ಬುಧವಾರ, ಮಾರ್ಚ್ 24, 2010

ಎಂದೂ ಮರೆಯಲಾರದ ಹಾಡು-ಪಾಡು



ಜೀವನ ಪೂರ್ತಿ ಮನಸ್ಸನ್ನು ಕರಗಿಸುವಂತೆ, ಯಾವುದೇ ಸಮಯದಲ್ಲಾದರೂ ಅದನ್ನು ನೆನಪು ಮಾಡಿಕೊಳ್ಳಲು ಸಂತೋಷಪಡುವಂತೆ ಮಾಡುವ ಘಟನೆ, ನೋಡಿದ ಚಿತ್ರ, ಓದಿದ ಪುಸ್ತಕಗಳು, ಕೇಳಿದ ಹಾಡುಗಳು "ಎಂದೂ ಮರೆಯಲಾರದ" ವಸ್ತುಗಳಾಗಿ ಸುಂದರ ನೆನಪುಗಳಾಗುತ್ತವೆ. ಯಾಕೆ?

ಯಾವುದೇ ಪುಸ್ತಕ, ವಿಚಾರ, ಹಾಡು ನಮ್ಮಲ್ಲಿನ ನಂಬಿಕೆ ಅಥವಾ ನಾವು ಅನುಭವಿಸಿರುವ ನಮ್ಮ ಯಾವುದೇ ಒಂದು ಗತ ನೆನಪಿಗೆ ಹತ್ತಿರವಾಗಿರುವಂತೆ ಇದ್ದಾಗ, ಆ ರಸಾನುಭವವನ್ನು ಪುನರಪಿಯಾಗಿ ನಮ್ಮ ಕಣ್ಣಿನ ಮುಂದೆ ತಂದಾಗ ನಮ್ಮ ಮನಸ್ಸು, ಆ ಸಮಯಕ್ಕೆ ಸಂತೋಷಿಸಿ ಆ ದಿನಗಳ ಮೆಲುಕು ಹಾಕಿ ಹಿಡಿಯಲಾರದಷ್ಟು ಖುಷಿಪಡುತ್ತದೆ.

ಹಾಗೆಯೇ ಯಾವುದೇ ನಾವು ಅನುಭವಿಸಿದ ಅವಮಾನ, ಕಷ್ಟ, ನಷ್ಟಗಳನ್ನು ನಿಜವಲ್ಲದ ಕಥೆಗಳಲ್ಲಿ, ಕಾದಂಬರಿಯಲ್ಲಿ ಅಥಾವ ಸಿನೆಮಾದಲ್ಲಿ ಬರುವ ಪಾತ್ರಗಳು ಅನುಭವಿಸುವುದನ್ನು ನೋಡಿದಾಗ ನಾವುಗಳು ಅದರ ಜೋತೆ ನಮ್ಮ ಅನುಭವಗಳನ್ನು ಜೋತೆ ಮಾಡಿಕೊಂಡು ಆನಂದಭರಿತರಾಗುತ್ತೇವೆ. ಆ ಕಥೆ, ಕಾದಂಬರಿ, ಹಾಡು ಪಾಡುಗಳು ಸಕತ್ ಆಗಿದೆ, ತುಂಬ ಚೆನ್ನಾಗಿದೆ ಎಂಬಂತೆ ನಮ್ಮ ನಮ್ಮ ನಡುವೆ ಮಾತಾನ್ನಾಡುತ್ತಾ ಅದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ತವಕಿಸುತ್ತೇವೆ.

ನಮಗೆ ಇಷ್ಟವಾದಂತಹ ಯಾವುದೇ ಲೇಖಕನ ಕೃತಿ, ನಿರ್ದೇಶಕನ ಸಿನಿಮಾ, ಕವಿಯ ಕಾವ್ಯ ಪ್ರತಿಯೊಬ್ಬರಿಗೂ ಯುನಿಕ್ ಆಗಿ ಇಷ್ಟವಾಗಲೇ ಬೇಕೆಂಬ ಸಿದ್ಧಾಂತವೇನು ಇಲ್ಲಾ. ಮತ್ತು ಅದು ನಿಜವಾಗಿಯೂ ಇಷ್ಟವಾಗಬಹುದು ಅಥಾವ ಇಷ್ಟವಾಗದೇ ಇರಬಹುದು.

