ಶುಕ್ರವಾರ, ಜನವರಿ 28, 2011

ಕನ್ನಡ ಜಾತ್ರೆ...ಜನಮನಗಳ ಯಾತ್ರೆ

ಪುನಃ ಪ್ರತಿ ವರ್ಷದಂತೆ ಈ ಭಾರಿಯು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಮ್ಮ ಕರ್ನಾಟಕದ ಹೆಮ್ಮೆಯ ರಾಜಾಧಾನಿಯಾದ ಬೆಂಗಳೂರಿನಲ್ಲಿ ಪೆಬ್ರವರಿ ಮೊದಲ ವಾರದಲ್ಲಿ ನಡೆಸುತ್ತಿದ್ದಾರೆ. ಸಮ್ಮೇಳನಾಧ್ಯಕ್ಷರಾಗಿ ಹಿರಿಯರು ಕನ್ನಡ ಪಂಡಿತರು ನಡೆದಾಡುವ ಕನ್ನಡ ನಿಘಂಟು ಎಂದು ಮನೆ ಮಾತಾಗಿರುವ ಜಿ. ವೆಂಕಟಸುಬ್ಬಯ್ಯರವರನ್ನು ಆರಿಸಲಾಗಿದೆ. ಅವರ ಬಹು ಜನಪ್ರಿಯ ಅಂಕಣವಾದ ಇಗೋ ಕನ್ನಡ ಪ್ರಜಾವಾಣಿಯಲ್ಲಿ ಹಲವಾರು ವರ್ಷಗಳ ಕಾಲ ಜನಸಾಮಾನ್ಯರ ಕನ್ನಡ ಪದಗಳ ಉಪಯೋಗ ಮತ್ತು ಅದರ ಪ್ರಾಮುಖ್ಯತೆಯನ್ನು ಓದುಗರ ಪ್ರಶ್ನೆಗಳ ಮೊಲಕ ಉತ್ತರವನ್ನು ಪ್ರತಿ ವಾರ ಕೊಡುತ್ತಾ ಕನ್ನಡವನ್ನು ಬೆಳೆಸುವ ಕೆಲಸವನ್ನು ನಡೆಸಿದರು.



ಹೀಗೆ ಕನ್ನಡ ನಾಡು ನುಡಿಯ ಬೆಳವಣಿಗೆಗೆ ಅಪಾರವಾದ ಪರಿಶ್ರಮವನ್ನು ಪಟ್ಟಿರುವವರನ್ನು ಈ ರೀತಿಯ ದೊಡ್ಡ ಕನ್ನಡ ಸಮ್ಮೇಳನದಲ್ಲಿ ಸನಿಹದಿಂದ ಕಾಣುವುದು ಕನ್ನಡಿಗರ ಅದೃಷ್ಟ.




ನಾನು ಸ್ವತಃ ಬಾಗಿಯಾದ ಕನ್ನಡದ ಸಮ್ಮೇಳನಗಳೆಂದರೇ ಶಿವಮೊಗ್ಗ ಮತ್ತು ಚಿತ್ರದುರ್ಗದ ಸಮ್ಮೇಳನಗಳು. ಮೊದಲನೆಯದರಲ್ಲಿ ಕೊನೆಯ ದಿನ ಬಾಗವಹಿಸಿ ಒಂದೀಷ್ಟು ಪುಸ್ತಕಗಳನ್ನು ಖರೀದಿಸಿಕೊಂಡು ಬಂದಿದ್ದೇ. ಆದರೇ ಚಿತ್ರದುರ್ಗದ ಸಮ್ಮೇಳನದಲ್ಲಿ ಪೂರ್ಣವಾಗಿ ಮೂರು ದಿನಗಳು ಹೋಗಿ ಅಲ್ಲಿ ನಡೆಯುತ್ತಿದ್ದ ಸಾಹಿತ್ಯ ಕಾರ್ಯಕ್ರಮಗಳಲ್ಲಿ, ಗೋಷ್ಠಿಗಳಲ್ಲಿ ಹಿರಿಯರುಗಳು ಮಾತನಾಡಿದ ನುಡಿಗಳನ್ನು ಕಿವಿಗೆ ಹಾಕಿಕೊಂಡಿದ್ದೇ.


ಇತ್ತೀಚೆಗೆ ಸಾಹಿತ್ಯ ಸಮ್ಮೇಳನಗಳು ಕೇವಲ ಪೂರ್ಣವಾಗಿ ಸಾಹಿತ್ಯ ಸಮ್ಮೇಳನವಾಗಿ, ಸಾಹಿತಿಗಳಿಗೆ, ವಿದ್ಯಾವಂತರಿಗೆ ಮಾತ್ರ ಸೀಮಿತವಾಗಿಲ್ಲ. ಅದು ಅನಕ್ಷರರುಗಳಿಗೂ, ಸಾಮಾನ್ಯರಿಗೂ ಇಷ್ಟವಾಗುವ ರೀತಿಯಲ್ಲಿ ಒಂದು ಕನ್ನಡ ಜಾತ್ರೆಯಾಗಿ ಮಾರ್ಪಟಾಗಿದೆ. ಅದು ಒಂದು ರೀತಿಯಲ್ಲಿ ಉತ್ತಮ. ಅಂದ ಕ್ಷಣಕ್ಕೆ ಅದು ಪೂರ್ಣವಾಗಿ ಗದ್ದಲದಲ್ಲಿಯೇ ಮತ್ತು ಜನಜಂಗುಳಿಯಲ್ಲಿಯೇ ಕಳೆದು ಹೋಗಬಾರದು. ವರ್ಷಕ್ಕೆ ಒಮ್ಮೆ ನಡೆಯುವ ಈ ರೀತಿಯ ಮುಖ್ಯ ಸಮ್ಮೇಳನಗಳಲ್ಲಿ. ನಮ್ಮ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಯ ಬಗೆಗೆ, ಇಂದಿನ ನಮ್ಮ ಈ ಹೈಟೆಕ್ ಯುಗದಲ್ಲಿ ನಮ್ಮ ಮಾತೃ ಭಾಷೆಯ ಉಳಿವು ಅದರಿಂದ ನಮ್ಮ ತರುಣ ಜನಾಂಗದ ಬದುಕು ಅಸನು ಮಾಡುವ ಮತ್ತು ಅದರೊಡನೆ ಅವರುಗಳ ಮನಸ್ಸು ನಮ್ಮ ಕನ್ನಡ ಭಾಷೆಯ ಕಡೆಗೆ ಪ್ರೀತಿಯನ್ನು ಹರಿಸುವಂತೆ ಮಾಡುವಲ್ಲಿ ಯಾವ ರೀತಿಯ ಮುಂದಿನ ಹೆಜ್ಜೆಗಳನ್ನು ಸಾಮಾನ್ಯ ಜನ, ಸಾಹಿತಿಗಳು, ಸರ್ಕಾರಗಳು, ಸಂಘ ಸಂಸ್ಥೆಗಳು ಮಾಡಬಹುದು ಎಂಬುದರ ಬಗ್ಗೆ ಚರ್ಚೆಯನ್ನು ಮಾಡುವ ಕಡೆಗೆ ನೋಟ ಹರಿಸಬೇಕು ಎಂಬುದು ಇಂದಿನ ಸಮಯದಲ್ಲಿ ಅತ್ಯಗತ್ಯ.


ಕೇವಲ ಕನ್ನಡ ಎಂದರೇ ಅದು ನಮ್ಮ ಹಳ್ಳಿಯ ಭಾಷೆ ಎಂಬ ಭಾವನೆಯನ್ನು ತೊಳೆಯಬೇಕು. ಅದಕ್ಕಿರುವ ನಿಜವಾದ ತಾಕತ್ತನ್ನು ಇಂದು ಇಂಗ್ಲೀಷ್ ಮತ್ತು ಕಾನ್ವೇಂಟ್ ಎಂದು ದಾಂಗುಡಿಯನ್ನು ಇಡುತ್ತಿರುವ ನಮ್ಮ ಬೆಂಗಳೂರು ಮಂದಿ ಮತ್ತು ಎಲ್ಲಾ ನಗರದ ಜನರುಗಳಿಗೆ ಮನನ ಮಾಡಿಕೊಡುವ ಕೆಲಸ ನಮ್ಮ ಸಾಂಸ್ಕೃತಿಯ ನೆತಾರರ ಬಹುಮುಖ್ಯ ಜವಾಬ್ದಾರಿಯಾಗಿದೆ.
ಕನ್ನಡವೆಂದರೇ ಕೇವಲ ಕಾರ್ಪೋರೇಶನ್ ಶಾಲೆಯಲ್ಲಿ ಸಿಗುವ ಒಂದು ಶಿಕ್ಷಣ ಮಾದ್ಯಮವಾಗಬಾರದು.




ನಾನು ಗಮನಿಸಿದಂತೆ ಮೂರು ದಿನಗಳಲ್ಲಿ ನಡೆಯುವ ಮುಂಜಾನೆಯಿಂದ ಸಂಜೆಯವರೆಗೆ ನಡೆಯುವ ವಿವಿಧವಾದ ಕನ್ನಡ ಕಾರ್ಯಕ್ರಮಗಳು,ಗೋಷ್ಠಿಗಳು ಮತ್ತು ಅದರಲ್ಲಿ ಬಾಗವಹಿಸುವ ಹಿರಿಯರು, ಸಂಸ್ಕೃತಿಯ ಪ್ರತಿಭೆಗಳು ಅವರ ಮಾತುಗಳು.. ನಿಜವಾಗಿಯೂ ತಲುಪವವರಿಗೆ ಸರಿಯಾಗಿ ತಲುಪುತ್ತಿದೀಯಾ ಎಂಬುದನ್ನು ಸಂಘಟಕರುಗಳು ನೋಡಬೇಕು. ಮತ್ತೇ ಅದೇಯಾದ ಪುನರಪಿ ಕಾರ್ಯಕ್ರಮಗಳು.. ಅಲ್ಲಿ ಯಾವುದೇ ರೀತಿಯಲ್ಲಿ ಸಾಮಾನ್ಯ ಜನರುಗಳಿಗೆ ಕೂತು ಕೇಳಿಸಿಕೊಳ್ಳೋಣ ಎನಿಸುವಂತೆ ಇಲ್ಲದಿರುವುದು. ಒಂದೊಂದು ಕಾರ್ಯಕ್ರಮಗಳಲ್ಲಂತೂ ವೇದಿಕೆಯ ಮೇಲೆ ಆಸೀನರಾದ ಸಂಖ್ಯೆಗೂ ಕಮ್ಮಿಯಾಗಿ ವೇದಿಕೆಯ ಮುಂದೆ ಇರುವುದು ನೋಡಿದರೇ ಯಾವ ಉದ್ದೇಶದಿಂದ ಈ ರೀತಿಯ ಕಾರ್ಯಕ್ರಮಗಳನ್ನು ರೂಪಿಸಿರುತ್ತಾರೆ ಎಂಬುದು ಪ್ರಶ್ನಾರ್ಥಕವಾಗಿಯೇ ಉಳಿಯುತ್ತದೆ.


ಈ ರೀತಿಯ ಸಾಹಿತ್ಯ ಸಂಸ್ಕೃತಿಯ ಚಿಂತನೆಯನ್ನು ಮಾಡುವ ಬಹುಮುಖ್ಯ ಕಾರ್ಯಕ್ರಮಗಳು ಹೆಚ್ಚು ಆಕರ್ಷಕವಾಗಿರುವಂತೆ ಮಾಡಬೇಕು. ಮತ್ತು ಸಾಮಾನ್ಯ ಜನರುಗಳನ್ನು, ತರುಣರನ್ನು ಸೆಳೆಯುವಂತೆ ಮಾಡಬೇಕು. ಸಾಹಿತ್ಯ ಎಂದರೇ ತುಂಬ ಸೀರಿಯಸ್ ಆಗುವಂತೆ ಆಗಬಾರದು. ಯಾಕೆಂದರೇ ಜನಸಾಮಾನ್ಯರುಗಳ ನಿತ್ಯವಾದ ಜೀವನ ಮತ್ತು ಅವರುಗಳು ಈ ಸಾಹಿತ್ಯದ ಮೂಲಕ ತಮ್ಮ ಅರಿವು, ಸಂತೋಷ ಬದುಕಿಗೊಂದು ಅರ್ಥವನ್ನು ಕಂಡುಕೊಳ್ಳುತ್ತಾರೆ.



