ಸೋಮವಾರ, ಏಪ್ರಿಲ್ 22, 2024

ದೂರದ ದೇಶದಲ್ಲಿ ಕನ್ನಡ

ಭಾಷೆ ಎಂಬುದು ಎರಡು ಮನಸ್ಸುಗಳನ್ನು ಒಂದು ಕಡೆ ಕಟ್ಟಿಹಾಕುತ್ತದೆ. ಹಾಗೆಯೆ ನಮ್ಮ ಕನ್ನಡ ಭಾಷೆ ಈ ಅಮೇರಿಕಾದ ಡೇಟನ್ ನಗರದಲ್ಲಿ ವಿವಿಧ ಕನ್ನಡ ಕುಟುಂಬಗಳನ್ನು ಒಟ್ಟಿಗೆ ಒಂದು ಜಾಗದಲ್ಲಿ  ಸೇರುವಂತೆ ಮಾಡಿದೆ ಅಂದರೆ ಅತಿಶಯೋಕ್ತಿಯಲ್ಲ.

ಡೇಟನ್ ಸಿರಿಗನ್ನಡ ಸ್ಥಾಪಿತವಾಗಿ ಇಲ್ಲಿಯ ಎಲ್ಲಾ ಅಮೇರಿಕ ಕನ್ನಡಿಗರನ್ನು ಒಂದೇ ಸೂರಿನಲ್ಲಿ ತಂದಿದೆ. 



ಈ ಸಂಘವು ವರುಶದಲ್ಲಿ ಹಲವಾರು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳನ್ನು ಹಮ್ಮಿ ಕೊಂಡು ವರ್ಷವಿಡಿ ಕನ್ನಡಿಗರನ್ನು ಒಟ್ಟಿಗೆ ಪರಸ್ಪರ ಭೇಟಿ ಮಾಡಲು ಅನುವು ಮಾಡಿಕೊಟ್ಟಿದೆ ಅಂದ್ರೆ ತಪ್ಪಿಲ್ಲ. 

ಇಲ್ಲ ಅಂದ್ರೆ ಗೊತ್ತಲ್ಲ ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸ ಕಾರ್ಯಗಳ ಮೊಲಕ ಈ ಬ್ಯುಸಿ ಲೈಫ್ ನಲ್ಲಿ ಮುಳುಗೇಳುತ್ತಿರುತ್ತಾರೆ. ಈ ರೀತಿಯ ಯಾ0ತ್ರಿಕ ಬದುಕಿನಿಂದ ಪ್ರತಿಯೊಬ್ಬ ಕನ್ನಡಿಗರನ್ನು ಹೊರತರುವಲ್ಲಿ ಈ ಕನ್ನಡ ಕೂಟವು ಮಹತ್ತರ ಹೆಜ್ಜೆಯನ್ನು ಇಟ್ಟಿದೆ. 

ರಾಜ್ಯೋತ್ಸವ, ಯುಗಾದಿ, ಸ0ಕ್ರಾಂತಿ ಹೀಗೆ ಮುಖ್ಯ ಹಬ್ಬಗಳನ್ನು ಇಲ್ಲಿಯ  ಕನ್ನಡಿಗರೆಲ್ಲ ಒಟ್ಟಿಗೆ ಸೇರಿ ಒಂದೆಡೆ ಕಲೆತು ಬೆರೆತು ದೊಡ್ಡವರಿಂದ ಇಡಿದು ಚಿಕ್ಕ ಮಕ್ಕಳವರೆಗೆ ಕುಣಿದು, ಹಾಡಿ, ನಲಿದು, ತಾವೇ ತಮ್ಮ ಕೈಯಾರೆ ತಯಾರಿಸಿದ ತಿನಿಸುಗಳನ್ನು ಸವಿಯುತ್ತ ಕನ್ನಡದ ನೆಲದ ನೆನಪನ್ನು ಪುನರ್ ಮೆಲಕು  ಹಾಕಿಕೊಂಡು ಆಚರಿಸುತ್ತಾರೆ. 

ಇಲ್ಲಿಯೇ ಹುಟ್ಟಿ  ಬೆಳೆದ  ಮಕ್ಕಳಿಗೆ  ಕನ್ನಡದ ಮಣ್ಣಿನ ವಾಸನೆಯನ್ನು ಗ್ರಹಿಸುವ ಅವಕಾಶ. ಹೀಗೆ ನಮ್ಮ ರಾಜ್ಯದಿಂದ ದೊರವಿದ್ದರು ನಮ್ಮ ಮಾತೃ ಭಾಷೆಯಲ್ಲಿ  ಅದು  ಈ ಇಂಗ್ಲಿಷ್ ಮಯ ವಾತಾವರಣದಲ್ಲಿ ಎಲ್ಲರನ್ನು ಅತ್ಮೀಯವಾಗಿ ಮಾತನಾಡಿಸುವುದು ಸಂತೋಷವಾಗುತ್ತದೆ.  

ದೂರದ ದೇಶದಲ್ಲಿದ್ದಾಗ ಹತ್ತಿರವಿರುವರೇ ನೆಂಟರಲ್ಲವೇ? 

ಹೌದು ಆ  ಮೂಲಕ  ನಮ್ಮ ಈ  ಸಂಘದ ಕಾರ್ಯಕರ್ತರು  ಯಾವುದೇ ಒಂದು ಕಾರ್ಯಕ್ರಮ ಶುರುವಾಗುವ ಒಂದು ತಿಂಗಳು ಮುನ್ನ ಒಂದೊಂದು ಮನೆಯಲ್ಲಿ ಅಥವಾ ಪಾರ್ಕ್ ಗಳಲ್ಲಿ ಪೂರ್ವಬಾವಿ ಸಾಂಸ್ಕೃತಿಕ ಕಾರ್ಯಕ್ರಮಗಳ ತಾಲೀಮು ನಡೆಸುತ್ತಾರೆ. ಅದಕ್ಕೆ ತಮ್ಮ ತಮ್ಮ ಮಕ್ಕಳನ್ನು ಹೆತ್ತವರು ಕರೆದುಕೊಂಡು  ಬರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. 

ಪ್ರತಿ ಬಾರಿಯೂ ಪ್ರತಿಯೊಬ್ಬರು ಸರದಿ ಪ್ರಕಾರ ತಮ್ಮ ಮನೆಯಲ್ಲಿ ತಯಾರಿಸಿದ ತಿನಿಸುಗಳನ್ನ ಮಕ್ಕಳಿಗಾಗಿ ತರುವುದು. ಅದೂ ಕೂಡ ದೊಡ್ಡವರ  ಬಾಯಿ ರುಚಿಗೆ ಸಿಗುವುದು. ಅದರ ಬಗ್ಗೆ ಪುನ: ಏನೇನೋ ಮಾತು! ಇದನ್ನೆಲ್ಲ ನೋಡುವುದಕ್ಕೆ  ಎಷ್ಟು ಸಂತೋಷವಾಗುತ್ತದೆ.  

ಇದನ್ನೆಲ್ಲ ನೋಡಿದಾಗ ನನಗೆ ಹಳ್ಳಿಯಲ್ಲಿ ನನ್ನ ಅಮ್ಮ ಏನಾದ್ರು   ಹೊಸ ರುಚಿ ಮಾಡಿದಾಗ ಅಕ್ಕ ಪಕ್ಕದ ಮನೆಯವರಿಗೆ ಕೊಡುತ್ತಿದ್ದ ದಿನಗಳು  ನೆನಪಾಗುತ್ತದೆ. 

ಈ ರೀತಿಯಲ್ಲಿ  ನಾವೆಲ್ಲಾ ಒಂದೇ ಎಂಬ ಬಾವನೆಯಲ್ಲಿ ಜರುಗಿದ ಮೊನ್ನೆಯ ಯುಗಾದಿ  ಕಾರ್ಯಕ್ರಮವು ೪೨ ಕ್ಕೂ ಹೆಚ್ಚು ಕನ್ನಡ ಕುಟುಂಬಗಳನ್ನು  ಒಂದು ಕಡೆ ಸೇರಿಸಿ, ಅರ್ಧ ದಿನ ಪೂರ್ತಿ ವಿವಿಧ ವಿಭಿನ್ನವಾಗಿ ಮಕ್ಕಳ , ಹಿರಿಯರ ಹಾಡು, ಕುಣಿತ, ಮಾತು, ಕತೆ, ವಿವಿಧ ಬಗೆ ಬಗೆಯ ಸಿಹಿ ತಿನಿಸುಗಳು ಮತ್ತು  ಭರ್ಜರಿ ಹೋಳಿಗೆ ಊಟ ಸವಿದದ್ದನ್ನು ನೋಡಿದರೆ ನಾವು ನಿಜವಾಗಿಯೂ ಅಮೆರಿಕದಲ್ಲಿ ಇದ್ದವೊ ಅಥವಾ ಕನ್ನಡದ ಬೆ೦ಗಳೂರಲ್ಲಿ ಇದ್ದೇವೊ ಎಂಬ ರೋಮಾಂಚನವಾಯಿತು. 



ಇಲ್ಲಿಯ ಸಂಘದ ಕಾರ್ಯಕರ್ತರ ಸಂಭ್ರಮ ಮನ ತುಂಬಿ ಬಂದಿತು. ಹಾಗೆಯೇ ಕನ್ನಡಿಗರ ಸವಿ ವಿನಯ ಸಿಹಿ ಹೃದಯದ ಲವಲವಿಕೆ  ಪುನ: ಪುನ: ಮೇರು ನಟ ರಾಜಣ್ಣ ನ ವ್ಯಕ್ತಿತ್ವವೇ ಕಣ್ಮು0ದೇ ಬಂದಿತು. 

ಈ ರೀತಿಯ ಕನ್ನಡ ಸಂಘಗಳು ಹೊರ ದೇಶದ ವಿವಿಧ ಬಾಗಗಳಲ್ಲಿ ಇವೆ ಮತ್ತು ಅವುಗಳು ಇದೆ  ರೀತಿಯಲ್ಲಿ ಕನ್ನಡ ಜನರನ್ನು ಒಟ್ಟಿಗೆ ಸೇರಿಸಿ ಕನ್ನಡ ವಾತಾವರಣವನ್ನು ಸೃಷ್ಟಿಸಿ ಕನ್ನಡ ಮನಗಳನ್ನು ತೃಪ್ತಿಗೊಳಿಸುವಲ್ಲಿ ಮತ್ತು ಕನ್ನಡತನವನ್ನು ಉಳಿಸಿ ಬೆಳಸಲು ಅವಿರತ ಕಾಣಿಕೆ ಕೊಡುತ್ತಿರುವುದು ಶ್ಲಾಘನೀಯ!!

ಸೋಮವಾರ, ಫೆಬ್ರವರಿ 12, 2024

ನಿಮ್ಮ ಬಗ್ಗೆ ಹೇಳಿ

ಯಾರಾದಾರು ನಿಮ್ಮ ಬಗ್ಗೆ ಹೇಳಿ ಅಂದರೆ, ಏನು ಹೇಳುವುದು ಎಂದು ಚಿಂತೆ ಮಾಡಬೇಕಾಗುತ್ತೆ.

