ಗುರುವಾರ, ಅಕ್ಟೋಬರ್ 28, 2010

ಕನ್ನಡ ಜನಮನಗಳ ಉತ್ಸವ


ನವಂಬರ್ ಒಂದು ನಮ್ಮ ಕರ್ನಾಟಕ ಏಕೀಕರಣಗೊಂಡ ದಿನಾಚರಣೆ. ಕರ್ನಾಟಕ ಒಟ್ಟಿಗೊಡಿ ೫೪ (೧೯೫೬) ವರ್ಷಗಳಾಗಿವೆ.

ಇದಕ್ಕೆ ನಾವುಗಳು ಹೆಮ್ಮೆಪಡಬೇಕು. ಕನ್ನಡ ಮಾತನಾಡುವ ಎಲ್ಲಾ ಪ್ರಾಂತ್ಯಗಳನ್ನು ಒಂದು ಕಡೆ ಸೇರಿಸಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಪುನರ್ ನಾಮಕರಣ ಮಾಡಿದ ದಿನ. ಆ ದಿನವನ್ನು ಎಲ್ಲಾ ಕನ್ನಡಿಗರು ಮತ್ತು ಕನ್ನಡ ಮಣ್ಣಿನ ಮಕ್ಕಳು ಉತ್ಸಾಹದಿಂದ ರಾಜ್ಯೋತ್ಸವವನ್ನು ಆಚರಿಸುತ್ತಾ ನಮ್ಮ ರಾಜ್ಯಕ್ಕಾಗಿ ಹೋರಾಡಿದ ನಮ್ಮ ಹಲವು ಹಿರಿಯರು, ಸ್ವಾತಂತ್ರ್ಯ ಹೋರಾಟಗಾರರು, ಸಾಧಕರು ಮತ್ತು ಕನ್ನಡದ ಕಟ್ಟಾಳುಗಳನ್ನು ನೆನೆಯುವ ದಿನವಾಗಿದೆ.


ನಾವು ಎಂಥ ಕಾಲ ಘಟ್ಟದಲ್ಲಿದ್ದೇವೆ ಎಂದರೇ ಅರ್ಧ ಶತಮಾನಗಳನ್ನು ಕಳೆದಿದ್ದೇವೆ. ಹಲವಾರು ರೀತಿಯ ಬದಲಾವಣೆಗಳನ್ನು ಕರ್ನಾಟಕದ ಭೂಪಟದಲ್ಲಿ ಮಾತ್ರ ಕಾಣದೆ ನಮ್ಮ ನಿಮ್ಮ ಸುತ್ತಲಿನ ಪರಿಸರ, ಮನಸ್ಸಿನಲ್ಲಿ, ನಡೆಯತ್ತಿರುವ ಜೀವನದಲ್ಲಿ ಉಯಿಸಲು ಸಾಧ್ಯವಾಗದ ರೀತಿಯಲ್ಲಿ ನಮ್ಮ ರಾಜ್ಯ- ಕನ್ನಡ- ಕರ್ನಾಟಕ ವಿಶ್ವ ಪ್ರಸಿದ್ಧಿಯಾಗಿದೆ. ಊರು ಊರುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚಿತವಾಗುತ್ತಿವೆ. ಅದಕ್ಕೆ ಹಲವು ಕಾರಣಗಳಿರಬಹುದು. ಅದಕ್ಕೆ ನಮಗೆಲ್ಲಾ ಗರ್ವವೇ ಸರಿ.


ಪ್ರತಿ ಭಾರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಎಲ್ಲಾ ಕನ್ನಡಾಭಿಮಾನಿಗಳ ಒಂದೇ ಕೂಗು ಕನ್ನಡವನ್ನು ಇನ್ನಾದರೂ ಉಳಿಸಿ. ಈ ರೀತಿಯ ಗಟ್ಟಿ ಕೂಗು ನನಗೆ ತಿಳಿದ ರೀತಿಯಲ್ಲಿ ಭಾರತದ ಯಾವುದೇ ಭಾಷೆಗೂ/ರಾಜ್ಯದಲ್ಲೂ ಬಂದಿಲ್ಲ. ಯಾಕೇ? ನಾವುಗಳು ನಮ್ಮ ಮಾತೃ ಭಾಷೆಯನ್ನು ಅಷ್ಟೊಂದು ವೇಗವಾಗಿ ಕಡೆಗಣಿಸುತ್ತಿದ್ದೇವೆ? ಉತ್ತರವನ್ನು ಎಲ್ಲಾ ಕನ್ನಡಿಗರು ಕೊಡಬೇಕು.
ಇಂದು ಐ.ಟಿ, ಬಿ.ಟಿ ಭರಾಟೆಯಲ್ಲಿ ನಾವುಗಳು ಯಾವುದೇ ಒಂದು ರಾಜ್ಯವನ್ನು, ಮೆಟ್ರೂ ನಗರವನ್ನು ಕೇವಲ ಆ ರಾಜ್ಯದವರೇ ವಾಸಿಸುವ ಸ್ಥಳವೆಂದು ಹೇಳುವುದು ಕಷ್ಟ. ಇಂದು ಯಾವುದೇ ರಾಜ್ಯಗಳಿಗೂ, ದೇಶಗಳಿಗೂ ಗಡಿಗಳೇ ಇಲ್ಲ. ಆ ರೀತಿಯಲ್ಲಿ ನಮ್ಮ ಸುಂದರ ಬೆಂಗಳೂರಿನಲ್ಲಿಯೇ ಮಿನಿ ವಿಶ್ವ-ಭಾರತವನ್ನು ಕಾಣಬಹುದು. ಕನ್ನಡವನ್ನು ಬಿಟ್ಟು ಎಲ್ಲಾ ಭಾಷೆಗಳನ್ನು ಮಾತನಾಡುವ ಜನರುಗಳನ್ನು ಎಲ್ಲಾ ಪ್ರಾಂತ್ಯದಲ್ಲೂ ಕಾಣಬಹುದು. ಇದು ಒಂದು ವಿವಿಧತೆಯಲ್ಲಿ ಏಕತೆ ಎನ್ನೋಣವೇ! ?


ಆದರೂ ನಮ್ಮ ಕನ್ನಡಕ್ಕಾಗಿ ಯಾವಗಲೂ ಹೋರಾಡುವ ಹುಟ್ಟು ಕನ್ನಡ ಮನಸ್ಸುಗಳು ಈ ರೀತಿಯ ವಾತವರಣವನ್ನು ಕಂಡು ಕೂರಗುತ್ತಿರುವುದು ನವ ತರುಣ ಜನಾಂಗಕ್ಕೆ ಮುಂದೆ ಎಚ್ಚರದಿಂದ ಹೆಜ್ಜೆ ಇಡಬೇಕಾದ ದಿನಗಳಿಗೆ ಎಚ್ಚರಿಕೆಯಾಗಿದೆ.

ಕರ್ನಾಟಕ ಎಂದರೇ ಕೇವಲ ಕನ್ನಡ ಮಾತನ್ನಾಡುವ ಭಾಷೆಯಲ್ಲ. ಅದಕ್ಕೆ ಸುಧಿರ್ಘ ಇತಿಹಾಸವಿದೆ, ಅಗಾಧ ಸಂಸ್ಕೃತಿಯಿದೆ. ಉನ್ನತ ಸಂಸ್ಕಾರವಿದೆ ಮತ್ತು ಹಲವು ಮಹನೀಯರ ಪರಿಶ್ರಮದ ಶ್ರೀಮಂತ ಸಂಪತ್ತು ಇದೆ. ಅದನ್ನು ನಾವುಗಳು ನಮ್ಮ ನಿತ್ಯ ಜೀವನದಲ್ಲಿ ಉಸಿರಾಗಿ ಉಳಿಸುವುದು ನಮ್ಮಗಳ ಕರ್ತವ್ಯವಾಗಿದೆ. ಯಾಕೆಂದರೇ ನಮ್ಮ ಕನ್ನಡತನವನ್ನು ಕನ್ನಡಿಗರಲ್ಲದೇ ಬೇರೆಯವರೂ ಬಳಸುವುದು/ಊಳಿಸಲಾರರು.


ಅದ್ದರಿಂದ ಹೀಗಾಗಲೇ ನಮ್ಮ ಕರ್ನಾಟಕದ ಹೃದಯ ಭಾಗವಾದ ನೆಚ್ಚಿನ ಐ.ಟಿ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಶೇ. ೩೦ ಕ್ಕೆ ಇಳಿದಿರುವ ಸಂದರ್ಭದಲ್ಲಿ ನಾವುಗಳು ಹೇಗೆ ನಮ್ಮ ಆಡು ಭಾಷೆಯನ್ನು, ನಮ್ಮ ಸಂಸ್ಕೃತಿಯನ್ನು ನಮ್ಮ ಜೊತೆಯಲ್ಲಿ ನಮ್ಮ ಮನೆ ಮನಗಳಿಂದ ಪ್ರಾರಂಭಿಸಿ ನಮ್ಮ ಮಕ್ಕಳಿಗೆ ಬಳುವಳಿಯಾಗಿ ಕೊಡುವೇವು? ಮತ್ತು ಇದನ್ನು ನೋಡಿ ಹೊರ ರಾಜ್ಯದಿಂದ ಬಂದಿರುವ ನಮ್ಮ ಎಲ್ಲಾ ಬಂಧುಗಳು ಸಹ ನಮ್ಮ ನಾಡು ನುಡಿಯ ಏಳ್ಗೆಗೆ ಯಾವ ರೀತಿಯಲ್ಲಿ ಕೈ ಜೋಡಿಸುವ ಕೆಲಸಕ್ಕೆ ಪ್ರೇರಪಿಸುವೆವು ಎಂಬುದು ಮಿಲಿಯನ್ ಡಾಲರ್ ಪ್ರಶ್ನೇ.