ಆದ್ದರಿಂದ ಆ ಒಂದು ವಸ್ತು ಇಷ್ಟು ಜನಪ್ರಿಯವಾಗಿದೆ, ಚೆನ್ನಾಗಿದೆ ಎಂದು ಅಷ್ಟೂ ಮಂದಿಯ ಸರಾಸರಿಯಿಂದ ನಿರ್ಧರಿಸಲಾರಂಬಿಸುವಾಂತಾಗುತ್ತದೆ ಅಲ್ಲವಾ?

ನಮಗೆ ನಾವು ದಿನ ನಿತ್ಯ ಅನುಭವಿಸುವ ಯಾವುದೇ ಘಟನೆ, ನಡಾವಳಿ, ವಿಚಾರ, ಕಷ್ಟ, ಅವಮಾನ - ಸನ್ಮಾನಗಳು ಆ ಸಮಯಕ್ಕೆ ತುಂಬ ಮಹತ್ವವಾದದ್ದು ಎಂದು ತಿಳಿಯಲಾರದಾಗಿರುತ್ತೇವೆ.

ಅದೇ ವಿಚಾರಗಳನ್ನು ನಮ್ಮ ನೆಚ್ಚಿನ ಯಾವ ಬರಹಗಾರ, ಚಿತ್ರ ನಿರ್ದೇಶಕ ತನ್ನ ಕೃತಿಗಳಲ್ಲಿ ನಿರೂಪಿಸಿದಾಗ ತುಂಬ ಹೆಮ್ಮೆಯಿಂದ - "ನೋಡಾಮ್ಮ ಸೇಮ್ ಟೂ ಸೇಮ್ ಘಟನೆಯನ್ನು ನಾನು ಈ ಹಿಂದೆ ಕಂಡಂತೆ, ನಾನು ಅನುಭವಿಸಿದ ಭಾವನೆಗಳನ್ನು ಹೇಗೆ ಕೊಟ್ಟಿದ್ದಾನೆ" ಎಂದು ಎದೆಯುಬ್ಬಿಸಿ ಹೇಳಿಕೊಂಡು ಒಡಾಡುತ್ತಿರುತ್ತೇವೆ. ಹಾಗೆಯೇ ಆ ವಿಚಾರಗಳನ್ನು ಸಮಷ್ಠಿಗೆ ತೋರಿಸಿದ ವ್ಯಕ್ತಿಯನ್ನು ನಾವು ತುಂಬ ಗೌರವಿಸುತ್ತೇವೆ. ಅದು ಕಲೆಯಲ್ಲವೇ ಅದಕ್ಕೆ.

ಯಾವ ಒಂದು ಘಟನೆ ನಮಗೆ ಕೇವಲವಾಗಿ ಕಾಣುವಂತೆ ಇರುತ್ತವೂ ಅಂಥ ವಿಚಾರಗಳೇ ನಮ್ಮ ನೆಚ್ಚಿನ ಲೇಖಕರ ಸೃಜನಾತ್ಮಕ ಕ್ರೀಯಾಶೀಲತೆಯ ಮೂಸೆಯಲ್ಲಿ ಜನ ಮೆಚ್ಚುವಂತಹ ಉತ್ತಮ ಸಾಂಸ್ಕೃತಿಕ ಕಲಾಕೃತಿಗಳಾಗಿ ಮೈಲಿಗಲ್ಲುಗಳಾಗಿ ಯಾವಾಗಲೂ ಪುನಃ ಪುನಃ ರಸಸ್ವಾದದಿಂದ ಅನುಭವಿಸಿ ನಮ್ಮ ನೀರಸ ಜೀವನವನ್ನು ಬಣ್ಣದ ರಂಗಾಗಿ ನೋಡುವಂತೆ ಮಾಡುತ್ತವೆ.

ಅದ್ದರಿಂದ ಈ ಜೀವನದ ನಮ್ಮ ನಿಮ್ಮೆಲ್ಲಾರ ಸುತ್ತಲಿನ ನಮ್ಮ ಸೂಗಡಿನ ಚಿತ್ರಣವನ್ನು ಬೇರೊಂದು ದೃಷ್ಟಿಯಲ್ಲಿ ನೋಡಲು ನಮ್ಮ ಮಾನವ ಸಹಜವಾದ ಮನಸ್ಸು ದಿನಂಪ್ರತಿ ತವಕಿಸುತ್ತಿರುತ್ತದೆ.