 ಅವರಿಗೆ ನಾವು ಹೇಳುವುದು ಸರಿ ಅನಿಸುತ್ತಾ ಅಥವಾ ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ನಗು ಬರುತ್ತಾ! 

ಆದರೆ ಸಂದರ್ಶನದ ಸಮಯದಲ್ಲಿ ಹೇಳುವದು ಅನಿವಾರ್ಯ ಮತ್ತು ಕೇಳುವುದು ಕೇಳಿದರವರಿಗೂ ಅನಿವಾರ್ಯ! 

ಹಾಗೆಯೇ ಅವರ ಬಗ್ಗೆ ನಮಗೆ ಗೊತ್ತಾಗುವುದು. 

ನಾನು ಇಲ್ಲಿ ಹುಟ್ಟಿ, ಇಲ್ಲಿ ಓದಿ,  ಇಲ್ಲಿ ಈಗ  ಈ ಕೆಲಸ ಮಾಡುತ್ತಿದ್ದೇನೆ. 

ಕೇಳಿದವರಿಗೆ ಒಹ್ ಹೀಗೆಲ್ಲಾ  ಜೀವನದಲ್ಲಿ ಈ ಹುಡುಗ ಬಸವಾಳಿದಿದ್ದಾನೆ ಇಲ್ಲಿವರಿಗೆ ಎಂದು ಕೇಳಿಸಿಕೊಂಡವರು ಒಂದಿಷ್ಟು ಕನಿಕರ ಪಡಬಡಹುದು. 

ಹಾಗೆಯೇ ಒಹ್ ನನಗಿಂತ ಹೀಗೆ ಹೀಗೆ ಏನೇನೋ ಮಾಡಿದ್ದಾನೇ ಎಂದು ಅಚ್ಚರಿ ಪಡಬಹುದು.

 ಆದರೂ ಒಮ್ಮೊಮ್ಮೆ ನಮ್ಮ ಬಗ್ಗೆ ನಾವೇ ಏನ್ ಕೊಚ್ಚಿಕೊಳ್ಳುವುದು ಅನಿಸುತ್ತದೆ. 

 ಅದರೂ ಇಂದಿನ ದಿನಮಾನದಲ್ಲಿ ನಮ್ಮ ಮಾರ್ಕೆಟಿಂಗ್ ನಾವೇ ಮಾಡಬೇಕು. ಅದಕ್ಕೆ ಹೆಚ್ಚು ಬೆಲೆ.

 ಎಲೆ ಮರೆಯ ಕಾಯಿಯಂತೆ ಇದ್ದರೆ ಯಾರೊಬ್ಬರೂ ಮೂಸಿ ಸಹ ನೋಡುವುದಿಲ್ಲ. 

ಎಲ್ಲಾ ಪ್ರಚಾರ ದಿನದಲ್ಲಿ ಬದುಕುವ ಬವಣೆ. 

ಎಲ್ಲಿಯಾದರೂ ಕೆಲಸ ಬೇಕೆಂದರೆ ನಿನ್ನ ರೆಸ್ಯೋಮ್ ಚೆನ್ನಾಗಿರಬೇಕು. ಇಲ್ಲ ಅಂದರೆ ನಿಮಗೆ ಒಂದು ಕಾಲು ಸಹ ಬರುವುದಿಲ್ಲ. ಕಾಲ್ ಇಲ್ಲ ಅಂದ್ರೆ ಇಂಟರ್ವ್ಯೂ ಇಲ್ಲ. ಅದು ಇಲ್ಲ ಅಂದರೆ ಕೆಲಸನು ಇಲ್ಲ.

ಇಂದು A I  ಜಮಾನಾ! ಆರ್ಟಿಪಿಸಿಯಲ್ ಇಂಟಲಿಜೆನ್ಸ್ ಮೊಲಕ ಮನುಷ್ಯರು ರಚಿಸಿದ ಕೃತಿಗಳನ್ನು ಪರೀಕ್ಷಿಸುತ್ತಾರೆ. ಅದಕ್ಕೇನು ಗೊತ್ತು  ನಮ್ಮ ಕಷ್ಟ ಸುಖ ? ಆದರೆ ಮನುಷ್ಯರನ್ನ ನಂಬುವುದಕ್ಕಿಂತ ಮಿಷಿನ್ ನಂಬುವ ದಿನಗಳಲ್ಲಿ ನಾವು ಇದ್ದೇವೆ.  ಮನುಷ್ಯನೇ ಕಂಡು ಹಿಡಿದ ಯಂತ್ರ ಮನುಷ್ಯನ್ನನ್ನೇ ಪರೀಕ್ಷಿಸುತ್ತದೆ. ಇಲ್ಲಿಗೆ ಬಂದು ನಿಂತಿದ್ದೇವೆ. 

ಇಲ್ಲಿಗೆ ಬಂದಿದೆ ನಮ್ಮ ಜೀವನ. ಬರಿ ಓದಿದರೆ ಏನು ಸಾಲದು. 

ಓದು ಮುಗಿದ ಮೇಲೆಯೇ ಜೀವನ ಅಂದರೆ ಏನು ಎಂದು ತಿಳಿವಿಯುವುದು. 

ಇನ್ನು ಹೆಚ್ಚು ಬದುಕು ಅಂದರೆ ಏನು ಎಂದು ತಿಳಿಯಲು ಬೆಂಗಳೂರಿಗೆ ಬಂದು ನಾಲ್ಕು ಕಡೆ ತಿರುಗಾಡಿ ಕೆಲಸ ಹುಡುಕಿದಾಗ ನಮ್ಮ ತಿಳುವಳಿಕೆ, ನಾವು ಏನು ಓದಿದೀವಿ ಎನ್ನುವುದು ಗೊತ್ತಾಗುತ್ತೆ. 

ಬರಿ ಓದಿನ ಅಂಕಗಳು ಏನು ಉಪಯೋಗವಿಲ್ಲ ಎನ್ನುವುದು ಒಂದೇ ದಿನದಲ್ಲಿ ತಿಳಿಯುತ್ತದೆ. 

ಮತ್ತೆ ನಮ್ಮನ್ನು ನಾವು ಹೇಗೆ ಪ್ರೇಸಂಟ ಮಾಡಿಕೊಳ್ಳಬೇಕು ಎನ್ನುವುದನ್ನ ಕಲಿಯಲು ಪುನಃ ಯಾವುದಾರೂ ಕ್ರ್ಯಾಶ್ ಕೋರ್ಸಗೆ ಸೇರಬೇಕು. ಅಲ್ಲಿ ಅದು ಇದು ಬೇರೆ ಭಾಷೆಯಲ್ಲಿ ಪುನಃ ನುರಿಯಬೇಕು.

ನಂಗೆ ರವಿಬೆಳೆಗೆರೆ ಕೊಡುತ್ತಿದ್ದ ವರುಷದ ಅಫಿಡವಿಟ್ ಅಥವಾ ಅವರು ಅವರ ಪುಸ್ತಕಗಳಲ್ಲಿ ತಮ್ಮ ಬಗ್ಗೆ ಹೇಳಿಕೊಳ್ಳುತ್ತಿದ್ದ  ಒಂದು ಪುಟದ ಸಾಲುಗಳು ತುಂಬಾ ಚೆನ್ನಾಗೇ ಕಾಣಿಸುತ್ತಿತ್ತು. ಹುಟ್ಟಿನಿಂದ ಪ್ರಾರಂಬಿಸಿ ಹೆಂಡತಿ,  ಮಕ್ಕಳು, ಮನೆ, ದುಡಿಮೆ, ಕಾರು, ಬಟ್ಟೆ ,ಪುಸ್ತಕಗಳಿಂದ ಹಿಡಿದು ಇತ್ತೀಚೆಗೆ ಕೊಂಡ ಕೆಜಿ ಬಂಗಾರ ಬೆಳ್ಳಿಯವರಿಗೆ  ಏನೆಲ್ಲಾ ಹೆಚ್ಚಾಗಿದೆ ಮತ್ತು ಕಡಿಮೆಯಾಗಿದೆ ಎಂಬುದನ್ನು  ಹೇಳಿಕೊಳ್ಳುತ್ತಿದ್ದರು. 

ಬದುಕಿದರೇ ಹೀಗ್ ದಿಲ್ ದಾರ್ ಮನುಷ್ಯನಾಗಿ ಬಾಳಬೇಕು ಎಂಬಂತೆ ಸಾಮಾನ್ಯ ಮನುಷ್ಯನಿಗೂ  ಉತ್ತೇಜನ ಕೊಡುವ  ರೀತಿಯ ಬರಹವಾಗಿತ್ತು ಅದು ಅವರ ಬಗ್ಗೆ ಅವರು ಹೇಳಿದ್ದ ಅಫಿಡವಿಟ್! 

 ನನಗೆ ಒಮ್ಮೊಮ್ಮೆ ಅನಿಸುತ್ತದೆ. ಅದು ಯಾಕೆ ಕಾಲೇಜು, ಶಾಲೆಗಳಲ್ಲಿ ಪಾಠಗಳ ಜೊತೆಯಲ್ಲಿ ಈ ಪಾಠಗಳನ್ನು ಯಾರೊಬ್ಬ ಗುರುವು  ನಮಗೆ ಹೇಳಿಕೊಡವುದಿಲ್ಲ. 

ಹಾಗೆಯೇ ಹಳ್ಳಿ ಮೊಲೆಯಲ್ಲಿ ಓದುವ ಬದಲು ಬೆಂಗಳೂರಲ್ಲಿ ಓದಿದವರ ಲಕ್ಕು ಚೆನ್ನ ಅನಿಸುತ್ತದೆ. 

ಬೆಂಗಳೂರಲ್ಲಿ ಇದ್ದಾರೆ ಅರ್ಧ ಲೈಫ್ ಪಾಠಗಳನ್ನು ಬೆಂಗಳೂರು ಗಾಳಿ ನಮಗೆ ತಿಳಿಸಿಕೊಟ್ಟುಬಿಡುತ್ತದೆ.

ಹೇಗೆ ಬದುಕಬೇಕು. ಯಾರನ್ನು ಹೇಗೆ ನಂಬಬೇಕು, ಹೀಗೆ ಜೀವನದ ಸತ್ಯಗಳನ್ನು ಯಾವ ವಿಶ್ವವಿದ್ಯಾನಿಲಯಗಳು ಹೇಳಿಕೊಡದದ್ದನ್ನು ಬೆಂಗಳೂರು ಒಂದು ದಿನದಲ್ಲಿ ಸುಲಭವಾಗಿ ಕಲಿಸಿಬಿಡುತ್ತದೆ. 