ಒಂದೊಂದು ಕಾರ್ಯಕ್ರಮಗಳು ಎಷ್ಟೊಂದು ಬೋರ್ ಒಡೆಸೂತ್ತವೇ ಎಂದರೇ.. ಆ ವೇದಿಕೆಯ ಮೇಲೆ ಕುಳಿತಿರುವ ಬಹು ದೊಡ್ಡ ಕ್ಯೂ ನೋಡಿದರೇ ಸಭೀಕರುಗಳು ಹೆದರಿಕೊಳ್ಳುವಂತಾಗುತ್ತದೆ. ಆ ರೀತಿಯಲ್ಲಿ ಯಾಕಾದರೂ ಸಂಘಟಕರುಗಳು ಈ ರೀತಿಯ ಕಾರ್ಯಕ್ರಮಗಳನ್ನು ಯಾವ ಭರವಸೆಯ ಮೇಲೆ ಸೇರಿಸಿರುತ್ತಾರೋ.. ಇವೇ ಗೋಷ್ಠಿಗಳು ಇರಬೇಕು.. ಇಷ್ಟು ಜನರುಗಳು ಬೇಕೆ ಬೇಕು ಎಂಬಂತೆ ಈ ಕಾರ್ಯಕ್ರಮಗಳು ಇರಬಾರದು.



ಬಹು ದೂರದ ಊರುಗಳಿಂದ ಸಹೃದಯರುಗಳು ತಮ್ಮ ಪ್ರೀತಿ ಪಾತ್ರ ಕಣ್ಣಿಗೆ ಕಾಣದ ತನ್ನ ನೆಚ್ಚಿನ ಲೇಖಕರುಗಳನ್ನು, ಕವಿಗಳನ್ನು, ವಿಮರ್ಶಕರುಗಳನ್ನು, ಸಾಹಿತಿಗಳನ್ನು ಹತ್ತಿರದಿಂದ ತಮ್ಮ ಕಣ್ಣಾರೆ ಕಾಣಬೇಕು.. ಅವರ ಹಸ್ತಲಾಘವನ್ನು ಮಾಡಬೇಕು. ಅವರ ಮುಂದಿನ ಹೊಸ ಪುಸ್ತಕಗಳ ಬಗ್ಗೆ ವಿಚಾರಿಸಬೇಕು... ಎಂಬ ಆಸೆಯಿಂದ ಬರುತ್ತಾರೆ. ಆದರೇ ಅಲ್ಲಿ ಅವರುಗಳು ಯಾರನ್ನು ಅರಿಸಿ ಬರುತ್ತಾರೋ ಅವರುಗಳ ದರ್ಶನವೇ ಸಿಗದೇ .. ಹ್ಯಾಪು ಮೊರೆಯನ್ನು ಹಾಕಿಕೊಂಡು ಹೋಗುವಂತಾಗುತ್ತದೆ.


ಇಂಥ ಕಾರ್ಯಕ್ರಮಗಳು ಕಡಿಮೆ ದಿನಗಳಾದರೂ ಸಹ ವ್ಯವಸ್ಥಿತವಾಗಿ ನಡೆದು. ಕನ್ನಡದ ಪ್ರತಿಯೊಬ್ಬ ಹಿರಿ ಕಿರಿಯ ಸಾಹಿತಿಗಳು ಓದುಗರ ಜೊತೆ ಅಸಕ್ತಿಕರವಾಗಿ ಬಾಗವಹಿಸುವಂತಾಗಬೇಕು. ಅವರುಗಳ ಗೈರು ಹಾಜರಿ ನಿಜವಾಗಿಯೂ ಬೇಸರದ ಸಂಗತಿ. ಇದರ ಬಗ್ಗೆ ಸಾಹಿತ್ಯ ಪರಿಷತ್ ತಕ್ಕ ಕ್ರಮಗಳನ್ನು ತೆಗೆದುಕೊಂಡು ನಮ್ಮ ಕನ್ನಡ ಸಾಹಿತಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವಂತೆ ಮಾಡು ಕೆಲಸವನ್ನು ಮಾಡಬೇಕು.


ಕನ್ನಡ ನುಡಿಯ ಬೆಳವಣಿಗೆಯ ನಾಡಿ ಇರುವುದು ಸಾಮಾನ್ಯ ಕನ್ನಡ ಪ್ರಜೆಯ ಕೈಯಲ್ಲಿರುವುದು. ಅವನು ಮನಸ್ಸು ಮಾಡಿದರೇ ಯಾವುದು ಅಸಾಧ್ಯವಲ್ಲ. ಇಂದು ಕನ್ನಡ ಪುಸ್ತಕದ ಲೋಕದಲ್ಲಿ ಆಗುತ್ತಿರುವ ಬೆಳವಣಿಗೆಗಳು .. ಈ ರೀತಿಯ ಸಾಮಾನ್ಯ ಸಹೃದಯಿಯ ಅಸಕ್ತಿಯಿಂದ.. ಯಾವುದೇ ಇಂಗ್ಲೀಷ್ ಪುಸ್ತಕಗಳಿಗೆ ಸ್ಪರ್ದೆಯನ್ನು ನೀಡುವ ರೀತಿಯಲ್ಲಿ ಆಕರ್ಷಕವಾಗಿ ಪುಸ್ತಕಗಳು ಪ್ರಕಾಶನಗೊಳ್ಳುತ್ತಿರುವುದು ನಾವುಗಳು ಹೆಚ್ಚು ಸಂತೋಷಪಡುವ ಸಂಗತಿ.



ದಾಖಲೆಯ ರೀತಿಯಲ್ಲಿ ಹಿಂದಿನ ಎಲ್ಲಾ ಸಮ್ಮೇಳನಗಳಲ್ಲಿ ಪುಸ್ತಕಗಳ ಭರದ ಮಾರಾಟವಾಗುತ್ತಿರುವುದು.. ಇನ್ನೂ ನಮ್ಮ ಕನ್ನಡಿಗರ ಸಾಹಿತ್ಯ, ಸಂಸ್ಕೃತಿ ಮತ್ತು ಕನ್ನಡತನದ ಬಗ್ಗೆ ಇರುವ ಅಗಾಧ ಒಲವು. ಅದು ಇನ್ನೂ ಹೆಚ್ಚು ಹೆಚ್ಚು ಬೆಳೆಯುವಂತೆ ಉಳಿಸುವುದು ಮತ್ತು ಕಾಯುವುದು ಎಲ್ಲಾ ಸಾಂಸ್ಕೃತಿಕ ರಂಗದ ಕನ್ನಡಿಗರ ಕರ್ತವ್ಯ.


ಕನ್ನಡ ಎಂದರೇ ಪರಕಿಯ ಭಾಷೆಯಾಗಿ ಕಾಣುವ ಎಲ್ಲಾ ನಮ್ಮ ಕನ್ನಡ ನೆಲವನ್ನು, ಗಾಳಿಯನ್ನು, ನೀರನ್ನು ಸೇವಿಸುವ ಹೈಟೆಕ್ ಮಂದಿಯ ಮನಸ್ಸನ್ನು ಪರಿವರ್ತಿಸುವ ಕೆಲಸವನ್ನು ಸರಿಯಾದ ರೀತಿಯಲ್ಲಿ ಆ ಕನ್ನಡ ಭುವನೇಶ್ವರಿಯ ಸಾಥ್ ತೆಗೆದುಕೊಂಡು ನಾವುಗಳು ಮಾಡಬೇಕಾಗಿರುವುದು ಇಂದು ಅತ್ಯವಶ್ಯ.


ಜೈ ಕನ್ನಡ ರಾಜರಾಜೇಶ್ವರಿ!

ಬುಧವಾರ, ಜನವರಿ 26, 2011

ಸ್ವಲ್ಪ ಆಡಜಸ್ಟ್ ಮಾಡ್ಕೊಳ್ಳಿ

ಎಷ್ಟು ಕಷ್ಟವೊ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲ್ಲಿ..



ಸ್ವಲ್ಪ ಹೊಂದಿಕೊಂಡು ಹೋಗಬೇಕಾಪ್ಪ! ಈ ಮಾತು ಹಲವರ ಬಾಯಿಯಿಂದ ಹಲವಾರು ಸಂದರ್ಭಗಳಲ್ಲಿ ಹಲವಾರು ಭಾರಿ ಕೇಳಿರುತ್ತೇವೆ.




ಆ ಸಮಯಕ್ಕೆ ಇದು ಸರಿಯೇನಿಸಿದರೂ ನಂತರ ನಾವೇ ಯೋಚಿಸಿ ಯಾಕೇ ಹೊಂದಿಕೊಂಡು ನಮಗೆ ಇಷ್ಟವಿಲ್ಲದಿದ್ದರೂ ನಮ್ಮ ಅಕ್ಕ ಪಕ್ಕದವರೊಂದಿಗೆ ನಾವು ಹೊಂದಿಕೊಂಡಿದ್ದೇವೆ? ನಿಮ್ಮ ಇಚ್ಛೆಗೆ ನಮ್ಮ ಸಾಥ್ ಇದೆ ಎಂಬ ರೀತಿಯ ಪೋಜು ನೀಡಿರುತ್ತೇವೆ.




ಮಗು ತಾನು ಈ ಜಗತ್ತಿಗೆ ಪಾದಾರ್ಪಣೆ ಮಾಡಿದಾರಭ್ಯ ತಾನು ತನ್ನ ಕಡೆಗಾಲವನ್ನು ಪೂರೈಸುವವರೆಗೆ ಈ ಆಡ್ಜ್ ಸ್ಟಮೆಂಟ್ ಎಂಬ ಪದದ ಮೂಲಕ ತನ್ನ ಎಲ್ಲಾ ಜೀವನದ ವೈವಾಟನ್ನು ನಡೆಸಬೇಕಾಗುತ್ತದೆ.




ಯಾಕೆ ಹೀಗೆ? ಈ ರೀತಿಯ ದ್ವಂದ್ವ?. ಇಚ್ಛಾಶಕ್ತಿಗೆ ವಿರುದ್ಧವಾಗಿ ತೋರಿಕೆಯ ಮುಖವಾಡವಿಲ್ಲದೇ ಬದುಕುಲು ಸಾಧ್ಯವಿಲ್ಲವೇ?

ಈ ಜಗತ್ತಿನ ಜೀವಾನ್ ಜೀವಕೋಟಿಗಳು ಏಕ ರೂಪವಾಗಿರುವುದಿಲ್ಲ. ಏಕ ರೂಪ, ಭಾವನೆ, ಆಸೆ, ನಡಾವಳಿಕೆಗಳನ್ನು ಹೊಂದಿರುವುದಿಲ್ಲ. ಆದ್ದರಿಂದ ತಾನು ಮಾಡುವುದು ಇನ್ನೂಬ್ಬರಿಗಾಗಿ ಅದು ತಾನು ಮಾತನಾಡುವುದರಿಂದ ಹಿಡಿದು ತಾನು ಜೀವಿಸುವ ವಿಧಾನದವರೆಗೂ ಇಷ್ಟವಾಗದೇನೇ ಇರಲು ಇಚ್ಛಿಸುತ್ತೇವೆ.




ಈ ನಮ್ಮ ಸುಂದರ ಮಾನವ ಪ್ರಪಂಚದಲ್ಲಿ ಒಂಟಿ ಜೀವನ ನಿಜವಾಗಿಯೂ ವಿಪರೀತವಾದ ಕಷ್ಟದ ಜೀವನ. ತನ್ನ ಪ್ರತಿಯೊಂದು ಘಟ್ಟಗಳಲ್ಲೂ ಇನ್ನೂಬ್ಬರ ನೆರವು ಮತ್ತು ಸಾಥ್ ಬೇಕೆ ಬೇಕು.




