ಸೋಮವಾರ, ಏಪ್ರಿಲ್ 25, 2011

ಎಷ್ಟೊಂದು ಜೋಕೆಯಾಗಿರಬೇಕಾಪ್ಪಾ..?



ನಮಗೆ ಹಲವು ಬಾರಿ ಹಲವು ವಿಷಯಗಳ ಬಗ್ಗೆ ಹಲವು ರೀತಿಯ ಯೋಚನೆ, ಚಿಂತನೆ, ರೋಷ, ಸಿಟ್ಟು,ಹೆಮ್ಮೆ, ಅನಂದದ ಭಾವನೆಗಳು ಮನದಲ್ಲಿ ಮೂಡುತ್ತವೆ.

ಅದರೂ ಖುಷಿಪಡುವ ವಿಷಯಗಳನ್ನು ಸುಲಭವಾಗಿ ಹತ್ತು ಹಲವರ ಮುಂದೆ ಹೇಳಿಕೊಂಡು ಅವರೊಡನೆ ಸೇರಿ ಆನಂದಪಟ್ಟು ಬೀಗುತ್ತೇವೆ. ಅದೇ ಯಾವುದೇ ಸಿಟ್ಟಿನ ವಿಷಯಗಳು, ಅಥವಾ ತಪ್ಪು ಎಂದು ನಮಗೆ ಅನಿಸಿದ ಸಂಗತಿಗಳನ್ನು ನಾವುಗಳು ನಮಗೆ ಅನಿಸಿದ ತಕ್ಷಣ ಅದನ್ನು ವ್ಯಕ್ತಪಡಿಸಲು ತುಂಬ ಕಸಿವಿಸಿಪಡುತ್ತೇವೆ.

ಸಿಟ್ಟಿನ ವಿಷಯವನ್ನೇ ತೆಗೆದುಕೊಳ್ಳಿ ನಮಗಿಂತ ಕಿರಿಯರಿಂದ ಏನಾದರೂ ಒಂದು ಚಿಕ್ಕ ವಿಷಯದಲ್ಲಿ ನಮಗೆ ರೇಗು ಬಂದರೂ ಆರಾಮವಾಗಿ ಅದನ್ನು ಯಾವುದೇ ಅಡೆತಡೆಯಿಲ್ಲದೆ ಅದನ್ನು ವ್ಯಕ್ತಪಡಿಸುತ್ತೇವೆ. ಕೂಗುವ ಮೂಲಕವೊ, ಅವರನ್ನು ಹೊಡೆಯುವುದರ ಮೊಲಕವೊ ತಕ್ಷಣ ನಮ್ಮ ಅಭಿಪ್ರಾಯವನ್ನು ನಿರಾತಂಕವಾಗಿ ಹರಿಸಿಬಿಟ್ಟಿರುತ್ತೇವೆ.

ಅದೇ ಯಾವುದೇ ಒಂದು ವಿಷಯ, ಕೆಲಸ, ಮಾತು, ಅನಿಸಿಕೆ ಹಿರಿಯರಿಂದ ನಮಗಿಂತ ಸ್ವಲ್ಪ ದೊಡ್ಡವರಿಂದ, ನಮಗೆ ಪರಿಚಯವಿಲ್ಲದವರಿಂದ ಬಂದಾಗ ಅದು ನಮ್ಮ ಮನಸ್ಸಿಗೆ ಅನಿಸುತ್ತಿರುತ್ತದೆ. ಅದು ತಪ್ಪು. ಮತ್ತು ನಮ್ಮ ಮನಸ್ಸಿನಲ್ಲಿ ಸಿಟ್ಟು ಬರುತ್ತದೆ. ಅದರ ಬಗ್ಗೆ ಏನಾದರೂ ಹೇಳಬೇಕು. ಅದು ಸರಿಯಲ್ಲ. ನೀವು ಈ ರೀತಿ ಮಾತನ್ನಾಡುವುದು ತಪ್ಪು ಅಂಥ ಹೇಳಬೇಕು ಎಂದು ಅನಿಸುತ್ತಿರುತ್ತದೆ. ಆದರೂ ನಾವುಗಳು ಆ ಸಮಯದಲ್ಲಿ ನಮಗೆ ಗೊತ್ತಿಲ್ಲದ ರೀತಿಯಲ್ಲಿ ನಮ್ಮ ನಮ್ಮಲ್ಲಿಯೇ ಅದರ ವೇಗವನ್ನು ಅನುಭವಿಸಿ ತಣ್ಣಗಾಗಿ ಸೈರುಸುತ್ತಿರುತ್ತೇವೆ ಯಾಕೆ? ಅದೇ ನಮಗೆ ಗೊತ್ತಿರುವವರಾದರೇ ನಮಗಿಂತ ಚಿಕ್ಕವರಾದರೇ ಯಾವುದೇ ಮೂಲಾಜು ಇಲ್ಲದೇ ಒಂದು ಭಾರಿಸಿಬಿಟ್ಟಿರುತ್ತೇವೆ.

ಹೌದು! ಈ ರೀತಿಯ ನಮ್ಮ ಮನೋವ್ಯಾಪಾರವನ್ನು ವ್ಯಕ್ತಿ ವ್ಯಕ್ತಿಗಳಿಗೆ ಅನ್ವಹಿಸಿಕೊಂಡು ಯೋಚಿಸಲಾರಂಭಿಸುತ್ತೇವೆ. ನಮಗಿಂತ ಹಿರಿಯರು, ಗುರುಗಳು, ಅಧಿಕಾರಿಗಳು, ಸಂಬಂಧಿಕರುಗಳು ಯಾರಾದರೂ. ಅವರುಗಳು ತಮಗೆ ಅರಿವಿಲ್ಲದೆ ಮನುಷ್ಯ ಸಹಜವಾದ ತಪ್ಪುಗಳನ್ನು ತಮ್ಮ ಕಾರ್ಯದಲ್ಲಿ, ಮಾತಿನಲ್ಲಿ, ಯೋಚನೆಯಲ್ಲಿ ಅಡಿ ಇಟ್ಟರೆ ನಾವುಗಳು ಏನೊಂದು ಹೇಳಲಾರದವರಾಗಿರುತ್ತೇವೆ.

ಯಾಕೆಂದರೇ ಹತ್ತು ಹಲವಾರು ವಿಷಯಗಳ ಸರಮಾಲೆ ನಮ್ಮ ಮುಂದೆ ಬಂದು ನಿಂತಿರುತ್ತದೆ. ಅಲ್ಲಿ ನಮ್ಮ ಜವಾಬ್ದಾರಿಯ ಕೆಲಸವನ್ನು ಬಿಟ್ಟು ನಾವುಗಳು ಆ ಜಾಗವನ್ನು ಖಾಲಿ ಮಾಡಲು ನಿರ್ಧರಿಸುತ್ತೇವೆ. ಅಥಾವ ಮನಸ್ಸಿಲ್ಲದೇ ಅವರು ಮಾಡುವುದನ್ನು ನೋಡುತ್ತಾ ನಿಲ್ಲುತ್ತೇವೆ. ಯಾಕೆಂದರೇ ನಾವುಗಳು ನಮ್ಮ ಹಿರಿಯರ ಬಗ್ಗೆ ಯಾವಾಗಲೂ ಅಂಥ ಒಂದು ಗೌರವಾಯುತವಾದ ಸೌಧವನ್ನು ಕಟ್ಟಿ ಅವರುಗಳನ್ನು ಅಲ್ಲಿ ಪೂಜಿಸುತ್ತಿರುತ್ತೇವೆ. ಅವರುಗಳು ಎಂದು ತಪ್ಪು ಮಾಡಲಾರರು ಎಂಬ ಒಂದು ಆಸೆಯನ್ನು ಇಟ್ಟುಕೊಂಡು ನಮ್ಮ ಚಿಕ್ಕ ಚಿಕ್ಕ ಆದರ್ಶಗಳಿಗೆ ಅವರುಗಳನ್ನು ಗುರುತಿಸಿಕೊಂಡಿರುತ್ತೇವೆ.

ಆದರೇ ಯಾರೊಬ್ಬರು ಈ ಜಗತ್ತಿನಲ್ಲಿ ಪರಿಪೂರ್ಣರಲ್ಲ ಅಲ್ಲವಾ! ಯಾರಿಗೇ ಆದರೂ ಒಂದಲ್ಲ ಒಂದು ದೌರ್ಬಲ್ಯ ಇದ್ದೇ ಇರುತ್ತವೆ. ಅವುಗಳನ್ನು ನಾವುಗಳು ನಮ್ಮ ಕಣ್ಣಿಂದ ಕಂಡಾಗ ತುಂಬ ಬೇಜಾರಾಗುವುದು, ವ್ಯಥೆಯನ್ನು ಪಡುವ ಹಿಂಸೆ ಯಾರಿಗೂ ಬೇಡ ಅನಿಸುತ್ತದೆ.

ಆದ್ದರಿಂದ ಹಿರಿಯರು ಎಂಬ ಸ್ಥಾನವನ್ನು ಪಡೆದಂತಹ ಎಲ್ಲ ಹಿರಿಯ ಮನೀಯರುಗಳ ಪ್ರತಿ ಹೆಜ್ಜೆ ಆದರ್ಶಪ್ರಾಯವಾಗಿರಬೇಕು. ಅದು ನಮ್ಮ ನಮ್ಮ ಮನೆಗಳಿಂದ ಪ್ರಾರಂಭಗೊಂಡು, ನಮ್ಮ ಶಾಲೆ, ಕಾಲೇಜು, ಕೆಲಸ ಮಾಡುವ ನಮ್ಮ ಸಂಸ್ಥೆಗಳು, ನಮ್ಮ ಸರ್ಕಾರ, ಪ್ರತಿನಿಧಿಗಳು, ನಾಯಕರುಗಳು ಇತ್ಯಾದಿ ಪ್ರತಿಯೊಂದು ರಂಗದಲ್ಲೂ ನಿತ್ಯ ಎಚ್ಚರಿಕೆಯಿಂದ ಜಾರಿಯಲ್ಲಿರಬೇಕು.

ಇಂದು ನಾವುಗಳು ತುಳಿಯುವ ದಾರಿಯೇ ಮುಂದೆ ಬರುವ ನಮ್ಮ ಕಿರಿಯರಿಗೆ ರಹದಾರಿ. ಅವರುಗಳು ನಮ್ಮ ಪ್ರತಿ ಹೆಜ್ಜೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಅವರುಗಳೇ ನಮಗೆ ಇದು ತಪ್ಪು, ಇದು ಸರಿ ಎಂಬ ನುಡಿಗಳನ್ನು ನಾವುಗಳು ನಮ್ಮ ಕಿವಿ ತುಂಬಿಕೊಳ್ಳುವ ಕಾಲ ಹಿರಿಯರಾದ ನಮ್ಮ ನಿಮ್ಮೆಲ್ಲರದಾಗಬಾರದು ಅಲ್ಲವಾ?

ಇಂದು ಮಾತು ಮುತ್ತಾಗಿದೆ. ನಮ್ಮ ಇಂದಿನ ಈ ಕಂಪ್ಯೂಟರ್ ಯುಗದಲ್ಲಿ ಹತ್ತು ಹಲವಾರು ಸಾಮಾಜಿಕ ವೆಬ್ ಸೈಟ್ ಗಳಿಂದ ನಮ್ಮ ನಿತ್ಯ ಮಾತಿಗಿಂತ ನಮ್ಮ ಮೆಸೇಜ್ ಬರೆಯುವುದು, ಪ್ರತಿಯೊಂದು ನೋಟಕ್ಕೂ ಒಂದು ಅಪಡೇಟ್ ಮಾಡುವುದು.

ಅಲ್ಲೂ ಸಹ ನಾವುಗಳು ಮಾಡುವ ಪ್ರತಿಯೊಂದು ಕಾಮೇಂಟ್ ನ್ನು ಜಗತ್ತಿನ ನಾನಾ ಭಾಗಗಳಿಂದ ಲಕ್ಷ ಲಕ್ಷ ಮಂದಿಗಳು ಓದುತ್ತಿರುತ್ತಾರೆ ಮತ್ತು ನೋಡುತ್ತಿರುತ್ತಾರೆ. ನಾವುಗಳು ಇಲ್ಲಿಯೂ ಸಹ ನಮ್ಮ ಸಂಸ್ಕಾರವನ್ನು ಹೇಗೆ ನಮ್ಮ ಮನೆಯಂಗಳದಲ್ಲಿ ಎಚ್ಚರಿಕೆಯಿಂದ ಜೋಕೆಯಾಗಿ ಪಡಿನುಡಿಗಳನ್ನು ಇಡುತ್ತೇವೋ, ಹೇಗೆ ಹತ್ತು ಮಂದಿ ಇರುವ ಕಡೆ ಹತ್ತು ಭಾರಿ ಯೋಚಿಸಿ ಒಂದು ಮಾತನ್ನಾಡಲೂ ಪ್ರಯತ್ನಿಸುವ ತೋಳಲಾಟವನ್ನು ಪ್ರತಿಯೂಬ್ಬರೂ ಅನುಭವಿಸುತ್ತರೋ.. ಹಾಗೆಯೇ ಈ ವೆಬ್ ಸೈಟಗಳಲ್ಲಿ ಟೈಪಿಸುವ ಮುನ್ನ ಯೋಚಿಸಬೇಕು. ಸುಖಾ ಸುಮ್ಮನೇ ಬೇಕಾಬಿಟ್ಟಿಯಾಗಿ ಯಾರ ಯಾರ ಬಗ್ಗೆ ಮನಸ್ಸಿಗೆ ಬಂದಂತೆ ಬರೆಯಬಾರದು. ಇದನ್ನು ನಾನೊಬ್ಬನೇ/ಳೇ ಓದುತ್ತಿಲ್ಲ ಎಂಬ ಪ್ರಙ್ಞೆಯನ್ನು ಪ್ರಙ್ಞವಂತ ಅಕ್ಷರಸ್ಥ ಸಮಾಜ ಅರಿತಿರಬೇಕು.