ಹಣಕ್ಕೆ ಇರುವ ಬೆಲೇ ಏನು ಎನ್ನುವುದನ್ನು ಕಾಲಿ ಜೇಬಿನಿಂದ್ ಒಂದು ಗಂಟೆ  ಈ ಮಹಾನಗರದ ದಾರಿಯಲ್ಲಿ ಸಾಗಿದರೆ ತಿಳಿಯುತ್ತದೆ. 

ಹೀಗೆ ಬದುಕು ನಾವು ನಮ್ಮ ಪಾಡಿಗೆ ಇದ್ದಾರೆ ನಾವು ಎಲ್ಲಿ ಇರುತ್ತೇವೊ ಅಲ್ಲಿಯೇ ಇರಬೇಕಾಗುತ್ತದೆ.

ಯಾರು ತನ್ನನ್ನ ತಾನು ಪ್ರೀತಿಸಿ ನಂಬಿ ತನ್ನ(ನ್ನು ತಾನು) ಚೆನ್ನಾಗಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವವನು ಅವನು ಈ ಪ್ರಪಂಚದಲ್ಲಿ ಗೆಲ್ಲುವನು.  

ಇನ್ನು ಯಾಕೆ ತಡ ನಿಮ್ಮ ಬಗ್ಗೆ ನೀವೇ ಹೇಳಿ!  

ಗುರುವಾರ, ನವೆಂಬರ್ 30, 2023

ಜೈ ಕನ್ನಡ! ಜೈ ಕರ್ನಾಟಕ!

ಕನ್ನಡ ರಾಜ್ಯೋತ್ಸವ! ಇದು ಕೇವಲ ನಗರಗಳಲ್ಲಿ ಅದೂ ಬೆಂಗಳೂರಲ್ಲಿ ಇರುವವರಿಗೆ ಮಾತ್ರ?

 ಕನ್ನಡ ಎನ್ನುವ  ಒಂದು ಭಾಷೆ ಇದೆ ಎಂಬುದನ್ನು ನೆನಪಿಸುವ ಹಬ್ಬವಾಗಿ ಮಾತ್ರ ಕಾಣುತ್ತಿದೆ ಎಂದೆನಿಸುತ್ತಿದೆ.

ಆದರೆ ಕನ್ನಡ ಭಾಷೆಯನ್ನು ನಿಚ್ಚಳವಾಗಿ ಮತ್ತು ತಮಗೆ ಗೊತ್ತಿಲ್ಲದ ರೀತಿಯಲ್ಲಿ ತಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಬಳಸುತ್ತಿರುವ ಮುಗ್ಧ ಕನ್ನಡಿಗರು ಎಂದರೇ ಅದು ಹಳ್ಳಿಯಲ್ಲಿರುವವರು, ಚಿಕ್ಕ ಪಟ್ಟಣಗಳಲ್ಲಿರುವವರು ಮಾತ್ರ . 

ಆದರೇ ಈ ರೀತಿಯ ಜರೋರತೆ ಬೆಂಗಳೂರಿನಲ್ಲಿರುವ ಅಥವಾ ನಾವು  ಮುಂದುವರೆದಿರುವ ಮುಂದುವರಿಯುತ್ತಿವೆ ಎಂದು ಗುರುತಿಸಿಕೊಂಡ ಮಹಾ ನಗರದ ಮಂದಿಗೆ ಇಲ್ಲ ಬಿಡಿ. ಇಲ್ಲಿ ಕನ್ನಡ ಭಾಷೆಗೆ ಏನೂ ಬೆಲೆ ಇಲ್ಲ ಎಂಬ ಕಠಿಣ ತಿಳುವಳಿಕೆಯಲ್ಲಿ ಮುಳುಗೇಳುತ್ತಿದ್ದಾರೆ.

ಯಾಕೆಂದರೇ ಇಲ್ಲಿರುವವರು ನವ ತರುಣ ತರುಣಿಯರು. 

ಹಳ್ಳಿಗಳಲ್ಲಿ , ಚಿಕ್ಕ ಪುಟ್ಟ ಪಟ್ಟಣಗಳಲ್ಲಿರುವವರು ಈ ಯುವ ಸಮುದಾಯವನ್ನು ಹೆತ್ತ ಹೆತ್ತವರು. ಹಾಗೆಯೇ ಹೆಚ್ಚು ಹೆಚ್ಚು ಓದಿರದ ಮಂದಿ ಮಾತ್ರ. ಇವರುಗಳು ಹೆಮ್ಮೆಯಿಂದ ಮತ್ತು   ಪ್ರೀತಿಯಿಂದ ಕನ್ನಡವೇ ಉಸಿರಾಗಿಸಿಕೊಂಡು ಬಾಳುತ್ತಿದ್ದಾರೆ. ಅವರುಗಳಿಗೆ ಕನ್ನಡ ಉಳಿಸಿ, ಬಳಸಿ ಮತ್ತು   ಬೆಳಸಿ ಎಂಬ ಘೋಷಣೆಯ ಬಗ್ಗೆ ಯಾವ ಅರಿವು ಬೇಕಾಗಿಲ್ಲ.

ಆದರೇ ನಮ್ಮ ಕರ್ನಾಟಕದ ಸ್ಥಿತಿ ಮಾತ್ರ ಅಂದಿನಿಂದ ಇಂದಿನವರೆಗೂ ಸುಧಾರಿಸಿರುವುದು ನಾ ಕಾಣೆ! 

ನಮ್ಮ ಮುಖ್ಯಮಂತ್ರಿಗಳು ಮೊನ್ನೆಯ ಕನ್ನಡ ರಾಜ್ಯೋತ್ಸವದ ಭಾಷಣದಲ್ಲಿ ಇದೇ ವಿಚಾರವನ್ನು ತಲೆ ಬಿಸಿ ಮಾಡಿಕೊಂಡು ನೆರೆದ ಸಭಿಕರಲ್ಲಿ ಹಂಚಿಕೊಳ್ಳುತ್ತಿದ್ದರು. ಬೆಂಗಳೂರು ಕನ್ನಡಿಗರು ಬೇರೆ ರಾಜ್ಯದಿಂದ ಬಂದವರ   ಭಾಷೆಯಲ್ಲಿಯೇ ಮಾತನಾಡಿದರೇ ಅವರು ತಾನೇ  ಯಾಕೆ ಕನ್ನಡ ಕಲಿಯುವ ಅವಶ್ಯಕತೆಯಾದರೂ  ಬಂದಿತು? ಅದು ಬಿಟ್ಟು  ನಾವು ಹೆಮ್ಮೆಯಿಂದ ಕನ್ನಡದಲ್ಲಿಯೇ ಅವರೊಂದಿಗೆ ಮಾತನಾಡಿದರೆ ಅವರು ಸಹ ಕನ್ನಡ ಕಲಿಯುವಲ್ಲಿ ನಮ್ಮೊಂದಿಗೆ ಕೈ ಜೋಡಿಸುವವರು ಎಂದೇಳುತ್ತಿದ್ದರು.


ಅವರಿಗೂ ಗೊತ್ತಾಗಿರಬೇಕು. ಈಗಂತೂ ವಿದಾಸೌದದಲ್ಲೂ ಸಹ ಕನ್ನಡ ಕೊಂಚ ಕೊಂಚ ಕಾಣೆಯಾಗುತ್ತಿದೆ ಎಂದು . ಹಾಗೆಯೇ ಈ ಸಂದರ್ಭದಲ್ಲಿ ಅವರು ಒಂದು ಆಜ್ಞೆಯನ್ನು   ಹೊರಡಿಸಿದರೂ ’ಸರ್ಕಾರಿ ಪತ್ರ ವ್ಯವಹಾರವೆಲ್ಲಾ ಕನ್ನಡದಲ್ಲಿಯೇ ಇರಲಿ’ ಎಂದು.



ಹೌದು ಹೀಗೆ ಈ ರೀತಿಯ  ಕನ್ನಡದ ಅಳಿವು ಉಳಿವಿನ ಮಾತುಗಳು ಕೇವಲ ಪ್ರತಿ ನವಂಬರ್ ಮಾಸಕ್ಕೆ ಮಾತ್ರ ಸೀಮಿತವಾಗಿ ಡಿಸೆಂಬರ್ ಹೊತ್ತಿಗೆ ತಣ್ಣಗೆ ಮಲಗಿ ಮೊಲೆಗೆ ಸೇರುತ್ತಿರುವುದು ನಮ್ಮ ಕರ್ನಾಟಕದ  ಜನರ ದೌರ್ಭಾಗ್ಯ ! 


ಯಾಕೇ ಈ ರೀತಿಯ ಒಂದೇ ಒಂದು ಕೂಗು ನಮ್ಮ ಅಕ್ಕ ಪಕ್ಕದ ರಾಜ್ಯಗಳಲ್ಲಿ ಇಲ್ಲವೆಂದು ತುಂಬ ಅಚ್ಚರಿಯಾಗುತ್ತದೆ.  ಯಾಕೆಂದರೇ ಕನ್ನಡವು ಮುಂದುವರಿದ ನಮ್ಮ ನಗರಗಳಲ್ಲಿ ಅದಿಕೃತ ಭಾಷೆಯಾಗಿ ಚಾಲ್ತಿಯಲ್ಲಿ ಇಲ್ಲ. ನಮಗ್ಯಾರಿಗೂ ಕನ್ನಡ ಕಲಿಯಲೇ ಬೇಕೆಂಬ ಒತ್ತಡವಿಲ್ಲ.


ಕನ್ನಡ ನೆಲದಲ್ಲಿ ಹುಟ್ಟಿರುವ ನಮ್ಮ ಕನ್ನಡಿಗರಿಗೆ  ಕನ್ನಡ ಮಾತನ್ನಾಡಿದರೇ ದುಡಿಮೆಯ ಹೊಟ್ಟೆ ತುಂಬಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಅತಿ ಚಿಕ್ಕ ಕೆಲಸಕ್ಕೂ ಕನ್ನಡ ಬಿಟ್ಟು ಬೇರೆ ಯಾವುದೇ ಭಾಷಾ ಪಾಂಡ್ಯತೆ ಬೇಕಾಗಿದೆ ಎಂದು ಹೇಳುವವರೇ ಹೆಚ್ಚಾಗಿದ್ದರೆ. 


ಇಂದು ಭಾಷೇ  ಮಮತೆಗಿಂತ ಹೊಟ್ಟೆಯ ಪಾಡೇ ದೊಡ್ಡದು ಎಂಬ ಭಯ!


ಇದರ ಬಗ್ಗೆ ನಮ್ಮ ಸರ್ಕಾರಗಲ್ಲಿರುವ ಮಹಾನ್ ಬೃಹಸ್ಪತಿಗಳು ಕಣ್ಣು ತೆರೆದು  ಸಹ ನೋಡುವುದಿಲ್ಲ. ಬರೀ ಕನ್ನಡ ದಿನದಂದೂ ಮಾತ್ರ ಕನ್ನಡ ಉಳಿಸೋಣ ಬಳಸೋಣವೆಂದು ವೀರಾವೇಷದ ಮಾತುಗಳನ್ನು ಆಡಿ ವರ್ಷವಿಡಿ ಮೌನವಹಿಸಿಬಿಡುತ್ತಾರೆ. 