ತಾನು ತನ್ನ ಜೀವನವನ್ನು ಪ್ರಾರಂಭಿಸುವ ಜೊತೆಗಾರರಾದ ತನ್ನ ತಂದೆ - ತಾಯಿ, ಬಂಧು ಬಳಗದವರಿಂದ ಮೊದಲು ಮಾಡಿ ತಾನು ಬೆಳೆದಂತೆ ತನ್ನ ಸ್ನೇಹಿತರು, ತನ್ನ ಜೀವನ ಸಂಗಾತಿ ಮತ್ತು ತಾನು ಒಡನಾಡುವ ಎಲ್ಲಾ ವ್ಯಕ್ತಿಗಳೊಂದಿಗೂ ಅದರದೇ ಆದ ಒಂದು ವಿಧವಾದ ಅಲಿಖಿತ ಶಾಸನದಂತೆ ಒಂದು "ಹೊಂದಾಣಿಕೆ" ಯೆಂಬ ತೆರೆ ಆ ಆಯಾ ವ್ಯಕ್ತಿಗಳ ಮಧ್ಯೆ ದ್ವಿಮುಖವಾಗಿ ಜಾರಿಯಲ್ಲಿರುತ್ತದೆ. ಆ ಹೊಂದಾಣಿಕೆ ಯಾವ ರೀತಿಯಲ್ಲಾದರೂ ಆಗಿರಬಹುದು.




ಈ ಬಗೆಯ ಮನುಷ್ಯ ಮನುಷ್ಯರೊಡನೆ ತನ್ನದೇಯಾದ ಗಡಿಯನ್ನು ವ್ಯಕ್ತಿ ಜೀವನ ಪೂರ್ತಿ ಕಟ್ಟಿ ಕೊಂಡಿರುತ್ತಾನೆ. ಅದಕ್ಕೆ ಈ ನಮ್ಮ ಭ್ಯವ್ಯ ಭಾರತ ಸಂಸ್ಕೃತಿಯಲ್ಲಿ ನಮ್ಮದೇಯಾದ ಕರುಣರಸವಾದ ಕುಟುಂಬ, ಸ್ನೇಹ, ಸಂಬಂಧಗಳು ವಿಶ್ವವ್ಯಾಪಿಯಾಗಿರುವುದು.




ಈ ಹೊಂದಾಣಿಕೆಯೆಂಬ ಬೀಜ ಮಂತ್ರ ಮೊಟ್ಟ ಮೊದಲು ನಮ್ಮ "ಅಹಾಂ" ನ ಧಮನವೇ ಸರಿ. ಬೇರೆಯವರೊಂದಿಗೆ ತಾನು ಅವರಂತಯೇ ಎಂಬ ನಡಾವಳಿಯ ಮೂಲ ಮೆಟ್ಟಿಲು ಎಂದರೇ ತಪ್ಪಾಗಲಾರದು.




ಎರಡು ಜೀವಗಳ ಸಮ್ಮಿಲನ ಅಂದರೆ ಆ ಎರಡು ಜೀವಿಗಳ ಭಾವನೆ ಒಂದೇ ಗತಿಗೆ ಬರಬೇಕಾಗುತ್ತದೆ. ಆ ಸಮಯದಲ್ಲಿ ತಾನೇ ದ್ವಿಮುಖವಾಗಿ ನಮ್ಮ ನಿಮ್ಮೆಲ್ಲಾರ ಭಾವರಸ, ಅಭಿವ್ಯಕ್ತಿ ವಿನಿಮಯವಾಗುವುದು.




ಈ ರೀತಿಯ ಮನೊಶ್ಯಕ್ತಿ ಈ ಇಡೀ ಮಾನವ ಸಂಕುಲದಲ್ಲಿ ಗೊತ್ತಿಲ್ಲದ ರೀತಿಯಲ್ಲಿ ನಿರಂತರವಾಗಿ ಜಾರಿಯಲ್ಲಿರುವುದು.
ಅದು ನಮ್ಮ ಸುತ್ತಲಿನವರ ಸಂತೋಷಕ್ಕೂ ಕಾರಣೀಭೂತವಾಗಿರುತ್ತದೆ. ಕೆಲವು ಸಮಯದಲ್ಲಿ ವಿವಿಧ ವ್ಯಕ್ತಿಗಳ ಮಧ್ಯೆ ಈ ಸಂಬಂಧ ಕಷ್ಟಕರವಾಗಬಹುದು. ಆಗಲೇ ವ್ಯಕ್ತಿಗಳ ನಡುವೆ ವಿರಸ, ವೈರತ್ವ ಮುಂತಾದ ಬಿನ್ನಾಭಿಪ್ರಾಯಗಳು ಉಂಟಾಗುವುದು.




ಈ ರೀತಿಯ ನಡಾವಳಿ ಕೇವಲ ಇಬ್ಬರು ವ್ಯಕ್ತಿಗಳ ನಡುವೆಯೇ ಫಲಿಸಿ ಅದು ಕುಟುಂಬ - ನೆರೆಹೊರೆ, ರಾಜ್ಯ, ದೇಶ ಗಳ ಮಟ್ಟಕ್ಕೆ ಹೋಗಲೂಬಹುದು.




ಹೊಂದಾಣಿಕೆಯೆಂಬುದು ನಮ್ಮ ಇಚ್ಛಾಶಕ್ತಿ ಮತ್ತು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಧಮನಕಾರಿ ಭಾವನೆಯಲ್ಲಾ. ಇಡೀ ಸಮಾಜ ಏಕ ಎಂಬ ಭಾವನೆಯನ್ನು ಸ್ಫುರಿಸಿ ಎಲ್ಲರೂ ಒಂದೇ ಎಂಬ ಮಹನ್ ಮೇಲು ಮಂತ್ರವನ್ನು ತಿಳಿಯಪಡಿಸುವ ಸಾಧನ.




ಹಾಗೆಯೇ ನಾವು ಬದುಕಿ ಬೇರೆಯವರನ್ನು ಬದುಕಲು ಬಿಡವುದು. ನಾವು ಅವರೇ ಎಂಬ ವಿಶಾಲ ಮನೋಭಾವವನ್ನು ಸಾರುವಲ್ಲಿ, ಎಲ್ಲೇಲ್ಲಿ ಯಾವಾಗ ಬಳಸುವಲ್ಲಿ ಉಪಯೋಗಿಸುವ ಯೋಚಿಸುವ ಒಂದು ಮನೋಧರ್ಮ.




ಕೆಲವೊಮ್ಮೆ ಕೆಲವು ಅನಿವಾರ್ಯತೆಗಳೂ ನಮ್ಮನ್ನು ಈ ಹೊಂದಾಣಿಕೆಗೆ ಅನುವು ಮಾಡುತ್ತವೆ. ಮತ್ತೇ ಕೆಲವೊಮ್ಮೆ ಇದು ಬೇಡ ಎಂಬ ಮನೋಭಾವ ಬರುತ್ತದೆ. ಸಮಯ ಸಂದರ್ಭವೇ ಇದರ ಜಾರಿಗೆ ಮತ್ತು ವೃದ್ಧಿಗೆ ಪೂರಕ ಪೋಷಕಗಳು. ಕೇವಲ ನಾವುಗಳು ಅದರಂತೆ ಸ್ಪಲ್ಪ ಗಮನಿಸಿ ಹೆಜ್ಜೆ ಇಡಬೇಕು ಅಷ್ಟೇ.

ಶನಿವಾರ, ಜನವರಿ 22, 2011

ಕನಸು

ಬೆಳಕಿರದ ದಾರಿಯಲ್ಲಿ ನಡೆದೇನು
ಆದರೆ ಕನಸುಗಳಿರದ ದಾರಿಯಲ್ಲಿ ನಡೆಯಲಾರೆ - ಪುರು


ಮೇಲಿನ ಸಾಲುಗಳನ್ನು "ಯಯಾತಿ" ನಾಟಕದಲ್ಲಿ ಪುರುವಿನ ಬಾಯಿಯಿಂದ ಕೇಳಿದ್ದೇವೆ.

ಮನುಷ್ಯ ಬಾಲ್ಯದಿಂದ - ಮುಪ್ಪಿನವರೆಗೆ, ಜೀವವಿರುವರೆಗೂ ಕನಸುಗಳು ಇಲ್ಲವಾದರೆ ಬಾಲ್ಯವೇ ಕೊನೆಯ ಜೀವನವಾಗುವುದರಲ್ಲಿ ಸಂದೇಹವಿಲ್ಲ. ಮತ್ತೇ ಕೆಲವರು ಕೇಳಬಹುದು ಬಾಲ್ಯವೇ ಸುಂದರ ಜೀವನ, ನಾವೆಲ್ಲಾ ಸಂತೋಷದ ದಿನಗಳನ್ನು ಅನುಭವಿಸಿದ್ದೇವೆ ಎಂದಾದರೆ ಅದು ನಾವುಗಳು ಮಕ್ಕಳಾಗಿದ್ದ ದಿನಗಳೆಂದು.

ಹೌದು! ಮಕ್ಕಳ ದಿನಗಳು ಸುಂದರ ಸ್ವಪ್ನಗಳು. ಮರೆಯಲಾರದ ಮಧುರ ಸವಿ ಸವಿ ನೆನಪುಗಳು. ಆದರೇ ಅದು ಜೀವನದ ಹೊಳೆಯ ಒಂದು ಘಟ್ಟ ಮಾತ್ರವೇ ಸರಿ.

ಬಾಲ್ಯದಲ್ಲಿ ನಮಗೆಲ್ಲಾ ವಿವಿಧ ಕನಸುಗಳ ಚಿಕ್ಕ ಚಿಕ್ಕ ಕೂಸು ಮರಿಗಳು ಮೂಢಲಾರಂಭಿಸುತ್ತಿದ್ದವು. ಯಾಕೆಂದರೆ ನಾವುಗಳು ಬಾಲ್ಯವನ್ನೇ ಅನುಭವಿಸುತ್ತಾ ಅನುಭವಿಸುತ್ತಾ ಇಡೀ ಜೀವನವೆಂಬ ಅಧ್ಯಯವನ್ನು ಕಳೆಯಲು ಸಾಧ್ಯವಿಲ್ಲ. ದಿನ ದಿನವೋ ಹೊಸ ಹೊಸ ಪ್ರಭೆಗೆ ನಮ್ಮ ದೇಹ, ಮನಸ್ಸು ಹಾತೊರೆಯುತ್ತದೆ. ಅದು ಸಾಕಾರವಾಗುವುದು ಕನಸುಗಳ ಮೊಲಕ.

ಕನಸು ಎಲ್ಲಿಂದ ಬರುತ್ತದೆ? ನಮ್ಮ ಸುಂದರ ಪರಿಸರ ನಮ್ಮ ಸುತ್ತ ಮುತ್ತಲಿನ ಸಮಾಜದಿಂದ, ಉನ್ನತಾದುದ್ದು ಎಂಬುದು ಯಾವುದೀದಿಯೋ ಅವುಗಳೆಲ್ಲಾ ಸುಂದರ ಕನಸುಗಳು ಅಲ್ಲವಾ?

ಆದರ್ಶದ ಪ್ರತಿಬಿಂಬವೇ ಕನಸು. ಯಾರು ಯಾವಾಗಲೂ ಕೆಟ್ಟದ್ದನ್ನು, ಅಸಂತೋಷವನ್ನು ಆಶಿಸಲಾರ ಮತ್ತು ಅದರಲ್ಲಿ ಕೊನೆಯವರೆಗೂ ಇರಲಾರ. ಸಂತೋಷದ ಸಾಕಾರಕ್ಕೆ ಅಸಂತೋಷದ ಘಳಿಗೆಗಳು, ಅನುಭವಿಸಿದ ಕೆಟ್ಟ ಅವಧಿಗಳೆ ಮೊದಲ ಮೆಟ್ಟಿಲು.