ಇಂದು ನಾವುಗಳು ಬಹು ವೇಗವಾದ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ದೇಶದ ಯಾವುದೇ ಮೂಲೆಯಲ್ಲಿ ಜರುಗಿದ ಅನಿಷ್ಟಗಳು ಸಹ ನಮ್ಮ ಮನವನ್ನು ಕೆರಳಿಸುತ್ತೇವೆ ಮತ್ತು ಅದಕ್ಕೆ ನಾವುಗಳು ಪ್ರತಿಕ್ರಿಯಿಸುತ್ತೇವೆ. ನಮ್ಮ ನೋಟ ಇಂದು ಕೇವಲ ನಮ್ಮ ಬಗ್ಗೆ ಮಾತ್ರವಿಲ್ಲದೇ ಇಡೀ ಒಂದು ಸುಂದರ ಸಮಾಜವನ್ನು ನಿರ್ಮಾಣದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳುವ ಒಂದು ಧಾವಂತ ಎಲ್ಲ ಯುವ ತರುಣ - ತರುಣಿಯರಲ್ಲಿ ಕಾಣಬರುತ್ತಿದೆ. ಇದು ಒಂದು ಆರೋಗ್ಯಕರ ಬೆಳವಣಿಗೆ. ಮತ್ತು ಇದು ಮಚ್ಚುಗೆಯ ಕಿರಣವೇ ಸರಿ!

ಹಾಗೆಯೇ ನಮ್ಮ ಸಂಸ್ಕೃತಿಯ ಸಿರಿತನವನ್ನು ನಾವುಗಳು ಅದನ್ನು ನಿತ್ಯ ನೂತನವಾಗಿ ಇಟ್ಟಾಗ ಮಾತ್ರ. ನೀವುಗಳೇ ನೋಡಿ ನಾವು ಯಾವುದನ್ನು ನಮಗೆ ಬೇಕಿಲ್ಲ ಎಂದು ಮೂಲೆಗೆ ದೂಡಿತ್ತಿದ್ದೇವೋ ಅವುಗಳೇ ಪರದೇಶದಲ್ಲಿ ಅದೇ ಹೊನ್ನಿನ ಬೆಲೆಯನ್ನು ಪಡೆದಿವೆ.

ಈ ರೀತಿಯಲ್ಲಿ ಇರಬೇಕಾದಾಗ ನಾವುಗಳು ಯಾಕೇ ಪರಕೀಯ ಸಂಸ್ಕೃತಿಯ ದಾಸರಾಗಬೇಕು. ಇಲ್ಲಿ ಇರುವ ಒಂದು ಚೂಕ್ಕ ಆದರ್ಶ ಜೀವನವನ್ನು ಸರಿಯಾದ ದಾರಿಯಲ್ಲಿ ಯಾರಾದರೂಬ್ಬರೂ ನಡೆಸಿದ್ದೇ ಆದರೆ ತಾನು ಮತ್ತು ತನ್ನ ಸುತ್ತಲಿನ ನೆರೆಹೊರೆಯವರ ಜೀವನ ಆನಂದಮಯವಾಗಿರುವುದರಲ್ಲಿ ಸಂಶಯವಿಲ್ಲ ಅಲ್ಲವಾ?

ಯಾಕೆಂದರೇ ನಾವುಗಳು ನಮ್ಮ ಭವ್ಯ ಸನಾತನ ಆದರ್ಶದ ಪಲವತ್ತತೆಯಲ್ಲಿ ಹುಟ್ಟಿರುವ ಮಹಾನ್ ಮಣಿಗಳು. ಇದು ಬೆಳೆಯುತ್ತಿರುವುದು ಹತ್ತು ಹಲವು ವಿಚಾರ ಎಂಬ ಜಲ ಸಂಗಮಗಳ ಆಸರೆಯಲ್ಲಿ. ಅವುಗಳ ಪರಿಣಾಮವೇ ನಮ್ಮ ಯೋಚನೆಯ ದಾಟಿಯನ್ನು ನಾವುಗಳು ಒಂದು ಕ್ಷಣ ಎಲ್ಲಾದರೂ ಒಮ್ಮೆ ಎಡವಿದರೂ ನಮ್ಮ ಅರಿವೇ ನಮಗೆ ಗುರುವಾಗಿ ಯಾವುದು ಸರಿ ಎಂಬುದನ್ನು ನಮಗರಿವಿಲ್ಲದ ರೀತಿಯಲ್ಲಿಯೇ ತಿಳಿಸಿರುತ್ತದೆ.

ಯೋಚಿಸಿ ಪ್ರತಿಯೊಬ್ಬರಿಗೂ ಏನಾದರೂ ತಪ್ಪು ಮಾಡಿದಾಗ ಯಾಕೇ ಬೆಸರವಾಗುತ್ತದೆ? ಯಾಕೇ ನಾವುಗಳೇ ನಮ್ಮ ನಮ್ಮಲ್ಲಿ ತುಂಬ ಚಿಕ್ಕವಾರದೇವು ಅನಿಸುತ್ತಿರುತ್ತದೆ. ಯಾಕೆಂದರೇ ನಾವುಗಳು ಇರುವ ನಮ್ಮ ಈ ಭವ್ಯ ವಾತಾವರಣವೇ ಅಂಥ ಒಂದು ಭಾವನೆಯ ಬೆಳಕಿಗೆ ಕಾರಣ. ಅದನ್ನು ನಾವುಗಳು ಎಲ್ಲಿಯೇ ಇದ್ದರೂ ಮರೆಯಲಾಗದು.

ಆದರೂ ನಾವುಗಳು ನಮ್ಮ ಮುಂದೆ ಏನಾದರೂ ಒಂದು ಘಟನೆ ,ಮಾತು, ಕೆಲಸ, ನಡೆ, ಯೋಚನೆ ಸುತ್ತಲಿನವರಿಗೆ ಖೇದ/ಕಸಿವಿಸಿಯನ್ನುಂಟು ಮಾಡುವ ರೀತಿಯಲ್ಲಿ ಮಾಡುವ ರೀತಿಯಲ್ಲಿ ಇದ್ದರೇ ಮುಲಾಜೇ ಇಲ್ಲದ ರೀತಿಯಲ್ಲಿ ಖಂಡಿಸುವುದು ಪ್ರತಿಯೊಬ್ಬರಿಗೂ ಇರುವ ಒಂದು ಹಕ್ಕು.

ನಮ್ಮ ಸಂತೋಷದ ಕ್ಷಣ ನಮ್ಮ ಅಕ್ಕಪಕ್ಕದವರಿಗೆ ಅನಾನೂಕೂಲವಾಗುವ ರೀತಿಯಲ್ಲಿ, ತೊಂದರೆಯನ್ನು ಒದಗಿಸಿದರೇ ಆ ಒಂದು ಸಂತೋಷ ನಿಜವಾದ ಸಂತೋಷವಂತೂ ಎಂದಿಗೂ ಅಲ್ಲ.

ಇದನ್ನು ಪ್ರತಿಯೊಬ್ಬರೂ ಸಾರ್ವಜನಿಕವಾಗಿ ಯಾವಾಗ ನಾವುಗಳು ಇರುತ್ತೇವೋ ಅಂಥ ಸಮಯದಲಿ ಅರಿತು ನಡೆಯಬೇಕು. ಅಲ್ಲಿ ನಾವುಗಳು ಮಾಡುವ/ಮಾತನಾಡುವ/ವರ್ತಿಸುವ ಬಗೆಗೆ ಯಾರು ಏಕ್ ದಮ್ ಮಾತನಾಡುವುದಿಲ್ಲ ಪ್ರತಿಕ್ರಿಯೆ ಕೊಡುತ್ತಿಲ್ಲ ಎಂದರೇ ಅವರುಗಳು ನಾವು ಮಾಡುವುದನ್ನು ಒಪ್ಪಿಕೊಂಡಿದ್ದಾರೆ ಎಂಬ ಅರ್ಥವಂತೂ ಎಂದಿಗೂ ಅಲ್ಲ.

ಅವರಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಕಸಿವಿಸಿಯಲ್ಲಿಯೇ ನಿಮಗೆ ನಿಶಬ್ಧವಾಗಿ ಹಿಡಿ ಶಾಪವನ್ನು ಹಾಕಿರುತ್ತಾರೆ ಎಂಬುದನ್ನು ಮನದಟ್ಟು ಮಾಡಿಕೊಂಡಿರಬೇಕು.

ಅಲ್ಲವಾ ಎಷ್ಟೊಂದು ಜೋಕೆಯಾಗಿರಬೇಕಾಪ್ಪಾ..?

ಗುರುವಾರ, ಏಪ್ರಿಲ್ 21, 2011

ಜಾಡು ಯಾವುದಾದರೇನೂ..

ಜಾಡು ಹಿಡಿದು ನಡೆಯುವುದು ನಮ್ಮ ನಿಮ್ಮೆಲ್ಲರ ಅಭ್ಯಾಸ. ಎಲ್ಲರೂ ನಡೆದಾಡಿದ ಬಟ ಬಯಲಾದ ದಾರಿಯಲ್ಲಿ ಆರಾಮವಾಗಿ ನಡೆಯುವುದು ಮನಸ್ಸಿಗೆ ಹಗುರ ಮತ್ತು ತಲುಪಬೇಕಾದ ಗುರಿಯನ್ನು ತ್ರಾಸಿಲ್ಲದೆ ನಿಸ್ಸಂಶಯವಾಗಿ ತಲುಪಬಹುದು ಎಂಬ ಭಾವನೆಯಿರಬೇಕು... ಈ ರೀತಿಯ ಜಾಡಿನಲ್ಲಿ ಯೋಚಿಸದರೇ ನಮ್ಮ ಮನಸ್ಸು ಮತ್ತು ನಾವುಗಳು ಕೊಂಚ ಸೋಮಾರಿತನವನ್ನು ತೋರಿಸುತ್ತೀರುವುತ್ತೇವೋ ಅಥವಾ ವಿವಿಧ ರೀತಿಯ ಪ್ರಾಮುಖ್ಯತೆಗಳಿಂದ ಹೊಸ ಜಾಡಿಗೆ ಕಾಲು ಇಡುವುದಿಲ್ಲವೇನೋ.

ಆದರೆ ಹಳೆ ಜಾಡು - ದಾರಿಯಾದರೂ ಯಾರಿಂದಲೂ ಮೊದಲು ಶುರುವಾಗಿರಬೇಕಲ್ಲವಾ? ಆ ಆನ್ವೇಷಕಾರ ಯಾರು? ಅವನು ಸಹ ನಮ್ಮ ನಿಮ್ಮಂತೆಯೆ ಇರುವವನು ಅಲ್ಲವಾ? ಆದರೂ ಅವನಿಗೂ ಅದರ ಮಹತ್ವವಿದ್ದು ತಾನು ಗುರಿ ಮುಟ್ಟುವ ಕಾಣಬೇಕಾದ ಜಾಗವನ್ನು ಕಾಣಲು ಪ್ರತಿಸಲು ಆ ಹಾದಿ ಹಿಡಿದಿರುವನು ಅಥವಾ ಹಾಗೆಯೇ ಸುಮ್ಮನೆ ಎಂಬಂತೆ ಹೋಗಿ ಅದು ರಹದಾರಿ ಮಾಡಿಕೊಟ್ಟಿತು?

ಇದಕ್ಕೆ ಹಾದಿ ಅಂತ್ಯ ಇಲ್ಲ ಬಿಡಿ ಮಹಾರಾಯರೇ ಎನ್ನಬಹುದು.

ಮೇಲಿನ ಆ ಉದಾಹರಣೆಗಳ ದ್ವಂದ್ವವೇ ನಮ್ಮ ದಿನ ನಿತ್ಯದಲ್ಲಿ ಹಲವು ಹೊಸ ಹೊಸ ವಿಚಾರ, ಯೋಜನೆ, ಯೋಚನೆಗಳು, ಕಾರ್ಯ ಕೆಲಸಗಳಿಗೆ ಅನ್ವಯವಾಗುತ್ತದೆ.

ನಾವುಗಳು ಸರಾ ಸರಿಯಾಗಿ ಹೀಗಾಗಲೇ ಬೇರೆಯವರು ಪ್ರತ್ನಿಸಿದ, ತಿಳಿದ, ನೋಡಿದ, ಕೇಳಿದ, ಓದಿದ ಮಾಡಿದವುಗಳನ್ನೇ ಪುನಃ ಪುನಃ ಎ - ಜ್ ಡ್ ಪುನವರ್ತಿತವಾಗಿ ಮಾಡುತ್ತೇವೆ. ಇದು ಯಾಕೆ?

ನಾವುಗಳು ಹೇಳಬಹುದು. ಮೊಟ್ಟ ಮೊದಲನೇಯ ಉತ್ತರ "ಸಮಯದ ಅಭಾವ ಸ್ವಾಮಿ!" ಎಂದು. ಹಾಗೆಯೇ ರೀಸ್ಕ್ ಪ್ಯಾಕ್ಟರ್ ಕಡಿಮೆ ಸಮಯದಲ್ಲಿ ಅತ್ಯಂತ ತ್ವರಿತವಾಗಿ ಯಾವುದನ್ನಾದರೂ ಪಡೆಯಬೇಕು.. ಅವನು ಏನೂ ಪಡೆದನೋ, ಗಳಿಸದನೋ ಅದನ್ನೇ ನಾನು ಗಳಿಸಬೇಕು ಎಂಬುದು.

