ಶನಿವಾರ, ಜೂನ್ 26, 2010

ಮದುವೆಯ ಈ ಬಂಧ

ಇಂದು ನಮ್ಮ ಉತ್ತರ ಭಾರತದಲ್ಲಿ ನಡೆಯುತ್ತಿರುವ "ಮರ್ಯಾದಾ ಹತ್ಯೆ" ಒಂದು ಕ್ಷಣ ಎಂಥವರನ್ನು ಬೆಚ್ಚಿ ಬಿಳಿಸುತ್ತಿದೆ. ದಿನ ನಿತ್ಯ ವಿವಿಧ ಊರುಗಳಲ್ಲಿ ಜೋಡಿಗಳ ಮಾರಣ ಹೋಮ ನಡೆಸುತ್ತಿದ್ದಾರೆ. ಈ ವಿಷಯ ಇಂದು ಸಮೋಹ ಮಾಧ್ಯಮಗಳಲ್ಲಿ ಮತ್ತು ಸರ್ಕಾರದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದೆ.

ಇದರ ಬಗ್ಗೆ ಹಲವಾರು ಪತ್ರಿಕೆಗಳಲ್ಲಿ ಹಲವಾರು ಪಂಡಿತರು ಬುದ್ಧಿಜೀವಿಗಳು ತಮ್ಮ ವಿಮರ್ಶೆ ಮತ್ತು ಅನಿಸಿಕೆಗಳನ್ನು ಜನರ ಮುಂದೆ ಇಡುತ್ತಿದ್ದಾರೆ. ಅದು ಸರಿ! ನಮ್ಮ ಜನಗಳು ಪ್ರೇಮಿಸಿ, ಅನ್ಯ ಜಾತಿ ಮತ್ತು ಅನ್ಯ ಗೋತ್ರದವರನ್ನು ಮದುವೆಯಾದರೆ ಅವರನ್ನು ಮುಗಿಸು ಮಟ್ಟಕ್ಕೆ ಹೋಗುತ್ತಿರುವುದು ಇಂದಿನ ಸಮಾಜದಲ್ಲಿ ನಮ್ಮ ಮನುಷ್ಯತ್ವವನ್ನೇ ಪ್ರಶ್ನೆ ಮಾಡುವಂತಾಗಿದೆ.
ಈ ಜಾತಿ ಪದ್ಧತಿ ಎಂದು ಶುರವಾಯಿತೋ, ಕಟ್ಟಳೆಗಳನ್ನು ಯಾರು ಜಾರಿ ಮಾಡಿದರೋ, ಇದು ಈ ಶತಮಾನದ ಅಂಟು ಜಾಡ್ಯವಾಗಿ ಅಂದಿನಿಂದ ಇಂದಿನವರೆಗೂ ನಿರಂತರವಾಗಿ ನಮ್ಮ ಸಮಾಜವನ್ನು ಕಾಡುತ್ತಿದೆ. ಒಂದೇ ಸೂರು ಎಂಬ ಭಾರತಮಾತೆಯ ಮಡಿಲಲ್ಲಿ ಜೀವಿಸುತ್ತಿರುವ ನಾವುಗಳೆಲ್ಲಾ ತುಂಬ ವೈಕ್ತಿಕವಾಗಿ ಈ "ಜಾತಿ" ಮಾತು ಬಂದಾಗ ತುಂಬ ಚಿಕ್ಕದಾಗಿ ಯೋಚಿಸಲು ತೊಡಗುತ್ತೇವೆ.

ಈ ರೀತಿಯ ಜಾತಿ ವಿಂಗಡಣೆ ನಮ್ಮ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸದಿಂದ ಅರ್ಜಿ ಪಾರಂಗಳಲ್ಲಿ ಭರ್ತಿ ಮಾಡುವ ಮೂಲಕ ಪ್ರಾರಂಭಗೂಂಡು ನಾವು ಬೆಳೆಯುತ್ತಾ ಅದನ್ನು ಬೆಳೆಸುತ್ತಾ ಪುನಃ ನಮ್ಮ ಮಕ್ಕಳಿಗೆ ವರ್ಗಾವಣೆ ಮಾಡುತ್ತೇವೆ. ಯಾವ ರೀತಿಯಲ್ಲಿ ಉಚ್ಚರು, ನೀಚರು ಎಂದು ಕೇವಲ ವಿವಿಧ ಜಾತಿಗಳಲ್ಲಿ ಹುಟ್ಟಿದ ಕಾರಣದಿಂದ ನಿರ್ಧರಿಸಿ ಕೇವಲವಾಗಿ ಕಾಣುವುದು ವಿಪರ್ಯಾಸ. ಹಾಗೆಯೇ ಈ ಒಂದು ವ್ಯವಸ್ಥೆಯನ್ನು ನಮ್ಮ ರಾಜಕೀಯವಾಗಿ ನಾಯಕರುಗಳು ತಮ್ಮ ಓಟ್ ಬ್ಯಾಂಕ್ ಮಾಡಿಕೊಂಡು ಅದರ ಮೇಲೆ ತಮ್ಮ ಸವಾರಿ ಮಾಡುತ್ತಿರುವುದು ಇನ್ನೂ ಶೋಚನೀಯ. ಬಾಯಲ್ಲಿ ಮಾತ್ರ ಜಾತ್ಯಾತೀತತೆ ಎಂಬ ಬೊಗಳೆ ಬಿಡುವ ಇವರುಗಳು ತಮ್ಮ ಗೆಲುವಿಗಾಗಿ ಪುನಃ ಆ ಜಾತಿ ಈ ಜಾತಿ ಎಂಬ ಆಚರಣೆಯನ್ನು ಜೀವಂತವಾಗಿಟ್ಟು ತಮ್ಮ ಸಾಧನೆಯನ್ನು ಮೆರೆಯುತ್ತಾರೆ. ವಿವಿಧ ಜಾತಿಗೆ ವಿವಿಧ ರೀತಿಯ ನಾಯಕರುಗಳು, ಮಠ ಮಾನ್ಯಗಳು, ಶಿಕ್ಷಣ ಸಂಸ್ಥೆಗಳು, ಉದ್ಯೋಗಗಳು ಇತ್ಯಾದಿ ನಾನಾ ರೀತಿಯ ಸ್ಥಾವರಗಳನ್ನು ನಿರ್ಮಿಸಿ ಇಡೀ ಸಮುದಾಯವನ್ನು ಅದರಲ್ಲಿ ನರಳುವಂತೆ ಮಾಡುವವರು.

ಆದರೆ ಈ ನಮ್ಮ ಪ್ರಕೃತಿ ಹತ್ತು ಹಲವು ಉನ್ನತವಾದ ಮೌಲ್ಯಯುತವಾದ ಕೊಡುಗೆಗಳನ್ನು ದಯಪಾಲಿಸಿದೆ. ಮನುಷ್ಯ ತನ್ನ ಯೌವನಕ್ಕೆ ಕಾಲು ಇಟ್ಟಾಗ ತನಗಾಗಿ ಸಂಗಾತಿಯನ್ನು ಹುಡುಕುವ ವೇಳೆ "ಪ್ರೇಮ ಕುರುಡು" ಎಂಬಂತೆ ಈ ಮೇಲಿನ ಎಲ್ಲಾ ಜಾತಿಯ ಎಲ್ಲೆಗಳನ್ನು ಮೀರಿ, ತನ್ನವರು ರೂಪಿಸಿದ ಈ ಎಲ್ಲಾ ಕಟ್ಟುಪಾಡುಗಳನ್ನು ಜಾಡಿಸಿ ತನ್ನ ಜೀವನದ ಸಾಥಿಯನ್ನು ಆರಿಸಿಕೊಳ್ಳುವನು. ಆ ಸಮಯಕ್ಕೆ ಅವನಿಗೆ ಅದು ಯಾವುದೂ ಅವನ ಮನಸ್ಸಿಗೆ ಬರುವುದಿಲ್ಲ. ತಾನು ಅವನೊಡನೆ/ಅವಳೊಡನೆ ಮುಂದೆ ಚೆನ್ನಾಗಿ ಬಾಳಬಹುದು ಎಂದು ಅನಿಸಿದರೆ ಅದರಲ್ಲಿ ಮುಂದುವರಿಯುತ್ತಾರೆ ಅದಕ್ಕೆ ಹೇಳುವುದು ಅದನ್ನು "ಪ್ರೀತಿ" ಎಂದು.

