ಗುರುವಾರ, ಸೆಪ್ಟೆಂಬರ್ 23, 2010

ಹಾಗೇ ಸುಮ್ಮನೆ

ನಿಯತವಾಗಿ ಲೇಖನಗಳನ್ನು ಪತ್ರಿಕೆಗಳಲ್ಲಿ ಬರೆಯುವವರು ಅದು ಹೇಗೆ ತಪ್ಪದೇ ವಾರ ವಾರವು ಓದುಗರಿಗೆ ನೀಡುತ್ತಾರೋ ಆಶ್ಚರ್ಯವಾಗುತ್ತದೆ. ಹೊಸ ಹೊಸ ವಿಷಯಗಳಿಂದ ನಮ್ಮನ್ನೆಲ್ಲಾ ಸಂಪ್ರಿತರನ್ನಾಗಿ ಮಾಡಿ ಪ್ರತಿ ವಾರವೂ ಅವರ ಲೇಖನಗಳಿಗಾಗಿ ನಾವುಗಳು ಕಾಯುವಂತೆ ಮಾಡುತ್ತಾರೆ.

ನಾನು ಅದೇ ರೀತಿ ಇಲ್ಲಿ ಏನಾದರೂ ಒಂದು ವಿಷಯದ ಬಗ್ಗೆ ವಾರ ವಾರವೂ ಬ್ಲಾಗಿಸಬೇಕು ಅಂದು ಕೊಂಡಿದ್ದೇ. ಆದರೆ ಅನಿವಾರ್ಯ ಕಾರಣಗಳಿಂದ ನನ್ನ ಕನಸು ನನಸಾಗಲಿಲ್ಲ. ಹೀಗಾಗಿ ಒಂದು ತಿಂಗಳಿನ ಮೇಲೆ ಇದರ ಕಡೆ ಕಣ್ಣು ಹಾಯಿಸುವುದು ಸಾಧ್ಯವಾಗಲಿಲ್ಲ. ಹೌದು ಯಾಕೆ ಬರೆಯಬೇಕು? ಇದನ್ನು ಯಾರು ಓದುತ್ತಾರೆ? ಗೊತ್ತಿಲ್ಲ!

ಅದರೂ ಈ ರೀತಿ ಏನಾದರೂ ಯಾವುದಾದರೂ ಗೊತ್ತಿರುವ ವಿಷಯದ ಮೇಲೆ ಕನ್ನಡದಲ್ಲಿ ಪ್ರಬಂಧ ಬರೆಯುವುದು ನನಗೊಂತೂ ಖುಷಿಯನ್ನು ಕೊಡುತ್ತದೆ. ಆದ್ದರಿಂದ ಈ ನನ್ನ ಸ್ವಾರ್ಥವನ್ನು ಪೂರೈಸಿಕೊಳ್ಳಲು ಈ ರೀತಿಯ ಬರವಣಿಗೆ.