ನಮ್ಮ ರಾಷ್ಟ್ರ ಹಳ್ಳಿಗಳ ದೇಶ. ಹಳ್ಳಿಗಳಲ್ಲಿ ಈ ರೀತಿಯ ಮೇಲಿನ ಕೂಗುಗಳು ವಿರಳವೇ ಎನ್ನಬಹುದು. ಅದರೇ ಇಂದು ನಮ್ಮ ಹಳ್ಳಿಗಳಲ್ಲಿ ಎಷ್ಟುಮಂದಿ ಇದ್ದಾರೆ ಎಂದರೇ ಹಲವು ಹಳ್ಳಿಗಳು ವಿದ್ಯಾವಂತ ತರುಣರುಗಳಿಲ್ಲದೆ ಬೀಕೋ ಎನ್ನುತ್ತಿವೆ. ಯಾಕೇ ಹೀಗೆ? "ಹೊಟ್ಟೆ ಪಾಡು ಸ್ವಾಮಿ" ಎನ್ನುವ ಉತ್ತರ. ಹೌದು! ಯಾರೊಬ್ಬರೂ ಅದೇ ಹೊಲ, ಉಳಿಮೆ ಎಂದು ತಮ್ಮನ್ನು ತಾವುಗಳು ತೊಡಗಿಸಿಕೊಳ್ಳುವುದಿಲ್ಲ. ಸ್ವಲ್ಪ ಓದಿದರೇ ಸಾಕು ಅವರುಗಳ ಅಪ್ಪ ಅಮ್ಮ ತಮ್ಮ ಮಕ್ಕಳುಗಳನ್ನು ದೊಡ್ಡ ದೊಡ್ಡ ಪಟ್ಟಣಗಳಿಗೆ ಸಾಗು ಹಾಕುತ್ತಾರೆ. ಹೆಚ್ಚು ಹೆಚ್ಚು ಸಂಬಳ ಸಿಗುವ ಉದ್ಯೋಗಗಳನ್ನು ಹರಸಿಕೊಂಡು ಬೆಂಗಳೂರಿನಂತ ಬೃಹತ ನಗರಗಳ ಕಡೆ ಮುಖ ಮಾಡುತ್ತಾರೆ.


ಇಲ್ಲಿ ಬಂದಾಗ ಅವರಿಗೆ ತಿಳಿಯುತ್ತದೆ. ನಾವು ನಿಜವಾಗಿಯೋ ನಾವುಗಳಾ ಎಂದು. ಯಾಕೆಂದರೇ ಉತ್ತಮ ಉದ್ಯೋಗಗಳು ಬೇಕೆಂದರೆ ವಿವಿಧ ರೀತಿಯ ಕೌಶಲ್ಯವಿರಬೇಕು. ತಾನು ತನ್ನ ಕನ್ನಡ ಶಾಲೆ, ಕಾಲೇಜು, ವಿಶ್ವ ವಿದ್ಯಾನಿಲಯದಲ್ಲಿ ಅದೇ ಕನ್ನಡದಲ್ಲಿ ಕಲಿತ ವಿದ್ಯೆ ಮತ್ತು ಮಾತುಗಳು ಲೆಕ್ಕಕ್ಕೆ ಬರುವುದಿಲ್ಲ. ಅಟ್ ಲಿಸ್ಟ್ ಅವನು ವಿಶ್ವ ಭಾಷೆಯಾದ ಇಂಗ್ಲಿಷ್ ಕಮ್ಯುನಿಕೇಶನ್ ನಲ್ಲಿ ಸುಲಲಿತನಾಗಿ ಮಾತನಾಡುವ/ಯೋಚಿಸುವ ಯೋಗ್ಯತೆಯನ್ನು ಹೊಂದಿರಬೇಕು. ಆಗ ಮಾತ್ರ ಇಲ್ಲಿರುವ ಯಾವುದಾದರೂ ಒಂದು ಸಂಸ್ಥೆಯಲ್ಲಿ ಕೆಲಸ ಗ್ಯಾರಂಟಿ ಇಲ್ಲವಾದರೇ ನಾಲ್ಕನೇ ದರ್ಜೆಯ ಕೆಲಸಕ್ಕೆ ಶರಣು ಎನ್ನಬೇಕು.


ಈ ಮೇಲಿನ ಎಲ್ಲಾ ಅನುಭವಗಳಿಂದ ಪ್ರೇರಪಿತನಾಗಿ ಅದೇ ಹಳ್ಳಿಯ ಪಕ್ಕ ಕನ್ನಡದ ಮಣ್ಣಿನ ಮಗ ತಾನು ಮದುವೆಯಾಗಿ, ಮಕ್ಕಳು ಮಾಡಿಕೊಂಡ ಮೇಲೆ ಯೋಚಿಸುತ್ತಾನೆ. ಮುಂದೆ ನನ್ನ ಮಕ್ಕಳು ನನ್ನ ಹಾಗೇ ನರಳುವುದು ಬೇಡ. ನನ್ನ ಮಕ್ಕಳಾದರೂ ಉನ್ನತ ಶಿಕ್ಷಣ ಪಡೆಯಲಿ ಎಂದು ನಿರ್ಧರಿಸಿ, ಅದಕ್ಕೆ ಪ್ರಾರಂಭವೆನ್ನುವಂತೆ ಢಾಳಾಗಿ ಕಾಣಿಸುವ ಇಂಗ್ಲಿಷ್ ಕಾನ್ವೇಂಟ್ ಗಳಿಗೆ ಅಷ್ಟು ಇಷ್ಟು ಉಳಿಸಿ ಸೇರಿಸಿ ಸರಿಕರ ಮುಂದೆ ನನ್ನ ಮಕ್ಕಳು ಮಮ್ಮಿ, ಡ್ಯಾಡಿ, ಅಂಟಿ ಎನ್ನುವ ತುಂಟ ಮಾತುಗಳು ಕಿವಿಯ ಮೇಲೆ ಬಿಳಿಸಿಕೊಂಡು ಸುಖಿಸುತ್ತಾನೆ. ಇಲ್ಲಿ ಮುಖ್ಯವಾಗುವುದು ತಾನು ಮತ್ತು ತನ್ನ ಸಂಸಾರದ ಹೊಟ್ಟೆ ಪಾಡು ಅಲ್ಲಿ. ಅಷ್ಟೋತ್ತಿಗೆ ತನ್ನ ನಾಡು ನುಡಿ ಕಡೆಗಣಿಸಲ್ಪಟ್ಟಿರುತ್ತದೆ. ಯಾಕೆಂದರೇ ಜೀವನ ದೊಡ್ಡದಲ್ಲವಾ.


ಈ ರೀತಿಯ ಪರಿಸ್ಥಿತಿಯನ್ನು ತಂದಿರುವವರು ಯಾರು? ಇದಕ್ಕೆ ಪರಿಹಾರವಿಲ್ಲವೇ. ಮಾತು ಎತ್ತಿದರೇ ಎಲ್ಲಾರೂ ಯಾವುದೋ ಲೋಕದಿಂದ ಬಂದಿರುವ ಇಂಗ್ಲಿಷ್ ಪ್ರಾಡಕ್ಟ್ ರೀತಿಯಲ್ಲಿ ಟಸ್ಸ್ ಪೂಸ್ ಎಂದು ಮಾತನಾಡುವುದೇ ದೊಡ್ದಸ್ತಿಕೇ ಎನ್ನುವಂತಾಗಿರುವುದಾದರೂ ಯಾಕೇ?


ಇದರ ಬಗ್ಗೆ ಪ್ರತಿಯೊಬ್ಬರೂ ಒಂದು ಕ್ಷಣ ಚಿಂತಿಸುವುದು ಇಂದಿನ ಸಮಯಕ್ಕೆ ಅತ್ಯಗತ್ಯ.


ಪ್ರಸಿದ್ಧ ವಿಶ್ವ ವಿದ್ಯಾನಿಲಯಗಳಲ್ಲಿ ಉನ್ನತ ಶಿಕ್ಷಣವನ್ನು ಅಧ್ಯಯನ ಮಾಡುವ ಕನ್ನಡ ಮಾಧ್ಯಮದ ಹುಡುಗರ ಪಾಡು ಹೇಳಬಾರದು. ಯಾಕೆಂದರೆ ಯಾವುದೇ ಪೂರಕ ಪುಸ್ತಕಗಳು ಬೇಕೆಂದರೇ ಪುನಃ ಇಂಗ್ಲಿಷ್ ಲೇಖಕರ ಕಡೆ ಮುಖ ಮಾಡಿಕೊಂಡು ಅವುಗಳನ್ನು ಅರ್ಥ ಮಾಡಿಕೊಂಡು ಪುನಃ ಕನ್ನಡದಲ್ಲಿ ತಮ್ಮ ಪರೀಕ್ಷೆಗಳಲ್ಲಿ ಉತ್ತರಿಸಬೇಕು. ಆ ಸಮಯದಲ್ಲಿಯೇ ಅವನಿಗೆ ತಿಳಿಯುತ್ತದೆ ನಾನು ಎಲ್ಲಿ ಎಡೆವಿದ್ದೇನೆ ಎಂದು.


ಈ ರೀತಿಯ ಪರಕೀಯ ವಾತವರಣವನ್ನು ಕನ್ನಡ ಕನ್ನಡ ಎಂದು ಕೂಗುವ ನಮ್ಮಗಳ ಜನ, ಸರ್ಕಾರ, ಸಂಸ್ಥೆಗಳು ಎಲ್ಲಾ ರಂಗದಲ್ಲೂ ಹೋಗಲಾಡಿಸಬೇಕು. ಪ್ರೀತಿ ಪಟ್ಟು ಮಾತೃ ಭಾಷೆ, ಸಂಸ್ಕೃತಿಯನ್ನು ತನ್ನಲ್ಲಿ ಇಟ್ಟುಕೊಳ್ಳಲು ತವಕಿಸುವ ಕನ್ನಡ ಜನ ಮನಗಳಿಗೆ ಉತ್ಸಹ ಕೊಡುವಂತ ಕೆಲಸಗಳು ಆಗಲಿ ಎಂದು ಕನ್ನಡಾಂಭೆಯಲ್ಲಿ ಬೇಡುವ ಕನ್ನಡಿಗ!