ಪ್ರೀತಿಸಲ್ಪಟ್ಟವರು ಮುಂದೆ ಮದುವೆಯಾಗಲು ಪಡುವ ಪಾಡು ದೇವರಿಗೆ ಪ್ರೀತಿ. ತನ್ನ ಹೆತ್ತವರಿಂದ ಪ್ರಾರಂಭಿಸಿ ತನ್ನ ಸುತ್ತಲಿನ ನೆರೆಹೊರೆಯ ಸಮಾಜದವರಿಂದೆಲ್ಲಾ ಅಡ್ಡಿ ಆತಂಕಗಳನ್ನು ಅನುಭವಿಸಬೇಕಾಗುತ್ತದೆ.

ಈ ರೀತಿಯ ಆಡಚಣೆಗಳ ಮಧ್ಯೆ ಹಾಗೋ ಹೀಗೋ ಎರಡು ಕುಟುಂಬಗಳಿಂದ ಒಪ್ಪಿಗೆಯನ್ನು ಪಡೆದು ಮದುವೆಯಾದರೂ ತನ್ನ ಸುತ್ತಲಿನ ಸಂಬಂಧಿಕರು ಮತ್ತು ಸಮಾಜ ಆ ಜೋಡಿಗಳನ್ನು ದೊಡ್ಡ ವಿಲನ್ ಗಳಾಗಿ ಬಿಂಬಿಸುತ್ತಾರೆ. ಸಮಾಜ ಅದು ಎಂದು ಇವರುಗಳು ಮಾಡಿದ ಸಂಬಂಧ ಸರಿ ಎಂದು ಹೇಳುವುದಿಲ್ಲ. ಯಾಕೆಂದರೇ ಇದು ತೀರ ವಿಭಿನ್ನವಾಗಿ ಅವರುಗಳಿಗೆ ಕಾಣಿಸುತ್ತದೆ. ಕಾರಣ ಕೇವಲ "ಜಾತೀಕಾರಣ". ಈ ರೀತಿಯ ಕಷ್ಟ ಕಾರ್ಪಣ್ಯಗಳು, ವಿರೋಧಭಾಸಗಳು ನಮ್ಮ ಹಿಂದಿನ ವಚನಕಾರರ ದಿನಗಳಿಂದಲೂ ನಮ್ಮಲ್ಲಿ ಜೀವಂತವಾಗಿವೆ. ಈ ರೀತಿಯ ಭಾವನೆಗಳಿಗೆ ಹಲವಾರು ಕಾರಣಗಳು ಇರಬಹುದು. ಆದರೂ ಈ ರೀತಿಯ ಭಾವನೆಗಳ ಅಳಿವಿಗೆ ಮತ್ತು ನಾವುಗಳು ಯೋಚಿಸುವ ದಾಟಿಯ ಬದಲಾವಣೆಗೆಗೆ ಹಲವು ದಿನಗಳು ಹಿಡಿಯಬಹುದು ಮತ್ತು ಅದಕ್ಕೆ ಕಾಲವೇ ಉತ್ತರವಾಗಬಹುದು.

ಹಾಗೆಯೇ ನಾವುಗಳು ಸೂಕ್ಷ್ಮವಾಗಿ ಈ ವಿವಿಧ ಜಾತಿಗಳಲ್ಲಿರುವ ಹಲವು ದಿನಗಳಿಂದ ರೂಡಿಸಿಕೊಂಡು ಬಂದಿರುವ ಕುಟುಂಬದ ವಿವಿಧ ರೀತಿಯ ಸಂಸ್ಕೃತಿ ಮತ್ತು ಆಚರಣೆಗಳು ಏಕರೂಪವಾಗಿಲ್ಲದಿರುವುದು ಈ ರೀತಿಯ ವಿರೋಧಕ್ಕೆ ಮುಖ್ಯ ಕಾರಣವಾಗಿರಬಹುದು. ಮತ್ತು ಹೆತ್ತವರಿಗೆ ನಮ್ಮ ಮಕ್ಕಳು ಒಂದೇ ಕ್ಷಣ ಬೇರೊಂದು ಸಂಸ್ಕೃತಿ ಆಚರಣೆಯ, ಪದ್ಧತಿಯವರನ್ನು ವರಿಸಿದಾಗ ಅವರಿಗೆ ಅಘಾತವಾಗುವುದು ಸಹಜ. ಅಲ್ಲಿ ಈ ಸಂಸ್ಕೃತಿಗಳ- ರೀತಿ - ನೀತಿಗಳ ಹೊಂದಾಣಿಕೆಯ ಸಮಸ್ಯೆ ದೊಡ್ಡದಾಗಿ ಕಾಣಿಸಿ ಕಸಿವಿಸಿಯಾಗಬಹುದೇನೋ. ಮುಂದೆ ಹೀಗೆ ಬೇರೆ ಬೇರೆಯ ಕುಟುಂಬಗಳ ಹಿನ್ನೆಲೆಯನ್ನು ಹೊಂದಿರುವ ಹೆಣ್ಣು ಗಂಡುಗಳು ಯಾರ ಆಚರಣೆಯನ್ನು ಮತ್ತು ಸಂಸ್ಕೃತಿಯನ್ನು ಪಾಲಿಸಬೇಕು ಅಥವಾ ಬೇಡವೆ, ಅನ್ನಿಸಬಹುದು. ಇಲ್ಲು ಮತ್ತೆ ಅವರುಗಳು ನಮ್ಮದು ಮುಖ್ಯ ನಿಮ್ಮದು ಮುಖ್ಯ ಎಂಬ ರೀತಿಯಲ್ಲಿ ಕುಟುಂಬಗಳ ಮಧ್ಯೆ ಬಿನ್ನಬಿಪ್ರಾಯ ಬರಬಹುದು, ಹಾಗೆಯೇ ಈ ನವ ಜೋಡಿ ಯಾವುದಾದರೂ ಒಂದಕ್ಕೆ ಜೈ ಅನ್ನಬಹುದು. ಇದು ತಮಗೆ ಹುಟ್ಟಿದ ಮಕ್ಕಳವರೆಗೂ ಹೀಗೆ ದಂದ್ವ ಮುಂದುವರಿಯಬಹುದು.

ಇದು ಎಷ್ಟಾದರೂ ತಾನು ಹುಟ್ಟಿ ಬೆಳೆದ ತನ್ನತನದ ಕುಟುಂಬದ ಪದ್ಧತಿ,ಆಚರಣೆಯ ಬೇರಿಗೆ ತೀಲಾಂಜಲಿಯನ್ನು ಇಡಬೇಕಾದ ಸಂದರ್ಭ. ಆದರೆ ಆ ರೀತಿ ತಮ್ಮ ಮೂಲತನ, ಆಚರಣೆ, ಪದ್ಧತಿ, ಸಂಸ್ಕೃತಿಗಳನ್ನು ಆಷ್ಟೊಂದು ಸುಲಭವಾಗಿ ಬಿಡಲು ಆ ನವ ಜೋಡಿಗೆ ಎಷ್ಟರ ಮಟ್ಟಿಗೆ ಸಾಧ್ಯ?

ಗುರುವಾರ, ಜೂನ್ 17, 2010

ಜೂನ್ ೨೧ ವಿಶ್ವ ಸಂಗೀತ ದಿನ

ಜೂನ್ ೨೧ ವಿಶ್ವ ಸಂಗೀತ ದಿನ

ತನ್ಮಯನಾಗಿರುವುದು ಒಂದು ತಪಸ್ಸೆ ಎನ್ನಬಹುದು. ತನ್ನನ್ನೇ ತಾನು ಮರೆತು ಅದರಲ್ಲಿ ಲೀನವಾಗಿ ತನ್ನ ಸುತ್ತಲಿನ ಸಮಸ್ತವನ್ನು ಶೂನ್ಯವಾಗಿ ಮಾಡಿಕೊಂಡು ಜೀವಿಸುವುದು ಒಂದು ಘಳಿಗೆಯು ಸಾಧ್ಯವಾಗುವುದುದಿಲ್ಲ ನಮ್ಮ ನಿಮ್ಮಂತ ಸಾಮಾನ್ಯರಿಗೆ.