ನಮ್ಮೆಲ್ಲಾರ ಜೀವನ ನಿರಂತರ ಹರಿಯುವ ಜೀವನದಿ. ಅದು ಎಲ್ಲಿಯು ನಿಲ್ಲಲಾರದೆ ನಮ್ಮ ಭಾವ, ಭಕುತಿಗೆ ನಿಲುಕರಾದೆ ಅದು ತನ್ನ ಕಾರ್ಯವನ್ನು ಚಾಚು ತಪ್ಪದೇ ವಿವಿಧ ಘಟ್ಟಗಳನ್ನು ಏರಿ ತನ್ನ ಪಾಡಿಗೆ ತಾನು ಸಾಗುತ್ತಿರುತ್ತದೆ.

ಈ ವಿವಿಧ ಸ್ತರಗಳ ಸಂಗಮದ ಸಮಯದಲ್ಲಿ ನಮ್ಮಲ್ಲಿನ ರಾಗ, ದ್ವೇಷ, ಆಕಾಂಕ್ಷೆಯ ಹೆಚ್ಚು ಕಡಿಮೆಯ ಮೇಳದಂತೆ ನಮಗೆಲ್ಲಾ ಹಲವಾರು ರೀತಿಯ ಕನಸುಗಳು ಮೋಡುತ್ತವೆ. ಆ ಕನಸುಗಳ ಹಿಡೇರಿಕೆಗೆ ಪುನಃ ನಮ್ಮ ಜೀವನದ ವಿವಿಧ ಸಮಯಗಳನ್ನು ಪೂರಕವಾಗಿ ನಿಯೋಜಿಸಬೇಕಾಗುತ್ತದೆ.

ನಮ್ಮ ಸುತ್ತಲಿನ ಸಮಾಜ, ಜನ, ನಮ್ಮವರಿಂದ ನಮ್ಮ ಶಕ್ತಿಗನುಸಾರವಾಗಿ ಕೆಲವು ಹಿಡೇರಲುಬಹುದು. ಕೆಲವು ಕನಸುಗಳು ಕನಸುಗಳಾಗಿಯೇ ನಮ್ಮ ಜೀವನಪರ್ಯಾಂತ ನಮ್ಮನ್ನು ಕಾಡಲೂಬಹುದು.

ಹಾಗಾದರೇ ಕನಸುಗಳು ನಮ್ಮ ಸಂತೋಷದ ದಿನಗಳಿಗೆ ಕಡಿವಾಣವಿದೆ ಎಂದು ನಮಗನಿಸಬಹುದು.

ಹೌದು! ನಾವೆಲ್ಲಾ ತಿಳಿದಿರುವಂತೆ ನಮ್ಮ ಸುಖ, ಸಂತೋಷದ ಕಲ್ಪನೆಯೆಂದರೇ ಆರಾಮಾಗಿ ಯಾವುದೇ ತೊಂದರೆಯಿಲ್ಲದೆ ನಮ್ಮ ಜೀವನ ಸಾಗಿಸುವುದು ಎಂದು.

ಈ ರೀತಿಯ ಉನ್ನತ ಕನಸುಗಳಿಗಾಗಿ ಹಗಲು - ಇರುಳು ಶ್ರಮಪಡಬೇಕು. ಇದು ನಾವು ಬೆಳೆಯುತ್ತಿರುವ, ಜೀವಿಸುತ್ತಿರುವ ಸ್ಥಿತಿಯ ಮೇಲೆ ಪೂರ್ಣಾವಲಂಬಿತವಾಗಿರದಿದ್ದರು ಸ್ವಲ್ಪವಾದರೂ ಅವಲಂಬನೆ ಇದ್ದೇ ಇರುತ್ತದೆ.

ಜಡವಾದ ಸುಖ ನಾವು ಶ್ರಮಪಡದೆ ಬಂದ ಗೆಲುವುಗಳು ಕೇವಲ ಉರುಳಿದ ಮೈಲುಗಲ್ಲುಗಳೂ ಮಾತ್ರ. ಹೋರಾಟದಿಂದ ಗಳಿಸಿದ ನಮ್ಮ ಉನ್ನತಿ ಹೆಚ್ಚು ಶಾಶ್ವತ ಮತ್ತು ಒಂದು ಆದರ್ಶವೇ ಸರಿಯೆಂದು ಎಲ್ಲರೂ ಬಲ್ಲರು.

ಈ ಮೇಲಿನ ಎಲ್ಲಾ ವಿಚಾರಗಳನ್ನು ಗಮನಿಸಿ ನೀವುಗಳು ಯೋಚಿಸಬಹುದು. ನೀನು ಮಾತನಾಡುತ್ತಿರುವುದು ನಮ್ಮ ಬಯಕೆಗಳ ಬಗ್ಗೆ ಎಂದು. ಅಲ್ಲ! ಬಯಕೆ "ಆಸೆಯ ಒಂದು ಬಗೆ" ಅದಕ್ಕೆ ಬುದ್ಧ ಹೇಳಿದ "ಆಸೆಯೇ ದುಃಖಕ್ಕೆ ಮೂಲ".

ಹೌದು ನಮ್ಮ ನಮ್ಮ ಮೀತಿಯಲ್ಲಿ ನಮಗೆ ಸಾಧ್ಯವಾಗುವ ಕನಸು ಮತ್ತು ಜೀವನವನ್ನೇ ನಾವು ಆರಿಸಿಕೊಳ್ಳಬೇಕು.

ಹಾಗಾದರೇ ಮಹತ್ತರವಾದದ್ದುನ್ನು ನಮ್ಮಿಂದ ನಿಲುಕದ್ದನ್ನು ಯೋಚಿಸಬಾರದೇ? ಆದರೆ ಅದನ್ನು ದಕ್ಕಿಸಿಕೊಳ್ಳೂವ ನಮ್ಮ ಶಕ್ತಿ ಮತ್ತು ನಿಲುವಿನ ಮೇಲೆ ನಿಂತಿರುತ್ತದೆ.

ನಮ್ಮಲ್ಲಿ ಎಂಥೆಂಥ ಮಹನ್ ಮಹನ್ ವಿಷಯ, ಘಟನೆಗಳು, ವ್ಯಕ್ತಿಗಳು ಮತ್ತು ಅವರ ಸಂಶೋಧನೆಗಳು, ಆದರ್ಶಗಳು ಇದ್ದಾವೆ ಅದರ ಬಹು ಮುಖ್ಯ ಅಡಿಪಾಯವೇ "ಕನಸು". ಕಾಣಬೇಕು "ಕನಸ"ನ್ನು ಅದೇ ನಮ್ಮ ಬದುಕಿಗೆ ನಮ್ಮ ಚಿಂತನೆಯ ಹಾದಿಗೆ ನಮ್ಮ ಜೀವನವೆಂಬ ಯಂತ್ರದ ಚಾಲನೆಗೆ ಇಂಧನ.

ಎಲ್ಲರೂ ಕನಸು ಕಾಣಬೇಕು. ಆದರ ಗೆಲುವಿಗೆ ಸಾರ್ಥಕ ದಾರಿಯಲ್ಲಿ ಗುರಿಯ ಕಡೆಗೆ ಪಯಣಿಸಬೇಕು. ಆಗಲೇ ಎಲ್ಲರಿಗೂ ಜಯ. ಆದರಿಂದ ಸುತ್ತಲಿನವರಿಗೂ ಸಂತೋಷ ಮತ್ತು ಚಿಕ್ಕವರ ಕನಸುಗಳಿಗೆ ಸಾಧಿಸಿದವರ ದಾರಿಯೇ ಮತ್ತೊಂದು ಕನಸು.

ಮಂಗಳವಾರ, ಜನವರಿ 18, 2011

"ದಿ ಲಾಸ್ಟ ಲೆಕ್ಚರ್" ನಮ್ಮ ಮೊದಲ ಬದುಕಿಗೆ

"ದಿ ಲಾಸ್ಟ ಲೆಕ್ಚರ್" Randy Pausch ಬಹು ಪ್ರಸಿದ್ಧ ವ್ಯಕ್ತಿತ್ವ ವಿಕಸನ ಪುಸ್ತಕ. Randy Pausch ರವರು ತಮ್ಮ ಜೀವನದ ಕೂನೆಯ ದಿನಗಳಲ್ಲಿ ತಮ್ಮ ಜೀವ ಇನ್ನೇನೂ ಗುಣಪಡಿಸಲಾರದಂತಹ ಈ ಕ್ಯಾನ್ಸರ್ ನಿಂದ ಜೀವವನ್ನು ಕೂನೆಗೊಳಿಸಿಕೊಳ್ಳಬೇಕು ಎಂಬ ಕಹಿ ಸತ್ಯವನ್ನು ತಿಳಿದ ದಿನಗಳಿಂದ ವಿಭಿನ್ನವಾಗಿ ತಮ್ಮ ಉಳಿದ ಕೆಲವೇ ಕೆಲವು ದಿನಗಳನ್ನು ತನ್ನ ಸಂಸಾರ ಮತ್ತು ತನ್ನ ಪ್ರಿಯ ಮುದ್ದಿನ ಮೂರು ಮಕ್ಕಳೊಡನೆ ಯಾವ ರೀತಿಯಲ್ಲಿ ಕಳೆಯಬೇಕು ಎಂಬ ಕಲ್ಪನೆಯಲ್ಲಿ ಒಡಮೂಡಿದ ಹನಿ ಮುತ್ತುಗಳು, ಜೀವನದ ಕಠಿಣ ಸತ್ಯಗಳ ಮಾತು ಮಣಿಗಳ ಸಂಗ್ರಹವಾಗಿದೆ.


ವಯಸ್ಸು ೪೭ , ೨೦೦೬ ರಲ್ಲಿ ನಿಮಗೆ ಪ್ಯಾನ್ ಕ್ರೀಯಾಟಿಕ್ ಕ್ಯಾನ್ಸರ್ ಇದೆ ಮತ್ತು ಅದನ್ನು ಗುಣಪಡಿಸಲಾಗದು. ಎಂಬುದನ್ನು ಡಾಕ್ಟರಗಳಿಂದ ತಿಳಿಸಿದ ದಿನದಿಂದ ತಾನು ಸಾವಿನ ಸಾನಿಧ್ಯದಲ್ಲಿ ಇದ್ದ ವೇಳೆಯಲ್ಲಿ, ತಾನು ಅನುಭವಿಸಿದ ಮತ್ತು ಕಳೆದ ಜೀವನದ ಕೂನೆಯ ಅನುಭವಗಳನ್ನು ತನ್ನ ವಿಚಾರಗಳನ್ನು ಪ್ರಸಿದ್ಧ ಲೆಕ್ಚರ್ ನ್ನು ತಾವೇ ಸ್ವತಃ ೨೦೦೭ ರಲ್ಲಿ ವಿಶ್ವಕ್ಕೆ ನೀಡಿದರು.


ಆ ಲೆಕ್ಚರ್ ನ ಭಾವ ಸಂಗ್ರಹವೇ "ದಿ ಲಾಸ್ಟ ಲೆಕ್ಚರ್" ಆಂಗ್ಲ ಗ್ರಂಥ. ಇದರ ಕನ್ನಡ ಭಾವ ಅನುವಾದವನ್ನು ಸ್ವಲ್ಪ ದಿನಗಳ ಹಿಂದೆ ನಾನು ಓದಿದೆ.

ಅಲ್ಲಿರುವ ಮಾತುಗಳು ಮತ್ತು ಅವರು ಕಂಡೂಂಡ ಕೊನೆಯ ದಿನಗಳ ಜೀವನದ ಅನುಭವದ ಮಾತುಗಳು ನಮ್ಮಂಥ ಸಾಮಾನ್ಯರಿಗೆ ಮೊದಲಿನ ಪಾಠಗಳೇ ಸರಿ!