ಆದರೂ ಈ ರೀತಿಯ ಸಂಧಿಗ್ಧ ಪರಿಸ್ಥಿಯಲ್ಲೂ ಸಹ ಕೆಲವೇ ಕೆಲವರಾದರೂ ತಾವು ಕೆಲಸ ಮಾಡುವ ಜಾಗಗಳಲ್ಲಿ ಕನ್ನಡದಲ್ಲಿ ಉಸಿರು ಬಿಡದಂತಹ ವಾತವರಣ ಇದ್ದರೂ. ತಮ್ಮ ಮನೆಯಲ್ಲಿ ಮಾತೃ ಭಾಷೆ ಬೇರೆಯಾಗಿದ್ದರೂ, ತಾವು ಬೆಳೆದ ಬೆಂಗಳೂರು ಕನ್ನಡ ಮಣ್ಣು ಎಂಬ ಒಂದೇ ಪ್ರೀತಿಯಿಂದ ಕನ್ನಡ ಸ್ನೇಹಿತರ ಜೊತೆಯಲ್ಲಿ ಕನ್ನಡಕ್ಕೆ ಸಂಬಂಧಿಸಿದ ವಿವಿಧ ಸಾಂಸ್ಕೃತಿಕ ವಿಷಯಗಳಾದ ಸಾಹಿತ್ಯ, ಸಂಗೀತ, ಸಿನಿಮಾ, ಹಾಡು, ಭಾವಗೀತೆಗಳನ್ನು ನಿತ್ಯ ತಮ್ಮ ಮನದಲ್ಲಿ ಸಹೃದಯದಿಂದ ಆರಾಧಿಸುವ ಅಪರೂಪದ ಜಾಣ ಜಾಣೆಯರನ್ನು ಈ ಬೆಂಗಳೂರು ನಗರದಲ್ಲಿ ಕಂಡು ನನ್ನ ಮನ ಸುಖಿಸಿದೆ. ಅದಕ್ಕೆ ಯಾರಿಗೇ ಧನ್ಯವಾದಗಳನ್ನು ಅರ್ಪಿಸಬೇಕೂ ತಿಳಿಯದು. ನನಗೆ ಅನ್ನಿಸುತ್ತದೆ. ಈ ರೀತಿಯ ನೆಚ್ಚಿನತನವನ್ನು ಕನ್ನಡದಲ್ಲಿ ಕೊಟ್ಟ ನಮ್ಮ ಕನ್ನಡದ ಎಲ್ಲಾ ರಂಗದ ಸಾಧಕರಿಗೆ ಹೇಳಬೇಕು ಅಲ್ಲವಾ?

ಶನಿವಾರ, ಅಕ್ಟೋಬರ್ 23, 2010

ವೇದಾವತಿಯಲ್ಲಿ ಹೊಸ ನೀರು...

ನಾವು ಹುಡುಗಿಯರು ಎಷ್ಟು ಸೂಕ್ಷ್ಮ ಎಂಬುದು ನಿನಗೆ ಗೊತ್ತಿಲ್ಲದೇ ಎಷ್ಟೊಂದು ಒರಟು ಒರಟಾಗಿ ವರ್ತಿಸುತ್ತಿದ್ದೆಯಲ್ಲಾ ನನ್ನ ಗೆಳೆಯ. ನಾನು ನಿನ್ನ ಜೊತೆ ನಿನ್ನ ಸ್ನೇಹಕ್ಕಾಗಿ ಕಾತರಿಸಿದ್ದು ಆಗ ನಿನಗೆ ನಾನು ಹೇಳಲಿಲ್ಲ. ಅದು ನನಗೆ ಮತ್ತು ನನ್ನ ಗೆಳತಿ ಸೇವಂತಿಗೆ ಮಾತ್ರ ಗೊತ್ತು. ನಿನ್ನ ಕಂಡ ಆ ದಿನ ಯಾಕೋ ನನ್ನ ಮನ ಹೇಳಿತು "ತಿಳಿಯೇ ಇವನೇ ನಿನ್ನವನು" ಎಂದು. ಯಾಕೋ ಗೊತ್ತಿಲ್ಲ.



ನೀನು ಹೇಗಿದ್ದರೂ ನಿನ್ನ ನಾನು ಒಪ್ಪಿಕೊಳ್ಳುತ್ತೇನೆ. ನೀನು ಯಾರಾಗಿದ್ದರೂ ಎಲ್ಲಾ ಕಟ್ಟಳೆಗಳನ್ನು ನೂಕಿ ನಿನ್ನ ಸೇರಬೇಕು ಮತ್ತು ಸೇರಬಲ್ಲೇ ಎಂಬ ಛಲ ನನ್ನ ಮನದಲ್ಲಿ ಅದು ಹೇಗೆ ಸ್ಥಾಪಿತವಾಯಿತು ದೇವರೆ ಬಲ್ಲ.

ಆ ಮೊದಲ ದಿನ ನೀನು ಎಷ್ಟೊಂದು ಮುಗ್ಧನಾಗಿ ನಿನ್ನ ಆ ಪೋಲಿ ಸ್ನೇಹಿತರ ಜೊತೆ ಹಾಗೆ ಹೀಗೆ ಆವಭಾವ ಮಾಡಿಕೊಂಡು ನಡೆಯುತ್ತಿದ್ದರೆ ನನ್ನ ಎದೆಯಲ್ಲಿ ಢವಢವ ಹೆಜ್ಜೆ ಇಟ್ಟುಕೊಂಡು ನನ್ನ ಹೃದಯದ ಕಡೆ ನೀ ನಡೆದ ಅನುಭವ.

ನೀನು ನನ್ನ ಕಡೆ ಗಮನ ಹರಿಸಲಿಲ್ಲ. ಹೌದು! ಯಾವಾಗಲೂ ಹುಡುಗರ ಕಣ್ಣು ಸುಂದರವಾಗಿ ಕಾಣುವ ಹುಡುಗಿಯರ ಕಡೆಗಲ್ಲವಾ? ನೀನು ಅಂದು ನನ್ನ ಕಂಡಿದ್ದರೆ ಗೊತ್ತಾಗುತ್ತಿತ್ತು. ನಿನ್ನ ನನ್ನ ಅಂತರಾಳದ ಕೂಗು ಒಂದೇ ಎಂದು. ಕಣ್ಣು ಅರಿಯದಿದ್ದರೂ ಹೃದಯ ಅರಿಯಲೇಬೇಕು ಅಲ್ಲವಾ? ಆ ಹೃದಯದ ಪಿಸುಮಾತು ಹರಿಯದಷ್ಟು ಕಲ್ಲು ಹೃದಯದವರು ಹುಡುಗರು.

ನನಗೊ ಗೊತ್ತಿಲ್ಲ, ಹಾಗೆಯೇ ನಿನ್ನನ್ನು ನಾನು ದ್ಯಾನಿಸಲು ಪ್ರಾರಂಭಿಸಿದ ಮೇಲೆ, ಎಂದು ನಾವಿಬ್ಬರು ಹತ್ತಿರಕ್ಕೆ ಬರಲು ಪ್ರಾರಂಭಿಸಿದೇವು ಎಂದು. ಮೊದ ಮೊದಲು ನೀನು ಎಷ್ಟಂದು ಗುಮ್ಮನಾಗಿರುತ್ತಿದ್ದೇ ಅಲ್ಲವಾ? ಅದೇ ಇರಬೇಕು ನನಗೆ ಇಷ್ಟವಾಗಿದ್ದು. ನೀನಾಯಿತು ನಿನ್ನ ಕೆಲಸವಾಯಿತು. ಹತ್ತು ಮಾತಿಗೆ ಒಂದು ಮಾತು. ನನ್ನ ಗೆಳೆತಿಯರು ಹೇಳುತ್ತಿದ್ದರೂ "ಏ ಏನೇ ನಿನಗೆ ಯಾರು ಸಿಗಲಿಲ್ಲವಾ ಇಂಥವನನ್ನು ಇಷ್ಟಪಡುತ್ತಿಯಲ್ಲಾ". ಅದಕ್ಕೆ ನನ್ನ ಉತ್ತರ ಕೇವಲ ಮುಗಳ್ನಗೆ.

ಸ್ವಲ್ಪ ಸ್ವಲ್ಪ ನೀನು ನನಗೆ ಹತ್ತಿರವಾಗುತ್ತಾ ಆಗುತ್ತಾ ನೀನು ಆ ಯಾವ ಭಾವನೆಯೇ ಇಲ್ಲದವನಂತೆ ಸುಮ್ಮನೆ ಗೊತ್ತಿರುವವರು ಎಂಬಂತೆ ಬೇರೆಯವರ ಜೊತೆ ಮಾತನ್ನಾಡಿದಷ್ಟೇ ನನ್ನ ಜೊತೆ ಮಾತನ್ನಾಡುತ್ತಿದ್ದುದು. ನಾನು ನೋಡಿದಾಗೇ ಹುಡುಗರು ಸ್ವಲ್ಪ ಸಲಿಗೆ ಕೊಟ್ಟರೆ ಸಾಕು ಅವರ ನಡವಳಿಯೇ ಏನೋ ಒಂಥಾರವಾಗುತ್ತದೆ. ಇದಕ್ಕೆ ನೀನು ತದ್ವಿರುದ್ಧವಾಗಿದ್ದೇ ನನಗೆ ನಿನ್ನ ಮೆಚ್ಚಲು ಎರಡನೇಯ ಕಾರಣ.

ಆ ನಿನ್ನ ಸರಳತೆ ಮತ್ತು ಬೇರೆಯವರ ಬಗ್ಗೆ ನಿನಗಿರುವ ಕಾಳಜಿ, ನಿನ್ನ ಅಮ್ಮನ ಬಗ್ಗೆ ನಿನಗಿರುವ ಅಕ್ಕರೆ .. ಸ್ನೇಹಿತರ ಬಗ್ಗೆ ಕೊಡುವ ಪ್ರಾಮುಖ್ಯತೆ ಹೀಗೆ ಈ ನಿನ್ನ ಒಂದೊಂದು ನಿನ್ನ ತನವು ನನ್ನನ್ನು ಅತಿ ವೇಗವಾಗಿ ನಿನ್ನ ಬಳಿಗೆ ಸೆಳೆಯಲು ಕಾರಣವಾದವು.

ಯಾವಾಗಲೂ ನಿನ್ನದೇ ದ್ಯಾನವಾಗಿತ್ತು. ಮನದ ಛಾಯ ಮಂಟಪದಲ್ಲಿ ನಿನ್ನ ಚಿತ್ರವನ್ನು ಇಟ್ಟು ನಿನ್ನ ಬಗ್ಗೆ ಗೊತ್ತಿರುವ ಎಲ್ಲ ಪ್ರೀತಿಯ ಗೀತೆಗಳನ್ನು ಗುನುಗುತ್ತಿದ್ದೆ.

