ಬುಧವಾರ, ಆಗಸ್ಟ್ 4, 2010

ಕವಲು ಹೊಸಕಿರಣ





ಎಸ್. ಎಲ್ ಭೈರಪ್ಪರನವರ ಹೊಸ ಕಾದಂಬರಿ "ಕವಲು" ಕಳೆದ ಒಂದು ತಿಂಗಳಿನಿಂದ ಸಾಹಿತ್ಯ ಲೋಕದಲ್ಲಿ ವಿವಿಧ ರೀತಿಯಲ್ಲಿ ಚರ್ಚಿತವಾಗುತ್ತಿರುವ ವಸ್ತುವಾಗಿದೆ. ಭೈರಪ್ಪರನವರು ಬಹು ದಿನದ ನಂತರ "ಅವರಣ" ದ ಬಳಿಕ ತಮ್ಮ ಮತ್ತೊಂದು ಕೃತಿಯ ಮೂಲಕ ಕನ್ನಡ ಓದುಗರಿಗೆ ಹೊಸತನದ ಜೊತೆಗೆ ಓದುವ ಖುಷಿಯನ್ನು ಕೊಟ್ಟಿದ್ದಾರೆ.


ಕನ್ನಡದಲ್ಲಿ ಅತ್ಯಂತ ಬೇಡಿಕೆಯ ಕಾದಂಬರಿಗಳನ್ನು ರಚಿಸುವಲ್ಲಿ ಇವರು ಒಬ್ಬರು. ಕನ್ನಡದ ಸಾಮಾನ್ಯ ಓದುಗ ಇವರ ಹೊಸ ಕಾದಂಬರಿಗಾಗಿ ಜಾತಕ ಪಕ್ಷಿಯಂತೆ ಕಾದುಕೊಂಡಿದ್ದು ಬಿಡುಗಡೆಯಾದ ದಿನವೇ ಖರೀದಿಸಿ ಓದಬೇಕು ಎಂಬ ಮನಸ್ಸಿನಲ್ಲಿರುವನು ಎಂದರೇ ಅತಿಶಯೋಕ್ತಿಯಲ್ಲ. ಯಾಕೆಂದರೆ ಜನರ ಮನವನ್ನು ಎಲ್ಲಾ ರೀತಿಯಲ್ಲಿ ಸೆಳೆಯುವ ಜಾಣ್ಮೆಯನ್ನು ಅವರ ಕೃತಿಗಳಲ್ಲಿ ಕಾಣಬಹುದಾಗಿದೆ. ಅದ್ದರಿಂದಲೇ ಅಯಸ್ಕಾಂತದ ರೂಪದಲ್ಲಿ ಅವರ ಎಲ್ಲಾ ಕೃತಿಗಳು ಕನ್ನಡ ಮನೆ ಮನದಲ್ಲಿ ಇಂದಿಗೂ ರಾರಾಜಿಸುತ್ತಿವೆ.