ಈ ಪುಸ್ತಕವನ್ನು ಒಮ್ಮೆ ಓದಿ ಎತ್ತಿಡುವಂತಹದ್ದಲ್ಲ. ಪುನಃ ಪುನಃ ಮೆಲುಕು ಹಾಕುವಂತಹ ಪುನಃ ಪುನಃ ಓದಲು ಎತ್ತಿಟ್ಟುಕೊಳ್ಳುವ ಸಂಗ್ರಾಹಯೋಗ್ಯವಾದ ಕೃತಿ.

ಅದರ ಒಂದು ಝಲಕು ನಮಗಾಗಿ, ಇಷ್ಟಪಟ್ಟ ಅಮೂಲ್ಯವಾದ ಕೆಲವು ಪುಸ್ತಕದ ಸಾಲುಗಳು. ಆ ಪುಸ್ತಕವನ್ನು ಓದಲು ಇದು ಪ್ರೇರಪಿದಂತಾಗುತ್ತದೆ. ಅವರ ಲೈವ್ ವಿಡಿಯಾಗಳು ಯು ಟ್ಯೂಬನಲ್ಲೂ ಪ್ರಸಿದ್ಧವಾಗಿವೆ.


"ಯಾವುದೇ" "ನಿರ್ಧಾರ" ತೆಗೆದುಕೂಳ್ಳಲು ಅನಗತ್ಯ ಆತುರ ಪಡಬಾರದು. ಪ್ರಭಾವಶಾಲಿ ಹುದ್ದೆಯಲ್ಲಿದ್ದರೂ ಕೆಲಸ ಮತ್ತು ಸಂಬಂಧಗಳ ವಿಚಾರದಲ್ಲಿ "ನ್ಯಾಯ ಸಮ್ಮತ" ವಾಗಿ ವರ್ತಿಸಬೇಕು ಹಾಗೂ ಜನರನ್ನು ಮುನ್ನೆಡೆಸುವ ಸ್ಥಾನದಲ್ಲಿರುವೆ ಎಂದ ಮಾತ್ರಕ್ಕೆ ಅವರನ್ನು ನಿರ್ಲಕ್ಷಿಸಬಾರದು.(ಪುಟ -೨೩)

ಬೇರಲ್ಲದಕ್ಕಿಂತ ಮುಖ್ಯವಾಗಿ ತಮ್ಮ ಮಕ್ಕಳನ್ನು ತಂದೆ-ತಾಯಿಯರು ಅಗಾಧವಾಗಿ ಪ್ರೀತಿಸುತ್ತಾರೆ ಎಂಬುದನ್ನು ಮಕ್ಕಳು ಅರಿಯಬೇಕು.(ಪುಟ -೨೬)

ನಾವು ಯಾವುದೇ ಕನಸುಗಳನ್ನು ಕಂಡರೂ ಅದನ್ನು ಕಾರ್ಯರೂಪಕ್ಕೆ ತರಬೇಕು. ಆಗ ಮಾತ್ರ ಅದು ನಮಗೆ ಹೆಚ್ಚಿನ ಮಾನ್ಯತೆ ಕೊಡುತ್ತದೆ.(ಪುಟ -೩೩)

"ಯಾವಾಗ ನೀನು ಸರಿಯಾದ ಮಾರ್ಗದಲ್ಲಿ ಹೋಗುತ್ತಿಲ್ಲದಿದ್ದರೂ ಯಾರೂ ಏನನ್ನು ಹೇಳದೆ ಸುಮ್ಮನಿರುತ್ತಾರೋ, ಆಗ ಅವರೆಲ್ಲರೂ ನಿನ್ನನ್ನು ಕಡೆಗಣಿಸಿರುವರೆಂದೇ ಅರ್ಥ" (ಪುಟ -೩೬)

"ಗೆಲ್ಲಲಾಗದಿರುವ ಪರಿಸ್ಥಿತಿಯೊಂದಿದೆ ಎಂದು ನಾನು ನಂಬುವುದಿಲ್ಲ."(ಪುಟ -೪೭)

"ವಸ್ತುಗಳಿಗಿಂತ ಮನುಷ್ಯ ಮುಖ್ಯ. ಅತೀ ಬೆಲೆಬಾಳುವ, ಶುದ್ಧವಾದ ನನ್ನ ಹೊಚ್ಚ, ಹೊಸ ಕಾರೂ ಇದಕ್ಕೆ ಹೊರತಾಗಿರಲಿಲ್ಲ. ಆದೂ ಒಂದು ವಸ್ತುವೇ" (ಪುಟ -೭೩)

ಜೀವನದಲ್ಲಿ ಎಲ್ಲವನ್ನೂ ಸರಿಪಡಿಸಬೇಕಾದ ಅಗತ್ಯತೆ ಇರುವುದಿಲ್ಲ ಎಂಬುದು ನನ್ನ ಭಾವನೆ.(ಪುಟ -೮೯)

ಸಮಯವನ್ನು ಹಣದಷ್ಟೇ ಸಮಂಜಸವಾಗಿ ಖರ್ಚು ಮಾಡಬೇಕು - ಪಾಶ್ ನ ಸಿದ್ಧಾಂತ.
ನೀವು ಯೋಜನೆಯೊಂದನ್ನು ರೂಪಿಸಿಕೊಂಡಿದ್ದರೆ, ಅದನ್ನು ಎಂದಾದರೂ ಬದಲಿಸಬಹುದು.(ಪುಟ -೧೧೨)

ಸೂಕ್ತ ಕೆಲಸಕ್ಕೆ ಸಮಯ ವಿನಿಯೋಗವಾಗುತ್ತಿರುವುದೇ ಎಂದು ಆತ್ಮಾವಲೋಕನ ಮಾಡಿಕೊಳ್ಳಿ.
ಪ್ರತಿಯೊಂದು ದಾಖಲೆಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ ಇಟ್ಟುಕೊಳ್ಳಿ.(ಪುಟ -೧೧೫)

ದೂರವಾಣಿಯನ್ನು ವಿವೇಚನೆಯಿಂದ ಬಳಸಿ.
ಕೆಲಸಗಳನ್ನು ವರ್ಗಾಯಿಸಿ.(
ಪುಟ -೧೧೪)

ನಿಮಗಾಗಿ ಕೆಲ ಸಮಯ ಮೀಸಲಿಡಿ.(ಪುಟ -೧೧೫)

ವಾಲ್ಟ ಡಿಸ್ನಿ ಹೇಳುವಂತೆ ಕಲಿಕೆ ಮತ್ತು ಕಲ್ಪನೆಗೆ ಕೊನೆಯೆಂಬುದೆ ಇರಲಾರದು.(ಪುಟ -೧೩೬)

ನೀವು ಸದಾ ಸಮಸ್ಯೆಗಳನ್ನೇ ಬಣ್ಣಿಸುತ್ತಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲಾರಿರಿ. ಅದು ಎಂದಿಗೂ ಕಾರ್ಯ ನಿರ್ವಹಿಸುವ ವೈಖರಿಯಾಗಲಾರದು. ನಮಗೆಲ್ಲಾರಿಗೂ ಇರುವುದು ಅತ್ಯಂತ ಕಡಿಮೆ ಅವಧಿ ಮತ್ತು ಪರಿಮಿತ ಶಕ್ತಿ. ಸಮಸ್ಯೆಯನ್ನು ದೂಷಿಸಲೂ ಬಳಸುವ ಯಾವ ಸಮಯವೂ ಗುರಿಯನ್ನು ಮುಟ್ಟಲು ಸಹಾಯ ಮಾಡುವುದಿಲ್ಲ. ಅದು ನಮ್ಮನ್ನು ಎಂದಿಗೂ ಆನಂದದಿಂದಿರಲು ಬಿಡದು.(ಪುಟ -೧೫೩)

ಯಾವುದೇ ವ್ಯಕ್ತಿ ಸರಿಯಾದ ವಿಧಾನದಲ್ಲಿ ಭೇಟಿ ಮಾಡಿ.
ಇಬ್ಬರ ನಡುವಿನ ಸಾಮಾನ್ಯ ಗುಣಗಳನ್ನು ಅರಿಯಲು ಯತ್ನಿಸಿ.
ಮತ್ತೊಬ್ಬರನ್ನು ಎದುರುಗೊಳ್ಳುವ ಮುನ್ನ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿಕೊಳ್ಳಿ.
ಮತ್ತೊಬ್ಬರಿಗೆ ಮಾತಾಡಲು ಅವಕಾಶ ಕೊಡಿ.
ನಿಮ್ಮ ಅಹಂನ್ನು ನಿಮ್ಮಲ್ಲಿಯೇ (ಬಳಿ) ಇಟ್ಟುಕೊಳ್ಳಿ .
ಒಬ್ಬರನ್ನೊಬ್ಬರು ಅಭಿನಂದಿಸಿ.
ಪರ್ಯಾಯ ವಿಚಾರಗಳನ್ನು ಪ್ರಶ್ನೆಯ ರೂಪದಲ್ಲಿ ಪಡೆಯಿರಿ.(
ಪುಟ -೧೫೬)

ಯಾರೊಬ್ಬರ ವಿಚಾರದಲ್ಲೇ ಆಗಲಿ ನಾವು ಸಹನೆಯಿಂದ ವರ್ತಿಸಿದರೆ ಆಶ್ಚರ್ಯಪಡುವ ರೀತಿಯಲ್ಲಿ ಅವರು ನಿಮ್ಮ ಮನಸ್ಸನ್ನು ಮುದಗೊಳಿಸುವರು.(ಪುಟ -೧೫೯)

ಮನುಷ್ಯ ಮತ್ತೊಬ್ಬರಿಗೆ ಕೃತಙ್ಞತೆಯನ್ನು ಸಲ್ಲಿಸುವುದು ಜೀವನದಲ್ಲಿ ಮಾಡಬೇಕಾದ ಅತ್ಯಂತ ಶ್ರೇಷ್ಠವಾದ ಕೆಲಸಗಳಲ್ಲೊಂದು. ಅದು ವ್ಯಕ್ತಿಯಲ್ಲಿರಬೇಕಾದ ಕನಿಷ್ಠ ಸೌಜನ್ಯವೂ ಹೌದು.(ಪುಟ -೧೬೫)

ನೀವು ಇತರರಿಗಿಂತ ಹೆಚ್ಚು ಹೊತ್ತು ಶ್ರಮಪಟ್ಟು ಕೆಲಸ ಮಾಡಿದರೆ ಆ ಸಮಯದಲ್ಲಿ ಯಶಸ್ಸಿನ ಸಾಕಷ್ಟು ಪಾಠಗಳನ್ನು ಕಲಿಯುತ್ತೀರಿ. ಇದು ನಿಮ್ಮ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮತ್ತು ಆನಂದವನ್ನು ನೀಡುತ್ತದೆ. ಪರಿಶ್ರಮ ಎಂಬುದು ಬ್ಯಾಂಕನಲ್ಲಿನ ಚಕ್ರ ಬಡ್ಡಿಯಂತೆ. ನೀವು ಹೆಚ್ಚು ಶ್ರಮಪಟ್ಟು ಕೆಲಸ ಮಾಡಿದ್ದೇ ಆದರೆ ಯಶಸ್ಸೆಂಬ ಚಕ್ರ ಬಡ್ಡಿ ಬಹು ಬೇಗ ಬೆಳೆಯುತ್ತ ಹೋಗುತ್ತದೆ.(ಪುಟ -೧೭೨)

ಕೃಪೆ :THE LAST LECTURE. Kannada Title. Author, RANDY PAUSCH / JEFFREY ZASLOW. Publisher, DHATRI PUBLICATIONS

ಸೋಮವಾರ, ಜನವರಿ 10, 2011

ಸಂತೋಷಪಡಲು ನಮ್ಮವರು ಇರಬೇಕಲ್ಲವಾ?