ಒಂದು ದಿನ ನಿದ್ದೆಯಲ್ಲಿ ಏನು ಏನೋ ಕನವರಿಸುತ್ತಿದ್ದೆನಂತೆ. ಬೆಳಿಗ್ಗೆ ಅಮ್ಮ ಹೇಳಿದಾಗ ನಿಜವಾಗಿಯೂ ನಾಚಿಕೆಯಾಯಿತು. ಅಂದೇ ಇರಬೇಕು ನಾನು ನಿರ್ಧರಿಸಿದ್ದು. ನನ್ನ ಮನದಾಳದ ಪ್ರೀತಿಯ ಒರತೆಯನ್ನು ನಿನ್ನಲ್ಲಿ ಸುರಿದು ನಾನು ಹಗುರಾಗಬೇಕು ಎಂದು.

ನನಗೆ ನಿನ್ನ ಕಂಡರೆ ಅಂದಿನಿಂದಲೂ ಏನೊ ಭರವಸೆ ನನ್ನನ್ನು ನೀನು ಅಚ್ಚು ಮೆಚ್ಚಾಗಿ ನೋಡಿಕೊಳ್ಳುವೇ ಮತ್ತು ನಾನು ನಿನ್ನ ಹೃದಯದಲ್ಲಿ ಮನದನ್ನೆಯಾಗಿ ಇರಬಹುದು. ಮುಂದಿನ ನನ್ನ ಜೀವನ ನಿನ್ನ ಆ ಪುಟ್ಟ ಸಂಸಾರವಾದ ನಿನ್ನ ಅಮ್ಮ ,ನೀನು ಮತ್ತು ನಾನು ಎಂದು ಅಷ್ಟೊಂದು ಬೆಚ್ಚನೆಯ ಚಂದದ ಕನಸನ್ನು ನಿರ್ಮಿಸಿಕೊಂಡು ಅಲ್ಲಿಯೇ ಮನೆಯತುಂಬ ಹಾಗೇ ಹೀಗೆ ಅಲ್ಲಿ ಇಲ್ಲಿ ಅಚ್ಚುಕಟ್ಟದ ಶುಭ್ರತೆಯನ್ನು ತಂದು ಬಿಟ್ಟಿದ್ದೇ.

ನಾನು ನಿನ್ನಲ್ಲಿ ನನ್ನ ಆಸೆಯನ್ನು ಹೇಳಿಕೊಳ್ಳಬೇಕು ಎಂದು ಅಂದು ಅಲ್ಲಿ ನೀನು ಬರುವ ದಾರಿಯಲ್ಲಿ ಚುಮುಚುಮು ಮುಂಜಾನೆಯ ಆ ಸವಿ ಚಳಿಯಲ್ಲಿ ಎಷ್ಟೊಂದು ಹೊತ್ತು ಕಾದಿದ್ದೇ ಎಂದು ನೀನು ಬಂದ ಮೇಲೆಯೇ ಗೊತ್ತಾಗಿದ್ದು.

ನಾನು ನನ್ನ ಆ ಒಂದು ಮಾತು ಹೇಳಲು ನಿನ್ನ ಮುಂದೆ ಅಪರಿಚಿತಳೇನೋ ಎಂಬಂತೆ ನಿಂತಿರುವಾಗ ನೀನು ಮುದ್ದು ಒರಟನಾಗಿ ಏನೊಂದು ಮಾತನಾಡದೇ, "ಏನು ಹೇಳಮ್ಮಾ" ಎನ್ನಬೇಕೇ? ಆಗೊಂತು ನಿನಗೆ ಸರಿಯಾಗಿ ಬಾರಿಸಬೇಕೆಂಬ ಕೋಪ ಬಂದಿತ್ತು. ಅದೇನೋ ಗೊತ್ತಿಲ್ಲ. ನಿಮ್ಮಂತ ಒಳ್ಳೆ ಹುಡುಗರು ಪ್ರೀತಿಯನ್ನು ಕೊಡುವ ಹುಡುಗಿಯರಿಗೆ ಅದೇಕೇ ಅಷ್ಟೊಂದು ಗೊಳು ಹೊಯ್ದು ಕೊಳ್ಳಿತ್ತಿರಾಪ್ಪ. ನಾನು ಅದೇಗೋ ಮನಸ್ಸನ್ನು ಗಟ್ಟಿ ಮಾಡಿಕೊಂಡು ಹೇಳಿದಾಗ, ನೀನು ನನಗೆ ಎಲ್ಲ ಗೊತ್ತು ಎಂಬಂತೆ ನಗುವುದೇ. ನಿನಗೂ ನನ್ನ ಕಂಡರೆ ಪ್ರೀತಿ ಇದ್ದರೂ ನಾನೇ ಹೇಳಲಿ ಎಂದು ಇಷ್ಟಂದು ಸತಾಯಿಸುವುದೇ ಮುದ್ದು ಗಮಾರ!

ಅಂದೇ ಇರಬೇಕು ಮೂಕ್ಕಾಲುಪಾಲು ದಂ-ಪತಿ ಗಳಂತಾದೆವು. ಅಂದೇ ಸಂಜೆ ನೀನು ನಿನ್ನ ಅಮ್ಮನಿಗೆ ನನ್ನ ತೋರಿಸಿದಾಗಲಂತೋ ನನಗೆ ನನ್ನ ಅಮ್ಮನನ್ನೇ ಕಂಡಷ್ಟು ಸಂತೋಷವಾಯಿತು. ಅವರಂತೂ ನಿನ್ನಂತೆ ಅಲ್ಲ ಬಿಡು ಎಷ್ಟು ಸಲಿಸಾಗಿ ಹೇಗೆ ನನ್ನ ಬಗ್ಗೆ ವಿಚಾರಿಸಿದರು. ಆಗ ನಿನ್ನ ಅಮ್ಮನಿಗೆ ಹೇಳಬೇಕೆನಿಸಿತ್ತು. ಸ್ವಲ್ಪ ನಿಮ್ಮ ಮಗನಿಗೆ ಬುದ್ಧಿ ಹೇಳಿ ಎಂದು. ಮೊದಲ ದಿನವೇ ಯಾಕೆ ಮಾತನ್ನಾಡುವುದು ಎಂದು ಸುಮ್ಮನಿರಬೇಕಾಯಿತು.

ಎಷ್ಟೊಂದು ವಸಂತಗಳು ಕಳೆದು ಹೋಗಿದ್ದಾವೆ. ವೇದಾವತಿಯಲ್ಲಿ ಹೊಸ ನೀರು ಹಲವು ಭಾರಿ ಹರಿದಿವೆ. ಈಗಲೂ ನೀನು ನನಗೆ ಆ ಮುದ್ದು ಗಮಾರನೇ.. ಲೈಫು ಅಂದ್ರೇ ಇಷ್ಟೇ ಅಲ್ಲ ಅಲ್ವಾ!

ಬುಧವಾರ, ಅಕ್ಟೋಬರ್ 20, 2010

ನಮ್ಮ ಊರಿನ ದಸರ ಮಸ್ತ್ ಮಸ್ತ್

ನಾಡ ಹಬ್ಬ ಎಂದರೆ ಅದು ದಸರಾ ಹಬ್ಬ ಒಂಬತ್ತು ದಿನಗಳ ನವರಾತ್ರಿ ದಿನಗಳನ್ನು ಪ್ರತಿ ದಿನ ವಿವಿಧ ರೀತಿಯ ಪೂಜೆ ಪುರಸ್ಕಾರಗಳನ್ನು ತಮ್ಮ ಇಷ್ಟ ದೇವತೆಗೆ ಮಾಡಿ ಅದರಲ್ಲಿ ತಮ್ಮ ಮನವನ್ನು ತಲ್ಲಿನಗೊಳಿಸಿ ಪಾವನರಾಗಬೇಕೆಂಬ ಹಂಬಲ. ಹೀಗೆ ಒಂದು ಘಟ್ಟಕ್ಕೆ ಬಂದು ಕೂನೆ ದಿನವಾದ ವಿಜಯದಶಮಿಯಂದು ಸಡಗರದಿಂದ ವಿವಿಧ ರೀತಿಯಲ್ಲಿ ವಿವಿಧ ಕಡೆಗಳಲ್ಲಿ ತಮ್ಮ ಹಬ್ಬದ ಸಂಭ್ರಮವವನ್ನು ತೋರಿಸುತ್ತಾ ಆಚರಿಸುತ್ತಾರೆ.


ಆದರೆ ನಮ್ಮ ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನಲ್ಲಿ ನಡೆಯುವ ದಸರಾ ಸಂಭ್ರಮ ವಿಶ್ವ ಪ್ರಸಿದ್ಧಿ. ಅಲ್ಲಿ ನಡೆಯು ಕೂನೆಯ ದಿನದ ಆನೆ ಅಂಭಾರಿಯ ಉತ್ಸವ ಬಲು ಅಪರೂಪದ್ದು. ಸತತವಾಗಿ ೪೦೦ ವರ್ಷಗಳಿಂದ ನಿರಂತರವಾಗಿ ಹೆಚ್ಚು ಹೆಚ್ಚು ಆಕರ್ಷಣೆಯಿಂದ ಜರುಗುತ್ತಾ ಲಕ್ಷ ಲಕ್ಷ ಜನಗಳನ್ನು ಬರುವಂತೆ ಮಾಡಿ ತನ್ನ ಮೋಡಿಯನ್ನು ಮಾಡಿದೆ ಎಂದರೆ ಅತಿಶಯೋಕ್ತಿಯಲ್ಲ.


ನಮ್ಮ ಮೈಸೂರು ದಸರದ ರೀತಿ ನಮ್ಮ ರಾಜ್ಯದ ವಿವಿಧ ಭಾಗಗಳಲ್ಲೂ ಅದರಷ್ಟೂ ದೂಡ್ಡ ರೀತಿಯಲ್ಲಿ ನಡೆಯದಿದ್ದರೂ ಅದ್ದೂರಿಗೇನೂ ಕಡಿಮೆಯಿಲ್ಲ ಎಂಬಂತೆ ಸರಳವಾಗಿ ಅಲ್ಲಿನ ಸುತ್ತ ಮುತ್ತಲಿನ ಜನಗಳಿಗೆ ದಸರಾದ ಸಡಗರವನ್ನು ಕೂಡುವಂತೆ ನಮ್ಮ ಚಿತ್ರದುರ್ಗದಲ್ಲಿನ ಶರಣ ಸಂಸ್ಕೃತಿ ಉತ್ಸವ, ಕೂಡುಗಿನ ದಸರ, ಮಂಗಳೂರಿನಲ್ಲಿನ ದಸರಾ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿವೆ.