ಹೀಗೆ ಸ್ನೇಹಿತರ ವರ್ಗದಲ್ಲಿ ಯಾರೋ ಹೇಳುತ್ತಿದ್ದರು.. ಅದು ಯಾವುದೋ ಒಂದು ಬೆಂಗಳೂರಿನ ವಸತಿ ಸಮುಚ್ಛಾಯದಲ್ಲಿ ೩೨೮ ಮನೆಗಳಿವೆಯಂತೆ.  ಅಲ್ಲಿ ಇರುವ ಕನ್ನಡದ ಕುಟುಂಬಗಳು ಕೇವಲ ೩೮ ಅಂತೆ. ಇಲ್ಲಿಗೆ ಬಂದು ನಿಂತಿದೆ ನಮ್ಮ  ಕನ್ನಡ ರಾಜಧಾನಿಯ ಸ್ಥಿತಿ. ಯೋಚಿಸಿ ಭಾಷೆ ಎಷ್ಟು ಮುಖ್ಯ ಎಂಬುದು. ಕನ್ನಡಿಗರು ಸಹ ಕನ್ನಡದ ಬಗ್ಗೆ ಮೂಗು ಮುರಿದರೆ ಬೇರೆ ಯಾರು ತಾನೇ ನಮ್ಮ ಭಾಷೆಯನ್ನು ಮಾತನಾಡುವರು?  ಬೆಂಗಳೂರಲ್ಲಿ ಕನ್ನಡ ಕಲಿಯಲೇ ಬೇಕು ಎಂಬ ಜರೂರತೆ ಇಲ್ಲ!


ಯಾಕೇ ಹೀಗೆ ಎಂದು ಯಾರು ಸಹ ಪ್ರಶ್ನಿನಿಸಲಾರರು.  ಯಾಕೆಂದರೇ ಯಾವ ಭಾಷೆ  ಹೆಚ್ಚು ಕೆಲಸಗಳನ್ನು , ಉದ್ಯೋಗಗಳನ್ನು, ಸಂಬಳವನ್ನು ಕೊಡುವುದು ’ಹೊಟ್ಟೆ’ಯನ್ನು ತುಂಬಿಸುವುದೋ ಆ ಭಾಷೆಯೇ ಇರಲಿ ಎಂಬ ಜಾಣ ನಿರ್ಧಾರಕ್ಕೆ ಬಂದಂತಿದೆ. 


ಜೈ ಕನ್ನಡ! ಜೈ ಕರ್ನಾಟಕ!

ಶುಕ್ರವಾರ, ಫೆಬ್ರವರಿ 17, 2023

ಲಹರಿ

 ನಾವು ಓದಿದೆವೆಂದರೇ ಕೆಲಸ ಮಾಡಲೇಬೇಕಾ? ಅಯ್ಯೋ ಅಷ್ಟೊಂದು ಓದಿ ಕೊನೆಗೂ ಮದುವೆ,ಮಕ್ಕಳು,ಅತ್ತೆ, ಮೂಸರೇ ತೊಳೆಯುತ್ತಾ ಕೂತೂ ಬಿಟ್ಟೆ. 

ಅದು ಏನೂ ನಿನ್ನ ಅಪ್ಪ ನನ್ನ ಮಗಳಂತೇ ಯಾರೂ ಓದಿಲ್ಲವೆಂದು ಕೊಚ್ಚಿಕೊಂಡಿದ್ದು! ಹೀಗೆ ನೂರಾರು ಸುತ್ತಲಿನ ಬಾಯಿ ಮಾತು ಕೇಳಿ ಕೇಳಿ ರೋಸಿ ಹೋಗಿತ್ತು. 

ನಾನೂ ಅಷ್ಟು ಸ್ವಾಭಿಮಾನಿ. ನಾನು ಎಂದೂ ಹೆಣ್ಣು ಎಂದುಕೊಂಡು ಬೆಳೆದ ಮಗಳೇ ಅಲ್ಲ! ಅಪ್ಪ ಅನ್ನುವಂತೆ ನಾನೇ ನಮ್ಮ ಮನೆಗೆ ಗಂಡು ಮಗುವೆನ್ನುವಂತೆ ಬೆಳೆದವಳು. 

ಓದನ್ನು ಮಾತ್ರ ಅಚ್ಚುಕಟ್ಟಾಗಿ ಓದಿ ಬಿಡಬೇಕು ಎಂಬಂತೆ ಎಷ್ಟೇ ದೊಡ್ಡ ಓದು ಆದರೂ ಸಲೀಸಾಗಿ ಪಾಸು ಮಾಡುತ್ತಿದ್ದೆ. ಶಾಲೆಯಲ್ಲೂ ಅಷ್ಟೇ ಪ್ರತಿಯೊಬ್ಬ ಶಿಕ್ಷಕರುಗಳಿಗೂ ನಾನೇ ಬೇಕಾಗಿತ್ತು. ಓದು ಅಲ್ಲದೇ ಶಾಲೆಯಲ್ಲಿ ಕಾಲೇಜಿನಲ್ಲಿ ಯಾವುದೇ ಪಠ್ಯೇತರ ಚಟುವಟಿಕೆಗಳಿಗೆ ಅವಳೇ ಸರಿ ಎನ್ನುವ ಮಟ್ಟಿಗೆ ನಾನೇ ಪ್ರೀತಿ ಪಾತ್ರಳಾಗಿದ್ದೆ. 

ಹಾಗೇಯೇ ಬೇರೆ ಹುಡುಗ ಹುಡುಗಿಯರಿಗೆ ನನ್ನ ಏಳ್ಗೆಯನ್ನು ನೋಡಿ ಹೊಟ್ಟೆ ಉರಿ ಬಂದಿತ್ತೋ ಅಥವಾ ಅವರ ಹೆತ್ತವರು ನನ್ನನೇ ಉದಾಹರಣೆಯಾಗಿ ಕೊಟ್ಟು ಕೊಟ್ಟು ಅವರ ಹೊಟ್ಟೆ ಉರಿಸಿ ಮುನಿಸಿಕೊಳ್ಳುವಂತೆ ಮಾಡಿರಲೇಬೇಕು. 

ಇದೊಂದು ರೋಗವೇ ಸರಿ! ನಮ್ಮ ಹೆತ್ತವರೇ ಅಲ್ಲಾ ಪ್ರತಿಯೊಂದು ಮನೆಯಲ್ಲೂ ಬೇರೆಯವರೊಂದಿಗೆ ತಮ್ಮ ಮಕ್ಕಳನ್ನು ಹೋಲಿಸಿ ನೋಡುವುದು. ನೋಡು ಅವರ ಮಗ ಹೇಗೆ ದುಡಿಯುತ್ತಿದ್ದಾನೇ. ನೋಡು ಅವರ ಸೊಸೆ ಎಷ್ಟೊಂದು ಕೆಲಸ ಮಾಡುತ್ತಿದ್ದಾಳೆ. ಹೀಗೆ ಹಾಗೇ ಬರೀ ಬೇರೆಯವರನ್ನು ನೋಡಿ ನಮ್ಮ ನಮ್ಮ ಶಕ್ತಿಯನ್ನು ಪರೀಕ್ಷೆ ಮಾಡಿಕೊಳ್ಳುವುದೇ ಆಯಿತು ಅನಿಸುತ್ತದೆ. 

ನನಗೂ ಈ ರೀತಿಯ ಹೆತ್ತವರ ಕಾಟ ಮುಗಿಯಿತು ಅನ್ನುವ ಹೊತ್ತಿಗೆ ಮದುವೆ ಮಾಡಿ ಕೈ ತೊಳೆದು ಕೊಂಡು ಬಿಟ್ಟರು ಅನಿಸುತ್ತದೆ. ಅದು ಯಾರು ಅಲಿಖಿತ ಶಾಸನ ಮಾಡಿದ್ದರೋ ಗೊತ್ತಿಲ್ಲ. ಓದುವುದು ಮುಗಿಯಿತು ಅಂದರೇ ಹುಡುಗಿಯರಿಗೆ ಬೇಗ ಮೂಗುದಾರ ಹಾಕಿ ಅನ್ನುತ್ತಾರೆ. 

ನಮ್ಮ ಮಗಳು ಇದೀಗ ತಾನೇ ಇಷ್ಟೊಂದು ಓದಿದ್ದಾಳೆ, ಸ್ವಲ್ಪ ಸಮಯ ಆರಾಮಾಗಿ ಅಲ್ಲಿ ಇಲ್ಲಿ ಕೆಲಸ ಹುಡುಕಿ ದುಡಿಯಲಿ ಎನ್ನುವ ಮಾತೇ ಇಲ್ಲ. ಏಯ್ ನೀನು ಏನು ದುಡಿದು ನಮ್ಮನ್ನು ಉದ್ಧಾರ ಮಾಡಬೇಕಾಗಿಲ್ಲ. ನಾವು ಗಟ್ಟಿಯಾಗಿ ಇರುವಾಗಲೇ ನೀನೊಂದು ಮನೆಗೆ ಮಹಾಲಕ್ಷ್ಮಿಯಾಗಿ ಹೋಗಿ ಬಿಟ್ಟರೇ ಅಷ್ಟು ಸಾಕು ಎನ್ನುವ ಚಿಂತೆ ಹೆಣ್ಣು ಹೆತ್ತ ಎಲ್ಲಾ ತಂದೆ ತಾಯಿಯಂದಿರದು. 

ನಾವೆಷ್ಟೇ ಓದಿ, ಎಷ್ಟೇ ದೊಡ್ಡ ಹುದ್ದೆಯನ್ನು ಅಲಂಕರಿಸಿದರೂ ನಮ್ಮನ್ನು ಇದೇ ಸಮಾಜ ಕೇವಲ ಒಂದು ಹೆಣ್ಣು ಎನ್ನುವ ರೀತಿಯಲ್ಲಿಯೇ ನಮ್ಮ ನಮ್ಮ ಹೆತ್ತವರುಗಳು ಸಹ ಕಾಣುತ್ತಾರೆ. ಅದು ಏನೂ ಆ ಭಯ  ನನಗೆ ಇನ್ನೂ ಗೊತ್ತಾಗಿಲ್ಲ. 

ಇತಿಹಾಸ ಪುರಾಣಗಳಿಂದಲೂ ಮಹಿಳೆಯರ ಪರಾಕ್ರಮ ಸಾಧನೆಗಳು  ಕಣ್ಣ ಮುಂದೆ ಇದ್ದರೂ ಅವುಗಳನ್ನೆಲ್ಲಾ ಕೇವಲ ಕಥೆಯಾಗಿ ಮಾತ್ರ ನೋಡುತ್ತಾರೆ. ಪುನಃ ಪುನಃ ತನ್ನ ಕರಳು ಬಳ್ಳಿಯನ್ನು ಇನ್ನೂ ಹೆಚ್ಚು ನಾಜೂಕಾಗಿ ಕಾಪಾಡುತ್ತೇವೆ ಎನ್ನುವ ರೀತಿಯಲ್ಲಿ ಮದುವೆ ಎಂಬ ಖೆಡ್ಡಾಕ್ಕೆ ದೂಡುತ್ತಾರೆ. 