ಆದರೆ ನಾನು ಗಮನಿಸಿದಂತೆ ಆ ರೀತಿಯ ಏಕಾಗ್ರತೆಯನ್ನು ತಮ್ಮದಾಗಿಸಿಕೊಂಡು ಅದನ್ನು ಪ್ರತಿಯೊಂದು ನಿಮಿಷ ಅನುಭವಿಸುವವರು ಮುಖ್ಯವಾಗಿ ಕಲಾವಿದರೇ ಸರಿ.


ಕಲೆಯೆಂಬುದು ಮನುಷ್ಯನಿಗೆ ಉತ್ಸಾಹವನ್ನು ಪ್ರತಿ ನಿಮಿಷ ನಿಮಿಷವು ಹೊಸ ಹುಮ್ಮಸ್ಸನ್ನು ಕೊಡುವ ಸಾಧನವಾಗಿದೆ. ಅದ್ದರಿಂದ ನಮ್ಮ ನಾಡಿನ ಎಲ್ಲಾ ಮಹಾನ್ ಕಲಾವಿದರೆಲ್ಲಾ ಧನ್ಯರು.

ಈ ನಿದರ್ಶನಕ್ಕೆ ಸಾಕ್ಷಿ ಭೂತವಾಗಿ ನಾನೇ ಕಣ್ಣಾರೆ ಕಂಡ ಮನ್ನೆಯ (ನವಂಬರ ೨೦೦೮) ಸಿ. ಅಶ್ವತ್ಧರವರ ಸಂಗೀತ ಸಂಜೆ ಕಾರ್ಯಕ್ರಮವೇ ಸಾಕ್ಷಿ. ಅಶ್ವತ್ಥರವರು ಸುಮ್ಮನೆ ಕುಳಿತಿದ್ದಾಗ ನಮ್ಮ ನಿಮ್ಮಂತೆಯೇ ಸಾದ ಸೀದಾವಾಗಿ ಕಾಣುವರು. ಅವರು ಹಾಡಲು ಪ್ರಾರಂಭಿಸಿದ ಯಾವುದೇ ಶಿಶುನಾಳ ಶರೀಪರ, ಕುವೆಂಪುರವರ, ಬೇಂದ್ರಯವರ ಕವಿತೆಗಳ ಸಾಲುಗಳನ್ನು ತಮ್ಮ ವಿಶಿಷ್ಠ ಕಂಠದಿಂದ ಅದಕ್ಕೆ ಅವರು ನೀಡುವ ಮಂತ್ರ ಮುಗ್ಧ ಸಂಗೀತ ಸ್ಪರ್ಶದಿಂದ ಕವಿಯ ಹಾಡು ಇಷ್ಟೋಂದು ಕೂಮಲವಾಗಿ ಕರ್ಣಾನಂದವಗುತ್ತಿದ್ದರೆ.. ಹಾ! ಅಶ್ವತ್ಧರವರು ಎಷ್ಟೊಂದು ತನ್ಮಯತೆಯಿಂದ ಅದರಲ್ಲಿ ಮುಳುಗಿ ತಮ್ಮನ್ನೇ ತಾವು ಮರೆತು ಅದರೊಂದಿಗೆ ಲಯಕ್ಕೆ ತಕ್ಕ ಹಾಗೆಯೇ ಆ ಕೈ- ಮೈಯ ಹಾವಾ - ಭಾವಗಳು, ಕಾಲಿನ ಹೆಜ್ಜೆಗಳು ಅವರು ಎಷ್ಟರ ಮಟ್ಟಿಗೆ ತಮ್ಮನ್ನು ತಾವು ಮರೆತರು ಎಂಬುದಕ್ಕೆ ಚಿತ್ರದುರ್ಗದ ಸಮಸ್ತ ಕಲಾರಸಿಕರ ಮುಖದಲ್ಲಿ ಉಂಟದ ಮಹಾನಂದದ ಬೆಳಕೆ ಸಾಕ್ಷಿ. ಅಶ್ವತ್ಧರವರ ಅಮೋಘ ಸಂಗೀತದ ಮೊಡಿಯ ಪ್ರಭಾವವಳಿಯನ್ನು ಅನುಭವಿಸಿದರು ಎಂಬುದಕ್ಕೆ ಅಂದಿನ ಆ ಸಹಸ್ರಾರು ಜನರ ಚಪ್ಪಾಳೆ ಮತ್ತು ಉದ್ಗಾರವೇ ನಿದರ್ಶನವಾಗಿತ್ತು.

ಆಗಲೇ ನನಗೆ ಅನಿಸಿತು ಕಲಾವಿದರೇಷ್ಟು ಪುಣ್ಯವಂತರೂ! ಕೆಲ ಕ್ಷಣ ತಮ್ಮನ್ನು ತಾವು ಅಷ್ಟೊಂದು ಮಂದಿಯಲ್ಲಿ ತಾವೇ ಕಳೆದು ಹೋಗುವಂತೆ ಆ ಗಾಯನ ಲೋಕದಲ್ಲಿ ವಿರಮಿಸುವ ಸಮಯವೇ "ಸಮಾಧಿ". ಮತ್ತು ಆ ಪ್ರಭಾವಳಿಯೇ ಶಿವಮಯ ಎಂಬಂತೆ. ಸಂಗೀತಕ್ಕೆ ವಿಶಿಷ್ಟವಾದ ಶಕ್ತಿಯಿದೆ ಎಂಬುದು ಅಲ್ಲಿ ಇಲ್ಲಿ ಕೇಳಿದ್ದೆ ಅದರೆ ನಿಜವಾಗಿಯೂ ನೇರವಾಗಿ ನಾನು ಅಂದು ಪ್ರತ್ಯಕ್ಷ ಅನುಭವಿಸಿದೆ.

ಹಾಗೆಯೇ ನಮ್ಮ ಕಲಾವಿದರು ಯಾವುದೇ ಕಲಾಕೃತಿಯನ್ನು ರಚಿಸುವಾಗ ಅವರು ಅನುಭವಿಸುವ ಆ ಕ್ರಿಯಶೀಲ ಸಂತೋಷದ ಸಮಯವನ್ನು ಅವರ ಆ ಕಲಾಕೃತಿಗಳಲ್ಲಿ ನಾವು ಕಾಣಬಹುದು.

ಕಲಾವಿದರು ತಾವು ಬೇರೆಯವರಿಗಾಗಿ ರಚಿಸದೆ, ಹಾಡದೆ, ನುಡಿಸದೆ ಕಲಾದೇವತೆಯ ಉಪಾಸನೆಯನ್ನು ಮಾಡುತ್ತಿದ್ದಾರೆ ಎಂಬ ರೀತಿಯಲ್ಲಿ ಅದನ್ನು ಅನುಭವಿಸಿ ಹಾಡಿದಾಗ ಅದೇ ಸರ್ವ ಶ್ರೇಷ್ಠ ಕಲಾಕೃತಿಯಾಗುತ್ತದೆ. ಹಾಗೆಯೇ ಇಡಿ ಜಗತ್ತು ಸಹ ಮೆಚ್ಚುವಂತಾಗಿ ಎಲ್ಲಾರ ಮನಸ್ಸನ್ನು ಪ್ರಫುಲ್ಲತೆಯಿಂದ ಇಡುತ್ತದೆ.

ಅದಕ್ಕೆ ಇರಬೇಕು ನಮ್ಮ ಪುರಾಣ ಇತಿಹಾಸಗಳನ್ನು ಗಮನಿಸಿದಾಗ ಬೇರೆ ಯಾವ ರಂಗಕ್ಕೂ ನೀಡದ ಮನ್ನಣೆಯನ್ನು, ಸ್ಥಾನ ಮಾನವನ್ನು ನಾವುಗಳು "ಕಲಾ ಸಂಸ್ಕೃತಿಗೆ" ನೀಡಿದ್ದೇವೆ.

