳ್ಳೆಯ ಮೆಸ್ಟರ್ ಆಗುವುದಾಗಿತ್ತು. ಆದರೆ ಬದಲಾದ ಕಾಲಮಾನ ನಮ್ಮ ಸಮಾಜ, ನಮ್ಮ ಹೆತ್ತವರ ಹಂಬಲದೊಂದಿಗೆ ನಾವುಗಳು ನಮ್ಮ ಉದ್ಯೋಗವನ್ನು ಬೇರೊಂದು ರಂಗದಲ್ಲಿ ಸ್ಥಾಪಿಸಿಕೊಂಡುಬಿಟ್ಟಿದ್ದೇವೆ. ಯಾಕೆ?

ನನಗಂತೋ ಆ ಭಯವಿದೆ. ಉಪನ್ಯಾಸಕನಾಗುವುದಕ್ಕೆ ನನಗೆ ಆ ಅರ್ಹತೆಯಿದೆಯೇ ಎಂಬ ಅನುಮಾನ. ಅಲ್ಲವಾ? ನನಗೆ ಅಷ್ಟು ಗೊತ್ತಿದೆಯೇ? ಮಕ್ಕಳು, ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೆ ಸಮಾಂಜಸವಾದ ಉತ್ತರವನ್ನು ನೀಡಲು ಶಕ್ತನೇ?

ಹೌದಲ್ಲವಾ ಆ ಒಂದು ಜವಾಬ್ದಾರಿಯುತವಾದ ಶಿಕ್ಷಕನ ಸ್ಥಾನವನ್ನು ಅಲಂಕರಿಸಲು ಮನಸ್ಸಿನಲ್ಲಿ ಪ್ರೀತಿಯಿರಬೇಕು. ನಿತ್ಯ ಹೊಸದನ್ನು ಕಲಿಯುವ ಮನೋಭಾವವಿರಬೇಕು. ನಿತ್ಯ ತನ್ನ ವಿದ್ಯಾರ್ಥಿಗಳಿಗೆ ಅಧಿಕಾರಿಯುತವಾಗಿ ಯಾವುದೇ ಒಂದು ವಿಷಯದಲ್ಲಿ ಪರಿಪೂರ್ಣವಾಗಿ ತಿಳಿಹೇಳುವ ಙ್ಞಾನವನ್ನು ಹೊಂದಿರಬೇಕು. ವಿದ್ಯಾರ್ಥಿಯನ್ನು ಹೊಸ ಚಿಂತನೆಗೆ ಹಚ್ಚಿಸುವಂತಹ ಶಿಕ್ಷಣವನ್ನು ನೀಡುವಂತನಾಗಿರಬೇಕು.

ಈ ರೀತಿಯಲ್ಲಿ ನಮ್ಮನ್ನೇಲ್ಲಾ ಪರಿವರ್ತಿಸಿದ ನಮ್ಮ ಎಲ್ಲಾ ಸಮಸ್ತ ಶಿಕ್ಷಕ ಕುಲಕ್ಕೆ ನಮೋ ನಮಃ ಅಂತ ಮಾತ್ರ ನಾನು ಹೇಳುತ್ತೇನೆ. ನೆನಸಿಕೊಂಡರೇ ಇಂದಿಗೂ ನನ್ನ ಮೈನವಿರೇಳಿಸುತ್ತದೆ. ನಾವೇನು ಅಲ್ಲಾ ಎಂಬುದರಿಂದ ಹಿಡಿದು ನೀನು ಹೀಗೆ ಎಂಬುದನ್ನು ತಿಳಿಸಿಕೊಡುವಂತಹ ಶಿಕ್ಷಕ ಸಮೋಹವೇ ಎಂದೆಂದಿಗೂ ಗ್ರೇಟ್.

ಉತ್ತಮ ಶಿಕ್ಷಕರಿಗೆ ಶಿಷ್ಯರಾಗಿರುವುದು ಒಂದು ಪುಣ್ಯವೇ ಸರಿ. ಅವರುಗಳ ಓಡನಾಟವೇ ಒಂದು ದೊಡ್ಡ ವಿಚಾರ. ಅವರನ್ನು ಹತ್ತಿರದಿಂದ ಕಂಡವರಾ ಬದುಕೇ ಪಾವನ ಗಂಗೆ..

ಇಂದಿನ ಈ ಮುಂದುವರಿದ ಜಮಾನದಲ್ಲಿ ಒಂದು ಕ್ಷಣ ನಾವುಗಳು ನಮ್ಮನ್ನು ತಿದ್ದಿತೀಡಿದ ನಮ್ಮ ಎಲ್ಲಾ ಗುರುಗಳನ್ನು ನೆನಪಿಸಿಕೊಂಡು ಅವರಿಗೆ ಒಂದು ಹೃದಯಪೂರ್ವಕ ನಮನವನ್ನು ಸಲ್ಲಿಸೋಣ. ಗುರುವೇ ನಮಃ