ಯಾಕೇ ನಮಗೆ ನಮ್ಮ ಹತ್ತಿರದ ಸಂಬಂಧಿಗಳು, ರಕ್ತ ಸಂಬಂಧಿಗಳು ಮತ್ತು ನಮ್ಮ ಪ್ರೀತಿ ಪಾತ್ರ ಸ್ನೇಹಿತರು ಏನಾದರೂ ಒಂದು ಮಾತು ಹೆಚ್ಚಿಗೆ ಮಾತನಾಡಿದರೆ ಕರಳು ಕಸಿವಿಸಿಯಾಗುತ್ತದೆ..ತುಂಬ ಬೇಜಾರಾಗುವುದು.. ಮನ ನೋಯುವುದು? ಈ ರೀತಿಯ ಯಕ್ಷ ಪ್ರಶ್ನೆ ಎಲ್ಲರಿಗೂ ಒಮ್ಮೆಯಾದರೂ ಬಂದಿರಬಹುದು.


ಅದೇ ದಾರಿಯಲ್ಲಿ, ಬಸ್ಸುಗಳಲ್ಲಿ, ತುಂಬು ಜನ ಜಂಗುಳಿಯ ಮಧ್ಯೆ ಒಮ್ಮೊಮ್ಮೆ ಯಾರದರೂ ಎನಕ್ಕಾದರೂ ಬೈದರೇ ಅಥವಾ ಅಕ್ಷೇಪಿಸಿದರೇ ನಾವುಗಳು ಕೇರೇ ಮಾಡದೆ ನಮ್ಮ ಮುಂದಿನ ದಾರಿಯನ್ನು ನೋಡಿಕೊಂಡು ಹಾಗೆಯೇ ಸಾಗುತ್ತವೆ.


ಆದರೇ ಅದೇ ನಮ್ಮ ಮನೆಗಳಲ್ಲಿ ನಮ್ಮ ಹತ್ತಿರದವರಿಂದ ಕೇವಲ ಒಂದೇ ಒಂದು ಮಾತನ್ನು ಸಹಿಸದವರಾಗಿರುತ್ತೆವೆ.


ಅದೇ ಮಾತು ತಾಯಿ-ತಂದೆಯರಿಂದ, ಅಜ್ಜ-ಅಜ್ಜಿಯರಿಂದ ಬಂದಾಗಲೂ ಅದರ ಎಫೆಕ್ಟ ಸ್ವಲ್ಪ ಕಡಿಮೆಯೇ. ನಮ್ಮ ಗೆಳೆಯರಲ್ಲೂ ಕೆಲವರಿಂದ ಆ ಮಾತುಗಳು ಬಂದಾಗ ಕೆಲವರಿಂದ ತುಂಬಾನೇ ಹರ್ಟ್ ಆಗುತ್ತದೆ. ಮತ್ತೇ ಕೆಲವರಿಂದ ಪೂರ್ಣ ಪ್ರಮಾಣದ ನೋವು ನಮ್ಮನ್ನು ಕಾಡುತ್ತದೆ ಏಕೆ?


ಮನುಷ್ಯ ಸಂಘ ಜೀವಿ. ತಾನು ಹುಟ್ಟಿನಿಂದ ತನ್ನ ತಾಯಿ-ತಂದೆ, ತನ್ನ ಕುಟುಂಬದವರಿಂದ ಮೊದಲು ಮಾಡಿ ತನ್ನ ಮುಪ್ಪಿನವರೆಗೆ ತನ್ನ ಪಯಣದಲ್ಲಿ "ಸಂಬಂಧ" ದ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ಮಂದಿಯನ್ನು ತನ್ನವರನ್ನಾಗಿಸಿಕೊಂಡು ಅವರ ಜೊತೆ ತನ್ನ ಜೀವನವನ್ನು ಕಳೆಯುತ್ತಾನೆ.


ಅಂದರೇ, ಮನುಷ್ಯ ತಾನು ಒಂಟಿಯಾಗಿ ತನ್ನ ಜೀವನವನ್ನು ಯಾವತ್ತಿಗೂ ಕಳೆಯಲಾರ ಎಂಬುದು ದಿಟ. ತಾನು ಸುಖವಾಗಿ ಇರುವೆನು ಎಂದು ನಿರ್ಧರಿಸಬೇಕಾದರೆ ತನ್ನ ಸುತ್ತಲಿನವರಿಂದ ಮತ್ತು ತನ್ನ ಜೊತೆಗಾರರಿಂದ ಅದರ ಮಾಪನ ಮಾಡಿಕೊಳ್ಳುತ್ತಾನೆ.


ಹೌದು! ಕೆಲವು ಸಂಬಂಧಗಳು ಹೆಚ್ಚು ವ್ಯಥೆಯಿಲ್ಲದೆ ತನ್ನ ಜನ್ಮಾಂತರದಿಂದ ಬಳುವಳಿಯಾಗಿ ಬರುತ್ತವೆ. ಅವುಗಳು ತಾನು ಜನ್ಮ ತಾಳಿ ಭೂಮಿಯ ಮೇಲೆ ಪಾದಾರ್ಪಣೆ ಮಾಡುವ ಮೊದಲೇ ತನ್ನ ಮಾತಾ-ಪಿತೃಗಳ ಕಡೆಯಿಂದ ಹರಿದು ಬಂದು ಬಿಟ್ಟಿರುತ್ತವೆ.
ಮತ್ತೇ ಕೆಲವು ತಾನೇ ಸ್ವತಃ ತನ್ನ ಕೌಶಲತೆಯಿಂದ ಹೊಸದಾಗಿ ತಾನು ಕಂಡುಕೊಳ್ಳುತ್ತಾನೆ.


ಸಂಬಂಧಗಳಲ್ಲಿ ಕೆಲವನ್ನು ವಿವಿಧ ರೀತಿಯಲ್ಲಿ ತನ್ನ ಭಾವಕ್ಕೆ ಮತ್ತು ಅನುಕೂಲಕ್ಕೆ ತಕ್ಕ ಹಾಗೆಯೇ ವಿಂಗಡಿಸಿಕೊಂಡು ಅದರಲ್ಲಿ ವಿವಿಧ ವರ್ಗಗಳನ್ನಾಗಿ ಮಾಡಿಕೊಂಡು ಕಡೆಯವರೆಗೂ ಅವರೊಂದಿಗೆ ಜೀವಿಸುತ್ತಾನೆ.


ಈ ಸಂಬಂಧಗಳು ಹೇಗೆ ಅಭಿವೃದ್ಧಿಯಾಗುತ್ತ ಜೀವಂತವಾಗಿರುತ್ತವೆ ಎಂದು ನೀವು ಕೇಳಬಹುದು. ಕೆಲವು ನಿಸ್ವಾರ್ಥ! ಕೆಲವು ಅನುಕೂಲ ಸಿಂಧುವಾಗಿ ಆ, ಆ ಸಮಯಕ್ಕೆ ತಾನು ಉಪಯೋಗ ಮಾಡಿಕೊಳ್ಳುವನು.


ನಮ್ಮವರನ್ನು/ಹತ್ತಿರದವರನ್ನು ಕಂಡಾಗ ನಮ್ಮ ಮನಸ್ಸು ಅರಳುವ ಗಳಿಗೆಯನ್ನು ನೋಡಬೇಕು. ಮಾನವ ಸಂಕುಲವಲ್ಲದೇ ಎಲ್ಲಾ ಜೀವ ಸಂಕುಲದಲ್ಲೂ ಈ ರೀತಿಯ ಭಿನ್ನ ಮನೋಸಂಚಲನದ ಸಂವೇದನೆಯ ಮೂಲ ಪ್ರಭೆ ಯಾವುದು?
ಈ ಸಂಬಂಧಗಳು ವ್ಯಕ್ತಿಯ ಹತ್ತಿರದವರಿಂದ ಪ್ರಾರಂಭವಾಗಿ.. ಗಡಿ - ದೇಶಗಳನ್ನು ಮೀರಿ ನಮ್ಮವರಿಗಾಗಿ ತುಡಿಯುವಂತೆ ಮಾಡುತ್ತವೆ.


ಬಾಷೆ, ಜಾತಿ, ಲಿಂಗ ಬೇದವನ್ನು ಮೀರಿ ಬೆಳೆಯುತ್ತವ ಶ್ರೇಷ್ಠ ಸಂಬಂಧವೆಂದರೇ "ಸ್ನೇಹ". ಹೌದು! ಇದರ ವಿಸ್ತಾರದ ಹರವು ವಿಪರೀತ.


ಬೇರೆ ರಾಜ್ಯಕ್ಕೆ ಹೋದಾಗ - ನಮ್ಮ ರಾಜ್ಯದ ಯಾರೇ ಆದರೂ ನಮ್ಮವರಾಗುತ್ತಾರೆ. ಬೇರೆ ದೇಶಕ್ಕೆ ಹೋದಾಗ ನಮ್ಮ ದೇಶದ ಯಾವ ರಾಜ್ಯ, ಬಾಷೆಯವರಾದರೂ ನಮ್ಮ ಹತ್ತಿರದವರಾಗುತ್ತಾರೆ...


ಆ ಸಮಯದಲ್ಲಿ ನಮ್ಮವರನ್ನು ಕಂಡಾಗ ಉಂಟಾಗುವ ಸಂತೋಷ - ತತ್ ಕ್ಷಣದ ಪ್ರತಿಕ್ರಿಯೆ ವರ್ಣನೆಗೆ ನಿಲುಕಲಾರದ್ದು.


ಹಾಗೆಯೇ ನಮ್ಮ ಇಂದಿನ ಸಮಯದಲ್ಲಿ ಇಂಟರ್ ನೇಟ್ ಕ್ರಾಂತಿಯಿಂದ ನಮ್ಮ ಹಳೆಯ ಸವಕಲಾದ ಎಷ್ಟೋ ಸಂಬಂಧ - ಸ್ನೇಹದ ಬೇರುಗಳು "ಸೋಸಿಯಲ್ ನೇಟ್ ವರ್ಕ್" ಗಳಾದ ಆರ್ಕುಟ್, ಫೇಸ್ ಬುಕ್ ಮೂಲಕ ನಮ್ಮ ನಮ್ಮ ಬಾಲ್ಯದ ಗೆಳೆಯರನ್ನು, ದೂರದ ಸಂಬಂಧಿಗರ ಬೇಟಿಯನ್ನು ಸುಲಭವಾಗಿ ಏರ್ಪಡಿಸಿಕೊಂಡು ಅದರ ಬೆಳವಣಿಗೆಗೆ ಸಹಾಯ ಮಾಡಿಕೊಳ್ಳುವಲ್ಲಿ ತಂತ್ರಙ್ಞಾನದ ಪಾಲು ಶ್ಲಾಘನೀಯ.


ಯಾವುದೇ ಸಂಬಂಧಗಳು ಬಾಷೆಯ ಭಾವನೆಗಳ ಮೂಲಕ ಹೆಚ್ಚು ಹೆಚ್ಚು ಬೆಳೆಯುತ್ತವೆ. "ಕಣ್ಣು ಅರಿಯದಿದ್ದರೂ ಕರಳು ಅರಿಯುವ" ರೀತಿ ಕೆಲವು ನಿರಂತರ ಚಲನೆಯಲ್ಲಿ ಮಾನವನ ಲವಲವಿಕೆಗೆ, ಅವನ ಮನಸಂತೋಷಕ್ಕೆ ಕಾರಣವಾಗಿದೆ.


ವ್ಯಕ್ತಿಯ ಸುಂದರ ಮನೋ ಬೆಳವಣಿಗೆಗೆ ಸುತ್ತಲಿನ ಸಜ್ಜನರ ಅವಶ್ಯಕತೆ ಸಾಕಷ್ಟಿದೆ. ಇಂದಿನ ಈ ಯಾಂತ್ರಿಕ ಯುಗದಲ್ಲಿ ಒಂಟಿ ಮನದ ಸಮಸ್ಯೆ ಸಾಕಷ್ಟು. ಅದರಿಂದ ಏನನ್ನು ನಿರೀಕ್ಷಿಸಲಾಗದು. ಎಲ್ಲೆಲ್ಲೂ ತಮ್ಮದೇ ನಿಲುವುಗಳು. ವಿವಿಧ ಕಮ್ಯುನಿಕೇಶನ್ ಗಳ ಉಗಮದಿಂದ ವಿವಿಧ ರೀತಿಯಲ್ಲಿ ಸಾಮಾಜಿಕ ಜೀವನ ಮತ್ತೊಮ್ಮೆ ಕೂಡಿ ಬಾಳುವಿಕೆಯ ಹಾದಿಯನ್ನು ಹಿಡಿಯುತ್ತಿದೆ.