ಭೈರಪ್ಪನವರ ಯಾವುದೇ ಕೃತಿ ಹೊರಬಂದರು ಅದು ಸಾಹಿತ್ಯ ವಲಯದಲ್ಲಿ ಸಂಚಲನವನ್ನುಂಟು ಮಾಡುವಂತಾಗುತ್ತದೆ. ಅತಿ ಹೆಚ್ಚು ವಿಮರ್ಶೆಗೆ ಒಳಪಡುವ ಲೇಖಕ ಮತ್ತು ಅವನ ಕೃತಿಯೆಂದರೇ ಅದು ಭೈರಪ್ಪನವರ ಕಾಂದಬರಿಗಳು. ಇವರ ಕೃತಿ ಹೊರ ಬಂದವೆಂದರೆ ಅದರ ಹಿಂದೆಯೇ ಹತ್ತು ಹಲವು ಲೇಖಕರ ಕೃತಿಗಳು ಇವರ ಕೃತಿಯ ವಿರುದ್ಧವೇ ರಚಿಸಲ್ಪಡುತ್ತವೆ. ಅಂದರೆ ಯೋಚಿಸಿ! ಅವರ ಸಾಹಿತ್ಯ ಹೇಗೆ ಎಲ್ಲಾ ರೀತಿಯಲ್ಲಿ ಕೇವಲ ಸುಮ್ಮನೆ ಓದುವ ವಿಷಯವಾಗುವುದಿಲ್ಲ. ಅದು ಹತ್ತು ಹಲವು ರೀತಿಯಲ್ಲಿ ವಿಮರ್ಶೆ ಮತ್ತು ಚರ್ಚೆಗೆ ಒಳಪಡುತ್ತದೆ. ಮತ್ತು ಈ ರೀತಿಯ ಒಂದು ಚಿಂತನ-ಮಂಥನವನ್ನು ಇದುವರೆಗೂ ಯಾರ ಕೃತಿಗಳು ಒಳಪಟ್ಟಿಲ್ಲ ಎನ್ನುವುದು ಹಲವು ವಾರಗಳಿಂದ ಅವರ "ಕವಲು" ಹೊಸ ಕಾದಂಬರಿಯ ಬಗ್ಗೆ ವಿಶ್ವದ್ಯಾಂತ ಬರುತ್ತಿರುವ ಋಣ ಮತ್ತು ಧನಾತ್ಮಕ ಅಭಿಪ್ರಾಯಗಳೇ ಸಾಕ್ಷಿ.


ಈ ಕವಲು ಕಾದಂಬರಿಯ ದಾಖಲೆಯನ್ನು ಗಮನಿಸಿದರೆ ಎಂಥವರಿಗೂ ಆಶ್ಚರ್ಯವಾಗುವುದು. ಕೃತಿ ಬಿಡುಗಡೆಗೆ ಮುನ್ನವೇ ಎರಡನೇ ಆವೃತ್ತಿ ಅಚ್ಚಾಗಿತ್ತು. ಮತ್ತು ಬಿಡುಗಡೆಯಾದ ದಿನವೇ ಮೊದಲ ಪ್ರಕಾಶನದ ಎಲ್ಲಾ ಪ್ರತಿಗಳು ಮಾರಾಟವಾಗಿವೆ. ಎರಡನೇ ದಿನವೇ ಮೂರನೇ ಮುದ್ರಣವನ್ನು ಕಂಡು, ನಾಲ್ಕನೇ ದಿನವೇ ಐದನೇ ಮುದ್ರಣವಾಗಿ ಒಂದು ವಾರಕ್ಕೇ ಆರನೇ ಮುದ್ರಣವನ್ನು ಕಂಡಿದೆ. ಮತ್ತು ಒಂದೇ ವಾರಕ್ಕೆ ಭಾರತದ ವಿವಿಧ ಭಾಷೆಗಳಿಗೆ ತರ್ಜುಮೆಯಾಗಲು ತಯಾರಗಿದೆ.


ಕನ್ನಡ ನೆಲವಲ್ಲದೇ ಭಾರತದ ಬೇರೆ ಬೇರೆ ರಾಜ್ಯಗಳಲ್ಲೂ ಅತಿ ಹೆಚ್ಚು ಬೇಡಿಕೆಯಿರುವ ಕನ್ನಡ ಕಾದಂಬರಿಗಳೆಂದರೇ ಅದು ಭೈರಪ್ಪನವರ ಕಾಂದಬರಿಗಳು. ಅತಿ ಹೆಚ್ಚು ಜನಪ್ರಿಯ ಕಾದಂಬರಿಕಾರರಲ್ಲಿ ಇವರು ಮೂದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಇದು ನಮ್ಮ ಕರ್ನಾಟಕಕ್ಕೆ ಹೆಮ್ಮೆಯೇ ಸರಿ!