ನಾನು ನಮ್ಮ ಯಾಂತ್ರಿಕ ಬೆಂಗಳೂರಿನ ದುಡಿಮೆಗಾರರ ಬಗ್ಗೆ ಕನಿಕರ ಪಟ್ಟು ಕೊಂಡಿದ್ದೇ. ಇಲ್ಲಿ ಏನಿದೆ ಮಾರಾಯರ್ರೆ ಅದೇ ಮಾಮೂಲು ಬದುಕು ಒಬ್ಬರನ್ನು ಕಂಡರು ಒಬ್ಬರಾದರೂ ನಗುವನ್ನು ಕೊಡದ ಅದೇ ನೀರಸ ಮುಖಗಳು. ನಿತ್ಯ ಪ್ರತಿ ದಿನ, ತಿಂಗಳುಗಟ್ಟಲೆ ಕಂಪನಿಯ ಕ್ಯಾಬ್ ಗಳಲ್ಲಿ ಪ್ರಯಾಣಿಸಿದರೂ ಒಬ್ಬರೂ ಸಹ ಪರಿಚಯವಿಲ್ಲದ ರೀತಿ ವರ್ತಿಸುವುದು. ಮುಖ ಪರಿಚಯವಿದ್ದರೂ ಮಾತನ್ನಾಡದೇ ಅವರು ಅವರ ಸೀಟ್ ನಲ್ಲಿ ಕೂತು ಕಿವಿಗೆ ಮೊಬೈಲ್ ಮೈಕ್ರೊ ಫೊನ್ ಸಿಗಿಸಿಕೊಂಡು ಕಿಟಿಕಿಯಿಂದ ಹೊರಗಡೆ ನೋಡುತ್ತಲೂ. ಎಸ್ ಎಮ್ ಎಸ್ ಕುಟ್ಟುತ್ತಲೂ, ಅವು ಇವು ಇಷ್ಟವಾದ ಎಸ್. ಎಮ್. ಎಸ್. ಓದಿ ತಾನೇ ತಾನೇ ನಗುತ್ತಲೂ, ಇಲ್ಲವಾದರೆ ಯಾರೊಡನೆಯಾದರೂ ಗಂಟೆಗಟ್ಟಲೆ ಪಿಸು ಪಿಸು ದ್ವನಿಯಲ್ಲಿ ಸೆಲ್ ನಲ್ಲಿ ಮಾತನಾಡುತ್ತಲೂ ಅಥವಾ ನಿದ್ದೆಗೆ ಜಾರಿ ತಮ್ಮ ಕನಸಿನ ಲೋಕಕ್ಕೆ ಹಗಲಿನಲ್ಲಿ ಪ್ರಯಾಣಿಸುತ್ತಿರುವುದು.

ಈ ರೀತಿಯ ಬೊರಿಂಗ್ ದರ್ಶನವನ್ನು ನಾವುಗಳು ನಮ್ಮ ದಿನ ನಿತ್ಯ ಗೊತ್ತಿದ್ದು ಗೊತ್ತಿಲ್ಲದವರ ರೀತಿಯಲ್ಲಿ ಕಾಲ ಕಳೆಯುವುದನ್ನು ನೋಡಿದರೆ, ಈ ಬೆಂಗಳೂರು ಟ್ರಾಫಿಕ್ ನಲ್ಲಿ ಯಾಕಾದರೂ ಆಫೀಸ್ ಗೆ ಹೋಗುತ್ತಿದ್ದೇನೋ ಎನಿಸದಿರದು.

ಆದರೊ ಈ ರೀತಿಯ ವಾತವರಣವನ್ನು ಬದಲಾಯಿಸುವ ಜಾಣ್ಮೆ ನಮ್ಮ ನಮ್ಮ ಕೈಯಲ್ಲಿಯೇ ಇದೆ. ಅದಕ್ಕೆ ಬೇಕಾಗಿರುವುದು. ಪರಸ್ಪರ ನಮಗೆ ಗೊತ್ತಿರುವ ನಮ್ಮ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳ ಬಗ್ಗೆ ಸ್ವಲ್ಪ ಗೆಳೆತನ, ಸಂಬಂಧಗಳನ್ನು ಇಟ್ಟುಕೊಂಡರೆ. ನಾವುಗಳು ಪಯಣಿಸುವ ನಮ್ಮ ಕ್ಯಾಬ್ ಗಳ ಮೌನವನ್ನು ಮಜವಾಗಿ ನಾವು ಇಷ್ಟ ಪಡುವ ನಮ್ಮ ನಮ್ಮ ಮನೆಯ ವಾತವಾರಣಗಳಂತೆ ಮಾಡಿಕೊಂಡು ಹತ್ತು ಹಲವು ವಿಚಾರಗಳನ್ನು ಪರಸ್ಪರ ಹಂಚಿಕೊಂಡು ಹಗುರಾಗಬಹುದು.