ಯಾಕೆಂದರೆ, ನಮಗೆ ನಾವು ಎಷ್ಟೇ ಪರ್ಪೆಕ್ಟ್ ಆಗಿದ್ದರೂ ಬೇರೆಯವರು ಇದು ಹೀಗೆ ಎಂದು ತೋರಿಸಿಕೊಟ್ಟಾಗ ಜೀವನವನ್ನು ಬೇರೊಂದು ರೀತಿಯಲ್ಲಿ ನೋಡುವ ಮನಸ್ಸು ನಮ್ಮಲ್ಲಿ ಉದಯವಾಗುತ್ತದೆ.

ಅದಕ್ಕೆ ಇರಬೇಕು ನಮಗೆ ನಮ್ಮ ನಾಡಿನ ಲೇಖಕನ ಕೃತಿಗಳನ್ನು ನಮ್ಮದೇಯಾದ ಮಾತೃ ಭಾಷೆಯಲ್ಲಿ ಓದಿದಾಗ ಸಿಗುವ ಆನಂದ ಬೇರೆಯ ನಾಡಿನ ಅವರ ಸಂಸ್ಕೃತಿಯ ಬೇರೆ ಭಾಷೆಯಲ್ಲಿ ಓದಿದಾಗ ಸಿಗುವುದಿಲ್ಲ. ಕೇವಲ ಓದಿದೇ ಎಂಬಂತೆ ಹೇಳಬಹುದೇ ವಿನಾಃ ಅನುಭವಿಸಿ ಖುಷಿಪಟ್ಟೆ ಎಂದು ಯಾರು ಹೇಳಲಾರರು.

ಈ ಸಾಂಸ್ಕೃತಿಕ ಲೋಕ ಯಾವುದೇ ಕಲಾಕೃತಿಗಳು ಸುತ್ತಲಿನ ಆ ಭಾಗದ ಸೊಗಡನ್ನು ವಿಭಿನ್ನ ಶೈಲಿಯಲ್ಲಿ ಸುಂದರವಾಗಿ ಹೀಗೆ ಹೀಗೆ ಎಂದು ನಿರೂಪಿಸಿದಾಗ ಸುತ್ತಲಿನ ಜನ ಅದರಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ಸುಖಪಡಲು ತವಕಿಸುತ್ತಾರೆ.

ಯಾವುದೇ ಕಾದಂಬರಿಯ, ಕಥೆಯ, ಕಾವ್ಯದ, ಚಿತ್ರದ, ಲಾವಣಿಯ, ಗಾದೆಯ ಮುಖ್ಯ ಆದರ್ಶ ಪಾತ್ರಗಳು ತಾವಾಗಲೂ ತವಕಿಸುತ್ತಾರೆ. ಅದಕ್ಕೆ ಇರಬೇಕು "ಜಗವೇ ಒಂದು ನಾಟಕ ರಂಗ" ಎಂದು ಹಿರಿಯರು ಹೇಳಿರುವುದು.

ನಾವುಗಳು ದಿನ ನಿತ್ಯ ಕಷ್ಟ - ಸುಖ, ಸತ್ಯ - ಸುಳ್ಳುಗಳ ಸರಮಾಲೆಯ ಪಯಣದಲ್ಲಿ ವಿವಿಧ ರೂಪಿನ ವಿವಿಧ ರೀತಿಯ ನಟನಾ ಚಾತುರ್ಯ ತೋರಿಸಲು ಕಾತುರರಾಗಿರುತ್ತೇವೆ. ಇದೇ ಅಲ್ಲವಾ ಜೀವನ ಜೀವಂತಿಕೆಯ ನಿಜವಾದ ಸೆಲೆ ಮತ್ತು ಬೆಲೆ!

ಬುಧವಾರ, ಮಾರ್ಚ್ 10, 2010

ಆನಂದ ಪ್ರೇಮ


ಪ್ರತಿಯೊಂದು ಜೀವಿಯಲ್ಲಿ ಉತ್ಸಹ ಮತ್ತು ನವ ಚೈತನ್ಯವನ್ನು ಹಿಡಿದಿಡುವಂತೆ ಮಾಡುವ ಏಕೈಕ ಸೆಲೆಯೆಂದರೇ "ಪ್ರೀತಿ" ಎಂಬ ಎರಡಕ್ಷರದ ಭಾವನೆ.