ಅವರ ಒಂದೊಂದು ಕಾದಂಬರಿಗಳು ಒಂದೊಂದು ರೀತಿಯಲ್ಲಿ ತಮ್ಮ ಛಾಪನ್ನು ಸ್ಥಾಪಿಸಿದ್ದಾವೆ. ಭಾರತ-ಭಾರತೀಯ ಸಂಸ್ಕೃತಿ,ನಮ್ಮ ಹಿಂದು ಸಂಸ್ಕೃತಿಯನ್ನು ,ಮಾನವ ಸಂಬಂಧಗಳು ಮತ್ತು ಕುಟುಂಬ ವ್ಯವಸ್ಥೆಯನ್ನು ಲೇಖಕರು ತಮ್ಮ ಕೃತಿಗಳ ಮೂಲಕ ಹೇಗೆ ನಿರೂಪಿಸಿದ್ದಾರೆ ಎಂದರೇ ಅದರ ಬಗ್ಗೆ ಎಂಥವರಿಗಾದರೂ ಕಾಳಜಿಯುಂಟಾಗುವಂತೆ ಮಾಡಿದ್ದಾರೆ.



ಅದಕ್ಕೆ ನಮ್ಮ ಜನಗಳು ಅಷ್ಟೊಂದು ಇಷ್ಟಪಟ್ಟು ಅವರ ಕಾದಂಬರಿಗಳನ್ನು ಮುಗಿ ಬಿದ್ದು ಓದುವುದು. ಅವರು ನೇಯುವ ಸಾಮಾಜಿಕತೆ ಮತ್ತು ಕೌಟಂಬಿಕ ನೆಲೆಯಲ್ಲಿ, ಮನುಷ್ಯ ಮನುಷ್ಯರ ನಡುವಿನ ಸಂಬಂಧ, ಸಂಸ್ಕೃತಿ ಮತ್ತು ಅದರ ನೀತಿ ಮೌಲ್ಯಗಳು. ನಮ್ಮ ಸಂಸ್ಕೃತಿಯ ಬಗ್ಗೆ ವ್ಯಕ್ತಿಯ ನೆಲೆಯಲ್ಲಿ ಹೇಗೆ ವೈರುಧ್ಯಗಳು ಉಂಟಾಗುವುವು ಎಂಬುದನ್ನು ಕಾದಂಬರಿಯ ವಿವಿಧ ಪಾತ್ರಗಳ ಪೋಷಣೆಯ ಮೂಲಕ ಮನನ ಮಾಡಿಸುತ್ತಾರೆ. ಅದಕ್ಕೆ ಸಾಕ್ಷಿಯೆಂದರೇ ವಂಶವೃಕ್ಷ, ದಾಟು, ತಂತು, ನಿರಾಕರಣ, ಗೃಹಭಂಗ ಇತ್ಯಾದಿ.


ಅವರ ಎಲ್ಲಾ ಹಳೆಯ ಕಾದಂಬರಿಗಳನ್ನು ಓದಿರುವ ಓದುಗ ಅವರಿಂದ ಇನ್ನೂ ಯಾವ ಯಾವ ಕೃತಿಗಳು ಬರುವುವೋ ಎಂದು ಕಾಯುವನು.