ಚಿತ್ರದುರ್ಗದ ಶರಣ ಸಂಸ್ಕೃತಿ ಉತ್ಸವ ಒಂದು ವಾರದವರಿಗೆ ವಿವಿಧ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಕಾರ್ಯಕ್ರಮಗಳು ದಿನವಿಡಿ ನಡೆಯುತ್ತವೆ. ಇಲ್ಲಿನ ಈ ಕಾರ್ಯಕ್ರಮಗಳಿಗೆ ಉತ್ತರ ಕರ್ನಾಟಕ ಮತ್ತು ಮದ್ಯ ಕರ್ನಾಟಕದ ಊರು ಊರುಗಳಿಂದ ಜನರು ತಮ್ಮವರೂಡಗೂಡಿ ಬಂದು ಮಿನಿ ಮೈಸೂರು ದಸರಾವನ್ನು ಕಂಡಷ್ಟು ಸಂತೋಷಗೊಂಡು ವಿವಿಧ ವಿಚಾರಗಳನ್ನು ಆಲಿಸಿ ತಮ್ಮತನವನ್ನು ಉತ್ತಮಗೊಳಿಸಿಕೊಂಡು ನಲಿಯುತ್ತಾರೆ. ಇದಕ್ಕೆ ಕಾರಣೀಭೂತರಾದ ಶ್ರೀ ಶ್ರೀ ಶಿವಮೂರ್ತಿ ಶಿವ ಶರಣರಿಗೆ ಶರಣು ಶರಣಾರ್ಥಿ.


ವಿಜಯ ದಶಮಿ ದಿನದಂದು ಇಲ್ಲೂ ಮೈಸೂರಿನ ರೀತಿಯಲ್ಲಿ ಮುಂಜಾನೆಯೇ ಶ್ರೀ ಮುರುಘ ಮಠದಿಂದ ಮೆರವಣಿಗೆ ಶಿವಶರಣರ ಸಾರಥ್ಯದಲ್ಲಿ ಸಾಗುತ್ತಾ ಅದು ಕೋಟೆಯನ್ನು ತಲುಪಿ ಕೊನೆಯಾಗುತ್ತದೆ. ಇದರಲ್ಲಿ ನಾಡಿನ ವಿವಿಧ ಭಾಗಗಳಿಂದ ಬಂದ ಜನರ ಜನಪದ ಕಲೆಗಳ ಪರಿಚಯವನ್ನು ಕಾಣಬಹುದು. ನಮ್ಮ ಸಂಸ್ಕೃತಿಯ ಪಳಿಯುಳಿಕೆಗಳೇನೋ ಎಂಬಂತೆ ಇಂಥ ಸಮಯದಲ್ಲಿ ಮಾತ್ರ ಈ ಕಲೆಗಳು ಹೊರಗಡೆ ಬಂದು ಜನರನ್ನು ರಂಜಿಸುತ್ತಾ ತಮ್ಮ ಹೆಮ್ಮೆಯನ್ನು ಮೆರೆಯುತ್ತವೆ.


ಈ ಬಾರಿಯ ಶರಣ ಸಂಸ್ಕೃತಿ ಉತ್ಸವದಲ್ಲಿ ಬಾಗಿಯಾಗುವ ಸೌಭಾಗ್ಯ ವಿಜಯದಶಮಿ ದಿನದಂದು ದೂರೆಯಿತು. ಅಂದಿನ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮ ಮಕ್ಕಳ ಕಾರ್ಯಕ್ರಮವಾಗಿತ್ತು. ನಾಡಿನ ವಿವಿಧ ಭಾಗಗಳಿಂದ ಪ್ರಸಿದ್ಧಿ ಪಡೆದ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಗಾಧ ಸಾಧನೆಯನ್ನು ಮಾಡಿದ ಎಳೆಯರನ್ನು ಆಹ್ವಾನಿಸಿ ವೇದಿಕೆಯ ಮೇಲೆ ಶಿವ ಶರಣರ ಜೊತೆ ಕೂಡಿಸಿದ್ದರು.


ಅವರುಗಳನ್ನು ನೋಡಿದಾಗ ಎಂಥವರಿಗೂ ಒಂದು ಸ್ಫೂರ್ತಿಯಾಗುತ್ತಿತ್ತು. ಅತಿ ಚಿಕ್ಕ ವಯಸ್ಸಿನಲ್ಲಿ ಅಂಥ ದೂಡ್ಡ ವೇದಿಕೆಯ ಮೇಲೆ ಕೂಡಲು ಅವರುಗಳು ಎಷ್ಟೊಂದು ಅದೃಷ್ಟ ಮತ್ತು ಪರಿಶ್ರಮವನ್ನು ತಮ್ಮ ಜೀವನದಲ್ಲಿ ಪಟ್ಟಿರಬೇಕು ಅಲ್ಲವಾ! ಈ ರೀತಿಯ ವಿವಿಧ ರಂಗದ ಕಾರ್ಯಕ್ರಮಗಳು ಪ್ರತಿದಿನ ಒಂದು ವಾರ ಆ ಜಿಲ್ಲೆಯ ಜನರಿಗೆ ಅಪರೂಪದ ಸಾಧನೆಯ ಶಿಖರಗಳನ್ನು ತಮ್ಮ ಕಣ್ಣ ಮುಂದೆ ಕಾಣುವುದು.



ಇದು ಸರಿ! ಆದರೆ ಅಲ್ಲಿ ಅಂದು ನಡೆದ ಒಂದು ಎರಡು ಕಾರ್ಯಕ್ರಮಗಳು ಸ್ವಲ್ಪ ತಮ್ಮ ಮಿತಿಯನ್ನು ಮೀರಿದವು ಎಂದು ಅನಿಸಿತು. ಈಗಾಗಲೇ ನಮಗೆಲ್ಲಾ ಗೊತ್ತಿರುವಂತೆ ನಮ್ಮ ಟಿ. ವಿ. ಚಾನೆಲ್ ಗಳು ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳಲು ರಿಯಾಲಿಟಿ ಶೋಗಳನ್ನು ದಿನಂಪ್ರತಿ ಮಕ್ಕಳಿಗಾಗಿ, ಹದಿಹರೆಯದವರಿಗಾಗಿ, ವಯಸ್ಸಾದವರಿಗಾಗಿ ವಿವಿಧ ರೀತಿಯಲ್ಲಿ ಜನರನ್ನು ಮೋಡಿ ಮಾಡಲು ತಾನು ಮುಂದು ನೀನು ಮುಂದು ಎಂದು ನಿಂತಿರುವಾಗ, ಅದೇ ರೀತಿಯ ಅದಕ್ಕೆ ಸಮೀಪವಾದಂತ ನೃತ್ಯಗಳನ್ನು ಸಿನಿಮಾ ಹಾಡುಗಳಿಗೆ ಮಾಡಿಸಿದ್ದು ಮನಸ್ಸಿಗೆ ತುಂಬ ಕಸಿವಿಸಿಯನ್ನುಂಟು ಮಾಡಿತು. ಮತ್ತು ಇದಕ್ಕೇ ಪ್ರೋತ್ಸಾಹವೇನೂ ಎಂಬ ರೀತಿಯಲ್ಲಿ ಸಭಿಕರ ಚಪ್ಪಾಳೆಗಳು ಮುಗಿಲು ಮುಟ್ಟಿದ್ದು ಮಾತ್ರ ನಮ್ಮ ಸಂಸ್ಕೃತಿ ಎತ್ತ ಸಾಗುತ್ತಿದೆ ಎಂಬುದನ್ನು ಕ್ಷಣ ಕಾಲ ಯೋಚಿಸುವಂತೆ ಮಾಡಿತು.


ಏನು ಅರಿಯದ ಈ ಚಿಕ್ಕ ವಯಸ್ಸಿನಲ್ಲಿ ಈ ಕಂದಮ್ಮಗಳಿಗೆ ಈ ರೀತಿಯ ಹಾಡಿನ ನೃತ್ಯಗಳನ್ನು ಕಲಿಸಿದ, ಅವರಿಗೆ ತೋಡಿಸಿದ ವೇಷ, ವಸ್ತ್ರ ಆ ದೇವರಿಗೆ ಪ್ರೀತಿ. ಶಿವಶರಣ ಸಮ್ಮುಖದಲ್ಲಿ ಇಂಥ ಅಪರೂಪವಾದ ಉತ್ಕೃಷ್ಟವಾದ ಸಂಭ್ರಮದಲ್ಲಿ ಈ ರೀತಿಯ ಯಾವುದೇ ಚಿಕ್ಕ ಚಿಕ್ಕ ಕಾರ್ಯಕ್ರಮಗಳು ಜರುಗುವುದನ್ನು ಆಯೋಜಕರು ತಪ್ಪಿಸಬೇಕು. ಹೆಸರೇ ಸೂಚಿಸುವಂತೆ ಸಂಸ್ಕೃತಿಯ ಉತ್ಸವ ನಮ್ಮ ಇಂದಿನ ಜನಕ್ಕೆ ಸಿನಿಮಾ ಹಾಡುಗಳ ನೃತ್ಯವೇ ಕನ್ನಡ ಸಂಸ್ಕೃತಿ ಎಂಬಂತೆ ಆಸ್ವಾದಿಸುತ್ತಾರೆ ಮತ್ತು ಈ ರೀತಿಯ ಕಾರ್ಯಕ್ರಮಗಳು ಹೇರಳವಾಗಿ ದಿನ ನಿತ್ಯ ಅಲ್ಲಿ ಇಲ್ಲಿ ನೋಡುತ್ತಲೇ ಇದ್ದೇವೆ. ಅವುಗಳನ್ನು ಪುನಃ ಇಂಥ ಮುಖ್ಯ ಕಾರ್ಯಕ್ರಮಗಳಲ್ಲಿ ತರುವುದು ನಿಲ್ಲಬೇಕು.