ನಮ್ಮ ಈ ಜಂಜಾಟದ ಜೀವನದ ಕೆಲವು ಸಮಯಗಳನ್ನು ಈ ರೀತಿಯ ಚಟುವಟಿಕೆಗಳಿಗೆ ಹಬ್ಬ ಹರಿದಿನ, ವಿಶೇಷ ಸಮಾರಂಭಗಳಲ್ಲಿ ಮೀಸಲಿಟ್ಟು ನಮ್ಮನ್ನು ನಾವುಗಳು ಮರೆಯುವ ಸಲುವಾಗಿ ನಮ್ಮ ಹಿರಿಯರು ಈ ರೀತಿಯ ಎಲ್ಲಾ ಕಲಾ ಆಚರಣೆಗಳನ್ನು ರೂಪಿಸಿರುವುದು ಪ್ರಶಂಸನೀಯ.

ಹಾಗೆಯೇ ಇಂದಿನ ನಮ್ಮ ಮುಂದುವರಿದ ತಂತ್ರಜ್ಞಾನ ಯುಗದಲ್ಲಿ ಅದರ ಮುಂದುವರಿಕೆಯೇನೂ ಎಂಬಂತೆ ವಿವಿಧ ಉಪಕರಣಗಳ ಸಹಾಯದಿಂದ ಆ ರಸ ಸಮಯಗಳನ್ನು ಮುದ್ರಿಸಿಕೊಂಡು ಪುನಃ ಪುನಃ ನಾವುಗಳು ಸವಿಯುವಂತಾಗಿದೆ.

ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲೂ ಇದಕ್ಕಾಗಿ ಪ್ರಮುಖ ಸ್ಥಾನವನ್ನು ನೀಡಿರುವುದು ನಮ್ಮ ಪೋಷಕರು ನಿಜವಾದ ಕಲಾ ಪ್ರತಿಭೆಗಳಿಗೆ ಸರಿಯಾದ ಸೌಲಭ್ಯಗಳನ್ನು ನೀಡಿ ಎಳೆ ವಯಸ್ಸಿನಿಂದಲೇ ಗುರುತಿಸಿ ಬೆಳೆಸಲು ಸಹಾಯಕವಾಗಿದೆ.

ಈ ರೀತಿಯ ಯಾವುದೇ ಕಲಾ ವ್ಯಕ್ತಿಗಳು ಒಂದು ಅಮೂಲ್ಯವಾದ ಗುಣ ವಿಶಿಷ್ಟವನ್ನು ಹೊಂದಿರುತ್ತಾರೆ. ನಿಜವಾದ ಕಲಾವಿದ ಈ ನಮ್ಮ ಸಣ್ಣತನ, ಸುಳ್ಳು, ಅಹಾಂಕರ, ಬೇದ, ವೈಷ್ಯಮ್ಯ ಎಲ್ಲವನ್ನು ಅವನು ಕ್ಷಣಕಾಲ ಮರೆತು ಆ ಕಲಾ ಸಂಗೀತ, ಸಾಹಿತ್ಯ, ಚಿತ್ರಣದಲ್ಲಿ ನಾವೇಲ್ಲಾ ಒಂದೇ ಮತ್ತು ಬೇರೆಲ್ಲಾ ರೀತಿಯ ಕ್ಷುಲ್ಲಕ ವಿಚಾರಗಳು ನಗಾಣ್ಯ ಎಂಬಂತೆ ತೋರಿಸಿ ನಮ್ಮ "ಮನೆ - ಮನಗಳ" ಪುನರಪಿ ಜನನಕ್ಕೆ ಕಾರಣೀ ಭೂತನಾಗುತ್ತಾನೆ.

ಶುಕ್ರವಾರ, ಜೂನ್ 11, 2010

ಹೀಗೊಂದು ಅಳಿಲು ಸೇವೆಯಲ್ಲಿ

ಹಲವು ವರ್ಷಗಳ ನಂತರ ಪುನಃ ನನ್ನ ಬಾಲ್ಯದ ೧ ರಿಂದ ೭ ನೇ ತರಗತಿಯ ಪಾಠ ಶಾಲಾ ದಿನಗಳ ನೆನಪುಗಳ ಸರಮಾಲೆ ಮನದಲ್ಲಿ ಮೂಡುವಂತಾಗಿದ್ದು ಕಳೆದ ಎರಡು ದಿನಗಳಲ್ಲಿ. ಅದೇ ಮುಗ್ಧ ಪ್ರಪುಲ ಮುಖವನ್ನು ಮಾಡಿಕೊಂಡು ಮೇಸ್ಟರ್ ಗಳಿಗೆ ಹೆದುರುತ್ತಾ, ಅದು ಇದು ಓದುತ್ತಾ- ಬರಿಯುತ್ತಾ, ತುಂಟಾಟವಾಡುತ್ತಾ, ಅವರಿಂದ ಇವರಿಂದ ಚೇಡಿಸಿಕೊಳ್ಳುತ್ತಾ, ಬೇರೆಯವರಿಗೆ ಗೋಳು ಹೊಯ್ಯುಕೊಳ್ಳೂತ್ತಾ, ಮಾತು ಮಾತು ಬರೀ ಮಾತಾಡುತ್ತಾ, ಯಾವಾಗ ಶಾಲೆಯ ಘಂಟೆ ಬಾರಿಸುವುದೋ, ಯಾವಾಗ ಆಟವಾಡಲು ಫಿ.ಟಿ ಪೀರಿಯಡ ಬರುವುದೋ ಎಂದು ಕಾತರದಿಂದ ಕಾಯುತ್ತಿರುವ ದಿನಗಳ ಮೆಲುಕು ಹಾಗೆಯೇ ಸುಮ್ಮನೇ ಹಾದು ಹೋಯಿತು.


ಈ ರೀತಿಯ ಜೀವನದ ಚಿನ್ನದ ದಿನಗಳ ಪುನರ್ ಮಿಲನಕ್ಕೆ ಕಾರಣವಾಗಿದ್ದು, ನಮ್ಮ ಸಂಸ್ಥೆಯಾದ ಐ ಗೇಟ್ ನ - ಐ ಕೇರ್ ವಿಭಾಗದ "ಅಕ್ಷರಾ" ಬಡ ಶಾಲಾ ಮಕ್ಕಳಿಗೆ ಪುಸ್ತಕ ವಿತರಣಾ ಬೃಹತ್ ಕಾರ್ಯಕ್ರಮದಿಂದ. ಇದು ಒಂದು ಬಹು ಉಪಯೋಗದ ಸಾಮಾಜಿಕ ಕಾರ್ಯಕ್ರಮ. ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳು ಓದುತ್ತಿರುವ ಸರ್ಕಾರಿ ಶಾಲೆಗಳನ್ನು ಗುರುತಿಸಿ ತಾವೇ ಕೈಯಾರೇ ಪ್ರತಿಯೊಂದು ಮಗುವಿಗೂ ಬರವಣಿಕೆಗೆ ಬೇಕಾಗುವಂತ ಪುಸ್ತಕ ಸಲಕರಣೆಗಳನ್ನು ವಿತರಿಸುವ ಯೋಜನೆಯಾಗಿದೆ.


ಈ ಕಾರ್ಯಕ್ರಮ ಐ ಗೇಟ್ ವತಿಯಿಂದ ಸತತ ಮೂರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಹಿಂದಿನ ವರ್ಷ ೧೮ ಸಾವಿರ ಬಡ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮವು ತಲುಪಿತು. ಈ ವರ್ಷ ಸಂಸ್ಥೆಯ ತನ್ನ ಸುತ್ತ ಮುತ್ತಲಿನ ವೈಟ್ ಪೀಲ್ಡ್ ಹಾಸು ಪಾಸಿನಲ್ಲಿರುವ ಹೂರ ವಲಯದಲ್ಲಿ ಬರುವ ವಿವಿಧ ಹಳ್ಳಿಗಾಡಿನ ೧೦೭ ಸರ್ಕಾರಿ ಶಾಲೆಗಳಿಗೆ ಮತ್ತು ಒಟ್ಟು ಸುಮಾರು ೪೨ ಸಾವಿರ ವಿದ್ಯಾರ್ಥಿಗಳಿಗೆ ಬರವಣಿಗೆ ಸಲಕರಣೆಗಳನ್ನು ಈ ಕಾರ್ಯಕ್ರಮದ ಮೂಲಕ ತಲುಪಿಸಲು ನಿರ್ಧರಿಸಲಾಗಿದೆ.