ಈ ಎರಡಕ್ಷರದ ಮಹಾತ್ಮೆಯನ್ನು ಎಷ್ಟು ಬಾರಿ, ಎಷ್ಟು ರೀತಿ ತಿಳಿದರೂ, ನೋಡಿದರೂ, ಓದಿದರೂ, ಕೇಳಿದರೂ ಬೇಸರ ಎನ್ನುವುದೇ ಇಲ್ಲ ಬಿಡಿ.

ಈ ನಮ್ಮ ಪ್ರಪಂಚದ ಎಲ್ಲಾ ಭಾಗದಲ್ಲೂ ಯಾವುದೇ ಬೇದ ಭಾವವೆನ್ನದೇ ಎಲ್ಲಾರಲ್ಲೂ ಸಮಾನವಾಗಿ ಪ್ರಸರಿಸಿರುವ ಜೀವನ್ಮುಕಿ ಜಲಧಾರೆಯಾಗಿ ಹರಿಯುತ್ತಿರುವ ಈ ಜೀವ ಜಲಕ್ಕೆ ಕ್ಷಾಮವೇ ಇಲ್ಲ.

ಮನುಷ್ಯನು ತಾನು ಎಷ್ಟೇ ಸಂಪಾದಿಸಲಿ, ಎಷ್ಟೇ ಮುಂದುವರಿದಿದ್ದರೂ ತನ್ನ ಆ ಸಮಯಕ್ಕೆ ಸಮಾಧಾನ ಮತ್ತು ಸಂತೋಷದ ಗಳಿಗಗಳನ್ನು ವ್ಯಕ್ತಪಡಿಸಲು ಪರಿತಪಿಸುವುದು ತನ್ನ ಸುತ್ತಲಿನ ಆತ್ಮೀಯ ಮತ್ತು ನಮ್ಮವರು ಎಂಬ ಕಣ್ಣುಗಳನ್ನು. ಏನೇ ಸಾಧಿಸಿದರೂ ಅದು ಈ "ಪ್ರೀತಿ - ಪ್ರೇಮ" ಮಯ ಸಂಬಂಧಕ್ಕೆ ಪೂರಕವಾಗಿದ್ದಾಗ ಮಾತ್ರ ಯಾವುದೇ ಸಾಧನೆಯ ಸವಿ ರುಚಿಸುವುದು.

ಇದಕ್ಕೆ ಇರಬೇಕು ನಮ್ಮ ಪುರಾಣ ಪುಣ್ಯ ಕಥೆಗಳಿಂದ ಪ್ರಾರಂಭಿಸಿ ಇಂದಿನ ಕಥೆ - ಕಾದಂಬರಿ - ಕವಿತೆ ಮತ್ತು ಮಹಾ ಕಾವ್ಯಗಳ ಮೂಲಕ ನಮ್ಮ ಇತ್ತೀಚಿನ ಎಲ್ಲಾ ಸಿನಿಮಾ, ದಾರವಾಹಿಗಳಲ್ಲಿ ಅತಿ ಹೆಚ್ಚು ಜನಪ್ರಿಯವಾದ ಮಾದ್ಯಮ ಸರಕುಗಳಾಗಿ ನಿತ್ಯ ಚಾಲ್ತಿಯಲ್ಲಿರುವ ಸಬ್ಜೇಕ್ಟ್ ಅಂದರೆ ಈ ಮಾನವ ಸಂಬಂಧಗಳು ಮತ್ತು ತರುಣ ತರುಣಿಯರ ಪ್ರೇಮ ಕಥೆಗಳು.