ಯೋಚಿಸಿ ನೋಡಿದರೆ ಈ ಪ್ರಪಂಚದಲ್ಲಿರುವ ಸರಾಸರಿ ಜನಗಳೆಲ್ಲಾ ಒಬ್ಬರೂ ಮಾಡಿದ್ದನ್ನೇ ಪುನಃ ಪುನಃ ಮಾಡುತ್ತಿರುತ್ತಾರೆ. ಅಂದ ತಕ್ಷಣ ನಾವುಗಳೆಲ್ಲಾ ಬೇಜಾರಾಗುವ ಅವಶ್ಯಕತೆಯಿಲ್ಲ. ಅದೇ ನಾರ್ಮಲ್ ಗುಣ. ನಾವುಗಳು ನಮ್ಮ ಬಾಲ್ಯವಸ್ಥೆಯಿಂದ ಅದನ್ನು ನಮ್ಮ ತಾಯಿ-ತಂದೆಯವರಿಂದ ನೋಡಿ, ಕೇಳಿ ಅನುಕರಿಸಿ ಅದೇ ರೀತಿಯಲ್ಲಿ ವರ್ತಿಸಲು ಪ್ರಾರಂಭಿಸುತ್ತೇವೆ.

ಆದರೇ, ಸೃಜನಾತ್ಮಕ ಎಂದು ನಾವು ಯಾವುದನ್ನು ಕರೆಯುತ್ತೇವೋ ಅದು ಈಗ ಇರುವುದೆಲ್ಲದಕ್ಕಿಂತ ವಿಭಿನ್ನವಾಗಿರುವ ಹೊಸತನ ಹೊಂದಿರುವುದನ್ನು ನಾವುಗಳು ಗುರುತಿಸಬಹುದು. ಅದು ಒಂದು ವಿಶಿಷ್ಟವಾಗಿರುವುದು. ಹೊಸತನವನ್ನು ಹುಡುಕುವ ಮನಸ್ಸು ಶ್ರೇಷ್ಠವಾಗಿರುವುದು. ಅವರೇ ನಮ್ಮ ನಿಮ್ಮ ಸುತ್ತಲಿನ ಜನರಿಗಿಂತ ಭಿನ್ನ ಸಾಧಕರುಗಳು ಮತ್ತು ಅನ್ವೇಷಕರುಗಳು ಎಂದು ಕರೆಯಬಹುದು.

ಯಾವುದೇ ವಿಚಾರ, ವಿಷಯ, ಕಾರ್ಯ ಅದು ಹೊಸತನದಿಂದ ಕೊಡಿದ್ದು, ಅದರಿಂದ ಜನರಿಗೆ ಉಪಯೋಗ, ಖುಷಿ, ತಿಳುವಳಿಕೆ, ಹೀಗೆ ಏನಾದರೂ ಪ್ರಯೋಜನಕಾರಿಯಾಗುವುದು.

ಹಾಗೆಯೇ ಈ ರೀತಿಯ ಹೊಸ ವಿಚಾರ, ವಿಷಯ, ಕಾರ್ಯಗಳ ಜನಕರು ತಾವುಗಳು ದಿನ ನಿತ್ಯ ಕಾಣುವ, ನೋಡುವ, ತಿಳಿದಿರುವುಗಳಿಂದ ಬೇಸತ್ತು, ಸಮಸ್ಯೆಗಳಿಂದ ಮುಕ್ತಿ ಹೊಂದಲು ಹೊಸ ದಾರಿ ಮತ್ತು ಹೊಸ ಕಿರಣವನ್ನು ಹುಡುಕುತ್ತಾ ಅಥವಾ ಇರುವ ಹಳೆತನಗಳಿಂದ ಪ್ರೇರಣೆಗೊಂಡು ತಾನು ಯಾಕೆ ಹೀಗೆ ನಿರೂಪಿಸಬಾರದು ಎಂದು ಚಿಂತಿಸಿ ಪ್ರಸ್ತುತಪಡಿಸುತ್ತಾರೆ. ಹೀಗೆ ಮೇಲಿನ ಎರಡು ಮುಖ್ಯ ಉತ್ತೇಜನಗಳು ಯಾರಿಗಾದರೂ ಹೊಸ ದಾರಿಯನ್ನು ಹುಡುಕಲು ಪ್ರೇರಕವಾಗಿರಲೇಬೇಕು.

ಹೌದು! ಮನುಷ್ಯ ತನ್ನ ಪ್ರಾರಂಭದ ದಿನದಿಂದ ಇಂದಿನ ದಿನಗಳವರೆಗೆ ತನ್ನ ಜೀವನ ಪ್ರಯಾಣದಲ್ಲಾದ ವಿವಿಧ ಕಾಲಘಟ್ಟದಲ್ಲಿ ಮಾರ್ಪಾಡುಗಳೇ ಇದಕ್ಕೆ ಸಾಕ್ಷಿ.

ಹೀಗೆ ಯೋಚಿಸಿದ, ಮಾಡಿದ ಸೃಜನಾತ್ಮಕತೆಯನ್ನು ಪ್ರಚಾರಪಡಿಸಬೇಕು ಮತ್ತು ಅದನ್ನು ಪರಿಚಯಿಸುವವರು ಬೇಕು. ಆಗಲೇ ಅದು ಬೇರೆಯವರಿಗೂ ತಿಳಿದು ಸಮಸ್ತರಿಗೂ ಪ್ರಸರಿಸುವುದು. ಅದು ಹಲವು ರೀತಿಯಲ್ಲಿ ಬೆಳೆಯುತ್ತದೆ. ಮತ್ತು ತಲೆಮಾರುಗಳವರೆಗೆ ನಡೆಯುತ್ತದೆ.

ನಮ್ಮ ಸುತ್ತಲಿರುವ ವಸ್ತು, ವ್ಯಕ್ತಿ, ವಿಚಾರಗಳು, ಹೊಸ ತಾಣಗಳನ್ನು ಗುರುತಿಸುವ ಕಣ್ಣು ಬೇಕು. ಕೇವಲ ನಮ್ಮ ಹಿರಿಯರು ಹೇಳಿದ ಅವರು ಹೋಗಿರುವ ತಿಳಿದಿರುವ ಜಾಡಿನಲ್ಲಿಯೇ ಹೋಗುತ್ತಾ ಹೋಗುತ್ತಾ ಜೆರಾಕ್ಸ್ ಆಗಾದೇ ನಾವುಗಳು ಅವರು ಹೇಳಿದ ಮೌಲ್ಯಯುತ ತಿಳುವಳಿಕೆಯ ಹಾದಿಯಲ್ಲಿ ಹೊಸತನವನ್ನು, ಹೊಸ ಹೊಸ ಕನಸುಗಳನ್ನು, ವಿಚಾರಗಳನ್ನು, ವ್ಯಕ್ತಿಗಳನ್ನು ನಮ್ಮ ಪೀಳಿಗೆಗೆ ತಿಳಿಯಪಡಿಸಬೇಕು.

ಆಗಲೇ ಈ ಸೃಜನಾತ್ಮಕತೆಯೆನ್ನುವುದು ಚಲನೆಯಲ್ಲಿದ್ದು ಮತ್ತು ಅಭಿವೃದ್ಧಿ ಹೊಂದುತ್ತದೆ ಎಂಬುದು ಗೊತ್ತಾಗುತ್ತದೆ. ಹಲವಾರು ಅಂಶಗಳಲ್ಲಿ ಹೊಸ ಹೊಸ ತಂತ್ರಙ್ಞಾನಗಳ ಕ್ರಾಂತಿಗಳನ್ನು ಕಾಣಬಹುದಾಗಿದೆ.

ಏನೇ ಅದರೂ ಹಳಬರಿಗೆ ಅವರ ಯುಗದ ನೋಟವೇ ಪ್ರೀತಿ. ನಮ್ಮವರಿಗೆ ನಮ್ಮ ಯುಗದ ರೀತಿ ನೀತಿ ಪ್ರೀತಿ. ಈ ರೀತಿಯ ಭಿನ್ನ ಭಿನ್ನ ವಿಚಾರದಲ್ಲೂ ವಿಭಿನ್ನತೆಯನ್ನು ನಾವು ಕಾಣಬಹುದು ಅಲ್ಲವಾ?

ಗುರುವಾರ, ಏಪ್ರಿಲ್ 14, 2011

ಈ ಪ್ರೇಮ ಸಂಭಾಷಣೆ

ಇವತ್ತಂತೋ ತುಂಬ ಸಂತೋಷದಿಂದ ಇದ್ದೇನೆ. ಒಂದು ವರ್ಷದ ಆ ಒಂದು ಕಾತುರ. ಹಂಬಲದ ಬಯಕೆಯ ಹಿಡೇರಿಕೆಯ ದಿನ ಇದಾಗಿದೆ.

ನಿನ್ನನ್ನು ಕೇವಲ ಆ ಒಂದು ನಿನ್ನ ಹಳೆಯ ಪೋಟೊವನ್ನು ನೋಡುತ್ತಾ ನೋಡುತ್ತಾ ನಿನ್ನ ಮೇಲಿನ ನನ್ನ ಆ ಕನಸಿನ ಚಿತ್ತಾರಕ್ಕೆ ಒಂದು ಪೂರ್ಣ ವಿರಾಮವನ್ನು ಕೊಡುವ ಘಳಿಗೆ ಇಂದು ಕೊಡಿ ಬರುತ್ತಿದೆ.

ನಿನಗೊಂತೂ ಒಂದು ಓದು ಸಾಧನೆ ಎಂಬುದು ಇದೆ. ಅದರಲ್ಲಿ ನೀ ನನ್ನನ್ನು ಕೆಲವು ಸಮಯ ಮರೆಯಬಹುದು. ಆದರೆ ನನಗೆ ಎಂಟು ಗಂಟೆಯ ಕೆಲಸದ ಸಮಯದಲ್ಲೂ ಸಹ ನಿನ್ನ ನೆನಪು. ನಿನ್ನದೇ ದ್ಯಾನ. ಈ ಪ್ರೀತಿ ಎಂದರೇ ಹೀಗೆನಾ? ಎಂದು ನನ್ನನ್ನು ನಾನೇ ಹಲವು ಬಾರಿ ಕೇಳಿಕೊಂಡಿದ್ದೇನೆ.

ಇಂದಿನ ಈ ಮುಂದುವರಿದ ವೇಗದ ಮೊಬೈಲ್ ಪ್ರಪಂಚದಲ್ಲೂ ನೀನನ್ನು ದಿನಕ್ಕೆ ನೂರು ಬಾರಿ ಕಾಲು ಮಾಡಿ ನಿನ್ನನ್ನೊಡನೆ ಮಾತನಾಡಬಹುದು. ಆದರೆ ನಾನು ಅದೇ ಹಳೆಯ ನಮ್ಮ ಕನ್ನಡದ ಕಪ್ಪು ಬಿಳುಪಿನ ಚಿತ್ರದಲ್ಲಿ ಪ್ರೇಮಿ ತನ್ನ ಪ್ರೇಯಸಿಗೆ ಪತ್ರವನ್ನು ಬರೆಯುವ ರೀತಿಯಲ್ಲಿ ವಾರಕ್ಕೆ ಒಂದು ಪತ್ರ ಬರೆದು ಬರೆದು ನನ್ನಲ್ಲಿಯೇ ಇಟ್ಟುಕೊಂಡಿದ್ದೇನೆ. ಅದು ನಿನಗೆ ತಲುಪಿಸಲಾರದೆ. ಯಾಕೆಂದರೇ ನನಗೆ ಭಯ ಎಲ್ಲಿ ನಿನ್ನ ಓದಿಗೆ ನನ್ನ ಪ್ರೇಮದ ಕನವರಿಕೆ ಅಡ್ಡಿ ಮಾಡುವುದೋ ಎಂದು.

ಯಾಕೆ ಹೀಗೆ ಉತ್ತರವೇ ಇಲ್ಲ ನನ್ನಲ್ಲಿ!

ಆ ಎಲ್ಲ ೫೨ ಪತ್ರಗಳನ್ನು ನಿನಗೆ ಇಂದು ಕೊಡಬೇಕು.. ನಿನ್ನನ್ನು ಅದರಲ್ಲಿ ಹೇಗೆ ನಾನು ದ್ಯಾನಿಸಿದ್ದೇನೆ. ನನ್ನ ಕನಸು ನಿನ್ನ ಜೊತೆಯಲ್ಲಿ ನನ್ನ ಜೀವನ ನಿನ್ನೊಡನೆ ಹೀಗೆ ಹೀಗೆ ಹಂಬಲದ ಬಣ್ಣ ಬಣ್ಣದ ಮಣಿಯನ್ನು ಪೊಣಿಸಿದ್ದೇನೆ. ಅದನ್ನು ಓದಿ ನೀನು ನನ್ನ ಬಗ್ಗೆ ಒಂದು ತುಂಟ ಕಿರು ನಗೆಯನ್ನು ಬಿರುವುದರಲ್ಲಿ ಸಂಶಯವಿಲ್ಲ. "ಹೀಗೆಲ್ಲಾ ಕಲ್ಪನೆಯನ್ನು ಮಾಡುವ ತಲೆಯನ್ನಾ ನಾನು ಪ್ರೀತಿಸಿದ್ದು?" ಎಂದು ನೀ ಆಶ್ಚರ್ಯಪಡುವುದರಲ್ಲಿ ನನಗೆ ಯಾವುದೇ ಸಂಶಯವಿಲ್ಲ.