ಹೆಣ್ಣು ಎಂದರೇ ಅವಳು ಬೇರೆಯವರ ಮನೆಯ ಸೊತ್ತು ಎಂದೇ ನೋಡುತ್ತಾರೆ. ಅವಳ ಜವಬ್ದಾರಿಯನ್ನು ಇನ್ನೂ ಏನಿದ್ದರೂ ಅವಳ ಗಂಡ ಅತ್ತೆ ಮಾವ ನೋಡಿಕೊಳ್ಳಲಿ ಎಂಬ ಭಾವನೇ ಏಕೋ ಗೊತ್ತಿಲ್ಲ! 

ಗೊತ್ತಾ ನಮ್ಮ ಜವಾಬ್ದಾರಿ ಬೇರೆಯವರು ಹೊರುವುದಕ್ಕಿಂತ ನಾವೇ ಬೇರೆಯವರ ಜವಾಬ್ದಾರಿಯನ್ನು ಹೊತ್ತುಕೊಂಡು ಇಡೀ ಮನೆಯನ್ನೇ ತೂಗಿಸಿಕೊಂಡು ಸಾಗಬೇಕಾಗಿರುತ್ತದೆ. ಆದರೂ ನಮ್ಮ ಅಪ್ಪ ಅಮ್ಮನಿಗೆ ಅಮ್ಮ ಹೇಗೆ ತಮ್ಮ ಮನೆಯನ್ನು ನಿಭಾಯಿಸುವವಳು ಎಂಬುದನ್ನು ತಮ್ಮ ತಮ್ಮ ಹೆಣ್ಣು ಮಕ್ಕಳ  ಮದುವೆ ಮಾಡುವ ವೇಳೆ ಪೂರ್ತಿ ಮರೆತು ಬಿಟ್ಟಿರುತ್ತಾರೆ. ಇದೇಯೇ  ಸಮಜಾಯಿಷಿ? ಏನು ಹೇಳುವುದು ಹೆತ್ತ ಕರುಳುಗಳಿಗೆ!!

ಭಾನುವಾರ, ನವೆಂಬರ್ 6, 2022

ಕನ್ನಡ

ಕನ್ನಡ ಏನು ಚೆನ್ನ ನುಡಿಯಲು ಈ ಸವಿ ನುಡಿ 

ನಮ್ಮ ಭಾಷೆ ನಮ್ಮ ಕನ್ನಡ ನುಡಿಯೇ ನಮಗೆ ಹೆಮ್ಮೆ

ಎಲ್ಲಿಯೇ ಇರಲಿ ಹೇಗೆ ಇರಲಿ ನಮ್ಮ ಭಾಷೆ ನಮ್ಮದು  

ಕನ್ನಡವೊಂದಿರಲು ಭಾವನೆಗೆ ಬೇರೆ ಏನು ಬೇಕು 

ತಾಯಿ  ಭಕುತಿಗೆ  ಕನ್ನಡವೊಂದೇ ಸಾಕು 

ನಮ್ಮನ್ನೆಲ್ಲ  ಬೆಸೆದ ಬಂಧವೇ  ಈ ಸಿರಿ ಕನ್ನಡ ನುಡಿ 

ಯಾರು ಬೇಕಾದರೂ ಕಲಿಯಬಹುದು ಈ ಕನ್ನಡ

ಸುಲಲಿತ  ಸುಲಭ ಸುಕೋಮಲ  ಸುಲಿದ ಬಾಳೆ ಹಣ್ಣೇ ಸರಿ 

ಎಷ್ಟು ಚೆನ್ನ ಕನ್ನಡ ನುಡಿಯ ದ್ವನಿಯ  ಗಾಯನ 

ಕನ್ನಡ ಕೇಳಿದೊಡನೆ ನಲಿವುದು ತನು ಮನ

ಅಮ್ಮನಂತಹ ಮುದ್ದು ಪಡೆದ  ನಾವೇ  ಧನ್ಯರು

ತಾನು  ಬೆಳೆದು ನಮ್ಮ ಬೆಳೆಸುವ  ನಮ್ಮ ಭಾಷೆ ಕನ್ನಡ

ಕೋಟಿ ಮನಗಳ ಬೆಸೆಯುವ ನುಡಿಯನ್ನು  ಯಾರು ಯಾಕೆ  ಮರೆಯವರು

ನಿತ್ಯ  ನುಡಿಯ  ಪಸಲು ಬೆಳೆದ ಕನ್ನಡ ಕಟ್ಟಾಳುಗಳೇ ನಮ್ಮ ಹೆಮ್ಮೆ 

ಸ್ನೇಹ ಪ್ರೀತಿ ಬಾಳ್ವೆ ಕಲಿಸಿದ ಮಡಿಲು ಶ್ರೀಗಂಧದ ಬೀಡು

ಎಷ್ಟು ಮಹನೀಯರ  ಹೆತ್ತು  ಮೆರೆಸಿದವಳು ನಮ್ಮಮ್ಮ ಕನ್ನಡತಿ 

ಭಾರತೀಯ ಶ್ರೇಷ್ಠ ಕುವರಿ ಈ  ಕನ್ನಡ ಭುವನೇಶ್ವರಿ

ಯಾರು ಏನೇ ಹೇಳಿದರು ತಾಯಿ ನುಡಿಯೇ ಶ್ರೇಷ್ಠ ಎಂದಿಗೂ 

ಜೈ ಜೈ ಅನ್ನೋಣ ಈ  ಸುದಿನದ  ನಾಡ ಹಬ್ಬಕ್ಕೆ

ಜೈ ಕರ್ನಾಟಕ!


ಭಾನುವಾರ, ಮಾರ್ಚ್ 13, 2022

ಮಮತೆಯ ಮಡಿಲು

ಮಕ್ಕಳು ಹುಟ್ಟಿದಂದಿನಿಂದ ದೊಡ್ಡವನಾಗಿ ಬೇರೆಯೆಡೆಗೆ  ಹೋಗುವವರೆಗೂ ಹೆತ್ತ ಕರಳು ತನ್ನ ಕೂಸನ್ನು ಸೆರಗಲ್ಲಿಯೇ ಕಾಪಾಡುತ್ತಾಳೆ.  ಆ ಮಮತೆ  ಅದು ಹೇಗೆ ತನ್ನಲ್ಲಿ ಮೊಳಕೆಯೊಡೆಯುತ್ತದೆಯೋ ತಿಳಿಯದು. 

ಮಗುವೆಂಬ ಬೀಜ ಹೊಟ್ಟೆಯಲ್ಲಿ ಮೊಳೆತ ತಕ್ಷಣವೇ? 

ಇಲ್ಲ ಅನಿಸುತ್ತೆ. 


ಆ ಪ್ರೀತಿ ಹುಟ್ಟುವುದು ಆ ಮಗು ತನ್ನ ಹೊಟ್ಟೆಯಿಂದ ಈ ಜಗತ್ತಿಗೆ ಪಾದಾರ್ಪಣೆ ಮಾಡಿದ ಬಳಿಕವೇ ಇರಬೇಕು ಅನಿಸುತ್ತದೆ. 


ತನಗೆ ಗೊತ್ತಿಲ್ಲದ ರೀತಿಯಲ್ಲಿ ತನ್ನ ಜೀವಕ್ಕಾಗಿ ಪ್ರತಿ ಕ್ಷಣ ಮರುಗುವ ಕರಗುವ  ಮತ್ತೊಂದು ಜೀವ ಈ ಪ್ರಪಂಚದಲ್ಲಿ ಇರಲಾರದು.  ತನ್ನದೇ ಇನ್ನೊಂದು ಅಂಗದ ರೀತಿಯಲ್ಲಿ ಮೈ ಕೈ ತುಂಬಿಕೊಂಡಿರುವ ಇನ್ನೊಂದು  ಜೀವ ಕೈ ತುಂಬಿ ಅಂಗೈಯಲ್ಲಿ ಕುಳಿತಿರುವಾಗ  ಕಣ್ಣಾಲಿ ತುಂಬಿ ಬರಲಾರದೇ ಇರದು ಅಲ್ಲವಾ? 

ತನ್ನದೇ ರಕ್ತ ಉಸಿರನ್ನು ಹೊಂದಿರುವ​ ಇನ್ನೊಂದು ಭಾಗ ಪಕ್ಕದಲ್ಲಿಯೇ ಇರುವಾಗ ಜೀವ ಜೀವವೇ ಮಿಡಿಯಲಾರದೇ ಇರಲು ಹೇಗೆ ಸಾಧ್ಯ​?.  ಅಂದೇ ಹುಟ್ಟಿದ ಆ ಪ್ರೇಮ ಕ್ಕೆ ಸಾಟಿ ಮತ್ತೊಂದು ಇರುವುದೇ?


ತಾನು ಬಲಿಯುತ್ತಿರುವಾಗ. ತಾನು ಬೆಳೆಯುತ್ತಿರುವಾಗ. ಆ ಜೀವವು ಅಷ್ಟೇ ಉತ್ಕಟ ಪ್ರೀತಿಯ ಜೇನನ್ನು ಹೆತ್ತ ಜೀವಕ್ಕೆ ಕೊಡುವುದು ಸ್ವಾಭಾವಿಕ​.  ತನ್ನನ್ನು  ನವ ಮಾಸವು ಕಾಪಿಟ್ಟು ಭೂಮಿಗೆ ಕರೆದವ್ವನ್ನನ್ನು ಇನ್ನೂ ಹೇಗೆ ಕೃತಙ್ನತೆಯಿಂದ ಕಾಣಬೇಕು? ಆ ಕೂಸಿಗೆ ಗೊತ್ತಿರುವುದು ಪ್ರತಿ ಪ್ರೀತಿಯನ್ನು  ತನ್ನನ್ನು ಹಡೆದ ಉಸಿರಿಗೆ ನೀಡುವುದು. 


ಹೊಸ ಹೊಸದರಲ್ಲಿ ಒಂದು ಕ್ಷಣವು ತನ್ನ ಹೆತ್ತ ಕರಳನ್ನು ಬಿಟ್ಟಿರಲಾರದಷ್ಟು ಹೊಟ್ಟೆ ಕಿಚ್ಚು ಮರಿ ಜೀವಕ್ಕಿರಬೇಕು. ಅದಕ್ಕೆ ಯಾರಾದರೂ ಹೊಸಬರು ತನ್ನ ಮನೆಗೆ ಬಂದರೇ ನನ್ನಮ್ಮನೇ ಇಲ್ಲವೇನೋ ಎನ್ನುವಷ್ಟು ಅಳು ಮುಂಜಿಯಾಗುವುದು.  