ಪ್ರತಿಯೊಬ್ಬರಲ್ಲೂ ಕೆಲಸವನ್ನು ಮಾಡುವುದನ್ನು ಹೊರತುಪಡಿಸಿ ಹಲವಾರು ಅತಿ ಮುಖ್ಯವಾದ ತಮ್ಮ ಬಾಲ್ಯ, ವಿದ್ಯಾರ್ಥಿ ದಿನಗಳಲ್ಲಿ ಇರುವಂತ ವ್ಯಕ್ತಿತ್ವ, ನಿಪುಣತೆ ಹಲವು ರಂಗದಲ್ಲಿ ಇರುತ್ತವೆ. ಈ ನಮ್ಮ ಕೆಲಸದ ಜಂಜಾಟದಲ್ಲಿ, ಜೀವನವೆಂಬ ಓಟದಲ್ಲಿ ಅವುಗಳನ್ನೆಲ್ಲಾ ಕಟ್ಟಿ ಮೂಲೆಗೆ ಇಟ್ಟು ಆಫೀಸ್ ಆಯ್ತು ಮನೆಯಾಯ್ತು ಎಂಬಂತೆ ಗುಮ್ಮರಾಗಿ ಬದುಕುವುದನ್ನು ತಪ್ಪಿಸಬಹುದು.

ಹೊಸ ಹೊಸ ಸ್ನೇಹಿತರನ್ನು ನಮ್ಮ ಮನದಾಳದ ನೋವು ನಲಿವುಗಳನ್ನು ಕೇಳುವ ಕೇಳುಗರನ್ನಾಗಿ ಮಾಡಿಕೊಳ್ಳಬಹುದು.ವಿವಿಧ ಸಮಸ್ಯೆಗಳಿಗೆ ಅವರಿಂದ ನಾನಾ ಮುಖಗಳ ಸಲಹೆ ಸಾಂಗತ್ಯವನ್ನು ಪಡೆಯಬಹುದು.

ನಾನು ನಮ್ಮ ಹಳೆಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಮುಖ್ಯ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಓದಿದಾಗ ಅವರುಗಳು ತಮ್ಮ ತಮ್ಮಲ್ಲಿಯೇ ಸಮಾನ ಮನಸ್ಕರ ಸ್ನೇಹಕೂಟವನ್ನು ತಮ್ಮ ಮನೆಯ ಹತ್ತಿರ ಅಥವಾ ತಾವು ಕೆಲಸ ಮಾಡುವ ಕಛೇರಿಗಳಲ್ಲಿ ಅಥವಾ ತಾವು ಪ್ರತಿದಿನ ಹೋಗುವ ಹೋಟೆಲ್, ಬಾರ್ ಜಾಗಗಳಲ್ಲಿ ಇಟ್ಟುಕೊಂಡು ಪ್ರತಿದಿನ ತಪ್ಪದೇ ಗೊತ್ತಾದ ಸಮಯದಲ್ಲಿ ಪ್ರತಿಯೊಬ್ಬರೂ ಸೇರಿ ತಮ್ಮ ತಮ್ಮಲ್ಲಿ ತಾವುಗಳು ರಚಿಸಿದ ಕಥೆ, ಕವನಗಳು, ಹಾಡುಗಳನ್ನು ಮತ್ತು ಹತ್ತು ಹಲವು ವಿಚಾರಗಳನ್ನು ಎಲ್ಲರ ಮುಂದೆ ಇಟ್ಟು ಎಲ್ಲಾರ ಅಭಿಪ್ರಾಯಗಳನ್ನು ಕೇಳುತ್ತಿದ್ದರು.