ಗೊತ್ತಾ ನಾಳೆ ನಿನ್ನ ಹುಟ್ಟಿದ ದಿನ. ಕಳೆದ ವರ್ಷ ನಿನ್ನ ಬರ್ತಡೇಯನ್ನು ಸರಿಯಾಗಿಯೇ ಸಲೇಬರೇಟ್ ಮಾಡಕ್ಕೆ ಆಗಲಿಲ್ಲ. ನೀನು ನಿನ್ನ ಪರೀಕ್ಷೆ ಆಗೇ ಹೀಗೆ ಎಂದು ಹೇಳಿ ನನ್ನನ್ನು ಬೇಟಿ ಮಾಡಲು ಅವಕಾಶವನ್ನೇ ಕೊಡಲ್ಲಿಲ್ಲ. ಆದರೇ ಈ ಭಾರಿಯ ನಿನ್ನ ಜನ್ಮ ದಿನಾಚರಣೆಯನ್ನು ನನ್ನ ಕಲ್ಪನೆಯಂತೆ ನಾಳೆ ಒಂದು ದಿನ ನಿನ್ನನ್ನು ಬೆಂಗಳೂರಿನಿಂದ ೧೦೦ ಕಿ.ಮೀ ದೂರವಿರುವ ದಟ್ಟ ಕಾನನದ ಮದ್ಯಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಪುಟ್ಟ ಕೇಕ್ ಇಟ್ಟು ನಿನ್ನ ಕೈಯಿಂದ ಕತ್ತರಿಸಬೇಕು ಎಂದು ಕೊಂಡಿದ್ದೇನೆ. ನನಗೆ ಗೊತ್ತು ಬಂದೇ ಬರುತ್ತೀಯಾ ಅಂತಾ.




ಇಂದು ಈಗ ಬರೆಯುತ್ತಿರುವ ಈ ವರುಷದ ಕೊನೆಯ ಪತ್ರವನ್ನು ಬರೆಯುವ ಈ ಸಮಯದಲ್ಲಿ ಖುಷಿಯೊ ಖುಷಿ.

ನೀನು ಇನ್ನೂ ಇನ್ನೂ ಸುಂದರವಾಗಿ ಕಾಣುತ್ತಿರುವೆಯೋ ಅಥವಾ ಪರೀಕ್ಷೆ, ಓದು, ಕ್ಲಾಸ್ ಎಂಬುದರಲ್ಲಿ ತುಂಬ ಸೂರಗಿ ಹೋಗಿದ್ದಿಯೋ ಮುಖತಃ ನೋಡಿಯೇ ತಿಳಿಯಬೇಕು. ನಾನಾದರೂ ನನ್ನ ಮನಸಿನ ಕನವರಿಕೆಗಳನ್ನು ವಾರಕ್ಕೆ ಒಂದು ಪತ್ರ ಬರೆದು ಬರೆದು ನನ್ನ ಮನಸ್ಸನ್ನು ಹಗುರ ಮಾಡಿಕೊಂಡಿದ್ದೇನೆ. ನೀನೋ ಈ ಬರವಣಿಗೆ ಎಂದರೇ ಮೈಲು ದೂರ. ನಿನಗೂ ನನ್ನನ್ನು ಕಾಣಬೇಕು ಎಂಬ ಕಾತುರತೆ ಎಷ್ಟು ಇದೆ ಎಂಬುದು ನೀ ನಿನ್ನ ಮನೆಗೆ ಹೋಗುವ ಮುನ್ನವೇ ನನ್ನನ್ನು ಬೇಟಿ ಮಾಡುತ್ತೇನೆ ಎಂದಾಗಲೇ ಗೊತ್ತಾಯಿತು.

ನೆನಪಿದೇಯ ನಾನು ನಿನ್ನನ್ನು ಅಂದು ಅದೇ ಕಾಲೇಜಿನಲ್ಲಿ ಮೊದಲ ಸಲ ಪರಿಚಯವಾದಗಿನ ಕ್ಷಣ... ನನಗೊಂತೂ ಅಂದೇ ಅನಿಸಿಬಿಟ್ಟಿತು.. ಯಾವ ಶಿಲ್ಪಿಯ ಕೈಚಳಕ ಈ ಚೆಲುವಿನ ಪುತ್ತಳಿಯ ಚಿತ್ತಾರಕ್ಕೆ ಅನಿಸಿತ್ತು. ನಿನ್ನ ರೂಪಕ್ಕೆ ನಾನು ಸೋತೇ ಅಂದರೇ ಅರ್ಧ ಸತ್ಯವಾಗುತ್ತದೆ. ಅದರೋ ದಿನ ಕಳೆದ ಮೇಲೆ ಸ್ಪಲ್ಪ ಸ್ವಲ್ಪವೇ ನಿನ್ನ ಗುಣಗಳ ಬಗ್ಗೆ ಯಾಕೋ ನೀನೇ ನನಗೆ ಸರಿಯಾದವಳು.. ಪ್ರೀತಿ ಮಾಡಿದರೇ ಇವಳನ್ನೇ ಮಾಡಬೇಕು... ಎಂಬ ನಿರ್ಧಾರಕ್ಕೆ ಬರಲು ಶುರುಮಾಡಿದೆ.



ನಿನ್ನನ್ನು ಕಂಡರೇ ಇಡೀ ಕಾಲೇಜು ಮಂತ್ರ ಮುಗ್ಧ. ಹೀಗೆ ಇರುವಾಗ ಈ ಹುಡುಗಿ ನನ್ನನ್ನು ಏನಕ್ಕಾಗಿ ಪ್ರೀತಿಸುವಳು ಎಂಬ ಸಂಶಯದ ಒಂದು ಎಳೆ ಮನದಲ್ಲಿ ಬಂದಿದ್ದಂತೂ ನಿಜ. ಆದರೋ ಏನೋ ಒಂದು ದೂರದ ಭರವಸೆ ನನ್ನ ಮನದಲ್ಲಿ ಇತ್ತು. ನನಗೊಂತೂ ನಿನ್ನ ಬಗ್ಗೆ ಏನೇಂದರೇ ಏನು ಗೊತ್ತಿರಲಿಲ್ಲ. ಈ ಹುಡುಗಿ ಈಗಾಗಲೇ ಯಾರಿಗಾದರೂ ಮನಸ್ಸನ್ನು ಕೊಟ್ಟಿರಬಹುದಾ.. ಇಲ್ಲವಾ.. ಹೇಗೆ ತಿಳಿಯುವುದು ಎಂಬುದೇ ದೊಡ್ಡ ಪ್ರಶ್ನೆಯಾಗಿತ್ತು. ಆದರೂ ನೀ ಇರುವ ರೀತಿ, ನಿನ್ನ ಮಾತು ಕತೆ, ನಡಾವಳಿಯಿಂದ ನನಗನಿಸಿತು ಸಾಧ್ಯವಿಲ್ಲ! ಅಂತಾ!

ಆದರೋ ನಿನ್ನ ಮನಸ್ಸಿನಲ್ಲಿ ಈ ಲವ್, ಮದುವೆ ಇದರ ಬಗ್ಗೆ ಯಾವ ಕಲ್ಪನೆ ಇದೆಯೋ ಹೇಗೆ ತಿಳಿಯುವುದು.. ಎಂಬುದು ಆ ಒಂದು ಕೊನೆಯ ವರ್ಷದ ನನ್ನ ಮನವನ್ನು ಕಾಡಿದ ಬಹು ದೊಡ್ಡ ಚಿಂತೆ... ಓದು ಮುಕ್ಕಾಲಾಯಿತು... ಇದಕ್ಕೆ ಕಾರಣ ನೀನೆ... ಅದಕ್ಕೆ ನನ್ನ ಸ್ಕೋರ್ ಎಲ್ಲ ಹಿಂದಿನ ವರ್ಷಗಳಿಗಿಂತ ಹಿಂದಕ್ಕೆ ಹೋಯಿತು. ಆದರೋ ಅದು ನಿನಗಾಗಿ ತಾನೇ. ಇರಲಿ ಬಿಡು.

ಹೀಗೆ ಇರುವಾಗಲೇ ತಾನೇ ನೀನೆ ಒಂದು ದಿನ.. ಮುಂದೆ ಏನೋ ಮಾಡುತ್ತೀರಾ.. ಓದು ಮುಗಿಯಿತು.. ಕೆಲಸ.. ಮದುವೆ ಹೀಗೆ ಏನು ಯೋಚನೆ ಎಂದು ಕೇಳಿದಾಗಲೇ ನನಗೆ ಅನಿಸಿದ್ದು.. ಓ ಪರವಾಗಿಲ್ಲಾ ನೀನು ಇಷ್ಟೊಂದು ಯೋಚನೆಯನ್ನು ನನ್ನ ಬಗ್ಗೆ ಯೋಚಿಸಿದ್ದೀಯಾ ಅನಿಸಿತ್ತು. ಮತ್ತು ಅಂದೇ ಅಂದು ಕೊಂಡೇ ನೀನು ಸಹ ನನ್ನ ಬಗ್ಗೆ ಚಿಕ್ಕ ಒಲವನ್ನು ಹೊಂದಿದೀಯ ಎಂದು. ಆದರೇ ಹುಡುಗಿಯರು ಎಲ್ಲಿ ತಮ್ಮ ಮನಸ್ಸಿನ ಈ ಮಾತನ್ನು ಮೊದಲು ಹೇಳುತ್ತಾರೆ?

ಅನಂತರ ನಾನು ನನ್ನ ಹಾಸ್ಟೆಲ್ ಖಾಲಿ ಮಾಡಿಕೊಂಡು ನನ್ನ ಊರಿಗೆ ಬಂದ ಮೇಲೆ ಆ ನನ್ನ ಮೊದಲ ಪ್ರೇಮ ಪತ್ರದಲ್ಲಿ ನನ್ನ ಒಂದು ಕೋರಿಕೆಯನ್ನು ನಿನ್ನ ಮುಂದೆ ಇಟ್ಟಿದ್ದು. ಅದಕ್ಕೆ ನೀನು ಸಮ್ಮತಿಸಿದ್ದು..... ಹೀಗೆ ಹೀಗೆ ನಾಲ್ಕು ವರುಷಗಳು ಅಬ್ಬಾ ಅಬ್ಬಾ.. ನಾಲ್ಕು ದಶಕಗಳೇ ಸರಿ ನನಗೆ.

ನಾವಂತೋ ಬೇರೆ ಪ್ರೇಮಿಗಳ ರೀತಿಯಲ್ಲಿ ಪಾರ್ಕನಲ್ಲಿ ಸುತ್ತಲಿಲ್ಲ. ಹೆಗಲಿಗೆ ಹೆಗಲು ಹಾಕಿಕೊಂಡು ನಡುವನ್ನು ಬಳಸಿ ಸುತ್ತಲಿಲ್ಲ. ಮಾತು ಮಾತು ಬರೀ ಮಾತನ್ನೇ ಆಡಲಿಲ್ಲ. ಜೊತೆಯಲ್ಲಿ ಸಿನಿಮಾ ನೋಡಲಿಲ್ಲ. ಎಸ್. ಎಂ. ಎಸ್ ಚಾಟಿಂಗ್. ಪೋನ್. ಐ ಲವ್ ಯು. ಉಂ ಹೀಗೆ ಯಾವುದೊಂದನ್ನು ಮಾಡಲಿಲ್ಲ. ನನಗೆ ಆಶ್ಚರ್ಯವಾಯಿತು. ಹೀಗೂ ಒಂದು ಪ್ರೀತಿ ಉಂಟಾ? ಅದಕ್ಕೆ ನೀನೇ ಉತ್ತರ!

ಇಲ್ಲಿ ನಮ್ಮ ಮನೆಯಲ್ಲಿ ಆಗಲೇ ಹುಡುಗಿಯನ್ನು ಹುಡುಕಲು ಶುರು ಮಾಡಿಬಿಟ್ಟಿದ್ದರು. ಮೊದಲು ಮದುವೆಯಾಗು... ಆಮೇಲೆ ಕೆಲಸ ಹುಡುಕು.. ಎಂಬ ಮಾತು.. ನಾನು ಮೊದಲು ಕೆಲಸ ಆಮೇಲೆ ನೋಡಿದರಾಯಿತು.. ಕೆಲಸವೋ ಆರೇ ತಿಂಗಳಲ್ಲಿ ಸಿಕ್ಕಿ ಬಿಡುವುದೇ.. ಅನಂತರದ ದಿನಗಳಲ್ಲಿ ನಾನು ಹೇಳಿರುವ ಸುಳ್ಳುಗಳಿಗೆ ಕೊನೆ ಮೊದಲಿಲ್ಲ. ನಿನ್ನ ಓದು ಮುಗಿಯಲು ಇನ್ನೂ ನಾಲ್ಕು ವರ್ಷಗಳು ಬೇಕು. ಅಲ್ಲಿಯವರೆಗೂ ನಾನು ನಮ್ಮ ಮನೆಯವರನ್ನು ತಡೆ ಇಡಿಯಬೇಕು.

ನಾಡಿದ್ದು. ನಿನ್ನ ಹುಟ್ಟು ಹಬ್ಬದ ದಿನದ ನಂತರ ನಿನ್ನನ್ನು ಕರೆದುಕೊಂಡು ಹೋಗಿ ನನ್ನ ಹೆತ್ತವರ ಮುಂದೆ ಇವಳೇ ನಿಮ್ಮ ಸೊಸೆ ಎನ್ನಬೇಕು ಅಂದು ಕೊಂಡಿದ್ದೇನೆ.