ತಾನು ಹೊಟ್ಟೆಯಲ್ಲಿ ಬೆಚ್ಚಗೆ ಮಲಗಿದ ನೆನಪನ್ನು ಏನಂದರೂ ಮರೆಯಲಾರ​ದೇನೋ. ತಾನು  ತಾಯಿಯ ಮಡಿಲಲ್ಲಿದ್ದಷ್ಟು ಸುರಕ್ಷಿತವವಾಗಿ   ಜಗತ್ತಿನಲ್ಲಿ ಎಂದು ಎಲ್ಲಿಯು ಸುರಕ್ಷಿತವಾಗಿರಲಾರೇನು ಎಂಬ ಭಾವನೇ ಪ್ರತಿಯೊಬ್ಬರಿಗೂ ಎಂದಿಗೂ ಅಳಿಯಲಾರದು. 

ಅದು ತನ್ನ ತಾಯಿ, ತನ್ನ ಹುಟ್ಟಿದ ಊರು, ಹುಟ್ಟಿದ ದೇಶ ಇವುಗಳು ಕೊಡುವ ಬೆಚ್ಚನೆಯ ತನ್ನದು ಎಂಬ ಮನಸ್ಸಿನ ಭಾವ​  ಯಾರೊಬ್ಬರೂ, ಯಾವ ಪರ ಊರುಗಳು, ದೇಶಗಳು ಎಂದಿಗೂ ಕೊಡಲಾರವು.


ಎಂದೂ ಮಗುವಿನ ಏಳ್ಗೆಯ ಕನಸನ್ನು ಕಾಣುವವರು ಮತ್ಯಾರು ಅಲ್ಲ​, ಅದು ತಾಯಿ ಮಾತ್ರ​. ತನ್ನ ಕಂದನು ಮಾತ್ರ ಎಂದೆಂದಿಗೂ ಸಂತೃಪ್ತಿಯಾಗಿ ಬದುಕಲಿ ಎಂಬುದೇ ಹಗಲು ಇರುಳಿನ ಕೋರಿಕೆಯಾಗಿರುತ್ತದೆ.


ತಾನು ಊಪವಾಸವಿದ್ದರೂ ತನ್ನ ಕರುಳ ಬಳ್ಳಿ ಯಾವಾಗಲೂ ನಿತ್ಯ ಹಸುರಾಗಿರಲಿ ಎಂದು ಕಾದಿದ್ದು ಹೊಟ್ಟೆಯ ತುಂಬಿಸುವ ಕೈಯನ್ನು ಈ ಜಗತ್ತಿನಲ್ಲಿ ಎಲ್ಲಿಯು ಕಾಣಲು ಸಾಧ್ಯವಿಲ್ಲ​.


ತನ್ನ ಕಂದಮ್ಮನಿಗೆ ಯಾರಾದರೂ ಏನಾದರೂ  ಅಂದರೇ ತುಂಬಾ ನೊಂದುಕೊಂಡು ಕೊರಗುವ ಒಂದೇ ಒಂದು ಮನಸ್ಸು ಎಂದರೇ ಹೆತ್ತಮ್ಮ ಮಾತ್ರ​.


ನೂರು ನೋವಿನ ಮಾತುಗಳನ್ನು ತಾನು ಮಾತ್ರ ಸಹಿಸಳು. ಆದರೇ ಒಂದು ಕೊಂಕು ನುಡಿಯನ್ನು ಯಾರದರೂ ತನ್ನ ಮಗುವಿಗೆ ಅಂದರೇ ಅವರನ್ನು ತಾನು ಎಂದೆಂದು ಕ್ಷಮಿಸಲಾರಳು.


ತಾನು ಹೇಗಾದರೂ ಬದುಕಿ ಬಾಳಲಿ, ಹೇಗೆ ಎಲ್ಲಾದರೂ ಇರಲಿ. ತಾನು ಹೇಗೆ ಬೇಕಾದರೂ ಬಾಳಿದರೂ ತನ್ನ ಮುದ್ದು ಕಂದಮ್ಮನ ಬದುಕು ಬಂಗಾರವಾಗಿರಲಿ ಎಂಬುದೇ ಜೀವದ ಹಿರಿ ಆಸೆಯಾಗಿರುತ್ತದೆ. 


ತಾನು ಪಟ್ಟ ಕಷ್ಟದ ಗುಲಗಂಜಿಯಷ್ಟನ್ನು ತನ್ನ ಉಸಿರಿನ ಉಸಿರಾದ ಮಗುವು ಪಡಬಾರದು. ತಾನು ಅನುಭವಿಸಿದ ಜೀವನ ದಾರಿಯನ್ನು ತನ್ನ ಮಗುವು ಎಂದು ತುಳಿಯಬಾರದು. ತಾನು ಕಂಡೂಂಡ ಯಾವುದೇ ಚಿಕ್ಕ ದೊಡ್ಡ ಕಷ್ಟಗಳ ನೆರಳು ಎಂದೆಂದು ಬಿಳದಿರಲಿ ಎಂಬ ಹಂಬಲ​.  ಮಗುವಿನ ನೆತ್ತಿಯ ಮೇಲೆ ಸದಾ ತನ್ನ ಆಶೀರ್ವಾದವೆಂಬ ಸೆರಗನ್ನು ಇಟ್ಟು ಕಾಯುವವಳು ಯಾರಾದರೂ ಇದ್ದರೇ ಅದು ಹೆತ್ತಮ್ಮನೇ.


ತಾನು ಕಾಣದಿರುವ, ತಾನು ಅನುಭವಿಸದಿರುವ ಈ ಜಗತ್ತಿನ ಅತ್ಯುನ್ನತವಾದ ಏನಾದರೂಂದಿದೆಯೋ ಅದು ನನ್ನ ಕರಳಿಗೆಯೇ ಸಿಗಲಿ. ಈ ರೀತಿಯ ಹತ್ತು ಹರಕೆಗಳನ್ನು ದೇವರ ಮುಂದೆ ನಿತ್ಯ ರಾತ್ರಿ ಹೊತ್ತಿರುವವಳು ಎಂದರೇ ಅದು ಅಮ್ಮ ಎನ್ನುವ ಜೀವ​.


ಕರಳ ಬಳ್ಳಿ ಕಣ್ಣಿನ ಮುಂದೆ ಸ್ವಲ್ಪ ಕಾಣದಾದರೂ ಆ ಕರಳ ಬಳ್ಳಿ ಮರಳಿ ಮನೆಗೆ ಬರುವವರೆಗೂ ಶಬರಿಯಂತೆ ದಾರಿ ಕಾಯುವವಳು ಯಾರಾದರೂ ಇದ್ದರೆ ಅದು ಅಮ್ಮನೇ.


ತಾಯಿಯ ಮಮತೆಯ ಭಾವನೆಯ ಹಚ್ಚ ಹಸಿರು ಮಗುವಿನ ಮುಖ ನೋಡಿದ  ಮೊದಲ ದಿನದಿಂದ ಆ ಮಗುವಿನ  ಹೊಸ ಕುಡಿಯವರೆಗೂ ಶ್ರೇಯೊಭಿವೃದ್ಧಿಯ ಕನಸು ಕಾಣವ  ಕಾಯಕವನ್ನು ತಾಯವ್ವ ಮಾಡಿದಷ್ಟು ಮತ್ಯಾವ​ ಹೃದಯವೂ ಮೀಡಿಯುವುದಿಲ್ಲ.


ಯಾವುದೇ ಪ್ರತಿಫಾಲಕ್ಷೆಯಿಲ್ಲದೇ ನನ್ನ ಮಗು ಊಂಡುಟ್ಟು ಉನ್ನತವಾಗಿ ಬಾಳಿದರೇ ಸಾಕು ಶಿವನೇ ಎನ್ನುವ ಹೃದಯ ಪ್ರೀತಿ ದೇವರೇ ತಾಯಿ.


ಈ ರೀತಿಯ ಬರೀ ತನ್ನ ಕುಡಿಗಾಗಿ ಕೋರಿಕೆಯ ಮಹಾ ಮಹಿಮಳ ಪ್ರೀತಿಯ ಆರೈಕೆಯನ್ನು ಕಾಪಿಟ್ಟು ಉಣ್ಣಿಸುವವಳು. 


ಪ್ರತಿಯಾಗಿ ಯಾವ ಜೀವಿಯು ತನ್ನ ಹೆತ್ತಮ್ಮನಿಗೆ ಪ್ರತಿ ಪ್ರೀತಿಯನ್ನು ಕೊಟ್ಟು ಅವಳ ಪ್ರೀತಿಯ ಲೋಕಕ್ಕೆ ಸಮನಾಗಿ ಪ್ರೀತಿಯ​ ತಕ್ಕಡಿಯನ್ನು ಸಮ ಮಾಡಲು ಸಾಧ್ಯವಿಲ್ಲ​.


ಅದಕ್ಕೆ ಇರಬೇಕು ತಾಯಿಗಿಂತ ದೊಡ್ಡ ದೇವರಿಲ್ಲ ಎಂಬ ಗಾದೆ ಹುಟ್ಟಿ ಜನಜನಿತವಾಗಿರುವುದು.


ಮಗುವಿನ ತಾಯಿಯೇಡೆಗಿನ ಪ್ರೀತಿ ಕೊಂಚ ಕಡಿಮೆಯಾದರೂ ಆದೀತು. ಆದರೇ ತಾಯಿಯ ಪ್ರೀತಿ ತನ್ನ ಮಗುವಿನೆಡೆಗೆ ಎಂದೆಂದಿಗೂ ಎಷ್ಟೇ ಕಾಲವಾದರೂ ಕೊಂಚವು ಕಡಿಮೆ ಅನಿಸುವುದಿಲ್ಲ​. ಅದು ಎಂದು ನಿಲ್ಲದ ನಿತ್ಯ ಹರಿಯುವ ಝರಿ. ಈ ರೀತಿಯ ಪ್ರೀತಿಯ ಒರತೆಯನ್ನು ನೀಡುವ ಆ ಮಹಾ ಮಾತೆಗೆ ಸಮನಾದ ದೇವತೆ ಬೇರೆ ಯಾರು ಇಲ್ಲ.

ಆ ಕಕ್ಕುಲಾತಿಯನ್ನು ಕಂಡು ಮಕ್ಕಳಾದ ನಾವೇ ನಮ್ಮ ನಮ್ಮ ರೀತಿಯಲ್ಲಿ ಹೆತ್ತಮ್ಮನನ್ನು ದೂರಿರುತ್ತೇವೆ. ಆ ಪ್ರೀತಿಯ ಒರತೆಯ ಭರವನ್ನು ಸಹಿಸಲಾರದಷ್ಟು ಬೇಸರಿಸಿಕೊಂಡಿರುತ್ತೇವೆ. ಆದರೂ ಹೆತ್ತಮ್ಮನ ಮಡಿಲು ಯಾವತ್ತಿಗೂ ಯಾವುದೇ ಘಳಿಗೆಯಲ್ಲೂಅದೇ ಹಚ್ಚ ಹಸುರಾಗಿ ನಮ್ಮನ್ನೆಲ್ಲಾ ದಣಿವಾರಿಸುವ ಹೊಂಗೆ ಮ​ರವಾಗಿರುತ್ತದೆ. 