ಈ ಕಾರ್ಯಕ್ರಮ ಕಳೆದ ಜೂನ್ ೯ ರಿಂದ ಪ್ರಾರಂಭಗೂಂಡು ಜುಲೈ ೯ ರವರೆಗೆ ಸುಮಾರು ಒಂದು ತಿಂಗಳ ಕಾಲ ಬೆಳಿಗ್ಗೆ ೯.೩೦ ರಿಂದ ಅಪರಾಹ್ನ ೧.೩೦ರವರೆಗೆ ವಿವಿಧ ಪ್ರದೇಶಗಳಲ್ಲಿ ನಿತ್ಯ ಜರುಗುತ್ತದೆ.


ಈ ಕಾರ್ಯಕ್ರಮದ ಯಶಸ್ಸಿಗೆ ಸ್ವಯಂ ಪ್ರೇರಿತರಾಗಿ ಕಂಪನಿಯಲ್ಲಿ ಕೆಲಸ ಮಾಡುವ ಯಾರಾದರೂ ತಮ್ಮ ಕೈಲಾದ ಅಳಿಲು ಸೇವೆಯನ್ನು ಮಾಡಬಹುದಾಗಿದೆ. ತಮ್ಮ ಬಾಲ್ಯದ ದಿನಗಳನ್ನು ಆ ಮೂಲಕ ನೆನಪು ಮಾಡಿಕೊಳ್ಳಲು ಮತ್ತು ಮುಗ್ಧ ಹೃದಯಗಳ ನೈಜ ಮುಖದ ನಗುವನ್ನು ಕಂಡು ಧನ್ಯರಾಗುವ ಸದಾವಕಾಶ ನಮ್ಮದಾಗುತ್ತಿದೆ. ಈ ಒಂದು ಚಿಕ್ಕ ಸಮಯದಲ್ಲಿ ಮಕ್ಕಳೂಡನೆ ಬೆರತು ತಮ್ಮ ಹೃದಯ ತನು ಮನವನ್ನು ಹಗುರಾಗಿ ಮಾಡಿಕೊಂಡು ಬೆರಗುಗೊಂಡಂತಾಗುತ್ತದೆ.


ಇದೊಂದು ಸುವರ್ಣಾವಕಾಶ, ಮತ್ತೋಮ್ಮೆ ತಮ್ಮ ಬಾಲ್ಯದ ದಿನಗಳನ್ನು ಚಿಕ್ಕ ಮಕ್ಕಳ ಮೂಲಕ ನೋಡಬಹುದು. ಹಾಗೆಯೇ ಸರ್ಕಾರಿ ಶಾಲೆಗಳೆಂದರೇ ಹೇಗೆ ಇರುತ್ತವೆ, ಯಾವ ರೀತಿಯ ಮೂಲಬೌತ ಸೌಕರ್ಯಗಳನ್ನು ಅವುಗಳು ಹೊಂದಿರುತ್ತವೆ ಮತ್ತು ಅವುಗಳನ್ನು ಹೇಗೆ ಯಾವ ರೀತಿಯಲ್ಲಿ ಉತ್ತಮಪಡಿಸಲು ತಮ್ಮ ಕೈಯಿಂದ ಹೇಗೆ ಸಹಾಯ ಮಾಡಬಹುದು ಎಂಬುದನ್ನು ಚಿಂತಿಸಲು ಸದವಕಾಶವಾಗುತ್ತದೆ. ಹಾಗೆಯೇ ಇರುವ ಆ ಅತಿ ಕಡಿಮೆ ಸೌಲಭ್ಯದಲ್ಲಿ ತಮ್ಮ ನೈಜವಾದ ಪ್ರಚಂಡ ಬುದ್ಧಿವಂತಿಕೆ ಮತ್ತು ಜಾಣ್ಮೆಯಿಂದ ಆ ಮಕ್ಕಳು ತಮ್ಮ ಬಡತನವನ್ನು ಮತ್ತು ತಮ್ಮ ಕಷ್ಟದ ದಿನಗಳನ್ನು ಮರೆಯುವಂತೆ ಓದುತ್ತಿರುವ ಗಳಿಗೆಗಳನ್ನು ಕಂಡು ಅಶ್ಚರ್ಯಪಡಲುಬಹುದು. ಹೀಗೆ ತನ್ನ ಚಿತ್ತದಂತೆ ಹತ್ತು ಹಲವಾರು ವಿಚಾರ ತರಂಗಗಳನ್ನು ತಾನು ಪಡೆದುಕೊಳ್ಳಬಹುದು.






ಹಲವಾರು ಐ.ಟಿ ಸಂಸ್ಥೆಗಳು ಸಮಾಜ ಮುಖಿಯಾಗಿ ಈ ರೀತಿಯಾಗಿ ಸಮಾಜದ ಏಳ್ಗೆಗಾಗಿ ತನ್ನ ಸಂಪತ್ತಿನ ಸ್ವಲ್ಪ ಭಾಗವನ್ನು ಈ ರೀತಿ ವಿನಿಯೋಗಿಸುತ್ತಿರುವುದು ಎಲ್ಲಾರಿಗೂ ಆದರ್ಶಪ್ರಾಯವಾದ ನಡವಾಳಿಯಾಗಿದೆ.


ದಿನ ನಿತ್ಯ ತಮ್ಮದೇಯಾದ ದುಡಿಮೆಯ ಯಾಂತ್ರಿಕ ಬದುಕಿಗೆ ಚಿಕ್ಕದಾದ ಬ್ರೇಕ್ ಹಾಕಿ ಇಂಥ ಬದಲಾವಣೆಯ ಚಟುವಟಿಕೆಗಳಿಗೆ ಸಾಪ್ಟವೇರ್ ತರುಣ/ತರುಣಿಯರು ಭಾಗಿಯಾಗುತ್ತಿರುವುದು ಆಶಾದಾಯಾಕ ಸಂಗತಿಯೇ ಸರಿ.


ನಾವುಗಳು ಕೇವಲ ಹೈ ಪೈ, ಮಲ್ಟಿಪ್ಲೇಕ್ಸ್ ಜಗತ್ತಿನ ಕೂಸುಗಳಲ್ಲಾ ಎಂಬುದನ್ನು ನಿರೂಪಿಸುವ ಸುಸಮಯ ಇದಾಗಿದೆ. ಮತ್ತು ಹಳ್ಳಿಯವರಿಂದ ಬಾಯ್ ತುಂಬ ಹೋಗಳಿಕೆಯ ಮಾತುಗಳನ್ನು ಕೇಳುವಂತೆ ಮಾಡಿ, ನಮ್ಮ ಜೀವನದಲ್ಲಿ ಚಿರಸ್ಥಾಯಿಯಾಗಿ ನೆನಪಿನಲ್ಲಿ ಉಳಿಯುವಂತೆ ರೂಪಿಸಿ ಇಂಥ ಕಾರ್ಯಕ್ರಮಗಳನ್ನು ಹಮ್ಮಿಕ್ಕೂಳ್ಳುವ ನನ್ನ ಕಂಪನಿಯು ಸೇರಿದಂತೆ ಎಲ್ಲಾ ಸೇವ ಮನೋಭಾವ ಹೊಂದಿರುವ ಕಟ್ಟ ಕಡೆಯ ಸಂಸ್ಥೆಗಳಿಗೆಲ್ಲಾ ನನ್ನ ವಂದನೆಗಳು.