ಗೊತ್ತಿಲ್ಲ ಅವರುಗಳು ಹೇಗೆ ಪ್ರತಿಕ್ರಿಯಿಸುವರು. ಆದರೂ ನನಗೆ ನಂಬಿಕೆಯಿದೆ. ಅವರುಗಳು ಇಷ್ಟಪಡುವ ರೀತಿಯಲ್ಲಿಯೇ ನೀನು ಇರುವೆ ಎಂದು.

ನಿನ್ನ ಮನೆಯವರ ಬಗ್ಗೆ ಮೊದಲೇ ನೀನು ಹೇಳಿದ್ದಿಯಲ್ಲಾ.. ಅವರುಗಳ ಅಭ್ಯಂತರ ಏನೂ ಇಲ್ಲ ಎಂದು... ತುಂಬ ಸಂತೋಷವಾಗಿತ್ತು. ಅಂದು ನೀನು ನಿನ್ನ ಹೆತ್ತವರ ಬಗ್ಗೆ ಹೇಳಿದಾಗ. ಈಗಲೂ ಇಂಥವರು ಇದ್ದಾರೆಯೇ ಎಂದು. ಹ್ಯಾಪೀ ಪ್ಯಾಮೀಲಿ.

ನಿನ್ನ ಸ್ವಾಗತಕ್ಕಾಗಿಯೇ ಎಂಬಂತೆ ನನ್ನ ಕನಸಿನ ಪುಟ್ಟ ಆರಮನೆಯನ್ನು ಯಾವ ರೀತಿಯಲ್ಲಿ ಇಲ್ಲಿ ನಾನು ಸಜ್ಜು ಗೊಳಿಸಿದ್ದೇನೇ ಅಂದರೇ ನೀನೇ ಅಶ್ಚರ್ಯಪಡುತ್ತಿಯಾ. ನೀನು ಹೇಳಿದ ಕನಸಿನ ಮನೆ ನಮ್ಮದಾಗಲಿ ಎಂಬ ರೀತಿಯಲ್ಲಿ ಎಲ್ಲಾ ಸಾಮಾನುಗಳು ಸರಜಾಮುಗಳನ್ನು ತಂದು ಚೊಕ್ಕವಾಗಿ ಜೊಡಿಸಿದ್ದೇನೆ. ನೀನು ಕಾಲು ಇಟ್ಟ ಮೇಲೆ ನಿನ್ನ ಕೈಗೆ ಈ ನನ್ನ ಆರಮನೆಯನ್ನು ಇಟ್ಟು ಬಿಟ್ಟು ನಾನು ಹಗುರಾಗ ಬೇಕು.

ನನಗೆ ಗೊತ್ತು ನೀನಗೆ ಅಡಿಗೆ ಮಾಡಲು ಏನಂದರೇ ಏನೂ ಬರುವುದಿಲ್ಲ ಎಂದು. ಆದರೂ ನನ್ನ ಕೈಯ ನಳಪಾಕದ ಸವಿಯಲಂತೊ ಯಾವುದೇ ಅಡ್ಡಿಯಿಲ್ಲ. ಕೆಲವೇ ದಿನ ನೀನು ನನ್ನಿಂದ ಎಲ್ಲಾ ಮುಖ್ಯ ಅಡಿಗೆಯ ತಯಾರಿಯನ್ನು ಕಲಿದೆ ಕಲಿಯುತ್ತಿಯಾ.

ಉಫ್!!

ಸುಮ್ಮನೇ ಏನು ಏನೋ ರಂಗು ರಂಗಿನ ಕನಸನ್ನು ಪುನಃ ಪತ್ರದಲ್ಲಿಯೇ ಚಿತ್ರಿಸುತ್ತಿದ್ದೇನೆ. ಇನ್ನೂ ಏನೂ ನೀನೇ ನನ್ನ ಎದುರಿಗೆ ಬರುತ್ತಿದ್ದೀಯ. ಇನ್ನೂ ಕೆಲವೆ ಗಂಟೆಗಳು. ಹೇಗೆ ನಿನ್ನನ್ನು ರೀಸಿವ್ ಮಾಡಲಿ ಎಂಬುದನ್ನು ಯೋಚಿಸಬೇಕು. ಸಮ್ ಥೀಂಗ್ ಡೀಪರೇಂಟ್ ಆಗಿರಬೇಕು.. ನೋಡುತ್ತಿರು.. ಅದು ನಿನ್ನ ಮೊದಲ ಬೇಟಿಯ ಅಂದಿನ ಅಚ್ಚರಿಯ ಮಟ್ಟಕ್ಕೆ ಇಂದು ನಿನ್ನನ್ನು ತೆಗೆದುಕೊಂಡು ಹೋಗಲಿದೆ.

ಆ ನಿನ್ನ ಜೀವಂತ ನಗು.. ಆ ನಿನ್ನ ಮುಗ್ಧವಾದ ಗುಳಿ ಕೆನ್ನೆಯನ್ನು ಒಂದು ವರುಷದ ನಂತರ ನೋಡುವ ಕಾಲ ಮತ್ತೆ ಬಂದಿದೆ... ಏನೋ ಸಂತೋಷ ಕಣಮ್ಮಾ!!

ಸಿಗೋಣ..

ಪ್ರೀತಿಯಿಂದ.
ಚಿರಂತ್.

ಶನಿವಾರ, ಏಪ್ರಿಲ್ 9, 2011

ವ್ಯವಸ್ಥೆಗೊಂದು ಹಜಾರೆಯವರಿಂದ ಚಿಕಿತ್ಸೆ

ನಮ್ಮ ವಯೋಮಾನದ ಯುವಕರಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಒಂದು ಮಾತು ಅಂದರೇ "ನಮ್ಮ ವ್ಯವಸ್ಥೆ ಕೆಟ್ಟು ಕೆರ ಹಿಡಿದಿದೆ ಇದನ್ನು ಬದಲಾಯಿಸಲು ಆ ದೇವರಿಗೂ ಸಾಧ್ಯವಿಲ್ಲ. ಎಲ್ಲಿ ಎಲ್ಲಿ ನೋಡಿದರೂ ದುಡ್ಡು ಮಾಡುವುದು, ಲಂಚ ರುಶುವಾತ್ ಹೀಗೆ ಇದು ಎಂದು ಉದ್ಧಾರವಾಗುವುದಿಲ್ಲ."

ನಮ್ಮ ಸರ್ಕಾರದಲ್ಲಿ ಯಾವುದೇ ಒಂದು ಚಿಕ್ಕ ಕೆಲವಸವಾಗಬೇಕಾದರೂ ಕೈ ಬೆಚ್ಚಗೆ ಮಾಡಲೇ ಬೇಕು. ಇದೊಂದು ಅಲಿಖಿತ ಶಾಸನ ಎಂಬಂತೆ ಎಲ್ಲರೂ ಎಲ್ಲ ಸಮಯದಲ್ಲೂ ಮಾತನಾಡುತ್ತಿರುತ್ತಾರೆ.

ಈ ಸಿಸ್ಟಮ್ ನ್ನೇ ಪೂರ್ಣವಾಗಿ ಖಾಸಗೀಕರಣ ಮಾಡಿಬಿಡಬೇಕು ಸಾರ್! ಆಗ ನೋಡಿ ಹೇಗೆ ಅಭಿವೃದ್ಧಿಯಾಗುತ್ತದೆ. ಎಂಬ ದೂರದ ಅಲೋಚನೆಯನ್ನು ಪ್ರತಿಯೊಬ್ಬರೂ ಮಾಡುತ್ತಿರುತ್ತಾರೆ. ಯಾರೊಬ್ಬರು ಅದನ್ನು ಹೇಗೆ ನಮ್ಮಿಂದಲೇ ಇದನ್ನು ನಿಲ್ಲಿಸುವಂತೆ ಮಾಡುವ ಉಪಾಯ ಇಲ್ಲವೇ ಇಲ್ಲ ಎಂಬಂತೆ ಕುಳಿತುಬಿಟ್ಟಿದ್ದೇವೆ.

ಯಾರಾದರೂ ಯಾವುದಾದರೊಂದು ಸರ್ಕಾರಿ ಕಛೇರಿಯ ಬಗ್ಗೆ ಹೇಳಿದರೆ.. ಅಲ್ಲಿ ಹೀಗೆ ಹೀಗೆ ಈ ರೀತಿಯಲ್ಲಿ ಕೈ ಬೆಚ್ಚಗೆ ಮಾಡದಿದ್ದರೇ ಅಪ್ಪನ ಆಣೆಗೂ ನಿಮ್ಮ ಕೆಲಸ ಆಗುವುದಿಲ್ಲ. ಎಂದು ಸಾಲು ಸಾಲು ನಿದರ್ಶನಗಳನ್ನು ಗೆಳೆಯರುಗಳು ತಮ್ಮ ಅನುಭವದ ಮೊಲಕ ಚಿತ್ರಿಸುವುದನ್ನು ಕಂಡರೇ.... ಇರುವ ಚೂರು ಭರವಸೆಯನ್ನು ಎಲ್ಲಿಗಾದರೂ ತೂರಬೇಕು ಅನಿಸುತ್ತದೆ.

ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತು ಹಾಕಲು ಇರುವವರು ಯಾರು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ ಅಂದರೇ ಅತಿಶಯೋಕ್ತಿಯಲ್ಲ.

ಇಂದಿನ ಯುವಕರುಗಳಿಗೆ ನಮ್ಮ ದೇಶ, ನಮ್ಮ ಜನ, ನಮ್ಮ ಅಭಿವೃದ್ಧಿಯ ಬಗ್ಗೆ ಹೆಚ್ಚು ಹೆಚ್ಚು ಕನಸುಗಳು ಇಂದು ಮೈಮೆಳಸುತ್ತಿವೆ. ಯಾಕೆಂದರೇ ಇಂದಿನ ಮಾದ್ಯಮದ ಕ್ರಾಂತಿಯಿಂದ ಇಡಿ ಜಗತ್ತೆ ಅಂಗೈಯಲ್ಲಿ ಕಾಣುವಂತಾಗಿದೆ. ಇಲ್ಲಿನ ನಮ್ಮ ಯುವಕರುಗಳು ಬೇರೆ ಬೇರೆ ಅಭಿವೃದ್ಧಿಯನ್ನು ಹೊಂದಿರುವ ದೇಶಗಳನ್ನು ಗಮನಿಸುತ್ತಾರೆ. ಅಲ್ಲಿ ಹೇಗೆ ಅವರುಗಳು ಆ ರೀತಿಯ ವೇಗವಾಗಿ ಮುಂದುವರಿಯುತ್ತ ಇದ್ದಾರೆ ಮತ್ತು ಯಾವ ಯಾವ ರೀತಿಯಲ್ಲಿ ಅವರ ವ್ಯವಸ್ಥೆ ಉತ್ತಮವಾಗಿದೆ ಎಂಬುದನ್ನು ಕಾಣುತ್ತಾರೆ.

ಅದನ್ನೇ ಅವನು ನಮ್ಮ ಈ ಭವ್ಯ ಭಾರತದಲ್ಲೂ ಸಹ ಕಾಣಲು ಇಷ್ಟಪಡುತ್ತಾನೆ. ನಮ್ಮಲ್ಲಿ ಅಪಾರವಾದ ಸಂಪತ್ತು ಇದೆ. ಅಸಂಖ್ವವಾದ ಮಾನವ ಸಂಪನ್ಮೂಲವಿದೆ. ಅದರೇ ಅವಕಾಶಗಳದೇ ಕೂರತೆ. ಇರುವ ನಿಜವಾದ ಬುದ್ಧಿವಂತಿಕೆಗೆ ನಿಜವಾದ ಮನ್ನಣೆ ಸಿಗುತ್ತಿಲ್ಲ ಎಂಬುದು ಪ್ರತಿಯೊಬ್ಬ ವಿದ್ಯಾವಂತ ಪ್ರಜೆಯ ಕೂರಗು. ಸಿಗಬೇಕೆಂದರೇ ಹಣ ಕೊಡಬೇಕು ಸ್ವಾಮಿ! ಎಂಬ ಉತ್ತರ.

ಸ್ವಾತಂತ್ರ್ಯಕ್ಕಾಗಿ ಅಂದು ನಮ್ಮ ಎಲ್ಲಾ ಭಾರತೀಯರ ಹೋರಾಟ ಎಷ್ಟೊಂದು ಉಚ್ಚಮಟ್ಟದಲ್ಲಿ ನಡೆಯಿತು. ಸ್ವಾತಂತ್ರ್ಯ ಒಂದು ಸಿಕ್ಕಿದರೇ ನಮ್ಮ ಎಲ್ಲ ಕೋಟಿ ಕೋಟಿ ಸಮಸ್ಯೆಗಳಿಗೆಲ್ಲಾ ಒಂದು ಪುಲ್ ಸ್ಟಾಪ್ ಇಡಬಹುದು. ನಮ್ಮ ಆಸೆ, ಕನಸುಗಳನ್ನು ಸುಲಭವಾಗಿ ನಮ್ಮದೇಯಾದ ಸರ್ಕಾರದ ಮೂಲಕ ಹಿಡೇರಿಸಿಕೊಳ್ಳಬಹುದು. ಪತಿಭೆಗೆ ತಕ್ಕ ಪುರಾಸ್ಕಾರ ಸಿಗುತ್ತದೆ. ಯಾವುದಕ್ಕೂ ಅಂಜುವ ಅಳುಕುವ ಅವಶ್ಯಕತೆಯಿಲ್ಲ. ನಮ್ಮ ಎಲ್ಲ ಬಡತನ ಮೌಡ್ಯವೆಲ್ಲ ಅಳಿಯುತ್ತದೆ ಎಂಬ ದೂರದ ಕನಸನ್ನು ಪ್ರತಿಯೊಬ್ಬರೂ ಗಾಂಧಿ ತೋರಿಸಿದ ದಾರಿಯಲ್ಲಿ ಕಂಡಿದ್ದರು.