ಈ ರೀತಿಯ ಕಥೆಗಳಿಗೆ ಬರಗಾಲವಿಲ್ಲ ಬಿಡಿ. ಅದೊಂದು ದಿನ ನಿತ್ಯ ಕಾಣುವ ಸೊರ್ಯೋದಯ. ಈ ನಮ್ಮ ಮಾನವ ಕುಲ ಭೊಮಿಯ ಮೇಲೆ ಇರುವವರಿಗೂ ಈ ರೀತಿಯ ವಿವಿಧ ನಿಜವಾದ ಮತ್ತು ಕಲ್ಪನೆಯ ಮೂಸೆಯಲ್ಲಿ ಹುಟ್ಟುವ ಆಕರ್ಷಕವಾದ ಮತ್ತು ನಮ್ಮ ಮನಸ್ಸನ್ನು ಖುಷಿಪಡಿಸುವ ಕಥೆಗಳು ನಮ್ಮ ಪ್ರತಿಭಾವಂತ ಕಲಾಕಾರರಿಂದ ಜನ್ಮ ತಾಳಿ ಬರತ್ತಲೇ ಇರುತ್ತವೆ. ಅವುಗಳನ್ನು ನಾವುಗಳು ಸಹೃದಯತೆಯಿಂದ ಆಸೆಪಟ್ಟು ಸ್ವೀಕರಿಸಿ ಎನ್ ಜಾಯ್ ಮಾಡುತ್ತಿರುತ್ತೇವೆ.

ಇದಕ್ಕೆ ಸಾಕ್ಷಿಯೆಂಬಂತೆ ನಾನು ಓದಿದ ಹಳೆಯ ಪ್ರಸಿದ್ಧ ಯಂಡುಮೋರಿ ವಿರೇಂದ್ರನಾಥ ರ "ಆನಂದೊ ಬ್ರಹ್ಮ" ಕೃತಿಯೇ ಸಾಕ್ಷಿ ಮತ್ತು ಈ ಮೇಲಿನ ನನ್ನ ಅನಿಸಿಕೆಗೆ ಸ್ಫೋರ್ತಿ.

ಕೃತಿಯಲ್ಲಿ ಲೇಖಕರು ನಿರೂಪಿಸಿರುವಂತೆ ನಾವುಗಳು ಈ ನಮ್ಮ ಮುಂದುವರಿದ ಕಂಪ್ಯೂಟರ್ ಜಗತ್ತಿನಲ್ಲಿದ್ದರೂ ನಮ್ಮ ಮಾನವ ಮನಸ್ಸುಗಳು ತಂತ್ರಙ್ಞಾನವನ್ನು ಇಷ್ಟಪಡದೇ ಹುಡುಕುವುದು "ಜೀವಂತ - ಜೀವ ಸೆಲೆಯೆನ್ನುವ ಹಸಿ ಸಂಬಂಧಗಳನ್ನು ಮತ್ತು ಸ್ನೇಹವನ್ನು". ಅದ್ದರಿಂದಲೇ ಇಂಥ ಕಥೆಗಳನ್ನು ಮುಗಿಬಿದ್ದು ಇಷ್ಟಪಟ್ಟು ಓದುತ್ತಾರೆ ಎಂಬುದನ್ನು ಪ್ರಖ್ಯಾತ ಲೇಕನಾದ "ಭರದ್ವಜ" ನ ಮೂಲಕ ಮತ್ತು ಅವನ ಕಥೆಯ ಪಾತ್ರಗಳಾದ ಸೋಮಯಾಜಿ - ಮಂದಾಕಿನಿಯರ ಉನ್ನತವಾದ ಆದರ್ಶಮಯವಾದ ಪ್ರೇಮ-ಜೀವನ-ಸಾಧನೆಯನ್ನು ಎಷ್ಟೋಂದು ಆತ್ಮೀಯವಾಗಿ ಚಿತ್ರಿಸಿದ್ದಾರೆಂದರೇ ಈ ಕೃತಿ ಸರ್ವಕಾಲಿಕವಾಗಿ ಕ್ಲಾಸಿಕ್ ಆಗಿ ನಿಲ್ಲುತ್ತದೆ.