ಮಕ್ಕಳಿಗೂ ಸಹ ನಮ್ಮ ಸೂಗಡಿನ ಸಂಸ್ಕೃತಿಯ ಕಲೆಗಳನ್ನು ಕಲಿಸ ಬೇಕು ಮತ್ತು ಅವುಗಳನ್ನು ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಈ ಪಾಶ್ಚಾತ್ಯ ವೇಷ, ಭೂಷಣ, ಸಂಗೀತ, ಹಾಡು, ನೃತ್ಯ ನಮ್ಮಗಳ ಕಲೆಯ ಮುಂದೆ ಏನು ಅಲ್ಲ ಎಂಬುದನ್ನು ಅರಿಯುವಂತೆ ಮಾಡುವುದು ದೂಡ್ಡವರಾದ ಎಲ್ಲ ಗುರು ಹಿರಿಯರ ಕರ್ತವ್ಯ.


ಮಕ್ಕಳ ಸ್ಕೂಲ್ ಶಾಲೆಯಲ್ಲಿ ಅಲ್ವಾ! ಎಂಬಂತೆ ಇಂದಿನ ಈ ನಗರ ಜೀವನದಲ್ಲಿ ಪ್ರತಿ ಶಾಲೆಗಳಲ್ಲೂ ಅಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳ ಕೈಯಿಂದ ಮಾಡಿಸುವ ನೃತ್ಯ ಕಣ್ಣಿಂದ ನೋಡಬಾರದು ಯಾವ ಮೂರನೇ ದರ್ಜೆಯ ಸಿನಿಮಾ ಕ್ಯಾಬರೆ ನೃತ್ಯಕ್ಕೆ ಕಡಿಮೆ ಇರುವುದಿಲ್ಲ. ಏನೂ ಅರಿಯದ ಆ ವಯಸ್ಸಿನ ಮಕ್ಕಳಿಗೆ ಕಲಿಸುವ ಹಾಡು ನೃತ್ಯ ಬರುತ್ತಾ ಬರುತ್ತಾ "ತೋ ಚಿಜ್ ಬಡಿ ಮಸ್ತ ಮಸ್ತ..." ತಮ್ಮ ನೆಚ್ಚಿನ ಗೀತೆಯಾಗುತ್ತದೆ. ಮತ್ತು ಇದೇ ಮುಂದೆ ಇಂಥ ಕಾರ್ಯಕ್ರಮಗಳಲ್ಲಿ ಪ್ರತಿಬಿಂಬಿಸುತ್ತದೆ. ಇದು ನಿಲ್ಲಬೇಕು ನಮ್ಮ ಜನಪದ, ಹಿಂದುಸ್ತಾನಿ, ಭರತನಾಟ್ಯ, ಕೋಲಾಟ, ವಚನಗಳು, ಭಾವ ಗೀತೆಗಳು ಹೀಗೆ ಮೂಲೆಗೆ ಸೇರುತ್ತಿರುವ ಕಲೆಗಳ ಪುನರಪಿ ಜನನಂ ಎಲ್ಲರ ಮನದಲ್ಲಾಗಲಿ ಎಂದು ಆಶಿಸೋಣ.

ಭಾನುವಾರ, ಅಕ್ಟೋಬರ್ 10, 2010

ಅಧಿಕಾರವೊಂದೇ ಎನಗೆ ಹಿರಿದು!


ಸಮಕಾಲಿನ ನಮ್ಮ ರಾಜ್ಯದ ರಾಜಕೀಯ ಸ್ಥಿತ್ಯಾಂತರಗಳನ್ನು ಗಮನಿಸಿದರೆ ಯಾರೊಬ್ಬರಿಗೂ ಯಾವ ಭರವಸೆಯ ಕಿರಣಗಳು ಕಾಣದಂತಾಗಿದೆ. ನಾವುಗಳೇ ನಮ್ಮ ಕೈಯಾರೆ ಆರಿಸಿದ ನಮ್ಮನಾಳುವ ನಮ್ಮ ಪ್ರತಿನಿಧಿಗಳು ಇವರುಗಳೇ ಎಂದು ನಾವುಗಳು ಯಾರನ್ನು ಕೇಳಬೇಕು ಎನ್ನುವಂತಾಗಿದೆ.


ಯಾವ ಸರ್ಕಾರವೂ ಹೀಗೆ ಎಂದೆಂದಿಗೂ ನಡೆಯಬಾರದು ಎನ್ನುವಷ್ಟರ ಮಟ್ಟಿಗೆ ನಮ್ಮ ಮುಖ್ಯಮಂತ್ರಿಗಳು ಎಲ್ಲಾ ರೀತಿಯಲ್ಲೂ ವಿಫಲರಾಗಿ ನಿಶಕ್ತರಾಗಿ ನಿಂತಿದ್ದಾರೇನೋ ಎಂಬುವಂತಾಗಿದೆ. ಈ ಸ್ಥಿತಿಗೆ ಅವರುಗಳು ಅಂದು ತಮ್ಮ ಜಾಗವನ್ನು ಭದ್ರ ಮಾಡಿಕೊಳ್ಳಲು ಅತಿ ಹೊಸದಾದ ತಂತ್ರವಾದ ಅಪರೇಷನ್ ಕಮಲವನ್ನು ಮಾಡಿದ್ದು. ಹೀಗಾಗಲೇ ಬೇರೆ ಪಕ್ಷದಿಂದ ಗೆದ್ದು ಬಂದಿರುವ ಪ್ರತಿಪಕ್ಷದವರನ್ನು ತಮ್ಮ ಪಕ್ಷದ ಕಡೆಗೆ ಸೆಳೆದು ಕೊಂಡು ತಾನು ಬಲಿಷ್ಟನಾಗುತ್ತಿದ್ದೇನೆ ಎಂಬ ಹುಸಿ ಕನಸಿನಲ್ಲಿ ಬಂದ ಹೊಸಬರಿಗೆ ವಿವಿಧ ರೀತಿಯ ಹುದ್ದೆಗಳು, ಜಾಗಗಳನ್ನು ಬಿಟ್ಟು ಕೊಟ್ಟು ತನ್ನ ಮನೆಯಲ್ಲಿ ತನ್ನ ಪಕ್ಷಕ್ಕಾಗಿ ದುಡಿದ ಸಾಮಾನ್ಯರನ್ನು ಕಡೆಗಣಿಸಿದ ಪಾಪವನ್ನು ಈಗ ನೋಡುವಂತಾಗಿದೆ.


ಒಬ್ಬ ವ್ಯಕ್ತಿಯ ನಿಜ ರೂಪವನ್ನು ನಾವು ನೋಡಬೇಕಾದರೆ ಅವನಿಗೆ ಅಧಿಕಾರ ಕೊಟ್ಟು ಪರೀಕ್ಷಿಸಿ ನೋಡು ಎನ್ನುವಂತೆ. ಕೆಲವೇ ವರುಷಗಳಲ್ಲಿ ಪ್ರತಿ ತಿಂಗಳು ದಿನಂಪ್ರತಿ ವಿವಿಧ ಹಗರ‍ಣಗಳ ಸರಮಾಲೆಯಲ್ಲಿ, ದುರಾಸೆಯ ಬಲದಿಂದ ವಿವಿಧ ರೀತಿಯಲ್ಲಿ ಪ್ರತಿಯೊಬ್ಬರೂ ಸಿಕ್ಕಷ್ಟು ದಿನದಲ್ಲಿ ತಮ್ಮ ಅಧಿಕಾರವನ್ನು ತಾವು ಕಂಡ ಕನಸುಗಳನ್ನು ನನಸು ಮಾಡಿಕೊಳ್ಳಲು ನಿರತಾರದರೇನೆ ವಿನಾಃ ತಮ್ಮ ಪಕ್ಷ ಮತ್ತು ತಮ್ಮ ನ್ನು ಆರಿಸಿದ ಜನಸಾಮಾನ್ಯರ ಕೂಗಿಗೆ, ಆಶಯಕ್ಕೆ ಬೆಲೆ ಇಲ್ಲವೇನೋ ಎಂಬ ರೀತಿಯಲ್ಲಿ ಎಲ್ಲಾ ಕಡೆಗಳಿಂದಲೂ ಅಸಮಾಧಾನದ ಹೂಗೆ ಏಳಲು ಆರಂಭವಾಗಿ ತಮ್ಮ ಸಿಸ್ತಿನ ಪಕ್ಷದಲ್ಲೂ ಸಹ ಏನೂ ಸರಿಯಿಲ್ಲ ಎನ್ನುವಷ್ಟರ ಮಟ್ಟಿಗೆ ಇಂದಿನ ಈ ಸಂಧಿಗ್ಧ ಸ್ಥಿತಿಗೆ ಬಂದು ದಿನಗಳನ್ನು ಏಣಿಸುವಂತಾಗಿದೆ.


ತಮ್ಮದೇ ಪಕ್ಷ ಪಕ್ಕದ ರಾಜ್ಯವಾದ ಗುಜರಾತಿನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಅಭಿವೃದ್ಧಿಯೊಂದೇ ಮಂತ್ರ ಎಂಬ ರೀತಿಯಲ್ಲಿ ಮೋದಿ ಮನಿಯಾ ಇಡೀ ಭಾರತದಲ್ಲಿ ಪ್ರಸಿದ್ಧವಾಗಿದ್ದರೂ ಅಲ್ಲಿನ ಆ ಸುಧಾರಣೆ ದಕ್ಷಿಣ ಭಾರತದಲ್ಲಿ ಯಾವ ಜಾದು ನಡೆಯಲಾರದೇ ಸರ್ಕಾರವೆಂದರೆ ಇದೇನಾ! ಎನ್ನುವಂತಾಗಿದ್ದು ವಿಪರ್ಯಾಸ.