ಅದರೇ ಆಮೇಲೆ ಇಡೀ ಚಿತ್ರಣವೇ ಪೂರ್ಣ ಬದಲಾಯಿತು. ಸರ್ಕಾರ, ರಾಜಕೀಯ ರಂಗ ಎಂದರೇ ಅಸಹ್ಯ ಪಟ್ಟುಕೊಳ್ಳುವ ಮಟ್ಟಕ್ಕೆ ಬಂದು ನಿಂತಿದೆ. ನಾವು ಆರಿಸಿ ಕಳಿಸಿದ ನಮ್ಮ ಪ್ರತಿನಿದಿಗಳು ಯಾವ ಮಟ್ಟಕ್ಕೆ ಇಳಿದು ಬಿಟ್ಟಿದ್ದಾರೆಂದರೇ "ಆರಿಸುವವರಿಗೆ ಇಲಿ ಆರಿಸಿದ ಮೇಲೆ ವೀರಭದ್ರ" ಎನ್ನುವಂತೆ. ತಾವಾಯಿತು ತಮ್ಮ ವ್ಯವಸ್ಥೆಯನ್ನು ಹಲವು ಆಯಾಮಗಳಲ್ಲಿ ಅಭಿವೃದ್ಧಿಯನ್ನು ಮಾಡಿಕೊಳ್ಳುವುದು ಬಿಟ್ಟರೆ ಬೇರೆ ಯಾವ ಕಾರ್ಯವಿಲ್ಲ ಎನ್ನುವರ ಮಟ್ಟಿಗೆ.

ಯಾವುದೇ ಸರ್ಕಾರಿ ಕಾರ್ಯಕ್ರಮಗಳು, ಯೋಜನೆಗಳು ಜಾರಿಯಾದವು ಅಂದರೇ ಅದು ಅವರುಗಳು ಮೇಯುವ ಸಮಯಕ್ಕೆ ಸರಿಯಾಗಿ ಸರ್ಕಾರದಿಂದ ಬರುತ್ತಿರುವ ಹಣದ ಹೊಳೆ ಎಂಬುವುದರ ಮಟ್ಟಿಗೆ ಜನಜನಿತವಾಗಿದೆ. ಸರ್ಕಾರದಿಂದ ಬರುವುದು ಆನೆಯ ಗಾತ್ರ ಜನರಿಗೆ ಸಿಗುವುದು ಗುಲಗಂಜಿ ಗಾತ್ರ ಎಂಬಂತಾಗಿದೆ.

ಸಾಮಾನ್ಯ ಜನಗಳಿಗೆ ಯಾವುದೇ ಉಪಯೋಗ ಸಿಗಬೇಕು ಅಂದರೇ ಅದು ಗಗನ ಕುಸುಮವೇ ಸರಿ. ಯಾರಿಗೂ ಸರಿಯಾದ ಸಮಯಕ್ಕೆ ಸರಿಯಾಗಿ ಸಮಾನವಾಗಿ ನ್ಯಾಯ ಸಿಗುವುದು ಕನಸಾಗಿದೆ. ಅದಿಕಾರಿಗಳ ದಬ್ಬಾಳಿಕೆ, ನಾಯಕರ ಅಸಡ್ಡೆ ಇವುಗಳೆಲ್ಲ ಸೇರಿಕೊಂಡು ಅಲ್ಲಿಗೆ ಪುನಃ ಹೋಗಲೇ ಬಾರದು ಎಂಬ ಮಟ್ಟಕ್ಕೆ ಜನಸಾಮಾನ್ಯರುಗಳು ಖಾಸಗೀ ಆಸ್ಪತ್ರೆಗಳು, ಶಾಲೆಗಳು ಮತ್ತು ವ್ಯಕ್ತಿಗಳ ಕಡೆಗೆ ಮುಖ ಮಾಡಿರುವುದನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ.

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬುದು ಎಲ್ಲರನ್ನು ಕಾಡುತ್ತಿದ್ದಂತಹ ಪ್ರಶ್ನೆ. ಅದಕ್ಕೆ ನಮಗೆಲ್ಲಾ ಉತ್ತರ ಸಿಗುವ ಸಮಯ ಬಂದಾಯಿತು.



ಅದು ಕಳೆದ ನಾಲ್ಕು ದಿನಗಳಲ್ಲಿ ಇಡೀ ವಿಶ್ವದಲ್ಲಿ, ಭಾರತದಲ್ಲಿ ಒಂದೇ ಒಂದು ಮಾತು ಅಣ್ಣ ಹಜಾರೆ! ಲೋಕಪಾಲ ಮಸೂದೆಯನ್ನು ಜಾರಿಗೆ ತರಬೇಕು ಎಂದು ಅವರು ಪ್ರಾರಂಭಿಸಿದ ಉಪವಾಸ ಸತ್ಯಾಗ್ರಹ. ಅದು ಯಾವ ಮಟ್ಟಕ್ಕೆ ಬಂದು ಬಿಟ್ಟಿತು ಅಂದರೇ ಪುನಃ ನಮ್ಮ ಸ್ವಾತಂತ್ರ್ಯ ದಿನದ ಹೋರಾಟವನ್ನು ಕಣ್ಣು ಮುಂದೆ ತಂದಂತಾಯಿತು. ಹಿರಿಯರು ಕಿರಿಯರು ಎನ್ನದೇ ಪ್ರತಿಯೊಬ್ಬ ಭಾರತೀಯ ಪ್ರಜೆಗಳು ಸಹ ಅವರಿಗೆ ಬೆಂಬಲವನ್ನು ವ್ಯಕ್ತಪಡಿಸಿದರೂ. ಮತ್ತು ಇದನ್ನು ನೋಡಿ ಘನ ಸರ್ಕಾರವೇ ಸ್ವಲ್ಪ ವಿಚಿಲತವಾಗಿ ಹಜಾರೆಯವರ ಬೇಡಿಕೆಗಳನ್ನು ಮಾನ್ಯ ಮಾಡಲು ಓ.ಕೆ ಎಂದಿತು.

ಯಾರು ಉಹಿಸದ ರೀತಿಯಲ್ಲಿ ಜನಗಳ ಪ್ರತಿಕ್ರಿಯೆಯನ್ನು ನೋಡಿದರೆ ನಮ್ಮ ಜನರಲ್ಲೂ ದೇಶಪ್ರೇಮ, ದೇಶದ ಬಗ್ಗೆ ಅಪಾರವಾದ ಕಾಳಜೀ ಇದೆ ಎಂಬುದು ಎದ್ದು ಕಾಣುತ್ತಿದೆ. ಸಮಯ ಸಿಕ್ಕರೇ ಎಲ್ಲದಕ್ಕೂ ಸಿದ್ಧ ಎಂಬುದನ್ನು ಪೂರ್ಣವಾಗಿ ನಿರೂಪಿಸಿ ಆಡಳಿತ ರಂಗಕ್ಕೆ ಚಿಕ್ಕ ಶಾಕ್ ಮತ್ತು ಎಚ್ಚರಿಕೆಯನ್ನು ಕೊಟ್ಟಿದ್ದಾರೆ ಎಂದರೇ ತಪ್ಪಲ್ಲಾ.

ಇದು ಪ್ರಾರಂಭ ಎನ್ನೋಣ. ಇದು ನಿಲ್ಲಬಾರದು ನಿರಂತರವಾಗಿ ಸಾಗಬೇಕು. ನಾವುಗಳು ನಾವೇ ಎಂದು ಮುಂದೆಜ್ಜೆಯನ್ನು ಇಡುವುದಿಲ್ಲ. ಬೇರೆಯವರಿಗಾಗಿ ಮೊದಲು ಯಾರದರೊಬ್ಬರು ಪ್ರಾರಂಭಿಸಲಿ ಎಂದು ಕಾಯುತ್ತಾ ಇದ್ದೇವೋ ಎಂಬಂತೆ ಈ ಕಳೆದ ನಾಲ್ಕು ದಿನಗಳಲ್ಲಿ ನಮಗೆ ಒಬ್ಬ ಸರಿಯಾದ ನಾಯಕ ಸಿಕ್ಕೇ ಬಿಟ್ಟ ಎಂಬಂತೆ ಹಜಾರೆಯವರೊಂದಿಗೆ ಹಜಾರೋ ಹಜಾರೋ ದೇಶವಾಸಿಗಳು ಸಾಥ್ ನೀಡಿದ್ದು ಒಂದು ಆಶದಾಯಕ ಬೆಳವಣಿಗೆ.

ಹಾಗೆಯೇ ನಮ್ಮ ನಮ್ಮಲ್ಲಿಯೇ ಇದ್ದಂತಹ ಒಂದು ಜಿಗುಪ್ಸೆಯನ್ನು- ಸಿಟ್ಟನ್ನು ವ್ಯಕ್ತಪಡಿಸಲು ಸರಿಯಾದ ಒಂದು ಮಾರ್ಗ ಇದಾಗಿತ್ತು ಎಂದರೆ ಸುಳ್ಳಲ್ಲ. ಯಾರೊಬ್ಬರೂ ಒಂದೇ ಒಂದು ಅಪಸ್ವರವನ್ನು ಈ ಒಂದು ಹೋರಾಟಕ್ಕೆ ನೀಡಿಲ್ಲ ಎಂದರೇ ಇದರ ಜರೂರತು ಎಷ್ಟು ಇತ್ತು ಎಂಬುವುದು ತಿಳಿಯುತ್ತದೆ.

ಬೆಳಯುವ ಸಿರಿ ಮೊಳಕೆಯಲ್ಲಿಯೇ ಎಂಬಂತೆ ನಮ್ಮ ಈ ವಿದ್ಯಾರ್ಥಿಗಳು, ಯುವಕರುಗಳು ಹೆಚ್ಚು ಹೆಚ್ಚು ಇದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದು ಮುಂದೊಂದು ದಿನ ಭವ್ಯವಾದ ಭ್ರಷ್ಟಾಚಾರ ರಹಿತ ಸಮಾಜವನ್ನು ಭಾರತದ ನೆಲದಲ್ಲಿ ಬೆಳೆಸುತ್ತಾರೆ ಎಂಬುದಕ್ಕೆ ಸಾಕ್ಷಿಭೂತವಾಯಿತು. ಇದರ ಬೆಳಕು ಹೀಗೆ ಸಾಗಲಿ ಎಂಬುದೇ ಎಲ್ಲಾ ಭಾರತೀಯರ ದೊಡ್ಡ ಆಸೆ.

ಈ ಲಂಚ, ಹಣ ಹೊಡೆಯುವುದು ನಿಂತರೇ ಎಲ್ಲ ಕೆಲಸಗಳು ತಮ್ಮಷ್ಟಕ್ಕೆ ತಾವೇ ರಿಪೇರಿಯಾಗುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಇದು ಎಷ್ಟು ಆಳವಾಗಿ ಬೇರು ಬಿಟ್ಟುಕೊಂಡಿದೆಯೆಂದರೇ ಯಾರಿಗೂ ಏನೂ ತಿಳಿಯದ ರೀತಿಯಲ್ಲಿ ಸಮಾಜದ ಎಲ್ಲಾ ರಂಗದಲ್ಲೂ ಎಲ್ಲ ಸಮಯದಲ್ಲೂ ಆಕ್ರಮಿಸಿಕೊಂಡು ಎಲ್ಲರನ್ನು ವ್ಯಥೆಗೆ ದೂಡುವಂತಹ ಒಂದು ಕರಾಳ ಸ್ವರೂಪ ಇದಾಗಿದೆ.

ಪ್ರತಿಯೊಬ್ಬರೂ ತಮ್ಮ ಜವಬ್ದಾರಿಯನ್ನು ಅರಿತು ನಡೆಯಬೇಕು. ನಾವುಗಳು ಇರುವುದು ಎಲ್ಲಿ. ನಮ್ಮ ಕರ್ತವ್ಯ ಏನು ಎಂದು ತಿಳಿದು ವರ್ತಿಸಬೇಕು. ಇರುವ ಅನುಕೂಲ ಪ್ರತಿಯೊಬ್ಬರಿಗೂ ಸೇರಿದ್ದು. ಪ್ರಜಾಪ್ರಭುತ್ವ ವ್ಯವಸ್ಥೆಯೆಂದರೇ ಸರ್ವಾಧಿಕಾರಿಯ ರೀತಿಯಲ್ಲಿ ತಾನು ಮಾತ್ರ ಚೆನ್ನಾಗಿರಬೇಕು ಇನ್ನೆಲ್ಲಾರೂ ಏನಾದರೂ ಆಗಲಿ ಎಂಬ ದೂರಣೆಯನ್ನು ಬಿಡಬೇಕು.

ನಮ್ಮ ಹಿರಿಯರಾದ ಗಾಂಧಿಜೀಯವರಾದಿಯಾಗಿ ಹಲವಾರು ಹೋರಾಟಗಾರರ ಹಂಬಲ, ಕನಸಿನ ಭಾರತ ಇದು ಮಾತ್ರವಲ್ಲವೇ ಅಲ್ಲ. ಅದು ರಾಮರಾಜ್ಯವಾಗಿತ್ತು. ಅದರ ನಿರ್ಮಾಣಕ್ಕೆ ಕಿಂಚಿತ್ತಾದರೂ ಪ್ರಯತ್ನಿಸಬೇಕಾದದ್ದು ಎಲ್ಲಾ ಹಿರಿ ಕಿರಿ ನಾಯಕರುಗಳಿಗೆ ಸೇರಿದ್ದು. ಯಾಕೆಂದರೇ ನಾವುಗಳು ಹೀಗಾಗಲೇ ಈ ರೀತಿಯ ವ್ಯವಸ್ಥೆಯನ್ನೇ ಅನುಭವಿಸುತ್ತಾ ಅನುಭವಿಸುತ್ತಾ ದಶಕಗಳನ್ನೇ ಕಳೆದು ಬಿಟ್ಟು ಇದೇ ನಿಜವಾದ ವ್ಯವಸ್ಥೆಯೆಂಬ ಭ್ರಮ ಲೋಕದಲ್ಲಿ ಬದುಕುತ್ತಾ ಬದುಕುತ್ತಾ ಸಹಿಸುತ್ತ ಕುಳಿತು ಬಿಟ್ಟಿದ್ದೇವೆ.