ಆದರೆ ನಾನು ಇತ್ತೀಚೆಗೆ "ಕವಲು" ಕಾದಂಬರಿಯ ಬಗ್ಗೆ ನಮ್ಮ ಬುದ್ಧಿವಂತ ಜನಗಳು ಮಾಡುತ್ತಿರುವ ವಿಮರ್ಶೆಯ ದಾಟಿಯನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಇಷ್ಟವಾಗಬಹುದು ಮತ್ತು ಅದೇ ಎಲ್ಲಾರ ಅಭಿರುಚಿಯಾಗಲಾರದು. ಕೆಲವು ವಿಮರ್ಶಕರು ಹೇಳುತ್ತಾರೆ ಭೈರಪ್ಪ ಸ್ತ್ರೀ ವಿರೋಧಿ,ಪ್ರಗತಿ ವಿರೋಧಿ, ಕಂದಾಚಾರ ಬೋಧಕ, ಸೆಕ್ಸ್ ವಿಜೃಂಭಕ ... ಹೀಗೆ ಹತ್ತು ಹಲವು ರೀತಿಯಲ್ಲಿ ಅವರ ಈ ಹೊಸ ಕಾದಂಬರಿಯ ಬಗ್ಗೆ ತಮ್ಮ ತಮ್ಮ ಬ್ಲಾಗ್, ಪತ್ರಿಕಾ ಲೇಖನಗಳಲ್ಲಿ ಚಿತ್ರಿಸುತ್ತಿರುವುದು ನಿಜವಾಗಿಯೂ ಬೇಸರದ ಸಂಗತಿ.


ಅವರು ಈ ಎಲ್ಲಾ ರೀತಿಯಲ್ಲಿ ತಮ್ಮ ವಿಚಾರಗಳನ್ನು ನಿರೊಪಿಸಲು ಕಾದಂಬರಿಯ ಮಾದ್ಯಮವನ್ನು ಬಳಸುವ ಅವಶ್ಯಕತೆಯಿರುವುದಿಲ್ಲ ಅಲ್ಲವಾ? ಕಾದಂಬರಿಯೇಂದರೆ ಅಲ್ಲಿ ಕೃತಿ ತನ್ನ ಪಾತ್ರಗಳ ಮೂಲಕ ಒಂದು ವಿಚಾರವನ್ನು ಸುತ್ತಲಿನ ಸನ್ನಿವೇಶ ಮತ್ತು ಪ್ರಸ್ತುತ ಭಾವನೆಗಳ ಸ್ಪಂದನೆಯ ಮುಖೇನ ಕೃತಿಕಾರನ ನಿರೀಕ್ಷೆಗೂ ಮೀರಿ ಬೆಳೆಯಬಹುದು ಮತ್ತು ಒಂದು ಸುಂದರ ಕಲಾಕೃತಿಯಾಗಿ ಅರಳಬಹುದು. ಇಲ್ಲಿ ಲೇಖಕನು ತನ್ನ ವಿಚಾರಗಳ ಭಾರವನ್ನು ಹಾಕಲು ಸಾಧ್ಯವಿಲ್ಲ. ಈ ರೀತಿ ಇರಬೇಕಾದರೇ ಇಡೀ ಕಾದಂಬರಿ ಕೇವಲ ಕೆಲವೇ ಕೆಲವು ವಿಚಾರಗಳ ಸುತ್ತ ಸುತ್ತಲು ಹೇಗೆ ಸಾಧ್ಯ? ಮತ್ತು ಅದು ಹೇಗೆ ಒಂದು ಕಾದಂಬರಿಯಾಗಿ ಮತ್ತು ಜನರ ಮೆಚ್ಚುಗೆಗೆ ಪಾತ್ರವಾಗಲು ಸಾಧ್ಯ?