ಈ ರೀತಿಯ ಕೃತಿಗಳಿಗೆ ಸಾವು ಎಂಬುದಿಲ್ಲ. ಎಷ್ಟೇ ರೀತಿಯ ಬದಲಾವಣೆಗಳು ನಮ್ಮ ಈ ಬದುಕಿನಲ್ಲಿ ಸಂಭವಿಸಿದರೂ ನಮ್ಮ ಮನದಾಳದ ಯಾವುದೂ ಮೂಲೆಯಲ್ಲಿ ಅದೇ ಬೊಗಸೆಯಷ್ಟು ಪ್ರೀತಿಯಲ್ಲಿ ನಾವುಗಳು ಗೆಳತಿ, ತಾಯಿ, ತಂದೆ, ಪತಿ, ಪತ್ನಿ, ಮಗ, ಮಗಳು.. ಹೀಗೆ ಹಲವರನ್ನು ಕಾಣಲು ತವಕಿಸುತ್ತಿರುತ್ತೇವೆ. ಯಾಕೆಂದರೆ ಈ ಮಾನವ ಸಂಬಂಧಗಳು ಆ ರೀತಿ ಯಾವುದೇ ಅಡೆ ತಡೆಯಿಲ್ಲದೆ ನಮ್ಮ ನಮ್ಮಲ್ಲಿ ಅದೃಶ್ಯ ರೀತಿಯಲ್ಲಿ ಒಂದಕ್ಕೂಂದು ಕೊಂಡಿಯೋಪಾದಿಯಲ್ಲಿ ಬೆಸೆದುಕೊಂಡಿರುತ್ತವೆ.

ಹೀಗೆಯೇ ಆದರ್ಶ ಪ್ರೇಮದ ಕುರುಹಾಗಿ "ರವಿ ಬೆಳೆಗೆರೆ" ಕೃತಿ "ಹೇಳಿ ಹೋಗು ಕಾರಣ" ಅನಾಮಧೆಯ ಓದುಗನಾದ "ಮಿಠಾಯಿ ಮಾರುವವನಿಗೆ" ಅರ್ಪಿತವಾಗಿ ಪ್ರಾರಂಭವಾಗುವ ಪ್ರೇಮ ಗ್ರಂಥ ತರುಣ - ತರುಣಿಯರಿಗೆ ನಾವು ಈ ರೀತಿಯ ಪ್ರೇಮ ಸುಳಿಯಲ್ಲಿ ಸಿಲುಕಬೇಕು ಎನ್ನುವಂತೆ ಮಾಡುತ್ತದೆ. ಅಲ್ಲಿನ ಕಥಾ ನಾಯಕನಾದ "ಹಿಮವಂತ" ನ ರೀತಿ ಪ್ರಾರ್ಥನೆಗಾಗಿ ಕಾಯಬೇಕು ಎಂಬ ನವ ಹುಮ್ಮಸ್ಸನ್ನು ಎಷ್ಟು ಬಾರಿ ಓದಿದರೂ ವಯಸ್ಸಿನ ಯಾವುದೇ ತಾರತಮ್ಯವಿಲ್ಲದೇ ಪ್ರಚಂಡವಾಗಿ ಎಲ್ಲರ ಮನವನ್ನು ಗೆಲ್ಲುತ್ತದೆ.

ಎವರ್ ಗ್ರೀನ್ ಲವ್ ಸ್ಟೋರಿ ಎಂದು ಹೇಳಬಹುದಾದ ಈ ರೀತಿಯ ಕೃತಿಗಳು ಸಹೃದಯರನ್ನು ಆ ಕ್ಷಣಕ್ಕೆ ಮಂತ್ರ ಮುಗ್ಧರನ್ನಾಗಿಸುತ್ತದೆ. ಮತ್ತು ನಮ್ಮನ್ನು ನಾವು ಮರೆತು ಆ ಪ್ರೇಮ ಪ್ರಪಂಚದಲ್ಲಿ ವಿಹಾರಿಸುವಂತೆ ಮಾಡಿ ಆ ನಾಯಕ - ನಾಯಕಿ ಪಾತ್ರಗಳು ನಾವಾಗುವಂತೆ ಮಾಡುತ್ತವಲ್ಲಾ ಇಟ್ಸ್ ಗ್ರೇಟ್!

ಈ ನಿರಂತರ ಪ್ರೇಮದ ತಣ್ಣನೆಯ ಝರಿ ನಮ್ಮೆಲ್ಲಾರಲ್ಲಿ ಸದಾ ಯಾವ ತಡೆಯೂ ಇಲ್ಲದೇ ಉತ್ಸಾಹದ ಚಿಲುಮೆಯಾಗಿ ಹರಿದು "ಚೆಲುವಿನ ಚಿತ್ತಾರವನ್ನು" ಮೂಡಿಸಲಿ ಎನ್ನುವ ಸಾಮಾನ್ಯ ..ಪ್ರೇಮಿ!

-ತಿಪುಟಪ್ರಿಯ