ಮಾದರಿ ಸಮಾಜವನ್ನು ನಿರ್ಮಾಣ ಮಾಡುವ ಹೊಣೆ ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗದ ಜವಬ್ದಾರಿ. ಅದರ ಅಚ್ಚುಕಟ್ಟಾದ ನಡೆಯನ್ನು ಅಲ್ಲಿನ ಸ್ಥಾನವನ್ನು ಅಲಂಕರಿಸಿದವರು ನಡೆಸಬೇಕು/ ನಡೆಸಲೇ ಬೇಕಾದ ಜರೂರತು ಇಂದು ಅತ್ಯಂತ ಅವಶ್ಯಕವಾಗಿದೆ.

ಪರಕೀಯರನ್ನು ಅಂದು ಹೊಡೆದು ಹೋಡಿಸಲು ನಮ್ಮವರು ಅಂದು ನಿರಾಶನ ಸತ್ಯಾಗ್ರಹವನ್ನು ಆಚರಿಸಿದರೂ. ಅದರೆ ಇದು ನೋಡಿ ನಮ್ಮ ದೌರ್ಭಾಗ್ಯ ನಮ್ಮಿಂದ ಆರಿಸಿಕೊಂಡು ನಮಗಾಗಿ ಆಡಳಿತವನ್ನು ಅನುಷ್ಟಾನ ಮಾಡುವ ನಮ್ಮ ಜನಗಳಿಗೆ ಪಾಠ ಕಲಿಸಲೂ ನಾವುಗಳು ಉಪವಾಸ ಕೂರುವಂತಾಗಿದೆ. ಇದಕ್ಕೆ ಕಾರಣಕರ್ತರಾದ ಎಲ್ಲರೂ ತಮ್ಮ ತಮ್ಮಲ್ಲಿಯೇ ಆತ್ಮ ವಿಮರ್ಶೆಯನ್ನು ಮಾಡಿಕೊಳ್ಳುವುದು ಗಾಂಧಿ ಜನಿಸಿದ ನಾಡಿನ ಘನ ಮಹೋದಯರ ತುರ್ತು ಕೆಲಸವಾಗಬೇಕು.

ಅದರೂ ಈ ಲೋಕಪಾಲ ಮಸೂದೆಯನ್ನು ಜಾರಿಮಾಡಲು ದಶಕಗಳನ್ನು ತೆಗೆದುಕೊಂಡು ಮೀನಾಮೇಷ ಎಣಿಸುತ್ತಿದ್ದರು ಎಂದರೇ ಏನು ಅರ್ಥ ಯೋಚಿಸಲು ಸಾಧ್ಯವಿಲ್ಲ. ಬುದ್ಧಿವಂತರು ಇಲ್ಲಿ ಯಾರು ಸ್ವಾಮಿ?

ಈ ರೀತಿ ಒಂದು ಜಾಗೃತಿಯ ಹೋರಾಟಕ್ಕೆ ನೂರು ಜನ ಅಣ್ಣ ಹಜಾರೆಗಳ ಮಾರ್ಗದರ್ಶನ ನಮ್ಮ ಯುವಕರುಗಳಿಗೆ ಮತ್ತು ಜನ ಸಾಮಾನ್ಯರಿಗೆ ಅವಶ್ಯಕತೆಯಿದೆ. ಇದರ ಸಂತತಿ ಬೆಳೆಯಲಿ ಭ್ರಷ್ಟರ ಸಂತತಿ ಅಳಿಯಲಿ ಎಂದು ಹಾರೈಸುವುದೊಂದೇ ನಾವು ಮಾಡುವ ನಮ್ಮ ಕೆಲಸ?

ಗುರುವಾರ, ಏಪ್ರಿಲ್ 7, 2011

"ಗೆದ್ದು ಬಾ ಭಾರತ" ಎಂದು ಹರಸಿದ್ದರು



ಇಡೀ ದೇಶ ಒಂದು ಸಂಮೋಹನಕ್ಕೆ ಒಳಪಟ್ಟಿತ್ತು. ಅವರಿಗೆ ತಾವುಗಳು ಯಾವುದರ ಬಗ್ಗೆ ಯೋಚಿಸುತ್ತಿದ್ದೇವೆ? ಯಾವುದನ್ನು ಏನು ಮಾಡುವುತ್ತಿದ್ದೇವೆ ಎಂಬುದನ್ನು ಮರೆತೆ ಬಿಟ್ಟಿದ್ದರು. ಎಲ್ಲರ ಒಂದೇ ಆಕಾಂಕ್ಷೆ, ಒಂದೇ ಕನಸು, ಒಂದೇ ಉತ್ಸಹ "ಗೆದ್ದು ಬಾ ಭಾರತ". ದೇಶದ ಪ್ರತಿಯೊಬ್ಬ ಭಾರತೀಯನ ಉಸಿರಾಟ ಇದಕ್ಕಾಗಿ ಕಾಯುತ್ತಿದೆಯೇನೋ ಎಂಬಂತೆ ಅಬಾಲವೃದ್ಧರಿಂದ ಇಡೀದು ಪ್ರಧಾನ ಮಂತ್ರಿ ಮಹೋದಯರವರೆಗೆ ಅದೇ ಒಂದು ಮಾತು "ಗೆದ್ದು ಬಾ ಭಾರತ". ಅಷ್ಟು ಮಾತ್ರ ಸಾಕು.

ಆ ಎರಡು ದಿನ ದೇಶಕ್ಕೆ ದೇಶವೆ ಸ್ತಬ್ಧ! ಅಘೋಷಿತ ಭಾರತ್ ಬಂದ್! ತಮ್ಮ ಕೆಲಸ ಕಾರ್ಯಗಳಿಗೆ ಅಂದು ಪೂರ್ಣ ವಿರಾಮ. ತಾವು ಕೆಲಸ ಮಾಡುವ ಕಂಪನಿಗಳಿಗೆ ಅಂದು ಅರ್ಧ ದಿನದ ರಜೆ. ತುರ್ತು ಕೆಲಸ ಮಾಡಲು ಬಂದಂತಹ ನೌಕರುಗಳಿಗೆ ಅಲ್ಲಿಯೇ ಅವರುಗಳು ದೊಡ್ಡ ಪರದೆಯಲ್ಲಿ ವಿಕ್ಷಿಸಲು ಮತ್ತು ತಮ್ಮವರ ಕನಸಿಗೆ ಸಾಥ್ ನೀಡಲು ವ್ಯವಸ್ಥೆ.....

ಯಾಕೇ? ಏನೂ ಎಂಬುದನ್ನು ಪ್ರತಿಯೊಬ್ಬರಿಗೂ ಗೊತ್ತು. ಆ ಒಂದು ಕನಸು ಹಿಡೇರುವ ದಿನ, ಕ್ಷಣಕ್ಕಾಗಿ ಜಾತಕ ಪಕ್ಷಿಯಂತೆ ಕಾಯುವ ಕ್ಷಣ! ಪ್ರತಿಯೊಂದು ಕ್ಷಣ ಕ್ಷಣವನ್ನು ಉಸಿರು ಬಿಗಿ ಹಿಡಿದು ಟಿ.ವಿ ಯ ಮುಂದೆ ಕಾದುಕೊಂಡಿದ್ದು, ಸ್ನೇಹಿತರು, ಹೆತ್ತವರು, ಜೊತೆಗಾರರ ಜೊತೆಯಲ್ಲಿ ಕಣ್ಣನ್ನು ಅತ್ತ ಇತ್ತ ಚಲಿಸದಂತೆ ಆ ಕ್ಷಣವನ್ನು ತನ್ನ ಕಣ್ಣಲ್ಲಿ ಮಾತ್ರ ಹಿಡಿದು ಇಡಬೇಕು ಎಂಬ ಹಂಬಲ!

ದೇಶದ ಬಗ್ಗೆ ವಿಪರೀತವಾದ ಭಕ್ತಿಯ ದಾರಳ ಮನಸ್ಸು. ನಮ್ಮ ದೇಶ ಅಂದರೇ ಏನೂ ತಿಳಿದಿರುವಿರಿ ಎಂಬ ಮಾತು. ನಾವುಗಳು ಸಾಧಿಸೇ ಸಾಧಿಸುತ್ತೇವೆ ಎಂಬ ಭರವಸೆಯ ನೋಟ.

ಹನ್ನೊಂದು ಮಂದಿಗಳು ಭಾರತದ ಪರ ತಮ್ಮ ಹೋರಾಟವನ್ನು ಆ ಎರಡು ದಿನಗಳಲ್ಲಿ ನಡೆಸಿದ್ದರು. ಮೊದಲನೆಯದು ಪಾಕ್ ನ ವಿರುದ್ಧ ಮತ್ತು ಮನ್ನೆಯ ಶನಿವಾರದಂದು ಲಂಕಾ ಪಡೆಯ ಜೊತೆ. ಅವರ ಹುಟ್ಟಾಡಗಿಸಲೇ ಬೇಕೆ ಬೇಕು ಎಂಬ ಭಾರತೀಯರ ಮನಸ್ಸನ್ನು ಅರಿತವರಂತೆ ಹೋರಾಟಕ್ಕೆ ಸಜ್ಜಾಗಿದ್ದರು.

ಸಜ್ಜಾಗಿದ್ದರೂ ಅಂದರೇ ಆಗಲ್ಲ ಸ್ವಾಮಿ. ಇಡೀ ೧೨೧ ಕೋಟಿ ಹೃದಯಗಳ ಅರಕೆ, ಕೋಟಿ ಮನಸುಗಳ ಉಪವಾಸ, ಕೋಟಿ ಕೋಟಿ ಮಂದಿಯ ದೇವರ ಪೊಜೆ, ಕೋಟಿ ಕೋಟಿ ವೈವಿದ್ಯಮಯ ಹರಕೆ. ನಮ್ಮ ದೇಶ ಗೆದ್ದರೇ ನಾವು ಹೀಗೆ ನಮ್ಮ ಹನ್ನೊಂದು ಮಂದಿಗಳಿಗೆ ಹೀಗೆ ಹೀಗೆ ಇದನ್ನು ಇದನ್ನು ಅರ್ಪಿಸುವೇ ಎಂಬ ವಾಗ್ಧಾನ. ಹಿರಿ ಕಿರಿಯರೆನ್ನದೇ ಪ್ರತಿಯೊಬ್ಬರೂ ಒಂದೊಂದು ಅರಕೆಯನ್ನು ತಮ್ಮ ಮನದಲ್ಲಿಯೇ ಇಟ್ಟುಕೊಂಡಿದ್ದರು.

ಸಾಂಪ್ರದಾಯಿಕ ವೈರಿಪಡೆ ಪಾಕ್ ಎಂಬುದು ಇಲ್ಲಿನ ಜನಗಳ ದೃಷ್ಟಿ ಏನಾದರೂ ಪರವಾಗಿಲ್ಲ. ಈ ಒಂದು ಪಂದ್ಯದಲ್ಲಿ ನಮ್ಮವರೂ ಅವರುಗಳಿಗೆ ಮಣ್ಣು ಮುಕ್ಕಿಸಬೇಕು.

ಮಾಧ್ಯಮಗಳನ್ನು ಕೇಳಬೇಕೇ ಇಂದು ಇದು ಒಂದು ಕಾರ್ಗಿಲ್ ಯುದ್ಧ ಇಪ್ಪತ್ತೇರಡು ಯೋಧರ ಹೋರಾಟ/ಮೂರನೇಯ ವಿಶ್ವ/ಶಾಂತಿ ಯುದ್ಧ ಎಂಬ ಮಾತುಗಳು.

ಅದಕ್ಕೆ ಪೂರಕವೆಂಬಂತೆ ನಮ್ಮ ಮಂತ್ರಿ ಮಹೋದಯರಗಳು, ಆ ದೇಶದ ಮಂತ್ರಿ ಮಹೋದಯರುಗಳು ರಾಜಕೀಯ ದುರಿಣರುಗಳು ಈ ಹೋರಾಟಕ್ಕೆ ಇಡಿಯಾಗಿ ಸಾಕ್ಷಿಭೂತರಾಗಿದ್ದರು. ತಮ್ಮ ಎಲ್ಲ ಕೆಲಸಗಳನ್ನು ಬದಿಗಿಟ್ಟು ಯುದ್ಧ ಭೂಮಿಯೆಂಬ ಮೊಹಾಲಿಯ ಕ್ರೀಡಾಂಗಣದಲ್ಲಿ ಸೇರಿದ್ದರೂ. ಒಂದೊಂದು ಹೋಡೆತಕ್ಕೂ ನಮ್ಮವರ ಕೂಗು ಉತ್ಸಹವನ್ನು ನೋಡಿಯೇ ನಲಿಯಬೇಕು. ನಮ್ಮವರಲ್ಲಿ ಏನಾದರೂ ಒಬ್ಬರೂ ತಮ್ಮ ಪ್ರಯತ್ನದಲ್ಲಿ ಎಡವಿದರೆ ನಿರಾವ ಕಪ್ಪನೆಯ ಮೌನ! ವರ್ಣನೆಗೆ ನಿಲುಕದು. ಹೋರಾಟದ ಕೊನೆ ಕೊನೆಯ ಕ್ಷಣದಲ್ಲಿ ಕೋಟಿ ಕೋಟಿ ಮಂದಿಯ ಎಕ್ಸೈಟ್ ಮೆಂಟ ಹೇಳತಿರದು.