ಜನರಿಂದ ಜನರಿಗಾಗಿ ರೂಪಿತವಾದ ಜನರ ಸರ್ಕಾರ ಎಂದು ಪ್ರಜಾಪ್ರಭುತ್ವದಲ್ಲಿ ಬಿಂಬಿತವಾದ ನಮ್ಮ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆವಲ ತಮ್ಮ ತಮ್ಮ ಕ್ಷೇಮಗಳನ್ನು ನೋಡಿಕೊಂಡರೇ ಮತ್ತು ಯಾವುದೇ ಉತ್ತಮ ಕೆಲಸಗಳನ್ನು ಮಾಡದಿದ್ದರೆ ಯಾವ ಸರ್ಕಾರಗಳು ಉಳಿಯಲಾರವು. ಜನರ ಹಿತ ಮತ್ತು ಅವರ ಸುಧಾರಣೆಯ ರೂವಾರಿಗಳಾಗ ಬೇಕಾದ ನಮ್ಮ ಪ್ರತಿನಿಧಿಗಳು, ತಮ್ಮ ಹಿತಾಸಕ್ತಿ ಮತ್ತು ಅಧಿಕಾರಕ್ಕಾಗಿ ಯಾವುದೇ ರೀತಿಯ ಕೆಲಸ ಮಾಡಲೂ ಸೈ ಎನ್ನುವುದನ್ನು ಕಳೆದೆರಡು ವಾರಗಳಲ್ಲಿ ಇಲ್ಲಿನ ಕೆಲವು ಜನಪ್ರತಿನಿಧಿಗಳು ಮಾತನ್ನಾಡುವ ರೀತಿ, ವರ್ತಿಸುತ್ತಿರುವ ಬಗೆಗಳನ್ನು ನೋಡಿದರೇ ಎಂಥವರಿಗಾದರೂ ವಾಕರಿಕೆ ಬರದೇ ಇರದು.


ಯಾವ ಕನಸುಗಳನ್ನು ಇಟ್ಟುಕೊಂಡು ತಮ್ಮನ್ನು ಆರಿಸಿರುವ ಮತದಾರನ ಮುಗ್ಧತೆಯ ಪರೀಕ್ಷೆಯನ್ನು ಕೆವಲ ಅವರು ಅವರುಗಳೇ ಕೋಟಿ ಕೋಟಿ ಡೀಲ್ ಕುದುರೆ ವ್ಯಾಪಾರದಲ್ಲಿ ಮತ್ತು ಹತ್ತು ಹಲವಾರು ಆಸ್ತಿಗಳನ್ನು ಸಂಪಾದಿಸುವಲ್ಲಿ ಮಗ್ನರಾಗಿರುವುದನ್ನು ಪತ್ರಿಕೆಗಳಲ್ಲಿ ಪುಟಗಟ್ಟಲೆ ಓದುತ್ತಿದ್ದರೆ, ಈ ವ್ಯವಸ್ಥೆಗೆ ಇನ್ನಾದರೂ ಒಂದು ಭವಿಷ್ಯ ಇದೆ ಅಂಥ ಅನ್ನಿಸುತ್ತದಾ?


ನಮ್ಮ ಒಳ್ಳೆತನವನ್ನು ಅಸಹಾಯಕತೆಯನ್ನು ಕೇವಲ ಅವರು ಸಂಪಾದಿಸುವ ದುಡ್ಡು, ಅವರ ಆಸೆ, ಅಧಿಕಾರಗಳು ನಿರ್ಧರಿಸುವಂತಾಗಬಾರದು.


ಒಂದು ಸಮಾಜ ಸರಿಯಾದ ಸಮಯದಲ್ಲಿ ದಿಕ್ಕೆಟ್ಟು ಏಚ್ಚೆತ್ತುಕೊಂಡರೆ ಉತ್ತಮ ಸಮಾಜದ ನಿರ್ಮಾಣದ ಕ್ರಾಂತಿ ಅಸಾಧ್ಯವೆನಲ್ಲಾ. ಅದು ಬರುವ ಸಮಯವೇನೂ ದೂರವಿಲ್ಲ..

ಶನಿವಾರ, ಅಕ್ಟೋಬರ್ 2, 2010

ಮತ್ತೇ ಬಾ ಬಾಪೂ!

ಗಾಂಧಿ ಜಯಂತಿ ಅಕ್ಟೋಬರ್ ೨ ಅಂದ ತಕ್ಷಣ ನನ್ನ ಮನ ಬಾಲ್ಯದ ದಿನಗಳ ದಸರ ರಜೆಗೂ ಮೊದಲು ಶಾಲೆಯಲ್ಲಿ ಗಾಂಧಿ ಜಯಂತಿಯನ್ನು ಆಚರಣೆಯನ್ನು ಮಾಡಿ ಒಂದು ತಿಂಗಳು ರಜೆಯನ್ನು ಘೋಷಿಸುತ್ತಿದ್ದ ದಿನಗಳಿಗೆ ಜಾರುತ್ತದೆ.




ಅಂದು ಶಾಲೆಗೆ ಹೋಗಿ ಗಾಂಧಿ ಜನ್ಮ ದಿನಾಚರಣೆಯನ್ನು ಮಾಡುವ ಮುನ್ನ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಂದ ಚಿಕ್ಕವಾದ ಯಾವುದಾದರೂ ಕೆಲಸಗಳನ್ನು ಮಾಡಿಸುವುದು. ಶಾಲೆಯ ಮುಂದಿನ ಜಾಗವನ್ನು ಚೊಕ್ಕಟ ಮಾಡುವುದು.


 ಆಗಿನ ಆ ಹುರುಪು ತುಂಬ ಖುಷಿಯನ್ನು ಕೊಡುವ ಕ್ಷಣಗಳು. ಯಾಕೆಂದರೆ ನಾಳಿನಿಂದ ಒಂದು ತಿಂಗಳು ರಜಾ ಮಜಾವನ್ನು ನೆನಸಿ ನೆನಸಿಕೊಂಡು ಸಂಭ್ರಮಪಡುತ್ತಿದ್ದೇವು. ನಾನು ರಜೆಯಲ್ಲಿ ಹೀಗೆ -ಹಾಗೆ ಮಾಡುವೇನು. ಅಲ್ಲಿಗೆ ಅವರ ಜೋತೆ ಹೋಗುವೇನು ಎಂದು ಬಡಾಯಿ ಕೊಚ್ಚಿಕೊಳ್ಳುವುದೇನೂ.


ಬಿಡಿ ಆ ದಿನಗಳು ಮತ್ತೇ ಮರಳಲಾರವು.






ಗಾಂಧಿಯೇಂದರೇ ಏನೋ ಪ್ರೀತಿ. ಅವರ ಬಾಲ್ಯದಲ್ಲಿ ಅವರು ಮಾಡಿದ ಕಳ್ಳತನ. ದಾರಿ ತಪ್ಪಿ ಕೆಟ್ಟ ಹುಡುಗನಾಗಿ ತಂದೆಯ ಮುಂದೆ ಕ್ಷಮಾಪಣೆ ಕೇಳಿದ್ದು. ತಾಯಿಯ ಜೋತೆ ೨೧ ದಿನಗಳವರೆಗೂ ಉಪವಾಸ ಮಾಡಿದ್ದು. ಹೀಗೆ ಅವರ ಜೀವನವನ್ನು ನಮ್ಮ ಜೋತೆ ಸಮಕರಿಸಿಕೊಂಡು. ಮರಿ ಗಾಂಧಿಯನ್ನಾಗಿ ಮಾಡಿಕೊಂಡು. ನಮ್ಮವರೇ ಅವರು ಎಂಬ ಉತ್ಸಾಹದಿಂದ ಶಾಲೆಯಲ್ಲಿ ಸಿಹಿಯನ್ನು ತಿನ್ನುವ ಮೊಲಕ ಸಂತೋಷಪಡುತ್ತಿದ್ದೆವು. ಅವರ ಕಥೆಯನ್ನು ಪುಸ್ತಕದಲ್ಲಿ ಓದಿದ್ದರೂ, ಪುನಃ ನಮ್ಮ ಗುರುಗಳ ಬಾಯಿಯಲ್ಲಿ ಅವರ ಸಾಧನೆ ಮತ್ತು ಆದರ್ಶದ ನುಡಿಗಳನ್ನು ನಮ್ಮ ಕಿವಿಗೆ ತುಂಬಿಕೊಳ್ಳುತ್ತಿದ್ದೇವುಮುಂದೆ ಒಂದು ದಿನ ಅವರ ಮಟ್ಟಿಗೆ ಬೆಳೆಯಬೇಕು. ಅವರ ರೀತಿ ನಾವು ನಾಯಕರಾಗಬೇಕು. ಬಡವರ ಬಗ್ಗೆ ನಮ್ಮ ಕೈಯಿಂದ ಆಗುವ ಸಹಾಯವನ್ನು ಮಾಡಬೇಕು. ಇತ್ಯಾದಿ ಇತ್ಯಾದಿ ವಿಚಾರಗಳ ಸರಮಾಲೆಯನ್ನು ಆ ಕ್ಷಣದಲ್ಲಿ ಮನಸ್ಸಿನ ತುಂಬ ತುಂಬಿಕೊಂಡು ಬೀಗುತ್ತಿದ್ದೇವು.


ಈಗ ಅದು ಎಲ್ಲಾ ಸುಮಧುರ ನೆನಪು ಮಾತ್ರ!




ಶಾಲೆಯ ದಿನಗಳಿಂದ ಹೊರಗೆ ಬಂದ ನಂತರ ಈ ದಿನಗಳು ಕೇವಲ ರಜಾದಿನಗಳಾಗಿ ಬಿಟ್ಟಿವೆ. ರಾಷ್ಟ್ರಕ್ಕಾಗಿ ಹೋರಾಡಿ ತಮ್ಮನ್ನೇ ತಾವು ಅರ್ಪಿಸಿಕೊಂಡು ನಮ್ಮ ಇಂದಿನ ಈ ಸುಖಿ ದಿನಗಳಿಗೆ ಕಾರಣಕರ್ತರಾದ ಗಾಂಧಿ, ಲಾಲ ಬಹದ್ದೂರ್ ಶಾಸ್ತ್ರಿ ಮುಂತಾದ ಸ್ವಾತಂತ್ರ್ಯ ನಾಯಕರ ನೆನಪು ಇಂದು ಯಾವ ರೀತಿಯಲ್ಲೂ ಬೇರೆ ದಿನಗಳಲ್ಲಿ ಬರಲಾರದು ಅಲ್ಲವಾ?