ನಮ್ಮ ಬಾಲ್ಯದ ದಿನಗಳಲ್ಲಿ ಪ್ರತಿಯೊಬ್ಬರಿಗೂ ಒಂದು ಕನಸು ಇದ್ದೇ ಇರುತ್ತಾದೆ. ಅದು ಯಾವುದೇಂದರೇ ನಾನು ನನ್ನ ಕೈಲಾದ ಸಹಾಯವನ್ನು ಬಡ ಜನರಿಗೆ, ಬಡ ಮಕ್ಕಳಿಗೆ ಅವರು ನಲಿಯುವಂತೆ ಏನಾದರೂ ಸಹಾಯವನ್ನು ನಾನು ದೊಡ್ಡವನಾದ ಮೇಲೆ, ನಾನೇ ಸ್ವಂತ ಕಾಲ ಮೇಲೆ ನಿಂತಾಗ, ನನ್ನ ಬಳಿ ಸಂಪತ್ತು ಬಂದಾಗ ಹೀಗೆ ಹೀಗೆ ನಾನು ಸಮಾಜಕ್ಕೆ ಕೊಡುಗೆಗಳನ್ನು ನೀಡಬೇಕು ಎಂದು. ಇದು ಸಹಜವಾದ ಮುಗ್ಧ ಕನಸು ಅದಕ್ಕೆ ತಾನೇ ನಾವುಗಳೆಲ್ಲಾ ಮನುಷ್ಯರು. ಪ್ರತಿಯೊಬ್ಬ ಮನುಷ್ಯನಿಗೂ ಈ ರೀತಿಯ ಮಾನವೀಯತೆಯ ಒಂದು ಕನಸಿನ ಸುಳಿ ಹೇಗಾದರೂ ಬಂದಿರಲೇಬೇಕು ಅಲ್ಲವಾ? ನೆನಪಿಸಿಕೊಳ್ಳಿ.


ಆದರೆ ಮನುಷ್ಯ ತಾನು ಬೆಳೆದಂತೆ ತನ್ನ ಯೋಚನೆಗಳು ಲೆಕ್ಕಚಾರಗಳು ಹೆಚ್ಚಾದಂತೆ, ಈ ರೀತಿಯ ತುಡಿತವನ್ನು ಮರೆತು ಬಿಟ್ಟು ಬಿಡುತ್ತಾನೆ. ಅದಕ್ಕೆ ಹಲವಾರು ಕಾರಣಗಳು ಇರಬಹುದು, ಸಮಯದ ಅಭಾವ, ಹಣದ ಅಡಚಣೆ, ಸಮಾಜ ಏನು ಅನ್ನಬಹುದು ಇತ್ಯಾದಿ ಹತ್ತು ಹಲವಾರು ಕಾರಣಗಳು. ಮತ್ತು ತಾನು ಒಬ್ಬ ಸಹಾಯ ಮಾಡಿದರೇ ಜಗತ್ತು ಎಲ್ಲಾ ಸರಿಯಾಗಿಬಿಡುತ್ತದಾ... ಹೀಗೆ ತನ್ನಲ್ಲಿ ತಾನು ತನ್ನ ಚಿಕ್ಕ ವಯಸ್ಸಿನಲ್ಲಿ ಹುಟ್ಟಿದ ಆ ದೊಡ್ಡ ಕನಸು ಹಾಗೆಯೇ ಉಳಿದು ಬಿಡುತ್ತದೆ. ಕೆಲವರು ಅದನ್ನು ಹೇಗೂ ಹಿಡೇರಿಸಿಕೊಳ್ಳುತ್ತಾರೆ ಮತ್ತೆ ಕೆಲವರು ಈ ಮೇಲೆ ಹೇಳಿದಂತಹ ಸಂಸ್ಥೆಗಳ ವತಿಯಿಂದ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಾರೆ.


ಅದರೇ ಒಂದು ಮಾತು ಮಾತ್ರ ಸತ್ಯ, ಮನುಷ್ಯ ಎಂದ ಮೇಲೆ ಪರಸ್ಪರ ಒಬ್ಬೂಬ್ಬರಿಗೆ ಸಹಾಯಕನಾಗಿರಬೇಕು. ಅದೇ ಮನುಷ್ಯತ್ವ. ಯಾರು ಎಲ್ಲಾವನ್ನು ಪಡೆದಿರುವುದಿಲ್ಲ. ನಮ್ಮಲ್ಲಿ ಇಲ್ಲದ್ದು ಇನ್ನೂಬ್ಬರಲ್ಲಿರುತ್ತದೆ. ಇನ್ನೊಬ್ಬರಲ್ಲಿ ಇಲ್ಲದ್ದು ನಮ್ಮಲ್ಲಿರುತ್ತದೆ. ಇದರ ಸಮತೋಲನವನ್ನು ಪರಿಸರದೊಡಗೊಡಿ ನಾವುಗಳು ಮಾಡಿದರೇ ಅದೇ ಸುಖಿ ಸಮಾಜವಾಗುವುದು.
ಹೌದು! ಇಂದು ನಾವುಗಳು ಕೇವಲ ನಮಗಾಗಿ ನಮ್ಮವರಿಗಾಗಿ ದುಡಿಯುವುದು ಮಾಮೂಲು. ಅದು ನಿಜವು ಹೌದು. ಆದರೆ ನಾವು ಹುಟ್ಟಿ ಬೆಳದು ಬಂದಂತಹ ನಮ್ಮ ದೂರದ ಹಳ್ಳಿಗಾಡಿನ ಜೀವನವನ್ನು ನೆನಪಿಸಿಕೊಳ್ಳಬೇಕು. ನಮ್ಮಲ್ಲಿರುವ ಚಿಕ್ಕ ಮೂತ್ತವನ್ನು ಹಳ್ಳಿಗಳಲ್ಲಿ ಓದುತ್ತಿರುವ ಮಕ್ಕಳುಗಳಿಗೆ ಸಹಾಯಕವಾಗುವಂತೆ ಏನಾದರೂ ಮಾಡಬಹುದಲ್ಲಾ. ಈ ರೀತಿಯ ಯೋಚನೆಯನ್ನು ಇಂಥ ಕಾರ್ಯಕ್ರಮಗಳು ಮೂಡಿಸುವವು.

ಈ ರೀತಿ ಪ್ರತಿಯೊಬ್ಬರೂ ಯೋಚಿಸಿದರೆ ಪ್ರತಿಯೊಂದು ಕುಗ್ರಾಮವು ಶೈಕ್ಷಣಿಕವಾಗಿ ಮುಂದುವರಿಯಲು ಆರ್ಥಿಕ ನೆರವು ನೀಡಿದಂತಾಗುತ್ತದೆ. ಸರ್ಕಾರದ ಯೋಜನೆಗಳಿಗೆ ಮಾತ್ರ ಕಾಯುವುದು ನಿಲ್ಲಿಸಬಹುದು.ಆ ಮೂಲಕ ಭದ್ರ ಸಮಾಜವನ್ನು ಕಟ್ಟಿದಂತಾಗುತ್ತದೆ.


ನಾನು ಈ ಹಿಂದಿನ ಲೇಖನದಲ್ಲಿ ಹೇಳಿದಂತಹ ಶಿಕ್ಷಣ ಸಂಸ್ಥೆಗಳೇ ಎಲ್ಲೂ ಇರುವುದಿಲ್ಲ. ಏನು ಅರಿಯದ ಮಕ್ಕಳ ವಿದ್ಯಭ್ಯಾಸಕ್ಕೆ ಈ ರೀತಿಯ ಅಳಿಲು ಸೇವೆಯನ್ನು ಪ್ರತಿಯೊಬ್ಬ ದುಡಿಯುವ ವ್ಯಕ್ತಿಯು ತನ್ನ ದುಡಿಮೆಯ ಒಂದೀಷ್ಟು ಪಾಲನ್ನು ತಾನು ಹುಟ್ಟಿ ಬೆಳೆದ ತನ್ನ ಊರಿನ ಒಂದು ಶಾಲೆಯ ಒಂದೀಷ್ಟು ಬಡ ಮಕ್ಕಳಿಗೆ ಓದುವ ಸಲಕರಣೆಗಳನ್ನು ಪಡೆಯಲು ಸಹಕಾರಿಯಾಗಬಹುದು ಅಲ್ಲವಾ? ಇದಕ್ಕೆ ಯಾವುದೇ ರೀತಿಯ ಸಂಘ ಸಂಸ್ಥೆಗಳನ್ನು ಸ್ಥಾಪಿಸುವ ಸ್ಥಾವರಗಳ ಕನಸು ಬೇಡ.


ಈ ರೀತಿಯ ಕೊಟ್ಟು ಕೊಳ್ಳುವ ಸಂತೋಷದ ಮನೋಭಾವ ಕಿರು ಝರಿಯಾಗಿ ಒಂದು ಪೀಳಿಗೆಯಿಂದ ಮತ್ತೋಂದು ಪೀಳಿಗೆಗೆ ನಿರಂತರವಾಗಿ ಹರಿಯುವಂತಾದರೇ ಗ್ರಾಮೀಣ ಸ್ವರಾಜ್ಯದ ಕನಸು ನನಸಾದಂತೆ ಅಲ್ಲಾವಾ?