ಮಕ್ಕಳಾದ ನಾವುಗಳು    ಎಲ್ಲಾದರೂ ಸುತ್ತಾಡಿ ದಣಿವಿನಿಂದ ಮನೆಗೆ ಬಂದು   ನಮ್ಮ ನಮ್ಮ  ತಾಯಿಯ ಮುಖವನ್ನೊಮ್ಮೆ ನೋಡಿದ ತಕ್ಷಣ ಮನಸ್ಸಿಗೆ ಆಗುವ ಆನಂದ ಸಮಧಾನ ಜಗತ್ತಿನಲ್ಲಿ ಯಾರೊಬ್ಬರೂ ನೀಡಲು ಸಾಧ್ಯವಿಲ್ಲ​.


ಮನೆಯೆಂದರೇ ನಮ್ಮ ಮನೇ (ಅಮ್ಮನ ಮನೆ) ಊರೆಂದರೇ ನಮ್ಮ ಊರು, ದೇಶವೆಂದರೇ ನಮ್ಮ ದೇಶ​, ಭಾಷೆಯೆಂದರೇ ಮಾತೃ ಭಾಷೆ. ಹೀಗೆ ಪ್ರತಿಯೊಂದು ಮಮತೆಯ ತಾಯಿಯಿಂದ ಹಿರಿದಾಗಿದೆ ಎಂದರೇ ಅತಿಶಯೋಕ್ತಿಯಲ್ಲ​.


ತಾಯಿಯನ್ನು ಖುಷಿಪಡಿಸುವ ಬದುಕು ಎಂದರೇ ತನ್ನ ಹೆತ್ತ ಮಕ್ಕಳು ಸಂತೋಷದಿಂದ ಸುಖವಾಗಿ ಬದುಕಿದ ಕ್ಷಣ ಮಾತ್ರ​. 


ತಾನು ತನ್ನ ಸುಖವೆಂದರೇ ತನ್ನ ಮಕ್ಕಳ ಸುಖವೇ ಎನ್ನುವುದು ಹೆತ್ತ ಕರಳು ಮಾತ್ರ​. 

ಆ ತಾಯಿಯ ಈ ಮಹಾಹೋನ್ನತ ಮನಸ್ಸನ್ನು  ಅರ್ಥೈಸಿಕೊಳ್ಳಲು ನಿರಂತರ ಪ್ರಯತ್ನಿಸುವುದೇ ನಮ್ಮ ಧ್ಯೇಯವಾಗಿರಬೇಕು. ಆಗ ಮಾತ್ರ ಆ ಮನದ ಹಂಬಲ​, ಮಮತೆ, ಕನವರಿಕೆ, ಕನಸು ಸ್ವಲ್ಪವಾದರೂ ನಮಗೆ ಅರ್ಥವಾಗಲು ಸಾಧ್ಯ ಮಾತ್ರ ಅಲ್ಲವಾ?




ಶನಿವಾರ, ಫೆಬ್ರವರಿ 26, 2022

ಯುದ್ಧ ಮತ್ತು ಶಾಂತಿ

ಅಂತು ಇಂತು ಕೊರೋನ  ಮುಗಿಯುತ್ತಿದೆ ಎನ್ನುವ ಹೊತ್ತಿಗೆ ನಮ್ಮ ರಾಜ್ಯದಲ್ಲಿ ಹಿಜಾಬ್ ಸಂಘರ್ಷದ ಕಿಡಿ ಹೊತ್ತಿಕೊಂಡಿದೆ. 

ವಿದ್ವಂಸಕ​ ಪುಡಾರಿಗಳಿಗೆ ನಮ್ಮ ಜನರನ್ನು, ವಿದ್ಯಾರ್ಥಿಗಳನ್ನು ನೆಮ್ಮದಿಯಾಗಿ ಎಂದು ಇರಲು ಬೀಡಲೇ ಬಾರದು ಎನ್ನುವ ಮನಸ್ಸಿರಬೇಕು. 

ಅದು ಯಾರು ಈ ಮತೀಯಾ, ಧರ್ಮಕ್ಕೆ ಸೇರಿದ ಪರ ವಿರೋಧದ ದ್ವೇಷವನ್ನು ಮುದ್ದು ಮುದ್ದು ಮನಸ್ಸುಗಳೊಳಗೆ ತುಂಬಿದರೋ ಕೇಸ್ ಹೈಕೋರ್ಟ ಅಂಗಳಕ್ಕೆ ಹೋಗಿದೆ.  

ಎಲ್ಲೆಲ್ಲೂ ನಮ್ಮ​ ಶಾಲಾ ಕಾಲೇಜುಗಳು ಅಕ್ಷರಶ​: ರಣರಂಗವೇ ಆಗಿಬಿಟ್ಟು, ಸರ್ಕಾರ ಶಾಲೆಗಳನ್ನು ಬಂದ್ ಮಾಡಿ ರಜೆ ಘೋಷಣೆ ಮಾಡುವ ಮಟ್ಟಿಗೆ. ಈ ಧರ್ಮ ವಸ್ತ್ರ ವಿಷಯವನ್ನು ಇಷ್ಟು ದೊಡ್ಡದು ಮಾಡಿ ತಮಾಷೆ ನೋಡುತ್ತಿರುವ ಈ ಕಳ್ಳ ಮನಸ್ಸುಗಳೇ ಉತ್ತರಿಸಬೇಕು.


ಇಷ್ಟು ದಿನ ಅದು ಹೇಗೆ ಇತ್ತೋ ಗೊತ್ತಿಲ್ಲ ಇನ್ನು ಮುಂದಿನದೂ ಬೇರೆ ಲೆಕ್ಕ! ಎನ್ನುವ ಮಟ್ಟಿಗೆ ಹಿಂದೂ ಮುಸ್ಲಿಮ್ ವಿದ್ಯಾರ್ಥಿಗಳು, ಮುಖಂಡರಗಳು, ಧರ್ಮ ಗುರುಗಳು, ಮಕ್ಕಳ ಹೆತ್ತವರು ಹೀಗೆ ಪ್ರತಿಯೊಬ್ಬರೂ  ಪರ ವಿರೋಧದ ಗುಂಪುಗಳಾಗಿಬಿಟ್ಟಿವೆ. 


ಕೋರ್ಟ ಯಥಾ ಸ್ಥಿತಿ ಪಾಲಿಸಿಕೊಂಡು ಇರೀ ನಾವು ತೀರ್ಪು ಹೇಳುವವರಿಗೂ ಅಂದರೇ.. ನೋ ಎಂದು ಯಾರೊಬ್ಬರೂ  ಕೋರ್ಟ್ ಆದೇಶಕ್ಕೂ ಕವಡೇ ಕಾಸಿನ ಕಿಮ್ಮತ್ತು ಕೊಡದೇ ಮತ್ತೆ ಅದೇ ರೀತಿಯ ದೊಂಬಿಯನ್ನು ಶಾಲಾ ಕಾಲೇಜುಗಳಲ್ಲಿ ನಡೆಸುತ್ತಿದ್ದಾರೆ.  


ನಾವೆಲ್ಲಾರೂ ಒಂದೇ ನಮ್ಮ ದೇಶ ಒಂದೇ ಭಾರತವೇ ಧರ್ಮ ಎಂದು ಪಾಠ ಹೇಳುವ ಮಂದಿರಗಳು ಹೊಡೆದಾಡುವ ಜಾಗಗಳಾಗಿರುವುದು ವಿಪರ್ಯಾಸ​.​


ಶಾಲಾ ಪಾಠ   ಮತ್ತು ಪರೀಕ್ಷೆಗಿಂತ ಹಿಜಾಬೇ ಮುಖ್ಯ ಎಂದು ಮುಷ್ಕರ ಮಾಡುತ್ತಿರುವ​ ವಿದ್ಯಾರ್ಥಿನಿಯರು. ಅವರು ಹಿಜಾಬ್ ಹಾಕಿಕೊಂಡು ಬಂದರೇ ನಾವು ಕೇಸರಿ ಶಾಲೇ ಧರಿಸಿ ತರಗತಿಗಳಿಗೆ ಬರುತ್ತೇವೆ ಎನ್ನುವ​ ಹಿಂದು ಮನಸ್ಸುಗಳು. 


ನೀವು ಸರಸ್ವತಿ ಪೂಜೆ, ಕುಂಕುಮ, ತಲೆಗೆ ಹೂವು ಎಲ್ಲಾ ಇಟ್ಟುಕೊಂಡು ಬರುತ್ತಿರಲ್ಲಾ ನಾವೇನಾದರೂ ಕೇಳಿದ್ದಿವಾ ಎನ್ನುವ ಮುಸ್ಲಿಂ ಮನಸ್ಸುಗಳು. 


ನಾವಾ ನೀವಾ ಎನ್ನುತ್ತಾ ಇಡೀ ಕರ್ನಾಟಕವನ್ನು ಧರ್ಮ ಯುದ್ಧಕ್ಕೆ ಅಣಿ ಮಾಡಲು ಸಿದ್ಧವಾಗಿರುವಂತೆ ಪ್ರೇರಪಿಸುತ್ತಿರುವ ಅರೇ ಬೆಂದ ಈ ಮನಸ್ಸುಗಳನ್ನು ನೆನಸಿಕೊಂಡರೇ ಅಸಹ್ಯ ಹುಟ್ಟುತ್ತದೆ. 


ಹತ್ತಿರವಿದ್ದರೂ ದೂರ ದೂರ ನಿಲ್ಲುತ್ತಿರುವ ಚಿಕ್ಕ-ದೊಡ್ಡ ಮನಸ್ಸಿನ ಈ ನಾಗರಿಕ​ ಮನುಷ್ಯರನ್ನು ಕಂಡು ಭಾರತಾಂಬೆಯೇ ಕಣ್ಣೀರಿಟ್ಟಿರಬೇಕು. 


ಹೀಗೆ ಇನ್ನೂ ನಿತ್ಯ ಸಂಘರ್ಷ ಜಗಳಗಳ ನಡುವೆಯೇ ಶಿವಮೊಗ್ಗದಲ್ಲಿ ನಡೆದ ಹಿಂದು ಹುಡುಗನ ಕೊಲೆ ಇಡೀ ನಗರವನ್ನೆ ಎರಡು ದಿನಗಳ ಕಾಲ ಹತ್ತಿ ಉರಿಯುವಂತೆ ಮಾಡಿರುವುದು.. ಈ ಧರ್ಮ ಯುದ್ಧ ಎಲ್ಲಿಗೆ ಹೋಗಿ ನಿಲ್ಲುವುದೋ ಎಂದು ಇಡೀ ರಾಜ್ಯದ ಜನರನ್ನು ಚಿಂತೆಗೀಡು ಮಾಡಿದೆ. 