ಗಾಂಧಿಜೀಯವರ ಆದರ್ಶ, ನೀತಿ, ಮೌಲ್ಯಗಳು ಮತ್ತು ಕನಸುಗಳು ಇಂದಿನ ಈ ದಿನಮಾನಗಳಲ್ಲಿ ಅವರ ಜಯಂತಿ ದಿನಕ್ಕೆ ಮಾತ್ರ ಸೀಮಿತ. ಆ ಒಂದು ದಿನ ಮಾತ್ರ ಎಲ್ಲೇ ಎಲ್ಲೂ ಅವರ ಗುಣಗಾನ ಮಾಡಿ ನಂತರ ಮುಂದಿನ ಜಯಂತಿ ಬರುವವರೆಗೂ ಗೊತ್ತು ಗೊತ್ತಿಲ್ಲದ ಗಾವಿದರ ರೀತಿ ಮಲಗಿ ಬಿಟ್ಟಿರುತ್ತೇವೆ.



ಗಾಂಧಿಯೇಂದರೆ ಇಂದಿನ ನಮ್ಮ ಹೈಟೆಕ್ ಯುವಕ ಯುವತಿಯರಿಗೆ ಹಾಡಿಕೊಳ್ಳುವ ವಸ್ತುವಾಗಿದೆ. ಅವರ ಹೆಸರು ಕೇವಲ ಎಲ್ಲ ಮುಖ್ಯ ನಗರಗಳಲ್ಲಿ ಒಂದು ಮುಖ್ಯ ರಸ್ತೆಗೆ, ಮುಖ್ಯ ಸರ್ಕಲ್ ಗೆ ಮಾತ್ರ ಇಟ್ಟು ಕೊಂಡಾಡುವವರ ರೀತಿ ನಮ್ಮ ಹಿರಿಮೆಯನ್ನು ಮೆರೆಯುತ್ತಿದ್ದೇವೆ.



ಯಾರಾದರೂ ಸ್ವಲ್ಪ ಸಾಧುವಾಗಿ ಮತ್ತು ಸಭ್ಯನಾಗಿ ಅಥಾವ ಹಳೆಕಾಲದವನ ರೀತಿಯಲ್ಲಿ ನೆಡೆದುಕೊಂಡರೆ ಮುಗಿಯಿತು ಪ್ರತಿಯೊಬ್ಬರೂ ಅವನನ್ನು "ನೋಡಾಪ್ಪ ಗಾಂಧಿ ಬಂದ" ಅನ್ನುವರು.



ಸಿನಿಮಾ ಥೇಟರ್ ನಲ್ಲಿ ಗಾಂಧಿ ಕ್ಲಾಸ್ ಎಂದು  ಮುಂದಿನ ಅಸನಗಳಿಗೆ ಇಟ್ಟಿರುವವರು. ಅಲ್ಲಿಗೆ ಹೋಗುವ ಮಂದಿಗಳು ಸ್ವಲ್ಪ ಯೋಚಿಸುವಂತೆ ಮಾಡಿರುವವರು ಯಾರು?



ಅಂದು ಇಡೀ ಭಾರತ ಅವರ ಒಂದು ಮಾತಿಗೆ ಅವರ ಹಿಂದೆ ಬರುವಂತೆ ಮಾಡಿದ್ದ ಪವಾಡವಾದರೂ ಏನೂ? ಕಲ್ಪಿಸಲೂ ಸಾಧ್ಯವಿಲ್ಲ. ಯಾವುದೇ ದುಡ್ಡು, ಪ್ರಲೋಭನೆ ಯಾವೊಂದು ಇಲ್ಲದೇ ತಮ್ಮ ಸರಳತೆ, ಸತ್ಯ ಶೋಧನೆಯ ಮಾರ್ಗದಲ್ಲಿ, ಅಹಿಂಸೆಯ ಸತ್ಯಾಗ್ರಹವೆಂಬ ಅಸ್ತ್ರವನ್ನು ಮಾತ್ರ ಇಟ್ಟುಕೊಂಡು. ಪ್ರತಿಯೊಬ್ಬರಿಗೂ ಮುಂದೆ ದೂರಕುವ ಭವ್ಯ ಭರವಸೆಯ ಸ್ವಾತಂತ್ರ್ಯದ ಫಲಕ್ಕಾಗಿ ಎಲ್ಲಾರೂ ಕಟಿ ಬದ್ಧರಾಗಿರುವಂತೆ ಮಾಡಿದ ಮೋಡಿಗಾರ ಮತ್ತೇ ಈ ನೆಲದಲ್ಲಿ ಹುಟ್ಟಿ ಬರಲಾರೇನೋ.




ಅಂದು ಸಮಾಜದಲ್ಲಿ ವಿದ್ಯಾವಂತರ ಕೊರತೆ ಇದ್ದಿರಬಹುದು, ಬಡತನವಿದ್ದಿರಬಹುದು ಮತ್ತು ಮೌಢ್ಯದಲ್ಲಿಯೇ ಬದುಕಿದ್ದಿರಬಹುದು. ಆದರೂ ಎಲ್ಲರೂ ಒಂದಾಗಿ ಗಾಂಧಿ ಹಾಕಿ ಕೊಟ್ಟ ಹಾದಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಅವರಿಗೆ ಬೆಂಬಲ ಕೊಟ್ಟಿರುವುದು ಆ ಜನರ ಹೆಮ್ಮೆಗೆ  ಮತ್ತು ದೊಡ್ಡತನಕ್ಕೇ ಹಿಡಿದ ಕನ್ನಡಿ.



ಸ್ವಾತಂತ್ರ್ಯ ಬಂದು ಅರ್ಧ ಶತಮಾನ ಕಳೆದರೂ ನಮ್ಮ ಈ ರಾಜಕೀಯ ವ್ಯವಸ್ಥೆಯಲ್ಲಿರುವ ನಾಯಕರುಗಳ ಕನಸುಗಳು, ಅಧಿಕಾರ ದಾಹ, ಭ್ರಷ್ಟತೆ, ಯಾರನ್ನಾದರೂ ಏನಾದರೂ ಮಾಡುವಂತಿರುವ ಇವರುಗಳೆ ರಾಷ್ಟ್ರಪೀತ ಹುಟ್ಟಿದ ಭಾರತಾಂಬೆಯ ಮಕ್ಕಳೇ ಎಂಬ ಸಂಶಯ ಬರದೇ ಇರಲಾರದು.



ಇದ್ದಕ್ಕೆ ಇರಬೇಕು ಇಂದು ಕೆಲವರು ಹೇಳುತ್ತಿರುತ್ತಾರೆ ಇಂದು ನಡೆಯುತ್ತಿರು ಈ ಭ್ರಷ್ಟ ವ್ಯವಸ್ಥೆಯಲ್ಲಿ ಏನಾದರೂ ಗಾಂಧಿಜೀಯವರು ಬಂದು ಯಾವುದಾದರೂ ಕ್ಷೇತ್ರಕ್ಕೆ ಸ್ಪರ್ಧಿಸಿದರೇ ಅವರನ್ನು ನಮ್ಮ ಜನ ಅತಿ ಹೆಚ್ಚು ಮತಗಳ ಅಂತರದಿಂದ ಸೋಲಿಸುತ್ತಾರೆ!!?



ನಮ್ಮ ಇಂದಿನ ಮಕ್ಕಳಿಗೆ ಗಾಂಧಿಯ ನುಡಿ, ಕನಸು, ಜೀವನ ಕೇವಲ ಪುಸ್ತಕದಲ್ಲಿ ಇದ್ದು ಅಂಕ ಪಡೆಯುವ ವಸ್ತುವಾಗಿದೆ.




ತಾನು ಬೆಳೆದ ಮೇಲೆ ಅದನ್ನು ಗಾಳಿಗೆ ತೋರಿ ತಾನು ಮಾತ್ರ ಚೆನ್ನಾಗಿರಬೇಕು ಮತ್ತು ತನ್ನವರು ಮಾತ್ರ ಚೆನ್ನಾಗಿರಬೇಕು. ಎಂಬ ಸ್ವಾರ್ಥ ಸಮಾಜದ ನಿರ್ಮಾಣ ಕಾರ್ಯದಲ್ಲಿ ನಿರತವಾಗಿರುತ್ತಿದ್ದಾರೆ.



ಇಂದು ರಾಮ ರಾಜ್ಯದ ಕನಸು ಇನ್ನು ಕನಸಾಗಿಯೇ ಉಳಿಯುವಂತಾಗಿದೆ. ಅವರ ಅತಿ ಸರಳ ನಡೆ ನುಡಿ ನೇರವಂತಿಕೆ ಇಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಂದು ಅವರನ್ನು ಕಂಡು ಅವರ ಆದರ್ಶವನ್ನು ಪಾಲಿಸಿಕೊಂಡು ನಮ್ಮ ನಡುವೆ ಇಂದು ಬದುಕುತ್ತಿರುವ ಕೆಲವೇ ಕೆಲವು ಹಿರಿಯರುಗಳು ಮರೆಯಾದರೇ.. ಅವರ ಬಗ್ಗೆ ಹೇಳುವವರೆ ಸಿಗುವುದಿಲ್ಲವೇನೋ.



ಅದಕ್ಕೆ ಹಿಂದೆ ಗಾಂಧಿಯವರ ಸಮಯದಲ್ಲಿದ್ದ ಪ್ರಸಿದ್ಧ ಭೌತ ವಿಜ್ಞಾನಿ ಅಲ್ಬರ್ಟ್ ಐನ್ ಸ್ಟೀನ್ ರವರು "ಈ ವ್ಯಕ್ತಿ ಹಿಂದೆ ನಮ್ಮ ಭೂಮಿಯ ಮೇಲೆ ಇದ್ದು ನಡೆದಾಡಿದ್ದಾರೆ ಎಂದರೆ ಮುಂದಿನ ಜನಾಂಗ ನಂಬುವುದಿಲ್ಲ" ಎಂದು ಹೇಳಿರುವುದು.





ನಮ್ಮ ದೇಶದಲ್ಲಿಯೇ ಹುಟ್ಟಿ ತನ್ನ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಉಸಿರನ್ನೇ ಮುಡಿಪಿಟ್ಟ ಮಹಾನ್ ವ್ಯಕ್ತಿಯನ್ನು ದಿನಂಪ್ರತಿ ನೆನೆಯುತ್ತ. ಅವರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಐನ್ ಸ್ಟೀನ್ ರವರ ಮಾತನ್ನು ಸುಳ್ಳು ಮಾಡೋಣವೇ!