ಕಾದಂಬರಿ ಓದುಗನನ್ನು ಹಿಡಿದಿಡುತ್ತದೆ ಎಂದರೇ ಯಾವುದೇ ಒಂದು ವಿಚಾರದಿಂದ ಅವನನ್ನು ಮಂತ್ರ ಮುಗ್ಧನಾಗಿ ಮಾಡಲು ಸಾಧ್ಯವಿಲ್ಲ. ಪಾತ್ರಗಳು ವಿವಿಧ ಸನ್ನಿವೇಶದಲ್ಲಿ ಹೇಗೆ ತಮ್ಮತನವನ್ನು ತೋರಿಸಿ ಅಲ್ಲಿ ಸಾಮಾಜಿಕ ಅಥವಾ ನೀತಿ ಮೌಲ್ಯಗಳನ್ನು ನಿರೂಪಿಸಿದಾಗ ಮಾತ್ರ ಅವುಗಳು ನಂಬಲರ್ಹ ವಿಚಾರವಾಗುತ್ತವೇ ವಿನಾಃ ಬರೀ ಯಾವುದೇ ಒಂದು ವಿಷಯದಿಂದಲ್ಲಾ.
ಇಷ್ಟಕ್ಕೂ ಕವಲಿನಲ್ಲಿರುವ ವಿಚಾರಗಳೇನೂ ಹೊಸ ಅಥವಾ ಅಪರಿಚಿತವಾದದ್ದಲ್ಲ. ಪಾತ್ರಗಳು ಸಹ ನಾವುಗಳು ನಮ್ಮ ಇಂದಿನ ಈ ಹೈಟೆಕ್ ಯುಗದಲ್ಲಿ ಕಾಣುವಂತ ಪಾತ್ರಗಳೇ. ಅವುಗಳ ಮಟ್ಟಿಗೆ ವೇಗದಲ್ಲಿ ಇಲ್ಲದಿದ್ದರೂ ಅವುಗಳ ಜಾಡನ್ನೇ ಹಿಡಿದಿರುವ ಎಷ್ಟೋ ಭಕ್ತರೂ ಇಂದು ಹೆರಳವಾಗಿ ಇಲ್ಲಿ ಕಾಣಬಹುದು ಅಲ್ಲವಾ?


ಕವಲು ಇಂದಿನ ನಮ್ಮಲ್ಲಿ ಕಾಣುತ್ತಿರುವ ಕತೆಯನ್ನೇ ಹೊಂದಿರುವುದರಿಂದ ನಮಗೆ ಅಷ್ಟೊಂದು ಗಂಭೀರವಾದ ಕತೆಯಾಗಿದೆ ಎಂದು ಅನಿಸುವುದಿಲ್ಲ. ತೀರ ಪ್ರಸ್ತುತ ಮತ್ತು ತೀರ ಮಾಮೊಲಿ ಕತೆಯಾಗಿ ಎಲ್ಲವೂ ನಮಗೆ ತಿಳಿದಿದೆಯೇನೂ ಎನಿಸುತ್ತದೆ. ಆದರೆ ಅಲ್ಲಿ ಲೇಖಕರು ತಾವು ಸೃಷ್ಟಿಸಿರುವ ಪಾತ್ರಗಳ ಮೂಲಕ ಕೊಡುತ್ತಿರುವ ಸಂದೇಶ ಮತ್ತು ಎಚ್ಚರಿಕೆಯ ಮಾತುಗಳು ನಮ್ಮ ಇಂದಿನ ಭಾರತೀಯ ಕೌಟಂಬಿಕ ವ್ಯವಸ್ಥೆಗೆ ಒಂದು ಕಿವಿಮಾತಾಗಿದೆ ಎಂದರೇ ತಪ್ಪಲ್ಲ.


ನಾವುಗಳು ಅತಿ ಮುಂದುವರೆಯುತ್ತ ಸಾಮಾನ್ಯವಾಗಿ ಅತಿ ಚಿಕ್ಕ ಚಿಕ್ಕ ವಿಷಯಗಳನ್ನು ಬಿಟ್ಟು ಕೊಡುತ್ತಾ, ಹೋಗುತ್ತಾ ನಗಣ್ಯಗೊಳಿಸುತ್ತಿರುವುದು ಮುಂದೊಂದು ದಿನ ಈ ನಮ್ಮ ಗಟ್ಟಿ ಕೌಟಂಬಿಕ ಬೇರನ್ನೇ ಅಲ್ಲಾಡಿಸುವ ದಿನಗಳು ಬರುವ ಮುನ್ಸೊಚನೆಯಾಗಿದೆ. ಹಾಗೆಯೇ ಕಾದಂಬರಿಯಲ್ಲಿ ಬರುವ ಇತ್ತೀಚಿನ ನವ ತರಣ/ತರುಣಿ ಜನಾಂಗ ನಮ್ಮ ಇಂದಿನ ಸ್ಥಿತಿಯ ಬಗ್ಗೆ ಅರಿವುಗೊಂಡು ಅದಕ್ಕಾಗಿ ನಮ್ಮ ಹಳ್ಳಿಯ ಕುಟುಂಬ ಮತ್ತು ಸಂಬಂಧಗಳ ವ್ಯವಸ್ಥೆಯನ್ನು ನೋಡಿ ಅದರ ನವೀಕರಣಕ್ಕೆ ಮತ್ತು ರಕ್ಷಣೆಗೆ ಮುಂದಾಗುತ್ತಿರುವುದು ಆಶದಾಯಕವಾದ ವಿಷಯ.