ಗುರುವಾರ, ಜೂನ್ 3, 2010

ಮಕ್ಕಳ ಸ್ಕೂಲ್ ಮನೆಯಲ್ಲಿ ಇಲ್ಲಾ



ಬೇಸಿಗೆ ರಜೆ ಮುಗಿದು ನಮ್ಮ ಮುದ್ಧಿನ ಮಕ್ಕಳು ಶಾಲೆಯ ಕಡೆಗೆ ಮುಖ ಮಾಡುವ ದಿನಗಳು ಬಂದಿವೆ. ತಂದೆ ತಾಯಂದರಿಗೆ ಮಕ್ಕಳಿಗಿಂತ ಹೆಚ್ಚು ದಾವಂತ. ಅವರ ಪೀಸು, ಸೀಟು, ಯುನಿಪಾರ್ಮ್, ಪುಸ್ತಕ, ಪೆನ್ನು, ಬ್ಯಾಗ್, ಊಟದ ಡಬ್ಬಿ, ಓಡಾಡಲು ಶಾಲೆಯ ಬಸ್ಸಿನ ವ್ಯವಸ್ಥೆ ಹೀಗೆ ವಿವಿಧ ರೀತಿಯ ಏರ್ಪಾಡುಗಳನ್ನು ತಮ್ಮ ಮಕ್ಕಳ ಸಲುವಾಗಿ ತಮ್ಮ ಬಿಡಿವಿಲ್ಲದ ದುಡಿಮೆಯ ನಡುವೆ ಮಾಡಬೇಕಾಗಿದೆ.


ಈ ಮೇಲಿನ ಎಲ್ಲಾವನ್ನು ದೂರಕಿಸಲು ಹಲವಾರು ತಿಂಗಳಿಂದ ತಮ್ಮ ದುಡಿಮೆಯ ಬೆವರು ಹನಿಯಿಂದ ದೂರೆತ ಹಣ ಎಂಬ ಕಾಂಚಣವನ್ನು ಎತ್ತಿಟ್ಟಿರ‍ಬೇಕು.


ತಮ್ಮ ಅಂತಸ್ತಿಗೆ ತಕ್ಕಂತೆ ತಮ್ಮ ಕೈಗೆಟುಕುವ ವಿದ್ಯಾಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಬೇಕು. ತಾವುಗಳೆಲ್ಲಾ ಹೀಗೆ ಓದಿರಲಿಲ್ಲಾ ಬಿಡಿ ಎಂಬ ನಿಟ್ಟುಸಿರನ್ನು ಬಿಡುತ್ತಾ ತಮ್ಮ ಪ್ರೀತಿ ಪಾತ್ರ ಮಕ್ಕಳಲ್ಲಿ ದೂರೆತ ಯಾವುದು ಒಂದು ಉಜ್ವಲ ಭವಿಷ್ಯದ ಕಿರು ಬೆಳಕನ್ನು ಕಂಡು ತಾವು ಪಟ್ಟ ಪಾಡುಗಳೆನ್ನೆಲ್ಲಾ ಮರೆಯುತ್ತಾ ನಡೆಯುತ್ತಾರೆ.


ಇಂದು ನಮ್ಮ ಹಳ್ಳಿಯ ಜನರುಗಳು ಸಹ ತಮ್ಮ ಮಕ್ಕಳುಗಳು ಕಾನ್ವೇಂಟ್ ನಲ್ಲಿ ಓದಬೇಕು ಎಂಬ ಕನಸು ಕಂಡು ತಮ್ಮ ಹಳ್ಳಿಗಳಿಗೆ ಹತ್ತಿರದಲ್ಲಿರುವ ಪಟ್ಟಣಗಳಲ್ಲಿರುವ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಾರೆ. ಅವರು ಕೇಳುವ ಡೊನೇಶನ್ ಕೊಟ್ಟು ತಮ್ಮ ಮಕ್ಕಳ ಭವಿಷ್ಯವನ್ನು ಹೆಚ್ಚು ಸಧೃಡ ಮಾಡುತ್ತಿರುವೆವು ಎಂಬ ಸಮಧಾನದಿಂದ ಬದುಕುತ್ತಿದ್ದಾರೆ.


ಸರ್ಕಾರಿ ಶಾಲೆಗಳೆಂದರೆ ಕೈಲಾಗದರವರು ಮಾತ್ರ ವಿದ್ಯಾಭ್ಯಾಸ ಮಾಡುವ ಧರ್ಮ ಶಾಲೆಗಳಾಂತಾಗಿ ಕೇಳುವುವರೆ ಇಲ್ಲಾ. ಹೆಚ್ಚು ಹೆಚ್ಚು ಹಣವನ್ನು ಪೋಷಕರಿಂದ ಕೀಳುವ ವಿದ್ಯಾಸಂಸ್ಥೆಗಳು ಮಾತ್ರ ಉತ್ಕೃಷ್ಟ ದರ್ಜೆಯವು ಎಂದು ನಮ್ಮ ಸಾಮಾನ್ಯ ಜನರ ನಂಬಿಕೆಯಾಗಿದೆ. ಯಾವ ಶಾಲೆಯಲ್ಲಿ ವಿವಿಧ ರೀತಿಯ ರೀತಿ-ನೀತಿ, ರೋಲ್ಸ್ ಗಳು ಇವೆಯೊ ಆ ಶಾಲೆಯಲ್ಲಿ ಓದುವ ನಮ್ಮ ಮಕ್ಕಳು ಮಾತ್ರ ಅತಿ ಬುದ್ಧಿವಂತರಾಗುತ್ತಾರೆ ಎಂದು ಕೊಂಡಿರುತ್ತಾರೆ. ಮತ್ತು ಇಂದಿನ ಈ ಸ್ಪರ್ಧಾ ಯುಗಕ್ಕೆ ಅಲ್ಲಿ ಓದುವವರು ಮಾತ್ರ ಅರ್ಹರು ಎನ್ನುವ ದೂರಣೆಯಿಂದ, ಎಷ್ಟೇ ಕಷ್ಟವಾದರೂ ಆ ಶಾಲೆಗಳಲ್ಲಿಯೇ ತಮ್ಮ ಮಕ್ಕಳನ್ನು ಸೇರಿಸಲೂ ಎಲ್ಲಾ ಕುಟುಂಬಗಳು ಯುದ್ಧಕ್ಕೆ ಸಜ್ಜಾದ ಸೈನದ ರೀತಿ ಎಲ್ಲಾ ತಾಲಿಮುಗಳನ್ನು ತಮ್ಮ ತಮ್ಮಲ್ಲಿಯೇ ಹಲವಾರು ತಿಂಗಳುಗಳಿಂದ ಸಿದ್ಧಗೊಂಡಿರುತ್ತಾರೆ.


ಈ ಒಂದು ತಿಂಗಳು ಈ ರೀತಿಯ ಶಾಲೆಗಳಿಗೆ "ಪುಲ್ ಟೈಮ್ ಬಿಸಿನೇಸ್". ಯೋಚಿಸಿ ಇಂದಿನ ನಮ್ಮ ಮಕ್ಕಳ ವಿದ್ಯಾಭ್ಯಾಸ ಯಾವ ರೀತಿ ಬದಲಾಗಿದೆ. ಪ್ರತಿಯೊಂದಕ್ಕೂ ಹಣ ಹಣ. ಮಕ್ಕಳ ಮೊಲಕ ಭವ್ಯವಾದ ತಮ್ಮ ಉದ್ಧಾರಕ್ಕಾಗಿ ಮತ್ತು ಈ ವ್ಯವಸ್ಥೆಗೆ ಸಾಮಾನ್ಯ ಪೋಷಕರ ದುಡಿಮೆಯನ್ನು ಆಶ್ರಯಿಸುತ್ತಿರುವುದು ನಮ್ಮ ಪುರಾತನ ಪರಂಪರೆಯ ಗುರುಕುಲ ವ್ಯವಸ್ಥೆಗೆ ಅವಮಾನ. ಕೇಳುವವರು ಯಾರು.