ಅಲ್ಲಾ ಪುಟ್ಟ ಪುಟ್ಟ ಮನಸ್ಸುಗಳು ಈ ಮಟ್ಟಿಗೆ ಮಲಿನಗೊಳ್ಳುವಂತೆ ಮಾಡಿದ ಆ ಪ್ರಭುತಿಗಳು ಯಾರೂ ಅನಿಸುತ್ತದೆ. ರಾಜಕೀಯ ಬೇಳೇ ಬೆಯಿಸಿಕೊಳ್ಳಲು ಸಾಮಾರಸ್ಯದಿಂದ ಬದುಕುವಂತೆ ಬಿಡಲು ಯಾಕೇ ಇನ್ನೂ ನಮ್ಮ ನೇತಾರಾರಿಗೆ  ಧರ್ಮ ಸೇವಕರಿಗೆ ಕೊಂಚ​ ಬುದ್ಧಿ ಬಂದಿಲ್ಲ​.


ಇದೇಯೇನು ನಾವುಗಳು ನಮ್ಮ ಇತಿಹಾಸದಿಂದ ಇಷ್ಟು ದಿನ​ ಕಲಿತದ್ದೂ ಅನಿಸುತ್ತದೆ. ಇನ್ನೂ ಅದೇಷ್ಟು ಜನರನ್ನೂ ಕೊಂದು, ವಿರೋಧಿಸುತ್ತಾ ನಿತ್ಯ ಕಲಹದೊಂದಿಗೆ ನಾವು ಬಾಳಬೇಕು? 


ದೇಶ ಮೊದಲು ಎನ್ನುವ ಮಂತ್ರವನ್ನು ನಾವೆಲ್ಲಾ ಯಾಕೇ ಪುನಃ ಪುನಃ ಮರೆಯುತ್ತೇವೆ?


ಹೀಗೆ ನಮ್ಮ ರಾಜ್ಯ ಮತ್ತು ದೇಶದಲ್ಲಿ ಅಶಾಂತಿಯ ಕಾರ್ಮೋಡ ಕವಿತುಕೊಂಡು ಮುಂದೇನೋ ಎಂಬ ಬೀತಿಯಲ್ಲಿರುವ​ ಹೊತ್ತಿಗೆ.. 


ಮೂರನೇ ಮಹಾಯುದ್ಧವಂತೇ..


ಹೌದು. ವಿಶ್ವದಲ್ಲಿಯು ಕೊರೋನದ ಪ್ರಾಬಲ್ಯ ಇನ್ನೇನೂ ಕಡಿಮೆಯಾಯಿತು. ನಾವುಗಳು ಪುನಃ ಮಾಮೊಲಿ ಶೈಲಿಗೆ ಮರಳಬಹುದು ಎನ್ನುವಷ್ಟರಲ್ಲಿ ರಷ್ಯಾ ಉಕ್ರೇನ್ ತಮ್ಮ ತಮ್ಮ​ ಯುದ್ಧ ಉನ್ಮಾನದಲ್ಲಿ ಮೂರನೇ ವಿಶ್ವ ಯುದ್ಧದಲ್ಲಿ ತೊಡಗಿರುವ ದೃಶ್ಯ​ ಎಂಥವರ ಎದೆ ಹೊಡೆದು ಹೋಗುವಷ್ಟು ಬೀಕರವಾಗಿದೆ. 


ಟಿವಿ ಪರದೆಯ ಮೇಲೆ ಮೂಡಿ ಬರುತ್ತಿರುವ ರಣರಂಗದ ಯುದ್ಧ ಚಿತ್ರಗಳು ಮೊದಲನೇ ಮತ್ತು  ಎರಡನೇ ವಿಶ್ವ ಯುದ್ಧವನ್ನು ಇತಿಹಾಸದ ಪಾಠದಲ್ಲಿ ಓದಿದ ಮನಗಳಿಗೆ ತಣ್ಣನೆ ಭಯವನ್ನು ಮೂಡಿಸಿದೆ. 


ಭವಿಷ್ಯದ ಬಗ್ಗೆ ಭರವಸೆಯೇ ಇಲ್ಲ ಅನಿಸುವಂತೆ ಮಾಡಿದೆ. 


ಮಕ್ಕಳಿಂದ ವಯೋವೃದ್ಧರವರಿಗೇ ಉಕ್ರೇನ್ ನಲ್ಲಿ ಬೀಳುತ್ತಿರುವ ಆ ಬಾಂಬ್, ಬೆಂಕಿ, ಸಾವು, ನೋವುಗಳು ಇಲ್ಲಿಯೇ ನಮ್ಮ ಪಕ್ಕದಲ್ಲಿಯೇ ಜರುಗುತ್ತಿದೆಯೇನೋ ಎಂಬ ಆತಂಕವನ್ನುಂಟು ಮಾಡುತ್ತಿದೆ. 

ಅದನ್ನು ನೋಡಿದ​ ಮುದ್ದು ಮಕ್ಕಳ ಪುಟ್ಟ ಪುಟ್ಟ ಪ್ರಶ್ನೆಗಳಿಗೆ ದೊಡ್ಡವರು ಏನೂ ಉತ್ತರ ಕೊಡಬೇಕೋ ಏನೂ ತಿಳಿಯದೇ ಸುಮ್ಮನೇ ಟಿ.ವಿ ನೋಡುತ್ತಾ ಕೂತು ನಾವು ಎಂಥ ಪ್ರಪಂಚದಲ್ಲಿದ್ದೇವೆ ಎಂದು ಜಿಗುಪ್ಸೆಪಡುವಂತಾಗಿದೆ. 


ಪುನಃ  ಈ ಮನುಷ್ಯ ವಿಶ್ವ ಚರಿತ್ರೆಯಿಂದ ಏನನ್ನೂ ಕಲಿಯಲೇ ಇಲ್ಲವೇನೋ ಅನಿಸುತ್ತದೆ. 


ಹೌದು! ಉಕ್ರೇನ್ ನಲ್ಲಿರುವವರ ಪರಿಸ್ಥಿತಿ, ಯುದ್ಧದಿಂದ ಆಗುತ್ತಿರುವ ಹಿಂಸೆ, ನೋವು, ನಷ್ಟ​ ಇಡೀ ವಿಶ್ವಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತಿದೆ. 


ಮನುಷ್ಯನಿಗೆ ನಿಲುಕದ ಸಮಸ್ಯೆ ಯಾವುದೂ ಇಲ್ಲ. ತನ್ನ ಬುದ್ಧಿ ಮತ್ತು ಚಾಕಚಕ್ಯತೆಯಿಂದ ಏನಾನ್ನದರೂ ಬಗೆಹರಿಸಬಲ್ಲ. ಆದರೇ ಈ ಯುದ್ಧ ಮನ ಸ್ಥಿತಿಯನ್ನು ಕಳೆದುಕೊಳ್ಳುವ ಅಥವಾ ಯುದ್ಧವನ್ನು ತಡೆಯುವಂತೆ ಮಾಡುವ ಯಾರೊಬ್ಬರೂ ಈ ಪ್ರಪಂಪಚದಲ್ಲಿ ಹಿಂದೆಯು ಇರಲಿಲ್ಲ, ಇಂದೂ ಇಲ್ಲ ಮತ್ತು ಮುಂದೆನೂ ಇರುವುದಿಲ್ಲ ಎಂಬುದು ಜಗತ್ತಿನ ಎಲ್ಲಾ  ಮನುಷ್ಯರಿಗೆ ಈ ಎರಡು ದಿನಗಳಲ್ಲಿ ಗೊತ್ತಾಗಿಬಿಟ್ಟಿದೆ. 


ವಿಶ್ವ ಸಂಸ್ಥೆ, ಶಾಂತಿ ಒಕ್ಕೋಟ, ಈ ದೊಡ್ಡಣ್ಣ​, ಚಿಕ್ಕಣ್ಣ​, ಆ ನೆರೆಯ, ಸ್ನೇಹಿ ದೇಶ ಹೀಗೆ ಯಾರೊಬ್ಬರೂ ಯಾರನ್ನೂ ರಕ್ಷಿಸಲಾರರರು.  ತಮ್ಮನ್ನು ತಾವೇ ಎಂದಿಗೂ ರಕ್ಷಿಸಿಕೊಳ್ಳಬೇಕು. ನಮ್ಮ ಮನೆ ಉರಿದರೇ ನಮಗೆ ನಷ್ಟ​. ಬೇರೆಯವರು ಕೇವಲ ಪ್ರೇಕ್ಷಕರೇ ಎಂದೆಂದಿಗೂ. ಅದು ದೇಶವಾಗಲಿ, ರಾಜ್ಯವಾಗಲಿ, ನಮ್ಮ ನಮ್ಮ ಮನೆಯಾಗಲಿ. 

ಅದೇ ಉಕ್ರೇನ್ ಸ್ಥಿ ತಿ ಇಂದು!!


ಮಾತಿನಲ್ಲಿ ಬಗೆಹರಿಸುವಂತ ಪ್ರತಿಯೊಂದು ವಿಷಯವನ್ನು ಕೇವಲ ಸಾವು ನೋವುಗಳಿಂದ ಬಗೆಹರಿಸುತ್ತೇವೆ ಎಂದು ಹೋಗುತ್ತಿರುವ ಈಗಿನ ಈ ಹೀನಾ ಮನಸ್ಸುಗಳಿಗೆ  ಯಾರು ಬುದ್ಧಿ ಹೇಳುವವರೋ  ತಿಳಿಯದಾಗಿದೆ. 


ಪ್ರತಿಯೊಬ್ಬರೂ ಎಲ್ಲಾ ಗೊತ್ತಿರುವವರಂತೆ ಮತ್ತು ಅಫೀಮು ತಿಂದವರಂತೆ ತಮ್ಮದೇ ನೀತಿಯಲ್ಲಿ ಶಾಂತಿಯೆಂಬುದು ಈ ಪ್ರಪಂಚದ್ದ​ಲ್ಲಾ ಎಂಬಂತೆ ಎಲ್ಲರನ್ನೂ ಯಾವಾಗಲೂ ಬೀತಿಯಲ್ಲಿಟ್ಟಿರಬೇಕು ಎಂಬಂತೆ ವರ್ತಿಸುವ ಪ್ರತಿ ಮನಸ್ಸುಗಳ ಮನಸ್ಥಿತಿಯನ್ನು ಬದಲಾಯಿಸಲೂ ಮತ್ತೊಮ್ಮೆ ಆ ಶ್ರೀ ಕೃಷ್ಣ ಪರಮಾತ್ಮ ಅದು ಯಾವ ಗೀತೆ ಬೋಧಿಸಬೇಕೋ ಗೊತ್ತಿಲ್ಲ​!