ಎಷ್ಟೇ ಇದ್ದರೂ ಅದನ್ನು ಹಂಚಿಕೊಂಡು ಸಂತೋಷಪಡಲು ನಮ್ಮವರು ಇರಬೇಕಲ್ಲವಾ? ಪ್ರೀತಿ ಪಾತ್ರರೂ.. ಹುಡುಕುತ್ತಿರೋಣ ಮತ್ತು ನಮ್ಮವರನ್ನಾಗಿಸಿಕೊಳ್ಳೋಣ..

ಗುರುವಾರ, ಜನವರಿ 6, 2011

ವಿಮರ್ಶೆ ಮತ್ತು ಸಂಸ್ಕೃತಿ

ನಮ್ಮ ನೆಚ್ಚಿನ ವಿಮರ್ಶಕರಾದ ರಹಮತ್ ತರೀಕೆರೆಯವರ "ಕತ್ತಿಯಂಚಿನ ದಾರಿ" ವಿಮರ್ಶೆ ಮತ್ತು ಸಂಸ್ಕೃತಿ ಚಿಂತನೆಯ ಪುಸ್ತಕಕ್ಕೆ ಈ ಭಾರಿಯ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಬಂದಿದೆ. ಅದು ನಿಜವಾಗಿಯೂ ಕನ್ನಡ ಸಾಹಿತ್ಯ ಲೋಕ ಸಂತೋಷಪಡುವ ವಿಚಾರ. ಸಾಮಾನ್ಯ ಓದುಗರಿಗೆ ವಿಮರ್ಶೆಯ ಚಿಂತನೆಯ ಬರಹಗಳು ಅಷ್ಟಾಗಿ ಇಷ್ಟವಾಗದೇ ಇರಬಹುದು. ಯಾಕೆಂದರೇ ಅಲ್ಲಿ ವಿವಿಧ ವಿಚಾರಗಳ ಬಾರವಿರುವುದು. ಅವುಗಳ ವಿಚಾರದ ಮಂಥನವನ್ನು ಜೀರ್ಣಿಸಿಕೊಳ್ಳುವ ಮಟ್ಟಿಗೆ ನಾವುಗಳು ಬೆಳೆದು ಬಂದಿಲ್ಲ ಬಿಡಿ ಎಂಬ ಭಯವಿರಬಹುದು.


ಇಂಥ ಬರಹಗಳು ಪತ್ರಿಕೆಗಳಲ್ಲಿ ಬಿಡಿ ಬಿಡಿ ಲೇಖನಗಳಲ್ಲಿ ಬಂದಾಗ ಓದುವ ಮನಸ್ಸನ್ನು ಸಾಮಾನ್ಯ ಓದುಗ ಮಾಡುವನು. ಆದರೂ ಮನ್ನೆ ನಾನು ಬೆಂಗಳೂರಿನ ಪ್ರತಿಷ್ಠೀತ ಪುಸ್ತಕ ಮಳಿಗೆಯಲ್ಲಿ ರಹಮತ್ ತರೀಕೆರೆಯವರ ಬಹುಮಾನವನ್ನು ಪಡೆದ ಪುಸ್ತಕವನ್ನು ಪ್ರತಿಯೊಬ್ಬರು ಕೇಳುತ್ತಿದ್ದುದು ಮತ್ತು ತಮಗಾಗಿ ಖರೀದಿಸುತ್ತಿದ್ದುದು ಸಂತಸದ ನೋಟವಾಗಿತ್ತು.


ಅವರ ಇನ್ನೊಂದು ಪುಸ್ತಕ "ಹೊಸ ತಲೆಮಾರಿನ ತಲ್ಲಣಗಳು". ಕನ್ನಡದ ಹೊಸ ತಲೆಮಾರಿನ ಪ್ರತಿಯೊಬ್ಬ ಬರಹಗಾರರಿಂದ ಒಂದೊಂದು ಲೇಖನಗಳನ್ನು ಪಡೆದು ಅವುಗಳನ್ನು ಅವರ ಪರಿಚಯದೊಂದಿಗೆ ಸಂಗ್ರಹಿಸಿಕೊಟ್ಟಿದ್ದನ್ನು ನಾನು ಬಹಳ ಇಷ್ಟಪಟ್ಟಿದ್ದೇ. ತರೀಕೆರೆಯವರ ಕನ್ನಡಾಭಿಮಾನ ಮತ್ತು ನಮ್ಮ ಮಣ್ಣಿನ ಸಂಸ್ಕೃತಿಯ ಬಗ್ಗೆ ಅವರಿಗಿರುವ ಕಾಳಜಿಯನ್ನು ಕಂಡು ತುಂಬ ಖುಷಿಯಾಯಿತು. ಎಲ್ಲಾ ಲೇಖಕರುಗಳು ಆ ಪುಸ್ತಕದಲ್ಲಿ ತಾವುಗಳು ಯಾಕೆ ಕನ್ನಡದಲ್ಲಿ ಸಾಹಿತ್ಯ ಕೃಷಿಯನ್ನು ಪ್ರಾರಂಭಿಸಿದ್ದೇವೆ ಮತ್ತು ಕನ್ನಡ ಸಾಹಿತ್ಯದ ಕಡೆ ಒಲವು ಮೊಡಲು ತಮ್ಮ ನೆರೆಹೊರೆಯವರು ಮತ್ತು ಸುತ್ತಲಿನ ಪರಿಸರ ಯಾವ ರೀತಿ ಸಹಕರಿಸಿತು ಮತ್ತು ಮುಂದೆ ತಾವು ಇಡುತ್ತಿರುವ ಹೆಜ್ಜೆಗಳು ಯಾವ ಕಡೆ ಇದೆ ಎಂಬುದನ್ನು ಚಿಕ್ಕದಾದ ತಮ್ಮ ತಮ್ಮ ಲೇಖನಗಳಲ್ಲಿ ಅಸಕ್ತಿಕರವಾಗಿ ನಿರೂಪಿಸಿದ್ದಾರೆ.

ಈ ರೀತಿಯ ಲೇಖನಗಳು ಕನ್ನಡ ಸಾಹಿತ್ಯದಲ್ಲಿ ಅಸಕ್ತಿಯನ್ನು ಕೆರಳಿಸಲು ಮತ್ತು ನಮ್ಮಂತಹ ಸಾಮಾನ್ಯ ಓದುಗ ತನ್ನ ನೆಚ್ಚಿನ ಮತ್ತು ಹತ್ತಿರದ ಲೇಖಕನ ಬಗ್ಗೆ ಹೆಚ್ಚಿನ ರೀತಿಯಲ್ಲಿ ತಿಳಿಯಲು ಸಹಕಾರಿಯಾಗಿದೆ. ಅದಕ್ಕೆ ತರೀಕೆರೆಯವರಿಗೆ ಅಭಿನಂದನೆಗಳು.

ಕತ್ತಿಯಂಚಿನ ದಾರಿಯಲ್ಲಿನ ಬರಹಗಳು ತುಂಬ ಗಂಭಿರವಾದ ಒಂದು ಚಿಂತನೆಯನ್ನು ನಮ್ಮ ಸಮಕಾಲೀನ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲೆ ಬೀರುತ್ತವೆ. ಅಲ್ಲಿರುವ ಕೆಲವೊಂದು ಬರಹಗಳಾದ ತೇಜಸ್ವಿಯವರ ಮಾಯಾಲೋಕದ ಬಗ್ಗೆ ಚಿಂತಿಸಿರುವ ಮತ್ತು ತಾಳಿರುವ ಅಭಿಪ್ರಾಯಗಳು ನಮ್ಮ ತೇಜಸ್ವಿಯವರನ್ನು ಮತ್ತು ಅವರ ಬದುಕು ಬರಹಗಳನ್ನು ಇನ್ನೂ ಹತ್ತಿರವರನ್ನಾಗಿ ಮಾಡಿ ಹೆಮ್ಮೆಯನ್ನು ಮೊಡಿಸಿ ಪುನಃ ಅವರ ಕರ್ವಾಲೂ, ಜುಗಾರಿಕ್ರಾಸ್, ಮಾಯಾಲೋಕವನ್ನು ಓದುವಂತೆ ಪ್ರೇರಪಿಸುತ್ತದೆ.


ಹಾಗೆಯೇ ಲಂಕೇಶ್ ರವರ ಕೂನೆಯ ದಿನಗಳ ಮೆಲುಕು ಸಹ ಅವರ ಅಗಾಧ ಕನ್ನಡಪರ ಚಿಂತನೆ ಮತ್ತು ದೈತ್ಯ ಪ್ರತಿಭೆಯ ದರ್ಶನವನ್ನು ನಮ್ಮ ಮೇಷ್ಟ್ರರ ಬಗ್ಗೆ ಒದಗಿಸುತ್ತದೆ.

ಕೃತಿಯಲ್ಲಿನ ಕಟ್ಟ ಕಡೆಯ ಲೇಖನವಾದ "ಕತ್ತಿಯಂಚಿನ ದಾರಿ" ಬರಹ ಒಟ್ಟಾಗಿ ನಮ್ಮ ಕನ್ನಡ ಸಾಹಿತ್ಯದ ನೀಲುವುಗಳು ಮತ್ತು ಅದು ಸಾಗುತ್ತಿರುವ ಸಾಹಿತ್ಯದ ಪರಿಯನ್ನು ವಿವಿಧ ರೀತಿಯಲ್ಲಿ ಆತ್ಮೀಯವಾಗಿ ಚಿಂತಿಸುವಂತೆ ಮಾಡುತ್ತದೆ.

ಕುವೆಂಪು, ಶಾಂತಿನಾಥ ದೇಸಾಯಿಯವರ ಬಗ್ಗೆ, ಸೂಫಿ ಸಾಹಿತ್ಯ, ಮುಸ್ಲಿಂ ತತ್ವಪದಕಾರರ ಸಾಹಿತ್ಯ ಬೆಳವಣಿಗೆ, ವಚನಕಾರರು ಮತ್ತು ವಚನ ಸಾಹಿತ್ಯ, ಶೂನ್ಯ ಸಂಪಾದನೆ ಮುಂತಾದ ಬರಹಗಳ ಅಗಾಧವಾದ ವಿಷಯ ವಿಚಾರ ದರ್ಪಣೆ ರಹಮತ್ ತರೀಕೆರೆಯವರ ಪಾಂಡಿತ್ಯ ಮತ್ತು ಅವರುಗಳ ಒಳಗಣ್ಣಿನ ಬಗ್ಗೆ ಹೆಮ್ಮೆಪಡುವಂತಾಗುತ್ತದೆ.

ಆದರೂ ನನಗೆ ಅವರುಗಳು ತಿಳಿಸಿರುವಂತ ವಿಚಾರಗಳನ್ನು ಜೀರ್ಣಿಸಿಕೊಳ್ಳುವಷ್ಟು ನಾನು ಶಕ್ತನಲ್ಲಾ ಅನ್ನಿಸುವಂತೆ ಮಾಡಿಸಿತು. ಆದರೆ ಸಾಹಿತ್ಯ ವಿದ್ಯಾರ್ಥಿಗಳಿಗೆ ಈ ವಿಚಾರಗಳು ಮುತ್ತಿನಂಥ ಮಣಿಗಳೇ ಸರಿ. ಅಲ್ಲಿ ತಿಳಿಸಿರುವ ವಿಚಾರಗಳ ಸಂಗ್ರಹಕ್ಕೆ ಎಷ್ಟೊಂದು ಅಧ್ಯಯನ ಮಾಡಬೇಕು ಮತ್ತು ಎಷ್ಟೊಂದು ಚಿಂತಿಸಬೇಕು ಎಂಬುದನ್ನು ಉಹಿಸಲು ಸಾಧ್ಯವಿಲ್ಲ. ಅದಕ್ಕೆ ತರೀಕೆಯವರು ಯಾವತ್ತಿಗೂ ಗ್ರೇಟ್!