ಈ ರೀತಿಯ ಒಂದು ಅರಿವನ್ನುಂಟು ಮಾಡುವಲ್ಲಿ ಕವಲು ಹೊಸ ಸಾಧನವಾಗಿದೆ ಎಂದು ಮಾತ್ರ ಹೇಳಬಹುದು. ಸಾಕಷ್ಟು ವಿಷಯಗಳನ್ನು ಒಂದೇ ಕಡೆ ನಿರೀಕ್ಷಿಸುವುದು ತಪ್ಪು ಸಹ. ಆದರೆ ಅದರ ಎಳೆ ಮತ್ತು ನಮ್ಮ ಸಂಸ್ಕೃತಿ ಮತ್ತು ಮಾನವನ ಸಂಬಂಧಗಳ ಬಗ್ಗೆ ಪ್ರತಿಯೊಬ್ಬರಲ್ಲೂ ಇರಬೇಕಾದ ಕಾಳಜಿ ಈ ಮೂಲಕ ಜಾಗೃತವಾಗಲಿ ಎಂಬುದು ಎಲ್ಲಾ ಓದುಗರ ಮತ್ತು ಭೈರಪ್ಪನವರ ಆಸೆಯಾಗಿದೆ ಅಲ್ಲವಾ!


ಅದು ಬಿಟ್ಟು ಕಾದಂಬರಿಗೆ ಸುಖ ಸುಮ್ಮನೇ ಒಂದು ಗಡಿ ರೇಖೆಯನ್ನು ಅಡ್ಡಪಟ್ಟಿಯನ್ನು ಕಟ್ಟುವುದು ಬೇಡ. ಇಲ್ಲವಾದರೇ ನಮ್ಮ ಜನಗಳು ಯಾಕೇ ಇನ್ನೂ ಭೈರಪ್ಪನವರಿಂದ ಉತ್ತಮ ಉತ್ತಮ ಕಾದಂಬರಿಗಳು ಬರಲಿ ಎಂದು ಕಾಯುತ್ತಿರುತ್ತಾರೆ. ಸಾಮಾನ್ಯ ಓದುಗನಿಗೆ ಯಾವ ಪಂಥ, ಸಾಹಿತ್ಯ ವಿಂಗಡಣೆಗಳು ಬೇಕಾಗಿಲ್ಲ. ಅವನಿಗೆ ಆ ಕ್ಷಣಕ್ಕೆ ಅದು ಇಷ್ಟವಾಗಿ ತನ್ನ ಮನಸ್ಸಿಗೆ ತಾಕಿ ತನ್ನ ಚಿಂತನೆಯ ದಾಟಿಗೆ ಮೀಟು ತಂತಿಯಾದರೆ ಸಾಕು. ಇಂಥ ಅದೇಷ್ಟೋ ಕೃತಿಗಳಿಗೆ ತನ್ನ ಮನದ ಮೂಲೆಯಲ್ಲಿ ಯಾವಾಗಲೂ ಒಂದು ಜಾಗವನ್ನು ಗಟ್ಟಿಯಾಗಿ ಇಟ್ಟಿರುತ್ತಾನೆ ಅಷ್ಟೇ.