ಇದು ಈಗ ಯಾಕೆ ಇಲ್ಲಾ ಅಂದುಕೊಂಡಿದ್ದೆ. ಮತ್ತು ಇದು ಎಲ್ಲಾ ಕಾಲದ ಮಹಿಮೆ ಅದು ಅವರ ಕಾಲ. ಇದು ನಮ್ಮ ಕಾಲ. ಅದರೂ ಎಲ್ಲಾ ಕಾಲಗಳು ಒಂದೇ, ಜನಗಳು ಬೇರೆ ಬೇರೆಯಾಗಬಹುದು ಮತ್ತು ಅವರುಗಳ ಅಭಿರುಚಿ ಬದಲಾಗಿರಬಹುದು. ಪ್ರತಿಯೊಬ್ಬರಿಗೂ ಎಲ್ಲೂ ಒಂದು ಮನದ ಮೂಲೆಯಲ್ಲಿ ಆ ರೀತಿಯ ಒಂದು ಸ್ನೇಹ ಬಳಗ ಬೇಕಾಗಿರುತ್ತದೆ. ಅಲ್ಲಿ ಅವರುಗಳು ತಮ್ಮ ವಯಸ್ಸಿನ ತಾರತಮ್ಯವನ್ನು ಮರೆತು ತಮ್ಮ ತುಂಟಾಟ, ತಮ್ಮ ಪ್ರೀತಿ ಪಾತ್ರ ದಿನಗಳ ಪಾತ್ರಗಳನ್ನು ಅಭಿನಯಿಸೋಣ ಎನ್ನುತ್ತಿರುತ್ತದೆ.

ಅದಕ್ಕೆ ಇಂದು ಆ ರೀತಿಯ ಯಾವುದೇ ಸ್ನೇಹಮಹಿ ವಾತವರಣವಿಲ್ಲದ ಕಾರಣ ಮನಸ್ಸಿನ ಒತ್ತಡ ನಿವಾರಣ ಜಾಗವಿಲ್ಲದ ಕಾರಣ, ಅತಿ ಚಿಕ್ಕ ವಯಸ್ಸಿಗೆ ಬಿ.ಪಿ, ಶುಗರ್ ನಾನಾ ರೀತಿಯ ಕಾಯಿಲೆಗಳ ಗುಲಾಮರಗುತ್ತಿದ್ದೇವೆ. ಯೋಚಿಸಿ ನಾವು ನಿತ್ಯ ಎಷ್ಟು ಸಮಯ ಹಗುರಾಗಿ ಮನ ಬಿಚ್ಚಿ ನಗುತ್ತಿದ್ದೇವೆ? ನಮಗೆ ಅನಿಸಿದ್ದನ್ನು ನಾವು ಯಾರಿಗಾದರೂ ಹೇಳಿದ್ದೇವೆಯೇ? ನಮ್ಮಲ್ಲಿರುವ ವಿಭಿನ್ನ ಕೌಶ್ಯಲ್ಯಕ್ಕೆ ಯಾರಿಂದಲಾದರೂ ಉತ್ತೇಜನ ಸಿಕ್ಕಿರುವುದೇ? ಕಲ್ಪಿಸಲೂ ಸಾಧ್ಯವಾಗುವುದಿಲ್ಲ.

ಈ ರೀತಿಯ ಚಿಕ್ಕ ಚಿಕ್ಕ ವಿಷಯಗಳು ನಮ್ಮ ಜೀವನದ ಒಂದು ಮುಖಕ್ಕೆ ಅತಿ ಮುಖ್ಯವಾಗಿರುತ್ತವೆ. ಅದರ ಬಗ್ಗೆ ಸ್ವಲ್ಪ ಯೋಚಿಸಿದರೆ ಎಲ್ಲಾರ ಜೊತೆ ನಮ್ಮ ಬಾಳ ದಿನಗಳನ್ನು ಸಂತೋಷವಾಗಿ ಇಟ್ಟು ರಸಮಯಗೊಳಿಸಬಹುದು.

ಮೇಲೆ ಹೇಳಿದ ಕನಸಿನ ಪ್ರಫುಲತೆಯ ಸ್ನೇಹಮಹಿ ಸಿಹಿ ವಾತವರಣ ನಿರ್ಮಾಣ ರ್ಸ್ಫೂರ್ತಿ: ನನ್ನ ಕ್ಯಾಬ್ ಗೆಳೆಯರಾದ: ಸಾಗರ ಕೃಷ್ಣ, ರಮ್ಯ, ಯೊಗೀಶ್, ವಿನುತ, ಗುರು,ಇರಣ್ಣ, ಲಕ್ಷ್ಮೀಶ್,ಅಭಯ್ ಮತ್ತು ವಿಜಯ್