ಇಷ್ಟೊಂದು ಕೋಟಿ ಮನಸ್ಸುಗಳ ಹಂಬಲವನ್ನು ಬಲ್ಲವರೆಂಬಂತೆ ನಮ್ಮ ಪಟುಗಳು ಅವರನ್ನು ನುಣ್ಣಗೇ ಮಾಡಿ ಮನೆಗೆ ಅಟ್ಟಿದರು. ಆ ಸಮಯಕ್ಕೆ ಸರಿಯಾಗಿ ನಮ್ಮ ಜನಗಳಲ್ಲಿ ಸಂಭವಿಸಿದ ಉತ್ಸಾಹದ ಎಲ್ಲೆಗೆ ಕೊನೆಯೇ ಇಲ್ಲವೇನೂ? ರಸ್ತೆ ರಸ್ತೆಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ "ಭಾರತಾಂಬೇ ಜೈ" ಈ ಮಾತು ನಮ್ಮ ತ್ರಿವರ್ಣ ದ್ವಜದೊಂದಿಗೆ ವಿಜಯದುಂದುಬಿಯ ಪ್ರಸರಣ. ಥರಾವೇರಿ ಮೊಬೈಲ್ ಎಸ್. ಎಂ. ಎಸ್ ಗಳೊಡನೆ ಎಲ್ಲರೂ ಪರಸ್ಪರ ತಮ್ಮ ಸಂತೋಷವನ್ನು ಆಚರಿಸಿಕೊಂಡರು.

ನೀಲಿ ಪಡೆಯ ಹೋರಾಟದ ವಿಜಯದ ಹಾದಿಗೆ ಕೇವಲ ಒಂದೇ ಒಂದು ಹೆಜ್ಜೆ ಅದರ ಹೋರಾಟ ಶನಿವಾರ ವಾರಾಂತ್ಯದಲ್ಲಿ ನಡೆಯುತ್ತಿರುವುದರಿಂದ ಪ್ರತಿಯೊಬ್ಬರೂ ಅದರ ಆಚರಣೆಗೆ ಬಹು ವಿಧದಲ್ಲಿ ಸಜ್ಜಾಗಿದ್ದರೂ ಎಂದರೇ ಅತಿಶಯೋಕ್ತಿಯಲ್ಲ.

ಬಂದೇ ಬಿಟ್ಟಿತು. ಅಂದು ಮಹಾಯುದ್ಧದ ಅಂತ್ಯದ ದಿನ. ಲಂಕಾಪಡೆಯನ್ನು ಸರಿಗಟ್ಟಿ ೨೮ ವರ್ಷಗಳ ಕನಸನ್ನು ನನಸು ಮಾಡುವ ಸಮಯ. ಎಲ್ಲರ ಮನಸ್ಸು ಆ ಒಂದು ಕ್ಷಣ ನಿಜವಾಗಲಿ ಎಂಬ ಮೌನ ಪ್ರಾರ್ಥನೆ ಮಾತ್ರ.

ಹೋರಾಟದ ಮದ್ಯದಲ್ಲಿ ನಮ್ಮವರು ಸ್ವಲ್ಪ ಮುಗ್ಗರಿಸಿದಾಗ.. ಲಂಕಾಪಡೆಯ ಕೈ ಮೇಲಾದಾಗ ಪ್ರೇಕ್ಷಕರ ಮುಖ ನೋಡಲು ಸಾಧ್ಯವಾಗುತ್ತಿರಲಿಲ್ಲ.. ಮನಸ್ಸು ಕಸಿ ವಿಸಿ.

ಟಿವಿಯಲ್ಲಿ ರಜನಿಕಾಂತರನ್ನು ತೋರಿಸಿದ ಸಮಯದಲ್ಲಿ ಪುನಃ ಎಸ್. ಎಂ.ಎಸ್ ಗಳ ಭರಾಟೆ ರಜನಿಕಾಂತ ಸ್ಟೇಡಿಯಂ ನಲ್ಲಿ ಇದ್ದಾರೆ ಗೆಳೆಯರೇ ಜಯ ನಮ್ಮ ಪರ ಚಿಂತಿಸಬೇಡಿ ಎಂಬ ಸಾಲುಗಳ ಹರಿದಾಟ.



ಪ್ರತಿಯೊಂದು ಗಳಿಗೆಯನ್ನು ಯೋಚಿಸುತ್ತಾ ಪ್ರತಿಯೊಬ್ಬರ ನೋಟ. ನಮ್ಮ ಆಟಗಾರರಿಗೂ ಅದೇಷ್ಟು ಒತ್ತಡ ಇತ್ತೋ ಬಲ್ಲವರೇ ಬಲ್ಲರು. ಆದರೂ ಅವರುಗಳು ತಮ್ಮ ಜವಬ್ದಾರಿಯನ್ನು ಅರಿತು ಎದುರಾಳಿಗಳನ್ನು ಹೋರಾಡಿದರು. ನಮ್ಮ ದೊನಿ ಮನಿಯಾ ನಾಯಕನು ಕೊನೆಯ ಕ್ಷಣಗಳಲ್ಲಿ ತನ್ನ ಸ್ಥಾನಕ್ಕೆ ತಕ್ಕಂತೆ ಆಟವಾಡಿ ಇನ್ನೂ ಏನೋ ಜಯ ನಮ್ಮ ಕಡೇ ಎಂಬಂತೇ ಕೊನೆಯ ಹೊಡೆತವನ್ನು ಪ್ರೇಕ್ಷಕರು ಕುಳಿತಿರುವೆಡೆಗೆ ಅಟ್ಟಿದಾಗ.. ವಂದೇ ಮಾತರಂ! ವಂದೇ ಮಾತರಂ! ನಾವುಗಳು ೨೮ ವರ್ಷಗಳ ನಂತರ ವಿಶ್ವ ಛಾಂಪಿಯನ್ಸ್! ನಿರೀಕ್ಷೆಯನ್ನು ನಿಜ ಮಾಡಿದ್ದೇವೆ.

ದೇಶಕ್ಕೆ ದೇಶವೇ ಅಂದಿನ ರಾತ್ರಿ ಸಂಭ್ರಮಿಸಿತು. ಪಟಾಕಿಯನ್ನು ಹಚ್ಚುವುವವರು, ಕೊಗುವವರು, ನರ್ತಿಸುವವರು, ಕುಡಿಯುವವರು, ಸಿಹಿ ಹಂಚುವವರು, ಒಬ್ಬರಿಗೊಬ್ಬರು ತಬ್ಬಿಕೊಂಡು ತಮ್ಮ ಆನಂದ ಬಾಷ್ಫವನ್ನು ಹರಿಸಿಯೇ ಬಿಟ್ಟರು.

ಟಿ.ವಿ ಪರದೆಯ ಮೇಲೆ ಆ ಎಲ್ಲಾ ನಮ್ಮ ಆಟಗಾರರು ಕನಸಿನಲ್ಲಿಯೇ ತೇಲುವುತ್ತಿರುವೆವು ಎಂಬಂತೆ ಆನಂದ, ಸಂತೋಷದ ಕಟ್ಟೆಯನ್ನೇ ಹೋಡೆದು ಹೋಗಿರುವಂತೆ ಸಂಭ್ರಮಿಸಿಬಿಟ್ಟರು.

ಕೋಟಿ ಕೋಟಿ ರೂಪಾಯಿಗಳ ಬಹುಮಾನದ ಹೊಳೆಯೇ ಹರಿದು ಬಿಟ್ಟಿತು. ಮಂತ್ರಿಗಳು, ರಾಜ್ಯಗಳು ತಮ್ಮ ಕನಸನ್ನು ನನಸು ಮಾಡಿದ ನಮ್ಮ ನೆಚ್ಚಿನ ಆಟಗಾರರಿಗೆ ವಿವಿಧ ರೀತಿಯ ಬಹುಮಾನಗಳ ನದಿಯನ್ನೇ ಹರಿಸಿಬಿಟ್ಟರು.

ಈ ಒಂದು ಸುವರ್ಣ ಕ್ಷಣಗಳಿಗೆ ಸಾಕ್ಷಿಯಾದ ನಾವುಗಳೇ ಧನ್ಯರು ಎಂಬಂತೆ ಪ್ರತಿಯೊಬ್ಬರು ಭಾವಿಸಿದರು. ಅದು ನಿಜ ನಮ್ಮ ದೇಶದಲ್ಲಿ ಕ್ರಿಕೆಟ್ ಗೆ ಇರುವಂತಹ ಪ್ರೋತ್ಸಾಹ ಬೇರೆ ಯಾವ ಆಟಕ್ಕೂ ಇಲ್ಲ. ಅದು ನಮ್ಮ ಉಸಿರು ಎಂಬ ಮಟ್ಟಕ್ಕೆ ನಮ್ಮನ್ನೇಲ್ಲಾ ಆಕ್ರಮಿಸಿಕೊಂಡಿದೆ. ಕ್ರಿಕೆಟ್ ದೇವರನ್ನು ಕೊಟ್ಟ ನಾಡು ಎಂದು ವಿಶ್ವ ಪ್ರಸಿದ್ಧಿಯಾಗಿದೆ.

ಇಂದು ಯಾವುದೇ ಮಗು ಹುಟ್ಟಿದಾಕ್ಷಣ ನಮ್ಮಗಳ ಕನಸು ಮುಂದೆ ಇವನು ಸಚಿನ್ ಮಾತ್ರ ಆಗಲಿ ಎಂಬಂತೆ ಚಿಕ್ಕ ಬ್ಯಾಟ್, ಬಾಲುಗಳನ್ನು ಕಕ್ಕುಲಾತಿಯಿಂದ ಕೊಡಿಸುತ್ತೇವೆ. ಯಾಕೆಂದರೇ ಅಲ್ಲಿ ಕೋಟಿ ಕೋಟಿ ವೈವಾಟು ಇದೆ, ಹೆಸರು ಇದೆ, ಗೌರವವಿದೆ. ಆದರೇ ಅದಕ್ಕೆ ಸಾಕಷ್ಟು ಪರಿಶ್ರಮದ ಅಗತ್ಯವಿದೆ ಎಂಬುದು ಹೋಗುತ್ತಾ ಹೋಗುತ್ತಾ ತಿಳಿಯುವುದು.

ಈ ಕ್ರೀಡೆ ಒಂದು ಕ್ರೀಡೆಯನ್ನಾಗಿ ಇಂದು ವಿಶ್ವ ನೋಡುತ್ತಿಲ್ಲ. ಇದೊಂದು ಉದ್ಯಮವಾಗಿದೆ. ಅಲ್ಲಿ ಹಣದ ಹೊಳೆಯನ್ನೇ ಹರಿಸುತ್ತಾರೆ. ಸೋತರು ದುಡ್ಡು. ಗೆದ್ದರು ದುಡ್ಡು. ಈ ಕ್ರೀಡೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ತಂಡಗಳಿಗೆ ಆಯ್ಕೆಯಾಗಲು ವಿವಿಧ ಲಾಭಿ, ಸಿಪಾರಸ್ಸು ಇತ್ಯಾದಿ ಬೇಕಾಗುತ್ತವೆ. ಅದು ಅಷ್ಟು ಸುಲಭದ ಮಾತಲ್ಲಾ ಬಿಡಿ.

ಆದರೆ ವಿಶ್ವಕಪ್ ಆಟವನ್ನು ಸತತ ಒಂದು ತಿಂಗಳು ನಮ್ಮ ಭಾರತೀಯರು ತಮ್ಮ ತುಂಬು ಹೃದಯದಿಂದ ನಿಜವಾದ ದೇಶಾಭಿಮಾನದಿಂದ ನೋಡಿ ನಮ್ಮವರನ್ನು "ಗೆದ್ದು ಬಾ ಭಾರತ" ಎಂದು ಹರಸಿದ್ದರೂ.

ಸಾಮಾನ್ಯ ಪ್ರಜೆಗೆ ಇದು ಯಾವುದು ಬೇಕಾಗಿಲ್ಲ. ತಾನು ಗೆಲ್ಲಬೇಕು, ತನ್ನ ದೇಶ ಗೆಲ್ಲಬೇಕು ಅದು ನಮ್ಮ ತಂಡದ ಮೊಲಕ ಎಂದು ಬಯಸುತ್ತಾನೆ. ಇದು ಇರಬೇಕು. ಅದೇ ಕ್ರೀಡಾ ಸ್ಫೂರ್ತಿ!

ದೇಶ ದೇಶಗಳ ಗಡಿಯನ್ನು ಕ್ರೀಡೆಯ ಮೂಲಕ ಮಾತ್ರ ಅಳಿಸಲು ಸಾಧ್ಯ ಎಂಬುದು ನಿಜಾವಾಗಬೇಕು. ಮತ್ತು ಎಲ್ಲರನ್ನು ಎಲ್ಲರೂ ಪ್ರೀತಿಸಲೂ ಪ್ರಾರಂಭಿಸಬೇಕು. ಇದು ನಮ್ಮ ನಮ್ಮಗಳಿಂದ ರಾಜ್ಯ, ದೇಶ, ಖಂಡಗಳವರೆಗೆ ಹರಿಯಬೇಕು.

ಹರಿಯುತ್ತಿರಲಿ ನಿತ್ಯನೂತನವಾಗಿ.