ಉತ್ತಮ ಗುರುವಾಗಿ ಇಂದಿಗೂ ಎಲ್ಲಾ ಕಿರಿಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಅವರ ಏಳ್ಗೆಗೆ ಶ್ರಮಿಸುತ್ತಿರುವ ನವ್ಯ ತಲೆಮಾರಿನ ಕನ್ನಡ ತಾರೆಗೆ ನಮೋ ನಮಃ!

ಯಾವುದೇ ಒಂದು ಪುಸ್ತಕವನ್ನು ನಾವುಗಳು ಸಾಮಾನ್ಯವಾಗಿ ಓದುವುದು. ಒಂದು ಆ ಲೇಖಕನ ಬಗ್ಗೆ ನಮ್ಮ ಸುತ್ತಲಿನವರುಗಳು ಮಾತನಾಡುವ ಮಾತಿನ ಮೇಲೆ ಮತ್ತು ಆ ಒಂದು ನಂಬಿಕೆಯ ಮೇಲೆ. ಅಲ್ಲೇ ಒಂದು ಸಣ್ಣ ವಿಮರ್ಶೆ ಹುಟ್ಟುತ್ತದೆ. ನಮ್ಮ ಹತ್ತಿರದವರು ನಮಗೆ ಹೇಳುತ್ತಾರೆ. ಅವರ ಬರಹ ಓದು. ಅದು ಚೆನ್ನಾಗಿರುತ್ತದೆ. ನೀನು ಖುಷಿಪಡುತ್ತೀಯ. ಹೀಗೆ ಹೀಗೆ.. ಅವರ ಸಲಹೆ ಸಾಗುತ್ತದೆ. ಅದರ ಆಧಾರದ ಮೇಲೆ ನಾವುಗಳು ಓದಲು ಪ್ರಾರಂಭಿಸಿ..ಲೇಖಕ ಹೇಳುವ ಕಥೆ, ಕವಿತೆ, ಕಾದಂಬರಿಯ ಮಾದರಿ ಇಷ್ಟವಾದರೇ ಪುನಃ ಆ ವ್ಯಕ್ತಿ ಬರೆದಿರುವ ಎಲ್ಲಾ ಹಳೆಯ ಮತ್ತು ಹೊಸದಾಗಿ ಯಾವುದೇ ರೀತಿಯ ಬರಹ ಬಂದರು ಗುಡ್ಡೆಯಾಕಿಕೊಂಡು ಓದುತ್ತಾ ಓದುತ್ತಾ ಒಂದು ರೀತಿಯ ಪಕ್ಕ ಅವರ ಪ್ಯಾನ್ ಆಗಿ ಬಿಡುತ್ತೇವೆ.

ಅಲ್ಲಿ ನಮಗೆ ಯಾವುದೇ ಪಂಥ, ಅವರು ಹೇಳುವ ವಿಚಾರ, ನೀಲುವು ಯಾವೊಂದರ ಬಗ್ಗೆ ಯೋಚಿಸಲು ಹೋಗುವುದಿಲ್ಲ. ಅವರು ಹೇಳುವ ಏನೊ ಒಂದು ಮಾತು ಅಥಾವ ದಾಟಿ ಮನಸ್ಸಿಗೆ ಹಿಡಿಸಿ ಬಿಟ್ಟರೆ ಸಾಕು ನಮಗೆ ಓದುವ ಕುತೂಹಲವಾಗಿ ಬಿಡುತ್ತದೆ. ಅಲ್ಲಿ ಬರುವ ಕಥೆ ನಮ್ಮ ನಮ್ಮ ಸಾಮಾನ್ಯ ಜೀವನದ ಪ್ರತಿಬಿಂಬವನ್ನು ಬೇರೆಯ ರೀತಿಯಲ್ಲಿ ತೋರಿಸಿ ಅದು ನಮ್ಮ ನಮ್ಮ ಬದುಕಿಗೆ ಹತ್ತಿರವಾಗಿ ಬಿಟ್ಟಿದ್ದರಂತೂ ಮುಗಿಯಿತು. ಅಲ್ಲಿಯೇ ಕರಗಿ ಬಿಟ್ಟಿರುತ್ತೇವೆ.

ಈ ರೀತಿಯ ಹುಂಬಿನಲ್ಲಿ ನಮ್ಮ ಓದನ್ನು ನಮ್ಮ ಹವ್ಯಾಸವನ್ನಾಗಿ ಮಾಡಿ ನಾವುಗಳು ಸ್ವಲ್ಪ ಸ್ವಲ್ಪ ಬೆಳೆದು. ಸ್ಪಲ್ಪ ಸ್ವಲ್ಪ ಯೋಚಿಸುವಂತಾದರೇ ನಾವುಗಳೇ ಬೇರೆ ಬೇರೆ ಲೇಖಕರ ಕಡೆ ಮುಖ ಮಾಡಿ ನಮ್ಮ ಹುಮ್ಮಸ್ಸಿನ ಕುತೂಹಲದ ದಾವಗ್ನಿಯನ್ನು ಪೂರೈಸುವ ಹಲವಾರು ಉತ್ತಮ ಸಾಹಿತಿಗಳ ಕಡೆಗೆ ಸಾಗುತ್ತೇವೆ. ಇದು ಎಂದು ನಿಲ್ಲದ ಪಯಣ.

ಈ ರೀತಿಯ ತಿಳುವಳಿಕೆಗೆ ಪತ್ರಿಕೆಗಳಲ್ಲಿ ಬರುವ ಪುಸ್ತಕ ವಿಮರ್ಶೆಗಳು ತುಂಬ ಸಹಕಾರಿಯಾಗುತ್ತವೆ. ನನಗೆ ಅನಿಸುತ್ತದೆ. ಪುಸ್ತಕ ವಿಮರ್ಶೆಯನ್ನು ಓದದೇ ಪುಸ್ತಕವನ್ನು ಓದುವ ಮಜಾ ವಿಮರ್ಶೆಯನ್ನು ಓದಿದಾಗ ಬರುವುದಿಲ್ಲವೇನೊ ತಿಳಿಯದು. ವಿಮರ್ಶಕ ತನ್ನ ತಿಳುವಳಿಕೆಯೆಂಬ ಮೂಸೆಯಲ್ಲಿ ವಿವಿಧ ಪರೀಕ್ಷೆಗಳನ್ನು ಆ ಕೃತಿಯ ಮೇಲೆ ಮಾಡಿ ತನ್ನ ಅಭಿಪ್ರಾಯಗಳನ್ನು ಸಾರ್ವತ್ರಿಕವಾಗಿ ಸಾಹಿತ್ಯದ ಮೊಲಕ ಕೃತಿಯನ್ನು ಒಂದು ವರ್ಗಕ್ಕೆ ಸೇರಿಸುತ್ತಾನೆ. ಆದರೇ ಸಾಮಾನ್ಯ ಓದುಗನಿಗೆ ಆ ರೀತಿಯ ಯಾವ ಉನ್ನತ ತಿಳುವಳಿಕೆ ಇರುವುದಿಲ್ಲ. ಅಲ್ಲಿ ಅವನ ತಂತುವಿಗೆ ಅದು ಚೆನ್ನಾಗಿ ಸ್ಪಂದಿಸಿ ಖುಷಿ ಕೊಡುತ್ತಾ ಓದಿಸಿಕೊಂಡು ಹೊಸ ಹೊಸ ವಿಷಯಗಳನ್ನು ತಿಳಿಸುತ್ತಾ ಹೋದರೆ ಅಷ್ಟೇ ಸಾಕು.

ಆದರೇ ವಿಮರ್ಶೆ ಮತ್ತು ವಿಮರ್ಶೆಯ ಬರಹಗಳು ನಮ್ಮ ಸಾಹಿತ್ಯ ರಂಗಕ್ಕೆ ಅವಶ್ಯ. ಯಾವುದೇ ಒಂದು ಕಲಾ ಕೃತಿಯನ್ನು ವಿಭಿನ್ನ ರೀತಿಯಲ್ಲಿ ಚಿಂತಿಸಿ ಅದನ್ನು ಪರಾಮರ್ಶಿಸುವುದು ಲೇಖಕನಿಗೆ ಅರಿವನ್ನು ಮತ್ತು ಅವನ ಮುಂದಿನ ಕೃತಿಯ ಬಗ್ಗೆ ಹೇಗೆ ಯೋಚಿಸಬೇಕು ಎಂಬುದರ ಬಗ್ಗೆ ಎಚ್ಚರಿಕೆಯ ಕಿವಿ ಮಾತನ್ನು ಕೊಟ್ಟಂತಾಗುತ್ತದೆ.

ಮತ್ತು ವಿಮರ್ಶಕ ತಾನು ಸುಖ ಸುಮ್ಮನೇ ಯಾವುದೇ ನೀಲುವುಗಳನ್ನು ಯಾವುದೇ ಕೃತಿಯ ಬಗ್ಗೆ ತಾಳುವುದಿಲ್ಲ. ಅವನು ಹುಟ್ಟಿ ಹಾಕುವ ಸಂವಾದದ ಬೇರುಗಳು ಹತ್ತು ಹಲವು ರೀತಿಯ ಕೃತಿಗಳ ಜೊತೆಯಲ್ಲಿ ಹೋಲಿಸಿ ಮತ್ತು ಇದರ ಉನ್ನತಿಯನ್ನು ತಿಳಿಸುವಂತದಾಗಿರುತ್ತದೆ. ಅದಕ್ಕಾಗಿ ಅವನ ದುಡಿತ ತುಡಿತ ದೊಡ್ಡದಿರುತ್ತದೆ. ಅದಕ್ಕಾಗಿ ಕನ್ನಡ ಭಾಷೆಯನ್ನು ಒಂದೇ ಅಲ್ಲದೇ ಜಗತ್ತಿನ ಅತಿ ಉನ್ನತವಾದ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಅವನ ತಿಳುವಳಿಕೆಯ ಪರಿಶ್ರಮವಿರುತ್ತದೆ. ಆಗ ಮಾತ್ರ ಅವನು ಹೇಳುವ ತಾಳುವ ನೀಲುವುಗಳು ಸಮರ್ಪಕವಾಗಿರುತ್ತವೆ. ಅವನು ಬರಹಗಾರನಿಗಿಂತ ಹೆಚ್ಚು ಹೆಚ್ಚು ವಿವಿಧ ಪ್ರಕಾರಗಳನ್ನು ಓದಿ ಇದು ಹೀಗೆ ಹೀಗೆ ಎಂದು ನಿರ್ಧರಿಸುವ ಛಾತಿಯನ್ನು ಗಳಿಸಿರುತ್ತಾನೆ.

ನಮ್ಮ ಕನ್ನಡ ಸಾಹಿತ್ಯ ರಂಗದಲ್ಲಿ ಹೀಗೆ ಇರುವ ಕೆಲವೇ ಕೆಲವು ಉತ್ತಮ ವಿಮರ್ಶಕರ ಚಿಕ್ಕ ಸಮೋಹವಿದೆ. ಅದು ಇನ್ನು ಬೆಳೆಯಬೇಕು. ಮತ್ತು ಸಾಮಾನ್ಯ ಓದುಗ ವಿಮರ್ಶ ಗ್ರಂಥಗಳನ್ನು ಕೊಂಡು ಓದುವಂತಾಗಬೇಕು. ಆಗ ಹೊಸದಾಗಿ ರಚಿತವಾಗುವ ಕೃತಿಗಳಿಗೆ ಒಂದು ಅಪರಂಜಿಯ ಕಳೆ ಬರುವುದು. ಆಗ ಅದೇ ಗಟ್ಟಿ ಸಾಹಿತ್ಯವಾಗಿ ನಿಲ್ಲುವುದು.