ಕೇವಲ ಪ್ರೀ ನರ್ಸರಿಗೆ ೭೦-೮೦ ಸಾವಿರ ಡೊನೇಷನ್ ಎಂದರೆ ನಮ್ಮ ನಗರಗಳ ಶಿಕ್ಷಣ ಸಂಸ್ಥೆಗಳ ವ್ಯವಸ್ಥೆಯನ್ನು ಕಲ್ಪಿಸಲೂ ಸಾಧ್ಯವಿಲ್ಲ.


ಆ ಮಗು ತನ್ನ ಅತಿ ಕಿರು ವಯಸ್ಸು ೨ -೩ ವರ್ಷದಿಂದ ಅದು ತನ್ನ ಪೂರ್ಣ ವಿದ್ಯಭ್ಯಾಸವನ್ನು ಪದವಿಯವವರೆಗೆ ಒಂದೇ ರೀತಿಯ ಒತ್ತಡವನ್ನು ದಿನ ನಿತ್ಯ ಅನುಭವಿಸಬೇಕು, ತಾನಾಯಿತು ತನ್ನ ಶಿಕ್ಷಣವೆಂಬ ಬದುಕಾಯಿತು. ಅಷ್ಟರ ಮಟ್ಟಿಗೆ ತನ್ನ ಹೆತ್ತವರು ತನ್ನ ಮೇಲೆ ಖರ್ಚು ಮಾಡಿರುತ್ತಾರೆ ಎಂದರೇ ತನ್ನಿಂದ ಯಾವ ರೀತಿಯ ಪಲಿತಾಂಶವನ್ನು ಅವರು ನಿರೀಕ್ಷಿಸಿರುತ್ತಾರೆ ಎಂದು ಆ ಮಗು ತಿಳಿಯಬಹುದು. ಆದರೆ ಆ ಮುಗ್ಧ ವಯಸ್ಸಿನಲ್ಲಿ ಅಷ್ಟೇಲ್ಲಾ ಹೇಗೆ ತಿಳಿಯಬೇಕು ಅಲ್ಲವಾ? ಅದು ತಿಳಿಯುವ ವೇಳೆಗೆ ಮಗು ಎಲ್ಲೋ ಇರುತ್ತಾದೆ ಮತ್ತು ಈ ಒಂದು ವ್ಯವಸ್ಥೆಗೆ ತಾನು ಒಗ್ಗಿ ಹೋಗಿರುತ್ತದೆ.


ಈ ರೀತಿಯ ಹೈಟೆಕ್ ಶಿಕ್ಷಣ ವ್ಯವಸ್ಥೆ ನಮಗೆ ನಿಜಕ್ಕೂ ಬೇಕ ಮತ್ತು ಇರಬೇಕಾ? ಇಲ್ಲಿನ ಯಾವುದೇ ವಿದ್ಯಾ ಸಂಸ್ಥೆಗಳಿಗೆ ಹೋದರೂ ಅವುಗಳಲ್ಲಿ ನಾವು ನಮ್ಮ ತನವನ್ನು ನಮ್ಮ ಮಣ್ಣಿನ ಸಂಸ್ಕೃತಿಯನ್ನು ಹುಡುಕಿದರೂ ಸಿಗುವುದಿಲ್ಲ. ನನಗಂತೂ ಅದು ಮತ್ತೋಂದು ಕಾರ್ಪೋರೆಟ್ ರಂಗವೇ ಎನಿಸುತ್ತದೆ. ಎಲ್ಲಾ ಹೈ ಪೈ. ಅಷ್ಟು ನವಿರಾದ ಮಾತುಕತೆ ಮತ್ತು ಒಂದು ವ್ಯಾಪಾರ ಕೇಂದ್ರಗಳಾಗಿವೆ. ನಮ್ಮ ಬುದ್ಧಿವಂತ ತಂದೆ ತಾಯಂದಿರು ಅವುಗಳೆಡೆಗೆ ಎಷ್ಟೋಂದು ಆಕರ್ಷಿಸಿತರಾಗಿದ್ದಾರೆಂದರೇ, ತಮ್ಮ ಪ್ರೀತಿ ಪಾತ್ರ ಮಕ್ಕಳ ಸಲುವಾಗಿ ಎನು ಮಾಡಲು ರೇಡಿಯಾಗಿದ್ದಾರೆ. ಅದು ಸತ್ಯ ಮತ್ತು ಇರಬೇಕಾಗಿದ್ದೆ. ಹಾಗೆಯೇ ಆ ಶಾಲೆಗಳು ಹೇಳಿದಂತೆ ಕುಣಿಯುವ ಜರೂರತು ಬೇಕಾಗಿಲ್ಲ. ಎಲ್ಲಾ ಪೋಷಕರು ಒಟ್ಟಿಗೆ ಅದು ಏಕೆ? ಎಂದು ಪ್ರಶ್ನಿಸಿದರೇ ಅವರೂಗಳಿಗೆ ಅರಿವನ್ನುಂಟು ಮಾಡಿದಂತಾಗುತ್ತದೆ ಮತ್ತು ಅವಶ್ಯಕತೆಯಿಲ್ಲದಿದ್ದರೂ ಕೇವಲ ಅನವಶ್ಯಕವಾಗಿ ಹಣವನ್ನು ಸುರಿಯುವುದನ್ನು ನಿಲ್ಲಿಸಬಹುದಾಗಿದೆ.


ಯಾವುದೇ ಶಾಲೆಗಳಲ್ಲಿ ಅವರೇನೂ ಬೇರೆಯಾದ ಸೊಪರ್ ಶಿಕ್ಷಣವನ್ನು ಮಕ್ಕಳಿಗೆ ಕೊಡಲಾಗುವುದಿಲ್ಲ. ಮತ್ತು ನಮ್ಮ ಮಕ್ಕಳನ್ನು ಅವರೇ ಅತಿ ಬುದ್ಧಿವಂತರನ್ನಾಗಿ ಮಾಡಲಾರರು. ನಮ್ಮ ಮಕ್ಕಳ ಕುತೂಹಲ ಮತ್ತು ಅವರ ಅಸಕ್ತಿಯನ್ನು ಹೆಚ್ಚಿಸಿ ಸ್ವಲ್ಪ ಸರಿ ದಾರಿಯನ್ನು ತೋರಿಸಿದರೆ ಹೇಗೆ ನಡೆಯಬೇಕು ಎಂಬುದನ್ನು ತಿಳಿಸಿದರೇ ಅವರುಗಳು ಹಾಗೆಯೇ ನಡೆಯುವರು ಅದಕ್ಕೆ ಬೇಕಾಗಿರುವುದು ಹೈಟ್ ಕ್ ಶಾಲೆಗಳಲ್ಲಾ ಪ್ರೀತಿಯ ಶಿಕ್ಷಕರು ಮತ್ತು ಶಾಲೆಗಳು.


ಹಾಗಂತ ಸರ್ಕಾರಿ ಶಾಲೆ - ಕಾಲೇಜುಗಳಲ್ಲಿ ಈ ರೀತಿಯ ಯಾವುದೇ ಡೊನೇಶನ್ ಇಲ್ಲದೇ ಓದಿದವರೂ ಯಾರು ಕೆಲಸಕ್ಕೆ ಬಾರದವರಾಗಿ ಎಲ್ಲೂ ಹೋಗಿಲ್ಲಾ. ಇಂಥ ಕಡೆ ಓದಿದ ಮಹಾನ್ ಮಹಾನ್ ಪ್ರಸಿದ್ಧ ವ್ಯಕ್ತಿಗಳನ್ನು ನಾವು ಕಂಡಿದ್ದೆವೆ ಮತ್ತು ಅವರ ಜೀವನ ಚರಿತ್ರೆಗಳನ್ನು ಮೆಚ್ಚುಗೆಯಿಂದ ದಿನನಿತ್ಯ ಓದುತ್ತೇವೆ ಮತ್ತು ಮಕ್ಕಳಿಗೆ ಹಾಗೆಯೇ ಆಗು ಎಂದು ಹೇಳುತ್ತಿರುತ್ತೇವೆ. ಆದರೆ ನಮ್ಮ ಮಕ್ಕಳನ್ನು ಇಂಥ ಶಾಲೆಗಳಿಗೆ ಸೇರಿಸಲೂ ಯಾಕೆ ಮನಸ್ಸು ಮಾಡುವುದಿಲ್ಲ.